ವಿಶ್ವ ಇಂದು ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಹವಾಮಾನ ವೈಪರೀತ್ಯ. IPCC ಸಂಸ್ಥೆ ಸ್ಥಾಪನೆಗೊಂಡಾಗಲೇ ಮಾನವನಿಂದ ಪ್ರಚೋದಿತವಾದ ಹವಾಮಾನ ವೈಪರೀತ್ಯದ ಸಮಸ್ಯೆ ಮೊಟ್ಟಮೊದಲಿಗೆ ವಿಜ್ಞಾನಿಗಳ ಮತ್ತು ಕಾರ್ಯನೀತಿ ನಿರೂಪಕರ ಗಮನಕ್ಕೆ ಬಂದಿತ್ತು. ಜಾಗತಿಕ ಹವಾಮಾನ ವೈಪರೀತ್ಯದ ಪರಿಣಾಮಗಳು ಬಹುಮುಖವಾಗಿದ್ದು ಇದರಿಂದ ವಿವಿಧ ಆರ್ಥಿಕ ಕ್ಷೇತ್ರಗಳ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಜರೂರು ಅಗತ್ಯವಾಗಿದೆ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಪರ ರಾಷ್ಟ್ರಗಳೆರಡೂ ಸೇರಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತಿರುವ ಹಸಿರುಮನೆ ಅನಿಲಗಳನ್ನು ಕಡಿಮೆ ಮಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಅತ್ಯಂತ ತುರ್ತಾಗಿ ತೆಗೆದುಕೊಳ್ಳಬೇಕಾಗಿದೆ.

ಕೃಷಿ ಮತ್ತು ಹವಾಮಾನ ಪರಸ್ಪರ ಅವಲಂಬಿತವಾದವು. ಹವಾಮಾನ ವೈಪರೀತ್ಯವು ಕೃಷಿ ಕ್ಷೇತ್ರದ ಮೇಲೆ ಜಾಗತಿಕ ಮಟ್ಟದಲ್ಲಿ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಬೀರುತ್ತಿರುವ ಪರಿಣಾಮಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ, ಈ ವೈಪರೀತ್ಯಗಳ ಹಾನಿಗೆ ಸಿಲುಕಿಕೊಳ್ಳುವ ಜನರಿಗೆ ಆಹಾರ ಒದಗಿಸುವ ದೃಷ್ಟಿಯಿಂಧ ಅರಿತುಕೊಳ್ಳುವುದು ತುಂಬಾ ಅಗತ್ಯವಾಗಿದೆ.

ಡಾ. ಎಂ.ಬಿ. ರಾಜೇಗೌಡ ಮತ್ತು ಸಹಲೇಖಕರು ಈ ತಾಂತ್ರಿಕ ಕೃತಿಯನ್ನು ಪ್ರಕಟಿಸುವಲ್ಲಿ ಬಹಳಷ್ಟು ಶ್ರಮವಹಿಸಿದ್ದಾರೆ. ಈ ಕೃತಿಯಲ್ಲಿ ಜಾಗತಿಕ ಮಟ್ಟದೊಮದಿಗೆ ಕರ್ನಾಟಕದ ಕೃಷಿಯ ಮೇಲೆ ಹೆಚ್ಚು ನಿರ್ದಿಷ್ಟವಾಗಿ ಪರಿಣಾಮ ಬೀರುವ ಹವಾಮಾನ ವೈಪರೀತ್ಯಗಳನ್ನು ಕುರಿತು ವಿಶ್ಲೇಷಿಸಲಾಗಿದೆ. ಅವರಿತೆ ನನ್ನ ಅಭಿನಂದನೆಗಳು. ಈ ಕೃತಿಯನ್ನು ವಿಜ್ಞಾನಿಗಳು ಉತ್ಸಾಹಪೂರ್ಣ ಪ್ರತಿಕ್ರಿಯೆಯಿಂದ ಸ್ವಾಗತಿಸುವರೆಂದು ಭಾವಿಸುತ್ತೇನೆ.

ಡಾ.ಪಿ.ಜಿ. ಚಂಗಪ್ಪ
ಕುಲಪತಿಗಳು
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು.