“ಯಾಕೇ ಇಷ್ಟೊಂದು ಕೆಮ್ಮುತ್ತಾ ಇದ್ದೀಯ? ಬಿಸಿ ಬಿಸಿ ಹಾಲಿಗೆ ಒಂದು ಚಿಟಿಕೆ ಅರಿಶಿಣ ಪುಡಿ ಹಾಕಿ ಕುಡೀಬಾರದಾ” ಅಜ್ಜಿಯ ಧ್ವನಿ ಅಡಿಗೆ ಮನೆಯಿಂದ ಕೇಳಿಸುತ್ತಿರುವಾಗಲೇ ಕಿರಣ್ ತಲೆನೋವೆಂದು ಅಳುತ್ತಾ ಒಳಗೆ ಬಂದ. ಅದಕ್ಕೆ  ಯಾಕೆ ಅಳುತ್ತೀ ಕಂದ? ಹಾಲಿನಲ್ಲಿ ಅರಿಶಿಣ ಅರೆದು  ತಲೆಗೆ ಲೇಪಿಸಿದರೆ ಹತ್ತು ನಿಮಿಶದಲ್ಲಿ ನಿನ್ನ ತಲೆನೋವು ಮಾಯವಾಗುತ್ತೆ ಎಂದ ಅಜ್ಜಿಯ ಮಾತು ಕೇಳಿ ಆಶ್ಚರ್ಯವಾಯಿತು. ಅಷ್ಟೊಂದು ಪ್ರಭಾವಶಾಲಿಯೇ ಈ ಅರಿಶಿಣ ಎಂದು ಯೋಚಿಸುತ್ತಿರುವಾಗಲೇ ಡಾ: ಅನ್ನಪೂರ್ಣ ಸಿಕ್ಕಿದ್ದು. ಅವರು ಹೇಳಿದ ಮಾತುಗಳನ್ನು ನೀವು ಕೇಳ್ತೀರಾ? ಅದೂ ನಮ್ಮ ಅರಿಶಿಣದ ಬಗ್ಗೆ. ನಮ್ಮ ಅರಿಶಿಣ ಎಂದು ಏಕೆ ಹೇಳ್ತಿದ್ದೀನಿ ಅಂದರೆ ಶತಮಾನಗಳಿಂದ ಆಯುರ್ವೇದ ಪದ್ಧತಿಯಲ್ಲಿ ಉಪಯೋಗಿಸಲ್ಪಡುತ್ತಿದ್ದ ಅರಿಶಿಣಕ್ಕೆ ಸೂಕ್ತ ದಾಖಲಾತಿಗಳಿಲ್ಲದ್ದರಿಂದ ಅಮೆರಿಕದಲ್ಲದ್ದ ಅನಿವಾಸಿ ಭಾರತೀಯರು ೧೯೯೫, ಮಾರ್ಚ್‌ನಲ್ಲಿ ಅರಿಶಿಣದ ಮೇಲೆ ಪೇಟೆಂಟ್ ಪಡೆಯುವುದರಲ್ಲಿ ಯಶಸ್ವಿಯಾದರು. ಆದರೆ, ಈ ಪೇಟೆಂಟನ್ನು ಪ್ರಶ್ನಿಸಿ ದೆಹಲಿಯ ಸಿ.ಎಸ್.ಐ.ಆರ್. (ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ) ಅಪೀಲ್ ಹಾಕಿತು. ಸುಧೀರ್ಘ ಚರ್ಚೆಯ ನಂತರ ಆ ಪೇಟೆಂಟನ್ನು ರದ್ದು ಗೊಳಿಸಲಾಯಿತು. ಮೊದಲಬಾರಿಗೆ,  ಒಂದು ದೇಶದ ಪಾರಂಪರಿಕ ಜ್ನಾನದ ಸ್ವಾಮ್ಯದ ಸನ್ನದನ್ನು ಇನ್ನೊಂದು ದೇಶಕ್ಕೆ  ಕೊಡಲು ಸಾಧ್ಯವಿಲ್ಲವೆಂದು ಘೋಷಿಸಿತು. ಈ ರೀತಿ ಪ್ರಗತಿಶೀಲ ರಾಷ್ಟ್ರವೊಂದು ಹಕ್ಕು ಸ್ವಾಮ್ಯಕ್ಕಾಗಿ (ಪೇಟೆಂಟ್)ಹೋರಾಟ ನಡೆಸಿದ್ದು ಸಹ ಇದೇ ಮೊದಲು. ಜೈವಿಕ ನಕಲನ್ನು (ಬಯೋ- ಪೈರೆಸಿ ) ನಿಲ್ಲಿಸುವುದರಲ್ಲಿ ಇಟ್ಟ ಮೊದಲಹೆಜ್ಜೆ ಇದಾಗಿದ್ದು ವಿಶೇಷ.  ಸೂಕ್ತ ಸಮಯದಲ್ಲಿ ಪ್ರತಿಭಟಿಸಿದ್ದರಿಂದ ಅದು ನಮ್ಮ ಅರಿಶಿಣವಾಗೇ ಉಳಿದಿದ್ದು ಈಗ ಇತಿಹಾಸ. ಮಹಿಳೆಯರಿಗೆ ಇದು ಸೌಭಾಗ್ಯ ಚಿನ್ಹೆ ಮಾತ್ರವಲ್ಲ, ಧಾರ್ಮಿಕ ವಿಧಿಗಳಿಗೆ, ಅಡಿಗೆ ಮನೆಗೆ, ಬೇಕೇ ಬೇಕು ಈ ಅರಿಶಿಣ. ಇದರ ಉಪಯೋಗ ಹೇಗೆ? ಎಂದು ಕೇಳಿದ್ದಕ್ಕೆ ಅನ್ನಪೂರ್ಣ ಹೇಳಿದ ಮಾತುಗಳು ಜೀವನದುದ್ದಕ್ಕೂ ನೆನಪಿನಲ್ಲಿಡುವಂತಹುದು.

 

ಟರ್ಮರಿಕ್ ಹಾರ್ವೆಸ್ಟ್,

  • ಶೀತದ ಗಂಟಲುನೋವಿಗೆ ಅರಿಶಿಣ, ಜೇನು ತುಪ್ಪ, ಹಾಲು ಬೆರೆಸಿ, ಹಚ್ಚಬೇಕು.
  • ಅರಿಶಿಣದ ಪುಡಿ, ಅಳಲೆಕಾಯಿ ಚೂರ್ಣ, ತುಳಸಿ, ಚಂದನ ಕಲೆಸಿ,ಹಚ್ಚಿದಾಗ ಇಸುಬು (ಹುಳಕಡ್ಡಿ) ನವೆ ಕಮ್ಮಿಯಾಗುತ್ತದೆ.
  • ಮಧ್ಯವಯಸ್ಸಿನಲ್ಲಿ ಕಾಡುವ “ಭಂಗು”ಕಮ್ಮಿಯಾಗಲು,ಅರಿಶಿಣದ ಜೊತೆ ಇಂಗು ತೇಯ್ದು ಬೆಣ್ಣೆ ಸೇರಿಸಿ ಹಚ್ಚಬಹುದು.
  • ಉಗುರು ಸುತ್ತಿಗೆ, ಅರಿಶಿಣಕ್ಕೆ ಸುಣ್ಣಸೇರಿಸಿ ಹಚ್ಚಿದಾಗ, ಬೇಗ ಗುಣವಾಗುತ್ತದೆ.
  • ಒಡೆದ ಹಿಮ್ಮಡಿಗೆ, ಅರಿಶಿಣಕ್ಕೆ ಉಪ್ಪು ಬೆರೆಸಿ, ಬಿಸಿ ಹರಳೆಣ್ಣೆ ಬೆರೆಸಿ ಹಚ್ಚಿದಾಗ ಹಿತವಾಗಿರುತ್ತೆ.
  • ಕಸ್ತೂರಿ ಅರಿಶಿಣಕ್ಕೆ ಮೊಸರು ಸೇರಿಸಿ  ಮುಖಕ್ಕೆ ಹಚ್ಚಿದರೆ, ಬೇಡದ ಕೂದಲು, ಮೊಡವೆ ನಿವಾರಣೆಯಾಗುತ್ತೆ.

ಒಣಗುತ್ತಿರುವ ಅರಿಶಿಣ.

 

  • ಇಷ್ಟೆಲ್ಲ ಔಷಧೀಯ ಗುಣಗಳಿರುವ ಅರಿಶಿಣ ಬೆಳೆಯದಿದ್ದರೆ ನಷ್ಟ ನಮಗೇ , ಬೆಳೆದೇ ಬಿಡೋಣ ಅನ್ನಿಸುತ್ತೆ ಅಲ್ವಾ? ಮೊದಲ ಮುಂಗಾರು ಮಳೆ ನೀರು ನೆಲ ಸೋಕಿದೊಡನೆ ಅರಿಶಿಣದ ಗೆಡ್ಡೆಗಳು ಮೊಳಕೆಯೊಡೆಯ ತೊಡಗುತ್ತವೆ. ಇದು ಗೆಡ್ಡೆ ನಾಟಿ ಮಾಡಲು ಸಕಾಲ. ಮೇ ತಿಂಗಳ ಕೊನೆಗೆ ನೆಟ್ಟ ಗಿಡ ಡಿಸೆಂಬರ್- ಜನವರಿಯ ವೇಳೆಗೆ ಕೊಯಿಲಿಗೆ ಬರುತ್ತೆ. ಕೃಷಿಕರ ದೊಡ್ಡ ಹಬ್ಬ ಮಕರ ಸಂಕ್ರಾಂತಿಯ ಸಮಯದಲ್ಲಿ ಹೊಸ ಅರಿಶಿಣದ ಗಿಡಗಳು ಗೆಡ್ಡೆ ಸಮೇತ ಮಾರಾಟವಾಗುತ್ತವೆ. ( ಹೊಸ ಅರಿಶಿಣದ ಗಿಡ, ಹೊಸ ಕಬ್ಬಿನ ಜಲ್ಲೆಗೆ ಪೂಜೆ ಮಾಡುವುದು ತಮಿಳುನಾಡಿನಲ್ಲಿ ಸಂಪ್ರದಾಯ. ಸಂಕ್ರಾಂತಿಯ ಹಿಂದಿನ ದಿನ, ಭೋಗಿಯ ಹಬ್ಬದ ವಿಶಿಷ್ಟ ಆಚರಣೆ) ಮಾರುಕಟ್ಟೆಯಲ್ಲಿ ಸಿಗುವ ಈ ಗೆಡ್ಡೆಗಳನ್ನೂ ನಾಟಿ ಮಾಡಿ ಹೊಸ ಗಿಡ ಬೆಳೆಸ ಬಹುದು. ನಾಟಿ ಮಾಡುವಾಗ ಕಾಂಪೋಸ್ಟ್ ಗೊಬ್ಬರದ ಜೊತೆಗೆ ಸ್ವಲ್ಪ ಟ್ರೈಕೋಡರ್ಮ ಬೆರೆಸಿ ಹಾಕಿದರೆ, ಗೆಡ್ಡೆ ಕೊಳೆ ರೋಗವನ್ನು ದೂರವಿಡ ಬಹುದು. ಎರೆಡು ತಿಂಗಳಿಗೊಮ್ಮೆ ಬೇವಿನ ಹಿಂಡಿ ಹಾಕಿದರೆ ಗೆಡ್ಡೆಗಳ ಗಾತ್ರ ಹೆಚ್ಚುವುದು ಕಂಡು ಬಂದಿದೆ.
  • ಅರಿಶಿಣದ ಎಲೆಗಳಲ್ಲೂ ಒಂದು ರೀತಿಯ ಸುವಾಸನೆ ಇರುತ್ತದೆ. ಹಬ್ಬಗಳಲ್ಲಿ ಮಾಡುವ ಸಿಹಿ ಕಾಯಿ ಕಡುಬು, ಉದ್ದಿನ ಕಡುಬು ಈ ಎಲೆಗಳಲ್ಲಿ ಸುತ್ತಿ ಮಾಡಿದರೆ ವಿಶೇಷ ಪರಿಮಳ ಬರುತ್ತದೆ. ಮಸಾಲೆ ಬೆರೆಸಿದ ಇಡ್ಲಿ ಹಿಟ್ಟನ್ನು ಈ ಎಲೆಯೊಳಗಿಟ್ಟು ಮಾಡಿದರೆ ಅದು ಸಹ ಪರಿಮಳಯುಕ್ತವಾಗಿರುತ್ತದೆ. ದಕ್ಷಿಣ ಕನ್ನಡದವರಿಗೆ ಇದು ಜನಪ್ರಿಯ ತಿಂಡಿ.

ಇದೀಗ ಕಿತ್ತ ಅರಿಶಿಣ.

  • ಕಾಡು ಅರಿಶಿಣ ಔಷಧಿಗಾದರೆ, ಕಸ್ತೂರಿ ಅರಿಶಿಣ ಸೌಂದರ್ಯ ಪ್ರಸಾಧನಗಳಿಗೆ ಸೂಕ್ತ. ಬೆಳೆ ಪದ್ಧತಿಯಲ್ಲಿ ಎರೆಡಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಹೆಚ್ಚಿನ ರೋಗ ರುಜಿನಗಳು ಇಲ್ಲವಾದರೂ, ಎಲೆಗಳನ್ನು ತಿನ್ನುವ ಹಸಿರು ಹುಳುವಿನ ಕಾಟ ಇದ್ದೇ ಇರುತ್ತದೆ. ಮಡಿಚಿ ಹೊಲಿದಿರುವಂತೆ ಕಾಣುವ  ಎಲೆಗಳನ್ನು ಕಂಡೊಡನೆ ಅವುಗಳನ್ನು ಕಿತ್ತು ಹಾಕಿದರೆ ಇದರ ಹಾವಳಿ ತಪ್ಪಿಸ ಬಹುದು. ಔಷಧಿ ಹೊಡೆಯುವ ಅವಶ್ಯಕತೆ ಬರಲಾರದು. ಗಿಡ ಸಂಪೂರ್ಣವಾಗಿ ಒಣಗಿದ ನಂತರ ಗೆಡ್ಡೆಗಳನ್ನು ಕೀಳ ಬಹುದು. ನಾಟಿಯಿಂದ ಕೊಯಿಲಿನ ವರೆಗೆ ಸುಮಾರು ಒಂಬತ್ತು ತಿಂಗಳುಬೇಕು.
  • ಅರಿಶಿಣದ ಪುಡಿ ಮಾಡುವುದು ಸ್ವಲ್ಪ ಶ್ರಮದ ಕೆಲಸ. ಚೆನ್ನಾಗಿ ತೊಳೆದ ಗೆಡ್ಡೆಗಳನ್ನು  ಸಣ್ಣ ಬಿಲ್ಲೆಗಳಾಗಿ ಕತ್ತರಿಸಿ ಚೆನ್ನಾಗಿ ಒಣಗಿಸ ಬೇಕು. ನಂತರ ಬೇಕೆಂದಾಗ ಪುಡಿ ಮಾಡ ಬಹುದು. ಇದಕ್ಕೆ ತನ್ನದೇ ಆದ ಬಣ್ಣ ಮತ್ತು ಸುವಾಸನೆ ಇರುತ್ತದೆ. ಅಂಗಡಿಯಿಂದ ತರುವ ಅರಿಶಿಣದ ಪುಡಿ ಕಲಬೆರಕೆ ಯಾಗುವ ಸಾಧ್ಯತೆಗಳಿರುತ್ತದೆ. ಹೆಚ್ಚು ಬಣ್ಣ ಬರಲು ಇದಕ್ಕೆ ರಸಾಯನಿಕ ಬಣ್ಣ (ಮೆಟಾನಿಲ್ ಯೆಲ್ಲೋ) ಬೆರೆಸಲಾಗುತ್ತದೆ. ಇದರ ಶುದ್ಧತೆ ಬಗ್ಗೆ ಜಾಗರೂಕತೆ ಅಗತ್ಯ. ಬೆಳೆಯಲು ಸಾಧ್ಯವಿಲ್ಲದವರು, ಮಾರುಕಟ್ಟೆಯಲ್ಲಿ ದೊರೆಯುವ ಅರಿಶಿಣ ಕೊಂಬುಗಳನ್ನು ತಂದು ಪುಡಿ ಮಾಡಿಕೊಳ್ಳ ಬಹುದು. ಸ್ವಾಭಾವಿಕವಾಗಿ ಇದರಲ್ಲಿರುವ ‘ಕರ‍್ಕ್ಯುಮಿನ್’ ಹಲವು ರೋಗಗಳಿಗೆ ಮದ್ದಾಗುವುದರಿಂದ ಆದಷ್ಟು ಶುದ್ಧ ಅರಿಶಿಣ ಬಳಸುವುದು ಸೂಕ್ತ.

(ಚಿತ್ರಗಳು : ಆರ್ ಎಸ್ ಶರ್ಮ)