೧. ಪೀಠಿಕೆ

ಇಂಡಿಯಾದ ಈ ನೆಲ ತನ್ನ ಸಾವಿರಾರು ವರುಷಗಳ ಚರಿತ್ರೆಯಲ್ಲಿ ಹಲವು ಜನಾಂಗಗಳ, ಸಂಸ್ಕೃತಿಗಳ, ಧರ್ಮ ಪಂಥಗಳ ಉದಯಕ್ಕೆ ಕಾರಣವಾಗಿದೆ. ಹಾಗೆಯೇ ಸಂಘರ್ಷ ಮತ್ತು ಪತನಕ್ಕೆ ಎಡೆಮಾಡಿಕೊಟ್ಟಿದೆ. ಈ ಸಂಘರ್ಷ ಮತ್ತು ಪತನಗಳ ಪ್ರಕ್ರಿಯೆಯಲ್ಲಿ ಉದಯಿಸಿದ ಹೊಸ ಮಾರ್ಗವೊಂದನ್ನು ಒಪ್ಪಿಕೊಳ್ಳುತ್ತಾ ಬಂದಿದೆ. ಒಪ್ಪಿಕೊಂಡ ಹಲವು ಮಾರ್ಗ ಹಳತಾದಂತೆ ಮತ್ತೆ ಮತ್ತೆ ಹೊಸದಾಗಿ ಹುಟ್ಟಿಕೊಂಡ ಹಲವು ಮಾರ್ಗಗಳನ್ನು ಪೋಷಿಸುತ್ತಾ ಬಂದಿದೆ. ಈ ಮೂಲಕ ಇಡೀ ಇಂಡಿಯಾ ಅತ್ಯಂತ ಸಂಕೀರ್ಣವಾದ ಸಾಂಸ್ಕೃತಿಕ ನಾಡಾಗುವಂತೆ ಹಲವು ಪ್ರಕ್ರಿಯೆಗಳಿಗೆ ಒಳಗಾಗಿದೆ. ಇಂತಹ ಸಾಂಸ್ಕೃತಿಕ ಸಂದರ್ಭಗಳ ಅಧ್ಯಯನಕ್ಕೆ ಜಾನಪದ ಹುಲಸಾದ ಕ್ಷೇತ್ರವಾಗಿದೆ.

ಈ ಹಿನ್ನೆಲೆಯಲ್ಲಿ ಇಂದು ಎಲ್ಲರ ಆಸಕ್ತಿಯನ್ನು ಸೆಳೆಯುತ್ತಿರುವ ಕುತೂಹಲಕರ ವಿಷಯ ಜಾನಪದ. ಇತ್ತೀಚಿನವರೆಗೂ ಕೇವಲ ಪಾಮರ ವಿಷಯವೆಂದು ಕರೆಸಿಕೊಳ್ಳುತ್ತಾ ಪಂಡಿತರ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿದ್ದ ಜಾನಪದ, ಈಗ ಅದೇ ಪಂಡಿತರ ಅಧ್ಯಯನ ಕೃಷಿಗೆ ಹುಲುಸಾದ ಕ್ಷೇತ್ರವಾಗಿದೆ. ಸಮಾಜವನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕೆಂದು ಬಯಸುವವರಿಗೆ ದೊರೆಯುವ ದೊಡ್ಡ ಆಕರ ಸಾಂಸ್ಕೃತಿಕ ಆಚರಣೆಗಳು. ಗ್ರಾಮೀಣ ಜನರ ಆಚರಣೆ, ನಂಬಿಕೆಗಳನ್ನು ಕೇವಲ ಮೌಢ್ಯವೆಂದು, ಕಂದಾಚಾರವೆಂದು ಕರೆದು ನಿರ್ಲಕ್ಷಿಸುವ ಧೋರಣೆ ಬಹಳ ಕಾಲದವರೆಗೆ ಇತ್ತು. ಪ್ರತಿಯೊಂದು ಸಾಂಸ್ಕೃತಿಕ ಆಚರಣೆ ರೂಪುಗೊಳ್ಳಲು ಅದಕ್ಕೆ ತಳಹದಿಯಾಗಿ ಅದರ ಉಗಮದಲ್ಲಿ ಒಂದು ಭೌತಿಕಾವಶ್ಯಕತೆಯಿತ್ತು ಎಂಬ ನಿಲುವು ಹೆಚ್ಚು ಪ್ರಚಲಿತಗೊಂಡಂತೆಲ್ಲಾ (ಈ ಬಗೆಯ ನಿಲುವನ್ನು ಬಹಳ ಸ್ಪಷ್ಟವಾಗಿ ಮುಂದಿಟ್ಟು ಭಾರತೀಯ ಇತಿಹಾಸದ ಅಧ್ಯಯನಕ್ಕೆ ಉತ್ತಮವಾದ ಮಾದರಿ ನಿರ್ಮಿಸಿದ ಮೊದಲಿಗರಲ್ಲಿ ಡಿ.ಡಿ. ಕೋಸಾಂಬಿ ಒಬ್ಬರು) ಜಾನಪದ ಅಧ್ಯಯನಕ್ಕೆ ತುಂಬಾ ಮಹತ್ವವೊದಗಿದೆ. ಚರಿತ್ರೆ, ಸಮಾಜಶಾಸ್ತ್ರ, ಮಾನವಶಾಸ್ತ್ರ ಮುಂತಾದ ಕ್ಷೇತ್ರದವರಿಗೆ, ಅಷ್ಟೇ ಏಕೆ ಪುರಾತನ ಆರ್ಥಿಕಾಭಿವೃದ್ಧಿಯನ್ನು ಅರ್ಥ ಮಾಡಿಕೊಳ್ಳುವವರಿಗೂ ಸಹ ಇಂದು ಸಾಂಸ್ಕೃತಿಕ ಆಚರಣೆಗಳು, ನಂಬಿಕೆಗಳು, ರೂಢಿಗಳು ತುಂಬಾ ಮಹತ್ವದ ಮೂಲಗಳಾಗಿವೆ.

ಜಾನಪದವನ್ನು ಅರ್ಥ ಮಾಡಿಕೊಳ್ಳುವವರಿಗೆ ಮಾನವಶಾಸ್ತ್ರ, ಚರಿತ್ರೆ, ಭಾಷಾವಿಜ್ಞಾನ, ಸಮಾಜಶಾಸ್ತ್ರ, ಮನೋವಿಜ್ಞಾನ, ತತ್ವಶಾಸ್ತ್ರ, ಮಹಿಳಾ ಅಧ್ಯಯನ, ಸಾಹಿತ್ಯ ಮೊದಲಾದ ಶಿಸ್ತುಗಳ ಸಹಾಯ ಅತ್ಯಗತ್ಯವಾಗಿ ಬೇಕಾಗುತ್ತದೆ. ಬೇರೆ ಬೇರೆ ಶಿಸ್ತುಗಳ ಉಪಯೋಗದಿಂದ ಮಾಡಿದ ಜಾನಪದ ಅಧ್ಯಯನಗಳಲ್ಲಿ ನಾವು ಈ ತರಹದ ಪ್ರವೃತ್ತಿಗಳನ್ನು ಗುರುತಿಸಬಹುದು, ಇದರ ಜೊತೆ ಜೊತೆಗೆ ವಿದ್ವಾಂಸರು ತಂತಮ್ಮ ಗ್ರಹಿಕೆ, ಪಾಂಡಿತ್ಯಗಳಿಗೆ ಅನುಸಾರವಾಗಿ ಜಾನಪದದ ವಿಶ್ಲೇಷಣೆ ಮಾಡುತ್ತಾ ಬಂದಿದ್ದಾರೆ. ಇಂದಿಗೂ ಮಾಡುತ್ತಲೇ ಇದ್ದಾರೆ. ಈ ರೀತಿಯಾದ ವಿಶ್ಲೇಷಣೆಗಳು ಸರಿಯಾಗಿರುತ್ತವೆ ಎಂದು ಹೇಳಲು ಬರುವುದಿಲ್ಲ. ಕಾರಣ ಬೇರೆ ಬೇರೆ ಕಾಲಘಟ್ಟದಲ್ಲಿ ಎಂದೊ ಆಚರಣೆಗೆ ಬಂದ ಜಾನಪದ ಸಾಮಗ್ರಿಗಳು ಅನೇಕ ಬದಲಾವಣೆಗೊಳಪಟ್ಟಿರುತ್ತವೆ. ಅಥವಾ ಮೊದಲಿದ್ದ ಸ್ವರೂಪಕ್ಕೆ ಬದಲಾಗಿ ಬೇರೊಂದು ಸ್ವರೂಪದಲ್ಲಿ ನಮಗೆ ದೊರೆಯಬಹುದು. ಇದಕ್ಕೂ ಮುಖ್ಯವಾಗಿ ಜಾನಪದ ಅಧ್ಯಯನಕಾರರು ಜಾನಪದ ಸಾಮಗ್ರಿಗಳ ಬಗೆಗೆ ಜನಪದರಲ್ಲಿರುವ ವಿವರಣೆ, ವ್ಯಾಖ್ಯಾನಗಳನ್ನು ಗಮನಕ್ಕೆ ತಂದುಕೊಳ್ಳದೇ ಇರಬಹುದು. ಜನಪದರಲ್ಲಿಯೂ ಜಾನಪದ ಸಾಮಗ್ರಿಗಳ ಕುರಿತು ಅವರದೇ ಆದ ವಿಶಿಷ್ಟ ವಿವರಣೆ, ವ್ಯಾಖ್ಯಾನಗಳು ಏಷ್ಟೋ ಬಾರಿ ಜಾನಪದ ಅಧ್ಯಯನಯಕಾರರು ನೀಡುವ ವಿಶ್ಲೇಷಣೆಗಿಂತ ಭಿನ್ನವಾಗಿರಬಹುದು. ಜನಪದರ ವಿವರಣೆ, ವ್ಯಾಖ್ಯಾನಗಳನ್ನು ಅಧ್ಯಯನದಲ್ಲಿ ಬಳಸಿಕೊಂಡಾಗ ಅಧ್ಯಯನಕಾರರಿಗೆ ಹಲವಾರು ಪ್ರಯೋಜನಗಳುಂಟು. ಜನಪದರಲ್ಲಿ ಈಗಾಗಲೇ ಪ್ರಚಲಿತದಲ್ಲಿರುವ ಅಮೂಲ್ಯವಾದ ಜ್ಞಾನವನ್ನು ಅಧ್ಯಯನಕ್ಕೆ ಬಳಸಿಕೊಂಡಂತಾಗುವುದು. ಅಧ್ಯಯನಕಾರರಿಗೆ ಯಾವುದೇ ನಿರ್ಣಯಕ್ಕೆ ಬರುವಾಗ ಉಹಾಪೋಹಗಳನ್ನು ತಡೆಗಟ್ಟಬಹುದು. ಜೊತೆಗೆ ಜಾನಪದ ಅಧ್ಯಯನದಲ್ಲಿ ಪಾರ್ಶ್ವಿಕ ಹಾಗೂ ಪಕ್ಷಪಾತತನದ ವಿಶ್ಲೇಷಣೆಗಳಾಗದಂತೆ ತಡೆಯಬಹುದು. ಜನಪದರು ಜಾನಪದ ಸಾಮಗ್ರಿಗಳ ಬಗೆಗೆ ಹೊಂದಿರುವ ಈ ಬಗೆಯ ವಿವರಣೆ, ವ್ಯಾಖ್ಯಾನ ಅಥವಾ ಜ್ಞಾನವನ್ನು ಜನಪದರ ಜನಜಾನಪದ ಎಂದು ಕರೆಯಬಹುದು. ಈ ಜನಜಾನಪದ ಎಂಬ ಪರಿಕಲ್ಪನೆಯು ಜಾನಪದ ಸಾಮಗ್ರಿಗಳ ಜೊತೆಯಲ್ಲಿಯೇ ಇರುವಂತಹದ್ದು.

೨. ಪರಿಕಲ್ಪನೆ

ಯಾವುದೇ ಶಿಸ್ತುಗಳ ಅಧ್ಯಯನಕ್ಕೆ ಪರಿಕಲ್ಪನೆಗಳು ಮುಖ್ಯವಾಗಿರುತ್ತವೆ. ಪ್ರತಿಯೊಂದು ಶಿಸ್ತುಗಳು ತಮ್ಮದೇ ಆದ ಪರಿಕಲ್ಪನೆಗಳನ್ನು ಹೊಂದಿರುತ್ತವೆ. ಹಾಗೆಯೇ ಜಾನಪದವೂ ಸಹ ಹಲವಾರು ಪರಿಕಲ್ಪನೆಗಳನ್ನು ಹೊಂದಿದೆ. ಒಂದು ಪರಿಕಲ್ಪನೆಯು ಸಾಮಾನ್ಯವಾಗಿ ಮೂರು ಮುಖ್ಯ ಗುಣಗಳನ್ನು ಹೊಂದಿರುತ್ತದೆ. ಆದರೆ (೧) ಯಾವುದೇ ಒಂದು ವಿಷಯದ ಕೂಲಂಕಷ ಪರಿಶೀಲನೆ, (೨) ಆ ಮುಖಾಂತರ ವಿಷಯ ವಿಶ್ಲೇಷಣೆ ಮತ್ತು (೩) ಅದನ್ನು ನಂಬಿಸುವ ಗುಣಗಳನ್ನು ಹೊಂದಿರುತ್ತದೆ. ಪರಿಕಲ್ಪನೆಯನ್ನು ಸಾಮಾನ್ಯ ಅರ್ಥದಲ್ಲಿ ಹೇಳುವುದಾದರೆ ಒಂದು ವಿಷಯವನ್ನು ನೋಡುವ, ವಿಶ್ಲೇಷಿಸುವ ಮತ್ತು ನಂಬಿಸುವ ದೃಷ್ಟಿಕೋನವೆಂದು ಕರೆಯಬಹುದು. ಜಾನಪದದಲ್ಲಿ ವಿದ್ವಾಂಸರು ಹೊಂದಿರುವ ಪರಿಕಲ್ಪನೆಗಳ ಜೊತೆಯಲ್ಲಿಯೇ, ಜನಪದರು ಜಾನಪದ ಸಾಮಗ್ರಿಗಳ ಬಗೆಗೆ ಹೊಂದಿರುವ ಪರಿಕಲ್ಪನೆಯನ್ನು ಸಹ ಕಾಣಬಹುದು. ಅದೇ ಜನಜಾನಪದ ಎಂಬ ಪರಿಕಲ್ಪನೆ. ಈ ಪರಿಕಲ್ಪನೆಯು ಜಾನಪದ ಸಾಮಗ್ರಿಗಳ ಬಗೆಗೆ ಜನಪದರು ಹೊಂದಿರುವ ಮನೋಭಾವವನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಜಾನಪದ ಅಧ್ಯಯನದಲ್ಲಿ ಜನಜಾನಪದ ಪರಿಕಲ್ಪನೆಯನ್ನು ಬಳಸಿಕೊಳ್ಳಬೇಕೆಂಬ ಪ್ರವೃತ್ತಿಯನ್ನು ಬೆಳೆಸಲು ಮೊದಲಿಗೆ ಕಾರಣರಾದವರು ಅಲೆನ್ ಡಂಡಸ್‌ರವರು. ಅವರು ಜಾನಪದ ಅಧ್ಯಯನಕ್ಕೆ ಜನಪದರು ಜಾನಪದ ಅಧ್ಯಯನಕ್ಕೆ ಕೊಡುವ ಅರ್ಥ, ವಿವರಣೆಗಳನ್ನು ಬಳಸಿಕೊಳ್ಳಬೇಕೆಂದು ಹೇಳಿದರಲ್ಲದೆ, ಅಂತಹ ಅರ್ಥ ಮತ್ತು ವಿವರಣೆಗಳ ಸಂಗ್ರಹ ನಡೆಯಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಜೊತೆಗೆ ಜನಪದರ ಅರ್ಥ ಮತ್ತು ವಿಶ್ಲೇಷಣೆಗಳನ್ನು ಗಮನದಲ್ಲಿಟ್ಟುಕೊಂಡು ‘Meta Folklore and Oral Literary Criticism’ ಎಂಬ ಲೇಖನವನ್ನು ಬರೆದು ಪ್ರಕಟಿಸಿದರು. Oral Literary Criticism ಎಂಬುದು ಜಾನಪದದಲ್ಲಿ ಹೊಸ ಪರಿಕಲ್ಪನೆ, ಕನ್ನಡದಲ್ಲಿ ಇದನ್ನು ಮೌಖಿಕ (ತೋಂಡಿ) ಸಾಹಿತ್ಯ ವಿಮರ್ಶೆ ಎಂದು ಕರೆಯಬಹುದು. ಈ ಪರಿಕಲ್ಪನೆಯನ್ನು ಅಲೆನ್ ಡಂಡಸ್‌ರವರು ಹೀಗೆ ವಿವರಿಸುತ್ತಾರೆ. ‘ಸಾಹಿತ್ಯದಲ್ಲಿ ಒಂದೇ ಕೃತಿಯ ಬಗ್ಗೆ ಪರವಾದ ಮತ್ತು ವಿರೋಧವಾದ ಎರಡೂ ರೀತಿಯ ವ್ಯಾಖ್ಯಾನಗಳು ಇರುವುದು ಹೇಗೆ ಸಹಜವೋ ಅದೇ ರೀತಿ ಜಾನಪದದ ವಿಷಯದಲ್ಲಿ ಒಂದೇ ಪ್ರಕಾರದ ಬಗ್ಗೆ ವಿವಿಧ ಅಭಿಪ್ರಾಯಗಳಿರುತ್ತವೆ. ಜಾನಪದದ ಪ್ರತಿಯೊಂದು ಅಂಶಕ್ಕೂ ವೈವಿಧ್ಯಮಯವಾದ ಮೌಖಿಕ ಸಾಹಿತ್ಯ ವಿಮರ್ಶೆ ಇರುತ್ತವೆ. ಜಾನಪದ ಪಠ್ಯದಲ್ಲಿ (Text) ಮಾತ್ರ ಭಿನ್ನತೆಗಳಿರುತ್ತವೆ. ಅರ್ಥ ಒಂದೇ ಆಗಿರುತ್ತದೆ ಎಂಬುದು ನಮ್ಮ ಸಾಮಾನ್ಯ ಗ್ರಹಿಕೆ. ಆದರೆ ಜಾನಪದದಲ್ಲಿ ಯಾವುದೇ ಪ್ರಕಾರಕ್ಕಾಗಲಿ ಹೀಗೆ ಇಂಥದ್ದೇ ಸರಿಯಾದ ಅರ್ಥ ಅಥವಾ ವ್ಯಾಖ್ಯಾನ ಎಂಬುದೂ ಇರುವುದಿಲ್ಲ. ಅಂದರೆ ಒಂದೇ ಅಂಶಕ್ಕೂ ಬಹುವಿಧದ ಅರ್ಥಗಳೂ ಬಹುವಿಧದ ವ್ಯಾಖ್ಯಾನಗಳೂ ಇರಬಹುದು. ಇವುಗಳ ವ್ಯಾಪ್ತಿ ಇಷ್ಟೇ ಎಂದು ನಿರ್ಧರಿಸುವುದು ಕಷ್ಟ. ಜಾನಪದ ತಜ್ಞರ ವ್ಯಾಖ್ಯಾನದಷ್ಟೇ ಜನಪದರ ವ್ಯಾಖ್ಯಾನವೂ ಮುಖ್ಯ. ಸಂಗ್ರಾಹಕರು ಇದನ್ನು ಪಠ್ಯ (Text) ಹಾಗೂ, ಸಂದರ್ಭಗಳ (Context) ಜೊತೆ ಜೊತೆಯಲ್ಲಿ ಸಂಗ್ರಹಿಸಬೇಕು’ (ಸಂಧ್ಯಾರೆಡ್ಡಿ;೧೯೯೫:೪೯-೫೦).

ಅಲೆನ್ ಡಂಡಸ್‌ರವರು ಹೇಳಿದ ‘Meta Folklore’ಗೆ ಸಂವಾದಿಯಾಗಿ ‘ಜನ ಜಾನಪದ’ ಎಂದು ಕರೆಯಲಾಗಿದೆ. ಇದಕ್ಕೆ ಮೊದಲು ‘Meta Folklore’ಗೆ ಕನ್ನಡದಲ್ಲಿ ಅಧಿಜಾನಪದ ಎಂಬ ಪದವನ್ನು ಡಾ. ತೀ.ನಂ. ಶಂಕರನಾರಾಯಣ ಹಾಗೂ ಡಾ. ಕೆ.ಆರ್. ಸಂಧ್ಯಾರೆಡ್ಡಿಯವರು ಬಳಸಿದ್ದಾರೆ. ಆದರೆ ನಾನು ಇಲ್ಲಿ ಜನಜಾನಪದ ಎಂದು ಕರೆದಿದ್ದೇನೆ. ಈ ಪದವನ್ನು ಕರೆಯಲು ಮುಖ್ಯವಾದ ಕಾರಣವೇನೆಂದರೆ, ಜನಪದರೇ ಜಾನಪದದ ಬಗೆಗೆ ಅರ್ಥ ವಿವರಣೆ ಕೊಡುವುದರಿಂದ ಜನಜಾನಪದ ಎಂದು  ಕರೆಯಲಾಗಿದೆ. ಜೊತೆ ಅಧಿ ಎಂಬ ಪದ ಸಂಸ್ಕೃತದಿಂದ ಬಂದುದು. ಅದಕ್ಕೆ ಬದಲಾಗಿ ಕನ್ನಡಲ್ಲೇ ಜನ ಎಂಬ ಪದ ಸೂಕ್ತವಾದುದರಿಂದ ಜನಜಾನಪದ ಎಂದು ಕರೆಯಲಾಗಿದೆ. ಜನಜಾನಪದ ಅಥವಾ ಮೆಟಾ ಫೋಕ್‌ಲೋರ್ ಎಂಬುದು ಮೌಖಿಕ ಸಾಹಿತ್ಯ ವಿಮರ್ಶೆಯ ಒಂದು ಉಪವಿಭಾಗ. ವಿಮರ್ಶೆಯು ಸಿದ್ಧ ಪ್ರಕಾರ ರೂಪದಲ್ಲಿರುವುದೇ ಇದರ ವೈಶಿಷ್ಟ್ಯ.

೩. ಜನಜಾನಪದ ಎಂದರೇನು?

ಅಲೆನ್ ಡಂಡೆಸ್ ಅವರು ಜನಜಾನಪದವನ್ನು “As there is a term ‘Meta Language’ to refer to linguistic statments about language, so we may suggest Meta Folklore to refer to folkloristic statements about Folklore” (ಅಲೆನ್ ಡಂಡಸ್; ೧೯೬೬:೩೮-೩೯). ಅಂದರೆ ಜನಪದರು ತಮ್ಮ ಸಾಂಸ್ಕೃತಿಕ ಉತ್ಪತ್ತಿಯಾದ ಜಾನಪದ ಪ್ರಕಾರಗಳ ಮತ್ತು ತಮ್ಮಂತಹುದೇ ಆದ ಇನ್ನೊಂದು ಜನಪದದ ಬಗೆಗೆ ಹೊಂದಿರುವ ಮನೋಭಾವವನ್ನು ಜನಜಾನಪದ ಎನ್ನಬಹುದು.

ಜನಜಾನಪದ ಎಂಬುದು ಜಾನಪದದ ಯಾವುದೇ ಪ್ರಕಾರವನ್ನು ಕುರಿತ ಒಂದು ಕಲಾತ್ಮಕ ಅಭಿವ್ಯಕ್ತಿ ಆಗಿರುತ್ತದೆ. ಹೀಗೆ ಅಭಿವ್ಯಕ್ತಿಸುವ ಪ್ರತಿಕ್ರಿಯೆ ಅದೇ ಪ್ರಕಾರದಲ್ಲಿ ಇರಬಹುದು, ಅಥವಾ ಬೇರೆ ಪ್ರಕಾರದಲ್ಲಿಯೂ ಇರಬಹುದು. ಇದು ಒಂದು ರೀತಿಯಲ್ಲಿ ಜನಪದರ ಸೃಜನಶೀಲ ಸೃಷ್ಟಿಕ್ರಿಯೆ ಆಗಿರುತ್ತದೆ. ಜನಜಾನಪದದಲ್ಲಿ ಜಾನಪದ ಅಧ್ಯಯನಕಾರ ತಾನು ಅಧ್ಯಯನ ಮಾಡುವ ಜಾನಪದವನ್ನು ಕೇವಲ ತನ್ನ ವಿದ್ವತ್ತಿನ ನಿಲುವಿನಿಂದ ಮಾತ್ರ ನೋಡದೆ, ಆ ಜಾನಪದದ ಬಗೆಗೆ ಜನಪದರ ಒಳನೋಟವನ್ನು ಸಹ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಈ ರೀತಿಯ ಒಳನೋಟ ಸ್ಥಳೀಯ ಅರ್ಥೈಸುವಿಕೆಯ ಪರಂಪರೆಯನ್ನು ಒಳಗೊಂಡಿರುತ್ತದೆ.

ಜಾಕಬ್‌ಸನ್ ಮತ್ತು ಡಂಡಸ್‌ರವರು ಮೈಯಾಯಿಕರು (Logioians) ಮತ್ತು ಭಾಷಾವಿಜ್ಞಾನಿಗಳನ್ನು ಅನುಸರಿಸಿ ಜಾನಪದ ಅಧ್ಯಯನಕ್ಕೆ ಜನಜಾನಪದ (Meta Folklore) ಎಂಬ ಪರಿಕಲ್ಪನೆಯನ್ನು ಚಲಾವಣೆಗೆ ತಂದರು. Meta Folklore ನಲ್ಲಿರುವ Meta ಎಂಬ ಪದವು ಕೇವಲ ‘ಮೇಲೆ’, ‘ಸಹ’, ‘ಅನುಸರಿಸುವ’, ‘ಅವಲಂಬಿಸುವ’ ಎನ್ನುವ ಅರ್ಥವಲ್ಲದೆ ಜಾನಪದದ ಪ್ರತಿಯೊಂದು ಪ್ರಭೇದಕ್ಕೂ ತಕ್ಕ ಪ್ರತ್ಯಯವಾಗಿದೆ. (ಪೀಟರ್‌ಜೆ. ಕ್ಲಾಸ್ ಮತ್ತು ಫ್ರಾಂಕ್ ಜೆ. ಕೋರಮ್; ೧೯೯೧:೧-೧೬).

೪. ಜನಜಾನಪದದ ಲಕ್ಷಣಗಳು

ಜನ ಜಾನಪದ ಎಂಬುದು ಜನಪದ ಪ್ರಕಾರಗಳಾದ ಹಾಡು, ಗಾದೆ, ಕಥೆ ಆಚರಣೆಗಳಂತೆ ಒಂದು ರೂಪಭೇದವಾಗಿರದೆ, ಈ ಪ್ರಕಾರಗಳ ಗುಣಗಳನ್ನು ಅಳೆಯುವ ವಿಶಿಷ್ಟ ನೋಟವಾಗಿದೆ. ಹಾಗಾಗಿ ಇದನ್ನು ಜಾನಪದದ ಒಂದು ಪ್ರಕಾರವೆನ್ನುವ ಬದಲಾಗಿ ವಿವಿಧ ಪ್ರಕಾರಗಳ ಒಟ್ಟಾರೆ ಗುಣವೆಂದು ತಿಳಿಯುವುದು ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಜನಜಾನಪದವು ಒಟ್ಟಾರೆ ಜಾನಪದದ ಸಮಗ್ರ ಗುಣಲಕ್ಷಣಗಳನ್ನು ಒಂದುಗೂಡಿಸಿ ವಿಶೇಷ ಅರ್ಥವನ್ನು ನೀಡುತ್ತದೆ.

ಜನಜಾನಪದ ಎಂಬುದು ಜಾನಪದದ ವಿವಿಧ ಪ್ರಕಾರಗಳ ಒಳಗೆ ಅಂತರ್ಗತವಾಗಿರುವ ವಿಶಿಷ್ಟ ಗುಣವಾಗಿದೆ. ಹಾಗಾಗಿ ಇದು ವಿದ್ವಾಂಸನ ಅಂತರ್‌ದೃಷ್ಟಿಯನ್ನು ಬೆದಕುವಂತಹ ಕೆಲಸವಾಗಿರುತ್ತದೆ. ಇದರಿಂದಾಗಿ ಜನಜಾನಪದದ ಸಂಗ್ರಹ ಸುಲಭ ಸಾಧ್ಯವಲ್ಲ. ಕೆಲವೊಮ್ಮೆ ಇದು ಜಾನಪದದ ಒಳನೋಟಕ್ಕಿಂತ ಮಿಗಿಲಾಗಿ ಅದರ ಲಕ್ಷಣಗಳ ಬಗೆಗೆ ವಿವರಿಸುತ್ತದೆ.

ಜನಜಾನಪದವು ಜಾನಪದ ಪ್ರಕಾರಗಳಿಗೆ, ಅದೇ ಪ್ರಕಾರ ರೂಪದಲ್ಲಿಯೆ ಇರಬೇಕಾಗಿಲ್ಲ. ಒಂದು ಪ್ರಕಾರದ ಬಗ್ಗೆ ಇನ್ನೊಂದು ಪ್ರಕಾರದ ರೂಪದಲ್ಲಿಯೂ ಇರಬಹುದು. ಉದಾಹರಣೆಗೆ ಕಥೆಯ ಬಗೆಗಿನ ಜನಜಾನಪದ ನಂಬಿಕೆಯ ರೂಪದಲ್ಲಿರಬಹುದು. ಕಲೆಗಳ ಬಗೆಗಿನ ಜನಜಾನಪದವು ಗಾದೆಯ ರೂಪದಲ್ಲಿರಬಹುದು.

ಜನಜಾನಪದವು ಜಾನಪದದ ಎಲ್ಲಾ ಪ್ರಕಾರಗಳಿಗೂ ಇರಲೇ ಬೇಕೆಂದೇನು ಇಲ್ಲ. ಜಾನಪದದ ಕೆಲವು ಪ್ರಕಾರಗಳಿಗೆ ಜನ ಜಾನಪದ ಇದೆ. ಕೆಲವು ಪ್ರಕಾರಗಳಿಗೆ ಇರದೇ ಇರುವ ಸಾಧ್ಯತೆಗಳಿವೆ. ಪ್ರಾಯೋಜಿತ ಪರೀಕ್ಷೆ ಅರ್ಥ ಪ್ರಾಯೋಜಿತ ಪಠ್ಯವಾಗಿರಬೇಕು. ಕಥೆಯನ್ನು ಹೇಳುವವನ ಮತ್ತು ಕೇಳುವವನ ಅರ್ಥ ಬೇರೆ ಬೇರೆಯಾಗಿರಬಹುದು. ಕೆಲವೊಮ್ಮೆ ನಿರೂಪಕನ ಅರ್ಥ ಏಕಧಾಟಿಯಾದರೂ, ಅದರ ಕೇಳುಗನ ಮೌಲ್ಯಮಾಪನ ಬೇರೆಯಾಗಬಹುದು. ಹೀಗಾಗಿ ಜನಜಾನಪದವನ್ನು ಸಾರ್ವತ್ರಿಕವಾಗಿ ಹೀಗೇ ಎಂದು ರೂಪಿಸಲು ಸಾಧ್ಯವಿಲ್ಲ.

ಜಾನಪದ ಪ್ರಕಾರಗಳನ್ನು ಕುರಿತಾದ ಜನಪದ ವಿಮರ್ಶೆ ಹಲವಾರು ರೂಪಗಳಲ್ಲಿ ದೊರೆಯುತ್ತದೆ. ಇದು ಶಾಬ್ದಿಕ ಮತ್ತು ಅಶಾಬ್ದಿಕ ರೂಪಗಳೆರಡರಲ್ಲೂ ವ್ಯಕ್ತವಾಗಬಹುದು, ಯಾವುದಾದರೊಂದು ನಿರ್ಧಿಷ್ಟ ಕಥೆ ಅಥವಾ ಹಾಡನ್ನೇ ಜನ ಏಕೆ ಮೆಚ್ಚುತ್ತಾರೆ. ಜನಪದರು ತಮ್ಮ ನಿರೂಪಣೆಯಲ್ಲಿ ಯಾವ ಅಂಶಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಯಾವ ಅಂಶವನ್ನು ತೇಲಿಸಿ ಹೇಳುತ್ತಾರೆ ಅಥವಾ ಬಿಟ್ಟು ಬಿಡುತ್ತಾರೆ. ತಾವು ಹೇಳುವ ಪ್ರಕಾರಗಳಿಗೆ ಅವರು ಕೊಡುವ ಹೆಸರು ಎಂಥದ್ದು ಶ್ರೋತೃ ಸಮುದಾಯದಲ್ಲಿ ಯಾರಿದ್ದಾರೆ ಎಂಬುದನ್ನವಲಂಬಿಸಿ ಅವರ ನಿರೂಪಣೆ ಹೇಗೆ ಬದಲಾಗುತ್ತದೆ. ಧ್ವನಿಯ ಏರಿಳಿತ, ಧಾಟಿಗಳು, ಮುಖಭಾವ, ಆಂಗಿಕ ಸಂಜ್ಞೆ…. ಇವೇ ಮೊದಲಾದವುಗಳಿಂದ ಜನಪದರ ವ್ಯಾಖ್ಯಾನ ಅಥವಾ ವಿಮರ್ಶೆಯನ್ನು ತಿಳಿಯಬಹುದು. ಉದಾಹರಣೆಗೆ ಕಥಾ ನಿರೂಪಕಿಯೊಬ್ಬಳು ಹೇಳುವ ಈ ಮಾತುಗಳನ್ನು ನೋಡಿ,…. “ನೀವಾರ ಬೇಕಾದಷ್ಟು ಓದಿದ್ದೀರಿ…. ಕಾಲೇಜ್ ಮೇಷ್ಟ್ರಾಗಿದ್ದೀರಿ, ನಿಮ್ಗೆ ಬರದ್ದು ನಂಗೇನ್ ಬತ್ತದೆ ಬರಕಿಲ್ರಾ…. ನನ್ ಕತೆ ಇಲ್ದಿದ್ರೆ ಯಾರ್ ಅತ್ತರು…. ಸಿನ್ಮಾಗಿನ್ಮಾ ಕತೆ ಬುಟ್ ನನ್ ಕತೆ ಕೇಳ್ತಾರೆ”. (ಡಿ. ಲಿಂಗಯ್ಯ ಪಡಿನೆರಳು ಮುನ್ನುಡಿ) ಇದು ಜನಪದರು ತಮ್ಮದೇ ಆದ ಕಥಾ ಸಾಹಿತ್ಯದ ಬಗ್ಗೆ ಯಾವ ಧೋರಣೆ ಹೊಂದಿರುತ್ತಾರೆ ಎಂಬುದನ್ನು ತಿಳಿಸುತ್ತದೆ.

ಸಾಮಾನ್ಯವಾಗಿ ಜಾನಪದ ಪ್ರಕಾರಗಳಿಗೆ ತಜ್ಞರು ಪ್ರಬುದ್ಧವೂ, ಗಂಭೀರವೂ ಆದ ಹೆಸರುಗಳನ್ನು ಕೊಟ್ಟಿರುತ್ತಾರೆ. ಉದಾಹರಣೆಗೆ ಜನಪದ ಕಥೆಗಳು, ಮಾಂತ್ರಿಕ ಕಥೆಗಳು, ಪ್ರಾಣಿಕಥೆಗಳು, ಶಿಶುಪ್ರಾಸಗಳು, ಖಂಡಕಾವ್ಯಗಳು, ಮೌಖಿಕ ಕಾವ್ಯಗಳು, ಜನಪದ ವೈದ್ಯ, ಮೂಢನಂಬಿಕೆಗಳು…. ಇತ್ಯಾದಿಯಾಗಿ”. ಆದರೆ ಸ್ವತಃ ಜನಪದರಲ್ಲಿ ಈ ಪ್ರಕಾರಗಳಿಗೆ ಇಂತಹ ಗಂಭೀರವಾದ ಹೆಸರುಗಳಿರುವುದಿಲ್ಲ. ನಾವು ಜನಪದ ಕಥೆ ಎಂದು ಕರೆಯುವುದನ್ನು ಅವರು ಕಾಗಕ್ಕ ಗುಬ್ಬಕ್ಕನ ಕಥೆ, ಹಳ್ಳಿಕಥೆ, ಅಡಗೂಲಜ್ಜಿ ಕಥೆ…. ಇತ್ಯಾದಿಯಾಗಿ ಹೆಸರಿಸುತ್ತಾರೆ. ತನಗೆ ಗೊತ್ತಿದ್ದ ಹಲವಾರು ಕಥೆಗಳನ್ನು ನಿರೂಪಿಸಿದ ನಂತರ ಒಬ್ಬ ನಿರೂಪಕಿ ಹೇಳುತ್ತಾಳೆ. “ಎಲ್ಲಾ ಆಗೋದೋ ಮೇಷ್ಟ್ರೇ, ಎಲ್ಲೋ, ಒಂದೇಡ್ ಕಂತ್ರಿ ಕಥೆ ಅವೆ… ಅವೇನೊ ಒಳ್ಳೆ ಕಥೆ ಅಲ್ಲ…. ನಕ್ಲಿ ಕಥೆ…” ಎಂದು ಹೇಳಿ ಆಕೆ ಒಂದೆರಡು ಪ್ರಾಣಿ ಕಥೆಗಳನ್ನು ಹೇಳುತ್ತಾಳೆ (ಡಿ. ಲಿಂಗಯ್ಯ ಪಡಿನೆರಳು ಮುನ್ನುಡಿ). ಜಾನಪದ ಅಧ್ಯಯನಕಾರರು ಯಾವ ಕಥೆಗಳನ್ನು ಪ್ರಾಣಿ ಕಥೆಗಳು ಎಂದು ಕರೆಯುತ್ತಾರೋ ಅವು ಪ್ರಸ್ತುತ ಕಥೆಗಾರ್ತಿಯ ದೃಷ್ಟಿಯಲ್ಲಿ ಕಂತ್ರಿ ಕಥೆ, ನಕ್ಲಿಕಥೆ ಎಂದು ಹೆಸರಿಸಿಕೊಂಡಿರುವುದು ಗಮನಿಸಬೇಕಾದ ಅಂಶ. ಈ ಅಂಶವನ್ನು ಗಮನಿಸದೆ ಹೋದರೆ ಈ ಕಥೆಗಳ ಒಂದು ವ್ಯಾಖ್ಯಾನವನ್ನೇ ಕಡೆಗಣಿಸಿದಂತಾಗುತ್ತದೆ. ಸ್ವತಃ ಜನಪದರಲ್ಲಿಯೂ ಸಹ ತಾವು ಹೇಳುವ ಕಥೆಗಳಲ್ಲಿ ಕೆಲವನ್ನು ಗಂಭೀರವಾದ ಕಥೆಗಳಾಗಿ, ಇನ್ನೂ ಕೆಲವನ್ನು ನಕ್ಲಿ ಅಥವಾ ಚಿಲ್ಲರೆ ಕಥೆಗಳಾಗಿ ಪರಿಗಣಿಸುವ ದೃಷ್ಟಿ ಇರುವುದನ್ನು ಇಲ್ಲಿ ಉಲ್ಲೇಖಿಸಿರುವ ನಿರೂಪಕಿಯ ಮಾತುಗಳಿಂದ ಕಂಡುಕೊಳ್ಳಬಹುದಾಗಿದೆ. ಆದ್ದರಿಂದ ಇಂತಹ ವಿಮರ್ಶೆಗಳು ನಮ್ಮ ಅಧ್ಯಯನಕ್ಕೆ ಬೇಕಾಗುವ ಅಮೂಲ್ಯ ಮಾಹಿತಿಯ ಆಕರಗಳಾಗಿರುತ್ತವೆ” (ಸಂಧ್ಯಾರೆಡ್ಡಿ; ೧೯೯೫:೫೦-೫೧).

೫. ಜನಜಾನಪದದ ಉಪಯೋಗ

ಜನಜಾನಪದವನ್ನು ಜಾನಪದ ಅಧ್ಯಯನದಲ್ಲಿ ಬಳಸಿಕೊಂಡಾಗ ಅಧ್ಯಯನಕಾರರಿಗೆ ಹಲವಾರು ಪ್ರಯೋಜನಗಳುಂಟು. ಜನಪದರಲ್ಲಿ ಈಗಾಗಲೇ ಪ್ರಚಲಿತದಲ್ಲಿರುವ ಅಮೂಲ್ಯವಾದ ಜ್ಞಾನವನ್ನು ಅಧ್ಯಯನಕ್ಕೆ ಬಳಸಿಕೊಂಡಂತಾಗುವುದು. ಜೊತೆಗೆ ಜನಪದರನ್ನೇ ನೇರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡಂತಾಗುವುದು. ಅಧ್ಯಯನಕಾರರು ನಿರ್ಣಯಕ್ಕೆ ಬರುವಾಗ ಆಗುವ ಉಹಾಪೋಹಗಳನ್ನು ತಡೆಗಟ್ಟಬಹುದು. ಅಧ್ಯಯನದಲ್ಲಿ ಪಾರ್ಶ್ವಿಕ ಹಾಗೂ ಪಕ್ಷಪಾತತನದ ವಿಶ್ಲೇಷಣೆಗಳಾಗದಂತೆ ತಡೆಯಬಹುದು. ಜನಜಾನಪದವು ಸ್ಥಳೀಯ ಅರ್ಥೈಸುವಿಕೆಯನ್ನು ಒಳಗೊಂಡಿರುವುದರಿಂದ, ಅದು ಜಾನಪದದ ಪರಂಪರೆ, ಐತಿಹಾಸಿಕತೆ, ಸಾಂದರ್ಭಿಕತೆ, ಕ್ರಿಯಾತ್ಮಕತೆಯಿಂದ ಕೂಡಿರುತ್ತದೆ. ಹಾಗಾಗಿ ಈ ಒಳನೋಟ ಅನೇಕ ಆಯಾಮಗಳಿಂದ ಕೂಡಿ ಶ್ರೀಮಂತ ಮತ್ತು ಅರ್ಥಪೂರ್ಣವಾಗಿರುತ್ತದೆ. ಇದರಿಂದಾಗಿ ಜಾನಪದದ ಬಹುತ್ವ ಮತ್ತು ಅರ್ಥೈಸುವಿಕೆಯ ಕ್ರಮಗಳನ್ನು ತಿಳಿದುಕೊಳ್ಳಬಹುದು.

ಜನಜಾನಪದದಿಂದ ಜನಪದರು ತಮ್ಮ ಜನಪದ ಮತ್ತು ಜಾನಪದದ ಬಗೆಗೆ ತಾವು ಹೊಂದಿರುವ ಜ್ಞಾನವನ್ನು ತಿಳಿದುಕೊಳ್ಳಬಹುದು. ಜನಪದರ ಲೋಕದೃಷ್ಟಿಯ ಬಗೆಗಿನ ಕಲ್ಪನೆಯನ್ನು ತಿಳಿಯಬಹುದು. ಜನಪದರಿಂದ ಜಾನಪದ ಪ್ರಕಾರಗಳ ಅರ್ಥವನ್ನು ತಿಳಿಯುವದರಿಂದ ಮೌಖಿಕ ಪರಂಪರೆಯ ಅನೇಕ ಆಯಾಮಗಳನ್ನು ತಿಳಿದುಕೊಳ್ಳಬಹುದು. ಆ ಮೂಲಕ ಜಾನಪದದ ಬಗೆಗಿನ ಬಹು ಅರ್ಥಗಳನ್ನು ಹೊಮ್ಮಿಸುವುದು ಸಾಧ್ಯವಾಗುತ್ತದೆ. ಹಾಗೂ ಜನಪದರಲ್ಲಿ ಜಾನಪದ ಪ್ರಕಾರಗಳ ಬಗೆಗೆ ಇರುವ ಮಹತ್ವವೇನು ಎಂಬುದೂ ಸಹ ಗೊತ್ತಾಗುತ್ತದೆ. ಇದರಿಂದಾಗಿ ಜಾನಪದ ಅಧ್ಯಯನದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಜಾನಪದ ಪ್ರಕಾರಗಳಿಗೆ ಜನಪದರು ಮತ್ತು ಅಧ್ಯಯನಕಾರರು ಕೊಡುವ ವಿಶ್ಲೇಷಣೆಗಳಲ್ಲಿ ಇರುವ ಭಿನ್ನತೆಗಳನ್ನು ಗುರುತಿಸುವುದಕ್ಕೆ ಅನುಕೂಲವಾಗುತ್ತದೆ.

೬. ಜನಜಾನಪದದ ಕೆಲವು ನಮೂನೆಗಳು

ಕರ್ನಾಟಕ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ವಿವಿಧ ಭೂಭೌತಿಕ, ಭಾಷಾವೃಂದಗಳ ಸಮುಚ್ಛಯವಾಗಿದೆ. ಹಾಗೆಯೇ ಹಲವಾರು ಸ್ಥಿತ್ಯಂತರಗಳಿಗೆ ಒಳಪಟ್ಟಿದೆ. ಹಲವಾರು ಜಾತಿ, ಮತಗಳ ಜನಗಳಿದ್ದು, ಅವರದೇ ಆದ ಆಚಾರ, ವಿಚಾರ, ನಂಬಿಕೆ, ಸಂಪ್ರದಾಯಗಳನ್ನು ಹೊಂದಿದ್ದಾರೆ. ಆ ಮುಖಾಂತರ ತಮ್ಮದೇ ಆದ ಜಾನಪದವನ್ನು ಹೊಂದಿದ್ದಾರೆ. ಆ ಜಾನಪದ ಯಾವುದೇ ಜನಾಂಗದ ಜೀವಂತ ಪಳೆಯುಳಿಕೆ. ಸಾವಿರಾರು ವರುಷಗಳಿಂದಲೂ ತಲೆಮಾರಿನಿಂದ ತಲೆಮಾರಿಗೆ, ಆದಿಮಾನವ ಸಮುದಾಯದ ಮೂಲಕ ಅಲೆಮಾರಿಯಾಗಿ ಸಾಗಿಬಂದುದಾಗಿದೆ. ಜನಪದ ಕ್ರಿಯಾತ್ಮಕ, ಭಾವನಾತ್ಮಕ ಮತ್ತು ಕಲಾತ್ಮಕ ಅಭಿವ್ಯಕ್ತಿ ಮಾಧ್ಯಮಗಳಿಗೆ ಸಂಬಂಧಿಸಿದ ಸಕಲ ವಸ್ತು ಸಾಮಗ್ರಿಗಳು, ಸಾಹಿತ್ಯಕ ರೂಪ ಪ್ರಕಾರಗಳು, ವಿಶಿಷ್ಟವಾದ ಶಿಲ್ಪ, ಕಲಾ ನಮೂನೆ ಮಾದರಿಗಳು ಜನಪದ ಚರಿತ್ರೆಗೆ ಮೂಲ ಆಕರಗಳಾಗಿವೆ. ಇಲ್ಲಿಯ ಜನಾಂಗ ವೀರ ಪರಂಪರೆಯನ್ನು ಬೆಳೆಸಿದೆ. ಇತಿಹಾಸ ನಿರ್ಮಿಸಿದೆ ಮತ್ತು ಅಂದಂದಿನ ಪ್ರತಿಭಾವಂತ ವೃಂದಗಳು ಜನಪದ ಹಾಡುಗಳಲ್ಲಿ ಅಂದಂದಿನ ರೂಢಿ, ನಂಬುಗೆಗಳನ್ನು, ಕಥಾನಕಗಳನ್ನು, ಧಾರ್ಮಿಕ, ಸಾಮಾಜಿಕ ಆಚರಣೆಗಳನ್ನು – ತಮ್ಮ ನೆನಪಿನ ಪಳೆಯುಳಿಕೆಗಳಾದ ಜನಪದ ಹಾಡುಗಳಲ್ಲಿ – ಸೆರೆ ಹಿಡಿದಿದ್ದಾರೆ. ಜೊತೆಗೆ ಆ ಪ್ರಕಾರಗಳಿಗೆ ಸಂಬಂಧಿಸಿದಂತೆ ಜನಜಾನಪದವನ್ನು ಸಹ ಹೊಂದಿದ್ದಾರೆ.

ಜೋಗುಳ ಪದಗಳು ತೊಟ್ಟಿಲು ತೂಗುತ್ತಾ ಹಾಡಿ ಮಕ್ಕಳನ್ನು ಆಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮಕ್ಕಳನ್ನು ಹೊತ್ತು, ಹೆತ್ತು, ಸಾಕಿ, ಮುದ್ದಾಡಿದ ಹೆಣ್ಣು ತನ್ನೆಲ್ಲ ಅನುಭವಗಳ ಹಲವಾರು ಮುಖಗಳನ್ನು ಅತ್ಯಂತ ಸುಂದರವಾಗಿ ತ್ರಿಪದಿಗಳಲ್ಲಿ ಹಾಡುತ್ತಾಳೆ. ಇಂತಹ ಹಾಡುಗಳ ಬಗೆಗೆ ಜನಜಾನಪದವನ್ನು ನಾವು ಕಾಣಬಹುದು.

‘ಜೋಗುಳ ಹಾಡಿದರೆ ಆಗಾಲೆ ಕೇಳ್ಯಾನು
ಹಾಲ ಹಂಬಲವ ಮರೆತಾನು| ಕಂದಯ್ಗೆ
ಜೋಗುಳದಾಗೆ ಅತಿಮುದ್ದು ||’

ಜಾನಪದ ಪ್ರಕಾರಗಳಲ್ಲಿ ಜನಪದ ಕಾವ್ಯಗಳು ಒಂದು ಪ್ರಧಾನ ಪ್ರಕಾರ. ಅಧಿಕೃತವಾಗಿರುವ ಕಾವ್ಯಗಳು, ಅವುಗಳಲ್ಲಿರುವ ಮಾಧುರ್ಯ, ಅಂತಹ ಕಾವ್ಯಗಳನ್ನು ಕಲಿಯಬೇಕಾದರೆ ಮಾಡುವ ಪ್ರಯತ್ನಗಳು ಮುಂತಾದವುಗಳನ್ನು ಕುರಿತು ಜನ ಜಾನಪದವಿರುವುದನ್ನು ಸಹ ನೋಡಬಹುದು. ಅಂತಹವುಗಳನ್ನು ಜನಪದ ಕಾವ್ಯಗಳ ಕುರಿತ ಜನಜಾನಪದ ಎನ್ನಬಹುದು.

‘ಸರಸತಿ ಸಣ್ಣೋಳೆ ನಗು ಮೊಕದ ಕಡುಚೆಲುವೆ
ಕಲುಕಂಟಕದ ಅರಸೆ ಗಿರಿಜಮ್ಮ | ಪಾರ್ವತಿದೇವಿ
ಕಲಿಸೆ ಕಲ್ಯಾಣದ ಪದಗಳ

ಸರಸತಿ ಸಣ್ಣೋಳೆ ನಗು ಮೊಕದ ಕಡುಚೆಲುವೆ
ಕಲುಕಂಟಕದ ಅರಸೆ ಗಿರಿಜಮ್ಮ | ಪಾರ್ವತಿದೇವಿ
ಕಲಿಸೆ ಕಲ್ಲಣದ ಮತಿಗಳ

ಸೋಬಾನೇಳುದ ನಾವೇನು ಬಲ್ಲೆವು?
ದೇವಲೋಕದಲ್ಲಿ ಬಸವಣ್ಣ | ಮದುವೆ ಮಾಡಿ
ಭೂಲೋಕಕೆಲ್ಲ ಕಲಿಸಿದ

ಹತ್ತಾಳುದ್ದದ ನೀರು ಎತ್ತಬಾರದ ಪದುಮ
ಎತ್ತೇವೊ ಅದರ ಮೊದಲಿಂದ | ಸರಸತಿ
ಕಿತ್ತಾಲಿಹಣ್ಣ ಒಳಲಂಚ | ಕೊಟ್ಟರೆ
ತಪ್ಪಿದ ಪದವ ಬರಕೊಡೆ

ಆರಾಳುದ್ದ ನೀರು ಏಳಬಾರದ ಪದುಮ
ಹೇಳೆವೊ ಅದರ ಮೊದಲ | ಸರಸತಿ
ಬಾಳೆಯ ಹಣ್ಣ ಒಳಲಂಚ | ಕೊಟ್ಟರೆ
ಮತ್ತೆರಡ ಪದವ ಬರಕೊಡೆ
(ಕಾಳೇಗೌಡ ನಾಗವಾರ; ೧೯೮೦:೧೩೧-೧೩೨)

ಹತ್ತು ಸಾವಿರ್ಪದವ ಎತ್ತಿನ್ಮೇಲ್ಹೇರ‍್ಕೊಂಡು
ಮತ್ತೆ ಸಾವಿರ ಕೈಯಲ್ಲಿ ಹಿಡಿದು
ಬಂದಿನ್ನಿ ಬಾರೊ ಬಸವಣ್ಣ ಸಭೆಗೆ

ಹೊಟ್ಟೆಯೊಳಗಿನ ಹಾಡು ಬಿಟ್ಟು ಬಿಡದೆಲೆ ಹಾಡಿ
ಮುಟ್ಟಿಸಬೇಕು ಕಲಿತ ಋಣ | ಇಲ್ಲದಿರೆ
ಹಾಡು ಹಿಂಗ್ಯಾವ ಬಾಯಾಗ
(ಗೊರೂರು ರಾಮಸ್ವಾಮಿ ಅಯ್ಯಂಗಾರ್; -೧೦೪)

ಹಳ್ಳದ ದಂಡಿಗಿ ಲಕ್ಕಿಯ ಗಿಡಹುಟ್ಟಿ
ಲೆಕ್ಕವಿಲ್ಲದ ಹಾಡಬಲ್ಲ ನನಜಾಣ
ಲೆಕ್ಕಣಿಕೆ ತಂದು ಬರೆದೊಯ್ಯೊ

ಹತ್ತು ಸಾವಿರ ಹಾಡ ಎತ್ತಿನ ಮ್ಯಾಲ್ ಕಳುಗಿರಿ
ಮತ್ತು ಸಾಯಿರ‍್ನ ಕಲಿತಿದಿ ಬಾಲಮ್ಮ
ನಿಂಗು ಸಾಯಿರ‍್ನ ಕಲಿಸುವಿ

ಆದಾವ ನಮಜೋಳ ಉಳಿದಾವ ನಮಹಾಡ
ಈ ಸಾಕವ್ವ ನಿನಕಲ್ಲ ಕೈಯಾಗ
ಬೇಕೇನುಂಗರ ಸವದಾವ

ಬೀಸಾಕ ಕುಂತಾರ ಬ್ಯಾಸರಿಕಿ ನಮಗಿಲ್ಲ
ಸೂಸಿ ಹರಿದಾವ ತವರೀಗು ನಮ್ಮ ಪದ
ಕೂಸೀಗು ಬಂತು ಸವಿನಿದ್ದೆ
(ಆರಂಬದೆತ್ತು ಐನೂರು)

(ಬಂದೀರೆ ನನ್ನ ಜಡೆಯೊಳಗೆ (ಸಂ) ಡಾ. ಚಂದ್ರಶೇಖರ ಕಂಬಾರ., ಜಿ.ಆರ್. ತಿಪ್ಪೇಸ್ವಾಮಿ)

ಜನಪದ ಕಾವ್ಯಗಳನ್ನು ಹಾಡಿದವರು, ಕೇಳಿದವರು, ಹಾಡಿದಾಗ ದನಿಗೂಡಿಸಿದವರು, ಕೇಳದವರು, ಹಾಡಿನ ಕ್ರಿಯೆಯಲ್ಲಿ ಭಾಗವಹಿಸುವುದರಿಂದ ಬರುವ ಫಲಾಫಲಗಳನ್ನು ಹೇಳುವುದರ ಮುಖಾಂತರ ಕಾವ್ಯದ ಮಹತ್ವವನ್ನು ಹೇಳುವ ಕಾವ್ಯಗಳನ್ನು ಗುರುತಿಸಬಹುದು. ಜನಪದ ಕಾವ್ಯಗಳನ್ನು ಹಾಡಿದವರ ಬಗೆಗೆ;

‘ಹಾಡಿದವ್ವಗ ಸೀರಿ ಸೋ ಅಂದವ್ವಗ ಕುಬುಸ
ಕೇಳ ಬಂದವರಿಗೆ ಬಿಳಿ ಎಲಿಯೆ’
(ಡಾ. ಎಂ.ಎಸ್. ಸುಂಕಾಪುರ; ೧೯೭೨: ೬೮)

ಜನಪದ ಕಾವ್ಯಗಳನ್ನು ಹಾಡಿಸಿದವರನ್ನು ಕುರಿತು;

‘ಎಂದಿಗೆ ಈ ನುಡಿಯ ಸಂದುಕದೊಳಗಿತ್ತ
ಇಂದ್ಯಾವ ಜಾಣಿ ತಗಸ್ಯಾಳ |ಸುವ್ವಿ|
ಇಂದ್ಯಾವ ಜಾಣಿ ತಗಸ್ಯಾಳ |ಬಸಮ್ಮನ|
ಕಂದನ ಸಂತಾನ ಘನಾವಾಗೆ |ಸುವಿ|’
(ಡಾ. ಎಂ.ಎಸ್. ಸುಂಕಾಪುರ; ೧೯೭೨: ೧೫೪)

ಜನಪದ ಕಾವ್ಯಗಳನ್ನು ಹಾಡುವಾಗ ದನಿಗೂಡಿಸಿದವರಿಗೆ ಸಂಬಂಧಿಸಿದಂತೆ;

‘ಹಾಡಿದವ್ವನಕಿನ್ನ ಕೇಳಿದವ್ವನಕಿನ್ನ
ಸೋಬಾನದವ್ವ ಗಣದವ್ವ | ರನ್ನದ
ಸೋಬಾನದವ್ವ ಗಣದವ್ವ | ಸಿದ್ದವ್ವಗೆ
ಮುತ್ತೈದಿತನದ ಘನವಿರಲಿ’
(ಡಾ. ಬಿ.ಬಿ.ಹೆಂಡಿ; ೧೯೭೯:೫೦)

ಕಾವ್ಯಗಳನ್ನು ಕೇಳಿದ ಶ್ರೋತೃಗಳನ್ನು ಕುರಿತು;
‘ಹಾಡಿದವ್ವಕಿನ್ನ ಕೇಳಿದವ್ವಕಿನ್ನ
ಸುಮ್ಮನ ಕುಂತವ್ವಗ ಭಲಿಪುಣ್ಯ | ಸುಯ್
ಸುಮ್ಮನ ಕುಂತವ್ವಗ ಭಲಿಪುಣ್ಯ | ಶರಣಮ್ಮ
ನಿನ ಪುತ್ರನ ಸಂತಾನ ಜಯ ಜಯ | ಸುಯ್’
(ಡಾ. ಎಂ.ಎಸ್.ಸುಂಕಾಪುರ; ೧೯೭೨:೧೬)

ಜನಪದ ಕಾವ್ಯಗಳನ್ನು ಕಲಿಸಿದವರ ಬಗೆಗೆ;
‘ಹಾಲ ಕಾಸುದ ಬಿಟ್ಟು ಕೂಸು ತೂಗದ ಬಿಟ್ಟು
ವ್ಯಾಳ್ಳೇಕ ನುಡಿಯ ಕಲಿಸುವಳು |ಸುವ್ವಿ|
ವ್ಯಾಳ್ಳೇಕ ನುಡಿಯ ಕಲಿಸುವಳ |ನಿಂಬೆವ್ವಗ|
ಬಾಲರ ಸಂತಾನ ಘನವಾಗೆ | ಸುವ್ವಿ’
(ಡಾ. ಎಂ.ಎಸ್.ಸುಂಕಾಪುರ; ೧೯೭೨:೧೬)

ಜನಪದ ಕಾವ್ಯಗಳನ್ನು ಕೇಳದವರನ್ನು ಕುರಿತು;
ಎಂದೀಗೆ ಈ ಹಾಡ ಸಂದ ಬಲ್ಲೇನೆಂದು
ಅಂಗಳಕ ಬಂದು ತಿರುಗಿದವ್ವ | ನಿನೀಗ
ಬೆಂದ ದೇಗುಲದ ಕದವಾಗೆ
(ಡಾ. ಎಂ.ಎಸ್.ಸುಂಕಾಪುರ; ೧೯೭೨:೧೬)

ಇದಲ್ಲದೆ ಹಾಡುಗಳನ್ನು ಹಾಡದಿದ್ದವರು, ಕೇಳದವರು ಹಾಗೂ ಹಾಡುವಾಗ ವಿರಾಮದಲ್ಲಿ ಎಲೆ ಅಡಿಕೆ ಕೊಡುವವರು, ವಿಭೂತಿ ಕೊಟ್ಟವರು ಹೀಗೆ ಹಾಡಿನ ಕ್ರಿಯೆಯಲ್ಲಿ ಪಾಲ್ಗೊಂಡವರ ಬಗೆಗೂ ಜನಜಾನಪದ ಸೃಷ್ಟಿಯಾಗಿರುವುದನ್ನು ನೋಡಬಹುದು.

‘ಹಾಡ ಹಾಡಂದರ ಹಾಡಲದಿದ್ದರ ಪಾಪ
ಹಾಡ ಕೇಳವರ ಪರಚಿತ್ತ ಸುಯ್ || ೧ ||

ಹಾಡ ಕೇಳವರ ಪರಚಿತ್ತ ಪರಧ್ಯಾನ
ಬಾಲ ಅಳತಾನಂತ ಮನಿಗ್ಹೋದ ಸುಯ್ || ೨ ||

ಬಾಲ ಅಳತಾನಂದ ಮನಿಗ್ಹೋದ ಅವ್ವಗ
ಬಾವುಲಿ ಜಲಮಕ ಎಳಿರಂದ ಸುಯ್ || ೩ ||

ಸಂದೀಗಿ ವಿಭೂತಿ ತಂದು ಕೊಟ್ಟವ್ವಗ
ರೂಢೀಗೀಶ್ವರನ ದಯವಿರಲಿ | ರನ್ನದ
ರೂಢೀಗೀಶ್ವರನ ದಯವಿರಲಿ ನಾಗವ್ವಗ
ಮುದೆ ಪುಣ್ಯದ ಫಲಗೊಳ”
(ಡಾ. ಬಿ.ಬಿ.ಹೆಂಡಿ; ೧೯೭೯:೫೦-೫೧)

ಸಂದ್ಯಾಗಿನ ಎಲೆಯ ಮಂದ್ಯಾಗ ತಂದಾಳ
ಎಲೆಯ ಕೊಟ್ಟವ್ವಗ ಭಲಿಪುಣ್ಯ |ಕಸ್ತೂರಿಬಾಯಿ|
ನಿನ ಪುತ್ರನ ಜಯ ಜಯ (ಸುಯಾ|
(ಡಾ. ಎಂ.ಎಸ್.ಸುಂಕಾಪುರ; ೧೯೭೨:೭೭)