ಶ್ರೀ ಕೃಷ್ಣ ಪಾರಿಜಾತ ನಡೆದು ಬಂದ ದಾರಿ

ಕರ್ನಾಟಕದಲ್ಲಿ ಸಣ್ಣಾಟ, ದೊಡ್ಡಾಟ, ದಾಸರಾಟ, ಬಯಲಾಟ, ಯಕ್ಷಗಾನ, ಭರತನಾಟ್ಯ, ನಾಟಕ, ಕಥಕಳಿ, ಹೀಗೆ ಹಲವಾರು ಬಗೆಯ ಜಾನಪದ ಆಟಗಳು ಪ್ರಚಲಿತದಲ್ಲಿವೆ. ಇಂಥ ಪ್ರಯೋಗಾತ್ಮಕ ಆಟಗಳಲ್ಲಿ ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿರುವ ಶ್ರೀ ಕೃಷ್ಣ ಪಾರಿಜಾತ ಬಯಲಾಟವೂ ಒಂದು. ಈ ಶ್ರೀ ಕೃಷ್ಣ ಪಾರಿಜಾತವು ಜಾನಪದ ಕಲಾರೂಪದಲ್ಲಿ ಭಿನ್ನವೂ ವಿಶಿಷ್ಟವೂ ಆಗಿದೆ. ಈ ಬಯಲಾಟದ ಕಥೆಯನ್ನು ವಿಷ್ಣು ಪುರಾಣ ಮತ್ತು ಭಾಗವತ ಪುರಾಣಗಳಿಂದ ಆಯ್ದುಕೊಂಡಿದೆ. ಶ್ರೀ ಕೃಷ್ಣ ಪಾರಿಜಾತ ಅಂದ್ರೆ ಅದು ಅನಕ್ಷರಸ್ಥರ ಬಾಯಿಂದ ಬಾಯಿಗೆ ಬಂದ ಕಥೆಯಲ್ಲ, ಕಲಾವಿದ ಕಲಾವಿದರಿಗೂ ಶ್ರೀಕೃಷ್ಣ ಪಾರಿಜಾತ ವಸ್ತು ಕಥೆ ಪ್ರೇರಣಾರೂಪವಾಗಿ ಬಂದಿರುವುದರಿಂದ ಅದು ಪ್ರಯೋಗದಲ್ಲಿ ಅಪಭ್ರಂಶವಾಗಿ ಅಭಿನಯಿಸಲ್ಪಡುತ್ತದೆ. ಅಂದರೆ ಇದರರ್ಥ ಅನಕ್ಷರಸ್ಥರಷ್ಟೇ ಪರಿಜಾತದಲ್ಲಿದ್ದಾರೆಂದಲ್ಲ: ಸುಶಿಕ್ಷಿತರೂ ಪಾರಿಜಾತ ರಂಗದಲ್ಲಿದ್ದೇ ಇರುತ್ತಾರೆ. ವಿದ್ಯಾಶಾಲೆಯಿಂದ ಕಲಾಶಾಲೆ ಸೇರಿಕೊಂಡರೆ ಅಪಭೃಂಶವಾಗಲಾರದು: ಆದ್ರೆ ಕಲಾ ಶಾಲೆಯೇ ಅಭಿನಯದ ಮೂಲವಾಗುವ ಬಾಲ್ಯದ ಅನಕ್ಷರತೆ ಅವರ ಜೀವನದ ಕೊನೆಯವರೆಗೂ ಕಾಡದೇ ಬಿಡಲಾರದು. ಕಲಾಸಕ್ತಿಯೇ ಅಂಥದ್ದು.

ಶ್ರೀ ಕೃಷ್ಣ ಪಾರಿಜಾತವು ಮೂಲತಃ ಜನಪದ ಕತೆಯಲ್ಲ! ಅದೊಂದು ಮಿಥಿಕ್ ಸೃಷ್ಟಿ. ಭಾಷಾಶೈಲಿಯ ದೃಷ್ಟಿಯಿಂದ ಜನಸಾಮಾನ್ಯರನ್ನು ತಟ್ಟಬೇಕೆಂಬ ದೃಷ್ಟಿಯಿಂದ ಪಾರಿಜಾತ ಕೃತಿಯ ರಚನಾಕಾರರು ಅದನ್ನು ಗ್ರಾಂಥಿಕಗೊಳಿಸದೆ, ಆಡುಭಾಷಾ ಶೈಲಿಗೆ ಅಳವಡಿಸಿಕೊಂಡಿದ್ದಾರೆ. ಜನಪದೀಯಗೊಳಿಸಿದ್ದಾರೆ. ಲಲಿತ ಅಭಿವ್ಯಕ್ತಿಗೆತರುವ ಕೆಲಸದಿಂದ ಇದನ್ನು ಜನಪದೀಯ ಸಾಹಿತ್ಯವೆಂದು ಭಾವಿಸಿದ್ದು ಅಸೂಕ್ತ ವೆನಿಸುತ್ತದೆ. ಭಾರತೀಯ ಸಾಹಿತ್ಯದ ಬಹುತೇಕ ಮಹತ್ವದ ಕೃತಿಗಳೆಲ್ಲವು’ಮಿಥಿಕ್’ ಆಗಿರುವುದರಿಂದಲೇ ಜನಪ್ರಿಯಗೊಂಡಿವೆ; ಸಾರ್ವಕಾಲಿಕವಾಗಿವೆ. ಆಧ್ಯಾತ್ಮ ತತ್ವಜ್ಞಾನ ಭಾರತೀಯ ಬಹುತೇಕ ಜನರ ಸ್ಥಾಯಿ ಮನೋಭಾವವೇ ಆಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹೀಗಾಗಿ ಶ್ರೀಕೃಷ್ಣ ಪಾರಿಜಾತವು ಮಾನವನ ಜೀವನದ ಸರ್ವತೋಮುಖ ಜ್ಞಾನದ ಅಕ್ಷಯ ಪಾತ್ರೆಯಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಈ ಮೂರು ರಾಜ್ಯಗಳನ್ನು ವ್ಯಾಪಿಸಿಕೊಂಡು ಒಂದು ಕಲಾಮಾಧ್ಯಮವಾಗಿದೆ. ಮಹಾರಾಷ್ಟ್ರ ಗಡಿಗ್ರಾಮ ಸವದಿ ಮತ್ತು ಆಂಧ್ರಪ್ರದೇಶ ಅಪರಾಳದಿಂದ ಸುರುವಾಗಿ ಇಡೀ ಭಾರತದಲ್ಲಿ ಹೆಸರಾಗಿ ಈ ಪ್ರಕಾರ ಬೆಳೆದು ಬಂದಿದೆ; ಉಳಿದು ಬಂದಿದೆ. ಈ ಮೇಲೆ ಹೇಳಿದ ಎಲ್ಲ ಪ್ರಕಾರದ ಕಲಾ ಮಾಧ್ಯಮಗಳು ರಂಗಮಾಧ್ಯಮವಾಗಿಯೇ ಪ್ರಸಿದ್ಧವಾಗಿವೆ. ಈ ಎಲ್ಲವೂ ತಮ್ಮ ಪ್ರಯೋಗಾತ್ಮಕ ಪ್ರದರ್ಶನಕ್ಕೆ ಬಂಡವಾಳ ಶಾಹಿಗಳಿಂದಾಗಲಿ ರಾಜಮಹಾರಾಜರ ಕೃಪಾ ಪೋಷಣೆಯಿಂದಾಗಲಿ ಬೆಳೆಯಲಿಲ್ಲ. ಇವುಗಳಿಗೆ ತನ್ನದೇ ಆದ ಒಂದು ಆಸಕ್ತ ಕಲಾಬಳಗ ಇದೆ. ಇದಕ್ಕೆ ಮುಖ್ಯ ಕಾರಣ ಸಾರ್ವಜನಿಕರ ಉತ್ಕಟೇಚ್ಛೆ. ಕನ್ನಡ ಭಾಷಾ ಶೈಲಿ – ಪ್ರಾದೇಶಿಕ ಬದಲಾವಣೆಯ ಹೊರತಾಗಿ, ಯಕ್ಷಗಾನವು ಶ್ರೀಕೃಷ್ಣ ಪಾರಿಜಾತಕ್ಕಿಂತಲೂ ಹೆಚ್ಚು ಬೆಳವಣಿಗೆ ಪಡೆದುಕೊಳ್ಳುತ್ತಿದೆ. ನಮ್ಮ ಪಾರಿಜಾತ ಬಯಲಾಟದ ಕಲಾವಿದರು ಅಭಿನಯ ವೃತ್ತಿಗೆ ಮೀಸಲಾಗುತ್ತಾರೆ. ರಚನಾತ್ಮಕ ಹೊಸತನ ಇವರಿಗೆ ನಿಜವಾಗಿ ಅಗತ್ಯವಾದದ್ದು. ಪ್ರಾಥಮಿಕ ಶಾಲಾ ಮಕ್ಕಳ ಶಿಕ್ಷಕ, ಮಕ್ಕಳ ಸಾಹಿತ್ಯದಲ್ಲಿ ಯಶಸ್ವಿಯಾಗಲು ಮಕ್ಕಳು ಮತ್ತು ವೃತ್ತಿ ಅನುಭವ ಹೇಗೆ ಯಶಸ್ಸು ಕೊಡುತ್ತದೆಯೋ ಹಾಗೆ ಈ ಕಲಾವಿದರಿಗೆ ಅನುಭವ ಮತ್ತು ಅಭಿನಯ ವಿವೇಚನೆ ಮನಸ್ಸಿನಲ್ಲಿ ಕೆಲಸ ಮಾಡಿದರೆ ಪಾರಿಜಾತವೂ ಕೂಡಾ ಪ್ರೇಕ್ಷಕರನ್ನು ಆಕರ್ಷಿಸಬಹುದಾಗಿದೆ. ಕಥಕಳಿ ಮತ್ತು ಯಕ್ಷಗಾನದ ಭಾಷಾಶೈಲಿ ಯಾವುದೇ ಇರಲಿ, ಇದು ತೆಲಗು ಪಾರಿಜಾತವನ್ನು ಪರಸ್ಪರ ಸಮೀಕರಿಸಿಕೊಂಡಿದೆ. ತೆಲುಗಿನ ನಮದಿ ತಿಮ್ಮಣ್ಣನ ಪ್ರಭಾವಕ್ಕೆ ಒಳಗಾಗಿರುವುದನ್ನು ಪ್ರೇಕ್ಷಕರು ವಿಚಾರವಂತರು ಕಂಡುಕೊಂಡಿದ್ದಾರೆ. ಸಿದ್ಧೇಂದ್ರ ಯೋಗಿಯಿಂದ ಆರಂಭಗೊಂಡ ಅಭಿನಯದ ಬ್ರಾಹ್ಮಣ ವಂಶಸ್ಥರು ಇಂದಿಗೂ ಆಂಧ್ರದಲ್ಲಿ ಜೀವಂತವಾಗಿರುವುದನ್ನು ಡಾ.ಶ್ರೀರಾಮ ಇಟ್ಟಣ್ಣವರ ಸಂಶೋಧನೆಯ ಮೂಲಕ ಕಂಡುಕೊಂಡಿದ್ದಾರೆ. ಪರಂಪರೆಯ ವೈವಿಧ್ಯದ ಮೂಲಕ ಪಾತ್ರಗಳು ಹೊಸ ಸೃಷ್ಟಿ ಪಡೆದುಕೊಂಡದ್ದನ್ನು ಗಮನಿಸಿಯೇ ಕೊರವಂಜಿಯ ಪಾತ್ರದ ಸೃಷ್ಟಿ ಪಾರಿಜಾತಕ್ಕೆ ಬಂದಿದೆಯನ್ನುವುದು ನಂಬಿಗೆಗೆ ಯೋಗ್ಯವಾಗಿದೆ. ಕೊರವ, ಕುರವ ಎಂಬುದು ಆಂಧ್ರದ ಆದಿವಾಸಿಗಳ ನಾಮಧೇಯವಾಗಿದೆ. ‘ಅಂಜಿ’ ಎಂದರೆ ಪಾದ – ಹೆಜ್ಜೆ, ಕೊರವಂಜಿ ಎಂದರೆ ಕೊರವ ಜಾತಿಯ ಪಾದ – ವಿನ್ಯಾಸ ಅಥವಾ ನೃತ್ಯ ಎಂದರ್ಥ. ಇದು ಕಣಿ ಮೂಲಕ ಇಡೀ ಜನಸಮೂದಾಯದ ಸಾಂಸ್ಕೃತಿಕ ಸಂದರ್ಭಗಳಲ್ಲಿ ಬಹುವಿಧವಾಗಿ ಪ್ರಚಲಿತಗೊಂಡಿದೆ. ಭಾಷೆಗಳ ಮೀರಿ ಕಲೆ ಮೀರಿ ಕಲಾತ್ಮಕ ಅಭಿನಯಕ್ಕೆ ಕಾರಣವಾಗಿದೆ. ಹಲವಾರು ಉದಾಹರಣೆಗಳ ಮುಲಕ ಸಾಹಿತ್ಯದಲ್ಲಿ ಕೊರವಂಜಿ ಪಾತ್ರ ಸೃಷ್ಟಿಗೊಂಡಿದೆ.

ಕ್ರಿ.ಶ. ೧೭೬೦ ರ ಸುಮಾರಿಗೆ ಪಾರಿಜಾತ ವಿಷಯವು ಸಾಕಷ್ಟು ಜನಮನ ಗೆದ್ದುಕೊಂಡ ಅಪರಾಳ ತಮ್ಮಣ್ಣ – ಶಿರಗುಪ್ಪಿ ಸದಾಶಿವಪ್ಪನವ ಹೊಸ ರಚನೆಗೆ ಪ್ರೇರಣೆಯಾದದ್ದಿದೆ. ತೆಲುಗಿನ ‘ಪಾರಿಜಾತ ಹರಣಮು’ ‘ಅಪರಾಳ ಪಾರಿಜಾತ’ ವನ್ನು ಹೋಲುವುದು ಕನ್ನಡದಲ್ಲಿ ಸಿಗುವ ಉದಾಹರಣೆ. ಈ ಎರಡೂ ಪಾರಿಜಾತ ಬಯಲಾಟಗಳನ್ನು ನೋಡಿದರೆ, ಸಾಮ್ಯತೆಗೆ ಇಂಬು ದೊರೆಯುತ್ತದೆ. ಹಾಗೆಯೇ ಪಾರಿಜಾತವು ಕೂಡಾ ಜನ ಜ್ಞಾನ – ಬಹುಜ್ಞಾನ ಪಡೆದುಕೊಂಡು ಮೂಲ ಕೃತಿಯ ಆಶಯದ ಸ್ಥಾಯಿ ಒಂದು ಬಿಂದುವಾಗಿ ಮಾತ್ರ ಉಳಿಯುತ್ತದೆ. ಒಂದು ಕೃತಿ ಬಹುಕೇಂದ್ರಿತ ರೂಪದಲ್ಲಿ ಬೆಳೆಯುತ್ತದೆ. ೧೮೬೦ ರ ಅಪರಾಳ ತಮ್ಮಣ್ಣನ ಕೃತಿಗಿಂತಲೂ ಮೊದಲು ನೂರುವರ್ಷಗಳ ಇತಿಹಾಸದಲ್ಲಿ ಪಾರಿಜಾತ ಕೃತಿಗಳಿವೆಯೆಂದು ಡಾ. ಇಟ್ಟಣ್ಣವರ ಸಂಶೋಧಿಸಿದ್ದಾರೆ. ಒಂದು ಮಾತ್ರ ನಿಜ, ಕನ್ನಡ ಪಾರಿಜಾತವನ್ನು ಅಪರಾಳ ತಮ್ಮಣ್ಣ ಮತ್ತು ಶಿರಗುಪ್ಪಿ ಸದಾಶಿವಯ್ಯ ಇಬ್ಬರೂ ಕೂಡಿ ಬರೆದಿದ್ದಾರೆ ಎನ್ನುವುದಕ್ಕಿಂತಲೂ ಈ ಕೃತಿ ಇಬ್ಬರದೂ ಆಗಿದೆ ಇನ್ನುವುದು ನಿಜ. ಬಿಟ್ಟಿದ್ದನ್ನು ಮುಂದುವರೆಸಿದ ಶ್ರೇಯಸ್ಸು ಶಿರಗುಪ್ಪಿಯವರದಾಗಿದೆ.

ಅಪರಾಳ ತಮ್ಮಣ್ಣ ಮತ್ತು ಆತನ ಮಗ ಇಬ್ಬರೂ ಕೂಡಿಕೊಂಡೇ ಪಾರಿಜಾತವನ್ನು ರಂಗಭೂಮಿಗೆ ಅಳವಡಿಸಿದರು. ಈ ಪ್ರಯೋಗದಿಂದ ಅಸಮಾಧಾನಗೊಂಡವರೂ ಇಲ್ಲದಿಲ್ಲ. ಅಂದಿನ ಮಠಾಧೀಶರಾದ ವ್ಯಾಸರಾಯ ವಿದ್ಯಾಪ್ರಸನ್ನತೀರ್ಥರು ದೂರು ಕೊಟ್ಟರು. ತಂದೆ – ಮಗ ಕೂಡಿಕೊಂಡು ಮಧ್ವ ಸಿದ್ಧಾಂತದ ವಿರುದ್ಧ ಪ್ರಚಾರ ಮಾಡುತ್ತಾರೆಂಬ ಸುದ್ದಿ ಹರಡಿದರು. ನಾಟಕ ಪ್ರದರ್ಶನ ಆ ಕಾಲಕ್ಕೆ ಧರ್ಮ ವಿರೋಧ ಕ್ರಿಯೆಯಾಗಿತ್ತು. ಅಪರಾಳ ತಮ್ಮಣ್ಣ ಕೂಡ ಮಧ್ವರೇ ಆಗಿದ್ದರು. ಮಠದ ಶಿಷ್ಯ ಪರಂಪರೆಗೆ ಸೇರಿದವರೇ ಆಗಿದ್ದರು. ಮಠಾಧೀಶರ ಹೇಳಿಕೆಯ ಮೇಲೆ ಇವರಿಗೆ ಧರ್ಮ ಬಹಿಷ್ಕಾರ ಹಾಕಿದರು. ಸ್ವಾಮಿಗಳನ್ನು ಕಂಡು ಸತ್ಯಾತ್ಯತೆಯನ್ನು ಮನವರಿಕೆ ಮಾಡಿಕೊಟ್ಟ ಮೇಲೆ ಸ್ವಾಮಿಗಳು ಸಂತುಷ್ಟರಾದರು. ಉಳಿದವರ ಮಾತು ಕೇಳಿ ಮಾಡಿದ ಆರೋಪವನ್ನು ಹಿಂತೆಗೆದುಕೊಂಡರು. ಮತ್ತು ತುಂಬು ಗೌರವದಿಂದ ಅಪರಾಳರನ್ನು ಪುರಸ್ಕರಿಸಿದರು.

ಮುಂದೆ ಕುಲಗೋಡ ತಮ್ಮಣ್ಣ ಇದೇ ಕೃತಿಗಳನ್ನು ಕೆಲವು ಸೂಕ್ತ ಬದಲಾವಣೆ ಮಾಡಿಕೊಂಡು ರಂಗದ ಮೇಲೆ ತಂದನು. ಕ್ರಿ. ಶ. ೧೮೬೦ ಆಸುಪಾಸು ಅಂದುಕೊಳ್ಳಬಹುದು. ಈತನು ಕಂಪನಿಯಲ್ಲಿ ಕೌಜಲಗಿ ನಿಂಗಮ್ಮ ಕೊರವಂಜಿ ಪಾತ್ರ ಮಾಡುತ್ತಿದ್ದಳು. ಕುಲಗೋಡನ ಕೀರ್ತಿಯಿಂದ ಉತ್ತರ ಕರ್ನಾಟಕದಲ್ಲಿ ಪಾರಿಜಾತದ ಹುಚ್ಚು ಹೊಕ್ಕು ಹೊಸ ಹೊಸ ಕಂಪನಿಗಳು ಹುಟ್ಟಿಕೊಳ್ಳತೊಡಗಿದವು. ಕುಲಗೋಡ ತಮ್ಮಣ್ಣ ನಂತರ ಶೂರ್ಪಾಲಿಯ ಅಚ್ಯುತಾಚಾರ್ಯ ಅವರದು ಪ್ರಮುಖ ಹೆಸರು. ಸುಸಂಸ್ಕೃತರು ಸುಶಿಕ್ಷಿತರು ಆಟ ಕಲಿಸಿದರೆ, ಅದು ಜಾನಪದ ಸಂಸ್ಕೃತಿಯನ್ನು ಸಂವರ್ಧನೆಗೊಳಿಸುತ್ತದೆ – ಸಂಸ್ಕಾರಕ್ಕೆ ಜೀವ ತೈಲವಾಗುತ್ತದೆ ಎನ್ನುವುದು ಅಚ್ಯತಾಚಾರ್ಯರಿಂದ ಸುರುವಾಯಿತು. ದೂತಿ ಪಾತ್ರ ಸಾರ್ವಕಾಲಿಕ ಪ್ರಚಲಿತ ಜೀವನ ಶೈಲಿಗೆ ಹೊಂದಿಕೊಂಡು ಇಂದಿಗೂ ಸಾಗಿಬಂದಿದೆ.

ಕ್ರಿ. ಶ. ೧೬೮೦ ರಿಂದ ೧೭೫೨ ಅವಧಿಯಲ್ಲಿ ಬದುಕಿರುವ ಪ್ರಸನ್ ವೆಂಕಟದಾಸರು ಸತ್ಯಭಾಮ ವಿಲಾಸವೆಂಬ ಗೀತಾನಾಟಕ ಬರೆದರು. ಪಾರಿಜಾತದ ಕತೆಯನ್ನು ೧೮೦೦ ರ ಅವಧಿಯಲ್ಲಿ ಅಪರಾಳ ತಮ್ಮಣ್ಣ ಈ ಪರಂಪರೆಯನ್ನು ಬರೆದರು. ೧೮೨೦ ರ ಸುಮಾರಿಗೆ ಕುಲಗೋಡ ತಮ್ಮಣ್ಣ ಮುಂದುವರೆಸಿದರು. ೧೮೨೨ ರಿಂದ ೧೯೦೫ ಅವಧಿಯಲ್ಲಿ ಹರಪನಹಳ್ಳಿಯ ಭೀಮವ್ವ ಭಿಮೇಶ ಕೃಷ್ಣ ಹೆಸರಿನಲ್ಲಿ ಗೀತಾನಾಟಕ ಬರೆದರು. ೧೮೩೫ ರಿಂದ ೧೯೧೫ ರ ಅವಧಿಯಲ್ಲಿ ಭೀಮಾರಾವ್ ಗುಮಸ್ತೆ ಐಹೊಳಿ ವೆಂಕಟೇಶ ಅಂಕಿತದಲ್ಲಿ ಗೀತಾನಾಟಕ ಬರೆದರು. ಅದರ ಹೆಸರು ಶ್ರೀಕೃಷ್ಣ ಪರಿಜಾತ ಲಘುಗೀತ. ಬೆಳ್ಳಾವೆ ನರಹರಿ ಶಾಸ್ತ್ರಿಯವರು ೧೯೨೮ರ ಸುಮಾರಿಗೆ ಶ್ರೀಕೃಷ್ಣ ಪಾರಿಜಾತ ಸಂಗೀತ ಪ್ರಧಾನ ನಾಟಕ ರಚಿಸಿದರು. ೧೮ನೇ ಶತಮಾನದ ಇನ್ನೊಂದು ಹೆಸರು ಗೋಕಾಕದ ಅನಂತಾಚಾರ್ಯರದು. ಇವರು ಶ್ರೀ ವೆಂಕಟೇಶ ಪಾರಿಜಾತ ಮತ್ತು ಶಿವಪಾರಿಜಾತ ಹೆಸರಿನ ಗೀತ ನಾಟಕ ರಚಿಸಿದ್ದಾರೆ. ಒಟ್ಟಿನಲ್ಲಿ ಮೂಲ ಮೂರು ಪುರಾಣಗಳಿಂದ ಪ್ರೇರಣೆಗೊಂಡ ಶ್ರೀಕೃಷ್ಣ ಪಾರಿಜಾತಗಳು ಕರ್ನಾಟಕದಲ್ಲಿ ವಿವಿಧ ವಸ್ತು ವಿಷಯಗಳ ಮೇಲೆ ನಾಟಕಗಳು ಹುಟ್ಟಲು ಕಾರಣವಾದವು. ವೀರಭದ್ರ ಪಾರಿಜಾತ – ಬಿಳಿರಂಗನ ಪಾರಿಜಾತಗಳು ಬಂದವು. ಪಾರಿಜಾತ ಎನ್ನುವುದು ಎಲ್ಲ ವಿಷಯಗಳಿಗೂ ಸಾಮಾನ್ಯೀಕರಣಗೊಂಡಿದ್ದು ವಿಶೇಷವೂ ಹೌದು ಚಿಂತನಿಯವೂ ಹೌದು. ಮೂಲತಃ ಶ್ರೀಕೃಷ್ಣ ರುಕ್ಮಿಣಿ – ಸತ್ಯಭಾಮೆ ಕಥೆಯ ವಸ್ತು ಶ್ರೀ ಕೃಷ್ಣ ಪಾರಿಜಾತ ಕೃತಿಯು ಸಂತಾನಶಕ್ತಿಯ ಕೃತಿಯಾಗಿರುವುದೇ ಇದೆಲ್ಲಕ್ಕೂ ಕಾರಣ. ಕಾವ್ಯ ಮತ್ತು ನಾಟಕ ಎರಡೂ ಒಂದೇ ಅನ್ನುವುದಕ್ಕೆ ಇದೊಂದು ಸಾಕ್ಷಿ. ಹೀಗೆ ಪಾರಿಜಾತ ನಾಟಕಗಳ ಪರಂಪರೆಯೇ ಬೆಳೆದುಬಂತು. ಆದ್ರೆ ಅಪರಾಳ ತಮ್ಮಣ್ಣ ಅವರ ಮತ್ತು ಕುಲಗೋಡ ತಮ್ಮಣ್ಣ ಕೃತಿಗೆ ಲಭಿಸಿದ ಜನಪ್ರಿಯತೆ ಮತ್ತು ಪ್ರೇಕ್ಷಕರ ಆಂತರಿಕ ಬದಲಾವಣೆ ಉಳಿದವುಗಳಿಗೂ ಲಭಿಸಿತೆಂದು ಹೇಳಲಿಕ್ಕಾಗದು. ಅದಕ್ಕೆ ಅವರೀರ್ವರ ತಪಸ್ಸು ದುಡಿಮೆ ಕಾರಣವಾಗಿರುವುದು. ಜಾನಪದವು ಸ್ವೀಕಾರಾರ್ಹ ಭಾವಗಳನ್ನು ತುಂಬಿಕೊಂಡಿರುವಂಥದ್ದು. ಭಾಷೆ, ಸಾಹಿತ್ಯಗಳ ವಿಷಯದಲ್ಲಿ ಸಣ್ಣತನವಿಲ್ಲ. ಸಕಲ ಜ್ಞಾನವನ್ನು ಸಂಪಾದಿಸುವ ಮತ್ತು ಹಂಚುವ ಭಾವನೆ ಅಮೂಲ್ಯವಾದ ಗುಣವಾಗಿದೆ. ಕಲಾವಿದರು ಕೂಡಾ ಈ ದಿಸೆಯಲ್ಲಿ ಸದಾ ಚಿಂತಕರಾಗಿರುತ್ತಾರೆ.ಲೋಕ ಜ್ಞಾನವನ್ನು ಪರಿಜಾತದ ಮೂಲಕ ಹಾಡುವುದರಲ್ಲಿ ಸಂತೋಷಪಡುತ್ತಾರೆ. ಮೂಲ ರಚನೆ ಒಂದೇ ಆದರು ಆಡುವ ಕಲಾವಿದರ ಕಲೆ ಮತ್ತು ತಿಳಿವಳಿಕೆ ಭಿನ್ನವಾಗಿರುತ್ತದೆ. ಹೊಸಹೊಸದನ್ನು ಪ್ರೇಕ್ಷಕರಿಗೆ ನೀಡಿ ಆಹೇರಿ ಪಡೆದುಕೊಳ್ಳವುದು ಮತ್ತು ಜತೆಗೆ ಶಹಭಾಶ್ ಗಿರಿ ಪಡೆದುಕೊಳ್ಳುವುದು ಕಲಾವಿದರಲ್ಲಿ ಹುಮ್ಮಸ್ಸು ಮತ್ತು ಸ್ಪರ್ಧಾತ್ಮಕ ಸ್ವಭಾವವನ್ನು ಹೆಚ್ಚಿಸುತ್ತದೆ. ಕಲಾವಿದರ ಹಾಗೂ ಕಂಪನಿಯ ಕೀರ್ತಿ ಹೆಚ್ಚುತ್ತದೆ. ಹೀಗಾಗಿ ಕಲೆ, ಕಲಾವಿದ ಮತ್ತು ಕಂಪನಿ ಈ ಮೂರು ತ್ರಿವೇಣಿಯಂತೆ ಅನ್ನುವುದು ಸುಳ್ಳಲ್ಲ.

ಪಾರಿಜಾತ ಪ್ರದರ್ಶನದಲ್ಲಿ ನಾದಾಸಕ್ತಿಯಿಂದ ಹುಟ್ಟಿಕೊಂಡ ಸಂಗೀತವು ದೂರವಾಗಿ ವಾದ್ಯವಾದನಗಳು ಶಕ್ತಿ ಪ್ರದರ್ಶನಕ್ಕೆ ನಿಲ್ಲುವುದು ವಿಷಾದನೀಯ. ವಾದ್ಯ, ತಾಳ ಬರೀ ಸಪ್ಪಳದ ಪರಿಕರಗಳಾಗಿವೆ. ಶಬ್ದ ಶುದ್ಧತೆ, ಮಾಧುರ್ಯ, ಸ್ಪಷ್ಟತೆ ನಿತಾಂತತೆಯ ಕುರಿತು ಗಟ್ಟಿಯಾಗಿ ನೀಡುವ ಮಾರ್ಗದರ್ಶನ – ನಿರ್ದೇಶನ ಬೇಕಾಗಿದೆ. ಇತ್ತಿಚೆಗೆ ರೇಡಿಯೋ, ಕ್ಯಾಸೆಟ್, ಸಿಡಿ ಮೂಲಕ ಶ್ರಾವ್ಯ ಪ್ರಯೋಗಗಳಿಂದಾಗಿ ಮತ್ತು ದೂರದರ್ಶನದ ದೃಶ್ಯ ಮಾಧ್ಯಮದಿಂದಾಗಿ ಈ ದೋಷ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಈ ದಿಸೆಯಲ್ಲಿ ವಿಷೇಶ ಆಸಕ್ತಿ ಹೊಂದಿರುವ ಡಾ. ಬಸವರಾಜ ಮಲಶೆಟ್ಟಿ, ಶ್ರೀರಾಮ ಇಟ್ಟಣ್ಣವರ, ಬಸವಲಿಂಗಯ್ಯ ಹಿರೇಮಠ, ಬಸವರಾಜ ಜಗಜಂಪಿ,ಬಸವರಾಜ ಹೊಸಮನಿ, ಮೊದಲಾದವರು ಸುಧಾರಣೆಗೆ ಶ್ರಮಿಸಿದ್ದಾರೆ.

ನಮ್ಮ ಜೀವನಕ್ಕೊಂದು ಮಿತಿ ಇದೆ. ಇದನ್ನು ದಾಟಿ ದೇಶ – ವಿದೇಶ ಸುತ್ತುವುದು, ಗ್ರಹ ಗ್ರಹಗಳನ್ನು ಕಾಣುವುದು ಎಲ್ಲರಿಗೂ ಲಭಿಸುವ ಸಾಧ್ಯತೆಯಿಲ್ಲ. ಇರುವ ಮಿತಿಯಲ್ಲಿ ಹುಟ್ಟು – ಸಾವು ಕಾಣುವುದಂತು ನಿಜ. ಆದರೂ ಒಂದು ಅರ್ಥಪೂರ್ಣ ಜೀವನವನ್ನು ಕಟ್ಟಿಕೊಳ್ಳುವ ಸಲುವಾಗಿ ನಾವು ಜ್ಞಾನದ ಮೊರೆಹೋಗಬೇಕಾಗುವುದು. ರಸ, ಕಲೆ, ಸಂಸ್ಕೃತಿ ಸಂಸ್ಕಾರಗಳು ನಮ್ಮನ್ನು ಉದ್ದೀಪನಗೊಳಿಸುವ ಪಾದರಸಗಳಾಗಿವೆ. ಇವುಗಳ ಮೂಲ ತಿಳಿಯದೆ ಇರುವುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಇಂಥ ಅನುಭವ ಜನ್ಯ ಜ್ಞಾನ ತಿಳಿವಳಿಕೆಯನ್ನು ಶ್ರೀಕೃಷ್ಣ ಪಾರಿಜಾತವು ನಮಗೆ ಕೊಡುತ್ತದೆ. ಈ ಪ್ರಕಾರದಿಂದ ಬ್ರಹ್ಮ ಪದ್ಮ, ವಿಷ್ಣು, ಶಿವ, ಭಾಗವತ, ನಾರದ, ಮಾರ್ಕಂಡೇಯ, ಅಗ್ನಿ, ಭವಿಷ್ಯೋತ್ತರ, ಬ್ರಹ್ಮ ವೈವರ್ತಕ, ವರಹ, ವಾಮನ, ಮತ್ಸ್ಯ, ಕೂರ್ಮ, ಗರುಡ, ಬ್ರಹ್ಮಾಂಡ, ಸ್ಕಂದ, ಲಿಂಗ ಹೀಗೆ ಪುರಾಣಗಳ ಸಾಂಕಲ್ಪಿಕ ಜ್ಞಾನದ ಪರಿಷ್ಕಾರ ರೂಪವನ್ನು ಕಾಣಲು ಸಾಧ್ಯವಿದೆ. ಸನತಕುಮಾರ, ನಾರಶಿಂಹ, ನಂದಿ, ಶಿವಧರ್ಮ, ದೂರ್ವಾಸ, ನಾರದೀಯ, ಕಪಿಲ, ಮಾನವ, ವಿಚೇನ, ವಾರುಣ, ಕಾಳೇಯ, ವಾಶಿಷ್ಟ, ಕಾಳಿಂಗ, ಸಾಂಬ, ಶೌರ್ಯ, ಪರಾಶರ, ಮರೀಚಿ, ಭಾರ್ಗವ, ಎಂಬ ಹದಿನೆಂಟು ಉಪ ಪುರಾಣಗಳ ಕೆಲವಾಂಶವನ್ನು ಪಾರಿಜಾತದ ಮೂಲಕ ತಿಳಿದುಕೊಳ್ಳಲು ಸಾಧ್ಯವಿದೆ. ಎಷ್ಟು ಮಾತ್ರವಲ್ಲ, ಆದಿ ಅನಾದಿ, ಅನಂತ, ಅರ್ಭೂತ ಅಂಟಜ, ತಾಂಡಜ, ತಾರಜ, ಭಿಲ್ಲಜ, ಭಿನ್ನಾಯುಕ್ತ, ಆಯುಕ್ತ, ಅಮಲಯುಕ್ತ ಮನ್ನೀರಣ, ಮಾನ್ಯರಣ, ವಿಸ್ವರಣ, ವಿಶ್ವಾವಸು, ಅಲಂಕೃತ, ಸಾಲಂಕೃತ, ಕೃತಾಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಗಳೆಂಬ ಇಪ್ಪತ್ತೊಂದು ಯುಗಗಳ ತಿಳುವಳಿಕೆಗಾಗಿ ಮತ್ತು ಲಕ್ಷ್ಮೀ, ಕೌಸ್ತುಭ, ಪಾರಿಜಾತ, ಸುರ, ಅಮೃತ, ಹಾಲಾಹಲ, ರಂಭಾ, ಶಂಖ, ಚಿಂತಾಮಣಿ, ಧನ್ವಂತರಿ, ಐರಾವತ, ಕಾಮಧೇನು, ಉಚ್ಚೈಸವ, ವಜ್ರಯುಧ, ಹೀಗೆ ಸಮುದ್ರ ಮಥನ ಕಾಲಕ್ಕೆ ಹುಟ್ಟಿದ ರತ್ನಗಳ ಬಗ್ಗೆ ಕೂತು ಪುಸ್ತಕ ಓದಿ ತಿಳಿದುಕೊಳ್ಳಲು ಇಂದಿನ ಕಾಲದಲ್ಲಂತು ಸಾಮಾನ್ಯರಿಗರು ಮಾತ್ರವಲ್ಲ ಸುಶಿಕ್ಷಿತರಿಗೂ ಸಾಧ್ಯವಿಲ್ಲ. ಇದೆಲ್ಲವನ್ನು ಮೂರಾರು ತಾಸುಗಳ ಪಾರಿಜಾತದಲ್ಲಿ ಕಾಣಬಹುದಾಗಿದೆ. ಕುಣಿತ, ಅಭಿನಯ, ಸಂಗೀತ, ಸಾಹಿತ್ಯ, ವೇಷಭೂಷಣ ಇತ್ಯಾದಿಗಳಿಂದ ಈ ಪ್ರಕಾರವು ಇಲ್ಲ ಬಗೆಯ, ಎಲ್ಲ ವರ್ಗಗಳ ಜನರನ್ನು ಆಕರ್ಷಿಸುತ್ತದೆ. ಇದೊಂದು ಮಿಥಿಕ್ ಪ್ರಕಾರ. ಶ್ರೀ ಕೃಷ್ಣ ಪರಿಜಾತ ಪರಂಪರೆ ಬಹುದೊಡ್ಡದಾಗಿದೆ. ಇದರಲ್ಲಿ ದುಡಿದವರ ಹೆಸರನ್ನು ಹೆಸರಿಸುವುದು ತುಂಬ ಕಷ್ಟದ ಕೆಲಸ. ಆಟದ ಏಜಂಟನಿಂದ ಹಿಡಿದು ಸದಾ ಈ ತಂಡವನ್ನು ಹೊತ್ತು ಸುತ್ತಾಡುವ ಚಾಲಕನವರೆಗೂ ನೆನೆಯಲೇ ಬೇಕಾದ ಕೆಲಸ ಇದಾಗಿದೆ. ಈ ತಂಡಗಳು ಊರಿಗೆ ಬಂದರೆ ಅವರ ಉಪಚಾರ ಮಾಡುವವರೂ ಕೂಡ ತುಂಬ ಪ್ರೀತಿ – ವಿಶ್ವಾಸ ಗೌರವ ತೋರಿಸುತ್ತಾರೆ. ಅಪ್ಪಾಲಾಲ ನದ್ಧಾಫರು ತಮ್ಮ ಕಂಪನಿ ಕಟ್ಟಿಕೊಂಡು ಸುಮಾರು ಎಪ್ಪತ್ತು ವರ್ಷ ದುಡಿದಿದ್ದಾರೆ. ಕೌಜಲಗಿ ನಿಂಗವ್ವನ ಸಮಕಾಲೀನರು. ಜಮಖಂಡಿ ಮತ್ತು ನಾವಲಗಿ ಈಗ ಈ ಕಲಾಕ್ಷೇತ್ರದ ಕೇಂದ್ರವಾಗಿದೆ. ಕುಲಗೋಡ ತಮ್ಮಣ್ಣ, ಕೌಜಲಗಿ ನಿಂಗವ್ವ ರಾಮಚಂದ್ರ ಸಾವಂತ, ಈ ಮೂವರಂತು ಪಾರಿಜಾತ ನೆಲೆ ನಿಲ್ಲಲಿಕ್ಕೆ ಕಾರಣರಾದರು. ಕಂಪನಿಗಳನ್ನು ಕಟ್ಟಿಕೊಂಡು ತುಂಬ ದೂರ ಸಾಗಿದವರು. ಜಮಖಂಡಿ ತಾಲೂಕಿನ ಆಲಗೂರ, ಕುಂಚನೂರ, ಪಾರಿಜಾತಗಳಿಗೆ ಮೂಲ ಸ್ಥಾನವಾಗಿದ್ದವು. ಈಗ ಸಾರವಾಡವನ್ನು ಸೇರಿಸಬಬಹುದಾಗಿದೆ. ನಣದಿ ರಾಮಜಿ, ಕುಂಚನೂರ ಧರ್ಮಣ್ಣಗೌಡ, ಕುಂಬಾರ ನೀಲಪ್ಪ, ಕ್ವಾಣೆಗೋಳ ಮಲ್ಲಪ್ಪ, ಆಲಗೂರಿನ ಕೃಷ್ಣಪ್ಪ, ಭೀಮಪ್ಪ ಈ ಕಲಾವಿದರಿಂದ ಪಾರಿಜಾತ ಪೂರ್ಣತೆ ಪಡೆದವು. ಇವರಿಗಿಂಥ ಮೊದಲಿನವರೆಂದರೆ ದುಂಡಪ್ಪ ಈರಪ್ಪ ಕತ್ತಿ (೧೯೨೦) ಹುಬ್ಬಳ್ಳಿಯಲ್ಲಿ ಮೂರು ತಿಂಗಳು ತಕೀಟ ಹಚ್ಚಿ ಆಡಿದ ಮಹನೀಯರಿವರು, ಕಂಕಣವಾಡಿ, ನಾವಲಗಿ, ಕುಂಚನೂರ, ತುಂಬರಮಟ್ಟಿ, ತೋಳಮಟ್ಟಿ, ದಾಸ್ಯಾಳ, ಮುಧೋಳ, ಜಮಖಂಡಿಗಳಲ್ಲಿ ಪಾರಿಜಾತ ಕಲಿಸಿದವರು ಗುರಪ್ಪ ಮಾಸ್ತರ. ಸವದಿ ಮಲ್ಲಯ್ಯನ ಕಂಪನಿ ಹುಟ್ಟಿ ಮೂರು ದಶಕಮೀರಿ ಸಾಗಿತು. ಮಹಾಲಿಂಗಪೂರ, ಲೋಕಾಪುರ ಕೂಡಾ ಹೆಸರಾದದ್ದೇ ಆಗಿದೆ. ಜಮಖಂಡಿಯ ಬಸ್ಟ್ಯಾಂಡ ಎದುರಿನ ಗಿಡಗಳಲ್ಲೆಲ್ಲ ಪರಿಜಾತ ಕಂಪನಿ ಬೋರ್ಡುಗಳು ಈಗಲೂ ತುಂಬಿಕೊಂಡಿವೆ. ಶಂಕರಗೌಡ ಪಾಟೀಲರ ಅಥಣಿ ಲಾಡ್ಜಿಂಗ್ – ಬೋರ್ಡಿಂಗ್ ದ ಹೊರಗೆಲ್ಲ ಹಲವಾರು ಕಂಪನಿಗಳಿಗೆ ಆಟ ಹಿಡಿದುಕೊಡುವ ಪ್ರಾಮಾಣಿಕ ಸೇವೆ ಮಾಡಿದ್ದು ನೆನಪಾಗುತ್ತದೆ. ಮಲ್ಲಯ್ಯ ಸ್ವಾಮಿ ಅಥಣಿಯವರು ಜಮಖಂಡಿಗೆ ಬಂದು ಶ್ರೀ ವೆಂಕಟೇಶ್ವರ ಪಾರಿಜಾತ ಕಂಪನಿ ನಡೆಸಿಕೊಂಡು ಹೋಗಲು ಅಪ್ಪಾಲಾಲ ನದ್ಧಾಫ ತನ್ನ ಪ್ರಖ್ಯಾತಿಯ ಕಾಲದಲ್ಲೇ ಅವಕಾಶ ಮಾಡಿ ಕೊಟ್ಟದ್ದನ್ನು ಮಲ್ಲಯ್ಯ ನೆನೆಸುತ್ತಾರೆ. ಕುಟುಂಬ ಸದಸ್ಯೆರೆಲ್ಲರೂ ಸೇರಿಕೊಂಡು ಕಂಪನಿ ಬೆಳೆಸಿದವರು. ಪ್ರಸ್ತುತ ಪುಸ್ತಕ ಅಪ್ಪಾಲಾಲ ನದ್ಧಾಫರ ಜೀವನ – ಪ್ರದರ್ಶನಕ್ಕೆ ಮಿಸಲಾಗಿರುವುದನ್ನು ಬಿಟ್ಟು ಹೊರಗೆ ಹೋಗುವುದು ಅನುಚಿತ ಕೆಲಸವಾಗುತ್ತದೆ.

ಶ್ರೀ ಕೃಷ್ಣ ಪಾರಿಜಾತ ಕಂಪನಿಗಳ ಹಿನ್ನೆಲೆ
ಶ್ರೀ ಕೃಷ್ಣ ಪಾರಿಜಾತದ ಪ್ರಮುಖ ನೆಲೆಗಳು

ಅಪರಾಳ, ಶಿರಗುಪ್ಪಾ, ಕುಲಗೋಡ, ಕೌಜಲಗಿ, ಯಾದವಾಡ, ಸವದಿ, ಶೂರ್ಪಾಲಿ, ಮಹಾಲಿಂಗಪೂರ, ಆಲಗೂರ, ಕುಂಚನೂರ, ಜಮಖಂಡಿ, ಲೋಕಾಪುರ, ನಾವಲಗಿ, ತಿಕೋಟಾ, ಸಾರವಾಡ, ಛಬ್ಬಿ, ಸೊನ್ನ, ಟಕ್ಕಳಕಿ ಮುಂತಾದವು.

ಶ್ರೀ ಕೃಷ್ಣ ಪಾರಿಜಾತಕ್ಕೆ ನೂರಾ ಅರವತ್ತು ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಈ ಕ್ಷೇತ್ರ ಒಬ್ಬಿಬ್ಬರನ್ನು ಗುರುತಿಸಿವುದು ಮಾತ್ರವಲ್ಲ. ಸಮಯ, ಸಂದರ್ಭಕ್ಕೆ ತಕ್ಕಂತೆ ಅವರವರ ದುಡಿಕೆಗೆ ಸಲ್ಲುವ ಅವಕಾಶವಿದು. ಹೀಗಿರುವಾಗ ಸಾಧ್ಯವಿರುವ ಮಟ್ಟಿಗೆ ಸಾರ್ವಜನಿಕರಿಗೆ ಕನಿಷ್ಟ ಅಲಕ್ಷಿತ ಕಲಾವಿದರ ನೆನಪನ್ನಾದರೂ ಮಾಡಿ ಕೊಡುವುದು ಕರ್ತವ್ಯವೆನಿಸುತ್ತದೆ. ಒಬ್ಬ ಶ್ರೇಷ್ಠ ಕಲಾವಿದನ ಸುತ್ತ – ಮುತ್ತ ಅವನ ಜತೆಗೆ ಕೂಡಾ ಇನ್ನುಳಿದ ಕಲಾವಿದರು ಇರುತ್ತಾರೆ. ಇದು ಒಬ್ಬನಿಂದ ಮಾತ್ರ ಆಗುವ ಕೆಲಸವಲ್ಲ. ಇದೊಂದು ಕಂಪನಿ ಕೆಲಸ, ಕಂಪನಿಯ ಒಟ್ಟು ಸೇವೆಯ ದ್ಯೋತಕ.

೧೯೭೧ರಿಂದ ನನಗೆ ಈ ಪಾರಿಜಾತ ಕಂಪನಿಗಳ ಸಂಪರ್ಕ ಬಂದಿದೆ. ನಾನೊಬ್ಬ ಸೃಜನಶೀಲ ಬರಹಗಾರನೂ ಆಗಿರುವುದರಿಂದ ನಾನು ಇದರ ಒಂದು ಭಾಗವೇ ಅಂದುಕೊಳ್ಳುವುದು ತಪ್ಪಲ್ಲ. ಹೀಗಾಗಿ ಈ ಅಪ್ಪಾಲಾಲ ಸಾಹೆಬರ ಕುರಿತು ಬರೆಯಬೇಕಾದರೆ ಶ್ರೀ ಕೃಷ್ಣ ಪಾರಿಜಾತ ಕುರಿತು ಬರೆದ ಕೆಲವೊಂದು ಪುಸ್ತಕಗಳನ್ನು ಓದಬೇಕಾಯಿತು. ಇದೊಂದು ಕ್ಷೇತ್ರ ಮಾಹಿತಿ ಕೆಲಸ. ಅವರವರ ಪರಿಶ್ರಮಕ್ಕೆ ಸಿಕ್ಕಷ್ಟು ಸಿಗುತ್ತದೆ. ಆದರೂ ಅದು ಪೂರ್ಣಗೊಳ್ಳಲಾರದು. ಯಾವ ಕೃತಿಗಳೂ ಸಮಗ್ರವೆನಿಸುವುದಿಲ್ಲ. ಒಂದು ಪುಸ್ತಕ ಹುಟ್ಟಬೇಕಾದರೆ ಹಲವಾರು ಪುಸ್ತಕಗಳನ್ನು ಓದಿ ಬರೆದರೂ ವಿಷಯ ಒಟ್ಟುಗೊಳ್ಳುತ್ತದೆಯೇ ವಿನಃ ಪೂರ್ಣಗೊಳ್ಳುವುದಿಲ್ಲ. ಗುರುತಿಸಲ್ಪಟ್ಟ ಕಲಾವಿದರೆ ಮತ್ತೆ ಮತ್ತೆ ಗುರುತಿಸಲ್ಪಡುತ್ತಾರೆ. ಹತ್ತು ಪುಸ್ತಕ ಬಂದರೂ ಸೇರಿಕೊಳ್ಳದೇ ಉಳಿದುಕೊಳ್ಳುತ್ತಾರೆ. ನನ್ನಿಂದ ಕೂಡಾ ಇಷ್ಟೇ ಆಗುವುದು. ಗುರುತಿರುವ ನೆನಪಿರುವ ಮೂರುನಾಲ್ಕು ಕಲಾವಿದರು ಮಾತ್ರ ಸೇರಿಕೊಳ್ಳುತ್ತಾರೆ. ಈ ವಿಷಯದಲ್ಲಿ ಡಾ. ಶ್ರೀರಾಮ ಇಟ್ಟಣ್ಣವರ ಮಹಾಪ್ರಬಂಧ ಈ ಶ್ರೀ ಕೃಷ್ಣ ಪಾರಿಜಾತದ ವಂಶೋದ್ಧಾರಕ ಕೃತಿಯೆನಿಸುತ್ತದೆ. ಆದರೂ ಅದು ಇನ್ನೂ ಸಮಗ್ರತೆಯತ್ತ ಸಾಗಬೇಕಾಗಿದೆ. ಇದೊಂದು ಹುಟ್ಟಿದ ನದಿ. ಅದು ಭೋರ್ಗರೆಯಬೇಕಾದರೆ ಇನ್ನೂ ಅದಕ್ಕೆ ಮಳೆ – ಗಾಳಿ, ಏರು ಇಳಿವು ಲಭಿಸಿದಾಗಲೇ ಸಂಪೂರ್ಣ ಬೆಳಕು ಕೊಡುವುದು. ಒಟ್ಟಿನಲ್ಲಿ ಈ ಜಾನಪದ ಕ್ಷೇತ್ರದ ಕಾರ್ಯ ನಡೆದಿದೆ. ಇದೇ ತುಂಬ ಸಂತೋಷ. ಡಾ. ನಲ್ಲೂರ ಪ್ರಸಾದವರನ್ನು ಹಿಡಿದು ವೀರೇಶ ಬಡಿಗೇರ ಮತ್ತು ಶಿವಾನಂದ ಶೆಲ್ಲಿಕೇರಿಯವರ ತನಕ ಹಲವಾರು ಲೇಖಕರು ಈ ಪಾರಿಜಾತ ಸಂಸ್ಕೃತಿ ಕುರಿತು ಚಿಂತನ ಮಾಡಿದ್ದಾರೆ. ಗೊರೂಚದಿಂದ ಹಿಡಿದು ಡಾ. ಎಚ್. ತಿಪ್ಪೇರುದ್ರಸ್ವಾಮಿಗಳನ್ನೊಳಗೊಂಡು ಶ್ರೀ ಬಸವರಾಜ ಮಲಶೆಟ್ಟಿ ಅವರವರೆಗೂ ಈ ದಿಸೆಯಲ್ಲಿ ದುಡಿದಿದ್ದಾರೆ. ಆದರೂ ಇದು ಅಪೂರ್ಣವೆ. ಡಾ. ವೀರೇಶ ಬಡಿಗೇರ ಅವರು ತಮ್ಮ ‘ಸಂಸ್ಕೃತಿ ಸಂಕಥನ’ ಕೃತಿಯಲ್ಲಿ ಸೊನ್ನದ ಪಾರಿಜಾತವನ್ನು ಪರಿಚಯಿಸಿದ್ದು ನೋಡಿದರೆ ಆಶ್ಚರ್ಯವೆನಿಸುತ್ತದೆ. ೧೯೨೦ ರಲ್ಲಿ ಹುಟ್ಟಿಕೊಂಡ ಸೊನ್ನದ ಪಾರಿಜಾತದ ಉಲ್ಲೇಖ ಕುತೂಹಲ ಹುಟ್ಟಿಸುತ್ತದೆ. ಅಪ್ಪಾಲಾಲ ನದ್ಧಾಫ ಹುಟ್ಟಿದ್ದೇ ೧೯೧೭. ಅಷ್ಟೊತ್ತಿಗೆ ಪಾರಿಜಾತ ಕಂಪನಿಗಳು ಪ್ರಚಲಿತ ಇದ್ದವು ಎನ್ನುವುದಕ್ಕೆ ಸೊನ್ನದ ಪಾರಿಜಾತವೇ ಸಾಕ್ಷಿ. ಇವೆಲ್ಲವೂ ಪ್ರತಿಹಾಸಿಕ ದಾಖಲೆಗಳೆ. ಇಂಥವುಗಳನ್ನು ಯಾರು ಗುರುತಿಸಿದರು. ಇಂಥ ಕಲಾವಿದರು ಸರ್ಕಾರದಿಂದ ಏನು ಪಡೆದುಕೊಂಡರು ಎನ್ನುವುದು ಕೇವಲ ಜಿಜ್ಞಾಸೆಯ ಪ್ರಶ್ನೆಯಲ್ಲ. ಇಂಥವರು ಅಲಕ್ಷಿತರಾಗಿ ಹೋದರಲ್ಲ ಸಮಾಜ ಅವರ ಸೇವೆಗೆ ಪ್ರತಿಯಾಗಿ ಏನು ಕೊಟ್ಟಿತು ಅನ್ನುವುದು ಮುಖ್ಯ. ಒಂದು ಕಂಪನಿ ಹುಟ್ಟಿದಾಗ ಜತೆಗೆ ಹತ್ತು ಜನರಿರಬಹುದು ಆ ಕಂಪನಿ ಎಷ್ಟು ಕಲಾವಿದರನ್ನು ಹುಟ್ಟಿಸಿತು ಎನ್ನುವುದು ಮುಖ್ಯ. ಒಂದು ಕಂಪನಿಯಿಂದ ಮತ್ತೊಂದು ಕಂಪನಿ ಹುಟ್ಟುತ್ತದೆ. ಕಂಪನಿ – ಕಂಪನಿಗಳಲ್ಲಿ ಎಷ್ಟೆಷ್ಟು ಕಲಾವಿದರು ದುಡಿಯುತ್ತಾರೆ ಎನ್ನುವುದು ಸಂಸ್ಕೃತಿಯ ಸಂವರ್ಧನೆಗೆ ಸಾಕ್ಷಿಯಾಗುತ್ತದೆ. ಆದರೂ ಪ್ರಚಲಿತರ ಸಂಖ್ಯೆಯಷ್ಟೇ ಅಲಕ್ಷಿತರ ಸಂಖ್ಯೆ ದ್ವಿಗುಣತ್ರಿಗುಣದಷ್ಟೇ ಇರುತ್ತದೆ! ಒಬ್ಬರ ಹೆಸರಿನ ಕೆಲಸದಲ್ಲಿ ನೂರಾರು ಕಲಾವಿದರು ಇತಿಹಾಸದಲ್ಲಿ ದಾಖಲೆಯಾಗುವುದೇ ಮುಖ್ಯ. ಜೀವನಕ್ಕಿಂತಲೂ ಪ್ರದರ್ಶನ ಕಾರ್ಯ ಹೆಚ್ಚು ನಡೆಯಬೇಕು. ಪ್ರದರ್ಶನ ಮಾತ್ರ ಮುಖ್ಯವಲ್ಲ ಜೀವನ ಅದಕ್ಕಿಂತಲೂ ಮುಖ್ಯ ಇದು ಪರಸ್ಪರ ಸಹಸ್ಪಂದನ.ಒಂದು ನಪು ನೂರು ದಾಖಲೆಗೆ ಸಾಕ್ಷಿ.