ಶ್ರೀಮತಿ ಜಯಲಕ್ಷ್ಮೀ ಆಳ್ವ ಅವರು ಜನಿಸಿದುದು ಮದರಾಸಿನಲ್ಲಿ. ಮನೆತನದಲ್ಲಿ ಕಲಾವಿದರಿದ್ದುದರಿಂದ ಇವರು ದಿ|| ಕೆ.ಎನ್. ದಂಡಾಯುಧ ಪಾಣಿ ಅವರಲ್ಲಿ ಭರತ ನಾಟ್ಯವನ್ನೂ ಕೇರಳದ ಕರುಣಾಕರ ಪಣಿಕ್ಕರ್ ಅವರಲ್ಲಿ ಕಥಕ್ಕಳಿಯನ್ನೂ ಕಲಿಯಲು ಸಾಧ್ಯವಾಯಿತು. ೧೯೪೮ರಲ್ಲಿ ಮದರಾಸಿನಲ್ಲಿ ರಂಗಪ್ರವೇಶ ನಡೆದು, ನಂತರ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲು ಹಾಗೂ ಬೆಲ್ಜಿಯಂ, ಫ್ರಾನ್ಸ್, ಇಟಲಿ, ಜಪಾನ್ ಮುಂತಾದ ವಿದೇಶಗಳಲ್ಲಿಯೂ ಅನೇಕ ನೃತ್ಯ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಸ್ವತಃ ನೃತ್ಯ ಕಲಾವಿದರಾದ ಪತಿ ಶ್ರಿ ರಾಮಕೃಷ್ಣ ಆಳ್ವರೊಂದಿಗೆ ೧೯೫೯ರಲ್ಲಿ ಮುಂಬಯಿಯ ’ಚಿತ್ರಾಂಬಲಂ ಡಾನ್ಸ್ ಸೆಂಟರ್’ ಎಂಬ ನೃತ್ಯ ಶಾಲೆಯನ್ನು ಸ್ಥಾಪಿಸಿ ನಡೆಸಿ ೧೯೭೪ ರಲ್ಲಿ ಮಂಗಳೂರಿಗೆ ಬಂದು ನೆಲಸಿ ’ಶ್ರೀದೇವಿ ನೃತ್ಯ ಕೇಂದ್ರ’ವನ್ನು ಸ್ಥಾಪಿಸಿ ನಡೆಸುತ್ತಿದ್ದಾರೆ.

ಇವರಿಗೆ ೧೯೪೯ರಲ್ಲಿ ಮದರಾಸಿನಲ್ಲಿ ’ನಾಟ್ಯ ಸರಸ್ವತಿ’ ಎಂಬ ಬಿರುದು ಸಂದಿದೆ. ಅನೇಕ ನೃತ್ಯ ರೂಪಕಗಳನ್ನು ಸಂಯೋಜಿಸಿ ಪ್ರದರ್ಶಿಸುತ್ತಿದ್ದಾರೆ.

ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿಯಲ್ಲದೇ ರಾಜ್ಯದ ಅತ್ಯುನ್ನತ “ಶಾಂತಲಾ” ಪ್ರಶಸ್ತಿಯೂ ಶ್ರೀಮತಿ ಆಳ್ವಾರಿಗೆ ಸಂದಿದೆ.