ಜಾಕಿರ್ ಹುಸೇನ್

ಇಪ್ಪತ್ತಮೂರು ವರ್ಷ ವಯಸ್ಸಿನ ತರುಣ. ಬುದ್ಧಿವಂತ, ಚೆನ್ನಾಗಿ ಮಾತನಾಡುತ್ತಾನೆ ಎಂದು ಹೆಸರಾದವನು. ಎಂ.ಎ. ತರಗತಿಯ ವಿದ್ಯಾರ್ಥಿ. ಆಗಲೇ ಅಧ್ಯಾಪಕನೂ ಆಗಿದ್ದ. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕ. ಪ್ರಿನ್ಸಿಪಾಲರಿಗೆ ಅವನಲ್ಲಿ ತುಂಬಾ ವಾತ್ಸಲ್ಯ.

ಗಾಂಧೀಜಿ ವಿದ್ಯಾರ್ಥಿಗಳಿಗೆ ಕರೆ ಕೊಟ್ಟುರು: “ಬ್ರಿಟಿಷ್ ಸರ್ಕಾರದ ನಂಟತನ ಇರುವ ಶಾಲಾ ಕಾಲೇಜುಗಳನ್ನು ಬಿಡಿ. ದೇಶದ ಹಿತಕ್ಕೆ ಸಾಧಕವಾಗುವ ಶಿಕ್ಷಣ ಪಡೆಯಿರಿ.”

ಸಾಧ್ಯವಿಲ್ಲ

ತರುಣ ಇದ್ದ ವಿಶ್ವವಿದ್ಯಾನಿಲಯ ಸರ್ಕಾರದ ನೆರವು ಪಡೆಯುತ್ತಿದ್ದುದೇ.

ಗಾಂಧೀಜಿಯ ಕರೆಗೆ ತಲೆಬಾಗಲು ತರುಣ ತೀರ್ಮಾನಿಸಿದ. ಅವನೊಂದಿಗೆ ಹಲವರು ಗೆಳೆಯ-ಅಧ್ಯಾಪಕರು, ನೂರಾರು ಮಂದಿ ವಿದ್ಯಾರ್ಥಿಗಳು ವಿಶ್ವ ವಿದ್ಯಾನಿಲಯ ಬಿಟ್ಟು ತಾವೇ ಬೇರೆ ವಿಶ್ವವಿದ್ಯಾನಿಲಯ ಸ್ಥಾಪಿಸಲು ತೀರ್ಮಾನಿಸಿದರು.

ಭಾರತವನ್ನು ಆಳುತ್ತಿದ್ದ ಬ್ರಿಟಿಷರು ಹಿಂದುಗಳನ್ನೂ ಮುಸ್ಲಿಮರನ್ನೂ ಪರಸ್ಪರ ದೂರವಿಟ್ಟು ತಮ್ಮ ಸ್ಥಾನವನ್ನು ಗಟ್ಟಿಮಾಡಿಕೊಳ್ಳಲು ಹವಣಿಸುತ್ತಿದ್ದ ಕಾಲ ಅದು. ತರುಣ ಇಸ್ಲಾಂ ಮತದವನು.

ಪ್ರಿನ್ಸಿಪಾಲರು ತರುಣನನ್ನು ಬರಮಾಡಿಕೊಂಡರು. “ಎಂ.ಎ. ಮುಗಿಸಿದ ವರ್ಷದೊಳಗೆ ಸರ್ಕಾರ ನಿನ್ನನ್ನು ಡೆಪ್ಯುಟಿ ಕಲೆಕ್ಟರ್ (ಅಸಿಸ್ಟೆಂಟ್ ಕಮೀಷನರಿಗೆ ಸಮಾನ) ಮಾಡುತ್ತದೆ, ಕಾಲೇಜ್ ಬಿಡಬೇಡ” ಎಂದರು.

“ಸಾಧ್ಯವಿಲ್ಲ” ಎಂದ ತರುಣ.

ಇಪ್ಪತ್ತಮೂರು ವರ್ಷ ವಯಸ್ಸಿಗೇ ಅದಿಕಾರದ ಮೋಹ ವನ್ನು ದೂರವಿಟ್ಟ ತರುಣನನ್ನು ನಲವತ್ತೇಳು ವರ್ಷಗಳನಂತರ ಸ್ವತಂತ್ರ ಭಾರತ ತನ್ನ ‘ರಾಷ್ಟ್ರಪತಿ’ ಎಂದು ಆರಿಸಿತು.

ಆ ತರುಣ ಜಾಕಿರ್ ಹುಸೇನರೇ.

ಜನತೆಯ ಕಲ್ಯಾಣಕ್ಕಾಗಿ

ಡಾಕ್ಟರ್ ಜಾಕಿರ್ ಹುಸೇನರು ರಾಷ್ಟ್ರದ ಅಧ್ಯಕ್ಷರಾದದ್ದು ತಮ್ಮ ಸಂಸ್ಕೃತಿ-ಚಾರಿತ್ರ್ಯಗಳ ಬಲದಿಂದ. ಚಿಕ್ಕಂದಿನಿಂದ ರಾಷ್ಟ್ರೀಯ ಮನೋವೃತ್ತಿಯನ್ನು ಬೆಳೆಸಿಕೊಂಡ ಜಾಕಿರರು ಎಂದೂ ರಾಜಕಾರಣದಲ್ಲಿ ಬಿದ್ದವರಲ್ಲ. ಹಾಗೆಂದು ಸ್ವಾತಂತ್ರ್ಯ ಸಂಗ್ರಾಮದಿಂದಾಗಲೇ ರಾಷ್ಟ್ರ ಉತ್ಥಾನಕ್ಕೆ ಅವಶ್ಯಕವಾದ ರಚನಾತ್ಮಕ ಚಟುವಟಿಕೆಗಳಿಂದಾಗಲೀ ದೂರವಿದ್ದವರಲ್ಲ. ಮಹಾತ್ಮ ಗಾಂಧಿಯವರ ಅಸಹಕಾರ ಅಂದೋಲನಕ್ಕೆ ಧಾವಿಸಿದ ತರುಣ ಜಾಕಿರರು ರಾಷ್ಟ್ರೀಯ ಶಿಕ್ಷಣದ ವಿಕಾಸ ದಲ್ಲಿಯೇ ತಮ್ಮ ಜೀವನ ಸರ್ವಸ್ವವನ್ನೆಲ್ಲ ಧಾರೆ ಎರೆದರು. ಜನಜಂಗುಳಿಯ ಮೋಸ-ಹಿಂಸೆಗಳ ರಾಜಕಾರಣದಿಂದ ಅವರು ಬಹುದೂರ. ಜಾಕಿರರು ಬಹು ವಿಶಾಲ ಹೃದಯದ ಮುಸ್ಲಿಮರು. ಅವರ ಮತಶ್ರದ್ಧೆ ದೃಢವಾದುದು. ಅದರೊಂದಿಗೆ ಅಷ್ಟೇ ಗಾಢವಾದ ರಾಷ್ಟ್ರಭಕ್ತಿಯೂ ಅವರಲ್ಲಿ ಬೆಳೆದು ಬಂದಿತ್ತು. ಹೀಗೆ ಮತಶ್ರದ್ಧೆ ಮತ್ತು ರಾಷ್ಟ್ರಭಕ್ತಿ ಎರಡನ್ನೂ ಅಳವಡಿಸಿಕೊಂಡು ಜನತೆಯ ಕಲ್ಯಾಣಕ್ಕಾಗಿ ಹೆಣಗಿದ ರಾಷ್ಟ್ರೀಯ ಮುಸ್ಲಿಮ್ ಧುರೀಣರಲ್ಲಿ ಜಾಕಿರ್ ಹುಸೇನರ ಸ್ಥಾನ ಗೌರವದ್ದು.

ಮನೆತನ

ಅಫ್‌ಘಾನಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿದ ಸ್ವಾಭಿಮಾನಿ ಪಠಾಣ ಕುಟುಂಬವೊಂದರಲ್ಲಿ ಜಾಕಿರರು ಜನಿಸಿದರು. ಇವರ ಪೂರ್ವಜರು ಏಳು ತಲೆಮಾರುಗಳಿಂದ ಉತ್ತರಪ್ರದೇಶದಲ್ಲಿಯ ಕೈಮ್‌ಗಂಜ್ ಎಂಬ ಚಿಕ್ಕ ಊರಿನಲ್ಲಿ ನೆಲೆಸಿದ್ದರು. ಜಾಕಿರರ ಅಜ್ಜ ಗುಲಾಮ ಹುಸೇನಖಾನರು ಸೈನಿಕ ವೃತ್ತಿಯಿಂದ ಜೀವನ ಸಾಗಿಸುತ್ತಿದ್ದರು. ಕೈಮ್‌ಗಂಜ್‌ನ ಸೂಫೀ ಕರಮ ಅಲಿಶಹಾ ಮತ್ತು ಹಿಂದು ಸಂತ ಬನ್ಸ ಬಿಹಾರಿ ಇವರಿಬ್ಬರ ಶಿಷ್ಯರಾಗಿ ಗುಲಾಮ ಹುಸೇನರು ಹಿಂದು ಮತ್ತು ಮುಸ್ಲಿಮ್ ಮತಗಳಲ್ಲಿಯ ಅಂತಃಕರಣ ಮಾರ್ಗದ ಸಾಧಕರಾಗಿದ್ದರು. ಇದರಿಂದ ಅವರ ಮನೆತನದಲ್ಲಿ ಪರಧರ್ಮ ಸಹಿಷ್ಣುತೆ ಬೆಳೆದು ಬಂದಿತು.

ಜಾಕಿರರ ತಂದೆ ಫಿದಾ ಹುಸೇನಖಾನರು ಬಹು ಕುತೂಹಲವನ್ನುಂಟುಮಾಡುವ ವ್ಯಕ್ತಿ. ಇಪ್ಪತ್ತನೆಯ ವಯಸ್ಸಿ ನಲ್ಲಿ ದಕ್ಷಿಣ ಹೈದರಾಬಾದಿಗೆ ಬಂದರು. ಕಂಚಿನ ಪಾತ್ರೆಗಳ ವ್ಯಾಪಾರ ಮಾಡಿದರು. ಬಿಡುವಿನ ವೇಳೆಯಲ್ಲಿ ಯಾರ ನೆರವೂ ಇಲ್ಲದೆ ನ್ಯಾಯಶಾಸ್ತ್ರ ಅಭ್ಯಾಸ ಮಾಡಿದರು, ವಕೀಲರಾದರು! ಅಭ್ಯಾಸವನ್ನು ಮುಂದುವರಿಸಿ, ತಮ್ಮ ಪಾಂಡಿತ್ಯ, ಪ್ರಾಮಾಣಿಕತೆಗಳಿಂದ ಸಮರ್ಥ ವಕೀಲರೆಂದು ಕೀರ್ತಿ ಗಳಿಸಿದರು. ಹೈದರಾಬಾದಿನ ಹೈಕೋರ್ಟಿನ ತೀರ್ಪುಗಳನ್ನು ಪ್ರಕಟಿಸುವ ಯೋಜನೆಯನ್ನು ಪ್ರಾರಂಭಿಸಿ, ಅದರಲ್ಲಿ ಸಹ ಯಶಸ್ವಿಯಾದರು. ಆದರೆ ದುರ್ದೈವದಿಂದ ತಮ್ಮ ಮೂವತ್ತೊಂಬತ್ತನೇ ವಯಸ್ಸಿನಲ್ಲಿಯೇ ಹೆಂಡತಿ ನಜನೀನ್ ಬೇಗಮ್ ಹಾಗೂ ಏಳು ಗಂಡುಮಕ್ಕಳನ್ನು ಅನಾಥರನ್ನಾಗಿ ಮಾಡಿ ತೀರಿಕೊಂಡರು.

ಸಂಸಾರಕ್ಕೆ ಆಸ್ತಿ ತಕ್ಕಷ್ಟಿತ್ತು; ಆದರೆ ಸಿಕಂದರಾ ಬಾದಿನಲ್ಲಿ ಸಹಾಯ ಮಾಡುವವರು ಯಾರು? ನಜನೀನ್ ಬೇಗಮ್‌ರು ತಮ್ಮ ಮಕ್ಕಳೊಂದಿಗೆ ಪೂರ್ವಜರ ಸ್ಥಾನವಾದ ಕೈಮ್‌ಗಂಜ್‌ಗೇ ಮರಳಿದರು. ಅಲ್ಲಿಯ ಅವರ ಆಪ್ತರೆಲ್ಲ ಅವರಿಗೆ ಅಲ್ಲಿ ನೆಲಸಲು ಸಹಾಯ ಮಾಡಿದರು. ಚಿಕ್ಕಚಿಕ್ಕ  ಮಕ್ಕಳನ್ನು ದೊಡ್ಡವರನ್ನಾಗಿ ಮಾಡುವ ಹೊಣೆಯನ್ನು ಬೇಗಮ್‌ರು ಧೈರ್ಯದಿಂದಲೇ ಎದುರಿಸಿದರು. ಆದರೆ ಮಕ್ಕಳ ಅದೃಷ್ಟ ಒಳ್ಳೆಯದಿರಲಿಲ್ಲ. ಬೇಗಮ್‌ರು ಕೇವಲ ಆರು ವರ್ಷಗಳ ಅನಂತರ ಪ್ಲೇಗ್ ಬೇನೆಗೆ ತುತ್ತಾದರು.

ಬಾಲ್ಯಶಿಕ್ಷಣ

ಜಾಕಿರರು ಜನಿಸಿದ್ದು ೧೮೯೭ರಲ್ಲಿ. ತಂದೆ ತೀರಿಕೊಂಡಾಗ ಅವರು ಕೇವಲ ಎಂಟು ವರ್ಷದವರು; ತಾಯಿಯ ನಿಧನದ ವೇಳಗೆ ಕೇವಲ ಹದಿನಾಲ್ಕು ವರ್ಷದವರಾಗಿದ್ದರು ಹೀಗಾಗಿ ತಮ್ಮ ತಾಯಿತಂದೆಗಳ ಪ್ರೀತಿ-ರಕ್ಷಣೆಗಳಿಂದ ವಂಚಿತರಾದರು. ಎಳೆಯ ಜಾಕಿರರು ತಮ್ಮ ಚಿಕ್ಕ ತಮ್ಮಂದಿರನ್ನು ನೋಡಿಕೊಳ್ಳುವ ಹೊಣೆಯನ್ನೂ ಹೊರಬೇಕಾಯಿತು.

ಜಾಕಿರರ ವಿದ್ಯಾಭ್ಯಾಸ ಇಟಾವಾದಲ್ಲಿಯ ಇಸ್ಲಾಮಿಯಾ ಪ್ರೌಢಶಾಲೆಯಲ್ಲಿ ನಡೆಯಿತು. ಅವರು ಶಾಲೆಯಲ್ಲಿ ಬಹುಬೇಗ ಕೀರ್ತಿಯನ್ನು ಗಳಿಸಿಕೊಂಡರು. ಬುದ್ಧಿವಂತರು; ಮಾತಿನಲ್ಲಿ, ನಡೆಯಲ್ಲಿ ತುಂಬಾ ಸೌಜ್ಯನ್ಯ. ಆದುದರಿಂದ ಶಿಕ್ಷಕರ ಹಾಗೂ ಸಹಪಾಠಿಗಳ ಪ್ರೀತಿ ವಿಶ್ವಾಸಗಳನ್ನು ಗೆದ್ದುಕೊಂಡರು. ಭಾಷಣ., ಪ್ರಬಂಧ ಸ್ಪರ್ಧೆಗಳಲ್ಲಿ ಜಾಕಿರರದೇ ಮೊದಲನೆಯ ಸ್ಥಾನ. ಶಾಲೆಯಲ್ಲಿ ಕೆಲವು ತುಂಬಾ ಕಠಿಣ ನಿಯಮಗಳಿದ್ದವು. ‘ಇವನ್ನು ತಿದ್ದಿ’ ಎಂದು ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಅವರ ಮುಖಂಡ-ಜಾಕಿರ್ ಹುಸೇನ್! ಅಧಿಕಾರಿಗಳು ಒಪ್ಪಿದರು.

ಜಾಕಿರರು ಚಿಕ್ಕಂದಿನಿಂದಲೇ ಚಿಂತನಪರರು. ವೃತ್ತಪತ್ರಿಕೆಗಳನ್ನು ತರಿಸಿ ಓದುತ್ತಿದ್ದರು. ಮುಖ್ಯವಾದ ಸುದ್ದಿಗಳನ್ನು ಇತರರಿಗೆ ಹೇಳುತ್ತಿದ್ದರು. ಅವರು ಶಾಲೆಯಲ್ಲಿ ಓದುತ್ತಿರುವಾಗಲೇ ವಿದ್ಯಾರ್ಥಿ ಜೀವನ, ಶಿಕ್ಷಣದ ಉದ್ದೇಶ, ಸುರಕ್ಷಿತರ ಕರ್ತವ್ಯ ಮುಂತಾದವುಗಳ ಬಗ್ಗೆ ಅಭ್ಯಾಸ ಮಾಡಿ, ಆಲೋಚಿಸಿ ಕೆಲವೊಂದು ನಿರ್ದಿಷ್ಟ ಅಭಿಪ್ರಾಯಗಳನ್ನು ತಮ್ಮ ಸಹಪಾಠಿಗಳೆದುರು ಇಡುತ್ತಿದ್ದರು. ಆಗಿನ ಕಾಲದಲ್ಲಿ ಹುಡುಗರು ಇಂಗ್ಲಿಷ್ ಶಿಕ್ಷಣ ಪಡೆಯುವಾಗ ಸಾಮಾನ್ಯವಾಗಿ ಒಂದೇ ಉದ್ದೇಶ ಇರುತ್ತಿತ್ತು-ಒಳ್ಳೆಯ ಸರ್ಕಾರಿ ಕೆಲಸ ಪಡೆದು ಆರಾಮವಾದ ಜೀವನ ನಡೆಸುವುದು. ಇನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಜಾಕಿರ್ ಹುಸೇನರು ಇದು ಸರಿಯಲ್ಲ ಎಂದು ವಾದಿಸುತ್ತಿದ್ದರು. ಪ್ರತಿಯೊಬ್ಬನೂ ತನ್ನ ವಿಚಾರಶಕ್ತಿಯನ್ನು ಬೆಳೆಸಿಕೊಂಡು, ದೇವರಲ್ಲಿ ಶ್ರದ್ಧೆಯನ್ನಿಟ್ಟು, ಸಮಾಜಕ್ಕೆ ಉಪಯುಕ್ತನಾಗುವ ನಾಗರಿಕನಾಗಬೇಕು, ಆಗ ವಿದ್ಯೆ ಪಡೆದುದಕ್ಕೆ ಸಾರ್ಥಕ ಎನ್ನುತ್ತಿದ್ದರು.

ಅಲಿಘರ್ನಲ್ಲಿ

ಜಾಕಿರರು ಅಲಿಘರ್‌ನಲ್ಲಿ ಮಹಮ್ಮಡನ್ ಆಂಗ್ಲೋ ಓರಿಯೆಂಟಲ್ ಕಾಲೇಜನ್ನು ೧೯೧೩ ರಲ್ಲಿ ಸೇರಿದರು. ಈ ಸಂಸ್ಥೆಯನ್ನು ಸರ್ ಸಯ್ಯದ್ ಅಹಮ್ಮದಖಾನರು ೧೮೭೭ ರಲ್ಲಿ ಸ್ಥಾಪಿಸಿದ್ದರು. ಅದರ ಉದ್ದೇಶವು ಮುಸ್ಲಿಮರನ್ನು ಜಾಗೃತಗೊಳಿಸಿ ಅವರನ್ನು ಪ್ರಗತಿ ಪಥಕ್ಕೆ ಹಚ್ಚುವುದೇ ಆಗಿತ್ತು. ಅದರ ಮೊದಲಿನ ಮೂವರು ಪ್ರಿನ್ಸಿಪಾಲರು ಇಂಗ್ಲಿಷರಾಗಿದ್ದರು. ಅವರ ಕುತಂತ್ರ-ದುಷ್ಪ್ರಭಾವಗಳಿಂದ ಈ ಕಾಲೇಜು ಕೇವಲ ಇಂಗ್ಲಿಷರ ಪ್ರಚಾರ ಸಾಧನವಾಗಿತ್ತು. ಅಲ್ಲದೆ ರಾಷ್ಟ್ರೀಯ ಭಾವನೆ-ಚಟುವಟಿಕೆಗಳನ್ನು ವಿರೋಧಿಸುವ ಸಂಸ್ಥೆಯಾಗಿ ಮಾರ್ಪಟ್ಟಿತ್ತು.

ಆದರೆ ಬರಬರುತ್ತ ಮುಸ್ಲಿಮರಲ್ಲಿ ಅನೇಕ ವಿದ್ಯಾವಂತ ಹಾಗೂ ವಿಚಾರವಂತರು ಇದು ಸರಿಯಲ್ಲ ಎಂದು ಕಂಡು ಕೊಂಡರು. ಈ ಸಂಸ್ಥೆಯನ್ನು ರಾಷ್ಟ್ರೀಯ ಸಂಸ್ಥೆಯನ್ನಾಗಿ ಪರಿವರ್ತಿಸಬೇಕೆಂದು ಯೋಚಿಸಿದರು. ಅಲಿಘರ್ ಕಾಲೇಜನ್ನು ಪ್ರಗತಿಗೆ ವಿರೋಧವಾದವರ ಹಿಡಿತದಿಂದ ಬಿಡಿಸಿಕೊಳ್ಳಬೇಕೆಂದು ಇವರು ಹವಣಿಸತೊಡಗಿದರು. ಬ್ರಿಟಿಷರಿಗೆ ಮುಸ್ಲಿಮರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಆಸೆ. ಆದರೆ ಮುಸಲ್ಮಾನರಲ್ಲಿ ರಾಷ್ಟ್ರೀಯ ಭಾವನೆ ಜಾಗೃತವಾಗತೊಡಗಿತ್ತು. ಅಲಿಘರ್‌ನಲ್ಲಿ ಸಹ ಮುಖ್ಯವಾಗಿ ಯುವಕರಲ್ಲಿ ಈ ಭಾವನೆ ಒಡೆದು ಕಾಣುತ್ತಿತ್ತು. ಶಿಕ್ಷಕರಲ್ಲಿ ಹಲವರು ಕಟ್ಟಾ ರಾಷ್ಟ್ರಭಕ್ತರಾಗಿದ್ದರು.

ಇಂತಹ ಪರಿಸ್ಥಿತಿಯಲ್ಲಿ ಜಾಕಿರರು ಅಲಿಘರ್ ಸೇರಿದರು. ಅವರು ಆ ಸಂಸ್ಥೆಯ ಭವಿಷ್ಯವನ್ನೇ ಬದಲಿಸಲು ಹೋರಾಡು ವವರನ್ನು ಸೇರಿದ್ದು ಅಚ್ಚರಿಯಲ್ಲ.

ಜಾಕಿರರು ೧೯೧೮ ರಲ್ಲಿ ತತ್ವಜ್ಞಾನ, ಅರ್ಥಶಾಸ್ತ್ರ ಮತ್ತು ಇಂಗ್ಲಿಷ್ ಸಾಹಿತ್ಯಗಳಲ್ಲಿ ಬಿ.ಎ. (ಅನರ‍್ಸ್) ಪದವಿಯನ್ನು ಪಡೆದರು. ಮುಂದೆ ಅಲ್ಲಿಯೇ ಅರ್ಥಶಾಸ್ತ್ರವನ್ನು ತೆಗೆದುಕೊಂಡು ಎಂ.ಎ. ಪದವಿಗೆ ಹಾಗೂ ಕಾನೂನು ಪರೀಕ್ಷೆಗಳಿಗೆ ಓದಲು ಪ್ರಾರಂಭಿಸಿದರು. ಬಹು ಬುದ್ಧಿವಂತ ವಿದ್ಯಾರ್ಥಿ ಎಂದು ಎಲ್ಲರ ಕಣ್ಣು ಸೆಳೆದರು. ಇವರ ಅಸಾಧಾರಣ ಸಾಮರ್ಥ್ಯವನ್ನು ಕಂಡುಕೊಂಡ ಕಾಲೇಜಿನ ಅಧಿಕಾರಿಗಳು ಇವರನ್ನು ವಿದ್ಯಾರ್ಥಿ-ಶಿಕ್ಷಕರೆಂದು ನೇಮಿಸಿದರು. ವಿದ್ಯಾರ್ಥಿ ಆಗಿದ್ದ ಜಾಕಿರರು ಕೆಲವು ತರಗತಿಗಳಿಗೆ ಪಾಠ ಹೇಳುತ್ತಿದ್ದರು. ಭಾಷಣ ಕಲೆಯಲ್ಲಿ ಅಪ್ರತಿಮ ಕೌಶಲವನ್ನು ಸಾಧಿಸಿಕೊಂಡರು. ಅನೇಕ ಪಾರಿತೋಷಕಗಳನ್ನು ಗೆದ್ದಿದ್ದಲ್ಲದೆ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿದ್ದರು.

ಜಾಕಿರರು ಅಭ್ಯಾಸಪ್ರಿಯರಾಗಿದ್ದರೂ ಪುಸ್ತಕದ ಹುಳು ವಾಗಿರಲಿಲ್ಲ. ಗಂಭೀರವಾದ ವಿಷಯಗಳನ್ನು ಲಲಿತ ಶೈಲಿಯಲ್ಲಿ ಚರ್ಚಿಸುವುದು ವಿದ್ಯಾವಂತರ ಲಕ್ಷಣವಾಗಿದ್ದ ಕಾಲವದು. ಜಾಕಿರರು ಈ ಕಲೆಯಲ್ಲಿ ನಿಷ್ಣಾತರಾಗಿದ್ದರು.

ಜಾಕಿರ್ ಹುಸೇನರು ತಮ್ಮ ಶಿಕ್ಷಕ ಸ್ಥಾನಕ್ಕೆ ರಾಜೀನಾಮೆಯಿತ್ತು ಹೊರಬೀಳುವುದಾಗಿ ಸಾರಿದರು.

ಸೂಫೀ ಹಸನ್ ಶಹಾ

 

ತರುಣ ಜಾಕಿರರ ಮೇಲೆ ಆಳವಾದ ಹಾಗೂ ಶಾಶ್ವತವಾದ ಪ್ರಭಾವ ಬೀರಿದ ವ್ಯಕ್ತಿಯೆಂದರೆ ಸೂಫೀ ಹಸನ್ ಶಹಾ. ಹಸನ್ ಶಹಾ ಅವರು ಜಾಕಿರರ ಮನೆತನದ ಆಪ್ತರು. ಜಾಕಿರರ ತಾಯಿ ತೀರಿದಂದಿನಿಂದ ಇವರೇ ಚಿಕ್ಕ ಜಾಕಿರನನ್ನು ನೋಡಿಕೊಂಡರು. ಜಾಕಿರರೂ ಅವರನ್ನು ಬಹುವಾಗಿ ನೆಚ್ಚಿದ್ದರು. ಹಸನ್ ಶಹಾ ಅವರು ಜ್ಞಾನ-ಭಕ್ತಿಗಳ ಸಾಧಕರು. ಅವರಿಗೆ ತನ್ನದು ಎನ್ನುವುದು ಯಾವುದೂ ಇರಲಿಲ್ಲ. ಅವರು ಸವಿಮಾತಿನಿಂದ, ತಮ್ಮ ಅಂತಃಕರಣದ ನಡತೆಯಿಂದ, ಔದಾರ್ಯದಿಂದ ಜಾಕಿರರಲ್ಲಿ ಮಾನವೀಯತೆಯ ಸಾರವನ್ನೆಲ್ಲ ತುಂಬಿದರು. ಜಾಕಿರರಲ್ಲಿ ಕಂಡುಬರುತ್ತಿದ್ದ ವಿನಯ, ಸೌಜನ್ಯ, ಅನುಕಂಪ, ವಿಶ್ವಪ್ರೇಮ, ನಡತೆಯಲ್ಲಿಯ ನಯ, ಜ್ಞಾನ ಪಿಪಾಸೆ-ಮುಂತಾದ ಎಲ್ಲ ಸದ್ಗುಣಗಳೂ ಹಸನ್‌ರಿಂದಲೇ ಬೆಳೆದು ಬಂದಿದ್ದವು. ಅವರು ಜಾಕಿರರಿಗೆ ಅನೇಕ ಪಾರಸೀ ಗ್ರಂಥಗಳನ್ನು ಪ್ರತಿ ಮಾಡಲು ಹೇಳುತ್ತಿದ್ದರು. ಇದರಿಂದ ಜಾಕಿರ್ ಹುಸೇನರ ಬರಹ ಸುಂದರವಾಯಿತು. ಆ ಪುಸ್ತಕಗಳ ಅಭ್ಯಾಸದಿಂದ ಮನಸ್ಸು ವೃದುವಾಯಿತು. ಇದೇ ಅವರನ್ನು ಮಹಾತ್ಮ ಗಾಂಧಿಯವರತ್ತ ಎಳೆದದ್ದು. ಆದರ್ಶ ಶಿಕ್ಷಕರಾಗಲು ಎಂತಹವರನ್ನೂ ತನ್ನ ಆದರ್ಶಗಳತ್ತ ಸೆಳೆಯಲು ಜಾಕಿರರು ಶಕ್ತರಾದದ್ದು ಈ ಕೋಮಲ ಹೃದಯದಿಂದಲೇ. ಯಾರಿಗಾದರೂ ಅಗೌರವ ತೋರಿದರೆ ಜಾಕಿರರಿಗೆ ನೋವಾಗುತ್ತಿತ್ತು. ಅವರು ಅದನ್ನು ಪ್ರತಿಭಟಿಸಿ, ಅನ್ಯಾಯವನ್ನು ಸರಿಪಡಿಸಲು ಶಕ್ತಿಮೀರಿ ಹೆಣಗುತ್ತಿದ್ದರು. ಜಾಕಿರರು ಪೂರ್ಣವಾಗಿ ವಿಚಾರ ಮಾಡಿ ತೆಗೆದುಕೊಂಡ, ಅವರ ಜೀವನವನ್ನೇ ಬದಲಿಸಿದ ನಿರ್ಣಯಕ್ಕೆ ಅವರ ವ್ಯಕ್ತಿತ್ವದ ಈ ಎಲ್ಲ ಗುಣಗಳೇ ಹಿನ್ನೆಲೆಯಾಗಿರುತ್ತವೆ. ಆ ನಿರ್ಣಯದ ಕತೆ ಹೀಗಿದೆ:

ದೇಶದ ಪರಿಸ್ಥಿತಿ

ಜಾಕಿರರು ಅಲಿಘರ್ ಕಾಲೇಜನ್ನು ಸೇರಿದ್ದು ೧೯೧೩ ರಲ್ಲಿ. ಅವರು ಎಂ.ಎ. ತರಗತಿಗೆ ಬಂದ್ದು ೧೯೨೦ ರಲ್ಲಿ. ಈ ಅವಧಿಯಲ್ಲಿ ಅನೇಕ ಘಟನೆಗಳು ನಡೆದವು; ಮೊದಲನೆಯ ಮಹಾಯುದ್ಧ (೧೯೧೪-೧೯೧೮)ದಲ್ಲಿ ಭಾರತೀಯರು ತನು-ಮನ-ಧನಗಳಿಂದ ಬ್ರಿಟಿಷರಿಗೆ ಅಪಾರ ಸಹಾಯ ಮಾಡಿದರು. ಆದರೆ ಬ್ರಿಟಿಷರು ಭಾರತೀಯರಿಗೆ ಯಾವ ಬಗೆಯ ರಾಜಕೀಯ ಅಧಿಕಾರವನ್ನೂ ನೀಡಲಿಲ್ಲ. ಅದರ ಬದಲು ದಬ್ಬಾಳಿಕೆಯ ಆಡಳಿತವನ್ನು ಪ್ರಾರಂಭಿಸಿದರು. ಇದನ್ನು ಪ್ರತಿಭಟಿಸಿದ ಭಾರತೀಯರನ್ನು ನಿರ್ದಯವಾಗಿ ಶಿಕ್ಷಿಸಲಾಯಿತು. ಜಾಲಿಯನ್‌ವಾಲಾ ಬಾಗ್‌ನಲ್ಲಿ ನಿಸ್ಸಹಾಯ ಭಾರತೀಯರ ಕಗ್ಗೊಲೆಯಾಯಿತು. ಇವೆಲ್ಲವನ್ನೂ ಸಹಿಸಲಾರದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಅಸಹಕಾರ ಚಳವಳಿಯನ್ನು ಪ್ರಾರಂಭಿಸಿತು. ಜನತೆ ಅಪೂರ್ವವಾದ ಉತ್ಸಾಹದಿಂದ ಬೆಂಬಲ ನೀಡಿತು.

ಈ ಚಳವಳಿಯ ಅಂಗವಾಗಿ ವಿದ್ಯಾರ್ಥಿಗಳು ಸರ್ಕಾರೀ ಶಾಲಾ ಕಾಲೇಜುಗಳನ್ನು ತೊರೆದರು; ವಕೀಲರು ಕೋರ್ಟು-ಕಚೇರಿಗಳನ್ನು ಬಹಿಷ್ಕರಿಸಿದರು. ಎಷ್ಟೋ ಜನರು ತಮ್ಮ ಪದವಿಗಳನ್ನು ಹಿಂತಿರುಗಿಸಿದರು. ದೇಶದ ಅನೇಕ ಭಾಗಗಳಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿದವು. ವಿದೇಶಿ ವಸ್ತುಗಳ ಬಹಿಷ್ಕಾರವು ತೀವ್ರವಾಯಿತು.

ಅಲಿಘರ್ನಿಂದ ಹೊರಕ್ಕೆ

ಅಲಿಘರ್‌ನಲ್ಲಿರುವ ವಿದ್ಯಾರ್ಥಿಗಳು ಈ ರಾಜಕೀಯ ಅಂದೋಲನದಿಂದ ಹೊರಗುಳಿಯಲು ಸಾಧ್ಯವಿರಲಿಲ್ಲ. ಅವರಲ್ಲಿ ನೂರಾರು ವಿದ್ಯಾರ್ಥಿಗಳು ಅಲಿಘರ್‌ನ ಕಾಲೇಜಿನ ಆಡಳಿತಗಾರರನ್ನು ಸರ್ಕಾರೀ ಸಹಾಯವನ್ನು ತ್ಯಜಿಸುವಂತೆ ಒತ್ತಾಯಪಡಿಸಹತ್ತಿದರು. ಅದೇ ವೇಳೆಗೆ ಸರ್ಕಾರದವರು ಅಲಿಘರ್ ಸಂಸ್ಥೆಯನ್ನು ಹೇಗಾದರೂ ಮಾಡಿ ತಮ್ಮ ಪ್ರಭಾವದಲ್ಲಿ ಉಳಿಸಿಕೊಳ್ಳಬೇಕೆಂದು ಅದಕ್ಕೆ ಸ್ವತಂತ್ರ ವಿಶ್ವವಿದ್ಯಾನಿಲಯದ ಸ್ಥಾನಮಾನವನ್ನು ಕಲ್ಪಿಸಿಕೊಡುವುದಾಗಿ ಸಾರಿದರು.

ಕೆಲವು ವಿದ್ಯಾರ್ಥಿ ಮುಖಂಡರು ಅಗಲಿಘರದ ವಿದ್ಯಾರ್ಥಿಗಳು ಅಸಹಕಾರ ಚಳವಳಿಯನ್ನು ಸೇರುವಂತೆ ಮಾಡಬೇಕು ಎಂದು ಯೋಚಿಸಿದರು. ಮೌಲಾನಾ ಮಹಮ್ಮದ್ ಅಲಿ ಹಾಗೂ ಮಹಾತ್ಮ ಗಾಂಧಿಯವರು ಅಲಿಘರಕ್ಕೆ ಬಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಬೇಕೆಂದು ಆಂಮಂತ್ರಿಸಿದರು. ಅದರಂತೆ ಈ ಇಬ್ಬರು ಮುಖಂಡರು ೧೯೨೦ ರ ಅಕ್ಟೋಬರ್ ೧೨ ರಂದು ಅಲಿಘರಕ್ಕೆ ಬಂದು ವಿದ್ಯಾರ್ಥಿಗಳಿಗೆ ಅಸಹಕಾರದ ಆಹ್ವಾನವನ್ನು ನೀಡಿದರು. ಜಾಕಿರ್ ಹುಸೇನರು ಅನಿವಾರ್ಯವಾಗಿ ಅಂದು ಬೇರೆಲ್ಲೋ ಹೋಗಬೇಕಾಯಿತು. ಸಭೆಯಲ್ಲಿ ಅವರು ಇರಲಿಲ್ಲ.

ಬಂದ ನಾಯಕರಿಗೆ ದೊರೆತದ್ದು ತಿರಸ್ಕಾರ. ಅವರ ಮನಸ್ಸು ತುಂಬಾ ನೊಂದಿತು.

ಮರುದಿನ ಜಾಕಿರ್ ಹುಸೇನ್ ಬಂದರು. ನಡೆದದ್ದೆಲ್ಲ ತಿಳಿಯಿತು. ಅವರ ಮನಸ್ಸು ಮುದುಡಿಹೋಯಿತು. ಮರುದಿನ ಮತ್ತೆ ವಿದ್ಯಾರ್ಥಿಗಳನ್ನು ಸಭೆ ಸೇರಿಸಿದರು. ರಾಷ್ಟ್ರದ ನಿಸ್ವಾರ್ಥ ನಾಯಕರನ್ನು ವಿದ್ಯಾರ್ಥಿಗಳು ಕಂಡ ರೀತಿ ಎಷ್ಟು ತಪ್ಪು ಎಂದು ತೋರಿಸಿಕೊಟ್ಟರು. ಎಲ್ಲ ವಿದ್ಯಾರ್ಥಿಗಳೂ ಅಂದೋಲನದಲ್ಲಿ ನುಗ್ಗಬೇಕೆಂದು ಕರೆಯಿತ್ತರು. ತಾವು ತಮ್ಮ ಶಿಕ್ಷಕಸ್ಥಾನಕಕ್ಕೆರಾಜೀನಾಮೆಯಿತ್ತು ಹೊರಬೀಳುವುದಾಗಿ ಸಾರಿದರು. ಇದು ಅವರು ಸಾರಾಸಾರ ವಿಚಾರಮಾಡಿ ತೆಗೆದುಕೊಂಡ ನಿರ್ಣಯ. ಈ ನಿರ್ಣಯ ಅವರ ಜೀವನವನ್ನೆ ಬದಲಾಯಿಸಿತು.

ಈ ಸಂರ್ಭದಲ್ಲಿಯೇ ಅಲಿಘರ್ ಕಾಲೇಜಿನ ಪ್ರಿನ್ಸಿಪಾಲರು ಜಾಕಿರರನ್ನು ಕರೆಯಿಸಿ ಅವರಿಗೆ ಇಂತಹ ದುಡುಕಿನ ನಿರ್ಣಯವನ್ನು ಬದಲಿಸಲು ಹೇಳಿದ್ದು; ಜಾಕಿರರು ಬ್ರಿಟಿಷ್ ಸರ್ಕಾರಕ್ಕೆ ವಿಧೇಯರಾಗಿ ಉಳಿದರೆ, ಅವರ ಭವಿಷ್ಯ ಉಜ್ವಲವಾಗುವುದೆಂದೂ ಅವರಿಗೆ ಡೆಪ್ಯುಟಿ ಕಲೆಕ್ಟರ್ ಹುದ್ದೆಯನ್ನು ನೀಡಲು ಸರ್ಕಾರವು ಸಿದ್ಧವಿರುವುದೆಂದೂ ತಿಳಿಸಿದ್ದು. ಇದರಿಂದ ಜಾಕಿರರ ಆತ್ಮಗೌರವಕ್ಕೇ ಅಪಹಾಸ್ಯ ಮಾಡಿದಂತಾಯಿತು. ಅಲಿಘರ್ ಕಾಲೇಜ್ ಬಿಡುವ ಮತ್ತು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯನ್ನು ಕಟ್ಟುವ ಅವರ ನಿರ್ಧಾರ ನೂರು ಪಾಲು ಗಟ್ಟಿಯಾಯಿತು.

ಸಾಧಾರಣ ಮುನ್ನೂರು ವಿದ್ಯಾರ್ಥಿಗಳು ಹಾಗು ಹಲವಾರು ಶಿಕ್ಷಕರೊಡನೆ ಜಾಕಿರರು ಅಲಿಘರ್ ಕಾಲೇಜಿನಿಂದ ಹೊರಬಿದ್ದರು. ಈ ವಿದ್ಯಾರ್ಥಿಗಳ ಶಿಕ್ಷಣದ ಹೊಣೆಯನ್ನು ಜಾಕಿರರು ವಹಿಸಿಕೊಂಡರು. ಹಾಗೆ ನೋಡಿದರೆ, ಇಡಿಯ ವಿದ್ಯಾರ್ಥಿ ಸಭೆಯೇ ಒಕ್ಕೊರಲಿನಿಂದ ಅಂದಿನ ಗೊತ್ತುವಳಿ ಯನ್ನು ಸ್ವೀಕರಿಸಿತ್ತು. ಆದರೆ ಜಾಕಿರರ ಕರ್ತವ್ಯಪ್ರಜ್ಞೆ ಅವರನ್ನು ಕಾರ್ಯಪ್ರವೃತ್ತರನ್ನಾಗಿ ಮಾಡಿತು. ಒಂದು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಹುಟ್ಟಿಕೊಂಡಿತು.

ಜಮಿಯಾ ಮಿಲಿಯ ಇಸ್ಲಾಮಿಯಾ

ವಿದ್ಯಾರ್ಥಿಗಳು ಅಲಿಘರ್ ಕಾಲೇಜನ್ನು ಬಿಡಲು ತೀರ್ಮಾನಿಸಿದರು. ಆದರೆ ಅವರ ವಿದ್ಯಾಭ್ಯಾಸ ಮುಂದೆ ಸಾಗಬೇಕಾಗಿತ್ತಲ್ಲವೇ? ಜಾಕಿರ್ ಹುಸೇನರೂ ಇತರ ವಿದ್ಯಾರ್ಥಿ ಮುಖಂಡರೂ ಇದಕ್ಕೆ ಲಕ್ಷ್ಯಕೊಟ್ಟರು.

ಜಾಕಿರರು ಮತ್ತು ಅವರ ಸಂಗಡಿಗರು ಅಲಿಘರ್ ಕಾಲೇಜನ್ನು ಬಿಡಲು ನಿರ್ಧರಿಸಿದ್ದು ೧೯೨೦ ಅಕ್ಟೋಬರ್ ೧೩ ರಂದು. ಜಾಕಿರರು ದಿಲ್ಲಿಗೆ ಹೋಗಿ ಹಕೀಮ ಅಜಮಲಖಾನ್, ಮಹಮ್ಮದ್ ಅಲಿ, ಮಹಾತ್ಮ ಗಾಂಧಿ ಮುಂತಾದ ಅನೇಕ ಹಿರಿಯರನ್ನು ಕಂಡು ಅಲಿಘರ್ ಕಾಲೇಜು ವಿದ್ಯಾರ್ಥಿಗಳ ಬೇಡಿಕೆಯನ್ನು ಅವರ ಮುಂದಿಟ್ಟರು. ಅವರಿಗೆ ಬಹಳ ಸಂತೋಷವಾಯಿತು. ಎಲ್ಲರೂ ಸೇರಿ ‘ಜಮಿಯಾ ಮಿಲಿಯಾ ಇಸ್ಲಾಮಿಯ’ (ರಾಷ್ಟ್ರೀಯ ಮುಸ್ಲಿಮ್ ವಿಶ್ವವಿದ್ಯಾಲಯ) ಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಿ, ಅಲಿಘರ್ ಕಾಲೇಜಿನ ಮಸೀದಿಯಲ್ಲಿಯೇ ಅಕ್ಟೋಬರ್ ೨೯ ರಂದು ಅದರ ಉದ್ಘಾಟನೆಯನ್ನು ನೆರವೇರಿಸಿದರು. ಮೌಲಾನಾ ಮಹಮೂದ್ ಉಲ್ ಹಸನ್ ಎಂಬ ವೃದ್ಧ ಹಾಗೂ ಗೌರವಾನ್ವಿತರು ಪ್ರಾರಂಭ ಭಾಷಣ ಮಾಡಿ ಅದನ್ನು ಆಶೀರ್ವದಿಸಿದರು. ಹಕೀಮ ಅಜಮಲಖಾನರು ಅದರ ಕುಲಗುರುಗಳು, ಮಹಮ್ಮದ್ ಅಲಿ ಅವರು ಉಪ ಕುಲಗುರುಗಳೆಂದು ಅಧಿಕಾರ ವಹಿಸಿಕೊಂಡರು. ಮುಂದೆ ನವೆಂಬರ್ ೨೨ರಂದು ೭೪ ಜನರ ಸ್ಥಾಪಕ ಸಮಿತಿಯೊಂದನ್ನು ರಚಿಸಿ, ಘಟನೆ ಸಿದ್ಧಪಡಿಸಿ, ವಿಶ್ವವಿದ್ಯಾಲಯದ ಎಲ್ಲ ಅಂಗಸಂಸ್ಥೆಗಳನ್ನು ನಿಯಮಿಸ ಲಾಯಿತು. ಜಾಕಿರ್ ಹುಸೇನ್, ಡಾಕ್ಟರ್ ಹಮೀದ್, ಸಯ್ಯದ್ ನೂರುಲ್ಲಾ, ಸಯ್ಯದ್ ಮಹಮ್ಮದ್ ಮುಂತಾದ ಶಿಕ್ಷಕರಿಂದ ಶಿಕ್ಷಣ ಕಾರ್ಯವು ಮೊದಲಾಯಿತು. ಈ ಸಂಸ್ಥೆಗೆ ಖಿಲಾಫತ್ ಸಮಿತಿಯು ಧನಸಹಾಯವನ್ನು ಒದಗಿಸಿತು. ಈ ವಿಶ್ವ ವಿದ್ಯಾಲಯದ ಅಭ್ಯಾಸಕ್ರಮವನ್ನು ಗೊತ್ತುಪಡಿಸಲು ಜವಾಹರ ಲಾಲ್‌ನೆಹರೂ, ಡಾಕ್ಟರ್ ಮಹಮದ್ ಇಕ್ಬಾಲ್, ಮೌಲಾನಾ ಅಬುಲ್ ಕಲಮ್ ಆಜಾದ್, ಡಾಕ್ಟರ್ ಅನ್ಸಾರಿ, ಡಾಕ್ಟರ್ ರಾಜೇಂದ್ರಪ್ರಸಾದ್ ಮುಂತಾದವರು ಸದಸ್ಯರಾಗಿದ್ದ ಒಂದು ಪ್ರತ್ಯೇಕ ಸಮಿತಿಯನ್ನು ನಿಯಮಿಸಲಾಯಿತು. ಮುಸ್ಲಿಮ್ ವಿದ್ಯಾರ್ಥಿಗಳಿಗೆ ಭಾರತೀಯ ನಾಗರಿಕರಾಗಿ, ರಾಷ್ಟ್ರಭಕ್ತರಾಗಿ, ನಿಷ್ಠಾವಂತ ಮುಸ್ಲಿಮರಾಗಿ, ಹಿಂದು ಜನರೊಂದಿಗೆ ಪ್ರೀತಿ-ವಿಶ್ವಾಸಗಳಿಂದ ಬಾಳಲು ಕಲಿಸುವುದೇ ಈ ವಿಶ್ವವಿದ್ಯಾಲಯದ ಗುರಿಯಾಗಿತ್ತು.

‘ಈ ದೇಶದ ಮಣ್ಣಿನಿಂದ ನಮ್ಮ ದೇಹ ಆಗಿದೆ,

ಈ ದೇಶದ ಮಣ್ಣಿಗೇ ನಾವು ಹಿಂದಕ್ಕೆ ಹೋಗುವುದು.’

ಇಚಿಥ ಸಂಸ್ಥೆ ಜನ್ಮತಾಳಿದ್ದು ಆಗಿನ ಕಾಲದಲ್ಲಿ ಒಂದು ದೊಡ್ಡ ಐತಿಹಾಸಿಕ ಘಟನೆಯೇ ಆಗಿತ್ತು. ಆಳರಸರು ಹಿಂದು-ಮುಸ್ಲಿಮ್ ದ್ವೇಷವನ್ನು ಹೊತ್ತಿಸಿ, ಅದಕ್ಕೆ ಗಾಳಿ ಹಾಕುತ್ತಿದ್ದಾಗ, ಸುಸಂಸ್ಕೃತ ಮುಸ್ಲಿಮ್ ನಾಗರಿಕರು ಇಂತಹ ಸಂಸ್ಥೆಗಳನ್ನು ಕೇವಲ ರಾಷ್ಟ್ರೀಯತೆಯ ಘೋಷಣೆಗಾಗಿ ಕಟ್ಟಿದ್ದು ಸಾಹಸದ ಮಾತೇ ಸರಿ.

ಜರ್ಮನಿಯಲ್ಲಿ

ಜಮಿಯಾ ಮಿಲಿಯಾ ಮೂರು ವರ್ಷಗಳನ್ನು ಮುಗಿಸುವ ಹೊತ್ತಿಗೆ ಜಾಕಿರರು ತಮ್ಮ ಉಚ್ಚ ವ್ಯಾಸಂಗಕ್ಕಾಗಿ ಜರ್ಮನಿಗೆ ತೆರಳಿದರು. ಆಗ ಅವರಿಗೆ ಪಾಸ್‌ಪೋರ್ಟ್ ಸಿಗುವುದು ಸಹ ಕಠಿಣವಿತ್ತು. ಆದುದರಿಂದ ಇಂಗ್ಲೆಂಡಿಗೆ ಹೋಗುವುದಾಗಿ ಪಾಸ್‌ಪೋರ್ಟ್ ಪಡೆದುಕೊಂಡು, ದಾರಿ ಯಲ್ಲಿಯೇ ಹಡಗನ್ನು ಬಿಟ್ಟು ಜರ್ಮನಿಯನ್ನು ತಲುಪಿದರು. ಅಲ್ಲಿ ಸರೋಜಿನಿ ನಾಯುಡು ಅವರ ಅಣ್ಣಂದಿರಾದ ವಿರೇಂದ್ರ ನಾಥರ ಸಹಾಯದಿಂದ ಬರ್ಲಿನ್ ವಿಶ್ವವಿದ್ಯಾಲಯವನ್ನು ಸೇರಿದರು. ಅಲ್ಲಿ ಸುಮಾರು ಮೂರು ವರ್ಷಗಳವರೆಗೆ ಅಧ್ಯಯನ ಮಾಡಿ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ. ಪದವಿಯನ್ನು ಪಡೆದು ಡಾಕ್ಟರ್ ಜಾಕಿರರಾದರು.

ಅರ್ಥಶಾಸ್ತ್ರದೊಂದಿಗೆ ಜಾಕಿರರು ಜರ್ಮನ್ ಸಾಹಿತ್ಯ, ಪಾಶ್ಚಾತ್ಯ ಸಂಗೀತ, ಕಲೆಗಳಲ್ಲಿಯೂ ಪರಿಣತಿಯನ್ನು ಪಡೆದುದಲ್ಲದೆ, ಶಿಕ್ಷಣಶಾಸ್ತ್ರವನ್ನು ಆಳವಾಗಿ ಅಭ್ಯಸಿಸಿದರು. ಈ ಅಭ್ಯಾಸವೇ ಅವರನ್ನು ವಿಶ್ವವಿಖ್ಯಾತ ಶಿಕ್ಷಣತಜ್ಞರನ್ನಾಗಿ ಮಾಡಿತೆಂದು ಹೇಳಬಹುದು. ಜರ್ಮನಿಯಲ್ಲಿ ಹಾಗೂ ಯುರೋಪಿನಲ್ಲಿಯ ಶಿಕ್ಷಣ ಸಂಸ್ಥೆಗಳನ್ನು ಸಂದರ್ಶಿಸಿ ಅನೇಕ ಹೊಸ ತಂತ್ರ ಪದ್ಧತಿಯನ್ನು ಅರಿತುಕೊಂಡು, ಅವುಗಳನ್ನು ಜಮಿಯಾದಲ್ಲಿ ಪ್ರಯೋಗಕ್ಕೆ ತಂದರು.

ಜಾಕಿರರ ಸೌಜನ್ಯ ಹಾಗೂ ಸುಸಂಸ್ಕೃತ ವ್ಯಕ್ತಿತ್ವ ಜರ್ಮನಿಯಲ್ಲಿ ಸಹ ಅನೇಕರನ್ನು ಆಕರ್ಷಿಸಿತು. ಅವರ ಅಧ್ಯಾಪಕರೂ ಸಹಪಾಠಿಗಳೂ ಜಾಕಿರರನ್ನು ಬಹು ಮೆಚ್ಚಿಕೊಂಡರು. ಜರ್ಮನಿಯಲ್ಲಿ ನೆಲಸಿದ್ದ ಅನೇಕ ಭಾರತೀಯರು ಜಾಕಿರರ ಮೇಲೆ ಅಂತಃಕರಣದ ಮಳೆಯನ್ನೇ ಸುರಿದರು. ಇವರು ಜಮಿಯಾದ ಚಿಂತನೆಯಲ್ಲಿಯೇ ಇರುತ್ತಿದ್ದರು. ಇವರಿಂದ ಜಿಮಿಯಾದ ಕತೆಯನ್ನು ಕೇಳಿದವರು ಅದಕ್ಕೆ ಒಂದಿಲ್ಲೊಂದು ರೀತಿಯಿಂದ ಸಹಾಯವನ್ನು ನೀಡುತ್ತಿದ್ದರು.

ಜಮಿಯಾಕ್ಕೆ ಅತ್ಯಂತ ನಿಸ್ವಾರ್ಥ ಸೇವೆಯನ್ನು ಸಲ್ಲಿಸಲು ಮುಂದೆ ಬಂದ ಕುಮಾರಿ ಗರ್ಡಾ ಫಿಲಿಪ್ಸ್ ಬಾರ್ನ್ ಎಂಬುವರ ಕತೆ ಸ್ಫೂರ್ತಿದಾಯಕವಾಗಿದೆ. ಗರ್ಡಾ ಅವರು ಸುಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರು. ಯಹೂದ್ಯ ನಿರ್ಗತಿಕ ಮಕ್ಕಳಿಗೆ ಅನ್ನ, ವಸ್ತ್ರ, ಆಟಿಗೆ ವಸ್ತುಗಳನ್ನು ಒದಗಿಸುವುದ ರಲ್ಲಿಯೇ ಅವರು ಯಾವಾಗಲೂ ತೊಡಗಿದವರು. ಜಮಿಯಾದ ಕತೆಯನ್ನು ಕೇಳಿ ಅವರ ಹೃದಯ ಕರಗಿತು. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ ಭಾರತದ ಬಗ್ಗೆ ಅವರಿಗೆ ತುಂಬಾ ಸಹಾನುಭೂತಿಯಿತ್ತು. ಈಗ ಆದರ್ಶವಾದೀ ಯುವಕರು ನಿಸ್ವಾರ್ಥ ಬುದ್ಧಿಯಿಂದ ಶಿಕ್ಷಣ ಸಂಸ್ಥೆಯೊಂದನ್ನು ಕಟ್ಟಲು ಮುಂದಾದದ್ದು ಅವರಿಗೆ ಬಹು ಮೆಚ್ಚಿಗೆಯಾಯಿತು. ೧೯೩೩ ರಲ್ಲಿ ಜಮಿಯಾದ ಪ್ರಾಥಮಿಕ ಶಾಲೆಯ ಅಧ್ಯಾಪಕಿಯಾಗಿ ಕೆಲಸ ಪ್ರಾರಂಭಿಸಿ ೧೯೪೩ ರಲ್ಲಿ ತಾವು ಕೊನೆಯುಸಿರನ್ನು ಬಿಡುವವರೆಗೂ ಅವಿಶ್ರಾಂತವಾಗಿ ದುಡಿದರು. ಮಕ್ಕಳ ಆರೋಗ್ಯ, ಶಿಸ್ತು, ಮನರಂಜನೆ ಮುಂತಾದವುಗಳಲ್ಲಿ ತಮ್ಮ ಬಿಡುವಿನ ವೇಳೆಯನ್ನು ಕಳೆಯುತ್ತಿದ್ದರು. ಜಮಿಯಾದ ಕಷ್ಟದ ವೇಳೆಯಲ್ಲಿ ಗರ್ಡಾ ಅವರು ಜಾಕಿರರಿಗೆ ಶಾಂತಿ-ಸಮಾಧಾನದ ತೀರ್ಥವಾಗಿದ್ದರು.

ಜಾಕಿರರ ಇನ್ನೊಬ್ಬ ಮಿತ್ರ ಪೀಟರ್‌ಸನ್, ಸ್ವೀಡನ್ ನವರು. ಇಬ್ಬರೂ ಸೇರಿ ನಾರ್ವೆ-ಸ್ವೀಡನ್ ಪ್ರವಾಸಕ್ಕೆ ಹೋದಾಗ ಹಣದ ಕೊರತೆಯಾಯಿತು. ಆಗ ಜಾಕಿರರು ಒಂದು ಲೇಖನವನ್ನು ಬರೆದು ಪತ್ರಿಕೆಯೊಂದರಲ್ಲಿ ಪ್ರಕಟಿಸಿ, ತಮ್ಮ ಕೊರತೆಯನ್ನು ಪೂರೈಸಿಕೊಳ್ಳುವ ಯೋಚನೆ ಮಾಡಿದರು. ಲೇಖನದ ವಿಷಯ? ಅವರ ನೆಚ್ಚಿನ ಗಾಂಧೀಜಿ. ಜರ್ಮನ್ ಭಾಷೆಯಲ್ಲಿ ಸಹ ಮಿತ್ರರೊಂದಿಗೆ ಗಾಂಧೀಜಿಯ ಚರಿತ್ರೆಯನ್ನು ಬರೆದು ಪ್ರಕಟಿಸಿದರು.

ಕುಲಗುರು ಜಾಕಿರರು

ಜಾಕಿರರು ಜರ್ಮನಿಯಿಂದ ಫೆಬ್ರವರಿ ೧೯೨೬ ರಲ್ಲಿ ಭಾರತಕ್ಕೆ ಮರಳಿದರು. ಅವರು ಬಂದ ಕೂಡಲೇ ಜಮಿಯಾಕ್ಕೆ ಧಾವಿಸಿದರು. ಈ ಸಂಸ್ಥೆಯ ಸ್ಥಿತಿ ಅತ್ಯಂತ ಶೋಚನೀಯ ವಾಗಿತ್ತು. ಅದನ್ನು ಅಲಿಘರ್‌ನಿಂದ ದಿಲ್ಲಿಗೆ ಸ್ಥಳಾಂತರಿಸ ಲಾಗಿತ್ತು. ರಾಜಕಾರಣಿಗಳು, ಮುಖ್ಯವಾಗಿ ಖಿಲಾಫತ್ ಅಂದೋಲನದವರು ಶಿಕ್ಷಣ ಕಾರ್ಯದಲ್ಲಿ ಪ್ರಾರಂಭದಲ್ಲಿ ತುಂಬಾ ಹುಮ್ಮಸ್ಸು ತೋರಿದ್ದರು. ಈಗ ಅದೆಲ್ಲ ಮಾಯವಾಗಿತ್ತು. ಶಿಕ್ಷಕರಿಗೆ ಸರಿಯಾಗಿ ಸಂಬಳ ಸಹ ಸಿಗುತ್ತಿರಲಿಲ್ಲ. ಇವೆಲ್ಲ ಸಂಗತಿಗಳು ಜಾಕಿರರಿಗೆ ಜರ್ಮನಿ ಯಲ್ಲಿಯೇ ಗೊತ್ತಾಗಿದ್ದವು. ಭಾರತಕ್ಕೆ ಬಂದು ನೋಡಿದರೆ ಅವರು ಎಣಿಸಿದುದಕ್ಕಿಂತ ಪರಿಸ್ಥಿತಿ ಹೆಚ್ಚು ನಿರಾಶಾ ದಾಯಕವಾಗಿತ್ತು.

ಆದರೆ ಜಾಕಿರರು ಧೈರ್ಯಗೆಡಲಿಲ್ಲ. ತಮ್ಮ ಅಚಲ ಶ್ರದ್ಧೆಯಿಂದಲೇ ಕಾರ್ಯಕ್ಕೆ ತೊಡಗಿದರು. ಹಕೀಮ ಅಜಮಲಖಾನರು ತಮ್ಮ ಆಸ್ತಿಯನ್ನು ಮಾರಿ ಈ ಸಂಸ್ಥೆಗೆ ಸಹಾಯ ಮಾಡುತ್ತಿದ್ದರು. ಆದರೆ ಸಂಸ್ಥೆಗೆ ಶಾಶ್ವತವಾದ ಧನಸಹಾಯವಿಲ್ಲದೆ ಅದು ಬದುಕಲಾರದೆಂದು ಅವರಿಗೂ ಗೊತ್ತಿತ್ತು. ಆದುದರಿಂದ ಜಾಕಿರರು ಹಕೀಮ ಅಜಮಲಖಾನ್, ಡಾ. ಅನ್ಸಾರಿ ಮುಂತಾದವರನ್ನು ಮುಂದೆ ಮಾಡಿಕೊಂಡು ಧನಸಂಗ್ರಹಕ್ಕೆ ತೊಡಗಿದರು. ಆದರೆ ಕೆಲವೇ ತಿಂಗಳುಗಳಲ್ಲಿ ಹಕೀಮರು ನಿಧನಹೊಂದಿದರು. ಅಂದಿನಿಂದ ಜಮಿಯಾ ಹಾಗೂ ಜಾಕಿರರು ಅನಾಥರಾದರು.

ಜಾಕಿರರು ಈಗ ಎಲ್ಲ ಹೊಣೆಯನ್ನು ವಹಿಸಲು ಸಿದ್ಧರಾದರು. ಸಂಸ್ಥೆಯ ಪರಿಸ್ಥಿತಿಯಂತೂ ತೀರಾ ಹದಗೆಟ್ಟಿತ್ತು. ಇಂತಹ ಕಠಿಣ ಸಮಯದಲ್ಲಿ ಜಾಕಿರರಿಗೆ ಧೈರ್ಯ ಮತ್ತು  ಸಹಾಯವನ್ನು ನೀಡಿದವರೆಂದರೆ ಮಹಾತ್ಮ ಗಾಂಧಿಯವರು. ಅವರು ಮುಂದಾಗಿ, ೭೪ ಜನ ಸದಸ್ಯರ ಸ್ಥಾಪಕ ಸಮಿತಿಯನ್ನು ವಿಸರ್ಜಿಸಿ, ಜಮಿಯಾದ ಶಿಕ್ಷಕರನ್ನೊಳಗೊಂಡ ಅಂಜುಮಾನ-ಇ-ತಾಲೀಮ-ಮಿಲಿ (ರಾಷ್ಟ್ರೀಯ ಶಿಕ್ಷಣ ಮಂಡಲಿ)ಯನ್ನೂ ಸ್ಥಾಪಿಸಿ ಅದಕ್ಕೆ ಈ ಸಂಸ್ಥೆಯನ್ನು ಒಪ್ಪಿಸಿದರು. ಅಂದಿನಿಂದ ಜಾಕಿರರೇ ಕುಲಗುರುಗಳಾದರು. ಮಹಾತ್ಮ ಗಾಂಧಿಯವರು ಈ ಸಂಸ್ಥೆಯ ಹಿತರಕ್ಷಕರಲ್ಲಿ ಶ್ರೇಷ್ಠರಾಗಿಯೇ ಉಳಿದರು.

ಹೀಗೆ ೧೯೨೮ ರಲ್ಲಿ ಜಮಿಯಾದ ಕುಲಗುರುಗಳಾದ ಜಾಕಿರರು ೧೯೪೮ ರವರೆಗೆ, ಅಂದರೆ ಅಖಂಡ ಇಪ್ಪತ್ತು ವರ್ಷಗಳವರೆಗೆ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ದೇಶದಲ್ಲಿ ಅಸಹಕಾರ ಚಳವಳಿ, ಹಿಂದು-ಮುಸ್ಲಿಮರ ಕಲಹ, ಪ್ರಾಂತೀಯ ಸ್ವಯಂ ಆಡಳಿತ, ೧೯೪೨ರ ಕ್ರಾಂತಿ, ಭಾರತದ ವಿಭಜನೆ, ಸ್ವಾತಂತ್ರ್ಯದ ಉದಯ-ಹೀಗೆ ಅನೇಕ ಐತಿಹಾಸಿಕ ಮಹತ್ವದ ಘಟನೆಗಳು ನಡೆದವು. ಜಗತ್ತಿನಲ್ಲಿ ೧೯೩೯ ರಿಂದ ೧೯೪೫ ರವರೆಗೆ ಎರಡನೆಯ ಮಹಾಯುದ್ಧ, ಅನಂತರ ಅದರ ದುಷ್ಪರಿಣಾಮಗಳು. ಹೀಗೆ ನಮ್ಮ ನಾಡಿನಲ್ಲೂ ನಾಡಿನ ಹೊರಗೂ ವಿಪ್ಲವದ ವಾತಾವರಣವಿತ್ತು. ಬ್ರಿಟಿಷ್ ಸರ್ಕಾರದ ಸಹಾಯವನ್ನಂತೂ ಈ ಸಂಸ್ಥೆ ಪಡೆಯಬಾರದೆಂದೇ ನಿರ್ಧರಿ ಸಿತ್ತು. ಆದುದರಿಂದ ಜಾಕಿರರು ಸಂಸ್ಥಾನಿಕರು, ನವಾಬರು, ಸಿರಿವಂತರಿಂದ ಹಣ ಸಂಗ್ರಹಿಸಿ, ಈ ಸಂಸ್ಥೆಗೆ ಬಯಲು, ನಾಟಕಗೃಹ ಮೊದಲಾದವು ಗಳನ್ನು ಕಟ್ಟಿಸಿದರು. ಉತ್ತಮ ಶಿಕ್ಷಕರನ್ನು ಕರೆತಂದು, ಶಿಕ್ಷಣದ ಮಟ್ಟವನ್ನೂ ಎತ್ತರಿಸಿದರು. ಬೇರೆಬೇರೆ ದೇಶಗಳ ವಿದ್ವಾಂಸರನ್ನು ಸಹ ಕರೆಸಿ, ಅವರಿಂದ ಭಾಷಣ ಮಾಡಿಸಿ, ಅವುಗಳನ್ನು ಅಚ್ಚುಹಾಕಿಸಿದರು. ತಾವೇ ಸ್ವತಃ ವಿಚಾರಪ್ರಚೋದಕ ಪ್ರೌಢಗ್ರಂಥಗಳನ್ನು, ಬಾಲಕರಿಗೆ ರುಚಿಸುವಂತಹ ಪಠ್ಯಪುಸ್ತಕಗಳನ್ನು ಬರೆದರು. ಜಮಿಯಾಕ್ಕೆ ಅವಶ್ಯಕವಾದ ಎಲ್ಲ ಪುಸ್ತಕಗಳನ್ನು ಜಮಿಯಾದ ಶಿಕ್ಷಕರೇ ಸಿದ್ಧಪಡಿಸಬೇಕೆಂದು ಅವರ ಹಂಬಲ. ಅದಕ್ಕೊಂದು ಪ್ರಕಾಶನ ವಿಭಾಗವನ್ನೇ ಪ್ರಾರಂಭಿಸಿದರು. ಪ್ರಾಥಮಿಕದಿಂದ ಮೊದಲುಗೊಂಡು ಅತ್ಯಂತ ಉಚ್ಚ ಮಟ್ಟದವರೆಗೆ ಎಲ್ಲ ವಿಭಾಗಗಳಲ್ಲಿಯೂ ಶಿಕ್ಷಣವನ್ನು ನೀಡುವ ಸೌಕರ್ಯಗಳನ್ನು ಕಲ್ಪಿಸಿಕೊಂಡರು.

ದೇಶದಲ್ಲಿ ಹಾಗೂ ಹೊರಗೆ ಅತ್ಯಂತ ವಿಷಮ ವಾತಾವರಣವಿರುವಾಗ ಇಂತಹ ಸಂಸ್ಥೆಯನ್ನು ಅದರಲ್ಲಿಯೂ ರಾಷ್ಟ್ರೀಯ ಭಾವನೆಯ ಮುಸ್ಲಿಮ್ ಸಂಸ್ಥೆಯನ್ನು ಕಟ್ಟಿದುದು ಜಾಕಿರರ ಸಾಹಸವೇ ಸರಿ. ಅವರು ತಮ್ಮ ಸಹೋದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಅನುಮತಿಯನ್ನು ನಿಡುತ್ತಿದ್ದರು. ಆದರೆ ಸಂಸ್ಥೆಯನ್ನು ಮಾತ್ರ ಈ ಎಲ್ಲ ಗೊಂದಲಗಳಿಂದ ದೂರವಿಟ್ಟಿದ್ದರು. ಜಾಕಿರರು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸುಭಾಷ್‌ಚಂದ್ರ ಬೋಸ್ ಇಂತಹ ನೇತಾರರ ವಿಶ್ವಾಸವನ್ನು ಗಳಿಸಿಕೊಂಡಿದ್ದರು. ಅವರೊಡನೆ ನಿಕಟ ಸಂಪಕವನ್ನೂ ಇಟ್ಟುಕೊಂಡಿದ್ದರು. ಆದರೆ ರಾಜಕೀಯ ಗೊಂದಲದಿಂದ ದೂರವಿರುತ್ತಿದ್ದರು. ಇವರ ಕ್ಷೇತ್ರ ಶಿಕ್ಷಣ. ಅದಕ್ಕೆ ಅವರು ತಮ್ಮ ಸರ್ವಸ್ವವನ್ನೂ ಮೀಸಲಾಗಿಟ್ಟಿದ್ದರು.

ಜಮಿಯಾದ ಗುರಿ

ಜಮಿಯಾದ ಮುಖ್ಯ ಉದ್ದೇಶವು ಇಸ್ಲಾಂ ಸಂಸ್ಕೃತಿ ಯನ್ನು ಭಾರತೀಯ ಮುಸ್ಲಿಮರಲ್ಲಿ ಜೀವಂತವಾಗಿ, ಅರ್ಥ ಪೂರ್ಣವಾಗಿ ಉಳಿಸಿ, ಬೆಳೆಸುವುದಾಗಿತ್ತು. ಜಾಕಿರರು ಅತ್ಯಂತ ಶ್ರದ್ಧಾವಂತರಾದ ಮುಸ್ಲಿಮರಾಗಿದ್ದರೂ ಗೊಡ್ಡು ಸಂಪ್ರದಾಯಗಳಿಗೆ ಜೋತುಬಿದ್ದವರಲ್ಲ. ಅವರ ಪ್ರಗತಿಪರ ದೃಷ್ಟಿಕೋನದಿಂದ ಮತೀಯ ವಿಷಯಗಳನ್ನು ಅರ್ಥ ಮಾಡಿಕೊಂಡು ಆಚರಿಸುತ್ತಿದ್ದರು. ಇದರಿಂದ ಕೆಲ ಸನಾತನಿಗಳ ಅಸಂತುಷ್ಟತೆ ಯನ್ನು ಎದುರಿಸುವ ಪ್ರಸಂಗವೂ ಅವರಿಗೆ ಬಂದಿತ್ತು.

ತಮ್ಮ ವಿದ್ಯಾಸಂಸ್ಥೆಗಳ ವಿಷಯವಾಗಿ ಅವರೇ ೧೯೩೭ ರಲ್ಲಿ ಮಾಡಿದ ಒಂದು ಭಾಷಣದಲ್ಲಿ ಹೀಗೆಂದರು:

“ಈ ವಿದ್ಯಾಸಂಸ್ಥೆಗಳು ಇಸ್ಲಾಂನ ಆದರ್ಶಗಳುಳ್ಳ ಮುಸ್ಲಿಮ್ ಸಂಸ್ಥೆಗಳೇ……ಆದರೆ ಮುಸ್ಲಿಮರಾಗಿ ನಾವು ಕೆಲವು ಆದರ್ಶಗಳಿಗೆ ಬದ್ಧರಾದರೆ ಅದರಿಂದಾಗಿ ತಪ್ಪು ಭಾವನೆ ಹೊಂದಿ ವಾಸ್ತವಿಕ ಸ್ಥಿತಿಯನ್ನು ವಿದ್ಯಾರ್ಥಿಗಳು ಮರೆಯುವುದಿಲ್ಲ.

ಈ ಆದರ್ಶಗಳು ಇವು: ಸ್ವಾತಂತ್ರ್ಯವನ್ನು ಸಂಪಾದಿಸಿ ಬೆಳೆಸುವುದು, ಎಲ್ಲ ಬಗೆಯ ಗುಲಾಮಗಿರಿಯನ್ನು ಭೂಮಿಯಿಂದ ತೊಡೆದುಹಾಕುವುದು,……ಹಣದಿಂದ ಪ್ರತಿಷ್ಠಿತ ರಾಗದೆ ಸುಗುಣದಿಂದ ಪ್ರತಿಷ್ಠಿತರಾದವರ ವರ್ಗವನ್ನು ಸ್ಥಾಪಿಸು ವುದು. ಈ ಎಲ್ಲ ಕೆಲಸವನ್ನೂ ನಾವು ಮೊಟ್ಟ ಮೊದಲು ಮಾಡಬೇಕಾದ್ದು ಈ ನಮ್ಮ ಪ್ರೀತಿಯ ನಾಡಿನಲ್ಲಿ. ಈ ದೇಶದ ಮಣ್ಣಿನಿಂದ ನಮ್ಮ ದೇಹ ಆಗಿದೆ, ಈ ದೇಶದ ಮಣ್ಣಿಗೇ ನಾವು ಹಿಂದಕ್ಕೆ ಹೋಗುವುದು.”

ವಿಶ್ವವಿದ್ಯಾಲಯಗಳಲ್ಲಿ ಕಲಿಸಬಹುದಾದ ಎಲ್ಲ ಮಾನವಿಕ ಹಾಗೂ ಶಾಸ್ತ್ರೀಯ ವಿಷಯಗಳ ಅಭ್ಯಾಸಕ್ಕೆ ಜಮಿಯಾದಲ್ಲಿ ಅನುವು ಮಾಡಿಕೊಡಲಾಗಿತ್ತು. ಆದರೆ ಶಿಕ್ಷಣಕ್ರಮ, ವಿದ್ಯಾರ್ಥಿ -ಶಿಕ್ಷಕರ ಸಂಬಂಧ, ವಿದ್ಯಾರ್ಥಿಗಳ ಜೀವನಕ್ರಮ ಮುಂತಾದ ವಿಷಯಗಳಲ್ಲಿ ಜಮಿಯಾ ಸಂಸ್ಥೆಯ ರೀತಿಯೇ ವಿಶಿಷ್ಟವಾಗಿತ್ತು. ಎಲ್ಲ ವಿಷಯ ಗಳಲ್ಲಿಯೂ ಒಳ್ಳೆಯ ನಡತೆಗೆ ಪ್ರಾಧಾನ್ಯ. ಅಂತಸ್ತು, ಸಿರಿವಂತಿಕೆ, ಆಡಂಬರ ಮುಂತಾದವುಗಳಿಗೆ ಸ್ಥಾನವಿಲ್ಲ. ಸಮರ್ಥ ವಿದ್ಯಾರ್ಥಿಗಳು ಮುಂದುವರಿಯಲು ನಿಯಮಗಳಾಗಲೀ ಬಡತನವಾಗಲೀ ಅಡ್ಡ ಬರುವಂತಿರಲಿಲ್ಲ.

ಜಮಿಯಾದ ಎಲ್ಲ ಶಿಕ್ಷಕರೂ ಕೇವಲ ೧೫೦ ರೂಪಾಯಿಗಳ ಮಾಸಿಕ ವೇತನದಿಂದ ತೃಪ್ತರಾಗುತ್ತಿದ್ದರು.

೧೯೪೮ ರಲ್ಲಿ, ಇಪ್ಪತ್ತು ವರ್ಷಗಳ ಸೇವೆಯನಂತರ ಜಾಕಿರರು ಈ ಸಂಸ್ಥೆಯನ್ನು ಬಿಟ್ಟಾಗ ಅವರ ಸಂಬಳ-ಎಪ್ಪತ್ತೈದು ರೂಪಾಯಿ!

ಇಸ್ಲಾಂನ ಮತ-ಸಂಸ್ಕೃತಿಗಳಲ್ಲಿ ವಿದ್ಯಾರ್ಥಿಗಳ ಶ್ರದ್ಧೆಯನ್ನು ಬಲಗೊಳಿಸುವುದು, ಅವರ ಶೀಲಸಂವರ್ಧನೆ, ಅವರನ್ನು ಆಧುನಿಕ, ಪ್ರಗತಿಪರ ಮಾರ್ಗಕ್ಕೆ ಹಚ್ಚುವುದು-ಈ ಉದ್ದೇಶಗಳೊಂದಿಗೆ ಜಮಿಯಾ ಇನ್ನೊಂದು ಘನವಾದ ಗುರಿಯನ್ನು ಇಟ್ಟುಕೊಂಡಿತ್ತು. ಅದೆಂದರೆ ಮುಸ್ಲಿಮರನ್ನು ಭಾರತದ ಒಳ್ಳೆಯ ಪ್ರಜೆಗಳನ್ನಾಗಿ ತರಬೇತುಗೊಳಿಸುವುದು. ಪ್ರತಿಯೊಬ್ಬ ಮುಸ್ಲಿಮನೂ ಭಾರತದ ಬಗ್ಗೆ ಪ್ರೇಮ-ಗೌರವಗಳನ್ನು ಬೆಳೆಸಿಕೊಂಡು, ಭಾರತದ ಸರ್ವಾಂಗೀಣ ಉನ್ನತಿಗಾಗಿ ತನು-ಮನ-ಧನಗಳಿಂದ ದುಡಿಯಬೇಕು. ಭಾರತದ ಪ್ರಜೆಗಳಿಗಿರುವ ಹಕ್ಕು-ಹೊಣೆಗಾರಿಕೆಗಳನ್ನು ಅರಿತುಕೊಂಡು ಅವುಗಳನ್ನು ಜೀವನದಲ್ಲಿ ಸಾಧಿಸಿ ಕೊಳ್ಳಬೇಕು. ಇದಕ್ಕಾಗಿ ಹಿಂದುಗಳೊಡನೆ ನೆಮ್ಮದಿಯಿಂದ, ಪ್ರೀತಿಯಿಂದ, ಗೌರವದಿಂದ ಬಾಳಬೇಕು. ಈ ತತ್ವಗಳನ್ನು ಜಾಕಿರರೂ ಉಳಿದ ರಾಷ್ಟ್ರೀಯ ಮುಸ್ಲಿಮರೂ ಗಟ್ಟಿ ಯಾಗಿ ನಂಬಿದ್ದರು. ಜಾಕಿರರಂತೂ ಹಿಂದುಗಳ ಬಗ್ಗೆ ಅಪಾರ ವಿಶ್ವಾಸ-ಗೌರವಗಳನ್ನು ತೋರುತ್ತಿದ್ದರು. ಬ್ರಿಟಿಷರ

ಕುತಂತ್ರದಿಂದ ಹೊತ್ತಿ ಬೆಳೆದ ಹಿಂದು-ಮುಸಲ್ಮಾನರ ದ್ವೇಷಾಗ್ನಿಯನ್ನು ನಿರ್ಮೂಲ ಮಾಡಲು ಹೆಣಗಿದ ಹಿರಿಯ ನಾಯಕರಲ್ಲಿ ಜಾಕಿರರು ಗಣನೀಯರಾದವರು. ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಹಲವರು ಅವರನ್ನು ವಿರೋಧಿಸಿದರು, ಜರೆದರು. ಆದರೆ ಜಾಕಿರ್ ಹುಸೇನರು ತಮ್ಮ ಮಾರ್ಗದಿಂದ ಕದಲಲಿಲ್ಲ.

ನಯೀ ತಾಲೀಮ್

ಜಾಕೀರರು ನಾಡಿನ ಶಿಕ್ಷಣ ಕ್ರಮದ ಸುಧಾರಣೆಗೆ ಯತ್ನಿಸುತ್ತಿದ್ದರು. ಮಹಾತ್ಮ ಗಾಂಧಿಯವರು ಈ ಬಗ್ಗೆ ಒಂದು ಯೋಜನೆಯನ್ನು ಸಿದ್ಧಪಡಿಸಿ, ಅಖಿಲ ಭಾರತೀಯ ಶಿಕ್ಷಣ ತಜ್ಞರ ಸಮ್ಮೇಳನವನ್ನು ೧೯೩೭ ರ ಅಕ್ಟೋಬರ್‌ನಲ್ಲಿ ಕರೆದರು. ಅವರ ಯೋಜನೆಗೆ ಮೂಲ ಶಿಕ್ಷಣ ಯೋಜನೆ ಅಥವಾ ನಯೀ ತಾಲೀಮ್ (ಹೊಸ ಶಿಕ್ಷಣ) ಎಂದು ಹೆಸರು. ತಮ್ಮ ಯೋಜನೆಯನ್ನು ಈ ಸಮ್ಮೇಳನದ ಅನುಮತಿಯಿಂದ ಗಾಂಧೀಜಿ ಜಾಕಿರರಿಗೆ ಒಪ್ಪಿಸಿದರು. ಜಾಕಿರರು ಅದನ್ನು ಕೂಲಂಕಷವಾಗಿ ಪರಿಶೀಲಿಸಿ, ಅದಕ್ಕೊಂದು ನಿಶ್ಚಿತ ಸ್ವರೂಪ ವನ್ನು ಕೊಟ್ಟರು. ಅದರ ಪ್ರಯೋಗವನ್ನು ಸಹ ಜಮಿಯಾ ದಲ್ಲಿಯೇ ಕೈಗೊಳ್ಳಲಾಯಿತು.

ಒಂದು ಮಾರ್ಗ ಹುಡುಕಿ

ನಯೀ ತಾಲೀಮಿನ ಯೋಜನೆ ಸಿದ್ಧವಾಗಿ ಅದು ಜಾರಿಯಲ್ಲಿ ಬರುವ ಹೊತ್ತಿಗೆ ೧೯೩೯ರ ಎರಡನೆಯ ಮಹಾಯುದ್ಧ ಪ್ರಾರಂಭವಾಯಿತು. ಕಾಂಗ್ರೆಸ್ ಮಂತ್ರಿ ಮಂಡಲಗಳು ಅಧಿಕಾರತ್ಯಾಗ ಮಾಡಿದವು. ದೇಶದಲ್ಲಿ ೧೯೪೨ ರ ವಿಪ್ಲವ ಮೊದಲಾಯಿತು. ೧೯೪೫ ರಲ್ಲಿ ಯುದ್ಧ ಮುಗಿವ ಹೊತ್ತಿಗೆ ಭಾರತದ ಸ್ವಾತಂತ್ರ್ಯದ ಬಗ್ಗೆ, ವಿಭಜನೆಯ ಬಗ್ಗೆ ನಾನಾರೀತಿಯ ಅಂದೋಲನಗಳು ನಡೆದವು. ಮತೀಯ ದಂಗೆ, ಕೊಲೆ, ಸುಲಿಗೆ, ವಿನಾಶಗಳು ದೊಡ್ಡ ಪ್ರಮಾಣದಲ್ಲಿ ಜರುಗಿದವು. ಸಾವಿರಾರು ಜನರು ಸತ್ತರು. ಅನೇಕರು ನಿರ್ಗತಿಕರಾದರು. ನಾಗರಿಕತೆಯೇ ನಾಶವಾಗುವ ಲಕ್ಷಣಗಳು ಕಂಡುಬಂದವು. ಜಾಕಿರರ ಹೃದಯ ಕರಗಿ ನೀರಾಯಿತು. ಮಹಾತ್ಮ ಗಾಂಧಿಯವರಂತೆ ಇವರೂ ದೇಶದ ಒಕ್ಕಟ್ಟಿಗಾಗಿ, ಹಿಂದು-ಮುಸ್ಲಿಮರ ಮೈತ್ರಿಗಾಗಿ ಹೆಣಗುತ್ತಿದ್ದರು. ಈ ದುರಂತ ಸಮಯದಲ್ಲಿ ಜಾಕಿರರು ಎಲ್ಲ ರಾಜಕೀಯ ಮುಖಂಡರನ್ನೂ ಒಂದೆಡೆ ತರುವುದಕ್ಕಾಗಿ ಜಮಿಯಾದ ಬೆಳ್ಳಿ ಹಬ್ಬದ ಯೋಜನೆಯನ್ನು ಹಾಕಿ, ನಾಡಿನಲ್ಲೆಲ್ಲ ಸಂಚರಿಸಿ ಎರಡು ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದರು. ಬೆಳ್ಳಿ ಹಬ್ಬದ ಸಮಾರಂಭಕ್ಕೆ ಜಾಕಿರರು ಜವಾಹರ್‌ಲಾಲ್ ನೆಹರೂ, ರಾಜಗೋಪಾಲಚಾರಿ, ಮೌಲಾನಾ ಅಬುಲ್ ಕಲಾಮ್ ಆಜಾದ್, ಮಹಮ್ಮದ ಅಲಿ ಜಿನ್ನಾ, ಫಾತಿಮಾ ಜಿನ್ನಾ, ಲಿಯಾಕತ್ ಅಲಿಖಾನ್-ಹೀಗೆ ಭಿನ್ನ ಮತದ ನಾಯಕರನ್ನೆಲ್ಲ ಒಂದೇ ವೇದಿಕೆಯ ಮೇಲೆ ತಂದರು. ಅಂದಿನ ಅವರ ಭಾಷಣ ಎಲ್ಲರನ್ನೂ ಅಲುಗಾಡಿಸಿತು. “ದೇಶದಲ್ಲಿ ನಡೆದ ವಿಪ್ಲವ ಮಾನವತೆಗೇ ಭಾರತಕ್ಕೇ ಅಪಮಾನ. ನೀವೆಲ್ಲರೂ ರಾಜಕೀಯ ರಂಗದ ನಕ್ಷತ್ರಗಳಂತೆ. ನೀವೆಲ್ಲ ಒಂದೆಡೆ ಸೇರಿ, ವಿಚಾರಿಸಿ, ಒಂದು ಮಾರ್ಗವನ್ನು ಹುಡುಕಿರಿ, ನಾಡಿನಲ್ಲಿ ನಡೆದ ಅನಾಹುತ, ಅತ್ಯಾಚಾರಗಳನ್ನು ನಿಲ್ಲಿಸಿರಿ. ಸುಸಂಸ್ಕೃತ ಜೀವನದ ಅಡಿಗಲ್ಲನ್ನೇ ಈ ದೇಶದಲ್ಲಿ ಕಿತ್ತು ಹಾಕುವ ಘಟನೆಗಳನ್ನು ತಡೆಯಿರಿ” ಎಂದು ಅತ್ಯಂತ ಕಳಕಳಿಯಿಂದ ಬಿನ್ನವಿಸಿಕೊಂಡರು. ಎಲ್ಲ ಸಂತರ ವಚನಗಳಂತೆ ಜಾಕಿರರ ಮಾತೂ ರಾಜಕೀಯ ಕಿವಿಗಳಿಗೆ ಕೇಳಿಸಲಿಲ್ಲ. ದೇಶದ ವಿಭಜನೆ ತಪ್ಪಲಿಲ್ಲ.

ಪುನಃ ಅಲಿಘರಕ್ಕೆ

ಜಮಿಯಾಕ್ಕೆ ಶಾಶ್ವತ ನಿಧಿಯನ್ನು ಸಂಗ್ರಹಿಸಿ, ಅದಕ್ಕೆ ದೇಶದಲ್ಲಿ, ಜಗತ್ತಿನಲ್ಲಿ ಗೌರವದ ಸ್ಥಾನವನ್ನು ಕಲ್ಪಿಸಿ, ಅದು ತನ್ನ ಕಾಲುಗಳ ಮೇಲೆ ನಿಲ್ಲುವಂತಾದುದರಿಂದ ಜಾಕಿರರು ಅಲಿಘರ್ ವಿಶ್ವವಿದ್ಯಾಲಯದ ಉಪಕುಲಪತಿಗಳ ಸ್ಥಾನವನ್ನು ಸ್ವೀಕರಿಸಲು ಒಪ್ಪಿದರು. ಅಲ್ಲಿ ಅವರು ೧೯೪೮ ರಿಂದ ೧೯೫೬ ರವರೆಗೆ ಉಪಕುಲಪತಿಗಳಾಗಿ, ಅಲ್ಲಿಯ ವಿಷಮ ವಾತಾವರಣವನ್ನು ತಿಳಿಯಾಗಿಸಲು, ದುಷ್ಟಶಕ್ತಿಗಳನ್ನು ನಿರ್ಮೂಲನ ಮಾಡಲು ಹೆಣಗಿದರು. ವಿಶ್ವವಿದ್ಯಾಲಯಕ್ಕೆ ಅಪಾರ ಧನ ಸಂಗ್ರಹ ಮಾಡಿದರು. ವಿಶ್ವವಿಖ್ಯಾತ ಶಿಕ್ಷಕರನ್ನು ಕರೆತಂದರು. ವಿದ್ಯಾಥಿಗಳಲ್ಲಿ ರಾಷ್ಟ್ರಪ್ರೇಮವನ್ನು ಬಿತ್ತಿದರು. ತಮ್ಮ ಆರೋಗ್ಯವನ್ನೂ ಕಡೆಗಣಿಸಿ, ವಿದ್ಯಾರ್ಥಿಗಳ ಹಾಗೂ ವಿಶ್ವವಿದ್ಯಾಲಯದ ಹಿತಕ್ಕಾಗಿ ಎಂಟು ವರ್ಷಗಳವರೆಗೆ ದುಡಿದರು. ಅಲ್ಲಿ ಬಹು ಆಳವಾಗಿ ಬೇರುಬಿಟ್ಟ ಮತೀಯ ಶಕ್ತಿಗಳನ್ನು ಅಲುಗಾಡಿಸಲು ಶಕ್ತರಾಗದೆ ಅವರು ನಿರಾಸೆಯಿಂದ ಮರಳಿದರು.

ರಾಷ್ಟಾಧ್ಯಕ್ಷ ಜಾಕಿರರು

ಅಲಿಘರದಿಂದ ಮರಳಿಬಂದ ಕೆಲವೇ ದಿನಗಳಲ್ಲಿ ಜಾಕಿರರಿಗೆ ವಿಶ್ವಸಂಸ್ಥೆಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಭೆಗೆ ಭಾರತೀಯ ಶಿಷ್ಯಮಂಡಳದ ಉಪನಾಯಕರಾಗಿ ಹೋಗಲು ಕರೆ ಬಂದಿತು. ಅವರು ಪ್ಯಾರಿಸಿಗೆ ಹೋಗಿ ಆ ಸಭೆಯಲ್ಲಿ ಒಳ್ಳೆ ಪ್ರಭಾವವನ್ನು ಬೀರಿದರು. ಅನಂತರ ಜರ್ಮನಿಯಲ್ಲಿ ಸ್ವಲ್ಪ ದಿನವಿದ್ದು ತಮ್ಮ ಆರೋಗ್ಯವನ್ನು ಸುಧಾರಿಸಿಕೊಂಡರು. ಈ ಸಮಯದಲ್ಲಿಯೇ ಅವರನ್ನು ಬಿಹಾರದ ರಾಜ್ಯಪಾಲರೆಂದು ನಿಯಮಿಸಿದ ವಾರ್ತೆ ಬಂತು. ಅದನ್ನು ಅವರು ಒಮ್ಮೆಲೆ ಒಪ್ಪಲಿಲ್ಲ. ನೆಹರೂರವರು ಜಾಕಿರರನ್ನು ಒಲಿಸಿದರು. ಜಾಕಿರರು ೧೯೫೬ರಿಂದ ೧೯೬೨ರವರೆಗೆ ಬಿಹಾರದ ರಾಜ್ಯಪಾಲರಾಗಿ ಸಮರ್ಥ ರೀತಿಯಿಂದ ಕಾರ್ಯ ಮಾಡಿದರು.

 

ಜಾಕಿರ್ ಹುಸೇನರು ಭಾರತದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದು.

೧೯೬೨ರಲ್ಲಿ ಡಾಕ್ಟರ್ ರಾಧಾಕೃಷ್ಣನ್ ಅಧ್ಯಕ್ಷ ಪದವಿ ಯಿಂದ ನಿವೃತ್ತರಾದರು. ಜಾಕಿರ್ ಹುಸೇನರು ಅಧ್ಯಕ್ಷರಾಗಿ ಆಯ್ಕೆಯಾದರು. ಜಾಕಿರರು ಪ್ರಚಂಡ ಬಹುಮತದಿಂದ ಆಯ್ಕೆಯಾದರು. ಜಾಕಿರರು ಪ್ರಚಂಡ ಬಹುಮತದಿಂದ ಆರಿಸಿಬಂದದ್ದು, ಭಾರತ ಸಾರ್ವಜನಿಕ ಜೀವನದಲ್ಲಿ ಮತಕ್ಕೆ ಪ್ರಾಮುಖ್ಯ ಕೊಡುವುದಿಲ್ಲ ಎಂಬುದು ಸ್ಪಷ್ಟವಾಯಿತು. ಇಂತಹ ಅತ್ಯುನ್ನತ ಸ್ಥಾನಕ್ಕೆ ಆಯ್ಕೆ ಹೊಂದಿದರೂ ಜಾಕಿರರ ವಿನಯ, ಸೌಜನ್ಯ, ಸರಳತೆಗಳು ಎಂದಿನಂತೆ ಎದ್ದು ಕಾಣುತ್ತಿದ್ದವು. ಅವರು ರಾಷ್ಟ್ರಾಧ್ಯಕ್ಷ ಪದವಿಯನ್ನು ಸ್ವೀಕರಿಸುವ ಮುನ್ನ ಮಸೀದಿಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿ, ಅಲ್ಲಿ ನೆರೆದಿದ್ದ ಸಾಮಾನ್ಯ ಮುಸ್ಲಿಮರನ್ನೂ ಸಹ ಅಪ್ಪಿಕೊಂಡು ಗೌರವಿಸಿದರು. ಆಗ ದೆಹಲಿಯಲ್ಲಿದ್ದ ಶೃಂಗೇರಿಯ ಜಗದ್ಗುರು ಶಂಕರಾ ಚಾರ್ಯರನ್ನೂ ಕಂಡು ಅವರಿಗೆ ಹಣ್ಣು-ಕಾಯಿಗಳನ್ನು ಸಮರ್ಪಿಸಿ ನಮಸ್ಕಾರಮಾಡಿ ಅವರ ಆಶೀರ್ವಾದ ಪಡೆದರು. ಅದರಂತೆ ಜೈನ ಮುನಿಗಳ ದರ್ಶನ ಪಡೆದುಕೊಂಡು ಅವರ ಹರಕೆಯನ್ನೂ ಸಂಪಾದಿಸಿದರು. ಇವೆಲ್ಲ ಜಾಕಿರರ ಹೃದಯ ವೈಶಾಲ್ಯ, ನಿಜವಾದ ದೈವಭಕ್ತಿ ಮತ್ತು ಮತಾತೀತವಾದ ಭಾರತೀಯ ಸಂಸ್ಕೃತಿಯಲ್ಲಿಯ ಅವರ ವಿಶ್ವಾಸವನ್ನು ತೋರಿ ಸುತ್ತವೆ. ಅವರು ಪಾಟಯಾಲದ ಗುರುಗೋವಿಂದಸಿಂಗ್ ಭವನವನ್ನು ಉದ್ಘಾಟಿಸುತ್ತ, ಭಾರತೀಯ ಸಂಸ್ಕೃತಿಯನ್ನು ಘೋಷಿಸಿದ ರಾಮ, ಕೃಷ್ಣ, ಗೌತಮಬುದ್ಧ, ಮಹಾವೀರ, ಶಂಕರಾಚಾರ್ಯ, ರಾಮಾನುಜಾಚಾರ್ಯ, ಅಶೋಕ, ನಾನಕ್, ಕಬೀರ್, ಮುನಿಉದ್ದೀನ, ಸೂರದಾಸ, ತುಕಾರಾಮ, ಮೀರಾಬಾಯಿ, ಕಾಳಿದಾಸ, ತುಳಸೀದಾಸ, ಠಾಕೂರ್, ಗಾಂಧೀಜಿ ಈ ಎಲ್ಲರನ್ನೂ ಸ್ಮರಿಸಿದರು.

ಹೀಗೆ ಜಾಕಿರರ ಇಡೀ ಬಾಳೇ ಹಿಂದು-ಮುಸ್ಲಿಂರ ಒಗ್ಗಟ್ಟು, ಜನತೆಯ ಕಲ್ಯಾಣ, ನಾಡಿನ ಪ್ರಗತಿ ಇವಕ್ಕೇ ಮುಡಿಪಾಗಿತ್ತು.

ಜಾಕಿರ್ ಹುಸೇನರು ತಮ್ಮ ಆರೋಗ್ಯ-ಆರಾಮಗಳಿಗೆ ಎಂದೂ ಲಕ್ಷ್ಯಗೊಡಲಿಲ್ಲ. ಅನಾರೋಗ್ಯವನ್ನು ಕಡೆಗಣಿಸಿ, ಅಸ್ಸಾಮಿನ ಪ್ರವಾಸಕ್ಕೆ ಹೋದರು. ಮರಳಿ ಬಂದ ಕೆಲವೇ ದಿನಗಳಲ್ಲಿ ೧೯೬೯ರ ಮೇ ೩ರಂದು ಜಾಕಿರರು ಹೃದಯಸ್ತಂಬದಿಂದ ಕೊನೆಯುಸಿರೆಳೆದರು.

ರಾಷ್ಟ್ರವೆಲ್ಲ ಈ ಮಹಾ ಮಾನವನ ನಿಧನಕ್ಕಾಗಿ ಗೋಳಾಡಿತು. ಅವರು ಜಮಿಯಾದ ಮಸಣದಲ್ಲಿಯೇ ಚಿರಶಾಂತಿಯನ್ನು ಪಡೆಯಲು ಬಯಸಿದ್ದರು. ಅವರ ಇಚ್ಛೆಯನ್ನು ಪೂರೈಸಲಾಯಿತು.

ದೊಡ್ಡ ವ್ಯಕ್ತಿ

೧೯೩೩ ರಲ್ಲಿ ಅವರು ಒಂದು ಪ್ರಾಥಮಿಕ ಶಾಲೆಯ ಹುಡುಗರಿಗೆ ಸಿಹಿ ಹಂಚುತ್ತಿದ್ದರು.

ಮಧ್ಯೆ ಸೇವಕನೊಬ್ಬ ಬಂದು ಅವರ ಕಿವಿಯಲ್ಲಿ ಪಿಸುಗುಟ್ಟಿದ. ಅವರ ಪ್ರೀತಿಯ ಮಗಳು ರೆಹನ ತೀರಿಕೊಂಡಿದ್ದಳು.

ಅವರ ಮುಖ ಬಿಳಚಿಕೊಂಡಿತು. ಆದರೆ ಸಿಹಿ ತಿಂಡಿ ಹಂಚುತ್ತಲೇ ಇದ್ದರು. ತಮ್ಮ ಕೆಲಸ ಮುಗಿದ ಅನಂತರ ಮನೆಗೆ ಹೋದರು. ಯಾರೋ ಕೇಳಿದರು, “ಬರಲು ಯಾಕಿಷ್ಟು ತಡ?” ಜಾಕಿರ್ ಹುಸೇನರು ಹೇಳಿದರು: “ಮಕ್ಕಳು ಅಷ್ಟು ಸಂತೋಷವಾಗಿದ್ದರು, ನಾನು ಅಡ್ಡಿಪಡಿಸುವುದು ಹೇಗೆ?”

ರೆಹನಳನ್ನು ಕಂಡರೆ ಅವರಿಗೆಷ್ಟು ಪ್ರೀತಿ ಎಂದರೆ, ಅವಳು ತೀರಿಕೊಂಡನಂತರ ಎಷ್ಟೋ ರಾತ್ರಿ ಅವರು ಅತ್ತುಅತ್ತು ತಲೆದಿಂಬೆಲ್ಲ ತೊಯ್ದಿರುತ್ತಿತ್ತು.

೧೯೬೯ರಲ್ಲಿ ರಾಷ್ಟ್ರದ ಅಧ್ಯಕ್ಷರಾಗಿದ್ದಾಗ ಖಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದರು. ಹೂಗಳೆಂದರೆ ಅವರಿಗೆ ಪ್ರಾಣ. ತೋಟದಲ್ಲಿ ನಡೆದಾಡಲು ಹೊರಟರು. ಅವರ ಜೊತೆಗೆ ಎಂಟು-ಹತ್ತು ಮಂದಿ. ಅಲ್ಲಲ್ಲಿ ಕುಳಿತುಕೊಳ್ಳಲು ಬೆಂಚುಗಳಿದ್ದವು. ಕುಳಿತುಕೊಂಡು ವಿಶ್ರಾಂತಿ ತೆಗೆದುಕೊಳ್ಳುವಂತೆ ಅವರ ವೈದ್ಯರು ಮತ್ತೆ ಮತ್ತೆ ಹೇಳಿದರು. ಜಾಕಿರ್ ಹುಸೇನರು ಕೇಳಿಸದಿದ್ದವರಂತೆ ಮಾತನಾಡುತ್ತ ಮುಂದಕ್ಕೆ ಹೋದರು.

ಹಿಂದಿರುಗಿದ ಮೇಲೆ ಅವರ ಆಪ್ತರೊಬ್ಬರು ಕೇಳಿದರು: “ಹೀಗೇಕೆ ಮಾಡಿದಿರಿ? ಈಗ ತಾನೆ ಖಾಯಿಲೆಯಿಂದ ಎದ್ದಿದ್ದೀರಿ!”

ಭಾರತದ ಅಧ್ಯಕ್ಷರು ಉತ್ತರಿಸಿದರು: “ಏನು ಮಾಡಲಿ! ಪ್ರತಿ ಬೆಂಚಿನಲ್ಲಿ ನಾಲ್ಕೈದು ಮಂದಿ ಮಾತ್ರಾ ಕುಳಿತುಕೊಳ್ಳಲು ಸ್ಥಳವಿತ್ತು! ನನ್ನ ಜೊತೆಗೆ ಎಂಟು-ಹತ್ತು ಜನ ಇದ್ದರಲ್ಲ!”

ಶಿಕ್ಷಣ ಕ್ಷೇತ್ರದಲ್ಲಿ ಅವರ ಕೆಲಸ ಅಮೂಲ್ಯ. ಮುಸ್ಲಿಮ ರಲ್ಲಿ, ಭಾರತೀಯರಲ್ಲಿ ರಾಷ್ಟ್ರಸೇವೆಯ ಪ್ರಜ್ಞೆಯನ್ನು ಎಚ್ಚರಿಸಲು ಅವರು ಪಟ್ಟ ಶ್ರಮ ಅಚ್ಚರಿಗೊಳಿಸುವಂತಹದು. ಅವರ ತ್ಯಾಗ ಬಹು ದೊಡ್ಡದು. ಅಷ್ಟೆ ದೊಡ್ಡದು ಅವರ ಸಂಸ್ಕೃತಿ.

ಜಾಕಿರರು ಬಹು ದೊಡ್ಡ ಸ್ಥಾನಗಳನ್ನು ಅಲಂಕರಿಸಿದ ಬಹು ದೊಡ್ಡ ವ್ಯಕ್ತಿ.