ಪರಿವಾರದ ಇಂದಿನ ಸ್ಥಿತಿ

ಕರ್ನಾಟಕದ ರಾಜ್ಯದ ಶ್ರೇಷ್ಠ ಕಲಾವಿದರಾದ ಅಪ್ಪಾಲಾಲ ನದ್ಧಾಫರು ಇಡೀ ದೇಶಾದ್ಯಾಂತ ಹೆಸರು ಮಾಡಿ ಕೀರ್ತಿಗಳಿಸಿದ ವ್ಯಕ್ತಿ. ತನ್ನ ಇಡೀ ಜಾಯಮಾನವನ್ನು ಕಲೆಗಾಗಿ ಮೀಸಲಿಟ್ಟು ಬದುಕಿ ತೀರಿದವರು.

ನಾಡಿನ ವಿದ್ವಾಂಸರನೇಕರು, ಅಭಿಮಾನಿಗಳನೇಕರು, ಕಲಾಸಕ್ತರು ಇಂದು ಕೂಡ ಅಪ್ಪಾಲಾಲ ನದ್ಧಾಫ ಅವರ ಮನೆಗೆ ಭೇಟ್ಟಿಕೊಡುತ್ತಾರೆ. ಅವರ ಬಗ್ಗೆ ಮಾಹಿತಿ ಪಡೆಯುತ್ತಾರೆ. ಅಲ್ಲಲ್ಲಿ ಅವರ ಬಗ್ಗೆ ಬರೆಯುತ್ತಾರೆ. ಬರೆದುದನ್ನು ಕೆಲವರು ಓದಿ ತಿಳಿದುಕೊಳ್ಳುತ್ತಾರೆ.

ಇಂದು ಅಪ್ಪಾಲಾಲ ಅವರ ಮನೆಗೆ ಹೋದವರು ತುಂಬ ಉತ್ಸುಕರಾಗುತ್ತಾರೆ. ಜತೆಗೆ ನಿರಾಶರಾಗುತ್ತಾರೆ. ಬಂದವರೆಲ್ಲರೂ ಇರುವ ಮಾಹಿತಿಯನ್ನು ತೆಗೆದುಕೊಂಡು ಹೋಗುತ್ತಾರೆ. ಇದರಿಂದ ನಮಗಂತೂ ಏನೂ ಲಾಭವಾಗಿಲ್ಲ. ಪಾಪ ಓದಿ ಬರೆದವರಿಗಾದ್ರೂ ಒಳ್ಳೆಯದಾದ್ರೆ ಸಾಕು ಎಂದು ಅತೃಪ್ತಿಯನ್ನು ವ್ಯಕ್ತ ಪಡಿಸುತ್ತಾರೆ. ಈಗ ಅಪ್ಪಲಾಲರ ಬಗ್ಗೆ ಅವರ ಮನೆಯಲ್ಲಿ ಯಾವ ದಾಖಲೆಗಳೂ ಉಳಿದಿಲ್ಲ. ಒಯ್ದವರು ತಿರುಗಿಕೊಟ್ಟಿಲ್ಲ. ಆದ್ರೆ ಬಂದವರನ್ನು ಆಸೆಗಣ್ಣಿನಿಂದ ಕಾಣುವುದನ್ನೂ ಮಾತ್ರ ಇನ್ನೂ ಉಳಿಸಿಕೊಂಡಿದ್ದಾರೆ.

ಮನೆಯ ಮುಂದೆ ಎರಡು ಆಡುಗಳು ಇವೆ. ಅವುಕೂಡ ಬಂದವರನ್ನು ಕುತೂಹಲದಿಂದ ನೋಡುತ್ತವೆ. ಮನೆಯಲ್ಲಿ ಈಗ ಅಪ್ಪಾಲಾಲರ ಎರಡನೇ ಧರ್ಮಪತ್ನಿ ಇದ್ದಾರೆ. ಅವರಿಗೆ ಕೇವಲ ೨೦೦ ರೂ. ತಿಂಗಳಿಗೆ ಮಾಸಾಶನ ಬರುತ್ತದೆ. ಒಬ್ಬ ಮಗ ಮತ್ತು ಧರ್ಮಪತ್ನಿ ಕಾಯಿಪಲ್ಲೆ ಮಾರಿಕೊಂಡು ಉಪಜೀವನ ಸಾಗಿಸುತ್ತಾರೆ. ಉಪಜೀವನ ಹೇಗಾದ್ರೂ ಮಾಡೀವಿ ಆದ್ರೆ ಮೂರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ನಮಗೆ ತುಂಬ ಕಷ್ಟವಾಗಿದೆ ಎನ್ನುತ್ತಾರೆ. ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡುಮಗ ಇವರಿಗೆ ಶಿಕ್ಷಣ ಕೊಡಿಸುವುದು ಈಗ ತುಂಬ ಕಷ್ಟವಾಗಿದೆ. ಒಬ್ಬ ಕಲಾವಿದನ ಮಕ್ಕಳು ಮೊಮ್ಮಕ್ಕಳು ಹೀಗೆ ಬದುಕುವುದು ನಾಡಿನ ಘನತೆಗೆ ತಕ್ಕುದಲ್ಲ ಹೀಗೆಯೇ ಇನ್ನೊಬ್ಬ ಮಗನ ಸ್ಥಿತಿಯೂ ಇದೆ. ಈತ ಕೂಲಿ – ಗೀಲಿ ಮಾಡಿಕೊಂಡರೆ ಈತನ ಮಕ್ಕಳು ಆಯಿಯ ಮನೆಯಲ್ಲಿ ಆಶ್ರಯ ಪಡೆದುಕೊಂಡಿವೆ.

ಇನ್ನು ಶ್ರೇಷ್ಠ ಕಲಾವಿದೆ ತಾರಾಪತ್ನಿ ಚಂಪಾಬಾಯಿ ಸುಳೆಯ ಸ್ಥಿತಿಯೂ ಭಿನ್ನವಾಗಿಲ್ಲ. ಇಬ್ಬರೂ ಎದುರು – ಬದುರಿನ ಮನೆಯ ರಹವಾಸಿಗಳು. ಚಂಪಾಬಾಯಿ ಇತ್ತೀಚೆಗೆ ತೀರಿಕೊಂಡಿದ್ದಾಳೆ. ಇವರ ಮಕ್ಕಳು ಮೊಮ್ಮಕ್ಕಳ ಸ್ಥಿತಿಯೂ ವಿದ್ಯೆಯಿಂದ ವಂಚಿತರಾಗುವ ಸ್ಥಿತಿಯಲ್ಲಿದ್ದಾರೆ. ಅಪ್ಪಾಲಾಲ ಚಂಪಾಬಾಯಿ ಇಬ್ಬರೂ ಹೋದ ಮೇಲೆ ಈ ಮನೆತನ ಅನಾಥ ಪ್ರಜ್ಞೆಯಿಂದ ಬಳಲುತ್ತಿವೆ. ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರ ಇಂಥ ಕಲಾವಿದರ ಮಕ್ಕಳ ಬಗ್ಗೆ ಕಾಳಜಿವಹಿಸಬೇಕು ಅಭಿಮಾನದಿಂದ ಮಕ್ಕಳ ಮೊಮ್ಮಕ್ಕಳು ಹಿರಿಯರ ಹೆಸರು ಹೇಳಿ ನೆಮ್ಮದಿಯ ಜೀವನ ಸಾಗಿಸುವಂತಾಗಬೇಕು. ದೇಶದ ಗಡಿ – ನೆಲ ರಕ್ಷಿಸುವ ಸೇವೆ ಮಾಡುತ್ತಿರುವ ಮಿಲ್ಟರಿ ಯೋಧರಿಗೆ ಘನಸರ್ಕಾರವು ಸಕಲ ರೀತಿಯ ಸಹಾಯ ಸಹಕಾರ ನೀಡುತ್ತಿದೆ. ಯೋಧರು ಭೌತಿಕ ಸೇವೆ ಸಲ್ಲಿಸಿದರೆ ಕಲಾವಿದರು ಸಾಂಸ್ಕೃತಿಕ ಸೇವೆ ಸಲ್ಲಿಸುತ್ತಾರೆ. ಇದು ಕೂಡ ದೇಶ ಸೇವೆಗೆ ದೇಶಭಕ್ತಿಗೆ ಪೂರಕವಾಗಿದೆ. ಯೋಧರ ಕುಟುಂಬಗಳಿಗೆ ಸಲ್ಲುವ ಎಲ್ಲ ಸೌಲಭ್ಯಗಳು ಕಲಾವಿದರ ಕುಟುಂಬಗಳಿಗೆ ಪರಿವಾರಕ್ಕೆ ಲಭಿಸಬೇಕಾಗಿರುವುದು ತುಂಬ ಸೂಕ್ತವಾಗಿದೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಗಮನ ಹರಿಸಬೇಕೆಂಬುದು ಕಲಾಲೋಕ ಚಿಂತಕರ ಪ್ರಾರ್ಥನೆಯಾಗಿದೆ. ಇದು ಕೇವಲ ಅಪ್ಪಾಲಾಲ ಕುಟುಂಬಕ್ಕೆ ಮಾತ್ರ ಬೇಡಿಕೆಯಾದ ಮಾತಲ್ಲ. ದೇಶದ ತುಂಬ ನಾಡಿನ ತುಂಬ ಇಂಥ ಕಲಾವಿದರ ಮತ್ತು ಪರಿವಾರದ ಸ್ಥಿತಿ ಭಿನ್ನವಾಗಿಲ್ಲ. ಸಾರ್ವತ್ರಿಕ ಸರ್ಕಾರದ ಸಹಾಯವಾದಾಗ ಕಲೆ, ಕಲಾವಿದ, ಕಲಾಸಂಸ್ಕೃತಿಗೆ ನಿರಂತರ ಉಳಿವಿದೆ.