ಹೆಳವರನ್ನು ಪಿಚ್ಚಿಗುಂಟ ಎಂದು ಆಧ್ರಪ್ರದೇಶದಲ್ಲಿ, ಕರೆಯುತ್ತಾರೆ. ‘ಹೆಳವ’ ಎನ್ನುವ ಪದದ ಅರ್ಥ ‘ಊನ ದೇಹದವನು’ ಎಂದು. ಇವರನ್ನು ಕುರಿತು “ಒಬ್ಬ ಒಕ್ಕಲಿಗನಿಗೆ ಏಳು ಜನ ಮಕ್ಕಳಿದ್ದರಂತೆ, ಅದರಲ್ಲಿ ಕೊನೆಯವನು ಹುಟ್ಟುತ್ತಲೇ ಕುಂಟನಾಗಿ ಹುಟ್ಟಿದನಂತೆ. ಅವನ ತಾಯಿ ಇವರೆಲ್ಲರಿಗೆ ಕೆಲಸ ಹೇರಿ, ಅವನ ಕಡೆ ವಿಶೇಷ ಗಮನ ಕೊಡುವುದನ್ನು ನೋಡಿ ಹಿರಿಯವನಿಗೆ ಅಸೂಯೆಯಾಯಿತು. ಆ ಕುಂಟನನ್ನು ಹೇಗಾದರೂ ತೊಲಗಿಸಬೇಕೆಂದು ಏನೆಲ್ಲಾ ಮಾಡಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಆಸ್ತಿಯಲ್ಲಿ ಒಂದಿಷ್ಟು ಪಾಲು ಕೊಟ್ಟು  ಅವನಷ್ಟಕ್ಕೆ ಅವನನ್ನು ಕಳಿಸಬೇಕೆಂದುಕೊಂಡರು. ಶಿವದೇವನು, ಅವನ ಅಸಹಾಯಕ ಸ್ಥಿತಿಯನ್ನು ನೋಡಿ ಅಣ್ಣಂದಿರಲ್ಲಿ ಪಶ್ಚಾತ್ತಾಪ ಬರಿಸಿದನು. ಕೊನೆಗೆ ಅವರು ಕುಂಟನಿಗೆ ಹಿರಿತನ ಕೊಟ್ಟುಬಿಟ್ಟರು. ಅವನು ಹೋರಿಯ ಮೇಲೆ ಕೂರಲು ಹೋದಾಗ ಇವರು ಸಹಾಯ ಮಾಡಬೇಕೆಂದಾಯಿತು. ಆ ಹೆಳವ ಕೂರಲು ಇಚ್ಚಿಸಿದಾಗ ಆ ಹೋರಿ ಗಂಟೆಯ ಸದ್ದುಮಾಡಿ ಉಳಿದವರನ್ನು  ಕರೆಯುತ್ತಿತ್ತು. ಅವನು ಬೇಡಿಕೊಳ್ಳುತ್ತಿದ್ದ ರೀತಿ ಈಗಲೂ ಆ ಜಾತಿಯವರಿಗೆ ಹಾಗೆಯೇ ಬಂದಿದೆ. ಆ ಕುಂಟನ ವಂಶದವರೇ ಹೆಳವರು” ಎಂದು ನಂಜುಂಡಯ್ಯ ಹಾಗೂ ಅಯ್ಯರ್ (೧೯೩೦) ಹೇಳಿದ್ದಾರೆ.

ಥರ್ಸ್ಟನ್ (೧೯೦೯) ಹೆಳವರ ಬಗ್ಗೆ ಹೀಗೆ ಹೇಳುತ್ತಾನೆ. “ಪಿಚ್ಚಿಗುಂಟರು ವೆಲ್ಲಾಲರ ವಂಶಸ್ಥರು. ಇವರಿಗೆ ಒಂದು ನೂರು ಜನ ಮಕ್ಕಳಿದ್ದು, ಅವರಲ್ಲಿ ಒಬ್ಬ ಹೆಳವನಾಗಿದ್ದ. ಅವನು ಸಹೋದರರು ಅವನಗೆ ಹಸಿರಿನ ಕೋಸುಗಡ್ಡಿ ಹಾಗೂ ಒಂದು ನಾಣ್ಯವನ್ನು ಪ್ರತಿ ವರ್ಷವು ಕೊಡುತ್ತಿದ್ದರು. ಈ ಹೆಳವನ ಮದುವೆ ತೆಲುಗಿನ ಹುಡುಗಿಯೊಬ್ಬಳೊಂದಿಗೆ ಆಯಿತು. ಅವಳು ಬೇರೆ ಜಾತಿಗೆ ಸೇರಿದವಳು. ಈ ಇಬ್ಬರ ಮಕ್ಕಳು ಯಾವುದೇ ಜಾತಿಯವರಾಗಿರದೇ ಇದ್ದುದರಿಂದ ಇವರನ್ನು ಪಿಚ್ಚಿ (ಭಿಕ್ಷುಕರು) ಎಂದು ಕರೆದರು. ಇವರು ಬಲ್ಲಾಳ ಮನೆಯ ಅಣ್ಣ ತಮ್ಮಂದಿರಿಂದ ಆಹಾರ ಧಾನ್ಯ, ಹಣ ಬೇಡುತ್ತಿದ್ದರು”. ಆಗಿನಿಂದ ಇವರು ವಂಶಾವಳಿಯ ಇತಿಹಾಸ ಹೇಳುತ್ತಾರೆ. ಇವರಲ್ಲಿ ಕೆಲವು ಕುಲಗಳನ್ನು ಹೆಸರಿಸಬಹುದು. ಅವೆಂದರೆ ಕಾಪುಸ್, ಗೊಲ್ಲ, ಕಮ್ಮ ಇತ್ಯಾದಿ.

ಹೆಳವರು ಬೆಂಗಳೂರು, ಬಿಜಾಪುರ, ಧಾರವಾಡ, ಗುಲ್ಬರ್ಗಾ, ತುಮಕೂರು, ಕೋಲಾರ, ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬಂದರೂ ಕರ್ನಾಟಕದ ಇತರೆ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬಂದರೂ ಕರ್ನಾಟಕದ ಇತರೆ ಜಿಲ್ಲೆಗಳಲ್ಲಿಯೂ ಸಹ ಇವರನ್ನು ಗುರುತಿಸಬಹುದು. ಇವರು ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರನ್ನು ಕಾಯಕದ ಆಧಾರದ ಮೇಲೆ ಮೂರು ಉಪಗುಂಪುಗಳಾಗಿ ವಿಭಾಗಿಸಲಾಗಿದೆ. ಅವೆಂದರೆ ಘಂಟಿಹೆಳವ, ಕುಂಬೆಹೆಳವ ಮತ್ತು ಎತ್ತುಹೆಳವ. ಎತ್ತುಹೆಳವರು ವಂಶವೃಕ್ಷ ಹೇಳುವುದರಲ್ಲಿ ನಿಪುಣರು, ಘಂಟಿ ಮತ್ತು ಕುಂಚಿಹೆಳವರು ಭಿಕ್ಷುಕರು. ಇವರು ಊರಿನೊಂದಿಗೆ ತಿರುಗುತ್ತಾ ತಮ್ಮ ಎತ್ತನ್ನು ಕರೆದುಕೊಂಡು ಭಿಕ್ಷೆ ಬೇಡುತ್ತಾರೆ. ನಂಜುಂಡಯ್ಯ ಮತ್ತು ಐಯ್ಯರ್‌ರವರು (೧೯೩೦) ಇವರಲ್ಲಿ ಹೊರಬಾಂಧವ್ಯ ಕುಲಗಳ ಪಟ್ಟಿಮಾಡಿದ್ದಾರೆ : ಅವೆಂದರೆ ಅರಳಿಕುಲ, ಅವರಿಕೆ, ಬಳೆಗಾರಕುಲ, ಬಂಡಿ, ಬಂಗಾರ, ಬಸರಿ, ಬೆಳ್ಳಿ, ಬೊಟ್ಟು, ಗಡ್ಡಮು, ಹಂತ, ಹನೇಹಿ, ಹಾವು, ಹೂವರ, ತೋರಿ, ಕುಚ್ಚಿ, ಮಾರಿ, ಮುಮ್ಮಾಡಿ, ನೊರಲ, ಒರಳು, ಒನಿಕೆ, ಸಿಂಗರಾಜು, ಸಿಪರ, ಹಾಗೂ ಉದುರುಕಾಪು.

ಇತ್ತೀಚಿನ ಸಂಶೋಧನೆಗಳ ಪ್ರಕಾರ ಇವರಲ್ಲಿ ಕೆಲವು ಕುಲಗಳನ್ನು ಮಾತ್ರ ನೋಡಬಹುದು. ಅವೆಂದರೆ ಅರಳಿಕುಲ, ಬಂಡಿ, ಬಸರಿ, ಘಂಟ, ಹೂವು ಹಾಗೂ ಕುಂಚಿ. ಸಮುದಾಯದ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿ, ಕುಲಗಳ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿ ಇವರಲ್ಲಿ ಕಂಡುಬರುತ್ತದೆ. ತಂದೆಯ ಸಹೋದರಿಯ ಮಗಳ ಜೊತೆ ಅಥವಾ ತಾಯಿಯ ಸಹೋದರನ ಮಗಳ ಜೊತೆ ವಿವಾಹ ಸಾಧ್ಯವಿದೆ. ವಯಸ್ಕ ಮದುವೆಗಳು  ರೂಢಿಯಲ್ಲಿವೆ. ವಿಧವೆ, ವಿಧುರ ಹಾಗೂ ವಿಚ್ಛೇದಿತರಿಗೆ ವಿವಾಹ ಸಾಧ್ಯವಿದೆ. ಹೆಂಗಸರು  ಕೂಡ ವ್ಯವಸಾಯ ಹಾಗೂ ಪಶುಸಂಗೋಪನೆಯಲ್ಲಿ ಭಾಗವಹಿಸುತ್ತಾರೆ. ಮದುವೆಯ ಆಚರಣೆಗಳೆಂದರೆ ಅರಿಶಿಣಸ್ನಾನ, ಅ‌ಕ್ಷತೆ, ತಾಳಿಕಟ್ಟುವುದು ಹಾಗೂ ನಾಗವಲ್ಲಿ ಆಚರಣೆ ಮುಖ್ಯವಾದವು. ಶವಗಳನ್ನು ಸುಡುತ್ತಾರೆ ಅಥವಾ ಹೂಳುತ್ತಾರೆ. ಸಾವಿನ ಸೂತಕವನ್ನು ಹನ್ನೊಂದು ದಿನ ಆಚರಿಸುತ್ತಾರೆ. ಇವರ ಸಾಂಪ್ರದಾಯಿಕ ವೃತ್ತಿಗಳ ಜೊತೆಗೆ ಕೆಲವರು ವ್ಯವಸಾಯದಲ್ಲಿ ಕೂಲಿಗಳಾಗಿದ್ದಾರೆ. ಇವರು ಸವದತ್ತಿ ಯಲ್ಲಮ್ಮನನ್ನು ಮನೆ ದೇವತೆಯೆಂದು ಪೂಜಿಸುತ್ತಾರೆ. ಶಿಕ್ಷಣದಲ್ಲಿ ಇವರು ಹಿಂದುಳಿದಿದ್ದಾರೆ. ಇವರ ಮೇಲೆ ಆಧುನಿಕ ಸಾಮಾಜಿಕ ಸಂಸ್ಥೆಗಲ ಪ್ರಭಾವ ಹಾಗೂ ಪ್ರಯೋಜನಗಳು ಅಷ್ಟಾಗಿಲ್ಲವೆಂದು ಹೇಳಬಹುದು.

ನೋಡಿ:

ಹರಿಲಾಲ್, ಕೆ.ಪವಾರ್, ೧೯೯೦. ಕರ್ನಾಟಕದ ಹೆಳವರು ಒಂದು ಜಾನಪದೀಯ ಅಧ್ಯಯನ, ಅಪ್ರಕಟಿತ, ಪಿ.ಹೆಚ್‌ಡಿ ಮಹಾಪ್ರಬಂಧ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಹರಿಲಾಲ್, ಕೆ.ಪವಾರ್., ೧೯೯೩. ಹೆಳವರ ಸಂಸ್ಕೃತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಪರಮಶಿವಯ್ಯ ಜಿ.ಶಂ., ೧೯೭೪. ಹೆಳವರ ಕಾವ್ಯಗಳು, ಸಾಹಿತ್ಯ ಸದನ, ಮಾನಸ ಗಂಗೋತ್ರಿ, ಮೈಸೂರು.