ಹೊಲದ ಕೆಲಸಗಾರರನ್ನು ಆಳುಗಳನ್ನು ಕಾಲಾಂತರದಲ್ಲಿ ‘ಹೊಲೆಯರು’ ಎಂಬುದಾಗಿ ಕರೆಯಲಾಯಿತೆಂದು ಕೆಲವರ ಅಭಿ‌ಪ್ರಾಯ. ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ಮೂಲದ ಹೊಲೆಯ ಹಾಗೂ ಸಾಲದ ಹೊಲೆಯ ಎಂದು ಕಮಲಾಕ್ಷ (೧೯೯೪) ಗುರುತಿಸುತ್ತಿದ್ದಾರೆ. ಈ ಸಮುದಾಯಕ್ಕೆ ಹೊಂದಿಕೊಂಡಂತೆ ಹಲವಾರು ಸಮುದಾಯಗಳು ಉಪಪಂಡಗಳು ಇರುವುದು ಕಂಡುಬರುತ್ತದೆ. ಉದಾ:ಹೊಲೆಯ ದಾಸರಿ, ಛಲವಾದಿ ಮುಕರಿಗಳು, ಇತ್ಯಾದಿ. ಹೊಲೆಯ ಅಥವಾ ಹೊಲೇರ್ ಎಂದು ಕರೆಯಲ್ಪಡುವ ಇವರು ಮುಖ್ಯವಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಇವರ ಸಾಂಪ್ರದಾಯಿಕ ವೃತ್ತಿ ಮೇಲುಜಾತಿಯ ಸಾಂಸ್ಕೃತಿಕ ಆಚರಣೆಗಳ ಹಾಗೂ ಶವಸಂಸ್ಕಾರಕ್ಕೆ ನೆರವಾಗುವುದಾಗಿತ್ತು. ನಂಜುಂಡಯ್ಯ ಹಾಗೂ ಐಯ್ಯರ್ (೧೯೩೦) ಇವರಲ್ಲಿ ಐದು ಒಳಬಾಂಧವ್ಯ ಕುಲಗಳನ್ನು ಗುರುತಿಸುತ್ತಾರೆ. ಅವೆಂದರೆ ಕುಲಸಾಲೆ, ಮೂರಿ, ದಾಸ, ಹಗ್ಗ, ಕಪ್ಪೆ. ಇವುಗಳ ಜೊತೆ ಸುಮಾರು ಎಪ್ಪತ್ತೈದು ಹೊರಬಾಂಧವ್ಯ ಬೆಡಗುಗಳನ್ನು ಗುರುತಿಸಿದ್ದರು. ಇವರ ಸಾಂಪ್ರದಾಯಿಕ ಕಸುಬೆಂದರೆ ಕೃಷಿಯಲ್ಲಿ ಕೂಲಿ ಆಳುಗಳಾಗಿ ದುಡಿಯುವುದು. ಊರಿನ ಹಿರಿಯ ಅಥವಾ ಪಟೇಲರ ಮನೆಯಲ್ಲಿ ವ್ಯವಸಾಯದ ಕೂಲಿಯಾಳುಗಳಾಗಿರುವುದು. ಈಗ ಇವರಲ್ಲಿ ಗಂಡಸರು, ಹೆಂಗಸರು ವ್ಯವಸಾಯದಲ್ಲಿ ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಕೆಲವರು ಸರ್ಕಾರಿ ಕಛೇರಿಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇವರಿಗೆ ಆಧುನಿಕ ವೈದ್ಯಕೀಯ ಹಾಗೂ ಕುಟುಂಬ ಕಲ್ಯಾಣ ಯೋಜನೆಯ ಬಗ್ಗೆ ಒಲವಿದೆ. ಆಧುನಿಕ ಶಿಕ್ಷಣ ವ್ಯವಸ್ಥೆ, ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು, ಸಂಪರ್ಕಸಾಧನಗಳ ಬಳಕೆ, ಇತ್ಯಾದಿ ಆಧುನಿಕ ವ್ಯವಸ್ಥೆಗಳ ಉಪಯೋಗವನ್ನು ಪಡೆದುಕೊಂಡು ನಿಧಾನಗತಿಯಲ್ಲಿ ಸಾಮಾಜಿಕ ಬದಲಾವಣೆಯನ್ನು ಈ ಸಮುದಾಯ ದ ಜನರು ಹೊಂದುತ್ತಿದ್ದಾರೆ. ಇವರಲ್ಲಿ ಕೆಲವು ಕುಟುಂಬಗಳನ್ನು ಬಿಟ್ಟರೆ, ಹೆಚ್ಚಿನ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿದ್ದಾರೆ.

ನೋಡಿ:

ಕಮಲಾಕ್ಷ., ೧೯೯೪. ದಕ್ಷಿಣ ಕನ್ನಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಇತಿಹಾಸ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

 

ಹೊಲೆಯ : ಕೆಂಬಟ್ಟಿ

ಕೊಡಗಿನ ಬೆಟ್ಟದ ತಪ್ಪಲು ಗದ್ದೆಗಳಲ್ಲಿ ಕೆಂಬಟ್ಟಿಗಳು ಭತ್ತ ಬೆಳೆಯುತ್ತಿದ್ದರು. ಈ ಭತ್ತ  ಕೆಂಪು ಬಣ್ಣದ ದಪ್ಪ ಭತ್ತ. ಇವರು ಬಿಳಿ ಭತ್ತದ ಜೊತೆಗೆ ರಾಜರ ಕೃಷಿ ಭೂಮಿಗಳಲ್ಲಿ ಬೆಳೆಯುತ್ತಿದ್ದರು. ಕೆಂಬಟ್ಟಿಗಳು ಕೃಷಿಯಾಳುಗಳಾಗಿದ್ದರೂ, ಈ ಭತ್ತದ ಕೃಷಿಯಲ್ಲಿ ಇವರು ಹೆಚ್ಚು ತೊಡಗಿಸಿಕೊಂಡಿದ್ದರು. ಇಲ್ಲಿ ಬಟ್ಟಿಯರ್ ಶಬ್ದ ಕೆಂಬಟ್ಟಿಗಳಿಗೆ ಅನ್ವಯವಾಗಿದ್ದು ಭತ್ತದ ಭೂಮಿಯವರು ಎಂಬ ಅರ್ಥ ಕಾಣುತ್ತದೆ. ಮೂಲನಿವಾಸಿ ಕೃಷಿಯಾಳುಗಳಾಗಿ, ಕೆಂಪು ಭತ್ತವನ್ನು ಬೆಳೆದುಕೊಡುವಲ್ಲಿ ವಿಶೇಷ ಪರಿಣತಿಯ ಕಾರಣ ಕೆಂಬಟ್ಟಿ ಕೆಂಪು ಭತ್ತದ ಭೂಮಿಯವರು ಎಂದು ಹೆಸರಾಗಿರಲೂಬಹುದು (ನಾಗರಾಜು ೧೯೯೩). ಕೆಂಬಟ್ಟಿಗಳ ಕುಲದೇವತೆ ಪನ್ನಂಗಾಲ ದೇವತೆಯ ಹಬ್ಬದಲ್ಲಿ ದೇವತೆಯ ಉತ್ಸವ ಮೂರ್ತಿ ಹೊರುವವರು, ಕಡ್ಡಾಯವಾಗಿ ಕೆಂಪು ಬಟ್ಟೆ ಧರಿಸುತ್ತಾರೆ. ಇದು ಹಿಂದಿನಿಂದಲೂ ಬಂದ ಸಂಪ್ರದಾಯ. ಬಹುಶಃ ಈ ಕೆಂಪು ಬಟ್ಟೆ ಕೆಂಬಟ್ಟಿಯ ಕುಲದೇವತೆಯ ಸಂಪ್ರದಾಯದ ಕಾರಣ ಕೆಂಬಟ್ಟಿ ಹೆಸರು ಈ ಸಮುದಾಯಕ್ಕೆ ಬಂದಿದ್ದಿರಬಹುದು (ಎಸ್.ಎನ್.ಕೇಶವ ಮೂರ್ತಿ, ೧೯೯೦). ಕೆಂಬಟ್ಟಿಗಳು  ಕೊಡಗಿನ ಮೂಲ ನಿವಾಸಿಗಳು ಎಂಬುದು ಕೆಲವರ ಅಭಿಪ್ರಾಯ.

ನಂಜುಂಡಯ್ಯ ಎಚ್.ವಿ.ಮತ್ತು ಐಯ್ಯರ್ ಎಲ್.ಕೆ.(೧೯೩೦) ತಮ್ಮ The Mysore Tribes and Castes  ಪುಸ್ತಕದಲ್ಲಿ ಹೊಲೆಯರಲ್ಲಿ ಬರುವ ಕುಲಗಳ ಆತ್ತಿಕುಲ, ಆನೆಕುಲ, ಜೇನುಕುಲ, ಹಾಲುಕುಲ, ಎಂದಿರುವಂತೆ ಕೆಂಬರ ಕುಲ ಮೈಸೂರು ಭಾಗದಲ್ಲಿತ್ತು ಎಂದು ತಿಳಿಸುತ್ತಾರೆ. ಕೃಷ್ಣ ಐಯ್ಯರ್‌ರವರು ೧೯೪೮ರಲ್ಲಿ ಕೆಂಬಟ್ಟಿಗಳಲ್ಲಿ ಹದಿನಾಲ್ಕು ಮನೆತನಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ಪಡುಕುಟ್ಟ, ಚೆಟ್ಟಿಕುಟ್ಟ, ಕಾಡುಕುಟ್ಟ, ಗಡ್ಡಕುಟ್ಟ, ಪೊಂದಕುಟ್ಟ, ಇನ್ನು ಕೆಲವು ಇಂದು ಕಂಡುಬರುವುದಿಲ್ಲ ಎಂದು ಇತ್ತೀಚೆಗೆ ಕೆಲವು ಸಂಶೋಧಕರು ಗುರುತಿಸಿದ್ದಾರೆ. ಮನೆತನದ ಹೆಸರುಗಳಲ್ಲಿ ಕುಟ್ಟ ಶಬ್ದ ಹಾಗೂ ಅದರ ಮೊದಲ ಪದಗಳನ್ನು ಗಮನಿಸಿದರೆ ಕುಲದ ಮೂಲ ಹಾಗೂ ಇದ್ದ ನೆಲೆಯ ಬಗ್ಗೆ ಸೂಚನೆ ದೊರೆಯುತ್ತದೆ ಎಂದು ನ ನಾಗರಾಜು ಎಂ.ಜಿ. (೧೯೧೩) ತಿಳಿಸುತ್ತಾರೆ. ಅವರೆ ಕುಟ್ಟಡ, ಕೆಂಬರೆಕುಟ್ಟಡ, ಬಾಳೆಕುಟ್ಟಡ, ಕುವಲೆ ಕುಟ್ಟಡ, ಕಾಡುಕುಟ್ಟ ಇತ್ಯಾದಿ ಸಸ್ಯಗಳ ಹಾಗೂ ವಸ್ತುಗಳ ಸಂಬಂಧದ ಕುಲಮೂಲವನ್ನು ಸೂಚಿಸುವಂತಿದೆ. ಎತ್ತು, ಕಾಳೆ, ಕೊಂಬು, ಭಂಗಿ, ಮೂಳೆ, ಇತ್ಯಾದಿಗಳು ಮನೆತನದ ಹೆಸರುಗಳು ಅವರ ಕಸುಬಿನ ಆಧಾರದ ಮೇಲೆ ರೂಪುಗೊಂಡಿವೆ. ಹೀಗೆ ಮನೆಯ ಹಿರಿಯನ ಹೆಸರಿನಲ್ಲಿ ಮನೆಯ ಮಕ್ಕಳ ಹೆಸರಿನಲ್ಲಿ ಮನೆತನದ ಹೆಸರುಗಳು ಇರುವುದು ಕಂಡುಬರುತ್ತದೆ.

ಕೆಂಬಟ್ಟಿಗಳು ಕೊಡಗಿನ ಎಲ್ಲ ಭಾಗಗಳಲ್ಲಿ ಹೆಚ್ಚಾಗಿ ಬೆಟ್ಟದ ತಪ್ಪಲು ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ದ್ರಾವಿಡ ಭಾಷೆಯಾದ ಕೊಡಗನ್ನು  ಮಾತನಾಡುತ್ತಾರೆ. ಹೊರಬಾಂಧವ್ಯ ವಿವಾಹವನ್ನು ಕುಲದ ಮಟ್ಟದಲ್ಲಿ ಹಾಗೂ ಒಳಬಾಂಧವ್ಯ ವಿವಾಹವನ್ನು ಸಮುದಾಯದ ಮಟ್ಟದಲ್ಲಿ ಪಾಲಿಸುತ್ತಾರೆ. ತಂದೆಯ ಸಹೋದರಿಯ ಮಗಳು ಅಥವಾ ತಾಯಿಯ ಸಹೋದರನ ಮಗಳ ಜೊತೆ ಮದುವೆ ಸಾಧ್ಯವಿದೆ. ಹೆಂಗಸರು ಬೇರೆ ಬೇರೆ ಕೆಲಸಗಳಲ್ಲಿ ಪಾ‌ಲ್ಗೊಂಡು, ಮನೆಯ ಆದಾಯ ಹಾಗೂ ಮನೆಯನ್ನು ನಡೆಸುವುದರಲ್ಲಿ ಸಹಾಯ ಮಾಡುತ್ತಾರೆ. ಕೆಂಬಟ್ಟಿಯವರು ಕಾಫಿ ಎಸ್ಟೇಟ್‌ಗಳಲ್ಲಿ ಕೂಲಿಗಾರರಾಗಿ ದುಡಿಯುತ್ತಾರೆ. ಬುಟ್ಟಿ  ಹೆಣೆಯುವುದು ಇವರ ಸಾಂಪ್ರದಾಯಿಕ ಕಸುಬು. ಆಧುನಿಕ ಸಾಮಾಜಿಕ ಸಂಸ್ಥೆಗಳ ಸಂಪರ್ಕ ಹಾಗೂ ಪ್ರಯೋಜನಗಳನ್ನು ಪಡೆದುಕೊಳ್ಳುವಲ್ಲಿ ಹಿಂದುಳಿದ ಸಮುದಾಯವಾಗಿದೆ. ಇವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಸುಧಾರಣೆಯಾಗಬೇಕಾದ ಅಗತ್ಯ ಇದೆ.

ನೋಡಿ:

ನಾಗರಾಜು, ೧೯೯೩. ಕೆಂಬಟ್ಟಿ ಹೊಲೆಯರ ಸಂಸ್ಕೃತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

Nanjundaih H.V., 1906. The Enthographical Surveyof Mysore-II,  Holeya Caste.

 

ಹೊಲೆಯ : ದಾಸರಿ

ಹೊಲೆಯ ದಾಸರಿ ಎಂಬ ಪದ ಬಂದಿರುವುದು ಕನ್ನಡ ಪದವಾದ ‘ಹೊಲ’ದಿಂದ. ಹೊಲ ಎಂದರೆ ‘ಒಣನೆಲ’. ದಾಸರಿ ಎಂದರೆ ಸೇವಕ ಎಂದರ್ಥ. ಹೊಲೆಯ ದಾಸರಿಗಳು ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ವಲಸೆ ಬಂದವರು ಎಂದು ಕೆಲವರು ಗುರುತಿಸುತ್ತಾರೆ. ತೆಲುಗು, ಕನ್ನಡ ಭಾಷೆ ಮಾತನಾಡಿ ಕನ್ನಡ ಲಿಪಿಯನ್ನು ಇವರು ಬಳಸುತ್ತಾರೆ. ಇವರು ಹೆಚ್ಚಾಗಿ ರಾಯಚೂರು ಹಾಗೂ ಗುಲ್ಬರ್ಗಾ ಜಿಲ್ಲೆಗಳಲ್ಲಿದ್ದಾರೆ. ಹೊಲೆಯ ದಾಸರಿಯರನ್ನು ಕೆಲವು ಪುರುಷಪ್ರಧಾನ ಹೊರಬಾಂಧವ್ಯ ಕುಲಗಳಾಗಿ ವಿಭಾಗಿಸಲಾಗಿದೆ. ಅವೆಂದರೆ ಮುತ್ತೆನವರು ಅಥವಾ ಮುತ್ತಿನವರು, ಸಕ್ರಿಯವರು ಹಾಗೂ ಅಕ್ಕಿಕೋಣಿ ಇತ್ಯಾದಿ. ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ಹಾಗೂ ಕುಲದ ಮಟ್ಟದಲ್ಲಿ ಹೊರಬಾಂಧವ್ಯ ಇವರ ವಿವಾಹ ಪದ್ಧತಿಯಾಗಿದೆ. ವಧುದಕ್ಷಿಣೆಯಾಗಿ ಮದುವೆಗೆ ಮುನ್ನ ಇಪ್ಪತ್ತು ರೂಪಾಯಿಗಳನ್ನು ಕೊಡುತ್ತಾರೆ. ಹೆಂಗಸರು ವ್ಯವಸಾಯ, ಉರುವಲು ಸಂಗ್ರಹಣೆ, ಪಶುಸಂಗೋಪನೆ, ಮತ್ತಿತರ ಕೆಲಸಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಹೆರಿಗೆಯ ಮುಂಚಿನ ಆಚರಣೆ ‘ಕುಪ್ಪಸ’ ಗರ್ಭಿಣಿಯಾದ ಐದನೇ ತಿಂಗಳಲ್ಲಿ ಮಾಡುತ್ತಾರೆ. ಹುಡುಗಿಯರು ಋತುಮತಿಯಾದಾಗ ‘ಮೈನೆರೆಯುವುದು’ ಎಂದು ಆಚರಿಸಲಾಗುತ್ತದೆ. ಅದನ್ನು ಹನ್ನೊಂದು ದಿನಗಳ ಸೂತಕ ಕಳೆದ ನಂತರ ಮಾಡುತ್ತಾರೆ.

ಇವರು ಹೊಲೆಯ ಮತ್ತು ಮಾದಿಗರಿಗೆ ಧಾರ್ಮಿಕ ಕಾರ್ಯ ಮಾಡಲು ಇರುವು ಪೂಜಾರಿಗಳು ಎಂದು ತಿಳಿಯುತ್ತದೆ. ಕೆಲವರು ಈಗಳು ಅದರಲ್ಲೇ ಮುಂದುವರಿಯುತ್ತಿದ್ದಾರೆ. ಇವರಲ್ಲಿ ಬಹುಮಂದಿ ದಿನಗೂಲಿ ನೌಕರರು ಇದ್ದಾರೆ. ವೆಂಕಟರಮಣ, ವಿಷ್ಣು, ಹನುಮಂತ ಹಾಗೂ ಅಂಬಾಭವಾನಿ ದೇವತೆಗಳನ್ನು ಪೂಜಿಸುತ್ತಾರೆ. ಬ್ರಾಹ್ಮಣ ಅರ್ಚಕರು ಧಾರ್ಮಿಕ ವಿಧಿಗಳನ್ನು ನಡೆಸುವರು. ವಿದ್ಯಾಭ್ಯಾಸವನ್ನು ಹುಡುಗರಿಗೆ ಕೊಡುವುದನ್ನು ಒಪ್ಪುತ್ತಾರೆ. ಇವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ.