ಭೂದೇವಿ
[ಉಷಃಕಾಲ, ಹಾಡುತ್ತಿದ್ದಾಳೆ]
ಬಾರಾ, ಸಖಿಯೇ, ಉಷೆಯೇ, ಬಾರ;
ಕೆಂಪಿನ ಮುತ್ತಿನ ಮಾಲೆಯ ತಾರ.
ಮಬ್ಬಿನ ಮಂಜಿನ ಮುಸುಗನು ಎತ್ತಿ
ಬಾರಾ ಉದಯಾಚಲವನು ಹತ್ತಿ.
ಹಸುರಿನ ಬನಗಳ ಮುದ್ದಿಸಿ ಬಾರ;
ಗಿರಿಶೃಂಗಗಳಾಲಿಂಗಿಸಿ ಬಾರ;
ಮಲಗಿಹ ಖಗಗಳ ಕರೆಯುತ ಬಾರ;
ಮಂದಾನಿಲನ ಎಬ್ಬಿಸಿ ಬಾರ;
ಉದಯಾನಂದದ ಕಲಶವ ತಾರ;
ಬಾರಾ, ಸಖಿಯೇ, ಉಷೆಯೇ, ಬಾರ.

ಮಂಜಿನ ಜಪಮಣಿ ಮಾಲೆಯ ಹಿಡಿದು,
ವನಗಳ ವಿಕಸಿತ ಸುಮಗಳ ಮುಡಿದು,
ಹೂಗಳ ಕೆಂಪಿನ ಕುಂಕುಮವಿಟ್ಟು,
ತಳಿರಿನ ಸೊಬಗಿನ ಸೀರೆಯನುಟ್ಟು,
ಪೈರಿನ ರಮಣೀಯತೆಯನು ತೊಟ್ಟು,
ಮುಗಿಲಿನ ಕುರುಳನು ತೇಲಲು ಬಿಟ್ಟು;
ಉದಯದ ಹೂಗಳ ಸೊಬಗನು ಕೊಯ್ದು,
ವನಗಳ ನಗ್ನ ಗಭೀರತೆಯಾಯ್ದು,
ವಿಶ್ವದ ಗರ್ಭದ ಚೆಲುವನು ಹೊಯ್ದು,
ಮಾಯಾ ಮೋಹದ ಜಾಲವ ನೆಯ್ದು,
ತಳಿರಿನ  ಹೂಗಳ ಸಂಕವ ಮಾಡಿ
ಬಾರಾ, ಉಷೆಯೇ, ನಲಿನಲಿದಾಡಿ.

(ಹಾಡುತ್ತಾ ಹಾಡುತ್ತಾ ಮೆಲ್ಲನೆ ರಂಗದಿಂದ ಜಾರುತ್ತಾಳೆ. ಜಲಗಾರನೊಬ್ಬನು ಕೈಲಿ ಬುಟ್ಟಿ ಪೊರಕೆ ಹಿಡಿದು ಬರುತ್ತಾನೆ. ಬಂದವನು ಗುಡಿಸಲೆಳಸಿ ಮತ್ತೆ ಸುತ್ತಲೂ ನೋಡಿ)

ಜಲಗಾರ
ಏನಿದೈಕಿಲ್ಸೋನೆ ಸುರಿಯುತಿಹುದೆಡೆಬಿಡದೆ!
ಮುಸುಗಿಹುದು ಬಿಳಿ ಮಬ್ಬು. ಅಡಿಯಿಡಲು ಬೀದಿಯೇ
ಕಾಣಿಸದು ಕಂಗಳಿಗೆ, ಮಂಜು ಹರಿಯುವವರೆಗೆ
ಕುಳಿತಿಲ್ಲಿ, ನಲಿಯುವೆನು ನಲ್ಗಬ್ಬಗಳ ಹಾಡಿ.
(ಅಲ್ಲಿಯೆ ಬಳಿಯಿದ್ದ ಒಂದು ಎತ್ತರವಾದ ಅರೆಯಮೇಲೆ ಕುಳಿತು, ತನ್ನ ಪೊರಕೆ ಬುಟ್ಟಿಗಳನ್ನು ಕೆಳಗಿಟ್ಟು ಹಾಡುತ್ತಾನೆ)

ಮೂಡಿ ಬಾ, ಮೂಡಿ ಬಾ,
ಬೇಗ ಬಾ, ಬಾ ಬಾ!
ತೊಳಗಿ ಬಾ, ಬೆಳಗಿ ಬಾ,
ಜಗದ ಕಣ್ಣೆ, ಬಾ ಬಾ !
ಮಲೆಯ ಹತ್ತಿ ಮುಸುಗನೆತ್ತಿ
ಹಸುರ ಮೇಲೆ ಮುತ್ತ ಬಿತ್ತಿ
ಜಗದೆವೆಗಳ ತೆರೆಯುತ
ಕಮಂಗಳ ಬಿರಿಯುತ,
ತಿರೆಗೆ ಜೀವಕಳೆಯ ನೇಡಿ
ಜನಗಲೆದೆಗೆ ರಸವನೂಡಿ
ಮೂಡಿ ಬಾ, ಮೂಡಿ ಬಾ,
ಬೇಗ ಬಾ, ಬಾ ಬಾ !
ತೊಳಗಿ ಬಾ, ಬೆಳಗಿ ಬಾ,
ಜಗದ ಕಣ್ಣೆ, ಬಾ ಬಾ !
ಮುಗಿಲಿನಲಿ ಕೆಂಪ ಹೊಯ್ದು,
ದಿಮಣಿಯೆ, ಬಾ ಬಾ;
ಬೆಳಕಿನಲಿ ಬಲೆಯ ನೆಯ್ದು,
ತಿಮಿರಾರಿ, ಬಾ ಬಾ;
ಬಾನ ಹೆಣ್ಣನೊಲಿಯುತೊಮ್ಮೆ
ನೆಲದ  ಹೆಣ್ಣನೊಲಿಯುತೊಮ್ಮೆ
ಒಮ್ಮೆ ಬನದ ದೇವಿಯ
ಒಮ್ಮೆ ಜಲದ ದೇವಿಯ
ಸರಸದಿಂದಲೊಲಿಯುತಾಡಿ
ಕಿರಣಮಾಲೆಗಳನು ಸೂಡಿ
ಮೂಡಿ ಬಾ, ಮೂಡಿ ಬಾ !
ಬೇಗ ಬಾ, ಬಾ ಬ !
ತೊಳಗಿ ಬಾ, ಬೆಳಗಿ ಬಾ;
ಜಗದ ಕಣ್ಣೆ, ಬಾ, ಬಾ !

(ಹಾಡನ್ನು ನಿಲ್ಲಿಸಿ ಮೂಡಣ ದೆಸೆಯನ್ನು ನೋಡಿ)

ಮೆಲುನಡೆಯನಿಡುತ ಅರುಣೋದಯವು ಮೂಡಣದ
ಬಾನೆಡೆಯೊಳೋಕುಳಿಯ ಚಿಲ್ಲುತ್ತ ಮೂಡುತಿದೆ,
ಹಸುರಿನಲಿ ಮುತ್ತುಗಳ ಹೊಂಬೆಳಗ ಸೂಸಿ.
ಹಿಂಜರಿದು ಹಿಮ್ಮೆಟ್ಟಿ ದಿಕ್ಕುಗಳಲಡಗುತಿಹ
ಕತ್ತಲೆಯ ಮೊತ್ತದಿಂ; ದೆಸೆದೆಸೆಗಳಂ ತೀವಿ
ನಲಿವ ನರುಗಂಪಿನಿಂ, ಪೆಂಪಿನಿಂ; ಮೈಸೋತ
ದಲದಂತೆ ಬೆದರಿ ಹಿಂಜರಿದು ಮರೆಯಾಗುತಿಹ
ಮಂಜಿನಿಂ; ನೇಸರಾಗಮನದಲಿ ಕಣ್ದೆರೆದು,
ಮೈಕೊಡವಿ, ಮರದಿಂದ ಮರದೆಡೆಗೆ ಸಂತಸದಿ
ಹಾರುತ್ತ, ನುಣ್ದನಿಯ ಬೇರುತಿಹ ಹಕ್ಕಿಗಳ
ಗೇಯದಿಂಚರದಿಂ; ನಲವಿಂದ ಸುಳಿಸುಳಿದು
ತಳಿರ ಕಾವಣಗಳಲಿ ಒಯ್ಯೊಯ್ಯನಾಡುತಿಹ
ಕುಳಿರೆಲರಿನಿಂಪಿನಿಂ; ಎಲರಿನಲಿ ತಲೆದೂಗೆ
ನರುಗಂಪನೀಡಾಡಿ ಬಿರಿಯುತಿಹ ಪೂಗಳಿಂ;
ಪೂಗಲಲಿ ಬಂಡುಣಲು ಹಾರೈಸಿ, ಸುತ್ತಿ
ಮೊರೆಯುತಿಹ ಸೊಕ್ಕಿದಳಿ ನಿಕರದಿಂ; ಬಿತ್ತರದ
ಬಾನಿನಿಂ; ಬಾನಿನಲಿ ತೇಲುತಿಹ ಮುಗಿಲಿನಿಂ;
ರಮ್ಯಾರುಣೋದಯವದೆಂತು ಚೆಲ್ವಾದುದು !
ಸೃಷ್ಟಿ ಕರ್ತನನೆಮಗೆ ಸಾಧಿಸಲು, ತೋರಿಸಲು,
ಸೃಷ್ಟಿಯಿದು ಸಾಲದೇ? ಸೃಷ್ಟಿಸೌಂದರ್ಯಮಿದು
ಸಾಲದೇ? ಪಳವಾತದೇಕೆ? ಬಿಜ್ಜೆಯೇಂ
ತೋರ್ಕುಮೇ ಎದೆಯರಿವು ತೋರದಾ ಪರಮನಂ? –
ಇಷ್ಟು ಮುಂಜಾನೆಯಲಿ ಹಾಡುತ್ತ ಬರುವರಾರು?

(ರಂಗದ ಒಂದು ಪಕ್ಕಕ್ಕೆ ದೃಷ್ಟಿಸಿ ನೋಡುತ್ತಾನೆ. ರೈತನೊಬ್ಬನು ಹಾಡುತ್ತ ಬರುತ್ತಾನೆ.)

ರೈತ
ನೇಗಿಲ ಯೋಗಿಯು ನಾನು;
ಮಣ್ಣಿನ ಭೋಗಿಯು ನಾನು !
ಕೆರೆಗಳ ತೊರೆಗಳ ಗೆಳೆಯನು ನಾನು,
ಹೊಲಗಳ ಬನಗಳ ದೊರೆ ನಾನು.
ಹೊಯ್ಯುವೆ, ಗೆಯ್ಯುವೆ, ಕೊಯ್ಯುವೆ ನಾನು;
ಉಣ್ಣುವೆ, ಊಣಿಸೀಯುವೆ ನಾನು.
ನೇಗಿಲ ಗೆರೆಯೇ ತೋರುವುದೆನಗೆ
ಮುಕ್ತಿಯ ಹಾದಿಯನು;
ವೇದಗಳೆಲ್ಲಾ ನೆಗೆನೆಗೆದರಿಯದ
ಅಂತ್ಯದ ಆದಿಯನು.
ನನ್ನಿಯನರಿಯುವೆ ಕರ್ಮದಲಿ;
ಸೊಗವನು ಕಾಣುವೆ ಧರ್ಮದಲಿ !
ಬದುಕಿ ಬಾಳಿ ನಾ ಗೆಯ್ಯುವೆ ನಲಿಯುವೆ,
ಇಹಪರಗಳ ನಾ ಸಾಧಿಸುವೆ.
ಬದುಕಿ; ಬಾಳಿ; ಕರ್ತವ್ಯವ ಮಾಡಿ;
ಮೇಲಾಗುವುದನು ಬೋಧಿಸುವೆ !
ನೇಗಿಲ ಯೋಗಿಯು ನಾನು !
ಮಣ್ಣಿನ ಭೋಗಿಯು ನಾನು !

(ಹಾಡನ್ನು ನಿಲ್ಲಿಸಿ, ತಾನು ತಂದ ಹಣ್ಣುಕಾಯಿ ಕೆಳಗುಟ್ಟು, ಉಟ್ಟ ಹೊಸ ಬಟ್ಟೆಗಳನ್ನು ನೋಡಿ ನೋಡಿ ಸರಿಮಾಡಿಕೊಳ್ಳುತ್ತಾ)

ತಿರೆಯ ಪೊರೆದವರೆನ್ನ ಸಹಕರ್ಮಿಗಳು ದರ್ಮಿಗಳು!
ನನ್ನವರ ಬಲದಿಂದಲೇ ದೊರೆಗಳಾಳಿದರು,
ಬಾಳಿದರು ರಣವೀರರರಿಗಳನು ಹೂಳಿದರು.
ಕಬ್ಬಿಗರು ನಲ್ಗಬ್ಬಗಳ ಬರೆದು ಹಾಡಿದರು;
ಶಿಲ್ಪಿಗಳು ಕಲ್ಲಿನಲಿ ಕತೆಗಳನು ಕೆತ್ತಿದರು!
ಮಣ್ಣಾದ ನೇಗಿಲಾಶ್ರಯದಿ ಬೆಳೆದಿಹುದು,
ಉಳಿದಿಹುದು, ನಮ್ಮ ನಾಗರಿಕತೆ. ರೈತರೇ
ಭೂಮಿಗಿಳಿದಿಹ ಕಾಮಧೇನುಗಳು; ರೈತರೇ
ಧರೆಯೊಳಿಹ ಜಂಗಮ ಕಲ್ಪವೃಕ್ಷಗಳು.

ಜಲಗಾರ
ಮುಂಜಾನೆಯೊಳಗೆಲ್ಲಿ ಹೋಗಿತಿಹೆ, ರೈತ?

ರೈತ
(ಹಿಂತಿರುಗಿ ನೀಡಿ)
ಓಹೊ ನೀನರಿಯೆಯಾ? ಇಂದು ನಮ್ಮೂರ
ಶಿವಗುಡಿಯ ಜಾತ್ರೆ! ಬರುವುದಿಲ್ಲವೆ ನೀನು?
ತೇರೆಳೆಯಲೆಂದನಿಬರೂ ಬರುತಿಹರು.

ಜಲಗಾರ
ನನಗೇಕೆ ಶಿವಗುಡಿಯ ಜಾತ್ರೆ? ಜೋಯಿಸರು
ದೇಗುಲದ ಬಳಿಗೆನ್ನ ಸೇರಿಸರು.

ರೈತ
ದೂರದಲ್ಲಿಯೆ ನಿಂತು ಕೈಮುಗಿದು ಬಾ.

ಜಲಗಾರ
ಕರ್ಮವಾರಾಧನೆ, ಸೇವೆಯೇ ಪೂಜೆ.
ನನ್ನ ಭಾಗಕೆ ಪರೊಕೆ ಆರತಿ. ಗುಡಿಸುವುದೆ
ನನ್ನ ದೇವರ ಪೂಜೆ! – ನಿನ್ನೆ ದೇಗುಲದೆಡೆಗೆ
ಹೋದೆನ್ನ ಕಂದನಂ ಬೈದಿರಿದು ನೂಕಿದರು.
ಶಿವಗುಡಿಯ ಶಿವನು ಜೋಯಿಸರ ಶಿವನಂತೆ;
ನನ್ನ ಶಿವನೀ ಮಣ್ಣಿನಲ್ಲಿಹನು. ನನ್ನ ಶಿವ
ಕೊಳೆತ ಕಸದೊಳಗಿಹನು. ಕಪ್ಪುರದೊಳಿಲ್ಲ;
ಮಂಗಳಾರತಿಯೊಳಿಲ್ಲ; ಹೂವುಗಳಲಿಲ್ಲ.
ಯಾವೆಡೆಯೊಳಾನಿಹೆನೊ ಅವನಲ್ಲಿಯೇ ಇಹನು.
ನನ್ನದೆಯೆ ದೇಗುಲ; ನನ್ನೊಲ್ಮೆಯದೆ ಪೂಜೆ.
ನಾನೆಲ್ಲಿ ಭಕ್ತಿಯಿಂ ಕೈಮುಗಿವೆನೋ ಅಲ್ಲಿ
ತಾನಿಹನು. ನಾನೆಲ್ಲಿ ಸತ್ಕರ್ಮವೆಸಗುವೆನೊ
ಅಲ್ಲಿ ಮೈದೋರುವನು. ಶಿವಗುಡಿಯದೆನಗೇಕೆ? –
ನೀನೇನು ಶಿವಗುಡಿಗೆತೆರಳುತಿಹೆಯಾ?

ರೈತ
ಹೌದು; ಶಿವನ ನೋಡಲು ಗುಡಿಗೆ ಹೊರಟಿಹೆನು –
ದರುಶನಕೆ. ಅದಕಾಗಿ ಹಣ್ಕಾಯಿಗಳನೆಲ್ಲ
ತಂದಿರುವೆ; ನೋಡಿಲ್ಲಿ.
(ತೋರುತ್ತಾನೆ.)

ಜಲಗಾರ
ಶಿವನ ಕಾಣಲು ನೀನು
ಗುಡಿಗೆ ಹೋಗುವೆಯೇನು? ನಿನ್ನ ನೇಗಿಲ ಗೆರೆಯ
ದಿವ್ಯ ದೇವಾಲಯದಿ ಶಿವನ ಕಾಣೆಯ ನೀನು?
ಉಳುವಾಗ, ನೆಡುವಾಗ ಪೂಜೆಮಾಡುವೆ ನೀನು.
ದೇಗುಲದ ಪೂಜಕನು ಬೈಗಿನಲೆ ಬೆಳಗಿನಲಿ
ಪೂಜಿಸಿದರೇನಂತೆ? ನಮ್ಮ ಜೀವವೆ ನಿಚ್ಚ
ಪೂಜೆ. ನಮ್ಮ ಕರ್ಮವೆ ನಿತ್ಯಯೋಗ.
(ರೈತನು ತನ್ನ ಪೂಜಾಸಾಮಗ್ರಿಗಳನ್ನು ಎತ್ತಿಕೊಳ್ಳುತ್ತಾನೆ.)
ಜಲಗಾರನೆಂದುದಿದು ವೇದ ನುಡಿಯಲ್ಲ;
ತೆರಳು, ನೇಗಿಲಯೋಗಿ, ಶಿವನ ಪೂಜಿಸು, ಹೋಗು.
(ಗುಡಿಸುತ್ತಾನೆ)

ರೈತ
ಕೇಳಿಲ್ಲಿ, ಜಲಗಾರ, ಇಂದು ಜಾತ್ರೆಯ ದಿವಸ,
ಇಂದು ಸುಗ್ಗಿಯ ಹಬ್ಬ; ಇಂದು ಆಟದ ದಿನ.
ಎಲ್ಲರೂ ಸಂತಸದಿ ಶಿವನಪೂಜೆಯನು ಮಾಡಿ
ನಲಿಯುವರು. ನೀನೂ ಬಾ.

ಜಲಗಾರ
ಹೌದು, ನೇಗಿಲ ಯೋಗಿ,
ಲೋಕ ನಗಬೇಕಾದರಾರಾದರಳಬೇಕು!
(ಗುಡಿಸುತ್ತಾನೆ.)

ರೈತ
(ಸ್ವಗತ)
ಸೊಗದ ಮೋರೆಯನೆ ಕಂಡರಿಯನೀ ಜಲಗಾರ.
ಪೂಜೆಯೆಂಬುದನರಿಯ; ದೇವನೆಂಬುದನರಿಯ;
ಹುಟ್ಟುಗುಣ ಸುಟ್ಟರೂ ಹೋಗುವುದೆ?
(ಹಾಡುತ್ತಾ ಹೋಗುತ್ತಾನೆ)

ಜಲಗಾರ
ಭೂಮಿಯಲಿ ಹುಟ್ಟುಕುರುಡರಿಗಿಂತ ಕಣ್ಣುಳ್ಳ
ಕುರುಡರೆನಿತೊಳರು? ಬನದ ಕೆಂದಳಿರಲ್ಲಿ
ಬಗ್ಗಿಸುವ ಕೋಗಿಲೆಯ, ನಿನ್ನ ಪುಗಲಿಂಚರದಿ
ಪರಮವಾಣಿಯ ಕೇಳದವಗೆ ಕಿವಿಯಿದ್ದರೇಂ?
ಎಲೆ ರಮ್ಯವನಗಳಿರ, ನಿಮ್ಮ ಸೌಂದರ್ಯದಲಿ
ಪರಮಾತ್ಮನಂ ಕಾಣದವತಿದ್ದರೇಂ ಕಣ್ಣೆರಡು?
ಜಗದ ದೇಗುಲದಲ್ಲಿ ಜಗದುದಯ ಕಾರಣನ
ಕಾಣದವನೆಂತು ಕಾಣ್ಬನು ಶಿವನ, ಗುಡಿಯಲ್ಲಿ?
ತಣ್ಗದಿರ ಬೆಂಗದಿರನರಿಲುಗಳೆ ಸೊಡರುಗಳು.
ಸುಮಮಾಲೆ ಅಲರುಗಳ ಚೆಲ್ಲುತಿರುವಡವಿಗಳು.
ಮುನ್ನೀರು ತೊರೆ ಕೆರೆಗಳೇ ಪಂಚಪಾತ್ರೆ.
ಬಿತ್ತರದ ಬಾಂದಳವೆ ಗೋಪುರಂ! ಹೊಳೆಗಳಲಿ
ಹರಿವ ಸಲಿಲವೆ ತೀರ್ಥ; ಸುಮಗಂಧವೇ ಧೂಪ.
ಹಕ್ಕಿಯಿಂಚರವೆ ಸುಸ್ವರಮೇಳ! ಎದೆಯೊಲವೆ
ವರ ಧರ್ಮಶಾಸ್ತ್ರ. ಭಕ್ತಿಯೆ ದಿವ್ಯಾತ್ಮ ಯಜ್ಞ.
ಎದೆಯ ಮಣೆಯೇ ಯಜ್ಞಶಾಲೆ!
ನಲ್ವಾತುಗಳೆ ಮಂತ್ರಘೋಷ; ನೀತಿಯೆ
ಪರಮ ವೇದ. ತಿರೆಗಿಂತ ದೇಗುಲವದೊಳದೇನ್?
(ಹಾಡುತ್ತಾನೆ)
ಗುಡಿಯೊಳಗಿರಲು ದೇವ
ಒಡೆಯನಾರೀ ಜಗವ ಕಾವ?
ವಿಗ್ರಹದೊಳಿರೆ ರಾಮ
ಯಾರದೀ ಲೋಕದಾರಾಮ?
ಮೂಡಣದೊಳಿಹನು ಹರಿ;
ಪಡುವಲೊಳಿಹನು ಅಲ್ಲಾ!
ಹೃದಯದೊಳು ನೀ ನೋಡೆ
ಸಲೆ ವಿಚಾರವ ಮಾಡೆ
ಅಲ್ಲಿರುವನು ಕರೀಮ;
ಅಲ್ಲೆ ತೋರ್ಪನು ರಾಮ!
ಜಗದ ಮನುಜರಿಗೆಲ್ಲಾ
ಬ್ರಹ್ಮನಾಗಿಹನಲ್ಲಾ!
ಅಲ್ಲ ರಾಮರ ಕಂದನ್
ಆಗಿರುವನು ಕಬೀರ!
ಆತನೇ ಎನಗೆ ಗುರು
ಮೇಣಾತನೇ ಪೀರ!
(ಇಬ್ಬರು ಪಾರ್ವರು ಪ್ರವೇಶಿಸುತ್ತಾರೆ)

ಮೊದಲನೆ ಪಾರ್ವ
ಕೊಳಲಿನಿನಿದನಿಯಂತೆ ಸವಿಗೊರಲಿನಿಂದೊಗೆದ
ಗಾಯನವದೆನಿತಿಂಪು! ಹಾಡಿದವರಾರೊ?

ಎರಡನೆಯ ಪಾರ್ವ
ಯಾರೊ ದಿವ್ಯಾತ್ಮನಿರಬೇಕು. ಮಧುರತಮ
ಗಾಯನವು ಅಮಲತಮ ಹೃದಯದಿಂದಲ್ಲದೆ
ಹೊರಗೊಮ್ಮಲರಿಯದು! ಗುಡಿಯ ಬಳಿಯಾದರೂ
ಹಾಡಿದನೆ!

ಮೊದಲನೆ ಪಾರ್ವ
(ಜಲಗಾರನನ್ನು ನೋಡಿ)
ಜಲಗಾರ, ಹಾಡಿದವರಾರೊ?

ಜಲಗಾರ
(ಕೈಮುಗಿದು)
ನಾನೇ ಮಹಾಸ್ವಾಮಿ: ತಮ್ಮನುಗ್ರದಿಂದ.

ಎರಡನೆಯ ಪಾರ್ವ
ಅಮನಂತೆ! ಬರಿಯ ಸಟೆ! ಹೋಗೋಣ ಬಾ.

ಮೊದಲನೆ ಪಾರ್ವ
ಸಂಗೀತವನಿತೇನು ಮನಮೋಹಿಪಂತೆ
ಇರಲಿಲ್ಲ. ಗಾನದೇವಿಯು ಹೀನ ಜಲಗಾರನನ್
ಒಲಿಯುವಳೆ? ಎಂದಿಗೂ ಇಲ್ಲ.

ಎರಡನೆಯ ಪಾರ್ವ
ಶೂದ್ರರೊಳ್
ಕವಿವರ್ಯರುದಿಸುವರೆ? ಹುಟ್ಟುವರೆ ಪಂಡಿತರ್?
ಜನಿಸುವರೆ ಶಿಲ್ಪಿಗಳ್? ಗಾಯಕರ್? ಯೋಗಿಗಳ್?
ಅಸದಳಂ! ಹೊತ್ತಾಯ್ತು ಹೋಗೋಣ.

ಮೊದಲನೆ ಪಾರ್ವ
ಇರಲಿ,
ಇವನ ಹಾಡೆನಿತಿಂಪು ತೋರಿದರು, ಗುಡಿಯ ಬಳಿ
ಬೇಡ! ಕೇಳಲ್ಲಿ! ಶಿವಗುಡಿಯ ಗಂಟೆಗಳ್
(ಹೋಗುತ್ತಾರೆ)
(ಜಲಗಾರನು ಅವರನ್ನೇ ನೋಡಿ ನಗುತ್ತಾ ಗುಡಿಸಲಾರಂಬಿಸುತ್ತಾನೆ. ಜಾತ್ರೆಗೆ ಹೋಗುವ ಜನಗಳ ಗುಂಪು ಹೋತ್ತದೆ. ಯುವಕನೊಬ್ಬನು ಗುಡಿಸುವವನನ್ನು ನೋಡಿ ನಿಲ್ಲುತ್ತಾನೆ.)

ಯುವಕ
ಜಗದುದಯ ಕಾರಣನೆ, ಹೇ ಜಗದವ್ಯಕ್ತ
ಮೂರ್ತಿ, ನಿನ್ನ ಮಹಿಮೆಯನರಿವರಾರು?
ನಿನ್ನ ಲೀಲೆಯ ತಿರುಳ ಹೊಕ್ಕು ಮುಟ್ಟಿದರಾರು?
ಯುಗಯುಗಗಳಿಂ ಬಿಡದೆ ತಿಳಿಯಾಳದಾಗಸದಿ
ತೊಳಗುತಿಹ ಸೂರ್ಯನನು, ಮುಂಬೆಳಗಿನಲಿ ಮೂಡಿ
ಬೈಗಿನಲಿ ಮಡಿವ ಕಿರಯ ಹೂ ನಗುವಂತೆ
ಮಾಡಿರುವ ನಿನ್ನ ಮಾಯೆಯ ಮೈವೆಯೆಂತು?
ಕೆಲವರಾಡುವರುಳಿದವರು ಕೆಲಸ ಮಾಡುವರು:
ಯಾರ ಸಂತಸವಾರ್ಗೆ? ಉದ್ದೇಶವೇನಿಹುದು?
ದಿನದಿನವು ಎಡೆಬಿಡದೆ ತೆಯ್ಯುತಿಹ ಜಲಗಾರನ್
ಈತಂಗೆ ಯಾವ ಫಲವನು ಎಲ್ಲಿ ಮುಚ್ಚಿರುವೆ?
ಮಹಿಮೆ ಯಾವುದು ಕಸದೊಳಡಗಿಹುದು?
(ಜಲಗಾರನನ್ನು ಸಂಬೋದಿಸಿ)
ಜಲಗಾರ,
ಜಾತ್ರೆಯೊಳು ಕೂಡ ನಿನಗೆ ಬಿಡುವಿಲ್ಲವೆ?
ನಾಳೆ ಗುಡಿಸುವೆಯಂತೆ; ಬರಬಾರದೆ ಈಗ?
ಒಂದು ದಿನವಾದರೂ ವಿಶ್ರಾಂತಿಯಿರಲಿ;
ಬಾ, ಹೋಗೋಣ!

ಜಲಗಾರ
ವಿಶ್ರಾಂತಿಯೊಂದು ದಿನ;
ಕರ್ಮ ಕಾಲದಂತ್ಯದವರೆಗೆ! ಒಂದು ದಿನ
ಜಾತ್ರೆ; ಅದಕಾಗಿ ಯುಗಯುಗದ ಯಾತ್ರೆ!
ತೆರಳು, ಯುವಕನೆ, ತೆರಳು; ಶಿವನ ಗುಡಿಯೊಳಗರಸು;
ನಾನು ಪುಡಿಯೊಳಗವನನರಸುವೆನು.
(ಜಲಗಾರನು ಗುಡಿಸುತ್ತಾನೆ. ಯುವಕನು ಅವನನ್ನೆ ಸ್ವಲ್ಪ ಹೊತ್ತು ದೃಷ್ಟಿಸಿ ನೋಡಿ, ಅವನು ಕಾಣದಂತೆ ಅವನಿಗೆ ಕೈಮುಗಿದು, ಹೋಗುತ್ತಾನೆ. ತಿರುಕನೊಬ್ಬನು ತಿರಿಯುತ್ತಾ ಬರುತ್ತಾನೆ. ಅವನು ಕುರುಡ, ಕುಂಟ.)

ತಿರುಕ
(ರಾಗವಾಗಿ)
ಧರ್ಮರೇ!
ದೇವರೆ! ತಾಯ್ತಂದೆ! ಕಾಸು ಕೊಡಿರಪ್ಪಾ!
ಹೊಟ್ಟೆಗಿಲ್ಲದೆ ಹಸಿದು ಸಾಯುತಿಹೆನಪ್ಪಾ!
ಕಣ್ಣಿಲ್ಲ! ಕಾಲಿಲ್ಲ! ಧರ್ಮರೇ! ತಾಯ್ತಂದೆ!
(ಭಟ್ಟನೊಬ್ಬನು ಮಂತ್ರ ಹೇಳುತ್ತಾ ವೇಗವಾಗಿ ಬರುತ್ತಾನೆ.)

ಭಟ್ಟ
(ರಾಗವಾಗಿ)
ತ್ವಮೇವ ಮಾತಾ ಚ ಪಿತಾ ತ್ವಮೇವ!
ತ್ವಮೇವ ಬಂಧುಶ್ಚ ಸಖಾ ತ್ವಮೇವ!
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ!
ತ್ವಮೇವ ಸರ್ವಂ ಮಮ ದೇವದೇವ!
(ಭಿಕ್ಷುಕನು ಅವನನ್ನು ಅಡ್ಡಗಟ್ಟಿ)

ತಿರುಕ
ಕಣ್ಣಿಲ್ಲ, ಧರ್ಮರೆ, ಕಾಸು ಕೊಡಿರುಪ್ಪಾ!
ಹೊಟ್ಟೆಗಿಲ್ಲದೆ ಹಸಿದು ಸಾಯುತಿಹೆನಪ್ಪಾ!

ಭಟ್ಟ
(ಕೋಪದಿಂದ)
ನೀ ಸತ್ತರೆನಗೇನೊ? ಮಡಿಬಟ್ಟೆ ಮುಟ್ಟುವೆಯ?
ಅದಕೆ ದೇವರು ನಿನ್ನ ಕಣ್ಣಿಂಗಿಸಿದ್ದು!
(ತ್ವಮೇವ ಪಾತಾ . . . . ಎಂದು ಹೇಳುತ್ತಾ ಹೊಗುತ್ತಾನೆ.)

ತಿರುಕ
(ಹತಾಶನ ರೋಷದಿಂದ)
ನೀನೇಕೆ ಗುಡಿಯೊಳಗೆ ಸೇರಿರುವೆಯಪ್ಪಾ,
ಪರಮಾತ್ಮ? ಗುಡಿಗಳಿವು ಪಾಪಿಗಳ ಭೋಗಿಗಳ
ಗೂಡುಗಳು! ಪೂಜೆಯಿಂಬುದೊ ಧರ್ಮಬುದ್ಧಿಯನು
ಜೋಗುಳದಿ ಮಲಗಿರುವ ಕಾಳಮಂತ್ರವು, ದೇವ!
ಕಾಪಾಡು! ಕಾಪಾಡು!
(ಒರಗುತ್ತಾನೆ)
(ಇಬ್ಬರು ತರುಣರು ಮಾತಾಡಿಕೊಳ್ಳುತ್ತಾ ಬರುತ್ತಾರೆ.)

ಮೊದಲನೆಯ ತರುಣ
ದೇಗುಲದೊಳವಿತುಕೊಂಡಿಹನಂತೆ ಪರಶಿವನು!
ಜಗವೆಲ್ಲ ದೇವನಿಹ ಗುಡಿಯಲ್ಲವೇ, ಗೆಳೆಯ? –
ಮತದ ಮದ್ಯವ ಕುಡಿದು ತಲೆಕೆಟ್ಟಿಹುದು ಮಂದಿ!

ಎರಡನೆಯ ತರುಣ
ಮೊದಲ ಠಕ್ಕನ ಮೊದಲ ಬೆಪ್ಪನ ಸಂಧಿಸಲು
ಸಂಭವಿಸಿತೆಂಬರೀ ಮತ ಎಂಬ ಮತಿವಿಕಾರಂ.
ದೊರೆ ಪುರೋಹಿತರ್ ಅವಳಿಮೊಲೆಯೂಡಿ ಸಲಹಿದರದಂ.
ಮತದ ಮದಿರೆಯನೀಂಟಿ ಮಂಕುಬಡಿದಿದೆ ಜನಕೆ.
ಕೊನೆ ದೊರೆಯ ಕೊರಳಿಗಾ ಕೊನೆ ಪುರೋಹಿತನ ಕರಳ್
ಉರೊಳಾಗುವಾ ವರೆಗೆ ಸುಖವಿಲ್ಲ ಈ ದರೆಗೆ!

ಮೊದಲನೆಯ ತರುಣ
ಪೂರ್ವಿಕರ ಮೂಢತನಕಾದಿಯೆಂಬುವುದೆಲ್ಲಿ?
ಅಂತವೆಂಬುದೆಲ್ಲಿ? ಹೇಳುವುದು ಒಂದು,
ಮಾಡುವುದು ಮತ್ತೊಂದು! ಜಗದೊಡೆಯನೆಲ್ಲಿಯುಂ
ಇರುವನೆಂಬರು ಒಮ್ಮೆ! ಗುಡಿಯಲರಸುವರೊಮ್ಮೆ!
ನಿರಾಕಾರನವನೆಂದು ಸಾರುವರು ಒಮ್ಮೆ;
ಮೂರ್ತಿಗಳ ಮಾಡಿ ಆರಾಧಿಸುವರಿನ್ನೊಮ್ಮೆ!
ಒಂದು ಸಲ ಸರ್ವರೊಳು ಅವನಿರುವನೆನ್ನುವರು;
‘ಹೊಲೆಯ ನೀ ದೂರವಿರು’ ಎಂದೆಂಬರಿನ್ನೊಮ್ಮೆ!
ನುಡಿಗೂ ನೆಗಳ್ತೆಗೂ ಸಂಬಂಧವೇ ಇಲ್ಲ!
ಇದೆ ನಮ್ಮ ಭಾರತಾಂಬೆಯ ದುರ್ಗತಿಗೆ ಕಾರಣ.
ಬಡಜನರ ಕಣ್ಣೆತ್ತಿ ನೋಡದಿಹ, ಮರುಗದಿಹ
ಹಾಳು ಪೂಜೆಯದೇಕೆ? ಹಸಿದ ಜನಗಳಿಗೆ
ಕೊಡರೊಂದು ಕಾಸ; ತಣ್ಣಗಿಹ ಕಲ್ಲುಗಳ
ಮೇಲೆ ಎಣ್ಣೆಯನು ಬೆಣ್ಣೆಯನು ಸುರಿಯುವರು.
ಕರ್ಪೂರದಾರತಿಯ ಬೆಳಗುವರು ವಿಗ್ರಹದ
ಮುಂದೆ ತಲೆಬಾಗಿ. ಸತ್ತ ದೇವರ ಪೂಜೆ
ಮಾಡುವರು. ಜೀವದ ದರಿದ್ರನಾರಾಯಣರ
ಸೇವೆಯಲ್ಲವೆ ಪರಮ ಪೂಜೆ?

ತಿರುಕ
ಧರ್ಮರೇ!
ಕಣ್ಣಿಲ್ಲ, ಹಸಿದಿಹೆನು, ಸಾಯುತಿಹೆನಪ್ಪಾ!
ಪುಣ್ಯಾತ್ಮರೇ, ತಾಯ್ತಂದೆ, ಕಾಸು ಕೊಡಿರಪ್ಪಾ!

ಎರಡನೆಯ ತರುಣ
ಕಾಸಿದೆಯೆ ನಿನ್ನ ಬಳಿ?
(ಎಂದು ತಟಕ್ಕನೆ ಮೊದಲನೆಯ ತರುಣನ ಕಡೆಗೆ ತಿರುಗತ್ತಾನೆ. ಜೇಬಿನಲ್ಲಿ ಹಣದ ಸದ್ದಾಗುತ್ತದೆ.)

ಮೊದಲನೆಯ ತರುಣ
ಹಾಗಲ್ಲ, ಮಿತ್ರ!
ಕೊಡುವುದನು ನೋಡಿ ಕೊಡಬೇಕು!
“ನರಜನುಮವತ್ಯಧಿಕವದರೊಳು
ಗುರಹಿರಿಯರಿವರೆಂದು ದಾನ
ಕ್ಕರುಹರಿವರಲ್ಲೆಂದು ನೋಡದೆ ಮೂಢ ಮಾರ್ಗದಲಿ
ಕರೆದಪಾತ್ರಂಗಿತ್ತು ಪಾತ್ರನ
ಪರಿಹರಿಸಲೀಯೆರಡರಿಂ ಸಂ
ಹರಣವೈದುವುದಾರ್ಜಿಸಿದ ಧನವರಸ ಕೇಳೆಂದ!”
ಎಂಬ ವಿದುರನ ನೀತಿಯರಿಯೆಯಾ ನೀನು?
ಇವನೇನು ಕುರುಡನೇ? ಇವನು ಬಲು ಸೋಮಾರಿ!
ನೋಡೆನಿತು ಬಲಶಾಲಿಯಾಗಿಹನು? ನೋಡು!
ದುಡಿಯಬಾರದೆ ಇವನು? ಭಿಕ್ಷುಕರ ದೆಸೆಯಿಂದ
ದೇಶವೇ ಹಾಳಾಯ್ತು!
(ಕುರುಡನ ಬಳಿಸಾರಿ)
ಲೋ! ನಿನ್ನ ಕಣ್ಣು
ಕರುಡೇನೊ, ಠಕ್ಕ!
(ಕಣ್ಣಿನ ರೆಪ್ಪೆ ಎಳೆದು ನೋಯಿಸುತ್ತಾನೆ.)

ತಿರುಕ
(ಕೂಗಿ ಗೋಳಾಡಿ)
ಪರದೇಶಿಯಪ್ಪಾ!
ಕಣ್ಣಿಲ್ಲವಪ್ಪಾ! ನಿನ್ನ ದಮ್ಮಯ್ಯಪ್ಪಾ!
ನಿನ್ನ ಕಾಸೆನಗೆ ಬೇಡಪ್ಪಾ! ಕಣ್ಣು
ಚುಚ್ಚ ಬೇಡಪ್ಪಾ!
(ಜಲಗಾರನು ಓಡಿಬಂದು ತರುಣನನ್ನು ಎಳೆಯುತ್ತಾನೆ)

ಜಲಗಾರ
ಬಿಡಿರಪ್ಪಾ! ಪಾಪ,
ಹೊಟ್ಟೆಗಿಲ್ಲದೆ ಬಿದ್ದು ಸಾಯುವವಗೇತಕೀ
ಗೋಳು?

ಮೊದಲನೆಯ ತರುಣ
(ಕೋಪದಿಂದ)
ಸೊಕ್ಕೇನೊ ನಿನಗೆ?. . . . ತಿಂದ ಸೊಕ್ಕೇ?
ಮೈಮುಟ್ಟುವೆಯ ಬಂದು!
(ಅವನನ್ನು ಒದ್ದು ನೋಕಿ ಹೋಗುತ್ತಾರೆ.)

ಜಲಗಾರ
ದೇವರೇ, ದೇವರೇ!
ಶತ್ರುಗಳ ಕಾಟವಾದರು ಬೇಕು; ನಮಗಾಗಿ
ಮಿತ್ರರೆಂಬುವ ನೆವದಿ ಮರುಕ ತೋರುವ ಜನರ
ಕೃತ್ರಿಮದ ಕಾಟ ಬೇಡ! ಭಟ್ಟನಾದರೊ ಬೈದು
ಹೋದ. ಬಡಜನರಿಗಾಗಿ ಮರುಗುವ ಇವರು
ಭಿಕ್ಷುಕನ ಕಣ್ಣಿರಿದು, ಒದ್ದು, ತೆರಳಿದರು!
(ಮರುಕದಿಂದ) ನಿನಗೇನು ಬೇಕಣ್ಣಾ!

ತಿರುಕ
ಸಾಯುತಿಹೆನಪ್ಪಾ,
ಹೊಟ್ಟೆಗಿಲ್ಲದೆ! ತುತ್ತು ಅನ್ನ ಹಾಕುವೆಯಪ್ಪಾ!

ಜಲಗಾರ
ಬಡವರಿಗೆ ಬಡವರಲ್ಲದೆ ಬೇರೆ ಗತಿಯುಂಟೆ? –
ಲೋಕದಲಿ ಕಂಬನಿಯನೊಂದನೊರಸಿದ ನರನೆ
ಧನ್ಯ! ನಿಟ್ಟುಸಿರನೊಂದ ಸಂತೈಸುವನೆ
ಮಾನ್ಯ! ಹಸಿದ ಹೊಟ್ಟೆಗೆ ಮರುಗಿ ತುತ್ತೊಂದ
ನೀಡುವನೆ ಶಿವನೆಗೆಣೆ! ಹೆರರ ಗೋಳನು ಕಂಡು,
ಎದೆ ಬೆಂದು, ಬಟ್ಟೆಗೆಟ್ಟೊಬ್ಬನನು ಕೈಹಿಡಿದು,
ಜೀವನದ ಕರಿಮಣಿಯ ಕತ್ತಲಲಿ ಕಿರಣವೊಂದನು
ತಂದು ಭರವಸೆಯನೀಯುವಾತನೆ ಋಷಿ!
ಅದೆ ಪೂಜೆ, ಧರ್ಮ, ಯೋಗ, ಭಕ್ತಿ!
ಎದ್ದೇಳು, ಭಿಕ್ಷುಕನೆ, ನನ್ನನ್ನದೊಳೆ, ಮುಷ್ಟಿ
ನಿನಗಿಕ್ಕಿ, ಶಿವಪೂಜೆ ಮಾಡುವೆನು. ನೀನೆನ್ನ
ಸೋದರ, ನೀನೆನ್ನ ದೇಗುಲ! ನೀನೆನಗೆ
ಪರಶಿವ! ಏಳು; ಮೇಲೇಳು, ಸೋದರನೆ!
(ತಿರುಕನನ್ನು ಕೈಹಿಡಿದು ಮೆಲ್ಲಗೆ ನಡೆಸಿಕೊಂಡು ಹೋಗುತ್ತಾನೆ.)

ಪರದೆ