ಸಾಮಾನ್ಯವಾಗಿ ಮನುಷ್ಯನ ಸಾವು ಅವನ ಬದುಕಿಗೆ ಹಿಡಿದ ಕನ್ನಡಿಯಂತೆ. ಯಾರೋ ಒಬ್ಬ ಸತ್ತಾಗ ಹತ್ತಿರದ ಜನರು, ಸುತ್ತಲಿನ ಜನರು ಹೇಗೆ ನಡೆದುಕೊಳ್ಳುತ್ತಾರೆಂಬುದು ಅವನು ಬದುಕಿದ್ದ ರೀತಿಯನ್ನು ತೋರಿಸುತ್ತದೆ. ಅವನು ಹತ್ತು ಜನರಿಗೆ ಒಳ್ಳೆಯದಾಗಲೆಂಬ ಬುದ್ಧಿಯಿಂದ ಬದುಕಿದ್ದನಾದರೆ, ನೇರವಾಗಿ ಅವನನ್ನು ತಿಳಿದವರೇ ಅಲ್ಲದೆ, ದೂರವಿದ್ದ ಇತರರೂ ಕೂಡ ಕಣ್ಣೀರು ಸುರಿಸುತ್ತಾರೆ.

೧೯೭೪ರ ಸೆಪ್ಟೆಂಬರ್ ೨೩ರಂದು ಹೀಗೆಯೇ ನಮ್ಮ ನಾಡಿನ ಒಬ್ಬ ವ್ಯಕ್ತಿ ಕೊನೆಯುಸಿರೆಳದು ಇನ್ನಿಲ್ಲವಾದರು. ಸುದ್ದಿ ತಿಳಿದೊಡನೆಯೇ ಅವರ ಕಡೆಯ ದರ್ಶನ ಪಡೆಯಲು ಬೆಂಗಳೂರಿನಲ್ಲಿ ಸಹಸ್ರ ಜನರು ಗುಂಪು ಸೇರಿ ಕಣ್ಣೀರುಗರೆದರು. ಅವರ ದೇಹವನ್ನು ಮೋಟಾರಿನಲ್ಲಿ ಮೈಸೂರಿಗೆ ಒಯ್ದಾಗ ದಾರಿಯುದ್ದಕ್ಕೂ ಎಲ್ಲ ಹಳ್ಳಿ ಪಟ್ಟಣಗಳ ಹತ್ತಿರವೂ ಜನರು ನೂರು, ಸಾವಿರವಾಗಿ ಸೇರಿ ನಿಟ್ಟುಸಿರು ಬಿಟ್ಟರು, ಕಣ್ಣೀರಿನ ತರ್ಪಣ ಕೊಟ್ಟರು. ಆಮೇಲೆ ಮೈಸೂರಿನಲ್ಲಂತೂ ಎಲ್ಲ ರಸ್ತೆಗಳಲ್ಲೂ ಸೇರಿದ ಜನದಟ್ಟಣಿಯನ್ನು ವರ್ಣಿಸಲು ಅಸಾಧ್ಯವೆನ್ನಬೇಕು. ಅಂತ್ಯಕ್ರಿಯೆಗೆಂದು ದೇಹವನ್ನು ಮಧುವನಕ್ಕೆ ಒಯ್ದಾಗ ಜನರ ನೂಕುನುಗ್ಗಲು ಹೇಳತೀರದು. ಆಗ ಕಣ್ಣೀರು ಸುರಿಸದೇ ಇದ್ದ ಒಬ್ಬ ವ್ಯಕ್ತಿಯೂ ಇರಲಿಲ್ಲ.

ಹೀಗೆ ನಮ್ಮನ್ನು ಅಗಲಿ ದೂರವಾದವರು ಜಯಚಾಮರಾಜ ಒಡೆಯರು. ಅವರು ತೀರಿಕೊಂಡ ದಿನ ಅವರಿಗೆ ಯಾವ ಅಧಿಕಾರ ಸ್ಥಾನವೂ ಇರಲಿಲ್ಲ. ಆದರೆ ಸಾವಿರಾರು ಜನ ಅವರು ಇನ್ನಿಲ್ಲ ಎಂದು ಅತ್ತರು !

ವಿಜಯದ ಸಂಭ್ರಮ

ಜಯಚಾಮರಾಜರು ಹುಟ್ಟಿದಾಗ ಜನಕೋಟಿ ಅಪಾರವಾಗಿ ಸಂತೋಷಪಟ್ಟಿತ್ತು. ೧೯೧೪ರಿಂದ ೧೯೧೯ ರ ವರೆಗೆ ನಡೆದ ವಿಶ್ವದ ಮೊದಲನೆಯ ಮಹಾಯುದ್ಧ ಆಗತಾನೆ ಮುಗಿದು ಪ್ರಪಂಚದ ಎಲ್ಲ ದೇಶಗಳೂ ಕಷ್ಟ ಕಳೆದ ನಿಟ್ಟುಸಿರುಬಿಟ್ಟು ನಲಿವಿನಲ್ಲಿದ್ದ ಸಮಯ.

ಆಗ ಮೈಸೂರು ಸಂಸ್ಥಾನದ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಯುದ್ಧಕ್ಕೆ ಸಹಾಯವಾಗಿ ಬ್ರಿಟನ್ನಿಗೆ ೭೩ ಲಕ್ಷ ರೂಪಾಯಿಗಳನ್ನು ಕೊಟ್ಟರು. ಸರಕಾರ ಮತ್ತು ಪ್ರಜೆಗಳು ಒಟ್ಟು ಎರಡು ಕೋಟಿ ಹದಿನೇಳು ಲಕ್ಷ ರೂಪಾಯಿಗಳನ್ನು ಕೊಟ್ಟರು. ಲೆಕ್ಕವಿಲ್ಲದಂತೆ ಕಂಬಳಿಗಳು, ಹುಲ್ಲು, ತೇಗ ಮತ್ತು ಹೊನ್ನೆ ಮರಗಳ ದಿಮ್ಮಿಗಳು ಹಾಗೂ ಇತರ ರೀತಿಯ ವಸ್ತುಗಳನ್ನು ಸೈನಿಕರ ಬಳಕೆಗಾಗಿ ಮೈಸೂರು ಸಂಸ್ಥಾನ ಒದಗಿಸಿತು.

ಈಜಿಪ್ಟ್‌, ಪ್ಯಾಲೆಸ್ಟೈನ್‌ಮತ್ತು ಇತರ ಪ್ರದೇಶಗಳಲ್ಲಿ ಅನೇಕ ಸೆಣಸಾಟಗಳಲ್ಲಿ ಹೋರಾಡಿ ಶತ್ರುಸೈನ್ಯಗಳನ್ನು ಸದೆಬಡಿದ ಮೈಸೂರು ಯೋಧರ ಶೌರ್ಯ ಪರಾಕ್ರಮಗಳಿಂದ ಆಧುನಿಕ ಯುದ್ಧ ವಿಧಾನಗಳಲ್ಲಿ ನಿಷ್ಠಾತರೆನಿಸಿದ ಬ್ರಿಟಿಷ್‌ಸೈನ್ಯಾಧಿಕಾರಿಗಳೂ ಅಚ್ಚರಿಗೊಂಡರು.

ಈ ಮಹಾಯುದ್ಧದಲ್ಲಿ ಕಡೆಯ ಪಕ್ಷ ಒಂದು ಕೋಟಿ ಜನ ಸತ್ತರಂತೆ. ಇಂತಹ ಭೀಕರ ಯುದ್ಧದಲ್ಲಿ ಬ್ರಿಟಿಷರೂ ಅವರ ಮಿತ್ತರೂ ಗೆದ್ದು ಯುದ್ಧ ಮುಗಿದಾಗ ಜನರಿಗೆ ಅದೆಷ್ಟು ಸಂತೋಷವಾಗಿರಬೇಕು!

ಶಾಂತಿಯ ಕರಾರು – ವರ್ಸೆಲ್ಸ್‌ಒಪ್ಪಂದ – ಸಹಿ ಆದದ್ದು ೧೯೧೯ರ ಜೂನ್‌ತಿಂಗಳಲ್ಲಿ. ಜುಲೈ ತಿಂಗಳ ೧೮ರಂದು, ಆಗ ಮೈಸೂರಿನ ಯುವರಾಜರಾಗಿದ್ದ ಕಂಠೀರವ ನರಸಿಂಹರಾಜ ಒಡೆಯರ ಪತ್ನಿ ಯುವರಾಣಿ ಕೆಂಪು ಚೆಲುವರಾಜಮ್ಮಣ್ಣಿ ಅವರಿಗೆ ಗಂಡುಮಗು ಜನಿಸಿತು.

ಜಯಚಾಮರಾಜ ಒಡೆಯರ್”

ಹೂಮಳೆಯಾದಂತೆ ತುಂತುರು ಹನಿಗಳುದುರುತ್ತಿದ್ದಾಗ ಶುಭಸಮಾಚಾರ ತಿಳಿದ ಜನರ ಸಂತೋಷಕ್ಕೆ ಎಲ್ಲೆ ಇಲ್ಲ. ಅರಮನೆಯ ಒಳ-ಹೊರಗೆಲ್ಲ ದೀಪಗಳು ಜಾಜ್ವಲ್ಯಮಾನವಾಗಿ ಬೆಳಗಿದವು. ಅರಮನೆಯವರು ಅದೆಷ್ಟೋ ಗಾಡಿಗಳಲ್ಲಿ ಮನೆಮನೆಗೂ ಸಕ್ಕರೆ ಹಂಚಿದರು. ರಾಜವಂಶದವರಿಗೆ ಮಾತ್ರವಲ್ಲ. ಇಡೀ ರಾಜ್ಯಕ್ಕೆ ಹರ್ಷವಾಗಿತ್ತು.

ಹನ್ನೆರಡನೆಯ ದಿನ ಮಗುವಿನ ನಾಮಕರಣ ಮಹೋತ್ಸವಕ್ಕಾಗಿ ಅರಮನೆಯಲ್ಲಿ ಅತ್ಯಂತ ವೈಭವದಿಂದ ದರಬಾರು ಸೇರಿತು. ಸಂತೋಷ ಸೂಚಕವಾಗಿ ಇಪ್ಪತ್ತೊಂದು ಕುಶಾಲು ತೋಪುಗಳು ಗರ್ಜಿಸಿದವು. ರಾಜಶಿಶುವಿಗೆ “ಜಯಚಾಮರಾಜ ಒಡೆಯರ್” ಎಂಬ ಹೆಸರನ್ನಿಟ್ಟರು. ಬ್ರಿಟಿಷರ ಮಿತ್ರಪಕ್ಷಕ್ಕೆ ಅದೇ ತಾನೇ ಮುಗಿದಿದ್ದ ವಿಶ್ವಸಂಗ್ರಾಮದಲ್ಲಿ ಲಭಿಸಿದ್ದ ವಿಜಯ ಸೂಚಿಸಲು “ಜಯ”, ತಾತನವರಾಗಿದ್ದ ದಿವಂಗತ ಮಹಾರಾಜರ ನೆನಪಿನಲ್ಲಿ “ಚಾಮರಾಜ”, ವಂಶಪಾರಂಪರ್ಯವಾಗಿ ರಾಜತ್ವ ಸೂಚಿಸುತ್ತಿದ್ದ “ಒಡೆಯರು”. ಇವರದು ಯದುವಂಶ ಹದಿಮೂರನೆಯ ಶತಮಾನದಲ್ಲಿ ಮೈಸೂರು ಪ್ರದೇಶಕ್ಕೆ ಬಂದ ಯದುರಾಯರು ಈ ವಂಶದ ಮೂಲ ಪುರುಷರು. ಈ ವಂಶದ ದೊರೆಗಳಲ್ಲಿ ರಾಜ ಒಡೆಯರು, ಚಿಕ್ಕದೇವರಾಜ ಒಡೆಯರು ಮೊದಲಾದ ಅನೇಕರು ಆಸಾಧರಣ ಶೌರ್ಯ ಸಾಹಸಗಳಿಂದಲೂ ಧರ್ಮನಿಷ್ಠೆಯಿಂದಲೂ ಮೆರೆದವರು.

ಇಂಥ ಶ್ರೇಷ್ಠ ವಂಶದಲ್ಲಿ ಜಯರಾಮರಾಜ ಒಡೆಯರು ಇಪ್ಪತ್ತೈದನೆಯವರು.

ಜಯಚಾಮರಾಜರಿಗೆ ಮೂವರು ತಿಂಗಿಯರು ವಿಜಯಲಕ್ಷ್ಮಮ್ಮಣ್ಣಿ, ಸುಜಯಕಾಂತಮ್ಮಣ್ಣಿ, ಜಯಚಾಮುಂಡಮ್ಮಣಿ.

ಹಿರಿಯರ ಪ್ರಭಾವ

ಜಯಚಾಮರಾಜರಿಗೂ ಅವರ ತಂಗಿಯರಿಗೂ ಚಿಕ್ಕಂದಿನಲ್ಲಿ ತಂದೆ ತಾಯಿಯರ ಪ್ರೀತಿಯ ಜೊತೆಗೆ ದೊಡ್ಡಪ್ಪ ದೊಡ್ಡಮ್ಮಂದಿರ ಪ್ರೀತಿ ವಾತ್ಸಲ್ಯಗಳು ಪ್ರತಿದಿನ, ಸದಾಕಾಲ ಲಭಿಸಿದವು. ಆಗಿನ ಮಹಾರಾಜರಾಗಿದ್ದ ದೊಡ್ಡಪ್ಪ ಕೃಷ್ಣರಾಜ ಒಡೆಯರಿಗೆ ಮಕ್ಕಳಿರಲಿಲ್ಲ. ಆದರೆ ಮಕ್ಕಳೆಂದರೆ ಬಲು ಪ್ರೀತಿ. ತಮ್ಮನ ಮಕ್ಕಳಲ್ಲಿ ಅವರು ತೋರುತ್ತಿದ್ದ ಮಮತೆ ಅಮಿತವಾಗಿತ್ತು ಬಿಡುವಾದಾಗಲೆಲ್ಲ ಆ ಮಕ್ಕಳನ್ನು ಎತ್ತಿಕೊಂಡು ಆಡಿಸುತ್ತಿದ್ದರು.

ಕೃಷ್ಣರಾಜ ಒಡೆಯರು, ಜಯಚಾಮರಾಜ ಒಡೆಯರು, ಕಂಠೀರವ ನರಸರಾಜ ಒಡೆಯರು

ಜಯಚಾಮರಾಜರ ಅಪ್ಪ – ದೊಡ್ಡಪ್ಪಂದಿರಿಬ್ಬರೂ ಬಾಲ್ಯದಿಂದಲೂ ಒಪ್ಪವಾದ ವಿದ್ಯಾಭ್ಯಾಸ ಪಡೆದ ಸುಸಂಸ್ಕೃತ ಮನಸ್ಸನ್ನೂ, ಉದಾರ ಹೃದಯವನ್ನೂ ಹೊಂದಿದ್ದ ಉದಾತ್ತ ವ್ಯಕ್ತಿಗಳು. ನುರಿತ ಉಪಾಧ್ಯಾಯರಿಂದ ಕನ್ನಡ, ಸಂಸ್ಕೃತ, ಉರ್ದು, ಇಂಗ್ಲಿಷ್‌, ಚರಿತ್ರೆ, ವಿಜ್ಞಾನ, ಗಣಿತ ಮುಂತಾದ ವಿಷಯಗಳನ್ನೂ ಚಿತ್ರಲೇಖನ ಮುಂತಾದ ಲಲಿತ ಕಲೆಗಳನ್ನೂ ಕಲಿತರು. ಕುದುರೆ ಸವಾರಿ, ಶಸ್ತ್ರಾಸ್ತ್ರ ಪ್ರಯೋಗ, ಸಂಗೀತ ಮುಂತಾದವನ್ನೂ ಕೃಷ್ಣರಾಜರು ಕಲಿತಿದ್ದರು. ಇದೇ ರೀತಿ ಅರಮನೆಯ ರಾಯಲ್ ಹೈಸ್ಕೂಲ್‌ನಲ್ಲೇ ಯುವರಾಜ ಕಂಠೀರವ ನರಸಿಂಹರಾಜ ಒಡೆಯರು ಕಲಿತು ಬಹು ಪಾರಂಗತರೇ ಆಗಿದ್ದರು. ಆಡಳಿತ ವಿಷಯಗಳಲ್ಲೂ ಕೆಳಗಿಂದ ಮೇಲಿನವರೆಗಿನ ಎಲ್ಲ ಕಛೇರಿಗಳಲ್ಲೂ ನಡೆಯುತ್ತಿದ್ದ ಕೆಲಸ ಕಾರ್ಯಗಳ ವಿವರಗಳನ್ನೆಲ್ಲ ತಕ್ಕ ತರಬೇತಿನಿಂದಾಗಿ ಇಬ್ಬರೂ ಚೆನ್ನಾಗಿ ತಿಳಿದಿದ್ದರು. ತಂದೆ ಮತ್ತು ದೊಡಪ್ಪಂದಿರಲ್ಲಿದ್ದ ವಿಶಾಲವಾದ ವಿಷಯದ ಜ್ಞಾನ, ವಿಸ್ತಾರವಾದ ಅನುಭವ ಮತ್ತು ಸ್ವಭಾವದ ಉದಾರತೆಯ ಪ್ರಯೋಜನ ಜಯಚಾಮರಾಜರಿಗೆ ಬಾಲ್ಯದಿಂದಲೂ ಲಭಿಸಿತು.

ಶಾಸ್ತ್ರವಿಧಿಗಳಲ್ಲಿ, ಸಂಪ್ರದಾಯಗಳಲ್ಲಿ ಹೆಚ್ಚಿನ ನಿಷ್ಠೆಯಿಟ್ಟುಕೊಂಡಿದ್ದ ಕೆಂಪು ಚೆಲುವುರಾಜಮ್ಮಣ್ಣಿಯವರು ಸಹನೆ ತುಂಬಿದ್ದ ವಿಶಾಲ ಹೃದಯದ ತಾಯಿ. ಯಾರಿಂದಲಾದರೂ ಅಸಮಾಧಾನ ಉಂಟಾದರೂ ಕೋಪಕ್ಕೆ ಎಡೆ ಕೊಡಬಾರದೆಂದು ಮಗನ ಮನಸ್ಸಿನಲ್ಲಿ ಬಿತ್ತಿದರು. ಜಯಚಾಮರಾಜರಿಗೆ ತಾಯಿಯ ಮೇಲೆ ಭಕ್ತಿ, ಪ್ರೀತಿಗಳು ಅಪಾರ. ತಾಯಿಗೆ ನಮಸ್ಕರಿಸಿ ಆಶೀರ್ವಾದ ಪಡೆಯದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ.

ಐದು ವರ್ಷ ವಯಸ್ಸಿನಲ್ಲೇ ಸ್ಫುಟವಾಗಿ ಇಂಗ್ಲೀಷ್‌ನಲ್ಲಿ ಮಾತನಾಡುತ್ತಿದ್ದ ಜಯಚಾಮರಾಜರು ಅಪ್ಪ ದೊಡ್ಡಪ್ಪಂದಿರಂತೆಯೇ ಅರಮನೆಯ ರಾಯಲ್‌ಸ್ಕೂಲಿಗೆ ಸೇರಿದರು. ಸಂಪ್ರದಾಯಸ್ಥರೂ ಅತಿದಕ್ಷರೂ ಆ ಅಧ್ಯಾಪಕರಿಂದ ಅತ್ಯುತ್ತಮ ಶಿಕ್ಷಣ ದೊರೆಯಿತು. ಇಂಗ್ಲೀಷ್‌, ಕನ್ನಡ, ಚರಿತ್ರೆ, ಗಣಿತ, ವಿಜ್ಞಾನ ಮುಂತಾದ ವಿಷಯಗಳನ್ನು ಮನಸ್ಸಿಟು ಅಭ್ಯಾಸ ಮಾಡಿ ಶ್ರೇಷ್ಠ ವಿದ್ಯಾರ್ಥಿಯೆನಿಸಿದರು.

ಶಿಸ್ತಿನ ಬಾಲಕ

ಎಳೆಯ ವಯಸ್ಸಿನಿಂದಲೇ ಅವರು ತಮ್ಮ ಎಲ್ಲ ದೈನಂದಿನ ಕಾರ್ಯಕಲಾಪಗಳನ್ನು ನಿಗದಿ ವೇಳೆಗೆ ಸರಿಯಾಗಿ ಮಾಡುವುದನ್ನು ಕಲಿತರು. ಆರೋಗ್ಯ ಸೂತ್ರಕ್ಕೆ ಅನುಗುಣವಾಗಿ ಬೆಳಗ್ಗೆ ಐದು ಗಂಟೆಗೆ ಉಷಃಕಾಲದಲ್ಲಿ ಏಳುವರು. ಎದ್ದು ಸಂಗೀತ ಪಾಠ, ಹಿಂದೀ ಅಭ್ಯಾಸ, ಕುದುರೆ ಸವಾರಿ ಮುಂತಾದವುವನ್ನು ಮುಗಿಸುವರ. ಇತರ ವಿಷಯಗಳಲ್ಲಿ ಉಪಾಧ್ಯಾಯರು ವಿಧಿಸಿದ್ದ “ಮನೆಗೆಲಸ” ಪೂರ್ಣಗೊಳಿಸುವರು. ಆಮೇಲೆ ಶಾಲೆ. ಶಾಲೆಗೆಂದೂ ಹೊತ್ತುಮೀರಿ ಹೋದವರಲ್ಲ. ಅವರ ಬುದ್ಧಿಸಂಪನ್ನತೆ, ಅಸಾಧಾರಣ ಜ್ಞಾಪಕಶಕ್ತಿ, ಏಕಮನಸ್ಕತೆ, ಶ್ರದ್ಧೆ, ವಧೇಯತೆಗಳಿಂದಾಗಿ ಅವರು ತಮ್ಮ ಎಲ್ಲ ಅಧ್ಯಾಪಕರಿಗೂ ಇತರರಿಗೂ ತುಂಬ ಅಚ್ಚುಮೆಚ್ಚೆನಿಸಿದರು.

೧೯೩೦ ರಿಂದ ಆರು ವರ್ಷಗಳ ಕಾಲ ಅವರ ಮುಖ್ಯೋಪಾಧ್ಯಾಯರು ಜೆ.ಟಿ. ಟರ್ನರ್ ಎಂಬ ದಕ್ಷ ಆಂಗ್ಲ ಮಹನೀಯರು. ಅವರ ಯಾವೊಂದು ಒಳ್ಳೆಯ ಹೊಸ ಪುಸ್ತಕ ಪ್ರಕಟಿತವಾದರೂ ಅದರ ಪ್ರತಿ ರಾಜಕುಮಾರರ ಪುಸ್ತಕ ಭಂಡಾರಕ್ಕೆ ಕೂಡಲೇ ಬರುವಂತೆ ಏರ್ಪಾಡು ಮಾಡುತ್ತಿದ್ದರು.

ಹನ್ನೆರಡು ವರ್ಷ ವಯಸ್ಸಾದಾಗ ೧೯೩೧ ರಲ್ಲಿ ಜಯರಾಮರಾಜರಿಗೆ ವೇದೋಕ್ತವಾಗಿ ಉಪನಯನವಾಯಿತು.

ಎಲ್ಲ ವಿದ್ಯಾರ್ಥಿಗಳೊಡನೆ

ತಂದೆ ಮತ್ತು ದೊಡ್ಡಪ್ಪನವರ ವಿಶಾಲ ದೃಷ್ಟಿಯ ಪರಿಣಾಮವಾಗಿ ಜಯಚಾಮರಾಜರು ಇತರ ವಿದ್ಯಾರ್ಥಿಗಳ ಜೊತೆಗೆ ಸೇರಿ ವ್ಯಾಸಂಗ ಮಾಡುವಂತೆ ಮೈಸೂರಿನಲ್ಲಿ ಮೊದಲು ಇಂಟರ್‌ಮೀಡಿಯೆಟ್‌ಕಾಲೇಜಿಗೆ ಸೇರಿದರು. (ಅನಂತರ ಅದಕ್ಕೆ ಯುವರಾಜಾ ಕಾಲೇಜೆಂದು ಹೆಸರಾಯಿತು) ಈ ಶತಮಾನ ಸಾಮಾನ್ಯ ಪ್ರಜೆಯ ಉನ್ನತಿಯ ಯುಗವೆಂಬುದನ್ನೂ ಪ್ರಜಾಸತ್ತೆ  ಸದ್ಯದ ಯುಗಧರ್ಮವೆಂಬುದನ್ನೂ ಕೃಷ್ಣರಾಜ ಒಡೆಯರು ಆಗಲೇ ಮನಗಂಡಿದ್ದಿರಬೇಕು. ಮೈಸೂರುನ ಭಾವೀ ಮಹಾರಾಜನಿಗೆ ಅಚ್ಚ ಮೈಸೂರಿನ ಶಿಕ್ಷಣವೇ ಇರಲೆಂದು ಅವರ ಭಾವನೆ. ಕಾಲೇಜಿನಲ್ಲಿ ಇತರ ವಿದ್ಯಾರ್ಥಿಗಳು ಕೊಡುತ್ತಿದ್ದ ತರಗತಿಗಳಲ್ಲೇ ಈ ರಾಜಕುಮಾರರೂ ಕುಳಿತು ಅವರೆಲ್ಲರೊಡನೆ ಬೆರೆತು, ಅದೇ ಪಾಠವನ್ನು ಕೇಳಿ, ಪ್ರೌಢ ವಿದ್ಯಾರ್ಜನೆ ಮಾಡಿದರು. ಈ ಕಾಲೇಜಿನಲ್ಲೂ ಅನಂತರ ಮಹಾರಾಜ ಕಾಲೇಜಿನಲ್ಲೂ ಓದಿದ ನಾಲ್ಕು ವರ್ಷಗಳಲ್ಲಿ ತಮ್ಮೆಲ್ಲ ಅಧ್ಯಾಪಕರ ಬಗೆಗೆ ಮತ್ತು ಇತರ ವಿದ್ಯಾರ್ಥಿ ಸಹಪಾಠಿಗಳ ಬಗೆಗೆ, ಜಯಚಾಮರಾಜರ ಸ್ನೇಹ ಗೌರವಗಳ ವರ್ತನೆ ಆದರ್ಶಪ್ರಾಯವಾಗಿತ್ತು. ಯುವ ವಯಸ್ಸಿನವರಾದ ಅವರ ಮಾಟವಾದ ಮೈಕಟ್ಟು, ಕಳೆತುಂಬಿದ ಲಕ್ಷಣವಾದ ಹಸನ್ಮುಖ, ಅವುಗಳಿಗೆ ಒಪ್ಪವಿಟ್ಟಂತೆ ಅವರ ಕುಶಾಗ್ರಮತಿ ಮತ್ತು ಸದ್ಗುಣಗಳನ್ನು ಮೆಚ್ಚದವರೇ ಇರಲಿಲ್ಲ.

ಘನತೆ

ರಾಜವಂಶದವರಾಗಿ ಯೌವನದಲ್ಲಿದ್ದಾಗಲೂ ಅವರು ಕಾಲೇಜಿನ ದಿನಗಳಲ್ಲಿ ಎಂದೂ ಎಳ್ಳಷ್ಟಾದರೂ ಅಹಂಕಾರವನ್ನಾಗಲೀ, ಕೋಪವನ್ನಾಗಲೀ ತೋರಿಸಿದವರಲ್ಲ. ಕಾಲೇಜಿನಲ್ಲಿ ಎಷ್ಟೋ ವೇಳೆ ಕೆಲವು ವಿದ್ಯಾರ್ಥಿಗಳು ತಮ್ಮ ವಯಸ್ಸಿಗೆ ಸಹಜವಾಗಿ ಕೆಲವು ರೀತಿಗಳಲ್ಲಿ ಪರಿಹಾಸ ಮಾಡಲೆತ್ನಿಸತ್ತಿದ್ದರು. ಒಡೆಯರು ಎದುರಾಗಿ ಬರುತ್ತಿರುವಾಗ, ಹತ್ತಿರವಾಗುವವರೆಗೂ ಸುಮ್ಮನಿದ್ದು, ಆಗ ಥಟ್ಟನೆ ಕೈಯೆತ್ತುವರು. ನಮಸ್ಕಾರಕ್ಕಾಗಿ ಎಂದು ಭಾವಿಸಿ, ಜಯಚಾಮರಾಜರು ತಮ್ಮ ಎರಡೂ ಕೈಗಳನ್ನೆತ್ತಿ ರಾಜಗಾಂಭೀರ್ಯದಿಂದ ನಮಸ್ಕಾರ ಮಾಡುವರು. ಆದರೆ ಎದುರಿನಲ್ಲಿದ್ದ ಸಹಪಾಠಿ, ನಮಸ್ಕರಿಸದೆ, ಕೈಯಿಂದ ಸುಮ್ಮನೆ ಹಣೆಯನ್ನೋ ತಲೆಯನ್ನೋ ಕೆರೆದುಕೊಳ್ಳುವನು. ಜೊತೆಗೆ ಚೇಷ್ಟೆಯ ನಗು ಬೇರೆ. ಅದು ಬೇಕೆಂದೇ ಮಾಡುವ ಕೆಲಸ. ಆದರೂ ಒಡೆಯರಲ್ಲಿ ಕೋಪವೇ ಇಲ್ಲ, ಮುಗುಳ್ನಕ್ಕು ಮುಂದೆ ಸಾಗುವರು.

ಅನೇಕ ಸಲ ಯಾವುದಾದರೂ ಸಮಾರಂಭಗಳಿಗಾಗಿ ಅಥವಾ ಇತರ ಉದ್ದೇಶಗಳಿಗಾಗಿ ವಿದ್ಯಾರ್ಥಿಗಳಿಂದ ಚಂದಾ ಕೂಡಿಸುವ ಪಟ್ಟಿ ಬರುತ್ತಿತ್ತು. ತಮ್ಮ ಹೆಸರು ಮೊದಲು ಪಟ್ಟಿಯಲ್ಲಿ ಕಾಣಿಸಿದರೂ ತಾವೇ ಮೊದಲು ಹೆಚ್ಚು ಮೊತ್ತವನ್ನು ಬರೆದರೆ, ಬೇರೆ ಸಹಪಾಠಿಗಳಿಗೆ ಇಲ್ಲಿ ಸಂಕೋಚವಾದೀತೋ ಎಂದು ಜಯಚಾಮರಾಜರಿಗೆ ಒಂದು ತೆರನಾದ ಸಂಕೋಚ, ಶಂಕೆ, ಅವರ ಸ್ವಭಾವವೇ ಅಷ್ಟು ನಯ, ನವಿರು, ಪಟ್ಟಿಯನ್ನುಜ ಕಡೆಯಲ್ಲಿ ಕೊಡಿರಿ ಎಂದು ಕೇಳಿ, ಅದು ಬಂದಾಗ ಆ ಉದ್ದೇಶಕ್ಕೆ ಇನ್ನೂ ಸೇರಬೇಕಾಗಿದ್ದ ಹಣವಷ್ಟನ್ನೂ ತಾವೂ ಕೊಟ್ಟುಬಿಡುತ್ತಿದ್ದರು.

ಪ್ರತಿಭಾವಂತ ವಿದ್ಯಾರ್ಥಿ

ಅವರು ಕಾಲೇಜಿನಲ್ಲಿ ಉನ್ನತ ಜ್ಞಾನಕ್ಕಾಗಿ ಕಲಿತ ವಿಷಯಗಳೆಂದರೆ ಕನ್ನಡ ಮತ್ತು ಇಂಗ್ಲೀಷ್‌ಭಾಷೆಗಳು: ಮತ್ತು ಐಚ್ಛಿಕ ವಿಷಯವಾಗಿ ಇತಿಹಾಸ, ರಾಜನೀತಿ ಶಾಸ್ತ್ರ ಹಾಗೂ ಅರ್ಥಶಾಸ್ತ್ರ, ರಾಜ್ಯಭಾರ ನಡೆಸಲು ಕೇವಲ ಉಪಯುಕ್ತವಾದವುಗಳೇ ಈ ಐಚ್ಛಿಕ ವಿಷಯಗಳು. ಯಾವುದೇ ವಿಷಯವನ್ನು ಅವರು ವ್ಯಾಸಂಗ ಮಾಡುತ್ತಿದ್ದ ರೀತಿಯೇ ವಿಶಿಷ್ಟ. ಕೇವಲ ಪರೀಕ್ಷೆಗಾಗಿ ಎಂದು ಅವರು ಓದುತ್ತಿರಲಿಲ್ಲ. ಪಾಠದಲ್ಲಿ ಯಾವೊಂದು ಅಂಶ ಪ್ರಸ್ತಾಪವಾಯಿತೆಂದರೆ, ಅದರ ಬಗ್ಗೆ ದೊರಕುವ ಇತರೆಲ್ಲ ಪ್ರೌಢಗ್ರಂಥಗಳನ್ನೂ ತರಿಸಿ ಓದುತ್ತಿದ್ದರು. ಚರಿತ್ರೆ ಪಾಠದಲ್ಲಿ “ಒಂದು ಯುದ್ಧವಾಯಿತು” ಎಂಬ ಪ್ರಸ್ತಾಪ ಬಂದರೆ “ಆ ಯುದ್ಧ ಏನಾಯಿತು? ಇಂತಹ ಯುದ್ಧಗಳೇಕೆ ನಡೆಯುತ್ತವೆ? ವಿಶ್ವದಲ್ಲಿ ಶಾಶ್ವತವಾದ ಶಾಂತಿ ನೆಲೆಸುವ ಬಗೆ ಹೇಗೆ? ಎಂದೆಲ್ಲ ಕೇಳುವುದು ಅವರ ಮನಸ್ಸು. ಎಲ್ಲ ವಿಷಯಗಳನ್ನು ತೀಕ್ಷಣವಾಗಿ ಅವಲೋಚಿಸಿ, ಅವೆಲ್ಲದರ ಒಳ ಹೊರಗುಗಳನ್ನೆಲ್ಲ ತಿಳಿಯಬಯಸುವ ಅಪೇಕ್ಷೆ ಅವರ ಮನಸ್ಸಿನ ತುಂಬ.

ಜಯಚಾಮರಾಜರ ಬುದ್ಧಿಶಕ್ತಿ ಮತ್ತು ಮನೋಧರ್ಮಕ್ಕೆ ತಕ್ಕಂತೆ ಅವರಿಗೆ ಉತ್ಕೃಷ್ಟ ಅಧ್ಯಾಪಕರ ಮತ್ತು ಉದ್ದಾಮ ಪಂಡಿತರ ಬೋಧನೆ ಲಭಿಸಿತು.

ಹೀಗೆ ವ್ಯಾಸಂಗ ಮಾಡಿದವರು ೧೯೩೮ರಲ್ಲಿ ಸಹಜವಾಗಿಯೇ ಉತ್ತಮ ಶ್ರೇಣಿಯಲ್ಲಿ ಪ್ರಥಮ ಸ್ಥನ ಪಡೆದು ಬಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರು ಆರಿಸಿಕೊಂಡಿದ್ದ ಐಚ್ಛಿಕ ವಿಷಯಗಳಾದ ಇತಿಹಾಸ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳಿಗೆ ಸಂಬಂಧಿಸಿದಂತೆ ಐದು ಚಿನ್ನದ ಪದಕಗಳನ್ನು ಆ ವರ್ಷದ ಪದವಿ ದಾನ ಸಮಾರಂಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯವರಾಗಿದ್ದ ತಮ್ಮ ದೊಡ್ಡಪ್ಪ ಕೃಷ್ಣರಾಜ ಒಡೆಯರ ಅವರ ಕೈಯಿಂದ ಪಡೆದರು.

ಆಗಿನ ರಾಜಪುತ್ರಸ್ಥಾನದ ಚರಖಾರಿ ಸಂಸ್ಥಾನದ ಮಹಾರಾಜರ ಸಹೋದರಿ ರಾಜಕುಮಾರಿ ಸತ್ಯಪ್ರೇಮ ಕುಮಾರಿ ದೇವಿಯರೊಡನೆ ಜಯಚಾಮರಾಜ ಒಡೆಯರ ವಿವಾಹ ಮಹೋತ್ಸವ ೧೯೩೮ ರ ಮೇ ೧೫ ರಂದು ವೈಭವದಿಂದ ಮೈಸೂರಿನ ಅರಮನೆಯಲ್ಲಿ ನಡೆಯಿತು.

ಪ್ರವಾಸಗಳು

ನಾಲ್ಕಾರು ಕಡೆ ಸಂಚರಿಸದೆ ಯಾರೊಬ್ಬರ ವಿದ್ಯಾಭ್ಯಾಸ ಸಂಪೂರ್ಣ ಎನ್ನಿಸುವುದಿಲ್ಲ. ಜಯಚಾಮರಾಜರು ಬಿ.ಎ ತರಗತಿಯಲ್ಲಿ ಓದುತ್ತಿರುವಾಗಲೇ ಅವರಿಗೆ ವಿದೇಶ ಪ್ರವಾಸದ ಅನುಭವ ಮತ್ತು ಲಾಭ ದೊರಕಿದವು. ಜಯಚಾಮರಾಜರ ಶಿಕ್ಷಣವನ್ನು ಪ್ರತ್ಯಕ್ಷವಾಗಿ ಮೇಲ್ವಿಚಾರಣೆಯಲ್ಲಿಟ್ಟುಕೊಂಡಿದ್ದ ದೊಡ್ಡಪ್ಪನವರಾದ ಮಹಾರಾಜ ಕೃಷ್ಣರಾಜ ಒಡೆಯರೂ ತಂದೆಯರಾದ ಕಂಠೀರವ ನರಸಿಂಹರಾಜ ಒಡೆಯರೂ ಅಲೋಚಿಸಿ ೧೯೩೭ ರಲ್ಲಿ ಅವರಿಗಾಗಿ ಜಪಾನ್‌ದೇಶದ ಪ್ರವಾಸವನ್ನು ಏರ್ಪಡಿಸಿದರು. ಜಯಚಾಮರಾಜರು ಜಪಾನಿನ ಪ್ರೇಕ್ಷಣೀಯ ಸ್ಥಳಗಳಿಗೆಲ್ಲ ಭೇಟಿ ಕೊಟ್ಟರು. ಮುಖ್ಯವಾದ ವಸ್ತು ಪ್ರದರ್ಶನಾಲಯಗಳಿಗೂ ತೆರಳಿ, ಪುರಾತನ, ಇತಿಹಾಸ, ಆಧುನಿಕ ಕೈಗಾರಿಕೆ ಇವುಗಳ ಬಗೆಗೆ ತಿಳುವಳಿಕೆ ಹೆಚ್ಚಿಸಿಕೊಂಡರು.

ಕೃಷ್ಣರಾಜ ಒಡೆಯರು ೧೯೩೬ ರಲ್ಲಿ ಬ್ರಿಟಿನ್‌, ಜರ್ಮನಿ, ಹಂಗೇರಿ ಮತ್ತು ಸ್ವಿಟ್ಜರ್‌ಲೆಂಡ್‌ದೇಶಗಳಿಗೆ ಭೇಟಿ ಕೊಟ್ಟು ಹಿಂದಿರುಗಿದಾಗ ಅವರನ್ನು ಸ್ವಾಗತಿಸಲು ಜಯಚಾಮರಾಜ ಒಡೆಯರ್ ಅವರೂ ಮುಂಬಯಿ ನಗರಕ್ಕೆ ತೆರಳಿದ್ದರು. ಆಗ ಅವರಿಗೆ ಮೊಟ್ಟಮೊದಲು ಮಹಾನಗರವೊಂದರ ಪರಿಚಯವಾಯಿತು. ಮೈಸೂರು ಸಂಸ್ಥಾನದಿಂದ ತೆರಳಿ ಮುಂಬೈಯಂತಹ ದೂರದ ನಗರದಲ್ಲಿ ನೆಲಸಿದ್ದ ಪ್ರಜೆಗಳು ತಮ್ಮ ಮಹಾರಾಜರಲ್ಲಿ ಇಟ್ಟಿದ್ದ ಅಪಾರ ಭಕ್ತಿ, ಗೌರವ, ಪ್ರೀತಿಗಳನ್ನು ಜಯಚಾಮರಾಜರು ಅರಿತರು. ದೊಡ್ಡಪ್ಪನವರು ವಿದೇಶ ಸಂಚಾರದಲ್ಲಿ ಪಡೆದ ಅನುಭವಗಳೂ ಅಲ್ಲಿ ಬಂದ ಮೇಲೆ ಕೈಗೊಂಡ ಅಭಿವೃದ್ಧಿ ಕ್ರಮಗಳೂ ಅವರ ಮೇಲೆ ಪ್ರಭಾವ ಬೀರಿದವು.

ಜಯಚಾಮರಾಜರು ಈ ಮಧ್ಯೆ ಸಂಸ್ಥಾನದ ಕೆಲವು ಸ್ಥಳಗಳಲ್ಲೂ ಸಂಚರಿದ್ದರು. ೧೯೪೦ರ ಫೆಬ್ರುವರಿ ತಿಂಗಳಲ್ಲಿ ಕೃಷ್ಣರಾಜ ಒಡೆಯರ್ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಚಾರ ಕೈಗೊಂಡಾಗ ತಮ್ಮ ಜೊತೆಯಲ್ಲಿ ಜಯಚಾಮರಾಜರನ್ನೂ ಕರೆದುಕೊಂಡು ಹೋಗಿದ್ದರು. ಮಹಾರಾಜರನ್ನು ನೋಡಲು ಕೊಲ್ಲಾಪುರ, ಸಾಂಗ್ಲಿ, ಕಾರವಾರ, ರಾಣಿಬೆನ್ನೂರು, ಹುಬ್ಬಳ್ಳಿ, ಮುಂತಾದ ದೂರದ ಊರುಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಬಂದು, ದಾವಣಗೆರೆ ಲಕ್ಷಾಂತರ ಜನರಿಂದ ಬಿರಿದು ಹೋಗುವಂತಿತ್ತು. ಮಾರನೆಯ ದಿನ ರಾಜ ಪರಿವಾರ ಚಿತ್ರದುರ್ಗಕ್ಕೆ ಭೇಟಿ ನೀಡಿತು. ಅನಂತರ ಅವರುಗಳು ಹಾಸನ ಜಿಲ್ಲೆಯಲ್ಲಿ ಪ್ರಸಿದ್ಧ ಜೈನ ಯಾತ್ರಾ ಸ್ಥಳವಾದ ಶ್ರವಣಬೆಳಗೊಳಕ್ಕೆ ತೆರಳಿ ಗೋಮಟೇಶ್ವರ ಸ್ವಾಮಿಯ ಮಹಾಮಸ್ತಕಾಭಿಷೇಕವನ್ನು ನೋಡಿ ಜೈನ ಸಮ್ಮೇಳನದಲ್ಲಿ ಭಾಗವಹಿಸಿದರು. ೧೯೪೦ ರ ಜೂನ್‌ತಿಂಗಳಲ್ಲಿ ಜಯಚಾಮರಾಜರು ದೊಡ್ಡಪ್ಪನವರೊಡನೆ ಬೆಂಗಳೂರಿಗೆ ಬಂದು ಕನ್ನಡ ಸಾಹಿತ್ಯ ಪರಿಷತ್ತಿನ ರಜತ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಈ ಸ್ಥಳಗಳಲ್ಲೂ ಹಾದಿಯಲ್ಲಿ ಸಿಕ್ಕಿದ ನೂರಾರು ಸಣ್ಣ ದೊಡ್ಡ ಹಳ್ಳಿ ಪಟ್ಟಣಗಳಲ್ಲೂ ಅಧಿಕ ಸಂಖ್ಯೆಗಳಲ್ಲಿ ಜನರು ಸೇರಿ ಶ್ರೀಮನ್ಮಹಾರಾಜರಿಗೆ ತೋರಿಸುತ್ತಿದ್ದ ರಾಜಭಕ್ತಿ, ಅಪಾರ ಗೌರವ ಪ್ರೀತಿಗಳು ಜಯಚಾಮರಾಜರ ಮೇಲೆ ಪರಿಣಾಮ ಬೀರಿಯೇ ಇರಬೇಕು. ಅಂತಹ ಮಧುರ ಸಂಬಂಧವಿರಲು ರಾಜರಾದವರ ನಡತೆಯ ಘನತೆ, ಜನಸಾಮಾನ್ಯರನ್ನು ತಮ್ಮ ಮಕ್ಕಳಂತೆ ಕಾಪಾಡಬೇಕಾದ ಅಗತ್ಯ, ಉತ್ತಮ ಆಡತಳಿತವನ್ನು, ಪ್ರಜಾನುಕೂಲತೆಗಳನ್ನು ಕಾರ್ಯಗತ ಮಾಡುವುದರ ಅಗತ್ಯ ಮುಂತಾದ ಅಂಶಗಳು ಅವರ ಪ್ರಬುದ್ಧ ಮನಸ್ಸಿಗೆ ಮನವರಿಕೆಯಾಗದೆ ಇರಲಾರದು. ಮುಂದೆ ಮೈಸೂರು ಸಂಸ್ಥಾನದ ಉತ್ತಮ ಪ್ರಭುವಾಗಿರಲು ಇವೆಲ್ಲ ಅವರ ಮನಸ್ಸನ್ನು ಹದಮಾಡಿ ಅಣಿಗೊಳಿಸಿದವು.

ಮಹಾರಾಜ ಜಯಚಾಮರಾಜ ಒಡೆಯರು

 

ಕೇವಲ ಸುಖ ಸಮಾಧಾನಗಳಲ್ಲೇ ಯಾರೂ ಮನುಷ್ಯರಾಗಿ ಕಾಲ ಕಳೆಯುವಂತಿಲ್ಲ. ನೋವು ನಿಟ್ಟಉಸಿರುಗಳು ಯಾರಿಗೂ ತಪ್ಪಿದ್ದಲ್ಲ. ಆದರೆ ಅವುಗಳಿಂದಲೂ ಮನಸ್ಸಿಗೆ ಒಂದು ರೀತಿಯ ಸಂಸ್ಕಾರ ಉಂಟು. ಮನಸ್ಸಿಗೆ ಪರಿಪಕ್ವತೆ ಬರಬೇಕಾದರೆ ಅಂತಹ ಅನುಭವವೂ ಅನಿವಾರ್ಯ. ಜಯಚಾಮರಾಜರ ತಂದೆ ಕಂಠೀರವ ನರಸಿಂಹರಾಜ ಒಡೆಯರು ೧೯೪೦ ರ ಮಾರ್ಚ ತಿಂಗಳಲ್ಲಿ ಮುಂಬಿಯಿಯಲ್ಲಿ ತೀರಿಕೊಂಡರು. ಇಪ್ಪತ್ತೊಂದು ವರ್ಷದ ರಾಜಕುಮಾರನಿಗೆ ಇದೊಂದು ದೊಡ್ಡ ಅಘಾತ.

ಕೆಲವೇ ದಿನಗಳ ನಂತರ ೧೯೪೦ರ ಮಾರ್ಚ ೨೮ ರಂದು ಜಯಚಾಮರಾಜರಿಗೆ ಯುವರಾಜ ಪದವಿ ಕೊಡಲಾಯಿತು. ರಾಜ್ಯದ ಪ್ರಜೆಗಳು ಸಂತೋಷಪಟ್ಟರು.

ಜಯಚಾಮರಾಜರಿಗೆ ಇನ್ನೂ ಒಂದು ತೀಕ್ಷಣವಾದ ಅಗಲಿಕೆ ಕಾದಿತ್ತು. ದೊಡ್ಡಪ್ಪನವರಾದ ಮಹಾರಾಜ ಕೃಷ್ಣರಾಜ ಒಡೆಯರು ಬೆಂಗಳೂರಿನಲ್ಲಿದ್ದಾಗ, ೧೯೪೦ ರ ಆಗಷ್ಟ್‌ತಿಂಗಳಿನಲ್ಲಿ ಮೃತಪಟ್ಟರು. ಸಾವಿರಾರು ಜನ ಅರಮನೆಗೆ ತೆರಳಿ ಕಣ್ಣೀರು ಕಾಣಿಕೆ ಕೊಟ್ಟರು. ಅಸಂಖ್ಯಾತ ಪ್ರಜೆಗಳು ತಂದೆಯನ್ನು ಅಗಲಿದ ಮಕ್ಕಳಂತೆ ಗೋಳಿಟ್ಟರು.

ಜಯಚಮರಾಜರ ಮನಸ್ಸು ಆರೇ ತಿಂಗಳುಗಳಲ್ಲಿ ಬಂದೆರಗಿದ ಎರಡು ವಿಯೋಗಗಳಿಂದ ಅತಿ ವಿಹ್ವಲವಾಗಿತ್ತು. ಕಲಕಿಹೋಗಿತ್ತು. ದುಃಖದಿಂದ ಮನಸ್ಸಿಗೆ ಪಕ್ವತೆ ಬರುವುದೆಂದು ಹೇಳುತ್ತಾರೆ. ಈ ಶೋಕ, ಈ ಜನಪ್ರಿಯತೆ ಅನುಭವ ಜಯಚಾಮರಾಜರ ಮನಸ್ಸಿಗೆ ಪುಟವಿಕ್ಕಿದವು. ಪ್ರಜೆಗಳ ಪ್ರೀತಿಯ ಮಹೋನ್ನತ ಬಾಳಿನ ಸ್ಪಷ್ಟ ನೋಟವನ್ನು ಅವರು ಕಂಡಿದ್ದರು.

೧೯೪೦ ರ ಸೆಪ್ಟೆಂಬರ್ ೮ ರಂದು, ಅಂದರೆ ವಿಕ್ರಮ ಸಂವತ್ಸರದ ಭಾದ್ರಪದ ಶುದ್ಧ ಸಪ್ತಮಿಯೆಂದು ಜಯಚಾಮರಾಜ ಒಡೆಯರಿಗೆ ಪಟ್ಟಾಭಷೇಕವಾಯಿತು. ಮೈಸೂರು ನಗರವೆಲ್ಲ ಬಣ್ಣಬಣ್ಣದ ಕಮಾನು ಭಾವುಟಗಳಿಂದ ಅಲಂಕೃತವಾಗಿತ್ತು. ಅರಮನೆಯ ಮುಂದೂ ಹೊರಗೂ ದಟ್ಟವಾದ ಜನಸಂದಣಿ, ಪೊಲೀಸ್‌ಮತ್ತು ಸೇನಾ ಪಡೆಗಳು, ಸಾಲುಸಾಲಾಗಿ ಅಲಂಕೃತ ಆನೆ ಕುದುರೆಗಳು, ಬೆಳಗಿನ ಜಾವದಲ್ಲೇ ಜಯಚಾಮರಾಜರಿಗೂ ಸತ್ಯಪ್ರೇಮಾ ದೇವಿಯವರಿಗೂ ಮಂಗಳವಾದ್ಯಗಳೊಡನೆ ಎಣ್ಣೆಶಾಸ್ತ್ರ, ಭಾರತದ ಎಲ್ಲ ಮುಖ್ಯ ನದಿಗಳಿಂದ ಬಂದ ಜಲದಿಮದ ತೀರ್ಥಸ್ನಾನ, ಅರಮನೆ ಬತೇರಿಯಿಂದ ಇಪ್ಪತ್ತೊಂದು ಕುಶಾಲು ತೋಪುಗಳು. ಜಯಚಾಮರಾಜರು ಯಜ್ಞೇಶ್ವರನಿಗೆ ಮಣಿದು ಕುಳಿತಾಗ ಅವರ ಶಿರಸ್ಸಿನ ಮೆಲೆ ನವರತ್ನಖಚಿತವಾದ ಬಂಗಾರದುಂಗುರ ಹಿಡಿದು ಮಾರ್ಜನಮಾಡಿ ಪಟ್ಟಾಬಿಷೇಕ ನಡೆಯಿತು. ಅವರಿಗೂ ಮಹಾರಾಣಿ ಸತ್ಯಪ್ರೇಮದೇವಿಯವರಿಗೂ ಹಣೆಯ ಮೇಲೆ ಸುವರ್ಣದ ಪಟ್ಟಿಕಟ್ಟಿ ಪಟ್ಟಬಂಧನವಾಯಿತು. ಯಥೇಚ್ಛವಾಗಿ ಬಂಗಾರದ ಮತ್ತು ಹಣದ ದಾನಗಳಾದವು. ವಿಜಯನಗರ ಸಾಮ್ರಾಜ್ಯದಿಂದ ಲಭ್ಯವಾದ ಸಿಂಹಾಸನಕ್ಕೆ ಪೂಜೆ ಮಾಡಿ ನಮಸ್ಕರಿಸಿ ಇಂಪಾದ ವಾದ್ಯರವ ಮತ್ತು ಮಂತ್ರಘೋಷದ ವಾತಾವರಣದಲ್ಲಿ ಶುಭ ವೈರಾಜ ಮುಹೂರ್ತದಲ್ಲಿ ಮಹಾರಾಜ ಜಯಚಾಮರಾಜ ಒಡೆಯರ್ ಬಹದ್ದೂರ್ ಅವರು ಸಿಂಹಾಸನವನ್ನೇರಿದರು.

ಸೇವೆಗಾಗಿ ದೀಕ್ಷೆ”

ಸಿಂಹಾಸನಾರೋಹಣ ಸಂದರ್ಭದಲ್ಲಿ ಆಗಿನ ಮೈಸೂರು ಸರ್ಕಾರದ ಆಕಾಶವಾಣಿ ಮೂಲಕ ಮಹಾರಾಜರು ಜನತೆಗೆ ಬಿತ್ತರಿಸಿದ ಸಂದೇಶ ಗಮನಾರ್ಹವಾಗಿತ್ತು. ಸಂದೇಶದಲ್ಲಿ ಜಯಚಾಮರಾಜರು ಹೀಗೆಂದರು: “ನಾನು ನನ್ನ ಹಿರಿಯರ ಸಿಂಹಾಸನವನ್ನೇರುವ ಈ ವ್ರತ ಸಮಾರಂಭವನ್ನು ನನ್ನನ್ನೂ ನನ್ನ ಜೀವಮಾನವನ್ನೂ ನನ್ನ ಸಕಲ ಸರ್ವಸ್ವವನ್ನೂ ಮೈಸೂರು ಸಂಸ್ಥಾನದ ಜನರ ಸೇವೆಗಾಗಿ ಸಮರ್ಪಣ ದೀಕ್ಷೆಯೆಂಬುದಾಗಿ ಎಣಿಸುತ್ತೇನೆ. ಇದರಲ್ಲಿ ನನ್ನೊಬ್ಬನ ಪ್ರಯತನವೊಂದೇ ಜಯಶಾಲಿಯಾಗಲಾರದೆಂದು ನಾನು ಚೆನ್ನಾಗಿ ಅರಿತಿದ್ದೇನೆ. ನಿಮ್ಮ ನೆರವು, ನಿಮ್ಮ ಸಹಕಾರ, ನಿಮ್ಮ ನಂಬಿಕೆ, ನಿಮ್ಮ ಪ್ರೇಮ ನನಗೆ ಬೇಕು.”

ಈ ಮಾತುಗಳ ಹಿಂದಿನ ಮಾನವೀಯತೆ, ವಾತ್ಸಲ್ಯ, ಘನತೆ ಎಷ್ಟು ಅಪ್ಯಾಯಮಾನ!

ಜಯಚಾಮರಾಜರು ಅತ್ಯುತ್ತಮ ಶಿಕ್ಷಣ ಪಡೆದು ಉಚ್ಛ ವಿದ್ಯಾಭ್ಯಾಸ ಮಾಡಿದ್ದರು. ಯಾವುದೇ ವಿಷಯವನ್ನು ಕೆದಕಿ ತಿಳಿಯುವ ಕುತೂಹಲ, ಬುದ್ಧಿಶಕ್ತಿಗಳನ್ನು ಬೆಳೆಸಿಕೊಂಡಿದ್ದರು. ಮೈಸೂರು ಸಂಸ್ಥಾನದ ಹಲವು ಕಡೆ ಸಂಚರಿಸಿ ಪ್ರಜೆಗಳ ಆಶೋತ್ತರಗಳನ್ನೂ ನಿರೀಕ್ಷೆಗಳನ್ನೂ ತಿಳಿದಿದ್ದರು. ಭಾರತದ ಇತರ ಕಡೆಗಳಲ್ಲೂ ಕೆಲವು ವಿದೇಶಗಳಲ್ಲೂ ಕೂಡ ಸಂಚಾರ ಮಾಡಿ ವಿಶಾಲ ತಿಳಿವಳಿಕೆಯನ್ನು ಗಳಿಸಿದ್ರು. ಉನ್ನತ ಅಧಿಕಾರಿಗಳಿಂದ ಸರ್ಕಾರದ ನಾನಾ ಇಲಾಖೆಗಳ ಕಾರ್ಯಕಲಾಪಗಳ ಬಗೆಗೆ ತರಬೇತಿ ಪಡೆದಿದ್ದರು. ಹೀಗೆ ಅವರು ಒಂದು ಸಂಸ್ಥಾನದ ರಾಜರಾಗಿ ಆಡಳಿತ ಸೂತ್ರಗಳನ್ನು ನಿರ್ವಹಿಸಲು ಉತ್ತಮವಾಗಿ ಶಿಕ್ಷಣ ಪಡೆದಿದ್ದರು.

ಇದಕ್ಕೂ ಮಿಗಿಲಾಗಿ ಅವರು ತಮ್ಮ ತಂದೆಯವರೂ ದೊಡ್ಡಪ್ಪನವರೂ ಬೆಳೆಸಿದ ಉದಾರ ಮನಸ್ಸಿನ ಮತ್ತು ಪ್ರಗತಿಪರ ವಿಚಾರಶೀಲತೆಯ ಪರಂಪರೆಯಲ್ಲಿ ಬಂದಿದ್ದವರು. ಸಮಸ್ತ ಪ್ರಜೆಗಳ ಪ್ರೀತಿಯನ್ನು ಸಂಪಾದಿಸಿ ಎಲ್ಲರಿಗೂ ಸುಖದಾಯಕವಾದ ರಾಮರಾಜ್ಯವನ್ನು ಸ್ಥಾಪಿಸಬೇಕೆಂದು ಹಂಬಲಹೊಂದಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಅವರ ಮನಸ್ಸು ರೂಪುಗೊಂಡಿತು.

ಸುಧಾರಣೆಯ ಮನೋಭಾವದ ಕೃಷ್ಣರಾಜರು

ಕೃಷ್ಣರಾಜ ಒಡೆಯರ ಕಾಲದಲ್ಲಿ ಹಲವಾರು ಸಲ ಆಡಳಿತ ಸುಧಾರಣೆಯ ಕ್ರಮಗಳಗಿದ್ದವು. ಅವರು ಆಡಳಿತವಹಿಸಿಕೊಂಡ ದಿನವೇ ಹೊರಡಿಸಿದ ಆಜ್ಞೆಯ ಪ್ರಕಾರ ಅದುವರೆಗೆ ಇದ್ದಂತೆ ವಿಶ್ರಾಂತಿವೇತನ ಪಡೆಯುತ್ತಿದ್ದ ವೃದ್ಧರು ಸಚಿವರಾಗಿರುವುದರ ಬದಲು, ಸಚಿವ ಸಂಪುಟಕ್ಕೆ ದಿವಾನ್‌ರವರು ಅಧ್ಯಕ್ಷರಾಗಿದ್ದು ಬೇರೆ ಇಬ್ಬರು ಸಚಿವರು ಇರುವುದೆಂದು ಗೊತ್ತಾಯಿತು. ೧೯೦೭ರಲ್ಲಿ ಅದುವರೆಗೆ ಇದ್ದ ಪ್ರಜಾಪ್ರತಿನಿಧಿ ಸಭೆಯ ಜೊತೆಗೆ, ನ್ಯಾಯವಿಧಾಯಕ ಸಭೆಯೂ ಸ್ಥಾಪನೆಯಾಯಿತು. ೧೯೧೩ ರಲ್ಲಿ ಅದಕ್ಕೆ ಅಧಿಕಾರವನ್ನು ಹೆಚ್ಚಿಸಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಎರಡು ವರ್ಷಗಳ ನಂತರ ಪ್ರಜಾಪ್ರತಿನಿಧಿ ಸಭೆಗೂ ಹೆಚ್ಚಿನ ಅಧಿಕಾರಗಳು ಲಭಿಸಿದವು. ೧೯೧೮ ರಲ್ಲಿ ಮತ್ತೊಮ್ಮೆ ರಾಜಕೀಯ ಸುಧಾರಣೆಗಳು ಕಾರ್ಯಗತವಾದವು. ಉಭಯ ಸಭೆಗಳ ಅಧಿಕಾರ ವ್ಯಾಪ್ತಿ ಮತ್ತು ಸದಸ್ಯ ಸಂಖ್ಯೆಗಳು ಮತ್ತೆ ಹೆಚ್ಚಿದವು. ೧೯೩೯ರಲ್ಲಿ ಮತ್ತೆ ಪ್ರಗತಿಪರ ಸುಧಾರಣೆಯನ್ನು ಮಂಜೂರಮಾಡಿ, ಸಭೆಗಳ ಸದಸ್ಯ ಸಂಖ್ಯೆ ಮತ್ತು ಅಧಿಕಾರಗಳನ್ನು ಹೆಚ್ಚಿಸಲಾಯಿತು. ಸಚಿವ ಸಂಪುಟದಲ್ಲಿ ಕಡೇಪಕ್ಷ ಇಬ್ಬರು ಅಧಿಕಾರಿಗಳಲ್ಲದವರು ಸದಸ್ಯರಾಗಿರಲು ಅವಕಾಶ ಸಿಕ್ಕಿತು. ಇದು ಬಹು ಮಹತ್ವದ ಸುಧಾರಣೆ.

ಅವರಿಗೆ ತಕ್ಕ ಉತ್ತರಾಧಿಕಾರಿ

ಈ ಹೊಸ ಕ್ರಮಗಳನ್ನು ಜಾರಿಗೆ ತರುವ ಮುನ್ನವೇ ಕೃಷ್ಣರಾಜ ಒಡೆಯರು ದೈವಾಧೀನರಾದರು. ಆದರೆ ಜಯಚಾಮರಾಜರು ಪಟ್ಟಕ್ಕೆ ಬಂದ ನಂತರ ಅವುಗಳನ್ನು ಚಾಚೂ ತಪ್ಪದೇ ಕಾರ್ಯಗತ ಮಾಡಿದರು. ಇಪ್ಪತ್ತನೇ ಶತಮಾನದ ಆ ಕಾಲದಲ್ಲೂ ಅಂದರೆ ಈಗ್ಗೆ ನಲವತ್ತು ವರ್ಷಗಳ ಹಿಂದೆಯೂ ಭಾರತದಲ್ಲಿದ್ದ ಅನೇಕ ಸಂಸ್ಥಾನಾಧೀಶರುಗಳು ತಮ್ಮ ರಾಜ್ಯಗಳನ್ನು ಸ್ವಂತ ಸ್ವತ್ತೆಂದೇ ಬಾವಿಸಿ ಆಳುತ್ತಿದ್ದರು. ತಮಗಾಗಿ, ತಮ್ಮ ಹೆಂಡತಿ ಮಕ್ಕಳು ತಮಗೆ ಬೇಕಾದವರು ಇವರಿಗಾಗಿ ಖರ್ಚು ಮಾಡುತ್ತಿದ್ದ ಹಣಕ್ಕೆ ಲೆಕ್ಕವೇ ಇಲ್ಲ. ನಾಯಿಗಳಿಗೆ ಮದುವೆ ಮಾಡಿ ಸಾವಿರಾರು ರೂಪಾಯಿ ದಂಡ ಮಾಡಿ, ರಾಜ್ಯದಲ್ಲಿ ರಜ ಕೊಟ್ಟ ಪ್ರಭುಗಳಿದ್ದರು. ಕೊಳೆಗಳನ್ನು ಮಾಡಿಸಿದವರಿದ್ದರು. ಇಂತಹ ಕಾಲದಲ್ಲಿ ಕೃಷ್ಣರಾಜರೂ, ಜಯಚಾಮರಾಜರೂ ನಡೆದುಕೊಂಡ ರೀತಿಯನ್ನು ಕಂಡರೆ ಆಶ್ಚರ್ಯವಾಗುತ್ತದೆ. ಜನರಿಗೇ ಹೆಚ್ಚು ಹೆಚ್ಚು ಅಧಿಕಾರ ಕೊಡುವ ಸುಧಾರಣೆಗಳನ್ನು ಮಹಾರಾಜರಾಗಿದ್ದವರೇ ಸಂತೋಷದಿಂದ ಜಾರಿಗೆ ತರಲು ಒಪ್ಪುವುದು ಅಸಾಧಾರಣ ಸಂಗತಿಯಾಗಿತ್ತು. ಪ್ರಗತಿಪರ ಮನಸ್ಸಿಗೆ ನಿಸ್ಸಂದೇಹವಾದ ಸಾಕ್ಷಿಯಾಗಿತ್ತು. ದೊಡ್ಡಪ್ಪನವರ ಸುಧಾರಣೆಗಳ ಮುಖ್ಯ ಘಟ್ಟವೊಂದನ್ನು ಜಾರಿಗೆ ತಂದು, ಅವರ ಉದಾರ ಪ್ರವೃತ್ತಿಯನ್ನೇ ಮುಂದುವರಿಸಿಕೊಂಡು ಬಂದಿದ್ದು ಜಯಚಾಮರಾಜರ ದೊಡ್ಡ ಗುಣ. ಕಡೆಯವರೆಗೂ ಅವರು ಹಾಗೆಯೇ ಪ್ರಗತಿಪರರಾಗಿದ್ದರು.

ಸಂಗೀತ ಸಾಹಿತ್ಯಗಳಿಗೆ

ದಿವ್ಯಾಶ್ರಯ

ಜಯಚಾಮರಾಜರು ಕೇವಲ ಒಬ್ಬ ಒಳ್ಳೆಯ ದೊರೆಯಾಗಿದ್ದರೆಂದಲ್ಲ; ಅವರು ಸಂಗೀತ ಸಾಹಿತ್ಯಗಳಿಗೆ ಆಗರವಾದ ಶ್ರೇಷ್ಠ ರಸಿಕರೂ ಹೌದು. ಮಗುವಾಗಿದ್ದಾಗಿನಿಂದಲೇ ಅವರಿಗೆ ಸಂಗೀತದಲ್ಲಿ ತಲ್ಲೀನತೆ. ಶಿಕ್ಷಣ ಪ್ರಾರಂಭವಾದ ಮೇಲಂತೂ ಸಂಗೀತ ಸಾಹಿತ್ಯಗಳಲ್ಲಿನ ಆಸಕ್ತಿ ತುಂಬು ಹೂವಿನಂತೆ ಬಿರಿದರಳಿತು.

ಅರಮನೆಯಲ್ಲಿ ಮಹಾಮಹಾ ವಿದ್ವಾಂಸರುಗಳು ಇದ್ದುದರಿಂದ ಜಯಚಾಮರಾಜರು ಬಾಲ್ಯದಿಂದಲೇ ಸಂಗೀತಮಯ ವಾತಾವರಣದಲ್ಲಿ ಬೆಳೆದರು. ಅದರ ಮೆಲೆ ದೊಡ್ಡಪ್ಪ ಕೃಷ್ಣರಾಜ ಒಡೆಯರಿಗೂ ಅಸಾಧಾರಣವಾದ ಸಂಗೀತ ಪ್ರೇಮ, ಸಂಗೀತದಲ್ಲಿ ಪಾಂಡಿತ್ಯವಿತ್ತು. ಅರಮನೆಯ ವಾತಾವರಣದಲ್ಲಿ ಸಹಜವಾಗಿಯೇ ಕರ್ನಾಟಕ ಸಂಗೀತದ ತಿಳುವಳಿಕೆಗೆ ದೊರಕುತ್ತಿದ್ದ ಅವಕಾಶದ ಜೊತೆಗೆ ಪಾಶ್ಚಾತ್ಯ ಸಂಗೀತ ಪದ್ಧತಿಯಲ್ಲೂ ಕೃಷ್ಣರಾಜ ಒಡೆಯರು ತಮ್ಮ ಸೋದರರ ಮಕ್ಕಳಿಗೆ ಶಿಕ್ಷಣದ ಏರ್ಪಾಡು ಮಾಡಿದ್ದರು. ಪ್ರಸಿದ್ಧ ವಿದ್ವಾಂಸ ಮಿಸ್ಟೋವ್‌ಸ್ಕಿ ಎಂಬವರನ್ನು ಅರಮನೆಯಲ್ಲೇ ಸಂಗಳ ಕೊಟ್ಟು ನೇಮಿಸಿಕೊಂಡಿದ್ರು. ಅವರು ಅರಮನೆಯಲ್ಲಿದ್ದ ಪಾಶ್ಚಾತ್ಯ ವಾದ್ಯಗೋಷ್ಠಿಗೆ ನಿರ್ದೇಶಕರಾಗಿದ್ದರು. ಜಯಚಾಮರಾಜರೂ ಸಹ ಪಾಶ್ಚಾತ್ಯ ಸಂಗೀತ ಪದ್ಧತಿಯ ತತ್ವ್ತ ಸಿದ್ಧಾಂತಗಳನ್ನು ಅಧ್ಯಯನ ಮಾಡಿದ್ದರಲ್ಲದೇ ಪಿಯಾನೋ ಮತ್ತು ಪೈಪ್‌ಅರ್ಗನ್‌ವಾದ್ಯಗಳನ್ನು ನುಡಿಸುವುದನ್ನು ಚೆನ್ನಾಗಿ ಕಲಿತಿದ್ದರು. ಪ್ರಖ್ಯಾತರಾದ ಬಾಖ್‌, ಬಿಠೋವನ್‌ಮುಂತಾದ ಉದ್ದಾಮ ವಿದ್ವಾಂಸರ ಸಂಗೀತ ರಚನೆಗಳನ್ನು ಅತ್ಯಾಸಕ್ತಿಯಿಂದ ಕೇಳಿ ಆನಂದಪಡುತ್ತಿದ್ದರು. ಲಂಡನ್ನಿನ ಗಿಲ್ಡ್‌ಹಾಲ್ ಸಂಗೀತ ಶಾಲೆಯ ಪದವೀಧರರಾಗಿದ್ದರು. ಪ್ರಸಿದ್ಧವಾದ ಟ್ರಿನಿಟಿ ಸಂಗೀತ ಕಾಲೇಜಿನ ಫೆಲೋಷಿಪ್‌ಪ್ರಶಸ್ತಿ ಪಡೆದಿದ್ದರು.

ನಮ್ಮ ಕರ್ನಾಟಕ ಸಂಗೀತ ಪದ್ಧತಿಯಲ್ಲಂತೂ ಅವರದು ಬಹು ಹೆಚ್ಚಿನ ಪಾಂಡಿತ್ಯ ಮತ್ತು ಪ್ರೇಮ. ಪ್ರಖ್ಯಾತ ಸಂಗೀತಗಾರರನ್ನು ಕರೆಸಿ ಅವರನ್ನು ದಿನಗಟ್ಟಲೆ ಉಳಸಿಕೊಂಡು ಅವರುಗಳ ಸಂಗೀತದ ಸವಿಯನ್ನು ಅನುಭವಿಸಿ ಗೌರವ ಪುರಸ್ಕಾರಗಳನ್ನು ಕೊಡುತ್ತಿದ್ದರು. ಜಯಚಾಮರಾಜರ ರಾಗ ಜ್ಞಾನ, ತಾಳ ಜ್ಞಾನಗಳು ಅತಿ ನಿಕರ. ಅದರ ಜೊತೆಗೆ ಸಾಹಿತ್ಯದಲ್ಲೂ ಅವರಿಗಿದ್ದ ಪ್ರಭುತ್ವ ಸೇರಿಕೊಂಡು ಅವರೇ ಅನೇಕಾನೇಕ ಕೃತಿಗಳನ್ನು ರಚಿಸಿ ವಾಗ್ಗೇಯಕಾರರಾದರು. ಅವರು ಹೀಗೆ ೯೪ ಕೃತಿಗಳನ್ನು ರಚಿಸಿದ್ದಾರೆ. ಅಠಾಣ ರಾಗದ “ಶ್ರೀ ಮಹಾ ಗಣಪತಿಂ,”  ಹಿಂದೋಳದ “ಚಿಂತಯಾಮಿ, ಜಗದಂಬಾ.” ನಾದನಾಮಕ್ರಿಯೆ ರಾಗದಲ್ಲಿರುವ “ಶಿವಶಿವ ಶಿವ ಭೋ ಮಹಾದೇವ ಶಂಭೋ” ಗಂಭೀರ ನಾಟ ರಾಗದ “ಜಾಲಂಧರ” ಮುಂತಾದ ಅವರ ಕೃತಿಗಳು ಪಂಡಿತ ಪಾಮರ ಪ್ರಿಯವಾಗಿವೆ. ಸಂಗೀತದ ಗುರು ವಾಸುದೇವಾಚಾರ್ಯರು ಅವರಿಗೆ ತುಂಬ ನೆರವಾಗುತ್ತಿದ್ದರು.

ಕರುಣೆಯ ತವರು

ಜಯಚಾಮರಾಜರಿಗೆ ಸಂಗೀತಗಾರರನ್ನು ಕಂಡರೆ ತುಂಬ ಗೌರವ, ವಿಶ್ವಾಸ, ಒಮ್ಮೆ ಹೀಗಾಯಿತು. ಅಪಾರ ದೈವಭಕ್ತಿಯಿದ್ದ ಮಹಾರಾಜರು ದಿನವೂ ಮೂರು ಸಲ ಪೂಜೆ ಮಾಡುತ್ತಿದ್ದರು. ಪೂಜಾ ವೇಳೆಯಲ್ಲಿ ಸಂಗೀತದ ಸೇವೆಯೂ ಇರುತ್ತಿತ್ತು. ಬೆಳಗಿನ ಜಾವದ ಪೂಜೆಗೂ ಆಸ್ಥಾನದ ಸಂಗೀತ ವಿದ್ವಾಂಸರು ಸರದಿ ಮೇಲೆ ಬಂದು ಹಾಡಬೇಕು. ಪೂಜೆ ಐದು ಗಂಟೆಗಿದ್ದರೂ ಮಹಾರಾಜರ ಕಾರ್ಯದರ್ಶಿಯವರು, ದರ್ಬಾರ್ ಬಕ್ಷಿಯವರು, ಅವರ ಕೆಳಗಿನ ಅಧಿಕಾರಿ ಹೀಗೆ ಪ್ರತಿಯೊಬ್ಬರೂ ಸರದಿಯ ವಿದ್ವಾಂಸರು ಸಮಯ ತಪ್ಪದಿರಲೆಂದು ಸ್ವಲ್ಪ ಸ್ವಲ್ಪ ಹೊತ್ತು ಮುಂಚಿತವಾಗಿರುವಂತೆ ಹೇಳಿ, ಕಟ್ಟಕಡೆಗೆ ಆ ಸಂಗೀತಗಾರರು ಬೆಳಗಿನ ಜಾವ ಎರಡೂವರೆ ಮೂರು ಗಂಟೆಗೇ ಅರಮನೆಗೆ ಬರುವಂತಾಗುತ್ತಿತ್ತು. ಚಳಿಗಾಲದಲ್ಲೂ ಕೂಡ ವಿದ್ವಾಂಸರುಗಳು ಹೀಗೆಯೇ ಬಂದು ಕಾದು ಕೂತು ಹಿಂಸೆ ಪಡುತ್ತಿದ್ದುದು. ಮಹಾರಾಜರಿಗೆ ಹೇಗೋ ತಿಳಿಯಿತು. ಅವರ ಮನಸ್ಸಿಗೆ ತುಂಬ ಬೇಸರವಾಯಿತು, ವ್ಯಥೆಯಾಯಿತು. ಕೂಡಲೇ ಅವರು ಆ ಪದ್ಧತಿಯನ್ನು ತಪ್ಪಸಿ, ತಮ್ಮ ಅಧಿಕಾರಿಗಳನ್ನು ತಪ್ಪಿಗಾಗಿ ಆಕ್ಷೇಪಿಸಿದರು. ನಾಲ್ಕೂವರೆ ಗಂಟೆ ವೇಳೆಗೆ ಸಂಗೀತಗಾರರು ಬಂದರೆ ಸಾಕೆಂದು ಮಾಡಿ, ಚಳಿಯಲ್ಲಿ ಅವರಿಗೆಲ್ಲ ಬಿಸಿ ಕಾಫಿ ಕೊಡಲು ಏರ್ಪಾಡು ಮಾಡಿದರು.

ಈ ಕರುಣೆ ಅವರಿಗೆ ಮೊದಲಿಂದ ಬಂದು ಸ್ವಭಾವದಲ್ಲಿ ಸಹಜವಾಗಿ ಸೇರಿತ್ತು. ಚಿಕ್ಕ ವಯಸ್ಸಿನಲ್ಲೇ, “ತುಂಬ ಹಣವಿದ್ದರೆ ಏನು ಮಾಡುವಿರಿ?” ಎಂದು ಯಾರಾದರೂ ಕೇಳಿದರೆ, “ಬಡವರಿಗೆ ಕೊಟ್ಟು ಬಿಡುತ್ತೇನೆ” ಎಂದು ಹೇಳುತ್ತಿದ್ದರಂತೆ. ಸಣ್ಣ ಬಾಲಕರಾಗಿಯೇ ಅವರು, ” ಎಲ್ಲ ಹಳ್ಳಿಗೂ ರೈಲು ಹಾಕಬೇಕು. ಹಳ್ಳಿಯವರೆಲ್ಲ ಅದರಲ್ಲಿ ದುಡ್ಡಿಲ್ಲದೆ ಓಡಾಡಬೇಕು” ಎನ್ನುತ್ತಿದ್ದರಂತೆ ಅವರು, ಶಾಲೆಯಲ್ಲಿ ಓದುತ್ತಿದ್ದಾಗ ತಮಗೂ ತಮ್ಮ ಜೊತೆಯಲ್ಲಿ ಓದುತ್ತಿದ್ದ ಇತರರಿಗೂ ಊಟ ತಿಂಡಿಗಳಲ್ಲಿ ವ್ಯತ್ಯಾಸವಿರಕೂಡದೆಂದು ತಿಳಿಸಿದ್ದರು. ಶಾಲಾ ಕಾಲೇಜುಗಳಲ್ಲಿ ಬಡವರಾದ ಸಹಪಾಠಿಗಳಿಗೆ ಅಗತ್ಯವದಾಗಲೇ ಹಣ ಸಹಾಯ ಮಾಡಿದ್ದು ಎಷ್ಟು ಸಲವೋ! ಅವರಲ್ಲಿ ಯಾರಾದರೂ ಖಾಯಿಲೆ ಬಿದ್ದರೆ ಔಷಧೋಪಚಾರಕ್ಕೂ ಏರ್ಪಾಡು ಮಾಡುತ್ತಿದ್ದರು. ಸ್ಕೌಟ್‌ಸಂಸ್ಥೆಯ ಪೋಷಕರಾಗಿದ್ದು ಅವರು ಬೆಂಗಳೂರಿನಲ್ಲಿ ಸ್ಕೌಟ್‌ಕೂಟದ ಪ್ರಾರಂಭೋತ್ಸವ ನೆರವೇರಿಸಿದಾಗ, ಪರಸ್ಥಳಗಳಿಂದ ಬಂದಿದ್ದ ಎಲ್ಲರ ಶಿಬಿರಗಳ ಬಳಿಗೂ ಹೋಗಿ ಅವರ ಯೋಗಕ್ಷೇಮ ವಿಚಾರಿಸಿ ಬಂದರು. ಜಯಚಾಮರಾಜರ ದಯಾಪರತೆಗೆ, ಸರಳತೆಗೆ ಎಷ್ಟೆಷ್ಟೋ ನಿದರ್ಶನಗಳು!

ಪಂಡಿತರ ಕಲ್ಪತರು

ಕನ್ನಡ ಭಾಷೆಯ ಅಭಿವೃದ್ಧಿಗೆ ದುಡಿಯುವ ಕನ್ನಡ ಸಾಹಿತ್ಯ ಪರಿಷತ್ತಿಗೂ ಅವರು ಮಹಾ ಪೋಷಕರಾಗಿದ್ದರು. ಪರಿಷತ್ತಿಗೆ ಅವರ ಪ್ರೋತ್ಸಾಹ ಸರ್ವದಾ ಇರುತ್ತಿತ್ತು. ಸಾಹಿತ್ಯದಲ್ಲೂ ಅವರಿಗೆ ಸಂಗೀತದಲ್ಲಿದಂತೆಯೇ ಅಪಾರ ಪ್ರೇಮ. ಐದು ವರ್ಷದ ವಯಸ್ಸಿಗೇ ಕನ್ನಡವೇ ಅಲ್ಲದೆ ಇಂಗ್ಲಿಷ್‌ಭಾಷೆಯಲ್ಲೂ ಬಹು ಚೆನ್ನಾಗಿ ಮಾತನಾಡಬಲ್ಲ ಸಾಮರ್ಥ್ಯ ಪಡೆದಿದ್ದ ಜಯಚಾಮರಾಜರು ಬಾಲ್ಯದಲ್ಲೇ ಕೆಲವು ನಾಟಕಗಳಲ್ಲಿ ಸಹಪಾಠಿಗಳೊಡನೆ ಸೇರಿ ಅಭಿನಯಿಸುತ್ತಿದ್ದರು. ಪೌರಾಣಿಕ ಮತ್ತು ಇತರ ಕಥೆಗಳನ್ನು ಕೇಳುವುದಕ್ಕೂ, ಹೇಳುವುದಕ್ಕೂ ಅವರಿಗೆ ತುಂಬ ಇಷ್ಟ. ಸಾಹಿತ್ಯ ಮತ್ತು ಸಂಸ್ಕೃತಿಗಳಲ್ಲಿ ಅವರ ಪ್ರೇಮ ಬೆಳೆಯಿತು. ಅನೇಕ ವೇದ, ಶಾಸ್ತ್ರ, ಪುರಾಣ ಗ್ರಂಥಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದ ಮಾಡಿಸಿ “ಶ್ರೀ ಜಯಚಾಮರಾಜೇಂದ್ರ ಮಾಲೆ” ಎಂದು ಪ್ರಕಟಿಸಿದರು. ಕಾಲೇಜಿನಲ್ಲಿ ತಮ್ಮ ಅಧ್ಯಾಪಕರಾಗಿದ್ದ ಮತ್ತು ಇತರ ಪ್ರಖ್ಯಾತ ವಿದ್ವಾಂಸರನ್ನು ಆಗಾಗ ಕರೆಸಿಕೊಂಡು ಸಾಹಿತ್ಯ, ತತ್ತ್ವಶಾಸ್ತ್ರಗಳ ಬಗೆಗೆ ಚರ್ಚೆ ನಡೆಸುತ್ತಲೇ ಇರುತ್ತಿದ್ದರು.

ಉತ್ತಮ ವಾಗ್ಮಿಯಾಗಿದ್ದು ಅನೇಕ ಸಲ ಯುರೋಪ್‌ಮತ್ತು ಅಮೆರಿಕಾದಲ್ಲಿ ಪ್ರವಾಸ ಮಾಡಿ ಭಾರತದ ಸಂಸ್ಕೃತಿ ಮತ್ತು ತತ್ವಶಾಸ್ತ್ರ ಕುರಿತು, ಬೇರೆ ಬೇರೆ ಸ್ಥಳಗಳಲ್ಲೂ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲೂ ನೂರಾರು ಉಪನ್ಯಾಸಗಳನ್ನು ಮಾಡಿದರು. “ಗೀತಾ ಮತ್ತು ಭಾರತ ಜೀವನ” ಮುಂತಾದ ಹಲವಾರು ಪುಸ್ತಕಗಳನ್ನು ಬರೆದರು. ಮಹಾರಾಜರು ಬರೆದ “ದತ್ತಾತ್ರೇಯ” ಎಂಬ ಪುಸ್ತಕ ನಮ್ಮ ತತ್ತ್ವಶಾಸ್ತ್ರಕ್ಕೆ  ಸಂಬಂಧಿಸಿದ ಬಹು ಶ್ರೇಷ್ಠ ಗ್ರಂಥ.

ದೈವಭಕ್ತಿ

ಜಯಚಾಮರಾಜರು ದೈವಭಕ್ತಿಯನ್ನು ಆಳವಾಗಿ ಮೈಗೂಡಿಸಿಕೊಂಡಿದ್ದರು. ಬಾಲ್ಯದಲ್ಲೇ ತಾಯಿ-ತಂದೆ ದೊಡ್ಡಪ್ಪಂದಿರು ಬಿತ್ತಿದ ಆ ಶ್ರದ್ಧೆ ಉಪನಯನದ ನಂತರ ಯೌವನದಲ್ಲಿ ಮಂತ್ರ, ವಿಧಿಗಳ ಮೂಲಕ ಹಾದು ವಯಸ್ಸಾದಂತೆ ಹೆಮ್ಮೆರವಾಗಿ, ಅವರ ಬದುಕಿನ ವಿಧಾನವೇ ಆಯಿತು. ಅವರು ಮಾಡಿದ ವಿಶೇಷ ಪೂಜೆಗಳು ಅದೆಷ್ಟೋ! ಅವರು ರಚಿಸಿದ ಕೀರ್ತನೆಗಳಲ್ಲಿ ಒಂದೊಂದು ದೇವರ ಒಂದೊಂದು ರೂಪದ ಸುತ್ತಿಯೇ ಆಗಿದೆ. ಮೈಸೂರು ರಾಜ್ಯದ ಎಲ್ಲ ದೇವಾಲಯಗಳನ್ನೇ ಅಲ್ಲದೆ ಭಾರತದ ಇತರೆಡೆಗಳ ಪ್ರಸಿದ್ಧ ಯಾತ್ರಾಸ್ಥಳಗಳನ್ನೂ ದೇವಸ್ಥಾನಗಳನ್ನೂ ಅವರು ಸಂದರ್ಶಿಸಿ ವಿಶೇಷ ಪೂಜೆಗಳನ್ನು ನಡೆಸಿದ್ದರು. ಅಲ್ಲೆಲ್ಲ ಕೈತುಂಬ ದಾನ ಮಾಡಿದರು.

ಆ ಕೆಲವು ಯಾತ್ರೆಗಳ ನೆನಪೋ ಎಂಬಂತೆ ಮಕ್ಕಳನ್ನೂ ಅಲ್ಲಲ್ಲಿನ ದೇವತೆಗಳ ಹೆಸರಿನಿಂದಲೇ ಕರೆದರು. ಜಯಚಾಮರಾರಿಗೆ ಮೊದಲ ಮಹಾರಾಣಿಯವರಿಂದ ಮಕ್ಕಳಾಗದೆ ಎರಡನೆ ಮದುವೆಯಾಯಿತು. ಮಹಾರಾಣಿ ತ್ರಿಪುರಸುಂದರಮ್ಮಣ್ಣಿಯವರು ಅವರಿಗಿತ್ತ ಐವರು ಹೆಣ್ಣುಮಕ್ಕಳಿಗೆ ಗಾಯತ್ರಿದೇವಿ, ಮೀನಾಕ್ಷಿದೇವಿ, ಕಾಮಾಕ್ಷಿದೇವಿ, ಇಂದ್ರಾಕ್ಷಿದೇವಿ ಮತ್ತು ವಿಶಾಲಾಕ್ಷಿದೇವಿಯವರೆಂದು ಹೆಸರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಒಬ್ಬರೇ ಮಗ.

ಬೇಟೆಯಲ್ಲಿಯೂ ವೈಶಿಷ್ಟ್ಯ

ಮಹಾರಾಜರು ಬೇಟೆಯಾಡುತ್ತಿದ್ದುದೇನೋ ಉಂಟು. ಆದರೆ ಅದರಲ್ಲೂ ಒಂದು ರೀತಿಯಿತ್ತು. ಯೌವನದಲ್ಲೇ ಅವರು ಹುಲಿ ಬೇಟೆಯಾಡುವಷ್ಟು ಧೈರ್ಯಸಾಹಸಗಳನ್ನು ಗಳಿಸಿದ್ದರು. ಸುತ್ತಮುತ್ತಲ ಕಾಡುಗಳ ಬಳಿಯ ಊರುಗಳಲ್ಲಿ ಹುಲಿ, ಚಿರತೆಗಳ ಹಾವಳಿಯುಂಟಾಗಿ ಜನರೂ ಜಾನುವಾರುಗಳೂ ಹಿಂಸೆಪಟ್ಟು, ಸಾವಿಗೀಡಾಗಿ, ಹೆದರಿಕೆಯುಂಟಾದಾಗಲೆಲ್ಲ ಅವರು ಆ ಸ್ಥಳಗಳಿಗೆ ಹೋಗಿ, ಹಗಲು ರಾತ್ರಿಗಳಲ್ಲೂ ಕಾದು, ತಮ್ಮ ಸುರಕ್ಷತೆಯನ್ನೂ ಲೆಕ್ಕಿಸದೆ ಅಂತಹ ಘೋರ ಮೃಗಗಳನ್ನು ಷಿಕಾರಿ ಮಾಡುತ್ತಿದ್ದರು. ಹೀಗೆ ಅವರು ನೂರಾರು ದುಷ್ಟ ಸಲಗಗಳನ್ನೂ, ಕ್ರೂರ ಹುಲಿಗಳನ್ನೂ ಹೊಡೆದುಹಾಕಿದ್ದು. ಪ್ರಜಾಪಾಲನೆಗಾಗಿಯೇ ಹಿಂದೆ ರಾಜರು ಈ ಬೇಟೆ ಸಾಮರ್ಸ್ಥ್ಯವನ್ನು ರೂಢಿಸಿಕೊಳ್ಳುತ್ತಿದ್ದರು. ಆದರೆ ಮಹಾರಾಜರಿಗೆ ಸುಮ್ಮಸುಮ್ಮನೆ ಮೃಗಗಳನ್ನು ಕೊಲ್ಲುತ್ತಿರುವುದೇ ವಿನೋದವೆನಿಸಿರಲಿಲ್ಲ. ಅಂಕೆಯಿಲ್ಲದಂತೆ ಅವುಗಳನ್ನು ಕೊಲ್ಲದೆ, ಕಾಡಿನ ಘೋರ ಪ್ರಾಣಿಗಳೂ ಅವುಗಳ ಸಹಜ ಆವಾಸಸ್ಥಾನದಲ್ಲಿ ಇದ್ದುಕೊಂಡು, ಪ್ರಕೃತಿಯ ಸಮತೋಲನವಿರಬೇಕೆಂಬುದೇ ಅವರ ನಂಬಿಕೆ. ಈ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದ್ದ ವನ್ಯಮೃಗ ಸಂರಕ್ಷಣಾ ಮಂಡಳಿಗೂ ಅವರು ಅಧ್ಯಕ್ಷರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದರು.

ಬೇಟೆಯಂತೆಯೇ ಕುದುರೆ ಸವಾರಿ ಮುಂತಾದ ಕ್ರೀಡೆಗಳಲ್ಲೂ ಜಯಚಾಮರಾಜರು ಪರಿಣತರಾಗಿದ್ದರು. ಟೆನಿಸ್‌, ರ‍್ಯಾಕೆಟ್ಸ್‌, ಈಜುಗಾರಿಕೆ, ಯೋಗಾಸನ ಮುಂತಾದವುಗಳಲ್ಲೂ ಅವರು ಪರಿಣತರೇ.

ಪರಿವರ್ತನೆಯ ಯುಗಕ್ಕೆ ಹೊಂದಿಕೊಂಡವರು

ಕ್ಷತ್ರಿಯ ಸಹಜವಾದ ಧೈರ್ಯ, ಸಾಹಸಗಳ ಜೊತೆಗೆ ಆದರ್ಶ ರಾಜರಿಗಿರಬೇಕಾದ ಕಲಾವಂತಿಕೆ, ಸಾಹಿತ್ಯಪ್ರೇಮ, ವಿಶಾಲವಾದ ಪಾಂಡಿತ್ಯ, ದಯಾಪರತೆ, ತಾಳ್ಮೆ ಇವೆಲ್ಲ ಜಯಚಾಮರಾಜರಲ್ಲಿ ಮನೆಮಾಡಿದ್ದವು. ಭಾರತದ ಇತರ ಅನೇಕ ಸಂಸ್ಥಾನಾಧೀಶರು ತಮ್ಮ ತಮ್ಮ ರಾಜ್ಯಗಳನ್ನು ಸ್ವಂತ ಸ್ವತ್ತುಗಳೆಂದು ಭಾವಿಸಿ, ಜನರ ಕಲ್ಯಾಣಕ್ಕೆ ಗಮನ ಹೊಡದೆ, ಲೋಲುಪರಾಗಿದ್ದ ಕಾಲದಲ್ಲೇ ಜಯಚಾಮರಾಜರು ತಮ್ಮ ಹಿರಿಯರ ಆದರ್ಶವನ್ನು ಅನುಸರಿಸಿ, ಪ್ರಜಾಕ್ಷೇಮದ ಪ್ರಮುಖ ಉದ್ದೇಶವುಳ್ಳ ಉದಾರ ಆಡಳಿತವನ್ನು ಕೊಟ್ಟದ್ದೂ ಉತ್ತಮ ರಾಜಕೀಯ ಸುಧಾರಣೆಗಳನ್ನು ಕಾರ್ಯಗತ ಮಾಡಿದುದೂ ಅವರ ದೊಡ್ಡ ಗುಣವಲ್ಲದೆ ಮತ್ತೇನು ?

ರಾಜವಂಶದಲ್ಲಿ ಹುಟ್ಟಿದರೂ ಎಲ್ಲಕ್ಕೂ ಮಿಗಿಲಾಗಿ ಅವರು ಶೀಘ್ರ ಪರಿವರ್ತನೆಯ ಯುಗಕ್ಕೆ ಸುಲಭವಾಗಿ ದೂರದೃಷ್ಟಿಗೂ ಸ್ಪಷ್ಟ ರುಜುವಾತು. ಪಟ್ಟಾಭಿಷೇಕ ವಾಗುತ್ತಿದ್ದಂತೆಯೇ ಅವರು ತಮ್ಮ ದೊಡ್ಡಪ್ಪ ಕೃಷ್ಣರಾಜ ಒಡೆಯರು ಉದ್ದೇಶಿಸಿದ್ದ ಸುಧಾರಣೆಗಳನ್ನು ಜಾರಿಗೆ ತಂದು ಇಬ್ಬರು ಖಾಸಗಿ ಮಂತ್ರಿಗಳನ್ನು ಸಚಿವ ಸಂಪುಟಕ್ಕೆ ನೇಮಿಸಿಕೊಂಡರು. ೧೯೪೭ರಲ್ಲಿ ಚುನಾಯಿತ ಮಂತ್ರಿಗಳಿರಬೇಕೆಂಬ ಬೇಡಿಕೆಯಿಂದ ಜವಾಬ್ದಾರಿ ಸರ್ಕಾರಕ್ಕಾಗಿ ಉಗ್ರ ಚಳವಳಿಯೆದ್ದಾಗ, ದಿವಾನರಂತಹ ಉನ್ನತ ಅಧಿಕಾರಿಗಳನ್ನೂ ನಿಯಂತ್ರಿಸಿ, ಪ್ರಜೆಗಳ ಬೇಡಿಕೆ, ಆಪೇಕ್ಷೆಗಳನ್ನು ಈಡೇರಿಸಿದರು. ಇದು ಭಾರತದ ರಾಷ್ಟ್ರೀಯ ಉಂಟು ಮಾಡಿತು. ಅವರು ಕಾಲಧರ್ಮವನ್ನು ಎಂದೂ ಅರಿತು ನಡೆದವರು. ಸ್ವಾತಂತ್ರ್ಯಾನಂತರ ಸರದಾರ ಪಟೇಲರು ಆಗ ಇದ್ದ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಲು ಐಕ್ಯತೆ ಸಾಧಿಸಲು ಶ್ರಮಿಸಿದರು. ಕೆಲವು ರಾಜರು, ನವಾಬರು ತಾವು ಸ್ವತಂತ್ರರಾಗಬೇಕೆಂದು ಹವಣಿಸಿದರು. ಆದರೆ ಜಯಚಾಮರಾಜರು ಸ್ವಪ್ರೇರಣೆಯಿಂದಲೇ ವಿಲೀನದ ಒಪ್ಪಂದಕ್ಕೆ ಸಹಿ ಹಾಕಿ ಪ್ರಜ್ಞಾವಂತರೆನಿಸಿಕೊಂಡರು. “ರಾಜ ಪ್ರಮುಖ್‌” ಎಂಬ ಪದವಿ ಸ್ವೀಕರಿಸಿದರು. ಅರಸರ ಪದವಿ ಅಳಿದು ಹೋದಾಗ ಅವರು ೧೯೫೬ ರಾಜ್ಯಪಾಲರೆನಿಸಿಕೊಳ್ಳಲು ಸಮ್ಮತಿಸಿ ನಾಡ ಸೇವೆಗೆ ನಿಂತರು.

ಹೃದಯ ಸಿಂಹಾಸನದಲ್ಲಿ ಕೂರಿಸಿದ್ದೀರಿ”

ಸುಮಾರು ಎಂಟು ವರ್ಷ ಮೈಸೂರಿನ ರಾಜ್ಯಪಾಲರಾಗಿದ್ದು ನಂತರ, ಮೊದಲಿಂದ ತಮ್ಮದೆನಿಸಿದ್ದ ಸ್ಥಳವನ್ನೂ ಬಿಟ್ಟು ಮದ್ರಾಸಿನ ರಾಜ್ಯಪಾಲರಾಗಿ ತೆರಳಿ ಅಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದರು. ನೆರೆ ಪ್ರಾಂತದ ಜನತೆಗೂ ಮುಖಂಡರಿಗೂ ಅಚ್ಚುಮೆಚ್ಚಾದರು. ರಾಜ ಮಹಾರಾಜರುಗಳ ವಿಶೇಷ ಗೌರವ, ಸೌಲಭ್ಯಗಳನ್ನು ಭಾರತ ಸರ್ಕಾರ ತೆಗೆದುಹಾಕಿತು. ಜಯಚಾಮರಾಜರು ಸಾಮಾನ್ಯ ಪ್ರಜೆಯಂತೆ ಇದ್ದುಬಿಟ್ಟರು. “ಕಾಲಾಯ ತಸ್ಮೈ ನಮಃ” ಎಂಬುದು ಅವರ ಬದುಕಿನ ಉಸಿರಾಯಿತು. ಕಾಲಧರ್ಮವನ್ನು ಅರಿತು ದೈವನಿಯಾಮಕಕ್ಕೆ ತಲೆಬಾಗಿ, ಅದನ್ನು ವಿನಯದಿಂದ ಸ್ವೀಕರಿಸಿ ನಡೆಯುವುದೇ ಮಾನವ ಜೀವನದ ಸಾರ್ಥಕತೆ. ಜಯಚಾಮರಾಜರ ಬಾಳಿನ ಮೆರಗು ಇದು.

ರಾಜ್ಯಕ್ಕೆ ಮೈಸೂರೆಂಬ ಹೆಸರೇ ಹೋಗಿ, ಕರ್ನಾಟಕ ಎಂದಾದಾಗ ೧೯೭೩ರಲ್ಲಿ ಜಯಚಾಮರಾಜರು ಮನಸ್ಸಿನ ತುಮುಲವನ್ನೆಲ್ಲ ಅದುಮಿ ಗದಗ್‌ನಲ್ಲಿ ನಡೆದ ಉತ್ಸವದಲ್ಲಿ ಭಾಗವಹಿಸಿ ಹೇಳಿದ ಮಾತು ಹೃದಯಸ್ಪರ್ಶಿ, ಅವರು, “ಈಗ ರಾಜತ್ವ ಹೋಗಿದೆ. ಸಿಂಹಾಸನದ ಹಕ್ಕುಬಾಧ್ಯತೆ ಹೊರಟುಹೋಗಿವೆ. ಆದರೆ ನಿಮ್ಮ ಹೃದಯ ಸಿಂಹಾಸನದ ಹಕ್ಕು, ಬಾಧ್ಯತೆಗಳು ದೊರೆತಿವೆಯೆಂದು ಭಾವಿಸುತ್ತೇನೆ” ಎಂದು ದೊಡ್ಡ ಮಾತು ನುಡಿದರು. ನೂರಕ್ಕೆ ನೂರು ಪಾಲು ನಿಜ!

ಸಿಂಹಾಸನದಿಂದ ಇಳಿದು ರಾಜರಾದವರು

ಆ ವೇಳೆಗಾಗಲೇ ಅವರ ಆರೋಗ್ಯ ಕೆಡುತ್ತ ಬಂದಿತ್ತು. ಅದಕ್ಕಾಗಿ ಅವರು ಸ್ವಲ್ಪ ಕಾಲದ ನಂತರ ಅಮೆರಿಕಾ, ಜರ್ಮನಿಗಳಿಗೂ ಹೋಗಿ ಚಿಕಿತ್ಸೆ ಮಾಡಿಸಿಕೊಂಡು ಬಂದರು. ಆದರೆ ಹೆಚ್ಚು ಪ್ರಯೋಜನವಾಗಲಿಲ್ಲ. ೧೯೭೪ರ ಆಗಸ್ಟ್‌ನಲ್ಲಿ ಚಿಕಿತ್ಸೆಯಿಂದ ಹಿಂದಿರುಗಿದವರು ಕೆಲವು ದಿನಗಳ ನಂತರ, ಅಂದರೆ ಮರಣಕ್ಕೆ ಮೂರು ದಿನ ಮುನ್ನ, ಶೃಂಗೇರಿಗೆ ತೆರಳಿ, ಜಗದ್ಗುರುಗಳನ್ನು ಸಂದರ್ಶಿಸಿದರು. ೫೫ ವರ್ಷಗಳ ಬದುಕಿನಲ್ಲಿ ಅನೇಕ ಅಂತರಗಳನ್ನು ಸ್ವೀಕರಿಸಿದ್ದ ಒಡೆಯರು ದೇವಾಲಯದಲ್ಲಿ ಪೂಜೆ ಮಾಡಿಸಿ, ಸಾವನ್ನು ಸ್ವೀಕರಿಸಿದ ಮಾತನಾಡಿದರು – ಅದು ಬಹುಶಃ ತಮ್ಮ ಕೊನೆಯ ಭೇಟಿಯೆಂದು. ಬೆಂಗಳೂರಿಗೆ ಹಿಂದಿರುಗಿದವರು ೧೯೭೪ರ ಸೆಪ್ಟೆಂಬರ್ ೨೩ರ ಬೆಳಗ್ಗೆ ಕೊನೆಯುಸಿರೆಳೆದರು.

ಶೃಂಗೇರಿಯ ಶ್ರೀ ವಿದ್ಯಾತೀರ್ಥ ಸ್ವಾಮಿಗಳ, ಜಯಚಾಮರಾರು

ಕೋಟಿಗಟ್ಟಲೆ ಜನ ಶೋಕಿಸಿದರು. ಕಂಬನಿಯಿಲ್ಲದ ಕಣ್ಣಿರಲಿಲ್ಲ. ಅದೇ ಅವರ ಹಿರಿಮೆಗೆ ಸಾಕ್ಷಿ. ಅವರನ್ನು ವರ್ಣಿಸಿದ ರೀತಿಯೇ ವಿಶೇಷ. ಸಿಂಹಾಸನದಿಂದ ಇಳಿದು ರಾಜರಾದವರು ಎಂದರು. ರಾಜ್ಯವನ್ನು ಕಳೆದುಕೊಂಡು ಆಳಿದವರು ಎಂದರು. ಅವರದು ಜನರ ಇಷ್ಟಕ್ಕೆ ತಲೆ ಬಾಗಿದ ದೇಶಭಕ್ತಿ. ಹಾಲಲ್ಲಿ ಸಕ್ಕರೆಯಂತೆ ಅವರು ಜನರಲ್ಲಿ ಬೆರೆತರು. ಅದಕ್ಕೇ ಜಯಚಾಮರಾಜರಿಗೆ ಜನರ ಹೃದಯ ಸಿಂಹಾಸನದಲ್ಲಿ ಶಾಶ್ವತ ಸ್ಥಾನ.