ಪ್ರಶಸ್ತಿಪುರಸ್ಕಾರಗಳು

ಒಬ್ಬ ಸಾಧಕನ ಕುರಿತು ಆತ ಬದುಕಿರುವಾಗ ಆತನನ್ನು ಕಾಣುವ ದೃಷ್ಟಿ ಭಿನ್ನವಾಗಿರುತ್ತದೆ. ಆತ ತನ್ನ ಜೀವಮಾನವನ್ನು ಸಾರ್ವತ್ರಿಕ ಬದುಕಿನಲ್ಲಿ ಕಳೆಯುತ್ತ ವೈಯಕ್ತಿಕವಾಗಿ ಹಲವಾರು ಕಷ್ಟ ಸಂಕಟಗಳನ್ನು ಅನುಭವಿಸುತ್ತಲೆ ತನ್ನ ಸೇವೆಯಲ್ಲಿ ಆನಂದ ತುಂದಿಲನಾಗುತ್ತಾನೆ. ಅದಕ್ಕೆ ಆತನ ದುಡಿಮೆ ಕಾರಣವಾಗಿರುತ್ತದೆ. ಇಂಥದನ್ನು ಕಾಣುವ ಕಣ್ಣು ಮನಸ್ಸುಗಳು ಮನುಷ್ಯನಿಗಿದ್ದರೆ ಅಂಥ ಸಾಧಕ ಚಿರಂಜೀವಿಯಾಗುತ್ತಾನೆ. ಹುಟ್ಟು ಸಾವುಗಳು ಕಳೆದು ದೂರವಾದಾಗ, ಭೌತಿಕ ಶರೀರ ಲೀನವಾದರೂ ಆ ಹುಟ್ಟು – ಸಾವಿನ ನಡುವಿನ ಬದುಕು ಆಭೌತಿಕತೆಗೆ ಪರ್ಯಾಯವಾಗಿ ಅನಂತ ಸೃಷ್ಟಿಯೊಂದನ್ನು ಕೊಟ್ಟು ಹೋಗಿರುತ್ತದೆ. ಅದು ಆತನ ಜೀವಮಾನದ ಸಾರ್ವಕಾಲಿಕತೆಗೆ ಸಂದಿರುತ್ತದೆ.

ಅಪ್ಪಾಲಾಲ ನದ್ಧಾಫ ದೀಮಂತ ಸಾಧಕ. ಶ್ರೀ ಕೃಷ್ಣ ಪಾರಿಜಾತದ ಮೂಲಕ ಒಂದು ತಿಳುವಳಿಕೆ ಸಮಾಜವನ್ನು ಸೃಷ್ಟಿಸಿದ ಕೀರ್ತಿ ನದ್ಧಾಫ ಅವರದು. ಈ ದಿಸೆಯಲ್ಲಿ ಇಂಥ ಅದ್ಬುತ ಕಲಾತ್ಮಕತೆಯಲ್ಲಿ ಶ್ರೇಷ್ಠರೆನಿಸಿಕೊಂಡವರಲ್ಲಿ ಅಪ್ಪಾಲಾಲ ನದ್ಧಾಫ ಅವರಿಗೆ ದುಡಿದ ಕಾರ್ಯಕ್ಕೆಎಷ್ಟು ಗೌರವ ಸಲ್ಲಬೇಕೋ ಅಷ್ಟು ಸಂದಿಲ್ಲ. ಆದ್ರೆ ಒಂದು ಪೌರಾಣಿಕ ಕಥೆಯನ್ನು ಅದರ ಎಲ್ಲ ಮಡಿವಂತಿಕೆ ಮೀರಿ ಜಾನಪದೀಯಗೊಳಿಸಿದ ಶ್ರೇಯಸ್ಸಿಗೆ ಅಪ್ಪಾಲಾಲರು ಭಾಜನದಾಗಿದ್ದಾರೆ, ಒಂದು ಶಿಷ್ಟ ಕೃತಿಯನ್ನು ಸಾಮಾನ್ಯನಿಗೆ ಮಾತ್ರವಲ್ಲ ಅನಾಢ್ಯನಿಗೂ ತಿಳಿಯುವಂತೆ ಅಭಿನಯಿಸಿದ ವ್ಯಕ್ತಿ.

೧೯೩೪ರಲ್ಲಿ ಬಾಲ್ಯ ಕಲಾವಿದನಾಗಿ ಹೊರಹೊಮ್ಮಿ ತನ್ನ ಹನ್ನೆರಡನೇ ವಯಸ್ಸಿಗೇನೇ ಸ್ವಂತ ಕಂಪನಿ ಕಟ್ಟಿಕೊಳ್ಳುವಂಥ ಸಾಮರ್ಥ್ಯ ಅವನಿಗಿತ್ತೆಂದ್ರೆ ಯಾರು ನಂಬಿಯಾರು!? ಅಂದಿನಿಂದ ೨೦೦೫ ನೇ ಇಸ್ವಿತನಕ ಲೆಕ್ಕವಿಲ್ಲದಷ್ಟು ರಾತ್ರಿಗಳಲ್ಲಿ ತನ್ನ ಕಲೆಯನ್ನು ಜನಮನಸೊರೆಗೊಳ್ಳುವಂತೆ ಬದುಕಿ ತೋರಿಸಿದ. ವರ್ಣಾಶ್ರಮದ ಮೇಲ್ಪಂಕ್ತಿಯವರೇ ಶ್ರೇಷ್ಠರೆನ್ನುವ ಮಾತನ್ನು ಶಮನಮಾಡಿ ಸಾಧನೆ – ತಪ್ಪಸ್ಸು ಕನಿಷ್ಠನಿಗೂ ಸಾಧ್ಯ ಎಂದು ತೋರಿಸಿಕೊಟ್ಟ ಮನುಷ್ಯ.

ರಾಜಮುದ್ರೆಯ ನಗರದಲ್ಲಿದ್ದುಕೊಂಡು ಸಣ್ಣಾಟಗಳ ರಾಜನೆಂದು ಖ್ಯಾತಿ ಪಡೆದ ಅಪ್ಪಾಲಾಲ ಶ್ರೀ ಕೃಷ್ಣ ಪಾರಿಜಾತ ಕ್ಷೇತ್ರದಲ್ಲಿ ರಾಜನಾಗಿ ಹೆಸರು ಮಾಡಿದ್ದಾರೆ. ಕಂಚಿನ ಕಂಠದ ಕಲಾವಿದನಾದ. ನಿರಂತರ ಪ್ರದರ್ಶನ – ನಿಶಾಚರ ಕೆಲಸ ಕಣ್ಣಿಗೆ ಕಣ್ಣು ಹಚ್ಚದ ದುಡಿಮೆ. ಒಂದು ದಿನವಲ್ಲ ಎರಡು ದಿನವಲ್ಲ ತಿಂಗಳು ವರುಷವಲ್ಲ ಕಾಯಕ – ಹವ್ಯಾಸಗಳ ಕೊಂಡಿಯಾಗಿ ಶ್ರಮಿಸಿದ ವ್ಯಕ್ತಿ. ಸುಂದರ ಅಂಗ ಸೌಷ್ಠವದ ಅಭಿಜಾತ ಕಲಾವಿದ. ಇಂಥವನ ಸೇವೆಗೆ ಸಂದ ಗೌರವ ದಾಖಲೆಗಳು ಅಲಭ್ಯವೆಂದು ಹೇಳದಿರಲಾಗದು. ನವ್ಹೆಂಬರ್ ೧೯೨೨ ರಲ್ಲಿ ಸಂಗೀತ ಅಕಾಡೆಮಿ ಪ್ರಶಸ್ತಿಯನ್ನು ಪಡೆದು ನಟರಾಜಮೂರ್ತಿ ಸ್ವೀಕರಿಸಿದರು. ನಾಡಿನ ಸಂಘ – ಸಂಸ್ಥೆಗಳು ಇವರಿಗೆ ನೀಡಿದ ಗೌರವ ಸನ್ಮಾನಗಳಿಗೆ ಲೆಕ್ಕವಿಲ್ಲ. ಇದಕ್ಕೂ ಹೆಚ್ಚಿನವೆಂದರೆ ಇವರಿಗೆ ಪ್ರಶಸ್ತಿ ಲಭಿಸಿದಾಗ ಅಭಿನಂದಿಸುವ ಕಾರ್ಯಕ್ರಮಗಳು ಕೂಡ ಸಂಘ – ಸಂಸ್ಥೆಗಳು ಏರ್ಪಡಿಸಿವೆ. ಕರ್ನಾಟಕ ಗಂಧರ್ವ ಪ್ರಶಸ್ತಿ ಕೂಡ ಇವರಿಗೆ ಲಭಿಸಿದೆ. ಉರುಸು – ಉತ್ಸವಗಳ ಒಡೆಯ ಗ್ರಾಮ ದೇವತೆಯ ಜಾತ್ರೆ ಉತ್ಸವಗಳಲ್ಲಿ ಕಲಾಭಿನಯ ಮಾಡಿದ್ದಕ್ಕೆ ನೀಡಿದ ಸನ್ಮಾನಗಳು ಬೇರೆ. ಅಂತೆಯೇ ಇವರನ್ನು ಉರುಸು ಉತ್ಸವಗಳಲ್ಲಿ ಒಡೆಯ ಎಂದು ಅನ್ನುವುದು.

ದಕ್ಷಿಣದ ಮದ್ರಾಸದಿಂದ ಹಿಡಿದು ಮುಂಬೈ ದೆಹಲಿ, ಕಲ್ಕತ್ತಾ ಮತ್ತು ಚಂಡಿಗಡಗಳಲ್ಲಿ ಪ್ರದರ್ಶನ ನೀಡಿ ಶ್ರೀನಗರತನಕವೂ ತನ್ನ ಪ್ರತಿಭೆಯನ್ನು ಮೆರೆದ ವ್ಯೆಕ್ತಿ ಈತ. ಇದು ದೇಶದ ದೊಡ್ಡ ದೊಡ್ಡ ನಗರದ ಮಾತು. ಗ್ರಾಮಾಂತರ ಜೀವನದ ಮುಗ್ಧರಲ್ಲಿ ಅಪ್ಪಾಲಾಲನ ‘ಹಿಲಾಲು’ ಮನೆಮನೆಯಲ್ಲಿ ನೆನೆಯುವ ಮಾತು. ಅಪ್ಪಾಲಾಲನ ಹಿಲಾಲು ಬಳಗದ ಗ್ರಾಮಗಳ ಬಹುತೇಕ ಉತ್ತರ ಕರ್ನಾಟಕದಲ್ಲಿರಲಿಲ್ಲ. ಮುಂಬೈಯಲ್ಲಿಯೇ ‘ಕರ್ನಾಟಕದ ಗಂಧರ್ವ’ ಬಿರುದು ಲಬಿಸಿದ್ದು ಮತ್ತೆ ೧೯೮೧ರಲ್ಲಿ ಕರ್ನಾಟಕದ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ರಾಜ್ಯ ಮಟ್ಟದ ಕಲಾ ಮಹೋತ್ಸವದಲ್ಲಿ ಪ್ರದರ್ಶನ. ಮುಂಬೈ – ಹುಬ್ಬಳ್ಳಿಗಳಲ್ಲಿ ತಿಕೆಟ್ ಪ್ರದರ್ಶನ ಕುರಿತು ಹಿಂದೆ ಹೇಳಿದ್ದನ್ನು ಈಗ ಸಾಂದರ್ಭಿಕವಾಗಿ ನೆನಪಿಸದಿರಲಾಗದು.

ಜಿ. ನಾರಾಯಣರು ಕೇಂದ್ರ ಕ.ಸಾ.ಪ.ದ ಅಧ್ಯಕ್ಷರಾಗಿರುವಾಗ, ಸಂಗಮೇಶ ಹಂಡಿ ವಿಜಾಪುರ ಕ.ಸಾ.ಪ ಅಧ್ಯಕ್ಷರಾಗಿದ್ದರು. ಜನಪದ ಮಹೋತ್ಸವ ಏರ್ಪಡಿಸಿದಾಗ ಕಲಾ ಪ್ರದರ್ಶನ ನೀಡಿದ್ದು ಮರೆಯಲಾಗದ ಸಂಗತಿ. (೧೯೭೬ ಡಿ.೪, ೫ರಂದು)

೧೯೭೩ರಲ್ಲಿ ಸನ್ಮಾನ್ಯ ಶ್ರೀಮತಿ ಇಂದಿರಾಗಾಂಧಿ ಅವರ ಸಮ್ಮುಖದಲ್ಲಿ ನವದೆಹಲಿಯಲ್ಲಿ ಪಾರಿಜಾತ ಪ್ರದರ್ಶನಗೊಂಡರೆ ಇವರೆಲ್ಲರನ್ನು ಅಪ್ಪಿಕೊಂಡು ಸಂತೃಪ್ತರಾದವರು. ಅಪ್ಪಾಲಾಲರ ತಾಯಿಯನ್ನು ಶ್ರೀಮತಿ ಇಂದಿರಾಗಾಂಧಿ ಅಪ್ಪಿಕೊಂಡು ಇಂಥ ಮಗನನ್ನು ಹೆತ್ತು ಈ ಭಾರತಾಂಬೆಗೆ ಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರಂತೆ. ಕರ್ನಾಟಕ ಸರ್ಕಾರದ ಗೌರವಗಳೊಂದಿಗೆ ಇವರನ್ನು ಗುರುತಿಸಿದ್ದು ಮಾತ್ರವಲ್ಲ ಇವರಿಗೆ ಮಾಸಾಶನ ಮಂಜೂರು ಮಾಡಿದರೆ, ಕೇಂದ್ರ ಸರ್ಕಾರ ಇವರಿಗೆ ಎರಡು ವರ್ಷಗಳ ಫೆಲೋಶಿಪ್ ಧನ ನೀಡಿ ಗೌರವಿಸಿದೆ. ಬರಗಿ ರಾಚಯ್ಯ, ಚಂಪಾಬಾಯಿಸುಳೆ ಮತ್ತು ಅಪ್ಪಾಲಾಲ ಪರಿವಾರ ಕಂಡು ಶ್ರೀಮತಿ ಇಂದಿರಾಗಾಂಧಿ ಅಭಿನಂದಿಸಿದರು. ಭಾವ ಜೀವಿ ಮಾತ್ರವಲ್ಲ ಅಪ್ಪಾಲಾಲ ಭಕ್ತಿ ಜೀವಿಯೂ ಹೌದು. ‘ದಶಮಸ್ಕಂದ ಭಾಗತ ಪುರಾಣಗಳ ಪ್ರಕಾರ ಹಿಂದೆ ಇದ್ದ ಸಂಪ್ರದಾಯ ಬದ್ಧ ಶ್ರೀ ಕೃಷ್ಣ ಪಾರಿಜಾತ ಈಗ ಅರ್ಧಕೂಡ ಉಳಿದಿಲ್ಲ. ಉಳಿದಿರುವುದು ಅರ್ಧಮಾತ್ರ ನಾ ಹೋದಿನೆಂದರೆ ಪೂರ್ತಿ ಹೋದಂತೆ’ ಎಂದು ಹೇಳಿ ವಿಷಾದ ವ್ಯಕ್ತಪಡಿಸಿದವ ಅಪ್ಪಾಲಾಲ. ಇದು ೧೯೭೭ ಡಿಸೆಂಬರ್ ೨ನೇ ತಾರೀಖಿನಂದು ಸಂಯುಕ್ತ ಕರ್ನಾಟಕಕ್ಕೆ ನೀಡಿದ ಸಂದರ್ಶನದ ಮಾತು. ಇದರರ್ಥ ಮುಖ್ಯ ಅಂದರೆ ಪಾರಿಜಾತ ಮತ್ತು ಆಧ್ಯಾತ್ಮಗಳ ಸಂಬಂಧದಲ್ಲಿ ಅವರಿಗಿರುವ ಕಳಕಳಿ ಇದರಲ್ಲಿದೆ : ೧೯೮೯ರಲ್ಲಿ ಎಚ್.ಎಲ್. ನಾಗೇಗೌಡರು ಜನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದಾಗ ಗೌರವ ಪ್ರಶಸ್ತಿ ಲಭಿಸಿತು. ಕೇಂದ್ರ ಸಂಗೀತ ಅಕಾಡೆಮಿ ದೆಹಲಿ ಪ್ರದರ್ಶನದೊಂದಿಗೆ ಇದನ್ನು ದಾಖಲಿಸಬೇಕಾದ ಸಂದರ್ಭಗಳಿವು. ಬಹುರಾಷ್ಟ್ರೀಯ ಸಂಘ ಸಂಸ್ಥೆಗಳ ಪ್ರದರ್ಶನಗಳಲ್ಲಿ ಪ್ರಥಮ ಪ್ರಾಶಸ್ತ್ಯ ದೊರೆತದ್ದು ಅಪ್ಪಾಲಾಲ ಶ್ರೀ ಕೃಷ್ಣ ಪಾರಿಜಾತಕ್ಕೆಂದು ಜನ ಇಂದಿಗೂ ಅಂದುಕೊಳ್ಳುತ್ತಾರೆ.ಇನ್ನೂ ಕರ್ನಾಟಕವೆಂದರೆ ನಾಮಕರಣವಾಗದ ೧೯೭೨ರಲ್ಲೇ ಮೈಸೂರು ರಾಜ್ಯ ಸಂಗೀತ ಅಕಾಡೆಮಿ ಪ್ರಶಸ್ತಿ ನೀಡಿ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ. ೨೫ ಮೇ ೧೯೭೯ರಲ್ಲಿ ಬೆಂಗಳೂರಿನ ವಿದಾನಸೌಧ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಪ್ರದರ್ಶನ ನೀಡಿದರೆ, ಚಲನಚಿತ್ರ ಕಲಾವಿದರು ಬೆರೆಗಾದರು; ಮಾನವ ಸಂಪನ್ಮೂಲ ಇಲಾಖೆ ದೆಹಲಿಯ ಕಣ್ಣು ತೆರೆಯಿಸಿದ್ದು ಆಗಲೇ. ಇದಕ್ಕೂ ಮೊದಲು ಅಂದ್ರೆ ದೆಹಲಿ ಫೆಲೊಶಿಪ್ ನೀಡುವುದಕ್ಕೆ ಮೊದಲು ೧೯೮೫ರಲ್ಲಿ ಮೈಸೂರ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ ೧೫,೧೬,೧೭ ಮೂರು ದಿನ ಜರುಗಿದರೆ ಅಪ್ಪಾಲಾಲರ ಪ್ರದರ್ಶನ ಮನಸ್ಸಿನಲ್ಲಿ ಕಣ್ಣಿನಲ್ಲಿ ನಿಂತುಕೊಂಡ ನೋಟ; ಅಪ್ಪಾಲಾಲರಿಗೆ ರಾಜ್ಯೋತ್ಸವ ಪ್ರಶಸ್ತಿ ಕೂಡ ಬಂದಿದೆ. ಆದರೂ ಇವೆಲ್ಲ ಮಾತುಗಳು ಪ್ರಶಸ್ತಿ ಪ್ರದರ್ಶನಕ್ಕೆ ಸೀಮಿತವಾದವು. ಆತನ ಶ್ರೇಷ್ಠ ಪ್ರತಿಭೆಗೆ ಸಿಗಬೇಕಾದಷ್ಟು ಪ್ರಾಶಸ್ತ್ಯ ಸಿಗಲಿಲ್ಲವೆಂಬ ವಿಷಾದ ಪ್ರತಿಯೊಬ್ಬ ಚಿಂತಕರನ್ನು ಕಾಡದಿರಲಾರದು. ಒಟ್ಟಿನಲ್ಲಿ ಏನೇ ಇರಲಿ ರಾಜ್ಯಪ್ರಶಸ್ತಿ ರಾಷ್ಟ್ರ ಪ್ರಶಸ್ತಿಗಳು ಅಪ್ಪಾಲಾಲನ ವ್ಯಕ್ತಿತ್ವವನ್ನು ಕಲಾಸೇವೆಯನ್ನು ಗುರುತಿಸಿವೆ. ಇಂಥ ಕಲಾವಿದ ಬೆಳೆಯಬೇಕಾದರೆ ಆತನೊಂದಿಗೆ ದುಡಿದ ಎಲ್ಲಾ ಕಲಾವಿದರ ಶ್ರೇಯಸ್ಸೂ ಅಡಗಿದೆ.ಈ ಗೌರವ ಎಲ್ಲ ಕಲಾವಿದರನ್ನೊಳಗೊಂಡಿದ್ದು ಎನ್ನುವ ಪ್ರಜ್ಞೆ ಪ್ರೇಕ್ಷಕನಿಗೆ ಇದ್ದೇ ಇರುತ್ತದೆ. ಹಾಡು – ಕವ್ವಾಲಿಗಳ ನೆನಪಿನೊಂದಿಗೆ ಅಪ್ಪಾಲಾಲ ಕಂಠ ಸಿರಿ, ಸ್ಪಷ್ಟ ಉಚ್ಛಾರಣೆ – ಬೋಧನೆಯ ಕಲಾತ್ಮಕತೆ ಉತ್ತರ ಕರ್ನಾಟಕ ಎಂದೂ ಮರೆಯದಂತಿದೆ.ಇದು ಇಡೀ ನಾಡಿನ ಕಲಾಸಂಪತ್ತಿಗೆ ಸಾಕ್ಷಿಯಾಗಿದೆ. ೧೯೯೬ಕ್ಕೆ ಅಪ್ಪಾಲಾಲರಿಗೆ ಎಪ್ಪತ್ತೈದು ತುಂಬಿತ್ತು. ಆಗ ಪಾಟೀಲ ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ಧ್ವನಿ ಸಂಗಮ ಮತ್ತು ಅ.ಕ ಕೇಂದ್ರ ಕನ್ನಡ ಕ್ರಿಯಾಸಮಿತಿಗಳ ಧಾರವಾಡ ಸಂಯುಕ್ತ ಆಶ್ರಯದಲ್ಲಿ ಒಂದು ಬೃಹತ್ ಕಾರ್ಯಕ್ರಮ ಏರ್ಪಟ್ಟಿತ್ತು. ಅಂದು ಅಪ್ಪಾಲರಿಗೆ ಹಮ್ಮಿಣಿ ಅರ್ಪಿಸುವ ಮೂಲಕ ಅಪ್ಪಾಲಾಲರನ್ನು ಅಭಿನಂದಿಸಿದರು. ಹೀಗೆ ಅಪ್ಪಾಲಾಲ ನದ್ಧಾಫರ ಸೇವೆ ಧ್ವನಿಸುರುಳಿಗಳಿಗೂ ಆಕಾಶವಾಣಿ ಕೇಂದ್ರಗಳಿಗೂ ಸಾಕಷ್ಟು ಲಭಿಸಿದೆ. ಅಪ್ಪಾಲಾಲರ ಪಾರಿಜಾತ ಬಿತ್ತರಿಸಿದ ಆಕಾಶವಾಣಿ ಮತ್ತು ಧ್ವನಿಸುರುಳಿ ಅವರನ್ನು ಜೀವಂತವಿರಿಸಿವೆಯೆನ್ನುವುದು ಅಭಿಮಾನದ ಸಂಗತಿ. ಅಖಿಲ ಭಾರತದ ಮರಾಠಿ ಪರಿಷತ್ತು ಕೂಡ ಅಪ್ಪಾಲಾಲರ ಸೇವೆಯನ್ನು ಗುರುತಿಸಿವೆ ಗೌರವಿಸಿವೆ. ಅಪ್ಪಾಲಾಲನ ರೂಪ ಕೊರವಂಜಿ ಮೂಲಕ ಮಹಾರಾಷ್ಟ್ರವನ್ನು ಸೆಳೆದರೆ ಸತ್ಯಭಾಮೆಯ ಮೂಲಕ ಉತ್ತರ ಭಾರತವನ್ನು ಮಾತ್ರವಲ್ಲ ಇಡೀ ದೇಶವನ್ನು ಸೆಳೆದಿದೆ.

ಸಂಕ್ಷಿಪ್ತತೆ ಎನ್ನುವುದು ಅವಸರ ಮತ್ತು ಮಿತಿಗೆ ಸೇರಿದ ವ್ಯವಸ್ಥೆಯಾಗಿದೆ. ಇದು ಒಪ್ಪಬೇಕಾದ ಮಾತು. ಇದರಿಂದ ಸಾಧಕನ ಸಾಧನೆಯ ಬಹುಭಾಗವನ್ನು ನಾಶಪಡಿಸಿಕೊಳ್ಳುತ್ತೇವೆ. ಇದಕ್ಕೆ ನಮ್ಮ ತಿಳಿವಳಿಕೆ ಬುದ್ಧಿಮತ್ತೆ, ಆಸಕ್ತಿ, ದಾಖಲೆಗಳ ಕೊರೆತೆ ಎಲ್ಲವೂ ಕಾರಣವಾಗುತ್ತವೆ. ಇದರಿಂದ ಉಲ್ಲೇಖಿತ ಸಂಗತಿಗಳಿಗಿಂತಲೂ ಉಳಿದು ಹೋದ ಸಂಗತಿಗಳು ಹತ್ತು ಪಟ್ಟು ಎಂದರೆ ತಪ್ಪಾಗಲಿಕ್ಕಿಲ್ಲ, ಇನ್ನುಳಿದದ್ದು ನನಗಿಂತಲೂ ಹೆಚ್ಚು ತಿಳಿದುಕೊಂಡು ಪ್ರಯತ್ನಿಸಿ ಹೊರತಂದಲ್ಲಿ ಅವರಿಗೆ ನಾನು ಉಪಕೃತನಾಗಿರುತ್ತೇನೆ. ನಮಗೆ – ನಿಮಗೆ – ಅವರಿಗೆ – ಇವರಿಗೆ ಎಲ್ಲರಿಗೂ ಅಪ್ಪಾಲಾಲ ಇನ್ನೂ ದೊಡ್ಡವನಾಗಿ ಕಾಣಬೇಕು. ಎನ್ನುವುದೇ ನನ್ನ ಅಭೀಷ್ಸೆ.

ಅಪ್ಪಾಲಾಲರ ಅಂತಿಮ ದಿನಗಳು
ಅಪ್ಪಾಲಾಲ ನದ್ಧಾಫರ ವೃದ್ಧಾಪ್ಯ

ಸುಮಾರು ನಲವತ್ತು ವರ್ಷಗಳಿಂದ ಜಮಖಂಡಿಯಲ್ಲಿರುವ ನನಗೆ ಅಪ್ಪಾಲಾಲರನ್ನು ಕಾಣದೇ ಇರಲು ಸಾಧ್ಯವೇ? ಮುಂಜಾನೆ ಎದ್ದು ಕೂಡಲೇ ವಾಕಿಂಗ್‌ದಲ್ಲಿ ಅಥವಾ ಸಾಯಂಕಾಲ ಅಥವಾ ಅಟಕ್ಕೆ ಹೋಗುವಾಗ ಆಡದಿಂದ ಬರುವಾಗ ಒಂದಿಲ್ಲೊಂದು ಕಾರಣದಲ್ಲಿ ಬಹಳಷ್ಟು ಕಾಣುವ ಮನುಷ್ಯ.

ಮಲ್ಲಯ್ಯ ಸ್ವಾಮಿ ಅಥಣಿಯವರ ಕಂಪನಿ ಮೂಲಕ ಕೊನೆಯ ಆಟವನ್ನು ಆಡಿದ ನಂತರವಂತು ತುಂಬ ಕಣ್ಮುಂದಿನ ವ್ಯಕ್ತಿಯಾಗಿಬಿಟ್ಟರು. ವೃದ್ಧಾಪ್ಯ ಅಡರಿದಂತೆ ಆರ್ಥಿಕವಾಗಿ ಮನುಷ್ಯ ತುಂಬ ಬಳಲಿ ಬಿಟ್ಟ. ಇಡೀ ಹೋಗಿ ಹಿಡಿಯಾದ ಅನ್ನುವುದೇ ಆಶ್ಚರ್ಯ. ಅಪ್ಪಾಲಾಲನ ವೈಭವದ ದಿನಗಳಲ್ಲಿ ತನ್ನ ಕುಟುಂಬದ ಯಾರನ್ನು ಹೊರಗೆ ದುಡಿಯಲು ಕಲಿಸದ ಮನುಷ್ಯ ತನ್ನಷ್ಟಕ್ಕೆ ತಾನೇ ಅಸಹಾಯಕನಾದ ಮೇಲೆ ಇಡೀ ಕುಟುಂಬ ಇವರನ್ನೇ ಅವಲಂಬಿಸಿಕೊಂಡಿತ್ತು. ಈ ಅನಾಥ ಪ್ರಜ್ಞೆಯಿಂದ ಇಡೀ ಪರಿವಾರ ಮೆತ್ತಗಾಯಿತು ಎಂದರೆ ತಪ್ಪಲ್ಲ.

ಕೊನೆ ಕೊನೆಯ ದಿನಗಳಲ್ಲಿ ದುಡ್ಡಿನ ಮೇಲೆ ಹೆಚ್ಚು ಆಸೆ ಶುರುವಾಯಿತು. ಒಬ್ಬ ಪ್ರತಿಭಾವಂತ ವ್ಯಕ್ತಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಾಗ ಹೇಗಾಗುತ್ತಾನೆ ಎನ್ನುವುದಕ್ಕೆ ಅಪ್ಪಾಲಾಲ ಸಾಕ್ಷಿ. ದುಡ್ಡು ನಿಲ್ಲಬೇಕಾದರೆ ತನ್ನ ಪ್ರದರ್ಶನವೂ ನಿಂತಂತೆ. ಪ್ರತಿಭೆ ಖ್ಯಾತಿ ಒಂದು ಸುವಾಸವಾಗಿ ನಾಡತುಂಬ ಹರಡಿಕೊಂಡರೂ ಅದನ್ನೇ ಸೇವಿಸಿಕೊಂಡು ಬದುಕಲಾಗದು. ಒಂದು ಕಪ್ಪು ಚಹಾ ಹೊರಗಡೆ ಕುಡಿಯಬೇಕಾದ್ರೆ ಇನ್ನೊಬ್ಬರು ಕರೆದುಕೊಂಡು ಹೊಗಬೇಕು. ಮನೆಯಲ್ಲಿ ಮಕ್ಕಳು ಮತ್ತು ಮೊಮ್ಮಕ್ಕಳು ಸಾಧ್ಯವಿದ್ದಷ್ಟು ಅವನನ್ನು ಪೋಷಿಸಿಕೊಂಡು ಬಂದರೂ ಅಪ್ಪಾಲಾಲರನ್ನು ಕಾಣಲು ಮನೆಗೆ ಹೋಗುವ ಪ್ರಸಂಗ ಯಾರಿಗಿರುತ್ತದೆ ಹೇಳಿ? ಅಪ್ಪಾಲಾಲಿನ್ನೊಬ್ಬರ ನಮಸ್ಕಾರಗಳ ಗೌರವದಲ್ಲಿ ಬೆಳೆದವನು. ಕೊನೆಗೆ ಅಸಹಾಯಕತೆ ಒಂಟಿತನ ಅವರನ್ನು ಕಾಡತೊಡಗಿ ತಾನೇ ಕಂಡ – ಕಂಡ ಗುರುತಿನವರಿಗೆ ನಮಸ್ಕಾರ ಮಾಡತೊಡಗಿದ. ಆದ್ರೆ ಆ ನಮಸ್ಕಾರದಲ್ಲಿ ಅಪೇಕ್ಷೆ ಇದೆ ದೈನ್ಯತೆ ಇದೆ ಎನ್ನುವುದು ಕಂಡು ಬರುತ್ತಿತ್ತು ಎಂಬ ಭಾವ ಕಂಡವರಲ್ಲಿತ್ತು. ಹೀಗಾಗಿ ಅಪ್ಪಾಲಾಲ ತುಂಬ ದೀನಾವಸ್ಥೆಯ ವ್ಯಕ್ತಿಯಾಗಿ ಕಾಣತೊಡಗಿದ. ಕೊನೆ – ಕೊನೆಗೆ ಕಂಠವು ನಿತ್ರಾಣವಾಗಿ ಮಾತು – ಕತೆ ನಿಂತು ಹೊಗಿತ್ತು. ಪ್ರಜ್ಞೆ – ನೆನಪು ಎರಡೂ ಬಹಳಷ್ಟು ಕಡಿಮೆಯಾದಂತಾಗಿತ್ತು. ಅಪ್ಪಾಲಾಲರನ್ನು ಕಂಡರೆ ದುಡ್ಡು ಕೊಟ್ಟು ಮುಂದೆ ಹೋಗಬೇಕು ಎನಿಸುವಂತಾಯಿತು. ಇದು ಕಲಾಸಕ್ತರಿಗೆ ಆಗುವ ಭಾವನೆಯೋ ಎಲ್ಲರಿಗೂ ಹೀಗೇ ಅನಿಸುತ್ತಿತ್ತೋ ಗೊತ್ತಿಲ್ಲ. ತನ್ನ ಪರಿಚಿತ ಮುಖ ಕಂಡರೆ ಕೈಮಾಡುವ ರೂಢಿಬಿದ್ದು ಬಿಟ್ಟಿತ್ತು ಹೀಗೆ ಹಲವರು ಬಾರಿ ದುಡ್ಡು ಕೊಟ್ಟು ಹೋಗಿದ್ದೇನೆ. ಹೋಗುವವರನ್ನು ಕಂಡಿದ್ದೇನೆ. ಇಂಥ ಸ್ಥಿತಿ ಕಂಡಾಗ ಕಲಾಕಾರನ ಅಂತಿಮ ದಿನಗಳು ಹೀಗೆಯೇ ಎನ್ನುವ ಭಯ ಕಾಡದೇ ಇರಲ್ಲಿಲ್ಲ. ಒಂದು ಅವನಿಗೆ ಏನು ತಿಳಿದಿತ್ತೋ ಗೊತ್ತಿಲ್ಲ. ತನ್ನ ಪರಿವಾರದಲ್ಲಿ ಯಾರೂ ಈ ಆಟದ ಗುಂಗು ಹಚ್ಚಿಕೊಳ್ಳಬೇಡ್ರಿ, ನೀವು ಕೂಲಿ ಮಾಡಿ ತಿನ್ನಿರಿ ಮತ್ತು ವಿದ್ಯಾವಂತರಾಗಿರಿ ಎಂದು ಬೋಧನೆಯ ಮತು ಹೇಳಿದ್ದನ್ನು ಈಗ ಮನೆಯವರು ನೆನೆಯುತ್ತಾರೆ. ಕಲೆಯನ್ನು ವೃತ್ತಿಯನ್ನಾಗಿಸಿಕೊಂಡರೆ ಬದುಕಲಿಕ್ಕಾಗದು ಎನ್ನವುದು ಆತನ ಶತಸಿದ್ಧಾಂತವಾಗಿತ್ತು. ತನ್ನ ಬದುಕಿನ ಕೊನೆ ದಿನಗಳು ಹೀಗೆಯೇ ಬರುತ್ತದೆಂಬುದನ್ನು ಮೊದಲೇ ಕಂಡುಕೊಂಡಿದ್ದಂತೆ ಮನಿಯವರಿಗೆ ಎಚ್ಚರಿಕೆ ಕೊಟ್ಟಿದ್ದ. ಮನೆಯವರಿಗೆ ಇಂಥ ದಿನಗಳು ಬರಬಾರದೆಂಬುದು ಅವನ ತಿಳುವಳಿಕೆಯಾಗಿತ್ತು.

ಅಂದು ನಾವು ಅವನನ್ನು ಎಷ್ಟು ಹತ್ತಿರದಿಂದ ಕಂಡರೂ ನಾವೂ ದೂರದಿಂದಲೇ ಕಂಡೀವಿ ಎನ್ನುವ ಮಾತು ಮನದಟ್ಟಾಗುತ್ತದೆ. ಅಪ್ಪಾಲಾಲರ ಮನೆಗೆ ಹೋಗಿ ಯೋಗಕ್ಷೇಮ ಕಂಡರೂ ಹತ್ತಿಪ್ಪತ್ತು ರೂಪಾಯಿ ಕೊಟ್ಟು ಬಂದಿರುವುದೇ ನಮಗೆ ದೊಡ್ಡದಾಗಿ ಕಾಣುತ್ತದೆ. ಆದ್ರೆ ನಿಜವಾದ ಆತನ ಜೀವನವನ್ನು ಉದ್ಧರಿಸುವ ಶಕ್ತಿ ಯಾರಿಗೂ ಇರಲಿಲ್ಲ. ತನ್ನ ಕಾಯಕದಿಂದ ಬಂದುದರಲ್ಲಿ ಮಕ್ಕಳ ಮದುವೆ – ಗಿದುವೆ ಮಾಡಿಕೊಂಡು ಖಾಲಿ ಆಗುವುದಕ್ಕೆ ಬಹಳ ದಿನ ಬೇಕಾಗುವುದಿಲ್ಲ. ಕೊನೆಯ ದಿನಗಳಲ್ಲಿ ಪತ್ರಕರ್ತರೂ ಕೂಡ ವಿಶೇಷವಾಗಿ ಗಮನಿಸಿದ್ದರೆ, ಟಿ. ವಿ. ಮಾಧ್ಯಮದವರು ಸ್ವತಃ ಕಂಡಿದ್ದರೆ ಅಂತಿಮ ದಿನಗಳಲ್ಲಿಯೂ ಒಂದಿಷ್ಟು ನೆಮ್ಮದಿಯಿಂದ ಇರಬಹುದಾಗಿತ್ತು. ಆದ್ರೆ ಒಬ್ಬ ಸಹೃದಯಿ ವಿಜಯ ಬಿರಾದಾರ ಅವರ ಮೂರೂ ಲೇಖನಗಳು ಇಂದು ಅವರನ್ನು ನೆನಪಿಸುವಾಗ ತುಂಬ ಒಳ್ಳೆಯ ಕೆಲಸವಿದು ಅಂದುಕೊಳ್ಳಬಹುದು. ಆದ್ರೂ ವಿಜಯ ಬಿರಾದಾರ ಅವರ ಅಪೇಕ್ಷೆಯನ್ನು ಮುಪ್ಪಿನಲ್ಲಾದರೂ ಸರ್ಕಾರ ಗಮನಿಸಬೇಕು ಎನ್ನುವುದಾಗಿರಬೇಕು ಎಂದು ಅನಿಸುತ್ತದೆ.

‘ಪಾರಿಜಾತದ ಮಹಾನ್ ಕಲಾವಿದ ಈಗ ದುರ್ಭರ ಸ್ಥಿತಿಯಲ್ಲಿ’ ಹಾಸಿಗೆ ಹಿಡಿದು ‘ಪಾರಿಜಾತದ ಸಾರ್ವಭೌಮ’ ‘ಬಾಡಿಹೋದೆಯಾ ಪಾರಿಜಾತವೇ’ ಎಂಬ ಲೇಖನಗಳು ಆತನ ಅಂತಿಮ ದಿನಗಳ ಮೂರು ಅವಸ್ಥೆಗಳಾಗಿಯೇ ಕಂಡುಬರುತ್ತವೆ. ಈ ಮೂರು ಲೇಖನಗಳು ಅಪ್ಪಾಲಾಲರ ಇಡೀ ಜೀವನ ಜಿಜ್ಞಾಸೆ ಮಾಡಿಸುವಂತಿವೆ. ಇನ್ನುಳಿದ ಪತ್ರಿಕೆಗಳ ಲೇಖನಗಳು ಈ ಸಂದರ್ಭದಲ್ಲಿ ಲಭಿಸಲಿಲ್ಲ ಎನ್ನುವುದು ಕಳಕಳಿಯ ಮಾತು.

೨೫ ನವ್ಹೆಂಬರ್ ೨೦೦೫ ರಂದು ತನ್ನ ದುರ್ಭರ ಸ್ಥಿತಿಯಲ್ಲಿ ಅಪ್ಪಾಲಾಲ ನದ್ಧಾಫ ತೀರಿಕೊಂಡರು. ನಗರದ ಸುತ್ತಮುತ್ತಲಿನ ಗ್ರಾಮದ ಕಲಾಸಕ್ತರು ಅಪ್ಪಾಲಾಲ ನದ್ಧಾಫರಿಗೆ ಅಂತಿಮ ನಮನ ಸಲ್ಲಿಸಿದರು. ಅವರ ಮಕ್ಕಳು ಮೊಮ್ಮಕ್ಕಳು ಧರ್ಮಪತ್ನಿ, ಎಲ್ಲರೂ ಇದೇ ನಗರದಲ್ಲಿದ್ದಾರೆ. ಅವರಿಗೆ ಅಪ್ಪಾಲಾಲ ಬಿಟ್ಟು ಹೋದದ್ದು ಕೀರ್ತಿಯನ್ನು ಮಾತ್ರವಲ್ಲ : ನಿರಂತರ ಬಡತನದ ಆಸ್ತಿಯನ್ನು ಕೂಡ. ಕಲಾಭಿಮಾನಿಗಳು ಸಾಮಾಜಿಕ ಕಾರ್ಯಕರ್ತರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಪತ್ರಿಕಾ ಮಾಧ್ಯಮದವರು, ದೂರದರ್ಶನ ಮಾಧ್ಯಮದವರು ಅಪ್ಪಾಲಾಲ ನಿಧನ ವಾರ್ತೆಯನ್ನು ನಾಡಿಗೆ ತಿಳಿಯಪಡಿಸಿದರು. ಎಲ್ಲರೂ ತಮ್ಮ ತಮ್ಮ ಕರ್ತವ್ಯವನ್ನು ಮಾತ್ರ. ಇವರ ಕರ್ತವ್ಯವನ್ನು ಅನುಷ್ಠಾನ ಗೊಳಿಸಬೇಕದವರು ಪ್ರಜಾ ಪ್ರತಿನಿಧಿತ್ವವನ್ನು ಮತ್ತು ಆಡಳಿತವನ್ನು ಹೊಂದಿದವರು. ಅದು ಅವರವರ ಆತ್ಮಾವಲೋಕನಕ್ಕೆ ಬಿಟ್ಟುಕೊಟ್ಟ ಮಾತು.