ಸರಕಾರಿ ಇಲಾಖೆಗಳ ನೇಮಕಾತಿಗಳಲ್ಲೂ ಇದೇ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ಯಾವುದೆ ಹುದ್ದೆಗಳ ನೇಮಕಾತಿಯ ಸಂದರ್ಭದಲ್ಲಿ ಮೀಸಲಾತಿ ವ್ಯಾಪ್ತಿಯ ಅಭ್ಯರ್ಥಿಗಳು ಹೆಚ್ಚು ಅಂಕಗಳನ್ನು ಪಡೆದು ಜನರಲ್ ಮೆರಿಟ್‍ನಲ್ಲಿ ಆಯ್ಕೆಯಾಗಿದ್ದರೂ ಕೂಡ, ಅಂತವರಿಗೆ ಅಕ್ರಮವಾಗಿ ಮೀಸಲಾತಿ ಕೆಟಗರಿಯಲ್ಲಿ ಆದೇಶ ಹೊರಡಿಸಲಾಗುತ್ತಿದೆ. ಇದನ್ನು ಪ್ರಶ್ನೆ ಮಾಡಿರುವ ಅನೇಕ ಪ್ರಕರಣಗಳು ಕೋರ್ಟಿನಲ್ಲೂ ಕೂಡ ಸಾಮಾಜಿಕ ನ್ಯಾಯ ಸಿಗದೇ ಸಮಾಧಿಯಾಗಿವೆ. ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಮತ್ತು ಸರಕಾರಿ ನೇಮಕಾತಿಗಳಲ್ಲಿ ಕೆಳಜಾತಿಗಳ ಅಭ್ಯರ್ಥಿಗಳ ಪ್ರಮಾಣ ಬಹಳ ದೊಡ್ಡ ಗಾತ್ರದಲ್ಲಿ ಕಾಣಿಸುತ್ತಿದೆ. ಒಂದು ಕಾಲದಲ್ಲಿ ಯಾವ ಪೈಪೋಟಿಯೂ ಇಲ್ಲದ ಇವರಿಗೆ ತಮ್ಮ ತಮ್ಮೊಳಗೇ ಇಂದು ಭಯಂಕರ ಸ್ಪರ್ಧೆ ಈಗ ಏರ್ಪಟ್ಟಿದೆ. ಈ ಸ್ಪರ್ಧೆಯು ಉಳಿದ ಮೇಲು ಜಾತಿಗಳ ಸಮುದಾಯಗಳಿಗಿಂತ ಗಾತ್ರದಲ್ಲಿ ದೊಡ್ಡದೂ ಮತ್ತು ಸ್ವರೂಪದಲ್ಲಿ ಸಂಕಿರ್ಣದ್ದೂ ಆಗಿದೆ. ಆದರೆ ಇದನ್ನು ಕುರಿತ ಸಾಮಾಜಿಕ ಅಭಿಪ್ರಾಯ ಮಾತ್ರ ಅತ್ಯಂತ ಸರಳವೂ ಮತ್ತು ಯಾಂತ್ರಿಕವೂ ಹಾಗೂ ಪೂರ್ವಗ್ರಹದ್ದೂ ಆಗಿದೆ.

ಸರಕಾರಿ ಇಲಾಖೆಗಳ ನೇಮಕಾತಿಗಳಲ್ಲಿ ಇದುವರೆಗೂ ಮೀಸಲಾತಿಯನ್ನು ಸರಿಯಾಗಿ ಪಾಲಿಸಿಲ್ಲ. ಆಯಕಟ್ಟಿನ ಜಾಗಗಳಲ್ಲಿ ಕೆಳಜಾತಿಗಳ ನೇಮಕವನ್ನು ಬದಿಗೆ ಸರಿಸುವ ಸಂದರ್ಭಗಳೇ ಹೆಚ್ಚು. ಒಂದು ವೇಳೆ ಅಂತಹ ಹುದ್ದೆಗಳಿಗೆ ನ್ಯಾಯೋಚಿತವಾಗಿ ಸಲ್ಲಬೇಕಿದ್ದುದನ್ನು ಕೇಳಿದರೆ ‘ನಿಮಗೆ ಅರ್ಹತೆ ಇಲ್ಲ, ನಿಮಗೆ ಸಾಮರ್ಥ್ಯವಿಲ್ಲ’ ಎಂಬ ಟೀಕಾ ಪ್ರಹಾರಗಳು ಹಾಗೂ ಅವಹೇಳನಕಾರಿ ಮಾತುಗಳು ಅಗ್ಗದ ಪ್ರಮಾಣದಲ್ಲಿ ಪ್ರಯೋಗವಾಗುತ್ತಿವೆ. ಅಂತಹವೇ ಆಯಕಟ್ಟಿನ ಜಾಗಗಳಲ್ಲಿ ಮೇಲುಜಾತಿಯವರು ಇದ್ದಾಗ ಅವರೆಲ್ಲರೂ ‘ಅರ್ಹತೆಯುಳ್ಳವರೂ ಮತ್ತು ಸಾಮರ್ಥ್ಯವುಳ್ಳವರೂ’ ಆಗಿರುತ್ತಾರೆ. ಆದರೆ ಕೆಳಜಾತಿಗಳ ಪ್ರಶ್ನೆ ಬಂದಾಗ ಮಾತ್ರ ಅಲ್ಲಿ ‘ಅರ್ಹತೆ ಹಾಗೂ ಸಾಮಾರ್ಥ್ಯಗಳ’ ಪ್ರಶ್ನೆ ಮುಂದೆ ಬರುತ್ತದೆ. ಇದನ್ನೆಲ್ಲ ಯಾರೊ ಒಬ್ಬ ವ್ಯಕ್ತಿ ಅಥವಾ ಕೆಲವು ವ್ಯಕ್ತಿಗಳು ಹೇಳುತ್ತಾರೆ ಎಂದು ಸರಳೀಕರಿಸಬಾರದು. ವಿವಿಧ ವಲಯಗಳಲ್ಲಿ ಪ್ರವೇಶ ಪಡೆಯುತ್ತಿರುವ ಕೆಳಜಾತಿಗಳನ್ನು ನೋಡುವ ಒಂದು ಸಾಮಾಜಿಕ ಮನೋಧರ್ಮದ ಸಾಮಾನ್ಯ ಸ್ವರೂಪ ಇದು. ಈ ಮನೋ ಧರ್ಮವು ಪ್ರಜ್ಞಾಪೂರ್ವಕವಾಗಿ ಯಾರೊ ಒಬ್ಬರ ಮೆದುಳಿನಲ್ಲಿ. ನಿರ್ದಿಷ್ಟವಾದ ಒಂದು ಸನ್ನಿವೇಶವನ್ನು ನೋಡಿ ಹುಟ್ಟುವುದಿಲ್ಲ; ಹುಟ್ಟಬೇಕಾಗಿಯೂ ಇಲ್ಲ. ಈ ಸಾಮಾಜಿಕ ಮನೋಧರ್ಮ ಈಗಾಗಲೆ ಸಮಾಜದಲ್ಲಿ ಸ್ಥಾಪನೆಯಾಗಿದೆ. ಅದು ಅವರ ಮೆದುಳಿನಲ್ಲಿ ಗಟ್ಟಿಯಾಗಿ ಕೂತಿಗೆ. ಅದು ಮೇಲುಜಾತಿಯ ವ್ಯಕ್ತಿಗಳ ಮೂಲಕ ಲೀಲಾಜಾಲವಾಗಿ ಬಳಸಲ್ಪಡುತ್ತದೆ ಅಷ್ಟೆ.

ಹೊಲ ಗದ್ದೆಗಳಲ್ಲಿ ಕೆಳಜಾತಿಯವರ ಕೈಲಿ ಕೆಲಸ ಮಾಡಿಸುವಾಗ ಯಾವ ಬಗೆಯ ಆದೇಶ ಮತ್ತು ಅವಹೇಳನಕಾರಿ ಮಾತುಗಳು ಪ್ರಯೋಗ ಆಗುತ್ತವೆಯೋ ಅಂತಹವೇ ಮಾತುಗಳು ಉಳಿದೆಲ್ಲ ವಲಯಗಳಲ್ಲಿಯೂ ಬಹುತೇಕ ಪ್ರಯೋಗ ಆಗುತ್ತಿವೆ. ಇದು ಕೆಳಜಾತಿಗಳ ಸ್ವಾಭಿಮಾನವನ್ನು ಕೆರಳಿಸುತ್ತಿದೆ. ಆದರೆ ಆ ಸ್ವಾಭಿಮಾನ ಕ್ರಿಯಾಶೀಲಗೊಂಡು, ಅದು ಕಾರ್ಯಾಚರಣೆಗೆ ಇಳಿದರೆ ಮತ್ತೇನೊ ತಾಂತ್ರಿಕ ಅಕ್ರಮಗಳನ್ನು ಇವರ ಮೇಲೆ ವಿನಾಃ ಕಾರಣ ಹೊರಿಸಲಾಗುತ್ತದೆ.

ರಾಜಕೀಯ, ನೌಕರಿ ಮತ್ತು ಅಧಿಕಾರದ ವಲಯಗಳಲ್ಲಿ ಮೀಸಲಾತಿಯ ಮೇಲೆ ಆಯ್ಕೆ ಆದವರನ್ನು ಕುರಿತು ಮಿತ ಅಂದಾಜು ಮಾಡಲಾಹುತ್ತದೆ. ಅಂದರೆ ಆ ಹುದ್ದೆಗಳಿಗೆ ಅವರಲ್ಲಿ ‘ಪ್ರತಿಭೆ ಮತ್ತು ಸಾಮರ್ಥ್ಯ ಇರಲಿಲ್ಲ; ಮೀಸಲಾತಿಯ ಆಧಾರದ ಮೇಲೆ ಆಯ್ಕೆ ಆಗಿದ್ದಾರಷ್ಟೆ’ ಎಂಬ ಅಭಿಪ್ರಾಯವನ್ನು ಗಟ್ಟಿಯಾಗಿ ನೆಲೆಗೊಳಿಸಲಾಗಿದೆ. ಬ್ಯಾಗ್‍ಲಾಗ್ ಹುದ್ದೆಗಳ ನೇಮಕಾತಿಗಳಿಗಂತೂ ಈ ಸಾಮಾಜಿಕ ಅಪಮಾನವನ್ನು ಕಿಂಚತ್ ವಿವೇಕ ಇಲ್ಲದೆ ಪ್ರಯೋಗಿಸಲಾಗುತ್ತದೆ. ಇವರು ತಮ್ಮ ತಮ್ಮ ವಲಯಗಳ ಶಕ್ತಿ ಸಾಮರ್ಥ್ಯಗಳನ್ನು ಗರಿಷ್ಠ ಮಟ್ಟದಲ್ಲಿ ಹೆಚ್ಚಿಸಿಕೊಂಡಿದ್ದರೆ ಮಾತ್ರ ಬದುಕಬಹುದು. ಇಲ್ಲವಾದರೆ ಹೀಯಾಳಿಕೆ ಮತ್ತು ಅವಹೇಳನಗಳನ್ನು ನಿರಂತರವಾಗಿ ಎದುರಿಸಿ ಬೇಕಾಗುತ್ತದೆ. ಕೆಲವು ಸಲ ಈ ಮೀಸಲಾತಿಯಡಿಯಲ್ಲಿ ಆಯ್ಕೆ ಆಗಬಾರದಿತ್ತು ಎಂತಲೂ ಅನಿಸುತ್ತದೆ. ಹಾಗಾಗಿಯೇ ಇಡೀ ಭಾರತದ ರಾಜಕಾರಣದಲ್ಲಿ ಮತ್ತು ಕರ್ನಾಟಕದ ರಾಜಕಾರಣದಲ್ಲಿ ಮೀಸಲು ಕ್ಚೇತ್ರದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಯಾವುದೆ ವಿಷಯಗಳಿಗೆ ಒಂದಾಗಿರುವುದು ಇಲ್ಲವೇ ಇಲ್ಲ. ಜೊತೆಗೆ ಮೀಸಲು ಕ್ಷೇತ್ರಗಳ ಅಭಿವೃದ್ಧಿಯೂ ಹೇಳಿಕೊಳ್ಳುವಂತೆ ಇಲ್ಲ. ಮೀಸಲು ಕ್ಷೇತ್ರಗಳ ಸಾಮಾನ್ಯ ಅಭಿವೃದ್ಧಿ ಕಾರ್ಯಯೋಜನೆಗಳಿಗೆ ಯಾರು ತೊಡಕಾಗಿದ್ದಾರೆ ಮತ್ತು ಯಾವುದು ತೊಡಕಾಗಿದೆ ಎಂಬುದನ್ನು ರಾಜಕೀಯ ವಿಶ್ಲೇಷಣೆ ಮಾಡುವ ಅಗತ್ಯವಿದೆ. ಇಲ್ಲದಿದ್ದರೆ ಆಯಾ ಕ್ಷೇತ್ರಗಳಲ್ಲಿ ಆಯ್ಕೆಯಾಗಿರುವ ಪ್ರತಿನಿಧಿಗಳನ್ನು ಕಟಕಟೆಯ ಮೇಲೆ ನಿಲ್ಲಿಸುವುದು ಸುಲಭ. ಇದರರ್ಥ ಅಂತವರನ್ನು ಸಮರ್ಥಿಸಬೇಕು ಎಂದಲ್ಲ. ಆದರೆ ಅದನ್ನು ಆಳವಾಗಿ ಪರಿಶೀಲಿಸಿ ನೋಡಬೇಕು ಎಂಬುದಷ್ಟೆ ಇಲ್ಲಿಯ ಸಾಮಾನ್ಯ ಅಪೇಕ್ಷೆ.

ಜಾತಿ ಮತ್ತು ಸಾಮಾಜಿಕ ಬಹಿಷ್ಕಾರಗಳು

ಇತ್ತೀಚಿನ ವರ್ಷಗಳಲ್ಲಿ ಜಾತಿ ಬಹಿಷ್ಕಾರಗಳನ್ನು ಮೇಲಿಂದ ಮೇಲೆ ನಡೆಸಲಾಗುತ್ತಿದೆ. ಒಂದು ಕಾಲದಲ್ಲಿ ನಿರ್ದಿಷ್ಟವಾಗಿ ಕಳೆದ ಶತಮಾನದ ೭೦-೮೦ರ ದಶಕದಲ್ಲಿ ಜಾತಿ ಬಹಿಷ್ಕಾರದಂತಹ ಘಟನೆಗಳು ನಡೆದವೆಂದರೆ ಇಡೀ ಸಮಾಜವೇ ದಿಗಿಲುಗೊಳ್ಳುತ್ತಿತ್ತು; ಅದರಲ್ಲೆ ಕೆಲವು ‘ಸಭ್ಯರು’ ತಲೆ ತಗ್ಗಿಸುತ್ತಿದ್ದರು. ಇಂದು ಸಾಮಾಜಿಕ ಬಹಿಷ್ಕಾರ ಮಾಡಲಾಗಿದೆ ಎಂಬುದು ಕೇವಲ ಒಂದು ಸುದ್ಧಿ ಅಷ್ಟೆ. ಅದು ಕೇವಲ ಒಂದು ಮಾಹಿತಿ ಅಷ್ಟೆ. ಇದು ಮಾತ್ರವಲ್ಲ. ಅತ್ಯಾಚಾರ, ಮಾನಭಂಗ, ಕೊಲೆ, ಅಪಘಾತದ ಸಾವುಗಳು ಮುಂತಾದವೆಲ್ಲ ಇಂದು ಕೇವಲ ಸುದ್ಧಿ ಹಾಗೂ ಮಾಹಿತಿಗಳು ಅಷ್ಟೆ. ಅವನ್ನೆಲ್ಲ ಆಲಿಸಿಕೊಂಡರೆ ನಮಗೆ ದಿಗಿಲು ಎನಿಸುವುದಿಲ್ಲ. ಕಣ್ಣುಗಳ ಹುಬ್ಬು ಏರುವುದಿಲ್ಲ. ಕರುಳು ಚುರುಕ್ ಎನ್ನುವುದಿಲ್ಲ. ಇವೆಲ್ಲ ಮಾಮೂಲಿ ಯಾಗಿ, ಸಾಮಾನ್ಯ ಸಂಗತಿಯಾಗಿ ಹೋಗಿದೆ.

ಕಳೆದ ಶತಮಾನದ ೭೦-೮೦ರ ದಶಕದಲ್ಲಿ ಎಲ್ಲಾದರೂ ಜಾತಿ ಬಹಿಷ್ಕಾರ ಹಾಕಿದ್ದಾರೆಂದರೆ ಶೋಷಿತ ಸಮುದಾಯವನ್ನು ಅದು ಬಡಿದೆಬ್ಬಿಸುತ್ತಿತ್ತು. ಅವರನ್ನು ಸಂಘಟಿತರನ್ನಾಗಿ ಮಾಡುತ್ತಿತ್ತು. ಬಹಿಷ್ಕಾರ ಹಾಕಿದ ಊರಿಗೋ, ಕೇರಿಗೋ ಅವರು ಸಂಘಟಿತರಾಗಿ ಕಾಲ್ನಡಿಗೆ ಜಾಥಾ ಮಾಡುತ್ತಿದ್ದರು. ಅದರ ವಿರುದ್ಧ ಹೋರಾಟ ಮತ್ತು ಪ್ರತಿಭಟನೆಗಳನ್ನು ಸಂಘಟಿಸುತ್ತಿದ್ದರು. ಪತ್ರಿಕೆಗಳ ಓದುಗರ ವಿಭಾಗದಲ್ಲಿ ಪ್ರತಿಕ್ರಿಯೆಗಳನ್ನು ಬರೆಯಲಾಗುತ್ತಿತ್ತು. ಆದರೆ ಇವತ್ತು ಈ ಯಾವನ್ನೂ ನಿರೀಕ್ಷಿಸುವಂತಿಲ್ಲ.

ಜಾತಿ ಬಹಿಷ್ಕಾರದಂತಹ ಪ್ರಕರಣಗಳನ್ನು ಹೇಗೆ ಪರಿಭಾವಿಸಬೇಕು ಎಂಬುದನ್ನು ಕುರಿತು ಆಲೋಚನೆ ಮಾಡುವ ಅಗತ್ಯವಿದೆ. ಯಾಕೆಂದರೆ ಜಾತಿ ಬಹಿಷ್ಕಾರಗಳನ್ನು ಹಾಕಿದಾಗ, ಅವುಗಳಿಗೆ ಸಂಬಂಧಿಸಿದ ಇಲಾಖೆಗಳು ಕೈಗೊಳ್ಳುವ ಕೆಲಸಗಳು ಒಂದು ಬಗೆಯವು. ಪೊಲೀಸ್ ಇಲಾಖೆ ತೆಗೆದುಕೊಳ್ಳುವ ತೀರ್ಮಾನ ಮತ್ತೊಂದು ಬಗೆಯದು. ಹಾಗೇ ಜಾತಿ ಬಹಿಷ್ಕಾರದ ಘಟನೆಯನ್ನು ವಿರೋಧಿಸುವ ಸಂಘಟನೆ ಹಾಗೂ ಹೋರಾಟಗಳ ದೃಷ್ಟಿಕೋನ ಇನ್ನೊಂದು ಬಗೆಯದು. ಈ ಮೂರೂ ಆಯಾಮಗಳಲ್ಲಿ ಜಾತಿ ಬಹಿಷ್ಕಾರದ ಘಟನೆಗಳಿಗೆ ಪ್ರತಿಕ್ರಿಯೆ ಬರುತ್ತದೆ. ಆದರೆ ಜಾತಿ ಬಹಿಷ್ಕಾರದ ಘಟನೆಗಳು ಮುಂದುವರಿಯುತ್ತಲೆ ಇವೆ. ಹಾಗಿದ್ದರೆ ಇದಕ್ಕೆ ಕಾರಣಗಳೇನು?

ಸಾಮಾನ್ಯವಾಗಿ ಜಾತಿ ಬಹಿಷ್ಕಾರ ಹಾಕುವುದು ಕೆಳಜಾತಿ ಮತ್ತು ಅದರಲ್ಲೂ ಮುಖ್ಯವಾಗಿ ಅಸ್ಪೃಶ್ಯ ಜಾತಿಗಳಿಗೆ. ಒಂದು ಊರಿನಲ್ಲಿ ಆ ಜಾತಿಯ ಸಂಖ್ಯಾ ಬಲ, ಭೂಮಿಯ ಸಂಬಂಧ, ಅವರ ಆರ್ಥಿಕತೆ, ಅವರ ದುಡಿಮೆಯ ವಿಧಾನ, ಅವರ ಸಂಘಟನೆಯ ಸಾಮರ್ಥ್ಯ ಇವೇ ಮುಂತಾದ ಅಂಶಗಳನ್ನು ಅಲ್ಲಿ ಗುರುತಿಸಬಹುದು. ವಿಶೇಷವೆಂದರೆ ಜಾತಿ ಬಹಿಷ್ಕಾರಗಳಿಗೆ ಒಳಗಾಗುವ ಸಮುದಾಯಗಳು ಮೇಲಿನ ಅಂಶಗಳಲ್ಲಿ ಬಹುತೇಕ ಹಿಂದುಳಿದವೇ ಆಗಿರುತ್ತವೆ. ಮತ್ತೊಂದು ಕಡೆ ಸಾಂಪ್ರದಾಯಿಕ ಜಾತಿಯ ಮನೋಧರ್ಮಗಳಿಗೆ ಮತ್ತು ಮನೋಭಾವಗಳಿಗೆ ವ್ಯತಿರಕ್ತವಾಗಿ ನಡೆದು ಕೊಂಡಿರುತ್ತವೆ. ಹೀಗೆ ನಡೆದುಕೊಳ್ಳುವುದು ಕೇವಲ ಸಾಮಾಜಿಕ ಸಂಗತಿಯನ್ನು ಮಾತ್ರ ಆಧರಿಸಿರಬೇಕಿಲ್ಲ. ಅಲ್ಲಿ ಆರ್ಥಿಕ ಕಾರಣವಿರಬಹುದು. ಚುನಾವಣೆಯ ಫಲಿತಾಂಶವೇ ಇರಬಹುದು. ಹೀಗೆ ಇನ್ನೂ ಬೇರೆ ಬೇರೆ ಅಂಶಗಳು ಜಾತಿ ಬಹಿಷ್ಕಾರ ಪ್ರಕರಣಗಳ ಹಿಂದೆ ಕ್ರಿಯಾಶೀಲವಾಗಿರುತ್ತವೆ.

ಆದರೆ ಜಾತಿ ಬಹಿಷ್ಕಾರದ ಪ್ರಕರಣವನ್ನು ಸಂಬಂಧಿಸಿದ ಇಲಾಖೆ, ಪೊಲೀಸ್ ಕಾನೂನು ಮತ್ತು ಕೆಲವು ಸಂಘಟನೆಗಳು ಅದನ್ನು ಪರಿಭಾವಿಸುವ ಕ್ರಮವೇ ಬೇರೆ. ಜಾತಿ ಬಹಿಷ್ಕಾರಗಳನ್ನು ಮೇಲಿನ ಮೂರೂ ಇಲಾಖೆಗಳು ಕೇವಲ ಘಟನೆಗಳು ಎಂದು ಪರಿಗಣಿಸುತ್ತವೆ. ಅವರು ಜಾತಿ ಬಹಿಷ್ಕಾರಗಳನ್ನು ಕೇವಲ ಘಟನೆಗಳು ಎಂದು ನೋಡುವ ಕಾರಣದಿಂದ ಘಟನೆಯನ್ನು ಆಧರಿಸಿ ಅದಕ್ಕೆ ನ್ಯಾಯ ಕೇಳುತ್ತಾರೆ. ಅಲ್ಲಿ ಅಪೇಕ್ಷಿಸತ ನ್ಯಾಯ ಸಿಗುತ್ತದೊ ಬಿಡುತ್ತದೊ ಅದು ಬೇರೆ ಪ್ರಶ್ನೆ. ಆದರೆ ಅವನ್ನು ಹಾಗೆ ಕೇವಲ ಘಟನೆಗಳು ಎಂದು ಸರಳೀಕರಿಸಬಹುದೆ ಎಂಬುದು ಇಲ್ಲಿ ಮುಖ್ಯ ಪ್ರಶ್ನೆ.

ಬಹಿಷ್ಕಾರ ಹಾಕುವ ಜಾತಿಗಳೂ ಮತ್ತು ಬಹಿಷ್ಕಾರ ಹಾಕಿಸಿಕೊಂಡ ಜಾತಿಗೂ ಸಾಮಾಜಿಕವಾದ ಹಾಗೂ ಆರ್ಥಿಕವಾದ ಈ ವ್ಯತ್ಯಾಸವೇ ಜಾತಿ ಬಹಿಷ್ಕಾರ ಹಾಕಲು ಮೂಲಭೂತ ಕಾರಣ. ಆದರೆ ಅನೇಕ ಸಲ ಜಾತಿ ಬಹಿಷ್ಕಾರಕ್ಕೆ ಇದಲ್ಲದ ಬೇರೆ ಕಾರಣಗಳನ್ನು ಹೆಸರಿಸಲಾಗುತ್ತದೆ. ಉದಾಹರಣೆಗೆ, ಒಂದು: ಕೇರಿಯವರನ್ನು ಕೆಲಸಕ್ಕೆ ಕರೆದಾಗ ಅವರು ಕೆಲಸಕ್ಕೆ ಬರಲಿಲ್ಲ ಎಂಬುದು. ಎರಡು: ಮೇಲುಜಾತಿಯ ಹುಡುಗಿಯನ್ನು ಕೆಳಜಾತಿಯ ಹುಡುಗನೊಬ್ಬ ಚುಡಾಯಿಸಿದ ಎಂಬುದು. ಮೂರು: ಮೇಲುಜಾತಿಯವರ ಬೆಳೆಗಳಿಗೆ ಕೆಳಜಾತಿಯವರ ದನಗಳು ನುಗ್ಗಿದವು ಎಂಬುದು. ನಾಲ್ಕು: ಚುನಾವಣೆಯೊಂದರಲ್ಲಿ ಮೇಲುಜಾತಿಯ ಅಭ್ಯರ್ಥಿಯನ್ನು ಕೆಳಜಾತಿಯ ಅಭ್ಯರ್ಥಿಯೊಬ್ಬ ಸೋಲಿಸಿದ ಎಂಬುದು. ಇವೆಲ್ಲ ಅಲ್ಲಿ ತೋರುವ ತಕ್ಷಣದ ನೆಪಗಳು ಅಷ್ಟೆ. ಅವು ಕಾರಣಗಳಲ್ಲಿ. ಹಾಗಾಗಿ ಅನೇಕ ಸಲ ಇಂತಹ ಪ್ರಕರಣಗಳ ಬಗ್ಗೆ ಅನಾವಶ್ಯಕ ಚರ್ಚೆ ಮಾತುಕತೆಗಳು ನಡೆಯುತ್ತವೆ. ಮೇಲಿನ ಉದಾಹರಣೆಗಳನ್ನೆ ಚರ್ಚೆಗೆಂದು ಪುನರಾವರ್ತಿಸಿ ವಿವರಿಸುವ ಅಗತ್ಯವಿದೆ.

ಬಹಿಷ್ಕಾರ ಹಾಕಿರುವ ಮತ್ತು ಆ ಕುರಿತು ನಡೆಯುವ ಚರ್ಚೆಗಳು ಈ ಮುಂದಿನಂತೆ ಎರಬಹುದು. ಪ್ರಕರಣ ಒಂದು: ಕಾರಣ: ‘ಒಂದು ಕೇರಿಯವರನ್ನು ಕೆಲಸಕ್ಕೆ ಕರೆದಾಗ ಅವರು ಕೆಲಸಕ್ಕೆ ಬರಲಿಲ್ಲ. ಆ ಕಾರಣಕ್ಕೆ ಬಹಿಷ್ಕಾರ ಹಾಕಲಾಗಿದೆ’. ಆ ಕುರಿತ ಚರ್ಚೆ: ‘ಜಮೀನುದಾರರಿಗೆ ಕೆಲಸ ಮಾಡಿಸಲು ಇವರೇ ಆಗಬೇಕಾ? ಬೇರೆಯವರು ಸಿಗುವುದಿಲ್ಲವಾ? ಅಥವಾ ಅವರು ಕೆಲಸಕ್ಕೆ ಬಾರದಿರುವ ಸ್ವಾತಂತ್ರ‍್ಯ ಅವರಿಗಿದೆ. ಕೆಲಸಕ್ಕೆ ಬರಲೇಬೇಕು ಎಂದು ಒತ್ತಾಯ ಮಾಡುವ ಅಗತ್ಯವೇನಿದೆ? ಹಾಗೆ ಒತ್ತಾಯ ಮಾಡುವ ಅಧಿಕಾರವನ್ನು ಅವರಿಗೆ ಕೊಟ್ಟವರು ಯಾರು?’ ಎಂಬ ಚರ್ಚೆ ನಡೆಯುತ್ತದೆ. ಪ್ರಕರಣ ಎರಡು: ‘ಮೇಲುಜಾತಿಯ ಹುಡುಗಿಯೊಬ್ಬಳನ್ನು ಕೆಳಜಾತಿಯ ಹುಡುಗನೊಬ್ಬ ಚುಡಾಯಿಸಿದ. ಆ ಕಾರಣಕ್ಕೆ ಬಹಿಷ್ಕಾರ ಹಾಕಲಾಗಿದೆ’. ಆ ಕುರಿತು ಚರ್ಚೆ: ‘ಒಬ್ಬ ಹುಡುಗ ಮತ್ತು ಒಬ್ಬಳು ಹುಡುಗಿಯ ನಡುವೆ ಪ್ರೀತಿ ಪ್ರೇಮಗಳು ಸಾಮಾನ್ಯ ಅವಕ್ಕೆ ಜಾತಿಯ ಕಟ್ಟುಗಳಿರುವುದಿಲ್ಲ. ಅದೇನಿದ್ದರೂ ಭಾವನಾತ್ಮಕವಾದುದು. ಪರಸ್ಪರ ಪ್ರೀತಿಸುವುದು, ಪ್ರೇಮಿಸುವುದು ಅವರವರ ಆಸಕ್ತಿ ಹಾಗೂ ಅವರವರ ಹಕ್ಕು. ಆದರೆ ಭಿನ್ನ ಜಾತಿಗಳ ನಡುವೆ ಪ್ರೀತಿ ಪ್ರೇಮ ನಡೆಸಬಾರದು ಎಂದು ಎಲ್ಲಿ ಹೇಳಿದೆ, ತೋರಿಸಿ ನೋಡೋಣ. ಹಾಗಾಗಿ ಭಿನ್ನ ಜಾತಿಯ ಹುಡುಗ ಹುಡುಗಿ ಪರಸ್ಪರ ಪ್ರೀತಿಸಿರುವುದರಿಂದ ಅವರನ್ನು ಮದುವೆ ಮಾಡುವುದು ಒಳ್ಳೆಯದು. ಜಾತಿ ಬಹಿಷ್ಕಾರವನ್ನು ವಾಪಸ್ ಪಡೆಯುವುದು ಒಳ್ಳೆಯದು’ ಎಂಬ ಚರ್ಚೆ ನಡೆಯುತ್ತದೆ. ಪ್ರಕರಣ ಮೂರು: ‘ಮೇಲುಜಾತಿಯವರ ಬೆಳೆಗಳಿಗೆ ಕೆಳಜಾತಿಯವರ ದನಗಳು ನುಗ್ಗಿದವು. ಆ ಕಾರಣಕ್ಕೆ ಬಹಿಷ್ಕಾರ ಹಾಕಲಾಗಿದೆ’. ಆ ಕುರಿತ ಚರ್ಚೆ: ‘ಅಯ್ಯೊ ದನಗಳು ಹೊಲಕ್ಕೆ ನುಗ್ಗಿದ ಮಾತ್ರಕ್ಕೆ ಆ ಜಾತಿಯವರಿಗೆ ಜಾತಿ ಬಹಿಷ್ಕಾರ ಹಾಕುವ ಅಗತ್ಯವೇನಿತ್ತು? ಇಷ್ಟು ಸಣ್ಣ ವಿಷಯಕ್ಕೆ ಇಷ್ಟು ದೊಡ್ಡ ಪ್ರಕರಣ ನಡೆಯಬೇಕಿತ್ತೆ? ದನಗಳಿಗೇನು ಗದ್ದೆಗಳು ಯಾವ ಜಾತಿಯವರವು ಎಂಬುದು ಗೊತ್ತಿತ್ತೆ?’ ಎಂಬ ಚರ್ಚೆ ನಡೆಯುತ್ತದೆ. ಅಂದರೆ ಇಲ್ಲೆಲ್ಲ ಪ್ರತಿಯೊಂದು ಪ್ರಕರಣದ ಸುತ್ತಲೂ ತೋರಿಕೆಗೆ ಕಾಣುವ ನೆಪಗಳನ್ನೇ ಬಹಿಷ್ಕಾರದ ಪ್ರಕರಣಗಳಿಗೆ ಮೂಲಭೂತ ಕಾರಣಗಳು ಎಂದು ತಿಳಿದು ಅದನ್ನು ವಿವರಿಸುವ ಕೆಲಸ ನಡೆಯುತ್ತಿದೆ. ಆದರೆ ಪರಿಸ್ಥಿತಿ ಅಷ್ಟು ಸರಳವಿಲ್ಲ. ಯಾಕೆಂದರೆ ಜಾತಿ ಬಹಿಷ್ಕಾರ ನಡೆದಾಗ ತಕ್ಷಣಕ್ಕೆ ತೋರುವ ಒಂದು ನೆಪವಿರುತ್ತದೆ. ಆದರೆ ಅದನ್ನೆ ತಪ್ಪು ತಿಳಿದು ಇದು ಜಾತಿ ಬಹಿಷ್ಕಾರಕ್ಕೆ ಮೂಲಭೂತ ಕಾರಣ ಎಂದು ತೀರ್ಮಾನಿಸಲು ಬರುವುದಿಲ್ಲ.

ಊರಿನಲ್ಲೊ, ಕೇರಿಯಲ್ಲೊ ಒಂದು ಜಾತಿಗೂ ಮತ್ತೊಂದು ಜಾತಿಗೂ ಅನಾದಿ ಕಾಲದಿಂದಲೂ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಗಾಗಿ ಕೆಲವು ಸಂಬಂಧಗಳಿವೆ. ಇತ್ತೀಚಿನ ಕೆಲವು ಬೆಳವಣಿಗೆಗಳು ಆ ಹಳೆಯ ಮಾದರಿಯ ಸಂಬಂಧಗಳನ್ನು ಅಲ್ಲಾಡಿಸುವಂತೆ ಮಾಡಿವೆ. ಹೀಗಿರುವುದರಿಂದ ಎರಡು ಭಿನ್ನ ಜಾತಿಗಳ ನಡುವಿನ ಸಂಬಂಧಗಳಲ್ಲೂ ಹಳೆಯವು ಅಲ್ಲಾಡತೊಡಗಿವೆ. ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಸರಕಾರದ ಕಾಲದಲ್ಲಿ ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್‍ಗಳ ವಿಕೇಂದ್ರೀಕರಣದ ಆಡಳಿತವನ್ನು ಜಾರಿ ಮಾಡಲಾಯಿತು. ಅದಕ್ಕೆ ನಡೆಸಿದ ಚುನಾವಣೆಗಳಲ್ಲಿ ಮೊದಲ ಬಾರಿಗೆ ಕರ್ನಾಟಕದ ಪ್ರತಿಯೊಂದು ಹಳ್ಳಿಗಳೂ ಕೂಡ ಅಕ್ಷರಶಃ ರಣಾಂಗಣಗಳಾಗಿದ್ದವು. ಅಷ್ಟು ಮಾತ್ರವಲ್ಲ. ಅಪ್ಪ ಕಾಂಗ್ರೆಸ್ ಪಕ್ಷವಾದರೆ, ಅವ್ವ ಜನತಾ ಪಕ್ಷ. ಮಗ ಕಾಂಗ್ರೆಸ್ ಪಕ್ಷವಾದರೆ ಅಪ್ಪ ಜನತಾ ಪಕ್ಷ. ಒಂದು ಕೇರಿಯವರು ಜನತಾ ಪಕ್ಷವಾದರೆ ಮತ್ತೊಂದು ಕೇರಿಯವರು ಕಾಂಗ್ರೆಸ್ ಪಕ್ಷ. ಹೀಗೆ ಊರು, ಕೇರಿ ಮತ್ತು ಕುಟುಂಬಗಳೆಲ್ಲ ಮೊದಲ ಬಾರಿಗೆ ರಾಜಕೀಯ ರಾಡಿಗೆ ತಲ್ಲಣಿಸಿ ಹೋದವು. ಆ ಸಂದರ್ಭದಲ್ಲೆ ಅವರವರ ಮಧ್ಯ ಆ ಮೊದಲೇ ಇದ್ದ ಭಿನ್ನಾಭಿಪ್ರಾಯಗಳು ಹೊರಕ್ಕೆ ಬರಲು ಆ ಚುನಾವಣೆಗಳು ಶಕ್ತಿಶಾಲಿ ಸಂದರ್ಭಗಳಾದವು. ಆ ಸಂದರ್ಭಗಳನ್ನು ಬಳಸಿಕೊಂಡು ತಮ್ಮ ಮೊದಲಿನ ಅನೇಕ ಅಸಹನೆಗಳನ್ನು, ಕೋಪ, ಈರ್ಷ್ಯೆ ಮತ್ತು ದ್ವೇಷಗಳನ್ನು ತೀರಿಸಿಕೊಂಡರು. ಹಾಗಿದ್ದರೆ ಇದಕ್ಕೆಲ್ಲಾ ಆ ಚುನಾವಣೆಗಳನ್ನೇ ಕಾರಣವನ್ನಾಗಿ, ಹೊಣೆಯನ್ನಾಗಿ ಮಾಡಬಹುದೆ? ಇಲ್ಲ. ಆ ಮೊದಲೇ ಬೇರೆ ಬೇರೆ ಜಾತಿಗಳ ನಡುವೆ ಇದ್ದ ಜಿದ್ದನ್ನು ತೀರಿಸಿಕೊಳ್ಳಲು ಚುನಾವಣೆಗಳು ಕೇವಲ ಸಂದರ್ಭಗಳಾದವು ಮತ್ತು ನೆಪಗಳಾದವು. ಜಾತಿ ಬಹಿಷ್ಕಾರಗಳನ್ನೂ ಕೂಡ ಇದೇ ರೀತಿಯಲ್ಲಿ ಗ್ರಹಿಸಬೇಕಾಗಿದೆ; ನೋಡಬೇಕಾಗಿದೆ. ಎಂದರೆ ಜಾತಿ ಬಹಿಷ್ಕಾರಗಳಿಗೆ ಕೆಲವು ಸಂದರ್ಭಗಳಿರುತ್ತವೆ ಮತ್ತು ಅವಕ್ಕೆ ಕೆಲವು ನೆಪಗಳಿರುತ್ತವೆ. ಆ ಸಂದರ್ಭಗಳನ್ನೆ ಅಥವಾ ಆ ನೆಪಗಳನ್ನೇ ಮೂಲಭೂತ ಕಾರಣಗಳು ಎನ್ನಲು ಬರುವುದಿಲ್ಲ. ಮುಖ್ಯ ವಿಷಯ ಏನೆಂದರೆ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಹಾಗೂ ಸಾಂಪ್ರದಾಯಿಕ ರಚನೆಯ ಹಳ್ಳಿಗಳಲ್ಲಿ ವಾಸ ಮಾಡುವುದು ಈ ಮೂರು ಅಂಶಗಳು ಇದರ ಹಿಂದೆ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡುತ್ತವೆ. ಜಾತಿ ಬಹಿಷ್ಕಾರಗಳನ್ನು ಹೋಗಲಾಡಿಸುವುದು ಎಂದರೆ ಈ ಪ್ರಧಾನ ಕಾರಣಗಳನ್ನು ಸಡಿಲಗೊಳಿಸುವುದು ಇಲ್ಲವೆ ಅವನ್ನು ಅಳಿಸುವುದೇ ಎಂದೇ ಅರ್ಥ. ಆದರೆ ಜಾತಿ ಬಹಿಷ್ಕಾರದ ಘಟನೆಯೊಂದಕ್ಕೆ ನೆಪವಾಗಿರುವ ಸಂದರ್ಭವನ್ನು ಪ್ರಧಾನ ಚರ್ಚೆಗೆ ತರುವುದರಲ್ಲಿ ಯಾವ ಪ್ರಯೋಜನವೂ ಇಲ್ಲ. ಜಾತಿ ಬಹಿಷ್ಕಾರದ ನಿವಾರಣೆಯು ಒಂದು ವರ್ಷದ ಕೆಲಸವಲ್ಲ. ಅದು ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳನ್ನು ಹೋಗಲಾಡಿಸುವ ಪ್ರಕ್ರಿಯೆಯ ಒಂದು ಭಾಗ ಎಂದು ಪರಿಗಣಿಸಬೇಕು.

ಹಾಗಾಗಿ ಜಾತಿ ಬಹಿಷ್ಕಾರಗಳನ್ನು ಪರಿಭಾವಿಸುತ್ತಿರುವ ಕ್ರಮಗಳಲ್ಲೇ ತಾತ್ವಿಕವಾಗಿ ಕೆಲವು ತೊಡಕುಗಳಿವೆ. ಜಾತಿ ಬಹಿಷ್ಕಾರಗಳನ್ನು ಕೇವಲ ಸಾಮಾಜಿಕವಾದ ನಿರ್ದಿಷ್ಟ ಘಟನೆಗಳು ಎಂದು ಸರಳೀಕರಿಸಬಾರದು. ಅವು ಸಾಮಾಜಿಕ ವ್ಯವಸ್ಥೆಯ ಚಲನ ಶೀಲತೆಯ ಬಿಡಿಸಲಾರದ ಭಾಗಗಳು. ಜೊತೆಗೆ ಜಾತಿ ಬಹಿಷ್ಕಾರದ ಘಟನೆಗಳಿಗೆ ನಿರ್ದಿಷ್ಟ ಪ್ರಕರಣವನ್ನು ಆಧರಿಸಿ, ಹಾಕಿರುವ ಬಹಿಷ್ಕಾರವನ್ನು ಸಡಿಲಗೊಳಿಸಿದರೆ ಅಥವಾ ಅದನ್ನು ವಾಪಸ್ ತೆಗೆದುಕೊಂಡರೆ ಕೆಳಜಾತಿಗಳ ಅಥವಾ ಅಸ್ಪೃಶ್ಯರ ಸಮಸ್ಯೆಗಳು ಪರಿಹಾರ ಆಗಿಬಿಡುತ್ತವೆ ಎಂದು ಸರಳೀಕರಿಸುವಂತೆಯೂ ಇಲ್ಲ. ಇದು ಏನೇ ಇರಲಿ. ಜಾತಿ ಬಹಿಷ್ಕಾರಗಳನ್ನು ಕೇವಲ ಘಟನೆಗಳು ಎಂದು ನೋಡುತ್ತಿರುವ ಕ್ರಮವೇ ಮೂಲತಃ ಸಮಾಜ ವಿರೋಧಿಯಾದುದು. ಅದನ್ನು ಘಟನೆ ಎಂದು ಪರಿಭಾವಿಸದೆ ಅದನ್ನು ಸಾಮಾಜಿಕ ಚಲನಶೀಲತೆಯ ಪ್ರಕ್ರಿಯೆಗೆ ಸಂಬಂಧಿಸಿದ್ದು ಎಂದು ಸಂಕೀರ್ಣವಾಗಿ ಅರ್ಥೈಸಬೇಕಾಗಿದೆ. ಇದು ಜಾತಿ ಬಹಿಷ್ಕಾರವನ್ನು ನೋಡುವುದಕ್ಕೆ ಮಾತ್ರ ಸೀಮಿತವಾದುದಲ್ಲ. ಬದಲಾಗಿ ಇಡೀ ಸಾಮಾಜಿಕ ನಡಿಗೆಯನ್ನು ಗ್ರಹಿಸಬೇಕಾದ ತಾತ್ವಿಕ ವಿಧಾನಕ್ಕೆ ಸಂಬಂಧಿಸಿದುದು.

ಜಾತಿ ಮತ್ತು ಗ್ರಾಮಗಳು

ಭಾರತವು ಹಳ್ಳಿಗಳಿಂದ ಕೂಡಿದೆ. ಅಥವಾ ಹಳ್ಳಿಗಳೇ ಭಾರತದ ಬಹು ಮುಖ್ಯ ಭಾಗವಾಗಿವೆ. ಈ ದೃಷ್ಟಿಯಲ್ಲಿ ಭಾರತದ ವಿಶ್ಲೇಷಣೆ ಎಂದರೆ ಅದು ನಿಸ್ಸಂಶಯವಾಗಿ ಹಳ್ಳಿಗಳ ವಿಶ್ಲೇಷಣೆಯಾಗಿದೆ. ಆದರೆ ಹಳ್ಳಿಗಳನ್ನು ಯಾವ ದೃಷ್ಟಿಕೋನದಲ್ಲಿ ವಿಶ್ಲೇಷಣೆ ಮಾಡಬೇಕು ಎಂಬುದು ಇಲ್ಲಿ ಮುಖ್ಯವಾದ ಪ್ರಶ್ನೆ. ರಾಜಕೀಯ ಶಾಸ್ತ್ರಜ್ಞರು, ಅರ್ಥ ಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಒಂದೊಂದು ಬಗೆಯಲ್ಲಿ ಭಾರತದ ಹಳ್ಳಿಗಳನ್ನು ಗ್ರಹಿಸಿದ್ದಾರೆ. ಜೊತೆಗೆ ಸಾಹಿತಿಗಳೂ ಕೂಡ ತಮ್ಮ ಕಥನ ಸಾಹಿತ್ಯದಲ್ಲಿ ಮತ್ತು ಅವರ ಇನ್ನಿತರೆ ಸಾಹಿತ್ಯ ಪ್ರಕಾರಗಳಲ್ಲಿ ಹಳ್ಳಿಗಳ ಸಂಕೀರ್ಣವಾದ ಜಿತ್ರಣಗಳನ್ನು ನಿರೂಪಿಸಿದ್ದಾರೆ. ಎಂ.ಕೆ. ಗಾಂಧಿಯವರು ತಮ್ಮ ‘ಹಿಂದ್ ಸ್ವರಾಜ್’ ಕೃತಿಯಲ್ಲಿ ಭಾರತದ ಹಳ್ಳಿಗಳನ್ನು ಚಿತ್ರಿಸಿರುವ ಕ್ರಮ ಒಂದು ಬಗೆಯದು. ಆದರೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಹಳ್ಳಿಗಳನ್ನು ವಿಶ್ಲೇಷಿಸಿರುವ ಕ್ರಮವೇ ಬೇರೆ. ಭೂಮಾಲೀಕ ವರ್ಗದಿಂದ ಹಳ್ಳಿಗಳನ್ನು ನೋಡಿದಾಗ ಕಾಣುವ ಹಳ್ಳಿಗಳೇ ಬೇರೆ. ಕೂಲಿ ಕಾರ್ಮಿಕರ ನೆಲೆಯಿಂದ ಹಳ್ಳಿಗಳನ್ನು ನೋಡಿದಾಗ ಕಾಣುವ ಹಳ್ಳಿಗಳೇ ಬೇರೆ. ಹಾಗಾಗಿ ಜಾತಿ ಸಮಸ್ಯೆಯ ವಿಶ್ಲೇಷಣೆಯ ಸಂದರ್ಭದಲ್ಲಿ ಹಳ್ಳಿಗಳನ್ನು ಗ್ರಹಿಸುವ ವಿಭಿನ್ನ ಮಾದರಿಗಳ ಬಗ್ಗೆ ಚರ್ಚೆಯನ್ನೇಕೆ ಎತ್ತಬೇಕಾಯಿತು ಎಂದರೆ, ಇವತ್ತಿಗೂ ಕೂಡ ಜಾತಿಯ ಪ್ರಶ್ನೆ ಗಂಭೀರವಾಗಿ ಕಾಡುತ್ತಿರುವುದು ಹಳ್ಳಿಗಳಲ್ಲಿ. ಆದರೆ ಜಾತಿಯ ಸಮಸ್ಯೆಯನ್ನು ಕುರಿತು ಚರ್ಚೆ ಮಾಡುತ್ತಿರುವುದು ಏ.ಸಿ. ರೂಮುಗಳಲ್ಲಿ ಮತ್ತು ನಾಲ್ಕು ಗೋಡೆಗಳ ನಡುವಿನ ಸೆಮಿನಾರುಗಳಲ್ಲಿ.

ಭಾರತದ ಹಳ್ಳಿಗಳ ವಿಶ್ಲೇಷಣೆ ಎಂದರೆ ಅದು ನಿರ್ಣಾಯಕವಾಗಿ ಭಾರತದ ಜಾತಿಗಳ ವಿಶ್ಲೇಷಣೆಯೇ ಆಗುತ್ತದೆ. ಅದೇ ರೀತಿಯಲ್ಲಿ ಜಾತಿ ವಿಶ್ಲೇಷಣೆ ಮಾಡ ಬೇಕೆಂದರೆ ಹಳ್ಳಿಗಳ ವಾಸ್ತವ ಬದುಕಿನಿಂದಲೆ ಸಾಧ್ಯ. ಆದರೆ ದುರಂತವೇನಾಗಿದೆ ಎಂದರೆ ಹಳ್ಳಿಗಳ ವಾಸ್ತವ ಬದುಕಿನ ಸಂಕೀರ್ಣತೆಗಳ ಗೈರುಹಾಜರಿಯಲ್ಲಿ ಜಾತಿಯನ್ನು ಕುರಿತು ಚರ್ಚೆ ಮಾಡಲಾಗುತ್ತಿದೆ. ಮಾರುಕಟ್ಟೆಯ ಸಿದ್ಧಾಂತಗಳ ಮೂಲಕ ಮತ್ತು ಎನ್.ಜಿ.ಓ.ಗಳ ಸಿದ್ಧಾಂತಗಳ ಮೂಲಕ ಜಾತಿಯನ್ನು ಕುರಿತು ಚರ್ಚೆ ಮಾಡಲಾಗುತ್ತಿದೆ. ನಮ್ಮ ನಮ್ಮ ಕೇರಿಗಳ ಜಾತಿಯ ಕಲಸು ಮೇಲೋಗರಗಳನ್ನು ನೋಡಲು ಮೇಲಿನ ಸಿದ್ಧಾಂತಗಳ ಅಗತ್ಯವಿಲ್ಲ. ಆದರೂ ಈ ಚರ್ಚೆಗಳಲ್ಲಿ ಆ ಸಿದ್ಧಾಂತಗಳೇ ಎಂದಿಗೂ ಮೇಲುಗೈ ಪಡೆದಿರುವುದು ಒಂದು ದೊಡ್ಡ ದುರಂತವೇ ಸರಿ.

ಜಾತಿ ಸಮಸ್ಯೆಯನ್ನು ಯಾವ ಚೌಕಟ್ಟಿನಲ್ಲಿ ಗ್ರಹಿಸಬೇಕು ಎಂಬುದು ಈ ಚರ್ಚೆಯ ಮೊದಲನೇ ಪ್ರಶ್ನೆ. ಯಾಕೆಂದರೆ ಪ್ರತಿಯೊಂದು ಸಾಮಾಜಿಕ ವಿಷಯದ ಚರ್ಚೆಗೂ ಅದರದೇ ಆದ ತಾತ್ವಿಕ ಚೌಕಟ್ಟು ಇರಬೇಕಾಗುತ್ತದೆ. ಒಂದು ವಿಷಯವನ್ನು ಆ ವಿಷಯಕ್ಕೆ ಸರಿಹೊಂದದ ಚೌಕಟ್ಟಿನಲ್ಲಿ ಚರ್ಚೆ ಮಾಡಿದರೆ ಅದರ ಚಿತ್ರಣವೇ ಬೇರೆ ಕಾಣುತ್ತದೆ. ಅದೇ ರೀತಿಯಲ್ಲಿ ಒಂದು ವಿಷಯವನ್ನು ಆ ವಿಷಯಕ್ಕೆ ಸರಿ ಹೊಂದುವ ಚೌಕಟ್ಟಿನಲ್ಲಿ ಚರ್ಚೆ ಮಾಡಿದರೆ ಆಗ ಅದರ ಚಿತ್ರಣವೇ ಬೇರೆ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಜಾತಿ ಸಮಸ್ಯೆಯನ್ನು ಕುರಿತು ಚರ್ಚೆ ಮಾಡಿಲು ಯಾವ ತಾತ್ವಿಕ ಚೌಕಟ್ಟು ಈ ವಿಷಯಕ್ಕೆ ನ್ಯಾಯ ಒದಗಿಸುತ್ತದೆ ಮತ್ತು ಯಾವ ಚೌಕಟ್ಟು ಈ ವಿಷಯಕ್ಕೆ ನ್ಯಾಯ ಒದಗಿಸುವುದಿಲ್ಲ ಎಂಬುದನ್ನು ಮೊದಲು ಪರಿಶೀಲಿಸ ಬೇಕು.

ಜಾತಿಯನ್ನು ಕುರಿತು ಚರ್ಚಿಸಿರುವ ಮುಖ್ಯ ತಾತ್ವಿಕ ಚೌಕಟ್ಟುಗಳಲ್ಲಿ ವರ್ಣ ಆಧಾರಿತ ಚೌಕಟ್ಟನ್ನು ಹೆಚ್ಚು ಜನಪ್ರಿಯಗೊಳಿಸಲಾಗಿದೆ. ಇದು ಹೆಚ್ಚು ಪರಿಚಿತವಾದ ಚೌಕಟ್ಟು. ಭಾರತೀಯ ಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ವಿಂಗಡಿಸಲಾಗಿದೆ. ಮೇಲಿಂದ ಮೇಲೆ ಇದನ್ನು ವಿವರಿಸಲು ಮತ್ತು ವಿರೋಧಿಸಲು ‘ಮನುಧರ್ಮಶಾಸ್ತ್ರ’ವನ್ನು ಉಲ್ಲೇಖಿಸಲಾಗುತ್ತದೆ. ಈ ನಾಲ್ಕು ವರ್ಣಗಳಲ್ಲಿ ಬ್ರಾಹ್ಮಣ ವರ್ಣವು ಶ್ರೇಷ್ಠವೆಂದೂ, ಕೊನೆಯದಾದ ಶೂದ್ರ ವರ್ಣವು ಕನಿಷ್ಠವೆಂದೂ ಎದರ ವರ್ಣನೆ ಇದೆ. ಭಾರತದ ಸಾಮಾಜಿಕ ವಸ್ತುಸ್ಥಿತಿಯನ್ನು ಬಹುತೇಕ ಈ ವರ್ಣ ಚೌಕಟ್ಟಿನಲ್ಲೆ ಈಗಲೂ ಪರಿಚಯಿಸಲಾಗುತ್ತಿದೆ. ಅಲ್ಲದೆ ಶೂದ್ರ ಜನಾಂಗ ಎಂನುದನ್ನು ನಿರ್ವಚಿಸಿಕೊಂಡು, ಅದರ ನೆಲೆಯಲ್ಲಿ ನಿಂತು, ಬ್ರಾಹ್ಮಣ ವರ್ಣವನ್ನು ಹಿಗ್ಗಾಮುಗ್ಗಾ ಝಾಡಿಸುವ ಕೆಲಸ ನಿರಂತರವಾಗಿ ನಡೆದಿದೆ. ಇದು ಭಾರತದ ಸಮಾಜವನ್ನು ನೋಡುವ ಒಂದು ಧೋರಣೆ. ಈ ಧೋರಣೆಗೆ ಬ್ರಾಹ್ಮಣರು ಮಾತ್ರ ಎಲ್ಲಾ ಬಗೆಯ ಕೆಡುಕುಗಳಿಗೂ ಕಾರಣರಾಗಿ ತೋರುತ್ತಾರೆ. ಈ ತೋರಿಕೆಯನ್ನೆ ನಿಜವೆಂದು, ಸತ್ಯವೆಂದು ನೂರು ಬಾರಿ, ಸಾವಿರ ಹೇಳಿ ಹೇಳಿ ಒಪ್ಪಿಸಲಾಗಿದೆ. ಯಾವುದೆ ಸಾಮಾಜಿಕ ವಿಷಯವನ್ನು ಬ್ರಾಹ್ಮಣ ಮತ್ತು ಶೂದ್ರ ಈ ಎರಡು ವಿರುದ್ಧ ದಿಕ್ಕಿನ ವಿನ್ಯಾಸದಲ್ಲಿ ನೋಡುವ ಕ್ರಮವನ್ನು ಕಂಠಪಾಠ ಮಾಡಿಸಲಾಗಿದೆ. ಅಥವಾ ಕಂಠಪಾಠ ಮಾಡಿಕೊಳ್ಳಲಾಗಿದೆ. ಪರಿಣಾಮವಾಗಿ ಅದು ಭಾರತದ ಸಮಾಜವನ್ನು ನೋಡುವ ಕೇವಲ ಒಂದು ನಂಬಿಕೆಯಾಗಿದೆ. ನಂಬಿಕೆ ಎಂಬುದಕ್ಕೆ ವಾಸ್ತವದ ಬುನಾದಿ ಬೇಕಿಲ್ಲ. ಅದಕ್ಕೆ ಕೇವಲ ನಂಬಿಕೆ ಮಾತ್ರ ಮುಖ್ಯ. ಈ ಹಿನ್ನೆಲೆಯಲ್ಲಿ ಭಾರತದ ಸಮಾಜವನ್ನು ಬ್ರಾಹ್ಮಣ ಶೂದ್ರ ನೆಲೆಯಲ್ಲಿ ಮಾತ್ರ ವಿವರಿಸುವುದು ಕೇವಲ ಒಂದು ನಂಬಿಕೆಯ ಕ್ರಮವಷ್ಟೆ.

ಇವತ್ತು ಜಾತಿಯ ವಿಷಯವನ್ನು ಕುರಿತು ಕೆಲವು ಬುದ್ಧಿಜೀವಿಗಳ ಜೊತೆಯಲ್ಲಿ ಚರ್ಚೆಗೆ ಇಳಿಯಿರಿ. ಅವರು ತಕ್ಷಣ ಹೇಳುತ್ತಾರೆ. ‘ನೋಡಿ, ಬ್ರಾಹ್ಮಣರು ಎಲ್ಲಾ ಕ್ಷೇತ್ರಗಳಲ್ಲಿಯು ತುಂಬಿ ತುಳುಕುತ್ತಿದ್ದಾರೆ. ಹಿಂದುಸ್ತಾನಿ ಸಂಗೀತದಲ್ಲೂ ಅವರೆ. ಭರತನಾಟ್ಯದಲ್ಲೂ ಅವರೆ. ಐ.ಟಿ., ಬಿ.ಟಿ.ಯಲ್ಲೂ ಅವರೆ. ಸಾಹಿತ್ಯದಲ್ಲೂ ಅವರೆ. ಕನ್ನಡ ಸಾಹಿತ್ಯಕ್ಕೆ ಬಂದಿರುವ ಏಳು ಜ್ಞಾನಪೀಠ ಪ್ರಶಸ್ತಿಗಳಲ್ಲಿಯೂ ಬಹುಸಂಖ್ಯಾತರು ಅವರೇ. ಸಮಾಜದಲ್ಲಿ ಏನೇ ಬದಲಾವಣೆ ಆಗಲಿ. ಯಾವುದೇ ಹೊಸದು ಬರಲಿ. ಮೊದಲು ಬ್ರಾಹ್ಮಣರು ಅವುಗಳನ್ನು ಪಡೆಯುತ್ತಾರೆ. ಆದರೆ ಶೂದ್ರರಿಗೆ ಅಂತಹ ಅವಕಾಶಗಳೆಲ್ಲ ಎಲ್ಲಿ ಸಿಗಬೇಕು?’ ಇಂತಹ ಮಾತುಗಳನ್ನು ಅಥವಾ ಅಭಿಪ್ರಾಯಗಳನ್ನು ಎಲ್ಲೆಂದರಲ್ಲಿ ಕೇಳಬಹುದು. ಇದಕ್ಕೆ ಕಲೆ, ಸಾಹಿತ್ಯ, ಸಂಸ್ಕೃತಿ, ರಾಜಕಾರಣ ಇವೇ ಮುಂತಾದ ವಲಯಗಳಿಂದ ಉದಾಹರಣೆಗಳನ್ನು ಆಯ್ದು ಆಯ್ದು ತಮ್ಮ ಮಾತುಗಳನ್ನು ಅಥವಾ ಅಭಿಪ್ರಾಯಗಳನ್ನು ಕೇಳುಗರು ಒಪ್ಪುವಂತೆ ಮಂಡಿಸುತ್ತಾರೆ. ತಮ್ಮ ಮುಂದಿರುವ ಕೇಳುಗರನ್ನು ‘ಹೌದೌದು’ ಎಂದು ತಲೆ ಅಲ್ಲಾಡಿಸುವಂತೆ ಮರಳು ಮಾಡುತ್ತಾರೆ. ಕಳೆದ ನೂರು ವರುಷಗಳಿಂದ ಹೀಗೆ ‘ಹೌದೌದು’ ಎನ್ನುವಂತೆ ಹೇಳಿದ್ದನ್ನೇ ಹೇಳಿ ಹೇಳಿ, ಅದನ್ನು ಎಲ್ಲರೂ ಒಪ್ಪಿಕೊಳ್ಳುವಂತೆ ಮತ್ತು ನಂಬುವಂತೆ ಮಾಡಲಾಗಿದೆ. ಈ ಅಭಿಪ್ರಾಯ ಮತ್ತು ಈ ಧೋರಣೆ ಕೆಲವು ಸಾಹಿತಿಗಳ ಹಾಗೂ ಕೆಲವು ಬರಹಗಾರರ ಒಂದು ಗುಂಪಿನಲ್ಲಿ ಜನಪ್ರಿಯವಾಗಿದೆ. ಈ ಮಂತ್ರವನ್ನು ವ್ಯಾಪಕವಾಗಿ ಹರಡಲಾಗಿದೆ; ವಿಸ್ತರಿಸಲಾಗಿದೆ.

ವರ್ಣ ಆಧಾರದಲ್ಲಿ ಭಾರತವನ್ನು ಗ್ರಹಿಸುವ ಈ ಧೋರಣೆಯು ಕೇವಲ ಸಾಮಾಜಿಕ ಚಿತ್ರಣಕ್ಕೆ ಮಾತ್ರ ಸಿಮಿತವಾಗಿಲ್ಲ. ಅದು ದೃಷ್ಟಿ ಧೋರಣೆಗಳಿಗೆ ಸಂಬಂಧಿಸಿ, ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳಿಗೆ ಸಂಬಂಧಿಸಿ ಮತ್ತು ಆಹಾರ ಪದ್ಧತಿಗೆ ಸಂಬಂಧಿಸಿದಂತೆ ವಿಭಿನ್ನ ಆಯಾಮಗಳಲ್ಲಿ ವಿಸ್ತರಿಸಿಕೊಂಡಿದೆ. ಸಾಮಾಜಿಕ ವಿಷಯಗಳಲ್ಲಿ ಅಥವಾ ಜಾತಿ ಶ್ರೇಣೀಕರಣದ ವಿಷಯಗಳಲ್ಲಿ ಮೇಲು ಕೀಳು ಎಂಬ ಮಾನದಂಡ ಮತ್ತು ಮೌಲ್ಯಗಳಾಗಿರಬಹುದು. ಇಲ್ಲವೆ ಶ್ರೇಷ್ಠ ಮತ್ತು ಕನಿಷ್ಠ ಎಂಬ ಮಾನದಂಡ ಮತ್ತು ಮೌಲ್ಯಗಳಾಗಿರಬಹುದು. ಇವನ್ನೆಲ್ಲ ಬ್ರಾಹ್ಮಣರೇ ಸೃಷ್ಟಿ ಮಾಡಿದ್ದು ಎಂದು ಹೇಳಿ ಕೈತೊಳೆದುಕೊಂಡು ಬಿಡುತ್ತಾರೆ. ಅದಕ್ಕೆ ‘ಹೂಂ’ ಎನ್ನಬೇಕು ಇಲ್ಲವೆ ‘ಹೌದು’ ಎನ್ನಬೇಕು. ಈ ಅಭಿಪ್ರಾಯಗಳಿಗೆ ಇದುವರೆಗೆ ಇದೇ ರೀತಿ ಮಾಡಲಾಗಿದೆ. ಇದೇ ರೀತಿ ಮಾಡಲಾಗಿರುವುದರಿಂದಲೇ ಆ ಧೋರಣೆಯನ್ನು ಅಥವಾ ಆ ನಂಬಿಕೆಯನ್ನು ಮತ್ತೆ ಮತ್ತೆ ಹೇಳುತ್ತಲೇ ಬರಲಾಗಿದೆ.

ಇನ್ನು ಮಹಿಳಾ ವಿಷಯವನ್ನೇ ತೆಗೆದುಕೊಳ್ಳೋಣ. ಮಹಿಳಾ ಶೋಷಣೆಯನ್ನು ಕುರಿತು ಮಾತಾಡುವ ಬಹುತೇಕರು ‘ಮನುಧರ್ಮಶಾಸ್ತ್ರ’ದಲ್ಲಿ ‘ಮಹಿಳೆಯರಿಗೆ ಸ್ವಾತಂತ್ರ‍್ಯ ಕೊಡಬಾರದು ಎಂದು ಮನು ಬರೆದು ಬಿಟ್ಟಿದ್ದಾನೆ. ಅವನು ಹಾಗೆ ಬರೆದಿರುವದರಿಂದಲೆ ಮಹಿಳೆಯರಿಗೆ ಸ್ವಾತಂತ್ರ‍್ಯ ಇಲ್ಲದಂತೆ ಆಗಿದೆ. ಈಗಲೂ ಕೂಡ ಆಧುನಿಕ ಮನುಗಳು ಇದ್ದಾರೆ. ಅವರು ಮಹಿಳೆಯರಿಗೆ ಸ್ವಾತಂತ್ರ‍್ಯ ಕೊಡುವುದನ್ನು ಒಪ್ಪುವುದಿಲ್ಲ’ ಎಂದು ಹೇಳುತ್ತಾರೆ. ಹೀಗೆ ಸಾಮಾಜಿಕವಾದ ಯಾವುದೆ ವಿಷಯ ತಮಗೆ ಸರಿಕಾಣದಿದ್ದಾರೆ ಅದನ್ನು ಸೀದ ತಗೊಂಡು ಹೋಗಿ ಬ್ರಾಹ್ಮಣರ ಮೇಲೆ ಹಾಕಲಾಗುತ್ತದೆ. ಆ ನಂಬಿಕೆಯನ್ನು ಗಟ್ಟಿಗೊಳಿಸಲಾಗಿದೆ. ಮನು ಹಾಗೆ ಬರೆದ ಕಾರಣಕ್ಕೇ ಒಂದು ವೇಳೆ ಮಹಿಳಾ ಶೋಷಣೆ ಶುರುವಾಯಿತು ಎನ್ನುವುದಾದರೆ ಮನುವಿನ ಹೆಸರನ್ನೆ ಕೇಳದ ಜನಸಮುದಾಯಗಳಲ್ಲೂ ಮಹಿಳಾ ಶೋಷಣೆ ಎದೆಯಲ್ಲ, ಅದಕ್ಕೆ ಏನೆನ್ನಬೇಕು? ಒಂದು ಪುಸ್ತಕದಿಂದಲೇ ಮಹಿಳಾ ಶೋಷಣೆ ಶುರುವಾಯಿತು ಎನ್ನುವುದಾದರೆ, ಆ ಮಹಿಳಾ ಶೋಷಣೆಯನ್ನು ಹೋಗಲಾಡಿಸಲು ಮತ್ತೊಂದು ಪುಸ್ತಕವನ್ನು ಬರೆದರಾಯಿತು. ‘ಮಹಿಳೆಯರಿಗೆ ಸ್ವಾತಂತ್ರ‍್ಯ ಕೊಡಬಾರದು’ ಎಂದು ಮನುಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನು ಬದಲಾಯಿಸಿ, ‘ಪುರುಷರಿಗೆ ಸ್ವಾತಂತ್ರ‍್ಯ ಕೊಡಬಾರದು’ ಎಂದು ಬರೆದುಬಿಟ್ಟರೆ ಆಗ ಪುರುಷರೆಲ್ಲ ಶೋಷಣೆಯ ಸ್ತರಕ್ಕೆ ಇಳಿಯುತ್ತಾರೆ. ಇಲ್ಲ. ಇದು ಸಾಧ್ಯವಿಲ್ಲ ಎನ್ನುವುದಾದರೆ ಮನು ಎಂಬುವವನು ಒಂದು ಪುಸ್ತಕ ಬರೆದ ಕಾರಣಕ್ಕೆ ಮಹಿಳಾ ಶೋಷಣೆ ಶುರುವಾಯಿತು ಎಂತಲೊ ಅಥವಾ ಮಹಿಳೆಯರ ಸ್ವಾತಂತ್ರ‍್ಯವನ್ನು ಕಿತ್ತುಕೊಳ್ಳಲಾಯಿತು ಎಂತಲೊ ಹೇಳಲು ಆಗುವುದಿಲ್ಲ.

ಈ ರೀತಿಯಲ್ಲಿ ‘ಸಮಾಜದಲ್ಲಿ ಮೇಲು ಕೀಳು ಮತ್ತು ಶ್ರೇಷ್ಠ ಕನಿಷ್ಠ ಎಂದು ಮೌಲ್ಯ ತಾರತಮ್ಯ ಮಾಡಿರುವುದೇ ಬ್ರಾಹ್ಮಣರು’. ಹಾಗಾಗಿ ಆ ರೀತಿಯಲ್ಲಿ ಮೌಲ್ಯ ತಾರತಮ್ಯ ಮಾಡಿರುವ ಧೋರಣೆಯನ್ನು ‘ಬ್ರಾಹ್ಮಣಶಾಹಿ’ ಎಂದೂ, ‘ಪುರೋಹಿತ ಶಾಹಿ’ ಎಂದೂ ಕರೆಯಲಾಗಿದೆ. ವೈಚಾರಿಕ ವಲಯದಲ್ಲಿ ಇವತ್ತಿಗೂ ಕೂಡ ಬಹಳ ಗಟ್ಟಿಯಾಗಿ ಈ ‘ಬ್ರಾಹ್ಮಣಶಾಹಿ’ ಮತ್ತು ‘ಪುರೋಹಿತಶಾಹಿ’ ಎಂಬ ಪದಗಳನ್ನು ಬಳಸಲಾಗುತ್ತಿದೆ. ಅಷ್ಟಲ್ಲದೆ ಬ್ರಾಹ್ಮಣಶಾಹಿ ಮತ್ತು ಪುರೋಹಿತಶಾಹಿಯೇ ಎಲ್ಲಾ ಕಡೆಕುಗಳಿಗೂ ಮೂಲ ಎಂದೂ ಒತ್ತಿ ಹೇಳಲಾಗಿದೆ. ಅದನ್ನು ಹೇಳಿ ಹೇಳಿ ನಂಬಿಸಲಾಗಿದೆ ಮತ್ತು ಒಪ್ಪಿಸಲಾಗಿದೆ. ಆ ಕಾರಣಕ್ಕೆ ಅದನ್ನು ನಂಬಲಾಗಿದೆ ಮತ್ತು ಒಪ್ಪಲಾಗಿದೆ.

ಜಾತಿಯ ವಿಷಯವನ್ನು ವಿವರಿಸುವಾಗ ವರ್ಣ ಚೌಕಟ್ಟು ಎಷ್ಟು ಉಪಯುಕ್ತ ಮತ್ತು ಎಷ್ಟು ಉಪಯುಕ್ತವಲ್ಲ ಎಂದು ಹಾಗೂ ಅದು ಯಾರಿಗೆ ಉಪಯೋಗ ಮತ್ತು ಯಾರಿಗೆ ಉಪಯೋಗವಲ್ಲ ಎಂದು ಚರ್ಚಿಸಬೇಕಾಗಿದೆ. ಈ ಚರ್ಚೆ ಪರಿಪೂರ್ಣ ವಾಗಬೇಕಾದರೆ ಪುನಃ ನಾವು ಈ ಮೊದಲು ಚರ್ಚೆ ಮಾಡಿದ ಹಳ್ಳಿಗಳಿಗೇ ಹಿಂತಿರುಗಬೇಕು. ಕರ್ನಾಟಕದ ಯಾವುದೇ ಹಳ್ಳಿಗಳನ್ನು ನೋಡಿದರೂ ಕೂಡ ಅಲ್ಲಿ ಹತ್ತಾರು ಜಾತಿಗಳಿರುತ್ತವೆ. ಸುಮ್ಮನೆ ಅವನ್ನು ಇಲ್ಲಿಯ ಚರ್ಚೆಯ ಅನುಕೂಲಕ್ಕಾಗಿ ಹೀಗೆ ಹೆಸರಿಸಬಹುದು. ಬ್ರಾಹ್ಮಣ, ಲಿಂಗಾಯಿತ, ಒಕ್ಕಲಿಗ, ಅಗಸ, ಕಮ್ಮಾರ, ಚಮ್ಮಾರ, ಬಡಿಗಿ, ವಾಲ್ಮೀಕಿಗಳು, ಬೇವಿಗಳು, ವಿಶ್ವಕರ್ಮ, ಕುರುಬ, ಹೊಲೆಯ, ಮಾದಿಗ, ಆದಿವಾಸಿ, ಬುಡಕಟ್ಟು, ಅಲೆಮಾರಿ ಇತ್ಯಾದಿ ನೂರೆಂಟು ಜಾತಿಗಳನ್ನು ಹೆಸರಿಸಬಹುದು. ಆದರೆ ಎಲ್ಲಾ ಹಳ್ಳಿಗಳಲ್ಲೂ ಎಲ್ಲಾ ಹಳ್ಳಿಗಳಲ್ಲೂ ಎಲ್ಲಾ ಜಾತಿಯವರೂ ಇರುವುದಿಲ್ಲ. ಕೆಲವು ಹಳ್ಳಿಗಳಲ್ಲಿ ಕೆಲವು ಜಾತಿಯವರು ಇರುತ್ತಾರೆ. ಮತ್ತೆ ಕೆಲವು ಹಳ್ಳಿಗಳಲ್ಲಿ ಕೆಲವು ಜಾತಿಯವರು ಇರುವುದಿಲ್ಲ. ಒಂದೊಂದು ಜಾತಿಯವರು ಊರಿನಲ್ಲಿ ಒಂದೊಂದು ಪ್ರದೇಶದಲ್ಲಿ ಮನೆಗಳನ್ನೊ, ಗುಡಿಸಲುಗಳನ್ನೊ ಕಟ್ಟಿಕೊಂಡಿರುತ್ತಾರೆ. ಒಂದೊಂದು ಜಾತಿಯವರೂ ಒಂದೊಂದು ಕುಸುಬನ್ನೋ, ದುಡಿಮೆಯನ್ನೊ ಮಾಡುತ್ತಿರುತ್ತಾರೆ. ಇದು ಸಾಮಾನ್ಯವಾದ ಒಂದು ನೋಟ.

ಹಳ್ಳಿಗಳ ವಾಸ್ತವ ಚಿತ್ರಣ ಹೀಗಿರುವಾಗ ಬ್ರಾಹ್ಮಣ ಶೂದ್ರ ಎಂಬ ವಿಂಗಡಣೆ ಆ ಹಳ್ಳಿಗಳಲ್ಲಿ ಎಲ್ಲಿದೆಯೊ ಗೊತ್ತಿಲ್ಲ. ಆದರೂ ಕೂಡ ಬ್ರಾಹ್ಮಣರು, ಬ್ರಾಹ್ಮಣಶಾಹಿ ಮತ್ತು ಪುರೋಹಿತಶಾಹಿ ಈ ಪದಗಳನ್ನು ಮೇಲಿಂದ ಮೇಲೆ ಬಳಸಲಾಗುತ್ತಿದೆ. ಆದರೆ ಹಳ್ಳಿಗಳ ವಾಸ್ತವಕ್ಕೆ ಈ ಬ್ರಾಹ್ಮಣ ಮತ್ತು ಪುರೋಹಿತಶಾಹಿ ಎಂಬ ವಿಷಯಗಳು ಒಗ್ಗುವುದಿಲ್ಲ ಮತ್ತು ಒಪ್ಪುವುದಿಲ್ಲ. ಹಾಗಾಗಿ ಹಳ್ಳಿಗಳಲ್ಲಿರುವ ಜಾತಿಯ ವಾಸ್ತವವನ್ನು ತಿಳಿಯಲು, ಈ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ವಿಂಗಡಣೆಯ ಚೌಕಟ್ಟು ಪ್ರಯೋಜನಕ್ಕೆ ಬರುವುದಿಲ್ಲ. ಹಾಗಿದ್ದರೆ ಹಳ್ಳಿಗಳ ಜಾತಿ ವಸ್ತುಸ್ಥಿತಿಯನ್ನು ನೋಡುವ ಕ್ರಮ ಯಾವುದಾಗಿರಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಹಳ್ಳಿಗಳ ಜಾತಿಯ ವಸ್ತುಸ್ಥಿತಿಯನ್ನು ನೋಡಲು ಏ.ಸಿ. ರೂಮುಗಳ ಬೌದ್ಧಿಕ ಅಂತಸ್ತುಗಳು ಬೇಕಿಲ್ಲ. ಬದಲಿಗೆ ಹಳ್ಳಿಗಳ ವಾಸ್ತವ ಏನಾಗಿದೆ ಎಂಬುದನ್ನು ಅಲ್ಲಿಯ ಚಿತ್ರಣವೇ ನಮಗೆ ತೋರಿಸುತ್ತದೆ. ಆ ಚಿತ್ರಣದ ಮೂಲಕವೇ ಅದನ್ನು ನೋಡುವ ದೃಷ್ಟಿಕೋನವನ್ನು ನಾವು ನಿರ್ಮಾಣ ಮಾಡಿಕೊಳ್ಳಬಹುದು.