ಜನಪದ ಕಾವ್ಯಗಳನ್ನು ಕೇಳಿದವರಿಗೆ ಬರುವ ಫಲಗಳು ಹಲವಾರು ಉಂಟು

ರಾಮ ರಾಮ ಅಂದರೆ ನೇಮದಾಯಿಗಳುಂಟು
ಕಾಮಿತ ಫಲಪುಣ್ಯ ವರನೇಮ-ರಘುರಾಮ
ರಾಮಚಂದ್ರಸ್ವಾಮಿ ರಘುರಾಮ

ಗಂಡಗಂಜಿ ನಡೆವ ಹೆಂಡತಿಗೆ ಮಾಪುಣ್ಯ
ರಾಮಗ್ಯಾನ ಇದು ತಿಳಿದವರಿಗೆ
ರಾಮಗ್ಯಾನ ಇದು ತಿಳಿದು ನಡೆದವರಿಗೆ
ಮುಕ್ತಿ ಫಲಗಳುಂಟು ಸಿರಿಯುಂಟು

ಎದ್ದು ಓಡಲು ಬ್ಯಾಡಿ ನಿದ್ದೆ ಮಾಡಲು ಮಾಡಿ
ಬುದ್ದಿಯಿಂದಲಿ ಕೇಳಿ ರಾಮರ-ವಚನವ
ಶತಕೋಟಿ ಕರ್ಮ ಪರಿಹಾರ’
(ಜೀ.ಶಂ. ಪರಮಶಿವಯ್ಯ; ೧೯೭೩:೧೨)

ಕೇಳದವರಿಗೆ ಉಂಟಾಗುವ ಕೇಡುಗಳು;
‘ನಿದ್ದರೆಗಣ್ಣಿನೋರೆ ಇರಬ್ಯಾಡಿ
ಹೇಳು ಹೇಳೆಂದು ಹೇಳಿಸಿ ಈ ಕತೆಯ

ನಮ್ಮತ್ತೆ ಬಯ್ತಾಳಂದು ಮನೆಗೋದ |ಜಲ್ಮಾವ
ಕತ್ತೆ ಜಲ್ಮಾಕೆ ಎಳಸಾರಿ

ಹೇಳು ಹೇಳೆಂದು ಹೇಳಸಿ ಈ ಕತೆಯ
ನಮ್ಮಾವ ಬಯ್ತಾನಂದು ಮನೆಗೋದ |ಜಲ್ಮಾವ
ಹಂದಿ ಜಲ್ಮಾಕೆ ಎಳಸಾರಿ

ಹೇಳಿ ಕೇಳಿದೋರ‍್ಗೆ ಅವಿಗ್ಯಾನ | ಈ ಕತೆಯ
ಹೇಳಿ ಕೇಳಿದೋರ‍್ಗೆ ಫಲವುಂಟು

ಹಾಡು ಹಾಡೆಂದು ಹಾಡಿಸಿ ಈ ಕತೆಗೆ
ನಮ್ಮಪ್ಪ ಬಯ್ತಾನಂದು ಮನೆಗೋದ | ಜಲ್ಮಾವ
ನಾಯಿ ಜಲ್ಮಾಕೆ ಎಳಸಾರಿ

ಕೇಳಿದವರಿಗೆ ಉಂಟಾಗುವ ಫಲಗಳು;

ಹಾಡು ಹಾಡೆಂದು ಹಾಡೀಸಿ ಈ ಕತೆಯ
ಹಾಡಿಸಿ ಕೇಳಿದೋರ‍್ಗೆ ಪುಣ್ಯೇವು

ಆಕಳಿಸೋರಿರಬ್ಯಾಡ ತೂಕಡಿಸೋರಿರಬ್ಯಾಡ
ನಿದ್ದರೆಗಣ್ಣಿನೋರೆ ಇರಬ್ಯಾಡಿ | ಈ ಕತೆಯ
ಬೊದ್ದೀಸಿ ಕೇಳಿದೋರ‍್ಗೆ ಫಲವುಂಟು

ಜಾವಗಣ್ಣಿನೋರೆ ಇರಬ್ಯಾಡಿ ನೀವೆಲ್ಲ
ಲಾಲಸಿ ಕೇಳಿದರೆ ಪುಣ್ಯೇವು || ಈ ಕತೆಗೆ
ಓದಿಸಿ ಕೇಳೋರೆ ಬೇಕಮ್ಮ

ಹೇಳು ಹೇಳೆಂದು ಹೇಳಿಸಿ ಈ ಕತೆಯ
ಪಟ್ಟೆ ಸೀರೆಯ ಮುಯ್ಯಿಬಂದೋ

ಅಂಚಿನ ಕಣ ಅರಿಷಣ ಕುಂಕುಮ
ಮಲ್ಲಿಗಿ ಹೂವ ಮಡಲಕ್ಕಿ | ಸೈವಾಗಿ
ಹಾಡೇಳಿ ಆಘ ಕಳುವ್ಯಾರೊ’
(ಕಾಳೇಗೌಡ ನಾಗವಾರ; ೧೯೮೦:೨೩೯-೨೪೦)

ಜನಪದ ಕಥೆಗಳು ಜನಪದ ಸಾಹಿತ್ಯದ ಬಹುಮುಖ್ಯವೂ ಆಕರ್ಷಕವೂ ಆದ ಭಾಗವಾಗಿವೆ. ಸುದೀರ್ಘವಾದ ಕಥೆಗಳಿಂದ ಹಿಡಿದು ಸಂಕ್ಷಿಪ್ತವಾದ ಕಥೆಗಳವರೆಗೆ ಈ ಕಥಾಕ್ಷೇತ್ರ ಆವರಿಸಿದೆ. ಡಾ. ಎ.ಕೆ. ರಾಮಾನುಜನ್‌ರವರು ಗದ್ಯಕಥನಗಳಲ್ಲಿ ಐದು ವಿಧದ ಜನ ಜಾನಪದವನ್ನು ಗುರುತಿಸುತ್ತಾರೆ. ಅವುಗಳೆಂದರೆ;

Metafeature:

a. Elements in the text. Ex: Opening and closing formulac; repititions; framing devices; forms like prose, verse, song; identifying devices like names of persons; other textural elements like shifts in tons and register.

b. Elements in Performance : Ex: Gestrure, asides to the audience, by which tellers reparate themselves.

c. Elements in context: Ex: Festival, Puja (Worship) Performer signified by caste marks on his forehead, costume and language
d. Distictions and names of genres: Ex: Myth folktale, Marriage riddles, Mother-in-law tales.

Metafroms:

e. Tables about tale, about their forms and functions.
f. Oral exagesis and evaluation by performer and audience: Ex: Favorite tale, notions about what makes one tale better than another.
(A.K. Ramanujan; 1987:87-88)

ನಾವು ಜನಪದ ಕಥೆ ಎಂದು ಕರೆಯುತ್ತಿರುವ ಪ್ರಕಾರಕ್ಕೆ ಜನಪದರಲ್ಲಿ ತಮ್ಮದೇ ಆದ ಹೆಸರುಗಳನ್ನು ಹೊಂದಿರುವುದನ್ನು ಕಾಣಬಹುದು. ಜನಪದರು ಜನಪದ ಕಥೆಗೆ ಏನು ಹೇಳುತ್ತಾರೆ ಎಂಬುದನ್ನು ಗಮನಿಸಿದಾಗ ಜನಪದ ಕಥೆಯ ಸ್ಥಿತಿ-ಸ್ಥಿತ್ಯಂತರ ಪರಿಸ್ಥಿತಿಯನ್ನು ಗುರುತಿಸಬಹುದು. ಹಳ್ಳಿಯವರು ನಗರವನ್ನು ಗಮನದಲ್ಲಿಟ್ಟುಕೊಂಡು ಜನಪದ ಕಥೆಗಳನ್ನು ‘ಹಳ್ಳಿಕಥೆ’ ಎಂದು ಹೇಳುವುದುಂಟು. ನಮ್ಮ ಪರಿಸರದ, ಪ್ರದೇಶದ ಹಾಗೂ ಸ್ಥಳೀಯವು ಎಂಬ ಉದ್ದೇಶವನ್ನಿಟ್ಟುಕೊಂಡು ‘ನಾಟಿಕಥೆ’ ಎಂದು ಸಹ ಕರೆಯುವುದುಂಟು. ಜನಪದ ಕಥೆಗಳನ್ನು ಅಜ್ಜಿಯೇ ಹೆಚ್ಚಾಗಿ ಹೇಳುವುದರಿಂದ ‘ಅಜ್ಜಿಕಥೆ’ ಎಂದು ಸಹ ಹೇಳುವುದುಂಟು, ಇವುಗಳ ಜೊತೆಗೆ ‘ನಕಲಿಕಥೆ’, ‘ಹಳೆಕಥೆ’, ‘ಮನೆಕಥೆ’, ‘ಸಾಮಾನ್ಯಕಥೆ’, ‘ಪರಸಂಗ’, ‘ಇದು ಒಂದು ಕಥೆ’, ‘ಎಂಥದೋ ಒಂದು ಕಥೆ’ ಎಂಬುದಾಗಿ ಕರೆಯುವುದನ್ನು ಗಮನಿಸಬಹುದು.

ಜನಪದ ಕಥೆಗಳನ್ನು ಆರಾಧನೆಯ ಸಂದರ್ಭದಲ್ಲೂ ಸಹ ಹೇಳುವುದುಂಟು. ಅಂತಹ ಕಥೆಗಳನ್ನು ಆರಾಧನೆಯ ಅಂಗವಾಗಿ ಹೇಳಲ್ಪಡುವ ಕಥೆಗಳು ಎನ್ನುವರು. ಆರಾಧನೆಯ ಸಂದರ್ಭದಲ್ಲಿ ನಿರ್ದಿಷ್ಟ ವೃತ್ತಿಗಾಯಕರು ಭಕ್ತಾದಿಗಳ ಎದುರು ಇಂಥ ಕಥೆಗಳನ್ನು ಹೇಳುತ್ತಾರೆ. ಭಕ್ತರು ಹರಕೆಹೊತ್ತು, ಧನಕನಕ, ಸುಖಸಂತಾನ, ಸೌಭಾಗ್ಯ, ಹೆಂಡತಿ ಮುಂತಾದ ಮನೋಭಿಲಾಷೆಗಳನ್ನು ಈಡೇರಿಸಿಕೊಳ್ಳಲು ಅಥವಾ ಕಷ್ಟಕರವಾದ ಸಂಕಟಗಳಿಂದ ಪಾರಾಗಲು ಅಥವಾ ಹರಕೆಗಳು ಈಡೇರಿದಾಗ ತಮ್ಮ ಕುಲದೇವತೆಗೆ ಕೃತಜ್ಞತೆಗಳನ್ನು ಸಲ್ಲಿಸಲು ಇಂಥ ಕಥೆಗಾರಿಕೆಯನ್ನು ನಡೆಸುತ್ತಾರೆ. ಇಂತಹ ಕಥೆಕೇಳಿ ರೋಗ ಮುಕ್ತರಾದವರುಂಟು, ಸಂಕಟಗಳಿಂದ ಪಾರಾದವರುಂಟು, ಧನಕನಕ ಫಲಪುತ್ರ ಸಂತಾನ ಪಡೆದವರುಂಟು. ಹರಿಕಥಾ ಕಾಲಕ್ಷೇಪ, ಸೋಳಾ ಸೋಮವಾರದ ಕಥೆ, ಸತ್ಯನಾರಾಯಣ ಪೂಜಾಕಥೆ, ಶಿವರಾತ್ರಿಕಥೆ, ಗೊಂದಲಿಗರ ಕಥೆ, ಜೋಳಿಗೇರ ಕಥೆ ಇತ್ಯಾದಿಗಳೆಲ್ಲ ‘ಪುಣ್ಯ ಕಥಾ ಶ್ರವಣಗಳು’, ಈ ಕಥೆಗಳಲ್ಲಿ ದೇವರ ಪ್ರತಾಪ, ಇಲ್ಲವೆ ಭಕ್ತರ ಭಕ್ತಿ ನಿರೂಪಣೆ ಇರುತ್ತದೆ” (ಡಾ. ಚಂದ್ರಶೇಖರ ಕಂಬಾರ; ೧೯೮೫:೧೨೫). ಈ ಜನಪದ ಕಥೆಗಳ ಬಗೆಗೆ ಜನಪದರು ತಮ್ಮದೇ ಆದ ಹಲವಾರು ನಂಬಿಕೆಗಳನ್ನು ಇರಿಸಿಕೊಂಡಿದ್ದಾರೆ. ಅಂತಹವುಗಳನ್ನು ಜನಪದ ಕಥೆಗಳ ಕುರಿತ ಜನಜಾನಪದ ಎನ್ನಬಹುದು. ಜನಪದರಲ್ಲಿ ಜನಪದ ಕಥೆಯ ಬಗೆಗೆ ಇರುವ ನಂಬಿಕೆಗಳು ಈ ರೀತಿಯಾಗಿವೆ.

‘Tales get fewer as one moves from village to town’ (Claus and Korom; 1991:13).

ಕಥೆಯನ್ನು ಹೇಳದಿರುವವರು ಮತ್ತು ಕೇಳದಿರುವವರಿಗೆ ಸ್ವರ್ಗದಲ್ಲಿ ಸ್ಥಾನವಿರುವುದಿಲ್ಲ. ಚೆನ್ನಾಗಿ ಒಳ್ಳೆಯ ಕಥೆ ಹೇಳುವವರು ಸಿಕ್ಕರೆ ಯಮಧರ್ಮರಾಯ ಅವರನ್ನು ತನ್ನ ರಾಣಿಯರಿಗೆ ಕಥೆ ಹೇಳಲು ಇಟ್ಟುಕೊಳ್ಳುತ್ತಾನೆ ಎಂಬ ನಂಬಿಕೆಗಳು ಜನಪದ ಕಥೆಗಳ ಬಗ್ಗೆ ಜನಪದರಲ್ಲಿ ಇವೆ. ಇವಲ್ಲದೆ ಸಂಸ್ಕೃತಿ ಜನಪದ ಕಥೆಯ ಬಗೆಗೆ ತನ್ನದೇ ಆದ ಹಲವಾರು ಯೋಚನೆಗಳನ್ನು ಹೊಂದಿದೆ. ರಾಮಾಯಣದ ಕಥೆಗಳನ್ನು ಕೇಳುವುದರಿಂದ ಸುಸಂಸ್ಕೃತನಾದ ವ್ಯಕ್ತಿಯಾಗುತ್ತಾನೆ. ಕಥೆಗಳು ಬರುತ್ತಿದ್ದು ಅವುಗಳನ್ನು ಬೇರೆಯವರಿಗೆ ಹೇಳದಿದ್ದರೆ, ಕಥೆಗಳೇ ಕಥೆ ಹೇಳದಿದ್ದ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳುವುದು, ದೇವರು ಕಥೆಗಳನ್ನು ಭೂಲೋಕಕ್ಕೆ ಜನರ ಬೇಸರ ಕಳೆಯಲು ಕಳುಹಿಸಿಕೊಟ್ಟಿದ್ದಾನೆ, ಕಥೆಗಳು ಹೆಚ್ಚಾಗಿ ಹೊಲೆಯರಿಗೆ ಬರುತ್ತವೆ ಎಂಬಂತಹ ಅಭಿಪ್ರಾಯಗಳನ್ನು ಜನಪದ ಕಥೆಗಳು ಹೆಚ್ಚಾಗಿ ಹೊಲೆಯರಿಗೆ ಬರುತ್ತವೆ ಎಂಬಂತಹ ಅಭಿಪ್ರಾಯಗಳು ಸರಿ ಎನ್ನುವುದನ್ನು ಸಮರ್ಥಿಸಲು ಜನಪದ ಕಥೆಗಳಿರುವುದನ್ನು ಹೇಳುತ್ತಾರೆ.

ಈ ರೀತಿಯ ಕಥೆಗಳನ್ನು ನೋಡಿದಾಗ ನಮಗೆ ಸ್ಪಷ್ಟವಾಗುವುದೇನೆಂದರೆ, ಜನಪದರು ಕಥೆಯ ಬಗೆಗೆ ಹೊಂದಿರುವ ನಂಬಿಕೆ ಗೊತ್ತಾಗುತ್ತದೆ.

ಕಥೆಗಳು ಬಂಡಾಯವೆದ್ದು, ವ್ಯಕ್ತಿಯಿಂದ ಬಿಡಿಸಿಕೊಂಡು ಬಂದು ಬೇರೆ ಬೇರೆ ರೂಪ ತಾಳಿ ತಮ್ಮ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸುವುದನ್ನು ಡಾ. ಎ.ಕೆ. ರಾಮಾನುಜನ್‌ರವರು ಸಂಗ್ರಹಿಸಿರುವ Folktales from India’ಸಂಗ್ರಹದಲ್ಲಿಯ ‘ಹೇಳದ ಕಥೆಗಳು’ (Untold Stories) ಶೀರ್ಷಿಕೆಯ ಕಥೆಯನ್ನು ಗಮನಿಸಬಹುದು. ಕಥೆಯ ಸಾರಾಂಶ ಕೆಳಗಿನಂತಿದೆ.

ಗೊಂಡಿ ರೈತನಿದ್ದ. ಅವನು ತನ್ನ ಸಾಮರ್ಥ್ಯಕ್ಕೆ ತಕ್ಕುದಾದ ಜಮೀನು ಮಾಡಿಕೊಂಡಿದ್ದ. ವ್ಯವಸಾಯಕ್ಕೆ ಆಳನ್ನು ಇಟ್ಟುಕೊಂಡಿದ್ದ. ಒಂದು ದಿನ ಇಬ್ಬರೂ ಮಗ ಮತ್ತು ಸೊಸೆ ನೋಡಲು ಹೋಗುತ್ತಾರೆ. ರಸ್ತೆಯಲ್ಲಿ ಸಣ್ಣ ಗುಡಿಸಲಿನಲ್ಲಿ ಊಟ ಮಾಡುತ್ತಾರೆ. ಆಳು ಕಥೆ ಹೇಳಿ ಎನ್ನುತ್ತಾನೆ. ಗೊಂಡಿ ರೈತನಿಗೆ ನಿದ್ದೆ ಬಂದು ಕಥೆ ಹೇಳುವುದಿಲ್ಲ. ಆಳು ಎಚ್ಚರವಾಗಿರುತ್ತಾನೆ. ಸಾಹುಕಾರನಿಗೆ ನಾಲ್ಕು ಕಥೆ ಗೊತ್ತಿವೆ ನನಗೆ ಹೇಳಲಿಲ್ಲ ಎನ್ನುತ್ತಾನೆ. ಗೊಂಡಿ ರೈತ ಗಾಢವಾದ ನಿದ್ರೆಯಲ್ಲಿದ್ದಾಗ ಕಥೆಗಳೆಲ್ಲಾ ಹೊಟ್ಟೆಯಿಂದ ಹೊರಗಡೆ ಬರಲು ಪ್ರಾರಂಭಿಸಿದವು. ಹೊರಗಡೆ ಬಂದು ಹೊಟ್ಟೆ ಮೇಲೆ ಕುಳಿತುಕೊಂಡು ಮಾತಾಡಹತ್ತಿದವು. ಒಂದು ಕಥೆ ಹೇಳುತ್ತೆ, ‘ಚಿಕ್ಕಂದಿನಿಂದಲೂ ಇವನಿಗೆ ಗೊತ್ತು, ಆದರೆ ಯಾರಿಗೂ ಹೇಳುತ್ತಿಲ್ಲ. ಇವನನ್ನು ಕೊಂದು ಬಿಟ್ಟು ಬೇರೆಯವರ ಜೊತೆ ಇರೋಣ’ ಎನ್ನುತ್ತದೆ. ಅದನ್ನು ಗೊಂಡನ ಆಳು ಕೇಳಿಸಿಕೊಳ್ಳುತ್ತಾನೆ.

ಮೊದಲನೆ ಕಥೆ ಈತ ಮಗನ ಮನೆಯಲ್ಲಿ ಊಟ ಮಾಡುವಾಗ ಮೊದಲ ತುತ್ತನ್ನು ಮೊನಚಾದ ಸೂಜಿ ಮಾಡುತ್ತೇನೆ, ಅವನು ಅದನ್ನು ತಿಂದು ಸಾಯುತ್ತಾನೆ ಎನ್ನುತ್ತದೆ. ಎರಡನೆ ಕಥೆ ಒಂದು ವೇಳೆ ಅಲ್ಲಿ ತಪ್ಪಿಸಿಕೊಂಡರೆ ರಸ್ತೆ ಬದಿಯಲ್ಲಿ ದೊಡ್ಡ ಮರವಾಗಿ, ಅವನು ರಸ್ತೆಯಲ್ಲಿ ಹೋಗುವಾಗ ಅವನ ಮೇಲೆ ಬಿದ್ದು ಸಾಯಿಸುತ್ತೇನೆ ಎನ್ನುತ್ತದೆ. ಮೂರನೇ ಕಥೆ ಆಗಲೂ ಸಾಯದಿದ್ದರೆ ಹಾವಾಗಿ ಕಚ್ಚಿ ಸಾಯಿಸುತ್ತೇನೆ ಎಂದಿತು. ನಾಲ್ಕನೇ ಕಥೆ ಆಗಲೂ ಸಾಯದಿದ್ದರೆ ದೊಡ್ಡ ನೀರಿನ ಅಲೆಯಾಗಿ ಬಂದು ಕೊಚ್ಚಿಕೊಂಡು ಹೋಗಿ ನದಿಗೆ ತಳ್ಳಿ ಸಾಯಿಸುತ್ತೇನೆ ಎನ್ನುತ್ತದೆ.

ಮಾರನೇ ದಿನ ಮಗನ ಮನೆಗೆ ಹೋದಾಗ ಊಟಕ್ಕೆ ಕುಳಿತಾಗ ಮೊದಲ ತುತ್ತನ್ನು ತಿನ್ನುವಾಗ ಆಳು ಸಾಹುಕಾರನಿಗೆ ನೀನು ತಿನ್ನಬೇಡ ಅದರಲ್ಲಿ ಸೂಜಿ ಇವೆ ಎನ್ನುತ್ತಾನೆ. ಮಾರನೇ ದಿನ ಊರಿಗೆ ಬರುವಾಗ ದಾರಿಯಲ್ಲಿ ದೊಡ್ಡ ಮರ ಬಂದಾಗ ಆಳು ಮರದ ಕೆಳಗೆ ಹೋಗುವಾಗ ಜೋರಾಗಿ ಓಡು ಎನ್ನುತ್ತಾನೆ. ಸಾಹುಕಾರ ಹಾಗೆ ಮಾಡಲು ಮರ ದಾಟಿದ ತಕ್ಷಣ ಮರ ಬೀಳುತ್ತೆ, ಸಾಹುಕಾರ ತಪ್ಪಿಸಿಕೊಳ್ಳುತ್ತಾನೆ. ಸ್ವಲ್ಪ ಸಮಯದಲ್ಲಿ ಹಾವು ಕಾಣಿಸಿಕೊಳ್ಳುತ್ತದೆ. ಆಳು ಅದನ್ನು ಕೊಲ್ಲುತ್ತಾನೆ. ಹೊಳೆ ದಾಟುವಾಗ ದೊಡ್ಡ ಅಲೆ ಬಂದು ಕೊಚ್ಚಿಕೊಂಡು ಹೋಗಬೇಕೆನ್ನುವಾಗ ಆಳು ಪಾರುಮಾಡುತ್ತಾನೆ.

ಆ ಮೇಲೆ ಹೊಳೆದಂಡೆ ಮೇಲೆ ವಿಶ್ರಾಂತಿಗೆ ಕುಳಿತಿದ್ದಾಗ ಗೊಂಡ ನೀನು ನನ್ನನ್ನು ನಾಲ್ಕು ಸಾರಿ ಸಾಯುವುದನ್ನು ತಪ್ಪಿಸಿದ್ದೀಯಾ. ಹಾಗಾಗಿ ನಿನಗೆ ಏನೋ ಗೊತ್ತಿದೆ ಹೇಳು ಎನ್ನುವನು. ಆಳು ಅದನ್ನು ಹೇಳಿದರೆ ನಾನು ಕಲ್ಲಾಗಬೇಕಾಗುತ್ತೆ ಎನ್ನುವನು. ಅದಕ್ಕೆ ಗೊಂಡಾ ಅದು ಹೇಗೆ ಸಾಧ್ಯ ಹೇಳು ಎನ್ನುವನು. ಆಗ ಆಳು ಹೇಳುವನು. ಒಂದು ವೇಳೆ ಕಲ್ಲಾದರೆ ನಿನ್ನ ಸೊಸೆಯ ಮಗುವನ್ನು ನನ್ನ ಮೇಲೆ ಎಸೆಯಬೇಕು, ಆವಾಗ ಮನುಷ್ಯನಾಗುತ್ತೇನೆ, ಎಂದು ಹೇಳಿ ಕಲ್ಲಾಗುತ್ತಾನೆ. ಗೊಂಡಾ ಹಾಗೆಯೇ ಮನೆಗೆ ಹೋಗುವನು. ಸ್ವಲ್ಪ ದಿನವಾದ ಮೇಲೆ ಸೊಸೆಗೆ ಗೊತ್ತಾಗಿ, ಅಲ್ಲಿಗೆ ಹೋಗಿ ತನ್ನ ಮಗುವನ್ನು ಕಲ್ಲಿನ ಮೇಲೆ ಎಸೆಯುವಳು, ಆಳು ಮನುಷ್ಯನಾಗುವನು. ಆಳನ್ನು ಗೊಂಡಾ ಮನೆಗೆ ಸೇರಿಸುವುದಿಲ್ಲ. ಇವತ್ತಿಗೂ ಅಲ್ಲಿಯ ಜನ ‘ಗೊಂಡಾನಿಗೆ ಏನು ಹೇಳಬೇಡಿ’ ಎಂದು ಮಾತನಾಡಿಕೊಳ್ಳುವರು.

ಕಥೆಗಳು ಬಂಡಾಯವೆದ್ದು, ವ್ಯಕ್ತಿಯಿಂದ ಬಿಡಿಸಿಕೊಂಡು ಬಂದು ಬೇರೆ ಬೇರೆ ರೂಪ ತಾಳಿ ತಮ್ಮ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸುವ ಇನ್ನೊಂದು ಕಥೆ ಈ ರೀತಿಯಾಗಿದೆ.

ಒಂದೂರಿನಲ್ಲಿ ಇಬ್ಬರೂ ಅಣ್ಣತಮ್ಮಂದಿರು ಇದ್ದರು. ಒಬ್ಬರಿಗೊಬ್ಬರು ಬಿಟ್ಟು ಕದಲುತ್ತಿರಲಿಲ್ಲ. ಅಣ್ಣನಿಗೆ ಮೂರು ಕಥೆಗಳು ಗೊತ್ತಿದ್ದವು. ಅವುಗಳನ್ನು ಯಾರ ಹತ್ತಿರಾನೂ ಹೇಳಿರಲಿಲ್ಲ. ಹೀಗೆ ಒಂದು ದಿನ ಅಣ್ಣ ಮಲಗಿಕೊಂಡಿದ್ದನು. ತಮ್ಮ ಅಣ್ಣನ ಪಕ್ಕದಲ್ಲಿಯೇ ಕುಳಿತುಕೊಂಡಿದ್ದನು. ಆಗ ಅಣ್ಣನಿಗೆ ಗೊತ್ತಿದ್ದ ಮೂರು ಕಥೆಗಳು ಮಾತನಾಡಿಕೊಳ್ಳುತ್ತಿದ್ದವು. ಮೊದಲನೆ ಕಥೆ ಹೀಗೆ ಹೇಳಿತು. ಇವನು ತನಗೆ ಗೊತ್ತಿರುವ ಕಥೆಗಳನ್ನು ಯಾರ ಹತ್ತಿರಾನೂ ಹೇಳಿಲ್ಲ. ಆದ್ದರಿಂದ ನಾವು ಇವನನ್ನು ಸುಮ್ಮನೆ ಬಿಡಬಾರದು. ನಾನು ‘ಇವನು ನಾಳೆ ಹೆಣ್ಣು ನೋಡಲು ದೂರದೂರಿಗೆ ಹೋಗುವಾಗ ನಡುದಾರಿಯಲ್ಲಿ ಮರವಾಗಿ ಇವನ ಮೇಲೆ ಬೀಳುತ್ತೇನೆ’ ಎಂದಿತು. ಎರಡನೆಯ ಕಥೆ ನಾನು ‘ಇವನು ತಿನ್ನುವ ತುತ್ತಿವಲ್ಲಿ ನಗ್ಲಿಮುಳ್ಳು ಆಗಿ ಚುಚ್ಚಿ ಕೊಲ್ಲುತ್ತೇನೆ’ ಎಂದಿತು. ಆಗ ಮೂರನೆಯ ಕಥೆ ಅವನು ಆಗಲೂ ಸಾಯದಿದ್ದರೆ ನಾನು ‘ಅವನ ಮೊದಲ ರಾತ್ರಿಯಲ್ಲಿ ಹೆಂಡತಿಯೊಂದಿಗೆ ಮಲಗಿದ್ದಾಗ ಹಾವಾಗಿ ಬಂದು ಅವನನ್ನು ಸಾಯಿಸುತ್ತೇನೆ’ ಎಂದಿತು. ಈ ಮಾತುಗಳನ್ನು ತಮ್ಮ ಮನಸ್ಸಿನಲ್ಲಿಯೇ ಇಟ್ಟು ಕೊಂಡಿತು.

ಮರುದಿನ ಇಬ್ಬರೂ ಕುದುರೆ ಏರಿ ಹೆಣ್ಣು ನೋಡಲು ಬೇರೆ ಊರಿಗೆ ಹೊರಟರು. ತಮ್ಮ ಮನಸ್ಸಿನಲ್ಲಿಯೇ ಕಥೆಗಳ ಮಾತುಗಳನ್ನು ಮೆಲುಕು ಹಾಕುತ್ತಿದ್ದನು. ದಾರಿಯಲ್ಲಿ ದೊಡ್ಡ ಆಲದ ಮರ ಬೆಳೆದು ನಿಂತಿತ್ತು. ತಮ್ಮನಿಗೆ ಕಥೆ ಹೇಳಿದ ಮಾತು ನೆನಪಿಗೆ ಬಂತು. ಆಗ ಅವನು ಉಪಾಯ ಮಾಡಿ, ಜಿದ್ದು ಕಟ್ಟಿ ಅಣ್ಣನಿಗೆ ಹೇಳಿದ ಅಣ್ಣ ಯಾರು ಮೊದಲು ಈ ಮರವನ್ನು ದಾಟುತ್ತಾರೋ ನೋಡೋಣ ಎಂದನು. ಅಣ್ಣ ಕ್ಷಣಾರ್ಧದಲ್ಲಿ ಕುದುರೆಯನ್ನು ಮರ ದಾಟಿಸಿದ್ದಕ್ಕೂ, ಮರ ಧಡಾರ್ ಎಂದು ಬೀಳುವುದಕ್ಕೂ ಸರಿಹೋಯಿತು. ಕೂದಲೆಳೆಯ ಅಂತರದಲ್ಲಿ ಸಾವು ದೂರವಾಯಿತು ಎಂದು ಕೊಂಡನು ತಮ್ಮ.

ಹೆಣ್ಣನ್ನು ನೋಡುವ ಶಾಸ್ತ್ರ ಮುಗಿದ ಮೇಲೆ ಊಟಕ್ಕೆ ಕುಳಿತರು. ಆಗ ತಮ್ಮನು ಅಣ್ಣನ ಮೊದಲ ಮೂರು ತುತ್ತುಗಳನ್ನು ಕೇಳಿ ಹತ್ತಿರ ಇಟ್ಟುಕೊಂಡನು. ಇದರಿಂದಲೂ ಅಣ್ಣನನ್ನು ಪಾರುಮಾಡಿದನು.

ಮದುವೆ ಕಾರ್ಯಗಳು ಎಲ್ಲಾ ಮುಗಿದ ಮೇಲೆ ಮೊದಲ ರಾತ್ರಿಗೆ ಅಣಿ ಮಾಡಿದರು. ತಮ್ಮನಿಗೆ ಸಂಕಟವಾಯಿತು. ಏಕೆಂದರೆ ದಂಪತಿಗಳ ನಡುವೆ ಹೋಗಿ ಹೇಗೆ ಮಲಗುವುದು. ಇಲ್ಲದಿದ್ದರೆ ಅನ್ಯಾಯವಾಗಿ ನನ್ನ ಅಣ್ಣ ಸಾಯುತ್ತಾನೆ. ಹೇಗಾದರೂ ಮಾಡಿ ಉಳಿಸಬೇಕೆಂದು, ಉಪಾಯದಿಂದ ಯಾರಿಗೂ ಗೊತ್ತಾಗದಂತೆ ಮಂಚದ ಕೆಳಗೆ ಬಚ್ಚಿಟ್ಟುಕೊಂಡನು. ಗಂಡ ಹೆಂಡತಿ ಮಲಗಿದ ಮೇಲೆ ನಿಧಾನವಾಗಿ ಹೊರಗೆ ಬಂದು ಕಾವಲು ಕಾಯತೊಡಗಿದನು. ಹಾವು ಜಂತಿಯಿಂದ ಇಳಿದು ಅಣ್ಣನ ಕಡೆಗೆ ಹರಿದು ಬರತೊಡಗಿತು. ಕೂಡಲೆ ತಮ್ಮ ತನ್ನ ಕತ್ತಿಯಿಂದ ಹಾವನ್ನು ತುಂಡರಿಸಿದನು. ಹಾವಿನ ರಕ್ತ ಅಣ್ಣನ ಹೆಂಡತಿಗೆ ಸಿಡಿಯಿತು. ಆಗ ಅವಳಿಗೆ ತಕ್ಷಣ ಎಚ್ಚರವಾಯಿತು. ಕೋಣೆಯಲ್ಲಿ ಮೈದುನನನ್ನು ನೋಡಿದ ಕೂಡಲೇ ಕಿಟಾರೆಂದು ಕಿರುಚಿದಳು. ಆಗ ಎಲ್ಲರೂ ಎದ್ದು ಬಂದರು. ತಮ್ಮನನ್ನು ಎಳೆದು ಹೊಡೆಯತೊಡಗಿದರು. ಅವನಿಗೆ ಏನೂ ಹೇಳಲು ಅವಕಾಶಕೊಡಲಿಲ್ಲ. ಆಗ ಅಣ್ಣನಿಗೆ ನನ್ನ ತಮ್ಮ ಯಾವೊಂದು ಉದ್ದೇಶವೂ ಇಲ್ಲದೆ ಹೀಗೆ ಮಾಡುವುದಿಲ್ಲ ಎಂದು ಜನಗಳನ್ನು ತಡೆದು ವಿಚಾರಿಸಿದನು. ತಮ್ಮ ನಡೆದ ವಿಷಯ ಹೇಳಿದನು. ಜನ ತಮ್ಮನನ್ನು ಕೊಂಡಾಡಿದರು. ಹೀಗೆ ಕಥೆಗಳು ಸೇಡನ್ನು ತೀರಿಸಿಕೊಳ್ಳಲು ನೋಡಿದವು. ಆದ್ದರಿಂದ ಯಾರೂ ಗೊತ್ತಿರುವ ಕಥೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬಾರದು.

ಕಥೆ ಅಥವಾ ಹಾಡು ಬರುತ್ತಿದ್ದು ಯಾರಾದರು ಹೇಳದಿದ್ದರೆ ಆಗುವ ತೊಂದರೆಯನ್ನು ವಿವರಿಸುವುದಕ್ಕಾಗಿ ಇನ್ನೊಂದು ಕಥೆ ಇದೆ. ಅದೇನೆಂದರೆ;

ಒಬ್ಬ ಹೆಂಗಸಿಗೆ ಒಂದು ಕಥೆ ಹಾಗೂ ಹಾಡು ಗೊತ್ತಿತ್ತು. ಆದರೆ ಅವಳು ಅವನ್ನು ಎಂದೂ ಯಾರ ಮುಂದೂ ಹೇಳಿರಲಿಲ್ಲ. ಅವಳಲ್ಲಿ ಬಂಧಿಯಾಗಿದ್ದ ಈ ಕಥೆ ಮತ್ತು ಹಾಡುಗಳಿಗೆ ಬಿಡುಗಡೆ ಬೇಕಾಗಿತ್ತು. ಒಂದು ದಿನ ಕಥೆ ಅವಳಿಂದ ಬೇರ್ಪಟ್ಟು ಒಂದು ಜೊತೆ ಚಪ್ಪಲಿಯ ರೂಪತಾಳಿ ಮನೆಯ ಹೊರಗಡೆ ಕುಳಿತಿತ್ತು. ಹಾಡು ಅಂಗಿಯ ರೂಪತಾಳಿ ಗೂಟಕ್ಕೆ ತಗುಲಿಕೊಂಡಿತು. ಅವಳ ಗಂಡ ಹೊರಗಿನಿಂದ ಬಂದವನು ಚಪ್ಪಲಿ ಮತ್ತು ಅಂಗಿಗಳನ್ನು ನೋಡಿ ಯಾರೋ ಪರ ಪುರುಷನೆಂದು ಸಂದೇಹಪಟ್ಟು, ಹೆಂಡತಿ ಜೊತೆ ಜಗಳವಾಡಿ, ಮುನಿಸಿಕೊಂಡು ಊರ ಮುಂದಿನ ಹನುಮಪ್ಪನ ಗುಡಿಗೆ ಹೋಗಿ ಮಲಗಿಕೊಂಡ. ಇತ್ತ ಹೆಂಡತಿ ಇವು ಎಲ್ಲಿಂದ ಬಂದವು ಎಂದು ಯೋಚಿಸಿ, ಉತ್ತರ ಕಾಣದೆ ಬಹಳ ಹೊತ್ತಿನ ನಂತರ ದೀಪವಾರಿಸಿ ಮಲಗಿಕೊಂಡಳು. ಆ ಊರಿನ ಎಲ್ಲರ ಮನೆಯ ಜ್ಯೋತಿಗಳೂ ಆರಿಸಿದ ನಂತರ ಹನುಮಪ್ಪನ ಗುಡಿಗೆ ಬರುತ್ತಿದ್ದವು. ತಡವಾಗಿ ಬಂದ ಈ ಮನೆಯ ದೀಪವನ್ನು ಆರಿಸುವುದು ಯಾಕೆ ತಡವಾಯಿತು ಎಂದು ಕೇಳಿದಾಗ ಅದು ನಡೆದ ಕಥೆಯೆಲ್ಲವನ್ನೂ ತಿಳಿಸಿತು. ನಿದ್ದೆ ಬಾರದೆ ಹೊರಳಾಡುತ್ತಿದ್ದ ಗಂಡ ಈ ಕಥೆ ಎಲ್ಲವನ್ನೂ ಕೇಳಿಸಿಕೊಂಡ. ಅವನ ಸಂದೇಹ ದೂರವಾಯಿತು. ಬೆಳಗಿನ ತನಕ ಅಲ್ಲೆ ಮಲಗಿದ್ದು ನಂತರ ಮನೆಗೆ ಬಂದ. ಆ ಕಥೆ ಮತ್ತು ಹಾಡಿನ ಬಗ್ಗೆ ಹೆಂಡತಿಯನ್ನು ವಿಚಾರಿಸಿದ. ಆದರೆ ಅವಳಿಗೆ ಅವು ಮರೆತು ಹೋಗಿದ್ದವು (‘ದೀಪ ಮಾತಾಡಿತು’., ಸಿಂಪಿ ಲಿಂಗಣ್ಣ (ಸಂ) ಉತ್ತರ ಕರ್ನಾಟಕದ ಜನಪದ ಕಥೆಗಳು).

ಜನಪದರು ಕಥೆಗಳು ಭೂಮಿಗೆ ಏಕೆ ಬಂದವು ಅವುಗಳು ಹೇಗೆ ಹುಟ್ಟಿದವು, ಅವುಗಳು ಹೊಲೆಯರ ಹತ್ತಿರವೇ ಜಾಸ್ತಿ ಏಕೆ ಇವೆ ಎಂಬುದರ ಬಗೆಗೆ ಡಾ. ಆರ್. ಶೇಷಶಾಸ್ತ್ರೀಯವರು ‘ಹರತಿಸಿರಿ’ ಗ್ರಂಥದಲ್ಲಿ ‘ಕಥೆಯ ಕತೆಗಳು’ ಎಂಬ ಶೀರ್ಷಿಕೆಯಲ್ಲಿ ಸಂಗ್ರಹಿಸಿರುವ ಕಥೆ ಉತ್ತಮ ಉದಾಹರಣೆಯಾಗಿದೆ.

ಈ ಭೂಲೋಕದಾಗ ಜನಗಳು ಕೆಲಸ ಮಾಡಿಕೊಂಡು ತಮ್ಮ ಬೇಕಾದ ಅದೂ ಇದು ಸರಿಮಾಡಿ ಕೊಣ್ಣೋದ್ರಾಗ ಬಿಡುವೆ ಇತ್ತಾ ಇರಲಿಲ್ಲ. ಎಲ್ಲಾ ಒಂದು ಅದ್ದು ಬಸ್ತಕ ಬಂದ ಮ್ಯಾಕ್ಕ ರವಸ್ಟು ಟೈಮು ಸಿಕ್ತು. ನಾನು ಏಳ್ತಾ ಇರೋದು ಈ ಭೂಲೋಕ ಉಟ್ಟಿದಾಗಿನ ಸಮಾಚಾರ. ಬಿಡುವು ಇದ್ದಾಗ ಅದೂ ಇದೂ ಮಾತಾಡ್ತ ಇದ್ರು. ಎಷ್ಟು ದಿನಾ ಅಂತ ಅದೂ ಇದೂ ಅಂತ ಮಾತಾಡೋದು ಅವ್ರ ಮನೆ ಇಚಾರಗಳನ್ನು ಹೆಚ್ಚಿಗೆ ಮಾತಾಡೋದು ಮೈಕ ಒಳೇದೆಲ್ಲಾ ಅಂತ ಕೂಡ ತಿಳಿದೋಯ್ತು. ಅಂದ್ರ ನಿಂಕ ಅವರು ದೇವರನ್ನ ತಬುಸು ಮಾಡಿದ್ರು ಅವಾಗ ದೇವ್ರಮ “ನಿಮ್ಕ ಬೇಜಾರು ಆದ್ರೆ ನಮ್ಮ ದೇವಾನು ದೇವ ಲೋಕದಾಗ ಬೆಮ್ಮಂಡ್ಲಗಾ ಬಿದ್ದಿರೋ ಕಥೆಗಳ್ನ ನಿಮ್ಗ ಎಷ್ಟು ಬೇಕೋ ಅಷ್ಟು ತಕ್ಕೊಂಡೋಗರ‍್ಯಾ” ಅಂತ ವರಾ ಕೊಟ್ನು. ಸರಿ ಇವ್ರು ಅವನು ಏಳಿದ್ದೇ ತವ್ರು ಎಲ್ಡು ಬಂಡಿಗಳ್ನ ಸರಿಮಾಡಿಕೊಂಡು ವೊಲ್‌ಟ್ರು, ಎಲ್ಡೂ ಗಾಡಿಗಳ್ಗಾ ಶೆನ್ನಾಗಿ ತುಂಬಿಸಿದರು. ಜನಗಳು ಮೊದಲೇ ಆಶಿಪುರುಕ್ರು, ಪುಗಸಟ್ಟೆ ಶಿಕ್ತು ಅಂದ್ರೆ ಕೇಳಬೇಕಾ. ಎಂತಾ ಕಥೆಗಳು ಏನು? ಎತ್ತುಗಳು ಎಳಿತಾವ, ಅಚ್ಚು ತಡದಾತಾ ಈ ಭಾರಾನಾ ಅಂತ ಕೂಡಾ ನೋಡುಲ್ಲ. ಪುಲ್ ಲೋಡ್ ಮಾಡಿದ್ರು, ಆ ಎತ್ತುಗಳು ಎಳಿಲಾರದಾ ಎಳಕಂಡು ಬತ್ತಾ ಅವೆ. ಎಲ್ಲಿಗಂಟಾ ಬಂದವು ಊರಗಂಟಾ ಬಂದುವು. ಮಾದಿಗರ ಮನೆಗಳ ತಾವ ಅದೆ ಗಾಡಿ ಅನುವಾಗ ಒಂದು ಗಾಡಿ ಅಚ್ಚು ಮುರ‍್ದುವೋಯ್ತು ಸರಿ, ಈ ದಾರಿ ಸರಿಗಿಲ್ಲ ಅಂತಾ ಇನ್ನೊಂದು ಗಾಡಿನಾ ಅಂಗಾಸಿವೊಡಕ್ಕಂಡು ಬಂದ್ರು. ಅದೂ ವೊಲೇರ ಮನೆಗ್ಳ ತಾವು ಅಚ್ಚು ಮುರುದು ಕುಂತಕಂಡ್ತು. ಸರಿ ಇನ್ನೇನು ಮಾಡೋದು ಸಂಸಾರಿಗಳ, ಅಷ್ಟರಾಗ ಬೇಜಾರಾಗಿತ್ತು. ಎಲ್ಲೂರೂ ಎತ್ತಿಕೊಂಡುತಕ್ಕಂಡುವೋದ್ರು. ಬಾಕಿ ಕತೆಗಳ್ನವೊಲೇರೂ ಎತ್ತಿಕೊಂಡುವೋದ್ವಿ. ಅದ್ರಕೇ ಸ್ವಾಮಿ ಸಂಸಾರಿಗಳ ಜನ್ನ ನಾವೇ ಎಚ್ಚುಗಾ ಕತೆಗಳು ಏಳಾದು ಎಂದು ತನ್ನ ಕತೆಯನ್ನು ಮುಗಿಸಿ, ತನ್ನ ತಾಯಿ ಆಣೆಯಾಗಿ ಈ ಕತೆ ಸತ್ಯವೆಂದು ಹೇಳಿದ.

ಜನಪದರ ಅನುಭವ ವಾಣಿಯಾದ ಗಾದೆ ಜಾನಪದದ ಜನಪ್ರಿಯ ಪ್ರಕಾರಗಳಲ್ಲೊಂದು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಗಾದೆ ಮುಟ್ಟದ ಬದುಕಿನ ಭಾಗವಿಲ್ಲ. ಇಂತಹ ಗಾದೆಗಳ ಬಗೆಗೂ ಜನಪದರು ಜನಜಾನಪದವನ್ನು ಸೃಷ್ಟಿಸಿದ್ದಾರೆ. ಗಾದೆ ಎಂದರೆ ಏನು ಎಂಬುದನ್ನು ಇನ್ನೊಂದು ಗಾದೆಯ ಮೂಲಕ ಹೇಳಿದ್ದಾರೆ. ಇವನ್ನು ಗಾದೆಗಳನ್ನು ಕುರಿತ ಜನಜಾನಪದ ಎನ್ನಬಹುದು.

‘ನಿಜವಲ್ಲದ ಗಾದೆಯಿಲ್ಲ’- ಸ್ಪೆಯಿನ್

‘ಗಾದೆ ಎಂದೂ ಸುಳ್ಳು ಹೇಳುವುದಿಲ್ಲ’ – ಜರ್ಮನ್

‘ಗಾದೆಯಲ್ಲಿ ಹುಸಿಯಿದ್ದರೆ ಹಾಲಿನಲ್ಲಿ ಹುಳಿ ಇರುತ್ತದೆ’- ಮಲೆಯಾಳಂ

‘ಕೆಲವರು ಹೇಳಿದ್ದು ನಿಜವಿರಬಹುದು, ಎಲ್ಲರೂ ಹೇಳಿದ್ದು ನಿಜವಿರಬೇಕು’- ಇಂಗ್ಲೀಷ್

‘ಸಣ್ಣಸೂಕ್ತಿ ಬ್ರಹ್ಮಾಂಡದಷ್ಟು ವಿವೇಕವನ್ನು ಹೊತ್ತಿರುತ್ತದೆ’. -ಗ್ರೀಸ್

‘ದೈನಂದಿನ ಅನುಭವಗಳ ಹೆಣ್ಣು ಮಕ್ಕಳೇ ಗಾದೆಗಳು’ – ಹಾಲೆಂಡ್

‘ಮಾನವನ ಯೋಚನೆಯೇ ಗಾದೆಯಾಗಿ ಹೊಮ್ಮುತ್ತದೆ’ – ಸ್ವೀಡನ್

‘ಗಾದೆಗಳ ಬಗ್ಗೆ ಗಮನವಿಲ್ಲದವನು ತಪ್ಪುಗಳನ್ನು ತಪ್ಪಿಸಲಾರ’ – ತುರ್ಕಿ

‘ಗಾದೆ ತಿಳಿದ ವಿವೇಕಿ ಜಗಳ ಬಿಡಿಸುತ್ತಾನೆ’ – ಆಫ್ರಿಕನ್

‘ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ’ – ಕನ್ನಡ

‘ಗಾದೆ ಮಾತು ವೇದಕ್ಕೆ ಸಮಾನ’ – ಕನ್ನಡ

ಜನಪದ ಕಲೆಗಳನ್ನು ನೋಡಿದರೆ, ಆಡಿಸಿದರೆ ಒಳ್ಳೆಯ ಅಥವಾ ಕೆಟ್ಟ ಫಲಗಳು ಸಿಗುತ್ತವೆ ಎಂಬ ಹಿನ್ನಲೆಯಲ್ಲಿ ನಂಬಿಕೆಗಳಿರುವುದನ್ನು ಕಾಣಬಹುದು. ಈ ನಂಬಿಕೆಗಳೇ ಜನಪದ ಕಲೆಗಳ ಬಗೆಗಿರುವ ಜನಜಾನಪದ. ಉದಾಹರಣೆಗೆ ಕಿಳ್ಳೇಕ್ಯಾತರ ಆಟ, ತೊಗಲು ಗೊಂಬೆ ಆಟವನ್ನು ಆಡಿಸುವುದರಿಂದ ಮಳೆ ಬೆಳೆಗಳು ಚೆನ್ನಾಗಿ ಬರುತ್ತವೆಂಬ ನಂಬಿಕೆ ಇದೆ. ತೊಗಲುಗೊಂಬೆ ಆಟ ಜನಪದ ಕಲೆಗಳಲ್ಲಿ ಒಂದು ನಾಟಕ ಪ್ರಕಾರ. ಸೂತ್ರದಗೊಂಬೆ ಆಟದಂತೆ ಇದೂ ಒಂದು ಆಕರ್ಷಕ ಕಲಾ ಪ್ರಕಾರ. ಇದನ್ನು ಆಡಿಸುವವರು ನಿರ್ಧಿಷ್ಟವಾದ ಒಂದು ಜಾತಿಗೆ ಸೇರಿದ ಜನ. ಇವರನ್ನು ಗೊಂಬೆರಾಮರು, ಕಿಳ್ಳೆಕ್ಯಾತರು ಅಥವಾ ಕಿಳ್ಳೇಕ್ಯಾತರು ಎಂದು ಕರೆಯುತ್ತಾರೆ. ಇವರದು ಅಲೆಮಾರಿ ಜೀವನ. ಗೊಂಬೆ ಆಟ ಆಡಿಸುವುದೇ ಇವರ ವೃತ್ತಿ. ಗೊಂಬೆ ಆಟ ಆಡಿಸಿದರೆ ಮಳೆ ಬರುತ್ತದೆ ಎಂಬ ಪ್ರಬಲವಾದ ನಂಬಿಕೆ ಸಮಾಜದಲ್ಲಿ ಬೇರೂರಿದ್ದಾಗ ಇವರಿಗಿದ್ದ ಸ್ಥಾನಮಾನ ಹೆಚ್ಚಿನದಾಗಿತ್ತು. ಅತ್ಯಂತ ಗೌರವದಿಂದ ಇವರನ್ನು ಬರಮಾಡಿಕೊಂಡು, ಅವರಿಂದ ಈ ಕಲೆಯನ್ನು ಪ್ರದರ್ಶಿಸುತ್ತಿದ್ದರು. ದನಗಳ ರೋಗವೂ ಗುಣವಾಗುತ್ತದೆ ಎಂಬ ಭಾವನೆಯ ಜೊತೆಗೆ ಊರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯೂ ಇತ್ತು.

ಹಿಂದೆ ಯಕ್ಷಗಾನವನ್ನು ನೋಡುವದರಿಂದ ಕೇಡುಂಟಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಮೇಲ್ಜಾತಿಗಳಲ್ಲಿ ನಂಬಿಕೆಗಳು ಉಂಟಾಗಿರುವುದನ್ನು ಕಾಣಬಹುದು. ಅಲ್ಲದೆ ದಕ್ಷಿಣ ಕನ್ನಡದಲ್ಲಿ ಹಿಂದೆ ಮತ್ತು ಕೆಲವೆಡೆ ಈಗಲೂ ಪ್ರಚಲಿತವಾಗಿರುವ ನಂಬಿಕೆ ಏನೆಂದರೆ, ಒಂದು ಯಕ್ಷಗಾನವನ್ನು ನೋಡಿದರೆ ಏಳುರಂಗ ಪೂಜೆಗಳನ್ನು ನೋಡಬೇಕು. ಇದಕ್ಕೆ ವಿರುದ್ಧವಾದ ಭಾವನೆಯು ಬುರ‍್ರಕಥೆಯ ಬಗೆಗೆ ಇರುವುದನ್ನು ಕಾಣಬಹುದು. ಬುರ‍್ರಕಥೆಯವರಿಗೆ ಆಹ್ವಾನ ಕೊಟ್ಟು ಹಬ್ಬದ, ದೇವರ ಉತ್ಸವ ಸಂದರ್ಭದಲ್ಲಿ ಬುರ‍್ರಕಥೆಯನ್ನು ಮಾಡಿಸುವುದರಿಂದ ಮಳೆ ಬರುತ್ತದೆ ಹಾಗೂ ಊರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ.

ಜನಪದ ಕಲೆಗಳ ಬಗೆಗೆ ಇರುವ ನಂಬಿಕೆಯು ಗಾದೆಗಳ ರೂಪದಲ್ಲೂ ಪ್ರಕಟವಾಗಬಹುದು. ಹೀಗೆ ಪ್ರಕಟವಾದ ಅಂಶವೇ ಆ ಪ್ರಕಾರದ ಜನಜಾನಪದವಾಗಿರುತ್ತದೆ. ಉದಾಹರಣೆಗೆ ‘ದಾಸರಾಟ ಆಟವಲ್ಲ, ದೋಸೆ ಊಟ ಊಟವಲ್ಲ’ ಎಂಬ ಗಾದೆಯು ದಾಸರಾಟದ ಬಗೆಗೆ ಇರುವ ನಂಬಿಕೆ. ಅಂದರೆ ದಾಸರಾಟ ಪೂರ್ಣ ಪ್ರಮಾಣದ, ತೃಪ್ತಿ ಕೊಡುವಂಥ ಪ್ರಕಾರವಲ್ಲ ಎಂಬುದನ್ನು ಗಾದೆಯ ಮೂಲಕ ಹೇಳಿದ್ದಾರೆ. ಹಾಗೆಯೇ ‘ಆಟಾಟಕೆಲ್ಲ ಕೋಲಾಟ’ ಎಂಬ ಗಾದೆ ಕೋಲಾಟದ ಬಗೆಗೆ ಹೇಳುತ್ತದೆ. ಇವು ಜನಪದ ಆಟಗಳನ್ನು ಕುರಿತಂತೆ ನಂಬಿಕೆಗಳು ಹಾಗೂ ಅದರ ಜನಜಾನಪದ ಆಗುತ್ತವೆ.

‘ಅಣ್ಣೆ ಕಲ್ಲಾಡಿದರೆ ಮಳೆ ಬರುವುದಿಲ್ಲ’

ಇದೊಂದು ಬಗೆಯ ಜನಪದ ಆಟ. ಇದನ್ನು ಮನೆಯೊಳಗೆ ಮತ್ತು ಹೊರಗೂ ಕೂಡ ಆಡಬಹುದು. ಇದನ್ನು ಆಡಿದರೆ ಮಳೆ ಬರುವುದಿಲ್ಲ ಎಂಬ ನಂಬಿಕೆ ಇರುವುದರಿಂದ, ಹಿರಿಯರು ಆಡುವಾಗ ಕಿರಿಯರನ್ನು ಸಹಜವಾಗಿ ಗದರಿಸುತ್ತಾರೆ.

‘ರಾತ್ರಿ ಹೊತ್ತು ಚೌಕಾಬಾರ ಆಟ ಆಡಬಾರದು’

ಚೌಕಾಬಾರ ಒಂದು ಬಗೆಯ ಆಟ. ಇದರಲ್ಲಿ ನಾಲ್ಕು ಮಂದಿ ಅಥವಾ ಇಬ್ಬರು ಕುಳಿತು ಆಟ ಆಡಬಹುದು. ಹಾಗೆಯೇ ಇದರಲ್ಲಿ ನಾಲ್ಕು ಮನೆ ಆಟ, ಏಳುಮನೆ ಆಟ ಮುಂತಾಗಿ ಬಗೆಗಳಿವೆ. ಕವಡೆಯ ಸಹಾಯದಿಂದ, ಇಲ್ಲವೆ ಹುಣಿಸೇ ಬೀಜದ ಒಂದು ಭಾಗವನ್ನು ಬೆಳ್ಳಗಾಗುವಂತೆ ಉಜ್ಜಿ ಆಡುವ ಈ ಆಟದಲ್ಲಿ ಮನೆಗಳನ್ನು ಸುತ್ತಿಕೊಂಡು ಎದುರಾಳಿಯ ಕಾಯಿಯನ್ನು ಹೊಡೆದು ಮೊದಲು ಕಾಯಿಯನ್ನು ಹಣ್ಣು ಮಾಡುವವರು ಗೆದ್ದ ಹಾಗೆ. ಇದನ್ನು ರಾತ್ರಿಯ ಕಾಲದಲ್ಲಿ ಮನೆಯಲ್ಲಿ ಆಡಿದರೆ ‘ತಿಗಣಿ ಹಾಗೂ ಸಾಲ’ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ಜನಪದರಲ್ಲಿ ಮದುವೆ ಬಗೆಗೆ ಇರುವ ಗಾದೆಗಳು ಈ ರೀತಿಯಾಗಿದೆ. ಈ ಗಾದೆಗಳು ಮದುವೆಯ ಬಗೆಗಿನ ಜನಜಾನಪದ ವಾಗುತ್ತವೆ.

‘ಮದುವೆ ಮಾಡಿನೋಡು ಮನೆ ಕಟ್ಟಿನೋಡು’

‘ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು’

‘ಆಗೋದೆ ಮದ್ವೆ ವಾಲಗ ಯಾಕೆ?’

ಜನಪದರ ಜೀವನದಲ್ಲಿ ಹಬ್ಬ ಹರಿದಿನಗಳು ಪ್ರಮುಖವಾದ ಪಾತ್ರವಹಿಸುತ್ತವೆ. ಈ ಹಬ್ಬಗಳನ್ನು ಏಕೆ ಮಾಡಬೇಕು. ಏಕೆ ಮಾಡಬಾರದು ಎಂಬುದರ ಬಗೆಗೆ ನಂಬಿಕೆಗಳು ಸಿಗುತ್ತವೆ. ಇವುಗಳು ಆಯಾ ಹಬ್ಬದ ಜನಜಾನಪದವಾಗಿವೆ. ಉದಾಹರಣೆಗೆ, ಪೂರ್ವಿಕರು ಮತ್ತು ವಂಶಜರ ಸಂಬಂಧ ಬೆಸುಗೆಯ ಫಲವಾಗಿ ಅನೇಕ ನಂಬಿಕೆಗಳು ಹುಟ್ಟುತ್ತವೆ. ಪೂರ್ವಿಕರ ಆತ್ಮಸಂತೃಪ್ತಿಪಡಿಸಿ ಅವರ ಆಶೀರ್ವಾದಕ್ಕೊಳಗಾಗಬೇಕಾದರೆ ಪಿತೃ ಪಕ್ಷವನ್ನು ಆಚರಿಸಬೇಕು. ಹಾಗೆಂದೇ; ‘ಮಗನನ್ನು ಮಾರಿಯಾದರೂ ಮಾರ‍್ಲಮಿ ಮಾಡು’ ಎಂಬ ನಂಬಿಕೆ ಹುಟ್ಟಿರುವುದು. ಚೀನಾದಲ್ಲಿ ಹಬ್ಬಗಳಲ್ಲಿ ಪಿತೃದೇವತೆಗಳು ಮನೆಗೆ ಆಗಮಿಸುತ್ತಾರೆಂಬ ನಂಬಿಕೆ ಇದೆ. ಈ ನಂಬಿಕೆ ನಮ್ಮಲ್ಲೂ ಇದೆ. ಯುಗಾದಿ, ಕಾರಹುಣ್ಣಿಮೆ ಮತ್ತು ದೀಪಾವಳಿಯ ಬಗ್ಗೆಯೂ ಗಾದೆಯನ್ನು ಕಾಣಬಹುದು. ಇವುಗಳು ಹಬ್ಬಗಳ ಬಗೆಗಿನ ಜನಜಾನಪದವಾಗುತ್ತವೆ.

‘ಉಂಡದ್ದು ಉಗಾದಿ, ಮಂದದ್ದು ದೀವಳಿಗೆ’

‘ಕಾರಹುಣ್ಣಿಮೆ ಕರಕಂಡು ಬಂತು, ಉಗಾದಿ ಉಡಿಕ್ಕೊಂಡು ಹೋತು’

‘ಗಂಡಸ್ರಿಗ್ಯಾಕೆ ಗೌರಿ, ಹೆಂಗಸ್ರಿಗ್ಯಾಕೆ ಯುಗಾದಿ’