ಜಾತಿಗೂ ಅವರ ನಡತೆ ಹಾಗೂ ವರ್ತನೆಗಳಿಗೂ ಸಂಬಂಧ ಕಲ್ಪಿಸಿ ತೀರ್ಮಾನಕ್ಕೆ ಬರುವುದಿದೆ. ಇದು ಬಹುತೇಕ ನೈತಿಕ ಮಾನದಂಡವಾಗಿದೆ. ಕೆಳಜಾತಿಗಳು ‘ಕೆಟ್ಟವರು’ ಎಂದೂ, ಮೇಲುಜಾತಿಯವರು ‘ಒಳ್ಳೆಯವರು’ ಎಂದೂ ನಂಬಿಸಲಾಗಿದೆ ಮತ್ತು ಆ ಕಾರಣಕ್ಕೆ ಹಾಗೆಂದು ನಂಬಲಾಗಿದೆ. ಇದು ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಒಂದು ಸಾಮಾನ್ಯ ನಂಬಿಕೆ. ಇದು ಮೇಲು ಜಾತಿ ಹಾಗೂ ಕೆಳಜಾತಿಗಳ ಆರ್ಥಿಕ ಸ್ಥಿತಿಗತಿಗಳು, ಅವರ ಉಡುಗೆತೊಡಿಗೆ, ಆಹಾರ ಪದ್ಧತಿ, ಆಚರಣೆಗಳು, ಆಲೋಚನೆಗಳು, ಮೌಲ್ಯಗಳು, ದೈನಂದಿನ ಚಟುವಟಿಕೆಗಳು ಇವೆಲ್ಲವನ್ನೂ ಒಳಗೊಂಡಿವೆ. ಸಾರ್ವಜನಿಕ ಜೀವನದಲ್ಲಿ ಉತ್ಪಾದನೆಯ ಚಟುವಟಿಕೆಗಳು ಹಿಂದಿಗಿಂತ ಇಂದು ಹೆಚ್ಚು ವಿಸ್ತಾರಗೊಂಡಿವೆ ಮತ್ತು ಸಂಕೀರ್ಣವಾಗಿವೆ. ಒಂದೇ ಸ್ಥಳದಲ್ಲಿ ನಡೆಯುವ ಉತ್ಪಾದನೆಯ ವಿವಿಧ ಚಟುವಟಿಕೆಗಳಲ್ಲಿ ಬೇರೆ ಬೇರೆ ಜಾತಿಯವರು ತೊಡಗುವ ಅನಿವಾರ್ಯತೆ ಮತ್ತು ಅಗತ್ಯತೆ ಇಂದಿನ ಸಾಮಾನ್ಯ ವಿದ್ಯಮಾನವಾಗಿದೆ. ಹೀಗೆ ಕೆಲಸಗಳಲ್ಲಿ ತೊಡಗುವ ಕಾರಣಕ್ಕೆ ಬೇರೆಬೇರೆ ಜಾತಿಯವರು ಒಂದು ಕಡೆ ಸೇರಿದಾಗ ಜಾತಿಯನ್ನು ಕುರಿತ ಪೂರ್ವ ನಂಬಿಕೆಗಳು ಮತ್ತು ಆಚರಣೆಗಳು ಕೆಲವರ ಆಯ್ಕೆಯನ್ನೂ ಮೀರಿ ಕ್ರಿಯಾಶೀಲವಾಗುತ್ತವೆ. ಇದಕ್ಕೆ ಎರಡು ಆಯಾಮಗಳಿರುತ್ತವೆ. ಒಂದು: ಮೇಲು ಜಾತಿ ಇಲ್ಲವೆ ಮಧ್ಯಮ ಜಾತಿಯವರು ಕೆಳಜಾತಿಯರವನ್ನು ಪ್ರಜ್ಞಾಪೂರ್ವಕವಾಗಿ ಮತ್ತು ಅಪ್ರಜ್ಞಾಪೂರ್ವಕವಾಗಿ ಅವಹೇಳನ ಮಾಡುವುದು ಹಾಗೂ ಅಪಮಾನ ಮಾಡುವುದು. ಎರಡು: ಕೆಳಜಾತಿ ಮತ್ತು ಅಸ್ಪೃಶ್ಯ ಸಮುದಾಯದವರು ವಿನಾಃ ಕಾರಣಕ್ಕೆ ಮೇಲುಜಾತಿಯವರು ಮಾಡುವ ಅವಹೇಳನ ಮತ್ತು ಅಪಮಾನಗಳನ್ನು ಅನುಭವಿಸಬೇಕಾಗಿರುವುದು. ಇವು ಅತ್ಯಂತ ಸೂಕ್ಷ್ಮ ಸನ್ನಿವೇಶಗಳು. ಇಂತಹ ಸನ್ನಿವೇಶಗಳಲ್ಲಿ ಮಾಡುವ ಅಪಮಾನ ಮತ್ತು ಅವಹೇಳನಗಳನ್ನು ದಾಖಲು ಮಾಡಲು ಆಗುವುದಿಲ್ಲ. ಅವು ಬಹುತೇಕ ಮಾತಿನ ರೂಪದಲ್ಲಿರುತ್ತವೆ. ಆ ಮಾತುಗಳು ಕೆಳಜಾತಿಗಳಿಗೆ ಚುಚ್ಚುವಂತೆ, ನೇರವಾಗಿ ಟೀಕಿಸುವಂತೆ, ವ್ಯಂಗ್ಯ ಮಾಡುವಂತೆ ಮತ್ತು ಅವಹೇಳನ ಮಾಡುವಂತೆ ಇರುತ್ತವೆ. ಯಾವುದೊ ನೌಕರಿಯಲ್ಲಿ ಒಬ್ಬರಿಗೆ ಪ್ರೊಮೋಶನ್ ಸಿಕ್ಕೆತು ಎಂದು ಭಾವಿಸೋಣ. ಆ ಸನ್ನಿವೇಶವನ್ನು ಕುರಿತು ‘ಓ ಅವರಿಗೇನಪ್ಪ, ಏನೂ ಕೆಲಸ ಮಾಡದಿದ್ದರೂ ಬೇಗ ಬೇಗ ಪ್ರೊಮೋಶನ್ ಸಿಗುತ್ತವೆ. ನಾವು ಮಾತ್ರ ಸಾಯೋ ತನಕ ಕಾಯಬೇಕು’ ಎಂದು ಇಷ್ಟು ಹೇಳಿದರೆ ಸಾಕು. ಈ ಮಾತನ್ನು ಯಾವ ಜಾತಿಯ ನೌಕರ ಅಥವಾ ಅಧಿಕಾರಿ, ಯಾವ ಜಾತಿಯ ನೌಕರ ಅಥವಾ ಅಧಿಕಾರಿಗೆ ಹೇಳಿದ್ದಾನೆ ಎಂದು ಊಹಿಸಿಬಿಡಬಹುದು. ಅಲ್ಲಿ ಪ್ರೊಮೋಶನ್ ಸಿಕ್ಕಿದ್ದು ನ್ಯಾಯೋಚಿತವೊ ಅಲ್ಲವೊ ಎಂಬುದು ಬೇರೆ ಮಾತು. ಆದರೆ ಅದನ್ನು ವಿಮರ್ಶೆ ಮಾಡುವ ನೆವದಲ್ಲಿ ನಡೆಯುತ್ತಿರುವುದು ಮಾತ್ರ ಜಾತಿ ನಿಂದನೆ ಹಾಗೂ ಜಾತಿಯ ಅವಹೇಳನ. ಜಾತಿಯ ಪ್ರಶ್ನೆ ಹೆಚ್ಚು ಸೂಕ್ಷ್ಮವಾದುದು ಮತ್ತು ಸ್ವಾಭಿಮಾನದಿಂದ ಕೂಡಿರುವಂತಹದ್ದು. ಹಾಗಾಗಿ ಇಂತಹ ಸನ್ನಿವೇಶಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ಬರುತ್ತದೆ. ಅದೂ ಕೂಡ ಬಹುತೇಕ ಮಾತಿನಲ್ಲಿಯೇ ನಡೆದುಹೋಗುತ್ತದೆ. ಅದು ಎಲ್ಲಿಯೂ ದಾಖಲಾಗುವುದಿಲ್ಲ. ಕೆಲಸ ಮಾಡುವ ಜಾಗದಲ್ಲಿ ಒಬ್ಬ ಪುರುಷನು, ಒಬ್ಬ ಮಹಿಳೆಯ ಜೊತೆಯಲ್ಲಿ ಅಸಭ್ಯವಾಗಿ ನಡೆದುಕೊಂಡರೆ, ಆ ಬಗ್ಗೆ ಪೊಲೀಸಿಗೆ ದೂರು ಕೊಡಲು ಅವಕಾಶ ಮತ್ತು ಆಧಾರ ಎರಡಕ್ಕೂ ನಡೆದ ಆ ಸನ್ನಿವೇಶವಷ್ಟೇ ಸಾಕು. ಆದರೆ ಇದೇ ಮಾತು ಜಾತಿಯ ಅವಹೇಳನ ಮತ್ತು ಅಪಮಾನ ಮಾಡಿದ್ದಕ್ಕೆ ಆಗುವುದಿಲ್ಲ.

ಕೆಳಜಾತಿ ಮತ್ತು ಅಸ್ಪೃಶ್ಯ ಸಮುದಾಯದಲ್ಲಿ ಕೆಲವರು ಶಿಕ್ಷಣ ಪಡೆದವರು, ನೌಕರು ಪಡೆದವರು ಮತ್ತು ವಿವಿಧ ಉದ್ಯೋಗಗಳ ಕಾರಣಕ್ಕೆ ಬೇರೆ ಬೇರೆ ಜಾತಿಯವರ ಜೊತೆ ಸಂಪರ್ಕ ಏರ್ಪಡುತ್ತದೆ. ಕೆಳಜಾತಿ ಮತ್ತು ಅಸ್ಪೃಶ್ಯ ಸಮುದಾಯದ ಕೆಲವರು ಹೀಗೆ ಆಂಶಿಕವಾಗಿ ಬದಲಾಗುತ್ತಿರುವುದು ಉಳಿದ ಜಾತಿಯ ಅನೇಕರಿಗೆ ನುಂಗಲಾರದ ತುತ್ತಾಗಿದೆ. ಅವರಿಗೇ ಗೊತ್ತಿಲ್ಲದಂತೆ ಅವರ ಒಳಮನಸ್ಸು ಒಳಗೊಳಗೇ ತರಾವರಿಯಾಗಿ ಕುದಿಯುತ್ತಿರುತ್ತದೆ. ಈ ಕುದಿಯುವುಕೆ ಮೂರ್ತರೂಪದಲ್ಲಿ ಕಾಣುವುದಿಲ್ಲ. ಆದರೆ ಅವರ ಪರಿಣಾಮ ಗೊತ್ತಾಗುವುದು ಕೆಳಜಾತಿಗಳಿಗೆ ಮಾತ್ರ. ಹಾಗಾಗಿ ಈ ಬೆಳವಣಿಗೆ ಮೇಲು ಜಾತಿಯ ಅನೇಕರಿಗೆ ಅಸಹನೆ ಹಾಗೂ ಹೊಟ್ಟೆಕಿಚ್ಚನ್ನು ಹುಟ್ಟಿಸಿದೆ. ಆದರೆ ಮೇಲು ಜತಿಯ ಅನೇಕರು ಈ ಬೆಳವಣಿಗೆ ಕಂಡು ಸಂತೋಷ ಪಡುವವರೂ ಇದ್ದಾರೆ. ಅವರು ಸಾಂದರ್ಭಿಕವಾಗಿ ತಮ್ಮ ಜಾತಿಯ ನಿರ್ಬಂಧನೆಗಳನ್ನು ದಾಟಿಕೊಂಡು ಕೆಲವು ಸನ್ನಿವೇಶಗಳಲ್ಲಿ ಕೆಳಜಾತಿಗಳೊಂದಿಗೆ ಬೆರೆಯುವ ಸಂದರ್ಭಗಳೂ ಇವೆ.

ಮೇಲು ಜಾತಿಯವರಿಗೆ ತಮ್ಮ ಜಾತಿಯ ಬಗ್ಗೆ ಅಭಿಮಾನ ಇರುವ ಹಾಗೆ ಅಪವಾದ ಎಂಬಂತೆ ಅವರಲ್ಲೆ ಕೆಲವರಿಗೆ ಆ ಬಗ್ಗೆ ಒಂದು ಬಗೆಯ ಮುಜುಗರವೂ ಇದೆ. ವಿವಿಧ ಕೆಲಸಗಳ ಕಾರಣಕ್ಕೆ ಕೆಳಜಾತಿಗಳೊಂದಿಗೆ ದುಡಿಯಬೇಕಾದ ವಾತಾವರಣವೂ ಇವತ್ತು ಹೆಚ್ಚುತ್ತದೆ. ಮೇಲು ಜಾತಿಯ ಕೆಲವರಿಗೆ ತಾವು ‘ಪ್ರಗತಿಪರರು’ ಎನಿಸಿಕೊಳ್ಲಲು ಕೆಳಜಾತಿಯವರೊಂದಿಗೆ ದುಡಿಮೆಯ ಕಾರಣಕ್ಕೆ ಜೊತೆಯಲ್ಲಿ ಇರುವುದು ಮುಖ್ಯ ಮಾನದಂಡವಾಗಿದೆ. ಅಂದರೆ ಕೆಲವರು ಮೇಲು ಜಾತಿಯವರು ತಮ್ಮನ್ನು ಕೆಳಜಾತಿಯವರೊಂದಿಗೆ ಗುರುತಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ. ಸ್ನೇಹ ವಿಶ್ವಾಸ ಬೆಳೆಸಿಕೊಳ್ಳಲು ಪ್ರಯತ್ನ ಪಡುತ್ತಾರೆ. ಅಂತಹ ಕೆಲವು ಸನ್ನಿವೇಶಗಳನ್ನು ಆಧರಿಸಿ, ‘ಅವರು ಜಾತಿಬೇಧ ಮಾಡುವುದಿಲ್ಲ’, ಬಹಳ ಒಳ್ಳೆಯವರು’ ಎಂಬ ಅಭಿಪ್ರಾಯವಿದೆ. ಹೀಗೆ ಅಭಿಪ್ರಾಯ ತಾಳಲು ಮುಖ್ಯ ಕಾರಣವೇನೆಂದರೆ ಬೇರೆ ಬೇರೆ ಜಾತಿಯವರು ಸಾಮಾಜಿಕ ಚಟುಪಟಿಕೆಗಳನ್ನು ಪರಸ್ಪರ ಬೆರೆತು ಮಾಡಬೇಕು ಮಾಡುವ ಮೂಲಕ ಜಾತಿ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದು ನಂಬಿರುವುದೇ ಆಗಿದೆ. ಹಾಗೆ ನೋಡಿದರೆ ಅಂತವರು ಜಾತಿಬೇಧ ಬಿಟ್ಟಿದ್ದಾರೊ ಇಲ್ಲವೊ ಎಂಬುದಕ್ಕೆ ಕೆಲವೇ ಕೆಲವು ಸನ್ನಿವೇಶಗಳು ಮಾತ್ರ ಸಾಕಾಗುವುದಿಲ್ಲ. ಇದು ಒಂದು. ಮತ್ತೊಂದು ಅಂಶವೇನೆಂದರೆ ಮೇಲು ಜಾತಿಯವರು ‘ಪ್ರಗತಿಪರರು ಹಾಗೂ ಒಳ್ಳೆಯವರು’ ಎನಿಸಿಕೊಳ್ಳಬೇಕಾದರೆ ಅದಕ್ಕೆ ಈ ಕೆಳಜಾತಿಗಳೇ ಆಧಾರವಾಗಿರುವುದು ಒಂದು ದುರಂತ. ಅಂದರೆ ಕೆಳಜಾತಿಗಳ ಸಂಪರ್ಕವಿಲ್ಲದೆ ಅವರಿಗೆ ಆ ಬಗೆಯ ಮೌಲ್ಯಮಾಪನ ಬಂದರೆ ಪರವಾಗಿಲ್ಲ. ಆದರೆ ಕೆಳಜಾತಿಯವರು ಇರುವ ಕಾರಣಕ್ಕೆ ಅವರಿಗೆ ಆ ಬಿರುದು ಬರುವುದಾದರೆ ಕೆಳಜಾತಿಗಳೊಂದಿಗೆ ಅವರು ಗುರುತಿಸಿಕೊಳ್ಳುವ ಸಲುವಾಗಿ ಯಾದರೂ ಜಾತಿ ಶ್ರೇಣೀಕರಣಗಳು ಇರಬೇಕು ಎಂದು ಹೇಳಿದಂತೆ ಅಗುತ್ತದೆ. ಹಾಗಾಗಿ ಇಂತಹ ಸನ್ನಿವೇಶಗಳನ್ನು ಬಹಳ ಸೂಕ್ಷ್ಮವಾಗಿ ಅವಲೋಕನ ಮಾಡ ಬೇಕಾಗುತ್ತದೆ.

ಜಾತಿ ಮತ್ತು ಪ್ರತಿಭೆಯ ಪ್ರಶ್ನೆ

ಜಾತಿಗೂ ಮತ್ತು ಪ್ರತಿಭೆಗೂ ನೇರವಾದ ಸಂಬಂಧವಿದೆ ಎಂಬುದು ಇತ್ತೀಚಿನ ಅನೇಕ ವರ್ಷಗಳಿಂದ ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ಕೇಳುತ್ತಿರುವ ಒಂದು ಗಟ್ಟಿಯಾದ ಅಭಿಪ್ರಾಯ. ಈ ಮೊದಲು ಚರ್ಚಿಸಿದಂತೆ ಒಂದೊಂದು ಜಾತಿಗೆ ಒಂದೊಂದು ವೃತ್ತಿ ಅಥವಾ ಕುಲಕಸುಬು ಇತ್ತು; ಇದೆ ಮತ್ತು ಇರಬೇಕು ಎಂದು ನಂಬಿಸಲಾಗಿದೆ. ಹಾಗೆ ನಂಬಿಸಿರುವ ಕಾರಣಕ್ಕೆ ಹಾಗೆಂದು ನಂಬಲಾಗಿದೆ. ಜಾತಿಯೊಂದಿಗೆ ‘ಪ್ರತಿಭೆ’ ಎಂಬುದನ್ನು ಸೇರಿಸಿ ಆರೋಪ ಮಾಡುವಾಗ ‘ಪ್ರತಿಭೆ’ ಎಂದರೆ ಏನು ಎಂಬುದನ್ನು ಸಾಮಾಜಿಕವಾಗಿ ವಿವರಿಸಲು ಹೋಗಿಲ್ಲ. ಆದರೆ ಬಹುತೇಕ ಶಿಕ್ಷಣದ ಬೇರೆ ಬೇರೆ ಪದವಿಗಳಲ್ಲಿ ಪಡೆದ ಅಂಕಗಳನ್ನು ಆಧರಿಸಿ ‘ಇವರು ಪ್ರತಿಭಾವಂತರು, ಇವರು ಪ್ರತಿಭಾವಂತರಲ್ಲ’ ಎಂದು ತೀರ್ಮಾನ ಮಾಡಲಾಗುತ್ತಿದೆ. ಹೆಚ್ಚು ಅಂಕ ಗಳಿಸಿದವರು ‘ಪ್ರತಿಭಾವಂತರೆಂದದೂ, ಕಡಿಮೆ ಅಂಕಗಳಿಸಿದವರು ಪ್ರತಿಭಾವಂತರಲ್ಲ’ ಎಂದೂ ಜಗಜ್ಜಾಹೀರು ಮಾಡಲಾಗಿದೆ.

ಹಾಗೆ ನೋಡಿದರೆ ಅಂಕಪಟ್ಟಿಯಲ್ಲಿ ಪಡಿಯುವ ಅಂಕಗಳಿಗೂ ಮತ್ತು ಪ್ರತಿಭೆಗೂ ನೇರ ಸಂಬಂಧ ಇರುವುದಿಲ್ಲ. ಇರಲೂಬೇಕಾಗಿಲ್ಲ. ಆದರೆ ನಮ್ಮ ನಡುವಿನ ದುರಂತ ಏನಾಗಿದೆ ಎಂದರೆ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಮುಂತಾದ ತರಗತಿಗಳಲ್ಲಿ ಗ್ರಾಮಾಂತರ ಮತ್ತು ಕೆಳಜಾತಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಗಣಿತ ಮತ್ತು ಇಂಗ್ಲಿಶ್ ವಿಷಯಗಳಲ್ಲಿ ಫೇಲಾಗುತ್ತಿರುವ ಅಂಕಿಸಂಕಿಗಳಿವೆ. ಗಣಿತ ಮತ್ತು ಇಂಗ್ಲಿಶ್ ವಿಷಯಗಳಲ್ಲಿ ಪಾಸಾದರೆಂದರೆ ಮುಂದೆ ಅವರ ಶಿಕ್ಷಣ ಮುಂದುವರಿಯುತ್ತದೆ. ಆದರೆ ಆ ತರಗತಿಗಳಲ್ಲಿ ಫೇಲಾದರೆ ಅವರ ಶಿಕ್ಷಣ ಮುಂದುವರಿಯುವುದಿಲ್ಲ. ಸಾಮಾನ್ಯವಾಗಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ತರಗತಿಗಳಲ್ಲಿ ಫೇಲಾಗಿದ್ದಾರೆ ಎಂದರೆ ಅದು ಗಣಿತ ಮತ್ತು ಎಂಗ್ಲಿಶ್ ವಿಷಯಗಳಲ್ಲೆ ಎಂದು ಹೇಳಿಬಿಡಬಹುದು. ಜೊತೆಗೆ ಗಣಿತ ಮತ್ತು ಇಂಗ್ಲಿಶ್ ಎಂದರೆ ಅವು ಗ್ರಾಮಾಂತರ ಪ್ರದೇಶ ಮತ್ತು ಕೆಳಜಾತಿಗಳ ಮಕ್ಕಳನ್ನು ಫೇಲು ಮಾಡುವ ವಿಷಯಗಳು ಎಂದೂ ಎಂದೂ ಹೇಳಬಹುದು. ಇದರ ಮೂಲಕ ‘ಕೆಳಜಾತಿಗಳು ಪ್ರತಿಭಾವಂತರಲ್ಲ’ ಎಂದು ಹೇಳಲಾಗುತ್ತಿದೆ. ಅಷ್ಟು ಮಾತ್ರವಲ್ಲ. ಕೆಳಜಾತಿಯ ಮಕ್ಕಳು ಈ ಅಭಿಪ್ರಾಯವನ್ನು ತಮಗೆ ತಾವೇ ಒಪ್ಪೆಕೊಂಡು ‘ನಾವು ಪ್ರತಿಭಾವಂತರಲ್ಲ’ ಎಂದು ತೀರ್ಮಾನಿಸಿಕೊಂಡಿದ್ದಾರೆ. ತಮ್ಮದಲ್ಲದ ಬೇರೆಯವರ ಆರೋಪವನ್ನು ತಮ್ಮ ಮಿತಿ ಎಂದು, ತಮ್ಮ ಬೌದ್ಧಿಕ ಹಿನ್ನಡೆ ಎಂದು ತೀರ್ಮಾನಿಸಿಕೊಂಡಿದ್ದಾರೆ. ಅಂದರೆ ಕೆಳಜಾತಿಗಳ ಮೇಲೆ ಈ ಬಗೆಯಲ್ಲಿ ‘ದಡ್ಡರು’, ‘ಪ್ರತಿಭಾವಂತರಲ್ಲ’ ಎಂಬ ಅಭಿಪ್ರಾಯವನ್ನು ಹೇರಿ ಅದನ್ನು ತರಾವರಿಯಾಗಿ ನಂಬಿಸಿ ಗಟ್ಟಿಮಾಡಲಾಗಿದೆ. ಪರಿಣಾಮವಾಗಿ ಈ ಸಮುದಾಯದವರಿಗೆ ‘ದಡ್ಡರು’ ಎಂಬ ಬಿರುದು ಬಂದಿದೆ.

ಶಿಕ್ಷಣದಿಂದ ಮೊದಲುಗೊಂಡು ಸಾರ್ವಜನಿಕ ಜೀವನ ಮತ್ತು ರಾಜಕೀಯದವರಿಗೆ ಈ ರೀತಿಯಲ್ಲಿ ಕೆಳಜತಿಗಳು ಅಸಮರ್ಥರು, ಪ್ರತಿಭಾಹೀನರು ಮತ್ತು ದಡ್ಡರು ಎಂಬ ತೀರ್ಮಾನಗಳನ್ನು ಗಟ್ಟಿಗೊಳಿಸಲಾಗಿದೆ. ಇದು ಕೆಳಜಾತಿಗಳ ಜಾತಿಯ ಚಲನಶೀಲತೆಯನ್ನು ಸಹಿಸಿಕೊಳ್ಳಲಾರದ ಒಂದು ಸಾಮಾಜಿಕ ಮನೋಧರ್ಮವಾಗಿದೆ. ಈ ಸಾಮಾಜಿಕ ಮನೋಧರ್ಮವು ವ್ಯಕ್ತಿಗಳ ಮೂಲಕ ಅವರ ಪ್ರಜ್ಞಾಪೂರ್ವಕ ಆಯ್ಕೆ ಇಲ್ಲದೆಯೂ ಬರಬಹುದು. ಇಲ್ಲವೆ ಪ್ರಜ್ಞಾಪೂರ್ವಕವೂ ಮತ್ತು ಪ್ರಯತ್ನ ಪೂರ್ವಕವೂ ಆದ ಸಂಘಟನಾ ಮಾದರಿಯಲ್ಲೂ ಬರಬಹುದು. ಅದು ಎಲ್ಲಿಂದಲೆ ಬರಲಿ. ಆದರೆ ಕೆಳಜಾತಿಗಳ ಮೇಲೆ ಹೇರಲಾಗುತ್ತಿರುವ ಈ ಬಗೆಯ ಅಸಮರ್ಥತೆಯ ಮೌಲ್ಯ ಮಾತ್ರ ಜಾತಿ ಸಮಸ್ಯೆಯ ಒಂದು ಮುಖ್ಯ ಆಯಾಮವಾಗಿದೆ. ಮಹಿಳೆಯರ ಮೇಲೂ ಇದೇ ರೀತಿಯ ಅಸಮರ್ಥತೆಯ ಮೌಲ್ಯವನ್ನು ಹೇರಲಾಗಿದೆ. ಈ ಕಾರಣಕ್ಕಾಗಿಯೇ ಆಳುವ ವರ್ಗದ ರಾಜಕೀಯದಲ್ಲಿ ಮಹಿಳೆಯರಿಗೆ ಮತ್ತು ಕೆಳಜಾತಿಯ ರಾಜಕಾರಣಿಗಳಿಗೆ ಯಾವ ಬಗೆಯ ಸ್ಥಾನಮಾನಗಳಿವೆ ಎಂಬುದನ್ನು ಗಮನಿಸಬಹುದು. ಜೊತೆಗೆ ಅವರಿಗೆ ಎಂತಹ ಹುದ್ದೆಗಳನ್ನು ಕೊಡಲಾಗುತ್ತದೆ ಎಂಬುದನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ಶಿಕ್ಷಣ ಮತ್ತು ರಾಜಕೀಯ ರಂಗಗಳನ್ನೂ ಒಳಗೊಂಡಂತೆ ಉಳಿದೆಲ್ಲ ಕ್ಷೇತ್ರಗಳಲ್ಲೂ ಕೂಡ ಇದೇ ಬಗೆಯ ಪ್ರತಿಭೆಯ ಪ್ರಶ್ನೆಯನ್ನು ಕೆಳಜಾತಿಗಳ ವಿಷಯದಲ್ಲಿ ಆಗಾಗ ತರಲಾಗುತ್ತಿದೆ. ಮೇಲುಜಾತಿಗಳಲ್ಲಿರುವ ಪ್ರತಿಭಾಹೀನರನ್ನು, ಬೌದ್ಧಕ ದುರ್ಬಲರನ್ನು ಈ ರೀತಿಯಲ್ಲಿ ಮೌಲ್ಯಮಾಪನ ಮಾಡುವ ಕ್ರಮ ಇಲ್ಲ. ಅಂದರೆ ಜಾತಿಗಳನ್ನು ಕುರಿತ ಮೌಲ್ಯಮಾಪನದ ಮಾನದಂಡಗಳು ಸಮಾಜದಲ್ಲಿ ಗಟ್ಟಿಯಾದ ನಂಬಿಕೆಗಳಾಗಿವೆ. ಆ ನಂಬಿಕೆಗಳು ಮನುಷ್ಯ ಪ್ರಜ್ಞೆಯೊಳಗೆ ಎಷ್ಟು ಗಟ್ಟಿಯಾಗಿ ಕೂತಿವೆ ಎಂದರೆ ಅವು ಅಪ್ರಜ್ಞಾಪೂರ್ವಕ ಸ್ಥಿತಿಯನ್ನು ತಲುಪಿ ಬಿಟ್ಟಿವೆ. ಕೆಳಜಾತಿಗಳ ಅವಹೇಳನಗಳೂ ಮತ್ತು ಮೇಲುಜಾತಿಗಳ ಹಿರಿಮೆಗಳೂ ಪರಸ್ಪರ ವಿರುದ್ಧವಾಗಿ ಮೆದುಳನ್ನು ಸೇರಿ ಹೋಗಿವೆ. ಮೇಲುಜಾತಿಗಳಿಗೆ ಕೆಳಜಾತಿಯವರನ್ನು ಅಪಮಾನ ಮಾಡುವುದು ಮತ್ತು ಅವಹೇಳನ ಮಾಡುವುದು ಒಂದು ಸಭ್ಯತೆಯಲ್ಲಿ ಎಂಬ ಸಾಮಾನ್ಯ ಪ್ರಜ್ಞೆಯೂ ಇಲ್ಲದಂತಾಗಿದೆ. ಹೀಗೆ ಸಾಮಾನ್ಯ ಪ್ರಜ್ಞೆಯ ಒಳಗೆ ಅಸಂಖ್ಯ ಕೆಳಜಾತಿಗಳನ್ನು ನಿತ್ಯ, ನಿಮಿಷ ನಿಮಿಷಕ್ಕೂ, ಸೆಕೆಂಡು ಸೆಕೆಂಡಿಗೂ ಅಪಮಾನ ಮಾಡಲಾಗುತ್ತಿದೆ. ಇದಕ್ಕೆ ಪ್ರತಿರೋಧ ವ್ಯಕ್ತ ಮಾಡಿದರೆ ಅವರ ಪ್ರಕಾರ ಇದು ಉದ್ದಟತನವಾಗುತ್ತದೆ. ಹಾಗಾಗಿ ಆದಷ್ಟೂ ಕೆಳಜಾತಿಗಳ ಸಾಮೀಷ್ಯ ಬಯಸುವ ಮನೋಧರ್ಮವು ಇತ್ತೀಚಿನ ದಿನಗಳಲ್ಲಿ ಬೆಳೆಯುತ್ತಿದೆ.

ಕೆಳಜಾತಿಗಳಲ್ಲಿ ಬೆಳೆಯುತ್ತಿರುವ ವೈಚಾರಿಕ ಪ್ರಜ್ಞೆ ಮತ್ತು ಸ್ವಾಭಿಮಾನವು ಮೇಲು ಜಾತಿಗಳಿಗೆ ಅದರಲ್ಲೂ ನಿರ್ದಿಷ್ಟವಾಗಿ ಜಮೀನ್ದಾರಿ ವರ್ಗಗಳ ಆತ್ಮಗೌರವಕ್ಕೆ ಕೊಡಲಿ ಏಟು ಕೊಟ್ಟಂತಾಗಿದೆ. ಹಾಗಾಗಿ ಹಳ್ಳಿಗಳಿಂದ ಬಂದ ಕೆಳಜಾತಿಯವರು ಉನ್ನತ ವ್ಯಾಸಂಗ ಮಾಡಿದ್ದರೆ ಅಥವಾ ಉನ್ನತ ನೌಕರಿಯಲ್ಲಿದ್ದರೆ ಅಥವಾ ಯಾವುದಾದರೂ ಸ್ವತಂತ್ರ ದುಡಿಮೆ ಮಾಡುತ್ತಿದ್ದರೆ ಅಂತವರ ಮುಖ ಕಂಡಾಗ ಭೂಮಾಲೀಕ ವರ್ಗಕ್ಕೆ ಅದರಿಂದ ನಿದ್ದೆ ಬರುವುದಿಲ್ಲ. ಅವರನ್ನು ಬೇಕೆಂತಲೇ ಏಕವಚನದಲ್ಲಿ ಮಾತಾಡಿಸುತ್ತಾರೆ. ತಿರುಗಿ ಬಿದ್ದರೆ ಹೊಡೆದಾಟ ಬಡಿದಾಟಗಳು ನಡೆಯುತ್ತವೆ. ಈ ವಿಷಯದಲ್ಲಿ ಭೂಮಾಲೀಕ ಮಧ್ಯಮ ಜಾತಿಗಳಿಗಿಂತ ಬ್ರಾಹ್ಮಣ ಸಮುದಾಯದವರು ಒಂದು ಪಾಲು ಮೇಲು. ಅವರು ಉದ್ದೇಶಪೂರ್ವಕವಾಗಿ ಹಂಗಿಸಲು ಇಲ್ಲವೆ ಹೀಯಾಳಿಸಲು ಹೋಗುವುದಿಲ್ಲ. ಈ ಮನೋಧರ್ಮ ಕೂಡ ಯಾವುದೊ ಒಬ್ಬ ವ್ಯಕ್ತಿಯಿಂದ ಹುಟ್ಟುತ್ತದೆ ಎಂದು ಸರಳೀಕರಿಸುವಂತೆ ಇಲ್ಲ. ಯಾಕೆಂದರೆ ಅದು ಜಮೀನ್ದಾರಿ ಸಮಾಜದ ಒಂದು ಸಾಮಾನ್ಯ ಮನೋಧರ್ಮ.

ಜಾತಿ ಮತ್ತು ಸರಕಾರಿ ಸವಲತ್ತುಗಳ ಪ್ರಶ್ನೆ

ಕೆಳಜಾತಿಗಳಿಗೆ ಸಂಬಂಧಿಸಿದ ಕೆಲವು ಕಾರ್ಯಕ್ರಮಗಳನ್ನು ಆಯಾ ಸರಕಾರಗಳು ಹೊಂದಿವೆ. ಅದಕ್ಕೆ ಸಂಬಂಧಿಸಿದಂತೆ ಜಾಹೀರಾತುಗಳು, ಕಟೌಟ್‍ಗಳು ಎಲ್ಲಾ ಕಡೆಗಳಲ್ಲೂ ರಾರಾಜಿಸುತ್ತವೆ. ಬಜೆಟ್‍ನಲ್ಲಿ ಅಂತಹ ಕೆಲವು ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸ್ವಲ್ಪ ಹಣವನ್ನು ತೆಗೆದಿಡಲಾಗುತ್ತದೆ. ಈ ಬಗೆಯ ಕೆಲವು ಸೌಲಭ್ಯಗಳನ್ನು ಪಡೆದುಕೊಂಡು ಕೆಳಜಾತಿಗಳ ಕೆಲವರು ಉನ್ನತ ಶಿಕ್ಷಣ ಪಡೆದಿರುವುದು, ಕೆಲವರು ನೌಕರಿ ಪಡೆದಿರುವುದು, ರಾಜಕೀಯ ಪ್ರವೇಶ ಮಾಡಿರುವುದು ಇದೆ. ಇಂತಹದ್ದು ಸಾಧ್ಯವಾಗಿದ್ದು ಕೆಲವು ಸರಕಾರಿ ಸವಲತ್ತುಗಳನ್ನು ಕೆಳಜಾತಿಯ ಕೆಲವರು ಹರಸಾಹಸ ಮಾಡಿ ಪಡೆದುಕೊಂಡಿದ್ದರಿಂದ. ಸಾಮಾಜಿಕವಾದ ಈ ಕಿಂಚಿತ್ ಬೆಳವಣಿಗೆಗಳು ಮೇಲು ಜಾತಿಗಳ ಸಾಂಪ್ರದಾಯಿಕ ಮನಸ್ಸುಗಳಲ್ಲಿ ಅಗೋಚರವಾದ ಅಸಮಾಧಾನ ಮತ್ತು ಅಸಹನೆಗಳನ್ನು ಹುಟ್ಟಿಸಿದೆ. ಆಳುವ ವರ್ಗದ ರಾಜಕೀಯ ಪಕ್ಷಗಳು, ಕೆಲವು ಮಾಧ್ಯಮಗಳು ಹಾಗೂ ವ್ಯಕ್ತಗಳು ಇಂತಹ ಅಸಮಾಧಾನ ಹಾಗೂ ಅಸಹನೆಗಳನ್ನು ಪ್ರತ್ಯ್ಷಕವಾಗಿಯೇ ಹೇಳುವುದಿದೆ. ‘ಈ ಜಾತಿಗಳಿಗೆ ಸರಕಾರಿ ಸವಲತ್ತುಗಳು ಇರದೆ ಹೋಗಿದ್ದರೆ ಕೂಲಿ ಮಾಡಿಕೊಂಡು ಇರಬೇಕಿತ್ತು’ ಎಂದು ಒಳಗೊಳಗೇ ಕರುಬುತ್ತಾರೆ. ಜೊತೆಗೆ ‘ಆ ಜಾತಿಯವರಿಗೇನು ಕಡಿಮೆ? ಎಲ್ಲಾ ಸವಲತ್ತುಗಳನ್ನು ಸರಕಾರ ಕೊಡುತ್ತದೆ. ಓದಲು ಹಾಸ್ಟೆಲ್ ಫ್ರೀ, ಫೀಜ಼ು ಇಲ್ಲ. ಕಡಿಮೆ ಅಂಕ ಬಂದರೂ ಕೂಡ ಗೌರ್ನಮೆಂಟ್ ನೌಕರಿ ಫ್ರೀ. ನಿಜವಾಗಿಯೂ ಆ ಜಾತಿಯಲ್ಲಿ ಹುಟ್ಟೋದಕ್ಕೆ ಪುಣ್ಯ ಮಾಡಿರಬೇಕು’. ಇಂತಹ ಅಭಿಪ್ರಾಯಗಳು ಕಡಿಮೆ ಏನೂ ಇಲ್ಲ.

ಯಾವುದೆ ಪರೀಕ್ಷೆಗಳಲ್ಲಿ ಫಲಿತಾಂಶ ಪ್ರಕಟವಾದಾಗ ಕೆಳಜಾತಿಗಳನ್ನು ಕೇವಲವಾಗಿ ನೋಡಲಾಗುತ್ತದೆ. ಅವರು ಫೇಲ್ ಆಗಿದ್ದರೆ ಅವರು ದಡ್ಡರು ಎಂಬ ಬಿರುದು. ಅವರಿಗೆ ಕಡಿಮೆ ಅಂಕಗಳು ಬಂದಿದ್ದರೆ, ‘ಆ ಜಾತಿಯವರಿಗೇನು, ಮಾರ್ಕ್ಸ್ ಕಡಿಮೆ ಬಂದರೂ ನಡೀತದೆ. ಕಷ್ಟ ಇರೊದು ನಮ್ಮಂತಹ ಜನರಲ್ ಕೆಟಗರಿಯವರಿಗೆ’ ಎಂಬ ಅಭಿಪ್ರಾಯಗಳು ಪ್ರವಾಹದಂತೆ ಬಂದೆರಗುತ್ತವೆ. ಒಟ್ಟಾಗಿ ಕೆಳಜಾತಿಗಳನ್ನು ಕನಿಷ್ಠವಾಗಿ ಪರಿಗಣಿಸುವ ಸಾಮಾಜಿಕ ಮನೋಧರ್ಮ ಯಾವ ರೀತಿಯಲ್ಲೂ ಬದಲಾಗಿಲ್ಲ. ಕೆಲವು ನೇಮಕಾತಿಗಳ ವಿಷಯದಲ್ಲಿಯೂ ಇದೇ ಸಾಮಾಜಿಕ ಅಭಿಪ್ರಾಯ ಪುನರಾವರ್ತನೆಯಾಗುತ್ತದೆ.

ಕೆಳಜಾತಿಗಳ ಕೆಲವು ಕಾರ್ಯಕ್ರಮಗಳಿಗೆ ಸರಕಾರ ಬಜೆಟ್‍ನಲ್ಲಿ ಇಂತಿಷ್ಟು ಹಣವನ್ನು ತೆಗೆದಿಡುತ್ತದೆ. ಆದರೆ ಅಂತಹ ಹಣವನ್ನು ನಿಜವಾಗಿಯೂ ಆ ಬಾಬ್ತಿಗೆ ಖರ್ಚು ಮಾಡಲಾಗುತ್ತದೆಯೇ? ಎಲ್ಲರಿಗೂ ಗೊತ್ತಿದೆ. ನಿಜವಾಗಲೂ ಆ ಹಣವನ್ನು ಆ ಬಾಬ್ತಿಗೆ ಖರ್ಚು ಮಾಡುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ತೆಗೆದಿಟ್ಟ ಹಣವನ್ನು ದೆಹಲಿಯಲ್ಲಿ ಈ ವರ್ಷ ನಡೆಸಿದ ಕಾಮನ್‍ವೆಲ್ತ್ ಕ್ರೀಡಾ ಕುಟಕ್ಕೆ ಬಹಿರಂಗವಾಗಿ ಬಳಸಿಕೊಳ್ಳಲಾಯಿತು. ವಿಶೇಷವೆಂದರೆ ಮೀಸಲು ಕ್ಷೇತ್ರಗಳಿಂದ ಆರಿಸಿ ಹೋದ ಯಾವ ಪ್ರತಿನಿಧಿಗಳೂ ಇದನ್ನು ಪ್ರಶ್ನಿಸಲಿಲ್ಲ. ಹಾಗಿದ್ದರೆ ಮೀಸಲು ಕ್ಷೇತ್ರಗಳಿಂದ ಆರಿಸಿ ಹೋದವರು ಯಾರ ಹಿತಗಳನ್ನು ಕಾಯುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಇಂತಹ ನೂರಾರು ಉದಾಹರಣೆಗಳು ಹಾಗೂ ಪ್ರಕರಣಗಳು ಇದನ್ನು ಗಟ್ಟಿಗೊಳಿಸುತ್ತವೆ. ಇಲ್ಲಿ ಆ ವಿವರಣೆಗಳಿಗೆ ಹೋಗಲು ಅವಕಾಶವಿಲ್ಲ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳಿಗೆಂದು, ೨೦೦೬-೦೭ರಲ್ಲಿ ಬಿಡುಗಡೆ ಮಾಡಿದ್ದ ೨೦ ಲಕ್ಷ ರೂಪಾಯಿಗಳನ್ನು ಖರ್ಚು  ಮಾಡಿರಲೇ ಇಲ್ಲ. ಅಂದರೆ ಆ ಸಮುದಾಯದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಹಣವನ್ನು ಖರ್ಚು ಮಾಡಲೇ ಇಲ್ಲ. ಆ ಕಾರಣಕ್ಕೆ ಯು.ಜಿ.ಸಿ.ಯು ಆ ಹಣವನ್ನು ವಾಪಸ್ ಕೇಳಿದೆ. ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಮುಂತಾದವುಗಳಿಗೆ ಬಿಡುಗಡೆ ಮಾಡುವ ಹಣದಲ್ಲಿ ಎಷ್ಟು ಪ್ರಮಾಣವು ಖರ್ಚು ಮಾಡದೆ ವಾಪಸ್ ಹೋಗುತ್ತದೆ ಎಂಬುದು ಬಹುತೇಕರಿಗೆ ಗೊತ್ತಿರುವ ಸಂಗತಿಯೇ ಆಗಿದೆ. ಐ.ಎ.ಎಸ್. ಅಧಿಕಾರಿ ಕೆ. ಶಿವರಾಮು ಅವರು ಸಮಾಜ ಕಲ್ಯಾಣ  ಇಲಾಖೆಯ ಆಯುಕ್ತರಾಗಿ ನೇಮಕವಾದಾಗ, ‘ಆ ಇಲಾಖೆಯಲ್ಲಿ ೨೦೦ ಕೋಟಿಯಷ್ಟು ಹಣವನ್ನು ಖರ್ಚು ಮಾಡದೆ ಹಾಗೆ ಉಳಿಸಲಾಗಿತ್ತು’ ಎಂಬ ಮಾಹಿತಿಯನ್ನು ಬಹಿರಂಗ ಮಾಡಿದ್ದರು. ಗ್ರಾಮ ಪಂಚಾಯಿತಿಯಿಂದ ಹಿಡಿದು, ಸಂಸತ್‍ವರೆಗೆ ಕೆಳಜಾತಿಗಳ ಹೆಸರಿನಲ್ಲಿ ತೆಗೆದಿಡುವ ಹಣವನ್ನು ಇವರಿಗಾಗಿ ಖರ್ಚು ಮಾಡುವುದಿಲ್ಲ ಎಂಬುದು ಯಾರಿಗೂ ಹೊಸ ವಿಷಯವಾಗಿ ಉಳಿದಿಲ್ಲ. ಅಂದರೆ ಹೆಸರು ಹೇಳುವುದಕ್ಕೆ ಮಾತ್ರ ಕೆಲಜಾತಿಗಳು ಬೇಕು. ಅವರ ಹೆಸರಿನಲ್ಲಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ನಂತರ ಹೆಡ್ ಚೇಂಜ್ ಮಾಡಿ ಬೇರೆಯ ಉದ್ದೇಶಗಳಿಗೆ ಅದನ್ನು ಬಳಸಲಾ‌ಗುತ್ತದೆ. ಈ ದೃಷ್ಟಿಯಿಂದ ಕೆಳಜಾತಿಗಳಿಗೆ ಈ ವಿಷಯದಲ್ಲಿ ಭೌತಿಕವಾಗಿ ನಷ್ಟವೇ ಆಗುತ್ತದೆ. ಇದು ಈ ವಿಷಯದ ಒಂದು ಆಯಾಮ. ಎದಕ್ಕಿಂತಲೂ ಗಂಭೀರವಾದ ಮತ್ತೊಂದು ಆಯಾಮ ವೆಂದರೆ, ಕೆಳಜಾತಿಗಳ ಹೆಸರಿನಲ್ಲಿ ಬಿಡುಗಡೆ ಮಾಡುವ ಹಣವನ್ನು ಮತ್ತು ಇವರಿಗಾಗಿ ರೂಪಿಸಲಾಗಿರುವ ಕೆಲವು ಕಾರ್ಯಕ್ರಮಗಳನ್ನು ಗಮನಿಸಿ ಉಳಿದ ಜಾತಿಯ ಕೆಲವರು ಹೊಟ್ಟೆಕಿಚ್ಚುಪಡುವುದು. ಜೊತೆಗೆ ಅವುಗಳ ಹೆಸರು ಹೇಳಿಕೊಂಡು ಕೆಳಜಾತಿಗಳನ್ನು ಹೇಗೆಂದರೆ ಹಾಗೆ ಅಪಮಾನ ಮಾಡುವುದು ಮತ್ತು ಹೀಯಾಳಿಸುವುದು. ಅಂದರೆ ಒಂದು ಕಡೆ ಸವಲತ್ತುಗಳು ಸಿಗದಿರುವ ಭೌತಿಕ ನಷ್ಟ. ಮತ್ತೊಂದು ಕಡೆ ಅದು ಸಿಗದಿದ್ದರೂ ಸಿಕ್ಕದೆ ಎಂಬ ಆರೋಪದ ಸಾಮಾಜಿಕ ಅವಹೇಳನ. ಇವೆರಡೂ ಎಂತಹಾ ವಿಪರ್ಯಾಸದ ಸಂಗತಿಗಳು ಎಂದು ಸೋಜಿಗವಾಗುತ್ತದೆ. ಆದರೆ ಈ ಪ್ರಸಂಗದಲ್ಲಿ ಚರ್ಚೆ ಮಾಡಬೇಕಾದುದು, ಈ ಹೆಸರಿನಲ್ಲಿ ಕೆಳಜಾತಿಗಳನ್ನು ಅವಹೇಳನ ಮಾಡುವ ಮೇಲುಜಾತಿಗಳನ್ನಲ್ಲ. ಬದಲಿಗೆ ಪ್ರಭುತ್ವ ಮತ್ತು ಆಡಳಿತ ಯಂತ್ರಗಳು ಪರೋಕ್ಷವಾಗಿ ಈ ಅಭಿಪ್ರಾಯವನ್ನು ಸಮಾಜದಲ್ಲಿ ಹರಿಯಬಿಟ್ಟಿವೆ. ಆ ಮೂಲಕ ಕೆಳಜಾತಿ ಮತ್ತು ಮೇಲುಜಾತಿಗಳ ನಡುವೆ ಇಲ್ಲದ ವೈಷಮ್ಯಗಳನ್ನು ಸೃಷ್ಟಿ ಮಾಡಿವೆ. ಆ ಮೂಲಕ ಸರಕಾರ ಮತ್ತು ಆಡಳಿತ ಯಂತ್ರಾಂಗ ಕೆಳಜಾತಿಗಳಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸಿ ಕೊಟ್ಟಿದ್ದೇವೆ ಎಂಬುದನ್ನು ತಾನು ಹೇಳುವುದಕ್ಕಿಂತಲೂ ಅದನ್ನು ಮೇಲು ಜಾತಿಯವರ ಒಂದು ಗಟ್ಟಿಯಾದ ಅಭಿಪ್ರಾಯವಾಗಿ ಮಾರ್ಪಡಿಸಿದೆ. ಅಂದರೆ ಜಾತಿಯ ಸಮಸ್ಯೆಯ ಸೂಕ್ಷ್ಮ ಆಯಾಮವನ್ನು ಸರಕಾರ ಮತ್ತು ಆಡಳಿತ ಯಂತ್ರ ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ಈ ಮೂಲಕವೂ ಅರಿಯಬಹುದಾಗಿದೆ.

ಕೆಳಜಾತಿಗಳಿಗೆ ಮಾಡಿರುವ ಕೆಲವು ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಜಾರಿಗೊಳಿಸದಂತೆ ಆಡಳಿತ ಯಂತ್ರ ಮತ್ತು ಅಧಿಕಾರಿ ಹಾಗೂ ನೌಕರಶಾಹಿ ಅಡ್ಡಗಾಲು ಹಾಕುವುದೇ ಹೆಚ್ಚು. ಬೇರೆ ಯಾವ ಕೆಲಸಗಳಿಗೂ ಬಾರದ ತಾಂತ್ರಿಕ ತೊಂದರೆಗಳು ಕೆಳಜಾತಿಗಳ ವಿಷಯದಲ್ಲಿ ಬರುತ್ತವೆ. ಕೇವಲ ಒಂದು ಜಾತಿ ಪ್ರಮಾಣ ಪತ್ರ ಮಾಡಿಸಲು ಎಷ್ಟು ಪರದಾಡಬೇಕು ಎಂಬುದು ಅವರಿಗೇ ಮಾತ್ರ ಗೊತ್ತು. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲೊ, ಸಮಾಜ ಕಲ್ಯಾಣ ಇಲಾಖೆಯಲ್ಲೊ ಎರುವ ಯೋಜನೆಗಳು ನಿರಂತರವಾಗಿ ಮಣ್ಣು ಪಾಲಾಗುತ್ತವೆ. ಹಾಸ್ಟೆಲ್‍ಗಳಿಗೆ ಬಿಡುಗಡೆ ಮಾಡುವ ಹಳದಲ್ಲಿ ಎಷ್ಟು ಪಾಲು ವಿದ್ಯಾರ್ಥಿಗಳ ಹೊಟ್ಟೆ ತುಂಬಿಸುತ್ತಿದೆ, ಎಷ್ಟು ಪಾಲು ಇಲಾಖೆಯ ನೌಕರರ ಪಾಲಾಗುತ್ತಿದೆ ಎಂಬುದಕ್ಕೆ ಪ್ರತ್ಯೇಕ ಅಂಕಿಸಂಕಿಗಳ ಅಗತ್ಯವಿಲ್ಲ. ಪರಿಸ್ಥಿತಿ ಹೀಗಿದ್ದಾಗಲೂ ‘ಹಾಸ್ಟೆಲ್ ಮುದ್ದೆ, ಇಸ್ಕೊಲ್ ನಿದ್ದೆ, ಈ ವರ್ಪ ನೀನು ಇದ್ದರೂ ಇದ್ದೆ, ಎದ್ದರೂ ಎದ್ದೆ’ ಎಂಬ ಅವಹೇಳನಕಾರಿ ಬೆದರಿಕೆಗಳೇನೂ ಕಡಿಮೆ ಇಲ್ಲ. (ತರಗತಿಗಳಲ್ಲಿ ಪಾಠ ಮಾಡುವಾಗ ಇಂತಹ ಅವಹೇಳನಕಾರಿ ಬೈಗುಳಗಳು ಪ್ರಯೋಗ ಆಗುತ್ತವೆ. ಆ ಬೈಗುಳ ಪ್ರಾಸಬದ್ಧವಾಗಿದೆ. ಅಷ್ಟೇ ನಯವಾಗಿದೆ. ಹಾಸ್ಟೆಲ್‍ನಲ್ಲಿ ಪ್ರವೇಶ ಪಡೆದು ಓದುವವರು ಫೇಲ್ ಆದರೆ ಆ ವರ್ಷ ಅವರಿಗೆ ಹಾಸ್ಟೆಲ್‍ಗೆ ಅಡ್ಮಿಶನ್ ಇರುವುದಿಲ್ಲ. ಮತ್ತೆ ಆ ತರಗತಿಯಲ್ಲಿ ಪಾಸಾಗಿಯೇ ಹಾಸ್ಟೆಲ್ ಅಡ್ಮಿಶನ್ ಪಡೆಯಬೇಕು. ಹಾಗಾಗಿ ‘ಇದ್ದರೂ ಇದ್ದೆ, ಎದ್ದರೂ ಎದ್ದೆ’ ಎಂದರೆ ‘ನೀನು ಫೇಲಾಗಿ ಕೇರಿ ಅಥವಾ ಮನೆ ಸೇರುತ್ತೀಯ, ಕೇರಿ ಅಥವಾ ಮನೆ ಸೇರ ಬೇಕು’ ಎಂಬುದು ಅಪೇಕ್ಷೆ ಮತ್ತು ಧೋರಣೆ) ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಜನರಲ್ ಹಾಸ್ಟೆಲಿನ ವಿದ್ಯಾರ್ಥಿಗಳು ಎಂಬುದು ಗೊತ್ತಾದರೆ ಅವರನ್ನು ನೋಡುವ ಕ್ರಮವೇ ಬೇರೆ. ಹಾಗಾಗಿ ಕೆಲವು ವಿದ್ಯಾರ್ಥಿಗಳು ಜನರಲ್ ಹಾಸ್ಟೆಲ್‍ಗಳಿಂದ ಶಾಲಾ ಕಾಲೇಜಿಗೆ ಬರುತ್ತಿದ್ದರೂ ‘ತಾವು ಊರಿನಿಂದ ಬರುತ್ತಿದ್ದೇವೆ’ ಎಂದು ಹೇಳಿಕೊಳ್ಳುತ್ತಾರೆ. ಈ ಸಮಸ್ಯೆ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರಿಗೆ ಬಾಧಿಸುವುದು ಹೆಚ್ಚು. ಅವರಲ್ಲಿ ಬಹುಸಂಖ್ಯೆಯ ವಿದ್ಯಾರ್ಥಿನಿಯರು ‘ತಾವು ಊರಿನಿಂದ ಬರುತ್ತೇವೆ’ ಎಂದೇ ಹೇಳಿಕೊಳ್ಳುತ್ತಾರೆ. ಆದರೆ ಅವರ ಜಾತಿ ಮೂಲವನ್ನು ತಿಳಿಯಲು ಸಿ.ಐ.ಡಿ. ಮತ್ತು ಸಿ.ಬಿ.ಐ.ಗಳನ್ನೂ ಮೀರಿಸಿದ ತನಿಖೆ ನಡೆದು ಆಗಲೆ ಸಂಬಂಧಪಟ್ಟವರಿಗೆ ಒರಿಜಿನಲ್ ರಿಪೋರ್ಟ್ ಹೋಗಿರುತ್ತದೆ. ಆ ರಿಪೋರ್ಟನ್ನು ಆಧರಿಸಿ ಅವರನ್ನು ನೋಡಲಾಗುತ್ತದೆ. ಕೆಳಜಾತಿಗಳನ್ನು ಹೀಗೆ ನೋಡುವ ಸಾಮಾಜಿಕ ಮನೋಧರ್ಮ ಕೆಳಜಾತಿಗಳ ಮತ್ತು ಅಸ್ಪೃಶ್ಯ ಸಮುದಾಯಗಳ ವಿದ್ಯಾರ್ಥಿ ಸಮೂಹಕ್ಕೆ ಬಹಳ ದೊಡ್ಡ ಸಮಸ್ಯೆಯಾಗಿದೆ. ಆದರೆ ಹೋರಾಟ ಮತ್ತು ಚಳುವಳಿಗಳಲ್ಲಿ ತೊಡಗಿಕೊಂಡರೆ ಇಂತಹ ನೇಚ ಮನಸ್ಸುಗಳ ಕುಟಿಲತೆಗಳನ್ನು ಎದುರಿಸಬಹುದು. ಕೆಳಜಾತಿಯ ವಿದ್ಯಾರ್ಥಿಗಳಿಗೆ ಸಧ್ಯಕ್ಕೆ ಇದೊಂದೇ ದಾರಿ ಉಳಿದಿರುವುದು.

ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಮುಖ್ಯ ಮಂತ್ರಿಯಾಗಿದ್ದಾಗ ರಾಜ್ಯ ಸರಕಾರವು ಬಿಸಿ ಊಟದ ಯೇಜನೆಯನ್ನು ಜಾರಿಗೆ ತಂದಿತು. ಅದರಲ್ಲಿ ಕೆಲಸ ಮಾಡಲು ಎಸ್.ಸಿ., ಎಸ್.ಟಿ.ಯವರನ್ನು ನೇಮಕ ಮಾಡಲಾಯಿತು. ಆದರೆ ರಾಜ್ಯದ ಅನೇಕ ಕಡೆಗಳಲ್ಲಿ ಕೆಳಜಾತಿಗಳು ಮಾಡಿದ ಅಡುಗೆಯನ್ನು ಊಟ ಮಾಡುವುದನ್ನು ಬಹಿಷ್ಕರಿಸಲಾಯಿತು. ಇದು ಜಾತಿಯ ಬಗೆಗಿನ ಕ್ರೂರ ಮನೋಧರ್ಮವನ್ನು ತೋರಿಸುತ್ತದೆ. ಇಂತಹ ಹತ್ತು ಹಲವು ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಆದರೆ ಇವು ಯಾವುವೂ ಕೂಡ ಯಾರನ್ನೂ ಗಾಬರಿಗೊಳಿಸುತ್ತಿಲ್ಲ.

ಜಾತಿ ಮತ್ತು ಮೀಸಲಾತಿ

ಶಿಕ್ಷಣ, ಸರಕಾರಿ ಇಲಾಖೆಗಳ ನೇಮಕಾತಿ ಮತ್ತು ಚುನಾವಣೆಗಳಲ್ಲಿ ಸಂವಿಧಾನದ ಪ್ರಕಾರ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಸಂವಿಧಾನದ ಕರ್ತೃಗಳ ಪ್ರಕಾರ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳನ್ನು ಹೋಗಲಾಡಿಸುವ ಸಲುವಾಗಿ ಈ ಮೀಸಲಾತಿಯ ಅಗತ್ಯವಿದೆ ಎಂಬುದಾಗಿತ್ತು. ಈ ಬಗೆಯ ಸಮಾನತೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದರೆ ಮೀಸಲಾತಿಯನ್ನು ನಿಲ್ಲಿಸಬೇಕು ಎಂಬುದಾಗಿತ್ತು. ಆದರೆ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಎಲ್ಲಾ ಆಳುವ ವರ್ಗಗಳು ಹಾಗೆಯೇ ಮುಂದುವರಿಸಿಕೊಂಡು ಬರುತ್ತಿವೆ. ಈ ವಾಸ್ತವದ ಕಾರಣಕ್ಕೆ ಅನಂತರ ಪ್ರತಿ ಹತ್ತು ವರುಷಗಳಿಗೊಮ್ಮೆ ಈ ಮೀಸಲಾತಿಯನ್ನು ಮುಂದುವರಿಸಲಾಗುತ್ತಿದೆ. ಹೀಗೆ ಮೀಸಲಾತಿಯನ್ನು ಮುಂದುವರಿಸಿದಾಗಲೆಲ್ಲಾ ಆಳುವ ವರ್ಗದ ಪರವಾಗಿರುವ ಮಾಧ್ಯಮಗಳು ಇದರ ವಿರುದ್ಧ ಅನಾವಶ್ಯಕವಾದ ವಿರೋಧಿ ಅಭಿಪ್ರಾಯವನ್ನು ಸೃಷ್ಟಿ ಮಾಡುತ್ತವೆ. ಮೇಲುಜಾತಿಯ ಕೆಲವು ಸಾಂಪ್ರದಾಯಿಕ ಮನಸ್ಸುಗಳನ್ನು ಕೆಳಜಾತಿಗಳ ಮೇಲೆ ಎತ್ತಿ ಕಟ್ಟುತ್ತವೆ. ಮೇಲುಜಾತಿಗಳು ಮಿಸಲಾತಿಯನ್ನು ಕೆಳಜಾತಿಗಳಿಗೆ ಸರಕಾರವು ಕೊಡುತ್ತಿರುವ ‘ವಿಶೇಷ ಸವಲತ್ತು’ ಎಂಬಂತೆ ವ್ಯಾಖ್ಯಾನಿಸುತ್ತಿವೆ. ಇವನ್ನು ಪಡೆಯಬೇಕಾದ ಜನಸಮುದಾಯಗಳು ಈ ಮೀಸಲಾತಿಯನ್ನು‘ತಮ್ಮ ಹಕ್ಕು’ ಎಂದು ಪರಿಭಾವಿಸುತ್ತಿವೆ. ಹಾಗಾಗಿ ಮೀಸಲಾತಿ ಎಂಬುದು ಮೇಲುಜಾತಿಗಳ ಪ್ರಕಾರ ‘ವಿಶೇಷ ಸವಲತ್ತು’. ಆದರೆ ಅದನ್ನು ಪಡೆಯಬೇಕಾದವರ ಪ್ರಕಾರ ಮೀಸಲಾತಿಯು ಒಂದು ‘ಹಕ್ಕು’ ಹೀಗೆ ಮೇಲುಜಾತಿಗಳ ಸಾಂಪ್ರದಾಯಿಕ ಮನೋ ಧರ್ಮದವರಲ್ಲಿ ಈ ಬಗ್ಗೆ ನಿರಂತರವಾಗಿ ಅಸಮಾಧಾನ, ಅಸಹನೆ, ಆಕ್ರೋಶಗಳು ವ್ಯಕ್ತವಾಗುತ್ತಿವೆ. ‘ವಿಶೇಷ ಸವಲತ್ತು’ ಎಂಬುದನ್ನು ಸರಳವಾಗಿ ವಿವರಿಸಿ ಒಪ್ಪಿಸಲಾಗಿದೆ. ಜೊತೆಗೆ ಅದರ ಮೇಲೆ ಇಲ್ಲಸಲ್ಲದೆ ಆರೋಪವನ್ನೂ ಹೊರಿಸಲಾಗಿದೆ. ಆದರೆ ‘ಮೀಸಲಾತಿ ಕೆಳಜಾತಿಗಳ ಹಕ್ಕು’ ಎಂಬುದನ್ನು ಮಾತ್ರ ತರ್ಕಬದ್ಧವಾಗಿ ವಿವರಿಸಿ ಮಂಡಿಸುವ ಕೆಲಸ ಇನ್ನೂ ಸರಿಯಾಗಿ ನಡೆದಿಲ್ಲ. ಯಾಕೆಂದರೆ ಮೀಸಲಾತಿಯು ಯಾರನ್ನು ತಲುಪಬೇಕಾಗಿತ್ತೊ ಅವರನ್ನು ತಲುಪಿದೆಯೊ ಇಲ್ಲವೊ ಎಂಬುದು ಒಂದು ಮುಖ್ಯವಾದ ಪ್ರಶ್ನೆ. ಸಧ್ಯಕ್ಕೆ ಈ ಪ್ರಶ್ನೆಯನ್ನು ಬದಿಗಿಟ್ಟೂ ಚರ್ಚೆ ಮಾಡಬಹುದು. ಯಾವುದೆ ಸರಕಾರ ಭಾರತದ ಸಂವಿಧಾನದ ಪ್ರಕಾರ ಮೀಸಲಾತಿಯ ಯೋಜನೆಗಳನ್ನು ರೂಪಿಸಿರುವುದು ಕೆಳಜಾತಿಗಳನ್ನು ಒಂದೇ ಸಲ ಶ್ರೀಮಂತರನ್ನಾಗಿ ಮಾಡಲು ಅಲ್ಲ. ಮೀಸಲಾತಿಯ ಮೂಲಕ ಹಾಗೆ ಇಡಿಯಾಗಿ ಕೆಳಜಾತಿಗಳು ೬೦ ವರುಷ ಕಳೆದರೂ ಕೂಡ ಏನನ್ನು ಪಡೆದವು ಮತ್ತು ಎಷ್ಟನ್ನು ಪಡೆದವು ಎಂಬ ಸಾಮಾಜಿಕ ಸತ್ಯ ನಮ್ಮೆಲ್ಲರ ಮುಂದಿದೆ. ಆದರೂ ಕೆಳಜಾತಿಗಳ ಮೇಲೆ ಒಂದು ನಂಬಿಕೆಯ ರೂಪದಲ್ಲಿ ಗಟ್ಟಿಯಾಗಿ ಬೇರೂರಿರುವ ವಿರೋಧಿ ಭಾವನೆಯು ‘ಇವರಿಗೆ ಮೀಸಲಾತಿ ಕೊಡುವ ಅಗತ್ಯವಿಲ್ಲ’ ಎಂದು ಸಾರ್ವತ್ರಿಕವಾಗಿ ಹೇಳುವಂತೆ ಮಾಡಿದೆ. ವಾಸ್ತವವಾಗಿ ಕೆಳಜಾತಿಗಳಿಗೆ ರೂಪಿಸಲಾಗಿರುವ ಮೀಸಲಾತಿಯ ಸೌಲಭ್ಯವು ಅವರ ಮೇಲಿನ ಅನುಕಂಪದಿಂದಲೊ ಅಥವಾ ಕರುಣೆಯಿಂದಲೊ ಅಲ್ಲ. ಬದಲಾಗಿ ಸಮಾಜದಲ್ಲಿ ಅನಾದಿ ಕಾಲದಿಂದಲೂ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇದೆ. ಈ ಅಸಮಾನತೆಯನ್ನು ಅನೇಕ ಕಾರ್ಯಕ್ರಮಗಳ ಮೂಲಕ ನಿವಾರಿಸುವ ಪ್ರಯತ್ನಗಳು ಸಾಧ್ಯ. ಇಂತಹ ಹಲವು ಪ್ರಯತ್ನಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಗೆ ಅವಕಾಶ ವಂಚಿತರಿಗೆ ಮತ್ತು ಹಿಂದುಳಿದವರಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ. ೬೦ ವರುಷ ಕಳೆದರೂ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳು ಇನ್ನಷ್ಟು ಜಾಸ್ತಿಯಾಗಿವೆ. ಆಸ್ತಿಯುಳ್ಳ ವರ್ಗಗಳು ಮತ್ತಷ್ಟು ಆಸ್ತಿ ಮಾಡಿಕೊಂಡಿವೆ. ಹಣವುಳ್ಳ ವರ್ಗಗಳು ಇನ್ನಷ್ಟು ಹಣವನ್ನು ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯು ನೆಲ ಮುಗಿಲಿನಷ್ಟು ಅಂತರದಲ್ಲಿ ಮುಂದುವರಿದಿದೆ. ಮೀಸಲಾತಿಯನ್ನು ವಿರೋಧಿಸುವವರಿಗೆ ಈ ಸತ್ಯ ಗೊತ್ತಿಲ್ಲ ಎಂದೇನಲ್ಲ. ಅವರಿಗೆ ಗೊತ್ತಿದೆ. ಹಾಗೆ ಗೊತ್ತಿದ್ದರೂ ಕೂಡ ಕೆಳ ಜಾತಿಗಳನ್ನು ಅತ್ಯಂತ ಹೀನಾಯವಾಗಿ ಕಾಣುವ ಮನೋಧರ್ಮ ಗಟ್ಟಿಯಾಗಿ ಸಾಂಪ್ರದಾಯಿಕ ಮನಸ್ಸುಗಳಲ್ಲಿ ಕೂತಿದೆ. ಈ ಕಾರಣದಿಂದ ಅವರು ಮೀಸಲಾತಿಯನ್ನು ವಿರೋಧಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮೀಸಲಾತಿಯನ್ನು ವಿರೋಧಿಸುವವರನ್ನು ವಿರೋಧ ಮಾಡುವುದು ಯಾಂತ್ರಿಕವಾಗುತ್ತದೆ. ಅದರ ಬದಲಿಗೆ ಅವರೇಕೆ ಹಾಗೆ ಯೋಚನೆ ಮಾಡುತ್ತಿದ್ದಾರೆ. ಅದರಲ್ಲಿ ಅವರ ಸ್ವಂತ ಅಭಿಪ್ರಾಯ ಎಷ್ಟಿದೆ ಮತ್ತು ಪರಂಪರೆಯಿಂದ ಅವರಿಗೆ ಬಳುವಳಿಯಾಗಿ ಬಂದಿರುವ ಅಭಿಪ್ರಾಯ ಎಷ್ಟಿದೆ ಎಂಬುದನ್ನು ಪರಿಶೀಲಿಸಬೇಕು. ಅಂತಹ ಸಾಂಪ್ರದಾಯಿಕ ಮತ್ತು ಕೆಳಜಾತಿಗಳ ವಿರುದ್ಧದ ಅವರ ಅವರ ಅಭಿಪ್ರಾಯವನ್ನು ಬದಲಿಸಲು ಸಾಧ್ಯವೇ ಎಂದು ಆಲೋಚನೆ ಮಾಡಬೇಕು.

ಚುನಾವಣೆಗಳಲ್ಲಿ ಮೀಸಲಾತಿ ಕ್ಷೇತ್ರಗಳನ್ನು ವಿಭಾಗ ಮಾಡುವಾಗ ಮೀಸಲಾತಿಯ ವ್ಯಾಪ್ತಿಯಲ್ಲಿ ಬರುವ ಮತದಾರರು ಬಹುಸಂಖ್ಯೆಯಲ್ಲಿ ಇರುವ ಮತಕ್ಷೇತ್ರಗಳನ್ನು ಮೀಸಲು ಕ್ಷೇತ್ರಗಳನ್ನಾಗಿ ಪರಿಗಣಿಸಬೇಕು ಎಂಬುದು ಸಂವಿಧಾನದ ಕರ್ತೃಗಳ ಉದ್ದೇಶವಾಗಿತ್ತು. ಆದರೆ ಈಗ ವಾಸ್ತವ ಏನಾಗಿದೆ? ವಾಸ್ತವ ಏನಾಗಿದೆ ಎಂದರೆ ಮೀಸಲಾತಿಯ ವ್ಯಾಪ್ತಿಯ ಮತಕ್ಷೇತ್ರಗಳನ್ನು ಮೀಸಲು ಕ್ಷೇತ್ರಗಳು ಎಂದು ಪರಿಗಣಿಸಲಾಗಿದೆ. ಆ ಮೂಲಕ ಆಳುವ ವರ್ಗಗಳು ತಮ್ಮ ವರ್ಗ ಹಿತಾಸಕ್ತಿಯನ್ನು ಕಾಯ್ದುಕೊಂಡು ಬರುತ್ತಿವೆ.

ಶಿಕ್ಷಣದಲ್ಲಿ ಮೀಸಲಾತಿಯ ಸೌಲಭ್ಯವಿದೆ. ಆದರೆ ಇದು ಪೂರ್ಣಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಖಾಸಗಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಯಾವ ರೀತಿಯಲ್ಲಿ ಮೀಸಲಾತಿಯನ್ನು ಪಾಲಿಸಲಾಗಿದೆ ಎಂಬುದರ ಅಂಕಿಸಂಕಿಗಳನ್ನು ಇವತ್ತಿವರೆಗೂ ಸರಿಯಾಗಿ ಸಂಗ್ರಹಿಸಿಲ್ಲ. ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿ ಈ ಮೀಸಲಾತಿಯನ್ನು ಬಹುತೇಕ ಉಲ್ಲಂಘಿಸಲಾಗಿದೆ. ಒಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಜನರಲ್ ಮೆರಿಟ್‍ನಲ್ಲಿ ಆಯ್ಕೆಯಾಗಿದ್ದರೂ ಕೂಡ ಅಂತವರನ್ನು ಉದ್ದೇಶಪೂರ್ವಕವಾಗಿ ಮೀಸಲಾತಿ ಕೆಟಗರಿಯಲ್ಲಿ ಪ್ರವೇಶ ಮಾಡಿಸಲಾಗುತ್ತಿದೆ. ಅದರಿಂದ ಅವಕಾಶಗಳ ವಂಚನೆ ಬಹಿರಂಗವಾಗಿ ಮುಂದುವರಿದಿದೆ.