ನಲವತ್ತು ದಿನಗಳು ನಿದ್ರೆಯಿಲ್ಲ.

ನಿದ್ರೆ ಬರುವುದಿಲ್ಲ. ಎಂದಲ್ಲ. ಬಂದರೂ ನಿದ್ರೆ ಮಾಡಲು ಪೋಲೀಸರು ಅವಕಾಶ ಕೊಡರು. ಪ್ರಾರಂಭದಲ್ಲಿ ಪ್ರತಿನಿತ್ಯ ಎಂಟು ಗಂಟೆಗಳ ಕಾಲ ಪ್ರಶ್ನೆಗಳು – ನಿಮ್ಮ ಸ್ನೇಹಿತರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಇತ್ಯಾದಿ. ಅನಂತರ ಪ್ರತಿನಿತ್ಯ ಹತ್ತು ಗಂಟೆ ಹನ್ನೆರಡು ಗಂಟೆ ಪ್ರಶ್ನೆಗಳು. ಸ್ವಲ್ಪ ತೂಕಡಿಸಿದರೆ ಪೋಲೀಸರು ಬಂದು ಅಲ್ಲಾಡಿಸಿ ಎಬ್ಬಿಸುವರು. ಕಡೆಯ ಹತ್ತು ದಿನಗಳಂತೂ ಕಾಲುಚಾಚಿ ಮಲಗಿಕೊಳ್ಳಲೂ ಅವಕಾಶ ನೀಡರು. ಕುರ್ಚಿಯ ಮೇಲೆ ಕುಳಿತೇ ಇರಬೇಕು. ಆಹಾರ ಸೇರದು. ಸೇರಿಸಿಕೊಂಡು ಸ್ವಲ್ಪ ತಿಂದರೂ ಜೀರ್ಣವಾಗದು.

ಇಷ್ಟಾದರೂ ಪೋಲೀಸರಿಗೆ ಕೈದಿಯ ಉತ್ತರ ಒಂದೇ: “ನಿಮಗೆ ತಿಳಿದಿರುವುದನ್ನೇ ನಾನು ಹೇಳುವುದು. ನಿಮಗೆ ತಿಳಿಯದ್ದನ್ನು ನಾನು ಹೇಳುವುದಿಲ್ಲ.”

ನಲವತ್ತು ದಿನ ನಿದ್ರೆ ಇಲ್ಲ.

ಈ ಚಿತ್ರಹಿಂಸೆ ಅನುಭವಿಸಿದ ಕೈದಿ ಮಾಡಿದ್ದ ಅಪರಾಧವೇನು? ಕಳ್ಳತನವೆ, ದರೋಡೆಯೆ, ಕೊಲೆಯೇ? ಅವನ ಜೊತೆಯವರು ಸಮಾಜಘಾತಕರೇ?

ಕೈದಿ ಜಯಪ್ರಕಾಶ ನಾರಾಯಣ್‌ರು . ಅವರ ಅಪರಾಧವೆಂದರೆ ದೇಶದ ಸ್ವತಂತ್ರ‍್ಯಕ್ಕಾಗಿ ಹೋರಾಡಿದ್ದು. ಬ್ರಿಟಿಷರು ಆಳುತ್ತಿದ್ದಾಗ ಲಾಹೋರಿನ ಸೆರೆಮನೆಯಲ್ಲಿ ಅವರು ಅನುಭವಿಸಿದ್ದು ಇದು.

ಕಡೆಗೆ ಪೋಲೀಸರೇ ಸೋತು ಸುಮ್ಮನಾದರು.

ಧೀರ, ಧೀಮಂತ ಬದುಕು

ಎಷ್ಟು ಬಾರಿ ಸೆರೆಮನೆಗೆ ಹೋದರೋ, ಎಷ್ಟು ವರ್ಷಗಳನ್ನು ಸೆರೆಮನೆಯಲ್ಲಿ ಕಳೆದರೋ! ಸುಖಪಡಬೇಕಾದ ತಾರುಣ್ಯದಲ್ಲಿ ಒಬ್ಬರೇ ಸೆರೆಮನೆಯಲ್ಲಿ ದಿನ ನೂಕಿದರು.

ಇಪ್ಪತ್ತೆಂಟನೆಯ ವಯಸ್ಸಿಗೆ ದೇಶಕ್ಕಾಗಿ ಸೆರೆಮನೆ ಸೇರಿದರು. ಮತ್ತೆ ಮತ್ತೆ ಸೆರೆಮನೆ. ದೇಶವೆಲ್ಲ ಸ್ವತಂತ್ರ‍್ಯಕ್ಕಗಿ ಹೋರಾಡುತ್ತಿರುವಾಗ ಸೆರೆಮನೆಯಲ್ಲಿ ಕೊಳೆಯುವುದು ಹೇಗೆ ಎನ್ನಿಸಿದಾಗ ಸೆರೆಮನೆಯಿಂದ ತಪ್ಪಿಸಿಕೊಂಡರು. ವೇಷ ಮರೆಸಿಕೊಂಡು ಅಲೆದರು. ಮತ್ತೆ ಪೋಲೀಸರ ಕೈಗೆ ಸಿಕ್ಕಿ ಸೆರೆಮನೆಗೆ ಹೋದರು.

ಜೀವನದುದ್ದಕ್ಕೂ ಹೀಗೆಯೇ. ಅಧಿಕಾರದಲ್ಲಿರುವವರು ತಪ್ಪು ಮಾಡುತ್ತಾರೆ ಎನಿಸಿದರೆ ಬಹಿರಂಗವಾಗಿ ವಿರೋಧ. ಎಪ್ಪತ್ತಮೂರು ವರ್ಷದ ಮುದುಕ, ಓಡಾಡಲೂ ಆಗದು. ಸ್ವತಂತ್ರ‍್ಯಬಂದು ಎಷ್ಟೋ ವರ್ಷಗಳ ನಂತರ ನಮ್ಮದೇ ಭಾರತ ಸರ್ಕಾರ ತಪ್ಪು ಮಾಡುತ್ತಿದೆ ಎಂದು ತೋರಿತು. ದೇಶದಲ್ಲಿ ಒಳ್ಳೆಯತನವೆಲ್ಲ ಮರೆಯಾಗುತ್ತಿವೆ, ಜನರಿಗೆ ನ್ಯಾಯ, ಸೇವೆ, ನಿಸ್ವಾರ್ಥ, ತ್ಯಾಗ ಮರೆಯಾಗುತ್ತಿವೆ ಅನ್ನಿಸಿತು. ಸರ್ಕಾರ ಮಾಡುತ್ತಿರುವುದು ತಪ್ಪು ಎಂದು ಸಾರಿದರು. ದೇಶದಲ್ಲಿ ಹೊಸ ಚಳುವಳಿಯ ನಾಯಕರಾದರು. ಸರ್ಕಾರ ಅವರನ್ನು ಸೆರೆಮನೆಗೆ ಕಳುಹಿಸಿತು. ಒಂದೂವರೆ ವರ್ಷ ಡೆರೆಮನೆಯಲ್ಲಿದ್ದರು. ಆರೋಗ್ಯ ತೀರ ಕೆಟ್ಟಿತು, ಉಳಿಯುವುದಿಲ್ಲ ಎಂದೇ ತೋರಿತು.

ಸೆರೆಮನೆಯಿಂದ ಬಿಡುಗಡೆಯಾದ ಎಪ್ಪತ್ತನಾಲ್ಕು ವರ್ಷದ ರೋಗಿಗೆ ಒಂದೇ ಚಿಂತೆ – ಈ ದೇಶದ ಸ್ಥಿತಿಯನ್ನು ಸರಿಪಡಿಸುವುದು ಹೇಗೆ? ಇಲ್ಲಿ ನಿಜವಾದ ಪ್ರಜಾಪ್ರಭುತ್ವ ಸ್ಥಿರವಾಗಿ ಬೇರೂರುವಂತೆ ಮಾಡುವುದು ಹೇಗೆ?

ತೀರಾ ನಿಶ್ಯಕ್ತಿ. ಕುಳಿತುಕೊಳ್ಳುವುದು ಕಷ್ಟ. ಆದರೂ ಹಲವು ರಾಜಕೀಯ ಪಕ್ಷಗಳ ನಾಯಕರೊಡನೆ ಮಾತುಕತೆ ನಡೆಸಿದರು. ಅವರನ್ನು ಒಂದುಗೂಡಿಸಿದರು.

ಧೀರ ಜೀವನ

ಬಾಳಿನುದ್ದಕ್ಕೂ ಎರಡೇ ಹಂಬಲ – ಈ ದೇಶ ಬಡತನ, ಅಜ್ಞಾನ ಎಲ್ಲವನ್ನೂ ಕಿತ್ತುಹಾಕಿ ಸಮೃದ್ಧಿ, ನ್ಯಾಯ ಸಮಾನತೆಗಳ ತವರಾಗಬೇಕು ತಮ್ಮ ಜನ ಉತ್ತಮ ಬದುಕು ನಡೆಸುವಂತಾಗಬೇಕು.

ತಮಗಾಗಿ ಯಾವ ಪದವಿಯನ್ನಾಗಲಿ ಅಧಿಕಾರವನ್ನಾಗಲಿ ಬಯಸಲಿಲ್ಲ.

ಮನುಷ್ಯ ಎಷ್ಟು ಎತ್ತರ ಬೆಳೆಯಬಹುದು, ಎಷ್ಟು ನಿಸ್ವಾರ್ಥ ಬದುಕನ್ನು ನಡೆಸಬಹುದು ಎಂಬುದನ್ನು ತೋರಿಸುವ ಧೀರ, ಧೀಮಂತ ಬದುಕು ಜಯಪ್ರಕಾಶ ನಾರಾಯಣರದು.

ಬೊಚ್ಚುಬಾಯಿಯ ವೃದ್ಧ

೧೯೦೨ರ ಅಕ್ಟೋಬರ್ ೧೧ರಂದು ಜಯಪ್ರಕಾಶ ನಾರಾಯಣ್‌ ಉತ್ತರ ಪ್ರದೇಶದ ಬಾಬರ್‌ಬನಿ ಎಂಬಲ್ಲಿ ಜನಿಸಿದರು.

ಜಯಪ್ರಕಾಶ ಬಾಲಕನಾಗಿದ್ದಾಗ ಅವನ ಆರೋಗ್ಯ ಅಷ್ಟು ತೃಪ್ತಿಕರವಾಗಿರಲಿಲ್ಲ. ಅವನ ತಾಯಿ ಚಿಂತೆ ಮಾಡುವಷ್ಟರ ಮಟ್ಟಿಗೆ ಅನಾರೋಗ್ಯ. ಅವನಿಗೆ ನಾಲ್ಕು ವರ್ಷಗಳವರೆಗೂ ಹಾಲು ಹಲ್ಲುಗಳೇ ಹುಟ್ಟಿರಲಿಲ್ಲ. ಅವನು “ಬೊಚ್ಚುಬಾಯಿಯ ವೃದ್ಧತನಂತೆ” ಕಾಣುತ್ತಿದ್ದನು.

ತಾತ, ತಂದೆ, ತಾಯಿ

ಜಯಪ್ರಕಾಶರ ತಾತನ ಹೆಸರು ದೇವಕೀ ನಂದಲಾಲ್‌. ಅವರು ಪೋಲೀಸ್‌ಅಧಿಕಾರಿಯಾಗಿದ್ದರು. ನಿರ್ಭೀತ ವ್ಯಕ್ತಿ. ಮಗ ಹರಸೂದಯಾಳ್‌. ಹರಸೂದಯಾಳ್‌ತಂದೆಗೆ ಭಿನ್ನವಾದ ಸ್ವಭಾವ ಹೊಂದಿದ್ದರು. ಸರಳ ಸ್ವಭಾವ, ಸಾಧು ಪ್ರಕೃತಿ, ದಯೆ, ಸಹಾನುಭೂತಿ ಇವು ಅವರ ವಿಶೇಷ ಗುಣಗಳಾಗಿದ್ದವು. ಅವರು ಸ್ವಲ್ಪ ಇಂಗ್ಲೀಷ್‌ವಿದ್ಯಾಭ್ಯಾಸ ಮಾಡಿ ಸರಕಾರಿ ಕೆಲಸ ಸೇರಿದರು.

ಹರಸೂದಯಾಳ್‌ರ ಪತ್ನಿಯ ಹೆಸರು ಪೂಲ್‌ರಾಣಿ. ಆಕೆ ಹೆಸರಿಗೆ ತಕ್ಕಂತೆಯೇ ದಯಾಮಯಿ ಮತ್ತು ಪ್ರೇಮಮಯಿ. ಗಂಡನ ಸ್ವಭಾವದಂತೆಯೇ ಸಾಧು ಸ್ವಭಾವದವರಾಗಿದ್ದರು. ಹರಸೂದಯಾಳ್‌ಮತ್ತು ಪೂಲ್‌ರಾಣಿ ಈ ದಂಪತಿಗಳಿಗೆ ಆರು ಮಕ್ಕಳಾದರು. ಮೂವರು ಸೋದರರು. ಮೂವರು ಸೋದರಿಯರು. ಇವರ ಪೈಕಿ ನಾಲ್ಕನೆಯವರಾಗಿ ಜಯಪ್ರಕಾಶ ಜನಿಸಿದರು. ಅವನದು ಬಹಳ ಸೌಮ್ಯ ಸ್ವಭಾವ. ಅವನು ಸದಾ ಯಾವುದೋ ಗಾಢಚಿಂತನೆಯಲ್ಲಿ ಮುಳಗಿರುವಂತೆ ತೋರುತ್ತಿತ್ತು. ತಂದೆಯೂ ಈ ಗುಣವನ್ನು ಗಮನಿಸಿದ್ದರು. ಅವರು ಒಮ್ಮೆ ಹೀಗೆ ಹೇಳಿದರಂತೆ ” ಅವನು ಏನನ್ನು ಚಿಂತಿಸುವನೋ ದೇವರೇ ಬಲ್ಲ.”

ಒಟ್ಟಿನಲ್ಲಿ ಬಾಲಕ ಜಯಪ್ರಕಾಶ ಯಾವ ವಿಧದಲ್ಲಿಯೂ ತಂಟೆಕೋರನಾಗಿರಲಿಲ್ಲ. ಯಾವ ಆಟಗಳಲ್ಲಿಯೂ ಆಸಕ್ತಿ ಇರಲಿಲ್ಲ. ಯಾವುದಕ್ಕೇ ಆಗಲಿ ಹೋರಾಡುವ ಸ್ವಭಾವವೇ ಕಂಡಬರಲಿಲ್ಲ.

ಬಾಲಕ ಜಯಪ್ರಕಾಶನಲ್ಲಿ ಪ್ರಾಣಿದಯೆ ಒಂದು ವಿಶೇಷ ಗುಣವಾಗಿತ್ತು. ಅವನಿಗೆ ಜಿಂಕೆ, ನಾಯಿ, ಮೊಲ ಎಂದರೆ ಪಂಚಪ್ರಾಣ. ಒಂದು ದಿನ ತಂದೆಯು ಜೋಡಿ ಪಾರಿವಾಳಗಳನ್ನು ತಂದರು. ಆಗ ಬೇಸಿಗೆ ಕಾಲ. ಶಾಖ ಮಿತಿಮೀರಿತ್ತು. ಇದನ್ನು ತಡೆಯಲಾರದೆ ಒಂದು ಹಕ್ಕಿ ಪ್ರಾಣಬಟ್ಟಿತು. ಇದರಿಂದ ದುಃಖಿತರಾದ ಜಯಪ್ರಕಾಶ ಎರಡು ದಿನ ಆಹಾರವೇನನ್ನೂ ಸೇವಿಸಲಿಲ್ಲ.

ಪಟನಾದಲ್ಲಿ ವಿದ್ಯಾಭ್ಯಾಸ

ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸ ಮುಗಿದ ಮೇಲೆ ಜಯಪ್ರಕಾಶರು ಮುಂದಿನ ವಿದ್ಯಾಭ್ಯಾಸಕ್ಕೆ ಪಟನಾ ನಗರಕ್ಕೆ ಬಂದರು. ಅವರು ಒಂದು, “ಕೊಲಿಜಿಯೇಟ್ ಸ್ಕೂಲ್” ಸೇರಿದರು. ಆಗ ಅವರಿಗೆ ಹದಿಮೂರು ವರ್ಷ ವಯಸ್ಸು. ಹಳ್ಳಿಯಿಂದ ನಗರಕ್ಕೆ ಬಂದಮೇಲೆ ಉಡುಪಿನ ಶೈಲಿ ಬದಲಾಯಿಸಿತು. ಅವರು ಗಂಭೀರವಾಗಿಯೂ, ಸೌಮ್ಯವಾಗಿಯೂ ಇರುತ್ತಿದ್ದರು. ಶ್ರದ್ಧೆಯಿಂದ ವ್ಯಾಸಂಗ ಮಾಡುತ್ತಿದ್ದರು.

ಪಟನಾ ನಗರದಲ್ಲಿ ಒಂದು ಪ್ರಸಿದ್ಧ ವಿದ್ಯಾರ್ಥಿ ನಿಲಯವಿತ್ತು. ಅದಕ್ಕೆ “ಸರಸ್ವತಿ ಭವನ” ಎಂದು ಹೆಸರು ಬಿಹಾರದ ಅನೇಕ ಮುಖಂಡರು ಆ ಭವನದಲ್ಲಿಯೇ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಮುಂದೆ ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿಯಾಗಿ ಪ್ರಸಿದ್ಧರಾದ ಬಾಬು ರಾಜೇಂದ್ರಪ್ರಸಾದರೂ ಅಲ್ಲಿದ್ದವರೇ. ಅವರಂತೆ ಅನೇಕ ಮಂದಿ ಬಿಹಾರದ ನಾಯಕರಾದರು. ವಿದ್ಯಾರ್ಥಿನಿಲಯ ನಿಜಕ್ಕೂ ಸರಸ್ವತಿ ನಿಲಯವಾಗಿತ್ತು. ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಜೊತೆಗೆ ರಾಷ್ಟ್ರೀಯ ಆಂದೋಲನ ಕುರಿತು ಚಿಂತಿಸುತ್ತಿದ್ದರು; ಚರ್ಚಿಸುತ್ತಿದ್ದರು. ರಾಷ್ಟ್ರೀಯ ಸಾಹಿತ್ಯ ಅಲ್ಲಿಗೆ ಗುಪ್ತವಾಗಿ ತಲುಪುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ಹೊಸ ಚೇತನ, ರಾಷ್ಟ್ರಪ್ರೇಮ ಇವುಗಳನ್ನು ಗಳಿಸುತ್ತಿದ್ದರು. ಹಲವಾರು ಪತ್ರಿಕೆಗಳನ್ನು ಆಸಕ್ತಿಯಿಂದ ಓದುತ್ತಿದ್ದರು. ಇವುಗಳಿಂದ ಜಯಪ್ರಕಾಶರ ವ್ಯಕ್ತಿತ್ವ, ವಿಚಾರಶಕ್ತಿ ಉಜ್ವಲವಾಗುತ್ತಿತ್ತು. ಅವರ ದಿನಚರಿಯಲ್ಲಿ ಗೀತಾ ಪಠಣ, ತುಲಸೀ ರಾಮಾಯಣ ಸೇರಿದ್ದವು.

ಶಾಲೆಯಲ್ಲಿ ನಡೆದ ಒಂದು ಪ್ರಸಂಗ ಉಲ್ಲೇಖನೀಯ. ಒಂದು ದಿನ ಜಯಪ್ರಕಾಶ ಮತ್ತು ಕೆಲವರು ಮಿತ್ರರು ಶಾಲೆಗೆ ಹೋಗಲಿಲ್ಲ. ಮುಖ್ಯೋಪಾಧ್ಯಾಯರು ಕುಪಿತರಾದರು. ಗೈರುಹಾಜರಿ ಆಗಿದ್ದವರಿಗೆಲ್ಲ ಹೇಳಿಕಳಿಸಿ ಪ್ರಶ್ನಿಸಿದರು;

“ನೀವೆಲ್ಲ ನಿನ್ನೆ ಏಕೆ ಬಂದಿರಲಿಲ್ಲ? ಪರೀಕ್ಷೆಯೆಂಬುದು ನಿಮಗೆ ಗೊತ್ತಿರಲಿಲ್ಲವೆ?”

ಹುಡುಗರು ಉತ್ತರವಿತ್ತರು: “ನಿನ್ನೆ ರಕ್ಷಾಬಂಧನದ ಹಬ್ಬ, ಪೂಜಾದಿನ.”

“ಪರೀಕ್ಷೆಗೆ ಹಾಜರಾಗದ ತಪ್ಪಿಗೆ ಒಬ್ಬೊಬ್ಬರಿಗೆ ಹದಿನೈದು ಏಟು. ಒಡ್ಡಿ ಹಸ್ತವನ್ನು.”

ನಿರಪರಾಧಿ ಹುಡುಗರು ಕೊಂಚವೂ ಆಳುಕನ್ನು ತೋರಲಿಲ್ಲ. ಹಸ್ತಗಳಿಗೆ ಒಂದಾದ ಮೇಲೆ ಒಂದು ಏಟು ಬಿದ್ದವು. ಹಸ್ತಗಳು ಊದಿಕೊಂಡವು. ಬೆರಳುಗಳು ಸತ್ವಹೀನವಾದವು. ಇದು ಜಯಪ್ರಕಾಶರ ಜೀವನದಲ್ಲಿ ಪ್ರತಿಭಟನೆಯ ಮೊದಲ ಪಾಠವಾಗಿತ್ತು.

ತರಗತಿಯ ಒಬ್ಬ ವಿದ್ಯಾರ್ಥಿ ಜಯಪ್ರಕಾಶರ ಪುಸ್ತಕಗಳನ್ನು ಕದ್ದಿದ್ದ. ಅದು ಯಾರು ಎಂಬುದು ಅವರಿಗೆ ಗೊತ್ತಿತ್ತು. ಆದರೆ ಅವರು ಕಣ್ಣಾರೆ ಕಂಡಿರಲಿಲ್ಲ. ಮುಖ್ಯೋಪಾಧ್ಯಾರು ತನಿಖೆ ನಡೆಸಿ ಪುಸ್ತಕಗಳನ್ನು ಹಿಂದಕ್ಕೆ ಕೊಡಿಸಿದರು. ಜಯಪ್ರಕಾಶರು ಆ ಹುಡುಗನ ಬಳಿಗೆ ಹೋಗಿ ಅವನನ್ನು ಅಪಮಾನಕ್ಕೆ ಗುರಿ ಮಾಡಿದುದಕ್ಕೆ ಕ್ಷಮೆ ಯಾಚಿಸಿದರು. ಆ ಹುಡುಗನಿಗೆ ಅಚ್ಚರಿ. ಅವನು ಕೆಟ್ಟತನವನ್ನು ಬಿಟ್ಟು ಒಳ್ಳೆಯವನಾದ.

೧೯೧೯ರ ಏಪ್ರಿಲ್ ತಿಂಗಳಲ್ಲಿ ಎಂಟ್ರೆನ್ಸ್ ಪರೀಕ್ಷೆ ನಡೆಯಿತು. ಜಯಪ್ರಕಾಶರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಅವರಿಗೆ ಅರ್ಹತೆಯ ವಿದ್ಯಾರ್ಥಿವೇತನವೂ ದೊರಕಿತು. ಅವರು ಕಾಲೇಜ್‌ವ್ಯಾಸಂಗ ಮಾಡಲು ಪ್ರಥಮ ವರ್ಷದ ತರಗತಿಗೆ ಸೇರಿದರು.

ಬೆಳಕು – ಬೆಳಕು ಕೂಡಿದಂತೆ

ಒಂದು ದಿನ ಜಯಪ್ರಕಾಶರ ಬಂದುವೊಬ್ಬರು ಅವರ ಬಳಿಗೆ ಬಂದರು. “ರಾಜೇಂದ್ರಬಾಬೂ ಬಿಡಾರದಲ್ಲಿ ಬ್ರಜ ಕಿಶೋರಬಾಬು ಅವರ ದರ್ಶನ ಮಾಡೋಣ, ಬನ್ನಿ” ಎಂದರು. ಬ್ರಜ ಕಿಶೋರ ಬಾಬು ಬಿಹಾರದಲ್ಲಿ ಬಹಳ ಪ್ರಸಿದ್ಧ ವ್ಯಕ್ತಿ. ಅವರು ಬಿಹಾರದಲ್ಲಿ ಗಾಂಧೀಜಿಯ ಮೊದಲ ಮಿತ್ರರಾಗಿದ್ದರು.

ಬ್ರಜ ಕಿಶೋರ ಬಾಬು ಅವರ ದರ್ಶನಕ್ಕೆ ಹೋದ ಜಯಪ್ರಕಾಶರು ಹದಿನೆಂಟರ ಹರೆಯದ ಸುಂದರ ಯುವಕ. ಅವರನ್ನು ನೋಡಿದ ಕೂಡಲೇ ಬಾಬು ಹೀಗೆಂದುಕೊಂಡರು. “ಇವನೇ ನನ್ನ ಮಗಳಿಗೆ ತಕ್ಕ ವರ.” ಹಿರಿಯರೊಂದಿಗೆ ಮಾತುಕತೆ ನಡೆದು ೧೯೧೯ರ ಜೂನ್‌ತಿಂಗಳಲ್ಲಿ ಪ್ರಭಾವತಿಯೊಂದಿಗೆ ವಿವಾಹವಾಯಿತು.

ಆಗ ಪ್ರಭಾವತಿಗೆ ಹದಿನಾಲ್ಕು ವರ್ಷ. ಆಕೆ ಬ್ರಜ ಕಿಶೋರ ಬಾಬುವಿಗೆ ಒಬ್ಬಳೇ ಮಗಳು. ಗಂಡು ಉಡುಪು ಧರಿಸುತ್ತಿದ್ದರು. ಪಾಠಶಾಲೆಗೆ ಹೋಗಲೇ ಇಲ್ಲ. ಮನೆಯಲ್ಲಿಯೇ ವ್ಯವಸ್ಥಿತ ಶಿಕ್ಷಣ ಪಡೆದರು. ಶ್ರೀಮಂತರ ಒಬ್ಬಳೇ ಮಗಳಾದರೂ ಅಜ್ಜಿ, ತಂದೆ, ತಾಯಿ ಆಭರಣಗಳನ್ನು ಧರಿಸೆಂದರೂ ಧರಿಸುತ್ತಿರಲಿಲ್ಲ. ಸೊಗಸಾದ ಉಡುಪನ್ನೂ ಧರಿಸುತ್ತಿರಲಿಲ್ಲ. ಎಲ್ಲ ಕೆಲಸಗಳನ್ನೂ ತಾನೇ ಮಾಡಬೇಕೆಂಬ ಹಠ. ಮದುವೆಯಾದ ಮೇಲೆ ಮಾತ್ರ ತಾನು ಆಭರಣಗಳನ್ನೂ ಮತ್ತು ಸೊಗಸಾದ ಉಡುಪನ್ನೂ ಧರಿಸಬೇಕೆಂಬ ಅರಿವಾಯಿತು.

ಜೀವನದ ಸೆಳವುಗಳು

ಎಲ್ಲ ಹರೆಯದ ಯುವಕರಂತೆಯೇ ಜಯಪ್ರಕಾಶರಿಗೆ ಹಲವು ಆದರ್ಶಗಳ ಸೆಳವುಗಳಿದ್ದವು.

ಪಟನಾದ ವಿಜ್ಞಾನ ಕಾಲೇಜ್‌ನಲ್ಲಿವ್ಯಾಸಂಗ ಮುಂದುವರಿಸಿದ ಜಯಪ್ರಕಾಶರಿಗೆ ಪ್ರಥಮ ಸೆಳವು ತಾವೊಬ್ಬ ದೊಡ್ಡ ವಿಜ್ಞಾನಿಯಾಗಬೇಕೆಂಬುದು. ನಮ್ಮ ದೇಶ ಪರಕೀಯರ ದಾಸ್ಯಕ್ಕೆ ಗುರಿಯಾಗಿದೆ. ಇದು ವಿಜ್ಞಾನ ಯುಗ. ಆದ್ದರಿಂದ ವಿಜ್ಞಾನದಿಂದಲೇ ನಮ್ಮ ದಾಸ್ಯ ನೀಗೀತು. ಇದು ಅವರ ವಿಚಾರ ಸರಣಿ. ಆದರೆ ಅವರಿಗೆ ಇನ್ನೊಂದು ಬಗೆಯ ಸೆಳವೂ ತೀವ್ರವಾಗಿತ್ತು. ಅದು ದೇಶಭಕ್ತಿ.

ಬ್ರಿಟಿಷರಿಂದ ಸ್ಥಾಪಿತವಾದ ಕಾಲೇಜ್‌ಗಳಲ್ಲಿ ಓದಲು ಅವರಿಗೆ ಮನಸ್ಸಿರಲಿಲ್ಲ. ಇಂಗ್ಲೆಂಡಿಗೆ ಹೋಗಿ ವ್ಯಾಸಂಗ ಮಾಡಲಂತೂ ಇಷ್ಟವಿರಲಿಲ್ಲ. ಅದು ನಮ್ಮನ್ನು ಆಳುವವರ ದೇಶ.

ಅಮೇರಿಕ ಸಂಯುಕ್ತ ಸಂಸ್ಥಾನಗಳು ತುಂಬ ಸ್ವಾತಂತ್ರ್ಯಪ್ರೇಮಿ ರಾಷ್ಟ್ರ. ಅಲ್ಲಿ ಸ್ವಾವಲಂಬಿತ ವಿದ್ಯೆಗೆ ಮಹತ್ವವಿದೆ. ಇದು ಅವರನ್ನು ಅಮೇರಿಕಕ್ಕೆ ಹೋಗಲು ಪ್ರೇರೇಪಿಸಿತು. ಆದರೆ ಹಿರಿಯರು ಒಪ್ಪಲಿಲ್ಲ.

ಆ ಕಾಲ ಭಾರತದಲ್ಲಿ ಪ್ರಕ್ಷುಬ್ಧ ಕಾಲ. ರಾಜಕೀಯದಲ್ಲಿ ಗೋಪಾಲಕೃಷ್ಣ ಗೋಖಲೆ ಪ್ರಸಿದ್ಧರಾಗಿದ್ದರು. ಅವರು ಸೌಮ್ಯ ಸ್ವಭಾವದವರು. ಅವರ ಕಾರ್ಯವಿಧಾನ ಜಯಪ್ರಕಾಶರಿಗೆ ಹಿಡಿಸಿತು. ಅವರು ಕಾಲವಾದಾಗ ಕವನ ರಚಿಸಿದ್ದರಂತೆ. ಅವರ ನಂತರ ರಾಷ್ಟ್ರದ ಮಹಾ ಮುಖಂಡರೆನಿಸಿದ ಗಾಂಧೀಜಿ ಜಯಪ್ರಕಾಶರ ಮನಸೆಳೆದರು. ಆಗ ತಾನೇ ಆರಂಭವಾಗಿದ್ದ ಅಸಹಕಾರ ಚಳುವಳಿಗೆ ಎಲ್ಲ ಹುರುಪಿನ ವಿದ್ಯಾರ್ಥಿಗಳಂತೆ ಸೇರಿದ್ದುಂಟು. ಕಾಲೇಜ್ ವ್ಯಾಸಂಗಕ್ಕೆ ಶರಣು ಹೊಡೆದರು.

ಇದೇ ಸಮಯದಲ್ಲಿ ಉಗ್ರಗಾಮಿಗಳ ಸಂಬಂಧವೂ ಇವರಿಗೆ ಆಯಿತು. ಉಗ್ರಗಾಮಿಗಳು ಗುಪ್ತವಾಗಿ ಕಾರ್ಯಾಚರಣೆ ಮಾಡುತ್ತಿದ್ದರು. ಬ್ರಿಟಿಷರನ್ನು ಭಾರತದಿಂದ ಓಡಿಸಿ ದೇಶಕ್ಕೆ ಸ್ವಾತಂತ್ರ್ಯ ಪಡೆಯುವ ಛಲ ಇರಿಸಿಕೊಂಡಿದ್ದರು. ಸ್ವಲ್ಪಕಾಲದ ನಂತರ ಅವರಿಗೆ ಇವರ ಸೆಳವೂ ತಪ್ಪಿತು.

ಬ್ರಜ ಕಿಶೋರ ಬಾಬು, ರಾಜೇಂದ್ರಪ್ರಸಾದ್ ಇವರುಗಳು ಒಪ್ಪಿ ನಡೆಯುತ್ತಿದ್ದ ಗಾಂಧೀ ಪಥ ಜಯಪ್ರಕಾಶರಿಗೆ ಸರಿ ಕಂಡಿತು. ಇನ್ನುಳಿದ ಸೆಳವು, ಅವರು ಪ್ರಬಲವಾಗಿ ಅಮೇರಿಕಕ್ಕೆ ಹೋಗಲು ಚಡಪಡಿಸಿದರು. ಹಣ ಕೂಡಿಸಿಕೊಂಡು ಎಲ್ಲರ ಅನುಮತಿಯನ್ನೂ ಪಡೆದರು. ಹೊರಡುವುದಕ್ಕೆ ಮುಂಚೆ ಮಾವನ ಮನೆಗೆ ಬಂದು ಪ್ರಭಾವತಿಯ ಒಪ್ಪಿಗೆಯನ್ನೂ ಪಡೆದರು. “ಪ್ರಭಾ, ನಾನು ಉಚ್ಚ ವ್ಯಾಸಂಗಕ್ಕೆ ಹೋಗುತ್ತೇನೆ. ಬೇಗನೆ ಹಿಂತಿರುಗಿ ಬರುತ್ತೇನೆ.”

ಪ್ರಭಾವತಿ ಹನಿಗಣ್ಣಿನಿಂದ ಪತಿಯ ಕಡೆ ನೋಡಿದಳು.

“ನೀನೂ ಏಕೆ ವ್ಯಾಸಂಗಮಾಡಬಾರದು?” ಎಂದರು ಜಯಪ್ರಕಾಶರು.

“ಗಾಂಧೀಜಿಯ ಸಬರಮತಿ ಆಶ್ರಮಕ್ಕೆ ಹೋಗಲೆ?”

“ನಿನಗೆ ಹೇಗೆ ಸರಿ ಎನಿಸುತ್ತದೋ ಹಾಗೆ ಮಾಡು” ಎಂದರು.

ದಂಪತಿಗಳು ಪುನಃ ಭೇಟಿಯಾಗಲು ಏಳು ವರ್ಷಗಳು ಬೇಕಾಯಿತು.

ಅಮೇರಿಕದಲ್ಲಿ ಶಿಕ್ಷಣ

ಜಪಾನಿನ ಮೂಲಕ ಹಡಗಿನಲ್ಲಿ ಪ್ರಯಾಣ ಮಾಡಿದ ಜಯಪ್ರಕಾಶರು ೧೯೨೨ರ ಅಕ್ಟೋಬರ್ ೮ರಂದು ಅಮೇರಿಕದ ಸಾನ್‌ಫ್ರಾನಿಸ್ಕೋ ರೇವುಪಟ್ಟಣದಲ್ಲಿ ಇಳಿದರು.

ಬರ್ಕ್ಲಿ ಎಂಬ ವಿಶ್ವವಿದ್ಯಾನಿಲಯದಲ್ಲಿ ಅವರು ವ್ಯಾಸಂಗಮಾಡಲು ಬಯಸಿದರು. ಆದರೆ ಕಾಲೇಜಿನ ವ್ಯಾಸಂಗದ ಮೊದಲನೆಯ ಅವಧಿ ಮುಗಿದು ರಜೆ ಬಂದಿತ್ತು. ಆದ್ದರಿಂದ ಅವರು ಜನವರಿಯವರೆಗೂ ಕಾಯಬೇಕಾಯಿತು. ಇದರ ಪರಿಣಾಮವಾಗಿ ಊರಿನಿಂದ ತಂದಿದ್ದ ಹಣವೆಲ್ಲ ವೆಚ್ಚವಾಗಿ ಬರಿಗೈ ಆಗುವ ಸ್ಥಿತಿ ಬಂತು. ಅವರ ಮಿತ್ರರು ಏನಾದರೂ ಉದ್ಯೋಗಮಾಡಿ ಹಣ ಸಂಪಾದಿಸಲು ಸಲಹೆ ಮಾಡಿದರು. ದೇಶಾಭಿಮಾನಿಯಾಗಿ ಭಾರತದಿಂದ ಗಡಿಪಾರಾಗಿದ್ದ ಷೇರ್‌ಖಾನ್‌ಎಂಬ ಮೇಸ್ತ್ರಿಯ ಸಹಾಯದಿಂದ ಅವರಿಗೆ ದ್ರಾಕ್ಷಿ ತೋಟದಲ್ಲಿ ಕೆಲಸ ಸಿಕ್ಕಿತು. ಒಂದು ಗಂಟೆಗೆ ನಲವತ್ತು ಸೆಂಟ್ಸ್‌ಕೂಲಿ. ದಿನವೂ ಒಂಬತ್ತು ಗಂಟೆಗಳ ಕೆಲಸ. ಅವರು ದಿನಕ್ಕೆ ಹತ್ತು ಗಂಟೆಯಂತೆ ಕೆಲಸಮಾಡುತ್ತಾ ಇದ್ದರು. ಭಾನವಾರವೂ ಬಿಡುವನ್ನು ಅಪೇಕ್ಷಿಸಲಿಲ್ಲ. ಹೀಗೆ ಒಂದು ತಿಂಗಳು ಕಳೆದ ತರುವಾಯ ಸಾಕಷ್ಟು ಹಣ ಅವರಲ್ಲಿ ಶೇಖರವಾಯಿತು. ಮತ್ತೆ ಬರ್‌ಕ್ಲಿಗೆ ಹಿಂತಿರುಗಿಬಂದು ಎರಡನೆಯ ವರ್ಷದ ಕಾಲೇಜ್‌ತರಗತಿಗೆ ಸೇರಿದರು. ರಾಸಾಯನಿಕ ಇಂಜಿನಿಯರಿಂಗ್, ಗಣಿತಶಾಸ್ತ್ರ, ಜೀವಶಾಸ್ತ್ರ ಅವರ ಅಧ್ಯಯನದ ವಿಷಯಗಳು. ಅವರು ಶ್ರದ್ಧೆಯಿಂದ ವ್ಯಾಸಂಗಮಾಡಿ ಎಲ್ಲಾ ಪ್ರಾಧ್ಯಾಪಕರಿಂದ ಮೆಚ್ಚುಗೆ ಪಡೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದುತ್ತಿದ್ದರು.

ವರ್ಷದ ಎರಡನೆಯ ಅವಧಿಗೆ ಇದ್ದಕ್ಕಿದ್ದಂತೆ ಶಿಕ್ಷಣ ಶುಲ್ಕ ಏರಿಸಲ್ಪಟ್ಟಿತು. ಮತ್ತೆ ಹಣದ ಪ್ರಶ್ನೆ ಬಂದಿತು. ಆಗ ಅಯೋವಾ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿ ವ್ಯಾಸಂಗ ಮಾಡತೊಡಗಿದರು. ತಮಗೆ ಸಿಕ್ಕಿದ ಬಿಡುವಿನ ಕಾಲದಲ್ಲಿ ನಾನಾ ಕೆಲಸ ಮಾಡಿದರು. ಹೋಟೆಲ್ ಮಾಣಿ, ಮರದ ಸಾಮಾನುಗಳಿಗೆ ಮೆರುಗು ಕೊಡುವುದು, ಕಿಟಕಿ-ಬಾಗಿಲುಗಳನ್ನು ಶುದ್ಧ ಮಾಡುವುದು. ಹಿಮಗಾಲದಲ್ಲಿ ಮನೆ ಮುಂದೆ ಬಿದ್ದ ಹಿಮವನ್ನು ಎತ್ತಿಹಾಕುವುದು ಹೀಗೆಲ್ಲ ಕೆಲಸಮಾಡಿದರು. ತಾವೆ ಅಡಿಗೆ ಮಾಡಿಕೊಳ್ಳುತ್ತಿದ್ದರು. ಕೆಲವು ಭಾರತೀಯ ಮಿತ್ರೂ ಜೊತೆಗೂಡಿದರು.

ಅಯೋವಾ ಸಣ್ಣ ಸ್ಥಳ. ಅಲ್ಲಿ ಉದ್ಯೋಗದ ಅವಕಾಶ ಕಡಿಮೆ. ಆದ್ದರಿಂದ ಅವರು ಷಿಕಾಗೋವಿಗೆ ಹೋಗಿ ವಿಸ್ಕಾನ್‌ಸಿನ್‌ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮುಂದುವರೆಸಿದರು. ಆ ನಗರದಲ್ಲಿ ಮೂರು ವರ್ಷ ಇದ್ದರು. ಆ ನಗರದಲ್ಲಿ ಬಿಡುವಿನ ಕಾಲದಲ್ಲಿ ಕೆಲಸ ಮಾಡುತ್ತಿದ್ದರು.

ವಿಸ್ಕಾನ್‌ಸಿನ್‌ವಿಶ್ವವಿದ್ಯಾನಿಲಯದಲ್ಲಿ ಅವರು ವಿಜ್ಞಾನಿಯಾಗಬೇಕೆಂಬ ಆಸೆ ಬದಲಾಯಿಸಿತು. ಇದಕ್ಕೆ ಕಾರಣ ಮಾರ್ಕ್ಸ್‌‌ವಾದಿಗಳ ಪರಿಚಯ (ಮಾರ್ಕ್ಸ್‌ಜರ್ಮನಿಯ ಪ್ರಸಿದ್ಧ ವಿಚಾರವಂತ. ಸಮತಾವಾದ ಅಥವಾ ಕಮ್ಯುನಿಸಂ ವಿಚಾರಧಾರೆಯನ್ನು ಜಗತ್ತಿಗೆ ಕೊಟ್ಟವನು ಇವನೇ.) ಅವರು ಮಾರ್ಕ್ಸ್‌‌ನ ಸಿದ್ಧಾಂತವನ್ನು ಓದಲು ಆರಂಭಮಾಡಿ ಅವನ ವಾದಕ್ಕೆ ಮಾರುಹೋದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯಸಂಪಾದನೆಯೇ ಇಂದಿನ ಕರ್ತವ್ಯ. ವಿಜ್ಞಾನದಿಂದ ಅದು ಲಭ್ಯವಾಗುವುದೇ ? ಇಲ್ಲವೆಂದು ಮನಗಂಡು ಸಮಾಜಶಾಸ್ತ್ರವನ್ನೂ ಅರ್ಥಶಾಸ್ತ್ರವನ್ನೂ ಓದತೊಡಗಿದರು.

ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಎಂ.ಎ. ವ್ಯಾಸಂಗವನ್ನು ಮುಗಿಸಿದರು. ಪಿ.ಎಚ್‌.ಡಿ. ವ್ಯಾಸಂಗಕ್ಕೆ ಅಣಿ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ತಂದೆಯಿಂದ ಒಂದು ಪತ್ರ ಬಂದಿತು. “ತಾಯಿ ಹಾಸಿಗೆ ಹಿಡಿದು ಮಲಗಿದ್ದಾರೆ. ತತ್‌ಕ್ಷಣ ಸ್ವದೇಶಕ್ಕೆ ಬಾ.”

ಅವರಲ್ಲಿ ಹಣವಿರಲಿಲ್ಲ. ಅವರು ಬೇರೆಬೇರೆ ಉದ್ಯಮ ಮಾಡಿ ಹಣ ಕೂಡಿಸಲು ಯತ್ನಿಸಿದರು. ಅನಿರೀಕ್ಷಿತವಾಗಿ ನೆರವು ಸಿಕ್ಕಿತು. ೧೯೨೯ರ ಸೆಪ್ಟೆಂಬರಿನಲ್ಲಿ ಭಾರತಕ್ಕೆ ಹಿಂದಿರುಗಿದರು.

ಅವರು ಬಯಸಿದಂತೆ ವಿಜ್ಞಾನಿಯಾಗಲಿಲ್ಲ; ಸಮಾಜಶಾಸ್ತ್ರಜ್ಞರಾಗಿ ಹಿಂತಿರುಗಿದರು. ಸಮತಾವಾದಿಯಾಗಿ ಹಿಂತಿರುಗಿದರು.

ಅಮೇರಿಕಕ್ಕೆ ಹೊರಡುವಾಗ ಇಪ್ಪತ್ತು ವರುಷದ ಅನುಭವಿಲ್ಲದ ಯುವಕ. ಈಗ ಇಪ್ಪತ್ತೇಳು ವರ್ಷ ವಯಸ್ಸಿನವನಾಗಿ ಜೀವನದ ಅನುಭವ ತುಂಬಿತ್ತು. ಸ್ವತಂತ್ರ ವಿಚಾರಶೀಲನಾಗಿದ್ದ. ವಿದೇಶದಲ್ಲಿದ್ದರೂ ನೈತಿಕ ಶಕ್ತಿಯನ್ನು ಕಾಪಾಡಿಕೊಂಡಿದ್ದ ಜಯಪ್ರಕಾಶರು ಮುಂದೆ “ಜೆ.ಪಿ.” ಎಂಬ ಹೆಸರಿನಲ್ಲಿ ಜನಪ್ರಿಯರಾದರು.

ಜನತೆಯ ಹೃದಯಗಳನ್ನು ಗೆದ್ದ ನಾಯಕ.

ಕಾಂಗ್ರೆಸ್‌ಮುಖಂಡ – ಸ್ವಾತಂತ್ರ್ಯ ಯೋಧ

ಜೆ.ಪಿ. ಊರಿಗೆ ಬಂದುದನ್ನು ಕೇಳಿ ಪ್ರಭಾವತಿಯೂ ಆಶ್ರಮದಿಂದ ಬಂದರು. ಆ ವೇಳೆಗೆ ಅವರು ಗಾಂಧೀಜಿ ಮತ್ತು ಬಾ ಅವರ ಆಶ್ರಮದಲ್ಲಿ ಏಳು ವರ್ಷ ಕಳೆದಿದ್ದರು. ವಿವಾಹ ಮಾಡಿಕೊಂಡಿದ್ದರೂ ದೇಶ ಸೇವೆಗೆ ಪೂರ್ಣಕಾಲ ಕೊಡಲು ಬ್ರಹ್ಮಚರ್ಯ ವ್ರತವನ್ನು ಸಾಧಿಸಬೇಕೆಂದು ನಿಶ್ಚಯಿಸಿದ್ದರು. ಆದುದರಿಂದ ಸ್ವಲ್ಪ ಕಾಲ ಜಿಜ್ಞಾಸೆ ಆಗಿ ಇಬ್ಬರಿಂದಲೂ ತೀರ್ಮಾನವಾಗಬೇಕಾಗಿತ್ತು. ಇದಕ್ಕೆ ಜೆ.ಪಿ.ಯವರ ಒಪ್ಪಿಗೆಯೂ ಬೇಕಾಗಿತ್ತು.

ಊರಿನಲ್ಲಿ ಸ್ವಲ್ಪಕಾಲ ಇದ್ದಮೇಲೆ ದಂಪತಿಗಳು ಗಾಂಧೀಜಿ ದರ್ಶನಕ್ಕೆ ಆಶ್ರಮಕ್ಕೆ ಬಂದರು.

ಆ ಸಮಯದಲ್ಲಿ ಆಶ್ರಮದಲ್ಲಿಯೇ ಅಖಿಲ ಭಾರತ ಕಾಂಗ್ರೆಸ್‌ನ ಕಾರ್ಯಕಾರಿ ಮಂಡಳಿ ಸಭೆ ಸೇರಿತ್ತು. ದೇಶದ ಮುಖಂಡರು ಆಗಮಿಸಿದ್ದರು. ಜೆ.ಪಿ.ಎಲ್ಲರಿಗೂ ಪರಿಚಯವಾದರು. ಜವಹರಲಾಲರಿಗಂತೂ ಅಂತರಂಗದ ಮಿತ್ರರೇ ಆದರು. ಅವರು ಜೆ.ಪಿ.ಯವನ್ನು ಅಲಹಾಬಾದಿನಲ್ಲಿದ್ದ ಕಾಂಗ್ರೆಸ್‌ಕಾರ್ಯಾಲಯಕ್ಕೆ ಆಹ್ವಾನಿಸಿದರು. ಜೆ.ಪಿ. ಒಪ್ಪಿಕೊಂಡು ಕಾರ್ಮಿಕ ಶಾಖೆಯನ್ನು ವ್ಯವಸ್ಥಿತವಾಗಿ ಸಂಘಟಿಸಲು ಅನುವಾದರು.

ಸ್ವಲ್ಪಕಾಲದ ಮೇಲೆ ಜೆ.ಪಿ. ಅವರ ತಾಯಿ ಕಾಲವಾದರು. ಆಗ ಜೆ.ಪಿ. ಸಿತಾಬ್‌ದಿಯಾರಕ್ಕೆ ಹೋದರು. ಅಲ್ಲೇ ನಿಂತರು. ಜವಹರಲಾಲರ ಪತ್ನಿ ಶ್ರೀಮತಿ ಕಮಲಾ ನೆಹರು ಪ್ರಭಾವತಿಗೆ ಕಾಗದ ಬರೆದು ಜೆ.ಪಿ.ಯನ್ನು ಮತ್ತೆ ಅಲಹಾಬಾದಿಗೆ ಕರೆಸಿಕೊಂಡರು. ದಂಪತಿಗಳು ಜವಹರಲಾಲರ ಕುಟುಂಬದವರೇ ಆದರು. ಇಬ್ಬರೂ ಕಮಲಾ ನೆಹರು ಒಂದಿಗೆ ಚಳುವಳಿಗಳಲ್ಲಿ ಭಾಗವಹಿಸಿದರು. ಅಷ್ಟು ಗಾಢವಾಗಿತ್ತು ಅವರ ಪರಸ್ಪರ ಪ್ರೀತಿ.

ಗಾಂಧೀಜಿಯ ಅಣತಿಯಂತೆ ಜೆ.ಪಿ. ಕಾಂಗ್ರೆಸ್‌ಕಾರ್ಯದಲ್ಲಿ ತುಂಬ ಮುಳುಗಿದರು. ಒಮ್ಮೆ ಮದರಾಸಿನಲ್ಲಿ ಪ್ರಚಾರಕಾರ್ಯದಲ್ಲಿದ್ದಾಗ ಅವರನ್ನು ಬ್ರಿಟಿಷ್‌ಸರಕಾರ ಬಂಧಿಸಿತು. ಆಗ ಪತ್ರಿಕೆಗಳು “ಕಾಂಗ್ರೆಸ್‌ಬ್ರೈನ್‌(ಕಾಂಗ್ರೆಸಿನ ಮೆದುಳು) ಬಂಧಿತವಾಯಿತು” ಎಂದು ಪ್ರಚಾರಪಡಿಸಿದರು. ಅವರ ಪ್ರಭಾವ ಅಷ್ಟಿತ್ತು.

ಕಾಂಗ್ರೆಸ್‌ಸಮಾಜವಾದಿ

ಜೆ.ಪಿ. ೧೯೩೪ರಲ್ಲಿ ನಾಸಿಕ್‌ಸೆರೆಮನೆಯಲ್ಲಿ ಇರುವಾಗ ಮಿತ್ರರೊಡಗೂಡಿ “ಕಾಂಗ್ರೆಸ್‌ಸಮಾಜವಾದಿ ಪಕ್ಷ” ಎಂಬುದನ್ನು ಸ್ಥಾಪಿಸಲು ಯೋಚಿಸಿದರು. (ಸಮಾಜವಾದ ಅಥವಾ ಸೋಷಿಯಲಿಸಂ ಎಂದರೆ ಖಾಸಗಿ ಆಸ್ತಿಯ ಹಕ್ಕನ್ನು ವಿರೋಧಿಸಿ, ಸಮಾಜದ ಸಂಪತ್ತೆಲ್ಲ ಇಡೀ ಸಮಾಜಕ್ಕೆ ಸೇರಿದ್ದು, ಅವರ ಹಿಡಿತದಲ್ಲಿ ಇರಬೇಕು ಎನ್ನುವ ಪಂಥ). ಅದು ಅಖಿಲ ಭಾರತ ಕಾಂಗ್ರೆಸಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕೆಂದು ನಿಯೋಜಿಸಿದರು. ಸೆರೆಮನೆಯಿಂದ ಬಿಡುಗಡೆಯಾದ ಮೇಲೆ ವಿದ್ಯುಕ್ತವಾಗಿ ಸಮಾಜವಾದಿ ಪಕ್ಷ ಆಚಾರ್ಯ ನರೇಂದ್ರ ದೇವರ ಅಧ್ಯಕ್ಷತೆಯಲ್ಲಿ ರೂಪುಗೊಂಡಿತು. ಡಾಕ್ಟರ್ ರಾಮಮನೋಹರ ಲೋಹಿಯ, ಡಾಕ್ಟರ್ ಸಂಪೂರ್ಣಾನಂದ, ಯೂಸುಫ್‌ಮೆಹರಲೀ, ಕರ್ನಾಟಕದ ಕಮಲಾದೇವಿ ಚಟ್ಟೋಪಾಧ್ಯಾಯ, ಅಶೋಕ ಮೆಹತಾ, ಮೀನೂ ಮಸಾನಿ ಮುಂತಾದ ಮಿತ್ರರೆಲ್ಲ ಅದನ್ನು ಸೇರಿದರು. ಕಾಂಗ್ರೆಸ್‌ಸಮಾಜವಾದಿ ಪಕ್ಷದಲ್ಲಿ ಸೇರಿದವರೆಲ್ಲ ಯುವಕರು. ಎಲ್ಲ ವಿಚಾರವಂತರು.

ಗಾಂಧೀಜಿಯ ಪ್ರಭಾವದಿಂದ ಸಮಾಜವಾದಿಗಳೆಲ್ಲ ಕಾಂಗ್ರೆಸ್ಸಿನ ಅಂಗವಾಗಿಯೇ ಕೆಲಸ ಮಾಡುತ್ತಿದ್ದರು. ೧೯೪೦ರ “ವೈಯಕ್ತಿಕ ಸತ್ಯಾಗ್ರಹ”ದಲ್ಲಿಯೂ, ೧೯೪೨ರ “ಮಾಡು ಇಲ್ಲ ಮಡಿ” ಎಂಬ ಅಂತಿಮ ಹೋರಾಟದಲ್ಲಿಯೂ ಜೆ.ಪಿ. ಭಾಗವಹಿಸಿದರು. (೧೯೪೨ರ ಆಗಸ್ಟ್‌ನಲ್ಲಿ ಗಾಂಧೀಜಿ, ಸ್ವಾತಂತ್ರ್ಯಕ್ಕಾಗಿ ಭಾರತ ವಜ್ರ ಸಂಕಲ್ಪಮಾಡಿ ಕಟ್ಟಕಡೆಯದಾಗಿ ಹೋರಾಟ ನಡೆಸಬೇಕೆಂದು ಕರೆಕೊಟ್ಟರು. ಅಸಹಕಾರ ಚಳುವಳಿ ಪ್ರಾರಂಭವಾಯಿತು.) ಒಂದು ದೃಷ್ಟಿಯಲ್ಲಿ ೧೯೪೨ರ ಆಂದೋಲನ ಸಮಾಜವಾದಿಗಳದ್ದೇ ಆಗಿತ್ತು ಎನ್ನಬೇಕು. ಅವರು ೧೯೨೨ರ ಅಸಹಕಾರ ಚಳುವಳಿಯ ಎಲ್ಲ ಕಾರ್ಯಕ್ರಮಗಳನ್ನೂ ಅನುಸರಿಸಿದರು. ದೇಶಾದ್ಯಂತ ಲಕ್ಷಾಂತರ ಕಾಂಗ್ರೆಸಿಗರು ಅದಕ್ಕೆ ಓಗೊಟ್ಟರು. ಅನೇಕ ಕಡೆಗಳಲ್ಲಿ ಸರಕಾರವೇ ಇಲ್ಲವೇನೋ ಎನ್ನುವಂತಾಯಿತು. ಜನ ಸ್ವತಂತ್ರರೆಂದು ಘೋಷಿಸಿಕೊಂಡು ಬ್ರಿಟಿಷ್ ಸರಕಾರಕ್ಕೆ ವೀರ ಸವಾಲನ್ನು ಹಾಕಿದರು.

ವೀರ ಜೆ.ಪಿ: ೧೦ ಸಾವಿರ ರೂ. ತಲೆದಂಡ

ರಾಷ್ಟ್ರದ ನಾನಾ ಸೆರೆಮನೆಗಳಲ್ಲಿ ಜೆ.ಪಿ.ವರ್ಷಗಟ್ಟಲೆ ಬಂಧನ ಅನುಭವಿಸಿದ್ದರು. ಹಜಾರಿಬಾಗ್‌ಸೆರೆಮನೆಗೆ ಬಂದಾಗ ಅವರ ವೀರಚೇತನ ಅಲ್ಲಿಂದ ಪಾರಾಗಬೇಕೆಂದು ಹವಣಿಸಿತು. ದೇಶವೆಲ್ಲ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವಾಗ ತಾವು ಸೆರೆಮನೆಯಲ್ಲಿ ನಿಷ್ಕ್ರಿಯರಾಗಿ ಕುಳಿತುಕೊಳ್ಳಲು ಅವರ ಮನಸ್ಸು ಒಪ್ಪಲಿಲ್ಲ. ಅವರಿಗೆ ಆರೋಗ್ಯ ಚೆನ್ನಾಗಿರಲಿಲ್ಲ. ನಡೆಯುವಾಗ ನೋವಿನಿಂದ ಬೆನ್ನು ಬಾಗುತ್ತಿತ್ತು. ಕಣ್ಣು ಗುಳಿ ಬಿದ್ದಿತ್ತು. ಆದರೂ ಸೆರೆಮನೆಯಿಂದ ತಪ್ಪಿಸಿಕೊಂಡು ಹೋಗಲೇಬೇಕೆಂಬ ದೃಢನಿರ್ಧಾರ. ಅವರೂ ಐದು ಜನ ಗೆಳೆಯರೂ ತಪ್ಪಿಸಿಕೊಂಡು ಹೋಗಲು ತೀರ್ಮಾನಿಸಿದರು. ಎಲ್ಲ ಸಿದ್ಧತೆ ಮಾಡಿಕೊಂಡರು. ದೀಪಾವಳಿಯ ಸಡಗರದಲ್ಲಿ ಜೈಲಿನ ಅಧಿಕಾರಿಗಳು ಸ್ವಲ್ಪ ಎಚ್ಚರಿಕೆ ತಪ್ಪಿದಾಗ ತಾವು ಕತ್ತಲೆಯಲ್ಲಿ ಪಾರಾಗುವುದೆಂದು ನಿರ್ಧರಿಸಿದರು. ಆ ಗಳಿಗೆಯೂ ಬಂತು. ಆದರೆ ಜಯಪ್ರಕಾಶರಿಗೆ ನಿಲ್ಲಲ್ಲೂ ತ್ರಾಣವಿಲ್ಲ. ಇತರ ಸ್ನೇಹಿತರಿಗೆ ಕಣ್ಣಿನಲ್ಲಿ ನೀರು ತುಂಬಿತು. ಒಬ್ಬರು “ನಿಮ್ಮ ಆರೋಗ್ಯ ಸರಿ ಇಲ್ಲ, ನೋಡಿದರೆ ಸಂಕಟವಾಗುತ್ತದೆ” ಎಂದರು.

ಜಯಪ್ರಕಾಶರು ಹೇಳಿದರು : “ನನ್ನ ದೇಹದ ನಿತ್ರಾಣ ನೋಡಿ ಮಾತನಾಡುತ್ತಿದ್ದೀರಿ. ದೇಹದ ಶಕ್ತಿ ಒಂದೇ ಶಕ್ತಿಯೆ? ಒಳಗಿನ ಚೇತನಕ್ಕೆ ಶಕ್ತಿ ಇಲ್ಲವೆ? ಸಂಕಲ್ಪ ಮಾಡಿದ್ದಾಗಿದೆ.”

ಅವರೂ ಗೆಳೆಯರೂ ತಪ್ಪಿಸಿಕೊಂಡರು. ಸೆರೆಮನೆಯ ಹೊರಗೆ ಬಂದರೆ ಚಳಿ, ರಕ್ತ ಹೆಪ್ಪಾಗುವ ಚಳಿ. ಹತ್ತು ಹೆಜ್ಜೆ ಹೋಗುವುದರಲ್ಲಿ ನೀರು, ಯಾವ ನೀರು ಹರಿದುಕೊಂಡು ಬಂದಿತ್ತೋ! ಎಲ್ಲ ಅದರಲ್ಲಿ ಬಿದ್ದರು. ಎದ್ದರು. ಬಟ್ಟೆ ಎಲ್ಲ ಒದ್ದೆ. ಹೇಗೆ ಹೋಗಬೇಕೋ ದಾರಿ ತಿಳಿಯದು. ತೋರಿದ ಕಡೆ ನಡೆದರು. ಕಾಡನ್ನು ಹೊಕ್ಕರು. ಹುಲಿಯ ಗರ್ಜನೆ. ಎಲ್ಲೋ ಕುಳಿತು ಒಂದಿಷ್ಟು ಎಲೆ ಸೇರಿಸಿ ಬೆಂಕಿ ಮಾಡಿಕೊಂಡರು. ಬೆಳಗಾಯಿತು. ಮುಂದೆ ನಡೆದರು. ಜೈಲಿನಲ್ಲಿ ಇವರೆಲ್ಲ ತಪ್ಪಿಸಿಕೊಂಡ ಸಂಗತಿ ಪತ್ತೆಯಾಯಿತು. ಎಲ್ಲೆಲ್ಲೂ ಪೊಲೀಸರೆ ಇವರಿಗಾಗಿ ಹುಡುಕಲು.

ಜಯಪ್ರಕಾಶರು ನೇಪಾಳದ ದೂರದ ಕಣಿವೆ ತಲುಪಿದರು. ಅಲ್ಲಿ ನೂರಾರು ಜನಕ್ಕೆ ಕಿರುಕುಳ ಯುದ್ಧ ತರಬೇತಿ ಕೊಟ್ಟು, ಭಾರತಕ್ಕೆ ಕಳುಹಿಸಿ ಬ್ರಿಟಿಷ್‌ಸರಕಾರದೊಂದಿಗೆ ಹೋರಾಡಲು ವ್ಯವಸ್ಥೆ ಪ್ರಾರಂಭಿಸಿದರು. ಅದು ಸರಕಾರಕ್ಕೆ ತಿಳಿದು ಅವರನ್ನು ಬಂಧಿಸಲು ಯತ್ನಿಸಿತು. ಆದರೆ ಅದು ವಿಫಲವಾಯಿತು. ಅವರನ್ನು ಹಿಡಿದುಕೊಟ್ಟವರಿಗೆ ಹತ್ತು ಸಾವಿರ ರೂಪಾಯಿ ಬಹುಮಾನ ಕೊಡುವುದಾಗಿ ಘೋಷಿಸಿತು.

ಹೀಗೆ ಗುಪ್ತ ಕಾರ್ಯಾಚರಣೆಯಲ್ಲಿ ತೊಡಗಿದ್ದ ಜೆ.ಪಿ. ಮತ್ತು ಅವರ ಮಿತ್ರರು ಭಾರತಕ್ಕೆ ಹಿಂತಿರುಗಿ ಮತ್ತೆ ತಮ್ಮ ಕಾರ್ಯದಲ್ಲಿ ತೊಡಗಿದರು. ಅವರು ದೆಹಲಿಗೆ ಬಂದು ಅಲ್ಲಿಂದ ಮುಂದಕ್ಕೆ ರೈಲಿನಲ್ಲಿ ಲಾಹೋರಿಗೆ ಪ್ರಯಾಣ ಮಾಡಿದರು. ಜೆ.ಪಿ.ವೇಷ ಬದಲಾಯಿಸುವುದರಲ್ಲಿ ಸಮರ್ಥರೆಂದೂ ಅವರ ಹಿಂದೆ ಒಂದು ಗುಪ್ತಪಡೆಯೇ ಇರುತ್ತೆಂದೂ ಪ್ರಚಾರವಾಗಿತ್ತು.

ಜೆ.ಪಿ. ಇದ್ದ ರೈಲು ಅಮೃತಸರ ನಿಲ್ದಾಣ ತಲುಪಿತ್ತು. ಪ್ರಾತಃಕಾಲದ ಸಮಯ. ಅವರು ಚಾ ಸೇವಿಸಿ ಪತ್ರಿಕೆ ಓದುತ್ತಿದ್ದರು. ಒಬ್ಬ ಆಂಗ್ಲ ವ್ಯಕ್ತಿ ಮತ್ತು ಇಬ್ಬರು ಸಿಖ್ಖರು ಅವರಿದ್ದ ಬಂಡಿಯನ್ನೇ ಹತ್ತಿದರು.

“ನೀವು ಯಾರು?” ಆಂಗ್ಲ ವ್ಯಕ್ತಿ ಕೇಳಿದ.

“ನಾನೊಬ್ಬ ವ್ಯಾಪಾರಿ. ಮುಂಬಯಿಯಿಂದ ರಾವಲ್ಪಿಂಡಿಗೆ ಪ್ರಯಾಣ ಮಾಡುತ್ತಿದ್ದೇನೆ” ಎಂದರು. ಜೆ.ಪಿ.

“ಆಹಾ ! ನೀವು ಜೆ.ಪಿ. ಅಲ್ಲವೇ? ಹೌದು, ನೀವು ಬಂಧನಕ್ಕೆ ಒಳಗಾಗಿದ್ದೀರಿ.” ತಟ್ಟನೆ ಹೇಳಿದ ಆಂಗ್ಲ ವ್ಯಕ್ತಿ. ಅವರನ್ನು ಪೂರ್ಣ ಶೋಧನೆಗೆ ಒಳಪಡಿಸಿದ. ಏನೂ ಶಾಸ್ತ್ರಾಸ್ತ್ರ ಸಿಕ್ಕಲಿಲ್ಲ. ಅಂತೂ ಹತ್ತು ಸಾವಿರ ರೂಪಾಯಿ ತಲೆದಂಡ ಹೊತ್ತಿದ್ದ ವ್ಯಕ್ತಿ ಸಿಕ್ಕಿದನೆಂದು ಅವರಿಗೆ ತೃಪ್ತಿ. “ಸ್ವಾತಂತ್ರ್ಯದ ಶಿಶು” ಜೆ.ಪಿ. ಬಂಧಿತರಾಗಿ ಮತ್ತೆ ಸೆರೆಮನೆ ಸೇರಿದರು.

೧೯೪೬ರಲ್ಲಿ ಎರಡನೇ ಜಾಗತಿಕ ಯುದ್ಧ ಮುಗಿಯಿತು. ಭಾರತದ ಸ್ವಾತಂತ್ರ್ಯ ಸಮಸ್ಯೆಯನ್ನು ಬಿಡಿಸಲು ಬ್ರಿಟಿಷರು ಪ್ರಯತ್ನಿಸಿದರು. ಒಂದು ಒಪ್ಪಂದವಾಯಿತು. ಅದರ ಪ್ರಕಾರ ಜೆ.ಪಿ. ಬಂಧವಿಮುಕ್ತರಾದರು.

ಭಾರತ ವಿಭಜನೆ

೧೯೪೭ರ ಆಗಸ್ಟ್‌೧೫ರಂದು ಭಾರತ ಸರ್ವ ಸ್ವತಂತ್ರ ರಾಷ್ಟವಾಯಿತು. ಜವಹರಲಾಲ್‌ಭಾರತದ ಪ್ರಥಮ ಪ್ರಧಾನಮಂತ್ರಿಯಾದರು. ವೈಸರಾಯ್‌ಯನ್ನು ಉಳಿಸಿಕೊಂಡುದರಿಂದ ಸಮಾಜವಾದಿಗಳಿಗೆ ಪೂರ್ಣ ಸ್ವಾತಂತ್ರ್ಯ ಬರಲಿಲ್ಲವೆನಿಸಿತು.

ಭಾರತ ವಿಭಜನೆಯಾಗಿ ಎರಡು ಹೋಳಾಯಿತು. ಪಾಕಿಸ್ತಾನ್‌ಜನ್ಮತಾಳಿತು. ಈ ವಿಭಜನೆಯ ಯೋಜನೆಗೆ ಒಪ್ಪದಿದ್ದವರು ಮೂರು ಮಂದಿ ಮಾತ್ರ – ಗಾಂಧೀಜಿ, ಗಡಿನಾಡಿನ ಗಾಂಧಿ ಮತ್ತು ಜೆ.ಪಿ. ಅಖಿಲ ಭಾರತ ಕಾಂಗ್ರೆಸ್‌ಈ ಯೋಜನೆಗೆ ಒಪ್ಪಿಗೆಯಿತ್ತಿತ್ತು. ಇದರಿಂದ ರಕ್ತದ ಕೋಡಿಯೇ ಹರಿಯಿತು. ಹಿಂದೂ ಮುಸಲ್ಮಾನ್‌ಸಮಸ್ಯೆ ಪೂರ್ಣವಾಗಿ ತೀರ್ಮಾನವಾದಂತೆ ಆಗಲಿಲ್ಲ. ಗಾಂಧೀಜಿ ಮುಸಲ್ಮಾನರ ಪರ ಎಂದು ಭಾವಿಸಿದ ಒಬ್ಬ ಯುವಕ ಅವರನ್ನು ಗುಂಡಿಟ್ಟು ಕೊಂದ.

ಗಾಂಧೀಜಿಯ ಸಾವಿನಿಂದ ಜೆ.ಪಿ. ಮತ್ತು ಪ್ರಭಾವತಿಗೆ ಮಹಾ ದುಃಖವಾಯಿತು. ಅವರಿಬ್ಬರ ನಡುವೆ ಸಮಸ್ಯೆಯಾಗಿಯೇ ಉಳಿದಿದ್ದ ಬ್ರಹ್ಮಚರ್ಯದ ಪ್ರಶ್ನೆಗೆ ಉತ್ತರ ಕಂಡುಕೊಂಡರು. ರಾಷ್ಟ್ರಸೇವೆಗೆ ಇಬ್ಬರೂ ತಮ್ಮನ್ನು ಸಮರ್ಪಿಸಿಕೊಂಡರು.

ಮತ್ತೆ ಪರಿವರ್ತನೆ

ಕಾಂಗ್ರೆಸ್‌ಸಮಾಜವಾದಿ ಪಕ್ಷ ಕಾಂಗ್ರೆಸಿನಿಂದ ಬೇರೆ ಆಯಿತು. ಜೆ.ಪಿ. ದೇಶದಾದ್ಯಂತ ಸಂಚರಿಸಿ ಸಂಘಟಿಸತೊಡಗಿದರು. ಎಂಟು ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿದ್ದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆದ ಚುನಾವಣೆಗಳಲ್ಲಿ ಅದು ಒಂದು ರೀತಿಯಲ್ಲಿ ವಿಫಲವೇ ಆಯಿತು. ಪಕ್ಷ ಒಡೆದು ಪ್ರಜಾ ಸಮಾಜವಾದಿ ಪಕ್ಷ ಮತ್ತು ಸಮಾಜವಾದೀ ಪಕ್ಷ ಎಂದು ಎರಡು ಭಾಗವಾಯಿತು. ವಿಚಾರಶೀಲ ಜೆ.ಪಿ. ಇದಕ್ಕೆಲ್ಲ ಕಾರಣ ಗಾಂಧೀಜಿಯವರ ಮಾರ್ಗವನ್ನು ಅನುಸರಿಸದಿದ್ದುದ್ದೇ ಎಂಬ ನಿರ್ಧಾರಕ್ಕೆ ಬಂದಿದ್ದರು. ಜಗತ್ತಿನ ಎಲ್ಲ ರಾಜಕೀಯ ವಾದಗಳೂ ಹಿಂಸೆಯ ಮೂಲವೆಂದು ಅವರು ಅರಿತರು. ಅಹಿಂಸೆಯೇ ರಾಜಮಾರ್ಗವೆಂದು ತಿಳಿದರು. “ಗಾಂಧೀಜಿ ಬದುಕಿರುವಾಗ ಈ ಸಿದ್ಧಾಂತಕ್ಕೆ ನಾನು ಬರಲಾಗಲಿಲ್ಲವಲ್ಲ” ಎಂದು ಮರುಗಿದರು.

ಜೀವನ ದಾನ

ಗಾಂಧೀಜಿ ನಂತರ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಭೂದಾನ ಆಂದೋಲನವನ್ನು ಸ್ಥಾಪಿಸಿದ ವಿನೋಬಾಭಾವೆ ಅವರ ವಿಧಾನವನ್ನು ಜೆ.ಪಿ. ಒಪ್ಪಿದರು. ದೇಶದಲ್ಲಿ ಕೆಲವರು ಶ್ರೀಮಂತರಿದ್ದು ಬಹುಮಂದಿ ಬಡತನದ ಕಣ್ಣೀರಿನಲ್ಲಿ ಕೈತೊಳೆಯುವುದು ತಪ್ಪು. ಇತರ ದೇಶಗಳಲ್ಲಿ ಇಂತಹ ಅಸಮಾನತೆ ತೀರ ಹೆಚ್ಚಾದಾಗ ಬಡವರು ಸಿಡಿದೆದ್ದಿದ್ದಾರೆ. ರಕ್ತ ಪ್ರವಾಹ ಹರಿದಿದೆ. ಅದಿಲ್ಲದೆ ಸಮಾಜದಲ್ಲಿ ಬದಲಾವಣೆಯಾಗಬೇಕು. ಉಳ್ಳವರು ವಿವೇಚನೆಯಿಂದ ನಡೆಯಬೇಕು. ತಾವೇ ತಮ್ಮ ಸಂಪತ್ತನ್ನು ಸಮಾಜಕ್ಕೆ ಕೊಡಬೇಕು. ಈ ಗುರಿಗಾಗಿ ವಿನೋಬಾ ಶ್ರಮಿಸುತ್ತಿದ್ದರು. “ವಿನೋಬಾ, ಗಾಂಧೀವಾದದ ಕ್ರಾಂತಿಕಾರಿ ಶಕ್ತಿಯ ಒಂದು ಕಿಡಿ. ಈ ಕಿಡಿಯೂ ಮತ್ತು ಸಮಾಜವಾದಿ ಪಕ್ಷವೂ ಜೊತೆಗೂಡಿದಲ್ಲಿ ಅದು ಇಡಿಯ ದೇಶವನ್ನು ಕಲಕಿ ಅನ್ಯಾಯದ ವಿರುದ್ಧ ಪ್ರಚಂಡ ಜ್ವಾಲೆಯನ್ನೇ ಸೃಷ್ಟಿಸಿತು.” ಈ ನಂಬಿಕೆಯಿಂದ ಜೆ.ಪಿ. ತಮ್ಮ ಪಕ್ಷವನ್ನು ಪರಿವರ್ತಿಸಲು ಯತ್ನಿಸಿದರು. ಕೊನೆಗೆ ಅವರು ಪಕ್ಷವನ್ನೇ ತ್ಯಜಿಸಿದರು. ಭೂದಾನಕಾರ್ಯಕ್ಕೆ ಜೀವನವನ್ನೇ ದಾನ ಮಾಡಿದರು. “ಜೀವನ ದಾನಿ” ಎಂಬ ಹೆಸರನ್ನು ಪಡೆದರು. ಇಪ್ಪತ್ತು ವರ್ಷ ಕಾಲ ವಿನೋಬಾ ಸೂಚಿಸಿದ ಎಲ್ಲ ಕಾರ್ಯಗಳಲ್ಲೂ ದುಡಿದರು. ಭೂದಾನ ಆಂದೋಲನ ಗ್ರಾಮದಾನವಾಯಿತು. (ಭೂದಾನ ಆಂದೋಲನ ಎಂದರೆ ಜಮೀನು ಇರುವವರು ತಾವಾಗಿಯೇ ಇತರರಿಗೆ ದಾನ ಮಾಡಲು ಭೂಮಿಯನ್ನು ವಿನೋಬಾ ಅವರಿಗೆ ಅಥವಾ ಅವರ ಕಾರ್ಯಕರ್ತರಿಗೆ ಒಪ್ಪಿಸುವುದು). ಬಿಹಾರದಲ್ಲಿ ಸಹಸ್ರಾರು ಎಕರೆ ಭೂದಾನ ಬಂದಿತು. ಗ್ರಾಮದಾನಗಳಾದವು. ಪ್ರಾಂತದಾನವೂ ಆಯಿತು. ಗ್ರಾಮದಾನಕ್ಕೆ ಸಹಾಯವಾಗಿ ಸಂಪತ್ತಿದಾನ ಶಾಂತಿಸೇನೆ ಇವುಗಳು ಕಾರ್ಯಕ್ರಮಗಳಾದುವು. ಜೆ.ಪಿ. ಪ್ರಥಮ ಶಾಂತಿ ಸೈನಿಕ ಆದರು.

ಪಕ್ಷರಹಿತ ರಾಜಕೀಯ

ಈ ಆಂದೋಲನ ಪಕ್ಷರಹಿತವಾಗಿತ್ತು. ರಾಜಕೀಯ ಪಕ್ಷಗಳ ಪರಸ್ಪರ ಸೆಣಸಾಟದಿಂದ ದ್ವೇಷ, ಭ್ರಷ್ಟಾಚಾರ, ರಾಜ್ಯದ ಅತಿಹಿಂಸೆ ಇವೆಲ್ಲ ಉಂಟಾಗುತ್ತದೆಂದು ಜೆ.ಪಿ.ಮನಗಂಡರು. ರಾಜ್ಯಶಕ್ತಿಗಿಂತ ಲೋಕಶಕ್ತಿ ಅಥವಾ ಸ್ವತಂತ್ರ ಜನಶಕ್ತಿ ಮುಖ್ಯವೆಂದು ಅವರು ವಾದಿಸಿದರು. ಅದೇ ಅವರ ನಂಬಿಕೆಯಾಯಿತು.

ಧರ್ಮಯೋಧ – ಶಾಂತಿಯೋಧ

ರಾಜ್ಯಶಕ್ತಿಯಿಂದ ದೂರ ಆದ ಅಹಿಂಸಕ ಸಮಾಜ ರಚನೆ ಗಾಂಧೀಜಿಯ ಗುರಿಯಾಗಿತ್ತು. ಅದನ್ನು ಅವರು “ರಾಮರಾಜ್ಯ” “ಸರ್ವೋದಯ ಸಮಾಜರಚನೆ” ಇತ್ಯಾದಿ ಹೆಸರುಗಳಿಂದ ವರ್ಣಿಸಿದರು. ಸರ್ವೋದಯಕ್ಕಾಗಿ ರಾಜಕೀಯ ಸ್ವಾತಂತ್ರ್ಯ ಪಡೆದಿದ್ದ ಭಾರತಕ್ಕೆ ಆರ್ಥಿಕ ಸಮಾನತೆಯ ಮಾರ್ಗವನ್ನು ವಿನೋಬಾ ತೋರಿಸಿದ್ದರು. ಅದಕ್ಕಾಗಿಯೇ ಜೆ.ಪಿ.ಜೀವನದಾನ ಮಾಡಿ ದುಡಿಯುತ್ತಿದ್ದುದ್ದು.

ಅವರ ದೃಷ್ಟಿ ರಾಷ್ಟ್ರೀಯ ದೃಷ್ಟಿ ಅಷ್ಟೇ ಅಲ್ಲ; ಅದು ವಿಶ್ವವ್ಯಾಪಕ ದೃಷ್ಟಿ. ಆದ್ದರಿಂದ ಅವರು ರಾಷ್ಟ್ರ ಸಮಸ್ಯೆಗಳನ್ನೂ ಬಗ್ಗೆ ಚಿಂತಿಸುತ್ತಿದ್ದಂತೆಯೇ ಅಂತರ ರಾಷ್ಟ್ರೀಯ ಸಮಸ್ಯೆಗಳನ್ನೂ ಕುರಿತು ಚಿಂತಿಸುತ್ತಿದ್ದರು. ಜಗತ್ತಿನ ಯಾವ ಮೂಲೆಯಲ್ಲಿ ಅನ್ಯಾಯ ನಡೆದರೂ ಅದಕ್ಕಾಗಿ ಅವರ ಅಂತರಾತ್ಮ ಸಿಡಿದು ನಿಲ್ಲುತ್ತಿತ್ತು. ಉದಾಹರಣೆಗೆ, ದೊಡ್ಡ ರಾಷ್ಟ್ರವಾದ ರಷ್ಯ ಚಿಕ್ಕ ರಾಷ್ಟ್ರ ಹಂಗೇರಿಯನ್ನು ಕಬಳಿಸಿತು, ಚೀನಾ ದೇಶ ಟಿಬೆಟ್ಟಿನ ಮೇಲೆ ಧಾಳಿ ಮಾಡಿತು; ದುರಾಕ್ರಮಣ ಮಾಡಿತು. ಚೀನಾ ಭಾರತದ ಮೇಲೆ ಧಾಳಿ ಮಾಡಿತು. ಭಾರತದ ಭಾಗವಾದ ಗೋವ, ಡಯೂ, ಡಾಮನ್‌ಗಳಲ್ಲಿ ಪೋರ್ಚುಗಲ್ ಸರ್ಕಾರ ದಬ್ಬಾಳಿಕೆ ನಡೆಸಿತ್ತು. ಪಾಕೀಸ್ತಾನದವರು ಬಾಂಗ್ಲಾ ದೇಶದ ಮೇಲೆ ದಬ್ಬಾಳಿಕೆ ನಡೆಸಿದರು. ಈ ಸಂದರ್ಭಗಳಲ್ಲೆಲ್ಲ ಜೆ.ಪಿ. ತೊಂದರೆಗೆ ಒಳಗಾದವರ ಪಕ್ಷನ್ನು ವಹಿಸಿ ಜಗತ್ತಿನ ಸಹಾನುಭೂತಿಯನ್ನು ಗಳಿಸಿದರು. ವಿಶ್ವಪರ್ಯಟನ ಮಾಡಿ ಜನಾಭಿಪ್ರಾಯವನ್ನು ಕೂಡಿಸಿದರು. ಹಿಂಸಾಕೃತ್ಯಕ್ಕೆ ಎದುರಾಗಿ ಧರ್ಮಯೋದನಂತೆ, ವಿಶ್ವ ಶಾಂತಿಯ ಯೋಧನಂತೆ ಅವರು ಅವಿಶ್ರಾಂತವಾಗಿ ದುಡಿದರು.

ರಾಜಕೀಯ ವಿರಾಮ – ಅಜ್ಞಾತ

೧೯೭೧ರಲ್ಲಿ ಅವರಿಗೆ ೬೯ ವರ್ಷ ತುಂಬಿತು. ಅವರ ಆರೋಗ್ಯವೂ ಕೆಟ್ಟಿತು. ವೈದ್ಯರ ಸಲಹೆಯ ಮೇರೆಗೆ ಸ್ವಲ್ಪಕಾಲ ವಿಶ್ರಾಂತಿ ಪಡೆದುಕೊಂಡು ಅನಂತರ ಅಜ್ಞಾತಕ್ಕೆ ಹೋದರು. ಅವರ ಹೆಂಡತಿ ಪ್ರಭಾವತಿಯವರು ಸಲಹೆ ಮಾಡಿದಂತೆ ಆ ಕಾಲದಲ್ಲಿ ಸಕ್ರಿಯ ರಾಜಕೀಯದಿಂದ ಅವರು ಸಂಪೂರ್ಣವಾಗಿ ದೂರವಾದರು. ಎಲ್ಲ ಸಭೆ ಸಮಿತಿಗಳಿಗೂ ರಾಜೀನಾಮೆ ಇತ್ತರು. ಜಿ.ಪಿ.ಅವರ ಜೀವನದಲ್ಲಿ ಇದೊಂದು ಮಹತ್ವದ ಘಟ್ಟ.

ಪಾಪಿ ದೇವೋ ಭವ

ಮಧ್ಯಪ್ರದೇಶದ ಚಂಬಲ್‌ಕಣಿವೆಯಲ್ಲಿ ಡಕಾಯಿತರ ಹಾವಳಿ ವಿಪರೀತವಾಗಿತ್ತು. ಜನ ಭಯದಿಂದ ತಲ್ಲಣಿಸುತ್ತಿದ್ದರು. ಡಕಾಯಿತರ ಮನಸ್ಸನ್ನು ಪರಿವರ್ತಿಸಿ ಅವರನ್ನು ಸಮಾಜದ ಒಳ್ಳೆಯ ಪ್ರಜೆಗಳನ್ನಾಗಿ ಮಾಡಬೇಕೆಂದು ವಿನೋಬಾ ೧೯೬೦ರಲ್ಲಿ ಪಾದಯಾತ್ರೆ ಕೈಗೊಂಡರು. ಆಗ ಆ ಸಂತನಿಗೆ ಇಪ್ಪತ್ತು ಮಂದಿ ದರೋಡೆಕೋರರು ಶರಣು ಬಂದಿದ್ದರು. ಅವರು ತಮ್ಮ ಹಿಂದಿನ ಜೀವನಕ್ಕೆ ಪಶ್ಚಾತ್ತಾಪಪಟ್ಟು ನಾಗರೀಕ ಜೀವನ ಬಯಸಿದ್ದರು. ಶಾಂತಿಪ್ರಿಯರಾಗಿ ಪರರಿಗೆ ಉಪಕಾರಿಗಳಾಗಿ ಬಾಳಲು ಬಯಸಿದ್ದರು. ಅಂದಿನಿಂದ ಡಕಾಯಿತರನ್ನು ಪತ್ತೆ ಹಚ್ಚಿ ಅವರನ್ನೆಲ್ಲಾ ನಾಗರೀಕ ಜೀವನಕ್ಕೆ ಪರಿವರ್ತಿಸುವ ಪ್ರಯತ್ನ ನಡೆದಿತ್ತು. ಅದಕ್ಕಾಗಿಯೇ ಒಂದು ಸಮಿತಿ ಏರ್ಪಟ್ಟಿತ್ತು. ಸರ್ಕಾರವೂ ಇದಕ್ಕೆ ಮಾನ್ಯತೆ ಕೊಟ್ಟಿತ್ತು.

೧೯೭೧ನೇ ಅಕ್ಟೋಬರ್ ತಿಂಗಳು ಜೆ.ಪಿ.ಪಟನಾದ ತಮ್ಮ ನಿವಾಸ “ಕದಂಕುವಾ” ದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಒಬ್ಬ ಅಜಾನುಬಾಹು ವ್ಯಕ್ತಿ ಬಂದು ಹೀಗೆ ಹೇಳಿದ “ನಾನು ಚಂಬಲ್‌ಕಣಿವೆಯ ಕಾವಲುಗಾರ. ದರೋಡೆಕೋರರು ನನ್ನನ್ನು ನಿಮ್ಮಲ್ಲಿಗೆ ಕಳಿಸಿದ್ದಾರೆ. ಅವರೆಲ್ಲಾ ನಿಮಗೆ ಶರಣಾಗಲು ಬಯಸಿದ್ದಾರೆ.

ಜೆ.ಪಿ.ಗೆ ಅಚ್ಚರಿಯಾಯಿತು. ಆತನನ್ನು ಕುರಿತು “ನೀನು ವಿನೋಬಾ ಬಳಿಗೆ ಹೋಗು. ಅವರ ಸಲಹೆ ಕೇಳು” ಎಂದರು.

ಆದರೆ ಆತ ಬಿಡಲಿಲ್ಲ. ಹೀಗೆ ಹೇಳಿದ “ಬಾಬಾಜಿ ಈ ಮಾತನ್ನು ಕೇಳಿರಿ, ನಾನು ಈ ಪ್ರದೇಶದ ಎಲ್ಲ ಡಕಾಯಿತರ ಪರವಾಗಿ ಹೇಳುತ್ತಿದ್ದೇನೆ. ಅವರೆಲ್ಲ ನಿಮಗೆ ಶರಣಾಗುತ್ತಾರೆ. ವಿನೋಬಾಜಿ ನಿಮ್ಮನ್ನು ಭೇಟಿ ಮಾಡಬೇಕೆಂದು ನನ್ನನ್ನು ಕಳುಹಿಸಿದ್ದಾರೆ. ನನ್ನ ಹೆಸರು ಮಾಧೋಸಿಂಗ್‌.”

ಜೆ.ಪಿ.ಯ ಅಚ್ಚರಿ ಇಮ್ಮಡಿಸಿತು. ನೀನು ಮಾದೋಸೀಂಗ್‌! ಇಲ್ಲಿಗೇಕೆ ಬಂದೆ? ನಿನ್ನನ್ನು ಹಿಡಿದು ಸರಕಾರಕ್ಕೆ ಒಪ್ಪಿಸಿದವರಿಗೆ ಒಂದೂವರೆಲಕ್ಷ ರೂಪಾಯಿ ಬಹುಮಾನವಿದೆ.”

“ನಾವು ನಿಮ್ಮನ್ನು ನಂಬುತ್ತೇವೆ. ಆದ್ದರಿಂದಲೇ ಬಂದಿದ್ದೇನೆ.”

ಜೆ.ಪಿ.ಗೆ ಏನು ಹೇಳಲೂ ತೋರಲಿಲ್ಲ. ಮಾಧೋಸಿಂಗ್‌ಡಕಾಯಿತರಲ್ಲೆಲ್ಲಾ ಮಹಾ ಭಯಂಕರನಾದವನು. ಅವನ ಹೆಸರೇ ಭೀತಿ ಹುಟ್ಟಿಸುತ್ತಿತ್ತು. ಅವನು ಜೆ.ಪಿ.ಯ ಪಾದಮುಟ್ಟಿ ನಮಸ್ಕರಿಸಿದ. ಅವನೇ ಅವರಿಗೆ ಶರಣಾಗತನಾದ ಪ್ರಥಮ ಡಕಾಯಿತ. ಜೆ.ಪಿ. ಅವನ್ನು ಪ್ರೀತಿಯಿಂದ ಕಂಡರು.

ಮಾಧೋಸಿಂಗ್‌ಹೀಗೆ ನುಡಿದ. “ಜಯಪ್ರಕಾಶ ಬಾಬಾ ಎಂದರೇನು ? ಅವರು “ಜಯಪ್ರಕಾಶ”, ಅವರು ಅಹಿಂಸೆ, ಪ್ರೇಮ ಮತ್ತು ಕರುಣೆಗಳ ಜಯ ಪಡೆದವರು.”

ಅಲ್ಲಿಂದ ಮುಂದೆ ಡಕಾಯಿತರು ತಂಡತಂಡವಾಗಿ ಜೆ.ಪಿ.ಗೆ ಶರಣಾದರು. ಇದೊಂದು ಮಹಾ ಪವಾಡ ಜೆ.ಪಿ. ಬುದ್ಧ, ಗಾಂಧೀ ನಾಡಿನವರಲ್ಲವೆ? ಅವರಿಗೆ ಮಾನವ ಸ್ವಭಾವದ ಒಳಿತಿನಲ್ಲಿ ಪೂರ್ಣ ನಂಬಿಕೆಯಿತ್ತು. “ಎಂಥ ಪಾಪಿಯೂ ಒಂದು ದಿನ ಒಳ್ಳೆಯವನಾದಾನು. ಹಾಗೆಯೇ ಎಂಥ ಸಂತನೂ ಹಿಂದೆ ತಪ್ಪು ಮಾಡಿದ್ದಾನು.” ಅಲ್ಲವೆ ?

 

"ಜಯಪ್ರಕಾಶರು ಅಹಿಂಸೆ, ಪ್ರೇಮ ಮತ್ತು ಕರುಣೆಗಳ ಜಯ ಪಡೆದವರು".

ಕಾಂತ್ರಿಯ ಕೈವಾರಿ ಮತ್ತು ಲೋಕನಾಯಕ

೧೯೭೩ರ ಏಪ್ರಿಲ್‌೧೫ರಂದು ಪ್ರಭಾವತಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸ್ವಲ್ಪ ಕಾಲದಲ್ಲೇ ದೈವಾಧೀನರಾದರು. ದೇಶಸೇವೆಗೆ ಮತ್ತು ಮಾನವಸೇವೆಗೆ ಅರ್ಪಿಸಿಕೊಂಡಿದ್ದ ಎರಡು ದಿವ್ಯಜೀವಗಳಲ್ಲಿ ಒಂದು ನಂದಿತು. ಇದರಿಂದ ಜೆ.ಪಿ. ದಿವ್ಯಜೀವಗಳಲ್ಲಿ ಒಂದು ನಂದಿತು. ಇದರಿಂದ ಜೆ.ಪಿ. ಒಂಟಿಯಾದರು. ಅವರು ಅಂತರ‍್ಮುಖರಾಗಿ ದೇಶದ ಬಗ್ಗೆ ಚಿಂತಿಸುವಂತಾಯಿತು. ಸ್ವಾತಂತ್ರ್ಯ ಬಂದು ೨೮ ವರ್ಷಗಳಾಗಿದ್ದರೂ ದೇಶದ ಸ್ಥಿತಿ ಸುಧಾರಿಸಲಿಲ್ಲ. ದಿನದಿನಕ್ಕೆ ಹದಗೆಡುತ್ತಿತ್ತು. ಗಾಂಧೀಜಿ ಕಂಡ ಕನಸು ಭ್ರಮೆಯೆನಿಸಿತ್ತು. ೨೫ ವರ್ಷ ಜಗತ್ತಿನಲ್ಲಿ ಒಂದು ಅಚ್ಚರಿಯೆನಿಸಿದ್ದ ವಿನೋಬಾಜಿಯ ಭೂದಾನ-ಗ್ರಾಮದಾನದ, ಸರ್ವೋದಯ ಸಮಾಜ ರಚನೆಯ ಕಾವು ಆರಿತ್ತು. ದೇಶವನ್ನು ಆಳುವ ಕಾಂಗ್ರೆಸ್‌ಪಕ್ಷ ಅಧಿಕಾರದ ಪೈಪೋಟಿಯಲ್ಲಿ ನಿರತವಾಗಿತ್ತು. ಕಾಳ ಸಂತೆ ವ್ಯಾಪಾರ, ಆಡಳಿತದಲ್ಲಿ ಭ್ರಷ್ಟಾಚಾರ ಸಾರ್ವಜನಿಕ ಜೀವನದಲ್ಲಿ ನೀತಿ-ನಿಯಮಗಳಿಗೆ ತಿಲಾಂಜಲಿ ಇತ್ಯಾದಿ ಅಂಶಗಳಿಂದ ರಾಷ್ಟ್ರದ ಬದುಕು ಅಸಹನೀಯವಾಗಿತ್ತು. ದೀನದಲಿತರು ಇನ್ನೂ ಹೀನಸ್ಥಿತಿಗೆ ಬಂದರು. ಶ್ರೀಮಂತರು ಹೆಚ್ಚು ಶ್ರೀಮಂತರಾದರು. ಈ ದುಃಖಕರ ಚಿತ್ರ ಜೆ.ಪಿ. ಅವರ ಹೃದಯವನ್ನು ಚುಚ್ಚಿತು. ಅವರು ನಾಡು ಮರೆತಿದ್ದ ಗಾಂಧೀ ವಿಧಾನಕ್ಕೆ ಅಸತ್ಯವನ್ನು ಸತ್ಯದಿಂದ ಎಚ್ಚರಿಸುವುದಕ್ಕೆ, ಜನಶಕ್ತಿಯನ್ನು ಎಚ್ಚರಿಸುವುದಕ್ಕೆ, ಸರ್ಕಾರವನ್ನು ಅಂಕೆಯಲ್ಲಿಟ್ಟುಕೊಳ್ಳುವುದಕ್ಕೆ ಮಾರ್ಗ ಯಾವುದು ಎಂದು ಚಿಂತಿಸಿದರು. ದೇಶದಾದ್ಯಂತ ಸಂಚರಿಸಿ ಯುವಜನವನ್ನು, ವಿದ್ಯಾರ್ಥಿಗಳನ್ನು ಕ್ರಾಂತಿಗಾಗಿ ಸಂಘಟಿಸಿದರು. ರಾಷ್ಟ್ರಕ್ಕೆ ನಿಜ ಸ್ವಾತಂತ್ರ್ಯ ತರಲು “ಸಮಗ್ರಕ್ರಾಂತಿ” ಯ ಕಹಳೆಯನ್ನು ಊದಿದರು.

ಸಮಗ್ರಕ್ರಾಂತಿಯ ಕೂಗು ದೇಶದಲ್ಲೆಲ್ಲಾ ಆವರಿಸಿತು. ಅದು ಆರ್ಥಿಕ – ಸಾಮಾಜಿಕ – ರಾಜಕೀಯ – ನೈತಿಕ – ಆಧ್ಯಾತ್ಮಿಕ – ಸಾಂಸ್ಕೃತಿಕ ಹೀಗೆ ಸರ್ವರಂಗಗಳನ್ನೂ ಸ್ಪರ್ಶಿಸಿತು. ರಾಷ್ಟ್ರದಲ್ಲಿ ಕಂಡಬಂದ ಅನೀತಿ, ಅನ್ಯಾಯಗಳನ್ನು ಸತ್ಯ ಅಹಿಂಸೆಯ ರೀತಿಯಿಂದ ಪ್ರತಿಭಟಿಸುವುದೇ ಮತ್ತು ಮೂಲಭೂತವಾಗಿ ಪರಿವರ್ತನೆ ತರುವುದೇ ಇದರ ಗುರಿ. ಸರ್ಕಾರ ಅಧಿಕಾರವನ್ನು ದುರುಪಯೋಗಮಾಡಿಕೊಂಡಾಗ, ನ್ಯಾಯವಾದ ಪ್ರಜಾ ಸ್ವಾತಂತ್ರ್ಯವನ್ನು ಮೊಟಕು ಮಾಡಿದಾಗ, ಸ್ವತಂತ್ರ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅಧಿಕಾರವನ್ನು ಕಿತ್ತುಕೊಂಡಾಗ ಸುಮ್ಮನೆ ಕೂಡುವುದು ಜನಶಕ್ತಿಯ ಲಕ್ಷಣವಲ್ಲ. ಅಂಥ ಸ್ಥಿತಿ ದೇಶದಾದ್ಯಂತ ಆವರಿಸಿ ಜನ ಮೂಕಪ್ರಾಣಿಗಳಂತೆ ಭೀತಿಯಂತೆ ಸೊರಗುತ್ತಿದ್ದ ಸ್ಥಿತಿ, ಮಹಾ ಅವನತಿಯ ಕುರುಹು ಸ್ವತಂತ್ರ ರಾಷ್ಟ್ರಕ್ಕೆ ಅವಮಾನ ತರುವ ಸ್ಥಿತಿ. ಆಡಳಿತ ನಡೆಸುವ ಪಕ್ಷ, ಏಕನಾಯಕ ಪ್ರಭುತ್ವದ ಕಡೆಗೆ ತೀವ್ರಗತಿಯಿಂದ ಸಾಗಿತ್ತು.

ಜೆ.ಪಿ. ಇಂಥ ವಿಚಾರಗಳನ್ನು ಪ್ರಚಾರ ಮಾಡಿದರು. ಮತ್ತು ಜನ ಸಂಘಟನೆ ಮಾಡಿದರು. ಅವರ ಆರೋಗ್ಯ ತೀರ ಕೆಟ್ಟಿತು. ಆದರೆ ಜನತೆಯಲ್ಲಿ ನೈತಿಕ ಜಾಗ್ರತಿ ಆಗಬೇಕು ಎಂದು ದೃಢಸಂಕಲ್ಪ ಮಾಡಿದ ಅವರು ಬೃಹತ್‌ಚಳುವಳಿಯ ನಾಯಕರಾದರು. ೧೯೨೫ರಲ್ಲಿ ಸರ್ಕಾರ ಅವರನ್ನು ಬಂಧಿಸಿತು. ಸೆರೆಮನೆಯಲ್ಲಿಟ್ಟಿತು. ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು. ಲಕ್ಷಾಂತರ ಜನ ಅವರನ್ನು ಹಿಂಬಾಲಿಸಿ ಬಂಧನಕ್ಕೊಳಗಾದರು. ಮಹಾತ್ಮ ಗಾಂಧೀಜಿಯವರ ವೀರಚೇತನ ಅವರಲ್ಲಿ ಮತ್ತೆ ರೂಪುಗೊಂಡಂತೆ ಕಂಡಿತು. ರಾಷ್ಟ್ರಕ್ಕೆ ರಾಷ್ಟ್ರವೇ ಭುಗಿಲೆದ್ದಿತು.

ಬಂಧನದಲ್ಲಿ ಇರುವ ವೇಳೆಯಲ್ಲಿ ಜೆ.ಪಿ.ಯವರ ಆರೋಗ್ಯ ಬಹಳ ಕೆಟ್ಟಿತು. ಅವರ ಮೂತ್ರಕೋಶಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಇದನ್ನು ಸುಧಾರಿಸಲು ಸಾಧ್ಯವಿಲ್ಲವೆಂದು ಕಂಡುಬಂದಾಗ ಸರಕಾರ ಅವರನ್ನು ಬಿಡುಗಡೆ ಮಾಡಿತು. ಅವರು ಮುಂಬಯಿಯ ಜಸ್‌ಲೋಕ್‌ಆಸ್ಪತ್ರೆಯಲ್ಲಿ ಬದುಕು-ಸಾವಿನ ನಡುವೆ ಹೋರಾಟ ನಡೆಸಿ ಸ್ವಲ್ಪ ಉತ್ತಮವೆನಿಸಿದ ಮೇಲೆ ಪಟನಾಕ್ಕೆ ಹಿಂದುರುಗಿದರು.

ಸರ್ಕಾರ ಘೋಷಿಸಿದ್ದ ಚುನಾವಣೆಗಳನ್ನು ಎದುರಿಸಲು ನಾಲ್ಕು ಪ್ರತಿಪಕ್ಷಗಳನ್ನು “ಜನತಾ ಪಕ್ಷ” ಎಂಬ ಹೆಸರಿನಿಂದ ಸಂಘಟಿಸಿದರು. ೧೯೭೭ರ ಮಾರ್ಚಿಯಲ್ಲಿ ಒಟ್ಟುಗೂಡಿಸಿದರು. ರಾಷ್ಟ್ರೀಯ ಮಹಾ ಚುನಾವಣೆ ನಡೆದು ಇಂದಿರಾ ಕಾಂಗ್ರೆಸ್‌ಸರಕಾರ ಸೋತಿತು. ಪ್ರತಿಪಕ್ಷಗಳ ಒಕ್ಕೂಟ ಎನಿಸಿದ್ದ ಜನತಾ ಪಕ್ಷ ಪ್ರಚಂಡ ರೀತಿಯಲ್ಲಿ ಗೆಲುವನ್ನು ಸಾಧಿಸಿತು. ಜೆ.ಪಿ.ನಾಯಕತ್ವದಲ್ಲಿ, ಗಾಂಧೀ ಮಾರ್ಗದಲ್ಲಿ ನಡೆಸಲು ನೂತನ ಸರ್ಕಾರ ಪಣತೊಟ್ಟಿತು.

ಜೆ.ಪಿ.ಆರೋಗ್ಯ ಮತ್ತೆ ಕೆಟ್ಟಿತು. ಅವರು ದೇಶವಿದೇಶಗಳಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಲಿಲ್ಲ. ಸಾವಿನೊಡನೆ ಅವರ ಸೆಣಸಾಟ ಅತ್ಯಂತ ಕರುಣಾಜನಕವಾಗಿತ್ತು. ತಾವು ಕಟ್ಟಿದ ಪ್ರತಿಪಕ್ಷಗಳ ಒಕ್ಕೂಟ ಪೂರ್ಣಕ್ರಾಂತಿಯ ಆಶಯಗಳನ್ನು ಈಡೇರಿಸದೆ ಪರಸ್ಪರ ಕಲಹದಲ್ಲಿ ತೊಡಗಿದ್ದನ್ನು ಕಂಡು ಕಣ್ಣೀರಿಟ್ಟರು. ಅವರಿಗೆ ಬದುಕು ಸಾಕೆನಿಸಿತು. ೧೯೭೯ನೇ ಅಕ್ಟೋಬರ್ ಏಳರಂದು ಈ ಮಹಾ ದೇಶಭಕ್ತ, ಮಾನವ ಪ್ರೇಮಿ, ಸಂತಸದೃಶ ವ್ಯಕ್ತಿ, ದೈವಾಧೀನರಾದರು.

ಸ್ವತಂತ್ರ ಭಾರತ ದಾರಿತಪ್ಪಿ ನಡೆದಾಗ, ಸ್ವಾತಂತ್ರ್ಯದ ಪತಾಕೆಯನ್ನು ಮತ್ತೆ ಎತ್ತಿಹಿಡಿದ ಜೆ.ಪಿ. “ಲೋಕನಾಯಕ” ಎಂದು ಪ್ರಸಿದ್ಧರಾದರು. ಮತಪೆಟ್ಟಿಗೆಯ ಮೂಲಕ ಶಾಂತರೀತಿಯಲ್ಲಿ ಮತ್ತೆ ಭಾರತದ ಪ್ರಜೆಗಳು ನಿರಾಳವಾಗಿ ಬದುಕುವಂತೆ ಆಯಿತು. ಭಾರತದ ಇತಿಹಾಸದಲ್ಲಿ ಅವರ ಹೆಸರು ಒಂದು ಧ್ರುವತಾರೆ. ತ್ಯಾಗಮಯ ಜೀವನ, ಸ್ವಚ್ಛ ಜೀವನ ಇವುಗಳಿಗೆ ಜೆ.ಪಿ.ಒಂದು ಉಜ್ವಲ ನಿದರ್ಶನ. “ಅಧಿಕಾರ ದುರುಪಯೋಗವಾದಾಗ ಅದನ್ನು ಶಾಂತರೀತಿಯಲ್ಲಿ ಪ್ರತಿಭಟಿಸುವ ಶಕ್ತಿಯೇ ನಿಜ ಸ್ವಾತಂತ್ರ್ಯ, ಸ್ವರಾಜ್ಯ” ಎಂಬ ಗಾಂಧೀವಾಣಿ ರಾಷ್ಟ್ರಾದ್ಯಂತ ಮತ್ತೆ ಪ್ರತಿಧ್ವನಿಸುವಂತೆ ಮಾಡಿದ ಮಹಾನುಭಾವರವರು.

ಭಾರತದ ಆದಿಕವಿ ವಾಲ್ಮೀಕಿ ಶ್ರೀರಾಮನ ಕಥೆ ಹೇಳಿದರು. ಈ ದೇಶ ಸಂಪೂರ್ಣ ಮಾನವ ಎಂದು ಗೌರವಿಸಿ ಪೂಜಿಸಿದ ಆದರ್ಶವನ್ನು ಕಣ್ಣುಮುಂದೆ, ಹೃದಯಗಳಲ್ಲಿ ನಿಲ್ಲಿಸಿದರು. ನಗು ನಗುತ್ತ ಅಧಿಕಾರ ಬಿಟ್ಟು ಕೊಡುವ, ಪ್ರಜೆಗಳಿಗಾಗಿ ಬದುಕುವ ಆದರ್ಶ ರಾಜನ ರಾಜ್ಯ “ರಾಮರಾಜ್ಯ”. ಪ್ರಜೆಗಳಿಗಾಗಿ ಪ್ರಭುತ್ವ ಇರುವ ದೇಶವಾಗಬೇಕು ಭಾರತ, ಅಧಿಕಾರದ ದಾಹ ಇಲ್ಲದವರು ನಡೆಸುವ ರಾಜ್ಯವಾಗಬೇಕು, ನ್ಯಾಯ ಇಲ್ಲಿ ಬೇರೂರಬೇಕು ಎಂದು ಮತ್ತೆ ರಾಮರಾಜ್ಯದ ಕಲ್ಪನೆ ಕಂಡರು. ಜೆ.ಪಿ.ಅವರು ಮಂತ್ರಿಗಳಾಗಬೇಕೆಂದು, ರಾಷ್ಟ್ರಪತಿಗಳಾಗಬೇಕೆಂದು ಸೂಚನೆಗಳು ಬಂದಾಗ ಒಂದು ಕ್ಷಣವೂ ಅದಕ್ಕೆ ಮನಸ್ಸು ಕೊಡಲಿಲ್ಲ. ಶುಭ್ರ ಜೀವನದ, ಪ್ರಜೆಗಳಿಗೆ ಮುಡಿಪಾದ ಬಾಳಿನ ಶ್ರೀರಾಮನ ರಾಜ್ಯದ ಆದರ್ಶವನ್ನು ಹೃದಯದಲ್ಲಿ ಸ್ಥಾಪಿಸಿಕೊಂಡ ಗಾಂಧೀಜಿಯ ಹಾದಿಯಲ್ಲಿ ನಡೆದ ಮಹಾನ್‌ಪುರುಷ ಜೆ.ಪಿ.