ಹಾಲಕ್ಕಿ ಒಕ್ಕಲು, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಕನ್ನಡದಲ್ಲಿ ‘ಒಕ್ಕಲು’ ಎನ್ನುವುದು ಒಂದು ವೃತ್ತಿಯನ್ನು ಹೇಳುತ್ತದೆ. ಹಾಲಕ್ಕಿ ಎನ್ನುವುದರಲ್ಲಿ ಹಾಲು ಮತ್ತು ಅಕ್ಕಿ ಎಂಬ ಎರಡು ಪದಗಳಿವೆ. ಇವರು ತುಂಬಾ ಒಳ್ಳೆಯ ಅಕ್ಕಿ ಬೆಳೆಯುವುದರಲ್ಲಿ ಪ್ರಸಿದ್ಧರು (ಎಂಥೋವನ್, ೧೯೨೨). ವಾಸ್ತವವಾಗಿ ಉತ್ತರ ಕನ್ನಡದಲ್ಲಿ ಮೊದಲಿನಿಂದಲೂ ಕೃಷಿ ಮಾಡುತ್ತಿದ್ದ ಒಂದೇ ಬುಡಕಟ್ಟು ಕ್ರಮೇಣ ಹಾಲಕ್ಕಿ ಒಕ್ಕಲು, ಗಾಮೊಕ್ಕಲು, ಕೆರೆಒಕ್ಕಲು, ಕೊಟ್ಟೆ ಒಕ್ಕಲು ಎಂಬ ಪಂಗಡಗಳಾದಂತೆ ಕಾಣುತ್ತದೆ. ಅನೇಕ ಆಚಾರ, ವಿಚಾರ, ಭಾಷೆ ಸಂಪ್ರದಾಯಗಳಲ್ಲಿ ಈ ಒಕ್ಕಲುಗಳ ನಡುವೆ ಇಂದಿಗೂ ಸಾಮ್ಯತೆ ಇದೆ. ಉತ್ತರ ಕನ್ನಡ ಗೊಂಡರೂ ಇದಕ್ಕೆ ಹೊರತಲ್ಲ. ಈ ವಿಚಾರಗಳಿಂದ ಹಾಲಕ್ಕಿ ಒಕ್ಕಲಿಗರು ಬೇರೆ ನಾಡಿನಿಂದ ಬಂದವರಂತೂ ಅಲ್ಲಿ ಎಂಬುದು ಸ್ಪಷ್ಟ. ಕರಾವಳಿಯಲ್ಲಿ ಇದ್ದು ರಾಗಿ ಅಂಬಲಿಯನ್ನು ಹೆಚ್ಚು ಪ್ರೀತಿಸುವ ಮತ್ತು ಆ ಬಗ್ಗೆ ಹಾಡುಗಳನ್ನು ಕಟ್ಟಿಹಾಡುವ ಇವರ ‘ರಾಗಿಪ್ರೇಮ’ ನೋಡಿದರೆ ಇವರು ಕರ್ನಾಟಕದ ದಕ್ಷಿಣ ಒಳನಾಡಿನ ಒಕ್ಕಲಿಗರ ಒಂದು ಉಪಜಾತಿಯೇ ಎಂಬ ಅನುಮಾನವೂ ಬರುತ್ತದೆ. ದಕ್ಷಿಣದ ಬಯಲು ಸೀಮೆಯಿಂದ ಯಾವುದೋ ಒಂದು ಸಂದರ್ಭದಲ್ಲಿ ಇಲ್ಲಿಗೆ ವಲಸೆ ಬಂದಿರಬಹುದೆಂಬ ಊಹೆಯೂ ಇದೆ. ಹಾಲಕ್ಕಿ ಎಂಬ ಹೆಸರು ಹೇಗೆ ಬಂತು ಎಂಬುದು ಇನ್ನೂ ನಿರ್ಧಾರವಾಗಬೇಕಾದ ವಿಚಾರ. ಈ ಸಂಬಂಧವಾಗಿ ಅನೇಕ ಕತೆಗಳಿವೆ. ಆದರೆ ಈ ಎಲ್ಲ ಕಥೆಗಳು ಹಾಲಕ್ಕಿ ಒಕ್ಕಲಿಗರು ಅಪ್ಪಟ ಕೃಷಿಕರು ಎಂದೇ ಹೇಳುತ್ತದೆ. ಇವರು ಕನ್ನಡ ಭಾಷೆಯನ್ನು ಮಾತನಾಡಿ, ಕನ್ನಡದ ಲಿಪಿಯನ್ನೇ ಬಳಸುತ್ತಾರೆ. ಇವರ ಹೆಂಗಸರು ವಿಶಿಷ್ಟ ರೀತಿಯಲ್ಲಿ ಸೀರೆ ಉಡುತ್ತಾರೆ. ಕತ್ತಿಗೆ ಬಣ್ಣ ಬಣ್ಣದ ಮಣಿಗಳ ಸರ ತುಂಬಿರುತ್ತವೆ. ಹಿಂದೆ ಇವರಲ್ಲಿ ಹೊರ ಬಾಂಧವ್ಯದ ವಿವಾಹದ ಕುಲಗಳಿದ್ದವು, ಅವುಗಳನ್ನು ಬಳ್ಳಿ ಎಂದು ಕರೆಯುತ್ತಿದ್ದರು.

ಹಾಲಕ್ಕಿ ಮಹಿಳೆಯರು

ಹಾಲಕ್ಕಿ ಮಹಿಳೆಯರು

ಹಾಲಕ್ಕಿಗಳ ಮನೆ

ಹಾಲಕ್ಕಿಗಳ ಮನೆ

 

ಹಾಲಕ್ಕಿ ಒಕ್ಕಲಿಗರದು ಮಾತೃ ಪ್ರಧಾನ ಸಮಾಜ. ತಾಯಿಗೆ ಕುಟುಂಬದಲ್ಲಿ ಹೆಚ್ಚಿನ ಗೌರವ ಇದೆ. ಇವರ ಪರಂಪರಾಗತ ಆಚರಣಾ ಕ್ರಮಗಳು ಹಾಗೂ ಆರಾಧನಾ ಪದ್ಧತಿಗಳನ್ನು ಗಮನಿಸಿದಾಗ ಮಾತೃಪ್ರಾಧಾನ್ಯತೆ ಎದ್ದು ಕಾಣುತ್ತದೆ. ವಿವಿಧ ವಿದ್ವಾಂಸರು ಗುರುತಿಸಿರುವಂತೆ ಹಾಲಕ್ಕಿ ಒಕ್ಕಲಿಗರಲ್ಲಿ ಒಟ್ಟು ನಲವತ್ತೊಂದು ಬಳ್ಳಿಗಳಿವೆ. ಅವುಗಳ ವಿವಿರ ಹೀಗಿದೆ-ಮುಂಬಯಿ ಗೆಜೆಟಿ ಯರಿನಲ್ಲಿ ಹಾಲಕ್ಕಿ ಒಕ್ಕಲಿಗರ ಬಳ್ಳಿ ಸಂಖ್ಯೆ ಎಂಟು ಎಂದು ನಮೂದಾಗಿದೆ. ಮುಂಜಾಲ, ಕಡಿನ, ಮಾನಾಳ, (ದೇವರು) ಬಾಳೆ ಗುರುವಿನ (ಗುರಿನ ಗುರ್ನ), ಕೊಡಕಲ, (ಕೊಡಗಿಸ, ಕೊಡ್ಲಕ, ಕೊಡ್ಕ), ಮುಸ್ಕ್ಯಮ (ಮೂಸಗೆ). ಈ ಬಳ್ಳಿಗಳಲ್ಲಿ ಒಂದಾದ ಮಾನಾಳ ಬಳ್ಳಿಯಲ್ಲಿ ಮತ್ತೆ ಏಳು ಉಪ ವಿಭಾಗಗಳಿದ್ದು ಈ ಉಪ ವಿಭಾಗಗಳನ್ನು ಈ ಉಪವಿಭಾಗಗಳನ್ನು ಈಗ ಪ್ರತ್ಯೇಕ ಬಳ್ಳಿಯೆಂದೇ ಪರಿಗಣಿಸುತ್ತಾರೆ. ಈ ಎಳು ಬಳ್ಳಿಗಳನ್ನು ಪ್ರತ್ಯೇಕವಾಗಿ ತೆಗೆದುಕೊಂಡರೆ ಅಳ್ಳಿ, ಒರಗಲ, ದೇವಿ, ಕುಂತಿ, ಶಳೆ (ಲೆ), ಅರಗಸ (ಅರ್ಗಲ) ಇವುಗಳ ಜೊತೆಗೆ ಎಸ್.ಸಿಲ್ವಾರವರು ಮತ್ತೆ ಏಳು ಬಳ್ಳಿಗಳನ್ನು ಹೊಸದಾಗಿ ಗುರುತಿಸಿದ್ದಾರೆ. ಮಂಗಳ ಕುಂಟು (ಕುಂಟ), ಬಳ್ಳಿ, ಬರಕನ (ಬರ್ಕನ), ನೇಗಿ (ನೆಗ್ಗಿನ) ಶಿರಿನ ಕೆಂದಗೆ (ಕೇದಗೆ). ಎಲ್.ಆರ್.ನಾಯಕರು ಇನ್ನೂ ಎಂಟು ಹೊಸ ಬಳ್ಳಿಗಳನ್ನು ಹಾಲಕ್ಕಿಗಳಲ್ಲಿ ಗುರುತಿಸಿದ್ದಾರೆ. ಗುರಾಣೆ, ಬೆದ, ಆಲಿ, ದೇವಿ, ಗೂಡಕ, (ಗೊಟಕ), ಬೈರ(ಬೆರ್ನ), ದ್ಯಾವಳ. ಎಲ್.ಜಿ.ಭಟ್ಟರು, ಕಟಿಕನ (ಕಟಕ್ಕ), ಚಿರಕಲ (ಚಿರಕ್ಲ), ಹುಲಿ, ಬೆಳಿಕೊಡಸಗನ ಹೀಗೆ ಐದು ಬಳ್ಳಿಗಳನ್ನು ಗುರುತಿಸಿದ್ದಾರೆ. ಇವುಗಳ ಜೊತೆಗೆ ಹಿ.ಚಿ.ಬೋರಲಿಂಗ್ಯಯನವರು ನುಚ್ಕ್ಚುನ, ಮಡ್ಳೆನ, ನುಸಿನ, ದ್ಯಾವಣ್ಣ, ಮಡ್ಜ ಹೀಗೆ ಐದು ಬಳ್ಳಿಗಳನ್ನು ಗುರುತಿಸಿದ್ದಾರೆ. ಇವರಲ್ಲಿ ಒಟ್ಟು ನಲವತ್ತು ಬಳ್ಳಿಗಳು ಇರುವುದು ಕಂಡುಬರುತ್ತದೆ. ಇವರ ಸುತ್ತಮುತ್ತಲಿನ ವಸ್ತುವೈವಿಧ್ಯ, ಸಸ್ಯ ಮತ್ತು ಜೀವರಾಶಿಗಳನ್ನೇ ತಮ್ಮ ಕುಲದ ಚಿಹ್ನೆಯಾಗಿ ಬಳಸಿಕೊಂಡಿದ್ದಾರೆ.

ಇತ್ತೀಚಿಣ ದಿನಗಳಲ್ಲಿ ಈ ಎಲ್ಲ ಬಳ್ಳಿಗಳು ಅವುಗಳ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ರಕ್ತಸಂಬಂಧದ ಮದುವೆ ಹಾಗೂ ಕಿರಿಯ ಸೋದರಿ ಸಂಬಂಧಗಳು ಚಾಲ್ತಿಯಲ್ಲಿವೆ. ಏಕಪತ್ನಿತ್ವ/ಪತಿತ್ವ ವಿವಾಹದ ರೀತಿಯನ್ನು ಪಾಲಿಸಲಾಗುತ್ತಿದೆ. ಬಾಲ್ಯವಿವಾಹ ಪದ್ಧತಿಯಿಂದ ಈಚೆಗೆ ವಯಸ್ಕ ಮದುವೆಗಳ ಕಡೆಗೆ ತಿರುಗಿದ್ದಾರೆ. ವಧುದಕ್ಷಿಣೆಯನ್ನು ಮುಖ್ಯವಾಗಿ ಬಟ್ಟೆಗಳ ರೂಪದಲ್ಲಿ ಕೊಡುವ ಪದ್ಧತಿಯಿದೆ. ವಿಧವೆ, ವಿಧುರರ ವಿವಾಹಕ್ಕೆ ಯಾವುದೇ ನಿರ್ಬಂಧವಿಲ್ಲ. ವಿಚ್ಛೇದಿತರಿಗೆ, ಮದುವೆಯಾಗಲು ಅವಕಾಶವಿದೆ. ಸಾವು ಹಾಗೂ ಹುಟ್ಟಿನ ಸೂತಕವನ್ನು ಹನ್ನೊಂದು ದಿನಗಳವರೆಗೆ ಆಚರಿಸುತ್ತಾರೆ. ಹುಟ್ಟಿದ ಹನ್ನೆರಡನೇ ದಿನ ನಾಮಕರಣ ಮಾಡುತ್ತಾರೆ. ಕಿವಿ ಚುಚ್ಚುವುದು ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಮಾಡಿಸಿದರೆ, ಒಂದು ವರ್ಷದ ನಂತರ ಹೆಣ್ಣು ಮಕ್ಕಳಿಗೆ ಮೂಗು ಚುಚ್ಚಿಸುತ್ತಾರೆ. ಇವರಲ್ಲಿ ಹುಡುಗಿ ಋತುಮತಿಯಾದರೆ ಅವಳನ್ನು ನಾಲ್ಕು ದಿನ ಬೇರೆಯಾಗಿಡುತ್ತಾರೆ. ನಂತರ ಐದನೇ ದಿನ ಅವಳಿಗೆ ಶುಭ್ರ ಕ್ರಿಯಾ ಸ್ನಾನ ಮಾಡಿಸುತ್ತಾರೆ. ಸತ್ತವರನ್ನು ಸುಡುತ್ತಾರೆ. ಸೂತಕದ ಅವಧಿ ಮುಗಿದ ನಂತರ ಶಾಂತಿ ಮಾಡಿಸಲು ಬ್ರಾಹ್ಮಣ ಪುರೋಹಿತರನ್ನು ಕರೆಸಿಕೊಳ್ಳುತ್ತಾರೆ.

ಪಶುಸಂಗೋಪನೆ, ಬೇಸಾಯ ಹಾಗೂ ತೋಟಗಾರಿಕೆ ಇವರ ಸಾಂಪ್ರದಾಯಿಕ ವೃತ್ತಿಗಳು, ಇವರಲ್ಲಿ ಕೆಲವರು ಕೂಲಿಗಳಾಗಿ ತಮ್ಮ ಜೀವನ ಸಾಗಿಸುತ್ತಾರೆ. ಇತ್ತೀಚಿಗೆ ಇವರಲ್ಲಿ ಕೆಲವು ಜನ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಂಪ್ರದಾಯಿಕವಾಗಿ ಗುಂಪಿಗೆ ಹಿರಿಯರಿರುತ್ತಾರೆ. ಯಜಮಾನ, ಗೌಡ, ಹಾಗೂ ಬುದ್ಧಿವಂತ ಎಂದು ಆತನನ್ನು ಕರೆಯುತ್ತಾರೆ. ಇತರೆ ಪ್ರತಿನಿಧಿಗಳಾದ ಗೃಹಸ್ಥರ ಜೊತೆಗೆ ಕೂತು ತೊಂದರೆಗಳನ್ನು ಬಗೆಹರಿಸಿಕೊಳ್ಳಲಾಗುತ್ತಿದೆ. ಹಿರೇ ಸುಗ್ಗಿ, ಕಿರೇ ಸುಗ್ಗಿಗಳನ್ನು ಹಾಗೂ ಇತರೆ ಹಿಂದೂ ಹಬ್ಬಗಳ ಜೊತೆಗೆ ವಿಶೇಷವಾಗಿ ಆಚರಿಸುತ್ತಾರೆ. ಹಾಲಕ್ಕಿಗಳು ಪೂರ್ವದಲ್ಲಿ ತಿಮ್ಮಪ್ಪನ ಭಕ್ತರು. ಇವರ ಜನಪದ ಕುಣಿತ ಹಾಗೂ ಹಾಡುಗಳಿಗೆ ಗುಮಟೆ ಪದಗಳೆಂದು ಕರೆಯುತ್ತಾರೆ. ಸಾಂಪ್ರದಾಯಿಕ ಬಗ್ಗೆ  ಕುಣಿತದಲ್ಲಿ, ವಿಶೇಷವಾಗಿ ‘ತಾರ್ಲೆ ಕುಣಿತ’ದಲ್ಲಿ ಹೆಂಗಸರು ಮತ್ತು ಗಂಡಸರು ಭಾಗವಹಿಸುತ್ತಾರೆ. ಅಕ್ಕಸಾಲಿಗರು, ಕ್ಷೌರಿಕರು, ದೋಬಿಗಳು, ಬ್ರಾಹ್ಮಣರ ಕೋಮುಗಳ ಜೊತೆ ಇವರಿಗೆ ಸಾಂಪ್ರದಾಯಿಕ ಸಂಬಂಧಗಳು ಇವೆ. ಬ್ರಾಹ್ಮಣ, ಮರಾಠಿ, ಶೇರಿಗಾರ, ನಾಯ್ಕ, ಮತ್ತಿತರ ಕೋಮಿನವರ ಜೊತೆಯಲ್ಲಿ ಬೆಳೆಗಳನ್ನು ಹಂಚಿಕೊಳ್ಳಲು ಜೊತೆಗೇ ದುಡಿಯುತ್ತಾರೆ. ವಿದ್ಯಾಭ್ಯಾಸದ ಬಗ್ಗೆ ಇವರ ಆಸಕ್ತಿ ಇತ್ತೀಚೆಗೆ ಬೆಳೆಯುತ್ತಿದೆ. ಇವರು ಆಧುನಿಕ ಹಾಗು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳೆರಡನ್ನೂ ಬಳಸುತ್ತಾರೆ. ಇವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿ ಅತ್ಯಂತ ಶೋಚನೀಯ.

ನೋಡಿ:

ಭಟ್ ಎಲ್.ಜಿ., ೧೯೮೬. ‘ಹಾಲಕ್ಕಿ ಒಕ್ಕಲಿಗರು’, ವೈಜಯಂತಿ,  ಉತ್ತರಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ, ಮೈಸೂರು.

ಭಟ್. ಎಲ್.ಜಿ., ೧೯೮೧. ಹಾಲಕ್ಕಿ ಒಕ್ಕಲು,  ಐ.ಬಿ.ಎಚ್ ಪಬ್ಲಿಕೇಷನ್, ಬೆಂಗಳೂರು

ಬೋರಲಿಂಗಯ್ಯ ಹಿ.ಚಿ., ೧೯೯೮. ‘ಹಾಲಕ್ಕಿ ಒಕ್ಕಲಿಗರು’, ಕರ್ನಾಟಕದ ಬುಡಕಟ್ಟುಗಳು  (ಸಂ), ಎಚ್.ಜಿ.ಲಕ್ಕಪ್ಪಗೌಡ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.

ನಾಯಕ ಎಸ್.ಆರ್., ೧೯೯೩. ಹಾಲಕ್ಕಿ ಒಕ್ಕಲಿಗರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.