ಶ್ರೀ ಕಾಡಸಿದ್ದೇಶ್ವರ ಜಮಖಂಡಿ ಶ್ರೀ ಕೃಷ್ಣ ಪಾರಿಜಾತ

ಅಪ್ಪಾಲಾಲ ಪಾರಿಜಾತವು ಕಂಪನಿಯು ತನ್ನ ಆರಾದ್ಯ ದೈವ ಜಮಖಂಡಿಯ ಮಹಿಮಾ ಪುರುಷ ಶ್ರೀ ಕಾಡಸಿದ್ದೇಶ್ವರ ಎಂಬ ಹೆಸರು ಪಡೆದುಕೊಂಡು ಹುಟ್ಟಿಕೊಂಡಿತು. ಅಪ್ಪಾಲಾಲ ನದ್ಧಾಫರ ಮನೆಯಿಂದ ನಮ್ಮ ಮನೆಯಾಗಲಿ, ಶ್ರೀ ಮಲ್ಲಯ್ಯ ಸ್ವಾಮಿಯವರ ಮನೆಯಾಗಲಿ, ಲಿಂಗನೂರ ಹೆಳವನ ಮನೆಯಾಗಲಿ ದೂರವಿರಲ್ಲಿಲ್ಲ. ಈಗಲೂ ದೂರವಿಲ್ಲ. ಆದ್ರೆ ಶ್ರೀ ಕಾಡಸಿದ್ದೇಶ್ವರ ಜಮಖಂಡಿ ಶ್ರೀ ಕೃಷ್ಣ ಪಾರಿಜಾತ ಎನ್ನುವುದು ರಿಸೀದಿ ಬುಕ್ಕಿನಲ್ಲಿರಬೇಕು! ಅಪ್ಪಲಾಲ ಎಂದೇ ಇಡೀ ನಾಡಿಗೆ ಪರಿಚಯವಾದವರು! ಕಾಡಸಿದ್ದೇಶ್ವರ ಅಪ್ಪಲಾಲರ ಕಂಪನಿ ಹೆಸರು ಅನ್ನುವುದು ಈಗ ಪುಸ್ತಕ ನೋಡಿದಾಗ ಮಾತ್ರ ಗೊತ್ತು. ಇದೇ ಓಣಿಯಲ್ಲಿ ಅಪ್ಪಾಲಾಲರ ಮನೆಗೆ ಹೋಗಬೇಕಾದ್ರೆ ಮಲ್ಲಯ್ಯ ಸ್ವಾಮಿ ಅಥಣಿಯವರ ಮನೆಯ ಮುಂದೆ ಹಾಯಬೇಕು. ಲಿಂಗನೂರ ಹೆಳವನ ಮನೆಯಮುಂದೆ ಹಾಯಬೇಕು. ಅಪ್ಪಾಲಾಲ ವಾಕಿಂಗ್ ಬರಬೇಕಾದ್ರೆ ಬೀಡಿ, ಪಾನಗಾಗಿ, ಬಸ್ ಸ್ಟಾಂಡಿಗೆ ಬರಬೇಕಾದ್ರೆ ಇದೇ ಮಾರ್ಗದಲ್ಲಿಯೇ ಬರಬೇಕು.ಥೇಟರ ಚೌಕದ ಅಥಣಿ ಬೋರ್ಡಿಂಗ್ ಲಾಜಿಂಗ್ ಮತ್ತು ಗೌರಿಶಂಕರ ಖಾನಾವಳಿ ಪಾಪ್ಯುಲರ್ ಬೋರ್ಡಿಂಗ್ ಲಾಡ್ಜಿಂಗ್, ವೀರಶೈವ ಖಾನಾವಳಿ ಮತ್ತು ಪ್ರಕಾಶ್ ಲಾಡ್ಜಿಂಗ್ – ಬೋರ್ಡಿಂಗ್ ಆನಂದ ಬೋರ್ಡಿಂಗ್ ಎಲ್ಲ ಪಾರಿಜಾತ, ನಾಟಕ, ಸಣ್ಣಾಟ ಯಾವುದೇ ಕಂಪನಿಗಳು ಹೆಚ್ಚು ಕಡಿಮೆ ಇಲ್ಲಿಯೇ ಸುತ್ತಾಡ್ಬೇಕು. ಇಷ್ಟು ಹತ್ತಿರದ ಸಂಪರ್ಕಗಳ – ಸ್ನೇಹ ಸಂಬಂಧಗಳು ಎಲ್ಲರಿಗೂ ಇದ್ದಿದ್ದೆ. ಖಾನಾವಳಿ – ವಾಹನ – ಕಲಾವಿದ ಈ ಮೂರು ಉದ್ಯೋಗದ ಕೊಂಡಿಯೆ ಆಗಿದ್ದವು.

ಈ ಕಲಾವಿದರಿಗೆ ಊಟದಲ್ಲಿ ಸ್ವಲ್ಪ ಹೆಚ್ಚು – ಕಡಿಮೆ ಆದ್ರೆ ಹೊಂದಾಣಿಕೆ ಇರುತ್ತದೆ. ಅವರಿಗೆ ಮುಖ್ಯವಾಗಿ ಊಟವಾದ ನಂತರ ವಿಶ್ರಾಂತಿಗೆ ಜಾಗಬೇಕಾಗುತ್ತದೆ. ಲಾಡ್ಜಿಂಗ್ ಇದ್ರೆ ಹೆಚ್ಚು ಅನುಕೂಲ, ಸರ್ವೇಸಾಮಾನ್ಯ ಮಧ್ಯಾಹ್ನದ ಊಟ ಮಾತ್ರ ಖಾನಾವಳಿಯಲ್ಲಿಯೇ. ಊಟ ಮಾಡಿದ್ರೆ ವಿಶ್ರಾಂತಿಗೆ ಉಚಿತ ಜಾಗಬೇಕು. ಯಾರೂ ಇವರಿಗೆ ಲಾಡ್ಜಿಂಗ್ ಚಾರ್ಜ್ ಹೆಚ್ಚಾಗಿ ಮಾಡುವುದಿಲ್ಲ. ಯಾಕೆಂದರೆ ಒಂದು ಆಟದ ಕಂಪನಿ ಹಿಂದೆ ಹತ್ತು ಜನ ಇರುತ್ತಾರೆ. ಇಂಥ ಒಂದೆರಡು ಕಂಪನಿ ಬಂದ್ರೆ ಖಾನಾವಳಿಯವರಿಗೆ ಖುಷಿಯೊ ಖುಷಿ. ಊಟಕ್ಕೆ ಮಾತ್ರ ಚಾರ್ಜ್ ವಿಶ್ರಾಂತಿ ಪ್ರೀ. ಕಲಾವಿದರಿಗೆ ಶುಚಿ ರುಚಿಗಿಂತಲೂ. ಮುಖ್ಯ ನೀರಿನ ಅನುಕೂಲ ಕೈಕಾಲು ಮುಖ ಸ್ನಾನಕ್ಕೆ, ವಾಸ್ತವ್ಯಕ್ಕೆ. ಅನುಕೂಲ ಬೇಕಷ್ಟೆ; ಊಟದಲ್ಲಿ ಉಪ್ಪಿನಕಾಯಿ – ಉಳ್ಳಿಗಡ್ಡೆ ಇದ್ದರೆ ಸಾಕು: ನಿದ್ದೆ ಅವರಿಗೆ ಅಪರೂಪ! ಜಮಖಂಡಿ ಅಥಣಿ ಬೋರ್ಡಿಂಗ್ ಲಾಜಿಂಗ್ ಮಾಲಿಕ ಶಂಕರಗೌಡ ಪಾಟೀಲ ಇವರು ತಮ್ಮ ವೃತ್ತಿಯೊಂದಿಗೆ ಈ ಆಟಗಳ ಏಜನ್ಸೀ ಮಾಡುತ್ತಿದ್ದರು. ಇವರಲ್ಲಿ ನಾನು ಮ್ಯಾನೇಜರಾಗಿದ್ದೆ. ಹೀಗಾಗಿ ಬಹುತೇಕ ಆಟದ ಕಂಪನಿಗಳೊಂದಿಗೆ ನನ್ನ ಸಂಪರ್ಕ ಹೆಚ್ಚು.

ಶ್ರೀ ಶಂಕರಾನಂದ ಪರಮಹಂಸ ಪಾರಿಜಾತ ಕಂಪನಿ ನಾವಲಗಿ

ಒಂದು ರೀತಿಯಲ್ಲಿ ಜಮಖಂಡಿ ಪಾರಿಜಾತ ಕಂಪನಿಗಳ ಕಾರ್ಯಕ್ಷೇತ್ರವೂ ಹೌದು, ಕೆಲವರಿಗೆ ಕರ್ಮಭೂಮಿಯೂ ಹೌದು. ಈ ಕಾರ್ಯಕ್ಷೇತ್ರ ಮತ್ತು ಕರ್ಮಭೂಮಿ ಒಂದು ರೀತಿಯ ಸ್ಪರ್ಧಾಭೂಮಿಯೂ ಹೌದು ಎನ್ನುವುದು ನನ್ನ ಮನವರಿಕೆಯ ಮಾತು.

ನಾವಲಗಿ ಜಮಖಂಡಿ ತಾಲೂಕಿನಲ್ಲಿ ಕಲಾಕ್ಷೇತ್ರವೇ ಇದ್ದಂತೆ ೧೯೭೦ – ೭೫ ರ ಸಂದರ್ಭದಲ್ಲಿ ನಾವಲಗಿಯಲ್ಲಿ ಆರು ಪಾರಿಜಾತ ಕಂಪನಿಗಳು ಹುಟ್ಟಿಕೊಂಡಿದ್ದವು.

ಶ್ರೀ ಪರಮಹಂಸ ಶ್ರೀ ಕೃಷ್ಣ ಪಾರಿಜಾತ ಕಂಪನಿ ನಾವಲಗಿ ಇದರ ಮಾಲೀಕ ಶ್ರೀ ಮಾರುತೆಪ್ಪ ಪೆಟ್ಲೂರ್. ಇವರು ಹಾರ್ಮೋನಿಯಂ ವಾದಕರು. ಕಂಪನಿ ಕಟ್ಟಿಕೊಂಡವರು. ಆಗ ಈ ಕಂಪನಿಕೂಡ ತುಂಬ ಪ್ರಚಲಿತ.ಶಿವನಪ್ಪನ ಹಾಸ್ಯ ಪ್ರತಿಭೆ, ಹೂಗಾರರ ಸ್ತ್ರೀ ಪಾತ್ರ ಮತ್ತು ಲಕ್ಷ್ಮಣ ಪರೀಟ ಅವರ ಶ್ರೀ ಕೃಷ್ಣ ಪಾತ್ರ ಇವು ತುಂಬ ಜನಪ್ರಿಯ. ನಿಂಗಪ್ಪ ಇವರು ಅಪ್ಪಾಲಾಲ ನದ್ಧಾಫ ಅವರ ಅನುಕರಣೆಯೆನ್ನುವಷ್ಟು ಅಭಿನಯ ಚೆನ್ನಾಗಿತ್ತು. ಮೈಸೂರು ದಸರಾಕ್ಕೆ ೧೯೮೩ ರಲ್ಲಿ ನಾನು ಈ ಕಂಪನಿಯೊಂದಿಗೆ ಹೋಗಿದ್ದೆ. ಈ ಪಾರಿಜಾತ ಕಂಪನಿಯ ಒಂದು ಭಾಗವೇ ನಾನಾಗಿದ್ದೆ. ಏಕೆಂದರೆ ಇನ್ನೊಬ್ಬರ ಮಾತಿನ ಮೇಲೆ ನಂಬಿಗೆಯಿಟ್ಟು ಆಟ ಹಿಡಿದು ಕೊಡುವ ಹವ್ಯಾಸ ನನಗಿರಲಿಲ್ಲ. ಯಾರು ನನ್ನನ್ನು ಕರೆದುಕೊಂಡು ಹೋಗಿ ತಮ್ಮ ಆಟ ತೋರಿಸುತ್ತಿದ್ದರೊ ಆಗ ಅವರ ಬಗ್ಗೆ ನನಗೆ ತಿಳಿದದ್ದನ್ನು ವೀಳ್ಯ ಕೊಡುವವರಿಗೆ ವಿವರಿಸುತ್ತಿದ್ದೆ. ಏನಾದರೂ ಹೇಳಿ ಒಬ್ಬರೆ ಆಟವನ್ನು ಇನ್ನೊಬ್ಬರಿಗೆ ಕೊಡಿಸುತ್ತಿರಲ್ಲಿಲ್ಲ. ಹೀಗಾಗಿ ಪೆಟ್ಲೂರ ಮಾರುತೆಪ್ಪನವರು ನನ್ನನ್ನು ನಂಬಿಕೊಂಡು ಬಂದಿದ್ದಾರೆ. ಅವರು ಕೂಡ ತುಂಬ ವಿನಯಶೀಲರು ಪ್ರಾಮಾಣಿಕರು ಇನ್ನೊಬ್ಬರ ಕೈತುತ್ತು ಕಸಿದುಕೊಂಡು ತಿನ್ನ ಬೇಕೆಂದವರಲ್ಲ. ಇನ್ನೊಂದು ಕಂಪನಿಯೊಂದಿಗೆ ಎಂದೂ ಸ್ಪರ್ಧೆ ಮಾಡಲಿಲ್ಲ ತನ್ನ ಕೆಲಸದಲ್ಲಿ ನಿಷ್ಠೆ ಉಳ್ಳವರು ಮಾತ್ರ. ಒಟ್ಟಿನಲ್ಲಿ ನನ್ನ ನಿರಪೇಕ್ಷತೆಗೆ ಅವರ ಸ್ವಭಾವ ಹೊಂದಿತ್ತು.ಹೀಗಾಗಿ ಯಾರು ಯಾವ ಆಟವನ್ನು ಕೇಲುತ್ತಾರೋ ಅದರ ಬಗ್ಗೆಯೇ ನಿಜವಾದ ತಿಳುವಳಿಕೆ ಕೊಟ್ಟು ಮನವರಿಕೆ ಮಾಡುತ್ತಿದ್ದೆ. ಬೇರೆಯವರ ಆಟ ಹಿಡಿದುಕೊಡಲು ನನಗೆ ಹೆಚ್ಚಿನ ಕಮೀಶನದ ಆಸೆ ಹಚ್ಚುತ್ತಿದ್ದರು. ಆದ್ರೆ ಕಮೀಶನ್ ಬರುವ ಹತ್ತು ರೂಪಾಯಿಗಳಿಗೆ ಇನ್ನಿಷ್ಟು ಸೇರಿಸಿ ಆದರಾತಿಥ್ಯ ಮಾಡಿ ವೀಳ್ಯ ಕೊಡುವುದನ್ನು ಗೌರವಿಸುತ್ತಿದ್ದೆ. ಏಕೆಂದರೆ ವೀಳ್ಯ ಕೊಡಲು ಬಂದವರು ಮತ್ತು ಅವರ ಸಂಪರ್ಕಕ್ಕೆ ಬಂದವರಿಂದ ನಮ್ಮ ಖಾನಾವಳಿ ಉದ್ಯೋಗಕ್ಕೆ ಹೆಚ್ಚಿನ ಹೆಸರು ಬರುತ್ತಿತ್ತು. ನಮ್ಮ ಖಾನಾವಳಿಯ ಸುತ್ತ ಮುತ್ತು ಹತ್ತಾರು ಪಾರಿಜಾತ ಮತ್ತು ಇತರೇ ಆಟದ ಬೋರ್ಡುಗಳು ನೇತಾಡಿ ಅವರಿಗೆ ಪ್ರಚಾರಕೊಡುತ್ತಿದ್ದವು. ಒಬ್ಬ ಹೆಸರಾಂತ ಕಲಾವಿದ ಬಂದು, ಈ ಎಲ್ಲಾ ಬೋರ್ಡು ತೆಗೆದುಹಾಕ್ರಿ ಇವರೆಲ್ಲರೂ ಕೊಡುವ ಬೋರ್ಡ್ ಚಾರ್ಜ್‌ನಾನೊಬ್ಬನೇ ಕೊಡುತ್ತೇನೆ ಅನ್ನುತ್ತಿದ್ದ. ಆದ್ರೆ ನಮ್ಮಲ್ಲಿ ಯಾರೂ ಕಮಿಶನ್ ಗಾಗಿ ಬೋರ್ಡ್ ಕಟ್ಟುತ್ತಿರಲ್ಲಿಲ್ಲ. ಅದೊಂದು ಎಲ್ಲರಿಗೂ ಅನುಕೂಲವಾಗಲಿ ಎನ್ನುವ ಸದುದ್ದೇಶವಿತ್ತು. ಹಾಗೆ ಬೋರ್ಡ್ ತೆಗೆಯಿಸುವ ವಿಚಾರವುಳ್ಳ ಕಲಾವಿದರು ಕೂಡಾ ತಾನು ಬೆಳೆಯಬೇಕು – ಕಂಪನಿ ಬೆಳೆಯಬೇಕು ಎನ್ನುವ ಹುಮ್ಮಸ್ಸು ಉಳ್ಳವರಾಗಿದ್ದಾರೆ.

ನಾವಲಗಿಯ ಇನ್ನೊಂದು ಕಂಪನಿ ಎಂದರೆ ಕಲ್ಲಪ್ಪ ಪಟ್ಟಣಶೆಟ್ಟಿ ಕಟ್ಟಿ ಕೊಂಡಿದ್ದು. ಅಂದಿನಿಂದ ಇಂದಿನವರಗೆ ಅವರು ಕೂಡ ಕಂಪನಿ ಬೆಳೆಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಕಲ್ಲಪ್ಪ ತೀರಿಕೊಂಡ ನಂತರ ಅವರ ಸಹೋದರ ಶಂಕ್ರಪ್ಪನ ಕೈಗೆ ಕಂಪನಿ ಬಂದಿದೆ.ಕಷ್ಟಪಟ್ಟವರಿಗೆ ಸುಖಾ ತಟ್ಟಿದೆ. ಚಂದ್ರವ್ವ ಈ ಕಂಪನಿಯಲ್ಲಿ ಅಭಿನೇತ್ರಿಯಾಗಿದ್ದಳು.

ಪೆಟ್ಲೂರ ಮಾರುತೆಪ್ಪನ ಕಂಪನಿಯಲ್ಲಿ ಮೊದಲು ಲಕ್ಷ್ಮೀಬಾಯಿ ಸುತಾರ ಸತ್ಯಾಭಾಮೆಯಾಗಿರುವಾಗ ಚಂದ್ರವ್ವ ಅಭಿನಯಿಸುತ್ತಿದ್ದಳು. ನಂತರ ಶಂಕ್ರಪ್ಪನ ಕಂಪನಿ ಸೇರಿಕೊಂಡು ಒಟ್ಟಾಗಿ ದುಡಿಯುತ್ತಿದ್ದಾರೆ. ಚಂದ್ರಯ್ಯ ಕೂಡ ಶಿವಪ್ಪನ ಜೊತೆ ಪಾತ್ರ ಮಾಡಿದವನೇ ಇತ್ತೀಚೆಗೆ ಚಂದ್ರಯ್ಯ ಹೋದರು.

ಈಗ ಶ್ರೀಶೈಲ ಚಂದ್ರಯ್ಯನ ಸ್ಥಾನ ತುಂಬಿಕೊಟ್ಟಿದ್ದಾರೆ. ಸಂಸಾರ ಬದಿಗಿಟ್ಟು ಕಲೆಯ ಬೆನ್ನು ಹತ್ತಿದ ಕಲಾರಾಧಕರನ್ನು ಗುರುತಿಸಿ – ಗೌರವಿಸಿ – ಅವರ ಜೀವನೋಪಾಯಕ್ಕೆ ದಾರಿ ಮಾಡಿಕೊಡುವ ಕೆಲಸ ನಮ್ಮದಾಗಬೇಕು. ಇನ್ನೂ ಅನೇಕ ಕಲಾವಿದರು ಕಲಾ ತಂಡಗಳು ನಮ್ಮ ನಡುವೆ ಇದ್ದಾರೆ.ಅವರೂ ಕಲಾ ಸಮಾಜದ ಅವಿಭಾಜ್ಯರಾಗಿದ್ದಾರೆ.

ನದ್ಧಾಫ ಅವರ ಬಾಲ್ಯ

ಭಾರತದಲ್ಲಿ ಬಡತನ ಬಹುಜನ ಕಲಾವಿದರ ಸಂಪತ್ತು. ವರ್ಗ – ವರ್ಣಗಳ ಪ್ರಶ್ನಾತೀತವೇ ಕಲೆಯ ಮೌಲ್ಯ. ಜೀವನದ ತಿರುಳಿಗೆ ಧರ್ಮ ನೀರು ಗೊಬ್ಬರ. ಅರ್ಥ ಅಂದ್ರೆ ದ್ರವ್ಯ. ಈ ದ್ರವ್ಯ ಮೋಹವು ಮನುಷ್ಯನಲ್ಲಿ ಹುಟ್ಟಿಕೊಂಡಿತೆಂದರೆ ದ್ರವ್ಯವನ್ನು ಇಮ್ಮಡಿ – ಮುಮ್ಮಡಿ ನೂರ್ಮಡಿಗೊಳಿಸುವುದೇ ಮನುಷ್ಯನ ಮನೋಭಾವವಾಗಿ ಬಿಡುತ್ತದೆ. ಮನುಷ್ಯನಲ್ಲಿ ಓದು, ಅಧ್ಯಯನ, ಅಧ್ಯಾಪನ ಹುಟ್ಟಿದರೆ ಶಬ್ದ – ಸಂಸ್ಕೃತಿಯ ಚಿಂತನೆಗೆ ತೊಡಗಿಸುತ್ತದೆ. ಶಬ್ದ ಭಾಂಡಾರ ಮತ್ತು ಜ್ಞಾನ ಭಾಂಡಾರವನ್ನು ವೃದ್ಧಿಸುವುದೇ ಇದಾಗಿದೆ. ಈ ಮನಸ್ಸು ಬುದ್ಧಿ, ಚಿತ್ತ ಯಾವುದರಲ್ಲಿ ತೊಡಗುತ್ತದೆಯೋ ಆ ದಿಸೆಯಲ್ಲಿ ಕೆಲಸ ಮಾಡುತ್ತದೆ. ಹೀಗೆ ತಾದಾತ್ಮ್ಯಗೊಳ್ಳುವ ಇಚ್ಛೆಯೆ ಕಾಮನೆಗಳಿಗೆ ಸಾಕ್ಷಿಯಾಗುತ್ತದೆ. ಕಲಾಹುಚ್ಚು ಕೂಡ ಇದಕ್ಕೆ ಹೊರೆತಾಗಿಲ್ಲ. ಕಲೆಯಲ್ಲಿ ಮುಳುಗಿ ಏಳುವುದಾಗುತ್ತದೆ. ಮನುಷ್ಯನಲ್ಲಿ ಯಾವುದಾದರೂ ಒಂದು ಹುಚ್ಚು ಹೊಕ್ಕರೆ ಅದೇ ಆತನ ಸಂತೃಪ್ತಿಯ ಪಥವಾಗುತ್ತದೆ. ಆದರೆ ಆ ಸಾದನೆಯ ಆತನ ಅಸ್ತಿತ್ವ ಸ್ಥಾಯಿಗೊಳ್ಳಬೇಕು. ಚಾತುರ್ವರ್ಗಗಳು ಮನುಷ್ಯನಿಗೆ ಪ್ರಕೃತಿ ದತ್ತವಾಗಿ ಬಂದಿರುವ ದೇಣಿಗೆಯೇ ಆಗಿದೆ. ಈ ದೆಸೆಯಲ್ಲಿ ಕಲೆಯ ಹುಚ್ಚು ಹೊಳೆಯಲ್ಲಿ ಹೊಳೆದು ಬೆಳೆದು ಬೆಳಗಿ ದೂರವಾದ ಜಮಖಂಡಿ ಅಪ್ಪಾಲಾಲ ನದ್ಧಾಫರ ಬಗ್ಗೆ ತಿಳಿದುಕೊಳ್ಳಬೇಕಾಗಿದೆ.

ನದ್ಧಾಫ

ನದ್ಧಾಫ’ ಪದ ಇದು ಕನ್ನಡದ್ದೇನಲ್ಲ. ಅರಬಿ ಭಾಷೆಗೆ ಸೇರಿದ್ದಾಗಿದೆ. ಇದರ ಅರ್ಥವನ್ನು ನಾವು ಕನ್ನಡದಲ್ಲಿ ಪಿಂಜಾರ ಅಂದುಕೊಂಡಿದ್ದೇವೆ. ಹತ್ತಿ – ಅರಳಿಯನ್ನು ಹಿಂಜಿ ಸ್ವಚ್ಛ ಮಾಡಿ ಗಾದಿ – ತಲೆದಿಂಬಿನಂತೆ ಹಾಸಿಗೆಯನ್ನು ಮಾಡುವ ಕಾಯಕದಲ್ಲಿ ತೊಡಗಿರುವವ. ಮುಸ್ಲೀಮರ ಆಡಳಿತದಲ್ಲಿ ಹುಟ್ಟಿಕೊಂಡ ಶಬ್ಧವಿದು. ಹೆಚ್ಚಾಗಿ ಈ ವೃತ್ತಿಯಲ್ಲಿ ಮುಸ್ಲೀಮರೇ ಒಂದು ಕಾಲದಲ್ಲಿ ತೊಡಗಿಕೊಂಡಿರುತ್ತಾರೆನ್ನುವ ಪ್ರತೀತಿ ಇದೆ. ಈಗ ಇದೊಂದು ವೃತ್ತಿಯಾಗಿರುವುದರಿಂದ ಇತತರೂ ಮಾಡುತ್ತಿರಬಹುದು.ಅಂಥ ಮನೆತನಕ್ಕೆ ಸೇರಿದ ಅಪ್ಪಾಲಾಲರಿಗೆ ದಿನಾಂಕ ೧೦ ಅಕ್ಟೋಬರ ೧೯೧೭ ರಂದು ಜನ್ಮ ನೀಡಿದವರು ಜಮಖಂಡಿ ತಾಲೂಕಿನ ಜಕನೂರು ಗ್ರಾಮದ ಸಾಹೇಬಲಾಲ ಮತ್ತು ಪತ್ನಿ ಚಾಂದಮಾ ಇವರು. ಅಪ್ಪಾಲಾಲ ಹುಟ್ಟಿದ್ದು ಇದೇ ತಾಲೂಕಿನ ಲಿಂಗನೂರು ಗ್ರಾಮದಲ್ಲಿ. ಏಕೆಂದರೆ ಚಾಂದಮಾ ಅವರ ತವರೂರು ಲಿಂಗನೂರು. ಸಾಹೇಬಲಾಲ – ಚಾಂದಮಾ ಮೊದಲನೆಯ ಮಗಳು ಅಲ್ಲಮ್ಮಾ, ಎರಡನೆಯ ಮಗಳು ಅಕ್ಕಮ್ಮ, ಮೂರನೆಯ ಮಗ ಹಾಜೀಸಾಹೇಬ ನಾಲ್ಕನೆಯ ಮಗ ಅಪ್ಪಾಲಾಲ. ಅಣ್ಣ ಹಾಜೀಲಾಲ ಶ್ರೀ ಕೃಷ್ಣ ಪಾರಿಜಾತದಲ್ಲಿ ಭಾಗವತ ಪಾತ್ರ ಮಾಡುತ್ತಿದ್ದ. ಆತನು ೨೦೦೩ನೇ ಇಸ್ವಿಯಲ್ಲಿ ತೀರಿಕೊಂಡ. ಈತನ ಪರಿವಾರ ಈಗ ಜಕನೂರಲ್ಲಿಯೇ ಇದೆ. ಇದು ಕೃಷಿ ಕುಟುಂಬ. ಇವರಿಗೆ ನಬಿಸಾಹೇಬ ಮತ್ತು ಗೈಬಿಸಾಹೇಬ ಎಂಬ ಇಬ್ಬರು ಮಕ್ಕಳಿದ್ದಾರೆ. ಸಾಲ ಮನುಷ್ಯನನ್ನು ಮುದ್ದಿ ಮಾಡುವ ರೋಗ, ಸಾಲ ತಂದ ದುಡ್ಡು ದುಡಿದು ತೀರಿಸದಿದ್ದರೆ ಸಾಲ – ಸಾಲದ ಸಂತಾನ ವರ್ಧಿಸುತ್ತದೆ. ಹೀಗಾಗಿ ತೀರಿಸಲಾಗದೆ ತುಂಬ ಕಷ್ಟ ಅನುಭವಿಸಬೇಕಾಗುತ್ತದೆ.

ಅರವತ್ತು ರೂಪಾಯಿ ಸಾಲ ಹೊತ್ತು ತೀರಿಸಲು ಸಾಧ್ಯವಾಗದೆ ಚಾಂದಮಾಳನ್ನು ಕಟ್ಟಿಕೊಂಡು ಸಾಹೇಬಲಾಲ ಜಮಖಂಡಿ ಸೇರಿದ. ಅಲ್ಲಿ – ಇಲ್ಲಿ ಕೂಲಿ ಕೆಲಸ ಮಾಡಿ ಉಪಜೀವನ ಮಾಡತೊಡಗಿದ.

ಜಮಖಂಡಿ ಸಂಸ್ಥಾನದಲ್ಲಿ ಮರಾಠಿ ಮತ್ತು ಮೋಡಿ ಭಾಷೆಗೆ ಹೆಚ್ಚು ಮಹತ್ವಬಿತ್ತು. ಪಟವರ್ಧನರ ಮಾತೃ ಭಾಷೆ ಮರಾಠಿ. ಹೀಗಾಗಿ ಜಮಖಂಡಿಯಲ್ಲಿ ಮರಾಠಿ ಶಿಕ್ಷಣ ಚಾಲ್ತಿಯಲ್ಲಿತ್ತು ನಗರದ ಮಧ್ಯದಲ್ಲಿರುವ ಶಕುಂತಲಾ ಮರಾಠಿ ಶಾಲೆಯಲ್ಲಿ ಅಪ್ಪಾಲಾಲನನ್ನು ತಂದೆ ಸೇರಿಸಿದರು. ಶಾಲೆಯಲ್ಲಿ ಅಕ್ಷರ ಜ್ಞಾನ ಪಡೆದುಕೊಂಡು ಮಗ ವಿದ್ಯಾವಂತನಾಗಲೆಂದು ತಾಯಿ – ತಂದೆ ಬಯಸಿದರು.

ಕಲಾ ಶಿಕ್ಷಣ

ಕಲೆ ಮತ್ತು ವಿದ್ಯೆ ಎರಡೂ ಪೂರಕ ಜ್ಞಾನಗಳು ವಿದ್ಯಾಶಾಲೆ – ಕಲಾಶಾಲೆ ಎರಡೂ ಮನುಷ್ಯನ ಜ್ಞಾನ ಕೇಂದ್ರವೇ ಆಗಿವೆ. ವಿದ್ಯೆ ಅಕ್ಷರರೂಪವಾಗಿ ಜ್ಞಾನ ಕೊಟ್ಟರೆ, ಕಲೆ ರಸರೂಪವಾಗಿ ಜ್ಞಾನ ಕೊಡುತ್ತದೆ. ಕಲೆ ನವರಸ ಜ್ಞಾನ ಅಭಿನಯದ ವೈಭವವನ್ನು ಈ ಮೂಲಕ ಕಂಡುಕೊಳ್ಳುವುದಾಗಿದೆ. ನೃತ್ಯ, ಅಭಿನಯ, ಕಲೆ, ಸಂಸ್ಕೃತಿಗಳಿಂದಲೇ

ಮಾನವನ ಸರ್ವತೋಮುಖ ನೆಮ್ಮದಿ ಕಾಣುವುದಾಗಿದೆ. ಇದು ತೊಡಗಿಕೊಂಡು ತೋರಿಸುವುದೂ ಹೌದು. ಕಂಡು ನೋಡಿ ಅನುಭವಿಸಿ ರಸಾನಂದ ಪಡೆಯುವುದೂ ಹೌದು.

ಅಪ್ಪಾಲಾಲ ಶಾಲೆಯ ಬಾಲಕ ವಿದ್ಯಾಶಾಲೆಯಲ್ಲಿ ಅಕ್ಷರ ಜ್ಞಾನ ಪಡೆದುಕೊಂಡು ಜಾಣನಾಗಬೇಕಾದ ವಿದ್ಯಾರ್ಥಿ ರೊಟ್ಟಿ ಮತ್ತು ಪಾಟಿಗೆ ಪಿರಿಯಾಗಿ ಪರದಾಡುವ ಪರಿಸ್ಥಿತಿ ಬಂತು.

ಆಗ ಜಮಖಂಡಿಯ ದೇಸಾಯಿ ವಾಡೆ ಗಲ್ಲಿಯಲ್ಲಿ ಭೀಮಪ್ಪ ನಾವಿ ಎಂಬವರು ಪಾರಿಜಾತ ಕಂಪನಿ ಕಟ್ಟಿಕೊಂಡಿದ್ದರು. ತಾಲೀಮ ಕೋಣೆಯಲ್ಲಿ ತಾಲೀಮು (ರಿಹರ್ಸಲ್) ನಡೆದಾಗ ಈ ಅಪ್ಪಾಲಾಲ ಎಂಬ ಬಾಲಕ ಅಲ್ಲಿ ಹೋಗಿ ಕೂಡುತ್ತಿದ್ದ. ಶಾಲೆಗೆ ಹೋಗಿದ್ದಾನೆಂದು ಮನೆಯವರು ತಿಳಿದುಕೊಳ್ಳುತ್ತಿದ್ದರು. ಆದ್ರೆ ಈತನಿಗೆ ಈ ಆಟ ನೋಡುವ ಗುಂಗು ಹೊಕ್ಕಿತು. ಕಂಪನಿ ಮಾಲೀಕನಾದ ಭೀಮಪ್ಪ ನಾವಿ ಸತ್ಯಭಾಮೆ, ರುಕ್ಮಣಿ ಪಾತ್ರ ಮಾಡುತ್ತಿದ್ದನು. ಹುಡುಗರು ಕುತೂಹಲದಿಂದ ಪಾರಿಜಾತ ತಾಲೀಮ ಕೋಣೆಗೆ ಬರುವುದನ್ನು ನೋಡಿ ದೊಡ್ಡವರು ಬೆದರಿಸಿ ಕಳಿಸುತ್ತಿದ್ದರು. ಆದ್ರೆ ಅಪ್ಪಾಲಾಲ ಮಾತ್ರ ಬೈದರೂ – ಬೆದರಿಸಿದರೂ ಅಲ್ಲೇ ನಿಂತು ಬಿಡುತ್ತಿದ್ದ. ತುಂಬ ಸುಂದರವಾದ ಹುಡುಗ ಅಪ್ಪಾಲಾಲ ಹತ್ತು – ಹನ್ನೊಂದು ವರ್ಷದಲ್ಲಿ ತುಂಬ ಚಂದಾಗಿಯೇ ಕಾಣುತ್ತಿದ್ದ. ಕಣ್ಣು ಮೂಗು ಆತನ ರೂಪಕ್ಕೆ ಹೇಳಿ ಮಾಡಿಸಿದಂತಿತ್ತು ಹೀಗಾಗಿ ಬೆದರಿಸಿದರೂ ಹೋಗದ ಈ ಹುಡುಗನಲ್ಲಿ ಆಟದ ಆಸಕ್ತಿ ಇರುವುದು ಕಂಡು ಬಂದಿರಬೇಕು. ‘ಪಾತ್ರ ಮಾಡ್ತಿಯೇನು?’ ಎಂದು ಭೀಮಪ್ಪನ ಅಳಿಯ ಶೆಟ್ಟಪ್ಪ ಈ ಹುಡುಗನನ್ನು ಹುಡುಗಾಟಕ್ಕೆ ಕೇಳಿದರಂತೆ. ಹುಡುಗ ತಟ್ಟನೇ ‘ಹೂಂ’ ಅಂದನಂತೆ ಈ ಮಾತು ಭೀಮಪ್ಪ ನಾವಿ ಕಿವಿಗೂ ಬಿದ್ದಿತಂತೆ ಒಂದು ದಿನ ಭೀಮಪ್ಪ ನಾವಿಯೇ ಈ ಹುಡುಗನನ್ನು ನೋಡಿ ಈತ ಹೆಚ್ಚು ಕಡಿಮೆ ಪಾರಿಜಾತ ತಾಲೀಮದ ಸಂದರ್ಭದಲ್ಲಿ ಇಲ್ಲಿಯೇ ಇರುವುದನ್ನು ಗಮನಿಸಿ ‘ಲೇ ಹುಡುಗಾ ನಿನಗೂ ಆಟಾ ಕಲಿಬೇಕೆನ್ನೂ ಇಚ್ಚಾ ಐತೇನು?’ ಎಂದು ಕೇಳಿದನಂತೆ.

ಅಪ್ಪಾಲಾಲ ‘ಹೂಂ’. ಅಂದನಂತೆ. ಅಪ್ಪಾಲಾಲನ ಪಾಲಿಗೆ ವಿದ್ಯಾಶಾಲೆ ದೂರಾಯಿತು. ಈ ಕಲಾಶಾಲೆ ಸಮೀಪಾಯಿತು. ಹನ್ನೆರಡು ವರ್ಷದ ಹುಡುಗನಿರುವಾಗಲೇ ಭೀಮಪ್ಪನ ಕೃಪೆಯಿಂದ ಪಾರಿಜಾತದಲ್ಲಿ ಅಭಿನಯಿಸುವ ಅವಕಾಶ ಲಭಿಸಿದಂತಾಯಿತು. ಭೀಮಪ್ಪ ಈತನಿಗೆ ‘ಗೊಲ್ಲತಿ’ ಪಾತ್ರ ಕೊಟ್ಟನಂತೆ ಅಕ್ಷರ ಕಲಿಯಬೇಕಾದ ಹುಡುಗ ಅಭಿನಯ ಕಲಿಯ ತೊಡಗಿದ. ಭೀಮಪ್ಪನೇ ಆತನಿಗೆ ಪಾರಿಜಾತದ ಗುರುವಾದ. ಹುಡುಗ ಮಾಡಿದ ‘ಗೊಲ್ಲತಿ’ ಪಾತ್ರ ಅಪಾರಾಜನ ಮೆಚ್ಚುಗೆ ಪಡೆದುಕೊಂಡಿತು. ಅಪ್ಪಾಲಾಲನ ಅಭಿನಯ ಕಲೆ ಕಂಡು ಭೀಮಪ್ಪ ನಾವಿ ಹೊಟ್ಟೆಕಿಚ್ಚು ಪಡುವಂತಾಯಿತು. ಕಲಾದೇವಿ ಅಪ್ಪಾಲಾಲನಿಗೆ ಒಲಿದಳು. ಮಲ್ಲಯ್ಯ ಸ್ವಾಮಿಯವರ ಕಂಪನಿಯಲ್ಲಿ ಅವರ ಮಗ ಕೂಡ ಇಷ್ಟು ಚಿಕ್ಕವನಿರುವಾಗಲೇ ಪಾತ್ರ ಮಾಡತೊಡಗಿ ಮಲ್ಲಯ್ಯಸ್ವಾಮಿ ಕಂಪನಿ ಹೆಚ್ಚು ಪ್ರಸಿದ್ಧವಾಯಿತು. ಇದು ಅಪ್ಪಾಲಾಲನ ಈ ಸಂದರ್ಭ ನೆನಪಾದಾಗ ಉದಾಹರಿಸುವ ಮಾತು. ಹೀಗೆ ಕಲಾವಿದರ ಮತ್ತು ಕಲಾಸಕ್ತರ ಪ್ರೋತ್ಸಾಹದಿಂದ ಅಪ್ಪಾಲಾಲ ಶ್ರೀ ಕೃಷ್ಣ ಪಾರಿಜಾತ ತಾಲೀಮ ಕೋಣೆ ಅದೊಂದು ಕಲಾಶಾಲೆಯಂತೆ ಅಪ್ಪಾಲಾಲನಿಗೆ ಕಂಡಿತು. ಸಾಕ್ಷರತೆ ಕಲೆಗೆ ಬಹುದೊಡ್ಡ ಶಕ್ತಿ ಕೊಡುತ್ತದೆಂದು ಹೇಳುವವರೂ ಯಾರು ಅವನಿಗೆ ಸಿಗಲಿಲ್ಲ. ಅಥವಾ ಈ ಮಾತು ಕೇಳಿಸಿಕೊಂಡು ಅನುಸರಿಸುವಷ್ಟು ತಿಳಿವಳಿಕೆ ಅವನಿಗಿರಲಿಲ್ಲ ಎನ್ನಬಹುದು. ಶಾಲೆಯಲ್ಲಿ ನಾಲ್ಕು ಅಕ್ಷರ ಕಲಿತರೂ ಅದು ಮರಾಠಿ ಮತ್ತು ಮೋಡಿಯಾಗಿತ್ತು. ಆದ್ರೆ ಅಪ್ಪಾಲಾಲನ ಕಲಾನಿಷ್ಟೆ ಮೆಚ್ಚುವಂಥದ್ದು. ‘ಗೊಲ್ಲತಿ’ ಪಾತ್ರ ಮಾಡುತ್ತಿದ್ದ ಅಪ್ಪಾಲಾಲನಿಗೆ ‘ರುಕ್ಮಿಣಿ’ ಪಾತ್ರ ಕೊಡುವ ಅನಿವಾರ್ಯತೆ ಬಂತು ಆಗ ‘ರುಕ್ಮಿಣಿ’ ಪಾತ್ರದ ಯಶಸ್ಸು ಅಪ್ಪಾಲಾಲನಿಗೆ ಅದ್ಬುತ ಹೆಸರು ತಂದು ಕೊಟ್ಟಿತು. ಮೈ ಬಣ್ಣ ಕೂಡ ಅವನ ಸೌಂದರ್ಯವನ್ನು ಹೆಚ್ಚಿಸುವಂತೆ ತುಂಬ ಕೆಂಪಾಗಿತ್ತು. ಹೀಗಾಗಿ ಯಾವ ಪಾತ್ರ ಕೊಟ್ಟರೂ ಇನ್ನೊಬ್ಬರನ್ನು ಮೀರಿಸುವ ಸಾಮರ್ಥ್ಯ ಅವನ ನಿಷ್ಠೆ ಮತ್ತು ಪ್ರಕೃತಿ ದತ್ತ ಕೃಪೆಗೆ ಸಾಕ್ಷಿಯಾಗಿತ್ತು. ಪಾರಿಜಾತದಲ್ಲಿರುವ ಯಾವುದೇ ಸ್ತ್ರೀ ಪಾತ್ರ ಕೊಟ್ಟರೂ ಮಾಡಿ ಮೆರೆಯುವುದು ಅವನ ಕಲಾಕೌಶಲ್ಯಕ್ಕೆ ಸಾಕ್ಷಿಯಾಗಿತ್ತು.

ಅಂದು ಮಹಾಲಿಂಗಪೂರ ಕೌಜಲಗಿ ನಿಂಗಮ್ಮನ ಮತ್ತು ನಣದಿ ರಾಮಣ್ಣರ ಹೆಸರು ಕೂಡ ಬಹಳ ಪ್ರಸಿದ್ದಿಯಲ್ಲಿತ್ತು. ಒಬ್ಬ ಕಲಾವಿದನ ಜೀವನ ಅಥವಾ ಕಲಾವಿದೆಯ ಜೀವನವನ್ನು ಜೀವನ ಮತ್ತು ಪ್ರದರ್ಶನ ಎರಡನ್ನೂ ಬೇರೆ ಬೇರೆಯಾಗಿ ನೋಡುವುದು ಕಷ್ಟ ಸಾಧ್ಯ. ಈ ಎರಡು ಒಂದಕ್ಕೊಂದು ಹಾಸು ಹೊಕ್ಕು. ಜೀವನ ಉಪಜೀವನ ಮತ್ತು ವೃತ್ತಿ ಪ್ರವೃತ್ತಿ ಎರಡನ್ನೂ ಒಟ್ಟಾಗಿ ನೋಡಬೇಕಾಗುತ್ತದೆ.

ಈಗ ಅಪ್ಪಾಲಾಲನ ಬಾಲ್ಯವನ್ನು ಕಲೆಯಿಂದ ಬೇರೆಯಾಗಿ ಜೀವನವನ್ನು ರೂಪಿಸುವುದು ಜೀವನದಿಂದ ಬೇರೆಯಾಗಿ ಕಲೆಯ ಕುರಿತು ಬರೆಯುವುದು ಎರಡೂ ಕಷ್ಟದ ಕೆಲಸ ಅಪ್ಪಾಲಾಲನ ಪ್ರತಿಭೆ ಆತ ಕಲಿಯುತ್ತಿದ್ದ ಶಾಕುಂತಲಾ ಮರಾಠಿ ಶಾಲೆಯಲ್ಲಿ ಗೊತ್ತಿರದೇ ಇರಲಾರದು. ಇತ ಅಕ್ಷರಜ್ಞಾನ ಪಡೆದುಕೊಳ್ಳುತ್ತಿದ್ದರೂ ನಪಾಸಾಗಲು ಸಾಧ್ಯವಿರಲಿಲ್ಲ. ಯಾಕೆಂದರೆ ಅವನ ಈ ಪಾರಿಜಾತ ಕಲೆಯಲ್ಲಿ ಶಾಲೆಯಲ್ಲಿ ಕಲಿಯುವ ಪಠ್ಯ ಜ್ಞಾನಕ್ಕಿಂತಲೂ ಹೆಚ್ಚಿನದೇ ಎನ್ನುವುದನ್ನು ಬೇರೆ ಹೇಳಲಿಕ್ಕಾಗುವುದಿಲ್ಲ. ಹೀಗಾಗಿ ಪಾಠ್ಯದಲ್ಲಿ ನಪಾಸಾಗುತ್ತಿದ್ದರೂ ಆತನ ದುಡಿಮೆಯನ್ನು ಪರಿಗಣಿಸಿ ಶಿಕ್ಷಕರು ಅವನನ್ನು ಪಾಸು ಮಾಡಬೇಕಾಗುತ್ತಿತ್ತು. ಹೀಗೆ ಅಪ್ಪಾಲಾಲ ಅಕ್ಷರ ಜ್ಞಾನದ ಶಾಲೆಯಲ್ಲಿ ಉತ್ತೀರ್ಣನಾಗುತ್ತಿದ್ದ. ಆದರೂ ಅವನ ಶಿಕ್ಷಣ ಪ್ರಾಥಮಿಕ ಶಾಲೆಯ ಐದನೇ ವರ್ಗಕ್ಕೂ ಸೇರಲಿಕ್ಕಾಗಲಿಲ್ಲ. ೧೯೧೭ ರಲ್ಲಿ ಹುಟ್ಟಿದ ಅಪ್ಪಾಲಾಲ ನದ್ಧಾಫ ತನ್ನ ಬಾಲ್ಯದೊಂದಿಗೆ ಕಲೆಯಲ್ಲಿ ಮೈಗೊಡತೊಡಗಿ ಕಲೆ – ಜೀವನ ಎರಡರಲ್ಲೂ ಪ್ರಭುದ್ಧತೆಯನ್ನು ಪಡೆಯತೊಡಗಿದ. ತನ್ನ ೧೨ – ೧೩ ನೇ ವಯಸ್ಸಿನಲ್ಲಿಯೇ ಸ್ವಂತ ಕಂಪನಿಯನ್ನು ಕಟ್ಟಿಕೊಂಡು ತನ್ನ ಕಲೆಯನ್ನು ಸಾರ್ವಜನಿಕರಿಗೆ ಉಣಬಡಿಸಬೇಕಾಯಿತು.

ಅಪ್ಪಾಲಾಲನ ಅದ್ಬುತ ಪ್ರತಿಭೆಯನ್ನು ಸಹಿಸಲಾರದೆ ನಾವಿ ಭೀಮಪ್ಪ ಈತನಿಗೆ ಅಭಿನಯಿಸಲು ಅವಕಾಶ ಕೊಡಲಿಲ್ಲ, ನಿರಾಶನಾದ. ತುಂಬ ಕುತೂಹಲ ತುಂಬಿಕೊಂಡ ಅಪ್ಪಾಲಾಲನಿಗೆ ಗೆಳೆಯರ ಸಹಾಯ ಸಹಕಾರ ಲಭಿಸಿತು. ಇದರಿಂದಾಗಿ ಸ್ವಂತ ಕಂಪನಿ ಕಟ್ಟಿಕೊಳ್ಳುವ ನಿರ್ಧಾರಕ್ಕೆ ಬಂದ. ‘ರಾಧಾ’ ನಾಟಕ ಕಂಪನಿಯ ಸಹಕಾರವೂ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ. ೧೯೩೪ರ ರಷ್ಟೊತ್ತಿಗೆ ಶ್ರೀ ಕಾಡಸಿದ್ದೇಶ್ವರ ಶ್ರೀ ಕೃಷ್ಣ ಪಾರಿಜಾತ ಕಂಪನಿ, ಜಮಖಂಡಿ, ಈ ಹೆಸರಿನಲ್ಲಿ ಹುಟ್ಟು ಹಾಕಿ ಪ್ರಾಯೋಗಿಕ ಆಟವನ್ನು ಹುನ್ನೂರಿನಲ್ಲಿ ಪ್ರದರ್ಶನ ನೀಡಿ ತುಂಬ ಪ್ರಶಂಸೆಗೆ ಪಾತ್ರನಾದ; ಆಹೇರಿಗಳ ಪ್ರೋತ್ಸಾಹ ಜೀವನದ ಗುರಿಗೆ ನಿರಿಯಾದವು. ಜಾತಿಯಿಂದ ಮುಸ್ಲೀಮನಾದರೂ ಕಾಡಸಿದ್ಧನ ನೆಲೆಭೂಮಿ ಜಮಖಂಡಿ ಆಗಿರುವುದರಿಂದ ಗ್ರಾಮ ದೇವತೆಯ ಸ್ಥಾನ ಈ ಕಾಡಸಿದ್ಧನಿಗೆ ಲಭಿಸಿದೆ. ಹೀಗಾಗಿ ಈ ನೆಲದ ಪ್ರೀತಿಗಾಗಿ ಶ್ರೀ ಕಾಡಸಿದ್ದೇಶ್ವರ ಎಂದು ತನ್ನ ಕಂಪನಿಗೆ ಹೆಸರಿಟ್ಟು ಭಕ್ತಿಯಿಂದ ಸೇವೆ ಮಾಡತೊಡಗಿದ. ಆಂಜನೇಯನ ಮೇಲಿನ ಭಕ್ತಿ – ಶಕ್ತಿ ಕಲಾವಿದರನ್ನು ಸದಾ ಪೋಷಿಸುತ್ತಾ ಬಂದಿದೆಯೆನ್ನುವುದಕ್ಕೂ ಪಾರಿಜಾತದ ಪ್ರಾರಂಭದಿಂದಲೂ ಈತನಕವೂ ಉದಾಹರಣೆ ಸಿಗುತ್ತದೆ. ಯಾಕೆಂದರೆ ಪಾರಿಜಾತ ಕಂಪನಿ ಯಾವುದೇ ಇರಲಿ ಬೇರೆ ಬೇರೆ ಊರುಗಳಿಗೆ ಹೋಗಬೇಕಾಗುತ್ತದೆ. ಅಲ್ಲಿಯ ಮೊದಲ ಗ್ರಾಮದೇವತೆ ಎಂದರೆ ಹನುಮಂತ. ಹೀಗಾಗಿ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಹನುಮಾನ ಒಬ್ಬ ಆರಾಧ್ಯ ದೇವನಾಗುತ್ತಾನೆ. ಈ ಮಾತು ಅಪ್ಪಾಲಾಲನಿಗೂ ಹೆಚ್ಚು ಅನ್ವಯಿಸುತ್ತದೆ. ಬಲಭೀಮನ ಕಾವ್ಯ ನಾಮ ಇಟ್ಟುಕೊಂಡ ಕಲಾವಿದರು ಈ ಕ್ಷೇತ್ರದಲ್ಲಿ ಸೇರುತ್ತಾರೆ.

ಅಪ್ಪಾಲಾಲ ನದ್ಧಾಫರು ಕಟ್ಟಿದ ಶ್ರೀ ಕಾಡುಸಿದ್ದೇಶ್ವರ ಪಾರಿಜಾತ ಕಂಪನಿಯ ವಿಜಾಪುರದ ಸಿದ್ಧರಾಮೇಶ್ವರ ದೇವಾಸ್ಥಾನದ ಮುಂದೆ ೧೯೩೬ – ಜನೆವರಿ ೧೪ ರಂದು ಪ್ರಥಮ ಪ್ರಯೋಗ ಪ್ರದರ್ಶನವಾಯಿತು. ಕಾಡಿಸಿದ್ಧ ಮತ್ತು ಸಿದ್ಧರಾಮೇಶ್ವರ ಮೇಲಿನ ಭಕ್ತಿ ಈತನಿಗೆ ‘ಪಾರಿಜಾತ ಕೋಗಿಲೆ’ ಎಂಬ ಬಿರುದು ಲಭಿಸಲು ಕಾರಣವಾಯಿತು. ಐದು ತೊಲೆ ಬಂಗಾರದ ಬಹುಮಾನದೊಂದಿಗೆ ಸಾವಿರಾರು ಜನರ ಚಪ್ಪಾಳೆಗಳ ಸುರಿಮಳೆಯ ಪ್ರೋತ್ಸಾಹ ಲಭಿಸಿತು.

ಕಲೆಗೆ ಬಂದ ಬೆಲೆ

ಜಮಖಂಡಿಯ ಶ್ರೀ ವೆಂಕಟೇಶ ಪಾರಿಜಾತ ಕಂಪನಿ ಅಥಣಿ ಇದು ಅಥಣಿ ಮಲ್ಲಯ್ಯನವರು ಕಟ್ಟಿಕೊಂಡ ಕಂಪನಿ. ಈ ಕಂಪನಿಯಲ್ಲಿ ಅಪ್ಪಾಲಾಲ ನದ್ಧಾಫರ ಅಳಿಯ ಸುಲೇಮಾನ ಸ್ತ್ರೀ ಪಾತ್ರ ಮಾಡುತ್ತಿದ್ದ. ಒಟ್ಟಿನಲ್ಲಿ ಶ್ರೀ ಕೃಷ್ಣ ಪಾರಿಜಾತವು ಮಾನವ ಧರ್ಮವನ್ನು ಪ್ರತಿಪಾದಿಸುತ್ತದೆ. ಅಂತೆಯ ಪ್ರತಿಯೊಬ್ಬ ಮನುಷ್ಯನಿಗೆ ಪ್ರಿಯವಾಗುತ್ತದೆ; ಕಲಾಪ್ರತಿಭೆಯುಳ್ಳವನಿಗೆ ಸೇವೆ ಮಾಡಬೇಕೆನಿಸುತ್ತದೆ. ಇಲ್ಲಿ ಜಾತಿ, ಧರ್ಮ, ಕುಲ, ಮತ ಯಾವುದೂ ಮುಖ್ಯವಾಗುವುದಿಲ್ಲ. ಕಲಾಸಕ್ತಿಯೊಂದೇ ಪ್ರಮುಖವಾಗುತ್ತದೆ. ಅಂತೆಯೇ ಇದು ಅಪ್ಪಾಲಾಲ ನದ್ಧಾಫ ಅಂಥವರು ಶ್ರೇಷ್ಠ ಕಲಾವಿದರಾಗುತ್ತಾರೆ. ಹಾಗೆ ನೋಡಿದರೆ ಪತ್ರಿಕಾ ಮಾಧ್ಯಮದಿಂದ ಅಪ್ಪಾಲಾಲ ಇರುವಾಗಲೂ ವಂಚಿತನಾದ ಸತ್ತಾಗಲೂ ವಂಚಿತನಾದ. ಇವನಿಗಿಂತಲೂ ಸಾಮಾನ್ಯರು ಪತ್ರಿಕೆಗಳಿಂದ ಸಾಕಷ್ಟು ಹೆಸರು ಪಡೆದರು.

ಶ್ರೀ ಮಲ್ಲಯ್ಯ ಸ್ವಾಮಿ ಅಥಣಿಯವರ ಕಂಪನಿ ಅಂದ್ರೆ ಒಂದು ಕೌಟುಂಬಿಕ ಕಂಪನಿ. ಕುಟುಂಬದ ಸದಸ್ಯರೇ ಅಭಿನೇತ್ರ – ಅಭಿನೇತ್ರಿಯರು. ಇವರ ಸಣ್ಣಮಗ ಗೋಪಾಲ ಚಿಕ್ಕವನಿರುವಾಗಲೇ ಗೋಪಾಲನ ಪಾತ್ರಮಾಡಿ ಜನ ಮೆಚ್ಚಿಗೆ ಪಡೆದ. ಅಷ್ಟೇ ಅಲ್ಲದೇ ಈ ಕಂಪನಿಗೆ ಬಹುದೊಡ್ಡ ಹೆಸರು ತಂದು ಕೊಟ್ಟ ಶ್ರೇಯಸ್ಸಿನಲ್ಲಿ ಇವರಿಗೆ ಹೆಚ್ಚಿನ ಪಾಲು ಲಭಿಸುತ್ತದೆ. ಈತ ದೊಡ್ಡವನಾಗಿ ಓದಿ ಒಂದು ದಿನ ಪೋಲೀಸ ಇಂಟರ್ವಿಯಲ್ಲಿ ನಿಂತಾಗ, ತಂದೆಯ ಹೆಸರು ಹೇಳಿದ. ‘ಇಷ್ಟು ದಿನ ನೀನು ಏನು ಮಾಡುತ್ತಿ ಎಂದು ಕೇಳಿದಾಗ ಪಾರಿಜಾತದಲ್ಲಿ ಗೋಪಾಲನ ಪಾತ್ರ ಮಾಡ್ತೀನಿ ಸರ್’ ಅಂದಾಗ ಅಧಿಕಾರಿಗಳು ಕುತೂಹಲದಿಂದ ‘ಒಂದು ಹಾಡು ಹಾಡ್ತಿಯೇನು’ ಎಂದರು. ಹುಡುಗ ಹಾಡು ಹಾಡಿ ಶಹಭಾಶ್ ಗಿರಿ ಪಡೆದುಕೊಂಡ: ಅಷ್ಟೇ ಅಲ್ಲ ಈ ಶಹಭಾಶ್ ಗಿರಿಯ ಹಿಂದೆ ಸರ್ಕಾರಿ ನೌಕರಿ ಕಾದಿತ್ತು. ಈ ಸೇವೆಯ ಪ್ರತಿಫಲವೇ ಇಂದು ಆ ಹುಡುಗ ಪೋಲೀಸನಾಗಿ ನಿಶ್ಚಿತ ಆದಾಯದಿಂದ ತನ್ನ ಕುಟುಂಬವನ್ನು ಸಲಹುತ್ತಿದ್ದಾನೆ.

ಹೀಗೆ ಕಲಾಕ್ಷೇತ್ರ ಕಲಾವಿದರನ್ನು ಕಾಪಾಡುತ್ತದೆ. ಸ್ನೇಹ ಪ್ರೀತಿಯನ್ನು ಹುಟ್ಟು ಹಾಕುತ್ತದೆ. ಉಪಜೀವನಕ್ಕೆ ದಾರಿಮಾಡಿಕೊಡುತ್ತದೆ. ಕಲಾಲಾಭ ಒಬ್ಬರಿಗೆ ಮಾತ್ರ ಸೀಮಿತವಾದುದಲ್ಲ: ವಂಶಪರಂಪರೆಯ ನಂದಾದೀಪ. ಕಲೆ ಸಂಸ್ಕೃತಿಯ ಜೊತೆಗೆ ಶೀಲವೂ ಸುಶೀಲವಾದರೆ ಈ ಭೂಮಿಯ ಮೇಲೆ ಅವನ ಕೈ ಹಿಡಿಯುವವರಾರೂ ಇಲ್ಲ. ಹೆಸರು ಕೀರ್ತಿ ಎಷ್ಟೇ ದೊಡ್ಡದಿದ್ದರೂ ಇಂಥವರ ಬದುಕಿನಲ್ಲಿ ತೆರೆದಿಡಲಾಗದ ಬದುಕು ಮುಚ್ಚಿಕೊಂಡ ಸಂಗತಿಗಳು ಕರಗಿಹೋಗಲು ಕಾಲ ಕಳೆಯಬೇಕಾಗುತ್ತದೆ.