ಜಮನಾಲಾಲ್ ಬಜಾಜ್ಲಕ್ಷಾಂತರ ರೂಪಾಯಿಗಳ ಆಸ್ತಿ ಪಡೆದೂ ಸರಳವಾಗಿ ಬದುಕಿದ ಹಿರಿಯರು. ಮೋಸ ಮಾಡದೆ ವ್ಯಾಪಾರ ನಡೆಸಬಹುದು ಎಂಬ ನಂಬಿಕೆಯನ್ನು ಕಾರ್ಯಗತ ಮಾಡಿದರು. ಗಾಂಧೀಜಿಯ ಉಪದೇಶ ಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದರು. ದೇಶಕ್ಕಾಗಿ ಸೆರೆಮನೆ ಸೇರಿದರು.

 

 

ಜಮನಾಲಾಲ್ ಬಜಾಜ್

ಒಮ್ಮೆ ರಾಷ್ಟ್ರಪಿತ ಗಾಂಧೀಜಿಯ ಬಳಿಗೆ ಒಬ್ಬ ಯುವಕ ಬಂದ. ‘ನಿಮ್ಮನ್ನು ಒಂದು ಮಾತು ಕೇಳಬೇಕು’ ಎಂದ. ಆಫ್ರಿಕದಿಂದ ಭಾರತಕ್ಕೆ  ಬಂದಾಗಿನಿಂದ ಈ ಶ್ರದ್ಧಾವಂತ ಯುವಕನ ಪರಿಚಯ ಗಾಂಧೀಜಿಗಿತ್ತು. ‘ಕೇಳು, ಕೊಡುವ ಶಕ್ತಿ ನನ್ನಲ್ಲಿದ್ದರೆ ಖಂಡಿತ ಕೊಡುತ್ತೇನೆ’ ಎಂದರು. ‘ನನ್ನನ್ನು ನಿಮ್ಮ ಮಗ ಎಂದು ಭಾವಿಸಬೇಕು’ ಎಂದು ಆತ ಭಾವಾವೇಶದಿಂದ ನುಡಿದ. ಈ ವಿಚಿತ್ರ ಬಯಕೆ ಕೇಳಿ ಗಾಂಧೀಜಿ ಸಹ ದಂಗಾದರು. ಸ್ವಲ್ಪ ಹೊತ್ತು ಬಿಟ್ಟುಕೊಂಡು, ‘ಒಪ್ಪಿದೆ, ಆದರೆ ನಾನೇನೂ ಕೊಡುತ್ತಿಲ್ಲ, ನೀನೆ ಕೊಡುತ್ತಿರುವುದು’ ಎಂದರು. ಯುವಕ ಸಂತೋಷಿಸಿದ, ಅಂದಿನಿಂದ ಗಾಂಧೀಜಿಯ ಐದನೆಯ ಮಗನಾದ.

ಮಕ್ಕಳಿಲ್ಲದವರು ಮಕ್ಕಳನ್ನು ದತ್ತು ಪಡೆಯುವುದರ ಬಗ್ಗೆ ಕೇಳುತ್ತೇವೆ. ಆದರೆ ತಂದೆಯನ್ನು ದತ್ತು ಪಡೆಯುವುದು ವಿಶೇಷ. ಈ ವಿಶೇಷವನ್ನು ಸಾಧಿಸಿದ್ದ ಸಾಹಸಿ ಯುವಕ. ‘ನಿನಗೆ ಯೋಗ್ಯ ತಂದೆಯಾಗುವ ಶಕ್ತಿ ನನಗೆ ಬರಲಿ’ ಎಂದು ಗಾಂಧೀಜಿಯೇ ಹೇಳುವಂತೆ ನಡೆದುಕೊಂಡ ಈ ಅಪರೂಪದ ವ್ಯಕ್ತಿ. ಈತನೇ ಜಮನಾಲಾಲ್ ಬಜಾಜ್. ೧೮೮೯ ರ ನವೆಂಬರ್ ೪ನೇ ದಿನ ಹುಟ್ಟಿದ ಭಾರತದ ಸುಪುತ್ರ.

ಕೊಟ್ಟ ಮಾತು ದೊಡ್ಡದು

ರಾಜಸ್ಥಾನದ ಒಂದು ಊರು ಜಯಪುರ. ಸಿಕಾರ್ ಅಲ್ಲಿನ ಒಂದು ಜಿಲ್ಲೆ.  ಅದರಲ್ಲಿ ಒಂದು ಹಳ್ಳಿ ಕಾಶೀ ಕಾ ಬಾಸ್. ಅಲ್ಲಿ ಒಂದು ಹಳೆಯ ಮನೆ. ಆ ಮನೆಯಾಕೆ ಬಿರ್ದಿಬಾಯಿ. ಈಕೆಯ ಜೊತೆಗೆ ಸಿದೀಬಾಯಿ ಎಂಬ ಮಹಿಳೆ ಮಾತನಾಡುತ್ತಿದ್ದಳು. ತನ್ನ ಕಷ್ಟ ಸುಖ ಹೇಳಿಕೊಳ್ಳುತ್ತಿದ್ದಳು. ‘ದತ್ತು ತೆಗೆದುಕೊಂಡ ಒಬ್ಬ ಹುಡುಗನೂ ಸತ್ತು ಹೋದ. ಈ ತಾಯಿ ಹೃದಯವನ್ನು ತಣಿಸುವವರು ಯಾರು?’ ಎಂದು ಸಂಕಟ ಪಟ್ಟಳು. ಸಾಧ್ವಿಯಾದ  ಬಿರ್ದಿಬಾಯಿ ಅನುತಾಪ ಸೂಚಿಸಿದಳು. ಆಗ ಅಲ್ಲಿಗೆ ಆಟವಾಡುತ್ತ ಐದು ವರ್ಷದ ಒಬ್ಬ ಪುಟ್ಟ ಹುಡುಗ ಬಂದ. ‘ಈ ಮುದ್ದಾದ ಹುಡುಗ  ಯಾರ ಮಗ?’ ಎಂದು ಕೇಳಿದಳು. ಸಿದೀಬಾಯಿ ಸ್ವಂತ ಮಕ್ಕಳನ್ನು ‘ನಿನ್ನ ಮಗ’ ಎಂದು ಪರಿಚಯ ಮಾಡಿಕೊಡುವುದು ಅಲ್ಲಿಯ ಪದ್ಧತಿ. ಇದೇ ರೀತಿ ಬಿರ್ದಿಬಾಯಿ, ಏಕೆ, ಅದು ನಿನ್ನ ಮಗ’ ಎಂದು ಹೇಳಿದಳು. ಮಗುವಿನ ವಿಚಾರವನ್ನೇ ಮಾಡುತ್ತಿದ್ದ ಸಿದೀಬಾಯಿ ಆ ಮಾತನ್ನು ನಿಜವೆಂದೇ ನಂಬಿದಳು.

ಸೇಠ್ ಬಚ್ಚಾರಾಜ್ ವರ್ಧಾದ ಒಬ್ಬ ಪ್ರಮುಖ ವ್ಯಾಪಾರಿ. ಇವರ ಪೂರ್ವಿಕರು ಸಹ ಸಿಕಾರ್‌ನವರೇ. ಹೆಂಡತಿ ಸಿದೀಬಾಯಿಯ ಜೊತೆಗೆ ದತ್ತು ಮಗುವಿಗಾಗಿ ಹುಡುಕುತ್ತಾ ಬಂದಿದ್ದರು. ಸಿದೀಬಾಯಿ ಗಂಡನಿಗೆ ಪುಟ್ಟ ಬಾಲಕನ ವಿಷಯ ತಿಳಿಸಿದಳು. ಇಬ್ಬರೂ ಬಿರ್ದಿಬಾಯಿಯ ಗಂಡ ಕನೀರಾಮ್ ಬಜಾಜರ ಬಳಿ ಹೋದರು. ನಡೆದ ವಿಷಯವನ್ನು ತಿಳಿಸಿ ಹುಡುಗನನ್ನು ದತ್ತುಕೊಡುವಂತೆ ಕೇಳಿದರು. ಪುಟ್ಟ ಜಮನಾಲಾಲನನ್ನು ಕೊಡುವ ಯೋಚನೆ ದಂಪತಿಗಳಿಬ್ಬರಿಗೂ ಇರಲಿಲ್ಲ. ಆದರೆ ಬಚ್ಚಾರಾಜ ದಂಪತಿ ಗಳು ಒಂದೇ ಹಠ ಹಿಡಿದರು. ಕನೀರಾಮ ಬಜಾಜರು ಯೋಚಿಸಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂದರು. ಸಹಾನುಭೂತಿಗೇ ಆಗಲಿ ಒಂದು ಮಾತು ಹೇಳಿದ ಮೇಲೆ ಅದನ್ನು ಉಳಿಸಿಕೊಳ್ಳಬೇಕು. ಕೊಟ್ಟ ಮಾತು ಮಗನಿಗಿಂತ ದೊಡ್ಡದು.

ಕನೀರಾಮರ ನಿಲುವು ಬಚ್ಚಾರಾಜರ ಮೇಲೆ ಪ್ರಭಾವ ಬೀರಿತು. ಕೃತಜ್ಞತೆಯನ್ನು ಸೂಚಿಸಿದರು. ಹಣ ಕೊಡಲು ಮುಂದಾದರು. ಕನೀರಾಮರು ಹಣವಂತರಲ್ಲ ದಿದ್ದರೂ ಕೊಡುಗೆಯನ್ನು ಸ್ವೀಕರಿಸಲಿಲ್ಲ. ‘ಮಾತಿಗೋಸ್ಕರ ಮಗನನ್ನು ಕೊಟ್ಟೇನೇ ವಿನಾ ಹಣಕ್ಕಲ್ಲ’ ಎಂದು ಸ್ಪಷ್ಟಪಡಿಸಿದರು. ತೀರ ಬಲವಂತ ಪಡಿಸಿದಾಗ, ‘ಕೊಡಲೇ ಬೇಕೆಂಬುದು ನಿಮ್ಮ ಹಠವಾದರೆ ಬಾವಿ ತೋಡಿಸಿ. ಈ ಹಳ್ಳಿಯ ನೀರಿನ ತೀವ್ರ ಅಭಾವ ಸ್ವಲ್ಪ ಮಟ್ಟಿಗಾದರೂ ನೀಗಲಿ’ ಎಂದರು. ಎಂಥ ಉದಾತ್ತ ಮನೋಭಾವ!

ಹನಿ ಹನಿ ಕೂಡಿದರೆ ಹಳ್ಳ

ಜಮನಾಲಾಲನಿಗೆ ಆರು ವರ್ಷ ತುಂಬಿತು. ಆಗ ವರ್ಧಾದ ಮರಾಠಿ ಶಾಲೆಗೆ ಸೇರಿದ. ನಾಲ್ಕು ವರ್ಷ ಓದು ಮುಂದುವರಿಯಿತು. ‘ಓದು ಸಾಕು. ವ್ಯಾಪಾರ ಕಲಿಯಲಿ’ ಎಂದು ಯೋಚಿಸಿದರು ಬಚ್ಚಾರಾಜರು. ಅಲ್ಲಿಗೆ ಹುಡುಗನ ಓದು ಮುಗಿಯಿತು, ವ್ಯಾಪಾರದ ಅನುಭವ ಪ್ರಾರಂಭ ವಾಯಿತು. ನಿಜವಾಗಿ ಜಮನಾಲಾಲರನ್ನು ಸುಸಂಸ್ಕೃತರ ನ್ನಾಗಿ ಮಾಡಿದ್ದು ಪುಸ್ತಕದ ಓದಲ್ಲ, ಸಾಧನೆ, ಲೋಕಾನುಭವ ಮತ್ತು ತೀವ್ರ ಬುದ್ಧಿಶಕ್ತಿ.

ವ್ಯಾಪಾರವನ್ನು ಹುಡುಗ ಆಸಕ್ತಿಯಿಂದ ಕಲಿಯಲು ಉತ್ತೇಜನ ಕೊಡಬೇಕು ಎಂದು ಬಚ್ಚಾರಾಜರಿಗೆ ಅನ್ನಿಸಿತು. ಅದಕ್ಕಾಗಿ ಹುಡುಗನಿಗೆ ಪ್ರತಿದಿನ ಒಂದು ರೂಪಾಯಿ ಕೊಡುವ ಏರ್ಪಾಟು ಮಾಡಿದರು. ಹುಡುಗ ಹಣವನ್ನು ಹಾಳುಮಾಡದೆ ಜೋಪಾನವಾಗಿ ಕೂಡಿಡುತ್ತಿದ್ದ. ಅದನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಉಪಯೋಗಿಸಬೇಕೆಂದು ನಿರ್ಧರಿಸಿದ. ಈ ಕಾಲದಲ್ಲಿ (೧೯೦೬) ನಾಗಪುರದಿಂದ ಮರಾಠಿ ಪತ್ರಿಕೆ ’ಕೇಸರಿ’ ಯ ಹಿಂದಿ ಅವತರಣಿಕೆ ಪ್ರಕಟವಾಗಲು ಪ್ರಾರಂಭವಾಯಿತು. ಇದರ ಸಂಪಾದಕರು ಲೋಕಮಾನ್ಯ ಬಾಲಗಂಗಾಧರ ತಿಲಕರು. ಜಮನಾಲಾಲನಿಗೆ ತಿಲಕರ ಈ ಪ್ರಯತ್ನ ಹಿಡಿಸಿತು. ಕೂಡಿಹಾಕಿದ್ದ ಹಣದಿಂದ ನೂರು ರೂಪಾಯಿ ಸಹಾಯ ಧನವನ್ನು ತಿಲಕರ ಯೋಜನೆಗೆ ಕಳುಹಿಸಿದ. ಗಿಡದ ಸ್ವಭಾವ ಮೊಳಕೆಯಲ್ಲೇ ಕಾಣಲು ಪ್ರಾರಂಭವಾಯಿತು.

ಹೃದಯವಂತಿಕೆ ಮುಖ್ಯ

ಮದುವೆ ಗೊತ್ತಾದಾಗ ಜಮನಾಲಾಲನಿಗೆ ಕೇವಲ ಹತ್ತುವರ್ಷ ವಯಸ್ಸು. ಹೆಣ್ಣು ಪ್ರತಿಷ್ಠಿತ ಮತ್ತು ಹಣವಂತ ಕುಟುಂಬದವಳು. ಸೇಠ್ ಗಿರಿಧರಲಾಲ್ ಎಂಬುವರ ಮಗಳು. ಹೆಸರು ಜಾನಕಿ. ಆಕೆಗೆ ಆಗ ಕೇವಲ ಆರು ವರ್ಷಗಳು. ಮೂರು ವರ್ಷಗಳ ಅನಂತರ ಮದುವೆ ವರ್ಧಾದಲ್ಲಿ ವೈಭವದಿಂದ ನಡೆಯಿತು. ಆದರೆ ದುರದೃಷ್ಟದಿಂದ ಈ ಅವಧಿಯಲ್ಲಿ ಒಂದೊಂದಾಗಿ ಕಷ್ಟಗಳು ಕಾಣಿಸಿಕೊಂಡವು. ಮದುವೆಯ ವೇಳೆಗೆ ಸಿದೀಬಾಯಿ ತೀರಿಕೊಂಡಳು. ಕೆಲವೇ ದಿನಗಳಲ್ಲಿ ಜಮನಾಲಾಲನ ಒಬ್ಬ ತಮ್ಮ ತೀರಿಕೊಂಡ. ಸುಮಾರು ಹತ್ತು ತಿಂಗಳಿಗೆ ವರ್ಧಾದಲ್ಲಿ ಪ್ಲೇಗ್ ಬೇನೆ ಹರಡಿತು. ಬಚ್ಚಾರಾಜರ ವಿಧವೆ ಸೊಸೆ ಇದಕ್ಕೆ ಬಲಿಯಾದಳು. ಹೀಗಾಗಿ ಮನೆಯಲ್ಲಿ ಜಾನಕೀದೇವಿ ಒಬ್ಬಳೇ ಹೆಂಗಸು. ಕಷ್ಟಗಳು ಒಟ್ಟೊಟ್ಟಾಗಿ ಬರುತ್ತವೆ ಎಂದು ಜಮನಾಲಾಲನ ಅನುಭವಕ್ಕೆ ಬಂತು. ಸಾವಿನ ಮೇಲೆ ಸಾವನ್ನು ಕಂಡು ಅವನಿಗೆ ಜೀವನದ ಅನಿಶ್ಚಿತತೆ ಗೊತ್ತಾಯಿತು. ಇದನ್ನು ಎಂದಿಗೂ ಮರೆಯಬಾರದು ಎಂದು, ‘ಸಾವು ನಿಶ್ಚಿತ. ಅನ್ಯಾಯದಿಂದ ದೂರವಿರು’ ಎಂದು ಬರೆದು ಗೋಡೆಯ ಮೇಲೆ ತೂಗು ಹಾಕಿದ.

ಹೆಂಡತಿ ಹಾಗೂ ವಿಧವೆ ಸೊಸೆ ಇವರುಗಳ ಸಾವಿನಿಂದ ಬಚ್ಚಾರಾಜರು ಕಂಗೆಟ್ಟಿದ್ದರು. ಎಳೆಯರಾದ ಜಮನಾಲಾಲ್ ದಂಪತಿಗಳ ಜವಾಬ್ದಾರಿಯೂ ಸೇರಿತ್ತು. ತಮ್ಮ ನಂತರ ಕುಟುಂಬದ ಪರಂಪರೆ ಮತ್ತು ವ್ಯಾಪಾರವನ್ನು ಜಮನಾಲಾಲ ಸರಿಯಾಗಿ ಮುಂದುವರೆಸಿಕೊಂಡು ಹೋಗ ಬೇಕೆಂದು ಅವರ ಅಪೇಕ್ಷೆ. ಅದಕ್ಕಾಗಿ ಹುಡುಗ ಕಷ್ಟಪಟ್ಟು ದುಡಿಯಬೇಕು ಎಂದು ಅವರ ಇಷ್ಟ. ಹೀಗಾಗಿ ಹುಡುಗ ಕರ್ತವ್ಯಚ್ಯುತನಾಗುವುದನ್ನು ಶೀಘ್ರಕೋಪಿಗಳಾದ ಅವರು ಸ್ವಲ್ಪವೂ ಸಹಿಸುತ್ತಿರಲಿಲ್ಲ.

ಒಮ್ಮೆ ಒಂದು ಅಹಿತಕರ ಘಟನೆ ನಡೆಯಿತು. ಒಬ್ಬ ನೆಂಟನ ಮನೆಯಲ್ಲಿ ಮದುವೆಯಿತ್ತು. ತಮ್ಮ ಐಶ್ವರ್ಯ ಮತ್ತು ವೈಭವಕ್ಕೆ ತಕ್ಕಂತೆ ಜಮನಾಲಾಲಮದುವೆಗೆ ಹೋಗಬೇಕೆಂದು ಬಚ್ಚಾರಾಜರ ಇಷ್ಟ. ಆದರೆ ಜಮನಾಲಾಲನ ಮನೋಭಾವವೇ ಬೇರೆ ರೀತಿ. ಸರಳವಾಗಿರಬೇಕು, ಆಡಂಬರ ಕೂಡದು ಎಂದು ಅವನ ವಾದ. ಇದನ್ನು ಕೇಳಿ ಬಚ್ಚಾರಾಜರು ಸಿಟ್ಟಾದರು. ಹುಡುಗ ಅವಿಧೇಯನಾಗಿದ್ದಾನೆ ಎಂದು ಭಾವಿಸಿದರು. ‘ಈ ರೀತಿ ಎದುರುತ್ತರ ಕೊಟ್ಟರೆ ಮುಂದೆ ನಿನ್ನ ಗತಿ ಏನು? ಹಣ ಸುಲಭವಾಗಿ ಸಿಕ್ಕಿರುವು ದರಿಂದ ಸೊಕ್ಕಿದ್ದೀಯೆ. ಬೇಕು ಎಂದರೆ ಒಂದು ಲಕ್ಷ ರೂಪಾಯಿ ತೆಗೆದುಕೊಂಡು ಹೊರಟುಹೋಗು. ನನಗೆ ಗೊತ್ತು, ನಿನಗೆ ಬೇಕಾದದ್ದು ನನ್ನ ಹಣ, ನಾನಲ್ಲ’ ಎಂದು ಕಟುವಾಗಿ ನುಡಿದರು.

ಜಮನಾಲಾಲನಿಗೆ ಆಗ ಕೇವಲ ಹದಿನೇಳು ವರ್ಷ ವಯಸ್ಸು. ಬಚ್ಚಾರಾಜರ ಮಾತಿನಿಂದ ಮನಸ್ಸಿಗೆ ಆಳವಾದ ಗಾಯವಾಯಿತು, ಆತ್ಮಗೌರವಕ್ಕೆ ಚ್ಯುತಿ ಬಂತು. ಏನು ಮಾಡ ಬೇಕೆಂದು ಶಾಂತವಾಗಿ ಚಿಂತಿಸಿದ. ದತ್ತು ಸ್ವೀಕಾರದಿಂದ ಬರಬಹುದಾದ ಎಲ್ಲ ಐಶ್ವರ್ಯವನ್ನು ತ್ಯಜಿಸಲು ನಿರ್ಧರಿಸಿದ. ‘ಐಶ್ವರ್ಯ ನಿಮ್ಮದು. ಹೇಗೆ ಬೇಕೋ ಹಾಗೆ ಮಾಡಬಹುದು. ಇದುವರೆಗೂ ನನಗಾಗಿ ಖರ್ಚು ಮಾಡಿದ್ದೀರಿ. ಆದರೆ ಇನ್ನು ಮೇಲೆ ಒಂದು ಕಾಸನ್ನೂ ಮುಟ್ಟುವುದಿಲ್ಲ. ದೇವರು ಯಾವಾಗಲೂ ನಿಮ್ಮನ್ನು ಸುಖವಾಗಿಟ್ಟಿರಲಿ, ಎಲ್ಲೇ ಹೋಗಲಿ ನಿಮಗೆ ಒಳ್ಳೆಯದನ್ನೇ ಕೋರುತ್ತೇನೆ. ನಿಮಗೆ ಕಿರಿಕಿರಿ ಕೊಟ್ಟಿದ್ದಕ್ಕೆ ಕ್ಷಮಿಸಿ. ಹಣಕ್ಕಾಗಿ ನಿಮ್ಮ ಸೇವೆ ಮಾಡಿದೆ ಎಂಬ ವಿಚಾರವನ್ನು ದಯವಿಟ್ಟು ದೂರಮಾಡಿ’ ಹೀಗೆ ಬರೆದು ಕಳುಹಿಸಿದ. ಹರಿದ್ವಾರಕ್ಕೆ ಹೋಗಿ ಸಂನ್ಯಾಸಿಯಾಗಲು ನಿಶ್ಚಯಿಸಿ ರೈಲು ನಿಲ್ದಾಣಕ್ಕೆ ಹೋದ. ಬಚ್ಚಾರಾಜರು ಕಾಗದವನ್ನು ಓದಿ ದುಃಖಿಸಿದರು. ತಾಳ್ಮೆಯನ್ನು ಕಳೆದು ಕೊಂಡಿದ್ದಕ್ಕೆ ತಮ್ಮನ್ನು ತಾವೇ ಹಳಿದುಕೊಂಡರು. ಬಹಳವಾಗಿ ಒಡಂಬಡಿಸಿ ಜಮನಾಲಾಲ ನನ್ನು ವಾಪಸ್ಸು ಕರೆತಂದರು.

೧೯೦೭ ರಲ್ಲಿ ಸೇಠ್ ಬಚ್ಚಾರಾಜರು ಕಣ್ಣು ಮುಚ್ಚಿದರು. ತಮ್ಮ ಎಲ್ಲ ಆಸ್ತಿಯನ್ನೂ ದತ್ತು ಮೊಮ್ಮಗನಿಗೆ ಬಿಟ್ಟು ಹೋಗಿದ್ದರು. ಅವೆಲ್ಲ ಸುಮಾರು ಐದಾರು ಲಕ್ಷಗಳಾಗುತ್ತಿದ್ದವು. ಜಮನಾಲಾಲರು ಇದಕ್ಕೆ ಆಸೆ ಪಡಲಿಲ್ಲ. ಒಮ್ಮೆ ತಿರಸ್ಕರಿಸಿದ್ದ ಆಸ್ತಿಯನ್ನು ಅನುಭವಿಸಲು ತಮಗೆ ನೈತಿಕ ಹಕ್ಕಿಲ್ಲವೆಂದು ಭಾವಿಸಿದರು. ಆ ಹಣ ತಮ್ಮದಲ್ಲ ಪರೋಪಕಾರಕ್ಕಾಗಿರುವ ಹಣ ಎಂದು ತಿಳಿದರು. ಬಚ್ಚಾರಾಜ ರಿಂದ ಮೂಲತಃ ಎಷ್ಟು ಪಡೆದರೋ ಅದರ ಐದರಷ್ಟು ಹಣವನ್ನು ಧರ್ಮ ಕಾರ್ಯಗಳಿಗೆ ಉಪಯೋಗಿಸಿದರು.

ಮಾರ್ಗವೂ ಮುಖ್ಯ

ವ್ಯಾಪಾರದಲ್ಲಿ ಲಾಭವಾಗಬೇಕಾದರೆ ಮೋಸ ಮಾಡದೆ ವಿಧಿಯಿಲ್ಲ ಎಂದು ಕೆಲವರ ಭಾವನೆ. ಇದನ್ನು ಸುಳ್ಳು ಮಾಡಿ ಪ್ರಾಮಾಣಿಕ ವ್ಯಾಪಾರದಿಂದಲೂ, ಲಾಭ ಸಾಧ್ಯ ಎಂದು ತೋರಿಸಿದವರು ಜಮನಾಲಾಲರು, ವ್ಯಾಪಾರದಲ್ಲಿ ತತ್ವನಿಷ್ಠರಾಗಿರಬೇಕು, ಉದಾರ ವರ್ತನೆ ಇರಬೇಕು ಎಂಬುದು ಅವರ ನಿಲುವು.

೧೯೧೪ ರಲ್ಲಿ ಹೀರಾಲಾಲ ರಾಮಗೋಪಾಲ ಎಂಬುವರು ವ್ಯಾಪಾರದಲ್ಲಿ ಜಮನಾಲಾಲರ ಜೊತೆ ಪಾಲುದಾರರಾಗಿದ್ದರು. ಒಮ್ಮೆ ರಾಮಗೋಪಾಲರು ಕಾರ್ಯನಿಮಿತ್ತ ಊರಿಗೆ ಹೋಗಿದ್ದರು. ಆ ಸಂದರ್ಭದಲ್ಲಿ ವರ್ಧಾದ ಮಾರವಾಡಿ ವಿದ್ಯಾಲಯದವರು ಚಂದಾ ಕೇಳಲು ಬಂದರು. ಜಮನಾಲಾಲರು ಸಂಸ್ಥೆಯ ವತಿಯಿಂದ ಹನ್ನೊಂದು ಸಾವಿರ ರೂಪಾಯಿಗಳ ದಾನ ಮಾಡಿದರು. ರಾಮಗೋಪಾಲರು ವಾಪಾಸ್ಸು ಬಂದು ದಾನಕ್ಕೆ ತಮ್ಮ ಆಕ್ಷೇಪಣೆಯನ್ನು ಎತ್ತಿದರು. ‘ಒಳ್ಳೆಯ ಕಾರ್ಯಕ್ಕೆ ಕೊಟ್ಟ ದಾನವನ್ನು ವಾಪಾಸ್ಸು ಕೇಳುವುದು ಸರಿಯಿಲ್ಲ. ಆದ್ದರಿಂದ ಆ ಖರ್ಚು ನನ್ನ ಲೆಕ್ಕಕ್ಕೆ ಸೇರಲಿ’ ಎಂದರು ಜಮನಾಲಾಲರು. ಇದರಿಂದಲೂ ರಾಮಗೋಪಾಲರಿಗೆ ತೃಪ್ತಿಯಾಗಲಿಲ್ಲ. ಕಂಪನಿ ಒಡೆಯಲು ಇದೇ ಕಾರಣವಾಯಿತು. ಇಬ್ಬರೂ ಬೇರೆ ಬೇರೆಯಾದರು. ಜಮನಾಲಾಲರ ವ್ಯಾಪಾರ ಚೆನ್ನಾಗಿ ಕುದುರಿತು. ರಾಮಗೋಪಾಲರಿಗೆ ನಷ್ಟವಾಯಿತು. ಅವರ ಕುಟುಂಬ ಕಷ್ಟಕ್ಕೆ ಸಿಕ್ಕಿತು. ಆಗ ಜಮನಾಲಾಲರೇ ಆ ಕುಟುಂಬಕ್ಕೆ ಧಾರಾಳವಾಗಿ ಹಣ ಸಹಾಯ ಮಾಡಿದರು.

ಒಂದು ಸಲ ಹತ್ತಿಯ ವ್ಯಾಪಾರದಲ್ಲಿ ಹಿಂಜರಿತ ಉಂಟಾಯಿತು. ಹೀಗಾಗಿ ವ್ಯಾಪಾರಿಗಳ ನಡುವೆ ತೀವ್ರ ಸ್ಪರ್ಧೆ ಉಂಟಾಯಿತು. ಅನೇಕರು ಮೋಸದ ಹಾದಿಯನ್ನು ಹಿಡಿದರು. ಹತ್ತಿಯ ಬೇಲುಗಳ ತೂಕ ಹೆಚ್ಚಿಸಲು ಅವುಗಳನ್ನು ಒದ್ದೆ ಮಾಡಿದರು. ‘ನೀವು ಹೀಗೇ ಮಾಡಿ’ ಎಂದು ಜಮನಾ ಲಾಲರಿಗೆ ಅವರ ಸಹೋದ್ಯೋಗಿಗಳೇ ಸಲಹೆ ಕೊಟ್ಟರು. ಇದಕ್ಕೆ ಜಮನಾಲಾಲರು ಒಪ್ಪಲಿಲ್ಲ. ಅಪಮಾರ್ಗಗಳಿಂದ ಲಾಭ ಗಳಿಸುವುದು ಅವರಿಗೆ ಬೇಡವಾಗಿತ್ತು. ಹೀಗಾಗಿ ಅವರು ಕೆಲವು ಬಾರಿ ನಷ್ಟವನ್ನು ಅನುಭವಿಸಬೇಕಾಯಿತು. ಆದರೆ ಅವರು ಧೃತಿಗೆಡಲಿಲ್ಲ.

ಜಮನಾಲಾಲರ ಹತ್ತಿಯ ಬೇಲುಗಳಲ್ಲಿ ತೇವವಿರು ತ್ತಿರಲಿಲ್ಲ. ಅವು ಶುದ್ಧವಾಗಿರುತ್ತಿದ್ದವು. ಇದರಿಂದ ಅವರ ಬಿ.ಜೆ. (ಬಚ್ಚಾರಾಜ ಜಮನಾಲಾಲ) ಎಂಬ ಗುರುತು ಶುದ್ಧತೆಗೆ ಇನ್ನೊಂದು ಮಾತು ಎಂಬ ನಂಬಿಕೆ ಎಲ್ಲರಿಗೂ ಬಂತು. ವಿದೇಶಿ ಆಮದುಗಾರರು ಸಹ ಇವರ ವಾಣಿಜ್ಯ ಪ್ರಾಮಾಣಿಕತೆಯನ್ನು ತುಂಬ ಮೆಚ್ಚಿದರು. ಇದರಿಂದ ಇವರ ಹತ್ತಿಗೆ ಬೇಡಿಕೆ ಹೆಚ್ಚಿತು ಮತ್ತು ಹೆಚ್ಚು ಲಾಭಗಳಿಸುವುದು ಸಾಧ್ಯವಾಯಿತು. ಹೀಗೆ ಪ್ರಾಮಾಣಿಕತನ ಅವರಿಗೆ ಹೆಚ್ಚಿನ ಲಾಭವನ್ನು ಗಳಿಸಿಕೊಟ್ಟಿತು.

ಅನೇಕ ಸಂಸ್ಥೆಗಳು ತಮ್ಮ ಕೊಳ್ಳುವ, ಮಾರುವ ವಹಿವಾಟುಗಳನ್ನು ಜಮನಾಲಾಲರ ಮುಂಬಯಿ   ಕಛೇರಿಯ ಮೂಲಕ ನಡೆಸುತ್ತಿದ್ದವು. ಇದರಿಂದ ಕಛೇರಿಗೆ ಬರುವ ಹತ್ತಿಯ ಮಾದರಿಗಳನ್ನು ಪರೀಕ್ಷಿಸುವುದು ಅಗತ್ಯ ವಾಗಿತ್ತು. ಹೀಗೆ ಪರೀಕ್ಷೆಗಾಗಿ ತೆಗೆದ ಹತ್ತಿ ಸೇರಿ ದೊಡ್ಡ ರಾಶಿಯಾಗುತ್ತಿತ್ತು. ಇದರ ಮಾರಾಟದಿಂದಲೇ ಪ್ರತಿವರ್ಷ ಸಾವಿರಾರು ರೂಪಾಯಿಗಳ ಆದಾಯವಿತ್ತು. ಈ ಬಗ್ಗೆ ಜಮನಾಲಾಲರನ್ನು ಯಾರೂ ದೂರುವಂತಿರಲಿಲ್ಲ. ಆದರೂ ಅವರಿಗೆ ಈ ಹಣ ತಮ್ಮದಲ್ಲ ಎಂಬ ಭಾವನೆಯಿತ್ತು. ಆದ್ದರಿಂದ ಹೀಗೆ ಬಂದ ಹಣವನ್ನು ಎಲ್ಲ ಸಂಸ್ಥೆಗಳಿಗೂ ಹಂಚುವ ಏರ್ಪಾಟು ಮಾಡಿದರು.

೧೯೨೩ ನೇ ಇಸವಿ. ನಾಗಪುರ ಸತ್ಯಾಗ್ರಹದ ಕಾಲ. ಜಮನಾಲಾಲರು ಕಾರಾಗೃಹ ಶಿಕ್ಷೆಯನ್ನು ಅನುಭವಿಸು ತ್ತಿದ್ದರು. ಆಗ ವ್ಯಾಪಾರದ ಲೆಕ್ಕ ಪತ್ರಗಳನ್ನು ಗುಮಾಸ್ತರೇ ನೋಡಿಕೊಳ್ಳುತ್ತಿದ್ದರು. ಅವರು ಹೇಗೆ ನಡೆದು ಕೊಳ್ಳಬೇಕೆಂಬುದನ್ನು ವಿವರವಾಗಿ ಜಮನಾಲಾಲರು ತಿಳಿಸಿದ್ದರು. ಆದರೆ ಗುಮಾಸ್ತರು ಅವರ ಸೂಚನೆಗೆ ವ್ಯತಿರಿಕ್ತವಾಗಿ ನಡೆದರು. ಆ ವರ್ಷ ಹತ್ತಿ ವ್ಯಾಪಾರದಲ್ಲಿ ಅತಿ ಹೆಚ್ಚು ಲಾಭವಾಗಿತ್ತು. ಆದಾಯ ತೆರಿಗೆಯನ್ನು ತಪ್ಪಿಸಲು ಮುಖ್ಯ ಗುಮಾಸ್ತೆ ಸರಿಯಾದ ಲೆಕ್ಕ ತೋರಿಸಲಿಲ್ಲ. ಆದರೆ ಸಂಬಂಧಿಸಿದ ಅಧಿಕಾರಿ ಅನುಮಾನ ಪಟ್ಟು ಸ್ವೇಚ್ಛೆಯಾಗಿ ೮೫೦೦೦ ರೂಪಾಯಿ ತೆರಿಗೆ ವಿಧಿಸಿದ. ಮುಖ್ಯ ಗುಮಾಸ್ತೆ ಹೆದರಿ ಹತ್ತು ಸಾವಿರ ರೂಪಾಯಿ ಲಂಚ ಕೊಡಲು ಮುಂದಾದ. ಆಗ ತೆರಿಗೆಯನ್ನು ಎಂಟು ಸಾವಿರ ರೂಪಾಯಿಗಳಿಗೆ ಇಳಿಸಲಾಯಿತು. ತಮ್ಮ ಯಜಮಾನರಿಗೆ ಮಹತ್ತರ ಸೇವೆ ಸಲ್ಲಿಸಿದ್ದೇವೆ ಎಂದು ನೌಕರರು ಭಾವಿಸಿದರು.

ಜಮನಾಲಾಲರಿಗೆ ಬಿಡುಗಡೆಯಾದಾಗ ಎಲ್ಲ ವಿಚಾರಗಳು ತಿಳಿಯಿತು; ಮನಸ್ಸಿಗೆ ನೋವಾಗಿ ಗುಮಾಸ್ತೆ ಯನ್ನು ತರಾಟೆಗೆ ತೆಗೆದುಕೊಂಡರು. ಗಾಂಧೀಜಿಗೆ ಎಲ್ಲ ವಿಚಾರಗಳನ್ನು ತಿಳಿಸಿದರು. ಗಾಂಧೀಜಿಯ ಸಲಹೆಯಂತೆ ಸುಳ್ಳು ಲೆಕ್ಕದಿಂದ ಉಳಿಸಿದ ಹಣವನ್ನು ಸಾರ್ವಜನಿಕ ಸೇವೆಗೆ ಉಪಯೋಗಿಸಿದರು.

ಪರಕೀಯ ಆಡಳಿತದ ರುಚಿ

೧೯೦೮ ರಲ್ಲಿ ಜಮನಾಲಾಲರನ್ನು ಗೌರವ ಮ್ಯಾಜಿಸ್ಟ್ರೇಟರನ್ನಾಗಿ ಮಾಡಲಾಯಿತು. ಆಗವರಿಗೆ ಕೇವಲ ಹದಿನೆಂಟು ವರ್ಷ. ಇಷ್ಟು ಚಿಕ್ಕವಯಸ್ಸಿನಲ್ಲಿ ಅಷ್ಟು ಗೌರವ ಸಿಕ್ಕಿದರೆ ಯಾರಾದರೂ ಮೈಮರೆಯುತ್ತಾರೆ. ಆದರೆ ಜಮನಾಲಾಲರು ಹಾಗೆ ಮಾಡಲಿಲ್ಲ. ಸುತ್ತಮುತ್ತಲೂ ನಡೆಯುತ್ತಿರುವುದನ್ನು ನೋಡಿ ಪರಕೀಯ ಆಡಳಿತದ ರುಚಿ ಏನೆಂದು ತಿಳಿದರು.

ಒಮ್ಮೆ ಒಬ್ಬ ನೌಕರನ ಮನೆಗೆ ಬೆಂಕಿ ಬಿತ್ತು. ಸಂಪತ್ತನ್ನು ಕಾಪಾಡಿಕೊಳ್ಳುವ ಭರದಲ್ಲಿ ಅವನು ಮನೆ ಯೊಳಗೇ ಇದ್ದ. ಪೊಲೀಸರು ಬಂದು ಅವನನ್ನು ಹೊರಕ್ಕೆ ಬರುವಂತೆ ಆಜ್ಞಾಪಿಸಿದರು. ವಸ್ತುಗಳನ್ನು ’ರಕ್ಷಿಸಿ ರಕ್ಷಿಸಿ’ ಎಂದು ಅವನು ಕಿರಿಚುತ್ತಿದ್ದ. ಅವನ ಕಾತುರವನ್ನು ಪೊಲೀಸರು ಲಕ್ಷಿಸಲಿಲ್ಲ. ಬೈದು ಅವನನ್ನು ಹೊರಕ್ಕೆಳೆದರು. ಪ್ರಜ್ಞೆ ಹೋಗುವಂತೆ ಹೊಡೆದರು. ಜಮನಾಲಾಲರಿಗೆ ಈ ಚರ್ಯೆ ಹಿಡಿಸದೆ ಮೇಲಧಿಕಾರಿಗಳಿಗೆ ದೂರಿತ್ತರು. ತಪ್ಪು ಮಾಡಿದವರ ಮೇಲೆ ನ್ಯಾಯವಾಗಿ ಕ್ರಮ ತೆಗೆದುಕೊಳ್ಳಬೇಕು. ಉಹುಂ, ಹಾಗಾಗಲಿಲ್ಲ. ಅಧಿಕಾರಿಗಳ ಕೆಲಸದಲ್ಲಿ ಅಡ್ಡಿ ಬಂದರೆ ಅವರ ಮೇಲೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂಬ ಪತ್ರ ಬಂತು!

ಇನ್ನೊಂದು ಸಂದರ್ಭ. ಒಂದು ಹಳ್ಳಿಯ ಬಳಿ ಒಂದು ಪೊಲೀಸ್ ತಂಡ ಬೀಡು ಬಿಟ್ಟಿತ್ತು. ಮಾಮೂಲಿನಂತೆ  ಹಳ್ಳಿಗರು ಆಹಾರವನ್ನು ಸರಬರಾಜು ಮಾಡಿದರು. ಆದರೆ ಪೊಲೀಸರಿಗೆ ತೃಪ್ತಿಯಾಗಲಿಲ್ಲ. ಹೆಚ್ಚು ಬೆಲೆಯ ಸಿಹಿತಿಂಡಿ ಗಳನ್ನು ಕೇಳಿದರು. ಹಳ್ಳಿಗರು ಬಡವರು. ಪೊಲೀಸರ ಆಸೆಯನ್ನು ತೀರಿಸುವ ಸ್ಥಿತಿಯಲ್ಲಿರಲಿಲ್ಲ. ಇದನ್ನು ಪೊಲೀಸರು ಅರ್ಥಮಾಡಿಕೊಳ್ಳಲಿಲ್ಲ. ಹಳ್ಳಿಗರಿಗೆ ಬುದ್ಧಿ ಕಲಿಸಬೇಕೆಂದು ತೀರ್ಮಾನಿಸಿದರು. ಒಬ್ಬ ಹಳ್ಳಿಗನನ್ನು ಹಿಡಿದು ಚೆನ್ನಾಗಿ ಒದ್ದರು. ಪಾಪದ ಮನುಷ್ಯನಿಗೆ ಮೈತುಂಬ ಗಾಯಗಳಾಗಿ ಹಾಸಿಗೆ ಹಿಡಿದ. ಈ ಘಟನೆ ಜಮನಾಲಾಲರ ಹೃದಯವನ್ನು ಹಿಂಡಿತು. ಇಂತಹ ಘಟನೆಗಳಿಂದ ಅವರಿಗೆ ಭಾರತದಲ್ಲಿ ಬ್ರಿಟಿಷರ ಸರ್ಕಾರ ಪ್ರಜೆಗಳ ಒಳ್ಳೆಯದಕ್ಕೆ ಲಕ್ಷ್ಯ ಮಾಡುವುದಿಲ್ಲ ಎಂಬುದು ಅನುಭವಕ್ಕೆ ಬಂತು.  ಬ್ರಿಟಿಷರ ಆಡಳಿತ ಹೋಗಬೇಕೆಂಬ ನಿಶ್ಚಯ ದೃಢವಾಯಿತು.

ಆತ್ಮಗೌರವ ನಮ್ಮ ಜನ್ಮಸಿದ್ಧ ಹಕ್ಕು

ಸ್ವಾತಂತ್ರ್ಯಪೂರ್ವದಲ್ಲಿ ಇಂಗ್ಲಿಷರು ಭಾರತೀಯ ಪ್ರಯಾಣಿಕರ ಜೊತೆ ಅಸಭ್ಯವಾಗಿ ಮತ್ತು ಒರಟಾಗಿ ನಡೆದು ಕೊಳ್ಳುತ್ತಿದ್ದರು. ಒಂದು ರೈಲು ಪ್ರಯಾಣದಲ್ಲಿ ಜಮನಾಲಾಲರಿಗೆ ಇದರ ರುಚಿ ಕಂಡಿತು. ಇವರು ಮೊದಲನೇ ದರ್ಜೆ ಟಿಕೆಟ್ ಪಡೆದು ಗಾಡಿಯನ್ನು ಹತ್ತಲು ಹೋದರು. ಅಲ್ಲಿದ್ದ ಮೂವರು ಬ್ರಿಟಿಷ್ ಸೈನಿಕರು ಯಾವುದೇ ಭಾರತೀಯರನ್ನು ಹತ್ತಲು ಬಿಡುತ್ತಿರಲಿಲ್ಲ. ಮಧ್ಯಮ ವರ್ಗದ ಡಬ್ಬಿಯನ್ನು ಹತ್ತುವಂತೆ ಜಮನಾಲಾಲರಿಗೆ ಸಲಹೆ ನೀಡಿದರು. ಇಂಥ ವಿಷಯಗಳಿಗೆ ಜಮನಾಲಾಲರು ಮಣಿ ಯುತ್ತಿರಲಿಲ್ಲ. ಗಲಾಟೆ ಮಾಡಿದ ಮೇಲೆ ಇವರ ಅಹವಾಲನ್ನು ಕೇಳಲಾಯಿತು. ವಿಚಾರಿಸಿದಾಗ ಆ ಬ್ರಿಟಿಷ್ ಸೈನಿಕರ ಬಳಿಯಿದ್ದುದು ಮೂರನೇ ದರ್ಜೆಯ ಟಿಕೆಟ್ ಎಂದು ಗೊತ್ತಾಯಿತು. ಆಗ ಅವರನ್ನು ಬಲವಂತವಾಗಿ ಕೆಳಗಿಳಿಸಲಾಯಿತು.

೧೯೧೨ನೇ ಇಸವಿ. ಜಮನಾಲಾಲರು ಆಗಿನ್ನೂ ಇಪ್ಪತ್ತೆರಡು ವರ್ಷದ ಯುವಕರು. ಸೆಂಟ್ರಲ್ ಪ್ರಾವಿನ್ಸಸ್‌ನ ಮುಖ್ಯ ಕಮೀಷನರು ಅವರನ್ನು ಒಂದು ಸಭೆಗೆ  ಆಹ್ವಾನಿಸಿ ದರು.  ಅಲ್ಲಿಗೆ ಪಾಶ್ಚಿಮಾತ್ಯ ಮಾದರಿಯ ಉಡುಗೆ ಯಲ್ಲೇ ಹೋಗಬೇಕಾಗಿತ್ತು. ಇದಕ್ಕೆ ಜಮನಾಲಾಲರು ಒಪ್ಪಲಿಲ್ಲ. ಸಾಂಪ್ರದಾಯಿಕ ಮಾರವಾಡಿ ಉಡುಪಿನಲ್ಲೇ ಬರುವುದಾಗಿ ಹಠ ಹಿಡಿದರು. ಕೊನೆಗೆ ಇವರಿಗಾಗಿ ನಿಯಮವನ್ನು ಸಡಿಲಿಸಲಾಯಿತು. ಯಾವ ಕೀಳರಿಮೆಯೂ ಇಲ್ಲದೆ ಜಮನಾಲಾಲರು ಸಭೆಯಲ್ಲಿ ಭಾಗವಹಿಸಿದರು. ಹಾಜರಿದ್ದ ಎಲ್ಲ ಭಾರತೀಯರು ಇವರ ಧೈರ್ಯ ಮತ್ತು ದೇಶಭಕ್ತಿಯನ್ನು ಮೆಚ್ಚಿದರು.

ಹುಡುಕಿಕೊಂಡು ಬಂದ ಬಿರುದು

ಜಮನಾಲಾಲರು ರಾಷ್ಟ್ರನಾಯಕರೊಂದಿಗೆ ಓಡಾಡು ವುದು ಹೆಚ್ಚಿತು. ಅದರಲ್ಲೂ ಮಹಾತ್ಮಾಗಾಂಧಿಗೆ ಹೆಚ್ಚು ನಿಕಟವಾದರು. ಇಂಥ ಪ್ರತಿಷ್ಠಿತ ವ್ಯಕ್ತಿಯ ಕೈಬಿಡಲು ಬ್ರಿಟಿಷ್ ಅಧಿಕಾರಿಗಳಿಗೆ ಇಷ್ಟವಿರಲಿಲ್ಲ. ಏನಾದರೂ ಮಾಡಿ ಇವರನ್ನು ಬ್ರಿಟಿಷರ ಸರ್ಕಾರಕ್ಕೆ ನಿಷ್ಠರಾಗಿರುವಂತೆ ಮಾಡ ಬೇಕೆಂದು ಪ್ರಯತ್ನಿಸುತ್ತಿದ್ದರು. ಆಗ ಮೊದಲನೇ ಮಹಾಯುದ್ಧದ ಸಮಯ. ಸರ್ಕಾರ ಯುದ್ಧ ಕಾರ್ಯ ಗಳಿಗಾಗಿ ಹಣ ಸಂಗ್ರಹಣೆಗೆ ಪ್ರಾರಂಭಿಸಿತು. ಇದಕ್ಕಾಗಿ ಯುದ್ಧದ ಬಾಂಡುಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಲಾಯಿತು. ಸೆಂಟ್ರಲ್ ಪ್ರಾವಿನ್ಸಸ್‌ನ ಮುಖ್ಯ ಕಮೀಷನರ ಮನವಿಯನ್ನು ಮನ್ನಿಸಿ ಜಮನಾಲಾಲರು ಐವತ್ತು ಸಾವಿರ ರೂಪಾಯಿ ಮೌಲ್ಯದ ಬಾಂಡುಗಳನ್ನು ಕೊಂಡರು. ಸರ್ಕಾರ ಇವರ ಸಹಾಯವನ್ನು ಮೆಚ್ಚಿ ೧೯೧೮ ರಲ್ಲಿ ‘ರಾವ್ ಬಹದ್ದೂರ್’ ಎಂಬ ಬಿರುದನ್ನು ದಯಪಾಲಿಸಿತು. ಅದನ್ನು ಸ್ವೀಕರಿಸಲು ಇವರೇ ಹಿಂದೇಟು ಹಾಕಿದರು. ಕೊನೆಗೆ ಗಾಂಧೀಜಿಯವರ ಸಲಹೆಯಂತೆ ಅದನ್ನು ಸ್ವೀಕರಿಸಿದರು. ಈ ಬಿರುದಿನ ಬಗ್ಗೆ ಅವರ ಮನಸ್ಸಿನಲ್ಲಿ ಏನಿತ್ತು ಎಂಬುದನ್ನು ಹೆಂಡತಿಗೆ ಬರೆದ ಕಾಗದದಿಂದ ತಿಳಿಯಬಹುದು.

‘ನಾನು ರಾವ್ ಬಹದ್ದೂರ್ ಆಗಿರುವುದಕ್ಕೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ಇದೆಲ್ಲ ಕೇವಲ ತೋರಿಕೆಯ ಆಟ. ಆದರೆ ದೈವೇಚ್ಛೆಯಿದ್ದರೆ ಇದನ್ನು ಸಹ ಜನಗಳ ಸೇವೆಗಾಗಿ ಉಪಯೋಗಿಸಬಹುದು. ಜೀವನ ಒಂದು ಕನಸಿನಂತೆ. ಇಲ್ಲಿ ನಿಜವಾದ ಸುಖವಿಲ್ಲ. ಆದ್ದರಿಂದ ಸ್ವಾರ್ಥವಿಲ್ಲದೆ ಶ್ರದ್ಧೆಯಿಂದ ಕೈಲಾದ ಸೇವೆ ಸಲ್ಲಿಸುವುದು ನಮ್ಮ ಮುಖ್ಯ ಕರ್ತವ್ಯ ವಾಗಿರಬೇಕ.’

ಸರಕಾರ ಕೊಟ್ಟ ಬಿರುದು ಗಾಂಧೀಜಿ ಮತ್ತು ಇತರ ನಾಯಕರೊಡನೆ  ಇದ್ದ ವ್ಯವಹಾರಗಳಿಗೆ ಅಡ್ಡಬರಲಿಲ್ಲ. ಇದು ಸರಕಾರಕ್ಕೆ ಹಿಡಿಸಲಿಲ್ಲ. ರಾಷ್ಟ್ರನಾಯಕರೊಡನೆ ಓಡಾಡಬಾರದು, ಅವರಿಗೆ ಆತಿಥ್ಯ ನೀಡಬಾರದು ಎಂದು ಅಧಿಕಾರಿಗಳು ಎಚ್ಚರಿಸಿದರು. ಆದರೆ ಜಮನಾಲಾಲರು ಈ ಬೆದರಿಕೆಗಳಿಗೆ ಸೊಪ್ಪು ಹಾಕಲಿಲ್ಲ. ಅಷ್ಟೇ ಅಲ್ಲ ಬಹಿರಂಗವಾಗಿಯೇ ‘ಹೋಂರೂಲ್’ ಚಳುವಳಿಯಲ್ಲಿ ಧುಮುಕಿದರು. ೧೯೨೦ ರ ಸೆಪ್ಟೆಂಬರಿನಲ್ಲಿ ಕಲ್ಕತ್ತದಲ್ಲಿ ಸೇರಿದ್ದ ಕಾಂಗ್ರೆಸ್ ವಿಶೇಷ ಅಧಿವೇಶನ ಅಸಹಕಾರ ಚಳುವಳಿಗೆ ಕರೆಯುತ್ತಿತು. ಆಗ ಜಮನಾಲಾಲರು ಬಿರುದನ್ನು ಹಿಂದಿರುಗಿಸಿ ಪೂರ್ತಿಯಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪದಾರ್ಪಣ ಮಾಡಿದರು.

ಮೊದಲು ಮಾಡು ಆಮೇಲೆ ಹೇಳು

ಜಮನಾಲಾಲರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಳಿದ ಮೇಲೆ ತಮ್ಮ ಸ್ವಂತ ಜೀವನದಲ್ಲೂ ಅನೇಕ ಮಾರ್ಪಾಟುಗಳನ್ನು ತಂದರು. ತಮಗೆ ಯಾವುದನ್ನು ಪಾಲಿಸಲು ಆಗುವುದಿಲ್ಲವೋ ಅದನ್ನು ಬೇರೆಯವರಿಗೂ ಹೇಳುತ್ತಿರಲಿಲ್ಲ.

ವಿದೇಶಿ ವಸ್ತ್ರಗಳನ್ನು  ತೊಡಬಾರದು ಎಂದು ನಿರ್ಧರಿಸಿದಾಗ ಜಮನಾಲಾಲರ ಮನೆಯಲ್ಲಿ ಸಾವಿರಾರು ರೂಪಾಯಿ ಬೆಲೆ ಬಾಳುವ ವಿದೇಶಿ ಬಟ್ಟೆಗಳಿದ್ದವು. ಅವುಗಳನ್ನು ನಿರ್ವಿಕಾರವಾಗಿ ಬೆಂಕಿಗೆ ಆಹುತಿಯಿತ್ತರು. ಆಗಿನಿಂದ ಖಾದಿ ತೊಡಲು ಪ್ರಾರಂಭಿಸಿದರು. ಖಾದಿಯ ಪ್ರಚಾರಕ್ಕೆ ಜಮನಾಲಾಲರು ದುಡಿದಷ್ಟು ಬೇರೆಯವರು ದುಡಿದಿರಲಾರರು. ಗಾಂಧೀಜಿ ಕೂಡ, ‘ಖಾದಿಯ ಮಂತ್ರವನ್ನು ಕೊಟ್ಟಿರುವುದು ನಾನಿರಬಹುದು, ಆದರೆ ಜಮನಾಲಾಲರು ತಮ್ಮ ಬುದ್ಧಿಶಕ್ತಿ, ಸಂಘಟನಾ ಚಾತುರ್ಯ ಮತ್ತು ಹಣವನ್ನು ಅದಕ್ಕಾಗಿ ಮುಡಿಪಾಗಿಟ್ಟಿದ್ದಾರೆ’ ಎಂದು ಉದ್ಗಾರ ತೆಗೆದರು.

ಸುಮಾರು ಅರವತ್ತು ಎಪ್ಪತ್ತು ವರ್ಷಗಳ ಕೆಳಗೆ  ಹೆಂಗಸರು ತುಂಬ ಆಭರಣಗಳನ್ನು  ಧರಿಸುತ್ತಿದ್ದರು. ಆಭರಣಗಳಿಗಾಗಿ ಹಣವನ್ನು ಖರ್ಚುಮಾಡುವುದು ವ್ಯರ್ಥ. ಅದೇ ಹಣವನ್ನು ಇತರ ಉಪಯುಕ್ತ ಕಾರ್ಯಗಳಿಗೆ ಬಳಸಬಹುದು ಎಂದು ಗಾಂಧೀಜಿಯ ಮತ. ಅದಕ್ಕಾಗಿ ಆಭರಣಗಳ ಮೋಹವನ್ನು ಕೈಬಿಡುವಂತೆ ಮಹಿಳೆಯರಿಗೆ ಕರೆ ಕೊಟ್ಟರು. ಜಮನಾಲಾಲರು ಇದರ ಪ್ರಚಾರವನ್ನು ತ್ರಿಕರಣಪೂರ್ವಕವಾಗಿ ಕೈಗೊಂಡರು. ಮೊದಲು ಹೆಂಡತಿಗೆ ಬೋಧಿಸಿದರು. ಜಾನಕೀದೇವಿ ಸ್ವಲ್ಪವೂ ವಿಚಲಿತಳಾಗದೆ ಒಂದೊಂದಾಗಿ ಆಭರಣಗಳನ್ನು ತೆಗೆದಿರಿಸಿದಳು. ಕಾಲಗೆಜ್ಜೆ ಯನ್ನು ಸಹ ಬಿಡಲಿಲ್ಲ. ಇದು ಓರಗೆಯ ಹೆಂಗಸರಲ್ಲಿ ಆಶ್ಚರ್ಯವನ್ನುಂಟುಮಾಡಿತು. ಆಗಿನ ಪದ್ಧತಿಯಂತೆ ವಿಧವೆಯರು ಮಾತ್ರ ಕಾಲಗೆಜ್ಜೆಯನ್ನು ತೆಗೆಯುತ್ತಿದ್ದರು.

ಜುಮನಾಲಾಲರ ಹಿರಿಯ ಮಗಳು ಕಮಲ. ಆಕೆಗೆ ಮದುವೆ ಗೊತ್ತಾಯಿತು. ಜಮನಾಲಾಲರು ತಮ್ಮ ಅಂತಸ್ತಿಗೆ ತಕ್ಕಂತೆ ಅದ್ದೂರಿಯಾಗಿ ಮದುವೆ ಮಾಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಜಮನಾಲಾಲರು ಮದುವೆಯನ್ನು ಸರಳವಾಗಿ ಆಶ್ರಮದಲ್ಲಿ ನಡೆಸಲು ನಿಶ್ಚಯಿಸಿ ದರು. ಇಡೀ ಮದುವೆಯ ಸಂಭ್ರಮ ಒಂದೇ ಗಂಟೆಯಲ್ಲಿ  ಮುಗಿಯಿತು.

ಮನುಷ್ಯರೆಲ್ಲ ಒಂದೇ

ಅಸ್ಪೃಶ್ಯತೆ ನಮ್ಮ ಸಮಾಜಕ್ಕೆ ಅಂಟಿರುವ ಒಂದು ಕಳಂಕ. ಅಸ್ಪೃಶ್ಯರು ಸಾರ್ವಜನಿಕ ಬಾವಿಯಲ್ಲಿ ನೀರು ಸೇದಬಾರದು, ದೇವಸ್ಥಾನಕ್ಕೆ ಬರಬಾರದು, ಅಸ್ಪೃಶ್ಯರಲ್ಲದವರ ಮನೆಯೊಳಗೆ ಕಾಲಿಡಬಾರದು ಇತ್ಯಾದಿ ಅನೇಕ ಕೆಟ್ಟ ಕಟ್ಟುಪಾಡುಗಳು. ಇವುಗಳ ನಡುವೆ ಅವರು ಬದುಕುವು ದಾದರೂ ಹೇಗೆ? ನಮ್ಮಂತೆ ಅವರೂ ಮನುಷ್ಯರಲ್ಲವೆ? ಈ ವಿಚಾರಗಳು ಜಮನಾಲಾಲರನ್ನು ಚಿಕ್ಕಂದಿನಿಂದ ಕೊರೆಯುತ್ತಿದ್ದವು.

ಮುಂದೆ ಗಾಂಧೀಜಿ ಅಸ್ಪೃಶ್ಯರ ಉದ್ಧಾರಕ್ಕೆ ಕರೆಕೊಟ್ಟಾಗ ತಕ್ಷಣ ಜಮನಾಲಾಲರು ಓಗೊಟ್ಟರು. ಆಗ ಮನೆಗೆಲಸಕ್ಕೆ ಹರಿಜನರನ್ನು ಯಾರೂ ನೇಮಿಸುತ್ತಿರಲಿಲ್ಲ. ಜಮನಾಲಾಲರು ಅನೇಕ ಹರಿಜನರಿಗೆ ನೌಕರಿ ಕೊಟ್ಟರು. ಶಾಲಾಕಾಲೇಜುಗಳಲ್ಲಿ ಹರಿಜನರನ್ನು ಸೇರಿಸುತ್ತಿರಲಿಲ್ಲ. ಜಮನಾಲಾಲರು ವರ್ಧಾದಲ್ಲಿನ ಪ್ರೌಢಶಾಲೆ ಮತ್ತು ಮಂಬಯಿಯ ಮಾರವಾಡಿ ವಿದ್ಯಾಲಯ ಗಳಲ್ಲಿ ಹರಿಜನರಿಗೆ ಪ್ರವೇಶವನ್ನು ದೊರಕಿಸಿಕೊಟ್ಟರು. ಇಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರೊಂದಿಗೆ ಸಹಭೋಜನ ವನ್ನೂ ಏರ್ಪಾಟು ಮಾಡಿದರು.

ಜಮನಾಲಾಲರ ಹರಿಜನೋದ್ಧಾರದ ಕೆಲಸ ಕೆಲವು ಸಂಪ್ರದಾಯವಾದಿಗಳಿಗೆ ಹಿಡಿಸಲಿಲ್ಲ. ಇವರಿಗೆ ಬಹಿಷ್ಕಾರ ಹಾಕಲಾಯಿತು. ಎಂಟೆದೆಯ ಜಮನಾಲಾಲರು ಇದಕ್ಕೆ ಹೆದರುತ್ತಾರೆಯೇ? ಇನ್ನೂ ಹೆಚ್ಚಿನ ಹುರುಪಿನಿಂದ  ದುಡಿಯ ತೊಡಗಿದರು.

ಇದುವರೆಗೆ ಅವರು ಮಾಡಿದುದಕ್ಕಿಂತ ಒಂದು ಕಠಿಣ ಕಾರ್ಯ ಉಳಿದಿತ್ತು. ಅದು ಹರಿಜನರಿಗೆ ದೇವಸ್ಥಾನ ದಲ್ಲಿ ಪ್ರವೇಶ ದೊರಕಿಸುವುದು. ಅವರ ಅಜ್ಜ ಕಟ್ಟಿಸಿದ ಲಕ್ಷ್ಮೀನಾರಾಯಣ ಮಂದಿರದಿಂದಲೇ ಇದು ಆರಂಭ ವಾಗಬೇಕೆಂದು ಅವರ ಇಷ್ಟ. ೧೯೨೦ ರಲ್ಲೇ ಇದಕ್ಕಾಗಿ ಕಾರ್ಯೋನ್ಮುಖರಾದರು. ಆದರೆ ಗಾಂಧೀಜಿ ಯಾವ ಆತುರದ ಕ್ರಮಕ್ಕೂ ಸಿದ್ಧರಿರಲಿಲ್ಲ. ಎಲ್ಲರನ್ನೂ ತಮ್ಮತ್ತ ಒಲಿಸಿಕೊಂಡು ಮುಂದುವರೆಯಬೇಕೆಂದು ಸೂಚಿಸಿದರು. ಹೀಗೆ ದೇವಸ್ಥಾನಕ್ಕೆ ಸಂಬಂಧಿಸಿದ ಮುಖ್ಯರನ್ನು ಒಲಿಸಿಕೊಳ್ಳುವ ಹೊತ್ತಿಗೆ ಎಂಟು ವರ್ಷಗಳೇ ಕಳೆದಿದ್ದವು. ೧೯೨೮ರ ಜುಲೈ ೧೯ ರಂದು ವಿನೋಬಾರು ಅನೇಕ ಹರಿಜನರೊಂದಿಗೆ ಲಕ್ಷ್ಮೀನಾರಾಯಣ ಮಂದಿರವನ್ನು ಪ್ರವೇಶಿಸಿದರು. ಹರಿಜನರಿಗೆ ಪ್ರವೇಶ ಕೊಟ್ಟ ಭಾರತದ ಪ್ರಥಮ ದೇವಸ್ಥಾನ ಇದಾಯಿತು.

ಧ್ವಜ ಸತ್ಯಾಗ್ರಹ

೧೯೨೩ ರ ಏಪ್ರಿಲ್‌ನಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನೆನಪಿನ ದಿನವನ್ನು ದೇಶದಾದ್ಯಂತ ಆಚರಿಸಲು  ಸಿದ್ಧತೆಯಾಗಿತ್ತು. ಇದರ ಅಂಗವಾಗಿ ನಾಗಪುರದ ನಾಗರಿಕರು ಬಾವುಟದ ಮೆರವಣಿಗೆಯನ್ನು ನಡೆಸಲು ಉದ್ದೇಶಿಸಿದ್ದರು. ಇದನ್ನು ತಿಳಿದು ಸರಕಾರ ಇಂಥ ಮೆರವಣಿಗೆಗಳ ಮೇಲೆ ನಿರ್ಬಂಧ ವಿಧಿಸಿತು. ಆಗ ಸತ್ಯಾಗ್ರಹದ ನಾಯಕ ಜಮನಾಲಾಲರು, ‘ಈ ನಿರ್ಬಂಧ ರಾಷ್ಟ್ರಧ್ವಜಕ್ಕೆ ಮಾಡುತ್ತಿರುವ ಅವಮಾನ. ಇದನ್ನು ಸಹಿಸ ಬಾರದು. ಅದರ ಗೌರವವನ್ನು ಎತ್ತಿ ಹಿಡಿಯಬೇಕು. ಅದಕ್ಕಾಗಿ ನಿಷೇಧವನ್ನು ಧಿಕ್ಕರಿಸಿ ಸತ್ಯಾಗ್ರಹವನ್ನು ನಡೆಸಬೇಕು’ ಎಂದು ಕರೆಕೊಟ್ಟರು.

ಇತರ ಸತ್ಯಾಗ್ರಹಿಗಳೊಡನೆ ಸ್ವತಃ ಜಮನಾಲಾಲರೇ ನಿಷೇಧಿತ ಪ್ರದೇಶವನ್ನು ಧ್ವಜದೊಡನೆ ಪ್ರವೇಶಿಸಿದರು. ಒಬ್ಬ ಪೊಲೀಸ್ ಅಧಿಕಾರಿ ಇವರನ್ನು ತಡೆದು, ‘ಬ್ರಿಟಿಷರ ಧ್ವಜಕ್ಕೆ ನಿಷ್ಠರಾಗಿರುವ ಜನರ ಭಾವನೆಯನ್ನು ಕೆದಕುವುದು ಸರಿಯೆ?’ ಎಂದು ಪ್ರಶ್ನಿಸಿದ. ಜಮನಾಲಾಲರು, ‘ಸರಕಾರವೇಕೆ ಸ್ವರಾಜ್ಯ ಧ್ವಜವನ್ನು ತಡೆಯಬೇಕು? ಇಂದು ಹೀಗೆ ಮಾಡಿದವರು ನಾಳೆ ನನ್ನ ಬಿಳಿ ಟೊಪ್ಪಿಗೆಗೂ ಅಡ್ಡಿ ಬರಬಹುದು. ನಾನು ಖಾದಿ ಧೋತಿಯನ್ನು ಧರಿಸಿ ಇಲ್ಲಿಗೆ ಬರುವುದನ್ನು ನಿಷೇಧಿಸ ಬಹುದು. ಹೀಗೆಂದು ಅವುಗಳನ್ನು ತೊಡಬಾರದೆ?’ ಎಂದು ಪ್ರಶ್ನಿಸಿದರು. ಏನೂ ಉತ್ತರ ಹೊಳೆಯದೆ ಆ ಅಧಿಕಾರಿ ಜಮನಾಲಾಲ್ ರನ್ನು ಬಂಧಿಸಿದ.

ಮ್ಯಾಜಿಸ್ಟ್ರೇಟರ ಮುಂದೆ ನಿಲ್ಲಿಸಿದಾಗ ಜಮನಾ ಲಾಲರು ‘ಇದು ಸರಿಯಾದ ಮಾರ್ಗವೆಂದು ತಿಳಿದೇ ನಾನು ಈ ಚಳುವಳಿಗೆ ಸೇರಿದ್ದೇನೆ. ಇದರ ಗುರಿ ಸಾಧನೆಯಲ್ಲಿ ಬರಬಹುದಾದ ಎಲ್ಲ ಕಷ್ಟಗಳನ್ನು ಸಂತೋಷವಾಗಿ ಎದುರಿಸುತ್ತೇನೆ’ ಎಂದು ಘೋಷಿಸಿದರು. ಮೋಸದಿಂದ ಇವರಿಗೆ ಹೆಚ್ಚಿನ ಶಿಕ್ಷೆ ವಿಧಿಸಲಾಯಿತು. ದಂಡವನ್ನು ಕೊಡಲು ಜಮನಾಲಾಲರು ನಿರಾಕರಿಸಿದರು. ಅವರ ಮೋಟಾರು ಕಾರು, ಟಾಂಗ, ಹಣದ ಪೆಟ್ಟಿಗೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಮೋಟಾರು ಕಾರನ್ನು ಹರಾಜಿಗೆ ಹಾಕಿದಾಗ ಅದನ್ನು ಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಆಗ ಅದನ್ನು ಒಬ್ಬ ಇಂಗ್ಲಿಷಿನವನಿಗೆ ಅತ್ಯಂತ ಕಡಿಮೆ ಬೆಲೆಗೆ ಕೊಡಲಾಯಿತು.

ಜಮನಾಲಾಲರನ್ನು ಮೊದಲನೇ ದರ್ಜೆಯ ಬಂದೀಖಾನೆಯಲ್ಲಿ ಇಡಲಾಗಿತ್ತು. ಆದರೆ ಬಹು ಮಂದಿ ಸತ್ಯಾಗ್ರಹಿಗಳು ಮೂರನೇ ದರ್ಜೆಯ ಬಂದೀಖಾನೆ ಯಲ್ಲಿದ್ದರು. ಸತ್ಯಾಗ್ರಹಿಗಳ ನಡುವೆ ಹೀಗೆ ತಾರತಮ್ಯ ಇರುವುದು ಜಮನಾಲಾಲರಿಗೆ ಹಿಡಿಸಲಿಲ್ಲ. ಅವರೇ ಸ್ವಇಚ್ಛೆಯಿಂದ ಮೂರನೆ ದರ್ಜೆಯ ಸತ್ಯಾಗ್ರಹಿಗಳೊಂದಿಗೆ ಊಟ ಮಾಡುತ್ತಿದ್ದರು. ಅವರು ಜೀವನದಲ್ಲಿ ಮೊದಲ ಬಾರಿಗೆ ಹಾಲು ಅಥವಾ ತುಪ್ಪವಿಲ್ಲದೆ, ಕೇವಲ ಜೋಳದ ರೊಟ್ಟಿಯನ್ನು ತಿಂದರು. ಇದರಿಂದ ಅವರ ಆರೋಗ್ಯ ಕೆಟ್ಟಿತು. ಜಮನಾಲಾಲರಿಗೆ ಕೌಟುಂಬಿಕ ಸಂತೃಪ್ತಿ, ಐಶ್ವರ್ಯ, ಸ್ಥಾನಮಾನ, ಪ್ರಭಾವ ಎಲ್ಲ ಇದ್ದವು. ಹೀಗಿದ್ದೂ ದೇಶಕ್ಕಾಗಿ ತಾವಾಗಿಯೇ ನೋವನ್ನು ಬರಮಾಡಿಕೊಂಡ ದೇಶಭಕ್ತರು ಇವರು.

ವಿದೇಶಿ ವ್ಯಾಮೋಹ ಇಲ್ಲದಾತ

ದುಡ್ಡಿರುವವರು, ರಾಜಕೀಯ ಧುರೀಣರು ಸಣ್ಣ ಪುಟ್ಟ ಕಾಯಿಲೆಗಳಿಗೆಲ್ಲ ಪರದೇಶಗಳಿಗೆ ಹೋಗಿ ಚಿಕಿತ್ಸೆ ಪಡೆಯುವುದು ಸಾಮಾನ್ಯ. ಆದರೆ ಹಣ ಪ್ರಭಾವ ಎಲ್ಲ ಇದ್ದೂ ಇದನ್ನು ನಿರಾಕರಿಸಿದ ಅಪರೂಪದ ವ್ಯಕ್ತಿ ಜಮನಾಲಾಲರು.

೧೯೩೨ ರಲ್ಲಿ ಜಮನಾಲಾಲರು ಧುಲಿಯ ಬಂದೀಖಾನೆ ಯಲ್ಲಿದ್ದರು. ಅವರಿಗೆ ಕಿವಿನೋವು ಪ್ರಾರಂs ವಾಯಿತು. ಯಾವ ಚಿಕಿತ್ಸೆಯೂ ಉಪಯೋಗಕ್ಕೆ ಬರಲಿಲ್ಲ. ತಜ್ಞರಿಂದ ವೈದ್ಯಕೀಯ ಪರೀಕ್ಷೆ ಅಗತ್ಯವಾಯಿತು. ಇದಕ್ಕಾಗಿ ಅವರನ್ನು ಮುಂಬಯಿಯ ಆರ್ಥರ್ ರೋಡ್ ಜೈಲಿಗೆ ವರ್ಗಾಯಿಸಲಾಯಿತು. ಅಲ್ಲಿ ಪರಿಣತರು ಪರೀಕ್ಷಿಸಿ ಹವಾ ಬದಲಾವಣೆಗೆ ಯೂರೋಪಿಗೆ ಹೋಗಬೇಕೆಂದು ಸೂಚಿಸಿ ದರು. ಜಮನಾಲಾಲರು ಇದನ್ನು ಒಪ್ಪಲಿಲ್ಲ. ದೇಶದ ಒಳಗೇ ಭಾರತೀಯ ವೈದ್ಯರಿಂದಲೇ ಚಿಕಿತ್ಸೆಯಾಗಬೇಕೆಂದು ಪಟ್ಟು ಹಿಡಿದರು.

ಇನ್ನೊಂದು ಸಂದರ್ಭ. ಆಗ ಜಯಪುರ ಸತ್ಯಾಗ್ರಹದ ಕಾಲ. ಆಗ ಜಮನಾಲಾಲರು ಬಂಧನದಲ್ಲಿದ್ದರು. ಅವರ ಆರೋಗ್ಯ ತೀರ ಹದಗೆಟ್ಟಿತು. ಪರಿಣಿತ ವೈದ್ಯರ ಸಮ್ಮುಖದಲ್ಲೇ ಶುಶ್ರೂಷೆ ನಡೆಯಬೇಕೆಂದೂ ಯೂರೋಪಿನ ಯಾವುದಾದರೂ ಸ್ಥಳಕ್ಕೆ ಹೋಗಬೇಕೆಂದೂ ನುರಿತ ವೈದ್ಯರು ತಿಳಿಸಿದರು. ಜಮನಾಲಾಲರು ಒಪ್ಪಲಿಲ್ಲ. ‘ಇಲ್ಲಿ ಹುಟ್ಟಿದೆ. ಇಲ್ಲೇ ಸಾಯಬೇಕು. ನನ್ನ ಬಡ ದೇಶಬಾಂಧವರಿಗೆ ಯೂರೋಪಿನ ವೈದ್ಯ ಚಿಕಿತ್ಸೆ ಸಾಧ್ಯವಿಲ್ಲ. ಅವರಿಗೆ ಸಾಧ್ಯ ವಾಗದ್ದು ನನಗೂ ಬೇಡ, ಎಂದು ವೈದ್ಯರಿಗೆ ತಿಳಿಸಿದರು.

ಸಂಪರ್ಕ ಭಾಷೆಯ ಪ್ರಚಾರ

‘ನಮ್ಮಲ್ಲಿ ನಾನಾ ಭಾಷೆಗಳನ್ನಾಡುವ ಜನರಿದ್ದಾರೆ. ಆದರೆ ಎಲ್ಲರಿಗೂ ತಿಳಿಯುವ ಒಂದು ಸಾಮಾನ್ಯ ಭಾಷೆ ಯಿಲ್ಲ. ಇದರಿಂದ ದೇಶದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಟ ತುಂಬ ಕಷ್ಟ. ವಿವಿಧ ಜನಗಳ ನಡುವೆ ಸಂಪರ್ಕವೂ ಕಷ್ಟ. ಇದರ ನಿವಾರಣೆಗೆ ಇರುವ ಒಂದು ಮಾರ್ಗವೆಂದರೆ ಒಂದು ಸಂಪರ್ಕ ಭಾಷೆಯನ್ನು ಅಭಿವೃದ್ಧಿ ಪಡಿಸುವುದು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದು ಚಿಕ್ಕಂದಿನಿಂದಲೂ ಜಮನಾಲಾಲರ ಆಸೆ. ಹಿಂದಿ ಈ ಸಂಪರ್ಕ ಭಾಷೆಯಾಗಬಲ್ಲದು ಎಂದು ಅವರ ನಂಬಿಕೆ. ಅದಕ್ಕಾಗಿಯೇ ತಿಲಕರ ಮರಾಠಿ ಪತ್ರಿಕೆ ಕೇಸರಿಯನ್ನು ಹಿಂದಿಯಲ್ಲಿ ಪ್ರಕಟಿಸುವ ಯೋಜನೆಯಲ್ಲಿ ಆಸಕ್ತಿ ತಾಳಿದ್ದರು. ಮುಂದೆ ಗುಜರಾತಿಯ ನವಜೀವನ ಪತ್ರಿಕೆಯನ್ನು ಹಿಂದಿಯಲ್ಲಿ ಪ್ರಕಟಿಸಲು ಸಹಾಯ ಹಸ್ತ ಚಾಚಿದರು.

ಗಾಂಧೀಜಿಯ ಸಂಪರ್ಕಕ್ಕೆ ಬಂದ ಮೇಲೆ ರಾಷ್ಟ್ರ ಭಾಷಾ ಚಳುವಳಿಯಲ್ಲಿ ಜಮನಾಲಾಲರ  ಆಸಕ್ತಿ ಇನ್ನೂ ಆಳವಾಯಿತು. ಹಿಂದಿ ಪ್ರಚಾರಕ್ಕಾಗಿ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದರು. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಮದರಾಸಿ ನಲ್ಲಿ ಸ್ಥಾಪಿತವಾಗಲು ಸಹಾಯ ಮಾಡಿದರು. ಕೈಯಿಂದ ಹತ್ತಾರು ಸಾವಿರ ರೂಪಾಯಿಗಳ ಕೊಡುಗೆಯಿತ್ತರು. ಹಿಂದಿ ಸಾಹಿತ್ಯ ಸಮ್ಮೇಳನ ೧೯೩೭ ರಲ್ಲಿ ತನ್ನ ಮದರಾಸ್ ಸಮ್ಮೇಳನಕ್ಕೆ ಅವರನ್ನು ಅಧ್ಯಕ್ಷರನ್ನಾಗಿ ಚುನಾಯಿಸಿತು.

ಜಯಪುರ ಸತ್ಯಾಗ್ರಹ

ಜಮನಾಲಾಲರು ಮೂಲತಃ ಜಯಪುರದವರು. ಎಲ್ಲೇ ಇದ್ದರೂ ಅವರು ಸಂಸ್ಥಾನದ ಹಿತ ಕೋರುವವ ರಾಗಿದ್ದರು. ಅದರ ಏಳಿಗೆಯನ್ನು ಸಾಧಿಸು ವುದಕ್ಕಾಗಿ ಪ್ರಜಾ ಮಂಡಲ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು. ಜಮನಾಲಾಲರು ಹೀಗೆ ಜನರೊಂದಿಗೆ ಸಂಪರ್ಕ ಬೆಳೆಸಿದರೆ ಕೊನೆಗೆ ತನ್ನ ಗದ್ದುಗೆಗೆ ಅಪಾಯ ಎಂದು ಜಯಪುರದ ಇಂಗ್ಲಿಷ್ ದಿವಾನ ಭಾವಿಸಿದ. ಆದ್ದರಿಂದ ಜಮನಾಲಾಲರು ತಳವೂರಲು ಬಿಡಬಾರದೆಂದೂ ಮೊಗ್ಗಿನಲ್ಲೇ ಚಿವುಟ ಬೇಕೆಂದೂ ನಿರ್ಧರಿಸಿದ. ಅನಂತರ ಯಾವುದೋ ಒಂದು ನೆಪವೊಡ್ಡಿ ಜಮನಾಲಾಲರು ಸಂಸ್ಥಾನವನ್ನು ಪ್ರವೇಶಿಸ ಬಾರದೆಂದು ನಿರ್ಬಂಧ ವಿಧಿಸಿದ.  ಗಾಂಧೀಜಿಯವರಿಂದ ಹಿಡಿದು ಎಲ್ಲ ನಾಯಕರು ಇದನ್ನು ಪ್ರತಿಭಟಿಸಿದರು. ಈ ನಿಷೇಧಾಜ್ಞೆಯನ್ನು ಹಿಂತೆಗೆದು ಕೊಳ್ಳದಿದ್ದರೆ ಬಲವಂತವಾಗಿ ತಾವು ಸಂಸ್ಥಾನವನ್ನು ಪ್ರವೇಶಿಸುವುದಾಗಿ ತಿಳಿಸಿದರೂ ಪ್ರಯೋಜನವಾಗಲಿಲ್ಲ. ಜಮನಾಲಾಲರು ಬೇರೆ ಮಾರ್ಗವಿಲ್ಲದೆ ನಿಷೇಧಾಜ್ಞೆಯನ್ನು ಧಿಕ್ಕರಿಸಿ ಸಂಸ್ಥಾನವನ್ನು  ಪ್ರವೇಶಿಸಿದರು. ಇವರನ್ನು ಬಂಧಿಸಿ ಗಡಿಯಾಚೆ ಕರೆದು ಕೊಂಡು ಹೋಗಿ ಬಿಡುಗಡೆ ಮಾಡಲಾಯಿತು. ಜಮನಾ ಲಾಲರು ಈ ವಿಷಯದಲ್ಲಿ ಮೊಂಡರು. ನಿಷೇಧಾಜ್ಞೆಯನ್ನು ಮತ್ತೆ ಮತ್ತೆ ಧಿಕ್ಕರಿಸಿದರು. ಆಗ ಬೇರೆ ಯತ್ನವಿಲ್ಲದೆ ಅವರನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಲಾಯಿತು. ಇದಾದ ಮೇಲೆ ಪ್ರಜಾಮಂಡಲದ ಅನೇಕ ಕಾರ್ಯಕರ್ತರು ಸತ್ಯಾಗ್ರಹವನ್ನು  ಹೂಡಿ ಸೆರೆಮನೆಗೆ ಹೋದರು.

ಬೇಕೆಂದೇ ಜಮನಾಲಾಲರನ್ನು ಹಾವುಗಳಿಂದ ಕೂಡಿದ್ದ ಹಳೆಯ ಕೋಟೆಯಲ್ಲಿ ಬಂಧಿಸಿಡಲಾಗಿತ್ತು. ಅಲ್ಲಿ ಅವರನ್ನು ಅಸಭ್ಯವಾಗಿ ನೋಡಿಕೊಳ್ಳಲಾಯಿತು. ಹೀಗಾಗಿ ಮೊದಲೇ ಕ್ಷೀಣವಾಗಿದ್ದ ಆರೋಗ್ಯ ಮತ್ತಷ್ಟು ಕೆಟ್ಟಿತು. ಆದರೆ ನಿಜವಾದ ಸತ್ಯಾಗ್ರಹಿಯಂತೆ ಎಲ್ಲವನ್ನೂ ಸಹಿಸಿದರು. ಆದರೆ ಜನ ಸುಮ್ಮನಿರಲಿಲ್ಲ. ಇವರ ಬಂಧನವನ್ನು ಪ್ರತಿಭಟಿಸಿ ಚಳುವಳಿ ಹೂಡಿದರು. ಇದನ್ನು ಹತ್ತಿಕ್ಕುವುದು ಸರಕಾರಕ್ಕೂ ಕಷ್ಟವಾಯಿತು. ಆಗ ಬೇರೆ ಮಾರ್ಗವಿಲ್ಲದೆ ಜಮನಾಲಾಲ ರನ್ನು ಯಾವ ಷರತ್ತೂ ಇಲ್ಲದೆ ಬಿಡುಗಡೆ ಮಾಡಲಾಯಿತು. ಸಾರ್ವಜನಿಕ ಸಭೆ ಸೇರಲು ಮತ್ತು ಮೆರವಣಿಗೆಯನ್ನು ತೆಗೆದುಕೊಂಡು ಹೋಗಲು ಇದ್ದ ನಿರ್ಬಂಧವನ್ನು ಸರ್ಕಾರ ಹಿಂತೆಗೆದುಕೊಂಡಿತು.

ಜಮನಾಲಾಲರು ಕಷ್ಟಪಟ್ಟು ದುಡಿದು ಹಣ ಸಂಪಾದನೆ ಮಾಡಿದರು. ಆದರೆ ಅದನ್ನು ತಮ್ಮ ಸುಖಕ್ಕೆ ಬಳಸಲಿಲ್ಲ. ದೇಶದ ಹಿತಕ್ಕಾಗಿ ಆ ಹಣ ಎಂದು ಅವರ ನಂಬಿಕೆ. ಖರ್ಚು ಹೆಚ್ಚಾದರೆ ಅಷ್ಟರ ಮಟ್ಟಿಗೆ ದೇಶದ ಹಣ ಪೋಲಾದಂತೆ ಎಂಬ ಚಿಂತೆ ಅವರದು. ಆದ್ದರಿಂದ ತಮ್ಮ ಸ್ವಂತ ಖರ್ಚನ್ನು ಸಾಧ್ಯವಾದಷ್ಟೂ ತಗ್ಗಿಸಿದರು. ತಿಂಗಳ ಖರ್ಚನ್ನು ಕೇವಲ ಐನೂರು ರೂಪಾಯಿಗಳಿಗೆ ಇಳಿಸಿದರು. ಇದರಲ್ಲಿ ಕಾರ್ಯದರ್ಶಿಯ ಸಂಬಳ, ಪ್ರಯಾಣದ ವೆಚ್ಚಗಳು, ಅಂಚೆ ವೆಚ್ಚ ಸೇರಿತ್ತು. ಮುಂದೆ ಇದನ್ನು ಇನ್ನೂ ಇಳಿಸಿದರು. ಇದಕ್ಕಾಗಿ ಮೂರನೇ ದರ್ಜೆಯಲ್ಲಿ ರೈಲು ಪ್ರಯಾಣ ಮಾಡುತ್ತಿದ್ದರು. ಅನೇಕ ವೇಳೆ ಹಣ ಉಳಿಸಲು ಟೆಲಿಗ್ರಾಂನಿಂದ ಕೆಲವು ಪದಗಳನ್ನು ತೆಗೆದುಹಾಕಲು ಸೂಚಿಸುತ್ತಿದ್ದರು. ’ಅಂಚೆಯ ಕಾರ್ಡ್ ಸಾಲುವುದಿದ್ದರೆ ಕಾಗದ ಬರೆಯಬೇಡಿ. ಕಾಗದದಿಂದಲೇ  ಕೆಲಸವಾಗು ವುದಿದ್ದರೆ ಟೆಲಿಗ್ರಾಂ ಕಳುಹಿಸಬೇಡಿ’ ಎಂಬುದೇ ಅವರ ಹಿತೋಕ್ತಿ.

ವಿಶಾಲ ಹೃದಯ

ಜಮನಾಲಾಲರ   ಒಬ್ಬ ಸಂಬಂಧಿಕ ಮದುವೆ ಗೆಂದು ಸ್ವಲ್ಪ ಹಣ ತೆಗೆದುಕೊಂಡಿದ್ದ. ಅವನಿಗೆ ಹಣ ಹಿಂದಿರುಗಿಸುವುದು ಸಾಧ್ಯವಿರಲಿಲ್ಲ. ಆದ್ದರಿಂದ ಅದನ್ನು ಕಾಣಿಕೆಯೆಂದು ಭಾವಿಸಬೇಕೆಂದು ಹಿಂದಿರುಗಿಸ ಬೇಕಾಗಿಲ್ಲ ವೆಂದು ಹೇಳಿಯೇ ಹಣ ಕೊಡಲಾಗಿತ್ತು. ಇದಕ್ಕೆ ಆತ ಒಪ್ಪದೆ ಸಾಲವೆಂದೇ ಪರಿಗಣಿಸಬೇಕೆಂದು ಒತ್ತಾಯಿಸಿದ. ಜಮನಾ ಲಾಲರು ಒಪ್ಪಲೇ ಬೇಕಾಯಿತು. ಇದಾಗಿ ಅನೇಕ ವರ್ಷ ಗಳಾದರೂ ಹಣ ವಾಪಾಸ್ಸು ಬರಲಿಲ್ಲ. ಜಮನಾಲಾಲರು ಹಣಕ್ಕಾಗಿ ತಗಾದೆ ಹೂಡಿದರು. ಆಗ ಆ ಸಂಬಂಧಿಕ ಬಂದು ಅತ್ತು ಕರೆದು ಮಾಡಿದ. ಆದರೆ ಜಮನಾಲಾಲರು ಹಠ ಬಿಡದೆ ಹಣ ವಸೂಲಿಗೆ ಕೋರ್ಟಿನಿಂದ ಅಪ್ಪಣೆ ಪಡೆದರು. ಆದರೆ ಅದನ್ನು ಜಾರಿಗೆ ತರಲಿಲ್ಲ. ಇದು ಅವರ ಸ್ನೇಹಿತರಿಗೆ ವಿಚಿತ್ರ ಎನ್ನಿಸಿತು.’ ‘ಕೋರ್ಟಿನ ಸಮ್ಮತಿ ಪಡೆದು ಅದನ್ನು ಕಾರ್ಯಗತ ಮಾಡದ ಮೇಲೆ ಕೋರ್ಟಿಗೆ ಏಕೆ ಹೋದಿರಿ?’ ಎಂದು ಕೇಳಿದರು. ಅದಕ್ಕೆ ಜಮನಾಲಾಲರು ‘ಸ್ನೇಹಕ್ಕೂ ವ್ಯವಹಾರಕ್ಕೂ ವ್ಯತ್ಯಾಸವಿದೆ. ಈ ನೆಂಟ ಸ್ನೇಹ ಬೇಡ ವ್ಯವಹಾರ ಬೇಕು ಎಂದ. ಆದರೆ ವ್ಯವಹಾರದಲ್ಲಿ ಹೇಗಿರಬೇಕೆಂದು ತಿಳಿಯಲಿಲ್ಲ. ಅವನಿಗೆ ಪಾಠ ಕಲಿಸಲೆಂದೇ ಹೀಗೆ ಮಾಡಿದೆ’ ಎಂದರು.

ಇನ್ನೊಂದು ಸಂದರ್ಭ. ಸೇಠ್ ಬಚ್ಚಾರಾಜರಿಗೆ ಒಬ್ಬ ಬಂಧುವಿದ್ದ. ಅವರ ಆಸ್ತಿಯಲ್ಲಿ ತನಗೂ ಪಾಲು ಬರಬೇಕೆಂದು ತಕರಾರು ಹೂಡಿದ. ಕೋರ್ಟಿನಲ್ಲಿ ದಾವಾ ಅನೇಕ ವರ್ಷಗಳು ನಡೆದವು. ನೂರಾರು ಲೆಕ್ಕಗಳು ಮತ್ತು ದಾಖಲೆಗಳನ್ನು ಪರಿಶೀಲಿಸಲಾಯಿತು.

ಒಂದು ದಾಖಲೆಯ ಕೆಲವು ಉಲ್ಲೇಖಗಳು ವಿರೋಧವಾಗಿದೆಯೆಂದು ಅದನ್ನು ಮುಚ್ಚಿಡಲು  ವಕೀಲರು ಪ್ರಯತ್ನಿಸಿದರು. ಆದರೆ ಜಮನಾಲಾಲರು ಹಠ ಹಿಡಿದು ಅದನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು. ಆಶ್ಚರ್ಯವೆಂದರೆ ಇದೇ ದಾಖಲೆಯಿಂದ ಜಮನಾಲಾಲರಿಗೆ ಅನುಕೂಲ ವಾಯಿತು.

ಇನ್ನೊಬ್ಬ ಸಂಬಂಧಿಕ ಜಮನಾಲಾಲರ ವಿರುದ್ಧ ಒಂದು ಪುಸ್ತಕ ಬರೆದಿದ್ದ. ಆದರೆ ಅದನ್ನು ಪ್ರಕಟಿಸಲು ಅವನಲ್ಲಿ ಹಣವಿರಲಿಲ್ಲ. ಹೀಗಿರುವಲ್ಲಿ ಅವನು ಕಾಯಿಲೆ ಬಿದ್ದ. ವಿಚಾರಿಸಿಕೊಳ್ಳಲು ಜಮನಾಲಾಲರು ಅವನಲ್ಲಿಗೆ ಹೋದರು. ಮಾತಿನ ನಡುವೆ ಆ ಪುಸ್ತಕ ಪ್ರಕಟವಾಗಲಿಲ್ಲವೆಂಬ ಮನೋರೋಗ ಅವನಿಗಿದೆ ಎಂದು ತಿಳಿಯಿತು. ಜಮನಾಲಾಲರು ನಕ್ಕು ‘ಇಷ್ಟು ಸರಳ ವಿಷಯಕ್ಕೆ ಏಕೆ ಯೋಚನೆ? ಪುಸ್ತಕ ನನಗೆ ವಿರುದ್ಧವಾಗಿದ್ದರೆ ತಾನೆ ಏನು, ಅದರ ಪ್ರಕಟಣೆಗೆ ಹಣ  ಸಹಾಯ ಮಾಡುತ್ತೇನೆ’ ಎಂದರು. ಹಣವನ್ನು ಸಾಲವಾಗಿ ಪಡೆದು ಆ ನೆಂಟ ಪುಸ್ತಕವನ್ನು ಪ್ರಕಟಿಸಿದ.

ವರ್ಧಾದಲ್ಲಿ ಅನೇಕ ರಾಜಕೀಯ ಸಭೆಗಳು ಸೇರುತ್ತಿದ್ದವು. ದೇಶದ ನಾಯಕರು ಅವುಗಳಲ್ಲಿ ಭಾಗವಹಿಸುತ್ತಿದ್ದರು. ಅವರಿಗೆಲ್ಲ ಜಮನಾಲಾಲರು ತಮ್ಮ ಮನೆಯಲ್ಲೇ ಊಟ ವಸತಿಗಳನ್ನು ಏರ್ಪಡಿಸುತ್ತಿದ್ದರು. ಒಂದೊಂದು ಬಾರಿ ಸ್ಥಳಾಭಾವವಾಗುತ್ತಿತ್ತು. ಆಗ ಅವರೇ ಕುಟುಂಬ ಸಮೇತರಾಗಿ ಮನೆಯನ್ನು ಬಿಟ್ಟು ಮಹಿಳಾ ಆಶ್ರಮದಲ್ಲಿ ಮಲಗುತ್ತಿದ್ದರು.

ಅವರಲ್ಲಿ ತಂಗುತ್ತಿದ್ದ ಹಿರಿಯ ನಾಯಕರಲ್ಲಿ ಸುಭಾಷ್‌ಚಂದ್ರ ಬೋಸರು ಒಬ್ಬರು. ಇವರು ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಅನೇಕ ಬಾರಿ ಬಜಾಜವಾಡಿಯಲ್ಲಿ ತಂಗಿದ್ದರು. ಕೆಲವು ಸಮಯಾನಂತರ ಅನೇಕ ಕಾರಣಗಳಿಂದ ಅವರು ಕಾಂಗ್ರೆಸನ್ನು ಬಿಡಬೇಕಾಯಿತು. ಆಗ ತಮ್ಮದೇ ಆದ ಫಾರ್ವರ್ಡ್ ಬ್ಲಾಕ್ ಎಂಬ ಪಕ್ಷವನ್ನು ಕಟ್ಟಿದರು. ಅನಂತರ ಬಜಾಜವಾಡಿಯ ಎದುರಿಗೇ ಒಮ್ಮೆ ಕಾಂಗ್ರೆಸ್‌ಗೆ ವಿರುದ್ಧವಾದ ಸಭೆಯಲ್ಲಿ ಮಾತನಾಡಬೇಕಾಯಿತು. ರಾಜಕೀಯ ವ್ಯತ್ಯಾಸಗಳು ಸ್ನೇಹಕ್ಕೆ ಅಡ್ಡಿ ಬರಬಾರದು ಎಂಬುದು ಬಜಾಜರ ನಿಲುವು. ಆದ್ದರಿಂದ ಸ್ವತಃ ತಾವೇ ಹೋಗಿ ಬೋಸ ರನ್ನು ತಮ್ಮಲ್ಲಿ ತಂಗುವಂತೆ ಆಹ್ವಾನಿಸಿದರು. ಬೋಸರಿಗೆ ಜಮನಾಲಾಲರ ಅಂತಃಕರಣ ಕಂಡು ಸಂತೋಷವಾಯಿತು.

ಸತ್ಯಾನ್ವೇಷಣೆಯ ಪಥದಲ್ಲಿ

ಮೊದಲಿನಿಂದಲೂ ಜಮನಾಲಾಲರ ಮೇಲೆ ಧರ್ಮದ ಪ್ರಭಾವ ಹೆಚ್ಚು. ಸಾಧು ಸಂತರ ಉಪನ್ಯಾಸಗಳಲ್ಲಿ ಆಸಕ್ತಿ, ತುಳಸೀದಾಸರ ರಾಮಾಯಣ, ಸಂತ ತುಕಾರಾಮರ ಭಜನೆ ಇವುಗಳಲ್ಲಿ ತಲ್ಲೀನತೆಗಳನ್ನು ಬೆಳೆಸಿಕೊಂಡಿದ್ದರು. ತಾವು ಓದಿದ ಮತ್ತು ಕೇಳಿದ ಹಿತೋಕ್ತಿಗಳನ್ನು ದಿನಚರಿ ಪುಸ್ತ ಕದಲ್ಲಿ ಬರೆದಿಡುತ್ತಿದ್ದರು.

ಹಣ, ಸುಖ ಇವುಗಳ ಕಡೆಗೆ ಎಂದೂ ಅವರ ಮನಸ್ಸು ವಾಲಲಿಲ್ಲ. ಇವರ ಆಂತರಿಕ ಹಸಿವನ್ನು ಅರಿತ ಗಾಂಧೀಜಿ ಸತ್ಯಶೋಧನೆಯಲ್ಲಿ ತಮಗಾದ ಅನುಭವಗಳನ್ನು ಜಮನಾಲಾಲರೊಂದಿಗೆ ಹಂಚಿ ಕೊಳ್ಳುತ್ತಿದ್ದರು.

ಬರಬರುತ್ತ ಜಮನಾಲಾಲರಿಗೆ ವೇದಾಂತಿಕ ಮನೋಭಾವ ಬಲಿಯಿತು. ಮನಃಶಾಂತಿಗಾಗಿ ರಾಜಪುರ ಆಶ್ರಮದ ಆನಂದ ಮಾಯಿ ಅವರ ಬಳಿಗೆ ಹೋದರು. ಅವರೇ ಹೇಳಿದಂತೆ ಬಾಪು ತಂದೆಯಾದರು. ಆನಂದ ಮಾಯಿ ತಾಯಿಯಾದರು. ಅವರ ಜೀವನದ ಗುರಿಯಾದರೂ ನಿಃಸ್ವಾರ್ಥ ಸೇವೆಯಲ್ಲಿ ಕಳೆಯಬೇಕೆಂಬುದೇ ಆಗಿತ್ತು.

ಗೋವಿನ ಸೇವೆಯಲ್ಲಿ

ಆನಂದಮಾಯಿ ಅವರ ಆಶ್ರಮದಲ್ಲಿ ಜಮನಾ ಲಾಲರು ಶಾಂತಿಯನ್ನು ಪಡೆದರು. ಹಿಂದಿರುಗು ವಾಗ, ತಮ್ಮ ಮುಂದಿನ ಕೆಲಸಗಳ ಬಗ್ಗೆ ಸೂಚನೆಗಳನ್ನು ಕೊಡಬೇಕೆಂದು ಕೋರಿದರು. ಆನಂದಮಾಯಿ ಸ್ವಲ್ಪ ಹೊತ್ತು ಸುಮ್ಮನಿದ್ದು ಅನಂತರ, ‘ಮುಂದಿನ ಆರು ತಿಂಗಳಿಗೆ ಸಿದ್ಧನಾಗು’ ಎಂದು ತಿಳಿಸಿದರು. ತಮ್ಮ ಬದುಕಿನ ಅವಧಿ ಇಷ್ಟೇ ಎಂದು ಜಮನಾಲಾಲರು ಅರ್ಥ ಮಾಡಿಕೊಂಡರು.

ವರ್ಧಾಗೆ ಹಿಂದಿರುಗಿದ ಮೇಲೆ ತಮ್ಮ ಮುಂದಿನ ಚಟುವಟಿಕೆಗಳ ಬಗ್ಗೆ ಗಾಂಧೀಜಿಯ ಜೊತೆ ಮಾತ ನಾಡಿದರು. ಕೊನೆಗೆ ಗೋಸೇವೆಯನ್ನು ಮಾಡಬೇಕೆಂದು ನಿರ್ಧಾರವಾಯಿತು. ಜಮನಾಲಾಲರು ಕಡಿಮೆ ಖರ್ಚಿನಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ಹೊಸ ಜೀವನವನ್ನು ಪ್ರಾರಂಭಿಸಿದರು. ಯಾವಾಗಲೂ ಗೋವುಗಳನ್ನು ನೋಡಿಕೊಂಡು ಗೋಶಾಲೆಯಲ್ಲೇ ಇರುತ್ತಿದ್ದರು. ಯಾವುದನ್ನೂ ಶ್ರದ್ಧೆಯಿಂದ ಮಾಡುವ ಜಮನಾಲಾಲರು ಗೋಸೇವೆಯಲ್ಲೂ ಇದೇ ಮನೋಭಾವ ವನ್ನು ಪ್ರಕಟಿಸಿದರು. ಗೋ ಅಭಿವೃದ್ಧಿಯ ಬಗ್ಗೆ ಆಧುನಿಕ ಸಾಹಿತ್ಯ ವನ್ನು ಓದಿಕೊಂಡರು. ಭಾರತದಲ್ಲಿ ಗೋರಕ್ಷಣೆ ಹಾಗೂ ಅಭಿವೃದ್ಧಿಯ ಬಗ್ಗೆ  ಚಿಂತಿಸಿದರು. ೧೯೪೨ ರ ಫೆಬ್ರವರಿ ಯಲ್ಲಿ ಅಖಿಲ ಭಾರತ ಗೋಸೇವಾ ಸಮ್ಮೇಳನ ವನ್ನೂ ನಡೆಸಿದರು. ಗೋವುಗಳು ನೈಸರ್ಗಿಕವಾಗಿ ಸತ್ತಮೇಲೆ ಅವುಗಳ ಕೊಂಬು, ಚರ್ಮ ಮುಂತಾದವುಗಳಿಂದ ಉಪಯುಕ್ತ ವಸ್ತುಗಳನ್ನು ತಯಾರಿಸಲು ಒಂದು ಕೈಗಾರಿಕೆಯನ್ನು ಪ್ರಾರಂಭಿಸಿದರು.

ಗೋಸೇವೆಯೆ ಜಮನಾಲಾಲರ ಜೀವನದ ಅಂತಿಮ ಚಟುವಟಿಕೆಯಾಗಿತ್ತು. ೧೯೪೨ ರ ಫೆಬ್ರವರಿ ಹನ್ನೊಂದನೆ ದಿನ ಈ ಲೋಕವನ್ನು ಬಿಟ್ಟರು.

ತಾವು ಪಾಲಿಸುತ್ತಿದ್ದ ತತ್ವಗಳನ್ನು ಬರೆದಿಡುತ್ತಿದ್ದುದು ಜಮನಾಲಾಲರ ಪದ್ಧತಿ. ಅವುಗಳಲ್ಲಿ ಕೆಲವು ಹೀಗಿವೆ.

೧. ಓದದೆಯೆ ಯಾವ ಕಾಗದಕ್ಕೂ ಸಹಿ ಹಾಕಬಾರದು.

೨. ಕ್ಲುಪ್ತ ಕಾಲಕ್ಕೆ ಹೋಗಬೇಕು; ಒಪ್ಪಿಕೊಂಡ ಕೆಲಸವನ್ನು ತಪ್ಪಿಸಬಾರದು.

೩. ನಿಜವಾಗಿ ಮಾಡಲು ಆಗುವುದಕ್ಕಿಂತ ಹೆಚ್ಚಿನ ಆಸೆಗಳನ್ನು ಇಟ್ಟುಕೊಳ್ಳಕೂಡದು.

೪. ಲಾಭವಾಗಲಿ ಬಿಡಲಿ ಸತ್ಯಕ್ಕೆ ಅಂಟಿಕೊಳ್ಳಬೇಕು.

೫. ಮಾಡಬೇಕೆಂದಿರುವುದನ್ನು ಇಂದೇ ಮಾಡಬೇಕು.

೬. ಜಯದ ಬಗ್ಗೆಯೇ ಯೋಚಿಸು. ಜಯದ ಬಗ್ಗೆಯೇ ಮಾತನಾಡು. ಆಗ ಖಂಡಿತ ಜಯವಾಗುತ್ತದೆ.

೭. ನಿನ್ನ ದೇಹ ಮತ್ತು ಆತ್ಮದ ಶಕ್ತಿಯ ಬಗ್ಗೆ ನಂಬಿಕೆಯಿರಲಿ.

೮. ಕಷ್ಟಪಟ್ಟು ದುಡಿಯುವುದರಲ್ಲಿ ಯಾವ ಅವಮಾನವೂ ಇಲ್ಲ.

೯. ನೇರವಾಗಿ ಮಾತನಾಡಲು ಯಾವಾಗಲೂ ಸಂಕೋಚ ಬೇಡ.