ಹೆಗ್ಗಡೆಗಳನ್ನು ಪೆರ್ಗಡೆ ಹಾಗು ಪೆಗ್ಗಡೆಗಳೆಂದು ಕರೆಯುತ್ತಾರೆ. ‘ಹೆಗ್ಗಡೆ’ ಎನ್ನುವ ಪದ ‘ಮುಖಂಡ’ ಎನ್ನುವ ಅರ್ಥ ಕೊಡುತ್ತದೆ. ಥರ್ಸ್ಟನ್ (೧೯೦೯) ಇವರನ್ನು ಉಳುಮೆದಾರರು ಹಾಗೂ ದನಕರು ಸಾಕುವವರು ಎಂದು ಗುರುತಿಸುತ್ತಾರೆ. ಹೆಗ್ಗಡೆ ಸಮುದಾಯದವರು ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ದ್ರಾವಿಡ ಭಾಷೆಯಾದ ಕೊಡಗು ಭಾಷೆಯನ್ನು ಮಾತನಾಡುತ್ತಾರಲ್ಲದೆ, ಕನ್ನಡವನ್ನೂ ಮಾತನಾಡಿ ಕನ್ನಡದ ಲಿಪಿಯನ್ನು ಬಳಸುತ್ತಾರೆ. ಇವರಿಗೆ ಕೊಡಗಿನ ಇತರೆ ಮೂಲನಿವಾಸಿಗಳಿಗೆ ಇರುವಂತ ‘ಐನ್‌ಮನೆ’ಗಳಿವೆ. ಐನ್‌ಮನೆಗಳೆಂದರೆ ಅವಿಭಕ್ತ ಕುಟುಂಬದ ಶತಮಾನಗಳ ಹಳೆಯ ಮನೆ. ಇವರು ಕುಟುಂಬ ದ  ಮೂಲ ಪುರುಷನನ್ನು ‘ಕಾರಣ’ನನ್ನು ಪೂಜಿಸುತ್ತಾರೆ.  ಪ್ರತಿಯೊಂದು ಐನ್‌ಮನೆಗಳಿಗೆ ಒಬ್ಬಕಾರಣ (ಕಾರಣವೆಂದರೆ ಕುಟುಂಬದ ಮೂಲ ಪುರುಷ)ಇರುತ್ತಾನೆ. ಇವರು ಹೆಗ್ಗಡೆ ಎಂಬ ಪದವನ್ನು ಮನೆತನದ ಹೆಸರಾಗಿಯೂ ಬಳಸುತ್ತಾರೆ. ಮದುವೆ ತಂದೆಯ ಸಹೋದರಿಯ ಮಗಳು ಅಥವಾ ತಾಯಿಯ ಸಹೋದರಿಯ ಮಗಳ ಜೊತೆ ಸಾಧ್ಯವಿದೆ. ಮದುವೆಗಳು ಮಾತುಕತೆಯ ಮೂಲಕ ನಡೆಯುತ್ತದೆ. ಏಕಪತ್ನಿತ್ವ/ಏಕಪತಿತ್ವ ವಿವಾಹದ ಪದ್ಧತಿಯಿದೆ. ಇವರದು ಪುರುಷಪ್ರಧಾನ ಸಮಾಜ. ವಿವಾಹ ವಿಚ್ಛೇದನೆಗೆ ಅವಕಾಶವಿಲ್ಲ, ಆದರೆ ವಿದುರ, ವಿಧವೆಯರ ವಿವಾಹಕ್ಕೆ ಅವಕಾಶವಿದೆ. ಮಗು ಹುಟ್ಟಿದ ಐದು ದಿನಗಳವರೆಗೆ ಸೂತಕವಿರುತ್ತದೆ, ನಂತರ ನಾಮಕರಣ ಶಾಸ್ತ್ರವಿರುತ್ತದೆ. ಮದುವೆಯ ಆಚರಣೆಗಳೆಂದರೆ ಹಿರಿಯರ ಪೂಜೆ, ಹಾಲುಶಾಸ್ತ್ರ ಹಾಗೂ ಹಿರಿಯರಿಂದ ಆರ್ಶೀರ್ವಾದ ಪಡೆಯುವುದು. ಶವವನ್ನು ಸುಟ್ಟು, ಸಾವಿನ ಸೂತಕವನ್ನು ಹನ್ನೊಂದು ದಿನ ಆಚರಿಸುತ್ತಾರೆ.

ಇವರಲ್ಲಿ ಕೆಲವರು ಕಾಫಿ ಎಸ್ಟೇಟ್‌ಗಳ ಮಾಲೀಕರು, ಇನ್ನು ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಗಳಿಗೆ ಸೇರಿದ್ದಾರೆ. ಈ ಸಮುದಾಯದಲ್ಲಿ ದೊಡ್ಡ ಹಾಗೂ ಚಿಕ್ಕ ಪ್ರಮಾಣದ ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಕಂಡುಬಂದರೂ, ಕೊಡವ ಸಮುದಾಯಕ್ಕೆ ಇವರನ್ನು ಹೋಲಿಸಿದರೆ ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹೆಗ್ಗಡೆ ಹಿಂದುಳಿದ್ದಿದ್ದಾರೆ. ಇವರು ದೇವತೆಗಳಾದ ಈಶ್ವರ ಹಾಗೂ ಭಗವತಿಯರನ್ನು ಆರಾಧಿಸುತ್ತಾರೆ. ಇವರ ಧಾರ್ಮಿಕ ಆಚರಣೆಗಳನ್ನು ಇವರ ಕೋಮಿನ ವಿಶ್ವಪ್ರಜ್ಞರು ಅಥವಾ ಬ್ರಾಹ್ಮಣರು ನೆರವೇರಿಸುತ್ತಾರೆ. ಕೈಲಮುಹೂರ್ತ, ಹುತ್ತರಿ ಹಾಗೂ ಕಾವೇರಿ ಸಂಕ್ರಮಣ ಇವರು ಆಚರಿಸುವ ಕೆಲವು ಹಬ್ಬಗಳು. ಗಂಡಸರು ಮತ್ತು ಹೆಂಗಸರು ಜನಪದ ಗೀತೆಗಳನ್ನು ಹಾಡುತ್ತಾರೆ. ಹೆಗ್ಗಡೆಗಳು ಕೊಡವ, ಬ್ರಾಹ್ಮನ, ಅಮ್ಮ ಕೊಡವ, ಕೊರವ ಹಾಗೂ ನಾಯ್ರಿ ಸಮುದಾಯದ ಜೊತೆ ಸಾಮಾಜಿಕ ಸಂಪರ್ಕ ಇಟ್ಟುಕೊಂಡಿದ್ದಾರೆ. ವಿದ್ಯಾಭ್ಯಾಸದ ಬಗ್ಗೆ ಇವರಿಗೆ ಒಲವಿದೆ. ಇವರು ಆಧುನಿಕ ವೈದ್ಯಕೀಯ ಪದ್ಧತಿಯನ್ನು ಉಪಯೋಗಿಸುತ್ತಾರೆ. ಆಧುನಿಕ ಸಾಮಾಜಿಕ ವ್ಯವಸ್ಥೆಯ ಸೌಲಭ್ಯಗಳನ್ನು ಈ ಸಮುದಾಯ ಜನರು ಪಡೆದುಕೊಳ್ಳುತ್ತಿದ್ದಾರೆ.