ಜಲಗಾರ ಸಮುದಾಯದ ಚಾರಿತ್ರಿಕ ಹಾಗೂ ಸಾಮಾಜಿಕ ಹಿನ್ನೋಟ

ಭಾರತ ಅಸಂಖ್ಯಾತ ಜಾತಿ ಸಮೂಹಗಳ ಸಂಕೀರ್ಣ ಸಮಾಜ. ಮನುಷ್ಯನನ್ನು ಮನುಷ್ಯನ್ನಾಗಿ ಕಾಣಲಾರದಷ್ಟರಮಟ್ಟಿಗೆ ಇಲ್ಲಿನ ಶ್ರೇಣೀಕೃತಜಾತಿ ವ್ಯವಸ್ಥೆ ಅಮಾನವೀಯವಾಗಿದೆ. ಜಾತಿಯ ಕಾರಣಕ್ಕಾಗಿ ಸಹ-ಮಾನವನನ್ನು ಪ್ರಾಣಿಗಿಂತಲೂ ಕೀಳಾಗಿ ನಡೆಸಿಕೊಳ್ಳುವ ವಿಕಾರತೆ ಇಲ್ಲಿದೆ. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿಯ ಕಾರಣಕ್ಕಾಗಿ ನಡೆದಿರಬಹುದಾದ; ಇಂದಿಗೂ ನಡೆಯುತ್ತಿರುವ ಕೊಲೆ, ಸುಲಿಗೆ, ಅತ್ಯಾಚಾರ, ಅಪಮಾನ, ಬಹಿಷ್ಕಾರಗಳು ಬೇರಾವುದೇ ಕಾರಣಗಳಿಗೂ ನಡೆದಿಲ್ಲವೆಂದೇ ಹೇಳಬಹುದು. ಅಸ್ಪೃಶ್ಯರೆಂಬ ಕಾರಣಕ್ಕಾಗಿ ಬಹಸಂಖ್ಯಾತ ಶ್ರಮ-ಸಮುದಾಯವನ್ನೇ ಸಾರ್ವಜನಿಕ ಕೆರೆ, ಬಾವಿ ದೇವಸ್ಥಾನ, ಊರು-ಕೇರಿಗಳಿಂದ ಬಹಿಷ್ಕರಿಸಲಾಗಿದೆ. ಹಸಿವು-ಬಡತನಗಳಿಗಿಂತಲೂ ಜಾತೀಯತೆಯ ಕ್ರೌರ್ಯ ಭೀಕರವಾದುದು ಎಂಬುದು ಈಗಾಗಲೇ ಸಾಬೀತವಾಗಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕಂಬಾಲಪಲ್ಲಿ ದುರಂತ, ಹಂಗರಹಳ್ಳಿ ಜೀತಪ್ರಕರಣ, ಬೆಂಡಿಗೇರಿ ಪ್ರಕರಣ, ಬದನವಾಳು ದುರಂತ, ಬಸವನಬಾಗೇವಾಡಿ ಬಳಿಯ ಕಡಕೊಳ ಗ್ರಾಮದ ಕೆರೆ ಪ್ರಕರಣಗಳು ಇದಕ್ಕೆ ಜೀವಂತ ಸಾಕ್ಷಿಯಾಗಿವೆ.

ಜಾತ್ಯಾತೀತ ರಾಷ್ಟ್ರವೆಂದು ಬಿಂಬಿಸಿಕೊಳ್ಳುವ ಭಾರತದ ಪ್ರಜಾಪ್ರಭುತ್ವಕ್ಕೆ ’ಜಾತಿ’ ಒಂದು ಸೋಂಕಾಗಿದೆ. ಒಬ್ಬ ವ್ಯಕ್ತಿಯ ಭಾಷೆಯ ಉಚ್ಛರಣೆಯ ಮೂಲಕವೆ ಆತನ ಜಾತಿಯನ್ನು ಗುರುತಿಸುವಷ್ಟರ ಮಟ್ಟಿಗೆ ಜಾತೀಯತೆ ಸಂಕೀರ್ಣವಾಗಿದೆ. ವೃತ್ತಿಗಳು ಕೂಡ ಜಾತಿಗಳಾಗಿ ಪರಿಣಮಿಸಿರುವುದು ಈ ದೇಶದ ದೊಡ್ಡ ದುರಂತ. ವೃತ್ತಿಗಳನ್ನು ಶ್ರೇಷ್ಠ ಹಾಗೂ ಕನಷ್ಠವೆಂದು ವಿಂಗಡಿಸಲಾಗಿದೆ. ಕನಿಷ್ಠ ವೃತ್ತಿ ಮಾಡುವವರು ಕೀಳು ಜಾತಿಯವರು ಎಂಬ ಸಾಮಾಜಿಕ ಒಪ್ಪಿತ ನಿಯಮಗಳನ್ನು ರೂಪಿಸಿ ಶತಮಾನಗಳಿಂದಲೂ ಇದನ್ನು ಕಾಪಾಡಿಕೊಂಡು ಬರಲಾಗಿದೆ. ಹಿಂದೂಧರ್ಮ ಕೂಡ ಇದನ್ನು ಜೀವಂತವಾಗಿ ಪೋಷಿಸಿಕೊಂಡು ಬಂದಿದೆ. ಕನಿಷ್ಠ ಕಾಯಕವನ್ನು ಮಾಡುತ್ತ; ಕನಿಷ್ಠ ವೃತ್ತಿಯ ಕಾರಣಕ್ಕಾಗಿ ಸವರ್ಣೀಯರಿಂದ ಕೀಳು ಕುಲದವರು, ಕೀಳು ಜಾತಿಯವರೆಂದು ತಿರಸ್ಕರಿಸಲ್ಪಟ್ಟು ನಿಕೃಷ್ಟವಾದ. ಅವಮಾನಕರವಾದ ಸ್ಥಿತಿಯಲ್ಲಿ ಬದುಕುತ್ತಿರುವ ಸಮುದಾಯಗಳಲ್ಲಿ ’ಜಲಗಾರ’ ಜನಾಂಗವೂ ಒಂದು. “ಅಸ್ಫೃಶ್ಯ-ರಲ್ಲಿ ವೃತ್ತಿಗನುಸಾರವಾಗಿ ಹಲವು ಉಪಜಾತಿಗಳುಂಟು. ಅವುಗಳಲ್ಲಿ ಮುಖ್ಯವಾದುದು, ದೇಶಾದ್ಯಂತ ವ್ಯಾಪಿಸಿರುವ ಉಪಜಾತಿ ಎಂದರೆ ಭಂಗಿಗಳು ಅಥವಾ ಝಡಮಾಲಿಗಳು ಅಥವಾ ಚಮ್ಮಾರರು. ಮಲಮೂತ್ರ ಹೊರುವುದು, ಕಸಗುಡಿಸುವುದು, ಚರ್ಮ ಹದ ಮಾಡುವುದು ಇವರ ಮುಖ್ಯ ಕಸುಬು. ವೃತ್ತಿಗಳಿಂದಾಗಿ ಉಪಜಾತಿಗಳಲ್ಲಿ ಮೇಲು ನೋಟಕ್ಕೆ ಅಲ್ಪ ಸ್ವಲ್ಪ ವ್ಯತ್ಯಾಸ ಕಂಡರೂ ಭಾರತದ ಅಸ್ಪೃಶ್ಯರೆಲ್ಲರ ಕಥೆ, ನೋವು, ಗೋಳು, ಬಾಧೆ, ಶೋಷಣೆ ಒಂದೇ ಆಗಿದೆ. ಒಂದೇ ರೀತಿಯ ದೌರ್ಜನ್ಯ, ಅತ್ಯಾಚಾರ, ದಬ್ಬಾಳಿಕೆಗೆ ಬಲಿ ಯಾಗಿದ್ದಾರೆ”.

[1]

ಜಲಗಾರರನ್ನು ಭಂಗಿಗಳು, ಜಾಡಮಾಲಿಗಳು, ಹಲಾಲಖೋರರು, ಪೌರಕಾರ್ಮಿಕರು ಎಂಬ ಹಲವು ಹೆಸರುಗಳಿಂದ ಕೆರಯುತ್ತಾರೆ. ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ಹೊರತಂದಿರುವ ’ಕನ್ನಡ ನಿಘಂಟು’ (೨ನೇ ಸಂಪುಟ) ವಿನಲ್ಲಿ ದಾಖಲಿಸಿರುವ ಹಾಗೆ ’ಭಂಗಿ’ ಎಂದರೆ :”ಬೀದಿಯ ಕಸ ಗುಡಿಸುವ ವೃತ್ತಿಯನು; ಪಾಯಖಾನೆಗಳಲ್ಲಿಯ ಮಲವನ್ನು ತೆಗೆದು ಸ್ವಚ್ಛ ಮಾಡುವವನು” ಎಂದರ್ಥ. ಪಂಡಿತ ಚೆ.ಎ. ಕವಲಿ ಅವರು ಸಂಪಾದಿಸಿರುವ ’ಕಸ್ತೂರಿ ಕೋಶ’ದಲ್ಲಿ ಕೊಟ್ಟಿರುವ ಹಾಗೆ: “ಜಲಗಾರ ಎಂದರೆ, ಧೂಳು-ಬೂದಿಗಳಿಂದ ಬಂಗಾರವನ್ನು ತೆಗೆಯುವವ” ಎಂಬುದಾಗಿದೆ. ಭಂಗಿ ಪದ ಹಿಂದಿ, ಮರಾಠಿಯಿಂದ ಕನ್ನಡಕ್ಕೆ ಬಂದುದಾಗಿದೆ. ಇಂಗ್ಲೀಷಿನಲ್ಲಿ ‘Sweeper’ ಎನ್ನುವ ಅರ್ಥವಿದೆ.

’ಜಲಗಾರ’ ಎಂಬ ಕೀಳು ಜಾತಿ ಹಾಗೂ ವೃತ್ತಿಯ ಮೂಲ ಇರುವುದು ಬ್ರಾಹ್ಮಣಶಾಹಿ ಶ್ರೇಣಿಕೃತ ವರ್ಣಾಶ್ರಮ ಜಾತಿ ಪದ್ಧತಿಯಲ್ಲಿ. ಮನುಧರ್ಮದಲ್ಲಿ ಇದಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳು ಸಿಗುತ್ತವೆ. ನಾಲ್ಕು ವರ್ಣಗಳಲ್ಲಿ ತಮ್ಮದು ಶ್ರೇಷ್ಠತಮ ವರ್ಣವೆಂದು ಕರೆದುಕೊಂಡಿರುವ ಬ್ರಾಹ್ಮಣರು ತಮ್ಮ ಬೀದಿ, ಚರಂಡಿ, ಪಾಯಖಾನೆಗಳನ್ನು ಸ್ವಚ್ಛಗೊಳಿಸಲು ಧರ್ಮ, ಶಾಸ್ತ್ರ, ಪುರಾಣಗಳ ಮುಖವಾಡ ಧರಿಸಿ ಅಧಿಕಾರಯುತವಾಗಿ ನೇಮಿಸಿಕೊಂಡ ವರ್ಗವೇ ಇಂದಿನ ಜಲಗಾರ ಜನಾಂಗ. ಇದಕ್ಕೆ ಸಂಬಂಧಿಸಿದಂತೆ ನಮ್ಮ ದೇಶದ ಚರಿತ್ರೆಯಲ್ಲಿ ಸಾಕಷ್ಟು ಪುರಾವೆಗಳಿವೆ. “ಆರ‍್ಯರು ಈ ಪವಿತ್ರ ದೇಶದ ಮೇಲೆ ಧಾಳಿಮಾಡಿ ನನ್ನನ್ನು ಗುಲಾಮನನ್ನಾಗಿ ಮಾಡಿಕೊಂಡು ನನ್ನ ತಲೆಯ ಮೇಲಿದ್ದ ಕಿರೀಟ ಇಳಿಸಿ, ಮಲಮೂತ್ರಗಳ ಮಕ್ಕರಿ ಹೊರಿಸಿದಾಗಿನಿಂದ ನನ್ನ ಕಥೆ ಪ್ರಾರಂಭವಾಗುತ್ತದೆ” (’ಭಂಗಿಜನಕಥಾ’-ಪು.೧೫) ಈ ಹಿಂದೆ ಆಳುವ ವರ್ಗಗಳಾಗಿದ್ದು, ಪ್ರಜಾಸತ್ತಾತ್ಮಕವಾಗಿ ಬದುಕುತ್ತಿದ್ದ ಈ ನೆಲದ ಮೂಲ ನಿವಾಸಿಗಳಾದ ಬಹುಸಂಖ್ಯಾತ ಶ್ರಮ ಸಮುದಾಯಗಳನ್ನು ಹೇಗೆ ಗುಲಾಮಸ್ಥಿಗೆ ಒತ್ತಾಯಪೂರ್ವಕವಾಗಿ ದೂಡಲಾಗಿದೆ ಎಂಬುದಕ್ಕೆ ಇದು ಸಾಕ್ಷಿ.

ನಮ್ಮ ದೇಶದ ಉದ್ದಗಲಕ್ಕೂ ಮಲಬಾಚುವ ಮತ್ತು ತಲೆಯ ಮೇಲೆ ಮಲಹೊರುವ ಅಸಹ್ಯಕರ ವೃತ್ತಿಯನ್ನು ಮಾಡುತ್ತಾ, ಕೊಳಚೆಯಲ್ಲೆ ಕೊಳೆತು ಹೋಗುತ್ತಿರುವ ಜಲಗಾರರನ್ನು “ಚಾಂಡಾಲ, ಪುಕಾಸಾ, ಮದರ‍್, ಧೇಡ್, ಮಾದರಿ, ಮಾದಿಗ, ಪಂಚಮ, ಜಾಂಬವುಲು, ಮಾತಂಗಿ, ವಾಲ್ಮೀಕಿ, ಚುಹಾರ‍್, ಬನಸ್‌ಪೋರ‍್, ಧನುಕ್, ಹೇಲ್, ರಾವತ್, ಲಾಲ್‌ಬೇಗಿ, ಧೋಮ್, ಖಾಟಿಕ್, ಹಲಾಲ್‌ಕೋರ‍್, ಮುಸಹರ‍್, ಮೆಹ್ತಾರ‍್, ಲಾಲ್‌ಬೇಗಿ, ಡೋಮ್,ಮಾಲಿ, ಚಮ್ಮಾರ, ಮೋಚಿ”[2] ಇತ್ಯಾದಿ ಹೆಸರುಗಳಿಂದ ಗುರುತಿಸಲಾಗುತ್ತದೆ.

ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಜಲಗಾರ ಸಮುದಾಯದ ಬದುಕಿನ ಬವಣೆ ಹಾಗೂ ಅವರು ಅನುಭವಿಸುತ್ತಿದ್ದ ಸಾಮಾಜಿಕ ಸಂಕಷ್ಟಗಳನ್ನು ವಸ್ತುವನ್ನಾಗಿಸಿಕೊಂಡು ಓದುಗರ ಪ್ರಜ್ಞೆಯಲ್ಲಿ ಸಂಚಲನವುಂಟುಮಾಡುವ ಹಾಗೆ ಈ ಜನಾಂಗದ ಬಗೆಗೆ ಬರೆದ ಮೊಟ್ಟಮೊದಲ ಸಾಹಿತಿ ರಾಷ್ಟ್ರಕವಿ ಕುವೆಂಪು ಅವರು. ೧೯೨೮ರಲ್ಲಿ ತಾವು ಬರೆದ “ಜಲಗಾರ” ನಾಟಕದಲ್ಲಿ ಜಲಗಾರ ಸಮುದಾಯದ ಮುಖೇನ ಒಟ್ಟು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನೆ ಪ್ರಶ್ನೆಗೊಳಪಡಿಸುತ್ತಾ ಹೋಗುತ್ತಾರೆ. ಶಿವನೊಟ್ಟಿಗೆ ಜಲಗಾರನನ್ನು ಸಮೀಕರಿಸಿ ನೋಡಿರುವ ಬಗೆಯೆ ಒಂದು ರೀತಿಯಲ್ಲಿ ಪ್ರತಿಭಟನಾತ್ಮಕವಾಗಿದೆ. ಬಸವಣ್ಣನವರ “ಕಾಯಕವೇ ಕೈಲಾಸ”ವೆಂಬ ತಾತ್ವಿಕ ಪರಿಕಲ್ಪನೆಯ ನೆಲೆಗಟ್ಟಿನ ಮೇಲೆ ಕುವೆಂಪು ಅವರು ಜಲಗಾರರ ವೃತ್ತಿ ಬದುಕನ್ನು ವಿವೇಕಯುಕ್ತ ವಿವೇಚನೆಗೆ ಒಳಪಡಿಸಿರುವುದನ್ನು ಕಾಣಬಹುದು. ನಾಟಕದಲ್ಲಿ ಬರುವ ಜಲಗಾರ ಪಾತ್ರವು ಹೇಳುವ:

“ಶಿವಗುಡಿಯ ಶಿವನು ಜೋಯಿಸರ ಶಿವನಂತೆ;
ನನ್ನ ಶಿವನೀ ಮಣ್ಣಿನಲ್ಲಿಹನು. ನನ್ನ ಶಿವ
ಕೊಳೆತ ಕಸದೊಳಗಿಹನು” (’ಜಲಗಾರ’:ಪು. ೫:೧೯೯೭)

-ಎಂಬ ಮಾತುಗಳು ಜಲಗಾರ ಸಮುದಾಯದಲ್ಲಿ ಜೀವಂತವಾಗಿರುವ ಕಾಯಕನಿಷ್ಠೆಯನ್ನು ಪ್ರಮಾಣಿಕರಿಸುತ್ತವೆ. ವೃತ್ತಿಗೌರವದ ವಿವೇಕವನ್ನು ಸಾರುತ್ತವೆ. ಈ ಬಗೆಯ ನೆಲಸಂಸ್ಕೃತಿಯ ಸಂವೇದನೆಗಳನ್ನು ತರಲು ಸೂಕ್ಷ್ಮಮತಿಯಾಗಿರುವ ಸಮಾಜಮುಖಿ ಲೇಖಕನಿಂದ ಮಾತ್ರ ಸಾಧ್ಯ. ಈ ನಾಟಕದಲ್ಲಿ ಕುವೆಂಪುರವರು ದೈವತ್ವವನ್ನು ಮನುಷ್ಯತ್ವಕ್ಕಿಳಿಸುವ; ಮನುಷ್ಯತ್ವವನ್ನು ದೈವತ್ವಕ್ಕೇರಿಸಿರು ರೀತಿ ವೈಚಾರಿಕವಾಗಿದೆ. ನಾಟಕದಲ್ಲಿ ಪರಶಿವನ ಪಾತ್ರ:

“ನಾನೊಬ್ಬ ಜಲಗಾರ
ಅಂಜದಿರು ಸೋದರನೆ! ಜಗದ ಜಲಗಾರ
ನಾನು! ಶಿವನೆಂದು ಕರೆಯುವರು ಎನ್ನ!
ಚಣಚಣಕು ಜಗದ ಪಾಪವ ನುಂಗುವನು ನಾನು! (ಪು.೨೩)
“………………ಬ್ರಹ್ಮಾಂಡ
ಒತ್ತುತಿಹ ಕಸದ ರಾಸಿಯ ಮೇಲೆ ಹತ್ತಿ,
ನಿಂತು, ನರ್ತನವೆಸಗುತಿಹ ತೋಟಿ ನಾಮ!
ನಿಜಶಿವನು ಜಲಗಾರ!……….”

-ಎಂದು ಹೇಳುವ ಮುಖೇನ ಶ್ರಮಸಂಸ್ಕೃತಿಯ ಪ್ರತಿಪಾದಕನಾಗಿ ಶಿವ ತನ್ನನ್ನು ತಾನು ಗುರುತಿಸಕೊಳ್ಳುವಲ್ಲಿ ಹೊಸತನದ ಆಲೋಚನೆ ಇದೆ. ’ಜಲಗಾರ’ ನಾಟಕದ ವಾಚಕ ಗೋಷ್ಠಿಯಲ್ಲಿ ತಮಗಾದ ಅನುಭವವನ್ನು ಕುವೆಂಪು ಅವರು ತಮ್ಮ “ನೆನಪಿನ ದೋಣಿಯಲ್ಲಿ” ಹೀಗೆ ದಾಖಲಿಸಿದ್ದಾರೆ: “ನಾಟಕ ವಾಚನ ನಡೆಯಿತು. ನಾನು ತಕ್ಕಮಟ್ಟಿನ ಆವೇಶದಿಂದಲೇ ಅಪ್ರಾಸಛಂದಸ್ಸಿನ ಹೊಸ ಶೈಲಿಯಲ್ಲಿ ಅದನ್ನು ಧ್ವನಿಯ ಮಟ್ಟಿಗಾದರೂ ಅಭಿನಯವಪೂರ್ವಕವಾಗುವಂತೆ ವಾಚಿಸಿದೆ. ಶಿವನು ತನ್ನ ಸಂಪ್ರದಾಯದ ವೇಷವನ್ನೆಲ್ಲ ಕಿತ್ತುಬಿಸುಟು ಜಗದ ಜಲಗಾರನ ವೇಷದಿಂದ ಪ್ರತ್ಯಕ್ಷನಾದುದೂ, ಜಲಗಾರನ ಕರ‍್ಮವೇ ತನಗೆ ಮಹತ್ತಾದ ಪೂಜೆಯಾಗಿದೆ ಎಂದು ಲೋಕಕ್ಕೆ ಘೋಷಿಸಿದುದೂ ಸದಸ್ಯವರ್ಗಕ್ಕೆ ಪುಲಕಕಾರಿಯಾಗಿತ್ತು. ಆದರೆ ಆ ಸಂಪ್ರದಾಯದ ಸದ್‌ಗೃಹಸ್ಥ ಶಿವಭಕ್ತನಿಗೆ ಅದೊಂದೂ ಅರ್ಥವಾಗಲಿಲ್ಲ, ಹಿಡಿಸಲೂ ಇಲ್ಲ. ನಾಟಕದ ಹೊಸ ರೀತಿಯ ಕಲಾ ಹೃದಯ ಪ್ರವೇಶವೂ ಅವರಿಂದ ಸಾಧ್ಯವಾಗಲಿಲ್ಲ. ಶಿವನಿಂದ ಅಲಂಕಾರಗಳನ್ನೆಲ್ಲ ಕಿತ್ತುಕೊಂಡು ಅವನನ್ನು ಒಬ್ಬ ಝಾಡಮಾಲಿಯನ್ನಾಗಿ ಮಾಡಿದ್ದು ಆತನ ಸಂಪ್ರಾದಯ ಭಕ್ತಿಗೆ ಮಹಾ ಅಪಚಾರವಾಗಿ ತೋರಿ ಆತನ ಮನದಲ್ಲಿ ತಡೆಯಲಾರದ ಉಗ್ರಕೋಪ ಸಿಡಿಯುತ್ತಿತ್ತು. ವಾಚನ ಮುಗಿದು ಎಲ್ಲರೂ ಮೆಚ್ಚುಗೆಯ ಮನೋಧರ‍್ಮವನ್ನು ಪ್ರಕಟಿಸುತ್ತಾ ಎದ್ದು ಹೋಗುತೊಡಗಿರಲು ಈ ಶಿವಭಕ್ತ ತಟಕ್ಕನೆ ಎದ್ದು ನಿಂತು ನನ್ನ ಕಡೆಗೆ ಕೈದೋರುತ್ತಾ ಭಯಂಕರವಾಗಿ “ಶಿವದ್ರೋಹಿ! ಶಿವದ್ರೋಹಿ!” ಎಂದು ಅರ್ಭಟಿಸಿ ಶಿವನಿಂದೆಯಾದಲ್ಲಿ ನಿಲ್ಲಬಾರದು ಎನ್ನುತ್ತಾ ಸಭಾತ್ಯಾಗ ಮಾಡುವವನಂತೆ ರಭಸದಿಂದ ಹೊರಗೆ ನುಗ್ಗಿ ಹೊರಟೇಹೋದನು” (“ನೆನಪಿನದೋಣಿಯಲ್ಲಿ”: ಪು.೮೩೯: ೧೯೯೮) ಜಲಗಾರ ನಾಟಕವನ್ನು ಬರೆದು ವಾಚಿಸಿದ ಮಾತ್ರಕ್ಕೇ ಕುವೆಂಪುರವರು ಈ ಬಗೆಯ ತಿರಸ್ಕಾರಕ್ಕೆ ಒಳಗಾಗಿದ್ದಾರೆ ಎಂದರೆ, ಇನ್ನು ಸ್ವತಃ ಜಲಗಾರ ಸಮುದಾಯ ಶತಮಾನಗಳಿಂದ ಅನುಭವಿಸುತ್ತಾ ಬರುತ್ತಿರುವ ಸಾಮಾಜಿಕ ಅಪಮಾನಗಳು ಕಲ್ಪಾನತೀತವಾದವು.

ಭಗವಾನ್‌ದಾಸ್ ತಮ್ಮ ’ಭಂಗಿಜನಕಥಾ’ ಪುಸ್ತಕದಲ್ಲಿ ದಾಖಲಿಸಿರುವ ಹಾಗೆ “ಉತ್ತರಭಾರತದಲ್ಲಿ ಜಲಗಾರರನ್ನು “ಜಮಾದಾರ‍್” ಎನ್ನುವ ಹೆಸರಿನಿಂದ ಕರೆದು ಅಪಹಾಸ್ಯ ಮಾಡಲಾಗುತ್ತಿತ್ತು. ಅಕ್ಬರ‍್ ಚಕ್ರವರ್ತಿಯ ಆಡಳಿತ ಕಾಲದಲ್ಲಿ ಇವರನ್ನು “ಖಾಕ್ ರೋಬ್” ಎಂಬುದಾಗಿ ಕರೆಯಲಾಗುತ್ತಿತ್ತು. “ಕಾಖ್‌ರೋಬ್‌” ಎಂದರೆ ’ಕಸಗುಡಿಸುವವನು’ ಎಂದರ್ಥ. ಶ್ಮರಿಕರನ್ನು ’ಕಾಖ್‌ರೋಬ್’ ಎಂಬುದಾಗಿ ಕರೆಯುವದನ್ನು ಇಚ್ಛಿಸದ ಅಕ್ಬರ‍್, ’ಪರಿಶ್ರಮ ಮಾಡಿ ಬದುಕವವರು’ ಎಂಬುದಾಗಿ ಕರೆಯುವುದನ್ನು ಇಚ್ಛಿಸದ ಅಕ್ಬರ‍್, ’ಪರಿಶ್ರಮ ಮಾಡಿ ಬದುಕುವವರು’ ಎಂಬ ಅರ್ಥದ ’ಹಲಾಲ್ ಖೋರ‍್’ ಎಂಬ ಹೆಸರಿನಿಂದ ಕರೆಯಲು ಆಜ್ಞೆ ಮಾಡಿದನಂತೆ”.

ಇದರ ಜೊತೆಗೆ ’ಧೂಳು ಎಬ್ಬಿಸುವವನು ಎಂಬ ಅರ್ಥದ “ಆಬ್‌ಕಶ್‌” ಎಂಬ ಪದ ಬಳಸಿದನೆಂಬುದಾಗಿ ತಿಳಿದುಬರುತ್ತದೆ. ಹಿಂದೀ ಭಾಷೆಯನ್ನಾಡುವ ಪ್ರಾಂತ್ಯಗಳಲ್ಲಿ ಇವರನ್ನು “ಭಂಗಿ”ಗಳೆಂದು ಕರೆಯಲಾಗುತ್ತದೆ. ಡಾ. ಸಿದ್ಧಲಿಂಗಯ್ಯ ಅವರು ಹೇಳುವ ಹಾಗೆ: “ಪೌರಕಾರ್ಮಿಕರನ್ನು ’ಭಂಗಿ’ಗಳೆಂದು ಕರೆಯುತ್ತಾರೆ. ನಮ್ಮ ದೇಶದಲ್ಲಿ ಭಂಗಿಗಳು ಎನ್ನುವ ಪದ ಹೇಗೆ ಬಂತು ಎಂದರೆ,ಸಮಾಜದ ನಿಷೇಧಗಳನ್ನು ಯಾರು ಭಂಗ ಮಾಡಿದರೋ ಸಮಾಜದ ನಿಷೇಧಗಳ ಬಗ್ಗೆಯಾರು ದಂಗೆ ಎದ್ದರೋ ಅವರನ್ನು ಭಂಗಿಗಳೆಂದು ಕರೆದರು” (“ಡಾ.ಸಿದ್ದಲಿಂಗಯ್ಯನವರ ಸದನದ ಭಾಷಣಗಳು” ಸಂ: ದೊಡ್ಡ ಹುಲ್ಲೂರು ರುಕ್ಕೋಜಿ: “ಪೌರಕಾರ್ಮಿಕರ ದುರಂತ”-ಡಾ. ಸಿದ್ಧಲಿಂಗಯ್ಯ :ಪು. ೨೦೫: ಅಂಕಿತ ಪುಸ್ತಕ ಪ್ರಕಾಶನ, ಬೆಂಗಳೂರು-೨೦೦೪) ವೇದಗಳಲ್ಲಿಯೂ ಇವರನ್ನು ’ಅನಾರ‍್ಯರು, ದಾಸರು, ನಾಗರು’ ಎಂಬ ಪದಗಳಿಂದ ಕರೆದು ದೂಷಿಸಲಾಗಿದೆ. ರೋಮ್ ಹಾಗೂ ಗ್ರೀಸ್ ದೇಶಗಳಲ್ಲಿ ಈ ಬಗೆಯ ಹೀನ ಕಾರ್ಯಗಳನ್ನು ಮಾಡುತ್ತ ಗುಲಾಮರಾಗಿ ಬದುಕುತ್ತಿದ್ದವರನ್ನು “ಗ್ಲೇಡಿಯೇಟರ‍್ಸ್‌” ಎಂಬುದಾಗಿ ಸಂಬೋಧಿಸಲಾಗುತ್ತಿತ್ತು.

ಭಾರತದ ಮಟ್ಟಿಗೆ ಹೇಳುವುದಾದರೆ ಬ್ರಾಹ್ಮಣಶಾಹಿಯ ಹುನ್ನಾರದಿಂದಾಗಿ ಈ ನೆಲಸ ನಿಜವಾದ ಮೂಲ ನಿವಾಸಿಗಳು ಸ್ವಾಭಿಮಾನವನ್ನು ಕಳೆದುಕೊಂಡು ನಿರಭೀಮಾನಿಗಳಾಗುವ; ಸ್ವಾವಲಂಬನೆಯುನ್ನು ಕಳೆದುಕೊಂಡು ಪರಾವಲಂಬಿಗಳಾಗುವ; ಅಧಿಕಾರ ಕಳೆದುಕೊಂಡು, ಗುಲಾಮರಾಗುವ; ಊರ ಒಳಗಿದ್ದವರು, ಊರ ಹೊರಗೆ ಅಸಹ್ಯಕರ ಸ್ಥಳಗಳಲ್ಲಿ ಬದುಕುವ ಅನಿವಾರ‍್ಯತೆ, ಚಾಣಾಕ್ಷ ಬುದ್ಧಿಯ ಕುತಂತ್ರದಿಂದ ನಿರ್ಮಾಣವಾಯಿತು. “ವ್ಯಾಪಾರ ಮಾಡಲು ಸ್ಥಿರವಾಗಿ ಒಂದು ಕಡೆ ನೆಲೆಸುವುದು ಅಗತ್ಯ. ನಾನು ಊರಾಚೆ ನೆಲೆಸಿದ್ದೆ. ಯಾವುದಾದರೂ ಗೌರವಯುತ ಕಸುಬು ಕೈಗೊಳ್ಳಲು ಸಿದ್ಧನಾಗಿದ್ದೆ. ಆದರೆ ಭೂಮಿ ಬೇರೆಯವರ ಪಾಲಾಗಿತ್ತು. ನಾನು ಯಾವುದೇ ಕಸುಬು ಮಾಡದಂತೆ ನಿಷೇಧಿಸಲಾಗಿತ್ತು. ಮನೆಗಳಲ್ಲಿ ಕೆಲಸಕಾರ‍್ಯಗಳನ್ನು ನನ್ನಿಂದ ಮಾಡಿಸುವುದು ಅಪಕಾರವೆಂದು ಅದನ್ನು ನಿರಾಕರಿಸಲಾಗಿತ್ತು. ಹೀಗೆ ನಾನು ಜಾತಿಹೀನ, ಗೃಹಹೀನ, ಉದ್ಯೋಗಹೀನ, ಆಸ್ತಿಹೀನನಾಗಿದ್ದೆ. ಗ್ರಾಮ ನಗರಗಳ ಕಾವಲು ನನ್ನ ಪಾಲಿಗೆ ಬಂದಿತು. ಸತ್ತ ಪ್ರಾಣಿಗಳನ್ನು ಊರಿನ ಎಲ್ಲಾ ತೆರನಾದ ಹೊಲಸನ್ನು, ಕಸಕಡ್ಡಿಗಳನ್ನು ಹೊತ್ತು ಊರಾಚೆ ಎಸೆಯುವುದು,ಹೊಲಗಳಲ್ಲಿ ಬಿಟ್ಟಿಯಾಗಿ ದುಡಿಯುವು, ಪರಸ್ಪರ ಸುದ್ದಿ ಮುಟ್ಟಿಸುವುದು, ಹೀನ ನೀಚ ಕೆಲಸಗಳನ್ನು ಬೇರೆ ಯಾರೂ ಮಾಡದಿದ್ದಲ್ಲಿ ನಾನೇ ಮಾಡುವುದು ಇತ್ಯಾದಿ ಕ್ಷುಲ್ಲಕ ಕೆಲಸಗಳನ್ನು ಒಪ್ಪಿಸಲಾಯಿತು. ಜೊತೆಗೆ ಶತಶತಮಾನಗಳಿಂದ ಇಂದಿಗೂ ನಾನೇ ಮಾಡುವಂತೆ ಮಾಡಲಾಗಿದೆ.

ಸತ್ತ ಪ್ರಾಣಿಗಳನ್ನು ಎಳೆದುಕೊಂಡು ಹೋಗಿ ಚರ್ಮ ಸುಲಿಯುತ್ತಿದ್ದೆ. ಹೆಣಗಳನ್ನು ಸುಡಲು ಸೌದೆ ಸರಬರಾಜು ಮಾಡುತ್ತಿದ್ದೆ. ಸ್ಮಶಾನದಲ್ಲಿರುತ್ತಿದ್ದೆ, ಹೆಣಗಳಿಗೆ ಸುತ್ತುತ್ತಿದ್ದ ಬಟ್ಟೆಯನ್ನು ಬಿಚ್ಚಿ ಬಳಸುತ್ತಿದ್ದೆ. ಇದರಿಂದ ಇಡೀ ಸಮಾಜದ ದೃಷ್ಟಿಯಲ್ಲಿ ಅತ್ಯಂತ ತುಚ್ಛನಾಗಿ ಬಿಟ್ಟೆ, ಹಿಂದಿಗಿಂತಲೂ ಅಧಿಕ ತಿರಸ್ಕಾರ, ಅನಿವಾರ‍್ಯವಾಗಿ ಸತ್ತ ಪ್ರಾಣಿಗಳ ಮಾಂಸವನ್ನು ತಿಂದದ್ದೂ ಆಯಿತು. ಅವುಗಳ ಕೊಬ್ಬಿನಿಂದ ಮನೆಯ ದೀಪವನ್ನು ಬೆಳಗಿಸಿದೆ. ಚರ್ಮದಿಂದ ಚಪ್ಪಲಿ, ಡೋಲು, ತಬಲ, ತಮಟೆ, ವಾದ್ಯದ ತಂತಿಗಳು, ಹೊದಿಕೆ ಇತ್ಯಾದಿಗಳನ್ನು ತಯಾರಿಸಿದೆ. ಇವುಗಳನ್ನು ನುಡಿಸುವುದು, ಬಾರಿಸುವುದರ ಮೂಲಕ ನನ್ನ ಅಪಮಾನ, ನೋವು, ದುಃಖಗಳನ್ನು ಮರೆಯಲು ಪ್ರಯತ್ನಿಸಿದೆ”[3] ಸಹಮಾನವನನ್ನು ಹೇಗೆ ನಮ್ಮ ಚರಿತ್ರೆ-ಯಲ್ಲಿ ಕೀಳುಜಾತಿಯ ಜಾಡಮಾಲಿಯನ್ನಾಗಿ ರೂಪಿಸಲಾಗಿದೆ ಎಂಬುದನ್ನು ಇದು ಪ್ರಮಾಣೀಕರಿಸುತ್ತದೆ. ಬ್ರಾಹ್ಮಣಶಾಹಿ ವ್ಯವಸ್ಥೆ ಶೋಷಿತ ಸಮುದಾಯದ ಮೇಲೆ ಏರಿದ ಕೆಲವು ನಿಷೇಧಗಳ ಪರಿಣಾಮ ಶೋಷಿತ ಸಮುದಾಯದಲ್ಲಿನ ಒಂದು ಬರ್ಗ ಭವಿಷ್ಯದಲ್ಲಿ ಝಾಡಮಾಲಿಯಾಗಿ ರೂಪುಗೊಂಡಿರಲಿಕ್ಕೆ ಸಾಧ್ಯತೆ ಇದೆ. ಝಾಡಮಾಲಿಗಳ ಇವತ್ತಿನ ವೃತ್ತಿಗೂ; ಜಾತಿಶ್ರೇಣೀಕೃತ ಸಮಾಜ ಅಂದು ಅಸ್ಪೃಶ್ಯನ ಮೇಲೆ ಏರಿದ್ದ ನಿಷೇಧಕ್ಕೂ ಇರುವ ಸಾಮ್ಯತೆಯಲ್ಲಿ ಇದನ್ನು ಗುರುತಿಸಬಹುದು. ಭಗವಾನ್‌ದಾಸ್ ಅವರು ಹೇಳಿರುವ ಹಾಗೆ; “ನೀನು ಎಂಜಲನ್ನು ಉಗುಳುವುದಕ್ಕಾಗಿ ನಡುವಿಗೆ ಪೊರಕೆಯನ್ನು ಕಟ್ಟಿಕೊಂಡು (ಅಸ್ಪೃಶ್ಯನ ಎಂಜಲನ್ನು, ಅವನ ಹೆಜ್ಜೆ ಗುರುತನ್ನು ಮೇಲ್ಜಾತಿಯವರು ಸ್ಪರ್ಶಿಸಿದರೆ ಮಲೀನವಾಗುತ್ತಾರೆ ಎಂಬುದು ನಂಬಿಕೆ. ಹಾಗಾಗಿ ಅಸ್ಪೃಶ್ಯ ತನ್ನ ಉಗುಳನ್ನು ಉಗುಳಲು ನೆಲಕ್ಕೆ ಬೀಳದ ಹಾಗೆ- ಕುತ್ತಿಗೆಗೆ ಕಂಟವನ್ನು; ನಡೆದಾಡುವಾಗ ಭೂಮಿಯ ಮೇಲೆ ಮೂಡವ ಹೆಜ್ಜೆ ಗುರುತನ್ನು ಗುಡಿಸಲು ಸೊಂಟಕ್ಕೆ ಪೊರಕೆಯನ್ನು ಕಟ್ಟಿಕೊಂಡಿದ್ದ) ನೀನು ಬರುತ್ತಿರುವುದಕ್ಕೆ ಮುನ್ಸೂಚನೆ ಕೊಡಲು ಗಂಟೆಯೊಡನೆ ಊರಿನಲ್ಲಿ ಪ್ರವೇಶಿಸುವ ಹಾಗೆ ನಿನಗೆ ಕಡ್ಡಾಯ ಮಾಡಿದರು. ಬೆಳಿಗ್ಗೆ ಮತ್ತು ಸಂಜೆ ನಿನ್ನ ಉದ್ದವಾದ ನೆರಳು ಹಿಂದೂಗಳ ಮೇಲೆ ಬಿದ್ದಲ್ಲಿ ಅವರು ಅಶುದ್ಧರಾಗುತ್ತಿದ್ದದರಿಂದ ಬೆಳಗ್ಗೆ ಮತ್ತು ಸಂಜೆಯ ನಿಇನ್ನ ಓಡಾಟದ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದರು…..ನೀನು ಅಸ್ಪೃಶ್ಯನಾಗಿದ್ದುದರಿಂದ ಊರ ಹೊರಗಡೆ ವಾಸಿಸುವಂತೆ ಆಜ್ಞಾಪಿಸಿದರು. ಕೋಲನ್ನು ಭೂಮಿಯ ಮೇಲೆ ಕುಟ್ಟುತ್ತಾ ಗಟ್ಟಿಯಾದ ಧ್ವನಿಯಲ್ಲಿ ’ದೂರ ಹೋಗಿ, ದೂರ ಹೋಗಿ ಚಾಂಡಾಲ ಬರುತ್ತಿದ್ದಾನೆ….. ಝಾಡಮಾಲಿ ಬರುತ್ತಿದ್ದಾನೆ’ ಎಂದು ಕೂಗಿ ನಿನ್ನ ಪ್ರವೇಶದ ಮುನ್ಸೂಚನೆ ನೀಡುವಂತೆ ಕಾನೂನು ಮಾಡಿದ್ದರು”೪ (ಭಂಗಿಜನಕಥಾ-ಭಗವಾನ್ ದಾಸ್‌:ಪು.೧೬೬, ೧೬೭)

ನಗರ, ಪಟ್ಟಣಗಳ ಪರಿಕಲ್ಪನೆ ಅಸ್ತಿತ್ವಕ್ಕೆ ಬಂದ ಆರಂಭದಲ್ಲೆ ಹೊಸ ಸಮಸ್ಯೆಯೊಂದು ಎದುರಾಯಿತು. ಅದು ನಗರ ನೈರ್ಮಲ್ಯಕ್ಕೆ ಸಂಬಂಧಿಸಿದ್ದು. ನಗರ ನಿರ್ಮಾಣ, ಅವುಗಳ ಅಸ್ತಿತ್ವ ಎಷ್ಟು ಮಹತ್ವದ್ದೋ, ಅದಕ್ಕಿಂತಲೂ ಮಹತ್ತರವಾದದ್ದು ನಗರಗಳ ರಸ್ತೆ,ಚರಂಡಿಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು. ಬೀದಿ ಕಸಗುಡಿಸುವ, ಚರಂಡಿಗಳನ್ನು ಸ್ವಚ್ಛಮಾಡುವುದು ಕೀಳೆನಿಸಿದಾಗ ಇದನ್ನು ನಿರ್ವಹಿಸುವವರು ಯಾರೆಂಬ ಪ್ರಶ್ನೆ ಉದ್ಭವಿಸಿತು. ಆ ತತ್‌ಕ್ಷಣಕ್ಕೆ ಸವರ್ಣೀಯರ ನೆನಪಿಗೆ ಬಂದದ್ದು ಕೀಳು ಜಾತಿಯ ಅಸ್ಪೃಶ್ಯರೇ. ನಗರಗಳ ಹೊಲಸು-ಕೊಳಕನ್ನು ತೊಳೆಯುವ ಕಾರಣಕ್ಕಾಗಿ ಅಸ್ಪೃಶ್ಯರನ್ನು ಜಾಡಮಾಲಿಗಳನ್ನಾಗಿ ನೇಮಿಸಲಾಯಿತು. ಬದುಕಿನ ಅಸ್ತಿತ್ವಕ್ಕಾಗಿ ಹಸಿವು-ಅಭದ್ರತೆಗಳ ವಿರುದ್ಧ ದಿನನಿತ್ಯ ಹೋರಾಡುತ್ತಿದ್ದ ಅಸಂಖ್ಯಾತ ಬಡವರಿಗೆ ಜಾಡಮಾಲಿ ವೃತ್ತಿ ಕೀಳೆನಿಸಿದ್ದಾಗ್ಯೂ ಅನಿವಾರ್ಯವಾಗಿ ಒಪ್ಪಿಕೊಳ್ಳುವಂತಾಗಿದೆ. ನಗರ ನೈರ್ಮಲ್ಯದ ಜೊತೆಗೆ ಪಾಯಖಾನೆಗಳನ್ನು ಸ್ವಚ್ಛಗೊಳಿಸುವ; ಮಲವನ್ನು ತಲೆಯ ಮೇಲೆ ಹೊತ್ತು ನಗರಗಳಿಂದ ಹೊರ ವಲಯಕ್ಕೆ ಸಾಗಿಸುವ ಜವಾಬ್ದಾರಿಯು ಇವರದಾಯಿತು. ಹೆಂಗಸರಿಗಾಗಿ ಶೌಚಾಲಯ ಎಲ್ಲಿ ನಿರ್ಮಿಸಬೇಕು ಎಂಬ ಸಮಸ್ಯೆ ಉದ್ಭವಿಸಲು ಹಿಂದೂ, ಮುಸ್ಲಿಂ ಸೋದರರು ಮನೆಯ ಹಿಂಭಾಗದಲ್ಲಿ ಇಲ್ಲವೆ ಮಾಳಿಗೆಯ ಮೇಲೆ ನಿರ್ಮಿಸಲು ಯೋಚಿಸಿದರು. ಆದರೆ ಮಲ ಹೊತ್ತುಕೊಂಡು ಹೋಗಲು ಬರುತ್ತಿದ್ದ ನನ್ನ (ಜಾಡಮಾಲಿ) ಸ್ಪರ್ಶದಿಂದ ಅವರು ಭ್ರಷ್ಟರಾಗುವರೆಂದು ಅವರ ಧರ್ಮ ಉಪದೇಶಿಸಿರುವುದು ಅವರ ನೆನಪಿಗೆ ಬರಲು ಮಾಳಿಗೆಯ ಮೇಲೆ ರಚಿಸಬೇಕೆ ಅಥವಾ ಹಿತ್ತಲಿನ ಹಿಂಭಾಗದಲ್ಲಿ ರಚಿಸಬೇಕೆ ಎಂಬ ಸಮಸ್ಯೆ ಅವರನ್ನು ಕಾಡಿಸತೊಡಗಿತು. ಕೊನೆಗೆ ಮಲ ಹೊರಲು, ಶುಚಿಮಾಡಲು ಬಂದಾಗ ಮನೆಯ ಹಿಂದುಗಡೆಯಿಂದ ಬಂದು ಹಾಗೆಯೇ ಹಿಂದುಗಡೆಯಿಂದಲೇ ಹೊರಟು ಹೋಗುವಂತಿರಬೇಕು ಮತ್ತು ಮನೆಯವರ ಮೇಲೆ ನೆರಳೂ ಬೀಳದಂತಿರದ ಜಾಗದಲ್ಲಿ ಕಟ್ಟಬೇಕು ಎಂಬ ತೀರ್ಮಾನಕ್ಕೆ ಬಂದಿರಬಹುದೆಂದು ಕಾಣುತ್ತದೆ. ಸಾಲದೆಂಬಂತೆ ಅಕಸ್ಮಾತ್ತಾಗಿಯಾದರೂ ಸ್ಪರ್ಶಿಸಬಹುದು, ನೆರಳು ಬೀಳಬಹುದೆಂದು ಹೆದರಿದ ಹಿಂದೂಗಳು ಅದನ್ನೂ ತಪ್ಪಿಸಲು ಊರಿಂದ, ನಗರದಿಂದ ದೂರ ವಾಸಿಸುವ ಹಾಗೆ ಆಜ್ಞೆ ಮಾಡಿದರು”[4]

“ಮೊಗಲ್ ಸಾಮ್ರಾಜ್ಯದ ಕಾಲದಲ್ಲಿ ನನ್ನ (ಜಾಡಮಾಲಿ) ಜನಸಂಖ್ಯೆ ಏರಿತು. ನಾನು ನಗರಗಳಲ್ಲಿ ನೆಲೆಸಿದ್ದೆ. ನಗರಗಳಲ್ಲಿ ರಾಜರು, ನವಾಬರು, ಆಗರ್ಭ ಶ್ರೀಮಂತರು ನೆಲೆಸಿದ್ದರು. ಆಗರ್ಭ ಶ್ರೀಮಂತರ ಅಂತಃಪುರಗಳಲ್ಲಿ ನೂರಾರು ಮಂದಿ ಮಹಿಳೆಯರು ಇರುತ್ತಿದ್ದರು. ಅರಮನೆಗಳಲ್ಲಿ ಇವರ ಸಂಖ್ಯೆ ಸಾವಿರಕ್ಕಿಂತಲೂ ಹೆಚ್ಚಾಗುತ್ತಿತ್ತು. ಜೊತೆಗೆ ನೂರಾರು ಕುದುರೆಗಳ ಲಾಯಗಳೂ ಇದ್ದವು. ನಗರಗಳ್ಲಲಿ ಕ್ರಮೇಣ ಪಶುಗಳ ಸಂಖ್ಯೆಯೂ ಏರಿತು. ಇದರಿಂದ ಸ್ವಚ್ಛತೆಯ ಸಮಸ್ಯೆಯು ಉದ್ಭವಿಸಿ ನನ್ನ ಅವಶ್ಯಕತೆಯು ಕಂಡುಬರುತ್ತಿತ್ತು.”[5]

ಬ್ರಿಟಿಷರು ಭಾರತಕ್ಕೆ ಬಂದ ನಂತರದಲಲಿ ಜಲಗಾರರನ್ನೂ ಒಳಗೊಂಡಂತೆ ಭಾರತೀಯ ಅಸ್ಪೃಶ್ಯರ ಬದುಕು ತಕ್ಕಮಟ್ಟಿಗೆ ಸುಧಾರಣೆಯನ್ನು ಕಾಣಲಾರಂಭಿಸಿತು. ಆವರೆಗೆ ಕೇವಲ ಬೀದಿ ಕಸಗುಡಿಸುವ, ಚರಂಡಿ, ಪಾಯಖಾನೆಗಳನ್ನು ಸ್ವಚ್ಛಮಾಡುವ ಹೀನ ಕಾಯಕಕ್ಕಷ್ಟೇ ಸೀಮಿತ-ವಾಗಿದ್ದ ಜಲಗಾರರನ್ನು, ಬ್ರಿಟಿಷರು ತಮಗೆ ಊಟ ತಯಾರಿಸುವ; ತಮ್ಮ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವ; ಸೈನ್ಯದಲ್ಲಿ ನೈರ್ಮಲ್ಯ ಕಾಪಾಡಲು ಮತ್ತು ಕಾರ್ಖಾನೆಯ ಕಾವಲುಗಾರರನ್ನಾಗಿ ನೇಮಿಸಿಕೊಳ್ಳತೊಡಗಿದರು. ಬ್ರಿಟಿಷರು ಕರ್ನಲ್ ನೈಲನ ನೇತೃತ್ವದಲ್ಲಿ ಜಲಗಾರರಿಗಾಗಿ “ಮೆಹತರ‍್ ರೆಜಿಮೆಂಟ್‌” ಎಂಬ ಸೈನಿಕ ತುಕ್ಕಡಿಯನ್ನು ಆರಂಭಿಸಿದರು. ಈ ಸೈನಿಕ ತುಕ್ಕಡಿಗೆ ಜಲಗಾರರನ್ನು ಮಾತ್ರ ಸೇರಿಸಿಕೊಳ್ಳುತ್ತಿದ್ದರು. ಪಂಜಾಬ್ ಪ್ರಾಂತ್ಯದ ಜಲಗಾರರಿಗೂ ಕೂಡ ಬ್ರಿಟಿಷ್ ಸೈನ್ಯದಲ್ಲಿ ಅವಕಾಶ ನೀಡಲಾಗಿತ್ತು. ಅವರನ್ನು “ಝಾಡಮಾಲಿ ಸಿಕ್ಕರು” ಎಂಬುದಾಗಿ ಕರೆಯುತ್ತಿದ್ದರು. ಇದು ಒಂದು ರೀತಿಯಲ್ಲಿ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದ ಜಾಡಮಾಲಿಗಳ ಪಾಲಿಗೆ ಮಹತ್ತರವಾದ ಸ್ಥಿತ್ಯಂತರವಾಗಿ ಪರಿಣಮಿಸಿತು. ವಿದ್ಯೆಯಿಂದ ವಂಚಿತರಾಗಿದ್ದ ಜಲಗಾರರಿಗೆ ಕ್ರೈಸ್ತ ಮಿಷನರಿಗಳು ಧಾರಾಳವಾಗಿ ಶಿಕ್ಷಣ ಸೌಲಭ್ಯವನ್ನು ಕಲ್ಪಿಸಿದವು. ಜಲಗಾರರು ಒಂದು ಕಾಲಘಟ್ಟದಲ್ಲಿ ಅವಹೇಳನಕಾರಿ ಹಾಗೂ ಅಸಹ್ಯಕರ ಬದುಕಿನಿಂದ ಪಾರಾಗುವ ಕಾರಣಕ್ಕಾಗಿ ಕ್ರೈಸ್ತ, ಮುಸ್ಲಿಂ, ಸಿಕ್ ಧರ್ಮಗಳಿಗೂ ಮತಾಂತರಗೊಂಡರು. “ಅನೇಕ ಶತನಮಾನಗಳ ನಂತರ ನಾನೂ ಒಬ್ಬ ಮನುಷ್ಯನೆಂದು ಅರಿವಾಗತೊಡಗಿತು. ಬ್ರಿಟಿಷರ ಸಂಪರ್ಕದಿಂದ ಈ ಹೊಸ ಅರಿವು ಮೂಡಿತ್ತು. ಗ್ರಾಮಗಳನ್ನು ತ್ಯಜಿಸಿ ಉದ್ಯೋಗಕ್ಕಾಗಿ ನಾನು (ಜಲಗಾರ) ಬ್ರಿಟಿಷರ ಕೇರಿಗಳು, ದಂಡಿನ ಸ್ಥಳಗಳಲ್ಲಿ ಅಲೆದಾಡ-ತೊಡಗಿದೆ. ಇವರ ಆಶ್ರಯದಲ್ಲಿ ಬದುಕು ಇದ್ದಿತು. ಮಾನವೀಯತೆ ಇದ್ದಿತು, ಬೆಳಕಿದ್ದಿತು, ಗೌರವ ಆಶೆಗಳಿದ್ದುವು. ನನ್ನ ದೇಶೀಯರು ಇವುಗಳು ನನಗೆ ಸಿಗದೆ ವಂಚಿಸಿದ್ದರು. ಆದರೆ ಬ್ರಿಟಿಷರಲ್ಲಿ ಧಾರಾಳವಾಗಿ ಸಿಕ್ಕಿದ್ದವು.”[6] ಆದರೆ, ಬ್ರಿಟಿಷರ ಆಡಳಿತ ಕೂಡ ಜಲಗಾರರ ಪಾಲಿಗೆ ಆಮೂಲಾಗ್ರ ಬದಲಾವಣೆಯನ್ನೇನು ತಂದಿಲ್ಲ ಎಂಬುದಕ್ಕೆ ಇಂದಿಗೂ ಮುಂದು-ವರಿದಿರುವ ಅವರ ಬದುಕಿನ ಯಥಾಸ್ಥಿತಿ ಸ್ಪಷ್ಟ ಉದಾಹರಣೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಲಗಾರರನ್ನು “ತೋಟ” ಎಂಬುದಾಗಿ ಕರೆಯುತ್ತಾರೆ. ಪುತ್ತೂರು, ಸುಳ್ಯ, ಬಂಟ್ವಾಳ, ಮೂಡಬಿದ್ರಿ, ಕಾರ್ಕಳ ಹಾಗೂ ಕೇರಳ ಪ್ರಾಂತ್ಯಕ್ಕೆ ಸೇರಿರುವ ಕಾಸರಗೋಡಿನಲ್ಲಿ ’ತೋಟಿ’ ಪಂಗಡದವರು ಅಧಿಕ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. “೧೮೯೧ರ ಮದ್ರಾಸು ಸೆನ್ಸಸ್ ವರದಿ ಪ್ರಕಾರ ’ತೋಟಿ’ ಎಂಬ ಪಂಗಡವು ’ಚಿಕ್ಕಲಿಯಾನ್’ ಎಂಬ ಒಂದು ಪಂಗಡದ ಉಪಜಾತಿ ಎಂದು ಹೇಳಲಾಗಿದೆ. ಜಿಲ್ಲೆಯ ಆದಿವಾಸಿಗಳಲ್ಲಿ ಇವರು ಕೂಡ ಒಂದು ಪಂಗಡದವರೆಂದು ಹೇಳಲಾಗಿದೆ. ಇವರನ್ನು ಜಿಲ್ಲೆಯ ಇತರ ಕಡೆ ತುಳುವಿನಲ್ಲಿ ’ಮಾರಿಮನ್ಸ’, ’ಕರಾದಿ’ ಹಾಗೂ ಸಾಮಾನ್ಯವಾಗಿ ಹರಿಜನ ಪಂಗಡದವರನ್ನು ಕರೆವ ರೂಢಿಯಂತೆ ’ಹೊಲೆಯರು’ ಎಂಬಿತ್ಯಾದಿ ಹೆಸರಿನಿಂದ ಕರೆಯುವರು”[7]. ಗ್ರಾಮದ ಅಧಿಕಾರಿಗಳು ಹೇಳಿದ ಕೆಲಸಗಳನ್ನು ಮಾಡುವುದು; ಸವರ್ಣೀಯ ಹಿಂದೂಗಳಲ್ಲಿ ಯಾರಾದರೂ ಸತ್ತರೆ ಆ ಸಾವಿನ ಸುದ್ದಿಯನ್ನು ಅವರ ಸಂಬಂಧಿಕರಿಗೆ ಮುಟ್ಟಿಸುವುದು; ಅನಾಥ ಶವಗಳ ಅಂತ್ಯಕ್ರಿಯೆ ಮಾಡುವುದು; ಗ್ರಾಮದ ಮಲೀನ ಸ್ಥಳಗಳನ್ನು, ಪ್ರವಾಸಿ ನಿಲಯಗಳನ್ನು ಸ್ವಚ್ಛ ಮಾಡುವುದು ’ತೋಟಿ’ ಸಮುದಾಯದವರ ವೃತ್ತಿಯಾಗಿತ್ತು. ಒರಿಸ್ಸಾ ಪ್ರಾಂತ್ಯದಲ್ಲಿ ಈ ತೋಟಿ ಪಂಡದವರನ್ನು “ಒರಿಯಾ ಹಡ್ಡಿಸ್” ಎಂಬುದಾಗಿ ಕರೆಯುತ್ತಾರೆ. ಇವರ ವೃತ್ತಿ ನಗರ ನೈರ್ಮಲ್ಯ. ತಮಿಳುನಾಡಿನಲ್ಲಿ ಈ ಪಂಗಡದವರನ್ನು “ಒಡಿಯಾ” ಎಂದು ಕರೆಯುತ್ತಾರೆ ಎಂಬುದಾಗಿ ಕಮಲಾಕ್ಷ ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಮುದಾಯವನ್ನು “ತೋಟಿ”ಗಳು ಎಂದು ಕರೆಯಲು ಕಾರಣವೇನು ಎಂಬುದನ್ನು ಕಮಲಾಕ್ಷ ಅವರು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಜಲಗಾರ ಸಮುದಾಯವನ್ನು ಪ್ರಾದೇಶಿಕವಾಗಿ ಭಿನ್ನ ಹೆಸರುಗಳಿಂದ ಕರೆದರೂ ಅವರ ವೃತ್ತಿ ಒಂದೇ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. “ಪೇಟೆ ಪಟ್ಟಣಗಳಲ್ಲಿ ಪಂಚಾಯತ್ ಇಲಾಖೆ ಹಾಗೂ ಮುನಿಸಿಪಾಲಿಟಿ ಗಳಲ್ಲಿ ಉದ್ಯೋಗಸ್ಥರಾಗಿ ಕಸಗುಡಿಸುವ, ಚರಂಡಿ ಚೊಕ್ಕ ಮಾಡುವ, ಪಾಯಿಖಾನೆ ಸ್ವಚ್ಛ ಮಾಡುವ, ನುಸಿ ನಾಶ ಮಾಡುವ ಹೀಗೆ ಮುಂತಾದ ಕೆಲಸಗಳಲ್ಲಿ ವಿರು ನಿರತರಾಗಿರುವರು. ಪಾಯಿಖಾನೆ ಸ್ವಚ್ಛ ಮಾಡುವ ಕೆಲಸಕ್ಕೆ ತುಳುವಿನಲ್ಲಿ “ತೊಟ್ಟಿ”ಯೆಂದು ಹೇಳುವ ಸುಮಾರು ೩ ಅಡಿ ಉದ್ದನೆಯ ತಗಡಿನ [ಕನ್ನಡದಲ್ಲಿ ಬಾಲ್ದಿ (ಬಾಂಡ್ಲಿ) ಎಂದು ಹೇಳುವ] ಪಾತ್ರೆಯನ್ನು ಉಪಯೋಗಿಸಿ ಅದನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಮಲವನ್ನು ಸಾಗಿಸುತ್ತಿದ್ದುದರಿಂದಾಗಿ ಇವರನ್ನು “ತೊಟ್ಟಿಯವರು” ಹಾಗೂ ಕ್ರಮೇಣ “ತೋಟಿಯವರು” ಎಂಬುದಾಗಿ ಕರೆಯಲಾಯಿತು ಎಂಬುದು ಬಲ್ಲವರ ಅಭಿಪ್ರಾಯ”.[8] ಆನೇಕಲ್ ಮುನಿಯಮ್ಮ ಅಭಿಪ್ರಾಯಪಡುವ ಹಾಗೆ, ಜಲಗಾರ ಸಮುದಾಯದಲ್ಲಿ ಮೂರು ಪಂಗಡಗಳಿವೆ. ಕ್ರಮವಾಗಿ ಅವುಗಳನ್ನು “ಮಣ್ಣಿನ ಒಡ್ಡರು”. “ಕಲ್ಲ್‌ಒಡ್ಡರು”, “ರಾಜ್‌ಬೋವಿ ಒಡ್ಡರು” ಎಂಬುದಾಗಿ ಕರೆಯುತ್ತಾರೆ. ರಾಜ್ಬೋವಿ ಒಡ್ಡರು ಕಸಗುಡಿಸುವ ವೃತ್ತಿಗೆ ಇಳಿದ ಮೇಲೆ ಅವರು ಕೀಳು ಜಾತಿಯವರಾದರು ಎಂದು ಕೆಲವರು ಹೇಳುತ್ತಾರೆ.

ಬೆಂಗಳೂರು, ಕೋಲಾರ, ಚಿಂತಾಮಣಿ, ಸಿಡ್ಲುಗಟ್ಟ, ಹೊಸಕೋಟೆ, ಮಂಡ್ಯ, ಮೈಸೂರು, ಕೊಳ್ಳೇಗಾಲ, ಚಾಮರಾಜನಗರಗಳಲ್ಲಿ ವಾಸಿಸುವ ಬಹುತೇಕ ಜಲಗಾರರು, ತಮಿಳುನಾಡಿನ ಕೊಯಂಬತ್ತೂರು, ಸತ್ಯಮಂಗಲ ಹಾಗೂ ಆಂದ್ರಪ್ರದೇಶಗಳಿಂದ ವಸಲೆ ಬಂದವರು. ಭೀಕರ ಬರಗಾಲದ ಪರಿಣಾಮದಿಂದಾಗಿ ಹಸಿವಿನ ನಿವಾರಣೆ ಹಾಗೂ ಬದುಕಿನ ಅಸ್ತಿತ್ವದ ಕಾರಣಕ್ಕಾಗಿ ವಲಸೆ ಹೋಗುವುದು ಇವರಿಗೆ ಅನಿವಾರ್ಯವಾಗಿ ಕಾಡಿದೆ. ಮೈಸೂರಿನ ಕುದುರೆಮಾಳದಲ್ಲಿ ವಾಸವಾಗಿರುವ ಜಲಗಾರ ಮಹಿಳೆ ’ಕರಪಮ್ಮ’ (ವಯಸ್ಸು-೬೫) ಹೇಳುವ ಮಾತುಗಳು ಇದಕ್ಕೆ ಸಾಕ್ಷಿಯಾಗಿವೆ. “ನಮ್ಮ ತಂದೆ ಆಂಧ್ರದವರು. ನಮ್ಮ ತಾಯಿ ತಮಿಳುನಾಡಿನ ಕೊಯಮತ್ತೂರಿನವರು. ಆಗ ಮಳೆ ಇಲ್ಲದೆ ತುಂಬಾ ಬರಗಾಲ ಬಂದು ಊಟಕ್ಕೆ ತೊಂದರೆ ಆಯ್ತು. ಅದಕ್ಕೆ ನಮ್ಮ ತಂದೆ-ತಾಯಿ ಕೊಯಮತ್ತೂರಿನಿಂದ ಮೈಸೂರಿಗೆ ವಲಸೆ ಬಂದರು. ನನಗೆ ಆಗ ೧೨ ವರ್ಷ ವಯಸ್ಸು. ಬುಡುಬುಡುಕೆ ಕೇರಿ, ಮಟ್ಟಕೇರಿಲಿ ನಮ್ಮ ಜನ ಇದ್ರು. ನಾವು ಮೈಸೂರಿಗೆ ಬಂದ ವರ್ಷದಲ್ಲಿ ಶ್ರೀಕಂಠದತ್ತ ರಾಜ ಅರಸರು ಹುಟ್ಟಿದ್ದರು. ಮಹಾರಾಜರು ಹುಟ್ಟಿದ್ದಕ್ಕೆ ನಮ್ಮ ಜನಾನ ಅರಮನೆ ಹತ್ತಿರ ಕರೆಸಿ ತೆಂಗಿನಾಕಯಿ ಕಂಟದಲ್ಲಿ ರಾಗಿ ಅಂಬಲಿ ಕೊಟ್ರು” ಎಂಬುದಾಗಿ ಕರಪಮ್ಮ ತಮ್ಮ ತಂದೆ-ತಾಯಿ, ವಲಸೆ ಬಂದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ದೊಡ್ಡ ದೊಡ್ಡ ಮಹಾನಗರ, ಪಟ್ಟಣ ಪ್ರದೇಶಗಳಲ್ಲಿ ಅತಿ ಹೆಚ್ಚು ಕಂಡುಬರುವ ಜಲಗಾರ ಸಮುದಾಯದವರ ಮಾತೃಭಾಷೆ ತೆಲುಗು. ಮನೆಯ ಹೊರಗೆ, ಇತರರೊಟ್ಟಿಗೆ ವ್ಯವಹರಿಸುವಾಗ ಕನ್ನಡವನ್ನು ಬಳಸುತ್ತಾರೆ. ಬಹುತೇಕ ಕುಟುಂಬಗಳು ಮನೆಯ ಒಳಗೆ-ಹೊರಗೆ ಕನ್ನಡವನ್ನೇ ಬಳಸುವುದುಂಟು. ಜಲಗಾರ ಸಮುದಾಯದಲ್ಲಿ ಹೆಚ್ಚಿನವರು ನಗರಸಭೆ, ಪುರಸಭೆಗಳಲ್ಲಿ ಪೌರಕಾರ್ಮಿಕರಾಗಿ ದುಡಿಯುತ್ತಾರೆ. ಮುಂಜಾವದಲ್ಲೇ ಎದ್ದು ನಗರ-ಪಟ್ಟಣಗಳ ರಸ್ತೆಗುಡಿಸುವ, ಚರಂಡಿಗಳನ್ನು ಸ್ವಚ್ಛಮಾಡುವ, ಪಾಯಿಖಾನೆಗಳನ್ನು ಶುಭ್ರಗೊಳಿಸುವ ಕಾಯಕ ಇವರದು. ಇಲ್ಲಿ ಗಂಡು-ಹೆಣ್ಣು ಸರಿಸಮನಾಗಿಯೇ ದುಡಿಯುತ್ತಾರೆ. ಹಾಗಾಗಿ ಗಂಡ-ಹೆಂಡತಿ ಇಬ್ಬರೂ ಒಂದು ಕುಟುಂಬದ ಆಧಾರಸ್ತಂಭಗಳೇ. ಪೌರಕಾರ್ಮಿಕ ವೃತ್ತಿಗೆ ಹೋಗದ ಕೆಲವು ಜಲಗಾರ ಮಹಿಳೆಯರು ಶ್ರೀಮಂತರ, ಮೇಲ್ವರ್ಗದವರ ಮನೆಗಳಿಗೆ ಮುಸುರೆ ತಿಕ್ಕುವ, ಬಟ್ಟೆ ಹೊಗೆಯುವ ಕೆಲಸಕ್ಕೆ ಹೋಗುವುದುಂಟು. ಹಾಗೆ ಕೆಲವು ಹೆಂಗಸರು, ಮಕ್ಕಳು ಬೀದಿ ಬದಿಯಲ್ಲಿ, ಕಸದ ತೊಟ್ಟಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್, ಗಾಜು, ಕಬ್ಬಿಣದ ಚೂರು ಮುಂತಾದ ತ್ಯಾಜ್ಯವಸ್ತುಗಳನ್ನು ಸಂಗ್ರಹಿಸಿ ಮಾರಿ ಹಣ ಸಂಪಾದಿಸುತ್ತಾರೆ. ನಗರಗಳ ಬೀದಿ, ಚರಂಡಿ, ಪಾಯಖಾನೆಗಳನ್ನು ಮಾತ್ರ ಸ್ವಚ್ಛ ಮಾಡುವುದಲ್ಲದೆ; ಸತ್ತ ಪ್ರಾಣಿಗಳನ್ನು ಸಹ ನಗರದ ಹೊರವಲಯಕ್ಕೆ ಸಾಗಿಸಿ ನಗರದ ಸ್ವಚ್ಛತೆಯನ್ನು ಕಾಪಾಡುತ್ತಾರೆ. ನಗರ ನೈರ್ಮಲ್ಯಕ್ಕಾಗಿ ಇಡೀ ತಮ್ಮ ಬದುಕನ್ನೇ ಮೀಸಲಿಟ್ಟ ಈ ಜಲಗಾರ ಸಮುದಾಯದ ವಾಸ್ತವ್ಯವಾದರೂ ಎಲ್ಲಿ? ಮತ್ತದೇ ಕೊಳಚೆ ಪ್ರದೇಶದಲ್ಲಿ ನಗರ ಸ್ವಚ್ಛತೆಯ ಹರಿಕಾರರಾದ ಜಲಗಾರ ಬಂಧುಗಳನ್ನು ಈ ನಾಗರಿಕ ಸಮುದಾಯ ಕನಿಷ್ಠ ಸೌಜನ್ಯವನ್ನೂ ತೋರದೆ ಕೊಳಚೆ ಪ್ರದೇಶಗಳಲ್ಲೆ ಬದುಕುವಂತೆ ಮಾಡಿರುವುದು ದುರಂತವೆ ಸರಿ. ಜಲಗಾರರು ತಮ್ಮ ವೃತ್ತಿ ಬದುಕಿನಲ್ಲಿ ಎದುರಿಸುವ ಸಮಸ್ಯೆ-ಸವಾಲುಗಳು ತುಂಬಾ ಭೀಕರವಾದವು. ನಗರಸಭೆ, ಪುರಸಭೆ ಹಾಗೂ ಸರ್ಕಾರಗಳು ಪೌರಕಾರ್ಮಿಕರಿಗೆ ಬೇಕಾದ ಕಾಯಕ ಸಂಬಂಧಿ ವೈಜ್ಞಾನಿಕ ಸಲಕರಣೆಗಳು, ಗಮ್‌ಬೂಟ್, ಮುಖವಾಡ, ಕೈ ಗ್ಲೌಸ್‌ಗಳನ್ನು ಸರಿಯಾಗಿ ಒದಗಿಸದಿರುವುದು ಕುಡ ಈ ದುರಂತಗಳಿಗೆ ಕಾರಣ.

ಜಲಗಾರರು ತಮ್ಮ ವೃತ್ತಿಯ ಕಾರಣದಿಂದಾಗಿ ಅಸಂಖ್ಯಾತ ರೋಗರುಜಿನಗಳಿಗೆ, ದುಶ್ಚಟಗಳಿಗೆ ದಿನನಿತ್ಯ ಬಲಿಯಾಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಪತ್ರಕರ್ತರಾದ ರವೀಂದ್ರಭಟ್ಟರು ಹೇಳುವ ಹಾಗೆ: “ಅವರು ಕೆಸರಿನಲ್ಲಿದ್ದಾರೆ. ಅವರ ಬದುಕಿನಲ್ಲಿ ಕಮಲದ ಸುಗಂಧವಿಲ್ಲ. ಅವರಿಗೆ ನಿರ್ದಿಷ್ಟ ಕೆಲಸವೆಂಬುದೂ ಇಲ್ಲ. ಅವರಿಗೆ ನಾಳೆಯ ಅನ್ನದ ಚಿಂತೆ ಇಲ್ಲ. ಬದಲಾಗಿ ನಾಳೆಯ ಸಾರಾಯಿಯ ಚಿಂತೆ. ಬೆಳಿಗ್ಗೆ ಅವರು ಕಣ್ಣು ಬಿಟ್ಟ ತಕ್ಷಣ ಮೊದಲು ಮಾಡುವ ಕೆಲಸವೆಂದರೆ ಸಾರಾಯಿ ಕುಡಿಯುವುದು. ಇಡೀ ದಿನ ಮದ್ಯದ ಅಮಲಿನಲ್ಲಿಯೇ ಇರುವ ಅವರು ಮನೆಯ ಶೌಚಗುಂಡಿಯನ್ನು ಸ್ವಚ್ಛಮಾಡುತ್ತಾರೆ. ನಮ್ಮ ನಿಮ್ಮ ನಗರ, ಪಟ್ಟಣದ ಚರಂಡಿಗಳನ್ನು ತೊಳೆಯುತ್ತಾರೆ. ಕಟ್ಟಿಕೊಂಡು ದುರ್ವಾಸನೆ ಬೀರುವ ಒಳಚರಂಡಿಗಳನ್ನು ತೊಳೆಯುತ್ತಾರೆ. ಕಟ್ಟಿಕೊಂಡು ದುರ್ವಾಸನೆ ಬೀರುವ ಒಳಚರಂಡಿಯೊಳಕ್ಕೆ ಯಾವುದೇ ಸಂಕೋಚ ಇಲ್ಲದೆ ಇಳಿದು ಶುಚಿ ಮಾಡುತ್ತಾರೆ. ತುಂಬಿ ತುಳುಕುತ್ತಿರುವ ಮ್ಯಾನ್‌ಹೋಲ್‌ಗಳಲ್ಲಿ ಇಳಿದು ಕೊಳಚೆಯಲ್ಲಿಯೇ ಇಳಿದು ಈಜಾಡಿ ಸರಿಮಾಡುತ್ತಾರೆ. ಹೀಗೆ ಶೌಚಗುಂಡಿಗಳನ್ನು ಸ್ವಚ್ಛ ಮಾಡುವಾಗ ಅದರೊಳಕ್ಕೆ ಸಿಕ್ಕು ಸಾಯುವುದು ಕೂಡ ಅಪರೂಪವೇನಲ್ಲ. ಎರಡು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆ ಮಳವಳ್ಳಿ ಯಲ್ಲಿ ರಾಜು ಎಂಬ ಪೌರಕಾರ್ಮಿಕ ಶೌಚಗುಂಡಿಯಲ್ಲಿಯೇ ಮುಳುಗಿ ಸತ್ತ. ಕೆ.ಜಿ.ಎಫ್‌.ನಲ್ಲಿಯೂ ಇಬ್ಬರು ಶೌಚಗುಂಡಿಯಲ್ಲಿ ಸಿಲುಕಿ ಸತ್ತಿದ್ದಾರೆ. ಇವು ಸುದ್ದಿಯಾದ ಸಾವುಗಳು; ಇನ್ನು ಸುದ್ದಿಯೇ ಆಗದ ಸಾವುಗಳೆಷ್ಟೋ?

ಕೊಳಚೆಯಲ್ಲಿಯೇ ತಮ್ಮ ಬದುಕನ್ನು ಸಾಗಿಸುತ್ತಿರುವ ಪೌರಕಾರ್ಮಿಕರು ಹಾಗೂ ಶೌಚಗುಂಡಿ ಸ್ವಚ್ಛ ಮಾಡುವವರಿಗೆ ರೋಗ ಹುಟ್ಟಿನಿಂದಲೇ ಬರುತ್ತದೆ. ಅಸ್ತಮಾ, ಕ್ಷಯ, ಕಾಮಾಲೆ, ಕಣ್ಣಿನ ತೊಂದರೆ, ಹೃದಯ ಸಂಬಂಧಿ ರೋಗಗಳು ಹಾಗೂ ಏಡ್ಸ್, ಕ್ಯಾನ್ಸರ‍್, ಗ್ಯಾಂಗ್ರೀನ್, ಕುಷ್ಠ ಅವರ ಸಂಗಾತಿಗಳು. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಪೌರಕಾರ್ಮಿಕರ ಸರಾಸರಿ ಆಯುಷ್ಯ ೪೫ ಮಾತ್ರ.”[9] ಸಾಮಾಜಿಕ ಸಂದರ್ಭದಲ್ಲಿಯೂ ಕೂಡ ಇವರು ಅಸ್ಪೃಶ್ಯರೆ. ಈ ಸಂದಭ್ದಲ್ಲಿ ಡಾ. ಸಿದ್ದಲಿಂಗಯ್ಯನವರು ದಾಖಲಿಸಿರುವ ಗಾಂಧೀಜಿಯವರ ಮಾತುಗಳು ಪ್ರಜ್ಞಾವಂತ ಸಮಾಜವನ್ನು ಕಾಡುವಂತವು. “ವೈದ್ಯ ರೋಗಿಯನ್ನು ಶುಶ್ರೂಷೆ ಮಾಡುತ್ತಾನೆ. ರೋಗಿಯ ಗಾಯವನ್ನು ತೊಳೆದು ಬ್ಯಾಂಡೇಜು ಕಟ್ಟಿ, ರೋಗಮುಕ್ತನನ್ನಾಗಿ ಮಾಡುತ್ತಾನೆ. ಪರಿಶುದ್ಧನನ್ನಾಗಿ ಮಾಡುತ್ತಾನೆ. ಆದ್ದರಿಂದ ರೋಗಿಯು ವೈದ್ಯನನ್ನು ಕೃತಜ್ಞತೆಯಿಂದ ನೋಡುತ್ತಾನೆ. ತಾಯಿಯು ಮಗುವಿನ ಮಲಿನತೆಯನ್ನು ತೊಳೆದು ಶುಚಿಮಾಡುತ್ತಾಳೆ. ತಾಯಿಯನ್ನು ಮಗು ಕೃತಜ್ಞತೆಯಿಂದ ನೋಡುತ್ತದೆ. ಆದರೆ ಊರನ್ನು ಶುಚಿ ಮಾಡುವ ಪೌರಕಾರ್ಮಿಕರನ್ನು ಸಮಾಜ ಏಕೆ ತಿರಸ್ಕಾರದಿಂದ ನೋಡುತ್ತಿದೆ?’ ಎಂದು ಸಮಾಜವನ್ನು ತಮ್ಮ ಹರಿಜನ ಪತ್ರಿಕೆಯಲ್ಲಿ ಪ್ರಶ್ನೆ ಮಾಡಿದರು ಮಹಾತ್ಮರು.”[10]

ಪೌರಕಾರ್ಮಿಕರ ಬದುಕು ಎಷ್ಟರಮಟ್ಟಿಗೆ ಕ್ರೂರವಾಗಿರುತ್ತದೆ ಎಂಬುದಕ್ಕೆ ಮೈಸೂರಿನ ಪೌರಕಾರ್ಮಿಕ ನರಸಿಂಹನ ಜೀವನದ ಕತೆಯೇ ನಮ್ಮ ಕಣ್ಣೆದುರಿನ ಜ್ವಲಂತ ಉದಾಹರಣೆ. “೧೯೯೫ರಲ್ಲಿ ಒಳಚರಂಡಿ ಸ್ವಚ್ಛ ಮಾಡುವಾಗ ಕಬ್ಬಿಣದ ತುಂಡೊಂದು ಈತನ (ನರಸಿಂಹ) ಕಾಲು ಮತ್ತು ಕೈಗೆ ಹೊಕ್ಕಿದ್ದರಿಂದ ಗ್ಯಾಂಗ್ರಿನ್ ರೋಗಕ್ಕೆ ಈತ ತುತ್ತಾದ. ಅದರಿಂದ ಈತನ ಕಾಲು ಮತ್ತು ಕೈಬೆರಳುಗಳು ತುಂಡಾದವು. ಈ ಕಾರಣಕ್ಕಾಗಿಯೇ ಈತನನ್ನು ಕೆಲಸದಿಂದ ತೆಗೆದುಹಾಕಲಾಯಿತು. ಕೆಲಸ ಕಳೆದುಕೊಂಡ ನಂತರ ಈತನ ಪತ್ನಿ ಕೂಡ ಇರುವ ಒಬ್ಬ ಮಗನನ್ನೂ ಈತನ ಬಳಿಯೇ ಬಿಟ್ಟು ಓಡಿ ಹೋದಳು”[11] ಈ ಎಲ್ಲ ಬಗೆಯ ಹಿಂಸೆಗಳಿಗೆ ಇಂದಿಗೂ ಅಸಂಖ್ಯಾತ ಪೌರಕಾರ್ಮಿಕರು ಬಲಿಯಾಗುತ್ತಿದ್ದಾರೆ. ವಿಪರ್ಯಾಸದ ಸಂಗತಿ ಎಂದರೆ, ಈ ಹಿಂಸೆ ಅವರದಲ್ಲದ ತಪ್ಪಿಗಾಗಿ ಅನುಭವಿಸುವಂತಹುದು.

ಜಲಗಾರ ಮಹಿಳೆ ಹಾಗೂ ಮಕ್ಕಳ ಹೇಳತೀರದು. ಪೌರಕಾರ್ಮಿಕ ವೃತ್ತಿ ಸೃಷ್ಟಿಸಿರುವ ವಿಷ ವರ್ತುಲದಿಂದ ಇವರೇನು ಹೊರಗುಳಿದವರಲ್ಲ. ಹಾಗಾಗಿ ಒಂದರ್ಥದಲ್ಲಿ ಇಡೀ ಜಲಗಾರ ಸಮುದಾಯವೇ ರೌರವ ನರಕದಲ್ಲಿ ಬದುಕುತ್ತಿರುವುದು ವಾಸ್ತವ ಸತ್ಯ. ಜಲಗಾರ ಮಹಿಳೆಯರು ಕೂಡ ವೃತ್ತಿಯ ಕಾರಣಕ್ಕಾಗಿ ಸಾರಾಯಿ ಕುಡಿತ, ತಂಬಾಕು, ಹೊಗೆಸೊಪ್ಪು, ಪಾನ್‌ಪರಾಗ್‌ನಂತಹ ಗುಟ್ಕಾಗಳ ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವ ಮುಂಚೆ ಇವೆಲ್ಲವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇವರ ಆರೋಗ್ಯದ ಮೇಲೆ ಇದು ಪರಿಣಾಮವನ್ನು ಉಂಟುಮಾಡಿದವೆ. ಇದರ ಪರಿಣಾಮದಿಂದಾಗಿಯೇ ಗಂಡು-ಹೆಣ್ಣುಗಳಿಬ್ಬರೂ ಕೇವಲ ೩೦ ವರ್ಷ ವಯಸ್ಸಿಗೇ ೬೦ ವರ್ಷದ ಮುದುಕ-ಮುದುಕಿಯರ ಹಾಗೆ ಕಾಣುತ್ತಾರೆ. ಇದೇ ವೃತ್ತಿ ಮಾಡುವ ಈ ಸಮುದಾಯದ ಯುವಕರು ಕೂಡ ಈ ಎಲ್ಲಾ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಈ ಕುರಿತು ೫೦ ವರ್ಷ ವಯಸ್ಸಿನ ಜಲಗಾರ ಮಹಿಳೆ ಕಿಟ್ಟಮ್ಮನವರನ್ನು ಕೇಳಿದರೆ; “ಕಸ ಗುಡಿಸೋ ಕೆಲಸ ಇದ್ರೆ ನಮ್ಮ ಜೀವನ. ಇದ ಬಿಟ್ರೆ ಇನ್ನೇನು ಇಲ್ಲ. ಗಲೀಜು ಕೆಲಸ ಮಾಡಬೇಕು ಅಂದ್ರೆ ಸರಾಪ್ ಕುಡಿಲೇಬೇಕು. ಇಲ್ಲ ಅಂದ್ರೆ ಕೆಲಸ ಮಾಡೋಕೆ ಆಗಲ್ಲ. ಈ ಕೆಲಸದಿಂದಾನೇ ನಮ್ಮ ಜನ ಕುಡಿಯೋದು ಕಲ್ತ್ರು” ಎಂದು ನೋವಿನಿಂದ ಹೇಳುತ್ತಾರೆ. ಮಕ್ಕಳ ಸ್ಥಿತಿಯಂತೂ ಚಿಂತಾಜನಕವಾದುದು. “ಇವರಲ್ಲಿ ಬಹುತೇಕ ಎಲ್ಲರೂ ಬದುಕುವುದು ಕೊಳಗೇರಿಗಳಲ್ಲಿ. ಬದುಕೂ ಕೊಳೆಗೇರಿಯೇ ಆಗಿದೆ. ಅವರ ಮಕ್ಕಳು ಈಗಲೂ ಶಾಲೆಗೆ ಹೋಗುವುದಿಲ್ಲ. ಅತ್ತ ಅಪ್ಪ ಅಮ್ಮ ಒಳಚರಂಡಿ ಸ್ವಚ್ಛ ಮಾಡಲು, ಕಸಗುಡಿಸಲು ಹೋದರೆ ಇತ್ತ ಮಕ್ಕಳು ಮನೆಯ ಪಕ್ಕದಲ್ಲಿಯೇ ಚರಂಡಿಗಳಲ್ಲಿ ಇಳಿದು ತಮ್ಮ ಭವಿಷ್ಯ ಹುಡುಕುತ್ತಾರೆ. ತಿಪ್ಪೆಗುಂಡಿಯಲ್ಲಿ ಇಳಿದು ಏನಾದರೂ ಉಪಯೋಗಕ್ಕೆ ಬರುವ ವಸ್ತುಗಳು ಸಿಕ್ಕುತ್ತವೆಯೋ ಎಂದು ಅರಸುತ್ತಾರೆ.”[12]

ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಕೌಟುಂಬಿಕ ಜವಾಬ್ದಾರಿ ಪ್ರಧಾನವಾಗಿ ಹೆಣ್ಣಿನದೆ. ಗಂಡನಾದವನು ತನ್ನ ದುಡಿಮೆಯ ಬಹುಪಾಲನ್ನು ಕುಡಿತದಂತಹ ದುಶ್ಚಟಗಳಿಗೆ ವ್ಯಯಿಸುವುದರಿಂದ, ಅವನ ಆದಾಯದಲ್ಲಿ ಕನಿಷ್ಠ ಪ್ರಮಾಣದ ಹಣ ಕುಟುಂಬ ನಿರ್ವಹಣೆಗೆ ಸಿಕ್ಕರೆ ಉಂಟು, ಇಲ್ಲದಿದ್ದರೆ ಇಲ್ಲ. ಬಹುತೇಕ ಕುಟುಂಬಗಳು ತಾಯಿಯ ದುಡಿಮೆಯ ಆದಾಯದ ನಿರೀಕ್ಷೆಯಲ್ಲಿಯೇ ಬದುಕುತ್ತಿರುತ್ತವೆ. ಹೆಣ್ಣು ಕೂಡ ಗಂಡಿಗೆ ಸರಿಸಮನಾಗಿ ದುಡಿಯುವುದರಿಂದ ಇದು ಸಾಧ್ಯ. ಗಂಡನ ಹಾಗೆ ಹೆಣ್ಣು ಕೂಡ ದುಶ್ಚಟಗಳಿಗೆ ಬಲಿಯಾದರೆ ಇಡೀ ಕುಟಂಬ ಮತ್ತು ಮಕ್ಕಳು ಸರ್ವನಾಶವೇ ಸರಿ. ಇದಕ್ಕೆ ಸಾಕಷ್ಟು ಉದಾಹರಣೆಗಳು ಕಾಣಸಿಗುತ್ತವೆ. ಇದೇ ಸಂದರ್ಭದಲ್ಲಿ, ತಮ್ಮ ದುಡಿಮೆಯ ಆದಾಯ ಹಾಗೂ ಗಂಡ ಕೊಡುವ-ಆತನಿಂದ ಬಲವಂತವಾಗಿ ತನು ಪಡೆಯುವ – ಕನಿಷ್ಠ ಪ್ರಮಾಣದ ಹಣವನ್ನು ಸಂಗ್ರಹಿಸಿ ದುಂದು ವೆಚ್ಚಮಾಡದೆ, ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುತ್ತಲೇ ಇಡೀ ಕುಟುಂಬವನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿರುವ ಬುದ್ದಿವಂತ ಹೆಣ್ಣುಮಕ್ಕಳು ಜಲಗಾರ ಸಮುದಾಯದಲ್ಲಿ ಇರುವುದನ್ನು ಮರೆಯಬಾರದು. ಮನೆಯವರೆಲ್ಲರ ಊಟ, ಉಪಚಾರ, ಮಕ್ಕಳ ಪೋಷಣೆಯ ಜವಾಬ್ದಾರಿ ಹೆಚ್ಚು ಹೆಣ್ಣಿನದೆ. ಮನಗೆ ಬಂದ ಸೊಸೆಯಂದಿರು ಕೂಡ ಅತ್ತೆಯ ನೀತಿ-ನಿಯಮಗಳನ್ನು ಮೀರುವಂತಿಲ್ಲ. “ನಮ್ಮ ಕಾಲದಲ್ಲಿ ಅತ್ತೆ ಹೇಳಿದಂಗೆ ಸೊಸೆ ಕೇಳಬೇಕಿತ್ತು. ಅವರಿಗೆ ಎದುರಾಗಿ ಮಾತಾಡುವಾಗಿರಲಿಲ್ಲ. ಸೊಸೆಯಂದಿರು ಹೇಳಿದ ಮಾತು ಕೇಳಲಿಲ್ಲ, ಹೇಳಿದ ಕೆಲಸ ಮಾಡಲಿಲ್ಲ. ಅಂದರೆ ಮುಖಕ್ಕೆ ಉಗಿಯೋರು; ಕಸದ ಪೊರಕೆಯಲ್ಲಿ ಹೊಡೆಯೋರು. ನಮ್ಮತ್ತೆನೆ ನನ್ನ ಬೀದಿ ಗುಸಿಸೋ ಕೆಲಸಕ್ಕೆ ಸೇರಿಸಿದ್ದು. ಅತ್ತೆ ಅಂದರೆ ನನಗೆ ತುಂಬಾ ಭಯ. ಅವರ ಬೈದರೆ ಗಡಗಡನೆ ನಡುಗುತ್ತಿದ್ದೆ” ಎಂಬುದಾಗಿ ಆನೆಕಲ್ ಮುನಿಯಮ್ಮ ತಮ್ಮ ಅತ್ತೆಯವರನ್ನು ಕುರಿತು ನೆನಪಿಸಿಕೊಳ್ಳುತ್ತಾರೆ.

ಜಲಗಾರ ಸಮುದಾಯದ ಗಂಡು-ಹೆಣ್ಣುಗಳ ಉಡುಗೆ-ತೊಡುಗೆಗಳಲ್ಲಿ ವಿಶೇಷವಾದ ಸೌಂದರ‍್ಯಪ್ರಜ್ಞೆ ಕಂಡುಬರುತ್ತದೆ. ಇವರು ವಾಸಿಸುವ ಪ್ರದೇಶದ ಸುತ್ತಮುತ್ತಲಿನ ಸಾಮಾನ್ಯ ಜನರು ತೊಡುವ ಉಡುಗೆ-ತೊಡುಗೆಗಳನ್ನೂ ಕೂಡ ಅನುಕರಿಸುತ್ತಾರೆ. ಇವರು ತೊಡುವ ಬಟ್ಟೆ ಹಾಗೂ ಕೊಳಚೆಗೆ ಒಂದು ರೀತಿಯಲ್ಲಿ ಅವಿನಾಭಾವ ಸಂಬಂಧ. ಹೆಣ್ಣುಮಕ್ಕಳು ಹೆಚ್ಚಾಗಿ ಸೀರೆ, ಕುಬುಸ ತೊಡುತ್ತಾರೆ. ಹೆಚ್ಚು ಪೌರಕಾರ್ಮಿಕರು ನಗರಸಭೆ, ಪುರಸಭೆಗಳು ವರ್ಷಕ್ಕೊಮ್ಮೆ ಕೊಡುವ ಸಮವಸ್ತ್ರಗಳನ್ನೇ ಆಶ್ರಯಿಸಿರುತ್ತಾರೆ. “ಇವರ ಹೆಂಗಸರು ಆಭರಣ ಪ್ರಿಯರು. ಉಡುಗೆ-ತೊಡುಗೆಯಲ್ಲಿ ತುಂಬಾ ಅಲಂಕಾರವನ್ನು ಕಾಣಬಯಸುವವರು. ಪೂರ್ವದಲ್ಲಿ ಹೆಂಗಸರು ಸೊಂಟದಿಂದ ಮೇಲೆ ವಸ್ತ್ರ ತೊಡುವ ಕ್ರಮ ಇಲ್ಲವಾಗಿತ್ತು. ಕಿವಿಗೆ ಬೆಂಡೋಲೆ, ಕೊರಳಿಗೆ ಮಣಿಸರ, ಕೈಗಳಿಗೆ ಹಿತ್ತಾಳೆಯ ಅಥವಾ ತಾಮ್ರದ ಬಳೆಗಳನ್ನು ಧರಿಸುತ್ತಿದ್ದರು. ಆದರೆ ಈಗ ಬಂಗಾರದ ಸರಗಳನ್ನೂ, ಕವಿಗೆ ಮತ್ತು ಮೂಗಿಗೆ ಚಿನ್ನದ ಆಭರಣಗಳನ್ನೂ ಧರಿಸಿಕೊಳ್ಳತೊಡಗಿದ್ದಾರೆ”[13] ಎಲೆ, ಅಡಿಕೆ ಜಗಿಯುವುದು ಈ ಸಮುದಾಯದ ಬಹುತೇಕ ವೃತ್ತಿಪರ ಮಹಿಳೆಯರ ಹವ್ಯಾಸ. ಶ್ರಮಜೀವಿಗಳಾದ ಗಂಡು-ಹೆಣ್ಣುಗಳಿಬ್ಬರು ಕೆಲಸದ ಶ್ರಮ ಹಾಗೂ ಆಯಾಸವನ್ನು ನೀಗಿಕೊಳ್ಳುವ ಕಾರಣಕ್ಕಾಗಿ ಅತಿ ಹೆಚ್ಚು ಟೀ, ಕಾಫಿ ಸೇವಿಸುವುದುಂಟು. ಬೆಳಗಿನ ಜಾವದಲ್ಲೇ ಎದ್ದು ನಗರ ಸ್ವಚ್ಛತೆಗಾಗಿ ತೆರಳುವ ಮುನ್ನ ಬಹುತೇಕ ಮಂದಿ ಊಟ ಮಾಡುವುದಿಲ್ಲ. ತಮ್ಮ ಕರ್ತವ್ಯ ಮುಗಿಸಿ ಮನೆಗೆ ಮರಳುವುದು ಮಧ್ಯಾಹ್ನದ ಹೊತ್ತಿಗೆ. ಮನಗೆ ಬಂದು ಸ್ನಾನ ಮುಗಿಸಿದ ನಂತರವೆ ಊಟ. ಯಾವುದೇ ಚಟಗಳಿಗೆ ಬಲಿಯಾಗದವರು ಇದನ್ನು ನಿಯಮಬದ್ಧವಾಗಿ ಪಾಲಿಸುವುದರೊಟ್ಟಿಗೆ ತಮ್ಮ ಆರೋಗ್ಯದ ಕಡೆಯೂ ಸಾಧ್ಯವಾದಷ್ಟುಮಟ್ಟಿಗೆ ಗಮನಹರಿಸುತ್ತಾರೆ.

ಜಲಗಾರ ಸಮುದಾಯದಲ್ಲೂ ಶ್ರೀಮಂತವಾದ ಆಚಾರ, ವಿಚಾರ, ನಂಬಿಕೆ ಸಂಪ್ರದಾಯಗಳು ರೂಢಿಯಲ್ಲಿವೆ. ಹುಟ್ಟು, ಸಾವು, ಮದುವೆ, ಹಬ್ಬಗಳಿಗೆ ಸಂಬಂಧಿಸಿದ ಆಚರಣೆಗಳಿವೆ. ಇವೆಲ್ಲವೂ ಕೂಡ ಅವರ ಸಾಂಸ್ಕೃತಿ ಅಸ್ತಿತ್ವವನ್ನು ದೃಢಪಡಿಸುತ್ತವೆ. ಜಲಗಾರ ಸಮುದಾಯಗಳು ತಮ್ಮದೇ ಆದ ದೇವರು, ಸಂಪ್ರದಾಯ, ಹಬ್ಬ ಆಚರಣೆಗಳ ಜೊತೆಗೆ, ತಾವು ನೆಲೆನಿಂತ ಪ್ರದೇಶದ ಇತರೆ ಸಮುದಾಯಗಳು ಆಚರಿಸುವ ಹಬ್ಬ, ಆಚರಣೆ ಸಂಪ್ರದಾಯಗಳನ್ನು ಪಾಲಿಸುವುದುಂಟು. ಆ ಮುಖೇನ ಸ್ಥಳೀಯ ಜನಸಮುದಾಯಗಳೊಟ್ಟಿಗೆ ಬೆರೆಯುತ್ತಲೇ ತಮ್ಮ ಅಸ್ತಿತ್ವವನ್ನು ಇವರು ಕಾಯ್ದುಕೊಂಡಿದ್ದಾರೆ.


[1]        ’ಭಂಗಿ ಜನಕಥಾ’ (ಅಸ್ಪೃಶ್ಯರ ಆತ್ಮಕಥೆ). ಹಿಂದಿ ಮೂಲ: ಭಗವಾನ್ ದಾಸ್, ಕನ್ನಡಕ್ಕೆ ಕೆ.ನಾರಾಯಣಸ್ವಾಮಿ: ’ಅನುವಾದಕರ ಮಾತು’ – ಕೆ.ನಾರಾಯಣಸ್ವಾಮಿ :ಪ್ರ: ಚೇತನಾ ಪ್ರಿಂಟರ‍್ಸ್‌, ಬೆಂಗಳೂರು, ೧೯೮೫.

[2]        ಅದೇ, ಪು. ೧೩

[3]      ಅದೇ, ಪು. ೨೧,೨೨.

[4]        ಅದೇ ,ಪು. ೫೫, ೫೬

[5]        ಅದೇ, ಪು. ೭೩

[6]      ಅದೇ, ಪು. ೭೭

[7]        “ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ ಮತ್ತು ಗಿರಿಜನರ ಸಾಮಾಜಿಕ ಇತಿಹಾಸ” :ಪಿ.ಕಮಲಾಕ್ಷ: ’ತೋಟಿ’ – ಪು.೧೨೧: ಮಂಗಳೂರು: ೧೯೬೮.

[8]        ಅದೇ, ಪು. ೧೨೩

[9]        ಪ್ರಜಾವಾಣಿ: ೧೩ನೇ ಆಗಸ್ಟ್ ೨೦೦೬: “ಕಮರಿದ ಬದುಕು”- ರವೀಂದ್ರ ಭಟ್ಟ.

[10]       “ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು”-ಸಂ: ದೊಡ್ಡಹುಲ್ಲೂರು ರುಕ್ಕೋಜಿ: ’ಪೌರಕಾರ್ಮಿಕರ ದುರಂತ’: ಪು. ೨೦೪.

[11]       ಪ್ರಜಾವಾಣಿ: ೧೩ನೇ ಆಗಸ್ಟ್ ೨೦೦೬: “ಕಮರಿದ ಬದುಕು” – ರವೀಂದ್ರಭಟ್ಟ

[12]       ಅದೇ

[13]       “ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ ಮತ್ತು ಗಿರಿಜನರ ಸಾಮಾಜಿಕ ಇತಿಹಾಸ” – ಪಿ.ಕಮಲಾಕ್ಷ: ಪು. ೧೨೫.