ಜಯಶಂಕರ ಪ್ರಸಾದ್ಹಿಂದೀ ಭಾಷೆಯ ಶ್ರೇಷ್ಠ ಸಾಹಿತಿ. ಸರಳ ಸ್ವಭಾವ. ದೇಶಪ್ರೇಮವನ್ನು ಉಕ್ಕಿಸುವ, ಭಾರತೀಯ ಇತಿಹಾಸ-ಧರ್ಮ-ಸಂಸ್ಕೃತಿ ಗಳಲ್ಲಿ ಗೌರವ ಮೂಡಿಸುವ ಕೃತಿಗಳನ್ನು ರಚಿಸಿದರು. ಅವುಗಳಲ್ಲಿ ಅಂತ:ಕರಣವೂ ಮಿಡಿಯುತ್ತದೆ.

 ಜಯಶಂಕರ ಪ್ರಸಾದ್

 

ಹಿಮಾದ್ರಿ ತುಂಗ ಶೃಂಗ ಸೇ
ಪ್ರಬುದ್ಧ ಶುದ್ಧ ಭಾರತೀ
ಸ್ವಯಂ ಪ್ರಭಾ ಸಮುಜ್ವಲಾ
ಸ್ವತಂತ್ರತಾ ಪುಕಾರತೀ..

ಅಮರ್ತ್ಯ, ವೀರಪುತ್ರ ಹೋ, ದೃಢ ಪ್ರತಿಜ್ಞ ಸೋಚ್ ಲೋ, ಪ್ರಶಸ್ತ ಪುಣ್ಯ ಪಂಥ ಹೈ .. ಬಡೇ ಚಲೋ ಬಡೇ ಚಲೋ

ಮೇಲಿನದು ಒಂದು ದೇಶಭಕ್ತಿಗೀತೆ, ಹಿಂದೀ ಭಾಷೆಯಲ್ಲಿದೆ. ನಮಗೆ ಸ್ವಾತಂತ್ರ್ಯ ಬರುವ ಮುನ್ನ ಅನೇಕ ಭಾರತೀಯರಲ್ಲಿ ದೇಶಾಭಿಮಾನ, ಸ್ವಾತಂತ್ರ್ಯ ಪ್ರೇಮವನ್ನು ಹುಟ್ಟಿಸಿದ ಗೀತೆ. ಇದರಲ್ಲಿ ಭಾರತ ಮಾತೆಯ ಗುಣಗಾನವಿದೆ. ಭಾರತೀಯರ ಕರ್ತವ್ಯದ ಬಗೆಗೆ ಕಳಕಳಿ ಇದೆ.

ಈ ದೇಶಭಕ್ತಿ ಗೀತೆಯನ್ನು ರಚಿಸಿದವರು ಪ್ರಸಿದ್ಧ ಹಿಂದೀ ಕವಿ ಜಯಶಂಕರ ಪ್ರಸಾದರು.

ಈ ಗೀತೆಯ ಅರ್ಥವನ್ನು ಸರಳಮಾತಿನಲ್ಲಿ ಹೀಗೆ ಹೇಳಬಹುದು: “ಭಾರತಮಾತೆ ನಮ್ಮೆಲ್ಲರ ತಾಯಿ. ಆಕೆ ಸ್ವಯಂ ಪ್ರಕಾಶವುಳ್ಳವಳು. ಆಕೆಯ ಕಾಂತಿ, ಹಿರಿಮೆ ಎಂದಿಗೂ ಮಾಸದು. ಉತ್ತರದಲ್ಲಿ ದಾಟಲಸಾಧ್ಯವಾದ ಹಿಮಾಚಲವಿದೆ. ಅದು ಪರ್ವತಗಳ ರಾಜ. ಭಾರತಮಾತೆ ಗುಲಾಮಗಿರಿಯಲ್ಲಿದ್ದಾಳೆ. ಆಕೆಯನ್ನು ಸ್ವತಂತ್ರಗೊಳಿಸುವುದು ಅವಳ ಪುತ್ರರ ಕರ್ತವ್ಯ. ಇದಕ್ಕಾಗಿ ದೃಢಪ್ರತಿಜ್ಞೆ ಮಾಡು. ನಮ್ಮ ಮುಂದೆ ಸೊಗಸಾದ ಹಾದಿಯಿದೆ. ಹೋರಾಡಲು ಮುಂದೆ ಮುಂದೆ ನುಗ್ಗು. ನೀನು ಅಮರನಾಗುವೆ.’

ಚಂದ್ರಗುಪ್ತ

ಇದು ಜಯಶಂಕರ ಪ್ರಸಾದ್‌ರ ‘ಚಂದ್ರಗುಪ್ತ’ ನಾಟಕದ ನಾಲ್ಕನೇ ಅಂಕದಲ್ಲಿದೆ. ಪ್ರಸಾದರ ಪ್ರಸಿದ್ಧ ನಾಟಕಗಳಲ್ಲಿ “ಚಂದ್ರಗುಪ್ತ’ ನಾಟಕ ಅತ್ಯಂತ ಪ್ರಸಿದ್ಧವಾದುದು.

ನೀವು ಈಗಾಗಲೇ ಭಾರತದೇಶದ ಚರಿತ್ರೆಯನ್ನು ಓದಿದ್ದೀರಿ. ಚಂದ್ರಗುಪ್ತ ಮೌರ್ಯ ಭಾರತದ ಪ್ರಸಿದ್ಧ ದೊರೆ. ದೇಶದ ಸ್ವಾತಂತ್ರ್ಯ ರಕ್ಷಣೆ ತನ್ನ ಕರ್ತವ್ಯ ಎಂದು ತಿಳಿದಿದ್ದನು.

ಗ್ರೀಸ್ ದೇಶದ ದೊರೆ ಅಲೆಗ್ಸಾಂಡರ್ ಜಗತ್ತಿನ ಅನೇಕ ರಾಜ್ಯಗಳನ್ನು ಗೆದ್ದಿದ್ದನು. ಸಂಪತ್ತಿನಿಂದ ತುಂಬಿರುವ ಭಾರತದೇಶವನ್ನು ಗೆಲ್ಲುವ ಆಸೆ ಅವನದು.

ಅವನ ಆಸೆ ಅಷ್ಟು ಸುಲಭವಾಗಿ ಈಡೇರುವಂತಿರಲಿಲ್ಲ. ಭಾರತದ ಇತರೆ ವೀರ ರಾಜರು ಹೆಜ್ಜೆಹೆಜ್ಜೆಗೆ ಅಡ್ಡಿ ಆತಂಕಗಳನ್ನು ಒಡ್ಡಿದರು. ವಿಶ್ವವಿಜಯಿಯಾಗುವ ಅವನ ಆಸೆ ನೆರವೇರಲಿಲ್ಲ.

ಅಲೆಕ್ಸಾಂಡರನ ದಂಡನಾಯಕ ಸೆಲ್ಯುಕಸ್. ಮೌರ್ಯ ಸಾಮ್ರಾಟ ಚಂದ್ರಗುಪ್ತನೊಡನೆ ಯುದ್ಧ ಹೂಡಿದ. ತನ್ನ ದೇಶವನ್ನು ಶತ್ರುಗಳಿಂದ ರಕ್ಷಿಸಲು ಚಂದ್ರಗುಪ್ತ ಬಲವಾದ ಹೋರಾಟ ನಡೆಸಿದ.

ಚಂದ್ರಗುಪ್ತ ನಾಟಕದಲ್ಲಿ ಈ ಹೋರಾಟದ ಕಥೆ ಇದೆ. ದೇಶಪ್ರೇಮವನ್ನು ಜಾಗೃತಗೊಳಿಸುವ ಈ ನಾಟಕವನ್ನು ಓದುತ್ತಿದ್ದರೆ ಉತ್ಸಾಹದಿಂದ ಮೈನವಿರೇಳುತ್ತದೆ.

ಅದ್ಭುತ ದೇಶಪ್ರೇಮ

ದೇಶದ ಶತ್ರುಗಳ ವಿರುದ್ಧ ಭಾರತೀಯರನ್ನು ಎಚ್ಚರಗೊಳಿಸುವ ದೃಶ್ಯವೊಂದು ಚಂದ್ರಗುಪ್ತ ನಾಟಕದಲ್ಲಿ ಬರುತ್ತದೆ. ಮೇಲೆ ಹೇಳಿದ ಗೀತೆ ಆ ಸಂದರ್ಭದ್ದು.

ತಕ್ಷಶಿಲೆಯ ರಾಜ ಅಂಭಿ. ದೇಶದ ಶತ್ರುಗಳನ್ನು ಎದುರಿಸಲಾಗದ ಹೇಡಿ, ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ಶತ್ರುಗಳಿಗೆ ಸಹಾಯಮಾಡಲು ಹಿಂಜರಿಯದ ಸಮಯ ಸಾಧಕ.

ಅಂಭಿಯ ತಂಗಿ ಅಲಕಾ. ವೀರರಮಣಿ, ಸ್ವಾತಂತ್ರ್ಯ ಪ್ರೇಮಿ. ದೇಶಪ್ರೇಮದ ಸಾಕಾರಮೂರ್ತಿ, ಶತ್ರುಗಳು ಭಾರತ ದೇಶವನ್ನು ಬಿಟ್ಟು ತೊಲಗುವವರೆಗೆ ಅವಳಿಗೆ ನೆಮ್ಮದಿ ಯಿರಲಿಲ್ಲ. ” ದೇಶದ ಶತ್ರುವಿನ ಜೊತೆ ಸ್ನೇಹ ಬೇಡ. ಅದು ದೇಶದ್ರೋಹ.’ ಅಲಕಾ ಅಣ್ಣನನ್ನು ಎಚ್ಚರಿಸುವಳು. ತಂಗಿಯ ಮಾತು ಅವನಿಗೆ ರುಚಿಸುವುದಿಲ್ಲ; ಅಲಕಾ ತನ್ನ ಪ್ರೀತಿಯ ಅಣ್ಣ, ರಾಜ್ಯ, ವೈಭವ ಎಲ್ಲವನ್ನೂ ಬಿಟ್ಟು ಹೊರಡುವಳು.

ಅಲಕಾ ಕೈಯಲ್ಲಿ ಧ್ವಜವನ್ನು ಹಿಡಿದು ಹಳ್ಳಿ ಹಳ್ಳಿ ತಿರುಗುವಳು, ಕಾಡು, ಬೆಟ್ಟ, ಗುಡ್ಡಗಳಲ್ಲಿ ಅಲೆಯುವಳು, ಸುಶ್ರಾವ್ಯವಾಗಿ ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ಎಲ್ಲಡೆ ಸುತ್ತುವಳು. ಜನರಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸುವಳು. ಶತ್ರುವಿನ ವಿರುದ್ಧ ಅವರು ಸಿಡಿದೇಳುವಂತೆ ಮಾಡುವಳು.

ಅಲಕಾಳ ದೇಶಭಕ್ತಿಗೀತೆಗಳನ್ನು ಕೇಳಲು, ಅವಳ ವೀರರಸಪೂರ್ಣ ಮಾತುಗಳನ್ನು ಕೇಳಲು ಜನರ ಗುಂಪು ಸೇರುತ್ತಿತ್ತು. ಅವುಗಳನ್ನು ಕೇಳಿ ಜನರ ಮೈನವಿರೇಳುತ್ತಿತ್ತು. ಮುಷ್ಠಿಗಳು ಬಿಗಿದುಕೊಳ್ಳುತ್ತಿದ್ದವು. ಕಣ್ಣುಗಳಿಂದ ಕಿಡಿ ಉದುರುತ್ತಿತ್ತು. ಹುಬ್ಬು ಗಂಟಿಕ್ಕುತ್ತಿತ್ತು. ಅವರೆಲ್ಲರೂ ಒಕ್ಕೊರಲಿನಿಂದ ತಮ್ಮ ಪ್ರಾಣ ಕೊಟ್ಟಾದರೂ ದೇಶವನ್ನು ರಕ್ಷಿಸುತ್ತೇವೆಂದು ಪ್ರತಿಜ್ಞೆ ಮಾಡುತ್ತಿದ್ದರು. ಜನರು ಅಲಕಾಳನ್ನು ‘ಸ್ವಾತಂತ್ರ್ಯ ದೇವತೆ ’ ಎಂದು ತಿಳಿದಿದ್ದರು.

ತಂಗಿಯ ದೇಶಪ್ರೇಮವನ್ನು ಕಂಡು ಅಂಭಿ ಬೆರಗಾಗುತ್ತಾನೆ. ಅಂಭಿಗೆ ತನ್ನ ತಪ್ಪಿನ ಅರಿವಾಗುತ್ತದೆ. ತನ್ನ ದೇಶದ್ರೋಹದ ಕೆಲಸವನ್ನು ನೆನೆದು ನಾಚಿಕೊಳ್ಳುತ್ತಾನೆ.

“ಅಲಕಾ, ನಿನ್ನಂಥ ತಂಗಿಯನ್ನು ಪಡೆದ ನಾನು ಧನ್ಯ. ನಿನ್ನ ದೇಶಪ್ರೇಮ, ಸ್ವಾತಂತ್ರ್ಯ ಪ್ರೇಮ ನನ್ನ ಕಣ್ಣು ತೆರೆಸಿವೆ. ನಾನು ಶತ್ರುಗಳ ಜೊತೆ ಸೇರಿದುದು ತಪ್ಪು. ಜನ್ಮಭೂಮಿಯ ಋಣವನ್ನು ತೀರಿಸಬೇಕಾದ್ದು ಪ್ರತಿಯೊಬ್ಬ ಭಾರತೀಯನ ಪರಮ ಕರ್ತವ್ಯ. ಇನ್ನೆಂದೂ ನಾನು ದೇಶದ್ರೋಹ ಮಾಡುವುದಿಲ್ಲ. ನನ್ನನ್ನು ಕ್ಷಮಿಸು.’ ಎಂದು ಅಲಕಾಳ ಕೈಹಿಡಿದು ದು:ಖಿಸುವನು.

ಅಂಭಿಯ ಮಾತು ಕೇಳಿ ಅಲಕಾಳಿಗೆ ಹರ್ಷವಾಗುತ್ತದೆ. “ಅಣ್ಣಾ ! ಇದುವರೆಗೆ ಮಾಡಿದ ತಪ್ಪನ್ನು ಮರೆತುಬಿಡು, ದೇಶ ಸ್ವರ್ಗಕ್ಕಿಂತ ದೊಡ್ಡದು. ಎಲ್ಲರೂ ಒಟ್ಟಿಗೆ ಸೇರಿ ದೇಶಕ್ಕೆ ಬಂದಿರುವ ಸಂಕಟವನ್ನು ದೂರ ಮಾಡೋಣ. ಶತ್ರುವನ್ನು ಧೈರ್ಯದಿಂದ ಎದುರಿಸೋಣ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಲು ಸಿದ್ಧರಾಗೋಣ’ -ಅಲಕಾ ಆವೇಶದಿಂದ ನುಡಿಯುವಳು.

ಎಂಥ ದೇಶಪ್ರೇಮ ! ಎಂಥ ಕೆಚ್ಚು! ! ಇಂಥ ಸನ್ನಿವೇಶ ಗಳು ಚಂದ್ರಗುಪ್ತ ನಾಟಕದ ತುಂಬ ಬಂದಿವೆ. ಹೀಗೆ ದೇಶಪ್ರೇಮ ಕಥಾವಸ್ತುವನ್ನುಳ್ಳ ಅನೇಕ ನಾಟಕಗಳೂ, ಕಥೆಗಳು, ಕವನಗಳನ್ನು ಜಯಶಂಕರ ಪ್ರಸಾದರು ಬರೆದಿದ್ದಾರೆ.

ಮನೆತನ

ಕಾಶಿ ಸಹಸ್ರಾರು ವರ್ಷಗಳಿಂದಲೂ ಒಂದು ಪುಣ್ಯಕ್ಷೇತ್ರ. ಹಿಂದೂಗಳಿಗೆ ಪವಿತ್ರ ಸ್ಥಳ. ಪವಿತ್ರ ಗಂಗಾನದಿ ಇಲ್ಲಿ ಹರಿಯುತ್ತದೆ. ಕಾಶಿಯಲ್ಲಿ ವಿಶ್ವೇಶ್ವರ ದೇವಾಲಯ ಇದೆ. ಕೋಟ್ಯಂತರ ಭಕ್ತರು ವಿಶ್ವೇಶ್ವರನ ದರ್ಶನ ಪಡೆದು ಪುನೀತರಾಗುತ್ತಾರೆ.

ಬಾಬು ದೇವಿಪ್ರಸಾದರು ಕಾಶಿಯ ಪ್ರಸಿದ್ಧ ತಂಬಾಕು (ಹೊಗೆಸೊಪ್ಪು) ವ್ಯಾಪಾರಿಗಳು, ಐಶ್ವರ್ಯವಂತರು. ಅಲ್ಲಿಯ ಜನರು ಗೌರವದಿಂದ ಇವರನ್ನು ’ಸಂಘ ನಿಸಾಹು’ ಎಂದು ಕರೆಯುತ್ತಿದ್ದರು. ಸಂಘ ನಿಸಾಹು ಎಂದರೆ ಸಮಾಜದಲ್ಲಿ ಬಹುಜನರ ಪ್ರೀತಿಯನ್ನು ಗಳಿಸಿದವರು.

ಇಂಥ ಸಿರಿವಂತ ಕುಟುಂಬದಲ್ಲಿ ಜಯಶಂಕರ ಪ್ರಸಾದರು ೧೮೮೯ರಲ್ಲಿ ಜನಿಸಿದರು.

ಪ್ರಸಾದರ ತಾಯಿಯು ತುಂಬ ಆಚಾರಶೀಲೆ. ಸಾತ್ವಿಕ ಸ್ವಭಾವದವರು. ಆಕೆಗೆ ಕಾಶಿ ವಿಶ್ವನಾಥನಲ್ಲಿ ಅಪಾರ ಭಕ್ತಿ. ಪ್ರತಿದಿನ ಗಂಗಾನದಿಯಲ್ಲಿ ಸ್ನಾನಮಾಡಿ ವಿಶ್ವನಾಥನಿಗೆ ಪೂಜೆ ಸಲ್ಲಿಸುತ್ತಿದ್ದರು. ಕಾಶಿ ವಿಶ್ವೇಶ್ವರನ ವರ ಪ್ರಸಾದದಿಂಧ ಜನಿಸಿದ ಮಗುವಿಗೆ ಜಯಶಂಕರ ಪ್ರಸಾದ ಎಂದೇ ನಾಮಕರಣ ಮಾಡಿದ್ದರು.

ಪ್ರಸಾದರ ತಂದೆ ಉದಾರಿಗಳು, ದಾನಶೀಲರು, ಕಲೆ, ಸಾಹಿತ್ಯ, ಸಂಗೀತಗಳಲ್ಲಿ ಅಪಾರ ಒಲವು, ಅಭಿಮಾನ ವುಳ್ಳವರು, ಧರ್ಮಪರಾಯಣರು, ದೈವಭಕ್ತರು.

ಶಾಲಾ ಜೀವನ

ಶ್ರೀಮಂತ ಕುಟುಂಬದಲ್ಲಿ ಜನಿಸಿದ ಪ್ರಸಾದನಿಗೆ ಯಾವುದಕ್ಕೂ ಕೊರತೆಯಿರಲಿಲ್ಲ. ಬಗೆ ಬಗೆಯ ಉಡುಪು. ರಂಗುರಂಗಿನ ಆಟಿಕೆ. ಪ್ರಸಾದ ಬಯಸಿದ್ದೆಲ್ಲಾ ದೊರೆಯುತ್ತಿತ್ತು.

ಪ್ರಸಾದ ಶಾಲೆಯಲ್ಲಿ ಬುದ್ಧಿವಂತ ವಿದ್ಯಾರ್ಥಿ. ಪ್ರಸಾದನ ನೆನಪಿನ ಶಕ್ತಿ ಅಗಾಧ. ಅಧ್ಯಾಪಕರು ಒಮ್ಮೆ ಹೇಳಿದ ವಿಷಯನ್ನು ಬಹುಕಾಲ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದ. ಪ್ರಸಾದನಿಗೆ ಕಥೆಗಳೆಂದರೆ ಪ್ರಾಣ. ಅದರಲ್ಲೂ ಐತಿಹಾಸಿಕ, ಪೌರಾಣಿಕ ಕಥೆಗಳೆಂದರೆ ತಿಂಡಿ ಊಟವನ್ನೂ ಮರೆಯುತ್ತಿದ್ದ. ಕಥೆ, ನಾಟಕ, ಪದ್ಯ, ಪುಸ್ತಕಗಳೇ ಅವನ ಸ್ನೇಹಿತರು. ಬುದ್ಧನ ಜಾತಕ ಕಥೆಗಳು, ಪಂಚತಂತ್ರ ಕಥೆಗಳು, ಜೈನ ಕಥೆಗಳು ಮತ್ತು ಪುರಾಣ ಕಥೆಗಳನ್ನು ಓದುವುದೆಂದರೆ, ಕೇಳುವುದೆಂದರೆ ಪ್ರಸಾದನಿಗೆ ಹಾಲು ಅನ್ನ ಉಂಡಷ್ಟು ಸಂತೋಷವಾಗುತ್ತಿತ್ತು. ಓದುವಾಗ ಏನಾದರೂ ಅನುಮಾನ ಉಂಟಾದರೆ ತಂದೆಯನ್ನು ಕೇಳಿ ಅದನ್ನು ನಿವಾರಿಸಿಕೊಳ್ಳುತ್ತಿದ್ದ.

ಪ್ರಸಾದ ಪದ್ಯಗಳನ್ನು ಸುಶ್ರಾವ್ಯವಾಗಿ ಹೇಳುತ್ತಿದ್ದ. ಅನೇಕ ಪದ್ಯಗಳನ್ನು ಕಂಠಪಾಠ ಮಾಡಿದ್ದ. ಒಮ್ಮೊಮ್ಮೆ ಅದೇ ರೀತಿ ಪದ್ಯಗಳನ್ನು ಬರೆಯುತ್ತಿದ್ದ. ಅವುಗಳನ್ನು ಅಧ್ಯಾಪಕರಿಗೆ ತೋರಿಸಿ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದ. ಪ್ರಸಾದನಲ್ಲಿ ಅಡಗಿದ್ದ ಈ ದೈವದತ್ತ ಶಕ್ತಿಯನ್ನು ಕಂಡು ಅಧ್ಯಾಪಕರು ಬೆರಗಾಗುತ್ತಿದ್ದರು.

ಪ್ರಸಾದನಿಗೆ ಆಟಗಳಲ್ಲಿ ಆಸಕ್ತಿ ಇರಲಿಲ್ಲ. ಹುಡುಗರು ಆಟದ ಬಯಲಿನಲ್ಲಿ ಆಡುತ್ತಿದ್ದರೆ ಪ್ರಸಾದ ಮರದ ಕೆಳಗೆ ಕುಳಿತು ತನಗೆ ಪ್ರಿಯವಾದ ಪುಸ್ತಕಗಳನ್ನು ಆಸಕ್ತಿಯಿಂದ ಓದುತ್ತಿದ್ದ.

ಶಾಲೆಯ ವಾರ್ಷಿಕೋತ್ಸವ ಸಮಾರಂಭ. ವಿದ್ಯಾರ್ಥಿ ಗಳಿಗೆ ಎಲ್ಲಿಲ್ಲದ ಉತ್ಸಾಹ, ಆನಂದ, ವಾರ್ಷಿಕೋತ್ಸವದ ಅಂಗವಾಗಿ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಪ್ರಸಾದ ಆಟಗಲ್ಲಿ ಹಿಂದು. ಜೊತೆಯ ಹುಡುಗರು ಬಯಲಿನಲ್ಲಿ ಉತ್ಸಾಹದಿಂದ ಓಡುತ್ತಿದ್ದರೆ. ಜಿಗಿಯುತ್ತಿದ್ದರೆ ಪ್ರಸಾದ ಅವರನ್ನು ಬೆರಗುಗಣ್ಣಿನಿಂದ ನೋಡುತ್ತಾ ನಿಲ್ಲುತ್ತಿದ್ದ. ಕ್ರೀಡಾಸ್ಪರ್ಧೆಗಳಲ್ಲಿ ಪ್ರಸಾದ ಭಾಗವಹಿಸುತ್ತಿರಲಿಲ್ಲ.

ಸಾಹಿತ್ಯಸ್ಪರ್ಧೆಗಳಲ್ಲಿ ಪ್ರಸಾದನಿಗೆ ಆಸಕ್ತಿ. ಪ್ರಸಾದ ಈ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ. ಎಲ್ಲ ಪ್ರಥಮ ಬಹುಮಾನಗಳೂ ಪ್ರಸಾದನಿಗೇ. ಸಮಾರಂಭದಲ್ಲಿ ತಾನೇ ರಚಿಸಿದ ಕವನಗಳನ್ನು ಸೊಗಸಾಗಿ ಹಾಡಿದ. ಪ್ರಸಾದನನ್ನು ಎಲ್ಲರೂ ಪ್ರಶಂಸಿಸಿದರು. ಇದರಿಂದ ಅಧ್ಯಾಪಕರಿಗೆ ಅಧಿಕ ಸಂತೋಷವಾಯಿತು.

ಆಗ ಪ್ರಸಾದನಿಗೆ ಹನ್ನೆರಡು ವರ್ಷ ಮಾತ್ರ.

ಪ್ರಸಾದನಿಗೆ ಹೀಗೆ ಬಾಲ್ಯದಲ್ಲೇ ಸಾಹಿತ್ಯದ ಬಗೆಗೆ ಒಲವು ಉಂಟಾಗಲು ಕಾರಣವೇನು?

ಸಾಹಿತ್ಯ ಆಸಕ್ತಿ

ಪ್ರಸಾದರ ತಂದೆ ದೇವಿಪ್ರಸಾದ ಮತ್ತು ಅಜ್ಜ ಶಿವರತ್ನ ಇಬ್ಬರೂ ಸಾಹಿತ್ಯ ಪ್ರೇಮಿಗಳು, ಕವಿಗಳು, ಲೇಖಕರನ್ನು ಕಂಡರೆ ತುಂಬ ಗೌರವ. ವಾರಕ್ಕೆ ಒಂದು ದಿನ ಅವರ ಮನೆಯಲ್ಲಿ ಸಾಹಿತ್ಯಗೋಷ್ಠಿ ನಡೆಯುತ್ತಿತ್ತು. ಅನೇಕ ವಿದ್ವಾಂಸರು ಅಲ್ಲಿ ಸೇರುತ್ತಿದ್ದರು. ಇವರಲ್ಲಿ ವಿವಿಧ ಭಾಷೆಗಳಿಗೆ ಸೇರಿದವರು. ಬೇರೆ ಬೇರೆ ಧರ್ಮಗಳಿಗೆ ಸೇರಿದವರು ಇರುತ್ತಿದ್ದರು, ಕೆಲವೊಮ್ಮೆ ಪ್ರಸಿದ್ಧ ಸಾಹಿತಿಗಳು ದೇಶದ ಮೂಲೆ ಮೂಲೆಯಿಂದ ಈ ಸಾಹಿತ್ಯ ಗೋಷ್ಠಿಯಲ್ಲಿ ಭಾಗವಹಿಸಲು ಬರುತ್ತಿದ್ದರು. ನಾಲ್ಕಾರು ದಿನಗಳು ಸತತವಾಗಿ ಗೋಷ್ಠಿ ಸೇರುತ್ತಿದ್ದುದೂ ಉಂಟು.

ದೇವಿಪ್ರಸಾದರೂ ಸಾಹಿತ್ಯಗೋಷ್ಠಿಗಾಗಿ ಧಾರಾಳವಾಗಿ ಹಣ ಖರ್ಚುಮಾಡುತ್ತಿದ್ದರು. ಗೋಷ್ಠಿಯಲ್ಲಿ ಭಾಗವಹಿಸಲು ಬರುತ್ತಿದ್ದ ವಿದ್ವಾಂಸರನ್ನು ಆದರಿಸಿ ಸತ್ಕರಿಸಿ ಉಡುಗೊರೆ ಗಳನ್ನಿತ್ತು ಕಳುಹಿಸುತ್ತಿದ್ದರು. ತಮ್ಮ ಮನೆಯಲ್ಲಿ ಸಾಹಿತ್ಯಗೋಷ್ಠಿ ನಡೆದಾಗ ಬಾಲಕ ಪ್ರಸಾದನಿಗೆ ಅಧಿಕ ಸಂತೋಷವಾಗುತ್ತಿತ್ತು. ಅಲ್ಲಿಯ ಎಲ್ಲ ಕಾರ್ಯಕ್ರಮಗಳನ್ನು ವೀಕ್ಷಿಸಲು ತಂದೆಯ ಜೊತೆ ಪ್ರಸಾದನೂ ಇರುತ್ತಿದ್ದನು.

ಕವಿಗಳು ಕಾವ್ಯವನ್ನು ಓದಿ ಅದರ ಅರ್ಥವನ್ನು ವಿವರಿಸುವಾಗ, ಸಾಹಿತ್ಯ ವಿಷಯದಲ್ಲಿ ಚರ್ಚೆ ನಡೆಯುವಾಗ ಬಾಲಕ ಪ್ರಸಾದ ತಂದೆಯ ತೊಡೆಯಮೇಲೆ ಕುಳಿತು ಬೆರಗುಗಣ್ಣಿನಿಂದ ಆಲಿಸುತ್ತಿದ್ದನು. ಸಾಹಿತ್ಯ ಗೋಷ್ಠಿಯಲ್ಲಿ ನಡೆಯುವ ಕಲಾಪಗಳು ಬಾಲಕ ಪ್ರಸಾದನಿಗೆ ಅರ್ಥವಾಗುತ್ತಿರಲಿಲ್ಲ. ಆದರೂ ಕುತೂಹಲ, ಆಸಕ್ತಿ ಅವನಲ್ಲಿ ಮನೆಮಾಡಿಕೊಂಡಿತ್ತು. ಇದು ಮುಂದೆ ಪ್ರಸಾದನನ್ನು ಪ್ರಖ್ಯಾತ ಕವಿ,  ಸಾಹಿತಿಯನ್ನಾಗಿಸಿತು.

ಪ್ರಸಾದನ ತಾಯಿ ಆಗಾಗ್ಗೆ ಪುಣ್ಯಕ್ಷೇತ್ರಗಳಿಗೆ ಭೇಟಿಕೊಡುತ್ತಿದ್ದರು. ಅವರು ಪ್ರವಾಸ ಹೋಗುವಾಗಲೆಲ್ಲ ಬಾಲಕ ಪ್ರಸಾದನನ್ನು ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಬಸ್ಸು, ರೈಲಿನಲ್ಲಿ ಪ್ರಯಾಣ ಮಾಡುವಾಗ ಹೊರಗೆ ಕಾಣುವ ಪ್ರಕೃತಿಸೌಂದರ್ಯವನ್ನು ಪ್ರಸಾದ ಕುತೂಹಲದಿಂದ ನೋಡುತ್ತಿದ್ದ. ಬೇರೆ ಬೇರೆ ಸ್ಥಳಗಳಿಗೆ ಹೋದಾಗ ಅಲ್ಲಿಯ ಪ್ರಕೃತಿ ಸೊಬಗನ್ನು ಕಂಡು ಮಾರು ಹೋಗುತ್ತಿದ್ದ.

ಹೀಗೆ ಪ್ರಸಾದನಿಗೆ ಬಾಲ್ಯದಿಂದಲೇ ಪ್ರಕೃತಿಯ ಬಗೆಗೆ ಒಲವು, ಧರ್ಮದ ಬಗೆಗೆ ಶ್ರದ್ಧೆ, ಸಾಹಿತ್ಯದ ಬಗೆಗೆ ಆಸಕ್ತಿ ಬೆಳೆಯಿತು.

ಪ್ರಾಣಿದಯೆ ಮತ್ತು ಸ್ವಾತಂತ್ರ್ಯ ಪ್ರೇಮ

ಶಾಲಾ ಬಾಲಕ ಪ್ರಸಾದನಲ್ಲಿ ಮತ್ತೊಂದು ಸ್ವಾರಸ್ಯ ಅಂಶವಿತ್ತು. ಅದು ಪ್ರಾಣಿದಯೆ, ಪ್ರಸಾದನಿಗೆ ಪ್ರಾಣಿಗಳನ್ನು ಕಂಡರೆ ಅಪಾರ ಪ್ರೀತಿ. ಅವನ ಹೃದಯದಲ್ಲಿ ಪ್ರಾಣಿಗಳ ಬಗೆಗೆ ಅಧಿಕ ಅನುಕಂಪವಿತ್ತು. ಇರುವೆ ಗೂಡುಗಳಿಗೆ ಸಕ್ಕರೆ, ಪಕ್ಷಿಗಳಿಗೆ ಕಾಳು, ದನಕರುಗಳಿಗೆ ಹುಲ್ಲು ಹಾಕುವುದೆಂದರೆ ಪ್ರಸಾದನಿಗೆ ತುಂಬ ಸಂತೋಷ. ಪ್ರಸಾದನ ಬಾಲ್ಯಜೀವನದಲ್ಲಿ ನಡೆದ ಒಂದು ಘಟನೆ ಪ್ರಸಾದನ ಪ್ರಾಣಿದಯೆಯ ಪರಿಚಯ ಮಾಡಿಕೊಡುತ್ತದೆ ಆ ಘಟನೆ ಇದು:

ಬೆಳಗಿನ ಸಮಯ ಪ್ರಸಾದ ತಂದೆಯ ಜೊತೆ ಅಂಗಡಿಯಲ್ಲಿದ್ದ. ಪ್ರಸಾದನ ತಂದೆ ಅಂಗಡಿಯ ವ್ಯವಹಾರದಲ್ಲಿ ಮುಳುಗಿದ್ದರು. ಪ್ರಸಾದ ಅಂಗಡಿಯ ಜಗಲಿಯ ಮೇಲೆ ಕುಳಿತು ಆಡುತ್ತಿದ್ದ. “ಸ್ವಾಮಿ! ಗಿಳಿಗಳನ್ನು ಕೊಂಡುಕೊಳ್ಳುವಿರಾ?” ಕೈಯಲ್ಲಿ ಪಂಜರ ಹಿಡಿದು ಬಂದಿದ್ದ ವ್ಯಕ್ತಿ ಕೇಳಿದ. ಪ್ರಸಾದ ತಲೆಯೆತ್ತಿ ನೋಡಿದ. ಬೆತ್ತದ ಪಂಜರವೊಂದರಲ್ಲಿ ಮೂರು ಗಿಳಿಗಳಿದ್ದವು. ನೋಡಲು ಬಹಳ ಮುದ್ದಾಗಿದ್ದವು. ಅವುಗಳಲ್ಲಿ ಎರಡು ದೊಡ್ಡವು. ಇನ್ನೊಂದು ಚಿಕ್ಕಮರಿ. ಪಂಜರದ ಸಂದಿನಿಂದ ತಮ್ಮ ಕೆಂಪು ಕೊಕ್ಕುಗಳನ್ನು ಹೊರಹಾಕಿ ‘ಕಿಚ್ ’ಕಿಚ್’ ಶಬ್ದ ಮಾಡುತ್ತಿದ್ದವು. ಪಂಜರದಲ್ಲಿ ಹಾರಲು ಪ್ರಯತ್ನಿಸುತ್ತಿದ್ದವು. ರೆಕ್ಕೆ ಬಡಿಯುತ್ತಿದ್ದವು. ತಮ್ಮ ಪ್ರಯತ್ನ ಸಫಲವಾಗದೆ ನಿರಾಸೆಗೊಳ್ಳುತ್ತಿದ್ದವು. ಅವುಗಳನ್ನು ಕಂಡು ಪ್ರಸಾದನಿಗೆ ‘ಅಯ್ಯೋ ! ಪಾಪ’ ಎನಿಸಿತು. “ಗಿಳಿಗಳು ಬೇಡಪ್ಪಾ’ ಪ್ರಸಾದನ ತಂದೆ ಅಂಗಡಿಯ ಲೆಕ್ಕವನ್ನು ನೋಡುತ್ತಾ ಹೇಳಿದರು.

ಪಂಜರವನ್ನು ಹಿಡಿದ ಆತ ಮುಂದೆ ಹೊರಟ.

ಪ್ರಸಾದನಿಗೆ ಸುಂದರ ಗಿಳಿಗಳ ಬಗೆಗೆ ಸಹಜವಾಗಿ ಆಸಕ್ತಿ ಮೂಡಿತ್ತು. “ಬಾಬೂಜಿ…ಬಾಬೂಜೀ.. ಆ ಗಿಳಿಗಳು ನನಗೆ ಬೇಕು. ಕೊಂಡುಕೊಳ್ಳಿ’  ಬಾಲಕ ಪ್ರಸಾದ ತಂದೆಯ ಕೊರಳಿಗೆ ಜೋತುಬಿದ್ದು ಕೇಳಿದ.

ಮಗ ಆಸೆಪಟ್ಟು ಕೇಳುತ್ತಿದ್ದಾನೆ. ಅವುಗಳನ್ನು ಕೊಡಿಸದಿದ್ದರೆ ಮಗನ ಮನಸ್ಸಿಗೆ ತುಂಬ ನೋವಾಗುತ್ತದೆ. ಏನು ಮಾಡುವುದು? ಪ್ರಸಾದನ ತಂದೆ ಕ್ಷಣಕಾಲ ಯೋಚಿಸಿದರು. ಮಗನಿಗೆ ಸಂತೋಷವಾದರೆ ತಮಗೂ ಸಂತೋಷ.

ಗಿಳಿಗಳನ್ನು ಆತ ಹೇಳಿದ ಬೆಲೆಯನ್ನು ಕೊಟ್ಟು ಪ್ರಸಾದನ ತಂದೆ ಕೊಂಡರು. ಆತ ಪಂಜರವನ್ನು ಪ್ರಸಾದನ ಕೈಯಲ್ಲಿ ಕೊಟ್ಟ. ತಂದೆ ಗಿಳಿಗಳನ್ನು ಕೊಂಡದ್ದು ಪ್ರಸಾದನಿಗೆ ಅಪಾರ ಹರ್ಷವನ್ನುಂಟು ಮಾಡಿತು. “ಒಳ್ಳೆಯ ಬಾಬೂಜಿ’ ಎಂದು ಆನಂದದಿಂದ ತಂದೆಯ ಕೆನ್ನೆಗಳಿಗೆ ಪ್ರಸಾದ ಮುತ್ತನ್ನಿಟ್ಟ. ಮಗನಿಗೆ ಸಂತೋಷವಾಗಿದೆ ಎಂದು ತಿಳಿದು ತಂದೆಗೂ ಸಂತೋಷವಾಯಿತು. ಅವರು ತಮ್ಮ ಕಾರ್ಯದಲ್ಲಿ ಮಗ್ನರಾದರು.

ಪ್ರಸಾದ ಗಿಳಿಯ ಜೊತೆ ಆಡತೊಡಗಿದ. ಅವುಗಳಿಗೆ ಬಾಳೆಹಣ್ಣು ತಿನ್ನಿಸಿದ. ಹೀಗೆ ಬಹಳ ಹೊತ್ತು ಕಳೆಯಿತು. ತಂದೆ ಮನೆಗೆ ಹೊರಡಲು ಸಿದ್ಧರಾದರು. ಪ್ರಸಾದನನ್ನು ಹುಡುಕಿಕೊಂಡು ಬಂದರು. ಪ್ರಸಾದ ಅಲ್ಲೆಲ್ಲೂ ಕಾಣಲಿಲ್ಲ. ಹೊರಗೆ ಅಂಗಳಕ್ಕೆ ಬಂದರು. ಪ್ರಸಾದ ಅಂಗಳದಲ್ಲಿ ನಿಂತು ಎತ್ತಲೋ ನೋಡುತ್ತಿದ್ದ. ಪ್ರಸಾದನ ಕೈಯಲ್ಲಿ ಪಂಜರವಿತ್ತು. ಆದರೆ ಅದರೊಳಗೆ ಗಿಳಿಗಳು ಇರಲಿಲ್ಲ.  ಪಂಜರ ಖಾಲಿಯಾಗಿತ್ತು. ತಂದೆಗೆ ಆಶ್ಚರ್ಯವಾಯಿತು.

“ಪ್ರಸಾದ, ಪಂಜರದಲ್ಲಿದ್ದ ಗಿಳಿಗಳೆಲ್ಲಿ?”

“ಅಗೋ ಅಲ್ಲಿ.” ಪ್ರಸಾದ ಚಪ್ಪಾಳೆ ತಟ್ಟುತ್ತಾ ಹೇಳಿದ.

ಪ್ರಸಾದ ಬೆರಳು ತೋರಿಸಿದ ಕಡೆ ತಂದೆ ಕುತೂಹಲದಿಂದ ನೋಡಿದರು. ಎದುರಿಗೆ ಒಂದು ಮರದ ಕೊಂಬೆಯ ಮೇಲೆ ಮೂರು ಗಿಳಿಗಳು ಕುಳಿತಿದ್ದವು. ಅವುಗಳಿಗೆ ಆನಂದವಾಗಿತ್ತು.

“ಗಿಳಿಗಳು ಅಲ್ಲಿಗೆ ಹೇಗೆ ಹೋದವು!” ಆಶ್ಚರ್ಯದಿಂದ ತಂದೆ ಕೇಳಿದರು.

“ಬಾಬುಜೀ! ನಾನೇ ಪಂಜರದ ಬಾಗಿಲು ತೆರೆದು ಗಿಳಿಗಳನ್ನು ಹೊರಗೆ ಬಿಟ್ಟೆ. ಅವು ಹೊರಗೆ ಹೋಗಲು ಚಡಪಡಿಸುತ್ತಿದ್ದವು. ಸ್ವತಂತ್ರವಾಗಿರಲು ಯಾರಿಗೆ ತಾನೇ ಇಷ್ಟವಿರದು? ಪ್ರಸಾದ ಗಂಭೀರನಾಗಿ ಹೇಳಿದ.

ಮಗನ ಮುಗ್ಧಮಾತುಗಳನ್ನು ಕೇಳಿ ತಂದೆ ದಂಗಾದರು. ಪ್ರಸಾದ ಗಿಳಿಗಳನ್ನು ಆಸೆಪಟ್ಟು ಪಡೆದಿದ್ದ. ಆದರೆ ಅವುಗಳು ಪಂಜರದಲ್ಲಿ ರೆಕ್ಕೆಬಡಿಯುತ್ತಾ ಹೊರಗೆ ಹಾರಲು ಪ್ರಯತ್ನಿಸುತ್ತಿದ್ದವು. ಅವುಗಳ ಸ್ವಾತಂತ್ರ್ಯ ಹರಣವಾಗುವುದು ಪ್ರಸಾದನಿಗೆ ಇಷ್ಟವಾಗಲಿಲ್ಲ. ಪಂಜರದ ಬಾಗಿಲು ತೆಗೆದು ಹೊರಗೆ ಬಿಟ್ಟಿದ್ದ.

ಪ್ರಾಣಿದಯೆ ಪ್ರಸಾದರ ಹುಟ್ಟುಗುಣವಾಗಿತ್ತು. ಸ್ವಾತಂತ್ರ್ಯಪ್ರೇಮ ಅವರ ಉಸಿರಾಗಿತ್ತು. ಮುಂದೆ ಪ್ರಸಾದರ ನಾಟಕ, ಕಥೆ. ಕವನಗಳಲ್ಲಿ ಈ ಸ್ವಾತಂತ್ರ್ಯ ಪ್ರೇಮ, ಪ್ರಾಣಿದಯೆ ಉಜ್ವಲಗೊಂಡಿತು. ಅವರ ‘ಅಜಾತಶತ್ರು’ ನಾಟಕದ ಆರಂಭದಲ್ಲೇ ಪ್ರಾಣಿದಯೆಗೆ ಸಂಬಂಧಿಸಿದ ಮನ ಮಿಡಿಯುವ ಸಂಭಾಷಣೆ ಇದೆ. ಅದು ಹೀಗಿದೆ :

ಅಜಾತಶತ್ರು: ಯಾಕೋ ಲುಬ್ಧಕ! ಜಿಂಕೆಯ ಮರಿಯನ್ನು ಯಾಕೆ ತರಲಿಲ್ಲ? ಈಗ ನಮ್ಮ ಚಿತ್ರಕ ಯಾರ ಜೊತೆಗೆ ಆಡಬೇಕು? ಬಹಳ ಕೊಬ್ಬಿ ಹೋಗಿದ್ದೀಯೆ.

ಲುಬ್ಧಕ : ನಾವು ಸೇವಕರು. ದೊರೆ ಹೇಳಿದ ಕೆಲಸವನ್ನು ಮಾಡದೇ ಉಂಟೇ ? ಈ ದಿನ ಕೂಡ ನಾನು ಜಿಂಕೆಯ ಮರಿಯನ್ನು ಹಿಡಿಯದೇ ಇರಲಿಲ್ಲ. ಆದರೆ ಅದನ್ನು ಹಿಡಿದಾಗ, ಅದರ ತಾಯಿ ಕರುಣೆ ಬೇಡುವ ದೃಷ್ಟಿಯಿಂದ ನನ್ನತ್ತಲೇ ನೋಡುತ್ತಿತ್ತು. ಅದರ ಕರುಣೆಯ ನೋಟವನ್ನು ಸಹಿಸಲಾಗಲಿಲ್ಲ. ಅದಕ್ಕೇ ಅದನ್ನು ಬಿಟ್ಟು ಬಿಟ್ಟೆ. ಮನ್ನಿಸಬೇಕು.

ಅಜಾತಶತ್ರು : ಹ್ಞು ! ನಿನಗೆ ಇಷ್ಟೊಂದು ಸೊಕ್ಕೆ? ಅಂದರೆ ನಿನ್ನ ಚರ್ಮ ಸುಲಿಯಬೇಕು.

ಪದ್ಮಾವತಿ: ಅಣ್ಣಾ ಹಾಗೆ ಮಾಡಬಾರದು. ಮಾಡಬಾರದ್ದನ್ನು ಮಾಡಿ ಕಂಡವರ ಶಾಪಕ್ಕೆ ಈಡಾಗಬಾರದು. ಲುಬ್ಧಕ, ನೀನು ಹೊರಡು. ರಾಜಕುಮಾರರು ಬೇಟೆಗೆ ಹೋದಾಗ ಅವರ ಸೇವೆ ಮಾಡು. ಆದರೆ ಪ್ರಾಣಿ ಹಿಂಸೆಗೆ ಕೈ ಹಾಕಬೇಡ. ಪ್ರಾಣಿಹಿಂಸೆ ಮಾಡುವವರಿಗೆ ನೀನು ಎಂದೂ ಸಹಾಯ ಮಾಡಬೇಡ. ಹೋಗು.

ಅಜಾತಶತ್ರು : ದಿನದಿನಕ್ಕೆ ನೀನು ಹೆಚ್ಚಿಹೋಗುತ್ತಿದ್ದಿಯಾ, ಪದ್ಮಾ! ನನ್ನ ಸೈರಣೆ ಮೀರುತ್ತಿದೆ.

ಪದ್ಮಾವತಿ : ಜಗತ್ತಿನಲ್ಲಿ ಕಾಡುಪಶುಗಳಿಗೆ ಸಮಾನರಾದ ಕ್ರೂರಿಗಳಿಗೆ ಕೊರತೆಯಿಲ್ಲಾ ಅಣ್ಣಾ. ಆದರೆ ಮಾನವನ ಸೃಷ್ಟಿಯಾಗಿರುವುದು ಕರುಣೆಗಾಗಿ.

ಹೀಗೆ ಅಹಿಂಸೆ, ಪ್ರಾಣಿದಯೆಗೆ ಸಂಬಂಧಿಸಿದ ವಿಷಯಗಳು ಪ್ರಸಾದರ ನಾಟಕ, ಕಥೆ, ಕವನಗಳಲ್ಲಿ ಹೇರಳವಾಗಿ ಬಂದಿವೆ.

ಮನೆಯಲ್ಲಿ ಶಿಕ್ಷಣ

ಪ್ರಸಾದನಿಗೆ ಶಾಲೆಯ ಶಿಕ್ಷಣ ನೀರಸ ಎನಿಸಿತು. ತನ್ನ ಆಸಕ್ತಿಗೆ ಸರಿಯೆನಿಸುವ ವಿಷಯವನ್ನು ಕಲಿಯಲು ಅಲ್ಲಿ ಅವಕಾಶವಿಲ್ಲ ಎಂದು ಭಾವಿಸಿದ ಪ್ರಸಾದ ಶಾಲೆಗೆ ಹೋಗುವುದನ್ನು ನಿಲ್ಲಿಸಿದ. ಆಗ ಪ್ರಸಾದ ಎಂಟನೇ ತರಗತಿಯಲ್ಲಿ ಓದುತ್ತಿದ್ದ.

ಶಾಲೆಯ ಶಿಕ್ಷಣದಲ್ಲಿ ಮಗನ ಮನಸ್ಸು ಆಸಕ್ತವಾಗಿಲ್ಲವೆಂದು ತಂದೆಗೆ ತಿಳಿಯಿತು. ಮನೆಯಲ್ಲಿಯೇ ಪ್ರಸಾದನ ಶಿಕ್ಷಣಕ್ಕೆ ಅವರು ವ್ಯವಸ್ಥೆ ಮಾಡಿದರು. ಅನೇಕ ಪಂಡಿತರು, ಮೌಲ್ವಿಗಳು ಪ್ರಸಾದನಿಗೆ ಮನೆಯಲ್ಲಿ ಶಿಕ್ಷಣ ಆರಂಭಿಸಿದರು. ಅವರು ಪ್ರಸಾದನ ಒಲವನ್ನು ಗುರುತಿಸಿ ಪಾಠ ಹೇಳುತ್ತಿದ್ದರು. ಕವಿ ರವೀಂದ್ರನಾಥಠಾಕೂರ್ ಸಹ ಇದೇ ರೀತಿ ಮನೆಯಲ್ಲೇ ಶಿಕ್ಷಣ ಪಡೆದರೆಂಬುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದು. ಪ್ರಸಾದ್ ಕೆಲವೇ ದಿನಗಳಲ್ಲಿ ಅನೇಕ ಭಾಷೆಗಳನ್ನು ಕಲಿತರು. ಸಂಸ್ಕೃತ, ಉರ್ದು, ಹಿಂದಿ, ಫಾರಸಿ, ಇಂಗ್ಲಿಷ್ ಭಾಷೆಗಳನ್ನು ಓದಲು, ಬರೆಯಲು ಕಲಿತರು. ಕ್ರಮೇಣ ಈ ಎಲ್ಲ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಪಡೆದರು.

ತಂದೆ ಪ್ರಸಾದನಿಗೆ ಬೇಕಾದ ಎಲ್ಲ ಪುಸ್ತಕಗಳನ್ನು ತಂದು ಕೊಡುತ್ತಿದ್ದರು. ಮಗ ಪ್ರತಿಭಾನ್ವಿತ ವ್ಯಕ್ತಿಯಾಗಿ, ಅಪಾರ ಪಾಂಡಿತ್ಯ ಗಳಿಸಬೇಕೆಂಬುದೇ ಅವರ ಆಸೆ. ಅದಕ್ಕಾಗಿ ಪ್ರಸಾದನ ಶಿಕ್ಷಣಕ್ಕೆ ಎಲ್ಲ ಸೌಕರ್ಯಗಳನ್ನು ಒದಗಿಸಿದರು.

ಆಘಾತ

ಪ್ರಸಾದನಿಗೆ ಆಗಿನ್ನೂ ಹದಿಮೂರು ವರ್ಷ. ಪ್ರೀತಿಯ ತಂದೆ ಕಾಯಿಲೆಬಿದ್ದರು. ಔಷಧ-ಉಪಚಾರ ಒಂದೂ ಪ್ರಯೋಜನಕ್ಕೆ ಬರಲಿಲ್ಲ. ಪ್ರಸಾದನಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಸದಾ ತಂದೆಯ ಹಾಸಿಗೆ ಬಳಿಯೇ ಕುಳಿತಿರುತ್ತಿದ್ದ.

ಒಂದು ದಿನ ಬೆಳಿಗ್ಗೆ ತಲೆದಿಂಬಿನ ಬಳಿ ಕುಳಿತಿದ್ದ ಪ್ರಸಾದನನ್ನು ತಂದೆ ಹತ್ತಿರ ಬರುವಂತೆ ಸಂಕೇತ ಮಾಡಿದರು. ಪ್ರಸಾದನ ಮೈಯನ್ನು ಪ್ರೀತಿಯಿಂದ ನೇವರಿಸಿದರು. ಅವರ ಕಣ್ಣುಗಳಲ್ಲಿ ಒಂದೇ ಸಮನೆ ನೀರು ಸುರಿಯುತ್ತಿತ್ತು. ಏನೋ ಮಾತಾಡಲು ಬಾಯಿ ತೆರೆದರು. ಮಾತನಾಡಲು ಸಾಧ್ಯವಾಗಲಿಲ್ಲ. ಪ್ರಸಾದನಿಗೆ ಇದರಿಂದ ಗಾಬರಿಯಾಯಿತು. ತಾಯಿಯನ್ನು ಕರೆಯಲು ಒಳಗೆ ಓಡಿದ. ಹಿಂತಿರುಗಿ ಬರುವಷ್ಟರಲ್ಲಿ ತಂದೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು.

ತಂದೆಯ ಮರಣದಿಂದ ಪ್ರಸಾದನ ಕೋಮಲ ಹೃದಯಕ್ಕೆ ಬಲವಾದ ಆಘಾತವಾಯಿತು. ಇದೇ ಕೊರಗಿನಲ್ಲಿ ತಿಂಡಿ, ಊಟವನ್ನು ಬಿಟ್ಟ. ಅಣ್ಣ ಶಂಭುರತ್ನರಿಗೆ ಇದರಿಂದ ಹೆದರಿಕೆಯಾಯಿತು. ಬಹುವಿಧವಾಗಿ ಸಮಾಧಾನ ಹೇಳಿ ಅವನಲ್ಲಿ ಉತ್ಸಾಹ ತುಂಬಿದರು.

ಶಂಭುರತ್ನರು ಈಗ ಮನೆಯ ಮೇಲ್ವಿಚಾರಣೆ ವಹಿಸಿಕೊಂಡರು. ಮುಂದೆ ನಾಲ್ಕು ವರ್ಷ ಕಳೆಯಿತು. ತಂದೆಯ ಸ್ಥಾನದಲ್ಲಿದ್ದು ಪ್ರಸಾದನನ್ನು ನೋಡಿಕೊಳ್ಳುತ್ತಿದ್ದ ಅಣ್ಣ ಶಂಭುರತ್ನರು ಇದ್ದಕ್ಕಿದ್ದಂತೆ ತೀರಿಕೊಂಡರು.

ಈ ಎರಡು ಆಘಾತಗಳಿಂದ ಚೇತರಿಸಿ ಕೊಳ್ಳುತ್ತಿ ದ್ದಂತೆಯೇ ಪ್ರಸಾದನ ತಾಯಿ ಮರಣಹೊಂದಿದರು. ಪ್ರಸಾದ ಈಗ ನಿಜವಾಗಿ ತಬ್ಬಲಿಯಾದ. ಈ ಸಮಯದಲ್ಲಿ ಪ್ರಸಾದನ ಮನಸ್ಸಿಗೆ ಅಲ್ಪ ಸಮಾಧಾನ ನೀಡುತ್ತಿದ್ದ ಅಂಶವೆಂದರೆ ರಾಮಾಯಣ, ಮಹಾಭಾರತದ ಕಥೆಗಳು.

ಮನೆಯ ಎಲ್ಲ ಜವಾಬುದಾರಿ ಪ್ರಸಾದನ ಮೇಲೆ ಬಿತ್ತು. ಅಂಗಡಿಯ ವ್ಯವಹಾರವನ್ನು ನೋಡಿಕೊಳ್ಳಬೇಕಾಗಿ ಬಂತು. ಆಗ ಇನ್ನೂ ಅವನಿಗೆ ಹದಿನೇಳು ವರ್ಷ. ಕ್ರಮೇಣ ಪರಿಸ್ಥಿತಿಗೆ ಪ್ರಸಾದ ಒಗ್ಗಿಕೊಂಡ. ಆದರೆ ಪ್ರಸಾದನ ಸಾಹಿತ್ಯದ ಒಲವು ಮಾತ್ರ ಕಿಂಚಿತ್ತೂ ಕಡಮೆಯಾಗಲಿಲ್ಲ. ತಂದೆಯಂತೆಯೇ ಮನೆಯಲ್ಲಿ ಸಾಹಿತ್ಯಗೋಷ್ಠಿ ನಡೆಯತೊಡಗಿತು. ದೇಶದ ಪ್ರಸಿದ್ಧ ವಿದ್ವಾಂಸರು ಅದರಲ್ಲಿ ಭಾಗವಹಿಸುತ್ತಿದ್ದರು. ಪ್ರಸಾದನ ಮನೆ ‘ಸರಸ್ವತೀ’ ದೇಗುವಾಯಿತು.

ಬರಹಗಾರ -ಪ್ರಸಾದ್

ಪ್ರಸಾದರು ಹಿಂದೀ ಭಾಷೆಯ ಪ್ರಸಿದ್ಧ ಬರಹಗಾರರು. ಹಿಂದೀ ಸಾಹಿತ್ಯದ ಬಹುದೊಡ್ಡ ವಿದ್ವಾಂಸರು. ಭಾರತೀಯ ತತ್ವಶಾಸ್ತ್ರ, ಇತಿಹಾಸ, ಪುರಾಣ ಮತ್ತು ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿದರು. ಕಲೆ -ಸಂಗೀತ- ಶಿಲ್ಪಗಳಲ್ಲಿ ಒಳ್ಳೆಯ ಅಭಿರುಚಿ ಉಳ್ಳವರು. ಇವುಗಳಲ್ಲಿ ಅವರಿಗೆ ಅಪಾರ ಪ್ರೇಮ. ಭಗವಾನ್ ಬುದ್ಧನ ಉಪದೇಶಗಳಿಂದ ಪ್ರಸಾದರು ಪ್ರಭಾವಿತರಾಗಿದ್ದರು.

ಆತನ ಅಹಿಂಸೆ, ಸತ್ಯ, ಕರುಣೆ ಪ್ರಸಾದರನ್ನು ಆಕರ್ಷಿಸಿತ್ತು. ಪ್ರಸಾದರ ಎಲ್ಲ ರಚನೆಗಳಲ್ಲಿ ಈ ಅಂಶಗಳನ್ನು ಸ್ಪಷ್ಟವಾಗಿ ಕಾಣಬಹುದು.

ಪ್ರಸಾದರು ಹಿಂದೀ ಭಾಷೆಯಲ್ಲಿ ನೂರೈವತ್ತಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಹದಿಮೂರು ನಾಟಕಗಳನ್ನು ಬರೆದಿದ್ದಾರೆ. ಒಂದು ಮಹಾಕಾವ್ಯವನ್ನು ಬರೆದಿದ್ದಾರೆ ನೂರಾರು ಕವನಗಳು, ಮೂರು ಕಾದಂಬರಿಗಳು, ಅನೇಕ ವಿಮರ್ಶಾತ್ಮಕ ಲೇಖನಗಳನ್ನು ಬರೆದಿದ್ದಾರೆ. ಇವುಗಳಿಂದ ಹಿಂದೀ ಸಾಹಿತ್ಯ ಸಂಪದ್ಭರಿತವಾಗಿದೆ. ಇಡೀ ಭರತಖಂಡದಲ್ಲಿ ಅವರ ಕೀರ್ತಿ ಹಬ್ಬಿದೆ. ಜನರು ಪ್ರಸಾದರ ಕಥೆ, ಕವನ, ನಾಟಕಗಳನ್ನು ಓದಿ ಪ್ರಭಾವಿತರಾಗಿದ್ದಾರೆ.

ಪ್ರಸಾದರ ಕಾದಂಬರಿಗಳು, ಕಥೆಗಳು, ಕಾವ್ಯ, ನಾಟಕಗಳು ಭಾರತೀಯ ಇತರ ಭಾಷೆಗಳಲ್ಲಿ, ವಿಶ್ವದ ಬೇರೆ ಬೇರೆ ಭಾಷೆಗಳಲ್ಲಿ ಭಾಷಾಂತರವಾಗಿವೆ. ಅವರ ಕೆಲವು ಕಥೆ, ನಾಟಕ, ಕಾವ್ಯಗಳನ್ನು ನಾವು ಕನ್ನಡದಲ್ಲೂ ಓದಬಹುದು.

ಶ್ರೇಷ್ಠಕವಿ

ಪ್ರಸಾದರು ಬರೆಯಲು ಆರಂಭಿಸಿದ ಕಾಲ ಬಹಳ ಮಹತ್ವಪೂರ್ಣವಾದುದು. ಆ ವೇಳೆಗಾಗಲೇ ಹಿಂದೀ ಸಾಹಿತ್ಯದಲ್ಲಿ ವೀರರಸ ಕಾವ್ಯ, ಭಕ್ತಿರಸ ಕಾವ್ಯ ಮತ್ತು ಶೃಂಗಾರರಸ ಕಾವ್ಯಗಳು ರಚನೆಯಾಗಿದ್ದವು.

ವ್ಯಾಪಾರ ಮಾಡುವ ನೆಪದಿಂದ ಇಂಗ್ಲೀಷರು ಭಾರತಕ್ಕೆ ಬಂದು ಅಧಿಕಾರಸೂತ್ರವನ್ನು ಹಿಡಿದಿದ್ದರು. ಭಾರತೀಯರಲ್ಲಿ ಗುಲಾಮಗಿರಿಯಿಂದ ಬಿಡುಗಡೆ ಹೊಂದುವ ಬಯಕೆ ಮೂಡಿತ್ತು. ಅಲ್ಲಲ್ಲೇ ಇದಕ್ಕಾಗಿ ಸಣ್ಣಪುಟ್ಟ ಹೋರಾಟ ಆರಂಭವಾಗಿತ್ತು.

ಕವಿಗಳು ಸ್ವಾತಂತ್ರ್ಯ ಕಹಳೆಯೂದುವ ಕವನಗಳನ್ನು ರಚಿಸುತ್ತಿದ್ದರು. ದೇಶಪ್ರೇಮವನ್ನು ಜಾಗೃತಗೊಳಿಸುವ ನಾಟಕಗಳು ರಚನೆಯಾಗುತ್ತಿದ್ದವು. ಕಥೆ ಕಾದಂಬರಿಗಳಲ್ಲಿ ದೇಶಭಕ್ತಿ, ಸ್ವಾತಂತ್ರ್ಯಪ್ರೇಮ, ಗುಲಾಮಗಿರಿಯ ವಿರುದ್ಧ ಬಂಡಾಯ ಭಾವನೆಗಳನ್ನು ಉದ್ರೇಕಿಸುವ ಕಥಾವಸ್ತುಗಳು ಇರುತ್ತಿದ್ದವು. ಎಲ್ಲೆಡೆ ಹೊಸ ಉತ್ಸಾಹ, ಚೇತನ ತುಂಬಿ ತುಳುಕಾಡುತ್ತಿತ್ತು.

ಹಿಂದಿಯ ಪ್ರಸಿದ್ಧ ಕವಿ, ನಾಟಕಕಾರ ಭಾರತೇಂದು ಹರಿಶ್ಚಂದ್ರ, ಆಚಾರ್ಯ ಮಹಾವೀರಪ್ರಸಾದ ದ್ವಿವೇದಿ ಮುಂತಾದವರು ದೇಶಭಕ್ತಿ ಗೀತೆಗಳನ್ನು, ಸ್ವಾತಂತ್ರ್ಯ ಪ್ರೇಮವನ್ನು ಹುರಿದುಂಬಿಸುವ ಕಥೆ, ನಾಟಕಗಳನ್ನು ಬರೆಯುತ್ತಿದ್ದರು. ಇಂಥ ಪರ್ವಕಾಲದಲ್ಲಿ ಜಯಶಂಕರ ಪ್ರಸಾದರು ಸಾಹಿತ್ಯರಚನೆಗೆ ಕೈಹಾಕಿದರು.

ಹಿಂದೀ ಸಾಹಿತ್ಯರಚನೆ ಆಯಾ ಪ್ರಾಂತದ ಭಾಷೆಗಳಲ್ಲಿ ನಡೆಯುತ್ತಿತ್ತು. ಅವುಗಳಲ್ಲಿ ಮುಖ್ಯವಾದುದು ಅವಧಿ ಭಾಷೆ ಮತ್ತು ಬ್ರಜ ಭಾಷೆ.  ಹಿಂದಿಯ ಪ್ರಸಿದ್ಧ ಕವಿ, ಸಂತ ಗೋಸ್ವಾಮಿ ತುಳಸೀದಾಸರು ಬರೆದಿರುವ ’ರಾಮಚರಿತ ಮಾನಸ ಅಥವಾ ತುಳಸೀ ರಾಮಾಯಣ’ ಅವಧಿ ಭಾಷೆಯಲ್ಲಿದೆ. ಇನ್ನೊಬ್ಬ ಪ್ರಸಿದ್ಧ ಕವಿ ಸೂರದಾಸರು ಬರೆದಿರುವ ’ಸೂರಸಾಗರ ” ಬ್ರಜ ಭಾಷೆಯಲಿದೆ.

ಜಯಶಂಕರ ಪ್ರಸಾದರು ಪ್ರಾರಂಭದಲ್ಲಿ ಬ್ರಜ  ಭಾಷೆಯಲ್ಲಿ ಕವನಗಳನ್ನು ಬರೆಯತೊಡಗಿದರು. ಅವರ ಕವನಗಳು ‘ಭಾರತೇಂದು’ ಪತ್ರಿಕೆಯಲ್ಲಿ ಮತ್ತು ‘ಇಂದು’ ಪತ್ರಿಕೆಯಲ್ಲಿ ಪ್ರಕಟವಾದವು. ಅನಂತರ ಬ್ರಜ ಭಾಷೆಯಲ್ಲಿ ಬರೆದ ಈ ಎಲ್ಲ ಕವನಗಳನ್ನು ಸಂಗ್ರಹಿಸಿದರು. ‘ಚಿತ್ರಧಾರ’ ಪ್ರಸಾದರ ಪ್ರಥಮ ಕವನ ಸಂಗ್ರಹ.

ಬ್ರಜ ಭಾಷೆಯ ಸ್ಥಾನವನ್ನು ಕ್ರಮೇಣ ‘ಖಡೀ ಬೋಲಿ’ ಭಾಷೆ ಪಡೆಯಿತು. ಈ ಭಾಷೆ ಇಂದು ಎಲ್ಲೆಡೆ ಬಳಕೆಯಲ್ಲಿದೆ. ಪ್ರಸಾದರು ಖಡೀಬೋಲಿ ಭಾಷೆಯಲ್ಲಿ ತಮ್ಮ ಸಾಹಿತ್ಯರಚನೆ ಮಾಡತೊಡಗಿದರು. ಪ್ರಸಾದರು ಆಧುನಿಕ ಹಿಂದೀ ಸಾಹಿತ್ಯದ ಶ್ರೇಷ್ಠ ಕವಿ. ನೂರಾರು ಕವನಗಳನ್ನು ಬರೆದಿದ್ದಾರೆ. ’ಕಾನನ ಕುಸುಮ’, ಪ್ರೇಮ ಪಥಿಕಾ’, ಝರನಾ’, ’ಲಹರ್ ’ ಪ್ರಸಾದರ ಕೆಲವು ಕವನ ಸಂಗ್ರಹಗಳು.

‘ಆ ಸೂ’ ಪ್ರಸಾದರ ಸವೋತ್ಕೃಷ್ಟ ಖಂಡಕಾವ್ಯ ‘ಆ’ ‘ಸೂ’ ಎಂದರೆ ಕಂಬನಿ ಅಥವಾ ಕಣ್ಣೀರು. ಇದೊಂದು ವಿರಹಕಾವ್ಯ. ವಿರಹ ಎಂದರೆ ಅಗಲುವಿಕೆ. ಇದರಲ್ಲಿ ಕವಿಯ ಸ್ವಂತ ವೇದನೆಯಿದೆ. ಕ್ರಮಶ: ಈ ನೋವು ಜಗತ್ತಿನ ನೋವಾಗಿ ಪರಿಣತಿ ಹೊಂದುತ್ತದೆ. ಕವಿ ತನಗಾಗಿರುವ ನೋವು ಹೆಚ್ಚಿನದು ಎಂದು ಭಾವಿಸಿ ಕಣ್ಣೀರು ಸುರಿಸುತ್ತಾನೆ. ಅವನ ದೃಷ್ಟಿ ಪ್ರಪಂಚದ ಕಡೆ ಹರಿಯುತ್ತದೆ. ಪ್ರಪಂಚದ ಎಲ್ಲೆಡೆ ವೇದನೆ, ಅಭಾವ, ಕಷ್ಟ, ದು:ಖ ಇರುವುದು ಅವನಿಗೆ ತಿಳಿಯುತ್ತದೆ. ತನ್ನ ದು:ಖಕ್ಕಿಂತ ಜಗತ್ತಿನ ದು:ಖ ಹೆಚ್ಚಿನದು ಎಂದು ಕವಿ ಕಣ್ಣೀರು ಸುರಿಸುತ್ತಾನೆ.

ಕಾಮಾಯನೀ

’ಕಾಮಾಯನೀ’ ಒಂದು ಮಹಾಕಾವ್ಯ. ಪ್ರಸಾದರ ಪ್ರತಿಭೆ ಈ ಕಾವ್ಯದಲ್ಲಿ ವಿಕಸಿತವಾಗಿದೆ. ಆಧುನಿಕ ಹಿಂದೀ ಸಾಹಿತ್ಯದ ಸರ್ವಶ್ರೇಷ್ಠ ಕಾವ್ಯ ಎಂದು ಇದು ಪ್ರಸಿದ್ಧವಾಗಿದೆ. ಈ ಕಾವ್ಯದಲ್ಲಿ ಇತಿಹಾಸ, ಪುರಾಣ ಮತ್ತು ಕಲ್ಪನೆಯ ಸುಂದರ ಮಿಶ್ರಣವಿದೆ. ಈ ಮಹಾಕಾವ್ಯದ ಸಂದೇಶವೆಂದರೆ ಅನ್ಯಾಯ, ಅಧರ್ಮ, ಅನೀತಿಗೆ ಎಂದಿಗೂ ಜಯ ಸಿಕ್ಕದು. ಸತ್ಯಕ್ಕೇ ಜಯ; ಮಾನವತೆಗೇ ಜಯ; ನ್ಯಾಯ-ನೀತಿ-ಧರ್ಮಕ್ಕೆ ಜಯ; ದ್ವೇಷದಿಂದ ಸಾಧಿಸಲಾಗದ್ದನ್ನು ಪ್ರೀತಿಯಿಂದ ಜಯಿಸಲು ಸಾಧ್ಯ; ಹಿಂಸೆಗೆ ಸೋಲು; ಅಹಿಂಸೆಗೆ ಜಯ.

‘ಕಾಮಾಯನೀ’ ಕಾವ್ಯದಲ್ಲಿ ಮಾನವನ ಇತಿಹಾಸವಿದೆ. ಮಾನವನ ಸಮಸ್ಯೆಗಳ ಬಗೆಗೆ ಚರ್ಚೆ ಮತ್ತು ಸಮಾಧಾನವವಿದೆ. ಇದರ ಕಥಾವಸ್ತು ಪೌರಾಣಿಕ ಮತ್ತು ಐತಿಹಾಸಿಕವಾದುದು. ಇದರಲ್ಲಿ ಹದಿನೈದು ಸರ್ಗಗಳಿವೆ. ಈ ಕಾವ್ಯದ ನಾಯಕ ಮನು.

ಕಾಮಾಯನೀ ಕಾವ್ಯದ ಕಥೆ ಜಲಪ್ರಳಯದ ಮುಕ್ತಾಯದಿಂದ ಆರಂಭವಾಗುತ್ತದೆ. ಹಿಮಾಲಯ ಪರ್ವತದ ಶಿಖರದ ಮೇಲೆ ಕುಳಿತ ಮನು ಜಲಪ್ರಳಯದಲ್ಲಿ ನಾಶವಾದ ದೇವಜಾತಿಯ ವಿಲಾಸ ಮತ್ತು ವೈಭವವನ್ನು ನೆನೆಪುಮಾಡಿಕೊಳ್ಳುತ್ತಾನೆ. ನೃತ್ಯ, ಸಂಗೀತ, ಮಧು, ಅಪ್ಸರೆಯರಲ್ಲಿ ಮೋಹಗೊಂಡ ದೇವತೆಗಳು ತಮ್ಮ ಕರ್ತವ್ಯವನ್ನು ಮರೆತಿದ್ದರ ಪರಿಣಾಮವೇ ಈ ಜಲಪ್ರಳಯ ಎಂದು ಚಿಂತಿಸುತ್ತಾನೆ. ಪ್ರಾಣಿಹಿಂಸೆಯಲ್ಲಿ ತೊಡಗಿದ ದೇವತೆಗಳ ನಾಶ ಈ ರೀತಿಯಾದುದು ಮನುವಿಗೆ ಸ್ಪಷ್ಟವಾಗುತ್ತದೆ. ಅಹಂಕಾರ, ಗರ್ವ, ಅತಿಶಯ ವಿಲಾಸಜೀವನ ನಾಶಕ್ಕೆ ಕಾರಣ ಎಂದು ತಿಳಿಯುತ್ತಾನೆ

ಕಾಮಾಯನೀ ಕಾವ್ಯದ ಇತರ ಪ್ರಮುಖ ಪಾತ್ರಗಳೆಂದರೆ ಶ್ರದ್ಧಾ ಮತ್ತು ಇಡಾ. ಶ್ರದ್ಧಾಳ ಅಹಿಂಸಾ ಪ್ರೇಮ, ವಾತ್ಸಲ್ಯಭಾವ, ಆದರ್ಶಗೃಹಿಣಿಯ ಲಕ್ಷಣ ಸರ್ವಾಂಗಸುಂದರವಾಗಿ ಚಿತ್ರಿತವಾಗಿದೆ. ಕಾಮಾಯನೀ ಮಹಾಕಾವ್ಯದ ಪ್ರಮುಖ ಅಂಶವೆಂದರೆ ಪ್ರಸಾದರ ಸರ್ವೋತ್ಕೃಷ್ಟ ಕಲ್ಪನೆ ಮತ್ತು ಕಲಾಪ್ರೌಢಿಮೆ.

ಕಾದಂಬರಿಕಾರ ಮತ್ತು ಕಥೆಗಾರ

ಪ್ರಸಾದರು ಹಿಂದೀ ಸಾಹಿತ್ಯದಲ್ಲಿ ಒಳ್ಳೆಯ ಕಥೆಗಾರ ರೆಂದು ಪ್ರಸಿದ್ಧರಾಗಿದ್ದಾರೆ. ನೂರೈವತ್ತಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಪ್ರಾರಂಭದಲ್ಲಿ ಅವರ ಕಥೆಗಳು ‘ಗ್ರಾಮ’ ಮಾಸಪತ್ರಿಕೆಯಲ್ಲಿ ಪ್ರಕಟವಾದವು. ಆಕಾಶದೀಪ, ಮಮತಾ, ಪರೀಕ್ಷಾ, ಛಾಯಾ, ಪುರಸ್ಕಾರ, ಪ್ರತಿಧ್ವನಿ, ಆಂಧೀ, ಮಧುಆ ಇತ್ಯಾದಿ ಕಥೆಗಳು ಜಯಶಂಕರ ಪ್ರಸಾದರಿಗೆ ಒಳ್ಳೆಯ ಹೆಸರು ತಂದಿವೆ.

ಪ್ರಸಾದರ ಕಥೆಗಳನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಬಹುದು. ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ. ಈ ಕಥೆಗಳಲ್ಲಿ ಕರುಣೆ, ಉದಾರತೆ, ಸಹಾನುಭೂತಿ, ಭಾರತೀಯ ಸಭ್ಯತೆ, ಪ್ರೇಮ, ದಯೆ ಮತ್ತು ಸ್ವಾತಂತ್ರ್ಯಪ್ರೇಮಗಳನ್ನು ಕಾಣಬಹುದು. ಕಥೆಯ ನಿರೂಪಣಾ ವಿಧಾನ, ಶೈಲಿ ಅತ್ಯಂತ ಮನಮೋಹಕವಾಗಿವೆ.

ಪ್ರಸಾದರು ಮೂರು ಕಾದಂಬರಿಗಳನ್ನು ಬರೆದಿದ್ದಾರೆ. ‘ಕಂಕಾಲ್’, ‘ತಿತಲಿ’ ಮತ್ತು ‘ಇರಾವತೀ’ ಕೊನೆಯ ಕಾದಂಬರಿ ‘ಇರಾವತೀ’ ಅಪೂರ್ಣವಾಗಿದೆ.

ಪ್ರಸಾದರು ಭಾರತೀಯ ಜನಜೀವನದಲ್ಲಿ ಒಂದಾಗಿ ಬೆರೆತು ಜನರ ಕಷ್ಟ-ಸುಖ, ನೋವು-ನಲಿವು ಅರಿತವರು. ಈ ಕಾರಣದಿಂದ ಅವರ ಕಾದಂಬರಿ, ಕಥೆಗಳಲ್ಲಿ ಜೀವನದ ಯಥಾರ್ಥ ಚಿತ್ರಣವನ್ನು ನೋಡಬಹುದು. ಜೀವನದ ಸಮಸ್ಯೆಗಳನ್ನು ಗುರುತಿಸಿ ಅದನ್ನು ಓದುಗರಿಗೆ ಅರ್ಥವಾಗುವಂಥೆ ಕಥೆಗಳ ಮೂಲಕ ಮುಂದಿಟ್ಟಿದ್ದಾರೆ. ಇತಿಹಾಸ ಮತ್ತು ಪೌರಾಣಿಕ ಕಥೆಗಳಲ್ಲಿ ಭಾರತೀಯ ಧರ್ಮ, ಸಂಸ್ಕೃತಿ, ದೇಶಪ್ರೇಮ, ಉದಾರಭಾವನೆ, ತ್ಯಾಗ ಇತ್ಯಾದಿ ವಿಷಯಗಳ ಸರಳ ನಿರೂಪಣೆಯಿದೆ. ಅವರ ಸಾಮಾಜಿಕ ಕಥೆಗಳಲ್ಲಿ ಜೀವನದ ಉದಾತ್ತ ಮೌಲ್ಯಗಳನ್ನು ಕಾಣಬಹುದು. ಉದಾಹರಣೆಗೆ ಪ್ರಸಾದರ ಶ್ರೇಷ್ಠ ಕಥೆಗಳಲ್ಲಿ ಒಂದು ಎಂದು ಹೆಸರು ಪಡೆದಿರುವ ’ಮಧುಆ’ ಕಥೆಯನ್ನು ನೋಡ ಬಹುದು.

ಮಧುಆ ಒಬ್ಬ ಚಿಕ್ಕ ಹುಡುಗ. ಅವನ ವಯಸ್ಸು ಸುಮಾರು ಹನ್ನೆರಡು. ಅವನು ಸರದಾರನೊಬ್ಬನ ಬಳಿ ಕೆಲಸಕ್ಕಿದ್ದ. ಅವನ ಕೆಲಸವೆಂದರೆ ಸರದಾರನ ಮಗನ ಹಿಂದೆ ಸದಾ ಇರುವುದು. ಅವನ ಕೋಟು ಹೊರುವುದು. ಆಗಾಗ್ಗೆ ಅವನ ಕಾಲು ಒತ್ತುವುದು.

ಸರದಾರ ವಿಲಾಸಿಯಾಗಿದ್ದ. ಅವನಿಗೆ ಕಥೆಗಳೆಂದರೆ ಪ್ರಾಣ. ಅದರಲ್ಲೂ ರೋಮಾಂಚಕಾರಿ ಮತ್ತು ಆಕರ್ಷಕ ಕಥೆಗಳೆಂದರೆ ಮತ್ತಷ್ಟು ಆಸೆ. ಇಂಥ ಕಥೆ ಹೇಳುವವರಿಗೆ ಒಂದು ರೂಪಾಯಿ ಕೊಡುತ್ತಿದ್ದ.

ಸರದಾರನಿಗೆ ಒಬ್ಬ ಕುಡುಕನ ಪರಿಚಯವಾಯಿತು. ಕುಡುಕ ಚೆನ್ನಾಗಿ ಕಥೆಗಳನ್ನು ಹೇಳುತ್ತಿದ್ದ. ಅವನ ಕಥೆಗಳು ಸ್ವಾರಸ್ಯವಾಗಿರುತ್ತಿದ್ದವು. ಸರದಾರ ಕೊಡುವ ಒಂದು ರೂಪಾಯಿಯಲ್ಲಿ ಹೆಂಡವನ್ನು ಕುಡಿದು ಒಂದು ಮೂಲೆಯಲ್ಲಿ ಮಲಗುತ್ತಿದ್ದ.

ಒಂದು ದಿನ ಸರದಾರನಿಗೆ ಕಥೆ ಹೇಳಿ ರೂಪಾಯಿ ಪಡೆದು ಹೊರಗೆ ಬಂದ. ಮಧುಆ ಅಳುತ್ತಾ ಕುಳಿತಿದ್ದ. “ಏಕೆ ಅಳುತ್ತಿರುವೆ?’ ಕುಡುಕ ಕೇಳಿದ.

“ಹೊಟ್ಟೆ ಹಸಿಯುತ್ತಿದೆ. ತಿನ್ನಲು ಏನೂ ಇಲ್ಲ’ ಬಾಲಕ ಅಳುತ್ತಾ ಹೇಳಿದ. ಅವನ ಮುಖ ಸಪ್ಪಗಿತ್ತು.

“ಸರದಾರ ನಿನಗೆ ಹಣ ಕೊಡುವುದಿಲ್ಲವೆ?” ಕುಡುಕ ಕೇಳಿದ.

“ಅವನಿಗೆ ಮನಸ್ಸು ಬಂದರೆ ಕೊಡುತ್ತಾನೆ. ಇಲ್ಲದಿದ್ದರೆ ಪೂರ್ಣ ಉಪವಾಸ. ಹಸಿವಾಗುತ್ತಿದೆ ಎಂದು ಹೇಳಿದರೆ ಚಾವಟಿಯಲ್ಲಿ ಹೊಡೆಯುತ್ತಾನೆ’ ಬಿಕ್ಕಳಿಸಿ ಹೇಳಿದ ಮಧುಆ.

“ಹಾಗಾದರೆ ನನ್ನ ಜೊತೆ ಬಾ’ ಎಂದು ಕುಡುಕ ಬಾಲಕನನ್ನು ಕರೆದುಕೊಂಡು ಹೊರಟ. ದಾರಿಯಲ್ಲಿ ಮಿಠಾಯಿ, ಜಿಲೇಬಿ ಕೊಡಿಸಿದ. ಮನೆಗೆ ಕರೆತಂದ. ಬಾಲಕ ಸಂತೋಷದಿಂದ ಮಿಠಾಯಿ, ಜಿಲೇಬಿ ಪೊಟ್ಟಣವನ್ನು ಬಿಚ್ಚಿದ, ಕುಡುಕನಿಗೂ ಕೊಟ್ಟು ತಾನೂ ತಿಂದ, ಒಂದೆಡೆ ಮಲಗಿದ. ಕುಡುಕ ಅಂದು ಕುಡಿಯಲಿಲ್ಲ. ರೂಪಾಯಿ ಖರ್ಚಾಗಿ ಹೋಗಿತ್ತು.

ಮಾರನೆಯ ದಿನ ನದಿಯಲ್ಲಿ ಮುಖ ತೊಳೆಯಲು ಹೋದ ಕುಡುಕನಿಗೆ ಅವನ ಸ್ನೇಹಿತನೊಬ್ಬ ಸಿಕ್ಕಿದ. ಕುಡುಕ ಅವನ ಮನೆಯಲ್ಲಿ ಸಾಣೆ ಹಿಡಿಯುವ ಯಂತ್ರವನ್ನು ಇಟ್ಟಿದ್ದ. ಸ್ನೇಹಿತ ಅದನ್ನು ಜ್ಞಾಪಿಸಿ “ನಮ್ಮ ಮನೆಯಲ್ಲಿ ಸಾಣೆಹಿಡಿಯುವ ಯಂತ್ರವನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಮನೆಯಲ್ಲಿ ಜಾಗವಿಲ್ಲ. ನಿನ್ನ ಯಂತ್ರವನ್ನು ತೆಗೆದುಕೊಂಡು ಹೋಗು’ ಎಂದು ನಿಷ್ಠುರವಾಗಿ ಹೇಳಿದ. ಇನ್ನೇನೂ ಮಾಡಲಾಗದೆ ಆ ಯಂತ್ರವನ್ನು ಹೊತ್ತು ಮನೆಗೆ ಬಂದ.

ಮಧುಆ ಇನ್ನೂ ಮನೆಯಲ್ಲೇ ಇದ್ದಾನೆ. ಕುಡುಕನಿಗೆ ಆಶ್ಚರ್ಯವಾಯಿತು.

“ನೀನು ಮತ್ತೆ ಸರದಾರನ ಮನೆಗ ಏಕೆ ಹೋಗಲಿಲ್ಲ?” ಕುಡಕ ಕೇಳಿದ.

“ನಾನು ಹೋಗುವುದಿಲ್ಲ. ನಿನ್ನ ಜೊತೆಯಲ್ಲೇ ಇರುತ್ತೇನೆ. ನೀನು ತುಂಬ ಒಳ್ಳೆಯವನು. ನೀನು ಹೇಳಿದ ಕೆಲಸವನ್ನು ಮಾಡುತ್ತೇನೆ’ ಎಂದು ಹೇಳಿ ಮಧುಆ ರಾತ್ರಿ ಉಳಿದ ಜಿಲೇಬಿಯನ್ನು ಕುಡುಕನಿಗೆ ಕೊಟ್ಟ.

ಬಾಲಕನ ಮುಗ್ದ ಮಾತುಗಳನ್ನು ಕೇಳಿ ಕುಡುಕನ ಹೃದಯ ಕರಗಿ ನೀರಾಯಿತು. ತಾನೊಬ್ಬನೇ ಹೇಗೋ ಜೀವನ ನಡೆಸುತ್ತಿದ್ದ.  ಆದರೆ ಈಗ?

“ಇನ್ನು ಮುಂದೆ ಕುಡಿಯುವುದಿಲ್ಲ. ಈ ಬಾಲಕನ ಜವಾಬುದಾರಿ ನನ್ನದು’ ಎಂದು ಕುಡುಕ ಮನಸ್ಸಿನಲ್ಲೇ ತೀರ್ಮಾನಿಸಿದ. ಬಾಲಕನ ಬಗೆಗೆ ಅಪಾರ ಪ್ರೀತಿ ಉಕ್ಕಿ ಬಂತು.

ಸಾಣೆ ಹಿಡಿಯುವ ಯಂತ್ರವನ್ನು ಹೆಗಲಮೇಲಿಟ್ಟು ಕೊಂಡು ಕುಡುಕ ಮುಂದೆ ನಡೆದ.

ಮಧುಆ ಬಟ್ಟೆಗಂಟೊಂದನ್ನು ಕಂಕುಳಲ್ಲಿ ಇರಿಸಿ ಕೊಂಡು ಅವನ ಹಿಂದೆ ಕೂಗುತ್ತಾ ನಡೆದ. “ಚಾಕು ಕತ್ತರಿ, ಕುರುಪಿಗೆ ಸಾಣೆ ಹಿಡಿಸುತ್ತೀರಾ…’

ಇದೊಂದು ಮನಮಿಡಿಯುವ ಕಥೆ. ಮಾನವೀಯತೆ ಕುಡುಕನಲ್ಲಿ ಜಾಗೃತವಾಗುವ ಅಂಶ ಪದರ ಪದರವಾಗಿ ಬಂದಿದೆ. ಮುಗ್ಧಬಾಲಕನ ಕೋಮಲ ಹೃದಯ ಕುಡುಕನನ್ನೂ ಬದಲಾಯಿಸುವ ಸಾಮರ್ಥ್ಯ ಹೊಂದಿ ರುವುದು ಸ್ಪಷ್ಟವಾಗಿ ನಿರೂಪಿತವಾಗಿದೆ.

ಹೀಗೆ ಜಯಶಂಕರ ಪ್ರಸಾದರ ಕಥೆಗಳಲ್ಲಿ ಮನೋ ವೈಜ್ಞಾನಿಕ ಅಂಶಗಳು, ಹೃದಯ ಮಿಡಿಯುವ ಸನ್ನಿವೇಶಗಳು ತುಂಬಿವೆ. ಅದೇ ರೀತಿ ದೇಶಭಕ್ತಿ, ಸ್ವಾತಂತ್ರ್ಯ ಪ್ರೇಮದ ಅಂಶಗಳು ಹೇರಳವಾಗಿವೆ.

ಶ್ರೇಷ್ಠ ನಾಟಕಕಾರ

ಹಿಂದೀ ನಾಟಕ ಜಗತ್ತಿನಲ್ಲಿ ಜಯಶಂಕರ ಪ್ರಸಾದರ ಸಮಾನರಿಲ್ಲವೆಂಬ ಭಾವನೆ ಬೆಳೆದುಬಂದಿದೆ. ಜಯಶಂಕರ ಪ್ರಸಾದರು ನಾಟಕಗಳನ್ನು ಬರೆಯುವ ಕಾಲದಲ್ಲಿ ಫಾರಸೀ ನಾಟಕ ಕಂಪೆನಿಗಳೂ ಪ್ರಸಿದ್ಧವಾಗಿದ್ದವು. ಜನರಲ್ಲಿ ಇವು ಕೀಳು ಅಭಿರುಚಿಯನ್ನು ಬೆಳೆಸುವಂಥ ನಾಟಕಗಳನ್ನು ಅಭಿನಯಿಸುತ್ತಿದ್ದವು. ಜನರಿಗೆ ಈ ವಿಷಯದ ಪರಿವೆಯೇ ಇರಲಿಲ್ಲ.

ಪ್ರಸಾದರು ಜನರ ಈ ಮನೋವೃತ್ತಿಯನ್ನು ಗಮನಿಸಿದರು. ಅವರಿಗೆ ಇದರಿಂದ ದು:ಖವಾಯಿತು. ಭಾರತೀಯ ಇತಿಹಾಸ, ಧರ್ಮ, ಸಂಸ್ಕೃತಿಯ ಬಗೆಗೆ ಜನರಲ್ಲಿ ಗೌರವಭಾವನೆ ಮೂಡಿಸುವ ದೃಢಸಂಕಲ್ಪ ಮಾಡಿದರು.

ಪ್ರಸಾದರು ಸುಮಾರು ಹದಿಮೂರು ನಾಟಕಗಳನ್ನು ಬರೆದಿದ್ದಾರೆ. ‘ಸ್ಕಂದಗುಪ್ತ;. ‘ಅಜಾತಶತ್ರು’ ಚಂದ್ರಗುಪ್ತ. ‘ಜನಮೇಜಯ ಕಾ ನಾಗಯಜ್ಞ’, ‘ಧುವಸ್ವಾಮಿನಿ’. ‘ವಿಶಾಖ’, ‘ಕಾಮನಾ’, ‘ರಾಜ್ಯಶ್ರೀ’, ‘ಏಕ ಘೂಂಟ್ ’, ‘ಪ್ರಾಯಶ್ಚಿತ್ ಔರ್ …’  ‘ಸಜ್ಜನ್; ಇತ್ಯಾದಿ ಇವು ಪ್ರಸಾದರ ಅದ್ಭುತ ಪ್ರತಿಭೆಗೆ ಸಾಕ್ಷಿಯಾಗಿವೆ. ಮೊದಲ ನಾಲ್ಕು ನಾಟಕಗಳು ಹಿಂದೀ ಸಾಹಿತ್ಯದ ಸರ್ವಶ್ರೇಷ್ಠ ನಾಟಕಗಳೆಂದು ಪ್ರಸಿದ್ಧವಾಗಿವೆ.

ಇವೇ ಅಲ್ಲದೆ “ಮಹಾರಾಣಾ ಕಾ ಮಹತ್ವ ’ ಮತ್ತು ‘ಕರುಣಾಲಯ’ ಎಂಬ ಗೀತನಾಟಕಗಳನ್ನು ಮಕ್ಕಳಿಗಾಗಿ ರಚಿಸಿದ್ದಾರೆ.

ಈ ಎಲ್ಲ ನಾಟಕಗಳಲ್ಲಿ ಸೊಗಸಾದ ನಿರೂಪಣೆಯನ್ನು ಕಾಣಬಹುದು. ಭಾಷೆ. ಭಾವ, ಶೈಲಿ ಮನಮೋಹಕವಾಗಿವೆ. ನಾಟಕದ ಸನ್ನಿವೇಶಗಳು ಸ್ವಾಭಾವಿಕವಾಗಿ ಚಿತ್ರಿತವಾಗಿವೆ. ನಾಟಕಗಳಲ್ಲಿ ಬರುವ ಪಾತ್ರಗಳೂ ಜೀವಂತವಾಗಿವೆ ಎನಿಸುತ್ತದೆ. ಪಾತ್ರಪೋಷಣೆ ಹದವರಿತು ಬಂದಿದೆ.

ಭಗವಾನ್ ಬುದ್ಧನ ಪ್ರಭಾವ ಪ್ರಸಾದರ ಮೇಲೆ ಅಧಿಕವಾಗಿದೆ. ಈ ಕಾರಣದಿಂದ ನಾಟಕದ ಪಾತ್ರಗಳಲ್ಲಿ ಕರುಣೆ, ಸಹನಶೀಲತೆ, ಧರ್ಮಪರಾಯಣತೆ, ಕರ್ತವ್ಯ ನಿಷ್ಠೆ, ದೃಢನಿಶ್ಚಯ ಇತ್ಯಾದಿ ಗುಣಗಳನ್ನು ಕಾಣಬಹುದು.

ಪ್ರಸಾದರ ನಾಟಕಗಳಲ್ಲಿ ಸ್ತ್ರೀ ಪಾತ್ರಗಳು ಅತ್ಯಂತ ಸುಂದರವಾಗಿ ಚಿತ್ರಿತವಾಗಿವೆ. ಅಜ್ಞಾತಶತ್ರುವಿನ ಮಲ್ಲಿಕಾ, ಸ್ಕಂದಗುಪ್ತ, ನಾಟಕದ ದೇವಸೇನಾ, ಚಂದ್ರಗುಪ್ತ ನಾಟಕದ ಅಲಕಾ, ರಾಜ್ಯಶ್ರೀ ನಾಟಕದ ರಾಜ್ಯಶ್ರೀ ಇತ್ಯಾದಿ ಸ್ತ್ರೀ ಪಾತ್ರಗಳು ದೈವಾಂಶ ಗುಣಗಳಿಂದ ಕೂಡಿವೆ. ಈ ಒಂದೊಂದು ಪಾತ್ರವೂ ಓದುಗರ ಸಹಾನುಭೂತಿಗೆ ಪಾತ್ರವಾಗುತ್ತವೆ.

ಜಯಶಂಕರ ಪ್ರಸಾದರು ಸ್ವತ: ಕವಿಗಳಾದ್ದರಿಂದ ಅವರ ನಾಟಕಗಳಲ್ಲಿ ನೂರಕ್ಕೂ ಹೆಚ್ಚು ಗೀತೆಗಳಿವೆ. ಇವುಗಳಲ್ಲಿ ಪ್ರಾರ್ಥನಾಗೀತೆಗಳು, ದೇಶಪ್ರೇಮಗೀತೆಗಳು ಅಧಿಕವಾಗಿವೆ.

‘ಜನಮೇಜಯ ಕಾ ನಾಗಯಜ್ಞ’ ನಾಟಕ ಪೌರಾಣಿಕ ಕಾಲಕ್ಕೆ ಸಂಬಂಧಿಸಿದ್ದು. ಈ ನಾಟಕದಲ್ಲಿ ಜನಮೇಜಯನ ಯಜ್ಞಬಲಿಗಳು ಕೇವಲ ಸರ್ಪಗಳಲ್ಲ ನಾಗಜಾತಿಯ ಜನರು ಎಂಬ ಒಂದು ಹೊಸ ವಿಚಾರಪಂಥವಿದೆ.

’ಚಂದ್ರಗುಪ್ತ’ ನಾಟಕದಲ್ಲಿ ಮೌರ್ಯರ ಕಾಲದ ಚಿತ್ರಣವಿದೆ. ಅಲೆಗ್ಸಾಂಡರ ಭಾರತದ ಮೇಲಿನ ದಂಡಯಾತ್ರೆಯ ವಿಷಯವಿದೆ. ಚಂದ್ರಗುಪ್ತ ಭಾರತ ದೇಶವನ್ನು ರಕ್ಷಿಸಲು ನಡೆಸುವ ಹೋರಾಟದ ಕಥೆ ಸುಂದರವಾಗಿ ನಿರೂಪಿತವಾಗಿದೆ.

ಅಜಾತಶತ್ರು ನಾಟಕ ಬೌದ್ಧಯುಗದ ಆರಂಭ ಕಾಲಕ್ಕೆ ಸಂಬಂದಿಸಿದ್ದು. ಸ್ಕಂದಗುಪ್ತ ನಾಟಕದಲ್ಲಿ ಗುಪ್ತ ಸಾಮ್ರಾಜ್ಯದ ಕಡೆಯ ದಿನಗಳ ವರ್ಣನೆ ಇದೆ. ರಾಜ್ಯಶ್ರೀ ನಾಟಕದ ಕಥಾವಸ್ತು ಗುಪ್ತರ ಕಾಲದ ಮುಂದಿನ ಇತಿಹಾಸಕ್ಕೆ ಸೇರಿದ್ದು. ಹರ್ಷವರ್ಧನನ ಕಾಲದಲ್ಲಿ ನಡೆದ ಘಟನೆಯೊಂದು ಅದರ ಕಥಾವಸ್ತುವಾಗಿದೆ.

ಹೀಗೆ ಪ್ರಸಾದರ ನಾಟಕಗಳಲ್ಲಿ ಪೌರಾಣಿಕ ಕಾಲದಿಂದ ಹಿಡಿದು ಹರ್ಷವರ್ಧನನ ಕಾಲದವರೆಗೆ ಒಂದು ಇತಿಹಾಸದ ಸರಪಳಿಯೇ ಇದೆ.

ಜಯಶಂಕರ ಪ್ರಸಾದರ ನಾಟಕಗಳ ವಿಶೇಷತೆಯೆಂದರೆ ಭಾರತೀಯ ಪುರಾಣ ಮತ್ತು ಇತಿಹಾಸದ ಬಗೆಗೆ ಅಪಾರ ಗೌರವ ಮತ್ತು ಶ್ರದ್ಧೆ, ದೇಶಪ್ರೇಮ ಭಾವನೆ; ಸೊಗಸಾದ ಪಾತ್ರಚಿತ್ರಣ; ಭಾಷೆ, ಶೈಲಿ, ಭಾವಗಳ ಮಿಶ್ರಣ; ಮನಮಿಡಿಯುವ ಸಂಭಾಷಣೆ; ಭಾರತೀಯರ ಸ್ತ್ರೀಯರ ಬಗೆಗೆ ಅಪಾರ ಗೌರವ; ಕರುಣಾರಸ ಪ್ರತಿಪಾದನೆ; ಕರ್ತವ್ಯನಿಷ್ಠೆಯ ಸಂದೇಶ.

ಕರುಣಾಮೂರ್ತಿ

ಜಯಶಂಕರ ಪ್ರಸಾದರು ಸರಳಜೀವಿ. ಕೀರ್ತಿ ಗೌರವ, ಪ್ರತಿಷ್ಠೆಗಳಿಗಾಗಿ ಎಂದೂ ಮೇಲೆಬಿದ್ದು ಹೋದವರಲ್ಲ. ಕವಿ ಸಮ್ಮೇಳನ, ಸಾಹಿತ್ಯ ಸಮ್ಮೇಳನಗಳಿಗೆ ಹೋಗುತ್ತಿದ್ದುದು ಬಹಳ ಕಡಮೆ, ಗೋಷ್ಠಿಗಳಲ್ಲಿ ಅಧ್ಯಕ್ಷತೆ ವಹಿಸಬೇಕೆಂದು ಕರೆಬಂದಾಗ ನಯವಾಗಿ ಅದನ್ನು ದೂರಮಾಡುತ್ತಿದ್ದರು.

ಅವರ ವಿದ್ವತ್ತು ಮತ್ತು ಸಾಹಿತ್ಯಸೇವೆಯನ್ನು ಗುರುತಿಸಿ ಕಾಶಿ ನಾಗರೀ ಪ್ರಚಾರಣಿ ಸಭಾ ಮತ್ತು ಹಿಂದುಸ್ತಾನಿ ಅಕಾಡೆಮಿಗಳು ಪ್ರಸಾದರನ್ನು ಗೌರವಿಸಿದವು. ಸನ್ಮಾನಿಸಿದವು. ಅನೇಕ ಬಹುಮಾನಗಳನ್ನು ನೀಡಿದವು.

ಪ್ರಸಾದರು ತಮಗೆ ದೊರೆತ ನಗದು ಬಹುಮಾನವನ್ನು ದೀನದಲಿತರಿಗೆ ದಾನಮಾಡಿದರು, ಅವರ ಉದಾರ ಸ್ವಭಾವ ಮೆಚ್ಚುವಂತಹುದು.

ಜ್ಯೋತಿ ನಂದಿತು

ಪ್ರಸಾದರದು ಆಕರ್ಷಕ ವ್ಯಕ್ತಿತ್ವ. ವಿಶಾಲವಾದ ವಕ್ಷಸ್ಥಳ, ಅಗಲವಾದ ಹಣೆ, ಕಾಂತಿಯುಕ್ತ ಕಣ್ಣುಗಳು, ಶಾಂತ, ಗಂಭೀರ ಮುಖ, ಎಂಥವರಿಗೂ ಗೌರವ ಮೂಡಿಸುವಂಥದು.

ಶ್ರೀಮಂತರಾಗಿದ್ದರೂ ಸರಳ ಜೀವನ ನಡೆಸುತ್ತಿದ್ದರು. ಎಲ್ಲರೊಡನೆ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು. ಕೋಮಲ ಸ್ವಭಾವ ಮತ್ತು ಸಂಕೋಚಪ್ರವೃತ್ತಿಯ ಪ್ರಸಾದರು ಸದಾ ಏಕಾಂತಪ್ರಿಯರು. ಮೂರು ನಾಲ್ಕು ಬಾರಿ ಯಾತ್ರೆ ಹೋದದ್ದನ್ನು ಬಿಟ್ಟರೆ ತಮ್ಮ ಇಡೀ ಜೀವನವನ್ನು ಕಾಶಿಯಲ್ಲೇ ಕಳೆದರು. ಸದಾ ಒಂದು ಧೋತಿ, ಮೇಲೊಂದು ಸಡಿಲವಾದ ಅಂಗಿಯನ್ನು ಧರಿಸಿ, ಹೆಗಲಮೇಲೆ ಬನಾರಸ್ ರೇಷ್ಮೆಯ ಮೇಲು ಹೊದಿಕೆಯನ್ನು ಹಾಕಿಕೊಳ್ಳುತ್ತಿದ್ದರು.

ಪ್ರಸಾದರು ಆಧುನಿಕ ಹಿಂದೀ ಸಾಹಿತ್ಯವನ್ನು ತಮ್ಮ ಬರಹಗಳ ಮೂಲಕ ಶ್ರೀಮಂತಗೊಳಿಸಿದರು. ಕವಿ, ನಾಟಕಕಾರ, ಕಥೆ-ಕಾದಂಬರಿಕಾರ ಜಯಶಂಕರ ಪ್ರಸಾದರು ೧೯೩೭ರ ನವೆಂಬರ್ ೧೫ರಂದು ತೀರಿಕೊಂಡಾಗ ಅವರ ವಯಸ್ಸು ಕೇವಲ ನಲವತ್ತೆಂಟು ವರ್ಷ ಮಾತ್ರ.

ಆಧುನಿಕ ಹಿಂದೀ ಜಗತ್ತು ಜಯಶಂಕರ ಪ್ರಸಾದರನ್ನು ಕಳೆದುಕೊಂಡು ಬಡವಾಯಿತು.