ಹಬ್ಬ ಹರಿದಿನಗಳು ತಮ್ಮದೇ ಆದ ಜನಜಾನಪದವನ್ನು ಹೊಂದಿರುವ ಹಾಗೆ ಜಾತ್ರೆ ಮತ್ತು ತೇರುಗಳು ಸಹ ತಮ್ಮದೇ ಆದ ಜನಜಾನಪದವನ್ನು ಸೃಷ್ಟಿಸಿಕೊಂಡಿವೆ. ಈ ಜನ ಜಾನಪದವು ನಂಬಿಕೆ, ಗಾದೆ ಮತ್ತು ಒಡಪುಗಳ ರೂಪದಲ್ಲಿ ಇರುವುದನ್ನು ಗಮನಿಸಬಹುದು. ‘ಬಹಳ ದಿನಗಳ ತನಕ ಮದುವೆಯಾಗದೇ ಉಳಿದ ಹೆಣ್ಣು ಗಂಡುಗಳು ಯಾರಿಗೂ ಹೇಳದೇ ಕೇಳದೇ ಕೊಟ್ಟೂರು ಜಾತ್ರೆಗೆ ಹೋಗಿ ಬಂದರೆ ಬೇಗನೇ ಮದುವೆಯಾಗುತ್ತಾರೆ’ ಎಂಬುದು ಜನಪದ ನಂಬಿಕೆ. ಯಾರಾದರೂ ಹೇಳದೇ ಕೇಳದೇ ಪರವೂರಿಗೆ ಹೋಗಿ ಬಂದರೆ ಏನು ಕೊಟ್ಟೂರು ಜಾತ್ರೆಗೆ ಹೋಗಿ ಬಂದಿರೋ ಎಂದು ಕೇಳುವುದುಂಟು. ಜಾತ್ರೆಯ ಬಗೆಗೆ ಇರುವ ಗಾದೆಗಳು ಈ ತೆರನಾಗಿ ಕಂಡುಬರುತ್ತಿವೆ.

‘ಆದಂಗಾತು ಮಾದಪ್ಪನ ಜಾತ್ರೆ’

‘ಜನ ಮರಳೋ ಜಾತ್ರೆ ಮರಳೋ’

‘ಜನಾ ಸೇರಿದರ ಜಾತ್ರಿ’

‘ಜಾತ್ರೇಲಿ ಜನ ಹೆಚ್ಚು ಜಗಳಗಂಟೆಗೆ ಜಂಬ ಹೆಚ್ಚು’

‘ತೇರ ಆದ್ಮೇಲೆ ಜಾತ್ರೆಗೆ ಹೋಗಬೇಡ’

‘ಮೇಲು ಕೋಟೆ ಜಾತ್ರೇಲಿ ಬೋಳು ದಾಸಯ್ಯನ ಕಂಡ್ಯಾ ಅಂದನಂತೆ’

‘ಹತ್ತರಗೂಡ ಹನ್ನೊಂದು, ಪರಸೀ ಕೂಡ ಗೋವಿಂದ’

‘ಹಬ್ಬದೂಟ ಜಾತ್ರೆಯ ನೋಟ’

“ಹೆಂಡತಿ ಕರ‍್ಕಂಡು ಜಾತ್ರೆಗೆ ಹೋಗಬ್ಯಾಡ

ಮಕ್ಕಳ ಕರ‍್ಕಂಡು ಮದುವೆಗೆ ಹೋಗಬ್ಯಾಡ”

‘ವರುಷ ಹೆಚ್ಚಾದರೆ ಪರಸೆ ಸಂಗಡ ಹೋಗಲಿಕ್ಕೇನು’

‘ಜಾತ್ರೆಗೆ ಹೋದರೂ ಪಾತ್ರೆ ಬಿಡಲಿಲ್ಲ’

‘ಜಾತ್ರೆಗೆ ಹೋದವರು ಪಾತ್ರೆ ತರದೆ ಬರಬಾರದು’

‘ಜಾತ್ರೆಯೂ ಮುಗೀತು ಧೋತ್ರವೂ ಹರೀತು’

‘ಜಾತ್ರೆಗಿಂತ ಮೊದಲೆ ಗಂಟುಕಳ್ಳರು ಸೇರಿದರು’

‘ಕುಲಕ್ಕೊಂದು ಜಾತ್ರೆ ಜನಕ್ಕೊಂದು ಬುದ್ಧಿ’

‘ಕೇರಿಗೊಬ್ಬ ಹನುಮಪ್ಪ ಊರಿಗೊಂದು ಜಾತ್ರೆ’

‘ಮೂಣಿ, ಓಣಿ, ದೋಣಿ ಮೂರು ಇಲ್ಲದಿದ್ದರೆ ಕಾಶೀಯಾತ್ರೆಗೆ ಹೋಗಿ ಬಂದೇನು’

‘ಜನರಿದ್ದರೆ ಜಾತ್ರೆ’

‘ಜಂಬ ಮಾಡಿ ಜಾತ್ರೆಗೆ ಹೋದರೆ ಕೂಸಿನ ಕೈಯಲ್ಲಿ ಕಾಸಿನ ಕಡಲೆ ಇಲ್ಲ’

‘ಜಾತ್ರೆ ಊಟದಲ್ಲಿ ಪಾತ್ರೇನೂ ಕೊಟ್ಟಾರೆ’

‘ಜಾತ್ರೆ ಕಳೆದ ಮೇಲೆ ಹೋದೋರು ಉಂಡೆಲೆ ಬಿಟ್ಟನ್ನ ನೋಡಾಕೆ ಹೋದಾರೆ’

‘ಜಾತ್ರೆಗೆ ಹೋಗೋನು ಜಾಣ ದಿಬ್ಬಣಕ್ಕೆ ಹೋಗೋನು ಕೋಣ’

‘ಜಾತ್ರೆಗೋಗಿ ಜವನ ಕಾಣದೆ ಬಂದ ಮದುವೆಗೋಗಿ ಅನ್ನಕಾಣದೆ ಬಂದ’

‘ತೇರಾದ ಮೇಲೆ ಜಾತ್ರೆ ಸೇರಿತು’

‘ತೇರಾಯಿತು ಹೇರು ಮಾತ್ರ ತಂದೆ’

‘ತೇರಿಗೆ ಹಣ ತಪ್ಪಿದರೆ ತರುಮಿಕೊಂಡು ಬರ‍್ತಾರೆ’

‘ತೇರಿಗೆ ಹೋದೋರ್ ತೀರ್ ನೋಡು’

‘ತೇರು ಎಳೀತು ದವನ ಮಾರಿತು’

‘ತೇರು ಹರಿದ ಮೇಲೆ ಪರಿಸೆಗೇಣು ಕೆಲಸ’

‘ಪರಿಸೆಯಲ್ಲಿ ತೆಗೆದ ವರಸೇನ’

‘ಮನೆದೇವರ ಮೊಟ್ಟೆ ಕಟ್ಟಿ ಹೊರಗಿನ ದೇವರ ಜಾತ್ರಿಗೆ ಹೋದ’

‘ಮನೆದೇವರು ಮರುಗ್ತಿತ್ತು ಹೆರವರ ದೇವರಿಗೆ ಹೆಡಿಗೆ ಜಾತ್ರೆ’

‘ಹೋಳಿಗೆ ಇಲ್ಲದೆ ಹಬ್ಬವಿಲ್ಲ ರಥವಿಲ್ಲದ ಜಾತ್ರೆಯಿಲ್ಲ’

‘ಜಾತ್ರೆ ಕಳೆದ ಮೇಲೆ ಪರಿಸೆಗೇನು ಅಗ್ಗ’

‘ಹೊಂಗೆ ಅಮ್ಮನ ಜಾತ್ರೆಗೆ ಹೋಗಿ ಹಂಗೂ ಕೆಟ್ಟೆ ಹಿಂಗೂ ಕೆಟ್ಟೆ’

ಜನಪದರು ದೈವಗಳಿಗೆ ಹೊರುವ ಹರಕೆಗಳಿಗೆ ಸಂಬಂಧಿಸಿದ ಜನಜಾನಪದವನ್ನು ಕಾಣಬಹುದು. ಸಾಮಾನ್ಯವಾಗಿ ಮನೆಯಲ್ಲಿ ಏನಾದರೂ ಕಷ್ಟಬಂದರೆ ‘ಉಪ್ಪು ಒಪ್ಪಿಸುವ’ ಹರಕೆಯನ್ನು ಹೇಳಿಕೊಳ್ಳಲಾಗುತ್ತದೆ. ‘ಉಪ್ಪು ಕರಗಿದಂತೆ ಕಷ್ಟ ಕರಗಲಿ’ ಎಂದು ಅವರು ಆಸಿಸುತ್ತಾರೆ. ಹೀಗೆ ಹರಕೆಯಾಗಿ ಒಪ್ಪಿಸಿದ ಉಪ್ಪನ್ನು ಯಾರೂ ಬಳಸುವುದಿಲ್ಲ. ‘ಉಪ್ಪಿನ ಹರಕೆಯಿಂದ ಮುಪ್ಪುದೂರ’ ಎಂಬ ಗಾದೆ ಇದೆ.

ಹಂಪೆಯಲ್ಲಿ ಜರುಗುವ ಫಲಪೂಜೆ ಮತ್ತು ಜಾತ್ರೆಗೆ ಸಹ ಜನ ಜಾನಪದವನ್ನು ಗಾದೆಯ ರೂಪದಲ್ಲಿರುವುದನ್ನು ನೋಡಬಹುದು.
ಪಡೆದವರಿಗೆ ಫಲಪೂಜೆ
ಪಾಪಿಗೆ ಹಂಪಿಜಾತ್ರೆ

ಹೆಣ್ಣು ಮಕ್ಕಳು ಗಂಡನ ಹೆಸರು ಹೇಳುವಾಗ ಒಡಪು ಹಾಕಿ ಹೇಳುತ್ತಾರೆ. ಅಂತಹ ಒಂದು ಒಡಪಿನಲ್ಲಿ ಜಾತ್ರೆಯ ಬಗೆಗಿನ ಜನಜಾನಪದವಿರುವುದನ್ನು ಗುರುತಿಸಬಹುದು.

“ಜಾತ್ರೆಯಲ್ಲಿ ಗೋಕರ್ಣ ಮೇಲು
ರಾತ್ರಿಯಲ್ಲಿ ಶಿವರಾತ್ರಿ ಮೇಲು
ನಾಕ ಮಂದ್ಯಾಗ ನನ…… ಮೇಲು”

ಜನಪದರಲ್ಲಿರುವ ನಂಬಿಕೆ, ಆರಾಧನೆ ಮುಂತಾದವುಗಳಿಗೂ ಜನಜಾನಪದವನ್ನು ನೋಡಬಹುದು. ಉದಾಹರಣೆಗೆ ನಂಬಿಕೆ ಬಗ್ಗೆ ‘ನಂಬಿಕೆ ಬೆಟ್ಟವನ್ನಾದರೂ ಕದಲಿಸಬಲ್ಲುದು’ ಎಂಬ ನಂಬಿಕೆಯೇ ಇದೆ. ಈ ಮೊದಲೆ ಕಥೆಗಳ ಬಗ್ಗೆ ಇರುವ ಜನಜಾನಪದವನ್ನು ಹೇಳುವಾಗ ಆರಾಧನೆಯ ಸಂದರ್ಭದಲ್ಲಿ ಹೇಳುವ ಕಥೆಗಳನ್ನು ಕೇಳಿದರೆ ಬರುವ ಲಾಭಗಳ ಬಗ್ಗೆ ಹೇಳಲಾಗಿದೆ. ಹಾಗೆಯೇ ಆರಾಧನೆಯನ್ನು ಮಾಡದಿದ್ದರೆ ಆಗುವ ಹಾನಿ ಅಥವಾ ನಷ್ಟದ ಬಗ್ಗೆ ಭೂತಾರಾಧನೆಯ ಹಿನ್ನೆಲೆಯಲ್ಲಿ ಪ್ರಚಲಿತದಲ್ಲಿರುವ ಕಥೆಯನ್ನು ನೋಡಬಹುದು.

ಭೂತವನ್ನು ಆರಾಧಿಸದೆ ಕಡೆಗಣಿಸಿದರೆ;

“ದೈವ ಮತ್ತೊಟ್ಟು ಬರ್ಕೆಯಲ್ಲಾದರು. ಮಿತ್ತೊಟ್ಟು ಬರ್ಕೆಯಲ್ಲಿ ಜಾರು ಬೈದ್ಯ ಎಂದು ಕರೆದರು. ಜಾರುಬೈದ್ಯ ಇಲ್ಲ, ತಂಗಿ ಜಾಕು ಬೈದ್ಯದಿ ಇದ್ದಾರೆ. ನಿನ್ನ ಅಣ್ಣ ಜಾರುಬೈದ್ಯ ಎಲ್ಲಿಗೆ ಹೋಗಿದ್ದಾರೆ? ಪೂರ್ವದಿಕ್ಕಿನ ಈಚಲಿನ ಮೂರ್ತೆಯ ಕೆಲಸಕ್ಕೆ ಹೋಗಿದ್ದಾನೆ ಜಾರು ಬೈದ್ಯ. ಮಿತ್ತೊಟ್ಟು ಬರ್ಕೆಯನ್ನು ಹಿಂದಕ್ಕೆ ಬಿಟ್ಟರು. ಮಾವಿನ ಕಟ್ಟೆಯಲ್ಲಿ ಕುಳಿತರು. ಅಡ್ಡಣ (ಗುರಾಣಿ)ವನ್ನು ಅಡಿಗೆ ಹಾಕಿ ಕುಳಿತರು. ಸಂಚಿ ಬಿಡಿಸಿ ಕಾಯಿ ತಿಂದರು. ತಿನ್ನುವಾಗ, ಬೈದ್ಯ ಈಚಲು ಮರದ ಒಂದು ಕೈಯ ಮೂರ್ತೆ ಮುಗಿಸಿ ಒಂದು ಮಡಕೆ ಕಳ್ಳು ತೆಗೆದ. ಎರಡು ಈಚಲಿನ ಕೆಲಸ ಮುಗಿಸಿ ಎರಡು ಮಡಕೆ ಇಳಿಸಿದ. ಆಗ, ‘ಓ ಜಾರು ಬೈದ್ಯ’ ಎಂದು ಕರೆದರು. ‘ನಮಗೆ ಬಾಯಾರಿಕೆಯಿಂದ ಗಂಟಲೊಣಗಿದೆ, ಕುಡಿಯಲು ಕಳ್ಳು ಕೊಡು’ ಎಂದು ಕೇಳಿದರು. ‘ದಾರಿಯಲ್ಲಿ ಕೊಡುವ ಕಳ್ಳು ಇಲ್ಲ ನನ್ನಲ್ಲಿ, ದಾನ ಧರ್ಮದ ಕಳ್ಳು ಬೇಕಾದರೆ ನನ್ನ ಮನೆಗೆ ಮಿತ್ತೊಟ್ಟು ಬರ್ಕೆಗೆ ಬರಬೇಕು’ ಎಂದನು ಜಾರುಬೈದ್ಯ. ಇಷ್ಟು ಗರ್ವದ ಬೈದ್ಯನನ್ನೊಮ್ಮೆ ನೋಡಬೇಕು! ಹಳದಿ ಹಕ್ಕಿಯ ಸ್ವರೂಪ ಪಡೆದರು, ಕಳ್ಳು ತುಂಬಿದ ಮಡಕೆಯ ಮೇಲೆ ಕುಳಿತರು, ಉದ್ದಕ್ಕೆ ಕೊಕ್ಕು ನೀಡಿ ಕಳ್ಳಿನ ಬಾರಣೆ ಕೊಟ್ಟರು. ಮಿತ್ತೊಟ್ಟು ಬರ್ಕೆಗೆ ಬಂದ ಜಾರುಬೈದ್ಯ. ಕಳ್ಳಿನ ಮಡಕೆಯನ್ನು ಹಿಡಿಯುವಂತೆ ತಂಗಿಯಲ್ಲಿ ಹೇಳಿದ; ಕಳ್ಳಿನ ಮಡಕೆಯನ್ನು ಹಿಡಿಯುವಾಗ ಮೇಲೆ ನೊರೆ ಉಂಟು ಒಳಗೆ ಕಳ್ಳು ಇಲ್ಲ ಎಂಬುದಾಗಿ ತಂಗಿ ಜಾಕುಬೈದ್ಯದಿ ಹೇಳಿದಳು. ಅಳತೆಯ ಪಾತ್ರೆ ಲೆಕ್ಕದ ಮೊಗೆಯನ್ನು ತರುತ್ತೇನೆಂದು ಜಾರುಬೈದ್ಯ ಒಳಕ್ಕೆ ಹೋದ. ಒಳಗೆ ಹೋಗುವಾಗ ಮೇಲಿನ ದಾರವಂದ ತಲೆಗೆ ತಾಗಿತು. ಹೊಸ್ತಿಲು ಕಾಲಿಗೆ ಎಡವಿತು. ಕವುಚಿ ಕವಿದು ಬಿದ್ದ ಜಾರುಬೈದ್ಯ. ಬಿಳಿಯನ್ನು ಹೊಮ್ಮಿತು. ನೊರೆ ಕಾರಿತು. ತಂಗಿ ಜಾಕು ಅಯ್ಯೋ ದೇವರೇ ಎಂದಳು. ಅಲ್ಲಿಂದು ಬೊಳ್ಳೂರು ಗುತ್ತಿನರ ಮನೆಗೆ ಹೋದಳು. ಬೆಳ್ಳೂರ ಗುತ್ತಿನ ಬಾರಗದಲ್ಲಿ ನಡೆದ ಆಗು ಹೋಗುಗಳನ್ನು ತಿಳಿಸಿದಳು. ಅಡ್ಡಬಿದ್ದಳು, ಕೈಮುಗಿದಳು. ಆಗ ಬೊಳ್ಳೂರಗುತ್ತಿನ ಬೊಳ್ಳುಗರಡ್ಡರು ಬೆಳ್ಳಿ ಗಂಡ್ಯೆಯ ನೀರು ಹಿದರು. ಬಲದ ಕೈಯ ಪಟ್ಟದ ಉಂಗುರ ಹಿಡಿದರು. ಬಂಗಾಡಿಯ ಪ್ರಸಿದ್ಧ ದೈವಗಳು ನೀವು ಹೌದಾದರೆ ‘ಒತ್ತಿಗೆ’ ಚಿತ್ತ ಕೊಡಬೇಕು. ಅರಿಕೆಗೆ ಆಧಾರವಾಗಬೇಕು. ‘ಒತ್ತಿಗೆ’ ಚಿತ್ತವನ್ನೂ ಕೊಡಲಿಲ್ಲ. ಅರಿಕೆಗೆ ಬೆಂಬಲವನ್ನು ಕೊಡಲಿಲ್ಲ. ಜಾರು ಬೈದ್ಯನನ್ನು ಮಿತ್ತೊಟ್ಟು ಬರ್ಕೆಯಲ್ಲಿ ಕೊಂದರು” (ಕೆ. ಚಿನ್ನಪ್ಪಗೌಡ; ೧೯೮೮: ೨೬-೨೭).

ಭಾರತದಲ್ಲಿ ವರ್ಣಾಧಾರಿತವಾದ ಜನಪದಗಳಿದ್ದು, ಕಾಲಾಂತರದಲ್ಲಿ ಜಾತಿ ಜನಪದಗಳಾಗಿ ಮಾರ್ಪಾಡಾಗಿವೆ. ಆದರೂ ವರ್ಣಾಧಾರಿತ ಸೆಲೆಗಳನ್ನು ನಮ್ಮ ಜಾನಪದದಲ್ಲಿ ಈಗಲೂ ಕಾಣಬಹುದು. ಹಾಗೆಯೇ ಜಾತಿ ಜಾತಿಗಳಿಗೇ ಪ್ರತ್ಯೇಕವಾದ ಜಾನಪದವೂ ಸಿಗುತ್ತದೆ. ಹಾಗೆಯೇ ಇಲ್ಲಿ ಜಾತಿ ಜಾತಿಗಳಲ್ಲಿರುವ ಗುಣಾವಗುಣಗಳನ್ನು ಪ್ರತಿನಿಧಿಸುವ ಜಾನಪದ ಪ್ರಕಾರಗಳು ಹೇರಳವಾಗಿ ದೊರೆಯುವುದುಂಟು. ಇದರಿಂದಾಗಿ ಭಾರತದ ಜಾನಪದದಲ್ಲಿ ಜನಜಾನಪದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ‘Indian Folklore, itself identifies various Folk groups and assigns them stereotypical characteristics. This phenomenon is an excellent example for ‘Meta Folklore’. In some Indian languages there are whole genres dedicatied lergely to case or regional stereo types. Proverbs and Jokes also single out various folk categories for comment (Claus and Korom; 1991:25). ಪ್ರತಿಯೊಂದು ಜನಪದದ ಮೇಲೂ ನಾವು ಜನಜಾನಪದವನ್ನು ಕಾಣಬಹುದು. ಉದಾಹರಣೆಗೆ

‘ಅಕ್ಕನ ಚಿನ್ನವಾದರೂ ಅಕ್ಕಸಾಲಿಗ ತೊನೆಯದೆ ಬಿಡ’

‘ಅಕ್ಕಸಾಲಿಗಿಂತ ಕಳ್ಳನಿಲ್ಲ, ಮೆಕ್ಕೆ ಗದ್ದೆಗಿಂತ ಬೆಳೆಯಿಲ್ಲ’

‘ಅಗಸ ಮಾಡಿದ್ದು ಬಟ್ಟೆಗೆ, ಅಕ್ಕಸಾಲೆ ಮಾಡಿದ್ದು ಅಗ್ಗಿಷ್ಟಿಕೆಗೆ’

‘ಅಗಸನ ಮಾತು ಕೆಳ್ಕೊಂಡು ರಾಮಸೀತೆಯ ವನವಾಸಕ್ಕೆ ತಳ್ದ’

‘ಈಡಿಗರನ ಹೆಂಡತಿ ಎಂದಿದ್ದರೂ ಮುಂಡೆ’

‘ಉತ್ತಬಂದ ಒಕ್ಕಲಿಗನ ಕೆಣಕಬ್ಯಾಡ; ಹಸಿದ್ ಬಂದ ಹಾರುವನ ಕೆಣಕಬ್ಯಾಡ’

‘ಏಕಶಾಸ್ತ್ರೀ ಮನೇಲಿ ಏಳುಜನ ಮುಂಡೇರು’

‘ಏನೋಗೌಡ ಅಂದ್ರೆ ಕಬ್ಬೀಗೆ ಮೂರು ಹಣ ಅಂದ’

‘ಒಕ್ಕಲಿಗನ ನೆಂಟು ಒಡವೆ ಕೇಡು’

‘ಕರಿಬ್ರಾಹ್ಮಣನ ನಂಬಬಾರದು, ಕೆಂಪು (ಬಿಳಿ) ಹೊಲೆಯನ ನಂಬಬಾರ್ದು’

‘ಕರಿ ಹಾರವ ಇರಬಾರದು, ಕೆಂಪು ಗಾಣಿಗ್ಯಾ ಇರಬಾರದು’

‘ಕರಿ ಹಾರುವನನ್ನು ಬಿಳಿ ಶೆಟ್ಟರನ್ನು ನಂಬಬಾರದು’

‘ಕಿರುಬನನ್ನು ನಂಬಿದರೂ ಕುರುಬನನ್ನು ನಂಬಬಾರದು’

‘ಕುರುಬನಿಗೇನು ಗೊತ್ತು ಮರುಗದಗಮ’

‘ಕುರುಬನಿಗೆ ಹೂಕೊಟ್ಟರೆ ಕುಂಡ್ಯಾಗ ಮುಡಕೊಂಡ’

‘ಕುರುಬ ಹೆಗಲಮ್ಯಾಲೆ ಕುರಿ ಹೊತ್ಕೊಂಡು ಊರ್ ಸುತ್ತ ಹುಡುಕ್ದ’

‘ಕುಂಬಾರ ಕೂಟಲ್ಲ, ಕೂದಲ ಗೂಟಲ್ಲ’

‘ಕೆಲಸವಿಲ್ಲದ ಕುಂಬಾರ ಮಗಳ ಕುಂಡಿ ತಟ್ಟಿದಂತೆ’

‘ಕೆಲಸವಿಲ್ಲದ ಬಡಗಿ ಮಗನ ಮುಕುಳಿ ಕೆತ್ತಿದಂತೆ’

‘ಕೊಕ್ಕರೆಗೊಂದು ಕೆರೆಯಿಲ್ಲ ಕೊರಮಶೆಟ್ಟಿಗೊಂದೂರಿಲ್ಲ’

‘ಕೊರಮರಿಗೆ ಕಟ್ಟಿಲ್ಲ ನಾಯಿಗೆ ಹಿಟ್ಟಿಲ್ಲ’

‘ಕೊರಮ ಕೂಡಿ ಕೆಟ್ಟ ದೊಂಬ ಅಗಲಿ ಕೆಟ್ಟ’

‘ಗಾಣಿಗನ ಸಂಗತಿ ಬಿಟ್ಟು ಗಾವುದ ದೂರ ಇರಬೇಕಂತೆ’

‘ಗೊಲ್ಲ ಗೆಣೆಯ ಅಲ್ಲ, ತುರುಕ ದಾಸನಲ್ಲ’

‘ಜಾಲಿ ಸಾಕಿದರೆ ಕಾಲಿಗೆ ಮೂಲ, ಬೇಡನ್ನ ಸಾಕಿದರೆ ಜೀವಕ್ಕೆ ಮೂಲ’

‘ಜಂಗಮನಿಗೆ ಜೋಳಿಗೆ ತಪ್ಪಿಲ್ಲ, ಕೊರಮನಿಗೆ ಗೂಡೆ ತಪ್ಪಿಲ್ಲ’

‘ಜೈನ ಬಿಡ, ಕೊಮಟಿ ಕೊಡ’

‘ಡೊಂಬ, ಬ್ರಾಹ್ಮಣ, ಆಡು ಕೈಕೊಡಾಕ ಹೊತ್ತಿಲ್ಲ, ಗೊತ್ತಿಲ’

‘ಡೊಂಬನ ಮದಿವಿಗೆ ಡೊಂಬಂದ ಸವಾರಿ’

‘ತುಪ್ಪದಂತೆ ಇದ್ದರೂ ತುರುಕರ ಸಂಗಬೇಡ’

‘ದೋಸೆ ಊಟವಲ್ಲ, ದಾಸಯ್ಯರ ನೆಂಟನಲ್ಲ’

‘ನರ ಮನುಷ್ಯರಲ್ಲೆಲ್ಲ ಕೊರಮ ಚಂಡಾಲ, ಹಕ್ಕಿ ಪಕ್ಷಿಲೆಲ್ಲ ಕಾಗೆ ಚಂಡಾಲ’

‘ಬಿದ್ದ ಕಲ್ಲೆಲ್ಲಾ ಅಗಸಂದು, ನಿಂತ ಕಲ್ಲೆಲ್ಲಾ ಪೂಜಾರಿಯದು’

‘ಬೆನ್ನ ಹಿಂದ ಡೊಂಬನೂ ರಾಜಾನ’

‘ಬೆಲ್ಲದಂತೆ ಇದ್ರೂ ಬೇಡರ ಸಂಗಬೇಡ’

‘ಭಲೇ ಡೊಂಬತಿ ಅಂದರ ಬಳಗಾನ ತಂದು ಬಾಗಲದಾಗ ಹಾಡಿದ್ದಳಂತೆ’

‘ಮೀನುಗಾರ, ಡೊಂಬಗ ಯೇಳು ಹೆಂಡರು ಒಬ್ಬಾಕಿಗೂ ಹಾಸಿಗಿಲ್ಲ’

‘ಲಿಂಗದಂಥವ್ನಾದ್ರೂ ಜಂಗಮನ ನಂಬಬಾರ‍್ದು’

‘ಶೆಟ್ಟಿ ಬಿಟ್ಟಲ್ಲೆ ಪಟ್ಟಣ’

‘ಸಾಬರ ಸಹವಾಸ ಹಗಲೆಲ್ಲ ಉಪವಾಸ’

‘ಸುಗ್ಗೀಲಿ ಮಾದಿಗರನ್ನು ಕೆಣಕಬಾರದು, ದೇವಳ್ಗೇಲಿ ದನ ಕೆಣಕಬಾರದು’

‘ಹಾರುವ ದುಡಿಯೋದು ಪಿಂಡಕ್ಕೆ, ಒಕ್ಕಲಿಗ ದುಡಿಯೋದು ದಂಡಕ್ಕೆ ಹೊಲೆಯ ದುಡಿಯೋದು ಹೆಂಡಕ್ಕೆ’

‘ಹಾರುವನ ಬದುಕು ಮಗನಿಗೆ, ಸೆಟ್ಟಿಯ ಬದುಕು ಅಳಿಯನಿಗೆ’

‘ಹಾರುವನ ಬದುಕು ಮಗನಿಗೆ, ಸಿಟ್ಟಿಯ ಬದುಕು ಅಳಿಯನಿಗೆ’

‘ಹಾರುವನಿಗೆ ಆಳಾಗಬ್ಯಾಡ, ಗಾಣಿಗನ್ಗೆ ಎತ್ತಾಗ ಬೇಡ’

‘ಹಾಲಿನಂಗೆ ಇದ್ದರೂ ಹಾರುವನ ಸಂಗಬೇಡ’

‘ಹಾಲಿನಂಥವನಾದ್ರೂ ಹಾರುವನ ನಂಬಬಾರ್ದು’

‘ಹಾವು ಕಡಿದರೆ ಒಬ್ಬ ಸಾಯೋದು, ಹಾರುವ ಕಡಿದರೆ ನೂರು ಜನ ಸಾಯ್ತರೆ’

‘ಹಿಂಡ ಹೊಲೆಯರು ಕೂಡಿ ತೊಗಲ ಹದ ಕೆಡಿಸಿದರಂತೆ’

‘ಹೊಲೆಯನ ಮಾತು ಮಾತಲ್ಲ, ಹುಲ್ಲು ಬೆಂಕಿ ಬೆಂಕಿಯಲ್ಲ’

ಇವುಗಳ ಜೊತೆಗೆ;

ದೇವಸ್ಥಾನಗಳಲ್ಲಿ ‘ಪರ’ ಮಾಡಿದಾಗ ಅನ್ನದ ರಾಶಿ ಹೆಚ್ಚುತ್ತದೆ; ಮೊದಲು ಹೊಲೆಯರಿಗೆ ಒಡ್ಡರಿಗೆ ಹಾಕಿದರೆ ಎಷ್ಟಿದ್ದರೂ ಅನ್ನದ ರಾಶಿ ಕುಪ್ಪಳಿಸಿ ಹೋಗುತ್ತದೆ.

‘ಬುಡಬುಡುಕೆಯವರನ್ನು ರಾತ್ರಿ ಹೊತ್ತು ನೋಡಬಾರದು’

“ನಾಗರ ಹಬ್ಬದಲ್ಲಿ ಎಡೆಯನ್ನು ತೆಗೆದುಕೊಂಡು
ಹೋಗುವಾಗ ಮಾದಿಗರ ನೆರಳು ಬೀಳಬಾರದು”

‘ಮಾದಿಗರಿಗೆ ಮಜ್ಜಿಗೆ, ಹಾಲು ಕೊಟ್ಟರೆ ಹಸು ರಕ್ತ ಕರೆಯುತ್ತದೆ’

“ಕುಂಬಾರ ನಿನಗ್ಯಾಕೊ ಗೊಂಬಿ ಮಾಟದ ಹೆಣ್ಣು
ತುಂಬೆಂದ ಮಣ್ಣ ತುಳಿಯೆಂದ | ಮನಿಮನಿಗೆ
ಹೊತ್ತು ಮಾರಂದ ಮಡಕೀಯಾ”

ಹೀಗೆ ಜನಪದಗಳನ್ನು ಕುರಿತ ಜನಜಾನಪದ ಇದೆ. ಜೊತೆಗೆ ಯಕ್ಷಗಾನ ಪ್ರಸಂಗಗಳಲ್ಲೂ ಕೆಲವು ಕಡೆ ಟೀಕೆ ರೂಪದ ಹೇಳಿಕೆಗಳು ಬರುವುದುಂಟು. ಅವು ಆ ಜನಪದಕ್ಕೆ ಜನ ಜಾನಪದವಾಗಿರುತ್ತದೆ. ಉದಾಹರಣೆಗೆ ಮೂಡಲಪಾಯದಲ್ಲಿ ಶಂಬರಾಸುರ ಎಂಬ ಪ್ರಯೋಗದಲ್ಲಿ ಸಾರಥಿಯು ಯಾರನ್ನಾದರೂ ಟೀಕಿಸಬೇಕು ಎನ್ನಿಸಿದಾಗ ಎಲೈ ಮಡಗಿ ಬಡಗಿ, ಗಡಗಿ ಮಾಡುವ ಕುಂಬಾರ, ಹರಿದು ತಿಂಬುವ ಹಾರುವ, ಕುಡುಕ ತಳವಾರ, ಉಡಕ ಉಪ್ಪಾರ, ಬಡವ ಕೂಲಿಗಾರ, ಬೆಂಕೀ ಪಿಂಜಾರ, ಹರಕ ಬಣಜಿಗ, ಕರಗ ಗಾಣಿಗ, ಎರಕದ ಕಂಚುಗಾರ, ಟಂಕ ಕೊಮಟಿಗ, ಮುರುಕ ಚಿಂಪಿಗ, ಅರಕ ಅಕ್ಕಸಾಲಿಗ ಮುಂತಾದ ಸಕಲರಿಗೂ ತಿಳಿಸುವುದೇನೆಂದರೆ ಎಂದು, ಎಲ್ಲರ ವೃತ್ತಿ ಗುಣ ಸ್ವಭಾವಗಳನ್ನು ಜಾಲಾಡಿ ಬಿಡುತ್ತಾರೆ (ರಂಗಾರೆಡ್ಡಿ ಕೋಡಿರಾಂಪುರ; ೧೯೯೫-೧೨೦).

ಜನಜಾನಪದ ಎಂಬುದು ಜಾನಪದದ ಬಗೆಗಿನ ವಿದ್ವಾಂಸರ ವಿಶ್ಲೇಷಣೆಗಿಂತ ಭಿನ್ನವಾಗಿರುವಂತಹದ್ದು. ಸಾಮಾನ್ಯವಾಗಿ ಜನಪದರು ಜಾನಪದದ ಪ್ರಕಾರವೊಂದರ ಬಗೆಗೆ ಹೊಂದಿರುವ ಮನೋಭಾವವಾಗಿರುತ್ತದೆ. ಅಂದರೆ ಅವರು ಆ ಪ್ರಕಾರದ ಬಗೆಗೆ ಇಟ್ಟಿರುವ ನಂಬಿಕೆ. ಮನೋಭಾವ ಮುಂತಾದವುಗಳನ್ನೊಳಗೊಂಡಿರುತ್ತದೆ. ಈ ಜನಜಾನಪದವು ಜನಪದರಲ್ಲಿರುವ ಎಲ್ಲವನ್ನು ಎಲ್ಲರೂ ತಿಳಿದುಕೊಳ್ಳಬೇಕೆಂಬ ಮನೋಭಾವವನ್ನು ತಿಳಿಸುವುದರ ಜೊತೆಗೆ ಅವರ ತಿಳುವಳಿಕೆಯನ್ನು ನಮಗೆ ಪರಿಚಯಿಸುತ್ತದೆ.