[ಸಾಯಂಕಾಲ ಭೂದೇವಿ ಬಂದು ಹಾಡುತ್ತಾಳೆ]

ದೂರದಿಂದ ಮೆಲುನಡೆಯಲಿ
ಸಂಜೆವೆಣ್ಣು ಬರುವಳು – ಬಹು
ದೂರದಿಂದ ಬರುವಳು!
ನೀಲಗಗನದಾಚೆಯಿಂದ
ನಲಿದು ತೇಲಿ ಬರುವಳು – ತವ
ರೂರಿನಿಂದ ಬರುವಳು.

ಸರಸದಿಂದ ತೊರೆಯ ತಡಿಯ
ಮೇಲೆ ನಡೆದು ಬರುವಳು – ಸುಖ
ಶಾಂತಿಗಳನು ತರುವಳು.
ಸೆರಗಿನಿಂದ ಗಿರಿವನಗಳ
ಮುಸುಗುತೇರಿ ಬರುವಳು – ಮನ
ಮೋಹಿಸುತ್ತ ಬರುವಳು.

ಹಾಡುವಾ ಮಿಹಂಗಮಗಳ
ಗೂಡಿಗಟ್ಟಿ ಬರುವಳು – ನಲಿ
ದಾಡಿಯಾಡಿ ಬರುವಳು.
ಗೆಜ್ಜೆಗಳನು ಗಲಿರೆನಿಸುತ
ಹಜ್ಜೆಯಿಡುತ ಬರುವಳು – ನಸು
ಲಜ್ಜೆಯಿಂದ ಬರುವಳು.

ವ್ಯೋಮವವಳ ಮಣಿಕಿರೀಟ,
ಭೂಮಿ ಪಾದಪೀಠವು – ವನ
ಧಾಮ ಹಸುರಿನುಡುಗೆಯು.
ಇಂದವವಳ ಮಕುಟಮಣಿಯೆ;
ತಾರೆ ರನ್ನಗಿಡಿಗಳು – ಕುರು
ಳೋಳಿ ನೀಲ ಮೇಘವು.

ತಣ್ಣನೆಲರ ಕೂಡಿಯಾಡಿ
ಮೌನದಿಂದ ಬರುವಳು – ಅನು
ರಾಗದಿಂದ ಬರುವಳು;
ಗೂಢತರದ ಶಾಂತಿಯಿಂದ
ಜಗದೆವೆಗಳ ಮುಚ್ಚುತ – ವೈ
ಯಾರದಿಂದ ಬರುವಳು.

ದಿನದ ಬೇಗೆಯಿಂದ ಬೆಂದು
ಬಲು ಬಳಲಿಹ ಭೂಮಿಗೆ – ವಿ
ಶ್ರಾಂತಿಯಿತ್ತು ಬರುವಳು;
ನಲಿನಲಿಯುತ ಮೆಲುನಡೆಯಲಿ
ಸಂಜೆವೆಣ್ಣು ಬರುವಳು – ನೋ
ಡದೋ, ತೇಲಿಬರುವಳು!
(ಹೋಗುತ್ತಾಳೆ.)
(ಜಲಗಾರನು ಪೊರಕೆ ಬುಟ್ಟಿ ಹಿಡಿದು ಪ್ರವೇಶಿಸುತ್ತಾನೆ.)

ಜಲಗಾರ
ಎನಿತು ಸೊಗಮೀ ಎಲರ್ ದುಡಿದು ಬಳಲಿದ ಮೈಗೆ!
ದಃಖವೆಂಬುದು ಸುಖದ ಕಿಂಕರನು. ಬಾಳೆನಿತು
ಸವಿಗನಸು! ಬಾಳ್‌ಸವಿಯ ಸಿರಿಯಿದಿರ್ ಸಾವಳ್ಕು
ಬರಿಯ ಬಡತನಮಲ್ತೆ? ಸೌಮ್ಯಮಲ್ತೆ?
(ಒಂದು ಎತ್ತರವಾದ ಅರೆಯ ಮೇಲೆ ಕೂರುತ್ತಾನೆ.)
ಮೂಡಿ, ಬಾ, ಚಂದಿರನೆ, ಬಾಳು ಸವಿಯೆಂಬುದನು
ಜಗಕೆಲ್ಲ ಸಾರುತ, ಮೂಡಿ, ತಾರಕೆಗಳಿರ,
ಜೀವದಾನಂದವನು ತಿರೆಗೆಲ್ಲ ತೋರುತ,
ಬೀಸು, ಬೀಸೆಲೆ ಮಂದಮಾರುತನೆ, ಜೀವನದ
ಬೇಗೆಯನು ತೂರುತ! ಬಾಳು ಚಿರವಲ್ಲದಿರೆ,
ಭೂಮಿ ಚಿರವಲ್ಲದಿರೆ, ಜೀವದಾನಂದವದು
ಚಿರವಲವೇನು? ತೊಳಗುತಿಹ ಚುಕ್ಕಿಗಳೆ,
ಬಾಳ ಕಿರುಗೆಲಸವಿದು, ಜಲಗಾರನೆಸಗುವೀ
ಕಿರುಗೆಲಸವಿದು ನಿಮ್ಮ ಕಾಂತಿಗಿಂತಲು ಚಿರ.
ಒಂದು ಧರ್ಮದ ಕಿರಯ ಕಾರ್ಯ ಶತಕೋಟಿ
ಸೂರ್ಯರಿಗೆ ಬೆಳಕು; ಲೋಕ ಲಕ್ಷಕೆ ಜೀವ!
ನಮ್ಮ ಬಾಳಿದು ಬರಿಯ ಮಾಯೆಯಲ್ಲ!
ನಮ್ಮ ಕರ್ಮವು ಬರಿಯ ಕನಸಲ್ಲ!
(ರೈತನು ಜಾತ್ರೆಯಿಂದ ಹಿಂತಿರುಗಿ ಬರುತ್ತಾನೆ.)

ರೈತ
ಜಲಗಾರ,
ಏನಿನ್ನೂ ಕೆಲಸ ಪೂರೈಸಲಿಲ್ಲವೆ?

ಜಲಗಾರ
ಇಲ್ಲ,
ಕರ್ಮ ಮುಗಿಯುವ ಕಾಲ ಬಂದಿಲ್ಲವಿನ್ನೂ!
ಶಿವನ ಗುಡಿಯಿಂದೇನು ತಂದಿರುವೆ, ರೈತ?

ರೈತ
ಜಲಗಾರ, ಪುಣ್ಯವಿಲ್ಲವೊ ನಿನಗೆ! ಜಾತ್ರೆಯದು
ವೈಭವದ ಜಾತ್ರೆ! ಜನವೇನು! ಧನವೇನು!
ಆ ಗಲಭೆಯೇನು! ನೋಟಗಳೊ ಬಹು ರಮ್ಯ!
ನಾನದನು ಹೇಳಿ ಮುಗಿಯಿಸಲಾರೆ.

ಜಲಗಾರ
ಇರಲಿಯದು.
ಶಿವನ ಗುಡಿಯಿಂದೇನು ತಂದಿರುವೆ?

ರೈತ
ಶಿವನ ಗುಡಿ ದೊಡ್ಡ ಗುಡಿ! ಏನು ಚಿತ್ರದ ಕೆಲಸ!
ವಿಗ್ರಹವು ಬಲುಚೆಂದ! ಜೋಯಿಸರ ಮಡಿಪಂಚೆ –
ಜರತಾರಿಯಪ್ಪಾ! ಆ ಪರಿಯ ವೈಭವವ
ನಾನಂತು ನೋಡಿಲ್ಲ.

ಜಲಗಾರ
ಅದಂತಿರಲಿ, ರೈತ.
ಶಿವನ ಗುಡಿಯಿಂದೇನು ತಂದಿರುವೆ? ಅದನು ಹೇಳು!

ರೈತ
ಹಳ್ಳಿಯ ಗಮಾರ! ಮೇಲೂರ ಜಲಗಾರ!
ನಿನಗೇನು ಗೊತ್ತು! ಆ ಅಂದ, ಆ ಚಂದ?
ಆರತಿಯ ನೋಡಿದೆನು. ಗಂಟೆ ಜಾಗಟೆಗಳನು
ಬಾರಿಸಿದೆ. ಮಂತ್ರ ಹೇಳಿದರದನು ಕೇಳಿದೆ!
ಹಣ್ಕಾಯಿ ಮಾಡಿಸಿದೆ, ಕರ್ಪೂರ ಉರಿಸಿದೆ.
ಹರಕೆಯನು ಸಲ್ಲಿಸಿದೆ. ಮತ್ತೇನು?

ಜಲಗಾರ
ಅದಂತಿರಲಿ,
ಶಿವನ ಗುಡಿಯಿಂದೇನು ತಂದಿರುವೆ? ಹೇಳು.

ರೈತ
ಹಣ್ಣು ಕಾಯಿ ಹೂವು ಕರ್ಪೂರ ಕುಂಕುಮ –
ಇವುಗಳನು ತಂದಿರುವೆ.

ಜಲಗಾರ
ಶಿವನ ತರಲಿಲ್ಲವೆ?

ರೈತ
ಮರುಳು ಜಲಗಾರ, ನಿನ್ನೊಡನೆ ಮಾತೇಕೆ?
(ರೈತನು ಹೋಗುತ್ತಾನೆ. ಒಬ್ಬ ಹಳ್ಳಿಯ ಹುಡುಗಿ ಜಾತ್ರೆಯಿಂದ ಹಿಂದುರುಗಿ ಹಾಡುತ್ತಾ ಬರುತ್ತಾಳೆ.)

ಹುಡುಗಿ
ಕೈಯಲ್ಲಿ ತಿರುಳಿಲ್ಲ, ಮೈಯಲ್ಲಿ ಹುರುಳಿಲ್ಲ,
ಮನೆಯಲ್ಲಿ ಕಾಳಿಲ್ಲ, ಕೂಳಿಲ್ಲ!
ಅಪ್ಪ ನೋಡಲು ಜೋಗಿ, ಅವ್ವ ನೋಡಲು ರೋಗಿ,
ನನಗಂತು ಕಣ್ಣೀರು ಬಿಡುವಿಲ್ಲ!
ಕಾಳಿಲ್ಲ, ಕೂಳಿಲ್ಲ, ಕಣ್ಣೀರು ಬಿಡುವಿಲ್ಲ,
ಕಾಯಬಾರದೆ ಬಂದು ಕಾವೆನೆಂದಿಹ ಗೊಲ್ಲ!

ಇದ್ದಕ್ಕನೊಬ್ಬಳ ಸಿದ್ದಕ್ಕನೊಬ್ಬಳ
ರಕ್ಕಸ ಜವರಾಯ ಮುಕ್ಕಿದನು.
ಇದ್ದಣ್ಣನೊಬ್ಬನು ಮುದ್ದಣ್ಣನೊಬ್ಬನು
ದೇಶ ತಿರುಗಲು ಹೋಗಿ ಹಾಳಾದನು.
ನಮ್ಮ ಕಂಡರೆ ಕರುಬು ನೆರೆಯರಿಗೆಲ್ಲ,
ಕಾಯಬಾರದೆ ಬಂದು ಕಾವೆನೆಂದಿಹ ಗೊಲ್ಲ!

ದನವ ಕಾಯಲೊ ನಾನು, ಕಳೆಯ ಕೀಳಲೊ ನಾನು,
ನರಳುವ ಅವ್ವನ ಗತಿಯೇನು?
ಹೇಳುವರಾರಿಲ್ಲ, ಕೇಳುವರಾರಿಲ್ಲ,
ದಿಕ್ಕಿಲ್ಲ, ಕೂಳಿಲ್ಲ, ಗತಿಯಿಲ್ಲ.
ಕವಿದ ಕತ್ತಲೆಯಲ್ಲಿ ಕಿರಣವೊಂದಿಲ್ಲ,
ಕಾಯಬಾರದೆ ಬಂದು ಕಾವೆನೆಂದಿಹ ಗೊಲ್ಲ!

ಹರಕೆಯ ಹೊತ್ತೆ, ಕಾಣಿಕೆ ತೆತ್ತೆ,
ದೇವರಿಗೆ ಶರಣೆಂದು ಬೇಸತ್ತೆ.
ಕಂಡ ಕಂಡ ಕಲ್ಲಿಗೆ ಕೈಮುಗಿದು ಸೋತೆ,
ನನಗಿನ್ನೂ ತಪ್ಪದು ಈ ರೋತೆ.
ಅಯ್ಯೋ ಗೋವಿಂದನೆ, ಬಲ್ಲೆ ನೀನೆಲ್ಲ,
ಕಾಯಬಾರದೆ ಬಂದು ಕಾವೆನೆಂದಿಹ ಗೊಲ್ಲ!
(ಹಾಡುತ್ತಾ ಹೋಗುತ್ತಾಳೆ, ಪಾರ್ವರು ಹರಟುತ್ತಾ ಬರುತ್ತಾರೆ.)

ಮೊದಲನೆಯ ಪಾರ್ವ
ಇಂದಾದ ಲಾಭವೇ ಲಾಭ.

ಎರಡನೆಯ ಪಾರ್ವ
ನನಗಂತು
ದಕ್ಷಿಣೆಯ ಹಬ್ಬ: ಹಣ್ಣುಕಾಯಿನ ದುಡ್ಡು,
ತೀರ್ಥ ಮಾರಿದ ದುಡ್ಡು –

ಮೊದಲನೆಯ ಪಾರ್ವ
ನಾನೊಬ್ಬ ಶೂದ್ರನನು
ಸುಲಿಗೆ ಮಾಡಿದ ದುಡ್ಡು –

ಎರಡನೆಯ ಪಾರ್ವ
ಅಂತೂ ನಮಗೆಲ್ಲ ಶಿವಗುಡಿಯ ದೆಸೆಯಿಂದ
ಹಿಟ್ಟು ಹೊಟ್ಟೆಗೆ, ದುಡ್ಡು ಬಟ್ಟೆಗೆ –

ಮೊದಲನೆಯ ಪಾರ್ವ
ಗುಟ್ಟು ಬಿಟ್ಟರೆ, ಕೆಟ್ಟೆ. ನಡೆ ಬೇಗ. (ಹೋಗುತ್ತಾರೆ.)

ಜಲಗಾರ
ಜೋಯಿಸರು
ಗುಡಿಯ ನುಗ್ಗುವ ಮುನ್ನವೇ ಶಿವನ ಹೊರಗಟ್ಟಿ
ನುಗ್ಗುವರು. ಶಿವಶಿವಾ ಗುಡಿಯೊಳಿದ್ದರೂ ಕೂಡ
ದೇವರಿಂದತಿ ದೂರವಿಹ ಪಾಪಿಯೆಂಥವನು?
[ಕಬ್ಬಿಗನೊಬ್ಬನು ಹಾಡುತ್ತಾ ಬರುತ್ತಾನೆ.]

ಕಬ್ಬಿಗ
ಕೊರಗಲೇಕೆ? ಮರುಗಲೇಕೆ?
ಹುಟ್ಟಿ ಬಂದಿಹೆ, ಹಳಿಯಲೇಕೆ?
ಸುಖವೆ ಬರಲಿ, ದುಃಖ ಬರಲಿ,
ರೋಗ ಭೋಗಗಳೇನೆ ಬರಲಿ,
ಎಲ್ಲ ಹೊತ್ತು ಋಣವ ತೆತ್ತು
ಮುಂದೆ ಪುಣ್ಯವ ಬೀಜ ಬಿತ್ತು.
ಕೊರಗಲೇಕೆ? ಮರುಗಲೇಕೆ?
ಹುಟ್ಟಿದಿಳೆಯನು, ಹಳಿಯಲೇಕೆ?

ಕೊರಗಲೇನು? ಮರುಗಲೇನು?
ಬಿಗಿದ ಬಂಧನ ಹರಿವುದೇನು?
ಸುಖವೆ ಬರಲಿ, ದುಃಖ ಬರಲಿ,
ಜೀವದೆಡರುಗಳೇನೆ ಇರಲಿ,
ಭಕ್ತಿಯಿಂದ ಶಕ್ತಿಯಿಂದ
ಮುಕ್ತಿಗೇರು ಧೈರ್ಯದಿಂದ.
ಕೊರಗಲೇಕೆ? ಮರುಗಲೇಕೆ?
ಬಂದ ಬಾಳನು, ಹಳಿಯಲೇಕೆ?

ಕೊಡುವನವನು, ಬಿಡುವನವನು
ಎಂದು ನೀನಿರೆ ಸುಡುವನವನು.
ಗೆಲುವೆ ಬರಲಿ, ಸೋಲೆ ಬರಲಿ,
ನುಗ್ಗು ಮುಂದಕೆ ಇರುವುದಿರಲಿ,
ಅರಿಯ ಕೊಲ್ಲು, ತಿರೆಯ ಗೆಲ್ಲು;
ಇಲ್ಲ, ರಣದಲಿ ಜವಗೆ ಸಲ್ಲು.
ಕೊರಗಲೇಕೆ? ಮರುಗಲೇಕೆ?
ಬಂದುದಾಯಿತು, ಹಳಿವುದೇಕೆ?

ನಮ್ಮ ಬಾಳು ಸವಿಯ ಬಾಳು:
ಯಾವುದಿಲ್ಲಿ ಕಡಿಮೆ ಹೇಳು?
ತಿಳಿಯ ಬಾನು, ಹೊಳೆವ ಮೀನು,
ಸೂರ್ಯಚಂದ್ರರು, ಬೆಟ್ಟ, ಕಾನು,
ಹರಿವೆ, ತುಂಗೆ, ದಿವಿಜ ಗಂಗೆ,
ಹಾಲು ಮಳೆಯಿದೆ ಬರುವ ಪಿಂಗೆ,
ಕರುಣೆಯೊಲ್ಮೆ ಎಲ್ಲ ಇಲ್ಲಿ!
ಯಾವುದೆಮಗೆ ಕಡಿಮೆ ಇಲ್ಲಿ?

ಕೊರಗಲೇಕೆ? ಮರುಗಲೇಕೆ?
ಬಂದ ಬದುಕನು ಬೈಯಲೇಕೆ?
ಒಲಿದು ಕೂಡಿ, ನಲಿದು ಹಾಡಿ,
ನಮ್ಮ ಪಡೆದವನಂತೆ ಆಡಿ,
ಪರವ ನಾವು ಪಡೆವ ಮುನ್ನ
ಪಡೆಯಲೆಳಸುವ ತಿರೆಯ ಹೊನ್ನ!
ಕೊರಗಲೇಕೆ? ಮರುಗಲೇಕೆ?
ಬರಿದೆ ಬಾಳನು ಜರೆವುದೇಕೆ?
(ಕಬ್ಬಿಗನು ತೆರಳುತ್ತಾನೆ. ಒಂದು ಬಾಲಕರ ಗುಂಪು ಹಾಡುತ್ತಾ ಬರುತ್ತದೆ.)

ಬಾಲಕರು
ನಾವು ಮರುಳರು, ನಾವು ಕುಡುಕರು,
ಮರುಳುತನವೆಮ್ಮಾಟವು,
ಕಾರ್ಯವಿಲ್ಲದೆ ಬರಿದೆ ಸಂಚರಿಪಲಸಗಾರರ ಕೂಡವು.

ಕಾಲಗಗನದಿ ಹಾರಿಯಾಡುವ ಹಕ್ಕಿಗಳು ನಾವ್ ಬಾಲರು.
ಹೋಗಲೆಂದೇ ಬರುವೆವು,
ಹೋಗಿ ಮರಳೈತರುವೆವು!
ನಿತ್ಯತೆಯ ಗರ್ಭದಲಿ ಜನಿಸುವ ನಾವು ಲೀಲಾಶೀಲರು:

‘ಕರ್ಮಲೀಲೆಯು, ಲೀಲೆ ಕರ್ಮವು’ ಎಂಬುದೆಮ್ಮಯ ಧರ್ಮವು;
ಪಡೆವುದೆಮಗೇನಿಲ್ಲವು,
ಕಳೆವುದಮಗೇನಿಲ್ಲವು,
‘ಲಾಭನಷ್ಟಗಳೊಂದುಮಿಲ್ಲವು’ ಎಂಬುದೇ ವರಮರ್ಮವು.

ಹಾಡಿಯಾಡುತ ಕುಣಿದು ನಲಿವೆವು ಹಾಸ್ಯಮಾಡುತ ಕಾಲನ!
ಜವನ ಮೀಸೆಯನೆಳೆವೆವು!
ಕೋರೆಡಾಡೆಯ ಸೆಳೆವೆವು!
ಅಮೃತಪುತ್ರರು ನಾವು, ಮೃತ್ಯುವ ಲಕ್ಷವೆಮಗಿನಿತಿಲ್ಲವು!

ಮುಕ್ತಜೀವರು, ನಾವು, ಬಂಧನಲೀಲೆಯಾಡುತಲಿರುವೆವು.
ಲೀಲೆಯೆಂಬುದೆ ಮುಕ್ತಿಯೆ,
ಮರುಳತನವೇ ಶಕ್ತಿಯು;
ಹೀರಿ ಲೀಲಾಮಧುವನೆಲ್ಲರು ಮತ್ತರಾಗಿಯೆ ಬರುವೆವು.
(ಅವರೆಲ್ಲ ಹಾಡುತ್ತಾ ಹೋಗುತ್ತಾರೆ. ಜನರು ಗುಂಪುಗುಂಪಾಗಿ ಹೋಗುತ್ತಾರೆ. ಜಲಗಾರನು ಒಬ್ಬನೆ ಕುಳಿತುಕೊಳ್ಳುತ್ತಾನೆ.)

ಜಲಗಾರ
ಸದ್ದಿಲ್ಲದಿರುಳೆನಿತು ಕಣ್ಗೆಡ್ಡಮಾಗಿಹುದು!
ಬನಗಳಂ ಗಿರಿಗಳಂ ಹೊಳೆತೊರೆಗಳೆಲ್ಲಮಂ
ಚುಂಬಿಸಿಹ ಜೊನ್ನೆನಿತು ಚೆಲ್ವಾಗಿದೆ!
ಬೆಳ್ದಿಂಗಳೆಂತು ಮಲಗಿಹುದಿಳೆಯೆದೆಯ ಮೇಲೆ!
ಗಗನ ಧೇನುವ ಕೊರಳ ಗಂಗೆದೊವಲಂದದಲಿ,
ತಿಂಗಳಿನ ಪಾಲ್ಗಡಲ ಬಲ್ದೆರೆಗಳಗ್ರದಲಿ
ತೇಲುತಿಹ ನೊರೆಯುರುಳಿಯಂದದಲಿ, ಒಲಿದವನ
ಸವಿಗನಸಿನಲಿ ಸುಳಿವ ನಲ್ಲೆಯಂಚಲದಂತೆ,
ಮೆರೆಯುತಿದೆ ತಿಳಿಯಾಳದಾಗಸದಿ ಬೆಳ್ಮುಗಿಲ್‌!
ವಿಶ್ವದ ಸುಷುಪ್ತಿಯಿದು. ಕುಳಿತಲ್ಲಿ ಶಿವನಂ
ಧ್ಯಾನಿಸುವೆ. ಸದ್ದಿಲ್ಲದೇಕಾಂತದಲ್ಲಿಯೇ
ಭಕ್ತಿಲತೆ ಚಿಗುರಿ ಪರಮಾತ್ಮನಡಿಯಲರುಗಳ
ಮುಟ್ಟುವುದು. – ಲೋಕವರಿಯದು ಸಿದ್ಧರೆನಿತಿಹರು
ಜಲಗಾರರಾಗೆಂದು.
(ಹಾಡುತ್ತಾನೆ)

ದಯಾ ನಿವಾಸ ನೀನು,
ದೇವ ದೇವ ಮೈದೋರೈ;
ಸದಾ ಪಿತಾಜಿ ನೀನು,
ಬಾಲ ನಾನು ಕಾಪಾಡೈ.
ಪುರಾಣ ಆದಿ ವೇದ ಯಾಗ ದಾನ
ಮತಾಚಾರದಿ ಚಾಗಯೋಗ ಧ್ಯಾನ
ಅಕರ್ಮ ಕರ್ಮ ಧರ್ಮ
ದಾಸದಾಸ ನಾನರಿಯೆ;
ಎನ್ನಂತರಂಗ ನೀನೆ
ಎಂಬುದೊಂದೆ ಬಲ್ಲೆನೈ!

ಗಯಾ ಪೂರಿ ಕಾಶಿಯಾತ್ರೆ ಜಾತ್ರೆ

ನಾನೊಂದನೊಲ್ಲೆ; ನೀನೆ ಇಲ್ಲ ದೇವ!
ಅನಾದಿ ದೇವ ನಿನ್ನ
ಸೇವೆಯೊಂದೆ ಸಾಕೆನಗೆ!
ಎನ್ನಂತರಂಗದಲ್ಲಿ
ನಿಂತು ನೀನು ಮೈದೋರೈ!
[ಹಠಾತ್ತಾಗಿ ಶಿವನು ಜಲಗಾರನ ವೇಷವನ್ನು ಧರಿಸಿ ಮೈದೋರೊತ್ತಾನೆ.]

ನೀನಾರು ಆಕೃತಿಯೆ! ನೀನಾರು? ಯಾರು?
ಮಾನುಷವಾಗಿ ಕಂಡರೂ ಅಮಾನುಷವಾಗಿ
ತೋರುತಿಹೆ! ಮಿಣುಕುತಿಹ ತಾರೆಗಳನೇಳಿಸುವ
ಕಂಗಳಿಂದೇಕೆನ್ನ ನೋಡುತಿಹೆ ಇಂತು?
ನೀನಾರು? ನೀನಾರು ಆಕೃತಿಯೆ? (ಬೆದರುತ್ತಾನೆ.)

ಶಿವ
(ಗಂಭೀರವಾಗಿ)
ಅಂಜದಿರು,
ಸೋದರನೆ, ಅಂಜದಿರು; ನಾ ನಿನ್ನ ಬಂಧು!

ಜಲಗಾರ
ಏನು? ನೀನೆನ್ನ ಬಂಧು? ನಾನರಿಯದಿಹ ಬಂಧು!

ಶಿವ
ನಾ ನಿನ್ನ ಜಾತಿ!

ಜಲಗಾರ
ನೀನೆನ್ನ ಜಾತಿ!
ಊರ ಜಲಗಾರ ನೀನು!

ಶಿವ
ಅಂಜದಿರು, ಸೋದರನೆ! ಜಗದ ಜಲಗಾರ
ನಾನು! ಶಿವನೆಂದು ಕರೆಯುವರು ಎನ್ನ!
ಚಣಚಣಕು ಜಗದ ಪಾಪವ ನುಂಗುವನು ನಾನು!
ಪೂರ್ವದಲಿ ಕಡಲ ಕಡೆಯಲು ಹುಟ್ಟಿ ಸೃಷ್ಟಿಯಂ
ಸುಡುತಿರ್ದ ಘೋರ ಹಾಲಾಹಲವ ನುಂಗಿದಾ
ನಂಜುಗೊರಲನು ನಾನು! ಪದ್ಮನಾಭನ ನಿಲಯ
ವೈಕುಂಠವದರಿಂದ ರಮಣೀಯವಾಗಿಹುದು!
ಮೇಣೆನ್ನ ಜಲಗಾರತನದಿಂದ, ಸೊದೆಯೀಂಟಿ
ಅಮರರಮರತೆಯ ಹೊಂದಿಹರು; ವಿಶ್ವದಲಿ
ಸೌಂದರ್ಯ ಬಾಳುತಿದೆ. ತೊಳಗುತಿಹ ಚುಕ್ಕಿಗಳು,
ಬೆಳಗುತಿಹ ಚಂದಿರನು, ದಿನದಿನವು ತಳತಳಿಸಿ
ಬಾಂದಳದಿ ಸುತ್ತುತಿಹ ದಿನಮಣಿಯು, ಭೋರ್ಗರೆವ
ಕಡಲುಗಳು, ತಿಳಿಯಾಗಿ ಹರಿಯುತಿಹ ಹೊಳೆಗಳು,
ಮೆರೆಯುವ ಅರಣ್ಯಗಳು, ಎಲ್ಲವೂ, ಎಲ್ಲವೂ
ಜಲಗಾರನೊಬ್ಬನಿಗೆ ಋಣಿಯಾಗಿ ಬಾಳುತಿವೆ!
ರುದ್ರನಿಂಬರು ಎನ್ನ; ಶಿವನೆಂಬರೆನ್ನ;
ಹೇಸುವರ, ಅಂಜುವರು, ಜಲಗಾರನೆನಲು!

ಜಲಗಾರ
(ವಿನಯದಿಂದ)
ನಿನ್ನನಾ ಶಿವನೆಂದು ನಂಬುವುದದೆಂತು? ಹೇ ದೇವ,
ನಿನ್ನೀ ರೂಪಮಂ ನಾನೆಂದುಮಾವೆಡೆಯೊಳುಂ
ಕಂಡರಿಯೆ, ಕೇಳರಿಯೆ, ತಿಳಿದವರು, ಪಂಡಿತರು,
ಬೇರೊಂದು ರೀತಿಯಲಿ ಬಣ್ಣಿಸಿರುವರು ನಿನ್ನ.

ಶಿವ
ಬಿಜ್ಜೆವಳರಾ ಕವಡು ಬಣ್ಣನೆಯ ನಂಬದಿರು,
ಸೋದರನೆ. ಕರುಡನಾದವನಿನನ ಬಣ್ಣಿಸುವ
ತೆರದಿ, ಪಂಡಿತರು ಬಣ್ಣಿಪರು ಕಲ್ಪನೆಯ
ಶಿವನ, ನನ್ನ ನಿಜರೂಪಮಂ ನೋಡಲವರೆಲ್ಲ
ಹೇಸುವರು, ಬೆದರಿ ಹಿಂಜರಿಯುವರು, ಎನ್ನನೀ
ನಿಜರೂಪದಿಂದ ಕರ್ಮದಲಿ ಪೂಜಿಪನು
ನೀನೊಬ್ಬನಲ್ಲದಿನ್ನಾರು ನಾ ಕಾಣೆ!

ಜಲಗಾರ
(ಕೈಮುಗಿದು)
ರಜತಗಿರಿಗೊಡೆಯನಾಗಿಹೆಯಂತೆ; ಕೈಲಾಸ
ಪತಿಯಂತೆ; ಮಕುಟದಲಿ ಹಿಮಕರನ ತೊಟ್ಟಿರುವ
ಶಶಿಧರನು ನೀನಂತೆ, ಜಡೆಯೊಡೆವೆ ಗಂಗೆಯಾ –
ಗಿಹಳಂತೆ. ಕೊರಳಿನಲಿ ಹಾವುಗಳ ಕಟ್ಟಂತೆ.
ಹಣೆಯಲ್ಲಿ ಉರಿಗಣ್ಣನುಳ್ಳ ನೀಂ ಮುಕ್ಕಣ್ಣ –
ನಂತೆ! ಗಿರಜಾರಮಣನಂತೆ! ವಿಷಕಂಠ
ನೀನಂತೆ! ನೀಂ ಕುಬೇರನ ಮಿತ್ರನಂತೆ!
ಇಂತಿಹನು ಜಗದ ಜಲಗಾರನಹನೆಂತು?
ಇಂತಿಹನೆನ್ನ ಬಾಂಧವನೆ? ಸೋದರನೆ?

ಶಿವ
(ಮುಗುಳುನಗೆಯಿಂದಲೂ ದರ್ಪದಿಂದಲೂ)
ಸೋದರನೆ, ಶಿವನು ಶಾಸ್ತ್ರಿಗಳ ಶಿವನಲ್ಲ!
ಕಾವ್ಯಗಳ ಶಿವನಲ್ಲ! ಕವಿತೆಯಾ ಶಿವನಲ್ಲ!
ಬೆಳ್ಳಿಬೆಟ್ಟದ ಮೇಲೆ ಗಿರಿಜೆಯೊಡಗೂಡಿ
ಸರಸವಾಡುವ ರಸಿಕ ಶಿವನಲ್ಲ! ಬ್ರಹ್ಮಾಂಡ
ಒತ್ತುತಿಹ ಕಸದ ರಾಸಿಯ ಮೇಲೆ ಹತ್ತಿ,
ನಿಂತು, ನರ್ತನವೆಸಗುತಿಹ ತೋಟಿ ನಾನು!
ನಿಜಶಿವನು ಜಲಗಾರ! ನಿನ್ನ ಮುಂದಿಹನು, ನೋಡು!

ಜಲಗಾರ
ಹೇ ದೇವ, ಪಂಡಿತರದೇಕಂತು ಬಣ್ಣಿಪರು?

ಶಿವ
ಸೋದರನೆ, ಶಾಸ್ತ್ರಿಗಳ ಕಂಗಳಿಗೆ ನಾನು
ನೋಡಲು ಕೂರೂಪಿಯಾಗಿದ್ದೆ. ಅದರಿಂದ
ಚೆಲ್ವಾಂತ ತಣ್ಗದಿರನೊಡವೆ ಮಾಡಿದರೆನಗೆ!
ಅವರ ಭಾಗಕೆ ನಾನು ಪಾಪಿಯಾಗಿದ್ದೆ,
ಅದರಿಂದ ಗಂಗೆಯನು ತೊಡಿಸಿದರು ತಲೆಯಲ್ಲಿ,
ತೊಳೆದನ್ನ ಶುದ್ಧಮಾಡಲು ಎಂದು! ಅಸ್ಪೃಶ್ಯನ್
ಆಗಿದ್ದೆ! ಅದರಿಂದ ಹಣೆಗಣ್ಣ ಮುಡಿಸಿದರು,
ಸುಟ್ಟೆನ್ನ ಶುಚಿಮಾಡಲೆಂದು! ರೌದ್ರತೆಯನ್
ಈಯಲೆಂದೆನಗೆ ಉರಗಗಳ ಸುತ್ತಿದರು
ಕೊರಳಲ್ಲಿ, ಜೋಯಿಸರ ಭಾಗಕ್ಕೆ ಶಿವನು
ಮುಟ್ಟದವನಾಗಿಹನು, ಚಂದ್ರನಿಲ್ಲದೆ, ಗಂಗೆ
ಇಲ್ಲದೆಯೆ, ಹಣೆಗಣ್ಣು ಹಾವುಗಳು ಇಲ್ಲದೆಯೆ,
ಜನಿವಾರ ಬೂದಿಗಳು ಇಲ್ಲದೆಯೆ, ಶಿವಗುಡಿಗೆ
ಸೇರಿಸರು ಶಿವನಾದ ಎನ್ನ. ಅದರಿಂದ
ನಿಜವಾದ ಶಿವನು, ಜಲಗಾರ ಶಿವನು,
ಶಿವಗುಡಿಯ ಪೀಠದಲಿ ಎಂದೆಂದಿಗೂ ಇಲ್ಲ!

ಜಲಗಾರ
ಹೇ ದೇವ, ನೀನು ಮತ್ತೆಲ್ಲಿರುವೆ?

ಶಿವ
ಬೀದಿ ಗುಡಿಸುವ ಬಡವನೆದೆಯಲ್ಲಿ ನಾನಿರುವೆ!
ಉಳುತಿರುವ ಒಕ್ಕಲಿಗನೆಡೆಯಲ್ಲಿ ನಾನಿರುವೆ!
ಎಲ್ಲಿ ಹೊಲೆಯನು ನನ್ನ ಕಾರ್ಯದಲಿ ತೊಡಗಿಹನೊ
ಅಲ್ಲಿ ನಾನವನ ಪಕ್ಕದೊಳಿರುವೆ. ಕುಂಟರನು,
ಕುರುಡರನು, ದೀನರನು, ಅನಾಥರನು ಕೈಹಿಡಿದು
ಪೊರೆಯುತಿಹನೆಡೆಯಿರುವೆ. ಆ ನನ್ನ ಭಕ್ತರಿಗೆ
ನನ್ನ ನಿಜರೂಪದಿಂ ಮೈದೋರಿ ಸಲಹುವೆನು.
ನೀನೆನ್ನ ನಿಜಭಕ್ತನಾಗಿರುವೆ. ಅದಕಾಗಿ
ಕಲ್ಪನೆಯ ರೂಪವನು ತೆಗೆದೊಗೆದು ಬಂದಿಹೆನು
ನೋಡಲ್ಲಿ! ಚಂದ್ರನಂ ಬಿಸುಟಿಹೆನು ಗಗನಕ್ಕೆ!
ಗಂಗೆಯನ್ನೆಸೆದಿಹೆನು ಹಿಮಗಿರಿಗೆ! ಹಾವುಗಳ
ಪಾತಾಳಕಟ್ಟಿಹೆನು! ಹಣೆಗಣ್ಣ ಹಂಚಿಹೆನು
ನೇಸರ್ ಅರಿಲ್ಗಳಿಗೆ! ಭಯಂಕರದ ಮಸಣದಲಿ
ಬಿದ್ದಿಹುದು ಜೋಯಿಸರು ಹಚ್ಚಿದಾ ಎನ್ನ
ಮೈಬೂದಿ! ಚಟ್ಟಗಳ ಕಟ್ಟುತಿದೆ ಅವರೆನಗೆ
ತೊಡಿಸಿದಾ ಯಜ್ಞೋಪವಿತ! ಅವರಿತ್ತ
ಪೊರಕೆಯಂದದ ಶೂಲ ಗುಡಿಸುತಿದೆ ಬ್ರಹ್ಮಗಳ
ಬೀದಿಯನು! ಶಾಸ್ತ್ರಿಗಳು ಶಿವಗಿತ್ತ ದಾನಗಳು
ತೊಲಗೆ, ಉಳಿಯುವನು ಜಗದ ಜಲಗಾರ!
ಊರ ತೋಟಿಯು ನೀನು; ಜಗದ ತೋಟಿಯು ನಾನು!
ಬಾ ಎನ್ನ ಸೋದರನೆ. ನೀನೆನ್ನ ನಿಜಭಕ್ತ!
ನಿನ್ನದೇ ಶಿವಭಕ್ತಿ! ನೀನೇ ಶಿವಭಕ್ತ!
ನೀನೆ ನಾನಾಗಿಹೆನು! ನಾನೆ ನೀನಾಗಿರುವೆ!
ಶಿವ ನೀನು! ಶಿವ ನೀನು!

ಜಲಗಾರ
(ಭಾವವಶನಾಗಿ)
ಶಿವ ನಾನು! ಶಿವ ನಾನು!

[ಮುಂಬರಿದು ಶಿವನ ತೆಕ್ಕೆಯಳಗಾಗುತ್ತಾನೆ]

ಪರದೆ