ದನಗಳ ಜಾತ್ರೆ ಬಯಲುಸೀಮೆಯಲ್ಲಿ ನಿರಂತರ ನಡೆಯುತ್ತಿರುತ್ತದೆ.  ಸರಕಾರದ ಮಾನ್ಯತೆ, ಸಹಾಯ ಎರಡೂ ಇದೆ.  ಜಾತ್ರೆಯಲ್ಲಿ ಪ್ರದರ್ಶನ ಹಾಗೂ ಮಾರಾಟ ಎರಡು ಉದ್ದೇಶಗಳು.  ಎತ್ತಿನ ಬೆಲೆ ಲಕ್ಷಗಳನ್ನು ದಾಟಿದೆ.  ಉತ್ತರದ ಈ ಜನ ಹಣಕ್ಕೆ ಬೆಲೆ ಕೊಡುವವರಲ್ಲ.  ಅದರಲ್ಲಿ ಕೃಷ್ಣಾತೀರದ ರೈತರು ಅತಿ ಶ್ರೀಮಂತರು.  ಎತ್ತುಗಳನ್ನು ಸಾಕುವುದು ಇವರ ಹವ್ಯಾಸ.  ಅದೊಂದು ಕಲೆಯೂ ಹೌದು.  ಇವರ ಹೆಮ್ಮೆಗೊಂದು ಗರಿ.  ನೀರಿನ ಬರ ಜಾತ್ರೆಗೆ ಬಿಸಿ ಮುಟ್ಟಿಸಿದೆ.  ಹಿಂದಿನ ಜಾತ್ರೆಗಳ ಸೊಗಸು ಆಧುನಿಕತೆಯ ಸೋಗಿನಲ್ಲಿ ಬಾಡಿದೆ.  ವ್ಯವಸ್ಥೆಯಲ್ಲಿ ಕೊರತೆ, ಸ್ವಚ್ಛತೆ ಹಾಗೂ ಆರೋಗ್ಯದ ಅರಿವು ಇಲ್ಲದ ಜಾತ್ರೆಗಳಿಂದ ಅಪಾಯ ಹೆಚ್ಚಿದೆ.  ಸಂವಹನದ ಬಿಕ್ಕಟ್ಟಿನಿಂದ ಸರಕಾರಕ್ಕೆ ಹಾಗೂ ರೈತರಿಗೆ ನಷ್ಟ ನಿಂತಿಲ್ಲ.  ಲಾಭವೆಲ್ಲಾ ಅದೇ ಮಧ್ಯವರ್ತಿಗಳ ಪಾಲು, ಜಾತ್ರೆಗಳು ಸುಧಾರಣೆಯಾಗಬೇಕಿದೆ, ವ್ಯವಸ್ಥಿತವಾಗಬೇಕಾಗಿದೆ.

ಬಯಲುಸೀಮೆಯಲ್ಲಿ ದನಗಳ ಜಾತ್ರೆಗಳು ಭರದಿಂದ ನಡೆಯುತ್ತದೆ.  ಹೊಲ ಹೆಚ್ಚಾಗಿರುವ ಈ ಪ್ರದೇಶಗಳಲ್ಲಿ ದನಗಳಿಗೆ ಪ್ರಾಮುಖ್ಯ.  ದನಗಳನ್ನು ಸಾಕುವುದು, ಪ್ರದರ್ಶಿಸುವುದು, ಸ್ಪರ್ಧೆಗಳಲ್ಲಿ ಭಾಗವಹಿಸುವುದು ಇವೆಲ್ಲಾ ಅವರ ಖಯಾಲಿಗಳು.  ಬಿಜಾಪುರ, ಬಾಗಲಕೋಟೆ, ಜಮಖಂಡಿ, ಶಹಾಪುರ, ಬೀದರ ಹೀಗೆ ಅನೇಕ ಪಟ್ಟಣಗಳಲ್ಲಿ ವಾರ್ಷಿಕ ದನಗಳ ಜಾತ್ರೆ ಖಾಯಂ.  ಪ್ರತಿ ಊರಿನದೂ ವಿಭಿನ್ನ, ವೈಶಿಷ್ಟ್ಯ.  ದನಗಳಿಗೆ ಏನೆಲ್ಲಾ ಸ್ಪರ್ಧೆಗಳು, ರೈತರಿಗೆ ಸವಾಲುಗಳು.

ಜಮಖಂಡಿಯಲ್ಲಿ ಪ್ರತಿವರ್ಷ ಯುಗಾದಿಯ ಮರುದಿನದಿಂದ ಐದು ದಿನಗಳ ಕಾಲ ದನಗಳ ಜಾತ್ರೆ ನಡೆಯುತ್ತದೆ.  ಮುಧೋಳ-ಜಮಖಂಡಿಯ ರಸ್ತೆಯ ಇಕ್ಕೆಲಗಳ ಬೋಳುಗುಡ್ಡಗಳ ಬಯಲಿನಲ್ಲಿ ದನಗಳ ಸಮಾವೇಶ. ಎಪಿಎಂಸಿ, ಸ್ಥಳೀಯ ಸಂಘಟನೆಗಳ ಪ್ರಾಯೋಜಕತ್ವದೊಂದಿಗೆ ಜಮಖಂಡಿಯ ಶ್ರೀ ಬಸವೇಶ್ವರ ದನಗಳ ಜಾತ್ರೆ ನಡೆಯುತ್ತದೆ.  ರೈತರು ಯುಗಾದಿಯ ಮರುದಿನದಿಂದಲೇ ತಮ್ಮ ತಮ್ಮ ದನಗಳೊಂದಿಗೆ ಬಂದು ಸೇರುತ್ತಾರೆ.  ಬಂಡಿಯಲ್ಲಿ ದನಗಳ ಮೇವು, ಕಟಗಿ ರೊಟ್ಟಿ, ಕೆಂಪು ಚಟ್ನಿ, ಎಳ್ಳಿನ ಚಟ್ನಿ ಏನೆಲ್ಲಾ ವಸತಿ ಊಟದ ವ್ಯವಸ್ಥೆಗಳನ್ನೂ ತರುತ್ತಾರೆ.  ಎಪಿಎಂಸಿ ಇವರಿಗೆ ಜಾಗ, ಕುಡಿಯುವ ನೀರಿನ ವ್ಯವಸ್ಥೆ, ದೀಪಗಳನ್ನು ಉಚಿತವಾಗಿ ಒದಗಿಸುತ್ತದೆ.  ಸ್ಪರ್ಧೆಗಳಿಗೆ ಹಾಗೂ ವ್ಯಾಪಾರಕ್ಕೆ ಔಪಚಾರಿಕ ಶುಲ್ಕಗಳಿವೆ.

ಮಹಾರಾಷ್ಟ್ರ, ಆಂಧ್ರಪ್ರದೇಶದ ರೈತರು ದನಗಳೊಂದಿಗೆ ಜಾತ್ರೆಗೆ ಬರುತ್ತಾರೆ.  ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಣ್ಣು ಹಾಯಿಸುವಷ್ಟು ದೂರ ದನಗಳ ಜಮಾವಣೆ.  ಇಡೀ ಜಾತ್ರೆಯನ್ನು ನಡೆಸಲು ಸರಕಾರ ಹಾಗೂ ರೈತರು ಸೇರಿದ ಸಮಿತಿಯಿದೆ.  ಪ್ರತಿ ವಿಚಾರಗಳೂ ಈ ಮುಖಂಡರ ತೀರ್ಮಾನದಂತೆ ನಡೆಯುತ್ತದೆ.  ಜಗಳ, ತಕರಾರುಗಳ ಪರಿಹಾರ-ತೀರ್ಮಾನಗಳೂ ಈ ಪಂಚರಿಗೆ ಸೇರಿದ್ದು.

ಜಾತ್ರೆಯಲ್ಲಿ ಕಿಲಾರಿ ಹಾಗೂ ಜವಾರಿ ತಳಿಗಳೇ ಹೆಚ್ಚು.  ಪೈಪೋಟಿಯೂ ಇವುಗಳಲ್ಲೇ.  ಹೋರಿಗಳಿಗೂ, ಹಸುಗಳಿಗೂ ಅಂತಹ ವ್ಯತ್ಯಾಸ ಕಾಣಿಸದು.  ಸ್ಪರ್ಧೆಗಳು ಎರಡನ್ನೂ ಸೇರಿಯೇ ನಡೆಯುತ್ತದೆ.  ತೆರಬಂಡಿ ಸ್ಪರ್ಧೆ, ಉಸುಕು ಜಗ್ಗುವ ಸ್ಪರ್ಧೆ, ಎತ್ತಿನಬಂಡಿ ಸ್ಪರ್ಧೆ ಇವು ಮುಖ್ಯ ಸ್ಪರ್ಧೆಗಳು.  ಪ್ರತಿ ಸ್ಪರ್ಧೆಗೂ ಪ್ರಥಮ ಬಹುಮಾನ ಹತ್ತು ಗ್ರಾಂ ಚಿನ್ನದ ಪದಕ.  ಎರಡನೇ ಬಹುಮಾನ ಐದು ಗ್ರಾಂ ಚಿನ್ನದ ಪದಕ.  ಮೂರನೇ ಬಹುಮಾನ ಬೆಳ್ಳಿ ಕಡಗ.  ಇದೇ ರೀತಿ ಅತ್ಯುತ್ತಮ ಹಾಲು ಹಲ್ಲ್ಲು ಹೋರಿ, ಅತ್ಯುತ್ತಮ ಹಲ್ಲು ಬಂದಿರುವ ಹೋರಿ, ಸರ್ವಶ್ರೇಷ್ಠ ಎತ್ತಿನ ಜೋಡಿ, ಕರು ಹಾಕದ ಅತ್ಯುತ್ತಮ ಕಿಲಾರಿ ಹಸು, ಕರು ಹಾಕಿದ ಅತ್ಯುತ್ತಮ ಕಿಲಾರಿ ಹಸು ಎನ್ನುವ ವಿಶೇಷ ಬಹುಮಾನಗಳಿವೆ.

ಪ್ರತಿಯೊಂದು ವಿಭಾಗಕ್ಕೂ ಹತ್ತು ಗ್ರಾಂ ಚಿನ್ನದ ಪದಕಗಳು.  ಇಸವಿ ೨೦೦೫ರ ಜಾತ್ರೆಯಲ್ಲಿ ಐದು ಸಾವಿರ ಜೊತೆ ಎತ್ತುಗಳು ಸೇರಿದ್ದು.  ಪ್ರತಿವರ್ಷ ಬರೋಕ್ಕಿಂತ ಭಾಳ ಕಮ್ಮೀರಿ.  ಚಾರಣೆ ಎತ್ತುಗೋಳ್ ಬಂದಾವ್ರಿ ಎಂದರು ನ್ಯಾವಲಿಗೆಯ ರಮೇಶ್. ಇವರು ತಮ್ಮ ಜೋಡಿಎತ್ತುಗಳನ್ನು ೩೪ ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿ ಹೊರಟಿದ್ದರು.  ನಾಲ್ಕು ಹಲ್ಲಿನ ಎತ್ತುಗಳ ವಯಸ್ಸು ಐದು ವರ್ಷ.  ಅಂದಾಜು ನಾಲ್ಕೂವರೆ ಅಡಿ ಎತ್ತರಕ್ಕಿದ್ದು ಚಂದಾಗಿದ್ದವು.  ಬಹುಮಾನ ಬಂದಿದೆಯೇ ಎಂದು ಕೇಳಿದಾಗ ದೂರದ ಕೆಂಪು ಪೆಂಡಾಲಿನಲ್ಲಿ ನಿಂತ ಎತ್ತನ್ನು ತೋರಿಸಿ ಅಲ್ಲಿ ಹೋಗಿ ಎಂದರು.  ರಾಜ ದೂರದಿಂದಲೇ ಕಣ್ಣು ಕುಕ್ಕುತ್ತಿದ್ದ.

ರಾಜ ಪೆಂಡಾಲಿನ ಎತ್ತರಕ್ಕೂ ಬೆಳೆದು ನಿಂತಿದ್ದ.  ವಯಸ್ಸಿನ್ನೂ ಮೂರು ವರ್ಷ.  ಎರಡೇ ಹಲ್ಲುಗಳು.  ಐದರ ಬಾಲಕ ವೀರೇಂದ್ರ ಇವನ ಗೆಳೆಯ.  ವೀರೇಂದ್ರನ ಅಜ್ಜ ಚಂದಪ್ಪ ಹನುಮಂತಪ್ಪ ಬಂಗಿ ರಾಜನ ಮಾಲಿಕ.  ವಾಸ ಜಮಖಂಡಿ ಬಳಿಯ ಹಳ್ಳಿ ಅಲಗೂರು.  ಕಿಲಾರಿ ತಳಿಯ ಉತ್ಕೃಷ್ಟ ಲಕ್ಷಣ ಸಂಪನ್ನ.

ಚಂದಪ್ಪ ಹನುಮಂತಪ್ಪ ಬಂಗಿಯವರು ೨೦೦೩ರಲ್ಲಿ ಫಂಡರಾಪುರ ಜಾತ್ರೆಗೆ ಹೋಗಿದ್ದಾಗ ರಾಜನನ್ನು ನೋಡಿದರು.  ಮನಸ್ಸಾಯಿತು.  ರಾಜನೂ ಇವರನ್ನು ನೋಡಿ ಸೆಗಣಿ ಹಾಕಿ, ಉಚ್ಚೆ ಹೊಯ್ದು ಶುಭ ಶಕುನ ನೀಡಿದನಂತೆ.  ವ್ಯಾಪಾರ ಕುದುರಿಸಿದರು.  ಒಂದು ವರ್ಷ ಕೂಡ ತುಂಬಿರದ ಪುಟ್ಟ ಕಂದನಿಗೆ ೩೧ ಸಾವಿರ ರೂಪಾಯಿಗಳು!  ಹಾಲು ಹಲ್ಲಿನ ಪೋರ.  ಕಿಲಾರಿ ತಳಿಯ ಗುಣಲಕ್ಷಣ ತುಂಬಿಕೊಂಡು ಹೋರಿಯಾಗಿತ್ತು.

ಮನೆಯಲ್ಲಿ ಎಷ್ಟೆಲ್ಲಾ ಮುತುವರ್ಜಿ.  ಹತ್ತಿಹಿಂಡಿ, ಶೇಂಗಾ ಹಿಂಡಿ, ಗೋಂಜೋಳ, ಸಿತೆನೆ, ತತ್ತಿ, ಹಾಲು, ಮನೆಯ ಮಗನಿಗೆ ಔತಣದೂಟ.  ಪ್ರತಿಯೊಬ್ಬರ ತಟ್ಟೆಯಿಂದಲೂ ಪಾಲೊಂದು ರಾಜನಿಗೆ ಮೀಸಲು.  ದಿನದ ಖರ್ಚಿನ ವೆಚ್ಚ ೨೫೦ ರೂಪಾಯಿಗಳು.  ಆದರೆ ಜೋಳ, ಹತ್ತಿ, ಶೇಂಗಾ, ಕಬ್ಬು ನಾವೇ ಎಲ್ಲಾ ಬೆಳೆಯುವುದರಿಂದ ಕೊಂಡು ತರುವ ಬಾಬ್ತು ಕಡಿಮೆ.  ಹೀಗಾಗಿ ರಾಜ ನಮಗೆ ಹೊರೆ ಆಗಲೇ ಇಲ್ಲ ಎನ್ನುತ್ತಾರೆ ಚಂದಪ್ಪ ಬಂಗಿಯವರು.  ರಾಜನ ಸಕಲ ಚಾಕರಿಗಳೂ ವೀರೇಂದ್ರ ಪಾಟೀಲನ ಹಕ್ಕು.  ಆಮೇಲೆ ಮನೆಯವರದು.  ಎಂತಹ ಸಿಟ್ಟು ಬಂದರೂ ವೀರೇಂದ್ರ ಪಾಟೀಲ ಮಾತ್ರ ಹೊರತು.  ಅವನೇನೂ ಮಾಡಿದರೂ ಮಾನ್ಯ.

ರಾಜ ದಿನದಿನಕ್ಕೂ ಬೆಳೆದು ಆರು ಅಡಿ ಎತ್ತರ ಮೀರಿದ.  ಕೊಟ್ಟಿಗೆ ಕಿರಿದಾಯಿತು.  ಸೌಂದರ್ಯ ಲಕ್ಷಣ ಇಮ್ಮಡಿಯಾಯಿತು.  ಬಿಜಾಪುರದ ಚಂದ್ರಗಿರಿದೇವಿ ಮಠದ ಜಾತ್ರೆಯಲ್ಲಿ ಚಿನ್ನದ ಪದಕ.  ಸಿದ್ದೇಶ್ವರ ಜಾನುವಾರು ಜಾತ್ರೆಯಲ್ಲಿ ಚಿನ್ನದ ಪದಕ.  ಈಗ ಜಮಖಂಡಿ.  ಪದಕಗಳ ಪಟ್ಟಿ ಬೆಳೆಯುತ್ತಿದೆ.  ಮಹಾರಾಷ್ಟ್ರದ ರೈತರೊಬ್ಬರಿಗೆ ರಾಜ ಖಾಯಿಷ್ ಆದ.  ೯೧ ಸಾವಿರಕ್ಕೆ ಕೇಳಿದರೂ ವೀರೇಂದ್ರ ಒಪ್ಪದ ಕಾರಣ ಬಂಗಿಯವರು ಕೊಡಲಿಲ್ಲ.

ಅದೇ ಅಲಗೂರಿನ ನಾಗಪ್ಪ ಬಸಪ್ಪ ಲಿಗಾಡೆಯವರ ಹಾಲು ಹಲ್ಲಿನ ಭೀಮ ಸಹ ಚಿನ್ನದ ಪದಕ ವಿಜೇತ.  ಒಂದೂವರೆ ವರ್ಷದ ಭೀಮ ಮುದ್ದು ಮುದ್ದು.  ಹಟ ಜಾಸ್ತಿ.  ನಾಗಪ್ಪ ಲಿಗಾಡೆಯವರ ಮಗ ಅಯ್ಯಪ್ಪ ನಾಗಪ್ಪ ಲಿಗಾಡೆಯದೇ ಭೀಮನ ಉಸ್ತುವಾರಿ.  ಚಡಚಣದಿಂದ ೨೧ ಸಾವಿರ ಕೊಟ್ಟು ತಂದಿದ್ದು.  ಕಳೆದ ಬಿಜಾಪುರ ಜಾತ್ರೆಯಲ್ಲಿ ಹಂಡೆ ಬಹುಮಾನ ಪಡೆದಿದ್ದ.  ಈ ಸಾರಿ ಚಿನ್ನದ ಪದಕ ಎನ್ನುವಾಗ ಅಯ್ಯಪ್ಪ ಕುಣಿಯುತ್ತಿದ್ದ.  ಐಟಿಐ ಕಾಲೇಜಿಗೆ ಹೋಗುವ ಈತ ಕಾಲೇಜು ಬಿಟ್ಟಮೇಲೆ ಉಳಿದ ಸಮಯ ಪೂರ್ತಿ ಭೀಮನೊಂದಿಗೆ ಇರುವುದಂತೆ.  ಇವರಿಗೂ ಸಾಕಷ್ಟು ಹೊಲವಿರುವ ಕಾರಣ ಭೀಮನ ಹೊಟ್ಟೆಗೆ ಕಡಿಮೆಯಾಗದು.  ಆದರೂ ಭೀಮನ ಒಟ್ಟಾರೆ ಖರ್ಚು ದಿನಕ್ಕೆ ೩೦೦  ರೂಪಾಯಿಗಳು ದಾಟುತ್ತಿದೆ ಎನ್ನುತ್ತಾರೆ ನಾಗಪ್ಪ ಲಿಗಾಡೆ.

ಮುಖ್ಯ ರಸ್ತೆ ಆಜೂಬಾಜು ಅಂಗಡಿಗಳ ಸಾಲು ಸಾಲು.  ಹಗ್ಗದಂಡೆ, ಗಗ್ಗರ, ಗಂಟೆ, ಮೂಗುದಾಣ, ಚಾಟಿ, ಬಾರುಕೋಲು, ಕವಡೆಸರ, ಕಪ್ಪು-ಕೆಂಪು ದಾರ, ರಿಬ್ಬನ್, ಮೇಲುಹೊದಿಕೆ, ಕೋಡುಗುಣಸು, ಚರ್ಮದ ಚಾಟಿ, ಹಗ್ಗ ಇತ್ಯಾದಿ ಮುಖ್ಹಂಡ.  ಗೆಜ್ಜೆ ಸರ, ಗಂಟೆ ಸರ, ಕಂಬಳಿಕಟ್ಟು, ದೃಷ್ಟಿದಾರ, ಪದಕದ ಹಾರ, ಕೊಳ್ಳಪಟ್ಟಿ, ಕೋಡುಪಟ್ಟಿ, ಬೆತ್ತದ ಕೋಲು, ಕುಣಿಕೆ ಕೋಲು-ಪ್ರತಿ ಅಂಗಡಿಗಳಲ್ಲೂ ಹೋರಿಗಳಿಗೆ ಬೇಕಾದ ೫೦ಕ್ಕೂ ಹೆಚ್ಚು ವಸ್ತುಗಳಿದ್ದವು.  ರೈತರ ದಿನನಿತ್ಯ ಪರಿಕರಗಳಾದ ಕತ್ತಿ, ಕುಡುಗೋಲು, ಹಾರೆ, ಗುದ್ದಲಿ, ಸನಿಕೆ, ತಟ್ಟೆ, ಬುಟ್ಟಿ, ನೇಗಿಲು, ನೊಗ, ಈಳಿಗೆಮಣೆ, ರೊಟ್ಟಿ ತಟ್ಟೋ ಮಣೆ, ಕಾವಲಿ ಇಷ್ಟೇ ಅಲ್ಲ, ಗಿರ್‍ಹಿಕಿ ಚಪ್ಪಲಿ, ಕೊಲ್ಲಾಪುರ ಚಪ್ಪಲಿಗಳೂ ಇದ್ದವು.  ಹೆಂಗಸರೇ ವ್ಯಾಪಾರಗಾರ್ತಿಯರು.  ಬಯಲುಸೀಮೆಯ ಒರಟರೊಂದಿಗೆ ಸರಿಜೋಡಿ ಮಾತು.  ಬೆಲೆ ಕೂಗುತ್ತಾ, ಗಿರಾಕಿಗಳನ್ನೂ ಕರೆಯುತ್ತಾ, ಚೌಕಾಶಿ ಹೊಂದಿಸುತ್ತಾ ಮಾಡುವ ಚಾಲಾಕು, ಗಡಸುತನ, ಗಂಡಸರ ಆಟಕ್ಕೆ ಕಡಿವಾಣ ಹಾಕಿದಂತಿತ್ತು.  ನೀರಿನ ಬರದಿಂದಾಗಿ ನಮಗೀಸಾರಿ ಅಂತ್ಹಾ ವ್ಯಾಪಾರಿಲ್ರಿ ಸರ್ರ, ಊರೂರು ತಿರುಗಿದ್ರೂ ಎಲ್ಲಾ ಕಡೆ ಹಿಂಗೆ ಆಗಿದೆ ಎನ್ನುವ ಅಳಲು ಪಕೀರವ್ವ ಬಸವ್ವ ಯರನಾಳರದು.  ಹೆಚ್ಚಿನ ಅಂಗಡಿಗಳು ಮುಸ್ಲಿಮರದು.  ಹದಿನೈದಕ್ಕೂ ಹೆಚ್ಚು ಅಂಗಡಿಗಳಲ್ಲಿ ಮುಸ್ಲಿಂ ಮಹಿಳೆಯರೇ ವ್ಯಾಪಾರಗಾರ್ತಿಯರು!  ಜಾತ್ರೆ ಮುಗಿಯುತ್ತಾ ಬಂದಂತೆ ವ್ಯಾಪಾರದ ಬಿರುಸೂ ಹೆಚ್ಚಿತ್ತು.  ಎತ್ತಿನ ಬಂಡಿಗಳ ಬೆಲೆ ೧೦ ಸಾವಿರದಿಂದ ಇಳಿಯುತ್ತಾ ಆರು ಸಾವಿರಕ್ಕೆ ಬಂದಿತ್ತು.  ಹೊಸ ನಮೂನೆಯ ಬಂಡಿಗೋಳ್ರಿ ಸರ್ರ, ಮರದ ಕೆಲಸಾನೂ ಕಮ್ಮಿ, ಬೆಲೇನೂ ಕಮ್ಮಿ; ಎಂದು ಯಮುನಪ್ಪ ಸಂಗಪ್ಪ ಇಂಡಿಯವರು ಹೇಳುತ್ತಿದ್ದರು.  ಅವರು ನಾಲ್ಕು ವರ್ಷಗಳ ಹಿಂದೆ ೨೫ ಸಾವಿರ ರೂಪಾಯಿಗಳಿಗೆ ಒಂದು ಬಂಡಿಯನ್ನು ಕೊಂಡಿದ್ದರಂತೆ.  ಅದಿನ್ನೂ ಹೊಚ್ಚಹೊಸದರಂತೆ ಇದೆ.  ಗಟ್ಟಿಮರದ ಬಂಡಿ ೫೦ ವರ್ಷ ಬಾಳಿಕೆ ಬರುತ್ತದೆ ಎನ್ನುವ ನಂಬಿಕೆ ಅವರದು.  ಆಗಲೇ ಪಟಾಕಿಗಳು ಸಿಡಿಯತೊಡಗಿದವು.  ಗದ್ದಲ, ಕೇಕೆ ಹೆಚ್ಚಿತು.  ತೆರಬಂಡಿ ಸ್ಪರ್ಧೆಯಲ್ಲಿ ಗೆದ್ದ ಹೋರಿಗಳು ಅಖಾಡಕ್ಕೆ ಬಂದವು.  ಅದಕ್ಕೆ ಆರತಿ, ಹಾನ ಎಲ್ಲಾ ಮಾಡಿ ಕೆಂಪು ಬಣ್ಣ ಎರಚಿದರು.  ರೈತಪಡೆ ಉತ್ಸಾಹದಲ್ಲಿತ್ತು.

ಎಪಿಎಂಸಿಯವರಿಗೆ ಸಿಕ್ಕ ದಾಖಲೆಯ ಪ್ರಕಾರ ಈ ಸಾರಿ ೨,೭೮೩ ಜೊತೆ ಎತ್ತುಗಳು ಮಾರಾಟವಾಗಿವೆ.  ಅಂದರೆ ಸುಮಾರು ೬೦ ಕೋಟಿ ರೂಪಾಯಿಗಳ ವಹಿವಾಟು!  ಕೃಷ್ಣಾತೀರದ ರೈತರಿಗೆ ಇದೆಲ್ಲಾ ದೊಡ್ಡ ವಿಷಯವೇ ಅಲ್ಲ.