ಜಯವಂತಿದೇವಿ ಹೆಸರು ಕೇಳಿದಾಕ್ಷಣ ಕನ್ನಡಿಗರೆಲ್ಲರ ಮನಸ್ಸು ಮೆಲುಕು ಹಾಕುವುದು “ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ ಅತ್ತಿತ್ತ ಸುಳಿದವರು ನೀವಲ್ಲವೆ?” ಎಂಬ ಕೆ.ಎಸ್‌. ನರಸಿಂಹಸ್ವಾಮಿಯವರ ಕವನ. ಆ ಕವನವನ್ನು ಅಜರಾಮರಗೊಳಿಸಿದ ಕೀರ್ತಿ ಜಯವಂತಿದೇವಿಯರಿಗೇ ಸಲ್ಲಬೇಕು.

ಜಯವಂತಿದೇವಿಯವರು ೧೯೨೭ನೇ ಇಸವಿ ಏಪ್ರಿಲ್‌ ಇಪ್ಪತ್ತನಾಲ್ಕರಂದು (೨೪.೪.೧೯೨೭) ಮಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ಸೀತಾದೇವಿ, ಮೊಳಹಳ್ಳಿ ಶಿವರಾಯರ ಮಗಳು. ತನುಮನಧನವನ್ನು ಸಮಾಜ ಸೇವೆಗೇ ಅರ್ಪಿಸಿದ್ದ ಶಿವರಾಯರು ಪುತ್ತೂರಿನಲ್ಲಿ ಪ್ರಸಿದ್ಧ ವಕೀಲರಾಗಿದ್ದರು. ಜಯವಂತಿಯವರ ತಂದೆ ಪಡುಕೋಣೆ ರಮಾನಂದರಾಯರು ಬರಹಗಾರರು. ರಮಾನಂದರ ತಂದೆಯವರು ಪಡುಕೋಣೆ ನರಸಿಂಗರಾಯರು. ಪುತ್ತೂರಿನಲ್ಲೇ ನೆಲೆಸಿದ್ದ ಅವರು ಮಣ್ಣಿನ ಕಲಾಕೃತಿಗಳನ್ನು ಮಾಡುವುದರಲ್ಲೂ, ತೆಂಗಿನ ಚಿಪ್ಪಿನ ಕಲಾಕೃತಿಗಳನ್ನು ಮಾಡುವುದರಲ್ಲಿಯೂ ಹೆಸರುವಾಸಿಯಾಗಿದ್ದರು. ಅಜ್ಜಿ ಸುಶ್ರಾವ್ಯವಾಗಿ ಎರಡು, ಮೂರು ಭಾಷೆಗಳಲ್ಲಿ ಭಜನೆಯನ್ನು ಹಾಡುವುದರಲ್ಲಿ ನಿಷ್ಣಾತರಾಗಿದ್ದರು. ಅಂದದ ಹೂ ಮಾಲೆಗಳನ್ನೂ ಕಟ್ಟುತ್ತಿದ್ದರು. ನರಸಿಂಗರಾಯರ ಕೊನೆಯ ತಮ್ಮ ಶಿವಶಂಕರ. ಶಿವಶಂಕರ್ ರವರ ಮಕ್ಕಳೇ ಪ್ರಸಿದ್ಧ ನಟ ಗುರುದತ್‌ ಹಾಗೂ ದಿಗ್ದರ್ಶಕ ಆತ್ಮಾರಾಮ್‌. ಹೀಗಾಗಿ ಜಯವಂತಿದೇವಿಯವರ ಮನೆತನವೆ ಸಂಗೀತ, ಸಾಹಿತ್ಯ, ನಾಟಕ ಇತ್ಯಾದಿ ಕಲೆಗಳ ಆಗರವಾಗಿತ್ತು. ಮನೆಯ ಪರಿಸರವೇ ಕಲಾಮಯವಾಗಿದ್ದಾಗ ಜಯವಂತಿದೇವಿಯವರ ಮನಸ್ಸು ಸಂಗೀತದ ಕಡೆಗೆ ಒಲಿದದ್ದು ಆಶ್ಚರ್ಯವಲ್ಲ. ಅವರ ಅಕ್ಕ ಚಂದ್ರಭಾಗಾದೇವಿಯವರು ನೃತ್ಯಗಾರ್ತಿ. ಮತ್ತೊಬ್ಬ ತಂಗಿ ಶಾಂತಿ ಚಿತ್ರಕಲಾವಿದೆ. ಇನ್ನೊಬ್ಬ ತಂಗಿ ಯಶೋಧರ ಬರಹಗಾರ್ತಿ. ಪ್ರಭಾಶಂಕರ ಇವರ ಅಣ್ಣ ಸಾಹಿತ್ಯಪ್ರೇಮಿ. ಕಲೆ ಮತ್ತು ಸಂಸ್ಕೃತಿಗಳ ನೆಲೆವೀಡು ಇವರ ಮನೆ.

ಜಯವಂತೀದೇವಿಯವರು ಪುತ್ತೂರಿನಲ್ಲಿನ ಹೈಯರ್ ಎಲಿಮೆಂಟ್ರಿ ಗರ್ಲ್ಸ್ ಸ್ಕೂಲಿನಲ್ಲಿ ಎಂಟನೇ ಇಯತ್ತೆಯವರೆಗೆ ಮಾತ್ರ ಓದಿದ್ದಾರೆ. ಇವರ ತಂದೆಯವರಿಗೆ ಮದ್ರಾಸಿಗೆ ವರ್ಗವಾದ ಬಳಿಕ, ಅಲ್ಲಿ ಕನ್ನಡ ಶಾಲೆ ಇಲ್ಲದೆ, ಕಾನ್ವೆಂಟಿಗೆ ಹೋಗಲು ಇಷ್ಟಪಡದೆದ ಇದ್ದುದರಿಂದ ಇವರು ಮುಂದಿನ ವಿದ್ಯಾಭ್ಯಾಸಕ್ಕೆ ಅರ್ಧ ಚಂದ್ರ ಬಿತ್ತು. ಪುತ್ತೂರಿನಲ್ಲೇ ಇದ್ದಾಗ ಡಾ. ಶಿವರಾಮಕಾರಂತರು ಪ್ರಯೋಗಕ್ಕಾಗಿ ನಡೆಸಿದ ‘ಬಾಲವನ’ದಲ್ಲಿ ಒಂದು ವರ್ಷ ವಿದ್ಯಾಭ್ಯಾಸ ಮಾಡಿದ್ದಾರೆ.

ಜಯವಂತಿಯವರಿಗೆ ಸಂಗೀತದ ಮೊಟ್ಟ ಮೊದಲ ಗುರು ಅವರ ತಾಯಿಯವರೆ. ಕೈತುತ್ತಿನ ಜೊತೆಗೆ ಸಂಗೀತದ ಮೊಟ್ಟಮೊದಲ ತುತ್ತೂ ತಾಯಿಯವರಿಂದಲೇ ಸಿಕ್ಕಿತು. ತಾಯಿಯವರಿಂದ ಅನೇಕ ಹಾಡುಗಳನ್ನು  ಕಲಿತು ಹಾಡುತ್ತಿದ್ದರು. ಹಿಂದುಸ್ತಾನಿ ಸಂಗೀತದ ನೆಲೆಗಟ್ಟನ್ನು ಮೊದಲು ಹಾಕಿಕೊಟ್ಟವರು ಜಯವಂತಿಯವರ ಚಿಕ್ಕಪ್ಪ ಪಡುಕೋಣೆ ಪ್ರಭಾಕರರಾವ್‌ರವರು. ಇದರ ಜೊತೆಗೆ ಬೊಂಬಾಯಿ ಇಂದ ಯಾರಾದರೂ ಕಲಾವಿದರು ಅಲ್ಲಿಗೆ ಬಂದರೆ ಅವರಿಂದ ಹಿಂದಿ, ಮರಾಠಿ ಹಾಡುಗಳನ್ನು ಕಲಿಯಲು ತಾಯಿ ಸೀತಾದೇವಿಯವರು ಪ್ರೋತ್ಸಾಹಿಸುತ್ತಿದ್ದುದರಿಂದ, ಆ ಭಾಷೆಯ ಹಾಡುಗಳನ್ನು ಕಲಿಯುವ ಅವಕಾಶ ಜಯವಂತಿಯವರಿಗಾಯಿತು. ಶಿವರಾಮ ಕಾರಂತರು ನಡೆಸುತ್ತಿದ್ದ ಪ್ರಸಿದ್ಧ ದಸರಾ ಮಹೋತ್ಸವಕ್ಕೆಂದು ಬರುತ್ತಿದ್ದ ಅನೇಕ ಕಲಾವಿದರ ಸಹವಾಸ, ಸ್ನೇಹ ಜಯವಂತಿಯವರ ಕಲಾಜೀವನಕ್ಕೆ ಮಾರ್ಗದರ್ಶನವಾಗಲು ಸಹಾಯಕವಾಯಿತು.

ಈ ಮಧ್ಯೆ ಜಯವಂತಿಯವರ ತಂದೆ ರಮಾನಂದರಾಯರಿಗೆ ಮದ್ರಾಸಿಗೆ ವರ್ಗವಾಯಿತು. ಅಲ್ಲೊಂದು ಬಾಡಿಗೆ ಮನೆಯನ್ನು ಹಿಡಿದರು.

ಇವರ ಮನೆಯ ಪಕ್ಕದಲ್ಲಿ ಪ್ರಸಿದ್ಧ ಚಿತ್ರಪಟು, ಸಂಗೀತಗಾರ, ನಿರ್ದೇಶಕರಾದ ಶ್ರೀ ವಿ. ನಾಗಯ್ಯನವರ ಆಫೀಸಿತ್ತು. ಅದರಿಂದಾಗಿ ಪ್ರತಿದಿನ ಜಯವಂತಿ ಹಾಡುತ್ತಿದ್ದ ಹಾಡುಗಳೆಲ್ಲ ವಿ. ನಾಗಯ್ಯನವರ ಕಿವಿಗೆ ಬೀಳುತ್ತಿತ್ತು. ಕಾರಣ ಆ ಕಾಲದಲ್ಲಿ ಈಗಿನಂತೆ ಸದಾ ಸದ್ದುಗದ್ದಲದ ವಾತಾರವಣವಿರಲಿಲ್ಲ. ಪಕ್ಕದ ಮನೆಯ ಹಾಡು ಈಚೆ ಮನೆಗೂ ಕೇಳಿಸುತ್ತಿತ್ತು. ಅದರಿಂಧಾಗಿ ಒಂದು ದೃಷ್ಟಿಯಿಂದ ಜಯವಂತಿಯವರ ಸಂಗೀತದ ಭಾಗ್ಯದ ಬಾಗಿಲು ತೆರೆಯಿತೆನ್ನ ಬಹುದೇನೋ. ಒಂದು ದಿನ ವಿ.ನಾಗಯ್ಯನವರು ರಮಾನಂದರಾಯರನ್ನು ಕರೆಸಿಕೊಂಡರಂತೆ. “ನಿಮ್ಮ ಮಗಳು ಬಹಳ ಸೊಗಸಾಗಿ ಹಾಡುತ್ತಾಳೆ. ಆ ಹುಡುಗಿಯನ್ನು ಎಚ್‌.ಎಂ.ವಿ.ಕಂಪನಿಗಾಗಿ ಹಾಡಿಸಬಾರದೇಕೆ? ನಾನೇ ಸಂಗೀತವನ್ನು ನಿರ್ದೇಶಿಸುತ್ತೇನೆ” ಎಂದು ಹೇಳಿದರಂತೆ. ಇಂಥ ಚಿನ್ನದ ಅವಕಾಶವನ್ನು ಯಾವ ತಂದೆ ತಾಯಿ ಬೇಡವೆನ್ನುತ್ತಾರೆ? ಸುಮರು ೧೯೪೪-೪೫ರ ವೇಳೆಗೆ ವಿ.ನಾಗಯ್ಯನವರ ಸಂಗೀತ ನಿರ್ದೇಶನದಲ್ಲಿ ಜಯವಂತಿದೇವಿಯವರು ಹಾಡಿದ ಎರಡು ಧ್ವನಿಮುದ್ರಿಕೆಗಳು ಹೊರಬಂದವು. ‘ಭಾಗ್ಯದಲಕ್ಷ್ಮೀಬಾರಮ್ಮಾ’ ಹಾಗೂ ‘ಹೂವ ತರುವರ ಮನೆಗೆ ಹುಲ್ಲತರುವ’ ಎರಡು ಧ್ವನಿ ತಟ್ಟೆಗಳು ಜಯವಂತಿದೇವಿಯವರ ಹಾಡಿಕೆಗೆ ಕನ್ನಡಿ ಹಿಡಿದ ಮೊಟ್ಟಮೊದಲ ಸಂಭ್ರಮದ ಘಳಿಗೆಗಳು. ಕಲಾಪೋಷಕರಾಗಿದ್ದ ವಿ. ನಾಗಯ್ಯನವರು ಜಯವಂತಿಯವರನ್ನು ಮದ್ರಾಸಿನಲ್ಲಿದ್ದ ಆಲ್‌ ಇಂಡಿಯಾ ರೇಡಿಯೋ ಶಾಖೆಗೂ ಪರಿಚಯಿಸಿದರು. ಅಲ್ಲಿ ಹಿಂದಿ ಭಜನೆಗಳನ್ನು ಹಾಡಲು ಪ್ರಾರಂಭಿಸಿದರು. ಅದೇ ಸಮಯದಲ್ಲಿ ವಿ. ನಾಗಯ್ಯನವರು ‘ತ್ಯಾಗಯ್ಯಾ’ ಚಲನಚಿತ್ರವನ್ನು ಮಾಡುವ ತಯಾರಿಯಲ್ಲಿದ್ದರು. ಅದರಲ್ಲಿ ಒಂದು ಸಂದರ್ಭ. ತಂಜಾವೂರಿನ ಶರಭೋಜ ಮಹಾರಾಜರ ಸಂಗೀತ ಪರವಾದ ಉದಾರತೆಯನ್ನು ತೋರಿಸುವ ಒಂದು ದೃರ್ಶಯ. ನಾಗಯ್ಯನವರಿಗೆ ಅದರಲ್ಲೊಂದು ಹಿಂದಿ ಹಾಡನ್ನು ಚಿತ್ರೀಕರಿಸುವ ಬಯಕೆ. ಆ ಹಾಡನ್ನು ಜಯವಂತಿದೇವಿಯವರಿಂದ ಹಾಡಿಸಿ ಸ್ವಲ್ಪ ಆ ಪಾತ್ರದ ನಟನೆಯನ್ನೂ ಮಾಡಿಸುವ ಆಸೆಯಿಂದ ರಮಾನಂದರಾಯರನ್ನು ಕರೆಸಿ ಕೇಳಿದರು.

ಆ ಕಾಲದಲ್ಲಿ ಸಿನಿಮಾದವರೆಂದರೆ ಕೀಳಾಗಿ ಕಾಣುವ ಮನೋಭಾವ. ಸಮಾಜಕ್ಕಿತ್ತು. ಹಾಗಾಗಿ ಜಯವಂತಿಯವರ ತಾಯ್ತಂದೆಗೆ ಸಂದಿಗ್ಧಕ್ಕಿಟ್ಟುಕೊಂಡಿತು. ಜಯವಂತಿಯ ಸಂಗೀತದ ಏಳಿಗೆಗೆ ಕಾರಣರಾದ ನಾಗಯ್ಯನವರ ಮಾತನ್ನು ಅಷ್ಟು ಸುಲಭವಾಗಿ ತೆಗೆದು ಹಾಕುವಂತಿರಲಿಲ್ಲ. ಆದರೆ ಆ ಸಮಸ್ಯೆಗೂ ಪರಿಹಾರ ದೊರೆಯಿತು. ಜಯವಂತಿಯವರ ಚಿಕ್ಕಪ್ಪ ಪ್ರಭಾಕರರಾವ್‌ ಆಗ ನಾಗಯ್ಯನವರ ಆಫೀಸಿನಲ್ಲೆ ಕೆಲಸಕ್ಕಿದ್ದರು. ಅವರು ‘ತ್ಯಾಗಯ್ಯ’ ಚಿತ್ರದಲ್ಲಿ ‘ಸಾರಂಗಿವಾಲಾ’ ಪಾತ್ರವಹಿಸಿ ಸದಾ ಜಯವಂತಿಯವರ ಜೊತೆಯೆ ಇರುವಂತಾದ್ದರಿಂದ ಇವರು ಉತ್ತರ ಭಾರತದಿಂದ ಬಂದ ಗಾಯಕಿ ಪಾತ್ರವಹಿಸಿ ಹಿಂದಿ ಗಜಲ್‌ ಹಾಡಿದರು. ಅದೇ ಸಮಯದಲ್ಲಿ ಉದಯಶಂಕರ್ ರವರು ತಯಾರಿಸುತ್ತಿದ್ದ ‘ಕಲ್ಪನಾ’ ಹಿಂದಿ ಚಿತ್ರದಲ್ಲೂ ಒಂದೆರಡು ಹಾಡುಗಳನ್ನು ಹಿಂಬದಿಯ ಗಾಯಕಿಯಾಗಿ ಹಾಡಿದರು. ಮಹಾತ್ಮಗಾಂಧಿಜಿಯವರ ಪ್ರಾರ್ಥನಾ ಸಭೆಯಲ್ಲೂ ಹಿಂದಿ ಭಜನೆ ಹಾಗೂ ‘ವಂದೇ ಮಾತರಂ’ ಗೀತೆಯನ್ನು ಹಾಡುವ ಅವಕಾಶವೂ ದೊರೆಯಿತು. ಒಮ್ಮೆ ಇವರು ಮದ್ರಾಸ್‌ ರೇಡಿಯೋ ನಿಲಯದಲ್ಲಿ ಹಿಂದಿ ಭಜನೆ ಹಾಡುವಾಗ ತಬಲಾ ವಾದಕರು ಗೈರುಹಾಜರಾದ್ದರಿಂದ ಪ್ರಸಿದ್ಧ ವೀಣಾವಾದಕ ಎಸ್‌. ಬಾಲಚಂದರ್ ಇವರ ಹಾಡಿಕೆಗೆ ತಬಲಾ ಸಾಥಿಯಾದದ್ದೊಂದು ವಿಶೇಷ. ಆಗ ಬಾಲಚಂದರ್ ರವರು ‘ಖುಷ್ಯಶೃಂಗ’ ಚಲನಚಿತ್ರದಲ್ಲಿ ಅಭಿನಯಿಸುತ್ತಿದ್ದರು.

೧೯೪೭ರ ಕೊನೆಗೆ ಜಯವಂತಿಯವರಿಗೆ ಮದುವೆಯಾಗಿ ಅವರು ಮದ್ರಾಸಿನಿಂದ ಪೂನಾಕ್ಕೆ ಬಂದರು. ಆದರೆ ಆಗ ಪೂನಾದಲ್ಲಿ ‘ಆಕಾಶವಾಣಿ’ ಇನ್ನೂ ಪ್ರಾರಂಭವಾಗಿರಲಿಲ್ಲವಾದ್ದರಿಂದ ಪ್ರತಿ ತಿಂಗಳೂ ಬೊಂಬಾಯಿ ‘ಆಕಾಶವಾಣಿ’ಯಲ್ಲಿ ಹಾಡಲು ಹೋಗುತ್ತಿದ್ದರು. ಅದಕ್ಕೆ ಇವರ ಪತಿ ದಿನಕರ್ ಹಿರೇಬೆಟ್‌ ಹಾಗೂ ಅತ್ತೆ ಮಾವಂದಿರ ಪ್ರೋತ್ಸಾಹವಿದ್ದುದರಿಂದ ಇವರ ಬೆಳವಣಿಗೆಗೆ ಸಹಕಾರಿಯಾಯಿತು. ಬೊಂಬಾಯಿ ಆಕಾಶವಾಣಿಯಲ್ಲಿ ಇವರು ಕನ್ನಡ, ಕೊಂಕಣಿ, ಹಿಂದಿ ಭಾಷೆಯ ಹಾಡುಗಳನ್ನು ಹಾಡುತ್ತಿದ್ದರು. ಆಕಾಶವಾಣಿಯ ದೆಹಲಿ, ಬೆಂಗಳೂರು, ಬೊಂಬಾಯಿ ನಿಲಯಗಳು ಏರ್ಪಡಿಸುತ್ತಿದ್ದ ಆಹ್ವಾನಿತ ಶ್ರೋತೃಗಳ ಕಾರ್ಯಕ್ರಮಗಳಲ್ಲಿ ಹಿಂದಿ, ಕನ್ನಡ ಗೀತೆಗಳನ್ನು ಹಾಡಿದ್ದಾರೆ. ಪೂನಾದಲ್ಲಿ ‘ಆಕಾಶವಾಣಿ’ ಪ್ರಾರಂಭವಾದಾಗ ಅಲ್ಲಿ ಮರಾಠಿ ಗೀತೆಗಳನ್ನು ಹಾಡುವ ಸಂದರ್ಭ ಒದಗಿತ್ತು. ಪೂನಾದ ಬಬನ್‌ರಾವ್‌ ನಾವೇಡ್‌ಕೇರ್ ಹಾಗೂ ಬೊಂಬಾಯಿಯ ವಸಂತದೇವ್‌ ಅವರುಗಳಿಂದ ಮರಾಠಿ ಭಾವಗೀತೆ, ಅಭಂಗಗಳನ್ನು ಕಲಿತು ಪೂನಾ ರೇಡಿಯೋ ನಿಲಯದಲ್ಲೂ ಹಾಡಿ ಪ್ರಸಾರಮಾಡುವ ಸದವಕಾಶ ದೊರಕಿತು. ಬೊಂಬಾಯಿ ಅಕಾಶವಾಣಿ ನಿಲಯದ ಪ್ರೊಡ್ಯೂಸರ್ ಆಗಿದ್ದ ಹಫಈಜ್‌ ಅಹಮದ್‌ಖಾನ್‌ರವರಿಂದ ಹಿಂದಿ ಗೀತೆಗಳನ್ನು ಕಲಿತು ಆಕಾಶವಾಣಿಯಲ್ಲಿ ಹಾಡಿದರು. ಇದರ ಜೊತೆಗೆ ಪೂನಾದಲ್ಲಿದ್ದ ‘ಕರ್ನಾಟಕ ಸಂಘ’ ಹಾಗೂ ‘ಮೈಸೂರು ಅಸೋಸಿಯೇಷನ್‌’ನವರು ನಡೆಸುತ್ತಿದ್ದ ನಾಡಹಬ್ಬ ಕಾರ್ಯಕ್ರಮಗಳಲ್ಲಂತೂ ಜಯವಂತಿಯವರ ಸಂಗೀತ ಕಾರ್ಯಕ್ರಮ ಇದ್ದೇ ಇರುತ್ತಿತ್ತು. ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕರ್ನಾಟಕದ ಅನೇಕ ಕವಿಗಳು, ಕಲಾವಿದರು ಪೂನಾಕ್ಕೆ ಹೋಗುತ್ತಿದ್ದರು. ಹಾಗೇ ಒಮ್ಮೆ ಅಲ್ಲಿಗೆ ಬಂದಿದ್ದ ದ.ರಾ. ಬೇಂದ್ರೆಯವರ ಪರಿಚಯವಾಯಿತು ಜಯವಂತಿದೇವಿಯವರಿಗೆ. ಬೇಂದ್ರೆಯವರು ಜಯವಂತಿದೇವಿಯವರಿಗೆ ಕನ್ನಡ ಭಾವಗೀತೆಗಳನ್ನು ಹಾಡಲು  ಬಹಳಷ್ಟು ಪ್ರೋತ್ಸಾಹ ನೀಡಿದರು. ಬೇಂದ್ರೆಯವರೇ ಅವರ ಒಂದೆರಡು ಕವನಗಳನ್ನು ಆಯ್ಕೆ ಮಾಡಿ ಹಾಡಲು ಹೇಳಿದ್ದರು. “ಯಾಕೊ ಕಾಣೆ ರುದ್ರವೀಣೆ”, “ವಾರಿನಓಟವಾಡತಿತ್ತ ಹೊಳೀಮ್ಯಾಗ” ಇವೆರಡು ಗೀತೆಗಳೂ ಧ್ವನಿ ತಟ್ಟೆಗಳಾಗಿ ಜನಮನದ ಅಂತರಂಗದಲ್ಲಿ ನೆಲೆಯಾಗಿ ನಿಂತುಬಿಟ್ಟವು. ಹಾಡುವ ಕಲಾವಿದರು ಯಾರು ಬಂದರೂ ಸರಿಯೇ ಅವರಿಂದ ಹೊಸ ಹೊಸ ಹಾಡುಗಳನ್ನು ಕಲಿಯುವ ತನಕ ಜಯವಂತಿದೇವಿಯವರಿಗೆ. ಹಾಗೇ ಒಮ್ಮೆ ಗುಡಿಬಂಡೆ ರಾಮಾಚಾರ್ಯರು ಪೂನಾಗೆ ಹೋಗಿದ್ದಾಗ ಅವರಿಂದ ಕುವೆಂಪುರವರ ಹಾಡನ್ನು ಕಲಿತರು. ಹಾಡುಗಳನ್ನು ಕಲಿಯಲು ತೀರದ ದಾಹ ಅವರಿಗೆ. ಅವರು ಧ್ವನಿಮುದ್ರಿಸಿರುವ ಕೆ.ಎಸ್‌. ನರಸಿಂಹಸ್ವಾಮಿಯವರ ಸುಪ್ರಸಿದ್ಧ ಗೀತೆ “ಹತ್ತು ವರುಷದ ಹಿಂದೆ, ಮುತ್ತೂರ ತೇರಿನಲಿ, ಅತ್ತಿತ್ತ ಸುಳಿದವರು ನೀವಲ್ಲವೆ” ಸುಮಾರು ೧೯೫೨ರ ವೇಳೆಗೆ ಎಚ್‌.ಎಮ್‌.ವಿ. ಕಂಪೆನಿಯಿಂದ ಬಿಡುಗಡೆಯಾಯಿತು. ಬೊಂಬಾಯಿಯ ಆಕಾಶವಾಣಿಯಲ್ಲಿ ಕನ್ನಡ ಭಾಷೆಯ ಬಗ್ಗೆ ಅಷ್ಟೇನು ಉತ್ತೇಜನವಿಲ್ಲದಿದ್ದ ಕಾಲ ಅದು. ಆದರೆ ಅತಿ ಉತ್ಸಾಹದಿಂದ, ತಾಳ್ಮೆಯಿಂದ, ಸಹನೆಯಿಂದ ವಿಭಿನ್ನರೀತಿಯ ಕನ್ನಡ ಹಾಡುಗಳಿಗೆ ರಾಗ ಸಂಯೋಜಿಸಿ ಬೊಂಬಾಯಿ ಆಕಾಶವಾಣಿ ನಿಲಯದ ಪ್ರೊಡ್ಯೂಸರ್ ಆಗಿದ್ದ ಹಫೀಜ್‌ ಅಹಮದ್‌ಖಾನ್‌ರವರಿಂದ ಹಿಂದಿ ಗೀತೆಗಳನ್ನು ಕಲಿತು ಆಕಾಶವಾಣಿಯಲ್ಲಿ ಹಾಡಿದರು. ಇದರ ಜೊತೆಗೆ ಪೂನಾದಲ್ಲಿದ್ದ ‘ಕರ್ನಾಟಕ ಸಂಘ’ ಹಾಗೂ ‘ಮೈಸೂರು ಅಸೋಸಿಯೇಷನ್‌’ನವರು ನಡೆಸುತ್ತಿದ್ದ ನಾಡಹಬ್ಬ ಕಾರ್ಯಕ್ರಮಗಳಲ್ಲಂತೂ ಜಯವಂತಿಯವರ ಸಂಗೀತ ಕಾರ್ಯಕ್ರಮ ಇದ್ದೇ ಇರುತ್ತಿತ್ತು. ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕರ್ನಾಟಕದ ಅನೇಕ ಕವಿಗಳು, ಕಲಾವಿದರು ಪೂನಾಕ್ಕೆ ಹೋಗುತ್ತಿದ್ದರು. ಹಾಗೇ ಒಮ್ಮೆ ಅಲ್ಲಿಗೆ ಬಂದಿದ್ದ ದ.ರಾ. ಬೇಂದ್ರೆಯವರ ಪರಿಚಯವಾಯಿತು ಜಯವಂತಿದೇವಿಯವರಿಗೆ. ಬೇಂದ್ರೆಯವರು ಜಯವಂತಿದೇವಿಯವರಿಗೆ ಕನ್ನಡ ಭಾವಗೀತೆಗಳನ್ನು ಹಾಡಲು ಬಹಳಷ್ಟು ಪ್ರೋತ್ಸಾಹ ನೀಡಿದರು. ಬೇಂದ್ರೆಯವರೇ ಅವರ ಒಂದೆರಡು ಕವನಗಳನ್ನು ಆಯ್ಕೆ ಮಾಡಿ ಹಾಡಲು ಹೇಳಿದ್ದರು . ‘ಯಾಕೊ ಕಾಣೆ ರುದ್ರವೀಣೆ”, “ವಾರಿನಓಟವಾಡತಿತ್ತ ಹೊಳೀಮ್ಯಾಗ” ಇವೆರಡು ಗೀತೆಗಳೂ ಧ್ವನಿ ತಟ್ಟೆಗಳಾಗಿ ಜನಮನದ ಅಂತರಂಗದಲ್ಲಿ ನೆಲೆಯಾಗಿ ನಿಂತುಬಿಟ್ಟವು. ಹಾಡುವ ಕಲಾವಿದರು ಯಾರು ಬಂದರೂ ಸರಿಯೇ ಅವರಿಂದ ಹೊಸ ಹೊಸ ಹಾಡುಗಳನ್ನು  ಕಲಿಯುವ ತವಕ ಜಯವಂತಿದೇವಿಯವರಿಗೆ, ಹಾಗೇ ಒಮ್ಮೆ ಗುಡಿಬಂಡೆ ರಾಮಾಚಾರ್ಯರು ಪೂನಾಗೆ ಹೋಗಿದ್ದಾಗ ಅವರಿಂದ ಕುವೆಂಪುರವರ ಹಾಡನ್ನು ಕಲಿತರು. ಹಾಡುಗಳನ್ನು ಕಲಿಯಲು ತೀರದ ದಾಹ ಅವರಿಗೆ. ಅವರು ಧ್ವನಿಮುದ್ರಿಸಿರುವ ಕೆ.ಎಸ್‌. ನರಸಿಂಹಸ್ವಾಮಿಯವರ ಸುಪ್ರಸಿದ್ಧ ಗೀತೆ “ಹತ್ತು ವರುಷದ ಹಿಂದೆ, ಮುತ್ತೂರ ತೇರಿನಲಿ, ಅತ್ತಿತ್ತ ಸುಳಿದವರು ನೀವಲ್ಲವೆ” ಸುಮಾರು ೧೯೫೨ರ ವೇಳೆಗೆ ಎಚ್‌.ಎಮ್‌.ವಿ. ಕಂಪೆನಿಯಿಂದ ಬಿಡುಗಡೆಯಾಯಿತು. ಬೊಂಬಾಯಿಯ ಆಕಾಶವಾಣಿಯಲ್ಲಿ ಕನ್ನಡ ಭಾಷೆಯ ಬಗ್ಗೆ ಅಷ್ಟೇನು ಉತ್ತೇಜನವಿಲ್ಲದಿದ್ದ ಕಾಲ ಅದು. ಆದರೆ ಅತಿ ಉತ್ಸಾಹದಿಂದ, ತಾಳ್ಮೆಯಿಂದ, ಸಹನೆಯಿಂದ ವಿಭಿನ್ನರೀತಿಯ ಕನ್ನಡ ಹಾಡುಗಳಿಗೆ ರಾಗ ಸಂಯೋಜಿಸಿ ಬೊಂಬಾಯಿ ಆಕಾಶವಾಣಿಯಿಂದ ಪ್ರಸಾರ ಮಾಡುತ್ತಿದ್ದ ಕೀರ್ತಿ ಅಲ್ಲಿಯ ಡಾಕ್ಯುಮೆಂಟರಿ ಫಿಲ್ಮ್ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಬಿ.ಜಿ. ರಾಮನಾಥರವರದ್ದು. ಅವರಿಂದ ಅನೇಕ ಹಾಡುಗಳನ್ನು ಕಲಿತು ಬೊಂಬಾಯಿ ಆಕಾಶವಾಣಿಯಲ್ಲಿ ಜಯವಂತಿಯವರು  ಹಾಡಿದ್ದಾರೆ. ಅವರ ಹಾಡಿಗೆ ಅಂದು ಬೊಂಬಾಯಿ ಆಕಾಶವಾಣಿಯ ನಿಲಯದ ಕಲಾವಿದರಾಗಿದ್ದ ಪ್ರಸಿದ್ಧ ಕೊಳಲು ವಾದಕರಾದ ಹರಿಪ್ರಸಾದ್‌ ಚೌರಾಸಿಕಯರವರು ಹಿನ್ನೆಲೆ ವಾದ್ಯ ಸಂಗೀತವನ್ನು ನುಡಿಸಿದ್ದರೆನ್ನುವುದು ಜಯವಂತಿದೇವಿಯವರಿಗೆ ಹೆಮ್ಮೆಯ ಸಂಗತಿ. ಬೊಂಬಾಯಿ, ಪೂನಾದ ಸಂಗೀತ ಜೀವನ ಚಿರಸ್ಮರಣೀಯವಾದ ದಿನಗಳು ಜಯವಂತಿಯವರ ಬಾಳಿನಲ್ಲಿ. ಪೂನಾ ಬಿಟ್ಟು ಜಮ್‌ಶೆಡ್‌ಪುರಕ್ಕೆ ಬಂದ ಬಳಿಕ ಅವರ ಸಂಗೀತ ಹಿಂದಿನಂತೆ ಪ್ರಗತಿಯನ್ನು ಪಡೆಯಲು ಸಾಧ್ಯವಾಗಲಿಲ್ಲವೆಂದು ಜಯವಂತಿಯವರು ವಿಷಾದದಿಂದ ಹೇಳುತ್ತಾರೆ. ಆದರೆ ಅಲ್ಲಿ, ಇಲ್ಲಿ, ಆಗೊಮ್ಮೆ, ಈಗೊಮ್ಮೆ, ಗುರುಗಳು, ಮಠಾಧಿಪತಿಗಳ ಸಾನ್ನಿಧ್ಯದಲ್ಲಿ ಹಾಡುತ್ತಿದ್ದರು.

ಕರ್ನಾಟಕದ ಭಾಗಕ್ಕೆ ಬಹಳ ವರ್ಷಗಳ ಹಿಂದೆಯೇ ಎಲೆಮರೆಯ ಹೂವಾಗಿ ಉಳಿದ ಜಯವಂತಿದೇವಿಯವರು ಒಂದು ವಿಧದಲ್ಲಿ ಅದೃಷ್ಟಶಾಲಿ ಎನ್ನಲೇಬೇಕು. ಎಲ್ಲೋ ಇದ್ದ ಇವರನ್ನು ಹುಡುಕಿ ಕರೆಸಿ ೧೯೯೬ರಲ್ಲಿ ಸಂಗೀತ ಗಂಗಾ ಸಂಸ್ಥೆಯು ಸಂಗೀತ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಕೊಟ್ಟು ಗೌರವಿಸಿತು. ಆಗಲೇ ಯುವ ಬರಹಗಾರರ ಮತ್ತು ಕಲಾವಿದರ ಬಳಗದವರು ಆಮಂತ್ರಿಸಿ ಗೌರವಿಸಿದ್ದರು. ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಸಂತ ಶಿಶುನಾಳ ಶರೀಫ್ ಪ್ರಶಸ್ತಿಯನ್ನು ೧೯೯೭ರಲ್ಲಿ ನೀಡಿ ಗೌರವಿಸಿದ್ದು ಎಲ್ಲದಕ್ಕಿಂತ ಹೆಚ್ಚಿನದು.

ಜಯವಂತಿದೇವಿಯವರ ಪಾಲಿಗೆ ಯೋಗ್ಯತೆಯ ಜೊತೆಗೆ ಯೋಗವೂ ಕೂಡಿ ಅವರು ಹಿಂದೆ ಮಾಡಿದ ಸಂಗೀತ ಸೇವೆಯನ್ನು ಗಮನಿಸಿ ಕರ್ನಾಟಕ ಸರ್ಕಾರ ಶಿಶುನಾಳ ಶರೀಫ ಪ್ರಶಸ್ತಿ ಇತ್ತದ್ದು ಸಾಮಾನ್ಯದ ವಿಷಯವೇನಲ್ಲ. ಹೊರನಾಡ ಕನ್ನಡತಿಯಾಗಿಯೂ, ಕರ್ನಾಟಕದ ಮಗಳೆಂದು ಗುರುತಿಸಿ ತವರೂರಾದ ಕರ್ನಾಟಕ ಆಕೆಯನ್ನು ಗೌರವಿಸಿದ್ದು ಹೆಮ್ಮೆಯ ಸಂಗತಿ. ಕುವೆಂಪುರವರ “ಎಲ್ಲಾದರು ಇರು, ಎಂತಾದರು  ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ದಿವ್ಯಮಂತ್ರವನ್ನು ಕನ್ನಡದ ಜನ, ಕರ್ನಾಟಕ ಸರ್ಕಾರ ಮರೆತಿಲ್ಲ. ಹಾಗಾಗಿಯೇ ದೂರದ ಜಮ್‌ಶೆಡ್‌ಪುರ, ಪೂನಾದಂತಹ ಜಾಗಗಳಲ್ಲೇ ಅವರು ಜೀವನದ ಬಹುಪಾಲನ್ನು ಕಳೆಯುತ್ತಿದ್ದರೂ, ಕನ್ನಡದ ಜನ ಜಯವಂತಿದೇವಿಯವರು ಐವತ್ತರ ದಶಕದಲ್ಲಿ ಕನ್ನಡಕ್ಕಾಗಿ ದುಡಿದುದನ್ನು ಮರೆಯದೆ ಸಂಭ್ರಮದಲ್ಲಿ ಸನ್ಮಾನಿಸಿದ್ದು, ಗೌರವಿಸಿದ್ದು, ಅದರಲ್ಲೂ ಹೆಚ್ಚಿನ ವಿಷಯವೆಂದರೆ ಸಂತ ಶಿಶುನಾಳ ಶರೀಫರ ಪ್ರಶಸ್ತಿ ಆರಂಭವಾದ ಮೊಟ್ಟ ಮೊದಲ ವರ್ಷವೇ ಜಯವಂತಿದೇವಿಯವರಿಗೆ ದೊರೆತದ್ದು.

ಅವರಿಗೂ  ಕನ್ನಡವೆಂದರೆ ಬಹಳ ಅಭಿಮಾನ. ಅವರ ಪತ್ರ ವ್ಯವಹಾರವೆಲ್ಲ ಕನ್ನಡದಲ್ಲಿಯೇ. ಇದೂ ಮೆಚ್ಚಬೇಕಾದ ವಿಷಯವೇ. “ನನಗೆ ಶರೀರ-ಶಾರೀರ ಎರಡೂ ಬಳಲಿದೆ. ಹಿಂದಿನಂತೆಯೇ ಇದ್ದಿದ್ದರೆ ಶಿಶುನಾಳ ಶರೀಫರ ಗೀತೆಗಳನ್ನು ಕಲಿತು ಹಾಡುವ ಆಸೆ” ಎನ್ನುವ ಅವರ ಮಾತನ್ನು ಕೇಳಿದರೆ ಯಾರಿಗೂ ಹೆಮ್ಮೆ ಎನಿಸದಿರಲಾರದು. ಈಗಲೂ ತಪ್ಪದೆ ಪೂಜೆಮಾಡುವಾಗ ದೇವರ ಸನ್ನಿಧಾನದಲ್ಲಿ ಹಾಡುವ ಪರಿಪಾಠವನ್ನಂತೂ ಇಟ್ಟುಕೊಂಡಿದ್ದಾರೆ.

ಈಗ ಜಯವಂತಿದೇವಿಯವರು ತಮ್ಮ ಪತಿ ದಿನಕರ್ ಹಿರೇಬೆಟ್‌ರವರೊಂದಿಗೆ ಪೂನಾದಲ್ಲಿ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ. ಪರ ಊರುಗಳಲ್ಲಿರುವ ಮಕ್ಕಳ ಮನೆಗೆ ಆಗಾಗ ಹೋಗಿ ಬರುತ್ತ ಆನಂದದಿಂದಿದ್ದಾರೆ. ಕಲೆ ಹಾಗೂ ಬದುಕು ಎರಡು ಒಂದಕ್ಕೊಂದು ಪೂರಕವಾದಾಗ ಜೀವನ ನಿಜಕ್ಕೂ ಅರ್ಥಪೂರ್ಣವೆನಿಸುತ್ತದೆ, ಸಾರ್ಥಕವೆನಿಸುತ್ತದೆ. ಅಂತಹ ಸುಂದರ ಬದುಕು ಜಯವಂತಿದೇವಿ ಹಿರೇಬೆಟ್‌ರವರ ಪಾಲಿಗೆ ದೊರೆತಿದೆ.