ಜನನ : ೧-೩-೧೯೩೯ ರಂದು ದಾವಣಗೆರೆಯಲ್ಲಿ

ಮನೆತನ : ತಂದೆ ಚಿಕ್ಕಪ್ಪ ಶ್ರೇಷ್ಠಿ. ತಾಯಿ ಭಾಗ್ಯಲಕ್ಷ್ಮಮ್ಮ ಸಂಗೀತಾಸಕ್ತರು. ಸುಸಂಸ್ಕೃತ ಮನೆತನ.

ಗುರುಪರಂಪರೆ : ದಾವಣಗೆರೆಯಲ್ಲಿದ್ದಾಗ ಗಮಕ ಶಿಕ್ಷಣವನ್ನು ನಂ. ಅಶ್ವತ್ಥನಾರಾಯಣ ಅವರಲ್ಲಿ ಅಭ್ಯಾಸ ಮಾಡಿದರು. ಬೆಂಗಳೂರಿನ ಜಿ. ವಿ. ರಂಗನಾಯಕಮ್ಮನವರಲ್ಲಿ, ವೀಣಾವಾದನ ಶಿಕ್ಷಣವನ್ನೂ ಪಡೆದಿರುವುದೇ ಅಲ್ಲದೆ ಹಿಂದುಸ್ತಾನೀ ಸಂಗೀತದಲ್ಲೂ ಸಾಕಷ್ಟು ಪರಿಶ್ರಮ ಹೊಂದಿದ್ದಾರೆ.

ಕ್ಷೇತ್ರ ಸಾಧನೆ : ಕೇವಲ ಒಂದು ವರ್ಷದ ಮಗುವಾಗಿದ್ದಾಗ ಪೊಲೀಯೋ ರೋಗಕ್ಕೆ ತುತ್ತಾಗಿ ನಡೆದಾಡುವ ಶಕ್ತಿಯನ್ನು ಕಳೆದುಕೊಂಡರು. ಶಾರೀರಿಕವಾಗಿ ಅಂಗವಿಕಲತೆಯುಂಟಾದರೂ ಕಲಾ ಜೀವನಕ್ಕೆ ಅದೊಂದು ವರವಾಯಿತು.  ಮಗಳ ಕಲಾಭಿರುಚಿಗೆ ತಂದೆ – ತಾಯಿ ಚಿಕ್ಕಪ್ಪ ಸ್ಪಂದಿಸಿ, ಪೋಷಿಸಿ, ಬೆಳೆಸಲು ಸಹಾಯಕರಾದರು. ಆಧ್ಯಾತ್ಮ ವಿಷಯದಲ್ಲೂ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಗೃಹಸ್ಥ ಜೀವನವನ್ನು ಆರಂಭಿಸಿದ ನಂತರ ಹುಬ್ಬಳ್ಳಿ – ಧಾರವಾಡಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಧಾರವಾಡ ಆಕಾಶವಾಣಿ, ಬೆಂಗಳೂರು ಆಕಾಶವಾಣಿ, ದೂರದರ್ಶನ ಕೇಂದ್ರಗಳಿಂದ ಇವರ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಹುಬ್ಬಳ್ಳಿಯಲ್ಲಿದ್ದಾಗ ಅಲ್ಲಿ ಗಮಕ ತರಗತಿಗಳನ್ನು ನಡೆಸಿ ಅನೇಕ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ಇವರ ಕಂಠದಿಂದ ಹೊರಹೊಮ್ಮುವ ರತ್ನಾಕರ ಶತಕ, ಅಪರಾಜಿತೇಶ್ವರ ಶತಕಗಳು ಅತ್ಯಂತ ಜನಪ್ರಿಯ. ಅನೇಕ ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ. ಇವರ ಗಮಕ ಕಲೆ ಹಾಗೂ ಸಂಗೀತ ಕಲೆಯ ಅಭಿವೃದ್ಧಿಗೆ ಮತ್ತೂರಿನ ಸುಬ್ಬಲಕ್ಷ್ಮಮ್ಮ ಜಿ. ವೆಂಕಟೇಶಯ್ಯ, ಸುಭದ್ರಮ್ಮ ಮತ್ತು ಶ್ರೀನಿವಾಸ ಅಯ್ಯಂಗಾರರು ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಹಾಲಿ ಬೆಂಗಳೂರಿನಲ್ಲಿ ನೆಲೆಸಿರುವ ಇವರು ವಿಶ್ವೇಶ್ವರಪುರ ಬಡಾವಣೆಯಲ್ಲಿ ರಂಗನಾಯಕಿ ಕಲಾ ಮಂದಿರವನ್ನು ಸ್ಥಾಪಿಸಿ ತನ್ಮೂಲಕ ಗಮಕ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೆಚ್ಚಿನಂಶ ಉತ್ತರ ಕರ್ನಾಟಕದ ಭಾಗಗಳಲ್ಲಿ ಇವರು ವಿಶೇಷವಾಗಿ ಗಮಕ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಹುಬ್ಬಳ್ಳಿ – ಧಾರವಾಡ ಜಿಲ್ಲಾ ಪ್ರಥಮ ಗಮಕ ಸಮ್ಮೇಳನದಲ್ಲಿ ಪುರಸ್ಕೃತರಾಗಿದ್ದಾರೆ. ಧರ್ಮಸ್ಥಳದ ಮಂಜಯ್ಯ ಹೆಗ್ಗಡೆ ಜನ್ಮ ಶತಾಬ್ಧಿ ಉತ್ಸವ, ಹುಬ್ಬಳ್ಳಿಯ ಕುಮಾರವ್ಯಾಸ ಸೇವಾ ಸಂಘ, ಚಿತ್ರದುರ್ಗ ಜಿಲ್ಲಾ ಗಮಕ ಸಮ್ಮೇಳನಗಳಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ. ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಖಿಲ ಕರ್ನಾಟಕ ದ್ವಿತೀಯ ಸಮ್ಮೇಳನದಲ್ಲೂ ಸನ್ಮಾನಿಸಲ್ಪಟ್ಟಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೫-೯೬ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹುಬ್ಬಳ್ಳಿಯ ಮಹಾ ಜನತೆ ೧೯೯೫ ರಲ್ಲಿ ಇವರನ್ನು ಅದ್ದೂರಿಯಾಗಿ ಸನ್ಮಾನಿಸಿ ಒಂದು ಅಭಿನಂದನಾ ಸಂಸ್ಮರಣ ಸಂಚಿಕೆಯನ್ನು ಅರ್ಪಿಸಿದ್ದಾರೆ.