ಜಾತಿ ಕುರಿತು ಚರ್ಚೆಯ ಮಾಡುವ ಅಗತ್ಯವಿದೆಯೆ?

ಮಾನವರ ಪ್ರತಿಯೊಂದು ಚಟುವಟಿಕೆಗಳಿಗೂ ಪ್ರತಿಫಲ ಅಪೇಕ್ಷೆ ಇರುತ್ತದೆ. ಹಾಗೆಯೆ ಪ್ರತಿಯೊಂದು ಕೆಲಸವನ್ನೂ ಇದು ಅಗತ್ಯವೊ ಅಲ್ಲವೊ ಎಂಬುದನ್ನು ಅಂದಾಜು ಮಾಡಿಯೇ ಮಾಡಲಾಗುತ್ತದೆ. ಇಂತಹ ಕೆಲಸಗಳು ಭೌತಿಕವಾಗಿರಬಹುದು ಇಲ್ಲವೆ ಬೌದ್ಧಿಕವಾಗಿರಬಹುದು. ಈ ಎರಡೂ ಕಡೆ ಒಂದಿಲ್ಲ ಒಂದು ಬಗೆಯ ಪ್ರತಿಫಲ ಅಪೇಕ್ಷೆ ಇದ್ದೇ ಇರುತ್ತದೆ. ಬೌದ್ಧಿಕ ವಲಯದಲ್ಲಿ ನಡೆಯುವ ಕೆಲವು ಕೆಲಸಗಳು ತಕ್ಷಣದ ಫಲ ಕೊಡುವಂತಿರುತ್ತವೆ. ಮತ್ತೆ ಕೆಲವು ದೀರ್ಘಕಾಲೀನ ಫಲ ಕೊಡುವಂತೆ ಇರುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದಾಗ, ಕನ್ನಡದ ವೈಚಾರಿಕ ವಲಯದಲ್ಲಿ ಇಂದು ಸಾಕಷ್ಟು ವಿಷಯಗಳು ಬೇರೆ ಬೇರೆ ವೇದಿಕೆಗಳಲ್ಲಿ ಮತ್ತು ಬೇರೆ ಬೇರೆ ರೂಪಗಳಲ್ಲಿ ಚರ್ಚೆಯಾಗುತ್ತಿವೆ. ಅದರಲ್ಲಿ ಕೆಲವು ಬರವಣಿಗೆಗೂ ಬರುತ್ತಿವೆ. ಅವನ್ನು ಕುರಿತ ಓದು ಪ್ರತಿಕ್ರಿಯೆ ಚರ್ಚೆ ಸಂವಾದಗಳೂ ನಡೆಯುತ್ತಿವೆ. ವರ್ತಮಾನದ ರಾಜಕಾರಣಕ್ಕೆ ಸಂಬಂಧಿಸಿದಂತೆ ಅದರ ಅತ್ಯಂತ ಮೇಲ್ಮಟ್ಟದ ಮಗ್ಗುಲುಗಳು ಮಾತ್ರ ಚರ್ಚೆಯ ವಸ್ತುವಾಗುತ್ತಿವೆ. ಅಂತಹ ಚರ್ಚೆಗಳು ಮುಜುಗರ, ಆಕ್ರೋಶ ಮುಂತಾದುವನ್ನು ಹುಟ್ಟಿಸಬಹುದಾಗಿದ್ದರೂ ಪರುಣಾಮದಲ್ಲಿ ಮಾತ್ರ ಅವು ಘಟಿಸುತ್ತಿಲ್ಲ. ಬದಲಿಗೆ ಅವೆಲ್ಲ ತಮಾಷೆಯ ಇಲ್ಲವೆ ಮನರಂಜನೆಯ ದೃತ್ಯಗಳಾಗುತ್ತಿವೆ. ದೃಶ್ಯ ಮಾಧ್ಯಮಗಳಲ್ಲಿ ದಿನಬೆಳಗಾದರೆ ಇವೇ ಸನ್ನಿವೇಶಗಳು, ದೃಶ್ಯಗಳು ಮತ್ತೆ ಮತ್ತೆ ಕಣ್ಣೆದುರಿಗೆ ಬರುತ್ತವೆ. ಇದರಲ್ಲಿ ಪ್ರೇಕ್ಷಕರಿಗೆ ಯಾವುದೇ ಆಯ್ಕೆಗಳಿಲ್ಲ. ಯಾವ ವಿಷಯಗಳನ್ನು ಸೂಕ್ಷ್ಮವಾಗಿ ಮತ್ತು ಚಿಕಿತ್ಸಕ ದೃಷ್ಟಿಯಿಂದ ಗ್ರಹಿಸಿ ಪ್ರತಿಕ್ರಿಯಿಸಬೇಕಿತ್ತೊ ಅಂತಹ ವಿಷಯಗಳ ಚರ್ಚೆಯನ್ನು ನಗೆಪಾಟಲಿಗೆ ಇಳಿಸಲಾಗಿದೆ. ಜೊತೆಗೆ ಒಂದು ವಿಷಯದ ಚರ್ಚೆಯು ಚರ್ಚೆ ಮಾಡುವವರ ಸಾಮಾಜಿಕ ಜವಾಬ್ದಾರಿಯಾಗಬೇಕಾಗಿದ್ದುದು, ಅವರ ಸಾಮಾಜಿಕ ಹೊಣೆಗಾರಿಕೆ ಯಾಗಬೇಕಿದ್ದುದು ಈಗ ಅದು ಕೇವಲ ಪ್ರಚಾರ, ಪ್ರಶಸ್ತಿ, ಕೀರ್ತಿ ಮತ್ತು ಹಣಗಳಿಕೆಯ ದಂದೆಯಾಗಿದೆ. ಈ ದಂದೆಯು ಸಾಮಾನ್ಯ ಊಹೆಯನ್ನೂ ಮೀರಿ ಅದೊಂದು ಬೌದ್ಧಿಕ ಮಾರುಕಟ್ಟೆಯಾಗಿ ಮತ್ತು ಬೌದ್ಧಿಕ ಮಾಫಿಯವಾಗಿ ಬೆಳೆದಿದೆ; ಬೆಳೆಯುತ್ತಿದೆ. ಅಂತರರಾಷ್ಟ್ರೀಯ ಫೆಲೊಶಿಪ್‍ಗಳು, ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳ ಆಹ್ವಾನಗಳು ಈ ಮಾಫಿಯದೊಳಗೇ ವಿಸ್ತಾರವಾಗುತ್ತಿವೆ. ಜೊತೆಗೆ ಆ ಮಾಫಿಯವನ್ನೂ ವಿಸ್ತಾರ ಮಾಡುತ್ತಿವೆ.

ವಿಷಯದ ಗಹನೆ ಮತ್ತು ಅದರ ಮಹತ್ವ ಏನು ಎಂಬುದರ ಬದಲಾಗಿ ಅದನ್ನು ಯಾರು ಹೇಳಿದರು ಎಂಬ ವ್ಯಕ್ತಿನಿಷ್ಠ ಅಂಧಾಭಿಮಾನ ಮುಂಚೂಣಿಗೆ ಬಂದಿದೆ. ಮಾರುಕಟ್ಟೆ ಪ್ರಣೀತ ಈ ಅಂಧಾಭಿಮಾನವು ವಿಚಾರಕ್ಕಿಂತ ವ್ಯಕ್ತಿ ಮುಖ್ಯ ಎಂಬ ಒತ್ತಡವನ್ನು ಪರೋಕ್ಷವಾಗಿ ರೂಪಿಸಿದೆ. ಪರಿಣಾಮವಾಗಿ ಬಂಡವಾಳಶಾಹಿ ಮಾರುಕಟ್ಟೆ, ಪ್ರಭುತ್ವ ಮತ್ತು ಸಾಮ್ರಾಜ್ಯಶಾಹಿ ಪ್ರಣೀತ ಕೆಲವು ಶಕ್ತಿಗಳು ಹಾಗೂ ಮೂಲಭೂತವಾದಿ ಶಕ್ತಿಗಳು ಚರ್ಚೆಯ ವಸ್ತುವಿಷಯ ಯಾವುದಾಗಬೇಕು ಮತ್ತು ಯಾವುದಾಗಬಾರದು ಎಂಬುದನ್ನು ನಿರ್ಧರಿಸುತ್ತಿವೆ. ಜೊತೆಗೆ ಅಂತಹ ವಿಷಯಗಳ ಚರ್ಚೆಗೆ ಬೇಕಾದ ಧೋರಣೆಗಳನ್ನೂ ಮತ್ತು ಮಾನದಂಡಗಳನ್ನೂ ನಿರ್ಮಾಣ ಮಾಡುತ್ತಿವೆ. ಸಮಾಜ ಒಳಗೋಳಗೆ ನರಳುತ್ತಿರುವ, ಕೊರಗುತ್ತಿರುವ, ಮತ್ತು ಯಾತನೆ ಪಡುತ್ತಿರುವ ವಸ್ತು ವಿಷಯಗಳು ಅಧ್ಯಯನದ ಕಕ್ಷೆಗೆ ಬರುತ್ತಿಲ್ಲ. ಯಾವ ವಿಷಯಗಳು ಮಾರುಕಟ್ಟೆಗೆ ಮತ್ತು ಆಳುವ ವರ್ಗಕ್ಕೆ ಲಾಭವನ್ನು ತರಬಲ್ಲವೊ ಅಂತಹ ವಿಷಯಗಳ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಅವುಗಳಿಗೆ ಮಾಧ್ಯಮಗಳು ಮನ್ನಣೆಯನ್ನೂ ಕೊಟ್ಟು ವ್ಯಾಪಕವಾಗಿ ಪ್ರಚಾರ ಮಾಡುತ್ತಿವೆ.

ಕಳೆದ ಶತಮಾನದ ೭೦-೮೦ರ ದಶಕವು ಹಲವು ಬಗೆಯ ಹೋರಾಟ ಮತ್ತು ಚಳುವಳಿಗಳ ಕಾವೇರಿಸಿಕೊಂಡಿತ್ತು. ಅದು ಹೋರಾಟಗಳ ಸಂಘಟನೆಯ ಕಾಲ. ಆ ಕಾಲದ ವಸ್ತುಸ್ಥಿತಿಯಲ್ಲಿ ನಿಂತು ೨೧ನೇ ಶತಮಾನದ ಆರಂಭದ ದಶಕವನ್ನು ನೋಡಿದರೆ ಇದು ಹೋರಾಟಗಳ ವಿಘಟನೆಯ ಕಾಲದಂತೆ ಭಾಸವಾಗುತ್ತದೆ. ಸಾಮಾಜಿಕ ವಸ್ತುಸ್ಥಿತಿಯೊಂದು ಹೋರಾಟ ಹಾಗೂ ಚಳುವಳಿಗಳಿಂದ ಸುತ್ತುವರಿದಿದ್ದರೆ ಆ ವಾತಾವರಣವೇ ವೈಚಾರಿಕ ಚರ್ಚೆಗಳಿಗೆ ಮತ್ತು ಅಧ್ಯಯನಗಳಿಗೆ ವಸ್ತುವಿಷಯಗಳನ್ನೂ ಹಾಗೂ ಅವುಗಳನ್ನು ಗ್ರಹಿಸುವ ಮಾನದಂಡಗಳನ್ನೂ ಕೊಡುತ್ತದೆ. ಆದರೆ ಮಾರುಕಟ್ಟೆಯ ಶಕ್ತಿಗಳೇ ಪ್ರಭುತ್ವ ಮತ್ತು ಎಲ್ಲಾ ಮಾಧ್ಯಮಗಳನ್ನೂ ನಿಯಂತ್ರಿಸುತ್ತಿರುವಾಗ ಆ ಶಕ್ತಿಗಳೇ ವೈಚಾರಿಕ ಚರ್ಚೆಗಳಿಗೆ ಮತ್ತು ಅಧ್ಯಯನಗಳಿಗೆ ವಸ್ತುವಿಷಯಗಳನ್ನೂ ಹಾಗೂ ಅವುಗಳನ್ನು ಗ್ರಹಿಸುವ ಮಾನದಂಡಗಳನ್ನೂ ಕೊಡುತ್ತಿವೆ. ಇದೆಲ್ಲದರ ಪರಿಣಾಮವಾಗಿ ಕಳೆದ ಸುಮಾರು ೨೦ ವರುಷಗಳಲ್ಲಿ ಹಸಿವು, ಬಡತನ, ನಿರುದ್ಯೋಗ, ಬೆಲೆ ಏರಿಕೆ, ಜಾತಿ, ಅಸ್ಪೃಶ್ಯತೆ ಮುಂತಾದ ವಿಷಯಗಳು ವಿಚಾರ ವಿಮರ್ಶೆ ಮತ್ತು ಅಧ್ಯಯನಗಳಿಗೆ ಮುಖ್ಯ ವಸ್ತು ಎನಿಸುತ್ತಿಲ್ಲ. ಇವುಗಳ ಬದಲಿಗೆ ಜ್ಯೋತಿಷ್ಯಶಾಸ್ತ, ವಾಸ್ತು, ಗ್ರಹಗತಿ, ಷೇರುಪೇಟೆ, ಬಂಡವಾಳದ ಅಭಿವೃದ್ಧಿ, ಹೋಟೆಲ್ ಮ್ಯಾನೇಜ್‌ಮೆಂಟ್, ಟೌನ್‍ಶಿಪ್, ವಾಣಿಜ್ಯ, ವ್ಯಾಪಾರ, ಸೂಕ್ಷ್ಮ ಬಂಡವಾಳ, ಕೋಮುವಾದ, ಭಯೋತ್ಪಾದನೆ ಇವೇ ಮುಂತಾದ ಹತ್ತು ಹಲವು ವಿಷಯಗಳು ಅಕಡೆಮಿಕ್ ವಲಯವನ್ನು ಆಕ್ರಮಿಸಿಕೊಂಡಿವೆ. ಇವುಗಳ ಬಗ್ಗೆ ಚರ್ಚೆ ಸಂವಾದಗಳು ನಡೆಯುತ್ತಿವೆ. ಲೇಖನಗಳು ಹಾಗೂ ಸ್ವತಂತ್ರ ಪುಸ್ತಕಗಳು ಪ್ರಕಟವಾಗುತ್ತಿವೆ. ವೈಚಾರಿಕ ವಲಯ ಮತ್ತು ಅಕಡೆಮಿಕ್ ವಲಯದ ಮೇಲೆ ಈ ಆಕ್ರಮಣವು ಎರಡು ರೀತಿಯಲ್ಲಿ ನಡೆದಿದೆ. ಒಂದು: ಮೊದಲು ಸೂಚಿಸಿದ ವಿಷಯಗಳೇ ಅಕಡೆಮಿಕ್ ವಲಯವನ್ನು ಆಕ್ರಮಿಸಿಕೊಂಡಿರುವುದು. ಎರಡು: ಮಾರುಕಟ್ಟೆಯ ಧೋರಣೆಗಳು ಮತ್ತು ಆಳುವ ವರ್ಗದ ಹಿತಾಸಕ್ತಿಗಳು ಆ ವಿಷಯಗಲನ್ನು ನೋಡಲು ಮಾನದಂಡಗಳಾಗಿ ಬಳಕೆಯಾಗುತ್ತಿರುವುದು. ವೈಚಾರಿಕವಾಗಿ ಈ ಎರಡೂ ಕೂಡ ಅಪಾಯಕಾರಿಗಳೇ ಹಾಗಾಗಿ ಈ ಅಪಾಯಗಳನ್ನು ಗುರುತಿಸುತ್ತಲೆ ಎತ್ತೀಚಿನ ವರುಷಗಳಲ್ಲಿ ಬದಿಗೆ ಸರಿಸಲಾಗಿರುವ ಜಾತಿ ಸಮಸ್ಯೆಯನ್ನು ಕುರಿತು ಇಲ್ಲಿ ಚರ್ಚಿಸಬೇಕಿದೆ.

ಜಾತಿ ಸಮಸ್ಯೆಯನ್ನು ಇಂದು ಅಕಡೆಮಿಕ್ ವಲಯದ ಆಸಕ್ತಿಯ ವಿಷಯ ಎಂದು ಭಾವಿಸುವುದು ಕಡಿಮೆಯಾಗಿದೆ. ಹೆಚ್ಚೆಂದರೆ ಅದು ಒಂದು ಬಗೆಯ ಫ್ಯಾಶನ್ ವಿಷಯವಾಗಿದೆ. ಒಂದು ಕಡೆ, ಜಾತಿ ಸಮಸ್ಯೆಯನ್ನು ಕುರಿತ ಚರ್ಚೆಯ ಹಿಂದೆ ಇರಬೆಕಾಗಿದ್ದ ಶೋಷಿತಪರ ಹೊಣೆಗಾರಿಕೆ ಮತ್ತು ಬದ್ಧತೆಗಳು ನಿಧಾನಕ್ಕೆ ಸಡಿಲವಾಗಿವೆ. ಮತ್ತೊಂದು ಕಡೆ ಆ ಹೊಣೆಗಾರಿಕೆ ಮತ್ತು ಬದ್ಧತೆಗಳನ್ನು ಶೋಷಕ ಶಕ್ತಿಗಳು ಉದ್ದೇಶಪೂರ್ವಕವಾಗಿ ಮತ್ತು ಸಂಘಟನಾತ್ಮಕವಾಗಿ ಸಡಿಲಗೊಳಿಸಿವೆ. ಇದು ಬೌದ್ಧಿಕ ವಲಯದ ವಾಸ್ತವ. ಇನ್ನು ಇದರ ಸಾಮಾಜಿಕ ವಾಸ್ತವ ಏನಾಗಿದೆ ಎಂದರೆ, ಅನೇಕ ಕೆಳಜಾತಿಗಳು ಮತ್ತು ಅಸ್ಪೃಶ್ಯ ಸಮುದಾಯಗಳು ಈಗಲೂ ಈ ಸಮಸ್ಯೆಯ ಬೆಂಕಿಯಲ್ಲಿ ಬೇಯುತ್ತಿವೆ. ಆಧುನಿಕತೆ, ಆಧುನೀಕರಣ, ಐ.ಟಿ., ಬಿ.ಟಿ. ಯುಗ ಹಾಗೂ ಕಂಪ್ಯೂಟರ್ ಯುಗ ಎಂದೆಲ್ಲಾ ಈ ಯುಗವನ್ನು ಒಂದು ಕಡೆ ಹೆಸರಿಸಲಾಗಿದೆ. ಆದರೆ ಭಾರತೀಯ ಸಮಾಜದ ಅತ್ಯಂತ ಹಳೆಯ ಸಮಸ್ಯೆಯಾದ ಈ ಜಾತಿ ಸಮಸ್ಯೆಯು ಸಡಿಲವಾಗುವ ಬದಲು, ದಿನಕ್ಕೊಂದು ಬಣ್ಣ ಪಡೆಯುತ್ತ, ದಿನಕ್ಕೊಂದು ರೂಪು ಪಡೆಯುತ್ತ ಅದು ಗಟ್ಟಿಗೊಳ್ಳುತ್ತಲೇ ಸಾಗಿದೆ. ಜಾತಿ ಸಮಸ್ಯಎಯ ಹಳೆಯ ಮುಖಗಳು ಅಥವಾ ಹಳೆಯ ಆಯಾಮಗಳು ಇಂದು ಬದಲಾಗಿವೆ. ಈ ಬದಲಾವಣೆ ನಮ್ಮ ಊಹೆ ಹಾಗೂ ಕಲ್ಪನೆಯನ್ನು ಮೀರಿ ಬದಲಾಗಿದೆ. ಬದಲಾಗುತ್ತಲೂ ಇದೆ. ಹೀಗೆ ನಿರಂತರವಾಗಿ ಬದಲಾಗುತ್ತ ಸಾಗಿರುವ ಇದರ ಹೊಸ ರೂಪಗಳನ್ನು ಮತ್ತು ಅದರ ಸಂಕೀರ್ಣ ಮುಖಗಳನ್ನು ಗುರುತಿಸುವುದು ಬಹಳ ಸೂಕ್ಷ್ಮವಾದ ಕೆಲಸ.

ಜಾತಿ ಸಮಸ್ಯೆಯು ಹೊಸ ಹೊಸ ರೂಪಗಳನ್ನು ಪಡೆಯುತ್ತಿರುವಂತೆ, ಈ ಹೊಸ ರೂಪದ ಸಮಸ್ಯೆಯ ಬೆಂಕಿಯಲ್ಲಿ ಕೆಲವರು ಮೈ ಕಾಯಿಸಿಕೊಳ್ಳುವವರಿದ್ದಾರೆ. ಮತ್ತೆ ಕೆಲವರು ಈ ಬೆಂಕಿಗೆ ತುಪ್ಪ ಸುರಿಯುವವರಿದ್ದಾರೆ. ಈ ಬೆಂಕಿಯನ್ನು ದೀಪವೆಂದು, ದಿವ್ಯ ಜ್ಯೋತಿಯೆಂದು ಭಾವಿಸುವವರೂ, ನಂಬಿಸುವವರೂ ಇದ್ದಾರೆ. ಹಾಗಾಗಿ ದಿನೇದಿನೇ ಜಾತಿ ಸಮಸ್ಯೆಯು ಬೇರೆ ಬೇರೆ ರೂಪಗಳನ್ನು ಪಡೆಯುತ್ತಿದೆ. ಜಾತಿ ಸಮಸ್ಯೆಯು ಇಂದು ಕೇವಲ ಜಾತಿ ಸಮಸ್ಯೆಯಾಗಿರದೆ ಅದು ಪ್ರಸ್ತುತ ರಾಜಕಾರಣ, ಪ್ರಭುತ್ವ, ಮಾಧ್ಯಮ, ಸಾರ್ವಜನಿಕ ಜೀವನ, ಸಾಂಸ್ಕೃತಿಕ ಹಾಗೂ ವೈಚಾರಿಕ ವಲಯಗಳನ್ನೂ ವ್ಯಾಪಿಸಿಕೊಂಡಿದೆ. ಇದು ವ್ಯಾಪಿಸಿಕೊಂಡಿರುವ ಬಗೆಯು ಒಂದು ಕಡೆ ಮೂರ್ತವೂ ಮತ್ತೊಂದು ಕಡೆ ಅಮೂರ್ತವೂ ಆಗಿದೆ. ಒಂದು ಕಡೆ ಸ್ಥೂಲವೂ ಮತ್ತೊಂದು ಕಡೆ ಸೂಕ್ಷ್ಮವೂ ಆಗಿದೆ. ಈ ಹಿನ್ನಲೆಯಲ್ಲಿ ಜಾತಿ ಸಮಸ್ಯೆಯನ್ನು ಕೇವಲ ಸಾಮಾಜಿಕ ಸಮಸ್ಯೆ ಎಂದು ಸರಳೀಕರಿಸುವಂತಿಲ್ಲ. ಹಾಗಾಗಿ ವರ್ತಮಾನದಲ್ಲಿ ಜಾತಿಯು ಯಾವ ಯಾವ ರೂಪದಲ್ಲಿ ಕ್ರಿಯಾಶೀಲವಾಗಿದೆ ಮತ್ತು ಅದರಿಂದ ಯಾರಿಗೆ ಲಾಭವಾಗುತ್ತಿದೆ, ಯಾರಿಗೆ ಅನ್ಯಾಯವಾಗುತ್ತಿದೆ ಎಂಬುದನ್ನು ಕುರಿತು ಚರ್ಚೆ ಮಾಡುವ ಅಗತ್ಯವಿದೆ. ಇದು ಸ್ಥೂಲವಾಗಿ ಒಂದು ಸಾಮಾಜಿಕ ಅಧ್ಯಯನ. ಹಾಗಾಗಿ ಜಾತಿ ಆಯಾಮದ ಮೂಲಕ ಸಮಾಜದ ಉಳಿದ ವಲಯಗಳನ್ನು ವಿಶ್ಲೇಷಿಸಲಾಗುವುದು. ಅದೇ ಕಾಲಕ್ಕೆ ಬೇರೆ ವಲಯಗಳ ಮೂಲಕ ಜಾತಿ ಸಮಸ್ಯೆಯನ್ನು ವಿಶ್ಲೇಷಿಸಲಾಗುವುದು.

ಜಾತಿಯು ಸಮಸ್ಯೆಯೊ ಅಲ್ಲವೊ? ಸಮಸ್ಯೆಯಾಗಿದ್ದರೆ ಯಾರಿಗೆ ಮತ್ತು ಹೇಗೆ?

ಜಾತಿಯು ಒಂದು ಸಮಸ್ಯೆಯೊ ಅಲ್ಲವೊ ಎಂಬುದನ್ನು ಚರ್ಚಿಸುವ ಅಗತ್ಯವಿದೆ. ಯಾಕೆಂದರೆ ಸಮಾಜದಲ್ಲಿ ಒಂದು ಸಂಗತಿಯು ಒಂದು ವರ್ಗದವರಿಗೆ ಸಮಸ್ಯೆಯಾಗಿ ಕಾಣಬಹುದು. ಅದೇ ಸಂಗತಿಯು ಮತ್ತೊಂದು ವರ್ಗಕ್ಕೆ ಸಮಸ್ಯೆಯಾಗಿ ಕಾಣದೆ ಇರಬಹುದು. ಉದಾಹರಣೆಗೆ ಬೆಲೆ ಏರಿಕೆಯನ್ನೆ ತೆಗೆದುಕೊಳ್ಳೋಣ. ಬೆಲೆ ಏರಿಕೆಯು ಸಮಸ್ಯೆಯೂ ಅಲ್ಲವೊ ಎಂದು ಕೇಳಿದರೆ ಉತ್ತರ ಹೇಳಬಹುದು ಅಥವಾ ಉತ್ತರ ಹೇಳದೇ ಇರಬಹುದು. ಕೇಳುರುವ ಪ್ರಶ್ನೆಯನ್ನು ಅದು ಇರುವಂತೆಯೇ ಇಡಿಯಾಗಿ ಒಪ್ಪಿಕೊಂಡು ಅದಕ್ಕೆ ಉತ್ತರ ಹೇಳುವ ಸಂಪ್ರದಾಯವಿದೆ. ಇದು ರಡಿಮೇಡ್ ವಿಧಾನ. ಈ ರಡಿಮೇಡ್ ವಿಧಾನಕ್ಕಿಂತಲೂ ಹೆಚ್ಚಾಗಿ ಕೇಳಿರುವ ಆ ಪ್ರಶ್ನೆಯನ್ನು ಸರಿಯಾಗಿ ಮರುರೂಪಿಸಿದ ನಂತರ ಅದಕ್ಕೆ ಉತ್ತರ ಹೇಳಬೇಕಾಗುತ್ತದೆ. ಹಾಗಿದ್ದರೆ ಆ ಪ್ರಶ್ನೆಯನ್ನು ಈ ಮುಂದೆನಂತೆ ಮರು ರೂಪಿಸಬಹುದು. ಬೆಲೆ ಏರಿಕೆಯು ಯಾರಿಗೆ ಸಮಸ್ಯೆ ಮತ್ತು ಯಾರಿಗೆ ಸಮಸ್ಯೆ ಅಲ್ಲ ಎಂದು. ಆಗ ಈ ಪ್ರಶ್ನೆಗೆ ಖಚಿತವೂ ಮತ್ತು ಸ್ಪಷ್ಟವೂ ಆದ ಉತ್ತರವನ್ನು ನಿರೂಪಿಸಬಹುದು. ಬೆಲೆ ಏರಿಕೆಯು ಗ್ರಾಹಕರ ಪಾಲಿಗೆ ಸಮಸ್ಯೆ. ಆದರೆ ಅದೇ ಬೆಲೆ ಏರಿಕೆಯು ಮಾರುಕಟ್ಟೆ ಮತ್ತು ದಲ್ಲಾಳಿಗಳಿಗೆ ಸಮಸ್ಯೆ ಅಲ್ಲ. ಅದು ಅವರಿಗೆ ಒಂದು ವರ. ಸಮಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳು ಇರುವುದರಿಂದ ಒಂದು ಸಂಗತಿಯು ಕೆಲವರಿಗೆ ಸಮಸ್ಯೆಯಾಗುತ್ತದೆ. ಜೊತೆಗೆ ಅದೇ ಸಂಗತಿಯು ಮತ್ತೆ ಕೆಲವರಿಗೆ ವರವಾಗುತ್ತದೆ. ಈ ಹಿನ್ನಲೆಯಲ್ಲಿ ಜಾತಿಯು ಯಾರಿಗೆ ಸಮಸ್ಯೆಯಾಗಿದೆ ಮತ್ತು ಯಾರಿಗೆ ಅದು ವರ ಆಗಿದೆ ಎಂಬುದನ್ನು ವಿಶ್ಲೇಷಿಸುವ ಅಗತ್ಯವಿದೆ.

ಜಾತಿಯನ್ನು ಕುರಿತು ಜಾತಿ ವ್ಯವಸ್ಥೆ, ಜಾತಿ ಪದ್ಧತಿ ಮತ್ತು ಜಾತಿ ಶ್ರೇಣೀಕರಣ ಈ ಮುಂತಾದ ಪದಗಳನ್ನು ಬಳಸಲಾಗಿದೆ. ಈ ಪದಗಳು ಜಾತಿಯ ವಿವರಣೆಗಳೂ ಆಗಿವೆ. ವಸಾಹತು ಕಾಲದಲ್ಲಿ ಜಾತಿಯನ್ನು ಜಾತಿ ವ್ಯವಸ್ಥೆ ಎಂದು ಕರೆಯಲಾಯಿತು. ಹಾಗೆ ಕರೆದವರ ಪ್ರಕಾರ ಆ ಜಾತಿ ವ್ಯವಸ್ಥೆಗೆ ಅದರವೇ ಆದ ಕೆಲವು ಲಕ್ಷಣಗಳಿರುತ್ತವೆ. ಆ ಲಕ್ಷಣಗಳ ಆಧಾರದ ಮೇಲೆ ಜಾತಿಯನ್ನು ಒಂದು ವ್ಯವಸ್ಥೆ ಎಂದು ಕರೆಯಲಾಗಿದೆ. ಜಾತಿಗೆ ಕೆಲವು ಆಚರಣೆಗಳು, ಪದ್ಧತಿಗಳು, ಆಲೋಜನೆಗಳು, ಸ್ವಭಾವಗಳು, ವರ್ತನೆಗಳು, ನಂಬಿಕೆಗಳು ಇತ್ಯಾದಿಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಜಾತಿಯನ್ನು ಜಾತಿ ವ್ಯವಸ್ಥೆ ಮತ್ತು ಜಾತಿ ಪದ್ದತಿ ಎಂದು ಕರೆಯಲಾಗಿದೆ. ಈ ಎರಡಲ್ಲದೆ ಒಂದು ಜಾತಿಗೂ ಯಾವ ಬಗೆಯ ಸಂಬಂಧವಿದೆ ಎಂಬ ಆಧಾರದಲ್ಲಿ ಜಾತಿ ಶ್ರೇಣೀಕರಣ ಎಂದು ಕರೆಯಲಾಗಿದೆ. ಅಂದರೆ ಒಂದು ಜಾತಿ ಮೇಲು, ಮತ್ತೊಂದು ಜಾತಿ ಕೀಳು ಎಂಬ ಅರ್ಥದಲ್ಲಿ ಹಾಗೂ ಒಂದು ಜಾತಿಯು ಮತ್ತೊಂದು ಜಾತಿಯನ್ನು ತುಳಿಯುತ್ತಿರುವುದು, ಶೋಷಣೆ ಮಾಡುತ್ತಿರುವುದು ಮತ್ತು ದಬ್ಬಾಳಿಕೆ ಮಾಡುತ್ತಿರುವುದು ಈ ಹಿನ್ನೆಲೆಯಲ್ಲಿ ಅದನ್ನು ಜಾತಿ ಶ್ರೇಣೀಕರಣ ಎಂದು ಕರೆಯಲಾಗಿದೆ.

ಜಾತಿ ವ್ಯವಸ್ಥೆ ಮತ್ತು ಜಾತಿ ಪದ್ಧತಿ ಎಂಬುದರ ಮೂಲಕ ಸಮಾಜವನ್ನು ನೋಡಿದಾಗ ಅದರ ವಸ್ತುಸ್ಥಿತಿ ಒಂದು ರೀತಿ ಕಾಣಿಸುತ್ತದೆ. ಆದರೆ ಇದೇ ವಿಷಯವನ್ನು ಜಾತಿ ಶ್ರೇಣೀಕರಣದ ಮೂಲಕ ನೋಡಿದಾಗ ಅದರ ವಸ್ತುಸ್ಥಿತಿ ಬೇರೊಂದು ರೀತಿಯಲ್ಲಿ ಕಾಣಿಸುತ್ತದೆ. ಇದರ ಪ್ರಕಾರ ವಿವಿಧ ಜಾತಿಗಳು ಮೇಲಿನಿಂದ ಕೆಳಗೆ ಹಾಗೂ ಕೆಳಗಿನಿಂದ ಮೇಲೆ ಬಿಡಿ ಬಿಡಿಯಾಗಿ, ಒಂದರ ಮೇಲೊಂದು ಹಾಗೂ ಒಂದರ ಕೆಳಗೊಂದು ಇರುವ ಚಿತ್ರಣ ಕಾಣುತ್ತದೆ. ಈ ಆಧಾರದಲ್ಲಿ ಜಾತಿಗಳು ಹಲವು ಇವೆ ಎಂದಾಯಿತು. ಇದರ ಪ್ರಕಾರ ಜಾತಿಗಳನ್ನು ಮೇಲು ಜಾತಿಗಳು, ಮಧ್ಯಮ ಜಾತಿಗಳು ಮತ್ತು ಕೆಳಜಾತಿಗಳು ಎಂದು ವಿಂಗಡಿಸಿಲಾಗಿದೆ. ಇವುಗಳ ನಡುವೆ ಊಟ, ಮದುವೆ ಮುಂತಾದುವು ನಿಷಿದ್ಧ. ಹೀಗೆ ಇವುಗಳ ನಡುವೆ ಪರಸ್ಪರ ಊಟ ಮತ್ತು ಮದುವೆಗಳು ನಿಷಿದ್ಧ ಆಗಿರುವುದರಿಂದಲೇ ಅವುಗಳ ನಡುವೆ ಸಹಬಾಳ್ವೆ ಸಾಧ್ಯವಾಗಿಲ್ಲ. ಅವುಗಳ ನಡುವೆ ಮೇಲು ಕೀಳು ಎಂಬ ಸಾಮಾಜಿಕ ಮೌಲ್ಯಗಳನ್ನು ಹಾಗೂ ನಂಬಿಕೆಗಳನ್ನು ಗಟ್ಟಿಯಾಗಿ ಬೆಳೆಸಲಾಗಿದೆ.

ಒಂದೊಂದು ಜಾತಿಗೂ ಒಂದೊಂದು ಪ್ರತ್ಯೇಕ ವೃತ್ತಿ ಇರುವುದನ್ನು ಗಮನಿಸ ಬಹುದು. ಒಂದು ಸಮುದಾಯವು ಯಾವ ವೃತ್ತಿಯನ್ನು ಮಾಡುತ್ತದೆಯೊ ಆ ವೃತ್ತಿಗನುಗುಣವಾಗಿ ಆ ಸಮುದಾಯವನ್ನು ಆ ಹೆಸರಿನಿಂದ ಕರೆಯಲಾಗುತ್ತದೆ. ಉದಾಹರಣೆಗೆ ಮಡಕೆ ಮಾಡುವವರು ಕುಂಬಾರರು. ಮರಗೆಲಸ ಮಾಡುವವರು ಬಡಗಿಗಳು. ಚಿನ್ನ ಬಂಗಾರದ ಕೆಲಸ ಮಾಡುವವರು ಅಕ್ಕಸಾಲಿಗರು. ಚರ್ಮದ ಕೆಲಸ ಮಾಡುವವರು ಚಮ್ಮಾರರು ಇತ್ಯಾದಿ. ಈ ಪಟ್ಟಿ ಹೀಗೆ ಉದ್ದವಾಗಿ ಬೆಳೆಯುತ್ತದೆ. ಅವರ ವೃತ್ತಿಗೂ ಅವರ ಜಾತಿಗೂ ಸಂಬಂಧವಿದೆ ಎಂದು ತಿಳಿಯಲಾಗಿದೆ. ಅದೇ ರೀತಿಯಲ್ಲಿ ಅವರ ವೃತ್ತಿಗೂ ಮತ್ತು ಅವರ ದುಡಿಮೆಗೂ ಸಂಬಂಧವಿದೆ ಎಂದು ತಿಳಿಯಲಾಗಿದೆ. ಒಂದು ಜಾತಿಯ ಅಥವಾ ಒಂದು ಸಮುದಾಯದ ದುಡಿಮೆಯ ಆರ್ಥಿಕ ಬಲಕ್ಕೂ ಮತ್ತು ಅವರ ಸಾಮಾಜಿಕ ಸ್ಥಾನಮಾನಗಳಿಗೂ ಸಂಬಂಧವಿದೆ ಎಂದು ನಂಬಲಾಗಿದೆ. ಅವರ ವೃತ್ತಿಗಳಿಗೂ ಮತ್ತು ಅವರ ನಂಬಿಕೆ, ಆಚರಣೆ, ಉಡುಪು, ಆಹಾರ ಮುಂತಾದುವುಗಳಿಗೂ ಸಂಬಂಧವಿದೆ ಎಂದೂ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಆಯಾ ಜಾತಿ ಸಮುದಾಯಗಳು ಸಮಾಜದಲ್ಲಿ ಒಂದೊಂದು ಪ್ರತ್ಯೇಕ ದ್ವೀಪಗಳಾಗಿ ತಮ್ಮದೇ ಆದ, ಆಲೋಚನೆ, ಆಚರಣೆ, ನಂಬಿಕೆ, ವೃತ್ತಿ, ಆಹಾರ, ಉಡುಪು ಮುಂತಾದುವನ್ನು ಹೊಂದಿರುತ್ತವೆ. ಈ ಕರಣದಿಂದ ಒಂದೊಂದು ಜಾತಿಗಳೂ ತಮ್ಮವೇ ಆದ ಸಂಸ್ಕೃತಿಗಳನ್ನೂ ಹೊದಿರುತ್ತವೆ. ಆಯಾ ಜಾತಿಗಳಿಗೆ ಅವುಗಳದ್ದೆ ಆದ ಸಂಸ್ಕೃತಿ ವಿಶಿಷ್ಟತೆಗಳು, ಅನನ್ಯತೆಗಳು ಇರುವ ಹಾಗೆ, ಆ ಸಂಸ್ಕೃತಿಗಳೂ ಆಯಾ ಜಾತಿಗಳ ಸಮೇತ ಏಣಿಶ್ರೇಣಿಗಳಿಗೆ ಒಳಗಾಗಿವೆ.

ಜಾತಿಯನ್ನು ಒಂದು ವ್ಯವಸ್ಥೆ ಎಂದು ಕರೆಯುವುದು, ಜಾತಿಯನ್ನು ಒಂದು ಪದ್ಧತಿ ಎಂದು ಕರೆಯುವುದು ಮತ್ತು ಜಾತಿಗಳನ್ನು ಶ್ರೇಣೀಕರಣಗಳು ಎಂದು ಕರೆಯುವುದು ಈ ಮೂರರ ನಡುವೆ ಖಚಿತವಾದ ವ್ಯತ್ಯಾಸಗಳಿವೆ. ಜಾತಿ ಅಥವಾ ಜಾತಿಗಳು ಕೆಲವರಿಗೆ ಸಮಸ್ಯೆ. ಮತ್ತೆ ಕೆಲವರಿಗೆ ಅವು ಸಮಸ್ಯೆ ಅಲ್ಲ. ಯಾವ ಕಾರಣಕ್ಕೆ ಜಾತಿಯು ಒಂದು ಸಮಸ್ಯೆಯಾಗಿ ಕಾಣುತ್ತದೆ ಮತ್ತು ಕಾಡುತ್ತದೆ. ಹಾಗೂ ಯಾವ ಕಾರಣಕ್ಕೆ ಜಾತಿಯು ಒಂದು ಸಮಸ್ಯೆಯಾಗಿ ಕಾಣುವುದಿಲ್ಲ ಮತ್ತು ಕಾಡುವುದಿಲ್ಲ ಎಂಬುದು ಮುಖ್ಯ.

ಜಾತಿಯಿಂದ ಕೆಲವರಿಗೆ ಬೇರೆ ಬೇರೆ ಬಗೆಯ ಲಾಭಗಳಿದ್ದರೆ ಮತ್ತೆ ಕೆಲವರಿಗೆ ಬೇರೆ ಬೇರೆ ಬಗೆಯ ನಷ್ಟಗಳಿವೆ. ಒಂದು ಜಾತಿಯವರಿಗೆ ಯಾವ ಕಾರಣಕ್ಕೆ ಜಾತಿಯಿಂದ ನಷ್ಟವು ಉಂಟಾಗುತ್ತದೆಯೊ ಅದೇ ಕಾರಣಕ್ಕೆ ಮತ್ತೊಂದು ಜಾತಿಗೆ ಲಾಭವು ಉಂಟಾಗಬಹುದು. ಇವೆರಡೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಬೆಳೆಯುತ್ತಿರುತ್ತವೆ. ಅಂದರೆ ಒಂದು ಕಡೆ ಲಾಭಗಳು ಮತ್ತೊಂದು ಕಡೆ ನಷ್ಟಗಳು ಜಾತಿಯ ಮೇಲು-ಕೀಳುಗಳನ್ನು ಕಾಪಾಡಿಕೊಂಡು ಹಾಗೂ ಮುಂದುವರಿಸಿಕೊಂಡು ಹೋಗುತ್ತಿವೆ. ಒಂದು ಜಾತಿಯವರಿಗೆ ಪೂಜೆ ಪುನಸ್ಕಾರ ಮಾಡುವುದು ವೃತ್ತಿಯಾಗಿದ್ದರೆ ಅದರಿಂದ ಅವರಿಗೆ ಲಾಭಗಳಿವೆ. ಅವರಿಗೆ ಎಲ್ಲಾ ಬಗೆಯ ಗೌರವಗಳೂ ಸಲ್ಲುತ್ತವೆ. ಒಂದು ಜಾತಿಯವರಿಗೆ ಭೂಮಿ ಸಂಪತ್ತು ಮುಂತಾದವುಗಳಿದ್ದರೆ ಅದರಲ್ಲಿ ಬೇರೆಯವರಿಂದ ಕೆಲಸ ಮಾಡಿಸಿ ಕೊಳ್ಳುವುದರಿಂದ ಅವರಿಗೆ ಲಾಭವಿದೆ. ಅವರಿಗೆ ಎಲ್ಲಾ ಬಗೆಯ ಅವಕಾಶಗಳೂ, ಸವಲತ್ತುಗಳೂ, ಗೌರವಗಳೂ ಸಲ್ಲುತ್ತವೆ. ಆದರೆ ಅವರ ಭೂಮಿಯಲ್ಲಿ ಯಾರು ಕೆಲಸ ಮಾಡುತ್ತಾರೊ ಅವರಿಗೆ ಲಾಭವಾಗುವ ಬದಲು ಸಷ್ಟವಾಗುತ್ತದೆ. ಕೆಲಸ ಮಾಡುವವರ ಎಲ್ಲಾ ಅಗತ್ಯಗಳನ್ನೂ ಅವರಿಗೆ ಕೊಡುವ ಸಂಬಳ ಈಡೇರಿಸುವುದಿಲ್ಲ. ಈ ಹಿನ್ನಲೆಯಲ್ಲಿ ಜಾತಿಯು ಕೆಲವರಿಗೆ ಲಾಭವನ್ನೂ; ಮತ್ತೆ ಕೆಲವರಿಗೆ ನಷ್ಟವನ್ನೂ ಉಂಟುಮಾಡುತ್ತದೆ.

ಈ ಲಾಭ ಮತ್ತು ನಷ್ಟ ಎಂಬುವು ಒಂದು ಕಡೆ ಭೌತಿಕವಾದವೂ ಹೌದು; ಮತ್ತೊಂದು ಕಡೆ ಅವು ಅಭೌತಿಕವಾದವೂ ಹೌದು. ಕೆಳಜಾತಿ ಮತ್ತು ಅಸ್ಪೃಶ್ಯ ಜಾತಿಗಳಿಗೆ ಮಧ್ಯಮ ಜಾತಿಗಳು ಹಾಗೂ ಮೇಲು ಜಾತಿಗಳು ಮರ್ಯಾದೆ ಮತ್ತು ಗೌರವ ಕೊಡುವುದಿಲ್ಲ. ಹೆಚ್ಚೆಂದರೆ ಮೇಲುಜಾತಿಗಳಿಗೆ ಮಧ್ಯಮ ಜಾತಿಗಳೂ ಮತ್ತು ಮೇಲು ಜಾತಿ ಹಾಗೂ  ಮಧ್ಯಮ ಜಾತಿಗಳಿಗೆ ಕೆಳಜಾತಿ ಮತ್ತು ಅಸ್ಪೃಶ್ಯ ಸಮುದಾಯಗಳು ಅಧೀನವಾಗಿ ಇರಬೇಕಷ್ಟೆ. ಆದರೆ ಇದಕ್ಕೆ ವಿರುದ್ಧವಾಗಿ ಎಲ್ಲಾ ಕೆಳಜಾತಿಗಳು ಹಾಗೂ ಅಸ್ಪೃಶ್ಯ ಜಾತಿಗಳು ಮಧ್ಯಮ ಜಾತಿಗಳಿಗೆ ಮತ್ತು ಮೇಲುಜಾತಿಗಳಿಗೆ ಮರ್ಯಾದೆ ಕೊಡಬೇಕು ಹಾಗೂ ಗೌರವ ಕೊಡಬೇಕು. ಇವತ್ತಿಗೂ ಕೂಡ ಎಲ್ಲಾ ಕೆಳಜಾತಿ ಹಾಗೂ ಅಸ್ಪೃಶ್ಯ ಜಾತಿಯವರನ್ನು ಮಧ್ಯಮ ಮತ್ತು ಮೇಲು ಜಾತಿಯವರು ಏಕವಚನದಲ್ಲಿ ಕರೆಯುತ್ತಾರೆ. ಇದಕ್ಕೆ ವಿರುದ್ಧವಾಗಿ ಎಲ್ಲಾ ಮೇಲು ಜಾತಿ ಹಾಗೂ ಮಧ್ಯಮ ಜಾತಿಯವರನ್ನು ಕೆಳಜಾತಿ ಮತ್ತು ಅಸ್ಪೃಶ್ಯರು ಬಹುವಚನದಲ್ಲಿ ಕರೆಯುತ್ತಾರೆ. ಇದು ಒಂದು ಜಾತಿಯು ಮತ್ತೊಂದು ಜಾತಿಗೆ ಕೊಡುವ ಮರ್ಯಾದೆ ಹಾಗೂ ಗೌರವ. ಅದೇ ರೀತಿಯಲ್ಲಿ ಇದು ಒಂದು ಜಾತಿಯು ಮತ್ತೊಂದು ಜಾತಿಗೆ ಅಪಮಾನ ಮತ್ತು ಹೀಯಾಳಿಕೆ.

ಮಧ್ಯಮ ಮತ್ತು ಮೇಲುಜಾತಿಗಳಿಗೆ ವಿವಿಧ ಬಗೆಯ ಸಂಪನ್ಮೂಲಗಳಿವೆ. ಅಂದರೆ ಭೂಮಿ, ವಿವಿಧ ಬಗೆಯ ಆಸ್ತಿ ಮುಂತಾದವು ಅವರಿಗಿವೆ. ಆದರೆ ಕೆಳಜಾತಿಗಳಿಗೆ ಈ ಬಗೆಯಲ್ಲಿ ಭೂಮಿ, ಆಸ್ತಿ ಮುಂತಾದವು ಇಲ್ಲ. ಈ ಹಿನ್ನೆಲೆಯಲ್ಲಿ ನೋಡಿದಾಗ ಮೇಲು ಜಾತಿಗಳಿಗೆ ಭೂಮಿ, ಆಸ್ತಿ ಇರುವುದು ಲಾಭವೂ; ಅದೇ ರೀತಿಯಲ್ಲಿ ಕೆಳಜಾತಿಯವರಿಗೆ ಭೂಮಿ, ಆಸ್ತಿ ಇಲ್ಲದಿರುವುದು ನಷ್ಟವೂ ಆಗಿದೆ. ಮಧ್ಯಮ ಹಾಗೂ ಮೇಲುಜಾತಿಗಳಿಗೆ ಸಾಮಾಜಿಕವಾದ ಅಧಿಕಾರಗಳಿವೆ. ಇಲ್ಲಿ ಅಧಿಕಾರ ಎಂಬುದು ಅಧುನಿಕ ಪ್ರಜಾಪ್ರಭುತ್ವ ಕೊಟ್ಟಿರುವ ಅಧಿಕಾರ ಅಲ್ಲ. ಅದೇ ರೀತಿಯಲ್ಲಿ ಕೆಳಜಾತಿಗಳಿಗೆ ಸಾಮಾಜಿಕವಾದ ಅಧಿಕಾರ ಎಂಬುದು ಇಲ್ಲ. ಜಾತಿಗೆ ಸಂಬಂಧಿಸಿದ ಇಲ್ಲಿಯ ಅಧಿಕಾರವು ಪ್ರಜಾಪ್ರಭುತ್ವದ ವ್ಯಾಪ್ತಿಯೊಳಗೆ ಬರುವುದಿಲ್ಲ. ಹೀಗೆ ಸಾಮಾಜಿಕ ಜೀವನದಲ್ಲಿ ಕೆಲವು ಜಾತಿಗಳಿಗೆ ಅಧಿಕಾರ ಇರುವುದನ್ನು ಮತ್ತೆ ಕೆಲವು ಜಾತಿಗಳಿಗೆ ಅಧಿಕಾರ ಇಲ್ಲದಿರುವುದನ್ನು ಭಾರತದ ಹಳ್ಳಿಹಳ್ಳಿಗಳಲ್ಲಿ ಕಾಣ ಬಹುದು.

ಕೆಲವು ಜಾತಿಯವರಿಗೆ ಜಾತಿಯ ಇರುವಿಕೆಯಿಂದ ಆರ್ಥಿಕವಾದ ಹಾಗೂ ಸಾಮಾಜಿಕವಾದ ಲಾಭಗಳು ಇರುವುದರಿಂದಲೆ ಜಾತಿಗಳು ಇನ್ನಷ್ಟು ಗಟ್ಟಿಗೊಂಡು ಬೆಳೆಯುತ್ತಿವೆ. ಕೆಲವು ಜಾತಿಗಳು ತಮ್ಮ ತಮ್ಮ ಆರ್ಥಿಕ ಹಾಗೂ ಸಾಮಾಜಿಕ ಲಾಭಗಳಿಗಾಗಿ ಈ ಜಾತಿಯನ್ನು ಹಾಗೆ ಉಳಿಸಿಕೊಂಡು ಬರುತ್ತಿವೆ. ಈ ಆಯಾಮದಲ್ಲಿ ನೋಡಿದಾಗ ತಮ್ಮ ತಮ್ಮ ಲಾಭಗಳನ್ನು ನಯವಾಗಿ ಬಳಸಿಕೊಂಡು ಜಾತಿಗಳು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಇನ್ನಷ್ಟು ಗಟ್ಟಿಗೊಂಡು ಬೆಳೆಯುತ್ತಿವೆ. ಅಂದರೆ ಸಮಾಜದಲ್ಲಿ ಜಾತಿಗಳು ಒಂದು ಕಡೆ ಆರ್ಥಿಕ ಕಾರಣಗಳಿಗಾಗಿ ಗಟ್ಟಿಯಾಗುತ್ತಿವೆ ಮತ್ತೊಂದು ಕಡೆ ಅವು ಸಾಮಾಜಿಕ ಕಾರಣಗಳಿಗಾಗಿ ಗಟ್ಟಿಯಾಗುತ್ತಿವೆ.

ಬೇರೆ ಬೇರೆ ಜಾತಿಗಳ ನಡುವೆ ತಾರತಮ್ಯಗಲನ್ನು ಪಾಲಿಸಿಕೊಂಡು ಬರಲಾಗಿದೆ. ಹೀಗೆ ತಾರತಮ್ಯಗಳನ್ನು ಪಾಲಿಸಿಕೊಂಡು ಬರುತ್ತಿರುವುದರಿಂದ ಬೇರೆ ಬೇರೆ ಜಾತಿಗಳ ನಡುವೆ ಅಸಮಾನತೆ ಇದೆ. ಈ ಅಸಮಾನತೆಯನ್ನು ಆರ್ಥಿಕ ಹಾಗೂ ಸಾಮಾಜಿಕ ಕಾರಣಗಳಿಗಾಗಿ ಕಾಪಾಡಿಕೊಂಡು ಬರಲಾಗುತ್ತಿದೆ. ಜಾತಿಗಳ ನಡುವಿನ ಅಸಮಾನತೆಯು ಕೇವಲ ಸಾಮಾಜಿಕ ಅಸಮಾನತೆ ಮಾತ್ರವಾಗಿರದೆ ಅದು ಆರ್ಥಿಕ ಅಸಮಾನತೆಯೂ ಆಗಿದೆ. ಆರ್ಥಿಕ ಅಸಮಾನತೆ ಇರುವುದಿಂದ ಜಾತಿಗಳ ಶ್ರೇಣೀಕರಣ ಮತ್ತಷ್ಟು ಗಟ್ಟಿಗೊಂಡಿದೆ. ಅದೇ ರೀತಿಯಲ್ಲಿ ಜಾತಿಗಳ ನಡುವೆ ಅಸಮಾನತೆ ಇರುವುದರಿಂದ ಆರ್ಥಿಕ ಅಸಮಾನತೆ ಇನ್ನಷ್ಟು ಗಟ್ಟಿಗೊಂಡಿದೆ. ಇವರೆಡಕ್ಕೂ ನೇರವಾದ ಸಂಬಂಧವಿದೆ.

ಯಾವ ಜಾತಿಗಳು ತಮಗಿರುವ ಆಸ್ತಿ, ಸಂಪತ್ತು ಮುಂತಾದವನ್ನು ಬಳಸಿಕೊಂಡು ಬೆಳೆಯಬಲ್ಲವೊ; ಅವು ಆಸ್ತಿ, ಸಂಪತ್ತುಗಳಿಲ್ಲದ ಜಾತಿಗಳನ್ನು ತುಳಿಯುತ್ತಿವೆ. ಈ ರೀತಿಯಲ್ಲಿ ಜಾತಿಯ ತುಳಿತಕ್ಕೆ ಒಳಗಾಗಿರುವ ಕೆಳಜಾತಿಗಳು ತಮ್ಮ ದುಡಿಮೆಯ ಮೂಲಕ ಆಸ್ತಿ, ಸಂಪತ್ತು ಇರುವ ಜಾತಿಗಳನ್ನು ಬೆಳೆಸುತ್ತಿವೆ. ಇದರರ್ಥ ಕೆಲವು ಜಾತಿಗಳಿಗೆ ಆಸ್ತಿ ಮತ್ತು ಸಂಪತ್ತು ಇರುವುದು ಮತ್ತೆ ಕೆಲವು ಜಾತಿಗಳಿಗೆ ಆಸ್ತಿ ಹಾಗೂ ಸಂಪತ್ತು ಇಲ್ಲದಿರುವುದು ಜಾತಿ ಸಮಸ್ಯೆಯ ಮುಖ್ಯ ಕೇಂದ್ರವಾಗಿದೆ. ಹಾಗಾಗಿ ಒಂದೊಂದು ಜಾತಿಗಳೂ ಕೂಡ ತಮಗಿರುವ ಆಸ್ತಿ ಹಾಗೂ ಸಂಪತ್ತನ್ನು ವಿಸ್ತರಿಸಿಕೊಳ್ಳುತ್ತ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ತಮ್ಮನ್ನು ತಾವು ಬಲಪಡಿಸಿಕೊಳ್ಳುತ್ತಾ ಸಾಗಿವೆ. ಯಾವ ಜಾತಿಗಳಿಗೆ ಆಸ್ತಿ ಹಾಗೂ ಸಂಪತ್ತು ಇರುತ್ತದೊ ಅದು ಆಯಾ ಜಾತಿಗಳ ಸಾಮಾಜಿಕ ಅಧಿಕಾರವಾಗಿ ರೂಪು ಪಡೆಯುತ್ತದೆ. ಈ ಹಿನ್ನೆಲೆಯಲ್ಲಿ ಒಂದೊಂದು ಜಾತಿಗೂ ಇರುವ ಆಸ್ತಿ ಹಾಗೂ ಸಂಪತ್ತು ಆ ಜಾತಿಯ ಸಾಮಾಜಿಕ ಅಧಿಕಾರವನ್ನು ರೂಪಿಸುತ್ತವೆ. ಆಧುನಿಕ ಮಾರುಕಟ್ಟೆಯ ಜಗತ್ತು ಆರ್ಥಿಕ ಪ್ರಧಾನ ವಾದುದು. ಹಾಗಾಗಿ ಪ್ರತಿಯೊಂದು ಜಾತಿಯೂ ಆರ್ಥಿಕವಾಗಿ ಮೇಲೇರುವ ತಂತ್ರಗಳನ್ನು, ಕುತಂತ್ರಗಳನ್ನು ನಿರಂತರವಾಗಿ ಬಳಸುತ್ತಿರುತ್ತವೆ. ಆ ಮೂಲಕ ಅವು ಆರ್ಥಿಕವಾಗಿ ಭದ್ರವಾಗಲು ಬೇಕಾದ ತಂತ್ರಗಾರಿಕೆಗಳನ್ನೂ, ಶೋಷಣೆಯ ಹೊಸ ವಿಧಾನಗಳನ್ನೂ ನಿರಂತರವಾಗಿ ಕಂಡುಕೊಳ್ಳುತ್ತಾ ಮತ್ತೆ ಕೆಲವನ್ನು ಪರಿಷ್ಕಾರ ಮಾಡುತ್ತಾ ಸಾಗುತ್ತವೆ. ಈ ತಂತ್ರಗಳನ್ನು ನಿರ್ದಿಷ್ಟ ಜಾತಿಯೊಂದು ತಯಾರು ಮಾಡದಿದ್ದರೂ ಆಧುನಿಕ ಜಗತ್ತು ಇವನ್ನು ರೂಪಿಸುವಂತೆ ಆಯಾ ಜಾತಿಗಳಿಗೆ ಪರೋಕ್ಷವಾದ ಒತ್ತಡಗಳನ್ನು ನಿರಂತರವಾಗಿ ಹಾಕುತ್ತಾ ನಡೆದಿದೆ. ಸಮಾಜದಲ್ಲಿ ಲಾಭಕೋರ ನೀತಿಯ ಜಾತಿಗಳು ಅವನ್ನು ತಮ್ಮದನ್ನಾಗಿ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಮೇಲೇರಲು ಎಲ್ಲಾ ಬಗೆಯ ತಂತ್ರಗಳನ್ನೂ ಬಳಸುತ್ತವೆ.

ಜಾತಿ ಸಮಸ್ಯೆಯ ಸ್ವರೂಪ ಯಾವುದು?

ಜಾತಿಯನ್ನು ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ಅವು ಇಡಿಯಾಗಿ ಜಾತಿಯ ಸ್ವರೂಪವನ್ನು ಅಥವಾ ಜಾತಿ ಸಮಸ್ಯೆಯ ಸ್ವರೂಪವನ್ನು ಹೇಗೆ ಗ್ರಹಿಸಿವೆ ಮತ್ತು ಹೇಗೆ ಗ್ರಹಿಸಿಲ್ಲ ಎಂಬುದನ್ನು ಚರ್ಚಿಸಬೇಕಾಗಿದೆ. ಜಾತಿಯನ್ನು ಕುರಿತು ಮಾನವಶಾಸ್ತ್ರದ ವಿವಿಧ ಶಾಖೆಗಳು ಹಾಗೂ ಸಮಾಜಶಾಸ್ತ್ರದ ವಿವಿಧ ಶಾಖೆಗಳು ಸಾಕಷ್ಟು ಕೆಲಸ ಮಾಡಿವೆ. ಅಲ್ಲದೆ ಭಾರತದ ವಿವಿಧ ಭಾಷೆಯ ಸಾಹಿತ್ಯದಲ್ಲೂ ಜಾತಿಯನ್ನು ಕುರಿತ ಸೂಕ್ಷ್ಮಾತಿ ಸೂಕ್ಷ್ಮ ವಿವರವನ್ನೂ ನಿರೂಪಿಸಲಾಗಿದೆ. ಈ ಮೂರು ಶಾಖೆಗಳ ವಿಶ್ಲೇಷಣೆಗಳಲ್ಲಿ ಬಹಳ ವ್ಯಾಪಕವಾಗಿರುವ ಮತ್ತು ಕುತೂಹಲಕಾರಿ ಯಾಗಿರುವ ಅಧ್ಯಯನವೆಂದರೆ ಅದು ಜಾತಿಯ ಹುಟ್ಟು ಮತ್ತು ಬೆಳವಣಿಗೆಯನ್ನು ಕುರಿತದ್ದು. ಈ ಬಗೆಗೆ ಪಶ್ಚಿಮದ ವಿದ್ವಾಂಸರು ಮತ್ತು ಭಾರತದ ವಿದ್ವಾಂಸರು ಈ ಎರಡೂ ಪಡೆಯವರು ಕೆಲಸ ಮಾಡಿದ್ದಾರೆ. ಜಾತಿ ಕೇವಲ ಭಾರತಕ್ಕೇ ಮಾತ್ರ ವಿಶಿಷ್ಟವೊ ಅಥವಾ ಜಗತ್ತಿನ ಇತರೆ ಭಾಗಗಳಲ್ಲಿಯೂ ಇದರ ಅಸ್ತಿತ್ವ ಇದೆಯೊ ಎಂಬ ಚರ್ಚೆಗಳು ನಡೆದಿವೆ. ಜಾತಿಗಳ ಹುಟ್ಟು ಬೆಳವಣಿಗೆಯನ್ನು ವೃತ್ತಿ ಮತ್ತು ಕಸುಬುಗಳ ಬೆಳವಣಿಗೆಗಳ ಆಧಾರದಲ್ಲಿ ಗುರುತಿಸಿರುವ ಚರ್ಚೆಗಳು ನಡೆದಿವೆ. ಜಾತಿ ಮೂಲದ ಬಗ್ಗೆ ಅಥವಾ ಅದರ ಹುಟ್ಟಿನ ಬಗೆಗೆ ವಿದ್ವಾಂಸರಲ್ಲಿ ವಿವಿಧ ಜ್ಞಾನಶಾಖೆಗಳಲ್ಲಿ ಏಕ ಅಭಿಪ್ರಾಯವಿಲ್ಲ. ನಮಗೆ ಇಲ್ಲಿಯ ಚಚೇಯ್ಲಲಿ ಮುಖ್ಯವಾಗಿರುವುದು ಜಾತಿಯ ಹುಟ್ಟಿನ ಮೂಲಕ್ಕಿಂತಲೂ ಮುಖ್ಯವಾಗಿ ವರ್ತಮಾನದಲ್ಲಿ ಜಾತಿಯು ಹೇಗೆ ಕ್ರಿಯಾಶೀಲವಾಗಿದೆ ಎಂಬುದು. ಹಾಗಾಗಿ ಇದನ್ನು ವರ್ತಮಾನದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚರ್ಚಿಸಬೇಕಾಗುತ್ತದೆ.

ಜಾತಿಯ ಸ್ವರೂಪ ಎಂಬುದರಲ್ಲಿ ಜಾತಿ ಅಥವಾ ಜಾತಿಗಳು ಹೇಗೆ ಹುಟ್ಟಿವೆ ಎಂಬುದು ಒಂದು ಆಯಾಮ ಮಾತ್ರ. ಆದರೆ ಆ ಚರ್ಚೆಯೊಂದೇ ಇಡಿಯಾಗಿ ಜಾತಿಯ ಸ್ವರೂಪವನ್ನಾಗಲಿ ಇಲ್ಲವೆ ಜಾತಿ ಸಮಸ್ಯೆಯ ಸ್ವರೂಪವನ್ನಾಗಲಿ ನಿರ್ಧರಿಸಲಾರದು. ಹಾಗಾಗಿ ಜಾತಿಯ ಯಾವುದೊ ಒಂದು ಮಗ್ಗುಲನ್ನು ಹಿಡಿದು ಕೊಂಡು ಇದು ಜಾತಿಯ ಸ್ವರೂಪ ಎನ್ನಲು ಬರುವುದಿಲ್ಲ. ಸಾಮಾಜಿಕವಾದ ಅದರ ಒಂದೊಂದು ಕ್ರಿಯೆಯೂ ಕೂಡ ವಿಶಾಲವಾಗಿ ಮತ್ತು ಸಂಕಿರ್ಣವಾಗಿ ಜಾತಿಯ ಅಥವಾ ಜಾತಿ ಸಮಸ್ಯೆಯ ಸ್ವರೂಪವನ್ನು ನಿರ್ಧರಿಸುತ್ತದೆ ಮತ್ತು ಅದನ್ನು ವಿಸ್ತರಿಸುತ್ತದೆ. ಈ ಹಿನ್ನಲೆಯಲ್ಲಿ ಕೆಲವು ಪ್ರಧಾನ ಅಂಶಗಳನ್ನು ಕುರಿತು ಚರ್ಚಿಸಬಹುದು.

ಜಾತಿಯು ವೃತ್ತಿ, ಕಸುಬು ಮುಂತಾದ ದುಡಿಮೆಯ ವಿಧಾನಗಳಿಗೆ ಸಂಬಂಧಿಸಿದ್ದು ಎಂಬುದು ಅದರಲ್ಲಿ ಒಂದು. ಈ ಮೊದಲೇ ಚರ್ಚಿಸಿದಂತೆ ಒಂದೊಂದು ಜಾತಿಗಳಿಗೂ ಅವುಗಳದ್ದೇ ಆದ ವೃತ್ತಿ ಮತ್ತು ಕಸುಬುಗಳು ಇರುತ್ತವೆ ಎಂಬುದು ಇರದ ಸ್ಥೂಲಾರ್ಥ. ಆದರೆ ವರ್ತಮಾನದ ಬಂಡವಾಳಶಾಹಿ ಉತ್ಪಾದನೆಯ ಕಾಲದಲ್ಲಿ ಸಾಂಪ್ರದಾಯಿಕವಾದ ಎಷ್ಟೊ ಬಗೆಯ ಕುಲಕಸುಬುಗಳು ನೆಲಕಚ್ಚಿ ಹೋಗಿವೆ. ಆಯಾ ಕುಲಕಸುಬುಗಳಲ್ಲಿ ತೊಡಗಿದ್ದ ಸಮುದಾಯಗಳು ತಮ್ಮ ತಮ್ಮ ಜೀವನೋಪಾಯಕ್ಕೆ ಬೇರೆಬೇರೆ ದಾರಿಗಳನ್ನು ಕಂಡುಕೊಳ್ಳಲು ಮುಂದಾಗಿವೆ ಇಲ್ಲವೆ ಕೆಲವು ಅಲ್ಲೆ ಒದ್ದಾಡುತ್ತಲೂ ಇವೆ. ಸಾಂಸ್ಕೃತಿಕವಾಗಿ ಒಂದೊಂದು ಬಿಡಿ ಜಾತಿಗಳು ಒಂದೊಂದು ಅಥವಾ ಒಂದಕ್ಕಿಂತ ಹೆಚ್ಚು ಕುಲಕಸುಬುಗಳಿಗೆ ಜೋತುಬೀಳುವ ಪರಿಸ್ಥಿತಿ ಇಂದು ಕ್ರಮೇಣ ಸಡಿಲಗೊಳ್ಳುತ್ತಿದೆ. ಆದರೆ ಇಲ್ಲಿ ಒಂದು ಅಂಶವನ್ನು ಮುಖ್ಯವಾಗಿ ಗಮನಿಸಬೇಕು. ಪಾರಂಪರಿಕವಾಗಿ ಕುಲಕಸುಬುಗಳಲ್ಲಿ ತೊಡಗಿದ್ದ ಜಾತಿಗಳು ತಮ್ಮ ಕುಲಕಸುಬುಗಳನ್ನು ಬಿಟ್ಟಿರಬಹುದು. ಆದರೆ ಆಯಾ ಕುಸುಬುಗಳಿಗೆ ಅಂಟಿಕೊಂಡು ಬಂದಿದ್ದ ಜಾತಿ ಶ್ರೇಣೀಕರಣ ಮತ್ತು ಜಾತಿ ತಾರತಮ್ಯಗಳು ಸಡಿಲವಾಗಿಲ್ಲ. ಅದೇ ಕಾಲಕ್ಕೆ ಕೆಲವು ಈ ಬಗೆಯ ಕಸುಬುಗಾರಿಕೆ ಸಮುದಾಯಗಳು ತಮ್ಮ ಕುಸುಬನ್ನು ಪ್ರಧಾನವಾಗಿಸಿಕೊಂಡು, ಆ ಮೂಲಕ ಸಂಘಟಿತ ರಾಗಿ, ಆಧುನಿಕ ಪ್ರಭುತ್ವದ ಎದುರು ತಮ್ಮ ಹಕ್ಕೊತ್ತಾಯವನ್ನು ಮಂಡಿಸುತ್ತಿವೆ. ಇದು ಜಾತಿಯನ್ನು ತಮಗೇ ತಾವೇ ಗಟ್ಟಿಮಾಡಿಕೊಳ್ಳುತ್ತಿರುವ ಸನ್ನಿವೇಶ ಎಂದು ಸರಳಗೊಳಿಸಬಾರದು. ಬದಲಾಗಿ ತಮ್ಮ ಉತ್ಪಾದನೆ ಮತ್ತು ಜೀವನ ನಿರ್ವಹಣೆ ಎಂಬುದು ಶೂನ್ಯದತ್ತ ಸಾಗಿರುವಾಗ ಅಂತಹ ಕಸುಬುಗಾರಿಕೆಯ ಸಮುದಾಯಗಳಿಗೆ ಅದೊಂದು ಅನಿವಾರ್ಯ ದಾರಿಯೇ ಹೊರತು ಅವೇ ತಮ್ಮ ಜಾತಿಯನ್ನು ಪ್ರತ್ಯೇಕ ಮಾಡಿಕೊಂಡು ಗಟ್ಟಿಗೊಳಿಸುತ್ತಿಲ್ಲ.

ಮಧ್ಯಮ ಮತ್ತು ಮೇಲುಜಾತಿಗಳಿಗೆ ಜಾತಿಯು ಒಂದು ಹೆಮ್ಮೆ ಪಡುವ, ಅಭಿಮಾನ ಪಡುವ ಸಂಗತಿ. ಅದು ಅವರಿಗೆ ಸಮಾಜದಲ್ಲಿ, ಸಾರ್ವಜನಿಕ ಹಾಗೂ ಸಾಂಸ್ಕೃತಿಕ ಜೀವನದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಹಾಗೂ ತೊಡಗಿಸಿಕೊಳ್ಳುವ ಒಂದು ಶಕ್ತಿಶಾಲಿ ಸಾಧನ. ಆ ಕಾರಣಕ್ಕೆ ಅವರಿಗೆ ಕೆಲವು ಅವಕಾಶಗಳೂ, ಸೌಲಭ್ಯಗಳೂ, ಗೌರವಗಳೂ ಸಿಗುತ್ತವೆ. ಇದೇ ಅಂಶವು ಕೆಳಜಾತಿ ಮತ್ತು ಅಸ್ಪೃಶ್ಯ ಸಮುದಾಯಗಳಿಗೆ ತದ್ವಿರುದ್ದ. ಇವರಿಗೆ ತಮ್ಮ ಜಾತಿ ಎಂಬುದು ಹೆಮ್ಮೆ ಪಡುವ ಸಂಗತಿಯಾಗುವ ಬದಲು ಮುಜುಗರ ಪಡುವ ಮತ್ತು ಅಪಮಾನವಾಗುವ ಸಂಗತಿ. ಅದು ಇವರಿಗೆ ಸಮಾಜದಲ್ಲಿ, ಸಾರ್ವಜನಿಕ ಜೀವನದಲ್ಲಿ ಹಾಗೂ ಸಾಂಸ್ಕೃತಿಕ ಜೀವನದಲ್ಲಿ ಅವಕಾಶ ಹಾಗೂ ಸೌಲಭ್ಯಗಳು ವಂಚನೆಯಾಗುವ ಶಕ್ತಿಶಾಲಿ ಸಾಧನ. ಕೆಳಜಾತಿ ಮತ್ತು ಅಸ್ಪೃಶ್ಯ ಸಮುದಾಯದ ಬೆರಳೆಣಿಕೆಯಷ್ಟು ಜನರು ರಾಜಕೀಯದಲ್ಲೊ, ಸಾಹಿತ್ಯ ವಲಯದಲ್ಲಿಯೊ ತಮ್ಮನ್ನು ತಾವು ಜಾತಿ ಅಭಿಮಾನದಿಂದ ಗುರುತಿಸಿಕೊಳ್ಳುತ್ತಿರುಬಹುದು. ಆದರೆ ಇದನ್ನು ಇಡಿಯಾಗಿ ಒಂದು ವಿಶಾಲವಾದ ಸಮೂಹಕ್ಕೆ ಅನ್ವಯಿಸಲು ಬರುವುದಿಲ್ಲ. ಬಹುತೇಕ ಕೆಳಜಾತಿ ಮತ್ತು ಅಸ್ಪೃಶ್ಯರು ದುಡಿಯುವ ಹೊಲಗದ್ದೆಗಳಲ್ಲಿ, ಕಾಫಿ ಟೀ ತೋಟಗಳಲ್ಲಿ, ಮತ್ತೆಲ್ಲೊ ಬೇರೆಬೇರೆ ದುಡಿಮೆಗಳಲ್ಲಿ ತೊಡಗಿದ್ದಾರೆ. ಆ ದೊಡ್ಡ ಸಮೂಹವನ್ನು ಪ್ರಧಾನವಾಗಿ ಪರಿಗಣಿಸಿ ವಿಶ್ಲೇಷಣೆ ಮಾಡಬೇಕೆ ಹೊರತು; ಅದರಲ್ಲೆ ಒಬ್ಬರು ಇಬ್ಬರನ್ನು ಗಮನಿಸಿ ಸರಳೀಕರಿಸಲು ಬರುವುದಿಲ್ಲ. ಆದರೆ ಈ ವಿಷಯದಲ್ಲಿ ಈ ಬಗೆಯ ಸರಳೀಕರಣದ ಅಭಿಪ್ರಾಯಗಳೇ ಮೇಲುಗೈ ಸಾಧಿಸುತ್ತಿವೆ. ಇವನ್ನು ಅತ್ಯಂತ ಎಚ್ಚರಿಕೆಯಲ್ಲಿ ಗಮನಿಸಬೇಕು.