ಕಳೆದ ನೂರು ವರ್ಷಗಳಲ್ಲಿ ಭೂಮಿಯ ಮೇಲೆ ಮಾನವನ ಅತಿಯಾದ ಚಟುವಟಿಕೆಗಳಿಂದ ಪರಿಸರಕ್ಕೆ ಬಿಡುಗಡೆಯಾಗುತ್ತಿರುವ ಹಸಿರುಮನೆ ಅನಿಲಗಳ (GHG) ದಟ್ಟೈಸುವಿಕೆಯ ಪರಿಣಾಮವೇ ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣವಾಗಿದೆ. ಈ ಹೆಚ್ಚಳವನ್ನು ತೋರಿಸುವ ಲಂಬರೇಖೆಯ ಉದ್ದ ಚಾಚಿಕೆಯು ಭೂಮಿಯ ಮೇಲ್ಮೈನ ಉಷ್ಣಾಂಶವು ೧ ರಿಂದ ೪ ಡಿಗ್ರಿ ಸೆ. ನಷ್ಟು ಹೆಚ್ಚಳವಾಗಿರುವುದನ್ನು ಸೂಚಿಸುತ್ತಿದೆ. ಇತ್ತೀಚಿನ ಸಂಶೋಧನೆಯ ಅಧ್ಯಯನಗಳ ಪ್ರಕಾರ ಕ್ರಮೇಣವಾಗಿ ಏರುತ್ತಿರುವ ಜಾಗತಿಕ ತಾಪಮಾನವು ಸಮುದ್ರದ ಮೇಲಿನ ಉಷ್ಣಾತಾ ಪರಿವಲಯ ಉಂಗುರದ ಸಂವಹನ ಶಕ್ತಿಯನ್ನು  ಅಷ್ಟೇ ಅನಿರೀಕ್ಷಿತ ಬಗೆಯಲ್ಲಿ ಮಂದಗೊಳಿಸುವುದರಿಂದ ಆಘಾತಕರ ರೀತಿಯಲ್ಲಿ ಚಳಿಗಾಲದ ಹವಾಮಾನ ವೈಪರೀತ್ಯಗಳಿಗೆ ಕಾರಣವಾಗಲಿದೆ. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಣ್ಣಿನ ತೇವಾಂಶದ ಮಟ್ಟ ತೀಕ್ಷ್ಣವಾಗಿ ಕಡಿಮೆಯಾಗುವುದು ಮತ್ತು ಬಿರುಗಾಳಿ ಬೀಸುವಿಕೆಗಳಿಂದ ವಿಶ್ವದ ಆಹಾರೋತ್ಪಾದನೆಯು ಗಮನಾರ್ಹವಾಗಿ ಕಡಿಮೆಯಾಗಲಿದೆ. ಈ ಪರಿಣಾಮ ಎದುರಿಸಲು ಸರಿಯಾದ ಸಿದ್ಧತೆಗಳಿಲ್ಲದಿರುವಾಗ ಭೂಮಿಯಲ್ಲಿ ಮನುಕುಲದ ಬದುಕುಳಿಯುವಿಕೆಯೇ ಬಹುಪಾಲು ಕುಂಠಿತವಾಗುವ ಸಂದರ್ಭವುಂಟಾಗಬಹುದು.

ಕಳೆದ ಎರಡು ದಶಕಗಳಲ್ಲಿ ಜಾಗತಿಕ ತಾಪಮಾನ ಏರಿಕೆಯು ವೇಗಗೊಳ್ಳುತ್ತಿರುವುದರೊಂದಿಗೆ, ಕಳೆದ ಶತಮಾನದಲ್ಲಿ ಭೂಮಿಯ ಮೇಲ್ಮೈ ಉಷ್ಣಾಂಶವು ೧ ಡಿಗ್ರಿ ಫ್ಯಾ.ನಷ್ಟು ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ವಿಜ್ಞಾನಗಳ ಆಕಡೆಮಿಯು ವರದಿ ಮಾಡಿದೆ. ಕಳೆದ ೫೦ ವರ್ಷಗಳಲ್ಲಿ ಉಂಟಾಗಿರುವ ಭೌಗೋಳಿಕ ತಾಪಮಾನದ ಹೆಚ್ಚಳಕ್ಕೆ ಮಾನವನ ಪರಿಸರ ವಿರುದ್ಧದ ಚಟುವಟಿಕೆಗಳೇ ಕಾರಣವಾಗಿದ್ದು ಇದರಿಂದ ವಾತಾವರಣದಲ್ಲಿನ ಹಸಿರುಮನೆ ಅನಿಲಗಳ ಮೂಲ ರಾಸಾಯನಿಕ ಅಂಶಗಳೇ ಬದಲಾವಣೆಗೊಂಡಿರುತ್ತವೆಂಬುದಕ್ಕೆ ಸಾಕ್ಷಿ ಪುರಾವೆಗಳು ಕಾಣುತ್ತಲಿವೆ. ಸಾಮಾನ್ಯವಾಗಿ ಬಹುಪಾಲು ಜನರು ವಾತಾವರಣದಲ್ಲಿ ಬದಲಾವಣೆ ಎಂದಾಕ್ಷಣ ತಾಪಮಾನದಲ್ಲಿ ಕ್ರಮೇಣ ಏರಿಕೆಯಾಗುತ್ತಿರುವುದೇ ಪ್ರಾಮುಖ್ಯವೆಂದು ಹಾಗೂ ಇತರ ವಾತಾವರಣದ ಅಂಶಗಳ ಬದಲಾವಣೆಗಳು ಪ್ರಾಮುಖ್ಯವಲ್ಲವೆಂದು ಭಾವಿಸುತ್ತಿದ್ದಾರೆ. ಆದರೆ ಮುಂದೆ ಇದು ಒಂದೇ ಸಮನೆ ಮುಂದುವರಿಯುತ್ತಾ ಹೋದಂತೆ ಭವಿಷ್ಯದಲ್ಲಿ ಇವೆರಡೂ ಒಂದೇ ಮಟ್ಟ ತಲುಪುವ ಸಾಧ್ಯತೆ ಕಂಡುಬಂದಿದೆ.

ವಾತಾವರಣದಲ್ಲಿನ ತೀವ್ರ ವ್ಯತ್ಯಾಸವು ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು ಭೂಮಿಯು ರೂಪುಗೊಂಡಾಗಿನಿಂದ ಹಲವು ಬಗೆಯ ಬದಲಾವಣೆಗಳಿಗೆ ಗುರಿಯಾಗಿದೆ. ಹವಾಮಾನವು ದಿನದಿನಕ್ಕೆ ಬದಲಾಗುವಂತೆ ವಾತಾವರಣವು ಕ್ರಮೇಣ ದಶಕಗಳಲ್ಲಿ, ಶತಮಾನಗಳಲ್ಲಿ ಮತ್ತು ದಶಮಾನಗಳಲ್ಲಿ ಬದಲಾಗುತ್ತಲೇ ಇರುತ್ತದೆ. ಆದರೆ ಇತ್ತೀಚೆಗೆ ಈ ಬದಲಾವಣೆಗಳು ಹೆಚ್ಚುಹೆಚ್ಚಾಗಿ ನಮ್ಮ ಅನುಭವಕ್ಕೆ ಬರುವ ಪ್ರಮಾಣದಲ್ಲಿ ನಡೆಯುತ್ತಿವೆ. ಐತಿಹಾಸಿಕ ಪುರಾವೆಗಳ ಪ್ರಕಾರ ಕಳೆದ ನೂರು ವರ್ಷಗಳಲ್ಲಿ ವಿಶ್ವವು ಹಿಂದೆಂದಿಗಿಂತ ಇಂದು ಹೆಚ್ಚು ವೇಗದಲ್ಲಿ ತಾಪಮಾನ ಹೆಚ್ಚಳಕ್ಕೆ ಗುರಿಯಾಗಿದೆ. ಇದನ್ನು  ನಿಯಂತ್ರಿಸದೇ ಹೋದಲ್ಲಿ ಪರಿಣಾಮಗಳು ತೀವ್ರ ಆಘಾತಕಾರಿಯಾಗುತ್ತವೆ. ಬ್ಯೂರೊ ಆಫ್‌ಮೀಟಿಯೊರಾಲಜಿಯ ವರದಿಯ ಪ್ರಕಾರ ವಿಶ್ವದ ವಾತಾವರಣವು ತೀವ್ರಗತಿಯಲ್ಲಿ ಬದಲಾವಣೆ ಹೊಂದುತ್ತಿದೆ. ಆಂತರಿಕ ಸರಕಾರಿ ವಾತಾವರಣ ತಜ್ಞರ ಸಮಿತಿ (IPCC) ಪ್ರಕಾರ ವಿಶ್ವತಾಪಮಾನಗಳು ೧೯೯೦ ರಲ್ಲಿದ್ದುದಕ್ಕಿಂತ ೨೧೦೦ರ ಹೊತ್ತಿಗೆ ೧.೪ ರಿಂದ ೫.೮ ಡಿಗ್ರಿರಷ್ಟು ಹೆಚ್ಚಾಗುವುದೆಂದು ನಿರೀಕ್ಷಿಸಲಾಗಿದೆ. ಹಸಿರುಮನೆ ಅನಿಲಗಳ ಬಿಡುಗಡೆಯು ನೊಲ್ಲದೆ ಹೋದಲ್ಲಿ ತಾಪಮಾನ ಏರುವಿಕೆಗಳ ಪರಿಣಾಮವಾಗಿ ಜನರಲ್ಲಿ ಹಸಿವು ಮತ್ತು ರೋಗರುಜಿನಗಳು ಹೆಚ್ಚಾಗುವ ಹಾಗೂ ಜಲಸಂಪನ್ಮೂಲಗಳು ಮತ್ತಷ್ಟು ಕುಂದಿಹೋಗುವ ಸಾಧ್ಯತೆಗಳು ಉಂಟಾಗುತ್ತವೆ. ವಿಜ್ಞಾನಿಗಳು ಹೇಳುವ ಪ್ರಕಾರ ಹವಾಮಾನ ವೈಪರೀತ್ಯಗಳು ಹೆಚ್ಚು ಹೆಚ್ಚು ಸಾರಿ ಹಾಗೂ ಹೆಚ್ಚಿನ ಅವಧಿಯವರೆಗೆ ಉಂಟಾಗುತ್ತಿರುವುದರಿಂದ ತೀವ್ರ ಪ್ರಮಾಣದ ಮಳೆ, ಬಿರುಗಾಳಿ, ಬರಗಾಲಗಳು ಹಾಗೂ ಪ್ರವಾಹಗಳಿಂದಾಗಿ ಸಮುದ್ರಮಟ್ಟದಲ್ಲಿ ಏರಿಕೆಗಳುಂಟಾಗಬಹುದು. ಭೂಮಿಯ ವಾತಾವರಣದ ತಾಪಮಾನ ಏರಿದಂತೆ ಸಮುದ್ರದ ಮೇಲ್ಮೈ ತಾಪಮಾನದಲ್ಲಿ ಏರಿಕೆಯುಂಟಾಗಿ ಧ್ರುವ ಪ್ರದೇಶಗಳಲ್ಲಿನ ಹಿಮ ಕರಗಿ ಸಮುದ್ರದ ನೀರಿನ ಉಷ್ಣತೆ ಮತ್ತಷ್ಟು ಹೆಚ್ಚಾಗುತ್ತದೆ.

ಏಕೆ ಹೀಗೆ ಆಗುತ್ತಿದೆ?

ನಮ್ಮ ಭೂಗ್ರಹವೇ ಒಂದು ಬೃಹತ್‌ಹಸಿರುಮನೆ ಇದ್ದಂತೆ. ನಮ್ಮ ವಾತಾವರಣದಲ್ಲಿನ ಅನಿಲಗಳು ಸೂರ್ಯಶಕ್ತಿಯನ್ನು ಗ್ರಹಿಸಿಕೊಂಡು ಭೂಮಿಯ ತಾಪಮಾನವನ್ನು ನಿರ್ದಿಷ್ಟಮಟ್ಟದಲ್ಲಿಡುತ್ತವೆ. ಭೂಮಿಯ ಸುತ್ತಲಿನ ಅನಿಲಗಳು ಭೂಮಿಯ ಸರಾಸರಿ ಉಷ್ಣತೆಯನ್ನು ೧೪ ಡಿಗ್ರಿ ಸೆ. ಮಟ್ಟದಲ್ಲಿಡುತ್ತವೆ. ಭೂಮಿಯ ಹೊರಸೂಸುವ ಅತಿ ಉದ್ದದ ವಿಕಿರಣಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ಹಸಿರುಮನೆ ಪರಿಣಾಮ ಎಂದು ಕರೆಯಲಾಗಿದೆ. ವೇಗವಾಗಿ ನಡೆಯುತ್ತಿರುವ ಕೈಗಾರಿಕೀಕರಣಗಳು, ತೀವ್ರ ಬೇಸಾಯ, ಅರಣ್ಯ ಪ್ರದೇಶಗಳ ವಿನಾಶಗಳ ಕಾರಣಗಳಿಂದಾಗಿ ಮಾನವ ಚಟುವಟಿಕೆಗಳು ಅತಿ ಹೆಚ್ಚಾಗಿ ನಡೆಯುತ್ತಿದ್ದು ಹಸಿರುಮನೆ ಅನಿಲಗಳ ದಟ್ಟೈಸುವಿಕೆ ತೀವ್ರವಾಗಿ ವಾತಾವರಣದ ತಾಪಮಾನ ಏರುವಿಕೆಗೆ ಕಾರಣವಾಗಿದೆ. ಕಳೆದ ನೂರು ವರ್ಷಗಳಲ್ಲಿ ಜಾಗತಿಕ ಉಷ್ಣಾಂಶದ ಸರಾಸರಿಯು ೦.೭೬ ಡಿಗ್ರಿ ಸೆ. ನಷ್ಟು ಹೆಚ್ಚಾಗಿದೆ.