ಕೌಟುಂಬಿಕ ಜೀವನ

ಅಪ್ಪಾಲಾಲರು ತಮ್ಮ ಕಲಾಪ್ರತಿಭೆಯನ್ನು ಪ್ರಯೋಗದಿಂದ ಪ್ರಯೋಗಕ್ಕೆ ಹೊಸ ಹೊಸ ಅನುಭವವನ್ನು ಪಡೆದುಕೊಂಡು ಬೆಳೆಯುತ್ತಿದ್ದಂತೆ ವೈವಾಹಿಕ ಜೀವನದಲ್ಲೂ ಪಾದಾರ್ಪಣೆ ಮಾಡಿದರು. ಖಾತನಬಿ ಎಂಬ ಕನ್ಯೆಯನ್ನು ಕೈಹಿಡಿದು ತಮ್ಮಜೀವನವನ್ನೂ ಪ್ರಾರಂಭಿಸಿದರು. ಜಮಖಂಡಿಯೇ ಇವರ ವೈವಾಹಿಕ ಜೀವನದ ನೆಲೆಯೂ ಆಯಿತು. ಕಲಾಕ್ಷೇತ್ರ ಜಮಖಂಡಿ ನಿರಂತರ ಕರ್ಮಭೂಮಿಯಾಯಿತು.

ಧರ್ಮಪತ್ನಿ ಖಾತುನಬಿಯ ತವರೂರು ದಾಸ್ಯಾಳ ಗ್ರಾಮ. ಬೀಬಿಜಾನ ಎಂಬ ಚೊಚ್ಚಲ ಹೆಣ್ಣು ಮಗಳ ನಂತರ ಹುಟ್ಟಿದ ಮಗುವಿಗೆ ಅಣ್ಣಾಸಾಹೇಬ ಎಂದುಹೆಸರಿಟ್ಟರು. ಮೂರನೆಯ ಮಗಳು ಗುಲಶನ್ ಬಿ. ಈ ಮೂರು ಮಕ್ಕಳಿಗೆ ಜನ್ಮ ಕೊಟ್ಟ ತಾಯಿ ಖಾತುನಬಿ ಬಹಳ ದಿನ ಬದಿಕಲಿಲ್ಲ ಅಕಾಲಿಕವಾಗಿ ತೀರಿಹೋದಳು.

ಈ ಮಕ್ಕಳ ಪೋಷಣೆ ಮಾಡುವುದು ಕಲಾ ಜೀವನದೊಂದಿಗೆ ಅಪ್ಪಾಲಾಲರಿಗೆ ತುಂಬ ತೊಂದರೆಯಾಗತೊಡಗಿತು. ಹೀಗಾಗಿ ಅಪ್ಪಾಲಾಲನಿಗೆ ಎರಡನೇ ಮದುವೆಯನ್ನು ಹಿರಿಯರು ಬೀಳಗಿ ತಾಲೂಕಿನ ಸಿದ್ದಾಪೂರ ಗ್ರಾಮದ ಅಮೀನಮಾ ಎಂಬವಳೊಂದಿಗೆ ಮಾಡಿದರು. ಎರಡನೇ ಕುಟುಂಬದೊಂದಿಗೆ ವೈವಾಹಿಕ ಜೀವನ ಶುರು ಮಾಡಿದ ಮೇಲೆ ಸುಬರಾಬಿ, ಬಾನುಬಿ ಇಬ್ಬರೂ ಹೆಣ್ಣು ಮಕ್ಕಳ ಮೇಲೆ ಹುಟ್ಟಿದವ ಸಾಹೇಬಲಾಲ. ನಾಲ್ಕನೆಯ ಮಗಳು ಖಾತುನಬಿ.

ಮೊದಲ ಹೆಂಡತಿಯ ಹೊಟ್ಟೆಯಿಂದ ಹುಟ್ಟಿದ ಎರಡನೆಯ ಮಗ ಅಣ್ಣಾಸಾಹೆಬ ಬೆಳೆದು ದೊಡ್ಡವನಾದ. ಈತನಿಗೂ ಒಂದಿಷ್ಟು ಕಲೆಯಲ್ಲಿ ಆಸಕ್ತಿಯಿತ್ತು. ಯಾಕೋ ಏನೋ ತನ್ನ ಯಾವ ಮಕ್ಕಳಿಗೂ ಕಲೆಯಲ್ಲಿ ಮುಂದುವರಿಯಲು ಅವಕಾಶ ಕೊಡಲಿಲ್ಲ. ಕಲೆ ಇವರ ಮನೆತನದಲ್ಲಿ ಮೂಲ ಸೆಲೆಯೂ ಆಗಿತ್ತು ಎನ್ನುವುದಕ್ಕೆ ಮಕ್ಕಳು ಮೊಮ್ಮಕ್ಕಳನ್ನು ಈಗ ಪ್ರತ್ಯಕ್ಷಕಂಡಾಗ ಗೊತ್ತಾಗುತ್ತದೆ. ಅಪ್ಪಾಲಾಲನ ಮನೆತನ ಒಂದು ಭಾವೈಕ್ಯತೆಯ ಬೆಸುಗೆಯಲ್ಲಿ ಬೆಳೆಯಬೇಕಾದರೆ ಸಂಸ್ಕಾರ ಮುಖ್ಯ ಕಾರಣವಾಗುತ್ತದೆ. ಸಹೃದಯರ ಕವಟುಂಬಿಕ ಜೀವನದಲ್ಲಿ ಬಡತನ ಮಾತ್ರ ಎದ್ದು ಕಾಣುತ್ತದೆ. ಆದರೂ ಈ ಅಣ್ಣಾಸಾಹೇಬ ಬಾಲಕನಾಗಿದ್ದಾಗ ಶ್ರೀ ಕೃಷ್ಣ ಪಾರಿಜಾತದಲ್ಲಿ ಅಭಿನಯಿಸಿದ್ದನ್ನಲ್ಲದೆ, ಯಲಗಲದಿನ್ನಿಯ ಪಂಚಾಕ್ಷರಿ ನಾಟ್ಯ ಸಂಘವೆಂಬ ಕಂಪನಿಯಲ್ಲಿ ಪಾತ್ರ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾನೆ. ಈ ಅಣ್ಣಾಸಾಹೇಬನಿಗೆ ಮೂರು ಮಕ್ಕಳಿದ್ದಾರೆ. ಹೆಂಡತಿಯಾದ ರೋಶನಬಿ ಜತ್ತ ತಾಲೂಕಿನ ಬಡಚಿ ಗ್ರಾಮದವಳು. ತುಂಬ ಜಾಣೆ ಮತ್ತು ಸಾಂಸ್ಕೃತಿಕ ಮನಸ್ಸುಳ್ಳವಳು. ತಿಳಿವಳಿಕೆಯ ಹೆಣ್ಣು ಮಗಳು. ಅಪ್ಪಾಲಾಲರ ಮನೆತನಕ್ಕೆ ತಕ್ಕ ಸೊಸೆ. ಅತ್ತೆ – ಮಾವರ ಬಗ್ಗೆ ಅಪಾರ ಗೌರವ ಹೊಂದಿರುವ ಹೆಣ್ಣು ಮಗಳು. ನಮ್ಮ ಮಾವನಿರುವತನಕ ಕುಟುಂಬದ ನಾವ್ಯಾರೂದುಡಿಯಲು ಹೋಗಲಿಲ್ಲ.ನಮ್ಮ ಉಪಜೀವನಕ್ಕೆ ಕೊರತೆಯಾಗದಂತೆ ನಮ್ಮನ್ನು ನೋಡಿಕೊಂಡು ಹೋಗಿದ್ದಾರೆ. ಅವರು ತೀರಿಹೋದ ನಂತರ ಜೀವನದ ತಾಪತ್ರೆಯದ ಅರಿವು ನಮಗಾಗಿದೆ. ಈಗ ದುಡಿದು ತಿನ್ನುವುದು ನಮ್ಮ ಬದುಕಾಗಿದೆ. ಯಾವ ಕೆಲಸದಲ್ಲಿಯೂ ನಮಗೆ ಅನುಭವವಿಲ್ಲದಿರುವುದು ನಿಜವಾಗಿ ನಮಗೆ ತುಂಬ ತೊಂದರೆಯಾಗಿದೆ. ಮಾವನನ್ನು ಕಳೆದುಕೊಂಡ ಅನಾಥ ಪ್ರಜ್ಞೆ ಇಂದು ನಮ್ಮ ಇಡೀ ಕುಟುಂಬವನ್ನು ಕಾಡುತ್ತಿದೆ. ಜೀವನಕ್ಕೆ ಏನಾದರೂ ಮಾಡಿಕೊಂಡು ಬದುಕುವುದು ಅನಿವಾರ್ಯವಾಗಿದೆ. ಹೀಗಾಗಿ ನಾವಿಬ್ಬರೂ ಗಂಡ – ಹೆಂಡತಿಯರು ಕಾಯಿಪಲ್ಲೆ ವ್ಯಾಪಾರ ಮಾಡಿಕೊಂಡು ಉಪಜೀವನ ಮಾಡುತ್ತಿದ್ದೇವೆ. ಇದರ ಅನುಭವವೂ ನಮಗಿಲ್ಲ ಆದರೂ ದುಡಿದು ತಿನ್ನುವುದೇ ನಮ್ಮ ಜೀವನಕ್ಕೆ ಒಳ್ಳೆಯ ದಾರಿ ಎಂದು ಹೆಳುತ್ತಾರೆ. ಅಪ್ಪಾಲಾಲನ ಸೊಸೆ ಎಂದು ಗೊತ್ತಾದ ಮೇಲೆ ನೀವ್ಯಾಕೆ ಕಾಯಿಪಲ್ಲೆ ಮಾರಿ ಬದುಕ್ತೀರಿ. ನಿಮ್ಮ ಮಾವ ನಿಮಗೆ ಸಾಕಷ್ಟು ಗಳಿಸಿ ಇಟ್ಟಿರಬೇಕಲ್ಲ ಅವನಂಥ ಕಲಾವಿದನನ್ನು ಇನ್ನು ಮುಂದೆ ನಾವೇನ ಕಾಣ್ತೀವಿ ಅಂತಾರ. ಇಂಥ ಮಾತು ಮತ್ತಷ್ಟು ನಮ್ಮನ್ನು ಕಬ್ಜರನ್ನಾಗಿ ಮಾಡುತ್ತದೆ. ನಮ್ಮ ಮಾವ ನಮ್ಮ ಸಮಾಜದಾಗ ಹುಟ್ಟ ಬಾರದಿತ್ತು. ನಮ್ಮಸಮಾಜದ ಕಟ್ಟಳೆಗಳು ನಮ್ಮ ಜೀವನಕ್ಕೆ ಅಶಾದಾಯಕವಾಗಿಲ್ಲ. ನಮ್ಮ ಮಾವನ ಫೋಟೊ ಹಾಕಿಕೊಳ್ಳಲೂ ನಮ್ಮ ಧರ್ಮದಲ್ಲಿ ಅನುಕೂಲವಿಲ್ಲ. ಅಪ್ಪಾಲಾಲ ನದ್ಧಾಫ ಅಂದ್ರೆ ಎಲ್ಲಿ ಹೋದಲ್ಲಿ ಅವನ ನೆನಪು ಮಾಡಿ ನಮ್ಮನ್ನು ಎಚ್ಚರಿಸುತ್ತದೆ, ಪ್ರಾಮಾಣಿಕ ಜೀವನದಲ್ಲಿ ನಾವು ಹೇಗೆ ಬದುಕಬೇಕೆಂಬುದನ್ನು ಕಲಿಸಿಕೊಡುತ್ತದೆ ಎನ್ನುತ್ತಾಳೆ. ಮಕ್ಕಳಲ್ಲಿಯೂ ಕಲಾದೇವಿ ಇಣಿಕಿ ಹಾಕ್ತಾಳೆ. ಸಮಾಜದ ಸಂಪ್ರದಾಯ ನಮ್ಮನ್ನು ಕಾಡುತ್ತದೆ. ಜಮಖಂಡಿ ಜನರು ಮನಸ್ಸು ಮಾಡಿದರೆ ಇಷ್ಟೊತ್ತಿಗೆ ಜಮಖಂಡಿಯಲ್ಲಿ ಅಪ್ಪಾಲಾಲನ ಮೂರ್ತಿ (ಪ್ರತಿಮೆ) ಪ್ರತಿಸ್ಠಾಪನಾ ಮಾಡಬಹುದಾಗಿತ್ತು. ನಮ್ಮ ಮಾವನದೂ ಏನಾದ್ರೂ ಒಂದು ಸ್ಮಾರಕ ಜಮಖಂಡಿಯಲ್ಲಿ ಆಗಬೇಕು. ಮನಸ್ಸು ಮಾಡಿದ್ರೆ ಇದೇನು ದೊಡ್ಡದಲ್ಲ. ಆದ್ರೆ, ಇದಕ್ಕೆ ನಮ್ಮವರೇ ಯಾರೋ ಅಡ್ಡಗಾಲು ಹಾಕಿದ್ದಾರೆಂದು ಕೇಳೀನಿ ಎಂದು ತನ್ನ ಒಡಲ ಬಿಚ್ಚಿ ದುಃಖ ತೋಡಿಕೊಳ್ಳುತ್ತಾಳೆ. ನಮ್ಮ ಮಾವ ಇರುವಾಗ ನಾವು ಮನಿಬಿಟ್ಟು ಹೊರಗೆ ಹೋಗಿಲ್ಲ ಅನ್ನುವುದು ಬೇರೆ ಮಾತು. ಇಂದು ನಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಗೆ ಹಾಕಬೇಕಾದ್ರೆ ನಮಗೆ ತೊಂದ್ರಿ ಅದ. ಯಾಕಂದ್ರೆ ಗೋಸೆ ನೋಡ್ರಿ. ಅಂದ್ರೆ ಮಕ್ಕಳು ಬುರಕಾಹಾಕ್ಕೊಂಡು ಹೊರಗೆ ಹೋಗ್ಯೇಕು. ಸಮಾಜದ ಸಂಪ್ರದಾಯನೂ ನಮಗ ಅನಿವಾರ್ಯ. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನೊದು ನಮಗೆ ತಿಳಿಲಾರದಂಗಾಗಿದೆ. ಈ ಹೆಣ್ಣು ಮಗಳ ಮಾತು ಕೇಳಿದ್ರೆ ತಮ್ಮ ಸಾಂಸ್ಕೃತಿಕ ಮನಸ್ಸು ಎಷ್ಟು ಸಂಕುಚಿತಗೊಂಡಿದೆ ಎನ್ನುವುದು ಅರಿವಾಗುತ್ತದೆ. ಅದೇ ಬೀಬಿಜಾನನ ಗಂಡ ಹಾಜೀಸಾಹೇಬ ಅಮಿನಸಾಹೇಬ ನದ್ಧಾಫನ ನಿಡೋಣಿ ಇವರು ಅಂದ್ರೆ ಅಪ್ಪಲಾಲ ನದ್ಧಾಫ ಮಾವನ ಮೊದಲನೇ ಹೆಂಡತಿ ಮಗ ಈಗ ಪಾರಿಜಾತ ಕಂಪನಿ ಕಟ್ಟಿಕೊಂಡು ಇದೇ ಆಟದಲ್ಲಿ ಮುಂದುವರೆದಾರು. ಆದ್ರೆ ನಮ್ಮ ಮನಿಯವರಿಗೆ ಅದು ಸಾಧ್ಯವಾಗಿಲ್ಲ. ನಾವು ದುಡಿಯೋದು ತಿನ್ನೂದು ಮಾಡ್ತೀವಿ. ಇದರಿಂದ ಸಮಾಜಕೇನೂ ಉಪಯೋಗ ಆಗುದಿಲ್ಲಾ, ಎನ್ನುವಂಥ ಒಡಲಾಳದ ಮಾತುಗಳ ಕಲೆಯನ್ನು ಗೌರವಿಸುವ ಮನಸ್ಸಿನ ಸೊಸೆಯೊಬ್ಬಳು ಅಪ್ಪಾಲಾಲರಿಗೆ ಸಿಕ್ಕಿದ್ದು, ನಮ್ಮ ನಾಡಿನ ಸುದೈವ. ಇಂದು ಯಾರಾದರೂ ಅಪ್ಪಾಲಾಲನ ಮನೆಗೆ ಕಲಾಸಕ್ತರು ಹೋದ್ರೆ ನಿರಾಶೆಯಾಗಿ ಬರಲಾರರು. ಆತಿಥ್ಯ ಪ್ರೀತಿ – ಸಹೃಯದ ಮಾತುಗಳು ಅವಳ ಬಾಯಿಂದ ಬರುತ್ತವೆ. ಬಂದಾವ್ರೆಲ್ಲಾ ಬರೀ ಕೇಳ್ತಾರು – ಹೋಗ್ತಾರು ಇರುವ ಮಾಹಿತಿಯ ಫೋಟೊ – ಕಾಗದ ಪುಸ್ತಕ ಒಯ್ದುಬಿಡ್ತಾರು ತಿರುಗಿ ಮಾತ್ರ ಯಾರೂ ಕೊಟ್ಟಿಲ್ಲಾ ಎನ್ನುತ್ತಾರೆ. ಯಾರಿಂದಲೂ ನಮಗ ಏನೂ ಸಹಾಯವಾಗಿಲ್ಲ ಎನ್ನುವ ಆಲಾಪ ಅವಲದಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಅಪ್ಪಾಲಾಲನ ದಾಖಲೆಗಲು ಮನೆಯಲ್ಲಾದರೂ ಇರಬೇಕೆಂಬುದು ಮನೆಯವರ ಅಪೇಕ್ಷೆಯಾಗಿದೆ.

ಮನೆಯಲ್ಲಿ ಮೂರು ಮಕ್ಕಳು ಬೆಳೆಯುತ್ತವೆ. ಮುಗ್ಧ ಮನಸ್ಸಿನ ಕುಟುಂಬ ಇದಾಗಿದೆ, ಖಾತುಬಿನ ಹೊಟ್ಟೆಯ ಮಗನಾಗಿರುವ ಅಣ್ಣಾಸಾಹೇಬನ ಹೆಂಡತಿ ರೋಶನ್ ಬಿ ಮೂರು ಮಕ್ಕಳಲ್ಲಿ ಒಬ್ಬಳು ರೇಶ್ಮಾ, ಇನ್ನೊಬ್ಬಳು ಆಸ್ಮಾ ಒಬ್ಬ ಗಂಡು ಮಗ ಸಿರಾಜ ಐ. ಟಿ. ಐ ಕಲ್ಲಿಯುತ್ತಿದ್ದಾನೆ. ಹೆಣ್ಣು ಮಕ್ಕಳು ಹೈಸ್ಕೂಲಿನಲ್ಲಿ ಓದುತ್ತಿದ್ದಾರೆ.

ಕನಿಷ್ಠ ಈ ಮಕ್ಕಳ ಶಿಕ್ಷಣಕ್ಕಾದರೂ ಸರ್ಕಾರ ಸರ್ವತೋಮುಖ ಸಹಾಯ ಮಾಡಬೇಕೆನ್ನುವ ಮನಸ್ಸು ಕಂಡವರದಾಗಿದೆ. ಒಬ್ಬ ಶ್ರೇಷ್ಠ ಕಲಾವಿದನಾಗಿ ಮೆರೆದ ಅಪ್ಪಾಲಾಲ ತನ್ನ ಕಲಾಸಕ್ತಿಗಾಗಿ ವಿದ್ಯೆ ಕಲಿಯುವುದನ್ನೇ ಬಿಟ್ಟು ಕಲಾ ನಿಪುಣನಾದ. ಆದ್ರೆ ಆತನ ಮೊಮ್ಮಕ್ಕಳು ಬಡತನದಿಂದ ಪರದಾಡುವುದು ಕೇಳಿದವರ ಮನಸ್ಸು ಕಸಿವಿಸಿಗೊಳ್ಳುತ್ತಿದೆ. ಅಪ್ಪಾಲಾಲನ ರೂಪ, ಸ್ವಭಾವ ಎಲ್ಲ ಹೊತ್ತುಕೊಂಡು ಭೂಮಿಗೆ ಬಂದ ಇವರಲ್ಲಿ ಕಲಾದೇವಿ ಪ್ರತಿಭೆಯನ್ನು ಕೊಡಲಾರದೇ ಇರಲಾರಳು. ಇಂಥ ಮಕ್ಕಳು ಹೊಸ ಸಮಾಜದ ಆಧುನಿಕತೆಯನ್ನು ಮೈಗೂಡಿಸಿಕೊಂಡು ಬೆಳೆಯಬೇಕು. ಸಂಪ್ರದಾಯದ ಸುಳಿಗೆ ಸಿಕ್ಕು ಕರಗಬಾರದು ಎನ್ನುವ ಕಳಕಳಿ ಪ್ರತಿಯೊಬ್ಬರನ್ನೂ ಕಾಡುತ್ತದೆ. ಒಂದು ಸಮಾಜದಲ್ಲಿದ್ದರು ಸಮಾಜವನ್ನು ಹೃದಯಶ: ಗೌರವಿಸಬೇಕು. ಅದು ಸಮಾಜದ ಘನತೆಯಾಗುತ್ತದೆ. ಸಮಾಜ ಪ್ರತಿಯೊಂದು ಕುಟುಂಬದ ಸದಿಚ್ಚೆಯನ್ನು ಬೆಳೆಸಬೇಕು. ಸದ್ವಿಚಾರಗಳನ್ನು ತುಂಬಬೇಕು. ಬಾಲ್ಯದಲ್ಲಯೇ ಕಲೆಯ ಬೆನ್ನು ಹತ್ತಿ ವಿದ್ಯಾತ್ಯಾಗಮಾಡಿಕೊಂಡ ಅಪ್ಪಾಲಾಲನ ಮೊಮ್ಮಕ್ಕಳಿಗಾದರೂ ವಿದ್ಯಾ ಸೌಲಭ್ಯ ಸರ್ಕಾರದಿಂದ ಒದಗಬೇಕು. ಇದು ಅಪ್ಪಾಲಾಲರಿಗೆ ಕೊಡುವ ಗೌರವ. ಇದರಿಂದ ಆತನ ಆತ್ಮಕ್ಕೆ ಶಾಂತಿ ಲಭಿಸಿದಂತಾಗುತ್ತದೆ.

ಅಪ್ಪಾಲಾಲ ನದ್ಧಾಫರ ಎರಡನೇ ಹೆಂಡತಿ ಅಮಿನಮಾ ಈಗ ಜಮಖಂಡಿಯಲ್ಲಿದ್ದಾಳೆ. ಅಪ್ಪಾಲಾಲರು ತೀರಿಕೊಂಡ ನಂತರ ಕೇವಲ ಎರಡುನೂರು ರೂಪಾಯಿಗಳ ಮಾಸಾಶನ ಬರುತ್ತಿದೆ! ಇಂದಿನ ಕಾಲದಲ್ಲಿ ೨೦೦ ರೂ. ಗಳಲ್ಲಿ ಬದುಕು ಹೇಗೆ ನೂಕಬೇಕೆಂಬ ಪ್ರಜ್ಞೆ ಯಾರಿಗೆ ಹೊಳೆಯಬೇಕು? ಪಾಪ ಈ ಹೆಣ್ಣು ಮಗಳ ಗೋಳು ಯಾರಿಗೆ ತೋಡಿಕೊಂಡರೆ ಇದರ ಪರಿಹಾರವಾಗಲು ಸಾಧ್ಯ? ಕಲಾಭಿಮಾನಿಯಾದ ಅಧಿಕಾರಿಗಳಾದರೂ ಇರಬೇಕು ಅಂದ್ರೆ ಬದುಕು ನೂಕುವ ಹಾದಿ ಬಗ್ಗೆ ಯೋಚನೆ ಹೊಳೆದೀತು. ಅನಕ್ಷರತೆ ಸಾಂಸ್ಕೃತಿಕ ಬದುಕಿಗೆ ಅಡ್ಡ ಬಂದರೂ ಸುಸಂಸ್ಕೃತ ಜೀವನಕ್ಕೆ ಅಡ್ಡ ಬರಲಾರದುಃ ಅಂಥ ಕುಟುಂಬವಿದು.

ಅಪ್ಪಾಲಾಲರ ಎರಡನೇ ಮಗ ಅಂದ್ರೆ ಅಮಿನಮಾನ ಮಗ ಸಾಹೇಬಲಾಲ ಇದ್ದಾನೆ. ಇತನಿಗೆ ಇಬ್ಬರು ಮಕ್ಕಳು ಒಬ್ಬ ಗಂಡುಮಗ ಒಬ್ಬಳು ಹೆಣ್ಣು ಮಗಳು. ಸಾಹೇಬಲಾಲನ ಪತ್ನಿ ಪರಮಿನ ಬಾಬು ಇತ್ತೀಚೆಗೆ ತೀರಿಹೋದಳು. ಮಗನ ಹೆಸರು ನಸರಿನ್. ಈ ಇಬ್ಬರು ಮಕ್ಕಳ ಪೋಷಣೆ ಈತನಿಗೆ ಕಷ್ಟವಾಗಿದೆ. ಈ ಮಕ್ಕಳು ಈಗ ಈತನ ಅತ್ತೆ ಮನೆಯಲ್ಲಿ ಬೆಳೆಯುತ್ತಿವೆ. ಅಪ್ಪಾಲಾಲನ ಮೊಮ್ಮಕ್ಕಳ ಬಗ್ಗೆ ಸರ್ಕಾರ ಒಂದಿಷ್ಟು ಗಮನ ಹರಿಸಿ ಮಕ್ಕಳ ಶಿಕ್ಷಣಕ್ಕಾದರೂ ಸರ್ವತೋಮುಖ ನೆರವು ನೀಡಬೇಕು. ಅಂದಾಗ ಒಬ್ಬ ಕಲಾಕಾರನಿಗೆ ಸಮಾಜ – ಸರ್ಕಾರ ಮನ್ನಣೆ ಕೊಟ್ಟಂತಾಗುತ್ತದೆ. ಮಾಜಿ ಸೈನಿಕರ ಮಕ್ಕಳಿಗೆ ಸಿಗುವ ಸೌಲಭ್ಯಗಳು ಸಾಂಸ್ಕೃತಿಕ ನೆಲದ ಸೇವೆ ಮಾಡಿದವರಿಗೂ ಸಲ್ಲಬೇಕು. ಅಪ್ಪಾಲಾಲರ ತಾಯಿ ಐದು ಜನ ಸಹೋದರಿಯರು. ಈ ಐವರಲ್ಲಿ ಒಬ್ಬಳು ಇಮಾಂಬು ಇವರಿಗೆ ಗಂಡು ಮಕ್ಕಳಿರಲ್ಲಿಲ್ಲ. ಹೀಗಾಗಿ ಇವರ ಹೆಸರಿನ ಐದು ಎಕರೆ ಜಮಿನನ್ನು ಅಪ್ಪಾಲಾಲ ಮತ್ತು ಹಾಜೀಸಾಹೆಬ ಇವರಿಗೆ ಕೊಟ್ಟಳು. ಈ ಜಮಿನು ಮಾತ್ರ ಇವರ ಸ್ಥಿರಾಸ್ತಿ. ಈಗ ಅಪ್ಪಾಲಾಲರ ಹೆಸರಿನಲ್ಲಿರುವ ಎರಡುವರೆ ಎಕರೆ ಜಮೀನಿನಲ್ಲಿ ಅಪ್ಪಾಲಾಲರ ಇಬ್ಬರೂ ಮಕ್ಕಳು ಉಪಜೀವನ ಮಾಡಬೇಕು.

ಇನ್ನು ತಾರಾಪತ್ನಿ ಚಂಪಾಬಾಯಿ ಸುಳೆ ಕುಟುಂಬ ಕೂಡ ಇವರೆದುರಿನ ಸ್ವಂತ ಮನೆಯಲ್ಲಿಯೇ ಇದೆ. ಇವೆರಡೂ ಕುಟುಂಬ ಈಗಲೂ ಅನ್ಯೋನ್ಯವಾಗಿರುವುದು ವಿಶೇಷ. ಇವರಿಬ್ಬರ ಕುಟುಂಬಕ್ಕೆ ಸಂಬಂಧ ಆಧಾರವಾಗಿದೆಯೆಂದು ಬರೆಯಬೇಕಾಯಿತು. ಯಾಕೆಂದರೆ ಈ ಸಂಬಂಧದ ಬಗ್ಗೆ ಸ್ವತಃ ಎರಡೂ ಕುಟುಂಬದಲ್ಲಿ ಸದಭಿಪ್ರಾಯ ನಾನು ಸ್ವತಃ ಇವರ ಮನೆಗೆ ಹೋದಾಗ ತಿಳಿದಿದೆ. ಈ ಎರಡೂ ಕುಟುಂಬಗಳು ತುಂಬ ಪ್ರೀತಿಯಿಂದ ಕೂಡಿಕೊಂಡು ಇರುವುದು ಯಾರೇ ಲೇಖಕನಲ್ಲಿ ವಿಶ್ವಾಸ ಹುಟ್ಟಿಸುತ್ತದೆ. ಸುಮಾರು ೧೯೭೧ ರಿಂದಲೇ ನಾನು ಇದೇ ಜಮಖಂಡಿಯ ರಹವಾಸಿಯಾಗಿರುವುದರಿಂದ ನೂರಾರು ಜನರ ಬಾಯಿ – ಕಿವಿಗಳು ಸಾಕ್ಷಿ ಹೇಳುತ್ತವೆ.

ಚಂಪಾಬಾಯಿ ಮೂಲತಃ ಬೈಲಹೊಂಗಲ ತಾಲೂಕಿನ ನನದಿಯವಳು. ಇವರ ತಾಯಿ – ಮತ್ತು ಅಜ್ಜ ತುಂಬ ಪ್ರೀತಿಯಿಂದ ಕಲಾಕ್ಷೇತ್ರಕ್ಕೆ ಕಳಿಸಿದ್ದಾರೆ. ಚಂಪಾಬಾಯಿ ಒಬ್ಬ ಶ್ರೇಷ್ಠ ಕಲಾವಿದೆ. ಪಾರಿಜಾತ ಕಂಪನಿಯಲ್ಲಿ ಅವಿರತವಾಗಿ ದುಡಿದವಳು. ಮೂಲತಃ ಕೌಜಲಗಿ ನಿಂಗವ್ವನ ಕಂಪನಿಯಿಂದ ಬೆಳಕಿಗೆ ಬಂದವಳು. ಅಪ್ಪಾಲಾಲನ ಕಂಪನಿಯೊಂದಿಗೇನೇ ಕೊನೆಯುಸಿರೆಳೆದಳು. ಈ ಇಬ್ಬರ ಅನ್ಯೋನ್ಯತೆ ಕಲಾಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಅಭಿನಯದಂತೆ ಬೆಳೆದು ಬಂದಿದ್ದಾಗಿದೆ. ಒಬ್ಬರಿಗಿಂತಲೂ ಒಬ್ಬರು ಹೆಚ್ಚು – ಹೆಚ್ಚಾಗಿ ಬೆಳೆದವರು. ಅಪ್ಪಾಲಾಲ ನದ್ಧಫರು ಗಂಡಾಗಿ ಹುಟ್ಟಿ ಹೆಣ್ಣಿನ ಅಭಿನಯ ಮೀರಿ ಬೆಳೆದವರು! ಹೆಣ್ಣು ನಾಚಿ ನೀರಾಗಬೇಕು! ಅಪ್ಪಾಲಾಲ ಸ್ತ್ರೀಪಾತ್ರಾಭಿನಯ ಕಂಡು ಚಂಪಾಕೂಡ ಎಲ್ಲ ಪಾತ್ರಗಳಿಗೂ ಸೈ ಎನಿಸಿಕೊಂಡವಳು. ರುಕ್ಮಿಣಿ, ಕೊರವಂಜಿ ಪಾತ್ರಗಳು ಇವರಿಗೆ ವಿಶೇಷ. ಅಪ್ಪಾಸಾಹೇಬ ಚಂಪವ್ವನ ಮಗ. ಮೊಹಬತ್ ಬಿ ಎನ್ನುವಾಕೆ ಅಪ್ಪಾಸಾಹೇಬನ ಧರ್ಮ ಪತ್ನಿ. ಮೂರು ಹೆಣ್ಣು ಒಂದು ಗಂಡು ಹೀಗೆ ನಾಲ್ವರು ಮಕ್ಕಳು. ಅಪ್ಪಾಸಾಹೇಬ ಚುರುಮುರಿ ಭಟ್ಟಿಯಲ್ಲಿ ಕೆಲಸ ಮಾಡಿಕೊಂಡು ಉಪಜೀವನ ಮಾಡುತ್ತಾನೆ. ಅದು ಚಂಪಾಬಾಯಿ ಬಗ್ಗೆ ಬರೆಯುವಾಗ ಹೆಚ್ಚು ಸೂಕ್ತ. ಅಪ್ಪಾಲಾಲ ನದ್ಧಾಫರ ಕಲಾತ್ಮಕ ಮತ್ತು ವೈಯಕ್ತಿಕ ಜೀವನದ ನೋವು ನಲಿವಿನಲ್ಲಿ ಬೆಳೆದು ಹೆಸರು ಮಾಡಿದ ಕಲಾವಿದೆಯ ಮೂಲ ಗುರು ತಾಯಿ ಮತ್ತು ಅಜ್ಜ. ಇವರ ಪ್ರೋತ್ಸಾಹದಿಂದಲೇ ಗುರಪ್ಪ ಬಸೆಟ್ಟೆಪ್ಪ ಅನಂತಪೂರ ಅವರು ಕಲಾಗುರುವಾದದ್ದು.

ರಂಗ ಜಗದ ದಿಗ್ಗಜರ ಅನುಶಾಸಕ

ಶ್ರೀ ಕೃಷ್ಣ ಪಾರಿಜಾತವು ಪುರಾಣ ಪ್ರತೀತಿಯ ಮಿಥಿಕ್ ಕೃತಿಯಾದರೂ ರಚನಕಾರನ ಕೌಶಲ್ಯದಿಂದಾಗಿ ಅದ್ಭುತ ಸೃಷ್ಟಿಯೇ ಆಗಿದೆ. ಸರ್ವಧರ್ಮೀಯರನ್ನು, ಸರ್ವಮತೀಯರನ್ನು ಆಕರ್ಷಿಸುವ ಮತ್ತು ಕಲಾಸಕ್ತಿಯನ್ನು ಹುಟ್ಟಿಸುವ ಅಪೂಟವಾದ ಜ್ಞಾನ ಬೀಜಗಳು ಅದರಲ್ಲಿವೆ. ಹೀಗಾಗಿ ಶ್ರೀ ಕೃಷ್ಣ ಪಾರಿಜಾತವನ್ನು ನೋಡಿದವರು ಒಂದಿಲ್ಲೊಂದು ರೀತಿಯಲ್ಲಿ ಒಂದಿಲ್ಲೊಂದು ದೃಷ್ಟಿಯಲ್ಲಿ ಮನನೀಯ ಮಾಡಿಕೊಳ್ಳುತ್ತಾರೆ. ಬರಹಗಾರನ ವಿಶಾಲ ದೃಷ್ಟಿ ಪಾರಿಜಾತವನ್ನು ಒಮದು ಸಾರ್ವಕಾಲಿಕ ಕೃತಿಯನ್ನಾಗಿಸಿದೆ.

ಇದು ಬಹು ವಿಸ್ತೃತವಾದ ಕ್ಷೇತ್ರ ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರೆಲ್ಲರೂ ದಾಖಲೆಗೆ ಬರುವುದು ಕಷ್ಟದ ಕೆಲಸ. ನೂರಾ ಅರವತ್ತು ವರ್ಷಗಳಿಂದ ಇದು ಸಾಗಿಬಂದಿದ್ದರೂ ಇದರ ಮೇಲೆ ರಚನಾತ್ಮಕ ಕೆಲಸ ನಡೆದದ್ದು ಇತ್ತಿಚೆಗಷ್ಟೆ.

ಇದೇ ಜಮಖಂಡಿ ತಾಲೂಕಿನ ಕುಮಚನೂರಲ್ಲಿ ೧೯೨೦ರಲ್ಲಿ ಶ್ರೀ ಕೃಷ್ಣ ಪಾರಿಜಾತ ಕಂಪನಿಯೊಂದು ಹುಟ್ಟಿಕೊಂಡಿತು. ಕುಂಚನೂರ ಗ್ರಾಮದೇವತೆಯಾದ ಶ್ರೀ ಮಹಾದೇವ ಹೆಸರು ಹೊತ್ತ ಸೇವೆ ಮಾಡುತ್ತಿತ್ತು. ರಾಮಚಂದ್ರ ಸಾವಂತ, ಸನದಿ ಗ್ರಾಮದ ಕಲಾವಿದ ಶ್ರೀ ಕೃಷ್ಣನ ಪಾತ್ರದಲ್ಲಿ ಮುರಿಗೆಯ್ಯ ಸ್ವಾಮಿ ಅಭಿನಯಿಸುತ್ತಿದ್ದ. ದೊರೆಸಾನಿ ಅಥವಾ ಗೊಲ್ಲತಿ ಎನ್ನುವ ಪಾತ್ರದಲ್ಲಿ ಆಲಗೂರ ಭೀಮಶಿ ಅಭಿನಯಿಸುತ್ತಿದ್ದ. ಕುಂಬಾರ ನೀಲಪ್ಪ ಎಂಬಾತ ರುಕ್ಮಿಣಿ ಪಾತ್ರದಲ್ಲಿ ಅಭಿನಯಿಸುತ್ತಿದ್ದ. ಭಾಗವತ ಪಾತ್ರದಲ್ಲಿ ಕೋಣೆಗೋಳ ಮಲ್ಲೇಶ್ವಪ್ಪ ಅಭಿನಯಿಸುತ್ತಿದ್ದು ಸರ್ವಧರ್ಮ – ಸರ್ವಮತೀಯರ ಸಂಘಟನೆಗಳು ಐವತ್ತು ಅರವತ್ತು ವರ್ಷಗಳಿಂದ ನಡೆದುಕೊಂಡು ಬರುತ್ತವೆಂದರೆ ಅವರವರ ಸೇವೆ – ಭಕ್ತಿಗೆ ಕಾರಣವಾಗಿತ್ತೆಂದು ಹೇಳಬೇಕು. ಇದು ಕೇವಲ ಒಂದು ಕಂಪನಿಗೆ ಉದಾಹರಣೆಯಾಗಿರುವ ಮಾತಲ್ಲ; ಬಹಳಷ್ಟು ಕಂಪನಿಗಳ ನಿಷ್ಠೆ ಇದೇ ಆಗಿತ್ತು. ಬಹಳೆಂದರೆ ಕಲಾವಿದರು ಕಂಪನಿಯಿಂದ ಕಂಪನಿಗೆ ಬದಲಾವಣೆಗೊಳ್ಳುತ್ತಿದ್ದರಷ್ಟೆ. ಆದ್ರೆ ಯಾವುದೇ ಕಾರಣದಿಂದ ಕಲಾಭಿನಯದಿಂದ ಬಿಟ್ಟು ಹೋದವರು ಬಹುತೇಕ ಯಾರೂ ಇಲ್ಲ. ಆದ್ರೆ ಅಪ್ಪಾಲಾಲ ನದ್ಧಾಫರ ಪಾರಿಜಾತ ಹುಟ್ಟಿ ನಾಲ್ಕು ವರ್ಷಗಳಲ್ಲಿ ಇದು ತಟಸ್ಥಗೊಂಡಿತು. ಈ ರೀತಿ ನಿಂತ ಸಂಘಟಿತಗೊಂಡು ಸುರುವಾಗಲು ಸಾಧ್ಯವೂ ಇತ್ತು. ಕುಂಚನೂರಿನ ಕೋಣೆಗೋಳ ಮನೆತನವೊಂದು ಶ್ರೀ ಕೃಷ್ಣ ಪಾರಿಜತ ಕ್ಷೇತ್ರದಲ್ಲಿ ತುಂಬ ಕೆಲಸ ಮಾಡಿದೆ ಮಲ್ಲೇಶಪ್ಪ ಮಾತ್ರವಲ್ಲ, ಸ್ವಾತಂತ್ರ್ಯ ಯೋಧ ಮಹದೇವಪ್ಪ ಕೂಡ ತುಂಬ ದುಡಿದಿದ್ದಾರೆ. ಜೊತೆಗೆ ಈತನ ತಮ್ಮ ಮುತ್ತಪ್ಪ ಕೋಣೆಗೋಳ ಸಹಿತ ಬಹಳಷ್ಟು ವರ್ಷ ಅಂದ್ರೆ ಜೀವನದ ಕೊನೆಯವರೆಗೆ ದುಡಿದವ. ಹೀಗೆಯೇ ಇದೇ ತಾಲೂಕಿನ ಟಕ್ಕಳಕಿಯಲ್ಲಿಯೂ ೧೯೨೫ ರಲ್ಲಿ ಮತ್ತೊಂದು ಕಂಪನಿ ಹುಟ್ಟಿಕೊಂಡಿತು. ಒಮದು ರೀತಿಯಲ್ಲಿ ಹಳ್ಳಿ ಹಳ್ಳಿಯಲ್ಲಿ ಹುಟ್ಟಿಕೊಳ್ಳುವ ಈ ಕಂಪನಿಗಳು ಶ್ರೀ ಕೃಷ್ಣನ ಭಕ್ತರ ಗುಂಪು ಅಥವಾ ಶ್ರೀಕೃಷ್ಣನ ಅಭಿಮಾನಿಗಳ ಸಂಘಟನೆಯೂ ಅನ್ನಬಹುದು. ಟಕ್ಕಳಕಿ ವಿಠಲರಾವ್ ಒಬ್ಬರು ಇಲ್ಲಿ ಹೆಚ್ಚು ಬೆಳೆದಿರುವ ಶ್ರೇಷ್ಠ ಕಲಾವಿದರು. ಅಪ್ಪಾಲಾಲನ ಕಂಪನಿಯ ಭರಾಟೆಯಲ್ಲಿ ಸಣ್ಣ ಪುಟ್ಟ ಕಂಪನಿಗಳು ಬದಿಗೆ ಸರಿಯ ತೊಡಗಿದವು. ಅಪ್ಪಾಲಾಲನ ಕಂಪನಿಯಲ್ಲಿ ವಿಠಲರಾವ್ ಟಕ್ಕಳಕಿ ಸೇರಿಕೊಂಡ ನಂತರ ಚಿನ್ನದ ಉಂಗುರಕ್ಕೆ ಹರಳು ಸೇರಿ ಮಿಂಚಿದಂತಾಯಿತು ಅಪ್ಪಾಲಾಲನ ಅಣ್ಣ ಹಾಜಿಸಾಹೇಬ ಭಾಗವತ ಪಾತ್ರ ಮಾಡುತ್ತಿದ್ದ. ಗೊಲ್ಲತಿ, ಸತ್ಯಭಾಮಾ ಕೊರವಂಜಿ ಪಾತ್ರಗಳನ್ನು ಅಪ್ಪಾಲಾಲ ಮಾಡುವುದಂತು ಸೈಯೇ ಸೈ. ಚಂಪಾಬಾಯಿ ನಣದಿ ದೊರೆಸಾನಿ ಪಾತ್ರದಲ್ಲಿ ಅಭಿನಯಿಸಿದರೆ ಕುಂಚನೂರ ನೀಲಪ್ಪ ಹಾರ್ಮೋನಿಯಮ್ ವಾದಕನಾದ. ನಾರದ ಮತ್ತು ಗೋಪಾಲನ ಪಾತ್ರದಲ್ಲಿ ಹಿಪ್ಪರಗಿ ಸಂಗಪ್ಪನಿದ್ದ. ಮಮದಾಪೂರ ಸಿದ್ದಪ್ಪ ತಬಲಾಸಾಥ. ಹುಲ್ಯಾಳದಲ್ಲಿದ್ದ ಈ ಕಲಾವಿದರೆಲ್ಲರೂ ತಮ್ಮ ತಮ್ಮ ಪ್ರತಿಭೆಯಲ್ಲಿ ಸ್ವತಂತ್ರ ಶೂರರೇ ಆಗಿದ್ದರು. ಅಂತೆಯೇ ಪಾರಿಜಾತ ಕ್ಷೇತ್ರದಲ್ಲಿ ಅಪ್ಪಾಲಾಲ ನದ್ಧಾಫ ರಂಗ ಜಗದ ದಿಗ್ಗಜನಾಗಲು ಸಾಧ್ಯವಾಯಿತು.

ಅಪ್ಪಾಲಾಲ ನದ್ಧಾಫ ಮತ್ತು ಟಕ್ಕಳಕಿ ವಿಠಲರಾವ ಕೊಡಿಕೊಂಡು ಕಂಪನಿ ಕಟ್ಟಿದರು. ಆದ್ರೂ ಅಪ್ಪಾಲಾಲನೇ ಮಾಲಿಕ ಎನ್ನುವುದು ವಿಶೇಷ. ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಮತ್ತೆ ಅಪ್ಪಾಲಾಲ ಹೆಸರಿನ ತಂಡದಲ್ಲಿದ್ದ ವಿಠಲರಾವ ಟಕ್ಕಳಕಿ ಉಳಿಯಲಿಲ್ಲ, ಟಕ್ಕಳಕಿಯವರ ತಂಡದಲ್ಲಿ ಭೀಮಪ್ಪ ಹಿಡಕಲ್ ಭಾಗವತ, ಟಕ್ಕಳಕಿ ಪಾರೀಶಪ್ಪ ಸಹ ಭಾಗವತ ಸುಲ್ತಾನ ಸಾಹೇಬ ಕೆರೂರ ಸತ್ಯಭಾಮೆ ಪಾತ್ರದಲ್ಲಿದ್ದರೆ, ಕೊಲ್ಹಾರ ಮುತ್ವಯ್ಯ ದೊರೆಸಾನಿ ಹಾಗೂ ರುಕ್ಮಿಣಿ ಪಾತ್ರದಲ್ಲಿದ್ದರು. ಮಹಾರುದ್ರಪ್ಪ ಮತ್ತು ಬಸಪ್ಪ ಹಾರ್ಮೋನಿಯಂ ಮತ್ತು ತಬಲಾಕ್ಕಿದ್ದರು. ಇವರಿಬ್ಬರೂ ತೇರದಾಳ ಮತ್ತು ಬನಹಟ್ಟಿಯವರಾಗಿದ್ದರು. ಬಹುತೇಕ ತಂಡಗಳು ತೂತು ಬಿದ್ದ ನಾವೆಗಳೇ ಆದವು. ಆದ್ರೆ ಅಪ್ಪಾಲಾಲ ಮಾತ್ರ ಸ್ಥಿತಪ್ರಜ್ಞನಾಗಿದ್ದ. ಆತನ ಅದೃಷ್ಟವೂ ಒಳ್ಳೆಯದಿತ್ತು. ಒಡೆದುಕೊಂಡವರಿಗೆಲ್ಲರಿಗೂ ಅಪ್ಪಾಲಾಲನ ಕಂಪನಿ ಆಶ್ರಯ ಸ್ಥಾನವೇ ಆಗಿತ್ತು. ಈ ಮನುಷ್ಯನ ಮನಸ್ಸು ಕೂಡ ಚೆನ್ನಾಗಿತ್ತು. ಹೀಗಾಗಿ ಅಭಿನಯದ ಬದುಕು – ಜೀವನದ ಬದುಕು ಎರಡಕ್ಕೂ ಸಾಮಿಪ್ಯವಿತ್ತು.

ಕನ್ನಡಾಕ್ಷರದ ಜ್ಞಾನ ಅಷ್ಟಕ್ಕಷ್ಟೇ ಇದ್ದರೂ ಆಡುವ ಮಾತು ಸ್ಪಷ್ಟ, ಶಬ್ದ ಸ್ಪಷ್ಟ, ವಿವರಣೆಯಂತೂ ತೀರಸ್ಪಷ್ಟ ಕಂಠವಂತು ಹೇಳಿ ಮಾಡಿಸಿದಂತಿತ್ತು. ಅದ್ಬುತ ಪ್ರತಿಭೆಯ ಅಪ್ಪಾಲಾಲನಿಗೆ ಆಯುಷ್ಯವೃದ್ದಿ ಗಟ್ಟಿಯಾಗಿತ್ತು. ಹಾಡುಗಳಂತು ಆಪ್ಯಾಯವಾಗಿದ್ದವು. ಅಪ್ಪಾಲಾಲನ ಹಾಡು ಕವ್ವಾಲಿಗಳಿಗೆ ತಲೆದೂಗದವರೇ ಇಲ್ಲ. ದಕ್ಷಿಣ ಕರ್ನಾಟಕ ಚಲನಚಿತ್ರ ಕ್ಷೇತ್ರದಲ್ಲಿ ಡಾ. ರಾಜಕುಮಾರ ಹೆಸರಾದಂತೆ ಪಾರಿಜಾತ ಕ್ಷೇತ್ರದ ಕೇಂದ್ರ ಪ್ರದೇಶವಾಗಿರುವ ಉತ್ತರ ಕರ್ನಾಟಕದ ಗಂಡು ಮೆಟ್ಟಿದ ಸ್ಥಳದಲ್ಲಿ ಅಪ್ಪಾಲಾಲ ಹೆಸರು ಮಾಡಿದ್ದಾರೆ. ರಾಜಕೀಯ ಬಲ ಮತ್ತು ಸಹಕಾರ ಡಾ. ರಾಜ್ ರಿಗೆ ನೀಡಿದಂತೆ ಅಪ್ಪಾಲಾಲರಿಗೂ ನೀಡಲೇಬೇಕು. ಅವರು ಕೂಡ ಶ್ರೇಷ್ಠ ಕಲಾವಿದರು. ಜಾತಿ, ಮತ, ಧರ್ಮಗಳ ಮೀರಿ ಕಲಾಸೇವೆ ನಾಡ ಸೇವೆ ಮಾಡಿದವರು. ಶಾಶ್ವತ ಕಲಾಶಾಸಕ ಅಪ್ಪಾಲಾಲ ನದ್ಧಾಫ ನಿರಂತರ ಜನಮನದಲ್ಲಿ ಉಳಿಯುವವರಾಗಿದ್ದಾರೆ.