ಜವಾಹರ್‌ಲಾಲ್ ನೆಹರುಸ್ವತಂತ್ರ ಭಾರತದ ಮೊದಲ ಪ್ರಧಾನಿ. ಅತ್ಯಂತ ಶ್ರೀಮಂತ ಮನೆತನದಲ್ಲಿ ಹುಟ್ಟಿ ಸುಖದ ತೊಟ್ಟಿಲಲ್ಲಿ ಬೆಳೆದು ದೇಶಕ್ಕಾಗಿ ಎಲ್ಲವನ್ನೂ ಅರ್ಪಿಸಿದರು. ಅಪೂರ್ವ ಜನಪ್ರಿಯತೆ ಇವರದು. ವಿಜ್ಞಾನ, ತಂತ್ರಜ್ಞಾನ ಗಳನ್ನು ಬಳಸಿ ಭಾರತದ ದಾರಿದ್ರ  ಅಜ್ಞಾನಗಳನ್ನು ತೊಡೆದು ಹಾಕಲು ಶ್ರಮಿಸಿದರು. ಬಹು ಹೃದಯವಂತಿಕೆಯ ವ್ಯಕ್ತಿ. ಶ್ರೇಷ್ಠ ಸಾಹಿತಿ.

ಜವಾಹರ್‌ಲಾಲ್ ನೆಹರು

ನವೆಂಬರ್ ೧೪ ನಮ್ಮ ದೇಶದ ಒಬ್ಬ ಮಹಾಪುರುಷರಾದ ಪಂಡಿತ ಜವಾಹರ್‌ಲಾಲ್ ನೆಹರು ಅವರ ಜನ್ಮದಿನ. ಅಂದು ಭಾರತದಲ್ಲೆಲ್ಲ ‘ಮಕ್ಕಳ ದಿನ’ ಎಂದು ಸಂಭ್ರಮದಿಂದ ಪ್ರತಿವರುಷ ಆಚರಿಸುತ್ತೇವೆ. ಜವಾಹರರನ್ನು ಮಕ್ಕಳು ‘ಚಾಚಾ ನೆಹರೂ’ ಎಂದು ಪ್ರೀತಿ-ಗೌರವಗಳಿಂದ ಕರೆಯುತ್ತಾರೆ. ಚಾಚಾ ಎಂದರೆ ಚಿಕ್ಕಪ್ಪ ಅಥವಾ ಕಕ್ಕ.

ಜವಾಹರರಿಗೆ ಮೊದಲಿನಿಂದಲೂ ಮಕ್ಕಳೆಂದರೆ ಬಹಳ ಪ್ರೀತಿ.ಮಕ್ಕಳೊಡನೆ ಆಟವಾಡುವುದೆಂದರೆ ಆನಂದ. ಸ್ವತಂತ್ರ ಭಾರತದ ಪ್ರಧಾನಮಂತ್ರಿಯಾಗಿ ದಿನವಿಡೀ ದುಡಿತ ವಿದ್ದಾಗಲೂ ಅವರು ಮಕ್ಕಳೊಡನೆ ಆಡುವ ಪ್ರಸಂಗ ತಪ್ಪಿಸುತ್ತಿರಲಿಲ್ಲ. ಯಾವುದೇ ಸಭೆಗೆ ಹೋಗಿರಲಿ, ಎಷ್ಟೇ ಅವಸರದ ಕಾರ‍್ಯಕ್ರಮವಿರಲಿ ಅವರು ಮಕ್ಕಳನ್ನು ನೋಡಿದ ಕೂಡಲೆ ಎತ್ತಿ ಮುದ್ದಾಡುತ್ತಿದ್ದರು. ‘‘ನಿಜವಾದ ಜವಾಹರರನ್ನು ನೋಡಬೇಕಾದರೆ ಅವರು ಮಕ್ಕಳೊಂದಿಗೆ ಇರುವಾಗ ನೋಡಬೇಕು. ಮಕ್ಕಳಂತೆಯೇ ಮಾತನಾಡಿ, ಅವರ ಹಾಗೆಯೇ ಆಟವಾಡಿ ನಲಿದು ಆನಂದಪಡುತ್ತಾರೆ’’ ಎಂದು ಅವರ ತಂಗಿ ಶ್ರೀಮತಿ ವಿಜಯಲಕ್ಷ್ಮಿ ಪಂಡಿತರು ಹೇಳಿದ್ದಾರೆ.

ಜವಾಹರರು ಮಕ್ಕಳಿಂದ ಪಾಠಗಳನ್ನೂ ಕಲಿತದ್ದುಂಟು. ದೇಶದ ಸ್ವಾತಂತ್ರ  ಸಂಗ್ರಾಮದಲ್ಲಿ ತೊಡಗಿದ್ದಾಗ ೧೯೩೧ರಲ್ಲಿ ಅವರ ಆರೋಗ್ಯ ಕೆಟ್ಟಿತು. ವಿಶ್ರಾಂತಿಗಾಗಿ ಅವರು ಶ್ರೀಲಂಕಾಕ್ಕೆ ಹೋಗಿದ್ದರು. ಅಲ್ಲಿ ಒಮ್ಮೆ ಒಬ್ಬ ಹುಡುಗ ಅವರ ಹತ್ತಿರ ಬಂದು ಕೈಕುಲುಕಿ ‘‘ನಾನೆಂದೂ ಮುಗ್ಗರಿಸುವುದಿಲ್ಲ’’ ಎಂದ. ಎಂತಹ ಕಠಿಣ ಸಮಸ್ಯೆ ಎದುರಾದರೂ ಧೈರ‍್ಯದಿಂದ ಮುಂದುವರಿಯಬೇಕೆಂದು ಪಾಠ ಆ ಹುಡುಗನಿಂದ ಜವಾಹರರಿಗೆ ಆ ದಿನ ಸಿಕ್ಕಿತಂತೆ.

ಮನೆತನ

ನೆಹರು ಅವರ ಪೂರ್ವಜರ ಹೆಸರು ‘ನೆಹರು’ ಆಗಿದ್ದಿರಲಿಲ್ಲವೆಂದು ಹೇಳಿದರೆ ನೀವು ನಂಬಲಿಕ್ಕಿಲ್ಲ. ಆದರೆ ಅದು ಸತ್ಯಸಂಗತಿ. ಅವರ ಪೂರ್ವಜರು ಕಾಶ್ಮೀರದಲ್ಲಿದ್ದರು. ಅವರಿಗೆ ‘ರಾಜಕೌಲ’  ಎಂಬ ಹೆಸರಿತ್ತು. ಪಂಡಿತ ರಾಜಕೌಲರು ಸಂಸ್ಕೃತ-ಫಾರಸೀ ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು. ಕ್ರಿ.ಶ. ೧೭೧೬ ರಲ್ಲಿ ದಿಲ್ಲಿಯ ಮೊಗಲದೊರೆ ಫರುಕ್ಸಿಯರನು ಕಾಶ್ಮೀರಕ್ಕೆ ಭೆಟ್ಟಿ ಕೊಟ್ಟಾಗ ಪಂಡಿತ ರಾಜಕೌಲರನ್ನು ದಿಲ್ಲಿಗೆ ಕರೆತಂದು ನಗರದ ನಡುವೆ ಹರಿಯುತ್ತಿದ್ದ ಕಾಲುವೆಯ ಪಕ್ಕದಲ್ಲಿ ಮನೆ ಕಟ್ಟಿಸಿಕೊಟ್ಟನು. ಕಾಲುವೆಗೆ ಹಿಂದಿ ಭಾಷೆಯಲ್ಲಿ ‘ನಹರ್’ ಎನ್ನುತ್ತಾರೆ. ಹೀಗಾಗಿ ‘ನಹರ್’ ಪಕ್ಕದ ಮನೆಯವರು ‘ನೆಹರೂ’ ಆದರು. ೧೮೫೭ ರಲ್ಲಿ ಮೊದಲನೆಯ ಸ್ವಾತಂತ್ರ ಸಮರ ನಡೆದಾಗ ದಿಲ್ಲಿಯ ಜನರ ಮೇಲೆ ಬ್ರಿಟಿಷರು ಅತ್ಯಾಚಾರ ಎಸಗಿದರು. ಅದನ್ನು ಸಹಿಸಲಾರದೆ ಜನರು ದಿಲ್ಲಿ ಬಿಟ್ಟು ಓಡಿಹೋದರು. ಆಗ ಜವಾಹರರ ಅಜ್ಜ ಗಂಗಾಧರ ನೆಹರು ಆಗ್ರಾಕ್ಕೆ ಬಂದು ನೆಲೆಸಿದರು. ಅಲ್ಲಿ ೧೮೬೧ ರ ಮೇ ೬ ರಂದು ಜವಾಹರರ ತಂದೆ ಮೋತೀಲಾಲರ ಜನ್ಮವಾಯಿತು.

ಬಾಲ್ಯ-ವಿದ್ಯಾಭ್ಯಾಸ

ಮೋತೀಲಾಲರು ಕಲಿತು ದೊಡ್ಡವರಾಗಿ ಅಲಹಾಬಾದಿನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿ ಅಪಾರ ಕೀರ್ತಿ ಮತ್ತು ಹಣ ಗಳಿಸಿದರು. ಜವಾಹರರು ಹುಟ್ಟಿದ್ದು ೧೮೮೯ನೇ ನವಂಬರ ೧೪ ರಂದು. ತಾಯಿ ಸ್ವರೂಪರಾಣಿ. ಮೋತೀಲಾಲರು ಆ ಕಾಲದಲ್ಲಿ ತಿಂಗಳಿಗೆ ಹತ್ತು ಸಾವಿರಕ್ಕಿಂತ ಹೆಚ್ಚು ಸಂಪಾದಿಸುತ್ತಿದ್ದರು. (ಈಗಿನ ಬೆಲೆಗಳ ಪ್ರಕಾರ ಸುಮಾರು ಎರಡು ಲಕ್ಷ ರೂಪಾಯಿ ಎನ್ನಬೇಕು.) ಅಲಹಾಬಾದಿನಲ್ಲಿ ಮೊದಲು ಕಾರ್ ಕೊಂಡವರು ಅವರು. ಗವರ್ನರು, ಅತ್ಯಂತ ಹಿರಿಯ ಅಧಿಕಾರಿಗಳು ಅವರ ಸ್ನೇಹಿತರು. ವೈಭವದ ಜೀವನ ಶ್ರೀಮಂತ ತಂದೆಯ ಒಬ್ಬನೇ ಮಗನಾದ ಜವಾಹರರು ರಾಜಕುಮಾರನಂತೆ ಅತ್ಯಂತ ಸುಖದಿಂದ ಬೆಳೆದರು. ಮೋತೀಲಾಲರು ಹೊಸದಾಗಿ ಕಟ್ಟಿಸಿದ ‘ಆನಂದಭವನ’ ವೆಂಬ ಹೆಸರಿನ ಮನೆಯು ಅರಮನೆಯಂತೆಯೇ ಇತ್ತು.

ಮೋತೀಲಾಲರು ಸಿಟ್ಟಿನ ಸ್ವಭಾವದವರು. ಜವಾಹರರಿಗೆ ಅವರ ಬಗ್ಗೆ ಹೆದರಿಕೆಯಿತ್ತು. ಒಮ್ಮೆ ಜವಾಹರರು ಚೆನ್ನಾಗಿ ಪೆಟ್ಟು ತಿಂದರು.

ಆದದ್ದು ಇಷ್ಟೇ. ಮೋತೀಲಾಲರ ಕೋಣೆಯಲ್ಲಿ ಮೇಜಿನ ಮೇಲೆ ಎರಡು ಪೆನ್ನುಗಳಿದ್ದವು. ಅವನ್ನು ನೋಡಿದಾಗ ಬಾಲಕ ಜವಾಹರರು ‘‘ಎರಡು ಪೆನ್ನುಗಳಿಂದ ಯಾರಾದರೂ ಬರೆಯುತ್ತಾರೆಯೇ, ಒಂದನ್ನು ನಾನು ಇಟ್ಟುಕೊಂಡರೆ ತಪ್ಪೇನು?’’ ಎಂದು ಆಲೋಚಿಸಿ ಒಂದನ್ನು ತೆಗೆದುಕೊಂಡರು. ಆ ಬಳಿಕ ತಂದೆ ಪೆನ್ನು ಕಾಣದೆ ಎಲ್ಲರನ್ನು ಕೇಳಿದರು. ಮಗನನ್ನು ಕೇಳಿದಾಗ ತಾನು ತೆಗೆದುಕೊಂಡಿಲ್ಲವೆಂದ. ಆದರೆ ಹುಡುಕಿದಾಗ ಮಗನ ಬಳಿ ಸಿಕ್ಕಿಬಿಟ್ಟಿತು. ಮಗನಿಗೆ ಚೆನ್ನಾಗಿ ಏಟುಬಿದ್ದವು!

ಹೀಗೆ ಸಿಟ್ಟಿನ ಸ್ವಭಾವವಿದ್ದರೂ ತಂದೆಗೆ ಮಗನ ಮೇಲೆ ಬಹಳ ಪ್ರೇಮವಿತ್ತು. ಮಗನಿಗೆ ಒಳ್ಳೆ ಶಿಕ್ಷಣ ಕೊಡಿಸಬೇಕೆಂದು ಮನೆಯಲ್ಲಿಯೇ ಉತ್ತಮ ಶಿಕ್ಷಕರನ್ನಿಟ್ಟರು. ಆಗಿನ ಕಾಲದ ವಿದ್ಯಾವಂತರಂತೆ ಮೋತೀಲಾಲರಿಗೂ ಇಂಗ್ಲಿಷ್ ಭಾಷೆಯ ಬಗ್ಗೆ ಬಹಳ ಮೋಹವಿತ್ತು. ಅದಕ್ಕಾಗಿ ಮಗನಿಗೆ ಇಂಗ್ಲಿಷ್ ಶಿಕ್ಷಣ ಕೊಡಿಸಲು ಫರ್ಡಿನೆಂಡ್ ಬ್ರುಕ್ಸ್ ಎಂಬುವನನ್ನು ನೇಮಿಸಿದ್ದರು. ಆತನು ಜವಾಹರರಲ್ಲಿ ಒಳ್ಳೊಳ್ಳೆಯ ಪುಸ್ತಕ ಓದುವ ರುಚಿ ಹುಟ್ಟಿಸಿದ. ಈ ರುಚಿಯು ಜವಾಹರರಿಗೆ ವಿದ್ಯಾರ್ಥಿಯಾಗಿದ್ದಾಗ ಮತ್ತು ಮುಂದೆಯೂ ಬಹಳ ಸಹಾಯಕವಾಯಿತು. ಆನಂದ ಭವನದಲ್ಲಿಯೇ ಬ್ರುಕ್ಸನು ಒಂದು ಪ್ರಯೋಗಶಾಲೆಯನ್ನು ನಿರ್ಮಿಸಿ ವಿಜ್ಞಾನದಲ್ಲಿಯೂ ಜವಾಹರರ ಆಸಕ್ತಿ ಬೆಳೆಸಿದ.

ಚಿಕ್ಕಂದಿನಲ್ಲಿ ಜವಾಹರರೊಡನೆ ಆಟವಾಡಲು ‘ಆನಂದಭವನ’ ದಲ್ಲಿ ಸಣ್ಣ ಹುಡುಗರು ಇರಲಿಲ್ಲ. ಅವರ ತಂಗಿ ಸ್ವರೂಪಕುಮಾರಿ-ಮುಂದೆ ಶ್ರೀಮತಿ ವಿಜಯಲಕ್ಷಿ  ಪಂಡಿತ್ ಎಂದು ಹೆಸರಾದರು – ಹುಟ್ಟದ್ದು ೧೯೦೦ ರ ಆಗಸ್ಟ್ ೧೮ ರಂದು. ಕಿರಿಯ ತಂಗಿ ಕೃಷ್ಣಾ-ಮುಂದೆ ಶ್ರೀಮತಿ ಕಷ್ಣಾ ಹಥೀಸಿಂಗ-ಹುಟ್ಟಿದ್ದು ೧೯೦೭ ರ ನವಂಬರ್ ೨ ರಂದು. ಆದರೆ ಜವಾಹರರಿಗೆ ಅವರ ಕಕ್ಕಿ ರಾಮಾಯಣ-ಮಹಾಭಾರತಗಳ ಕಥೆಗಳನ್ನೂ ಮುಂಶಿ ಮುಬಾರಕ ಅಲಿ ಎಂಬ ನೌಕರನು ೧೮೫೭ರ ಸ್ವಾತಂತ್ರ  ಸಮರದಲ್ಲಿ ಹೋರಾಡಿದ ದೇಶಭಕ್ತ ವೀರರ ಕಥೆಗಳನ್ನೂ   ಹೇಳುತ್ತಿದ್ದರು. ಇದರಿಂದ ಜವಾಹರರಿಗೆ ನಮ್ಮ ದೇಶದ ಹಿರಿಮೆ ತಿಳಿಯುತ್ತಿತ್ತು. ನಮ್ಮ ದೇಶವನ್ನು ಆಳುತ್ತಿದ್ದ ಬ್ರಿಟಿಷರು ನಡೆಸುವ ಅತ್ಯಾಚಾರಗಳ ಬಗ್ಗೆ ಹಿರಿಯರು ಮಾತನಾಡುವುದನ್ನು ಜವಾಹರರು ಬಹಳ ಕುತೂಹಲದಿಂದ ಕೇಳುತ್ತಿದ್ದರು. ಭಾರತೀಯರಿಗೆ ಎಲ್ಲಿಯೂ ಗೌರವದ ಸ್ಥಾನ-ಮಾನವಿರಲಿಲ್ಲ. ಉಪಾಹಾರ ಗೃಹಗಳಲ್ಲಿ, ರೈಲುಡಬ್ಬಿಗಳಲ್ಲಿ, ಸಾರ್ವಜನಿಕ ಉದ್ಯಾನಗಳಲ್ಲಿ- ಹೀಗೆ ಎಲ್ಲ ಕಡೆ ಬ್ರಿಟಿಷರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯಿರುತ್ತಿತ್ತು. ಬ್ರಿಟಿಷರು ಭಾರತೀಯರನ್ನು ಬಹಳ ಕೀಳುಭಾವನೆಯಿಂದ ಕಾಣುತ್ತಿದ್ದರು. ಇದೆಲ್ಲ ಕೇಳಿದಾಗ ಬಾಲಕ ಜವಾಹರರಿಗೆ ಬ್ರಿಟಿಷರ ಮೇಲೆ ಸಿಟ್ಟು ಬರುತ್ತಿತ್ತು.

ಇಂಗ್ಲೆಂಡಿನಲ್ಲಿ

ಜವಾಹರರಿಗೆ ೧೫ ವರುಷ ದಾಟಿದಾಗ ಮೋತಿಲಾಲರು ಅವರನ್ನು ಇಂಗ್ಲೆಂಡಿನಲ್ಲಿ ‘ಹ್ಯಾರೋ’ ಎಂಬ ಸಾರ್ವಜನಿಕ ಶಾಲೆಗೆ ಸೇರಿಸಿದರು. ಅಲ್ಲಿ ಜವಾಹರರು ಬೀಜಗಣಿತ, ರೇಖಾಗಣಿತ, ಇತಿಹಾಸ, ಸಾಹಿತ್ಯ ಮುಂತಾದ ಎಲ್ಲ ವಿಷಯಗಳಲ್ಲಿ ಉತ್ತಮ ವಿದ್ಯಾರ್ಥಿಯೆಂದು ಹೆಸರು ಪಡೆದು ಬಹುಮಾನ ಗಳಿಸಿದರು. ಎರಡು ವರುಷದ ಬಳಿಕ ಕೇಂಬ್ರಿಜ್ ವಿಶ್ವವಿದ್ಯಾಲಯದ ಟ್ರನಿಟಿ ಕಾಲೇಜನ್ನು ಸೇರಿ ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಭೂಗರ್ಭಶಾಸ್ತ್ರಗಳ ಅಭ್ಯಾಸ ಮಾಡಿದರು. ಜೊತೆಗೆ ಸಾಹಿತ್ಯ, ಇತಿಹಾಸ, ರಾಜನೀತಿ, ಅರ್ಥಶಾಸ್ತ್ರಗಳ ಪುಸ್ತಕಗಳನ್ನೂ ಓದಿದರು. ೧೯೧೦ ರ ಜೂನಿನಲ್ಲಿ ಪದವೀಧರರಾಗಿ, ಲಂಡನ್ನಿನಲ್ಲಿ ಕಾಯಿದೆ ಅಭ್ಯಾಸ ಪಾರಂಭಿಸಿದರು. ಮತ್ತು ೧೯೧೨ ರಲ್ಲಿ ಕಾಯಿದೆ ಪರೀಕ್ಷೆ ಪಾಸು ಮಾಡಿ ಭಾರತಕ್ಕೆ ಮರಳಿ ಬಂದರು. ಹೀಗೆ ಇಂಗ್ಲೆಂಡಿನಲ್ಲಿ ಕಳೆದ ಏಳು ವರ್ಷಗಳಲ್ಲಿ ಜವಾಹರರು ಒಳ್ಳೇ ಹೆಸರು ಗಳಿಸಿದ್ದರು.

ಜವಾಹರರು ಇಂಗ್ಲೆಂಡಿಗೆ ಹೋದರೂ ಭಾರತದಲ್ಲಿ ನಡೆಯುತ್ತಿದ್ದ ಸಂಗತಿಗಳನ್ನು ತಿಳಿಯಲು ಉತ್ಸುಕರಾಗಿದ್ದರು ಮತ್ತು ಒಳ್ಳೊಳ್ಳೆಯ ಭಾರತೀಯ ಪತ್ರಿಕೆಗಳನ್ನು ತರಿಸಿಕೊಂಡು ಓದುತ್ತಿದ್ದರು. ಅದೇ ರೀತಿ ಇಂಗ್ಲೆಂಡ್ ದೇಶದಲ್ಲಿ ನಡೆಯುವ ರಾಜಕೀಯ ಸಂಗತಿಗಳನ್ನೂ ತಿಳಿದುಕೊಳ್ಳುತ್ತಿದ್ದರು. ೧೯೦೬ ನೆಯ ಇಸವಿಯಲ್ಲಿ ಆ ದೇಶದಲ್ಲಿ ಚುನಾವಣೆಗಳಾಗಿ ಹೊಸ ಮಂತ್ರಿಮಂಡಲದ ರಚನೆಯಾದಾಗ ಅವರ ತರಗತಿಯಲ್ಲಿ ಎಲ್ಲ ಮಂತ್ರಿಗಳ ಹೆಸರು ಹೇಳಿದವರು ಜವಾಹರರೊಬ್ಬರೇ. ಬ್ರಿಟಿಷ್ ವಿದ್ಯಾರ್ಥಿಗಳಿಗೂ ಆ ಹೆಸರುಗಳು ಗೊತ್ತಿರಲಿಲ್ಲ.

ವಿದ್ಯಾಲಯದಲ್ಲಿ ಒಳ್ಳೆಯ ಕೆಲಸ ಮಾಡಿದುದಕ್ಕಾಗಿ ಜವಾಹರರಿಗೆ ಒಂದು ಪುಸ್ತಕ ಬಹುಮಾನವಾಗಿ ಸಿಕ್ಕಿತು. ಅದು ಇಟಲಿ ದೇಶದ ಸ್ವಾತಂತ್ರ  ಹೋರಾಟಗಾರನಾದ ಗೆರಿಬಾಲ್ಡಿಯ ಜೀವನಚರಿತ್ರೆ. ಅದನ್ನು ಓದಿದಾಗ ದೇಶಕ್ಕಾಗಿ ಹೋರಾಡಬೇಕೆಂಬ ಜವಾಹರರ ಕೆಚ್ಚು ಅಧಿಕವಾಯಿತು.

ಸಾಮಾನ್ಯವಾಗಿ ತಂದೆ ಮಗನಿಗೆ ಉಪದೇಶ ಮಾಡುತ್ತಾನೆ. ಆದರೆ ಜವಾಹರರು ಅಸಾಮಾನ್ಯರಾಗಿದ್ದರು. ಅವರು ದೇಶದ ಸ್ವಾತಂತ್ರ ಕ್ಕಾಗಿ ಹೋರಾಡಲು ಇಂಗ್ಲೆಂಡಿನಿಂದಲೇ ಪತ್ರ ಬರೆದು ತಂದೆಗೆ ಸಲಹೆ ನೀಡಿದರು. ಆ ಕಾಲದಲ್ಲಿ ‘ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ ಎಂಬ ಸಂಸ್ಥೆ ನಮ್ಮ ದೇಶದ ಸ್ವಾತಂತ್ರ ಕ್ಕಾಗಿ ಹೋರಾಡುತ್ತಿತ್ತು. ಅದರಲ್ಲಿ ಎರಡು ಗುಂಪುಗಳಿದ್ದವು.ಒಂದು ಮಂದಗಾಮಿ, ಇನ್ನೊಂದು ಉಗ್ರಗಾಮಿ. ಬ್ರಿಟಿಷರ ಬಳಿ ಬೇಡಿಕೊಂಡು ಅವರು ಕೊಟ್ಟಷ್ಟು ಅಧಿಕಾರ ಸ್ವೀಕರಿಸಿ ಸಮಾಧಾನ ಪಡೆಯಬೇಕೆಂಬುದು ಮಂದಗಾಮಿಗಳ ಧೋರಣೆ. ಬ್ರಿಟಿಷರನ್ನು ದೇಶದಿಂದ ಹೊರದಬ್ಬಿ ಸಂಪೂರ್ಣವಾಗಿ ನಮ್ಮದೇ ಅಧಿಕಾರ ಸ್ಥಾಪಿಸಬೇಕೆಂಬುದು ಉಗ್ರಗಾಮಿಗಳ ವಿಚಾರವಾಗಿತ್ತು. ಮೋತಿಲಾಲರು ಮಂದಗಾಮಿಗಳಾಗಿದ್ದರು. ಆದರೆ ಜವಾಹರರಿಗೆ ಉಗ್ರಗಾಮಿಗಳ ವಿಚಾರವೇ ಹಿಡಿಸಿತ್ತು. ಅವರು ಪತ್ರ ಬರೆದು ಉಗ್ರಗಾಮಿಗಳಾಗಲು ತಂದೆಯವರನ್ನು ಹುರಿದುಂಬಿ ಸುತ್ತಿದ್ದರು. ೧೯೧೨ ರಲ್ಲಿ ಜವಾಹರರು ಭಾರತಕ್ಕೆ ಮರಳಿದ ಬಳಿಕ ತಂದೆ ಮಕ್ಕಳಲ್ಲಿ ಈ ವಿಷಯದಲ್ಲಿ ಚರ್ಚೆಯೂ ಆಗುತ್ತಿತ್ತು. ಆದರೆ ಕೊನೆಯಲ್ಲಿ ಜವಾಹರರೇ ಗೆದ್ದರು.

೧೯೧೨ ರ ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ಮರಳಿದ ಬಳಿಕ ಜವಾಹರರು ತಂದಯವರೊಡನೆ ವಕೀಲಿವೃತ್ತಿ ಪ್ರಾರಂಭಿಸಿದರು. ಅವರು ತೆಗೆದುಕೊಂಡ ಮೊದಲನೆಯ ಪ್ರಕರಣದಿಂದ ಅವರಿಗೆ ೫೦೦ ರೂಪಾಯಿ ಶುಲ್ಕ ಬಂದಿತು. ೧೯೧೬ ರ ಫೆಬ್ರವರಿ ೮ ರ ವಸಂತಪಂಚಮಿಯ ದಿನ ದಿಲ್ಲಿಯಲ್ಲಿ ಜವಾಹರರ ಮದುವೆ ಬಹಳ ವೈಭವದಿಂದ ನೆರವೇರಿತು. ಅವರ ಪತ್ನಿ ಕಮಲಾ. ಆಕೆಯೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕೀರ್ತಿ ಗಳಿಸಿದರು. ಜವಾಹರರಿಗೆ ಒಬ್ಬಳೇ ಮಗಳು, ಇಂದಿರಾ ಪ್ರಿಯದರ್ಶಿನಿ.

ಕಾಂಗ್ರೆಸ್ಸಿಗೆ ಪ್ರವೇಶ

ಜವಾಹರರು ವಕೀಲಿವೃತ್ತಿಯನ್ನೇ ಮುಂದುವರೆಸಿದ್ದರೆ ಪ್ರಾಯಶಃ ಬೇಕಾದಷ್ಟು ಹಣ ಗಳಿಸಬಹುದಿತ್ತು. ಆದರೆ ದೇಶವನ್ನು ಸ್ವತಂತ್ರಗೊಳಿಸುವುದೇ ಅವರ ಹಂಬಲವಾಗಿತ್ತು. ಗಾಂಧೀಜಿಯವರನ್ನು ಕಂಡು ಅವರು ಪ್ರಭಾವಿತರಾದರು, ಅವರ ಹಿಂಬಾಲಕರಾದರು. ಆದ್ದರಿಂದ ಅವರು ಕಾಂಗ್ರೆಸ್ಸಿನ ಕಾರ‍್ಯಕ್ರಮಗಳಲ್ಲಿ ಭಾಗವಹಿಸತೊಡಗಿದರು. ೧೯೧೨ ರ ಡಿಸೆಂಬರ್ ತಿಂಗಳಲ್ಲಿ ಸೇರಿದ ಬಂಕೀಪುರ ಕಾಂಗ್ರೆಸ್ ಅಧಿವೇಶನಕ್ಕೆ ಹೋಗಿ ಬಂದರು. ೧೯೧೬ ರಲ್ಲಿ ಸ್ಥಾಪನೆಯಾದ ಲೋಕಮಾನ್ಯ ತಿಲಕರ ಮತ್ತು ಶ್ರೀಮತಿ ಅನಿಬೆಸೆಂಟರ ‘ಹೋಂ ರೂಲ್ ಲೀಗ್’ ಚಳವಳಿಯಲ್ಲಿ ಕೆಲಸ ಮಾಡಲಾರಂಭಿಸಿದರು. ಅಲಹಾಬಾದಿನಲ್ಲಿ ನಡೆದ ಹೋಂ ರೂಲ್ ಲೀಗಿನ ಸಭೆಗೆ ಮೋತೀಲಾಲರು ಅಧ್ಯಕ್ಷರು. ಜವಾಹರರು ಸಹಕಾರ್ಯದರ್ಶಿಗಳಲ್ಲೊಬ್ಬರು.

ಮೋತೀಲಾಲರ ಮಂದಗಾಮಿ ಧೋರಣೆಯನ್ನು ಖಂಡಿಸಲು ಜವಾಹರರು ಎಂದಿಗೂ ಹಿಂಜರಿಯುತ್ತಿರಲಿಲ್ಲ. ೧೯೧೮ನೆಯ ಇಸವಿಯಲ್ಲಿ ನಡೆದ ಒಂದು ಸಭೆ. ಅಲ್ಲಿ ಮೋತೀಲಾಲರು ಮಂದಗಾಮಿ ಧೋರಣೆಯನ್ನು ವಿವರಿಸುತ್ತಿದ್ದರು. ನೆರೆದ ಜನರೆಲ್ಲ ಶಾಂತವಾಗಿ ಕೇಳುತ್ತಿದ್ದರು. ಆದರೆ ಒಮ್ಮೆಲೇ ಯಾರೋ ‘ಆಕ್ಷೇಪಣೆ’ ಎಂದು ಕೂಗಿದರು. ಎಂದರೆ ಮೋತೀಲಾಲರ ಮಾತುಗಳಿಗೆ ತಮ್ಮ ಒಪ್ಪಿಗೆಯಿಲ್ಲವೆಂದು ಅರ್ಥ. ಜನರೆಲ್ಲ ಆಶ್ಚರ‍್ಯದಿಂದ ಹಾಗೆ ಕೂಗಿದವರು ಯಾರೆಂದು ನೋಡತೊಡಗಿದರು. ಮತ್ತು ಯಾರೆಂದು ತಿಳಿದಾಗ ಅವರ ಆಶ್ಚರ‍್ಯ ಮತ್ತಷ್ಟು ಹೆಚ್ಚಾಯಿತು. ಏಕೆ ಗೊತ್ತೆ? ಹಾಗೆ ಕೂಗಿದವರು ಬೇರೆ ಯಾರೂ ಆಗಿರದೆ ಜವಾಹರರೇ ಆಗಿದ್ದರು.!

ತಂದೆ-ಮಗ ಸ್ವಾತಂತ್ರ  ಹೋರಾಟಕ್ಕೆ

ಇದಕ್ಕಿಂತ ಮೊದಲೇ ಜವಾಹರರು ಮಹಾತ್ಮ ಗಾಂಧಿಯವರನ್ನು ಮೆಚ್ಚಿಕೊಂಡು ಅನುಸರಿಸುತ್ತಿದ್ದರು. ಮತ್ತು ೧೯೧೯ರಲ್ಲಿ ವಕೀಲಿ ವೃತ್ತಿಯನ್ನು ಬಿಟ್ಟು ಪೂರ್ಣ ಸಮಯ ರಾಜಕೀಯ ಚಟುವಟಿಕೆಗಳಲ್ಲಿ ಕಳೆಯತೊಡಗಿದರು. ಅತ್ತ ಬ್ರಿಟಿಷ್ ಸರಕಾರವು ಭಾರತದೊಳಗಿನ ನಮ್ಮ ಸ್ವಾತಂತ್ರ  ಹೋರಾಟವನ್ನು ಬಗ್ಗುಬಡಿಯಲು ಕಾನೂನುಗಳನ್ನು ಜಾರಿಗೆ ತರುತ್ತಿತ್ತು. ೧೯೧೯ ರಲ್ಲಿ ಜಾರಿಗೆ ತಂದ ‘ರೌಲೆಟ್ ಕಾನೂನು’ ಅಂತಹದಾಗಿತ್ತು. ಈ ಕಾನೂನನ್ನು ಪ್ರತಿಭಟಿಸಿ ಸತ್ಯಾಗ್ರಹ ಮಾಡಬೇಕೆಂದು ಗಾಂಧೀಜಿ ದೇಶದ ಜನತೆಗೆ ಕರೆಕೊಟ್ಟರು. ಜವಾಹರರೂ ಸತ್ಯಾಗ್ರಹ ಮಾಡಿ ಸೆರೆಮನೆ ಸೇರಲು ಸಿದ್ಧರಾದರು. ಆದರೆ ಆಗ ಜವಾಹರರಿಗೆ ಸತ್ಯಾಗ್ರಹ ಮಾಡುವ ಅವಕಾಶ ಲಭಿಸಲಿಲ್ಲ. ಕಾರಣ ಮೋತೀಲಾಲರ ಪುತ್ರಪ್ರೇಮ. ಹೂವಿಗಿಂತಲೂ ಕೋಮಲನಾದ ತಮ್ಮ ಮಗ ಸೆರೆಮನೆಯ ಕಷ್ಟ ಹೇಗೆ ಸಹಿಸಬಲ್ಲ ಎಂದು ಅವರು ಕೊರಗತೊಡಗಿದರು. ಸೆರೆಮನೆಯಲ್ಲಿ ಮಗ ನೆಲದ ಮೇಲೆ ಮಲಗಿದಾಗ ಹೇಗಾಗಬಹುದೆಂದು ಅರಿಯಲು ಕೆಲವು ದಿನ ತಾವು ಸ್ವತಃ ಬರಿಯ ನೆಲದ ಮೇಲೆ ಮಲಗಿದರು. ಆ ಕಷ್ಟ ಸಹಿಸುವುದು ಕಷ್ಟ ಎಂದು ತೋರಿತು. ‘‘ಸತ್ಯಾಗ್ರಹ ಬೇಡ’’ ಎಂದು ಮಗನಿಗೆ ಹೇಳಿದರು. ಆದರೂ ಮಗ ಹಟ ಬಿಡಲಿಲ್ಲ. ಆಗ ಮೋತೀಲಾಲರು ಗಾಂಧೀಜಿಯವರನ್ನೇ ಕರೆಸಿಕೊಂಡು ಮಗನಿಗೆ ಹೇಳಿಸಿದರು. ತಂದೆಯ ಕೊರಗನ್ನು ಅರ್ಥ ಮಾಡಿಕೊಂಡ ಗಾಂಧೀಜಿ ಜವಾಹರರಿಗೆ ಸತ್ಯಾಗ್ರಹ ಬೇಡವೆಂದು ಅಪ್ಪಣೆ ಮಾಡಿದರು ಮತ್ತು ಜವಾಹರರೂ ಒಪ್ಪಿ ಸುಮ್ಮನಾದರು.

ನಮ್ಮ ಭಾರತವು ಸಾವಿರಾರು ಹಳ್ಳಿಗಳಿಂದ ಕೂಡಿದ ದೇಶ. ಜವಾಹರರಿಗೆ ಹಳ್ಳಿಗಳ ಸಂಪರ್ಕವೇ ಬಂದಿದ್ದಿರಲಿಲ್ಲ. ೧೯೨೦ ರಲ್ಲಿ ನಡೆದ ಒಂದು ಘಟನೆಯಿಂದ ಅವರು ಹಳ್ಳಿ ಹಳ್ಳಿ ಸಂಚಾರ ಮಾಡಬೇಕಾಯಿತು. ಅಲಹಾಬಾದಿನ ಪಕ್ಕದ ಪ್ರತಾಪಗಢ ಜಿಲ್ಲೆಯಲ್ಲಿ ಭೂಮಾಲಿಕರು ತಮ್ಮ ರೈತರಿಗೆ ಬಹಳ ಹಿಂಸೆ ಕೊಡುತ್ತಿದ್ದರು. ಆ ಹಿಂಸೆಯನ್ನು ಸಹಿಸಲಾರದೆ ಅಲ್ಲಿಯ ರೈತರು ಅಲಹಾಬಾದಿಗೆ ಬಂದು ಜವಾಹರರನ್ನು ಭೇಟಿಯಾಗಿ ತಮ್ಮನ್ನು ಕಾಪಾಡಬೇಕೆಂದು ಬೇಡಿಕೊಂಡರು. ಅವರ ಸ್ಥಿತಿ-ಗತಿಗಳನ್ನು ಕೇಳಿದ ಜವಾಹರರ ಹೃದಯ ಕರಗಿತು. ಕೂಡಲೇ ಅವರು ಹಳ್ಳಿಗಳಿಗೆ ಹೋದರು. ಜನರನ್ನು ಸಂಘಟಿಸಿ ಅವರ ಸೌಲಭ್ಯಗಳಿಗಾಗಿ ಹೋರಾಟ ನಡೆಸಿದರು. ಆಗ ಸರಕಾರವು ರೈತರ ಸುಧಾರಣೆಗೆ ಮುಂದಾಯಿತು. ಈ ಘಟನೆಯಿಂದ ಜವಾಹರರಲ್ಲಿ ಹೋರಾಟದ ಕೆಚ್ಚು ಅಧಿಕ ವಾಯಿತು. ಮೋತೀಲಾಲರಲ್ಲಿಯೂ ಬದಲಾವಣೆ ಯಾಯಿತು. ಅವರೂ ವಕೀಲಿವೃತ್ತಿಯನ್ನು ಬಿಟ್ಟುಕೊಟ್ಟು ರಾಜಕೀಯ ಹೋರಾಟದಲ್ಲಿ ಧುಮುಕಿದರು. ಬ್ರಿಟಿಷರ ರಾಜವಿಲಾಸದಿಂದ ಮೆರೆಯುತ್ತಿದ್ದ ‘ಆನಂದ ಭವನ’ ದೊಳಗಿನ ಜೀವನ ಪೂರ್ಣ ಸ್ವದೇಶಿಯಾಯಿತು. ಅದು ರಾಜಕೀಯ ಚಟುವಟಿಕೆಗಳ ಕೇಂದ್ರವಾಯಿತು.

ಸೆರೆಮನೆ

ತಂದೆ ಮತ್ತು ಮಗ ಇಬ್ಬರೂ ವೀರಯೋಧರಂತೆ ಪೂರ್ಣಶಕ್ತಿಯಿಂದ ಹೋರಾಡತೊಡಗಿದಾಗ ಬ್ರಿಟಿಷರೂ ಸುಮ್ಮನಿರಲಿಲ್ಲ. ೧೯೨೧ರ ಡಿಸೆಂಬರ್ ೬ ರಂದು ಇಬ್ಬರನ್ನೂ ಬಂಧಿಸಿ ಲಕ್ನೊ ಸೆರೆಮನೆ ಸೇರಿಸಿದರು. ಇಬ್ಬರಿಗೂ ೬ ತಿಂಗಳ ಶಿಕ್ಷೆ ವಿಧಿಸಲಾಯಿತು. ಆನಂದಭವನದಿಂದ ಗಂಡ ಮತ್ತು ಮಗನನ್ನು ಪೊಲೀಸರು ಬಂಧಿಸಿ ಒಯ್ಯುವಾಗ ಜವಾಹರರ ತಾಯಿ ಸ್ವರೂಪರಾಣಿ ಏನೆಂದರು ಗೊತ್ತೇ? ‘‘ನನ್ನ ಪ್ರಿಯಪತಿಯನ್ನೂ, ಒಬ್ಬನೇ ಮಗನನ್ನೂ ಸೆರೆಮನೆಗೆ ಕಳಿಸುವ ಈ ಮಹಾ ಗೌರವದಿಂದ ನನಗೆ ಸಂತೋಷ ವಾಗಿದೆ.’’

ಜವಾಹರರು ಸೆರೆಮನೆ ಕಂಡದ್ದು ಅದೇ ಮೊದಲು. ಆದರೂ ಅಲ್ಲಿಯ ಜೀವನಕ್ಕೆ ಬಲುಬೇಗ ಹೊಂದಿಕೊಂಡರು. ಮುಂಜಾನೆ ಬೇಗ ಎದ್ದು ಕೋಣೆ ಗುಡಿಸಿ ಸ್ವಚ್ಛ ಮಾಡುವುದು, ತಮ್ಮ ಮತ್ತು ತಮ್ಮ ತಂದೆಯ ಬಟ್ಟೆ ಒಗೆಯುವುದು, ರಾಟೆಯಿಂದ ನೂಲು ತೆಗೆಯುವುದು, ಉತ್ತಮ ಪುಸ್ತಕ ಓದುವುದು, ಇತರ ಕೈದಿಗಳೊಡನೆ ಸ್ನೇಹಬೆಳೆಸುವುದು, ಅಕ್ಷರ ಬಾರದವರಿಗೆ ಓದು-ಬರಹ ಕಲಿಸುವುದು-ಹೀಗೆ ಇಡೀ ದಿನ ಜವಾಹರರು ದುಡಿಯುತ್ತಿದ್ದರು. ಬಳಿಕ ಗಾಂಧೀಜಿ ೧೯೨೨ ರ ಫೆಬ್ರವರಿ ಯಲ್ಲಿ ಸತ್ಯಾಗ್ರಹ ನಿಲ್ಲಿಸಿದರು. ಮಾರ್ಚ್ ೩ ರಂದು ಜವಾಹರರ ಬಿಡುಗಡೆಯಾಯಿತು.

ಸೆರೆಮನೆಯಿಂದ ಹೊರಬಂದ ಜವಾಹರರು ತೆಪ್ಪಗೆ ಕೂಡಲಿಲ್ಲ. ವಿದೇಶೀ ಬಟ್ಟೆಗಳ ಬಹಿಷ್ಕಾರದ ಆಂದೋಲನದಲ್ಲಿ ಭಾಗವಹಿಸಿದರು. ಮೇ ೧೧ ರಂದು ಅವರನ್ನು ಪುನಃ ಬಂಧಿಸಲಾಯಿತು. ಈ ಬಾರಿ ೨೧ ತಿಂಗಳ ಶಿಕ್ಷೆ ವಿಧಿಸಿ ಅದೇ ಲಕ್ನೋ ಸೆರೆಮನೆ ಸೇರಿಸಿದರು. ಆದರೆ ಇಷ್ಟೂ ಸಮಯ ಅವರು ಸೆರೆಮನೆಯಲ್ಲಿ ಕಳೆಯಬೇಕಾಗಿ ಬರಲಿಲ್ಲ. ರಾಜಕೀಯ ಬದಲಾವಣೆಗಳ ಮೂಲಕ ೧೯೨೩ ರ ಜನವರಿ ೩೧ ರಂದೇ ಜವಾಹರರ ಬಿಡುಗಡೆಯಾಯಿತು.

ಆ ಬಳಿಕ ಜವಾಹರರು ಸಾರ್ವಜನಿಕ ಜೀವನದಲ್ಲಿ ಅನೇಕ ಹೊಣೆಗಾರಿಕೆಯ ಸ್ಥಾನಗಳನ್ನು ವಹಿಸಬೇಕಾಗಿ ಬಂತು. ೧೯೨೧ ರಲ್ಲಿ ಸೆರೆಮನೆ ಸೇರುವ ಮೊದಲೇ ಅವರು ಸಂಯುಕ್ತ ಪ್ರಾಂತದ ಕಾಂಗ್ರೆಸ್ ಕಾರ‍್ಯದರ್ಶಿಯಾಗಿದ್ದರು. ೧೯೨೩ ರ ಏಪ್ರಿಲ್ ೩ ರಂದು ಅವರು ಅಲಹಾಬಾದ್ ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿ ನಗರದ ಸುಧಾರಣೆಗಾಗಿ ಬಹಳಷ್ಟು ದುಡಿದರು. ಮರು ವರುಷವೇ ಅವರನ್ನು ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ‍್ಯದರ್ಶಿ ಪದಕ್ಕೆ ಆರಿಸಲಾಯಿತು. ಮಾರನೇ ವರ್ಷವೂ ಅವರನ್ನೇ ಪುನಃ ಪ್ರಧಾನ ಕಾರ‍್ಯದರ್ಶಿಗಳನ್ನಾಗಿ ಆರಿಸಲಾಯಿತು. ಈ ಎರಡೂ ವರುಷ ಕಾಂಗ್ರೆಸ್ ಸಂಸ್ಥೆಯ ಸಂಘಟನೆಗಾಗಿ ಜವಾಹರರು ಬಹಳಷ್ಟು ಶ್ರಮಿಸಿದರು. ವಿಶೇಷವಾಗಿ ಯುವಕರನ್ನು ಕಾಂಗ್ರೆಸ್ಸಿನ ಕಾರ‍್ಯಕ್ರಮಗಳಲ್ಲಿ ತೊಡಗಿಸಿದರು.

ಯೂರೋಪಿನಲಿ

ದುರ್ದೈವದಿಂದ ೧೯೨೬ ರ ಮಾರ್ಚ್ ತಿಂಗಳಲ್ಲಿ ಜವಾಹರರ ಹೆಂಡತಿ ಕಮಲಾ ನೆಹರೂರ ಆರೋಗ್ಯ ಹದಗೆಟ್ಟಿತು. ಡಾಕ್ಟರರ ಸಲಹೆಯ ಮೇರೆಗೆ ಜವಾಹರರು ಅವರನ್ನು ಔಷಧೋಪಚಾರಕ್ಕಾಗಿ ಜಿನೀವಾಕ್ಕೆ ಕರೆದೊಯ್ಯಬೇಕಾಯಿತು. ಜಿನೀವಾದಲ್ಲಿ ಇದ್ದ ಕಾಲದಲ್ಲಿ ಜವಾಹರರು ಜಗತ್ತಿನ ಇತರ ದೇಶಗಳಲ್ಲಿ ನಡೆಯುತ್ತಿದ್ದ ರಾಜಕೀಯ ಬದಲಾವಣೆಗಳನ್ನು ಸೂಕ್ಷ ವಾಗಿ ಅಭ್ಯಸಿಸಿದರು. ಇಂಗ್ಲೆಂಡ್ ಮೊದಲಾದ ದೇಶಗಳ ಸಾಮ್ರಾಜ್ಯವಾದದ ವಿರುದ್ಧ ಜಗತ್ತಿನೊಳಗಿನ ವಿವಿಧ ಜನಾಂಗಗಳು ಹೋರಾಟಕ್ಕೆ ಸಿದ್ಧವಾಗುತ್ತಿರುವುದನ್ನು ಅವರು ಗಮನಿಸಿದರು. ೧೯೨೭ ರ ಫೆಬ್ರವರಿಯಲ್ಲಿ ಬ್ರಸೆಲ್ಸ್ ನಗರದಲ್ಲಿ ನಡೆಯಲಿದ್ದ ‘ಪದದಲಿತ ಜನಾಂಗಗಳ ಸಮ್ಮೇಳನ’ ದಲ್ಲಿ ಭಾಗವಹಿಸಲು ನಿಶ್ಚಯಿಸಿದರು. ಅವರ ನಿಶ್ಚಯವನ್ನು ಸಮರ್ಥಿಸಿ ಕಾಂಗ್ರೆಸ್ ಸಹ ಅವರನ್ನು ತನ್ನ ಪ್ರತಿನಿಧಿಯೆಂದು ಭಾಗವಹಿಸಲು ಬಿನ್ನವಿಸಿತು. ಆ ಸಮ್ಮೇಳನದಲ್ಲಿ ಸ್ಥಾಪಿತವಾದ ‘ಸಾಮ್ರಾಜ್ಯಶಾಹಿ ವಿರೋಧಿ ಲೀಗ್’  ಸಂಸ್ಥೆಯ ಒಂಬತ್ತು ಜನರ ಕಾರ್ಯನಿರ್ವಾಹಕ ಸಮಿತಿಗೆ ಜವಾಹರರು ಆಯ್ಕೆಯಾದರು. ಇದರ ಮೂಲಕ ಜವಾಹರರಿಗೆ ಬೇರೆ ಬೇರೆ ದೇಶಗಳಲ್ಲಿಯ ಸ್ವಾತಂತ್ರ  ಪ್ರೇಮಿಗಳ ಗೆಳೆತನವುಂಟಾಯಿತು. ಈ ಸಮ್ಮೇಳನದ ವಿವರವಾದ ವರದಿಯನ್ನು ಜವಾಹರರು ಕಾಂಗ್ರೆಸ್ ಕಾರ್ಯಕಾರೀ ಸಮಿತಿಗೆ ಕಳಿಸಿದರು. ಸಾಮ್ರಾಜ್ಯಶಾಹೀ ವಿರೋಧಿ ಲೀಗಿನ ಮೂಲಕ ಏಷ್ಯ-ಆಫ್ರಿಕಾ ಖಂಡಗಳೊಳಗಿನ ದೇಶಗಳೊಡನೆ ಗೆಳೆತನದ ಸಂಬಂಧವಿಟ್ಟುಕೊಳ್ಳಲು ಸಲಹೆ ಮಾಡಿದರು. ಜವಾಹರರು ಹೆಂಡತಿಯ ಆರೋಗ್ಯ ಸುಧಾರಿಸಿದ ಬಳಿಕ ಇಟಲಿ, ಬ್ರಿಟನ್, ಫ್ರಾನ್ಸ್, ಜರ್ಮನಿ, ರಷ್ಯ ಮುಂತಾದ ದೇಶಗಳಲ್ಲಿ ಸಂಚರಿಸಿದರು. ಅಲ್ಲಿಯ ದೇಶಭಕ್ತರನ್ನು ಭೆಟ್ಟಿಯಾಗಿ ೧೯೨೭ರ ಡಿಸೆಂಬರ್‌ನಲ್ಲಿ ಮದ್ರಾಸಿನಲ್ಲಿ ಸೇರಿದ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಲು ಭಾರತಕ್ಕೆ ಮರಳಿ ಬಂದರು. ಆ ಅಧಿವೇಶನದಲ್ಲಿ ಜವಾಹರರನ್ನು ಪುನಃ ಪ್ರಧಾನ ಕಾರ್ಯದರ್ಶಿ ಪದಕ್ಕೆ ಆರಿಸಲಾಯಿತು.

ಮತ್ತೆ ಭಾರತ-ಹೋರಾಟ

೧೯೨೮ ನೆಯ ಇಸವಿಯಲ್ಲಿ ಭಾರತದಲ್ಲೆಲ್ಲ ರೈತರ ಸುಧಾರಣೆಗಾಗಿ, ಯುವಕರಲ್ಲಿ ದೇಶಭಕ್ತಿ ಬಡಿದೆಬ್ಬಿಸಲು, ಕೂಲಿಕಾರರ ಶೋಷಣೆ ತಪ್ಪಿಸಲು-ಹೀಗೆ ಅನೇಕ ಆಂದೋಲನಗಳು ನಡೆದವು. ಆಗ ಮಹಾತ್ಮಾಗಾಂಧಿಯವರೇ ಕಾಂಗ್ರೆಸ್ಸನ ನಿಜವಾದ ನೇತಾರರಾಗಿದ್ದರು. ಜವಾಹರರು ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಗಳಾಗಿದ್ದಂತೆ ಗಾಂಧಿಯವರ ಪರಮಶಿಷ್ಯರೂ ಆಗಿದ್ದರು. ಹೀಗಾಗಿ ಅವರ ಪೂರ್ಣಸಮಯ ಈ ಕಾರ್ಯಕ್ರಮಗಳಿಗಾಗಿ ಮೀಸಲಾಗಿತ್ತು. ಇದೇ ವರುಷ ಮೇ ತಿಂಗಳಲ್ಲಿ ಭಾರತೀಯ ಸಂವಿಧಾನದ ತತ್ತ್ವಗಳನ್ನು ನಿರ್ಧರಿಸಲು ಕಾಂಗ್ರೆಸ್ ಒಂದು ಸಮಿತಿ ನೇಮಿಸಿತು. ಇದಕ್ಕೆ ಮೋತೀಲಾಲರು ಅಧ್ಯಕ್ಷರು ಮತ್ತು ಜವಾಹರರು ಕಾರ‍್ಯದರ್ಶಿಗಳಾಗಿದ್ದರಿಂದ ‘ನೆಹರೂ ಸಮಿತಿ’ ಎಂದು ಕರೆಯಲಾಯಿತು. ತಂದೆ ಮಗ ಇಬ್ಬರೂ ಬಹಳ ಪರಿಶ್ರಮಪಟ್ಟು ಎರಡೇ ತಿಂಗಳಲ್ಲಿ ತಮ್ಮ ವರದಿ ಸಲ್ಲಿಸಿದರು.

ಅದೇ ವರುಷ ಬ್ರಿಟಿಷ್ ಸರ್ಕಾರವು ಸೈಮನ್ ಕಮೀಷನ್ ಎಂಬ ಆಯೋಗವನ್ನು ಭಾರತಕ್ಕೆ ಕಳಿಸಿತು. ಭಾರತೀಯರು ಸ್ವಾತಂತ್ರ ಕ್ಕೆ ಯೋಗ್ಯರೆ ಎಂದು ಪರಿಶೀಲಿಸಲು ಈ ಆಯೋಗ! ಅದರಲ್ಲಿ ಭಾರತೀಯರು ಯಾರೂ ಇರಲಿಲ್ಲ! ಇದನ್ನು ಪ್ರತಿಭಟಿಸಲು ಕಾಂಗ್ರೆಸ್ ಕರೆ ಕೊಟ್ಟಿತು. ದೇಶದ ತುಂಬ ಶಾಂತ ರೀತಿಯಲ್ಲಿ ಮೆರವಣಿಗೆ ನಡೆದವು. ಆದರೆ ಬ್ರಿಟಿಷರು ಎಲ್ಲೆಡೆ ಅತ್ಯಾಚಾರ ನಡೆಸಿದರು. ಲಾಹೋರಿನಲ್ಲಿ ಲಾಲಾ ಲಜಪತರಾಯರು ಸಾಯುವಂತೆ ಹೊಡೆಯ ಲಾಯಿತು. ಇದರಿಂದ ಆಂದೋಲನ ಇನ್ನಷ್ಟು ಉಗ್ರವಾಯಿತು. ಲಕ್ನೊ ನಗರದಲ್ಲಿ ನಡೆದ ಮೆರವಣಿಗೆಗೆ ಜವಾಹರರೇ ಮುಂದಾಳು. ಬ್ರಿಟಿಷ್ ಪೊಲೀಸರು ಕುದುರೆಯನ್ನೇರಿ ಬಂದು ಜವಾಹರರ ಮೇಲೆ ಲಾಠಿಪ್ರಹಾರ ಮಾಡಿದರು. ಈ ಅಮಾನುಷ ಲಾಠೀ ಹಲ್ಲೆಗೆ ಜವಾಹರರು ಅಂಜಲಿಲ್ಲ. ಆದರೆ ಅವರ ಪ್ರಾಣಕ್ಕೆ ಸಂಚಕಾರ ಬರುವುದೆಂಬ ಭೀತಿಯಿಂದ ಕಾಂಗ್ರೆಸ್ ಸ್ವಯಂಸೇವಕರು ಅವರನ್ನು ಎತ್ತಿಕೊಂಡು ಹೋದರು.

೧೯೨೮ ರ ಡಿಸೆಂಬರಿನಲ್ಲಿ ನಡೆದ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನಕ್ಕೆ ಮೋತೀಲಾಲರು ಅಧ್ಯಕ್ಷರೆಂದೂ ಜವಾಹರರು ಪ್ರಧಾನ ಕಾರ್ಯದರ್ಶಿಗಳೆಂದೂ ಆಯ್ಕೆಯಾದರು. ಹೀಗೆ ಜವಾಹರರ ಜನಪ್ರಿಯತೆ ಬೆಳೆಯುತ್ತಾ ಹೋಯಿತು. ಯುವಕರಿಗಂತೂ ಜವಾಹರಲಾಲರೆಂದರೆ ಹೃದಯ ಉಕ್ಕಿ ಹರಿಯುವ ಹೆಮ್ಮೆ, ಪ್ರೀತಿ. ಅವರು ಹೋದಲ್ಲೆಲ್ಲ ಅವರನ್ನು ಕಾಣಲು, ಅವರ ಭಾಷಣ ಕೇಳಲು ಜನರು ತಂಡೋಪತಂಡವಾಗಿ ಬಂದು ಸೇರುತ್ತಿದ್ದರು. ಇದನ್ನೆಲ್ಲ ನೋಡಿದ ಕಾಂಗ್ರೆಸ್ ನಾಯಕರು ಜವಾಹರರೇ ಅಧ್ಯಕ್ಷ ಪೀಠವನ್ನು ಅಲಂಕರಿಸಲು ಯೋಗ್ಯ ರೆಂದು ನಿರ್ಣಯಿಸಿದರು. ೧೯೨೯ ರ ಡಿಸೆಂಬರಿನಲ್ಲಿ ಲಾಹೋರಿನಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನಕ್ಕೆ ಜವಾಹರರು ಅಧ್ಯಕ್ಷರಾಗಿ ಆರಿಸಲ್ಪಟ್ಟರು.

ಪೂರ್ಣ ಸ್ವಾತಂತ್ರ ವೇ ಗುರಿ

ಲಾಹೋರಿನ ಅಧಿವೇಶನದಲ್ಲಿ ಅಧ್ಯಕ್ಷಪೀಠದಿಂದ ನಿವೃತ್ತರಾಗುತ್ತಿದ್ದ ಮೋತೀಲಾಲರು ಮಗ ಜವಾಹರಲಾಲರಿಗೆ ಅಧಿಕಾರ ವಹಿಸಿಕೊಟ್ಟರು. ಮುಂದೆ ಮೋತೀಲಾಲರು ತಮ್ಮ ‘ಆನಂದಭವನ’ವನ್ನು ದೇಶಕ್ಕೆ ದಾನ ಕೊಡಲು ನಿಶ್ಚಯಿಸಿದರು. ಕಾಂಗ್ರೆಸ್ ಅಧ್ಯಕ್ಷರಾದ ಜವಾಹರರು ಆ ದಾನವನ್ನು ಸ್ವೀಕರಿಸಿದರು. ಹೀಗೆ ‘ಆನಂದ ಭವನ’  ‘ಸ್ವರಾಜ್ಯಭವನ’ ವಾಯಿತು. ಈ ದಾನದ ಹಿಂದಿನ ಪ್ರೇರಣೆ ಜವಾಹರರೇ ಆಗಿದ್ದರು. ಈ ರೀತಿ ಜವಾಹರರು ದೇಶದ ಸ್ವಾತಂತ್ರ  ಹೋರಾಟದೊಡನೆ ಒಂದಾಗಿಬಿಟ್ಟಿದ್ದರು.

ಭಾರತದ ಸ್ವಾತಂತ್ರ  ಹೋರಾಟದ ಇತಿಹಾಸದಲ್ಲಿ ಲಾಹೋರ್ ಕಾಂಗ್ರೆಸ್ ಅಧಿವೇಶನ ಒಂದು ಮಹತ್ವದ ಹೆಜ್ಜೆಯಾಗಿದೆ. ೧೯೨೯ ರ ಡಿಸೆಂಬರ್ ೩೧ರ ಮಧ್ಯರಾತ್ರಿ ರಾವಿನದಿಯ ದಂಡೆಯ ಮೇಲೆ ಕಾಂಗ್ರೆಸ್ ಧ್ವಜವನ್ನು ಹಾರಿಸಿ ಜವಾಹರರು ಅಧ್ಯಕ್ಷ ಸ್ಥಾನದಿಂದ ‘‘ಪೂರ್ಣ ಸ್ವಾತಂತ್ರ ವೇ ನಮ್ಮ ಗುರಿ’’  ಎಂದು ಸಾರಿದಾಗ ಭಾರತದ ಜನತೆಯಲ್ಲಿ ಹೊಸ ಚೈತನ್ಯ ಹರಿದಾಡಿತು. ಈ ಗುರಿಯನ್ನು ಸಾಧಿಸಲು ಎಲ್ಲ ತರಹದ ತ್ಯಾಗ ಮಾಡಲು ಜನತೆ ನಿರ್ಧರಿಸಿತು. ದೇಶಾದ್ಯಂತ ೧೯೩೦ ರ ಜನವರಿ ೨೬ನ್ನು ‘ಸ್ವಾತಂತ್ರ  ದಿನ’ ವನ್ನಾಗಿ ಆಚರಿಸಿ ಸ್ವಾತಂತ್ರ ದ ಬಗೆಗೆ ಪ್ರತಿಜ್ಞೆ  ಕೈಗೊಳ್ಳ ಲಾಯಿತು. ಈಗ ನಾವು ಪ್ರತಿವರುಷವೂ ಜನವರಿ ೨೬ನ್ನು ‘ಪ್ರಜಾಪ್ರಭುತ್ವದಿನ’ ವೆಂದು ಆಚರಿಸುತ್ತೇವಲ್ಲವೆ? ಅದಕ್ಕೆ ಮೂಲ ಕಾರಣವೆಂದರೆ ಇದೇ ದಿನವನ್ನು ಮೊಟ್ಟಮೊದಲ ಬಾರಿ ೧೯೩೦ ರಲ್ಲಿ ‘ಸ್ವಾತಂತ್ರ ದಿನ’ ವನ್ನಾಗಿ ಆಚರಿಸಲಾಗಿತ್ತು.

ಮತ್ತೆ ಸೆರೆಮನೆ

ಬಳಿಕ ಮಹಾತ್ಮಾಗಾಂಧಿಯವರು ‘ಉಪ್ಪಿನ ಸತ್ಯಾಗ್ರಹ’ ಪ್ರಾರಂಭಿಸಿದರು. ಅದು ದೇಶದಲ್ಲೆಲ್ಲ ಹಬ್ಬಿತು. ಈ ಸತ್ಯಾಗ್ರಹ ಹತ್ತಿಕ್ಕಲು ಬ್ರಿಟಿಷ್ ಸರಕಾರ ಏಪ್ರಿಲ್ ೧೪ ರಂದು ಜವಾಹರರನ್ನು ಬಂಧಿಸಿ ಆರು ತಿಂಗಳ ಶಿಕ್ಷೆ ವಿಧಿಸಿತು. ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜವಾಹರರು ತಾವು ಸೆರೆಮನೆಯಲ್ಲಿದ್ದಾಗ ಅಧ್ಯಕ್ಷಸ್ಥಾನದ ಹೊಣೆ ನಿರ್ವಹಿಸಲು  ಮೋತೀಲಾಲರನ್ನು ನೇಮಿಸಿದರು. ಜವಾಹರರು ಸೆರೆಮನೆಯಲ್ಲಿ ಯಾವುದೇ ಹಬ್ಬ ಆಚರಿಸಲಿಲ್ಲ. ಸಿಹಿತಿಂಡಿ, ಹಣ್ಣು-ಹಂಪಲುಗಳನ್ನು ಕಳಿಸಬಾರದೆಂದು ತಂದೆಗೆ ಬರೆದು ತಿಳಿಸಿದರು. ಏಕೆ ಗೊತ್ತೇ? ಹೊರಗೆ ಲಾಠೀ ಏಟು, ದಬ್ಬಾಳಿಕೆ, ಅಪಮಾನ, ಬಂಧನ, ಗುಂಡಿನ ಸುರಿಮಳೆ, ಸೈನಿಕಶಾಸನ ಇವುಗಳಿಂದ ಜನರು ಕಷ್ಟ ಪಡುತ್ತಿರುವಾಗ ನಾನು ಸಿಹಿ ತಿನ್ನಲಾರೆ, ಹಬ್ಬ ಮಾಡಲಾರೆ ಎಂದು ಬರೆದರು.

ಆಗ ಮೋತೀಲಾಲರಿಗೆ ೬೯ ವರ್ಷ ವಯಸ್ಸು. ಆರೋಗ್ಯವೂ ಸರಿಯಿರಲಿಲ್ಲ. ಆದರೂ ದಿನವಿಡೀ ಓಡಾಟ ಮಾಡಿ ಜನರನ್ನು ಸತ್ಯಾಗ್ರಹಕ್ಕೆ ಹುರಿದುಂಬಿಸುತ್ತಿದ್ದರು. ಇದನ್ನು ನೋಡಿದ ಬ್ರಿಟಿಷ್ ಸರಕಾರ ಜೂನ್ ೩೦ ರಂದು ಅವರನ್ನೂ ಬಂಧಿಸಿ ಮಗನಿದ್ದ ನೈನಿತಾಲ್ ಸೆರೆಮನೆ ಸೇರಿಸಿತು. ಇದರಿಂದ ಜವಾಹರರಿಗೆ ಮತ್ತೊಮ್ಮೆ ತಂದೆಯ ಸೇವೆ ಮಾಡುವ ಅವಕಾಶ ದೊರೆಯಿತು. ಅನಾರೋಗ್ಯದಿಂದಾಗಿ ಸೆಪ್ಟೆಂಬರ್ ೮ ರಂದೇ ಮೋತೀಲಾಲರ ಬಿಡುಗಡೆಯಾಯಿತು. ಅಕ್ಟೋಬರ್ ೧೧ ರಂದು ಜವಾಹರರೂ ಬಿಡುಗಡೆಯಾದರು. ಸೆರೆಮನೆಯಿಂದ ಹೊರಬಂದ ಕೂಡಲೆ ಹೆಚ್ಚಿನ ಉತ್ಸಾಹದಿಂದ ಅವರು ಹೋರಾಟದಲ್ಲಿ ಧುಮುಕಿದರು. ಆಗ ದೇಶದಲ್ಲಿ ಕರನಿರಾಕರಣೆಯ ಆಂದೋಲನ ನಡೆದಿತ್ತು. ಅದರ ಅಂಗವಾಗಿ ಅಕ್ಟೋಬರ್ ೧೯ರಂದು ಅಲಹಾಬಾದಿನಲ್ಲಿ ಜರುಗಿದ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ್ದಕ್ಕಾಗಿ ಪುನಃ ಬಂಧಿತರಾದರು. ಈ ಬಾರಿ ಬ್ರಿಟಿಷ್ ಸರಕಾರ ಅವರಿಗೆ ನೀಡಿದ ಶಿಕ್ಷೆ ಎರಡು ವರ್ಷಗಳು. ಈ ಶಿಕ್ಷೆಯ ವಿರುದ್ಧ ಪ್ರತಿಭಟಿಸಲು ನವೆಂಬರ್ ೧೪ನ್ನು ‘ಜವಾಹರದಿನ’ ವೆಂದು ಆಚರಿಸಲು ಕಾಂಗ್ರೆಸ್ ದೇಶಬಾಂಧವರಿಗೆ ಕರೆಯಿತ್ತಿತು. ಮತ್ತು ಆ ವರುಷ ಅಂದರೆ ೧೯೩೦ ರಲ್ಲಿ ಜವಾಹರರ ಜನ್ಮದಿನ ಭಾರತದಾದ್ಯಂತ ಅಭಿಮಾನದಿಂದ ಆಚರಿಸಲ್ಪಟ್ಟಿತು.ಯಾವ ಭಾಷಣಕ್ಕಾಗಿ ಜವಾಹರರಿಗೆ ಅಂಥ ಕಠಿಣ ಶಿಕ್ಷೆಯಾಗಿತ್ತೋ ಅದನ್ನು ಲಕ್ಷಾಂತರ ಸ್ತ್ರೀ-ಪುರುಷರು ಸಾರ್ವಜನಿಕ ಸಭೆಗಳಲ್ಲಿ ಓದಿ ವಿವರಿಸಿದರು.

ಕಮಲಾ ನೆಹರು

೧೯೩೧ ರ ಜನವರಿ ೧ ರಂದು ಸೆರೆಮನೆಯಲ್ಲಿದ್ದ ಜವಾಹರರಿಗೆ ಸುದ್ದಿಯೊಂದು ತಲಪಿತು. ಅದೆಂದರೆ, ಆ ದಿನ ಅವರ ಪ್ರಿಯಪತ್ನಿ ಕಮಲಾ ನೆಹರೂರನ್ನು ಬಂಧಿಸಿ ಲಕ್ನೋ ಸೆರೆಮನೆಗೆ ಒಯ್ಯಲಾಗಿತ್ತು. ಅರಮನೆಯ ಸಿರಿ-ವೈಭವಗಳಿಂದ ತುಂಬಿತುಳುಕುತ್ತಿದ್ದ ಮನೆಯ ಸೊಸೆಯಾಗಿ ಬಂದ ಕಮಲಾ ಅವರೂ ದೇಶಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ಅನಾರೋಗ್ಯದಿಂದ ದೇಹ ಬಳಲುತ್ತಿದ್ದರೂ ‘ಪತಿಗೆ ತಕ್ಕ ಸತಿ’ಯಾಗಿ ಕಷ್ಟದಲ್ಲಿಯೇ ಸುಖ ಕಾಣುತ್ತಿದ್ದರು. ಇದರಿಂದ ಅವರ ಆರೋಗ್ಯ ಮತ್ತಷ್ಟು ಕೆಟ್ಟಿತು. ೧೯೩೪ರಲ್ಲಿ ಜವಾಹರರು ಸೆರೆಮನೆಯಲ್ಲಿದ್ದಾಗ ಕಮಲಾ ಅವರ ಕಾಯಿಲೆ ಹೆಚ್ಚಾಯಿತು. ರಾಜಕೀಯದಲ್ಲಿ ಭಾಗವಹಿಸುವುದಿಲ್ಲವೆಂದು ಬರೆದುಕೊಟ್ಟರೆ ಜವಾಹರರನ್ನು ಬಿಡುಗಡೆ ಮಾಡುತ್ತೇವೆಂದು ಬ್ರಿಟಿಷ್ ಸರಕಾರ ಸುದ್ದಿ ಹಬ್ಬಿಸಿತು. ಜವಾಹರರು ಅದಕ್ಕೆ ಸಿದ್ಧರಾಗಬಹುದೆಂಬ ಗಾಳಿ ವಾರ್ತೆಯೂ ಹಬ್ಬಿತು. ಈ ಸುದ್ದಿ ಆಸ್ಪತ್ರೆಯಲ್ಲಿ ಮಲಗಿದ್ದ ಕಮಲಾ ನೆಹರೂರ ಕಿವಿ ತಲಪಿತು. ಆಕೆ ತಮ್ಮನ್ನು ನೋಡಲು ಬಂದ ಪತಿಗೆ ಏನು ಹೇಳಿದರು ಗೊತ್ತೇ?

‘‘ನೀವು ರಾಜಕೀಯದಲ್ಲಿ ಭಾಗವಹಿಸುವುದಿಲ್ಲ ಎಂದು ನನಗಾಗಿ ಬರೆದುಕೊಡುತ್ತೀರೆಂದು ಕೇಳಿದೆ. ದಯವಿಟ್ಟು ಎಂದಿಗೂ ಹಾಗೆ ಮಾಡಬೇಡಿ.’’

ಕಮಲಾರವರ ಆರೋಗ್ಯ ತೀರ ಕೆಟ್ಟಿತು. ಜವಾಹರ ಲಾಲರ ಬಿಡುಗಡೆಯಾಯಿತು. ಕಮಲಾರವರ ಚಿಕಿತ್ಸೆಗೆಂದು ಗಂಡ ಹೆಂಡತಿ ಸ್ವಟ್ಜರ್ಲೆಂಡಿಗೆ ಹೋದರು. ೧೯೩೬ ರ ಫೆಬ್ರವರಿ ೨೮ ರಂದು ಕಮಲಾ ತೀರಿಕೊಂಡರು. ದುಃಖ ತುಂಬಿದ ಹೃದಯದಿಂದ ಜವಾಹರರು ಹಿಂದಿರುಗಿದರು.

ಸ್ವಾತಂತ್ರ ದೆಡೆಗೆ

ದೇಶಬಾಂಧವರ ಮೇಲೆ ಯಾವುದೇ ಸಂಕಟ ಬಂದರೂ ಅವರನ್ನು ಪಾರುಮಾಡುವ ಕೆಲಸದಲ್ಲಿ ಜವಾಹರರು ಯಾವಾಗಲೂ ಮುಂದಿರುತ್ತಿದ್ದರು. ೧೯೩೪ರಲ್ಲಿ ಬಿಹಾರ ಪ್ರಾಂತದಲ್ಲಿ ಭೀಕರವಾದ ಭೂಕಂಪವಾಯಿತು. ಲಕ್ಷಾಂತರ ಜನರು ಮನೆ-ಮಾರು ಕಳೆದುಕೊಂಡರು. ಸಾವಿರಾರು ಮಂದಿ ನೆಲದಲ್ಲಿ ಹೂತುಹೋದರು. ನಿರ್ಗತಿಕರಾದವರ ಸಹಾಯಕ್ಕೆ ಜವಾಹರರು ಧಾವಿಸಿದರು. ಎಲ್ಲ ಕಡೆಗೆ ಸಂಚರಿಸಿ ಪರಿಹಾರ ಕಾರ್ಯ ಸಂಘಟಿಸಿದರು. ಸ್ವಯಂಸೇವಕರೊಡನೆ ತಾವೂ ಸ್ವತಃ ಗುದ್ದಲಿ-ಪಿಕಾಸಿ ಹಿಡಿದು ನೆಲದಲ್ಲಿ ಹುಗಿದುಬಿದ್ದವರನ್ನು ಹೊರಕ್ಕೆ ತೆಗೆಯುವ ಕೆಲಸ ಮಾಡಿದರು. ಬೆಳಿಗ್ಗೆ ೫ ಗಂಟೆಯಿಂದ ಮಧ್ಯರಾತ್ರಿಯವರೆಗೆ ಸತತವಾಗಿ ದುಡಿದರು. ಇದರಿಂದ ಅವರ ಆರೋಗ್ಯ ಕೆಟ್ಟಿತು. ಜೊತೆಯವರ ಒತ್ತಾಯಕ್ಕೆ ಮಣಿದು ಅಲಹಾಬಾದಿಗೆ ತಿರುಗಿ ಬರಬೇಕಾ ಯಿತು.

ಜವಾಹರರ ಜೀವನ ನಾಡಿನ ಸ್ವಾತಂತ್ರ ದ ಹೋರಾಟದ ಒಂದು ಭಾಗವಾಗಿ ಹೋಯಿತು. ದೇಶದ ಸ್ವಾತಂತ್ರ ಕ್ಕಾಗಿ ಹೋರಾಟ ನಡೆದಾಗ ಅವರು ನಾಲ್ಕು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ಅವರ ಇಡೀ ಜೀವನ ದೇಶಕ್ಕಾಗಿ ಸಮರ್ಪಿತವಾಗಿತ್ತು. ಅವರು ಸರ್ವಶಕ್ತಿಯಿಂದ ಸದಾಕಾಲವೂ ದೇಶಕ್ಕಾಗಿ ದುಡಿಯುತ್ತ ಮುಂದೆ ಮುಂದೆ ಸಾಗಿದರು. ಸೆರೆಮನೆಯಲ್ಲೇ ಇರಲಿ, ಹೊರಗೇ ಇರಲಿ, ಜವಾಹರರು ಯಾವಾಗಲೂ ದೇಶದ ಸ್ವಾತಂತ್ರ , ದೇಶದ ಉನ್ನತಿ, ದೇಶದ ಪ್ರಗತಿ ಇವುಗಳ ಚಿಂತೆಯನ್ನೇ ಮಾಡುತ್ತಿದ್ದರು. ಏಳು ಸಲ ಅವರು ದೇಶಕ್ಕಾಗಿ ಸೆರೆಮನೆಗೆ ಹೋಗಿ ಬಂದರು. ಎಂಟನೆಯ ಬಾರಿ ಅವರನ್ನು ಬಂಧಿಸಿ ವಿಚಾರಣೆ ಮಾಡಿದಾಗ ಅವರು ನ್ಯಾಯಾಧೀಶರಿಗೆ ಹೇಳಿದರು: ‘‘ಏಳು ಸಲ ನನಗೆ ಸೆರೆಮನೆ ವಾಸವಾಗಿದೆ. ನನ್ನ ಬಾಳಿನ ಎಷ್ಟೋ ವರ್ಷಗಳು ಸೆರೆಮನೆಯಲ್ಲಿ ಹೂತು ಹೋಗಿವೆ. ಎಂಟನೆಯ ಬಾರಿ, ಒಂಬತ್ತನೆಯ ಬಾರಿ…. ಏನು ಲೆಕ್ಕ? ನನಗೊಬ್ಬನಿಗೆ ಏನಾಗುತ್ತದೆ ಎನ್ನುವುದು ಮುಖ್ಯವಲ್ಲ. ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ-ನನ್ನ ಆಯಸ್ಸು ಮುಗಿದಾಗ ನಾನು ಹೋಗುತ್ತೇನೆ. ಭಾರತದ ಕೋಟ್ಯಂತರ ಜನರಿಗೆ ಏನಾಗುತ್ತದೆ ಎನ್ನುವುದು ಮುಖ್ಯ.’’ ಜವಾಹರರು ಸೆರೆಮನೆಯಲ್ಲಿ ಒಟ್ಟು ಎಷ್ಟು ದಿನ ಕಳೆದರು ಗೊತ್ತೇ? ಹತ್ತು ವರುಷ ಏಳು ತಿಂಗಳು.

ಭಾರತದ ಮೂಲೆ-ಮೂಲೆಗಳಲ್ಲಿ ಸಂಚರಿಸಿ ದೇಶಕ್ಕಾಗಿ ಎಲ್ಲ ವಿಧದ ತ್ಯಾಗ ಮಾಡಿದರೆ ಮಾತ್ರ ಸ್ವಾತಂತ್ರ  ದೊರೆಯುವುದೆಂದು ಜವಾಹರರು ದೇಶಬಾಂಧವರಿಗೆ ನೆನಪು ಮಾಡಿಕೊಟ್ಟರು. ಅವರ ಮಾತನ್ನು ಜನರು ಕೂಡ ಆಜ್ಞೆಯೆಂದು ಸ್ವೀಕರಿಸಿದರು. ದೇಶದ ಸ್ವಾತಂತ್ರ ಕ್ಕಾಗಿ ಲಕ್ಷಾಂತರ ಜನ ಕಷ್ಟ-ನಷ್ಟ ಅನುಭವಿಸಿದರು; ಸೆರೆಮನೆ ಸೇರಿದರು. ಸಾವಿರಾರು ಮಂದಿ ಆಸ್ತಿ-ಪಾಸ್ತಿ ಕಳೆದುಕೊಂಡರು. ನೂರಾರು ಮಂದಿ ಗಲ್ಲಿನ ಶಿಕ್ಷೆಗೆ ಗುರಿಯಾಗಿ ಪ್ರಾಣ ಬಲಿಕೊಟ್ಟರು. ಇವರೆಲ್ಲರ ತ್ಯಾಗದ ಫಲವಾಗಿ ೧೯೪೭ರ ಆಗಸ್ಟ್ ೧೫ ರಂದು ನಮ್ಮ ದೇಶಕ್ಕೆ ಸ್ವಾತಂತ್ರ  ಲಭಿಸಿತು. ದೇಶ ಎರಡಾಗಿ ಪಾಕಿಸ್ತಾನದ ಉದಯವಾಯಿತು. ಈ ವಿಭಜನೆಗೆ ಜವಾಹರರೂ ಕಾಂಗ್ರೆಸಿನ ಇತರ ನಾಯಕರೂ ತುಂಬ ವಿಷಾದದಿಂದ ಒಪ್ಪಿಗೆ ಕೊಟ್ಟರು.

ಭಾರತದ ಪ್ರಧಾನಿ

ಸ್ವತಂತ್ರ ಭಾರತಕ್ಕೆ  ಜವಾಹರಲಾಲ್ ನೆಹರೂ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಆದರೆ ಸ್ವಾತಂತ್ರ  ಬಂದರೂ ಜವಾಹರರಿಗೆ ಮಾತ್ರ ವಿಶ್ರಾಂತಿ ಸಿಕ್ಕಲಿಲ್ಲ. ಸ್ವತಂತ್ರಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿ ದೇಶದ ಪ್ರಗತಿ ಸಾಧಿಸುವ ಪೂರ್ಣ ಹೊಣೆ ಹೊರಬೇಕಾಯಿತು. ಹದಿನೇಳು ವರ್ಷಕಾಲ ಅವರು ಸ್ವತಂತ್ರ ಭಾರತದ ಪ್ರಧಾನಿಯಾಗಿದ್ದರು. ಈ ಕಾಲದಲ್ಲಿ ಅವರು ನಮ್ಮ ದೇಶದ ಉನ್ನತಿಗಾಗಿಯಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಹೆಣಗಾಡಿದರು.

ಜವಾಹರರು ಸ್ವತಂತ್ರ ಭಾರತದ ಪ್ರಧಾನಿಗಳಾಗಿ ಹೊಣೆ ವಹಿಸಿಕೊಂಡಾಗ ಎದುರಿಸಬೇಕಾದ ಸಮಸ್ಯೆಗಳು ಧೈರ್ಯಗೆಡಿಸುವಂತಹವು. ಮೊದಲೇ ದಾರಿದ್ರ , ಅಜ್ಞಾನ, ಅನಾರೋಗ್ಯ ತುಂಬಿತುಳುಕುತ್ತಿದ್ದ ದೇಶ. ಇಂಗ್ಲಿಷರು ಇಲ್ಲಿನ ಸಂಪತ್ತನ್ನೆಲ್ಲ ತಮ್ಮ ನಾಡಿಗೆ ಸಾಗಿಸಿದ್ದರು. ಸ್ವಾತಂತ್ರ  ಬಂದ ದಿನಗಳಲ್ಲೆ ಪಾಕಿಸ್ತಾನದಲ್ಲಿ ಹಿಂಸೆಗೊಳಗಾದ ಲಕ್ಷಾಂತರ ಮಂದಿ ಹಿಂದೂ ನಿರಾಶ್ರಿತರು ಭಾರತಕ್ಕೆ ಬರಿಗೈಯಲ್ಲಿ ಬಂದರು. ಇವರೆಲ್ಲರಿಗೂ ವಸತಿ, ಆಹಾರ, ಉದ್ಯೋಗಗಳನ್ನು ಒದಗಿಸಬೇಕಾಯಿತು. ಸ್ವಾತಂತ್ರ  ಬಂದ ಆರು ತಿಂಗಳೊಳಗೆ ಗಾಂಧೀಜಿ ಕೊಲೆಗಾರನ ಗುಂಡಿಗೆ ಬಲಿಯಾದರು. ಪಾಕಿಸ್ತಾನ ಇದ್ದಕ್ಕಿದ್ದಂತೆ ತನ್ನ ಸೈನ್ಯವನ್ನು ಕಾಶ್ಮೀರದಲ್ಲಿ ನುಗ್ಗಿಸಿತು. ಭಾರತದಲ್ಲಿದ್ದ ಸುಮಾರು ಐದುನೂರು ಸಂಸ್ಥಾನಗಳಲ್ಲಿ ಹಲವರು ರಾಜರು ತಾವೇ ಸ್ವತಂತ್ರರೆಂದು ಮೊಂಡು ಹಿಡಿದರು. ಬಹು ದೊಡ್ಡ ಸಂಸ್ಥಾನವಾಗಿದ್ದ ಹೈದರಾಬಾದಿನ ನಿಜಾಮನು ಒಂದು ದೊಡ್ಡ ತಲೆನೋವೇ ಆದ.

ಜವಾಹರರ ಮಂತ್ರಿಮಂಡಲದಲ್ಲಿ ಸರ‍್ದಾರ್ ಪಟೇಲರು, ಶರತ್‌ಚಂದ್ರ ಬೋಸರು, ಮೌಲಾನ ಅಬುಲ್ ಕಲಾಮ್ ಅಜಾದರು, ಅಂಬೇಡ್ಕರರು ಇಂತಹ ಪ್ರತಿಭಾವಂತರಿದ್ದರು. ಜವಾಹರರೂ ಅವರ ಸಹ ಮಂತ್ರಿಗಳೂ ಸನ್ನಿವೇಶವನ್ನು ಧೈರ್ಯದಿಂದ, ವಿವೇಕದಿಂದ ಎದುರಿಸಿದರು.

ನೆಹರು ಅವರ ಆಡಳಿತದ ವಿಷಯ ಕೆಲವು ಆಕ್ಷೇಪಣೆಗಳಿರಬಹುದು. ಅವರು ಜನರನ್ನು ಬಹು ಬೇಗ ನಂಬುತ್ತಿದ್ದರು. ಅವರ ವಿಶ್ವಾಸವನ್ನು ಕೆಲವರು ತಪ್ಪಾಗಿ ಬಳಸಿಕೊಂಡರು. ಚೀನಾ ದೇಶದೊಡನೆ ಮೈತ್ರಿ ಬೆಳೆಸಲು ಬಹು ಪ್ರಯತ್ನಿಸಿದರು. ೧೯೬೨ ರಲ್ಲಿ ಚೀನಾ ಭಾರತವನ್ನು ಮುತ್ತಿದಾಗ ನಮ್ಮ ವೀರ ಸೈನಿಕರಿಗಾದ ಸೋಲು, ಸೈನ್ಯಕ್ಕೆ ಸಾಕಷ್ಟು ಸಿದ್ಧತೆ ಇರಲಿಲ್ಲ ಎಂದು ತೋರಿಸಿತು.

ಪ್ರಧಾನಮಂತ್ರಿಗಳಾಗಿ ನೆಹರೂ ಸಾಧಿಸಿದ್ದು ಕಡಿಮೆಯಲ್ಲ. ಕಡುಬಡತನದಲ್ಲಿ ನರಳುತ್ತಿದ್ದ ನಾಡನ್ನು ಮತ್ತೆ ನಿರ್ಮಿಸುವ ಕಾರ್ಯಕ್ಕೆ ಸ್ಪಷ್ಟವಾದ ಯೋಜನೆ ಇರಬೇಕು ಎಂದು ಗುರುತಿಸಿದರು, ಯೋಜನಾ ಆಯೋಗವನ್ನು ನೇಮಿಸಿದರು, ಅದರ ನಾಯಕತ್ವವನ್ನು ತಾವೇ ವಹಿಸಿಕೊಂಡರು. ಸಮಾಜವಾದದತ್ತ ಅವರ ಒಲವು. (ಸಮಾಜವಾದ ಎಂದರೆ, ದೇಶದ ಮುಖ್ಯ ಕೈಗಾರಿಕೆಗಳು, ಸಂಪತ್ತನ್ನು ಸೃಷ್ಟಿಸುವ ಮೂಲಗಳು ಸರ್ಕಾರದ ಮೂಲಕ ಸಮಾಜದ ಕೈಯಲ್ಲಿರಬೇಕು. ಸಂಪತ್ತನ್ನು ಹಂಚುವ ವ್ಯವಸ್ಥೆಯೂ ಸರ್ಕಾರದ ಮೂಲಕ ಸಮಾಜದ ಕೈಯಲ್ಲಿರಬೇಕು. ಖಾಸಗಿ ಬಂಡವಾಳಗಾರರು ಇತರರ ದುಡಿತದಿಂದ ಶ್ರೀಮಂತರಾಗಲು ಅವಕಾಶ ಇರಬಾರದು ಎಂಬ ಪಂಥ.) ನೆಹರೂ ಅವರಿಗೆ ಪ್ರಜಾಪ್ರಭುತ್ವದಲ್ಲಿ ಅಚಲ ವಿಶ್ವಾಸ. ಸ್ವತಂತ್ರ ಭಾರತದ ಆಡಳಿತ ಹೇಗೆ ನಡೆಯಬೇಕೆಂಬುದನ್ನು ನಿರ್ಧರಿಸುವ ಸಂವಿಧಾನವನ್ನು ಡಾಕ್ಟರ್ ಅಂಬೇಡ್ಕರರ ನೆರವಿನಿಂದ ಸಿದ್ಧಮಾಡಲಾಯಿತು. ಪಶ್ಚಿಮ ರಾಷ್ಟ್ರಗಳು ವಿಜ್ಞಾನದ ನೆರವಿನಿಂದ ಸಾಧಿಸಿದ ಪ್ರಗತಿಯನ್ನು ನೆಹರೂ ಮೆಚ್ಚಿಕೊಂಡಿದ್ದರು. ಭಾರತ ಆಧುನಿಕ ಜಗತ್ತಿನಲ್ಲಿ ಉಳಿಯಬೇಕಾದರೆ, ಶ್ರೀಮಂತವಾಗಬೇಕಾದರೆ ವೈಜ್ಞಾನಿಕ ಮನೋಧರ್ಮ ಬೆಳೆಯಬೇಕು, ವಿಜ್ಞಾನ ತಂತ್ರಜ್ಞಾನ ಬೆಳೆಯಬೇಕು, ಕೈಗಾರಿಕೆಗಳು ಹೆಚ್ಚಬೇಕು ಎಂದು ಅವರು ನಂಬಿದ್ದರು. ವಿಜ್ಞಾನ ಸಂಶೋಧನೆಗಾಗಿ, ಕೈಗಾರಿಕೆಗಳ ಸ್ಥಾಪನೆಗಾಗಿ ನೆಹರೂ ಅವರ ಕಾಲದಲ್ಲಿ ಉದಾರವಾಗಿ ಸರ್ಕಾರ ಹಣ ಕೊಟ್ಟಿತು. ಹೋಮಿ ಭಾಭಾ, ವಿಕ್ರಮ ಸಾರಾ ಭಾಯ್ ಮೊದಲಾದ ಪ್ರತಿಭಾವಂತ ವಿಜ್ಞಾನಿಗಳು ಆ ಕಾಲದಲ್ಲಿ ಭಾರತದಲ್ಲಿದ್ದುದು ದೇಶದ ಭಾಗ್ಯ.

ಜವಾಹರರು ಚಿಕ್ಕ ವಯಸ್ಸಿನಿಂದ ಅಂತರರಾಷ್ಟ್ರೀಯ ದೃಷ್ಟಿಯನ್ನು ಬೆಳೆಸಿಕೊಂಡವರು. ಇಂದಿನ ವಿಜ್ಞಾನ ಯುಗದಲ್ಲಿ ಜಗತ್ತಿನ ದೇಶಗಳು ಒಂದರೊಡನೊಂದು ಸಹಕಾರದಿಂದಲೇ ಬಾಳಬೇಕು, ಕೆಲವು ದೇಶಗಳು ಶ್ರೀಮಂತವಾಗಿ ಹಲವು ದೇಶಗಳು ಬಡತನದಲ್ಲಿ ನರಳುತ್ತಿರುವುದು, ಕೆಲವು ಸ್ವತಂತ್ರವಾಗಿದ್ದು ಹಲವು ದಾಸ್ಯದಲ್ಲಿರುವುದು ಜಗತ್ತಿನ ಶಾಂತಿಗೇ ಅಪಾಯ ಎಂದು ನಂಬಿದ್ದರು.

ಜಗತ್ತಿನಲ್ಲಿ ಹಲವು ದೇಶಗಳಿವೆ. ಯಾವ ಕಾಲದಲ್ಲೂ ಯುದ್ಧವಾದರೆ ಜನರಿಗೆ ಕಷ್ಟ. ವಿಜ್ಞಾನದ ಈ ಯುಗದಲ್ಲಿ ಯುದ್ಧವಾದರೆ ಸೋತವರು, ಗೆದ್ದವರು ಎಲ್ಲ ಘೋರ ಸಂಕಟವನ್ನೂ, ನಷ್ಟವನ್ನೂ ಅನುಭವಿಸಬೇಕು. ಅದಕ್ಕಾಗಿ ಜವಾಹರರು ೧೯೫೪ರಲ್ಲಿ ಶಾಂತಿ-ಸಹಬಾಳ್ವೆಗಳ ಸಾಧನವೆಂದು ‘ಪಂಚಶೀಲ’ವನ್ನು ಪ್ರತಿಪಾದಿಸಿದರು. ಆ ಐದು ತತ್ತ್ವಗಳೆಂದರೆ – (೧) ಪರಸ್ಪರರ ಭದ್ರತೆ ಮತ್ತು ಪರಮಾಧಿಕಾರ ಗೌರವಿಸುವುದು; (೨) ಒಂದು ದೇಶದ ಒಳಾಡಳಿತದಲ್ಲಿ ಇನೊಂದು ಕೈಹಾಕದಿರುವುದು; (೩) ಪರಸ್ಪರ ಸಮಾನತೆ ಮತ್ತು ಹಿತ ರಕ್ಷಣೆ; (೪) ಪರಸ್ಪರ ಆಕ್ರಮಣ ನಡೆಸದಿರುವುದು ಮತ್ತು (೫) ಶಾಂತಿಯುತ ಸಹಬಾಳ್ವೆ. ಇವುಗಳ ಪಾಲನೆಯಿಂದ ಜಗತ್ತಿನಲ್ಲಿ ಶಾಂತಿ-ಸಮಾಧಾನ ಸಾಧ್ಯವೆಂದು ಇಂದಿಗೂ ವಿಚಾರವಂತರು ಒಪ್ಪುತ್ತಾರೆ.

ಭಾರತ ರತ್ನ

ಜವಾಹರರು ಚಿಕ್ಕಂದಿನಿಂದಲೂ ದೇಶಭಕ್ತರಾಗಿದ್ದರು. ತಾವು ತೀರಿಕೊಂಡ ಮೇಲೆ ತಮ್ಮ ಅವಶೇಷಗಳು ದೇಶಕ್ಕಾಗಿಯೇ ಸಮರ್ಪಿತವಾಗಬೇಕೆಂಬುದು ಅವರ ಇಚ್ಛೆಯಾಗಿತ್ತು. ಅದಕ್ಕಾಗಿ ಅವರು ಮೃತ್ಯುಪತ್ರದಲ್ಲಿ ಹೀಗೆ ಬರೆದಿದ್ದರು-‘‘ನನ್ನ ದೇಹ ಸುಟ್ಟ ಬಳಿಕ ಉಳಿದ ಬೂದಿಯ ಸ್ವಲ್ಪ ಭಾಗವನ್ನು ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ಹಾಕಬೇಕು. ಅದು ಗಂಗೆಯ ನೀರಿನ ಜತೆ ಹರಿದು ಸದಾಕಾಲವೂ ಭಾರತದ ಪಾದ ತೊಳೆಯುವ ಮಹಾಸಾಗರದಲ್ಲಿ ಸೇರಿಹೋಗಲಿ. ಉಳಿದ ಭಾಗವನ್ನು ಭಾರತದ ರೈತರು ಉಳುವ ಹೊಲಗಳಲ್ಲಿ ಸಿಂಪಡಿಸಿರಿ. ಅದು ಭಾರತದ ಮಣ್ಣಿನೊಡನೆ ಬೆರೆತುಹೋಗಲಿ.’’ ೧೯೫೫ರಲ್ಲಿ ದೇಶದ ಜನತೆಯ ಪರವಾಗಿ ರಾಷ್ಟ್ರಪತಿಯವರು ಜವಾಹರರಿಗೆ ‘ಭಾರತರತ್ನ’ ಪದವಿ ನೀಡಿ ಗೌರವಿಸಿದರು.

ನಮ್ಮ ದೇಶದ ಉನ್ನತಿಗಾಗಿ ಚಾಚಾ ನೆಹರೂ ಕೊಟ್ಟ ಮಂತ್ರವೆಂದರೆ ‘‘ಆರಾಮ್ ಹರಾಮ್ ಹೈ.’’ ನಾವು ಎಂದಿಗೂ ಸೋಮಾರಿಗಳಾಗಬಾರದೆಂಬುದೇ ಆ ಮಂತ್ರದ ಅರ್ಥ. ಸ್ವತಃ ಜವಾಹರರು ಎಂದಿಗೂ ವಿಶ್ರಾಂತಿ ಬಯಸಿದವರಲ್ಲ. ದೇಹ ಬಳಲಿ ಬೆಂಡಾದರೂ ಹಿಂಜರಿಯುತ್ತಿರಲಿಲ್ಲ. ಪ್ರಧಾನಮಂತ್ರಿಗಳಾದ ಮೇಲೆ ಅವರ ಕಾರ್ಯಭಾರ ಹೆಚ್ಚಾಯಿತು. ಮುಂಜಾನೆಯಿಂದ ಮಧ್ಯರಾತ್ರಿಯ ತನಕ ಅವರು ಬೇರೆ ಬೇರೆ ಕಾರ್ಯಗಳಲ್ಲಿ ಮಗ್ನರಾಗುತ್ತಿದ್ದರು. ದಿನಕ್ಕೆ ನಾಲ್ಕೆ ದು ಗಂಟೆಗಳ ಕಾಲ ನಿದ್ರೆಯಾದರೆ ಹೆಚ್ಚು. ಅವರು ವಿಶ್ರಾಂತಿ ತೆಗೆದುಕೊಳ್ಳುವುದು ಅವಶ್ಯವೆಂದೆನಿಸಿದರೂ ಅವರ ಕೆಲಸದ ಭಾರ ನೋಡಿದವರಿಗೆ ವಿಶ್ರಾಂತಿಯ ಮಾತೆತ್ತಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಒಂದು ಹಡಗಿನ ನಾವಿಕರು ಜವಾಹರರಿಗೆ ವಿಶ್ರಾಂತಿಯ ಶಿಕ್ಷೆ ವಿಧಿಸಿದರು. ಹಡಗೊಂದು ಸಮಭಾಜಕವೃತ್ತ ದಾಟುವಾಗ ಹಡಗಿನ ನಾವಿಕರು ‘ವರುಣೋತ್ಸವ’  ಆಚರಿಸುವುದು ವಾಡಿಕೆ. ಆಗ ಯಾರಾದರೊಬ್ಬರು ವರುಣನ ವೇಷ ಧರಿಸಿ ಹಡಗಿನಲ್ಲಿದ್ದವರಿಗೆ ಬಹುಮಾನ ಅಥವಾ ಶಿಕ್ಷೆ ವಿಧಿಸುತ್ತಾರೆ. ಒಮ್ಮೆ ಜವಾಹರರು ಪ್ರವಾಸ ಮಾಡುತ್ತಿದ್ದ ಹಡಗಿನಲ್ಲಿ ‘ವರುಣೋತ್ಸವ’ ನಡೆದಿತ್ತು. ಆಗ ‘ವರುಣ’ನು ಜವಾಹರರಿಗೆ ಶಿಕ್ಷೆವಿಧಿಸಿದನಂತೆ-‘‘ನೀನು ವಿಶ್ರಾಂತಿಯಿಲ್ಲದೆ ಅತಿಯಾಗಿ ದುಡಿಯುವ ತಪ್ಪು ಮಾಡುತ್ತಿರುವಿ. ಅದಕ್ಕಾಗಿ ನಿನಗೆ ಒಂದು ವಾರದ ವಿಶ್ರಾಂತಿಯ ಶಿಕ್ಷೆ ವಿಧಿಸಿದೆ’’

ಸಾಹಿತಿ ನೆಹರು

ಜವಾಹರರು ಸಾಹಿತಿಗಳೂ ಆಗಿದ್ದರು. ಚಿಕ್ಕಂದಿನಿಂದಲೂ ಅವರಿಗೆ ಪುಸ್ತಕಗಳನ್ನು ಓದುವುದೆಂದರೆ ಬಹು ಆಸಕ್ತಿ. ದಿನವಿಡೀ ಬೇರೆ ಬೇರೆ ಕೆಲಸಗಳಿಂದ ದಣಿವಾದರೂ ಅವರು ರಾತ್ರಿ ಮಲಗುವ ಮುಂಚೆ ಸ್ವಲ್ಪ ಸಮಯ ಉತ್ತಮ ಪುಸ್ತಕ ಓದುತ್ತಿದ್ದರು. ಅವರಿಂದ ಇಂಗ್ಲಿಷ್ ಭಾಷೆಯಲ್ಲಿ ರಚಿತವಾದ ಮೂರು ಪುಸ್ತಕಗಳು ಜಗತ್ಪ್ರಸಿದ್ಧವಾಗಿವೆ. ಸೆರೆಮನೆಯಲ್ಲಿದ್ದಾಗ ಬೇರೆ ಬೇರೆ ಸೆರೆಮನೆಗಳಿಂದ ಮಗಳಿಗೆ ಪತ್ರಗಳ ಮೂಲಕ ಜಗತ್ತಿನ ಚರಿತ್ರೆಯನ್ನು ಬೋಧಿಸಿದರು. ಇವು ‘ಪ್ರಪಂಚ ಚರಿತ್ರೆಯ ಇಣಕು ನೋಟಗಳು’ ಎಂದು ೧೯೩೪ರಲ್ಲಿ ಪ್ರಸಿದ್ಧವಾಯಿತು. ೧೯೩೫ರಲ್ಲಿ ಅಲ್ಮೋರಾ ಸೆರೆಮನೆಯಲ್ಲಿದ್ದಾಗ ತಮ್ಮ ‘ಆತ್ಮಕಥೆ’ಯನ್ನು ಬರೆದು ಮುಗಿಸಿದರು. ಮತ್ತು ೧೯೪೨ ರಿಂದ ೧೯೪೪ ರ ತನಕ ಅಹಮದ್‌ನಗರದ ಸೆರೆಮನೆಯಲ್ಲಿದ್ದಾಗ ‘ಭಾರತದರ್ಶನ’ ವೆಂಬ ಪುಸ್ತಕ ಬರೆದರು. ಹೀಗೆ ಜವಾಹರರ ಸೆರೆಮನೆವಾಸದಿಂದ ಮೂರು ಉತ್ತಮ ಸಾಹಿತ್ಯಕೃತಿಗಳು ಜನ್ಮತಾಳಿದವು. ಇವಲ್ಲದೇ ಅವರ ಭಾಷಣಗಳೂ ಲೇಖನಗಳೂ ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಇಂಗ್ಲಿಷ್ ಭಾಷೆಯಲ್ಲಿ ಬರೆದ ಭಾರತೀಯ ಲೇಖಕರಲ್ಲಿ ಶ್ರೇಷ್ಠ ಲೇಖಕರ ಪಂಕ್ತಿಗೆ ಸೇರುತ್ತಾರೆ ಅವರು. ಸೌಂದರ್ಯಕ್ಕೆ ಅರಳುವ ಅವರ ಮನಸ್ಸು, ಅನ್ಯಾಯಕ್ಕೆ ಕೋಪಗೊಳ್ಳುವ, ನೋವಿಗೆ ಸಹಜವಾಗಿ ಅನುಕಂಪ ತೋರುವ ಹೃದಯ, ಯಾವ ಸಮಸ್ಯೆಯನ್ನೂ ವಿಶಾಲವಾದ ದೃಷ್ಟಿಯಿಂದ ಕಾಣುವ ವಿವೇಕ ಅವರ ಎಲ್ಲ ಪುಸ್ತಕಗಳಲ್ಲಿ ಕಾಣುತ್ತವೆ.

ದೀಪ ಆರಿತು

೧೯೬೨ರಲ್ಲಿ ಚೀನದ ಸೈನ್ಯ ಭಾರತದ ಮೇಲೆ ದಾಳಿ ಮಾಡಿದ್ದು ಅವರಿಗೆ ತಡೆಯಲಾಗದ ಆಘಾತವಾಯಿತು. ೧೯೬೪ರ ಮೇ ೨೭ರಂದು ನೆಹರು ನಿಧನರಾದರು. ಎಲ್ಲ ದೇಶಗಳ ಪ್ರಮುಖರು ಅಂತಿಮಯಾತ್ರೆಯಲ್ಲಿ ಭಾಗವಹಿಸಿ ತಮ್ಮ ಗೌರವ ಸಲ್ಲಿಸಿದರು. ಆಗ ಅಮೆರಿಕ ದೇಶದ ಅಧ್ಯಕ್ಷರಾದ ಜಾನ್ಸನ್‌ರು ಹೀಗೆ ಹೇಳಿದರು-‘‘ಕೆನಡಿ ನಿಧನದ ತರುವಾಯ ನೆಹರು ನಿಧನದಿಂದ ಅಮೆರಿಕಕ್ಕೆ ಭಾರಿ ದುಃಖವುಂಟಾಗಿದೆ. ಯುದ್ಧವಿಲ್ಲದ ಜಗತ್ತೇ ನೆಹರುಗೆ ಯೋಗ್ಯಸ್ಮಾರಕ.’’ ‘‘ಜಗತ್ತಿನಲ್ಲಿ ಸ್ವಾತಂತ್ರ , ಪ್ರಗತಿ ಮತ್ತು ಸಮೃದ್ಧಿಗಾಗಿ ಹೋರಾಡಿದ ಮಹಾಮಾನವ’’ ಎಂದು ರಷ್ಯದೇಶದ ಕ್ರುಶ್ಚೇವರು ಹೊಗಳಿದರು.

ಅಪೂರ್ವ ದೇಶಭಕ್ತರು ಅಪೂರ್ವ ವ್ಯಕ್ತಿ

ರಾಜಮಹಾರಾಜರುಗಳಿಗೆ ಶ್ರೀಮಂತಿಕೆಯಲ್ಲಿ ಸರಿ ಸಮಾನರಾಗಿದ್ದವರು ಮೋತೀಲಾಲರ ಮಗ ಜವಾಹರರು. ಬಾಲ್ಯ-ಪೂರ್ವ ಯೌವನಗಳಲ್ಲಿ ವೈಭವದ ಜೀವನ. ತಂದೆ-ಮಗ, ಅತ್ತೆ-ಸೊಸೆ ಎಲ್ಲ ದೇಶದ ಸ್ವಾತಂತ್ರ ದ ಹೋರಾಟಕ್ಕೆ ಮುಡಿಪಾದರು. ಎಷ್ಟು ವರ್ಷಗಳನ್ನು ಸೆರೆಮನೆಯಲ್ಲೆ ಕಳೆದರೋ! ಕಡೆಗೊಂದು ಘಟ್ಟದಲ್ಲಿ ಮನೆಯಲ್ಲಿ ಆಳುಗಳನ್ನೇ ಇಟ್ಟುಕೊಳ್ಳುವುದು ಸಾಧ್ಯವಿಲ್ಲದೆ ಹೋಯಿತು. ಮಕ್ಕಳ ವಿದ್ಯಾಭ್ಯಾಸ ಕಷ್ಟವಾಯಿತು. ಮನೆಯ ಜೀವನವೆಲ್ಲ ಕಲಕಿಹೋಯಿತು-ಯಾರು ಯಾವಾಗ ಎಲ್ಲಿ ಪ್ರವಾಸ ಹೋಗುವರೊ, ಯಾವಾಗ ಸಭೆಯೊ ಸಮಿತಿಯೊ, ಯಾವಾಗ ಬಂಧನವೊ, ಸೆರೆಮನೆ ವಾಸವೊ! ಜವಾಹರರು ದೇಶಕ್ಕಾಗಿ ತಮ್ಮನ್ನು ತೇಯ್ದುಕೊಂಡರು. ಆದರೆ ಯಾವಾಗಲೂ ನೆಹರು ಇದ್ದ ಕಡೆ ಲವಲವಿಕೆ, ಉಲ್ಲಾಸ. ತುಂಬಾ ಹೃದಯವಂತಿಕೆಯ ವ್ಯಕ್ತಿ ಅವರು. ಜೊತೆಗೆ ಒಳ್ಳೆಯ  ಹಾಸ್ಯ ಪ್ರವೃತ್ತಿ. ಎಷ್ಟು ದುಡಿದರೂ ಅವರಿಗೆ ಆಯಾಸವೆಂದೇ ಎನಿಸುತ್ತಿರಲಿಲ್ಲ. ಚೈತನ್ಯದ ಚಿಲುಮೆ ಅವರು. ಭಾರತದ ಸಂಸ್ಕೃತಿಯಲ್ಲಿ ಆಳವಾದ ಅಭಿಮಾನ ಅವರದು. ಭಾರತದ ಇತಿಹಾಸವನ್ನೂ ಚಿಂತನೆಯನ್ನೂ ಆಳವಾಗಿ ಅಭ್ಯಾಸ ಮಾಡಿದರು. ಆದರೆ ಭಾರತ ಯುಗಧರ್ಮಕ್ಕೆ ಅನುಗುಣವಾಗಿ ಬದಲಾಗಬೇಕು, ತನ್ನ ಚಿಂತನೆ-ಸಂಸ್ಕೃತಿಗಳಲ್ಲಿ ಸತ್ವವಿರುವುದನ್ನು ಉಳಿಸಿಕೊಳ್ಳಬೇಕು, ಆದರೆ ಹೊಸ ಜ್ಞಾನ ಹೊಸ ಚಿಂತನೆಗಳಿಗೆ ಮನಸ್ಸನ್ನು ತೆರೆದಿರಬೇಕು ಎಂದು ಸಾರಿದರು. ಒಟ್ಟಿನಲ್ಲಿ ಅವರು ಅಪೂರ್ವ ದೇಶಭಕ್ತರು. ಅಪೂರ್ವ ಸ್ನೇಹಪರರಾದ, ಹೃದಯವಂತಿಕೆಯ ವ್ಯಕ್ತಿ.