04ಗೃಹ, ವಾಣಿಜ್ಯ, ಉದ್ಯಮ, ಮಿಲಿಟರಿ ಭಧ್ರತಾ ವ್ಯವಸ್ಥೆ, ಸಂಚಾರಿ ನಿಯಮ ಪಾಲನೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ವೀಡಿಯೋ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ವಿಶ್ವಾದಂತ್ಯ ಪ್ರತಿ ದಿನ ಸುಮಾರು 200 ದಶಲಕ್ಷ ಇಂತಹ ವೀಡಿಯೋ ಕ್ಯಾಮರಾಗಳು ಕೆಲಸ ಮಾಡುತ್ತಿವೆ ಎನ್ನಲಾಗಿದೆ. ಇದರ ಜೊತೆ ಪೋಲಿಸರು ಮತ್ತು ಸೇನೆ ತಮ್ಮ ಉಡುಪಿನೊಡನೆ ಧರಿಸುವ ವಿಶೇಷ ಕ್ಯಾಮರಾ ಮತ್ತು ಬಳಕೆಯಲ್ಲಿರುವ ಕೋಟ್ಯಾಂತರ ಮೊಬೈಲ್ ಫೋನ್ ಗಳಲ್ಲಿರುವ ಕ್ಯಾಮರಾಗಳ ಸಂಖ್ಯೆಯನ್ನು ಸೇರಿಸಿದಾಗ, ವೀಡಿಯೋ ವಿಶ್ವದ ವ್ಯಾಪ್ತಿ ಅರಿಯಬಹುದಾಗಿದೆ. ಈ ಕ್ಯಾಮರಾಗಳ ಬಳಕೆಯಿಂದಾಗಿ ಪ್ರತಿವಾರ ವಿಶ್ವಾದ್ಯಂತ ನೂರಾರು ಕೋಟಿ ಗಂಟೆಗಳ ವೀಡಿಯೋ ರೇಕಾರ್ಡಿಂಗ್ ಲಭ್ಯವಾಗುತ್ತದೆ. ಇಷ್ಟು ಅಗಾಧ ಪ್ರಮಾಣದ ವೀಡಿಯೋ ರೆಕಾರ್ಡಿಂಗ್‌ಗಳನ್ನು ವೇಗವಾಗಿ ಸಂಸ್ಕರಿಸಿ, ವಿಶ್ಲೇಷಣೆ ಮಾಡಿ, ಉಪಯುಕ್ತ ಮಾಹಿತಿಯನ್ನು ನೀಡುವ ಹೊಸ ತಂತ್ರಜ್ಞಾನದ ಹೆಸರು ಇಂಟೆಲಿಜೆಂಟ್ ವೀಡಿಯೋ ಅನಲೆಟಿಕ್ಸ್.

video_analytics

ಇಂಟೆಲಿಜೆಂಟ್ ವೀಡಿಯೋ ಅನಲೆಟಿಕ್ಸ್ ತಂತ್ರಜ್ಞಾನವನ್ನು ಮೂರು ರೀತಿಯಲ್ಲಿ ಬಳಸಬಹುದಾಗಿದೆ.
1. ರೆಕಾರ್ಡಿಂಗ್ ಆಗಿರುವ ವೀಡಿಯೋ ಸಂಸ್ಕರಣೆ, ಮಾಹಿತಿ ವಿಶ್ಲೇಷಣೆ ಮತ್ತು ಅಪರಾಧ ತನಿಖೆಗೆ ಪೂರಕ ಮಾಹಿತಿ ನೀಡಲು.
2. ಚಾಲ್ತಿಯಲ್ಲಿರುವ ವೀಡಿಯೋ ವ್ಯವಸ್ಥೆಯೊಡನೆ ಈ ತಂತ್ರಜ್ಞಾನವನ್ನು ಬಳಸಿ, ಶಂಕಿತ ಅಪರಾಧಿಗಳ ಮತ್ತು ಸಂಭವನೀಯ ಅಪರಾಧ, ಅವಘಡಗಳನ್ನು ಕುರಿತು ಭದ್ರತಾ ಸಿಬ್ಬಂದಿಗೆ ತುರ್ತು ಸಂದೇಶದ ಮೂಲಕ ಮಾಹಿತಿ ನೀಡಲು.
3. ಈ ಮೊದಲು ನಡೆದಿರುವ ಅಪರಾಧ, ಅವಗಡಗಳ ಮಾಹಿತಿ ಮತ್ತು ಅಪರಾಧಿಗಳನ್ನು ಲಭ್ಯವಿರುವ ಮಾಹಿತಿಯನ್ನು ಬಳಸಿ, ಭವಿಷ್ಯದಲ್ಲಿ ಇಂತಹ ಅಪರಾಧಿಗಳು ಮತ್ತು ಅಪರಾಧಗಳಾಗುವ ಸಂಭವ ಕುರಿತು ಮುನ್ಸೂಚನೆ ನೀಡಲು. ಭಯೋತ್ಪಾದನೆಯಂತಹ ಜಾಗತಿಕ ಸಮಸ್ಯೆಯನ್ನು ಎದುರಿಸಲು ಇಂತಹ ತಂತ್ರಜ್ಞಾನದ ಬಳಕೆಯ ಮೂಲಕ ವಿವಿಧ ದೇಶಗಳು ಒಂದು ಗೂಡಿ ಕೆಲಸ ಮಾಡಲು ಸಾಧ್ಯವಿದೆ.

ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂದು ಒಂದು ಕಾಲ್ಪನಿಕ ಉದಾಹರಣೆಯೊಂದಿಗೆ ತಿಳಿದುಕೊಳ್ಳೋಣ.

ಮಹಾನಗರವೊಂದರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಭದ್ರತಾ ವ್ಯವಸ್ಥೆಗಾಗಿ ಎಲ್ಲಾ ರೈಲು ಪ್ಲಾಟ್‌ಫಾರಂಗಳು, ನಿಲ್ದಾಣದೊಳಗಿರುವ ಪ್ರಯಾಣಿಕರ ನಿರೀಕ್ಷಣಾ ಕೊಠಡಿಗಳು, ಟಿಕೆಟ್ ಕೌಂಟರ್‌ಗಳು, ಉಪಹಾರ ಗೃಹ, ವಸತಿ ಗೃಹ, ಪ್ರಯಾಣಿಕರ ಆಗಮನ-ನಿರ್ಗಮನ ದ್ವಾರಗಳು, ಅಂಗಡಿಗಳು ಹೀಗೆ ಅನೇಕ ಕಡೆ ಸಿ.ಸಿ ಮತ್ತು ನೆಟ್‌ವರ್ಕ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದಲ್ಲದೆ ರೈಲು ನಿಲ್ದಾಣದ ಹೊರಗಡೆ ಇರುವ ವಾಹನ ನಿಲ್ದಾಣ, ಪ್ರಮುಖ ರಸ್ತೆಗಳಲ್ಲಿ ಕೂಡಾ ಇಂತಹ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರತಿದಿನ ನಿಲ್ದಾಣಕ್ಕೆ ಬಂದು ಹೋಗುವ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು, ಸಾರ್ವಜನಿಕರು, ಸಿಬ್ಬಂದಿ ಮತ್ತು ಅವರು ತರುವ ಬ್ಯಾಗು, ಲಗೇಜ್, ಇತ್ಯಾದಿ, ನಿಲ್ದಾಣಕ್ಕೆ ಬಂದು ಹೋಗುವ ವಾಹನಗಳು, ನಿಲ್ದಾಣದಲ್ಲಿ ನಿಲುಗಡೆಯಾಗುವ ವಾಹನಗಳು, ಹೀಗೆ ಅನೇಕ ಮಾಹಿತಿಯನ್ನು ಈ ಕ್ಯಾಮೆರಾಗಳನ್ನು ಬಳಸಿ ವೀಡಿಯೋ ರೆಕಾರ್ಡಿಂಗ್ ಮಾಡಲಾಗುತ್ತದೆ. ಹೀಗಾಗಿ, ಒಂದು ವಾರದ ಅವಧಿಯಲ್ಲಿ ಸಾವಿರಾರು ಗಂಟೆ ವೀಡಿಯೋ ರೆಕಾರ್ಡಿಂಗ್ ಮಾಡಲಾಗಿರುತ್ತದೆ.

ಅಂದಾಜು 22ರಿಂದ 28 ವರ್ಷದ, ಸುಮಾರು 5 ಅಡಿ 6 ಇಂಚು ಎತ್ತರದ, ಸದೃಢ ಮೈಕಟ್ಟು ಮತ್ತು ಕಪ್ಪು ತಲೆಗೂದಲು ಹೊಂದಿರುವ ನೀಲಿ ಬಣ್ಣದ ಮೇಲಂಗಿ ಹಾಗೂ ನೀಲಿ ಬಣ್ಣದ ಜೀನ್ಸ ಪ್ಯಾಂಟ್ ಧರಿಸಿದ ಶಂಕಿತ ಅಪರಾಧಿಯೊಬ್ಬ ರೈಲು ನಿಲ್ದಾಣಕ್ಕೆ ಬಂದು, ರೈಲೊಂದರಲ್ಲಿ ಪ್ರಯಾಣಿಸಿದ್ದಾನೆ.

ಇಂತಹ ಮಾಹಿತಿಯನ್ನು ಒಂದು ವಾರದ ಅವಧಿಯಲ್ಲಿ ಲಭ್ಯವಾಗಿರುವ ಸಾವಿರಾರು ಗಂಟೆಗಳ ವೀಡಿಯೋ ರೆಕಾರ್ಡಿಂಗ್‌ನಲ್ಲಿ ಹುಡುಕಬೇಕು ಎಂದುಕೊಳ್ಳೋಣ. ಹೀಗೆ ಹುಡುಕಲು ಸಾಂಪ್ರದಾಯಿಕ ವೀಡಿಯೋ ಸಂಸ್ಕರಣೆ ಮತ್ತು ವಿಶ್ಲೇಷಣೆ ತಂತ್ರಾಂಶಗಳನ್ನು ಬಳಸಿದರೆ, ಅನೇಕ ದಿನ ಅಥವಾ ಕೆಲವೊಮ್ಮೆ ಅನೇಕ ವಾರಗಳಷ್ಟು ಸಮಯ ಬೇಕಾಗುತ್ತದೆ. ಆದರೆ ಇಂಟೆಲಿಜೆಂಟ್ ವೀಡಿಯೋ ಅನಲೆಟಿಕ್ಸ್ ತಂತ್ರಜ್ಞಾನವನ್ನು ಬಳಸಿದರೆ ಕೆಲವೇ ನಿಮಿಷಗಳ ಸಮಯದಲ್ಲಿ ಸಾವಿರಾರು ಗಂಟೆಗಳ ವೀಡಿಯೋ ರೆಕಾರ್ಡಿಂಗ್ ನ ಸಂಸ್ಕರಣೆ ಮತ್ತು ವಿಶ್ಲೇಷಣೆ ಸಾಧ್ಯವಾಗುತ್ತದೆ ಎನ್ನುವುದು ಗಮನಾರ್ಹ.

person

ಉದಾಹರಣೆಗೆ, ವೀಡಿಯೋದಲ್ಲಿ ಜನರನ್ನು ಗುರುತಿಸಲೆಂದು ಇಂಟೆಲಿಜೆಂಟ್ ವೀಡಿಯೋ ಅನಲೆಟಿಕ್ಸ್ ತಂತ್ರಜ್ಞಾನದಲ್ಲಿ ಅತ್ಯಾಧುನಿಕ ‘ಪೀಪಲ್ ಸರ್ಚ್ ಇಂಜಿನ್’ ಸೌಲಭ್ಯವನ್ನು ಬಳಸಲಾಗುತ್ತದೆ. ವ್ಯಕ್ತಿಯ ವಯಸ್ಸು, ಎತ್ತರ, ಮೈಬಣ್ಣ, ತಲೆಗೂದಲಿನ ಬಣ್ಣ, ಕಣ್ಣುಗಳ ಬಣ್ಣ, ಧರಿಸಿರುವ ಉಡುಪಿನ ಬಣ್ಣಗಳು, ಧರಿಸಿರುವ ಕನ್ನಡಕ ಅಥವಾ ಕೂಲಿಂಗ್ ಗ್ಲಾಸ್, ಪಾದರಕ್ಷೆ, ಆತನ ಜೊತೆಗಿರಬಹುದಾದ ಬ್ಯಾಗು, ಸೂಟ್ ಕೇಸ್ – ಹೀಗೆ ವಿವಿಧ ವಿವರಗಳನ್ನು ಬಳಸಿ ಈ ಸರ್ಚ್ ಇಂಜಿನ್ ಮೂಲಕ ಹುಡುಕಬಹುದು. ಸಾವಿರಾರು ಗಂಟೆಗಳ ವೀಡಿಯೋದಲ್ಲಿ ಕಾಣಿಸಿಗುವ ಲಕ್ಷಾಂತರ ಜನರ ನಡುವೆ ಈ ವ್ಯಕ್ತಿಯನ್ನು ಗುರುತಿಸುವುದಲ್ಲದೆ, ಅವನು ರೈಲು ನಿಲ್ದಾಣಕ್ಕೆ ಬಂದು-ಹೋಗಿರುವ ಸಮಯ, ಬಳಸಿದ ಪ್ರವೇಶ-ನಿರ್ಗಮನ ದ್ವಾರಗಳು, ವ್ಯಕ್ತಿ ತನ್ನ ಜೊತೆ ತಂದ ಲಗೇಜನ್ನು ಏನು ಮಾಡಿದ ಮತ್ತು ರೈಲು ನಿಲ್ದಾಣದಲ್ಲಿ ಅವನ ಪ್ರತಿಯೊಂದು ಚಲನವಲನವನ್ನು ವಿಶ್ಲೇಷಿಸಿ, ಕೆಲವೇ ನಿಮಿಷಗಳಲ್ಲಿ ಅಗತ್ಯ ಮಾಹಿತಿಯನ್ನು ಇಂಟೆಲಿಜೆಂಟ್ ವೀಡಿಯೋ ಅನೆಲೆಟಿಕ್ಸ್ ತಂತ್ರಜ್ಞಾನವು ನೀಡುತ್ತದೆ.

ಶಂಕಿತ ಅಪರಾಧಿ ಈ ಮೊದಲು ಈ ರೈಲು ನಿಲ್ದಾಣಕ್ಕೆ ಬಂದಿದ್ದನೇ ಎನ್ನುವ ಪ್ರಶ‍್ನೆಗೂ ಈ ತಂತ್ರಜ್ಞಾನ ಸಹಾಯ ಮಾಡಬಲ್ಲದು. ಹಲವಾರು ತಿಂಗಳು ಕಾಲದ ವೀಡಿಯೋ ರೆಕಾರ್ಡಿಂಗ್ ಅನ್ನು ಸಂಸ್ಕರಿಸಿ, ವಿಶ್ಲೇಷಿಸಿ, ಈ ವ್ಯಕ್ತಿ ಈ ಮೊದಲು ರೈಲು ನಿಲ್ದಾಣಕ್ಕೆ ಬಂದಿರುವ ದಿನಾಂಕ, ಸಮಯ ಮತ್ತು ಅಂದು ಆತನ ಜೊತೆ ಬಂದ ವ್ಯಕ್ತಿಗಳು, ಇವರು ಧರಿಸಿದ ಉಡುಪು, ಇವರು ತಂದ ಲಗೇಜು, ರೈಲು ನಿಲ್ದಾಣದಲ್ಲಿ ಅವರ ಚಲನವಲನ, ಹೀಗೆ ಅನೇಕ ಮಾಹಿತಿಯನ್ನು ಪಡೆಯಲು ವೀಡಿಯೋ ಅನೆಲೆಟಿಕ್ಸ್ ತಂತ್ರಜ್ಞಾನವನ್ನು ಬಳಸಬಹುದು.

h

ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ, ವ್ಯಾಪಾರಿಗಳಿಗೆ ಕೆಲವು ಕಡೆ ಮುಕ್ತ ಸಂಚಾರದ ಅನುಮತಿ ಇದ್ದರೆ, ಇನ್ನು ಕೆಲವು ಪ್ರದೇಶಗಳು ನಿರ್ಬಂಧಿತವಾಗಿರುತ್ತವೆ. ಈ ವಲಯಗಳನ್ನು ಇಂಟೆಲಿಜೆಂಟ್ ವೀಡಿಯೋ ಅನೆಲೆಟಿಕ್ಸ್ ತಂತ್ರಜ್ಞಾನದಲ್ಲಿ ಸ್ವಷ್ಟವಾಗಿ ಗುರುತಿಸಬಹುದು. ಮುಕ್ತ ಸಂಚಾರ ವಲಯದಲ್ಲಿ ನಡೆಯುವ ಚಲನವಲನದ ಮೇಲೆ ನಿಗಾ ಇಟ್ಟಿರುವಂತೆ, ನಿರ್ಬಂಧಿತ ಅಥವಾ ನಿಷೇಧಿತ ವಲಯದೊಳಗೆ ಅಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಪ್ರವೇಶಿಸಿದರೆ, ಅಥವಾ ಏನನ್ನಾದರೂ ಎಸೆದರೆ, ಅದನ್ನು ತಕ್ಷಣ ಗುರುತಿಸಿ ಭದ್ರತಾ ಸಿಬ್ಬಂದಿಗೆ ತುರ್ತು ಸಂದೇಶದ ಮೂಲಕ ತಿಳಿಸಲಾಗುತ್ತದೆ. ಇದೇ ರೀತಿ ನಿಷೇಧವಿದ್ದರೂ ರೈಲು ಹಳಿಗಳನ್ನು ದಾಟಲು ಯತ್ನಿಸುವ ಜನರು, ರೈಲು ಹಳಿಗಳ ಮೇಲೆ ವಸ್ತುಗಳನ್ನು ಬಿಸಾಡುವುದು, ಮೆಟ್ರೋ ರೈಲು ಸುರಂಗ ಮಾರ್ಗವನ್ನು ಪ್ರವೇಶಿಸಲು ಯತ್ನಿಸುವುದು, ತಾವು ತಂದ ಸಾಮಾನುಗಳನ್ನು ಮರೆತು ಅಥವಾ ಉದ್ದೇಶಪೂರ್ವಕವಾಗಿ ಬಿಟ್ಟು ಹೋಗುವ ಜನರನ್ನು ಕೂಡಾ ಗುರುತಿಸಿ, ಭದ್ರತಾ ಸಿಬ್ಬಂದಿಗೆ ತುರ್ತು ಸಂದೇಶ ಕಳಿಸಲಾಗುತ್ತದೆ.
ಮಹಾನಗರದ ರೈಲು ನಿಲ್ದಾಣವೆಂದ ಮೇಲೆ ಪ್ರತಿದಿನ ಬಂದು ಹೋಗುವ ವಾಹನಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಯಾವ ದಿನ, ಎಷ್ಟು ಸಮಯಕ್ಕೆ, ಯಾವ ವಾಹನ ನಿಲ್ದಾಣಕ್ಕೆ ಬಂದಿತ್ತು, ಅದರ ನಂಬರ್ ಪ್ಲೇಟ್ ಮಾಹಿತಿ, ವಾಹನದಲ್ಲಿ ಅಂದಾಜು ಎಷ್ಟು ಜನ ಬಂದಿದ್ದರು ಮತ್ತು ವಾಹನ ಹಿಂತಿರುಗಿದಾಗ ಎಷ್ಟು ಜನ ಪ್ರಯಾಣಿಕರಿದ್ದರು. ಒಂದು ವೇಳೆ ನಿಲ್ದಾಣದಲ್ಲಿ ವಾಹನ ನಿಲುಗಡೆಯಾಗಿದ್ದರೆ ಎಷ್ಟು ಸಮಯ ನಿಲುಗಡೆಯಾಗಿತ್ತು. ವಾಹನ ನಿಲ್ದಾಣದಲ್ಲಿ ಅನುಮಾಸ್ಪದವಾಗಿ ಓಡಾಡುವ ಜನ ಮತ್ತು ಅನುಮಾಸ್ಪದ ವಸ್ತುಗಳು – ಹೀಗೆ ಅನೇಕ ವಿವರಗಳನ್ನು ಪಡೆಯಲು ಇಂಟೆಲಿಜೆಂಟ್ ವೀಡಿಯೋ ಅನಲೆಟಿಕ್ಸ್ ತಂತ್ರಜ್ಞಾನವನ್ನು ಬಳಸಬಹುದು. ರೈಲು ನಿಲ್ದಾಣದಲ್ಲಿ ಏನಾದರೂ ಅಪಘಾತ ಸಂಭವಿಸಿದರೆ, ತಕ್ಷಣವೇ ಈ ಮಾಹಿತಿಯನ್ನು ಸಂಬಂಧಪಟ್ಟ ಸಿಬ್ಬಂದಿ ಮತ್ತು ವೈದಕೀಯ ತಂಡಗಳಿಗೆ ನೀಡಲು ಕೂಡಾ ಈ ತಂತ್ರಜ್ಞಾನವನ್ನು ಬಳಸಬಹುದಾಗಿದೆ.

ರೈಲು ನಿಲ್ದಾಣ, ಬಸ್, ಮೆಟ್ಟೋ, ವಿಮಾನ ನಿಲ್ದಾಣದಲ್ಲಿ ಮಾತ್ರವಲ್ಲದೆ ಪಾರ್ಲಿಮೆಂಟ್, ಅತೀ ಗಣ್ಯ ವ್ಯಕ್ತಿಗಳ ಕಾರ್ಯಾಲಯ ಮತ್ತು ನಿವಾಸ, ಜನಸಂದಣಿ ಹೆಚ್ಚಾಗಿರುವ ಮಾರುಕಟ್ಟೆ, ಮಾಲ್ ಗಳಂತಹ ಸಾರ್ವಜನಿಕ ಸ್ಥಳಗಳು, ಉದ್ಯಮಗಳು, ಕಚೇರಿಗಳು, ಸೇನಾ ಸ್ಥಾವರಗಳು, ವಿದ್ಯುತ್ ಉತ್ಪಾದನಾ ಘಟಕಗಳು, ಜಲಾಶಯಗಳು, ಹೀಗೆ ಅನೇಕ ಕಡೆ ಈ ತಂತ್ರಜ್ಞಾನವನ್ನು ಬಳಸಬಹುದು.

ಲಭ್ಯವಿರುವ ಕ್ಯಾಮರಾಗಳು ಮತ್ತು ನೆಟವರ್ಕನ್ನು ಬಳಸಿ ಇಂಟೆಲಿಜೆಂಟ್ ವೀಡಿಯೋ ಅನಲೆಟಿಕ್ಸ್ ತಂತ್ರಜ್ಞಾನವನ್ನು ಉಪಯೋಗಿಸಬಹುದು. ಈ ತಂತ್ರಜ್ಞಾನದ ಅಭಿವೃದ್ಧಿ ನಿರಂತರವಾಗಿ ನಡೆದಿದ್ದು, ಮುಂಬರುವ ದಿನಗಳಲ್ಲಿ ಇದು ಐ.ಓ.ಟಿ (ಇಂಟರ್‌ನೆಟ್ ಆಫ್ ಥಿಂಗ್ಸ್), ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ರೊಬೋಟಿಕ್ಸ್ ತಂತ್ರಜ್ಞಾನಗಳ ಜೊತೆಯಲ್ಲಿ ವಿಶ್ವಾದ್ಯಂತ ವ್ಯಾಪಕವಾಗಿ ಬಳಕೆಯಾಗುವ ನಿರೀಕ್ಷೆಯಿದೆ.

ಇಂಟೆಲಿಜೆಂಟ್ ವೀಡಿಯೋ ಅನಲೆಟಿಕ್ಸ್‌ಗಿರುವ ವಿಶ್ವ ಮಾರುಕಟ್ಟೆ 42,000 ಕೋಟಿ ರೂಪಾಯಿಗಳಿಗೂ ಹೆಚ್ಚಿನದು. ಪ್ರತಿವರ್ಷ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಮಾರುಕಟ್ಟೆಗಳಲ್ಲಿ ಇದೂ ಒಂದು. ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಷ್ಟೇ ಅಲ್ಲದೆ ಕೆಲವು ಸ್ಥಳೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳೂ ಈ ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಮತ್ತು ಸೇವೆಗಳನ್ನು ನೀಡಲು ಮುಂದಾಗುತ್ತಿವೆ. ಇದರಿಂದ ಲಭ್ಯವಿರುವ ಸಾವಿರಾರು ಹೊಸ ಉದ್ಯೋಗವಕಾಶಗಳನ್ನು ಪಡೆಯಲು ಭಾರತದ ಯುವಜನತೆ ಪ್ರಯತ್ನಿಸಬಹುದು.

[ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]