ಹುಟ್ಟು ಅಥವಾ ಬಾಣಂತಿತನ

ಗರ್ಭಿಣಿಗೆ ಮಾಡುವ ಶಾಸ್ತ್ರಕ್ಕೆ “ಬಸಿರಿ ವಸಗೆ” ಎಂದು ಕರೆಯುತ್ತಾರೆ. ತೆಲುಗಿನಲ್ಲಿ ಇದಕ್ಕೆ ’ಕೆಡಿಪುಟ್ರಾಲಕಿ ಗೆಂಜಗಾಸವೇಸಿದ’ ಎಂದು ಹೇಳುತ್ತಾರೆ. ಅಂದರೆ, ಗರ್ಭಿಣಿಗೆ ಅಡಿಗೆ ಮಾಡಿ ಹಾಕುವ ಶಾಸ್ತ್ರ ಎಂದರ್ಥ. ಹೆಣ್ಣು ಮಗಳ ಮೊದಲ ಹೆರಿಗೆ ತಾಯಿ ಮನೆಯಲ್ಲೆ ಆಗಬೇಕು. ಮಗಳಿಗೆ ಏಳು ತಿಂಗಳು ತುಂಬಿದಾಗ ತಾಯಿ ಮನೆಯವರು, ಊರಿನ ಯಜಮಾನರು, ಸಂಬಂಧಿಕರನ್ನು ಜೊತೆಯಲ್ಲಿ ಕರೆದುಕೊಂಡು ಮಗಳನ್ನು ಕರೆತರಲು ಆಕೆಯ ಗಂಡನ ಊರಿಗೆ ಹೋಗುತ್ತಾರೆ. ಆ ದಿನ ತಾಯಿ ಮನೆಯವರೆ ತಮ್ಮ ಸ್ವಂತ ಖರ್ಚಿನಲ್ಲಿ ಅಳಿಯನ ಮನೆಯವರಿಗೆಲ್ಲ ಊಟ ಹಾಕಿಸುತ್ತಾರೆ. ಊಟ ಆದ ಮೇಲೆ ಗರ್ಭಿಣಿಗೆ ಹೊಸ ಸೀರೆ ಉಡಿಸಿ, ಅರಿಶಿಣ, ಕುಂಕುಮ, ಹೂ ಮತ್ತು ಬಳೆ ತೊಡಿಸಿ ಕೂರಿಸುತ್ತಾರೆ. ಆಕೆಯ ಮುಂದೆ ಒಂಭತ್ತು ತಟ್ಟೆಗಳಲ್ಲಿ ಕೊಬ್ಬರಿ, ಬಿಳಿಬೆಲ್ಲ, ಎಲೆ, ಅಡಿಕೆ, ಹೂ, ಹಣ್ಣು, ಸಿಹಿತಿಂಡಿಗಳನ್ನು ಇಟ್ಟು ಅಲಂಕರಿಸುತ್ತಾರೆ. ಮುತ್ತೈದೆಯರು ಗರ್ಭಿಣಿಗೆ ಅರಿಶಿಣ, ಕುಂಕುಮ, ಬಳೆ, ಹೂ ತೊಡಿಸಿ ಅಕ್ಷತೆ ಹಾಕಿ ಶಾಸ್ತ್ರ ಮಾಡುತ್ತಾರೆ. ಈ ಶಾಸ್ತ್ರ ಮುಗಿದ ಮೇಲೆ “ಉಡಿ ತುಂಬುವ ಶಾಸ್ತ್ರ”. ಅಂದರೆ ಒಂದು ಬಟ್ಟೆಗೆ ಬೆಲ್ಲ, ಕಾಯಿ, ಎಲೆ, ಅಡಿಕೆ, ಬಾಳೆಹಣ್ಣು, ಒಂದು ಪಾವು ಅಕ್ಕಿ, ದುಡ್ಡನ್ನು ಹಾಕಿ ಗಂಟುಕಟ್ಟುತ್ತಾರೆ. ಇದನ್ನೆ ಉಡಿ ಎನ್ನುವರು. ಈ ಉಡಿಯನ್ನು ಹೆಣ್ಣುಮಗಳ ನಡುವಿಗೆ ಕಟ್ಟಿ ದೃಷ್ಟಿ ತೆಗೆದು ಗಂಡನ ಮನೆಯಿಂದ ಹೊರಡಿಸುತ್ತಾರೆ.

ಏಳು ಮತ್ತು ಒಂಬತ್ತು ತಿಂಗಳಿಗೊಮ್ಮೆ ಬಸರಿಗೆ ಕೈ ಎಣ್ಣೆ ಕುಡಿಸುತ್ತಾರೆ. ಕಾರಣ ಹೊಟ್ಟೆ ಒಳಗಿನ ಗಲೀಜು ಹೋಗಿ ಹೆರಿಗೆ ಸುಲಭವಾಗುತ್ತೆ ಅಂತ. ಮಗು ಹುಟ್ಟಿದ ಮೇಲೆ ಬಾಣಂತಿಗೆ ಕುಸಲಕ್ಕಿಯಲ್ಲಿ ಮಾಡಿದ ಸಪ್ಪೆ ಅನ್ನವನ್ನ ಊಟಕ್ಕೆ ಕೊಡುತ್ತಾರೆ. ಹೆರಿಗೆಯಾದ ೧೫ ದಿನಗಳ ತನಕ ಬಾಣಂತಿಗೆ ಮಾಂಸದ ಊಟ ಕೊಡುವುದಿಲ್ಲ. ಅನಂತರ ಆಡಿನ ಮಾಂಸದ ಊಟ ಕೊಡುತ್ತಾರೆ. ಬೆಳ್ಳುಳ್ಳಿ. ಈರುಳ್ಳಿ, ಧನ್ಯ, ಕೊತ್ಮೀರಿ ಹಾಕಿ ಆಡಿಸಿ ವಗ್ಗರಣೆ ಮಾಡಿದ ತಿಳಿಸಾರು, ಅನ್ನ ಕೊಡುತ್ತಾರೆ. ಮೂರು ತಿಂಗಳ ತನಕ ತಿಳಿಸಾರು, ಅನ್ನ ಕೊಡುತ್ತಾರೆ. ಬಾಣಂತಿಗೆ ೬ ತಿಂಗಳು ತುಂಬುವ ತನಕ ಸೊಪ್ಪು, ಬದನೆಕಾಯಿ, ಉರುಳಿಕಾಯಿ, ಕುಂಬಳಕಾಯಿ, ಮೊಟ್ಟೆಸಾರು ಕೊಡುವುದಿಲ್ಲ. ಕಾರಣ ಮಗುವಿಗೆ ಏನಾದರೂ ತೊಂದರೆ ಆಗುತ್ತದೆ ಅಂತ, ಮಗುಗೆ ಕೈ ಎಣ್ಣೆ (ಅರಳೆಣ್ಣೆ) ಕುಡಿಸುತ್ತಾರೆ. ಹೆರಿಗೆ ಆದ ಒಂಭತ್ತನೇ ದಿನಕ್ಕೆ ತಾಯಿ ಮಗುವಿಗೆ ಸ್ನಾನ ಮಾಡಿಸುತ್ತಾರೆ. ನಿಂಬೆಹಣ್ಣಿನ -ಎಲೆ, ನೀಲಗಿರಿಸೊಪ್ಪು, ಬೇವಿನ ಸೊಪ್ಪನ್ನ ನೀರಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಆ ನೀರಿನಿಂದ ತಾಯಿ, ಮಗುವಿಗೆ ಸ್ನಾನ ಮಾಡಿಸುತ್ತಾರೆ. ವಜ್ಜದ ಬೇರ ನೀರಲ್ಲಿ ನೆನಸಿ ದಾರದಲ್ಲಿ ಪೋಣಿಸಿ ತಾಯಿ-ಮಗು ಕುತ್ತಿಗೆಗೆ ಕಟ್ಟುತ್ತಾರೆ. ಕಾರಣ ತಾಯಿ-ಮಗುವಿಗೆ ದೃಷ್ಟಿ ತಾಗದಿರಲಿ ಅಂತ. ಜೊತೆಗೆ ಆ ಬೇರಿನಿಂದ ಒಂದು ಬಗೆಯ ವಾಸನೆ ಬರುವುದರಿಂದ ಕ್ರಿಮಿ-ಕೀಟಗಳು ಹತ್ತಿರ ಸುಳಿಯುವುದಿಲ್ಲ. ನೆಲಸ ಮೇಲೆ ಭತ್ತದ ಹುಲ್ಲು ಹಾಕಿ, ಅದರ ಮೇಲೆ ಚಾಪೆ ಹಾಸಿ, ಚಾಪೆ ಮೇಲೆ ತಾಯಿ, ಮಗೂನ ಮಲಗಿಸುತ್ತಾರೆ. ಕಾರಣ ಮೈ ಬಿಸಿಯಾಗಿರಲಿ ಅಂತ. ಕಸ್ತೂರಿ, ಗೋರೋಜ, ಹಳದಿ ಬಣ್ಣದ ಗಂಧದ ದ್ರವ್ಯವನ್ನು ಕತ್ತೆ ಹಾಲಲ್ಲಿ ಬೆರಸಿ ಕುಡಿಸಿದರೆ ಮಗು ಬಿಸಿಯಾಗಿರುತ್ತೆ ಮತ್ತು ಚೆನ್ನಾಗಿ ಜೀರ್ಣವಾಗುತ್ತೆ. ಇದನ್ನು ಮೂರು ದಿನಕ್ಕೆ ಒಂದು ಸಾರಿ ಮಾಡುತ್ತಾರೆ. ಬಾಣಂತಿಗೆ ಶಕ್ತಿ ಬರಲಿ ಅಂತ ಆಗಾಗ ತಲೆ-ಕಾಲು ಬೇಯಿಸಿದ ಸೂಪ್ ಮಾಡಿ ಕುಡಿಸುತ್ತಾರೆ.

ಗರ್ಭಿಣಿ ನೀರು ಹಾಕಿಕೊಂಡ ಮನೆಯನ್ನು ಸೂತಕದ ಮನೆ ಅಂತ ಕರೆಯುತ್ತಾರೆ. ಹೆರಿಗೆಯಾದ ೨ ಅಥವಾ ೫ ಅಥವಾ ೬ ನೇ ದಿನಕ್ಕೆ ಸೂತಕ ತೆಗೆಯೋ ಶಾಸ್ತ್ರ ಮಾಡುತ್ತಾರೆ. ಈ ಸೂತಕ ತೆಗೆಯೋವರೆಗೆ ಬೇರೆಯವರು ಯಾರೂ ಕೂಡ ಇವರ ಮನೆಗೆ ಬರುವುದಿಲ್ಲ. ಇವರು ಕೂಡ ಯಾರ ಮನೆಗೂ ಹೋಗುವ ಹಾಗಿಲ್ಲ. ಸೂತಕ ತೆಗೆಯೋ ದಿನ ೧೨ ಬಿಳಿ ಅಥವಾ ಕೆಂಪು ಎಕ್ಕದ ಎಲೆಗಳನ್ನು ತರಬೇಕು. ಅದರಲ್ಲಿ ಒಂದನ್ನು ಗಿಡದ ಹತ್ತಿರವೆ ಹಾಕಿ ಉಳಿದ ೧೧ ಎಲೆಗಳನ್ನು ಮನೆಗೆ ತಂದು ಬಿಳಿ ಬಟ್ಟೆಯಲ್ಲಿ ಕಟ್ಟಿದ ತೊಟ್ಟಿಲ ಕೆಲಗೆ ಜೋಡಿಸಿಡುತ್ತಾರೆ. ಆ ಎಲೆಗಳ ಮೇಲೆ ರಾಗಿ ಮುದ್ದೆ, ಅನ್ನ, ಸಾರು ಇಡುತ್ತಾರೆ. ಜೊತೆಗೆ ಕಾಳುಮೆಣಸು, ಒಣಶುಂಠಿ, ಬೆಲ್ಲ ಹಾಕಿ ಕುದಿಸಿದ ಪಾಕವನ್ನು ಇಡುತ್ತಾರೆ. ಇದನ್ನು ತೆಲುಗಿನಲ್ಲಿ ’ಕೊಟ್ಟಕಾರಮು’ ಅಂತ ಕರೆಯುತ್ತಾರೆ. ಸೆಗಣಿಗೆ ಗರಿಕೆ ಇಟ್ಟು ಗಣಪನ ಮಾಡಿ ಅದನ್ನು ಎಲೆಗಳ ಜೊತೆ ಇಟ್ಟು ತೊಟ್ಟಿಲನ್ನು ಸಿಂಗರಿಸಿ, ಮೊದಲು ಹಿರಿಯರು ಪೂಜೆ ಮಾಡುತ್ತಾರೆ. ಇದಕ್ಕೆ ಮುಂಚೆ ಊರ ಹೊರಗಿನ ತೋಟ ಅಥವಾ ಬಯಲಿಗೆ ಹೋಗಿ ’ಬಯಲ ಮುನೇಶ್ವರ’ನನ್ನು ಪೂಜಿಸುವುದು ವಾಡಿಕೆ. ತಾಯಿ-ಮಗುವನ್ನು ಕರೆದುಕೊಮಡು ನೆಂಟರಿಷ್ಟರೆಲ್ಲ ತೋಟಕ್ಕೆ ಹೋಗುತ್ತಾರೆ. ಮುನೇಶ್ವರನಿಗೆ ಕೋಳಿಯನ್ನು ಬಲಿ ಕೊಡುವಾಗ ತಾಯಿ ಆ ಕೋಳಿಯ ರೆಕ್ಕೆ ಹಿಡಿದುಕೊಳ್ಳಬೇಕು. ಬಲಿ ಕೊಟ್ಟ ಕೋಳಿಯ ರಕ್ತವನ್ನು ತಾಯಿ-ಮಗುವಿನ ಹಣೆಗೆ ಹಚ್ಚುತ್ತಾರೆ. ನಂತರ ತಾಯಿ ಮಗುವನ್ನು ಎತ್ತುಕೊಂಡು ಕೋಳಿ ಕುಯ್ದು ಚೂರಿಯನ್ನು ದಾಟಿಕೊಂಡು ಹಿಂದಕ್ಕೆ ತಿರುಗಿ ನೋಡದೆ ಮನೆಗೆ ಹೋಗಬೇಕು.

ಹಿರಿಯರು ತೊಟ್ಟಿಲ ಪೂಜೆ ಮಾಡಿದ ಮೇಲೆ, ಗುಂಡುಕಲ್ಲನ್ನು ಮೊದಲು ತೊಟ್ಟಿಲಲ್ಲಿ ಹಾಕಿ ತೂಗುತ್ತಾರೆ. ನಂತರ ೫ ಜನ ಮುತ್ತೈದೆಯರು ಮಗುವಿನ ಕಿವಿಯಲ್ಲಿ ಹೆಸರೇಳಿ ಆ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ತೂಗುತ್ತಾರೆ. ಶಾಸ್ತ್ರಕ್ಕೆ ಬಂದ ನೆಂರು ಮಗುಗೆ ಉಡುಗೊರೆ ಕೊಡುತ್ತಾರೆ. ಇಲ್ಲಿ ನಾಮಕರಣ ಶಾಸ್ತ್ರ ಮುಗಿದ ಹಾಗೆ. ಈ ಶಾಸ್ತ್ರ ಮುಗಿದ ೩ ಅಥವಾ ೫ ತಿಂಗಳಿಗೆ ಗಂಡನ ಮನೆಯವರು ಬಂದು ತಮ್ಮದೇ ಖರ್ಚಿನಲ್ಲಿ ಹುಡುಗಿ (ಬಾಣಂತಿ) ಮನೆಯವರಿಗೆ ಊಟ ಹಾಕಿಸುತ್ತಾರೆ.ಮಗಳು ಗಂಡನ ಮನೆಗೆ ಹೋಗುವಾಗ ತವರಿನ ಮನೆಯಲ್ಲಿ ತಾಯಿ-ಮಗುಗೆ ಹೊಸ ಬಟ್ಟೆ, ಚಿನ್ನದ ಒಡವೆ ಮತ್ತು ತೊಟ್ಟಿಲನ್ನು ಕೊಟ್ಟು ಕಳುಹಿಸುತ್ತಾರೆ. ಹೆತ್ತ ತಾಯಿನೆ ಮಗಳು-ಮೊಮ್ಮಗುವನ್ನು ಕರೆದುಕೊಂಡು ಹೋಗಿ ಆಕೆಯ ಗಂಡನ ಮನೆಗೆ ಬಿಟ್ಟುಬರುವ ಸಂಪ್ರದಾಯವಿದೆ. ಮಗೂಗೆ ೭ ತಿಂಗಳು ತುಂಬಿದ ಮೇಲೆ ಸೋದರಮಾವ ಕಿವಿ ಚುಚ್ಚಿ, ಹೊಸ ಬಟ್ಟೆ ಉಡುಗೊರೆ ಕೊಡುತ್ತಾನೆ. ಬಯಲ ಮುನೇಶ್ವರನಿಗೆ ಮಗುವಿನ ಮೊದಲ ಮುಡಿ ಕೊಡುತ್ತಾರೆ. ಮುಡಿ ಕೊಟ್ಟ ಮೇಲೆ ಕರಿ ಕೋಳಿಯನ್ನು ಮುನೇಶ್ವರನಿಗೆ ಬಲಿಕೊಟ್ಟು ಅದರ ತಲೆಯನ್ನುಮೂರು ದಾರಿ ಕೂಡುವ ಜಾಗದಲ್ಲಿ ಗುಂಡಿ ತೋಡಿ ಮುಚ್ಚುತ್ತಾರೆ.

ಮೈನೆರೆದಾಗ(ಋತುಮತಿ)

ಹೆಣ್ಣು ಮಗಳು ಮೈನೆರೆದಾಗ ಆಕೆಗೆ ಮಾಡುವ ಶಾಸ್ತ್ರಕ್ಕೆ ಗುಡ್ಲು ಕೂಡುವ ಶಾಸ್ತ್ರ ಎಂದು ಕರೆಯುತ್ತಾರೆ. ಮೈನೆರೆದ ಹುಡುಗಿಯ ಮನೆ ಸೂತಕದ ಮನೆ. ಈ ಸೂತಕ ಕಳೆಯುವವರೆಗೂ ಬೇರೆಯವರು ಇವರ ಮನೆಗೆ ಬರುವ ಹಾಗಿಲ್ಲ. ಹಾಗೆಯೇ ಇವರು ಕೂಡ ಬೇರೆಯವರ ಮನೆಗೆ ಹೋಗುವ ಹಾಗಿಲ್ಲ. ಮೈನೆರೆದ ಹುಡುಗಿಗೆ ಬೆಳಿಗ್ಗೆ ಸೂರ್ಯ ಹುಟ್ಟುವ ಮೊದಲೆ ಸ್ನಾನ ಮಾಡಿಸಿ, ಅರಿಶಿನ ಕುಂಕುಮ, ಹೂ, ಬಳೆ ತೊಡಿಸಿ, ಹೊಸ ಸೀರೆ ಉಡಿಸಿ, ಕೈಗೆ ಬೇವಿನ ಸೊಪ್ಪು ಮತ್ತು ಕಬ್ಬಿಣದ ಚೂರನ್ನು ಹಿಡಿಸಿ ಮನೆಯ ಹೊರಗೆ ಕಳುಹಿಸುತ್ತಾರೆ. ಆ ಹುಡುಗಿಯನ್ನು ಮನೆಯಿಂದ ಹೊರಗೆ ಕಳುಹಿಸುವವರು ಸೋದರತ್ತೆ ಆಗಿರಬೇಕು. ಇಲ್ಲ ಅತ್ತೆ ಸಮಾನರಾದವರು ಆಗಿರಬೇಕು. ಈ ಸೂತಕ ಕಳೆಯುವವರೆಗೆ ಹುಡುಗಿ ಮನೆಯಹೊರಗೆ ಗುಡಿಸಲಲ್ಲಿರಬೇಕು.

ಹುಡುಗಿ ಮೈನೆರೆದ ವಿಷಯವನ್ನು ಆಕೆಯ ಸೋದರ ಮಾವನಿಗೆ ಮುಟ್ಟಿಸುತ್ತಾರೆ. ಆತ ಬರೋವಾಗ ಅಂಕೋಲೆ ಕಡ್ಡಿ, ತೆಂಗಿನಗರಿ, ಬೇವಿನ ಸೊಪ್ಪು, ತಂದು ಗುಡ್ಲು ಕಟ್ಟುತ್ತಾನೆ. ಗುಡ್ಲು ಒಳಗೆ ಸೆಗಣಿ ನೀರಾಕಿ ನೆಲ ಸಾರಿಸಿ ದೀಪ ಹಚ್ಚಿಡುತ್ತಾರೆ. ಮೊದಲು ಸೋದರ ಮಾವ ಗುಡ್ಲು ಒಳಕ್ಕೆ ಹೋಗಿ ಬರಬೇಕು. ಆಮೇಲೆ ಹುಡುಗಿನ ಒಳಕ್ಕೆ ಕಳುಹಿಸುತ್ತಾರೆ. ಮೈನೆರೆದ ಹುಡುಗಿ ತಿಂದು ಬಿಟ್ಟ ಊಟವನ್ನು ಯಾರೂ ತಿನ್ನೋ ಹಾಗಿಲ್ಲ. ಪ್ರಾಣಿ ಪಕ್ಷಿಗಳು ಕೂಡ ಮುಟ್ಟೋ ಹಾಗಿಲ್ಲ. ಏಕೆಂದರೆ ಆಕೆಯ ಎಂಜಲು ದೋಷ. ಅದಕ್ಕೆ ಗುಡ್ಲು ಒಳಗಡೆ ಒಂದು ಗುಮಡಿ ತೋಡಿ ಅದರಲ್ಲಿ ಹಾಕಿ ಮುಚ್ಚಬೇಕು.

ಮೈನೆರೆದ ಹೆಣ್ಣು ಗುಡ್ಲಲ್ಲಿ ಒಟ್ಟು ಹನ್ನೆರಡು ದಿನ ಇರಬೇಕು. ಪ್ರತಿ ದಿನ ಆ ಹುಡುಗಿಗೆ ಕೊಬ್ಬರಿ, ಎಳ್ಳು, ಬೆಲ್ಲ, ಬೇಯಿಸಿದ ಉದ್ದು ಕೊಡುತ್ತಾರೆ. ಆಕೆಗೆ ಊಟವನ್ನು ತಟ್ಟಗೆ ಬದಲು ಮಡಿಕೆ ಚೂರಿನಲ್ಲಿ ಹಾಕಿಕೊಡುತ್ತಾರೆ. ಮೈನೆರೆದ ಹುಡುಗಿ ಜೊತೆ ಗುಡ್ಲಲ್ಲಿ ಆಕೆಗೆ ಸಾಲಾವಳಿ ಆಗೋ ಚಿಕ್ಕ ಹುಡುಗೀನ ಇರಿಸುತ್ತಾರೆ. ೧೨ ದಿನ ಕಳೆದ ಮೇಲೆ ಸೋದರ ಮಾವ ಬೆಳಗಿನ ಜಾವ ಸೂರ್ಯ ಹುಟ್ಟೋಕೆ ಮೊದಲು ಗುಡ್ಲು ಕೆಡವಿ ಅದರ ಗರಿ, ಸೊಪ್ಪು ಊರಿಂದ ಹೊರಗೆ ತಕ್ಕಂಡೋಗಿ ಸುಡುತ್ತಾನೆ. ಜೊತೇಲಿ ಮೈನೆರೆದ ಹುಡ್ಗಿನು ಹೋಗಿ, ತಾನು ಬಳಸುತ್ತಿದ್ದ ಚಾಪೆ, ಹೊದಿಕೆಯನ್ನು ಬೆಂಕಿಗೆ ಹಾಕಿ, ತಾನು ಊಟ ಮಾಡುತ್ತಿದ್ದ ಮಡಿಕೆ ಚೂರನ್ನು ನೆಲಕ್ಕೆ ಹಾಕಿ ಕಾಲಲ್ಲಿ ತುಳಿದು ಚೂರು ಮಾಡಿ ಹಿಂದಿರುಗಿ ನೋಡದೆ ಮನೆಗೆ ಬರಬೇಕು. ನಂತರ ಹುಡುಗಿಯನ್ನು ಮನೆ ಮುಂದೆ ನಿಲ್ಲಿಸಿ ಅವಳ ಸುತ್ತ ೧೨ ಎಕ್ಕದ ಎಲೆ ಇಟ್ಟು ಆ ಎಲೆಗಳ ಮೇಲೆ ಅರಿಶಿಣದ ಅನ್ನದ ಉಂಡೆ, ಮಡಿಕೆ, ಚಿಪ್ಪು, ಸಗಣಿ ಉಂಡೆ ಇಡುತ್ತಾರೆ. ನಂತರ ಮುತ್ತೈದೆಯರು ಒಬ್ಬೊಬ್ಬರಾಗಿ ಆ ಹುಡುಗಿಗೆ ಅರಿಶಿಣದ ನೀರು ಹುಯ್ಯುತ್ತಾರೆ. ಎಕ್ಕದ ಎಲೆಯನ್ನು ಹುಡುಗಿ ತನ್ನ ಬೆನ್ನ ಹಿಂದಕ್ಕೆ ಎಸೆಯಬೇಕು. ಅನಂತರ ಸ್ನಾನ. ಬಳಿಕ ಹುಡುಗಿಗೆ ಸೀರೆ ಉಡಿಸಿ ಅವಳಕೈಗೆ ಬಿಂದಿಗೆ ಕೊಟ್ಟು ಬಾವಿ ಹತ್ತಿರ ಕರೆದುಕೊಂಡು ಹೋಗಿ ತುಂಬಿದ ಬಿಂದಿಗೆಗೆ ಆಕೆ ಕೈಯಲ್ಲಿ ಪೂಜೆ ಮಾಡಿಸಿ, ಆಕೆ ಕೈಯಲ್ಲೇ ತುಂಬಿದ ಬಿಮದಿಗೆ ಹೊರಿಸಿಕೊಂಡು ಮನೆಗೆ ಕರೆತರುತ್ತಾರೆ. ಇಲ್ಲಿ ’ಮೈನೆರೆದ ಸೂತಕ ಕಳೀತು’ ಅಂತ ಅರ್ಥ. ಗುಡ್ಲು ಹಾಕಿದ ಸೋದರ ಮಾವನಿಗೆ ಬಿಸಿನೀರು ಸ್ನಾನ ಮಾಡಿಸಿ, ತಂಬಿಟ್ಟು, ತುಪ್ಪದ ಊಟ ಹಾಕುತ್ತಾರೆ. ಮೈನೆರೆದ ಹುಡುಗಿ ೧೨ ದಿನ ಗುಡ್ಲಲ್ಲಿ ಇರುವಾಗ ಪ್ರತಿದಿನ ಒಬ್ಬೊಬ್ಬರು ಸಂಬಂಧಿಕರು ಆಕೆಗೆ ತಂಬಿಟ್ಟು, ತುಪ್ಪದ ಊಟ ತಂದುಕೊಡುವುದು ವಾಡಿಕೆ. ಇದರ ಜೊತೆಗೆ ಕೋಳಿಮೊಟ್ಟೆ, ಉಚ್ಚಳ್ಳೆಣ್ಣೆಲ್ಲಿ ಕೊಬ್ರಿ ನೆನಸಿ ಊಟಕ್ಕೆ ಕೊಡುತ್ತಾರೆ.

ಜಲಗಾರ ಸಮುದಾಯದ ಹಿರಿಯ ವಕ್ತೃ ವೆಂಕಟೇಶ್ ಹೀಗೆ ಹೇಳುತ್ತಾರೆ. “ಮೈನೆರೆದ ಹುಡುಗಿ ಮಡ್ಲಿಗೆ ಕಡ್ಲೆಪುರಿ, ಕೊಬ್ರಿ, ಕಲ್ಲುಸಕ್ಕರೆ, ಹಣ್ಣು, ಸಿಹಿತಿಂಡಿ ಹಾಕಿ ಗುಡ್ಲಿಗೆ ಬಿಡ್ತಾರೆ. ಆ ಸಮಯದಲ್ಲಿ ಯಾರೂ ಅವಳನ್ನು ಮುಟ್ಟಿಕೊಳ್ಳೋದಿಲ್ಲ. ಅವಳ ಬಟ್ಟೆನ ಅವಳೆ ತೊಳ್ಕೋಳ್ಳಬೇಕು. ಯಾರೂ ಸಹಾಯ ಮಾಡಂಗಿಲ್ಲ. ಎಲ್ಲಕ್ಕಿಂತ ಇದೇ ಮನುಷ್ಯನಿಗೆ ದೊಡ್ಡ ದೋಷ.”

ವಸಗೆ ಶಾಸ್ತ್ರ

ಮೈನೆರೆದ ಸೂತಕ ಕಳೆದು ೫ ತಿಂಗಳ ನಂತರ ಈ ಶಾಸ್ತ್ರ ಮಾಡುತ್ತಾರೆ. ತೆಲುಗಿನಲ್ಲಿ ಇದನ್ನು ’ಸೀರಲು’ ಶಾಸ್ತ್ರ ಎಂದು ಕರೆಯುತ್ತಾರೆ. ಈ ಶಾಸ್ತ್ರವನ್ನು ಹುಡ್ಗಿ ಮದುವೆ ಮುಂಚೆ ಮಾಡುತ್ತಾರೆ. ಈ ಶಾಸ್ತ್ರದ ದಿನ ಊಟದ ಖರ್ಚು ಹುಡುಗಿ ಮನೆಯವರದಾದರೆ, ಉಳಿದ ಖರ್ಚು ಸೋದರ ಮಾವನದು. ಹುಡ್ಗಿಗೆ ಸಂಬಂಧಿಸಿದ ಉಡುಗೆ, ತೊಡುಗೆ, ಹಣ್ಣು, ತಿಂಡಿಗಳನ್ನು ಸೋದರಮಾವ ತಂದಿರುತ್ತಾನೆ. ಶಾಸ್ತ್ರದ ದಿನ ಊರಿನ ಯಜಮಾನರು, ಹುಡುಗಿ ಸೋದರ ಮಾವ ತನ್ನ ಸೊಸೆಗೆ ಇಂತಿಂಥ ಸಾಮಾನುಗಳನ್ನು ತಂದಿದ್ದಾನೆ ಅಂತ ಸಭೇಲಿ ಕೂಗಿ ಹೇಳುತ್ತಾರೆ. ಆಗ ಎಲ್ಲರೂ ಸೋದರಮಾವನನ್ನು ಗೌರವಿಸುತ್ತಾರೆ.

ಸೋದರ ಮಾವ ತಂದ ಒಡವೆ, ಬಟ್ಟೆಗಳನ್ನು ಹುಡುಗಿಗೆ ತೊಡಿಸಿ ಶೃಂಗಾರ ಮಾಡಿ ಹಸೆಮಣೆ ಮೇಲೆ ಕೂರಿಸುತ್ತಾರೆ. ಆಗ ಬಂದಿರುವ ನೆಂಟರಿಷ್ಟರು ಹುಡುಗಿಗೆ ತಾವು ತಂದಿರುವ ಉಡುಗೊರೆಯನ್ನು ಮುಯ್ಯಿ ಮಾಡುತ್ತಾರೆ. ಶಾಸ್ತ್ರ ಮುಗಿದ ಮೇಲೆ ಎಲ್ಲರಿಗೂ ಊಟ ಹಾಕುತ್ತಾರೆ. ಮಾರನೆಯ ದಿನ ಸೋದರ ಮಾವ ಮತ್ತು ಅವನ ಹೆಂಡತಿಗೆ ಮಾಸದ ಅಡಿಗೆ ಮಾಡಿ ಊಟ ಹಾಕಿಸಿ ಇಬ್ಬರಿಗೂ ಬಟ್ಟೆ ಉಡುಗೊರೆ ಕೊಟ್ಟು ಕಳುಹಿಸುತ್ತಾರೆ.

ಮದುವೆ ಶಾಸ್ತ್ರ

ಮದುವೆ ಇನ್ನು ಏಳು ಅಥವಾ ಐದು ಅಥವಾ ಒಂಭತ್ತು ದಿನ ಬಾಕಿ ಇರುವಾಗ ಮದುಮಕ್ಕಳನ್ನು ಕರೆದು ಅರಿಶಿಣದ ನೀರು ಹುಯ್ಯುವುದು ಸಂಪ್ರದಾಯ. ಮೊದಲು ತಾಯಿ ಮನೆಯಲ್ಲಿ ನೀರು ಹುಯ್ದು ಮೇಲೆ ಉಳಿದ ಸಂಬಂಧಿಕರು ನೀರು ಹುಯ್ಯುತ್ತಾರೆ. ನೀರು ಹುಯ್ಯುವ ಶಾಸ್ತ್ರದಲ್ಲಿ ಮುತ್ತೈದೆಯರದು ಪ್ರಮುಖ ಪಾತ್ರ. ಹೆಣ್ಣಿಗೆ ನೀರು ಹಾಖಿದ ಮೇಲೆ ಬಾಳೆಹಣ್ಣು, ತುಪ್ಪ, ತಂಬಿಟ್ಟಿನ ಊಟ ಹಾಕುತ್ಚತಾರೆ. ಹೆಣ್ಣಿನ ಜೊತೆ ಚಿಕ್ಕ ಹುಡುಗಿಯನ್ನು ಊಟಕ್ಕೆ ಕೂರಿಸುತ್ತಾರೆ. ಇದಕ್ಕೆ ’ಅಡ್ಲದಂಗಿ’ (ತೋಡ್ ಪೆಂಡ್ಲಿ ಕೂತ್ರು) ಅಂತಾರೆ. ಹೆಣ್ಣನ್ನು ಸ್ನಾನಕ್ಕೆ ಕೂರಿಸೋ ಮೊದಲು ಸೋದರಮಾವ ಕಾಲುಂಗುರ ಹಾಕುತ್ತಾರೆ. ಮದುವೆ ಹೆಣ್ಣಿನ ಮನೆ ಹತ್ತಿರ ನಡೆಯುವುದು ಸಂಪ್ರದಾಯ.

ಮದುವೆ ಮನೆಯ ಮುಂದೆ ೫ ಕಂಬದ ಚಪ್ಪರ ಹಾಕುತ್ತಾರೆ. ಸೂರ್ಯೋದಯಕ್ಕೆ ಮುಂಚೆ ಐದು ಜನ ಮುತ್ತೈದೆಯರು ಒಂದು ಕಂಬ ನೆಟ್ಟು, ಅದಕ್ಕೆ ಬಿಳಿ ಸುಣ್ಣ, ಕೆಮ್ಮಣ್ಣು ಬಳಿಯುತ್ತಾರೆ. ನಂತರ ನವಧಾನ್ಯ, ನಲ್ಕಾಣೆ ಪಾವಲಿಯನ್ನು ಅರಿಶಿಣ ಬಟ್ಟೆಯಲ್ಲಿ ಹಾಕಿ ಗಂಟಾಕಿ ಅದನ್ನು ಕಂಬಕ್ಕೆ ಕಟ್ಟುತ್ತಾರೆ. ಉಳಿದ ನಾಲ್ಕು ಕಂಬಗಳನ್ನು ಗಂಡಸರು ನೆಟ್ಟು ತೆಂಗಿನ ಗರಿ, ಮಾವಿನ ಸೊಪ್ಪಿನಿಂದ ಚಪ್ಪರಹಾಕಿ ಶೃಂಗರಿಸುತ್ತಾರೆ. ಸಂಜೆ ಎಲ್ಲರನ್ನು ಕರೆದು ಚಪ್ಪರದ ಊಟ ಹಾಕುತ್ತಾರೆ.

ಚಪ್ಪರದ ದಿನದ ಸಂಜೆ ತೊಡಿಸುವ ಶಾಸ್ತ್ರ. ಬಳೆಗಾರನನ್ನು ಮನೆಗೆ ಕರೆಸಿ ಹೆಣ್ಣಿನ ಕೈ ತುಂಬಾ ಕಪ್ಪು ಬಳೆ ತೊಡಿಸುತ್ತಾನೆ. ನಂತರ ೯ ಜನ ಮುತ್ತೈದೆಯರಿಗೆ ಬಣ್ಣದ ಬಳೆಗಳನ್ನು ತೊಡಿಸುತ್ತಾರೆ. ಮದುವೆ ಹೆಣ್ಣು ಬಳೆಗಾರನಿಗೆ ಕಾಣಿಕೆ ಕೊಟ್ಟು ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು.

ಅರಿಶಿಣದ ನೀರು ಹುಯ್ದು ಮೇಲೆ ಗಂಡಾಗಲಿ, ಹೆಣ್ಣಾಗಲಿ ಹೊರಗಡೆ ಹೋಗುವ ಹಾಗಿಲ್ಲ. ಕಾರಣ ಭೂತ, ದೆವ್ವದ ತೊಂದರೆ, ಗಾಳಿಸೋಂಕು, ದೃಷ್ಟಿ ಆಗುತ್ತೆ ಅಂತ. ಹೊರಗೆ ಹೋಗಲೇಬೇಕು ಅಂದರೆ ಅವರ ಕೈಗೆ ಕಬ್ಬಿಣದ ಆಯುಧ ಕೊಟ್ಟು ಅವರ ಜೊತೆ ಹುಡುಗ ಅಥವಾ ಹುಡುಗಿಯನ್ನು ಕಳುಹಿಸುತ್ತಾರೆ. ಸೋಂಕು ತಾಗದಿರಲಿ ಅಂತ ಗಂಡಿಗೂ ಕಾಲುಂಗುರ ಹಾಕುವ ಪದ್ಧತಿ ಇದೆ.

ಮದುವೆ ಹಿಂದಿನ ದಿನದ ರಾತ್ರಿ ಗಂಡು-ಹೆಣ್ಣಿಗೆ ಅರಿಶಿಣ ಹೊತ್ತುವ ಶಾಸ್ತ್ರ ಮಾಡುತ್ತಾರೆ. ಅಂದರೆ ಅರಿಶಿಣದ ನೀರು ಹುಯ್ಯುವ ಶಾಸ್ತ್ರ. ಇದನ್ನು ತೆಲುಗಿನಲ್ಲಿ “ನಲ್ಲಗಂಟೆ” ಅಂತ ಕರೆಯುತ್ತಾರೆ. ನೀರು ಹಾಕಿದ ಮೇಲೆ ಗಂಡು-ಹೆಣ್ಣಿಗೆ ತುಪ್ಪದ ಊಟ ಹಾಕುತ್ತಾರೆ. ನಂತರ ತಾಳಿ ಕಟ್ಟೋ ಶಾಸ್ತ್ರ ಆಗೋವರೆಗು ಗಂಡು-ಹೆಣ್ಣು ಉಪವಾಸ ಇರಬೇಕು.ಮದುವೆಶಾಸ್ತ್ರ ಮಾಡಿಸುವ ಯಜಮಾನನನ್ನು ’ಕೋಲುಗಾರ’, ’ಸೀರಲು ಪೆದ್ದ’ ಅಂತ ಕರೆಯುತ್ತಾರೆ.

ಗಂಡಿನ ತಂದ  ಅರಿಶಿಣದ ತಟ್ಟೆಗೆ ೯ ರೂ.ಗಳಷ್ಟು ನಾಣ್ಯ ಹಾಕುತ್ತಾರೆ. ಆ ನಾಣ್ಯದ ತಟ್ಟೆಯನ್ನು ಯಜಮಾನರು ಹೆಣ್ಣಿನ ತಾಯಿಗೆ ಕೊಡುತ್ತಾರೆ. ಆಗ ಹೆಣ್ಣಿನ ತಾಯಿ ಆ ತಟ್ಟೆಯನ್ನು ಸೆರಗಿನಲ್ಲಿ ಮುಚ್ಚಿಕೊಂಡು ಯಾರಿಗೂ ಕಾಣದ ಹಾಗೆ ತೆಗೆದುಕೊಂಡು ಹೋಗುತ್ತಾರೆ. ಇದಕ್ಕೆ ’ಓಲ್’ ಕೊಡೋದು ಅಂತ ಕರೆಯುತ್ತಾರೆ. ತೆಲುಗಿನಲ್ಲಿ ಓಲ್ ಎಂದರೆ ತಟ್ಟೆ ಎಂದರ್ಥ. “ಇಷ್ಟು ವರ್ಷ ಹೆಣ್ಣು ಮಗಳನ್ನು ಸಾಕಿದ್ದೀರಿ. ಅದಕ್ಕೆ ಈ ಓಲ್ ಕೊಡುತ್ತಿದ್ದು ಇನ್ನು ಮೇಲೆ ನಿಮ್ಮ ಹೆಣ್ಣು ನಮ್ಮದಾಯಿತು” ಅನ್ನೋದು ಇದರ ಅರ್ಥ. ತಾಳಿ ಕಟ್ಟುವುದಕ್ಕೆ ಮುಂಚೆ ಗಂಡು-ಹೆಣ್ಣಿಗೆ ಹಾಲಿನ ನೀರು ಹುಯ್ಯುತ್ತಾರೆ. ಇದರರ್ಥ ಅವರ ಬದುಕು ಹಾಲಿನ ಹಾಗಿರಲೆಂದು.

ತಾಳಿ ಕಟ್ಟುವ ಶಾಸ್ತ್ರ ಮುಗಿದ ಮೇಲೆ ಕೋಲುಗಾರ ಗಂಡು-ಹೆಣ್ಣು ಇಬ್ಬರಿಂದ ಅಶ್ವತ್ಥ ಮರಕ್ಕೆ ಪೂಜೆ ಮಾಡಿಸುತ್ತಾನೆ. ನಂತರ ಗಂಡಿನ ಕೈಲಿ ಹೊಲ ಉಳುಮೆ ಮಾಡಿಸುವ ಶಾಸ್ತ್ರ ಮಾಡಿಸುತ್ತಾರೆ. ಗಂಡನ ಮನೆಗೆ ಹೋದ ಮದುಮಗಳನ್ನು ಮೊದಲು ಅಡಿಗೆ ಮನೆಗೆ ಕರೆದೊಯ್ದು ಎಲ್ಲಾ ಧಾನ್ಯಗಳ ಮಡಿಕೆಗಳಿಗೆ ಕೈ ಹಾಕಿಸುತ್ತಾರೆ. ನಂತರ ದೇವರ ಮನೆಗೆ ಕರೆದೊಯ್ದು ಪೂಜೆ ಮಾಡಿಸುತ್ತಾರೆ. ಇದನ್ನು ಮನೆ ತುಂಬಿಸಿಕೊಳ್ಳೋದು ಅಂತ ಕರೆಯುತ್ತಾರೆ.

ಜಲಗಾರ ಸಮುದಾಯದಲ್ಲಿ ಈ ಹಿಂದೆ ರಾತ್ರಿಯ ಸಮಯ ತಾಳಿ ಕಟ್ಟಿಸುವ ಪದ್ದತಿ ಇತ್ತು. ಎರಡು ಕರಿಮಣಿಯನ್ನು ದಾರಕ್ಕೆ ಪೋಣಿಸಿದರೆ ಅದೇ ತಾಳಿ.ಈ ಹಿಂದೆ ನಮ್ಮಲ್ಲಿ ಬಾಲ್ಯ ವಿವಾಹ ಇತ್ತು ಎಂಬುದಾಗಿ ಆನೆಕಲ್ ಮುನಿಯಮ್ಮ ನೆನಪಿಸಿಕೊಳ್ಳುತ್ತಾರೆ. ಈ ಹಿಂದೆ ಮದುವೆ ದಿನ ಪೂಜೆಗೆ ಕುರಿಯನ್ನು ಬಲಿಕೊಡಲಾಗುತ್ತಿತ್ತು. ತಾಳಿ ಕಟ್ಟುವುದಕ್ಕೆ ಮುಂಚೆ ಐದು ಹೊಸ ಮಡಕೆಗಳಿಗೆ ನೀರು ತುಂಬಿ ಅವುಗಳಿಗೆ ಮದುಮಕ್ಕಳಿಂದ ಪೂಜೆ ಮಾಡಿಸುತ್ತಾರೆ. ಮದುವೆ ದಿನ ಮುಂಜಾವದಲ್ಲೇ ಕೋಲುಗಾರ ಎದ್ದು ಗಂಡು-ಹೆಣ್ಣು ಇಬ್ಬರನ್ನು ಹೊಳೆ ಅಥವಾ ಬಾವಿಯ ಬಳಿ ಕರೆದುಕೊಂಡು ಹೋಗಿ ಗಂಗಾದೇವಿಗೆ ಅನ್ನದಾನ ಮಾಡಿಸಿ ಕರೆದುಕೊಂಡು ಬರುತ್ತಾನೆ. ಇದನ್ನು ಬೇರೆ ಯಾರೂ ನೋಡುವ ಹಾಗಿಲ್ಲ. ಜಲಗಾರ ಸಮುದಾಯದಲ್ಲಿ ಹೆಣ್ಣಿಗೆ ಗಂಡಿನವರು ’ತೆರ’ ಕೊಡುವ ಪದ್ಧತಿ ಇದೆ. ಎಲ್ಲಾ ಶಾಸ್ತ್ರ ಮತ್ತು ಪೂಜೆಗೆ ಎಕ್ಕದ ಎಲೆ ಬಳಸುವುದು ಈ ಸಮುದಾಯದವರಲ್ಲಿ ಒಂದು ವಿಶೇಷ. ಮದುವೆಯಲ್ಲೂ ಗಂಡು-ಹೆಣ್ಣು ಎಕ್ಕದ ಎಲೆಗೆ ಅನ್ನ-ಸಾರು ಹಾಕಿ ಪೂಜೆ ಮಾಡಿದ ಮೇಲೆ ಊಟ ಮಾಡಿ ಉಪವಾಸ ಬಿಡುತ್ತಾರೆ.

ಸಾವಿನ ಆಚರಣೆ

ಹೆಣ್ಣು ಮಕ್ಕಳು ಸತ್ತರೆ ತವರು ಮನೆಯವರು ಬಟ್ಟೆ ಕೊಡುತ್ತಾರೆ. ಹಾಗೆ ಗಂಡು ಮಕ್ಕಳು ಸತ್ತರೆ ಸೋದರ ಸಂಬಂಧಿಗಳು ಬಟ್ಟೆ ಕೊಡುತ್ತಾರೆ. ಈ ಬಟ್ಟೆಯನ್ನೇ ಹೆಣಕ್ಕೆ ಸ್ನಾನ ಮಾಡಿಸಿ ತೊಡಿಸಬೇಕು. ಗಂಡ ಸತ್ತರೆ ಹೆಂಡತಿಗೆ ಹೊಸ ಸೀರೆ, ಅರಿಶಿಣ, ಕುಂಕುಮ, ಹೂ, ಬಳೆ ತೊಡಿಸಿ ಹೆಣದ ಪಕ್ಕ ಕೂರಿಸಿ ಇಬ್ಬರಿಗೂ ಪೂಜೆ ಮಾಡುತ್ತಾರೆ. ಹೆಣ್ಣಾಗಲಿ, ಗಂಡಾಗಲಿ ಮದುವೆಗೆ ಮುಂಚೆ ಸತ್ತರೆ ಅವರ ಪಕ್ಕ ಗುದ್ದಲಿ ಇಟ್ಟು ಪೂಜೆ ಮಾಡುವ ಪದ್ದತಿ ಇದೆ. ಜಲಗಾರ ಸಮುದಾಯದಲ್ಲಿ ಸತ್ತವರನ್ನು ಮಣ್ಣು ಮಾಡುವ ಮತ್ತು ಬೆಂಕಿಯಲ್ಲಿ ಸುಡುವ ಎರಡೂ ಆಚರಣೆಗಳಿರುವುದುಂಟು.

ಧಾರ್ಮಿಕ ಆಚರಣೆಗಳು

ಜಲಗಾರ ಸಮುದಾಯದಲ್ಲಿ ದಾಸಾರ್ಲು, ಪಗಡಿಕತ್ತಿಲವಾರು, ಓವಿಲಾಲ್,ಅಲಗು ಮುಂತಾದ ಕುಲಗಳಿವೆ. ಇವರಲ್ಲಿ ದೇವರ ಪೂಜಾರಿಯನ್ನು ’ತಂಬಡಪ್ಪ’ ಎಂದು ಕರೆಯುತ್ತಾರೆ. ಈ ಸಮುದಾಯದವರು ಮಾಯಂಪೆರುಮಾಳ್, ಮುನೇಶ್ವರ, ನಲ್ಲಕ್ಕು, ಪಟ್ಟಲದಮ್ಮ, ಮುತ್ತುಮಾರಮ್ಮ, ಬನ್ನಾರಿ ಅಮ್ಮನನ್ನು ಪೂಜಿಸುತ್ತಾರೆ. ಇವರು ಆಚರಿಸುವ ಮತ್ತೊಂದು ವಿಶೇಷ ಹಬ್ಬವೆಂದರೆ ಪೊಂಗಲ್.

ಮಾಯಾ ಪೆರುಮಾಳ್

ಇದು ಪಗಡಿ ಕತ್ತಿಲವಾರು ಕುಲದವರ ಮನೆಯ ದೇವರು. ತಮಿಳುನಾಡಿನಲ್ಲಿರುವ ಮಾಯಂಪೆರುಮಾಳ್ ದೇವಸ್ಥಾನಕ್ಕೆ ಕರ್ನಾಟಕದಲ್ಲಿರುವ ತಮಿಳುನಾಡು ಮೂಲದ ಜಲಗಾರರು ಎರಡು ವರ್ಷಕ್ಕೊಮ್ಮೆ ಕಾರ್ತಿಕ ಮಾಸದಲ್ಲಿ ಅಲ್ಲಿಗೆ ಹೋಗಿ ಪೂಜೆ ಮಾಡಿ ಬರುವುದುಂಟು. ಇಪ್ಪತ್ತು ದಿನಗಳ ಕಾಲ ಈ ಪೂಜೆ ನಡೆಯುತ್ತದೆ. ದಾಸಾರ್ಲು ಕುಲದವರು ಕೂಡ ಈ ದೇವರನ್ನು ಪೂಜಿಸುತ್ತಾರೆ. ಈ ದೇವಸ್ಥಾನಕ್ಕೆ ಹೋಗುವ ಪ್ರತಿ ಕುಟುಂಬದವರು ೨೦೦ ರೂ.ಗಳನ್ನು ’ವರಿ’ (ತೆರಿಗೆ)  ಕೊಡುತ್ತಾರೆ. ತಮಿಳುನಾಡಿನಲ್ಲಿರುವವರು ಕರ್ನಾಟಕದ ಜಲಗಾರರನ್ನು ಬೆಟ್ಟದವರು ಎಂದು ಕರೆಯುತ್ತಾರೆ. ಭಕ್ತರು ಈ ದೇರಿಗೆ ಎಣ್ಣೆ, ವಿಭೂತಿ ಕೊಟ್ಟು ಪೂಜೆ ಮಾಡಿಸುತ್ತಾರೆ. ಈ ದೇವರ ಪೂಜಾರಿ ಅವಿವಾಹಿತ. ವರ್ಷ ವರ್ಷ ಈ ದೇವರ ವಿಗ್ರಹ ಬೆಳೆಯುತ್ತಿದೆ ಅನ್ನೋದು ಹಿರಿಯರ ನಂಬಿಕೆ, ದೆವ್ವ, ಪೀಡೆ, ಪಿಶಾಚಿ ಹಿಡಿದವರನ್ನ ಈ ದೇವರ ಹತ್ತಿರ ಕರೆದುಕೊಂಡು ಹೋದರೆ ಗುಣವಾಗುತ್ತಾರೆ ಎಂಬ ನಂಬಿಕೆ ಇದೆ. ಈದೇವಸ್ಥಾನದ ಪೂಜಾರಿ ಭಕ್ತರಿಗೆ ಎಣ್ಣೆ, ತೀರ್ಥ, ವಿಭೂತಿಗಳನ್ನು ಪ್ರಸಾದವಾಗಿ ನೀಡುತ್ತಾನೆ. ಮನೆಗೆ ಬಂದ ಭಕ್ತರು ಶ್ರಾವಣಮಾಸದಲ್ಲಿ ಆ ಎಣ್ಣೆಯಿಂದ ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಉಷಾರಿಲ್ಲದವರಿಗೆ ತೀರ್ಥಕುಡಿಸಿ, ಹಣೆಗೆ ವಿಭೂತಿ ಹಚ್ಚಿದರೆ ಗುಣವಾಗುತ್ತಾರೆ. ಅನ್ನೋದು ಅವರ ನಂಬಿಕೆ. “ಮಕ್ಕಳಾಗದಿದ್ದರೆ, ಮನೆಯಲ್ಲಿ ಕಷ್ಟ ಬಂದರೆ, ಗಂಡ-ಹೆಂಡಿರಲ್ಲಿ ಸಮಸ್ಯೆ ಬಂದಾಗ, ಜಮೀನು-ಹಣದ ವ್ಯವಹಾರದಲ್ಲಿ ತೊಂದರೆಯಾದಾಗ ಈ ದೇವರಿಗೆ ಹರಕೆ ಕಟ್ಟಿಕೊಂಡರೆ ನಿವಾರಣೆಯಾಗುತ್ತದೆ” ಎಂದು ವರಲಕ್ಷ್ಮಮ್ಮ ಹೇಳುತ್ತಾರೆ. ಈ ದೇವಸ್ಥಾನಕ್ಕೆ ಮೈಸೂರು,ಮಂಡ್ಯು, ಕೊಳ್ಳೇಗಾಲ, ಚಾಮರಾಜನಗರ, ಹಾಸನ, ಸಕಲೇಶಪುರದಿಂದಲೂ ಹೋಗಿ ಪೂಜೆ ಸಲ್ಲಿಸುತ್ತಾರೆ.

ಪಟ್ಟಲದಮ್ಮ

ಇದು ಒಂಬತ್ತು ದಿನಗಳ ಹಬ್ಬ. ಈ ಹಬ್ಬಕ್ಕೆ ಪೂಜಾರಿಯನ್ನು ತಮಿಳುನಾಡಿನಿಂದಲೆ ಕರೆಸುತ್ತಾರೆ. ಈ ಹಬ್ಬದ ೬ನೇ ದಿನ ಮುನೇಶ್ವರನ ದೇವಸ್ಥಾನಕ್ಕೆ ಹೋಗಿ, ಊರಿನಲ್ಲಿ ಏನಾದರೂ ದೆವ್ವ, ಪಿಶಾಚಿ ಇದ್ದರೆ ಕಳೆದು ಹೋಗಲಿ ಅಂತ ಪೂಜೆ ಮಾಡುತ್ತಾರೆ. ಇದನ್ನು ’ಮುನಿಮುಡಕದು’ ಅಂತ ಕರೆಯುತ್ತಾರೆ. ಊರಿನ ಹೊರಗಿರುವ ಮುನೇಶ್ವರ ದೇವಸ್ಥಾನಕ್ಕೆ ೧೨ ಗಂಟೆರಾತ್ರಿ ಹೊತ್ತಿಗೆ ಗಂಡಸರು ಕಪ್ಪು ಕುರಿ ತೆಗೆದುಕೊಂಡೋಗಿ ಬಲಿಕೊಡುತ್ತಾರೆ. ಮೈಮೇಲೆ ದೇವರು ಬಂದ ಪೂಜಾರಿಯನ್ನು ಹಗ್ಗ ಕಟ್ಟಿ ಹಿಡಿದಿರುತ್ತಾರೆ. ಅನ್ನಕ್ಕೆ ಕುರಿಯ ರಕ್ತ ಬೆರಸಿ ಊರಿನ ಸುತ್ತ ಹಾಕಿ ಪೂಜೆ ಮಾಡುತ್ತಾರೆ. ಈ ಹಬ್ಬದಲ್ಲಿ ಪೂಜಾರಿ ಬಾಳೆದಿಂಡನ್ನ ದೇವಸ್ಥಾನದ ಆಸುಪಾಸಿನ ನಿಗಧಿತ ಸ್ಥಳದಲ್ಲಿ ನೆಟ್ಟು ಶಾಸ್ತ್ರೋಕ್ತವಾಗಿ ಪೂಜೆ ಮಾಡಿ ಅನಂತರ ಕಡಿಯುತ್ತಾನೆ. ಇದಕ್ಕೆ “ಕಿಲಿವಿ ಆಟ್ಟ” ಎಂದು ಕರೆಯುತ್ತಾರೆ. ಈ ಹಬ್ಬದ ಕೊನೆಯದಿನ ಓಕುಳಿ ಆಡುತ್ತಾರೆ.

ಈ ಹಬ್ಬ ಮಾಡುವುದಕ್ಕೆ ಒಂದು ತಿಂಗಳ ಮುಂಚೆ ’ತಂಬಿಟ್ಟಿನ ದೀಪ’ ಅಂತ ಆಚರಿಸುತ್ತಾರೆ.ಇದರ ಉದ್ದೇಶ ಮಕ್ಕಳಿಗೆ ಕಾಯಿಲೆ, ಅಮ್ಮ ಆಗದಿರಲೆಂದು ಇದನ್ನು “ದೇವರಿಗೆ ತಂಪು ಮಾಡೋದು” ಅಂತ ಹೇಳುತ್ತಾರೆ.

ಪೊಂಗಲ್

ಇದು ಸಂಕ್ರಾಂತಿ ತಿಂಗಳಲ್ಲಿ ಆಚರಿಸುವ ಹಬ್ಬ. ಪ್ರತಿ ಮನೆಯವರೂ ೫೦ ರೂ. ವರಿ ಕೊಡಬೇಕು. ಆ ಹಣದಿಂದ ಊರಿನ ಯಜಮಾನರು ಮಣ್ಣಿನ ಮಡಕೆ ತಂದು ಎಲ್ಲರಿಗೂ ಕೊಡುತ್ತಾರೆ. ಎಲ್ಲರೂ ದೇವಸ್ಥಾನದ ಮುಂದೆ ನೆರೆಯುತ್ತಾರೆ. ಪ್ರತಿಯೊಬ್ಬರು ಪ್ರತ್ಯೇಕವಾದ ಒಲೆ ಊಡಿ ಮಣ್ಣಿನ ಮಡಕೆ ಇಟ್ಟು ನೀರು,ಹಾಲು, ಬೆಲ್ಲ, ಅಕ್ಕಿ,ಹೆಸರು ಬೇಳೆ,ಗೋಡಂಬಿ,ದ್ರಾಕ್ಷಿ,ಏಲಕ್ಕಿ ಹಾಕಿ ಬೆಂಕಿ ಹಚ್ಚುತ್ತಾರೆ. ಯಾರ ಮಡಕೆ ಮೊದಲು ಉಕ್ಕಿಬರುತ್ತದೋ ಅವರಿಗೆ ಬಹುಮಾನ ಕೊಡುತ್ತಾರೆ. ಪ್ರತ್ಯೇಕವಾಗಿ ದೇವಸ್ಥಾನದ ಮಡಕೆ ಇರುತ್ತಾರೆ. ಅದರಲ್ಲಿ ಅಕ್ಕಿ, ಬೆಲ್ಲ,ಹಾಲು, ತುಪ್ಪ ಮಾತ್ರ ಹಾಕಿರುತ್ತಾರೆ. ದೇವಸ್ಥಾನದ ಮಡಕೆ ಏನಾದರೂ ಮೊದಲು ಉಕ್ಕಿದರೆ ಊರಿನವರೆಲ್ಲ ಸೇರಿ ದೇವಸ್ಥಾನಕ್ಕೆ ಬಹುಮಾನ ಕೊಡಬೇಕು. ದೇವಸ್ಥಾನದ ಮಡಕೆಯಲ್ಲಿ ಮಾಡಿದ ಪೊಂಗಲನ್ನು ಎಲ್ಲಾ ಮನೆಗಳಿಗೂ ಪ್ರಸಾದ ಅಂತ ಹಚ್ಚುತ್ತಾರೆ. ಇದು ಸಂಜೆ ಸಮಯದಲ್ಲಿ ನಡೆಯುವ ಒಂದು ದಿನದ ಹಬ್ಬ.ದೇವಸ್ಥಾನದ ಮುಂದೆ ಬೇಯಿಸಿದ ಮಡೆಯನ್ನು ಮನೆಗೆ ತಂದು ಮಾರನೆಯ ದಿನ ಕಾಲವಾಗಿರುವ ಮನೆಯ ಹಿರಿಯರಿಗೆ ಎಡೆ ಇಟ್ಟು ಪೂಜೆ ಮಾಡುತ್ತಾರೆ.

ಬನ್ನಾರಿ ಅಮ್ಮ

ಮಾಯಂಪೆರುಮಾಳ್ ದೇವಸ್ಥಾನಕ್ಕೆ ಹೋಗುವ ಮೊದಲು ಬನ್ನಾರಿ ಅಮ್ಮನನ್ನು ಪೂಜಿಸಲಾಗುತ್ತದೆ. ಇದು ಹೆಣ್ಣು ದೇವರು. ಇದರ ಜೊತೆಗೇ ಪೆರುಮಾಳ್ ಎಂಬ ಗಂಡು ದೇವರನ್ನೂ ಪೂಜಿಸುತ್ತಾರೆ. ಮಕ್ಕಳಿಗೆ ಕಾಯಿಲೆ ಬಂದಾಗ ಈ ಬನ್ನಾರಿ ಅಮ್ಮನಿಗೆ ಹರಕೆ ಕಟ್ಟಿಕೊಳ್ಳುವುದು ವಾಡಿಕೆ. ಮನೆಯಲ್ಲಿ ಕಳ್ಳತನವಾದರೂ ಕೂಡ ಈ ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ರಾಜಕಾರಣಿಗಳು ಕೂಡ ಚುನಾವಣೆಯಲ್ಲಿ ಜಯ ದೊರೆಯಲೆಮದು ಹರಕೆ ಕಟ್ಟಿಕೊಳ್ಳುತ್ತಾರೆ. ಈ ದೇವಸ್ಥಾನದಲ್ಲಿ ಸರಳ ಮದುವೆಗಳನ್ನು ಮಾಡುತ್ತಾರೆ.

ಮುನೇಶ್ವರ ಅಥವಾ ವನಭೋಜನ

ವರ್ಷಕ್ಕೆ ಒಮ್ಮೆ ಮಾಡುವ ಹಬ್ಬ. ಅವಿವಾಹಿತ ಯುವಕ ಈ ದೇವರ ಪೂಜಾರಿ. ಎಲ್ಲರ ಮನೆಯಿಂದ ಅಕ್ಕಿ ಸಂಗ್ರಹಿಸಿ, ಶನಿವಾರ ರಾತ್ರಿ ಅನ್ನ ಮಾಡಿ ಅದನ್ನು ದೇವಸ್ಥಾನದಲ್ಲಿಡುತ್ತಾರೆ. ಭಾನುವಾರ ಬೆಳಿಗ್ಗೆ ಊರಿನ ಮಧ್ಯೆ ಬೇವಿನಸೊಪ್ಪು ಹಾಖಿ, ಅದರ ಮೇಲೆ ರಾತ್ರಿ ಮಾಡಿದ ಅನ್ನವನ್ನು ರಾಶಿ ಹಾಕುತ್ತಾರೆ. ಅದರ ಸುತ್ತ ಅರಿಶಿಣ-ಕುಂಕುಮ, ಹೂ, ಬಾಳೆಹಣ್ಣು ಇಟ್ಟು ದೀಪ ಹಚ್ಚುತ್ತಾರೆ. ಊರಿನ ಜನ ಅಲ್ಲಿ ಅರಿಶಿಣದ ನೀರು, ರಾಗಿ, ಅಂಬ್ಲಿ, ಮಜ್ಜಿಗೆ ತೆಗೆದುಕೊಂಡು ಬರುತ್ತಾರೆ. ಅನ್ನದ ರಾಶಿ ಮುಂದೆ ಐದು ಜನ ವಿಧವೆಯರನ್ನು ನಿಲ್ಲಿಸಿ ಪೂಜೆಮಾಡುತ್ತಾರೆ. ಈವಿಧವೆಯರನ್ನು ಮಾರಮ್ಮನವರು ಅಂತ ಕರೆಯುತ್ತಾರೆ. ಪೂಜೆ ಆದ ಮೇಲೆ ಊರಿನ ಜನ ತಾವು ತಂದಿರುವ ಅಂಬ್ಲಿ, ಮಜ್ಜಿಗೆಯನ್ನು ಆ ಅನ್ನದ ರಾಶಿ ಮೇಲೆ ಹಾಕಬೇಕು. ನಂತರ ಪೂಜಾರಿ ಅರಿಶಿಣದ ನೀರನ್ನು ತೀರ್ಥವಾಗಿ ಎಲ್ಲರ ಮೇಲೂ ಎರಚುತ್ತಾನೆ. ಅನಂತರ ಮಕ್ಕಳಿಗೆ ಅಂಬ್ಲಿ ಹಂಚುತ್ತಾರೆ. ಅನ್ನವನ್ನು ಪ್ರಸಾದವೆಂದು ಎಲ್ಲರಿಗೂ ಕೊಡುತ್ತಾರೆ. ಕೊನಗೆ ಆ ಬೇವಿನ ಸೊಪ್ಪನ್ನು ಮಕ್ಳು ತೆಗೆದುಕೊಂಡು ಹೋಗಿ ಕೆರೆಯಲ್ಲಿ ಹಾಕುತ್ತಾರೆ. ಇದು ಊರಿನ ಮಾರಿಯನ್ನು ಊರಿಂದ ಹೊರಹಾಕುವ ಆಚರಣೆ. ಮಕ್ಕಳು ಬೇವಿನ ಸೊಪ್ಪನ್ನು ಕೊಂಡೊಯ್ಯುವಾಗ ಅವರ ಮೇಲೆ ಅರಿಶಿಣದ ನೀರು ಚೆಲ್ಲುತ್ತಾರೆ. ಮಕ್ಕಳಿಗೆ ಅಮ್ಮ ಆಗದಿರಲಿ ಮತ್ತು ಮಾರಮ್ಮ ಶಾಂತಿಯಾಗಲೆಂದು ಈ ಹಬ್ಬವನ್ನು ಮಾಡುತ್ತಾರೆ.

ಇದಾದ ಮೇಲೆ ತೆಂಗಿನ ತೋಟಕ್ಕೆ ಹೋಗಿ ಚಪ್ಪರ ಹಾಕಿ ಅದರೊಳಗೆ ಏಳು ಕಲ್ಲುಗಳನ್ನು ಇಡುತ್ತಾರೆ. ಈ ಏಳು ಕಲ್ಲುಗಳೇ ಏಳು ಜನ ಮಾರಮ್ಮರು. ಇದಲ್ಲದೆ ಅಕ್ಕಪಕ್ಕ ಎರಡು ಕಲ್ಲುಗಳನ್ನಿಡುತ್ತಾರೆ. ಅದರಲ್ಲಿ ಒಂದು ವೀರಭದ್ರ, ಮೊತ್ತೊಂದು ಮುನೇಶ್ವರ. ಆ ಕಲ್ಲುಗಳ ಮುಂದೆ ನಿಂಬೆಹಣ್ಣು, ಸೀಗೆಕಾಯಿ, ಅರಿಶಿಣದ ಕೊಂಬು, ವಿಭೂತಿ ಉಂಡೆ, ಕಪ್ಪು ಬಳೆಗಳನ್ನಿಟ್ಟು, ಏಳು ಕಲ್ಲುಗಳಿಗೆ ಏಳು ಸುತ್ತುದಾರ ಸುತ್ತಿ ೭ ಮರಿಗಳನ್ನು ಬಲಿಕೊಟ್ಟು ಪೂಜೆ ಮಾಡುತ್ತಾರೆ. ತೋಟದಲ್ಲಿ ಅಡಿಗೆ ಮಾಡುತ್ತಾರೆ. ಅಡಿಗೆಗೆ ಉಪ್ಪು ಹಾಕುವುದಿಲ್ಲ. ಕಾರಣ ಅಡಿಗೆ ರುಚಿಯಾಗಿದ್ದರೆ ಮಾರಮ್ಮ ಇವರ ಊರು ಬಿಟ್ಟು ಹೋಗುವುದಿಲಲ ಅನ್ನೋದು ನಂಬಿಕೆ. ಅಡಿಗೆ ಆದಮೇಲೆ, ಪೂಜೆಮಾಡಿ ಎಲ್ಲರಿಗೂ ಊಟಹಾಕುತ್ತಾರೆ.ಎಲ್ಲ ಆದ ಮೇಲೆ ಏಳು ಜನ ಮಾರಿಯರಿಗೆ ಸುತ್ತಿದ್ದ ಏಳು ಸುತ್ತಿನ ದಾರವನ್ನು ಕತ್ತರಿಸಿ ಊರಿಗೆ ಬರುತ್ತಾರೆ.

ನಲ್ಲಕ್ಕ ದೇವರು

ಇದು ಹೆಣ್ಣು ದೇವರು. ಹಗಲು ಹೊತ್ತಿನಲ್ಲಿ ಮಾಡುವ ಹಬ್ಬ. ಊರಿನ ಮಧ್ಯೆ ಒಂದೂವರೆ ಅಡಿ ಆಳದ ಗುಂಡಿ ತೋಡಿ ಅದಕ್ಕೆ ನೀರು ತುಂಬಿ, ಅದರ ಸುತ್ತ ಅರಿಶಿಣ, ಕುಂಕುಮ, ಹೂ ಇಟ್ಟು ಪೂಜೆ ಮಾಡುತ್ತಾರೆ. ನಂತರ ಒಂದು ಹಂದಿಯನ್ನು ತಂದು ಅದರ ತಲೆಯನ್ನು ಆ ನೀರಿನಲ್ಲಿ ಮುಳುಗಿಸುತ್ತಾರೆ. ಅದರ ಪ್ರಾಣ ಹೋಗುವವರೆಗೆ ಹಾಗೆ ಹಿಡಿದಿರುತ್ತಾರೆ. ಏಕೆಂದರೆ ಚಾಕುವಿನಿಂದ ಕೊಯ್ದು ಬಲಿ ಕೊಟ್ಟರೆ ಅದರ ರಕ್ತ ಭೂಮಿ ಮೇಲೆ ಬೀಳುತ್ತದೆ. ಅದರ ರಕ್ತ ಭೂಮಿ ಮೇಲೆ ಬಿದ್ದರೆ ಊರಿಗೆ ಕೇಡಾಗುತ್ತದೆ. ಅನ್ನೋ ನಂಬಿಕೆ ಇದೆ. ಮಕ್ಕಳಿಗೆ ಜ್ವರ, ಭೀತಿ, ಕಾಯಿಲೆ ಬರದಿರಲೆಂದು ಮಾಡುವ ಶಾಂತಿ ಹಬ್ಬ ಇದು. ಹೊಸ ಮಡಕೆಯಲ್ಲಿ ಆ ಹಂದಿ ಮಾಂಸವನ್ನು ಬೇಯಿಸುತ್ತಾರೆ. ಊರಿನ ಹೊರಗೆ ಸೂರ್ಯ ಮುಳುಗುವ ದಿಕ್ಕಿನಲ್ಲಿ ಏಳು ಉಗುನಿ ಎಲೆ ಹಾಕಿ,ಅದರ ಮೇಲೆ ಹಂದಿ ಮಾಂಸ ಇಟ್ಟು, ಏಳು ಜನ ವಿಧವೆಯರು: “ತಾಯಿ ನಿನಗೆ ಇದೇ ರೀತಿ ವರ್ಷ ವರ್ಷ ಶಾಂತಿ ಮಾಡ್ತೀವಿ. ನಮ್ಮ ಮಕ್ಕಳನ್ನು ಕಾಪಾಡು ತಾಯಿ”. ಅಂತ ಪೂಜೆ ಮಾಡುತ್ತಾರೆ. ನಂತರ ಆ ಏಳು ಜನ ವಿಧವೆಯರು ದೇವರ ಎಡೆಯಲ್ಲಿಟ್ಟಿರುವ ಏಳು ಎಲೆಯಲ್ಲಿರುವ ಮಾಂಸವನ್ನು ತಿನ್ನುತ್ತಾರೆ. ಅವರು ತಿಂದು ಬಿಟ್ಟಿದ್ದನ್ನು ಎಲ್ಲರಿಗೂ ಪ್ರಸಾದ ಅಂತ ಹಂಚುತ್ತಾರೆ. ಉಳಿಕೆ ಮಾಂಸವನ್ನು ಊರಿನ ಎಲ್ಲರಿಗೂ ಹಂಚುತ್ತಾರೆ. ಈ ಮಾಂಸವನ್ನು ಬೇರೆ ಜನರಿಗೆ ಕೊಡುವ ಹಾಗಿಲ್ಲ. ಕೊಟ್ಟರೆ ದೋಷ. ಮಾಂಸ ಉಳಿದರೆ ಅದನ್ನು ಮಣ್ಣಿನಲ್ಲಿ ಹಾಕಿ ಮುಚ್ಚುತ್ತಾರೆ.

ಮುತ್ತು ಮಾರಮ್ಮ

ಇದು ವರ್ಷಕ್ಕೊಮ್ಮೆ ಮಾಡುವ ಹಬ್ಬ. ಇದರ ಪೂಜಾರಿ ಬ್ರಾಹ್ಮಣ. ಈತ ಮಂಗಳವಾರ ಮತ್ತು ಶುಕ್ರವಾರ ಬಂದು ಪೂಜೆ ಮಾಡುತ್ತಾನೆ. ಈತನಿಗೆ ತಿಂಗಳಿಗೆ ೬೦೦ ರೂ. ಸಂಬಳ ಕೊಡುತ್ತಾರೆ.

ಹೀಗೆ ಜಲಗಾರ ಸಮುದಾಯದಲ್ಲಿ ಅಪಾರವಾದ ಧಾರ್ಮಿಕ ನಂಬಿಕೆ, ಆಚರಣೆ, ಸಂಪ್ರದಾಯಗಳಿರುವುದನ್ನು ಕಾಣುತ್ತೇವೆ. ಪ್ರತಿಯೊಂದು ದೇವರು, ಹಬ್ಬಗಳನ್ನು ಭಯಭಕ್ತಿ, ಶ್ರದ್ಧೆಯಿಂದ ಆಚರಿಸುತ್ತಾರೆ. ಇವತ್ತೀಗು ಈ ಧಾರ್ಮಿಕ ಆಚರಣೆಗಳು ಉಳಿದುಕೊಂಡು ಬಂದಿರುವುದನ್ನು ನೋಡಬಹುದ.

ಸಮಾರೋಪ

ಬಹುತೇಕ ಎಲ್ಲಾ ನಗರ-ಪಟ್ಟಣಗಳಲ್ಲಿ ಜಲಗಾರ ಸಮುದಾಯಗಳು ನೆಲೆನಿಂತಿರುವುದನ್ನು ಕಾಣಬಹುದು. ತಲತಲಾಂತರಗಳಿಂದ ಬೀದಿ ಕಸಗುಡಿಸುತ್ತ ಚರಂಡಿ, ಪಾಯಖಾನೆ ಗಳನ್ನು ಸ್ವಚ್ಛಗೊಳಿಸುತ್ತ ಇಡೀ ನಗರಗಳ ನೈರ್ಮುಲ್ಯಕ್ಕೆ ಮೂಲಕಾರಣಕರ್ತರಾದ ಈ ನಗರ ಬಂಧುಗಳು ಮಾತ್ರ ಇವತ್ತಿಗೂ ಕೊಳಚೆ ಪ್ರದೇಶಗಳಲ್ಲಿ ಬದುಕುತ್ತಿರುವುದು ವಿಪರ್ಯಾಸ. ಇದು ಇಡೀ ಪ್ರಜಾಪ್ರಭುತ್ವ ಹಾಗೂ ನಾಗರಿಕತೆಯೆ ತಲೆ ತಗ್ಗಿಸುವಂತಹ ವಿಚಾರ, ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಬಂದು, ಜಗತ್ತು ಎಷ್ಟೆಲ್ಲಾ ವೈಜ್ಞಾನಿಕವಾಗಿ ಮುಂದುವರಿದ್ದರೂ ಕೂಡ ಜಲಗಾರ ಸಮುದಾಯದಲ್ಲಿ ಮೂಲಭೂತ ಬದಲಾವಣೆಗಳೇನು ಕಂಡುಬಂದಿಲ್ಲ. ಸರ್ಕಾರಗಳ ಯಾವುದೇ ಯೋಜನೆಗಳೂ ಕೂಡ ಇವರಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ. ನಗರಸಭೆ, ಪುರಸಭೆಗಳಲ್ಲಿ ಪೌರಕಾರ್ಮಿಕ ವೃತ್ತಿಯನ್ನು ಖಾಸಗೀಕರಣ-ಗೊಳಿಸಿ, ಟೆಂಡರ‍್ ವ್ಯವಸ್ಥೆಗೆ ಅಳವಡಿಸಿದ ಕಾರಣ ಪಟ್ಟಭದ್ರ ಹಿತಾಸಕ್ತಿಗಳು ಜಲಗಾರ ಸಮುದಾಯದ ಮೇಲೆ ದೌರ್ಜನ್ಯ ದಬ್ಬಾಳಿಕೆಯನ್ನು ಎಸಗಲು ದಾರಿ ಮಾಡಿಕೊಟ್ಟಂತಾಗಿದೆ. ವೃತ್ತಿಯ ಕಾರಣಕ್ಕಾಗಿ ತಮ್ಮದಲ್ಲದ ತಪ್ಪಿನಿಂದ ಅಸಂಖ್ಯಾತ ಜಲಗಾರ ಬಂದುಗಳು ಭೀಕರ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಅಮಾನವೀಯವಾದ ಪೌರಕಾರ್ಮಿಕರ ಸಾವುಗಳು ನಾಗರಿಕ ಸಮಾಜವನ್ನು ಯಾವ ರೀತಿಯಲ್ಲೂ ಕಾಡದಿರುವುದು ದುರಾದೃಷ್ಟಕರವಾದುದು. ಇದುವರೆಗಿನ ಯಾವುದೇ ಸರ್ಕಾರಗಳು ಜಲಗಾರರ ಆರೋಗ್ಯ, ವಸತಿ, ಶಿಕ್ಷಣ, ಆಹಾರದ ಬಗೆಗೆ ಸಮರ್ಪಕವಾದ ರೀತಿಯಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಿರುವುದು ದುರಂತ. ಇಡೀ ಸಮಾಜದ ದೃಷ್ಟಿಯಲ್ಲಿ ಜಲಗಾರರು ಇವತ್ತೀಗೂ ಅಸ್ಪೃಶ್ಯರಾಗಿಯೇ ಉಳಿದಿರುವುದು ನಾಚಿಕೆಪಡೆಉವಂತಹ ವಿಷಯ. ಸ್ವಾತಂತ್ರ‍್ಯ ಬಂದು ೬೦ ವರ್ಷಗಳು ಕಳೆದಿದ್ದರೂ ಜಲಗಾರರಿಗೆ ಮಾನವೀಯ ಬದುಕನ್ನು ಕಲ್ಪಿಸುವಲ್ಲಿ ನಾವು ಸೋತಿದ್ದೇವೆ. ಶ್ರಮ ಸಂಸ್ಕೃತಿಯ ನೇತಾರರಾದ ಜಲಗಾರರಿಗೆ ಈ ನಾಗರಿಕ ವ್ಯವಸ್ಥೆ ಕೊಟ್ಟ ಕೊಡುಗೆಯಾದರು ಏನು?

ಸಾಮಾಜಿಕವಾಗಿ ಬಹಳ ನಿಕೃಷ್ಟವಾದ ಬದುಕನ್ನು ಬದುಕುತ್ತಿರುವ ಜಲಗಾರರು ಆರ್ಥಿಕವಾಗಿ, ರಾಜಕೀಯವಾಗಿ,ಶೈಕ್ಷಣಿಕವಾಗಿ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಲು ಇದುವರೆಗೂ ಸಾಧ್ಯವಾಗಿಲ್ಲ. ಇದಕ್ಕೆ ಅವರಲ್ಲಿರುವ ಅನಕ್ಷರತೆಯ ಜೊತೆಗೆ ಸಾಮಾಜಿಕ ಕಾರಣಗಳೆ ಹೆಚ್ಚಾಗಿವೆ. ಇವರ ವೃತ್ತಿಯೇ ಇವರನ್ನು ಹಲವು ಮಾರಕವಾದ ದುಶ್ಚಟಗಳಿಗೆ ಬಲಿಯಾಗುವಂತೆ ಮಾಡುತ್ತಿದೆ. ಈ ಬಗ್ಗೆ ಅರಿವು ಮೂಡಿಸುವಲ್ಲಿ, ನೆರವು ನೀಡುವಲ್ಲಿ ಇಡೀ ವ್ಯವಸ್ಥೆ ಸೋತಿದೆ. ಈ ಸಮುದಾಯವನ್ನು ಪ್ರತಿನಿಧಿಸುವ, ಇವರ ನೋವಿಗೆ ದನಿಯಾಗುವ ಯಾವೊಬ್ಬ ರಾಜಕಾರಣಿಯೂ ಇದುವರೆಗೆ ಬಂದಿಲ್ಲ. ಕರ್ನಾಟಕದ ರಾಜಕಾರಣದ ಸಂದರ್ಭದಲ್ಲಿ ಬಿ.ಬಸವಲಿಂಗಪ್ಪನವರು ತಲೆಮೇಲೆ ಮಲಹೊರುವ ಪದ್ದತಿಯ ನಿಷೇಧ ಕಾಯಿದೆಯನ್ನು ಜಾರಿ ಮಾಡುವ ಮುಖೇನ ಇಡೀ ಭಾರತ ದೇಶದಲ್ಲೆ ಮೊದಲಿಗೆ ಈ ಸಮುದಾಯದ ಪರ ದನಿಮಾಡಿದ್ದು ಈಗ ಚರಿತ್ರೆ. ಅನಂತರ ಯಾವೊಬ್ಬ ರಾಜಕಾರಣಿಯೂ ಈ ಸಮುದಾಯದ ಪರ ಹೇಳಿಕೊಳ್ಳುವಂತಹ ಕೆಲಸ ಮಾಡಿದ ನೆನಪುಗಳಿಲ್ಲ. ಅಲ್ಲದೆ ಈಗಲೂ ಅಲ್ಲಲ್ಲಿ ತಲೆಮೇಲೆ ಮಲಹೊರುವ ಪದ್ಧತಿ ಇರುವ ಬಗೆಗೆ ದಿನಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇದೆ. ಇದು ಅತ್ಯಂತ ನಾಚಿಕೆಗೇಡಿನ ವಿಚಾರ. ಪ್ರಸ್ತುತ ಸಂದರ್ಭದಲ್ಲಿ ಇವರ ಸಮಸ್ಯೆಯನ್ನು ಇವರೇ ಬಗೆಹರಿಸಿಕೊಳ್ಳುವ; ಇವರ ಸಮುದಾಯವನ್ನು ಇವರೇ ಪ್ರತಿನಿಧಿಸುವ, ಹಾಗೇ ಇವರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಅಗತ್ಯತೆ ಇದೆ. ಅಲ್ಲದೆ ಶೈಕ್ಷಣಿಕವಾಗಿ ಇವರಿಗೆ ಅರಿವು ಮೂಡಿಸಲು ಹೆಚ್ಚಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ.

ಈ ಸಮುದಾಯದಲ್ಲಿ ಪುರುಷನಿಗಿಂತ ಮಹಿಳೆಯ ಪಾತ್ರ ಪ್ರಧಾನವಾದುದು. ಪುರುಷನಾದವನು ಕುಡಿತದಂತಹ ದುಶ್ಚಟಗಳಿಗೆ ಬಲಿಯಾದಾಗ ಕೌಟುಂಬಿಕ ನಿರ್ವಹಣೆ, ಮಕ್ಕಳ ಲಾಲನೆ-ಪಾಲನೆ, ಅವರ ಶೈಕ್ಷಣಿಕ ಹೊಣೆಗರಿಕೆ ಹಾಗೂ ಗಂಡನ ಪೋಷಣೆ ಕೂಡ ಮಹಿಳೆಯದೆ ಆಗಿರುತ್ತದೆ. ಬಹುತೇಕ ಮಹಿಳೆಯರು ಮನೆಯ ಒಳಗೆ-ಹೊರಗೆ ದುಡಿದು ಕುಟುಂಬಗಳನ್ನು ನಿರ್ವಹಿಸುತ್ತಿರುವುದನ್ನು ಕಾಣಬಹುದು. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಕುಡುಕ ಗಂಡನ ದೌರ್ಜನ್ಯಕ್ಕೂ ಮಹಿಳೆ ಒಳಗಾಗುತ್ತಿದ್ದಾಳೆ. ಬಡತನ ಹಾಗೂ ವೃತ್ತಿಯ ಕಾರಣಗಳೇ ಈ ಇಡೀ ಸಮುದಾಯವನ್ನು ಅಪೌಷ್ಠಿಕತೆ ಹಾಗೂ ರೋಗರುಜಿನಗಳೆಂಬ ವಿಷವರ್ತುಲಕ್ಕೆ ದೂಡುತ್ತಿವೆ. ಮಹಿಳಾ ಸಬಲೀಕರಣ ಹಾಗೂ ಮಕ್ಕಳ ಶಿಕ್ಷಣದ ಬಗೆಗೆ ಸರ್ಕಾರಗಳು ಇನ್ನೂ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖೇನ ಜಲಗಾರ ಸಮುದಾಯದ ಪ್ರಗತಿಗೆ ಶ್ರಮಿಸಬೇಕಿದೆ. ಅಕ್ಷರ, ಆರೋಗ್ಯ, ವಸತಿ ಮತ್ತು ಉದ್ಯೋಗದಲ್ಲಿ ವೈಜ್ಞಾನಿಕವಾದ ವೈಚಾರಿಕವಾದ ಯೋಚನೆಗಳನ್ನು ಅನುಷ್ಠಾನಗೊಳಿಸುವ ಮುಖೇನ ಮಾತ್ರ ಜಲಗಾರರ ಬದುಕನ್ನು ಮಾನವೀಯಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಒಟ್ಟು ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಾದರೂ ಪ್ರಜ್ಞಾಪೂರ್ವಕವಾಗಿ ಆಲೋಚಿಸಬೇಕಿದೆ. ಈ ಸಂದರ್ಭದಲ್ಲಿ ಇಡೀ ನಾಗರಿಕ ಸಮಾಜ ಜಲಗಾರ ಋಣದಲ್ಲಿ ಬದುಕುತ್ತಿದೆ ಎಂಬುದನ್ನು ಮಾತ್ರ ಎಂದಿಗೂ ಮರೆಯಬಾರದು.

ವಕ್ತೃಗಳು:
೧. ಮುನಿಯಪ್ಪ: ವಯಸ್ಸು-೫೫
ಚನ್ನಪಟ್ಟಣ, ಹೌಸಿಂಗ್‌ಬೋರ‍್ಡ್‌, ರಾಮನಗರ ಜಿಲ್ಲೆ

೨. ಕರಪಮ್ಮ: ವಯಸ್ಸು -೬೫
ಕುದುರೆಮಾಳ, ಮೈಸೂರು

೩. ಆನೆಕಲ್ ಮುನಿಯಮ್ಮ: ವಯಸ್ಸು-೮೦
ಕರ್ಬಾಲೊ ಮೈದಾನ, ಚನ್ನಪಟ್ಟಣ

೪. ವೆಂಕಟೇಶ್: ವಯಸ್ಸು-೫೦
ಕರ್ಬಾಲೊ ಮೈದಾನ, ಚನ್ನಪಟ್ಟಣ

೫. ವರಲಕ್ಷ್ಮಿ: ವಯಸ್ಸು-೪೫
ಸಕಲೇಶಪುರ, ಹಾಸನ

೬. ಕಿಟ್ಟಮ್ಮ: ವಯಸ್ಸು-೬೦
ಸಕಲೇಶಪುರ, ಹಾಸನ

೭. ಕನ್ನಮ್ಮ: ವಯಸ್ಸು-೬೦
ಸಕಲೇಶಪುರ, ಹಾಸನ

ಲೇಖಕರ ವಿಳಾಸ

. ಡಾ. ಬಿ.ಸಿ.ದಾದಾಪೀರ
ಉಪನ್ಯಾಸಕರು, ಕನ್ನಡ ವಿಭಾಗ
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು
ಮಂಡ್ಯ

. ಡಾ. ಎಸ್.ನರೇಂದ್ರಕುಮಾರ
ಉಪನ್ಯಾಸಕರು
ಡಾ. ಬಿ.ಆರ‍್.ಅಂಬೇಡ್ಕರ‍್ ಸಂಸೋಧನ ಹಾಗು ವಿಸ್ತರಣ ಕೇಂದ್ರ
ಮಾನಸಗಂಗೋತ್ರಿ, ಮೈಸೂರು

. ಡಾ. ಕುಶಾಲ ಬರಗೂರು
ಉಪನ್ಯಾಸಕರು, ಕನ್ನಡ ವಿಭಾಗ
ಸ್ನಾತಕೋತ್ತರ ಕೇಂದ್ರ, ಮೈಸೂರು ವಿಶ್ವವಿದ್ಯಾನಿಲಯ,
ಹೇಮಗಂಗೋತ್ರಿ, ಹಾಸನ

. ಡಾ. ಮಾದಯ್ಯ ಮಾಕನಹಳ್ಳಿ
ಉಪನ್ಯಾಸಕರ, ಕನ್ನಡ ವಿಭಾಗ,
ಸರ್ಕಾರ ಪದವಿ ಕಾಲೇಜು, ಹೊಳೇನರಸೀಪುರ
ಹಾಸನಜಿಲ್ಲೆ

. ಡಾ. ಷಹಾಸೀನಾ ಬೇಗಂ
ಉಪನ್ಯಾಸಕರು, ಕನ್ನಡ ವಿಭಾಗ
ಮೈಸೂರು ವಿಶ್ವವಿದ್ಯಾನಿಲಯ ಸಂಜೆ ಕಾಲೇಜು
ಮೈಸೂರು

. ಡಾ. ಅಪ್ಪಗೆರೆ ಸೋಮಶೇಕರ
ಕನ್ನಡ ಉಪನ್ಯಾಸಕ
ಸರ್‌.ಎಂ.ವಿ. ಸ್ನಾತಕೋತ್ತರ ಕೇಂದ್ರ
ಮೈಸೂರು ವಿಶ್ವವಿದ್ಯಾನಿಲಯ
ತೂಬಿನಕೆರೆ, ಮಂಡ್ಯ.

* * *