ಹಳ್ಳಿಗಳಲ್ಲಿ ಮನುಧರ್ಮಶಾಸ್ತ್ರದ ಗಂಧಗಾಳಿಯೂ ಇಲ್ಲ. ಬಹುತೇಕ ಹಳ್ಳಿಗಳಲ್ಲಿ ಬ್ರಾಹ್ಮಣರೂ ಇಲ್ಲ. ಹಾಗಿರುವುದರಿಂದ ಅಲ್ಲಿ ಬ್ರಾಹ್ಮಣಶಾಹಿಯೂ ಇಲ್ಲ ಮತ್ತು ಪುರೋಹಿತಶಾಹಿಯೂ ಇಲ್ಲ. ಹಾಗಿದ್ದರೆ ಮೇಲಿಂದ ಮೇಲೆ ಯಾಕೆ ಬ್ರಾಹ್ಮಣಶಾಹಿ ಮತ್ತು ಪುರೋಹಿತಶಾಹಿ ಎಂದು ಹೇಳುತ್ತಾರೆ? ಇದರ ಚರ್ಚೆಗೆ ಹಳ್ಳಿಗಳ ಮತ್ತೊಂದು ವಾಸ್ತವವನ್ನು ಗಮನಕ್ಕೆ ತಂದುಕೊಳ್ಳಬೇಕು. ಅದಕ್ಕೆ ಈ ಮುಂದಿನ ಚರ್ಚೆಯನ್ನು ನಡೆಸಲಾಗಿದೆ.

ಹಳ್ಳಿಗಳಲ್ಲಿ ದುಡಿಮೆ ಅಥವಾ ಉತ್ಪಾದನೆ ನಡೆಯುತ್ತದೆ. ಹಳ್ಳಿಗಳಲ್ಲಿ ನಡೆಯುವ ದುಡಿಮೆ ಅಥವಾ ಉತ್ಪಾದನೆ ಬಹುತೇಕ ಕೃಷಿ ಉತ್ಪಾದನೆಯೇ ಆಗಿದೆ. ಕೃಷಿ ಉತ್ಪಾದನೆಗೆ ಭೂಮಿ ಬೇಕು. ಹಳ್ಲಿಗಳಲ್ಲಿ ಕೆಲವರಿಗೆ ಭೂಮಿ ಇದೆ. ಮತ್ತೆ ಕೆಲವರಿಗೆ ಭೂಮಿ ಇಲ್ಲ. ಭೂಮಿ ಇರುವವರು ಒಡೆಯರಾಗಿದ್ದಾರೆ. ಭೂಮಿ ಇಲ್ಲದವರು ಕೂಲಿ ಕೆಲಸ ಮಾಡುತ್ತಾರೆ. ಹೀಗೆ ಭೂಮಿ ಇರುವ ಜಾತಿಯವರು ಯಾರು ಬೇಕಾದರೂ ಆಗಿರಬಹುದು. ಅದೇ ರೀತಿಯಲ್ಲಿ ಕೃಷಿ ಭೂಮಿಯಲ್ಲಿ ಕೆಲಸ ಮಾಡುವವರೂ ಕೂಡ ಯಾವುದೇ ಜಾತಿಯವರೂ ಆಗಿರಬಹುದು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬ್ರಾಹ್ಮಣರು ಕೃಷಿ ಭೂಮಿಯ ಒಡೆಯರಲ್ಲ. ಕರ್ನಾಟಕದಲ್ಲಿ ಪ್ರಧಾನವಾಗಿ ಒಕ್ಕಲಿಗರು, ಲಿಂಗಾಯಿತರು ಮತ್ತು ಕುರುಬರು ಭೂಮಾಲೀಕರು. ಇನ್ನು ಉಳಿದ ಜಾತಿಗಳು ಕೃಷಿ ಕೂಲಿ ಕಾರ್ಮಿಕರು. ಅವರಿಗೆ ಅಷ್ಟಿಷ್ಟು ಜಮೀನು ಇದ್ದರೂ ಕೂಡ ಅದು ಆರಕ್ಕೆ ಹತ್ತುವಂತಿಲ್ಲ; ಮೂರಕ್ಕೆ ಇಳಿಯುವಂತಿಲ್ಲ. ಪರಿಸ್ಥಿತಿ ಹೀಗಿರುವುದರಿಂದ ಹಳ್ಳಿಗಳಲ್ಲಿ ಒಂದು ಕಡೆ ಭೂ ಮಾಲೀಕರೂ ಮತ್ತೊಂದು ಕಡೆ ಕೃಷಿ ಕೂಲಿ ಕಾರ್ಮಿಕರೂ ಇದ್ದಾರೆ. ಆದರೆ ಬ್ರಾಹ್ಮಣರು ಭೂಮಾಲೀಕರಾಗಿರುವ ಉದಾಹರಣೆಗಳು ಕರ್ನಾಟಕದಲ್ಲಿ ಕಾಣುವುದಿಲ್ಲ. ಮಾತ್ರವಲ್ಲ ಭಾರತದ ಮಟ್ಟಿಗೂ ಕೂಡ ಬ್ರಾಹ್ಮಣರು ಭೂಮಾಲೀಕರಲ್ಲ.

ಹಳ್ಳಿಗಳನ್ನು ಕುರಿತು ವಿಶ್ಲೇಷಣೆ ಮಾಡುವಾಗ ಮತ್ತು ಜಾತಿ ಸಮಸ್ಯೆಯನ್ನು ಕುರಿತು ವಿಶ್ಲೇಷಣೆ ಮಾಡುವಾಗ ಈ ಅಂಶ ಬಹಳ ಮುಖ್ಯ. ಈ ಮೊದಲು ಒಂದು ಕಡೆ ಪ್ರಸ್ತಾಪ ಮಾಡಿದ ಹಾಗೆ ಜಾತಿ ವಿಷಯವನ್ನು ಕುರಿತು ಯಾವ ಚೌಕಟ್ಟಿನಲ್ಲಿ ಚರ್ಚೆ ಮಾಡಬೇಕು ಎಂದರೆ ಅದನ್ನು ಗ್ರಾಮ ಸಮಾಜದ ನೈಜ ವಸ್ತು ಸ್ಥಿತಿಯ ಆಧಾರದಲ್ಲೆ ಚರ್ಚಿಸಬೇಕಾಗುತ್ತದೆ. ಇದನ್ನು ಬಿಟ್ಟು ಜಾತಿ ಸಮಸ್ಯೆಯ ಚರ್ಚೆಗೆ ಮನುಧರ್ಮಶಾಸ್ತ್ರವನ್ನು ತಂದರೆ ಅಥವಾ ಬೆಂಗಳೂರಿನ ಬ್ರಿಗೇಡ್ ರೋಡನ್ನೊ, ಡಾಲರ್ ಕಾಲೊನಿಯನ್ನೊ ತಂದರೆ ಚರ್ಚೆ ಲೆಕ್ಕ ತಪ್ಪುತ್ತದೆ. ಚರ್ಚೆ ಲೆಕ್ಕ ತಪ್ಪುವುದು ಎಂದರೆ ತಪ್ಪಾದ ಸಾಮಾಜಿಕ ಚಿತ್ರಣವನ್ನು ಕೊಡುವುದು ಎಂದು ಅರ್ಥ. ಈ ಹಿನ್ನೆಲೆಯಲ್ಲಿ ಚಾತುರ್ವರ್ಣ ಚೌಕಟ್ಟು ಏನಿದೆ ಅಥವಾ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವಿಂಗಡಣೆಯ ಚೌಕಟ್ಟೇನಿದೆ ಅದು ಜಾತಿಯ ವಸ್ತುಸ್ಥಿತಿಯನ್ನು ತಪ್ಪಾದ ವಿಧಾನದಲ್ಲಿ ಪರಿಚಯಿಸುತ್ತಿದೆ. ಜೊತೆಗೆ ಅದು ಹಳ್ಳಿಗಳ ಚಿತ್ರಣವನ್ನು ತಪ್ಪಾದ ಕ್ರಮದಲ್ಲಿ ಚಿತ್ರಿಸುತ್ತದೆ. ನಮಗೆ ಜಾತಿಯ ನಿಜವಾದ ಮುಖಗಳು ಮತ್ತು ನಿಜ ವಾಸ್ತವಗಳು ಕಾಣುವುದೇ ಹಳ್ಳಿಗಳಲ್ಲಿ. ಆದ್ದರಿಂದ ಈ ಬ್ರಾಹ್ಮಣ ಶೂದ್ರ ಎಂಬ ಯಾಂತ್ರಿಕ ವಿಂಗಡನೆಯನ್ನು ಯಾವುದೆ ಹಳ್ಳಿಗೆ ಅನ್ವಯಿಸಿ ನೋಡಲು ಬರುವುದಿಲ್ಲ. ಮತ್ತು ಬ್ರಾಹ್ಮಣ ಶೂದ್ರ ಎಂಬ ವಿಂಗಡಣೆ ಯಾವುದೇ ಹಳ್ಳಿಗೆ ಅನ್ವಯವಾಗುವುದೂ ಇಲ್ಲ. ಹಾಗಿದ್ದರೆ ಅವನ್ನೇಕೆ ಮತ್ತೆ ಮತ್ತೆ ಮೇಲಿಂದ ಮೇಲೆ ಪುನರುಚ್ಛಾರ ಮಾಡಲಾಗುತ್ತಿದೆ? ಇದು ಮುಖ್ಯ ಪ್ರಶ್ನೆ.

ಹಾಗೆ ನೋಡಿದರೆ ಬ್ರಾಹ್ಮಣ ಶೂದ್ರ ಎಂಬುವು ಕೇವಲ ಗ್ರಾಂಥಿಕ ಪದಗಳು ಅಥವಾ ಅವು ಗ್ರಾಂಥಿಕ ನುಡಿಗಟ್ಟುಗಳು. ಅವು ಗ್ರಾಂಥಿಕ ನುಡಿಗಟ್ಟುಗಳಾಗಿರುವುದರಿಂದ ಅವು ಹಳ್ಳಿಗಳ ವಾಸ್ತವಕ್ಕೆ ಒಗ್ಗುತ್ತಿಲ್ಲ. ಅವು ಹಳ್ಳಿಗಳ ವಾಸ್ತವಕ್ಕೆ ಒಗ್ಗುವುದಿಲ್ಲ ಎಂದರೆ ಅವು ಅಂತಿಮವಾಗಿ ಜಾತಿಯ ವಸ್ತುಸ್ಥಿತಿಯನ್ನು ವಿವರಿಸಲೂ ಒಗ್ಗುವುದಿಲ್ಲ ಎಂದೇ ಅರ್ಥ. ಹಾಗಿದ್ದರೂ ಅವನ್ನು ಬಳಸಲಾಗುತ್ತಿದೆ. ಈ ಬ್ರಾಹ್ಮಣ ಶೂದ್ರ ಎಂಬ ಪದಗಳನ್ನು ಬಳಸುತ್ತಿರುವ ಧೋರಣೆ ಯಾವುದು ಎಂಬುದನ್ನು ಗುರುತಿಸ ಬೇಕು. ಆಗ ಅದರ ಮಿತಿ ಮತ್ತು ಅದರ ಕುತಂತ್ರಗಳು ಗೊತ್ತಾಗುತ್ತವೆ. ಉದಾಹರಣೆಗೆ ಜಾತಿ ಬಹಿಷ್ಕಾರದಂತಹ ಪ್ರಕರಣಗಳನ್ನು ಗಮನಿಸಬಹುದು. ಯಾವ ಹಳ್ಳಿಯಲ್ಲಿಯೂ ಬ್ರಾಹ್ಮಣರು ದಲಿತರಿಗೆ ಬಹಿಷ್ಕಾರ ಹಾಕಿರುವ ಉದಾಹರಣೆಗಳಿಲ್ಲ. ಅಷ್ಟು ಮಾತ್ರವಲ್ಲ; ದಲಿತರ ಮನೆ ಸುಟ್ಟವರು, ದಲಿತರಿಗೆ ಮಲ ತಿನ್ನಿಸಿದವರು ಇವರು ಯಾರೂ ಕೂಡ ಬ್ರಾಹ್ಮಣರಲ್ಲ. ಹಾಗಿದ್ದರೂ ಕೂಡ ಮೇಲಿಂದ ಮೇಲೆ ಬ್ರಾಹ್ಮಣರನ್ನೇಕೆ ಎಲ್ಲದಕ್ಕೂ ಗುರಿ ಮಾಡಲಾಗುತ್ತಿದೆ? ಕರ್ನಾಟಕದಲ್ಲಿ ದಲಿತ ಸಂಘಟನೆಗಳು ಹುಟ್ಟಿಕೊಂಡ ಮೇಲೆ ಹಳ್ಳಿಗಳ ಭೂಮಾಲಿಕ ವರ್ಗದ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಎಷ್ಟೋ ಹಳ್ಳಿಗಳಲ್ಲಿ ದಲಿತ ಸಂಘಟನೆ ಮಾಡಿದವರ ಮೇಲೆ ಭೂಮಾಲೀಕರು ಹಲ್ಲೆಗಳನ್ನು ನಡೆಸಿದರು. ದಲಿತರು ವಾಸವಾಗಿರುವುದು ಹಳ್ಳಿಗಳಲ್ಲಿ. ದಲಿತರು ಕೂಲಿ ಕೆಲಸ ಮಾಡುವುದು ಹಳ್ಳಿಗಳ ಭೂಮಾಲಿಕ ವರ್ಗ ದವರಲ್ಲಿ. ಹಾಗಾಗಿ ದಲಿತರಿಗೂ ಮತ್ತು ಭೂಮಾಲಿಕ ವರ್ಗಕ್ಕೂ ಈ ವಿಷಯದಲ್ಲಿ ನೇರವಾದ ಸಂಬಂಧವಿದೆ. ಆದರೆ ಬ್ರಾಹ್ಮಣರು ಮತ್ತು ದಲಿತರಿಗೆ ಹಳ್ಳಿಗಳಲ್ಲಿ ಪರಸ್ಪರ ಸಂಬಂಧವೇ ಇಲ್ಲ. ದಲಿತರಿಗೆ ಎದುರಾಗಿರುವುದು ಭೂಮಾಲಿಕ ವರ್ಗವೇ. ಈ ಭೂಮಾಲಿಕ ವರ್ಗದ ಕ್ರೂರ ಶೋಷಣೆ ಮತ್ತು ದಮನ ದಬ್ಬಾಳಿಕೆಗೆ ದಲಿತರು ಒಳಗಾಗಿದ್ದಾರೆ. ಆದರೆ ಈ ವಸ್ತುಸ್ಥಿತಿಯನ್ನು ಮುಚ್ಚಿಡಲು ‘ದಲಿತರೇ ನಿಮ್ಮ ಶತ್ರುಗಳು ಬ್ರಾಹ್ಮಣರು, ನಾವಲ್ಲ’ ಎಂಬುದನ್ನು ಭೂಮಾಲಿಕ ವರ್ಗದ ಪರವಾಗಿ ಹೇಳಲಾಗುತ್ತಿದೆ. ಹಾಗಾಗಿ ಜಾತಿ ಸಮಸ್ಯೆಯನ್ನು ಕುರಿತು ಚರ್ಚಿಸಲು ಬ್ರಾಹ್ಮಣ ಶೂದ್ರ ಪದಗಳು ದಾರಿ ತಪ್ಪಿಸಿವೆ. ಅವು ಭೂಮಾಲಿಕ ವರ್ಗದ ದಬ್ಬಾಳಿಕೆ ಮತ್ತು ಶೋಷಣೆಯನ್ನು ನಯವಾಗಿ ಬೆಂಬಲಿಸಿ ಸಮರ್ಥಸಿವೆ. ಆದ್ದರಿಂದ ಇನ್ನಾದರೂ ಅವುಗಳ ಮೂಲಕ ಜಾತಿ ಸಮಸ್ಯೆಯ ವಿಶ್ಲೇಷಣೆಯನ್ನು ಕೈಬಿಡಬೇಕಾಗಿದೆ.

ಆದರೆ ವಿಚಿತ್ರವೆಂದರೆ ಕರ್ನಾಟಕದ ವಿಚಾರವಂತರು, ಮಾಧ್ಯಮಗಳು ಹಾಗೂ ಕೆಲವು ಬರಹಗಳು ಬ್ರಾಹ್ಮಣರನ್ನು ವಿರೋಧಿಸುವುದನ್ನು ಒಂದು ವೈಚಾರಿಕ ವೃತ್ತಿ ಮಾಡಿಕೊಂಡಿದ್ದಾರೆ. ಅವರಿಗೆ ಬ್ರಾಹ್ಮಣ ಮಠಗಳು ಮತ್ತು ಬ್ರಾಹ್ಮಣ ಮಠಾಧೀಶರು ಸಿಗಬೇಕು. ಇಲ್ಲವೆ ಎಸ್.ಎ.ಲ್. ಬೈರಪ್ಪ ಸಿಗಬೇಕು. ಸವಕಲು ಮತ್ತು ಹಳಸಲು ಪದಗಳು ಮೂಲಕ ಚೆಂಡಾಡಿ ಬಿಡುತ್ತಾರೆ. ಇವರ ಈ ಹಳಸಲು ಪದಗಳನ್ನು ಅವರು ಅಷ್ಟಾಗಿ ತಲೆಗೆ ಹಚ್ಚಿಕೊಳ್ಳಲು ಹೋಗುವುದಿಲ್ಲ. ಆದರೆ ಇವರು ತಮ್ಮ ಹಳಲಸು ಪದಗಳ ದುಂದುವೆಚ್ಚ ಮಾಡುವುದನ್ನು ನಿಲ್ಲಿಸುವುದಿಲ್ಲ. ಈ ಎರಡರಿಂದ ಒಂದು ಬಗೆಯ ತೆಳುವಾದ ಹಾಸ್ಯಾಸ್ಪದ ಸನ್ನಿವೇಶ ನಿರ್ಮಾಣವಾಗಿದೆ. ಬ್ರಾಹ್ಮಣ ಮಠಾದೀಶರನ್ನು ಮತ್ತು ಬ್ರಾಹ್ಮಣ ಮಠಗಳನ್ನು ವಿರೋಧಿಸುವಾಗ ಕೆಲವು ಮಠಗಳಲ್ಲಿ ‘ಸಹ ಪಂಕ್ತಿ ಭೋಜನ ಇಲ್ಲ’ ಎಂದೂ. ‘ಪೇಜಾವರ ಅವರು ತಮ್ಮ ಮಠಕ್ಕೆ ಒಬ್ಬ ದಲಿತನನ್ನು ಪೂಜಾರಿಯನ್ನಾಗಿ ಮಾಡುತ್ತಾರೆಯೆ’ ಎಂದು ಬಡಬಡಿಸಲಾಗುತ್ತಿದೆ. ಈ ಮಾತುಗಳನ್ನು ಕೇಳಿಕೇಳಿ ಸಾಕಾಗಿ ಹೋಗಿದೆ. ಹಾಗೆ ಕೇಳುವುದು ಸಾಮಾಜಿಕವಾಗಿ ನ್ಯಾಯೋಚಿತವೇ ಎರಬಹುದು. ಆದರೆ ಹಳ್ಳಿಗಳಲ್ಲಿ ಇದೇ ಜಾತಿಯ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಭೀಕರ ಪರಿಸ್ಥಿತಿ ಇದೆ. ಬ್ರಾಹ್ಮಣರಲ್ಲದ ಮಧ್ಯಮ ಸವರ್ಣೀಯ ಜಾತಿಗಳ ಯಾವುದೇ ದೇವಸ್ಥಾನ ಮತ್ತು ಗುಡಿಗಳಿಗೆ ಅಸ್ಪೃಶ್ಯ ದಲಿತರನ್ನು ಒಳಗೆ ಬಿಡುವುದಿಲ್ಲ. ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಇಂದಿಗೂ ಕೂಡ ಅಸ್ಪೃಶ್ಯತೆ ಇದೆ. ಊರಿನ ಹೋಟೆಲುಗಳಿಗೆ ಅಸ್ಪೃಶ್ಯರಿಗೆ ಪ್ರವೇಶ ಕೊಡದ, ಅವರಿಗೆ ಕಟಿಂಗ್ ಮಾಡದ ಅನೇಕ ಹಳ್ಳಿಗಳು ಕರ್ನಾಟಕದಲ್ಲಿವೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಅದರೆ ಪೇಜಾವರರ ಬಗ್ಗೆಯೊ, ಎಸ್.ಎಲ್. ಬೈರಪ್ಪನವರ ಬಗ್ಗೆಯೊ ವಿರೋಧ ಮಾಡುವ ಈ ಬಡಾಯಿಗಳು ಕರ್ನಾಟಕದ ಸಾವಿರಾರು ಹಳ್ಳಿಗಳಲ್ಲಿರುವ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಬಗ್ಗೆ ಯಾವ ಮಾತನ್ನೂ ಆಡುವುದಿಲ್ಲ. ಈ ಹಿನ್ನೆಲೆಯಲ್ಲಿ ಇಂತಹ ಬಡಾಯಿಗಳನ್ನು ಕುರಿತು ಅತಿರೇಕಕ್ಕೆ ಹೋಗಿ ಹೇಳುವುದಾದರೆ ಬ್ರಾಹ್ಮಣ ಮಠಗಳಿಗಿಂತಲೂ ಇವರು ಅಸ್ಪೃಶ್ಯರ ಪಾಲಿಗೆ ಬಹಳ ಅಪಾಯಕಾರಿಗಳು. ತಮ್ಮ ಈ ಅಪಾಯಕಾರಿ ದುರುಳತನವನ್ನು ಮುಚ್ಚಿಹಾಕಿಕೊಳ್ಳುವ ಸಲುವಾಗಿಯೇ ಇವರು ಬ್ರಾಹ್ಮಣ ಮಠ ಮತ್ತು ಮಠಾಧೀಶರ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ದಲಿತ ವಲಯದ ಕೆಲವು ಮುಗ್ಧರು ಅವರ ಜೊತೆಯಲ್ಲಿ ಪ್ರಶ್ನೆ ಮಾಡದೆ ವಾಸ್ತವ ಪರಿಸ್ಥಿತಿಗೆ ಬೆನ್ನು ಮಾಡಿ, ತಮ್ಮ ವೈಯಕ್ತಿಕ ಅವಕಾಶಗಳಿಗಾಗಿ ಕೈಜೋಡಿಸುತ್ತಾರೆ. ಇದು ವಾಸ್ತವವಾಗಿ ಹಳ್ಳಿಗಳ ಜಾತಿ ಸಮಸ್ಯೆಯನ್ನು ಪರಿಶೀಲಿಸಲು ಬಹಳ ದೊಡ್ಡ ತೊಡಕಾಗಿದೆ.

೭೦ರ ದಶಕದಲ್ಲಿ ಕರ್ನಾಟಕದಲ್ಲಿ ಬೇರೆ ಬೇರೆ ಪ್ರಗತಿಪರ ಹೋರಾಟಗಳು ಹುಟ್ಟಿದವು. ಅವುಗಳಲ್ಲಿ ಕರ್ನಾಟಕದ ದಲಿತ ಸಂಘರ್ಷ ಸಮಿತಿಯೂ ಒಂದು. ಆರಂಭದಲ್ಲಿ ದಲಿತ ಹೋರಾಟ ಎದುರಿಸಿದ್ದು ಜಮೀನ್ದಾರಿ ಶೋಷಣೆಯನ್ನು. ದಲಿತರು ಮೊದಲ ಬಾರಿಗೆ ಸಂಘಟಿತರಾಗಿ ಜಮೀನ್ದಾರಿ ಶೋಷಣೆಯನ್ನು ಎದುರಾದುದು ಭಾರತದ ಚರಿತ್ರೆಯಲ್ಲಿ ದಲಿತ ಹೋರಾಟಗಳು ಹುಟ್ಟಿದ ಮೇಲೆಯೇ. ಇದು ಜಮೀನ್ದಾರಿ ವರ್ಗಕ್ಕೆ ಮತ್ತು ಜಮೀನ್ದಾರಿ ವರ್ಗವನ್ನು ಸಮರ್ಥಿಸುವ ಧೋರಣೆಗೆ ಮೊದಲ ಬಾರಿಗೆ ಬಿದ್ದ ಸೈದ್ಧಾಂತಿಕ ಪೆಟ್ಟಾಗಿತ್ತು. ದಲಿತ ಹೋರಾಟ ಜಮೀನ್ದಾರಿ ವರ್ಗವನ್ನು ಗುರಿ ಮಡಿಕೊಂಡು ತನ್ನ ಹೋರಾಟವನ್ನು ಮುಂದುವರಿಸಿದ್ದೇ ಆದರೆ ಅದು ಭಾರತದ ಹಳ್ಳಿಗಳ ನಿಜ ಸಮಸ್ಯೆಯ ವಿರುದ್ಧದ ನಿಜ ಹೋರಾಟವಾಗಿ ಮುಂದುವರಿಯುತಿತ್ತು. ಆ ಕಾರಣಕ್ಕೆ ಜಮೀನ್ದಾರಿ ವರ್ಗಕ್ಕೆ ಮತ್ತು ಅದನ್ನು ಸಮರ್ಥಿಸುವ ಧೋರಣೆಗೆ ಆ ದಲಿತ ಹೋರಾಟದ ದಾರಿಯನ್ನು ದಿಕ್ಕು ತಪ್ಪಿಸಬೇಕಾಗಿತ್ತು. ದಲಿತ ಸಂಘಟನೆಗಳ ಕಾರ್ಯಕರ್ತರಿಗೆ ತಮ್ಮ ತಮ್ಮ ಹಳ್ಳಿಗಳ ಜಮೀನ್ದಾರಿ ವರ್ಗದ ಕ್ರೂರ ಶೋಷಣೆಯ ಬಗ್ಗೆ ತೀವ್ರವಾದ ವಿರೋಧವು ಪ್ರಜ್ಞಾಪೂರ್ವಕಾಗಿ ಸಂಘಟಿತವಾಗಿ ಗಟ್ಟಿಗೊಳ್ಳತೊಡಗಿತು. ಆ ಸಂದರ್ಭದಲ್ಲಿ ದಲಿತ ವಿಚಾರವಾದಿಗಳ ಮತ್ತು ದಲಿತ ಸಾಹಿತಿಗಳ ಮೆದುಳಿಗೆ ಬ್ರಾಹ್ಮಣ ವಿರೋಧದ ಪ್ರಜ್ಞೆಯನ್ನು ಬಲಾತ್ಕಾರವಾಗಿ ತುಂಬಲಾಯಿತು. ಇವರು ತಮ್ಮದಲ್ಲಿದ ಆ ಧೋರಣೆಯನ್ನು ತಮ್ಮದೆಂದೇ ಸ್ವೇಕರಿಸಿದರು. ಆಗ ದಲಿತ ಸಂಘಟನೆ ನಡೆಸುತ್ತಿದ್ದ ಅಧ್ಯಯನ ಶಿಬಿರಗಳಲ್ಲಿ ‘ಪುರೋಹಿತಶಾಹಿ’ ಎಂಬ ಒಂದು ವಿಷಯ ಕಡ್ಡಾಯವಾಗಿ ಇರುತ್ತಿತ್ತು. ಆದರೆ ಯಾವುದೆ ಅಧ್ಯಯನ ಶಿಬಿರದಲ್ಲಿ ‘ಜಮೀನ್ದಾರಿ ವರ್ಗ’ ಎಂಬ ವಿಷಯ ಇರುತ್ತಿರಲಿಲ್ಲ. ಆ  ಹೊತ್ತಿಗೆ ಕರ್ನಾಟಕದಲ್ಲಿ ದಲಿತೇತರ ವಲಯದ ಕೆಲವು ‘ಪ್ರಗತಿಪರ ಚಿಂತಕರು’ ದಲಿತ ಸಂಘಟನೆಯ ಜೊತೆಯಲ್ಲಿ ಇದ್ದರು. ಅವರ ಮೂಲಕ ‘ಬ್ರಾಹ್ಮಣರು ದಲಿತರ ಶತ್ರುಗಳು’ ಎಂಬ ಪ್ರಜ್ಞೆಯನ್ನು ದಲಿತ ಸಂಘನೆಯವರ ಮೆದುಳಿಗೆ ತುರುಕಲಾಯಿತು. ಆದರೆ ದಲಿತರ ಮದುವೆಗೆ ಸಾಲ ಕೊಟ್ಟು, ಒಂದಕ್ಕೆ ಹತ್ತು ಬಡ್ಡಿ ಬರೆದಿಟ್ಟು. ನಿರಂತರವಾಗಿ ದಲಿತರನ್ನು ಜೀತದಾಳುಗಳನ್ನಾಗಿ ಶೋಷಣೆ ಮಾಡಿದ ಜಮೀನ್ದಾರಿ ವರ್ಗವನ್ನು ದಲಿತರ ಪರಮ ಮಿತ್ರರು ಎಂಬುದನ್ನು ದಲಿತ ಸಂಘಟನೆಯವರ ಮೆದುಳಿಗೆ ತುರುಕಲಾಯಿತು. ಪರಿಣಾಮವಾಗಿ ಇವತ್ತಿಗೂ ದಲಿತ ಚಿಂತಕರು ‘ಬ್ರಾಹ್ಮಣಶಾಹಿ’ ಎಂಬ ಮಂತ್ರವನ್ನು ಜಪಿಸುತ್ತಿದ್ದಾರೆ. ಪರಿಣಾಮ ಏನಾಗಿದೆ ಎಂದರೆ ಯಾವ ವರ್ಗದಿಂದ ಜಾತಿ ಸಮಸ್ಯೆಯ ನಿಜವಾದ ವಿಶ್ಲೇಷಣೆ ನಡೆಯಬೇಕಾಗಿತ್ತೊ ಅವರ ಮೆದುಳಿಗೆ ಜಾತಿ ಸಮಸ್ಯೆಯನ್ನು ತಪ್ಪಾಗಿ ಗ್ರಹಿಸುವ ಧೋರಣೆಯನ್ನು ತುರುಕಲಾಗಿದೆ. ಫಲವಾಗಿ ಹಳ್ಳಿಗಳ ಜಾತಿ ಸಮಸ್ಯೆಯ ವಿಶ್ಮೇಷಣೆ ತಾತ್ವಿಕವಾಗಿ ಭೂಮಾಲೀಕ ವರ್ಗಕ್ಕೆ ಮತ್ತು ಆಳುವ ವರ್ಗಕ್ಕೆ ವರವಾಗುವ ರೀತಿಯಲ್ಲೆ ವಿಶ್ಲೇಷಣೆ ನಡೆಯುತ್ತಿದೆ.

ಹಳ್ಳಿಗಳ ಇತ್ತೀಚಿನ ದಲಿತ ತಲೆಮಾರು ಸಾಮಾಜಿಕವಾದ ಸ್ವಾಭಿಮಾನವನ್ನು ಮೈಗೂಡಿಸಿಕೊಂಡಿದೆ. ಈ ಸ್ವಾಭಿಮಾನವು ಹಳ್ಳಿಗಳ ಜಮೀನ್ದಾರಿ ವರ್ಗಕ್ಕೆ ನುಂಗಲಾರದ ತುತ್ತಾಗಿದೆ. ಈ ಕಾಲದ ದಲಿತ ಯುವಜನಾಂಗ ಅದೇ ಹಳ್ಳಿಯ ಜಮೀನ್ದಾರರ ಮನೆಗಳಿಗೆ ಜೀತ ಮಾಡಲು ಮತ್ತು ಕೂಲಿ ಮಾಡಲು ಹೋಗುತ್ತಿಲ್ಲ. ಈ ಕಾರಣದಿಂದ ಜಮೀನ್ದಾರರಿಗೆ ಒಂದು ಕಡೆ ಕೆಲಸಗಾರರ ಕೊರತೆಯ ಸಮಸ್ಯೆಯೂ ಮತ್ತೊಂದು ಕಡೆ ‘ತಮ್ಮ ಮುಂದೆಯೇ ಈ ಅಸ್ಪೃಶ್ಯ ದಲಿತರು ತಮ್ಮ ಮಾತು ಕೇಳಲಾರದೆ ಎದೆಯುಬ್ಬಿಸಿಕೊಂಡು ಸ್ವೇಚ್ಛೆಯಿಂದ ಮೆರೆಯುತ್ತಿದ್ದಾರಲ್ಲ’ ಎಂದೂ ಒಂದು ಬಗೆಯ ಆತಂಕ ಮತ್ತು ಇವರ ಬಗ್ಗೆ ಆಕ್ರೋಶ ಎರಡೂ ಮಡು ಗಟ್ಟಿವೆ. ಆ ಆಕ್ರೋಶಗಳು ಗಟ್ಟಿಗೊಂಡು ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಹಳ್ಳಿಗಳಲ್ಲಿ ನಡೆಯುವ ಹಬ್ಬ ಮತ್ತು ಜಾತ್ರೆಗಳಲ್ಲಿ ಒಂದು ಕಡೆ ಹಳ್ಳಿಗಳ ದಲಿತರ ಸ್ವಾಭಿಮಾನವೂ ಮತ್ತು ಮತ್ತೊಂದು ಕಡೆ ಜಮೀನ್ದಾರಿ ಮರ್ಗದ ಮಡುಗಟ್ಟಿದ ಅಸಹನೆಗಳು ಸಂಘರ್ಷ ಮಾಡುತ್ತಿವೆ. ಪರಿಣಾಮವಾಗಿ ಎಷ್ಟೊ ಹಬ್ಬ ಮತ್ತು ಜಾತ್ರೆಗಳು ಪೊಲೀಸ್ ಸ್ಟೇಶನ್ ಹಾಗೂ ಕೋರ್ಟುಗಳವರೆಗೂ ಹೊಗಿವೆ. ಇದು ದಲಿತ ಯುವಜನಾಂಗಕ್ಕೆ ಮತ್ತಷ್ಟು ಪ್ರತಿರೋಧದ ಶಕ್ತಿಯನ್ನು ತಂದುಕೊಟ್ಟಿದೆ. ಇಂತಹ ಸ್ವಾಭಿಮಾನ ಮೀಸಲು ಕ್ಷೇತ್ರಗಳಿಂದ ‘ಗೆದ್ದು’ ಹೋದ ಜನಪ್ರತಿನಿಧಿಗಳಿಗೆ ಇಲ್ಲವಲ್ಲ ಎಂದು ವ್ಯಥೆಯಾಗುತ್ತದೆ. ಈ ವ್ಯಥೆಯ ಜೊತೆಗೇ ಜಾತಿ ಸಮಸ್ಯೆಯನ್ನು ಕುರಿತು ಬಹಳ ಮುಖ್ಯವಾದ ಒಂದು ಅಂಶ ಕಾಣಿಸುತ್ತಿದೆ. ಅದೇನೆಂದರೆ ಇಂತಹ ಆಳುವ ವರ್ಗದ ರಾಜಕಾರಣಿಗಳಿಂದ ಜಾತಿ ಸಮಸ್ಯೆಗೆ ಪರಿಹಾರವೂ ಸಿಗುವುದಿಲ್ಲ; ಹೋಗಲಿದ ಕೊನೆಗೆ ಜಾತಿಗೆ ಸಂಬಂಧಿಸಿ ಸ್ವಾಭಿಮಾನವೂ ಹುಟ್ಟುವುದಿಲ್ಲ.

ಕಳೆದ ಶತಮಾನದ ಕೊನೆಯ ದಶಕದಲ್ಲಿ ಅಮೇರಿಕಾ ನೇತೃತ್ವದ ಸಾಮ್ರಾಜ್ಯಶಾಹಿ ಜಗತ್ತನ್ನು ಲೂಟಿ ಮಾಡುವ ನೀತಿಗಳನ್ನು ಭಾರತದಲ್ಲಿ ಜಾರಿ ಮಾಡಿತು. ಆ ಲೂಟಿಯ ಸ್ವರೂಪವನ್ನು ಮತ್ತು ವಿಧಾನಗಳನ್ನು ಮುಚ್ಚಿಡಲು, ಜಾಗತೀಕರಣ, ಖಾಸಗೀಕರಣ, ಆಧುನೀಕರಣ ಮತ್ತು ಉದಾರೀಕರಣ ಎಂದು ಅವನ್ನು ಹೆಸರಿಸಿತು. ರಾಜಕೀಯ ಮತ್ತು ಆರ್ಥಿಕ ರಂಗದ ಈ ಬೆಳವಣಿಗೆಗಳು ವೈಚಾರಿಕ ವಲಯದಲ್ಲಿ ಕೆಲವು ವಿಚಾರಗಳನ್ನು ಹುಟ್ಟುಹಾಕಿದವು. ನಿರ್ದಿಷ್ಟವಾಗಿ ಸಾಮಾಜಿಕ ಬೆಳವಣಿಗೆ ಮತ್ತು ಜಾತಿ ಸಮಸ್ಯೆಯನ್ನು ಕುರಿತೂ ಕೂಡ ಕೆಲವು ವಿಚಾರಗಳು ಆಗ ನಿರ್ಮಾಣವಾದವು. ಬಹುತೇಕ ಕೆಳಜಾತಿಗಳ ವಿಚಾರವಂತರು ಸಾಮ್ರಾಜ್ಞಶಾಹಿಯ ಆ ಕ್ರೂರ ನೇತಿಗಳನ್ನು ತಮ್ಮ ವಿಚಾರಗಳಲ್ಲಿ ಸ್ವಾಗತಿಸಿದರು ಮತ್ತು ಸಮರ್ಥಿಸಿದರು. ‘ಆ ನೀತಿಗಳೆಲ್ಲ ಜಾರಿಯಾಗಿರುವುದು ಕೆಳಜಾತಿ ಮತ್ತು ಅಸ್ಪೃಶ್ಯರ ವಿಮೋಜನೆಗಾಗಿ’ ಎಂಬ ವಿಚಾರಗಳನ್ನು ವೈಚಾರಿಕ ವಲಯದಲ್ಲಿ ವ್ಯಾಪಕವಾಗಿ ಹರಡಲಾಯಿತು. ಆದರೆ ಆ ನೀತಿಗಳು ಜಾತಿ ಸಮಸ್ಯೆಯನ್ನು ಪರಿಗಣಿಸಿದ ಬಗೆ ಯಾವುದು ಎಂಬ ಸರಳ ಅಂಶವನ್ನೂ ಚರ್ಚೆ ಮಾಡಲಿಲ್ಲ. ಖಾಸಗೀಕರಣದ ನೀತಿಗಳ ಮೂಲಕ ಭಾರತದ ಎಲ್ಲಾ ಕ್ಷೇತ್ರಗಳನ್ನು ಬಲಾತ್ಕಾರವಾಗಿ ಖಾಸಗೀಕರಣ ಮಾಡಲಾಯಿತು. ಅಂತಹ ವಲಯಗಳಲ್ಲಿದ್ದ ಸಂವಿಧಾನದತ್ತವಾದ ಮೀಸಲಾತಿಯನ್ನು ಸಂಪೂರ್ಣ ನಾಶ ಮಾಡಲಾಯಿತು. ಇಂತಹ ಸನ್ನಿವೇಶಕ್ಕೆ ಪ್ರತಿಕ್ರಿಯಿಸಿದ ಕೆಲವು ವಿಚಾರವಾದಿಗಳು ‘ಖಾಸಗೀ ವಲಯದಲ್ಲಿಯೂ ಮೀಸಲಾತಿಯನ್ನು ಜಾರಿ ಮಾಡಿ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದು ತಪ್ಪು ಎಂದು ತಳ್ಳಿಹಾಕಬೇಕಿಲ್ಲ. ಆದರೆ ಅಂತಹ ಅಭಿಪ್ರಾಯವನ್ನು ಮಂಡಿಸಲು ರಾಜಕೀಯವಾದ ಹಾಗೂ ಆರ್ಥಿಕವಾದ ಯಾವ ತಳಹದಿ (ಬೇಸ್) ಇದೆ ಎಂಬುದನ್ನು ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ. ವಾಸ್ತವವಾಗಿ ಖಾಸಗೀಕರಣವನ್ನು ಜಾರಿ ಮಾಡಿರುವುದೇ ಅಂತರರಾಷ್ಟ್ರೀಯ ಮಾರುಕಟ್ಟೆಯ ಹಣಕಾಸಿನ ಲಾಭಕ್ಕಾಗಿ. ಅದಕ್ಕೆ ಶ್ರಮ ಶೋಷಣೆ ಬೇಕು. ಆ ಶ್ರಮ ಶೋಷಣೆಯಿಂದ ತನ್ನ ಹಣಕಾಸಿನ ಲಾಭವನ್ನು ಹೆಚ್ಚಿಸಿಕೊಳ್ಳಬೇಕು. ಇದು ಜಾಗತೀಕರಣ ನೀತಿಗಳ ಪ್ರಾಥಮಿಕ ಮತ್ತು ಅಂತಿಮ ಗುರಿ ಹಾಗೂ ಉದ್ದೇಶ. ವಾಸ್ತವ ಪರಿಸ್ಥಿತಿ ಹೀಗಿರುವಾಗ ಖಾಸಗೀ ವಲಯದಲ್ಲಿ ಮೀಸಲಾತಿ ಎಂಬುದು ಮರೀಚಿಕೆಯಾಗುತ್ತದೆ. ಇದು ಒಂದು ಅಂಶ. ಮತ್ತೊಂದು ಅಂಶವೇನೆಂದರೆ ಜಾಗತೀಕರಣದ ಈ ಬೆಳವಣಿಗೆಯು ಸಾಮಾಜಿಕ ಸಮುದಾಯಗಳಲ್ಲಿ ಆರ್ಥಿಕ ಅಭದ್ರತೆ ಮತ್ತು ಇಕ್ಕಟ್ಟನ್ನು ತಂದೊಡ್ಡಿತು. ಇದನ್ನು ಎದುರಿಸುವ ಸಲುವಾಗಿ ಸಣ್ಣ ಸಣ್ಣ ಜಾತಿ ಸಮುದಾಯಗಳು ತಮ್ಮ ಹೆಸರಿನಲ್ಲಿ ಸಂಘಟಿತಗೊಂಡು ಸರಕಾರದ ಎದುರು ತಮ್ಮ ಹಕ್ಕೊತ್ತಾಯ ಎಡುತ್ತಿವೆ. ಕಳೆದ ೧೫-೨೦ ವರುಷಗಳಲ್ಲಿ ಕರ್ನಾಟಕದಲ್ಲೆ ನಾವು ಕೇಳದಿರುವಂತಹ ಜಾತಿ ಹೆಸರಿನ ಸಮುದಾಯಗಳು ತಮ್ಮ ಜಾತಿ ಹೆಸರಿನಲ್ಲಿ ಹೋರಾಟಗಳಿಗೆ ಮುಂದಾಗಿವೆ. ಇದು ತಪ್ಪು ಎಂದು ತಳ್ಳಿ ಹಾಕಲು ಬರುವುದಿಲ್ಲ. ಆದರೆ ‘ಜಾಗತೀಕರಣ ನೀತಿಗಳು ಬಂದಿರುವುದೇ ಕೆಳಜಾತಿಗಳ ವಿಮೋಚನೆಗಾಗಿ’ ಎಂಬ ಅಭಿಪ್ರಾಯ ಮಾತ್ರ ಸಾಮಾಜಿಕ ವಾಸ್ತವದಲ್ಲಿ ಸಂಪೂರ್ಣ ಸುಳ್ಳಾಗಿದೆ.

ಇಡೀ ಭಾರತದ ಮತ್ತು ಕರ್ನಾಟಕದ ವಾಸ್ತವ ಏನಾಗಿದೆ ಎಂದರೆ ಸಣ್ಣ ಸಣ್ಣ ಜಾತಿಗಳು ಹೆಚ್ಚು ಹೆಚ್ಚು ಪ್ರತ್ಯೇಕವಾಗಿ ತಮ್ಮನ್ನು ಗುರುತಿಸಿಕೊಳ್ಳುತ್ತಿವೆ. ಹೀಗೆ ಅವು ಪ್ರತ್ಯೇಕವಾಗಿ ಗುರುತಿಸಿಕೊಳ್ಳುವುದು ಆ ಜಾತಿಗಳಿಗೆ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ. ಬೇರೆ ಬೇರೆ ಜಾತಿಗಳ ದೈನಂದಿನ ಬದುಕು ದಿನದಿಂದ ದಿನಕ್ಕೆ ತೀವ್ರ ಆರ್ಥಿಕ ಬಿಕ್ಕಟನ್ನು ಎದುರಿಸುತ್ತಿವೆ. ಆದ್ದರಿಂದ ‘ತಮ್ಮ ಜಾತಿಗೆ ಸರಕಾರಿ ಸವಲತ್ತುಗಳಲ್ಲಿ ಅನ್ಯಾಯವಾಗಿದೆ. ತಮ್ಮ ಜಾತಿಯನ್ನು ಮೀಸಲಾತಿಯ ವ್ಯಾಪ್ತಿಗೆ’ ಸೇರಿಸಬೇಕು ಎಂಬ ಹಕ್ಕೊತ್ತಾಯದ ಹೋರಾಟಗಳನ್ನು ನಡೆಸಲಾಗುತ್ತಿದೆ. ಜಾತಿಯ ಹೆಸರಿನಲ್ಲಿ ಬಿಡಿಬಿಡಿಯಾಗಿ ಹರಿದುಹಂಚಿ ಹೋಗಿರುವ ದುಡಿಯುವ ವರ್ಗದ ಜನಸಮುದಾಯಗಳು ಜಾಗತೀಕರಣದಿಂದ ತಮ್ಮ ಬದುಕುವ ಹಕ್ಕನ್ನೇ ಕಳೆದುಕೊಳ್ಳಬೇಕಾದಂತಹ ಅತಿರೇಕದ ಪರಿಸ್ಥಿತಿಯನ್ನು ಎದುರಿಸುತ್ತಿವೆ.

ಈ ಪರಿಸ್ಥಿತಿಯನ್ನು ಆಳುವ ವರ್ಗ ಮತ್ತು ಆಳುವ ವರ್ಗದ ರಾಜಕೀಯ ಪಕ್ಷಗಳು ಅತ್ಯಂತ ಕುತಂತ್ರದಿಂದ ಮತ್ತು ಅಷ್ಟೇ ಕ್ರೂರ ವಿಧಾನಗಳಿಂದ ದುರುಪಯೋಗ ಮಾಡಿಕೊಂಡಿವೆ. ಒಂದೊಂದು ಸಣ್ಣ ಸಣ್ಣ ಜಾತಿಗಳು ತಮ್ಮ ಹಕ್ಕುಗಳಿಗಾಗಿ ಯಾವುದೊ ಹಂತದಲ್ಲಿ ಸಂಘಟಿತರಾಗುತ್ತಿರುವ ಸಾಮಾಜಿಕ ಸನ್ನಿವೇಶವನ್ನು ಸಂಪೂರ್ಣ ದುರುಪಯೋಗ ಮಾಡಿಕೊಳ್ಳಲಾಗಿದೆ. ಫಲವಾಗಿ ಒಂದು ಜಾತಿಯನ್ನು ಮತ್ತೊಂದು ಜಾತಿಯ ಮೇಲೂ, ಒಂದು ಪ್ರದೇಶದ ಜನರನ್ನು ಮತ್ತೊಂದು ಪ್ರದೇಶದ ಜನರ ಮೇಲೂ ಎತ್ತಿಕಟ್ಟಲಾಗುತ್ತಿದೆ. ಆ ಮೂಲಕ ಜನಸಮುದಾಯಗಳ ನಡುವೆ ಒಂದು ಸಾಮಾನ್ಯ ರೂಪದ ಐಕ್ಯತೆ ಬಾರದಂತೆ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಲಾಗುತ್ತಿದೆ. ಪ್ರತಿಯೊಂದು ಜಾತಿಯ ಆರ್ಥಿಕ ಹಿಂದುಳಿಯುವಿಕೆಗೆ ಸರಕಾರ ಮತ್ತು ಪ್ರಭುತ್ವ ಕಾರಣ ಅಲ್ಲ. ಬದಲಿಗೆ ಕೆಲವು ಜಾತಿಗಳು ಮತ್ತೆ ಕೆಲವು ಜಾತಿಗಳಿಗೆ ಸಿಗಬೇಕಿದ್ದ ಸೌಲಭ್ಯಗಳನ್ನು ಅತಿಕ್ರಮಿಸಿರುವುದೇ ಆಗಿದೆ ಎಂಬ ಅಭಿಪ್ರಾಯವನ್ನು ವಿವಿಧ ಸಣ್ಣ ಜಾತಿಗಳ ನಡುವೆ ಪ್ರಚಾರ ಮಾಡಲಾಗಿದೆ. ಅಂತಹ ಸಣ್ಣ ಸಣ್ಣ ಜಾತಿಗಳ ಅಸಮಾಧಾನ ಮತ್ತು ಆಕ್ರೋಶಗಳು ಸರಕಾರ ಮತ್ತು ಪ್ರಭುತ್ವದ ವಿರುದ್ಧ ತಿರುಗಬೇಕಿತ್ತು. ಆದರೆ ಅದನ್ನು ನಯವಾಗಿ ಈ ವಿಭಿನ್ನ ಜಾತಿಗಳ ನಡುವೆಯೇ ದ್ವೇಷ ಮತ್ತು ಅಸೂಯೆ ಬೆಳೆಯುವಂತಹ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ. ಜಾತಿಯ ಸಮಸ್ಯೆಯನ್ನು ಪ್ರಭುತ್ವ ಹೇಗೆ ಬಳಸಿಕೊಳ್ಳುತ್ತದೆ ಎಂಬುದಕ್ಕೆ ಇದು ಮೇರು ಉದಾಹರಣೆ. ಇಂತಹ ಪರಿಸ್ಥಿತಿಯಲ್ಲಿ ಜಾತಿ ಸಮಸ್ಯೆಯ ಸ್ವರೂಪವನ್ನು ಹೇಗೆ ವಿಶ್ಲೇಷಣೆ ಮಾಡಬೇಕು ಎಂಬುದು ತಾತ್ವಿಕವಾಗಿ ತೊಡಕಾಗಿದೆ. ಆದ್ದರಿಂದ ಜಾತಿ ವರ್ತಮಾನದ ಜಾತಿ ಸಮಸ್ಯೆಯ ಸ್ವರೂಪವನ್ನು ಸರಳವಾಗಿ, ಯಾಂತ್ರಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ವಿಶ್ಲೇಷಣೆ ಮಾಡುವಂತಹ ಪರಿಸ್ಥಿತಿ ಇಲ್ಲ.

ಕಳೆದ ಶತಮಾನದ ೭೦-೮೦ರ ದಶಕದಲ್ಲಿ ‘ಜಾತಿ ವಿನ್ಯಾಶಕ್ಕೆ ಅಂತರ ಜಾತಿಯ ವಿವಾಹವು ಪರ್ಯಾಯ’ ಎಂದು ಹೇಳಲಾಗುತ್ತಿತ್ತು. ಆ ಹಿನ್ನೆಲೆಯಲ್ಲಿ ಕೆಲವು ಮದುವೆಗಳು ನಡೆದವು. ಆದರೆ ಅದರಿಂದ ಜಾತಿ ಸಮಸ್ಯೆ ಸಡಿಲವಾಯಿತು ಎಂದು ತೀರ್ಮಾನಿಸಲು ಕಷ್ಟವಾಗುತ್ತಿದೆ. ಆ ಕಾಲದಲ್ಲಿ ‘ಎಲ್ಲಾ ಶೋಷತ ಜಾತಿಗಳು ಒಂದಾಗಬೇಕು. ತಮ್ಮ ವಿಮೋಚನೆಗಾಗಿ ಹೋರಾಡಬೇಕು’ ಎಂಬ ಕರೆಯನ್ನು ಕೊಡಲಾಗಿತ್ತು. ಆಗ ‘ಜಾತಿ ಬಿಡಿ, ಮತ ಬಿಡಿ, ಮಾನವತೆಗೆ ಜೀವ ಕೊಡಿ’ ಎಂಬ ಘೋಷಣೆಯನ್ನು ಪ್ರಚಾರ ಮಾಡಲಾಗುತ್ತಿತ್ತು. ಅದೇ ಸಂದರ್ಭದಲ್ಲಿ ಕುವೆಂಪು ಅವರ ‘ವಿಶ್ವ ಮಾನವ ಸಂದೇಶ’ವನ್ನು ಪ್ರಚಾರ ಮಾಡಲಾಯಿತು. ಜಾತಿಯನ್ನು ಕುರಿತು ಆ ಕಾಲದ ಮುಖ್ಯ ಷೋಷಣೆ ಎಂದರೆ ‘ಜಾತಿ ಬಿಟ್ಟು ದೇಶ ಕಟ್ಟು’ ಎಂಬುದಾಗಿತ್ತು. ಆದರೆ ವರ್ತಮಾನ ಕಾಲದ ಸಾಮ್ರಾಜ್ಯಶಾಹಿಯ ಯುಗವು ಆ ಘೋಷಣೆಯನ್ನು ತಿರುಗುಮುರುಗು ಮಾಡಿದೆ. ಆ ಘೋಷಣೆ ಈ ಕಾಲದಲ್ಲಿ ‘ದೇಶ ಬಿಟ್ಟು ಜಾತಿ ಕಟ್ಟು’ ಎಂಬುದಾಗಿ ಬದಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜಾಗತೀಕರಣವು ಉಂಟುಮಾಡಿರುವ ರಾಜಕೀಯ ಮತ್ತು ಆರ್ಥಿಕ ಅತಂತ್ರತೆ ಮತ್ತು ಅಭದ್ರತೆಗಳು ಜಾತಿ ಸಮಸ್ಯೆಯನ್ನು ಕುರಿತು ಸಾಂಪ್ರದಾಯಿಕ ವಿಶ್ಲೇಷಣ ಕ್ರಮಗಳನ್ನು ಬದಲಾಯಿಸಿಕೊಳ್ಳುವಂತೆ ಒತ್ತಾಯಿಸುತ್ತಿವೆ.

ಈ ಬರವಣಿಗೆಯನ್ನು ಶುರುಮಾಡುವಾಗ ಜಾತಿ ಸಮಸ್ಯೆಯ ವಿಶ್ಲೇಷಣೆ ಎಂಬ ವಿಷಯ ವ್ಯಾಪ್ತಿಯಲ್ಲಿ ಆಲೋಚನೆ ಮಾಡಿ ಟೈಪ್ ಮಾಡುತ್ತಾ ಬಂದೆ. ಆದರೆ ವಿಷಯದ ವಿಶ್ಲೇಷಣೆಯ ಪ್ರಕಾರ ಆ ಶೀರ್ಷಿಕೆ ತನಗೆ ತಾನೆ ಬದಲಾಗಬೇಕು ಎಂಬುದನ್ನು ಪ್ರತ್ಯಕ್ಷವಾಗಿ ಒತ್ತಾಯಿಸಿತು. ಹಾಗಾಗಿ ಇದರ ಶೀರ್ಷಿಕೆಯನ್ನು ‘ಜಾತಿ ವಿಶ್ಲೇಷಣೆಯ ಸಮಸ್ಯೆ’ ಎಂದು ಬದಲಾಯಿಸಿದ್ದೇನೆ. ಜಾತಿಯ ಸ್ವರೂಪವನ್ನು ವಿಶ್ಲೇಷಣೆ ಮಾಡುವುದು ಸರಳವಿಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಅದರ ಸಮಸ್ಯೆಯನ್ನು ಕೇವಲ ಅತ್ಯಂತ ಮೇ‍ಲ್‍ಪದರದಲ್ಲಿ ಮಾತ್ರ ಅವಲೋಕನ ಮಾಡಲಾಗಿದೆ. ಇತ್ತೀಚಿನ ದುಡಿಮೆಯ ವಿಧಾನಗಳು ಬೇರೆ ಬೇರೆ ಜಾತಿಯವರನ್ನು ಒಂದು ಕಡೆ ಸೇರಿಸುತ್ತಿವೆ. ಅಥವಾ ಇತ್ತೀಚೆಗೆ ದುಡಿಮೆ ಮಾಡಲು ಬೇರೆ ಬೇರೆ ಜಾತಿಯವರು ಒಂದು ಕಡೆ ಸೇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಕೆಲಸ ಮಾಡುವ ತನಕ ಬೇರೆ ಬೇರೆ ಜಾತಿಯವರು ಒಟ್ಟಿಗೆ ಇರುತ್ತಾರೆ. ಕೆಲಸ ಮುಗಿದ ನಂತರ ತಮ್ಮ ತಮ್ಮ ಮನೆಗಳಿಗೇ ಹಿಂತಿರುಗುತ್ತಾರೆ. ಆಫೀಸು, ಕಛೇರಿ, ಶಾಲೆ ಕಾಲೇಜು ಎಲ್ಲಾ ಕಡೆಗಳಲ್ಲಿಯೂ ಇದೇ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಶಾಲೆಗಳಲ್ಲಿ ಯೂನಿಫಾರಮ್ ಹಾಕಿರುವ ಮಕ್ಕಳು ಆ ಬಟ್ಟೆಯ ಬಣ್ಣದ ಕಾರಣಕ್ಕೆ ಒಂದೇ ರೀತಿ ಕಾಣುತ್ತಾರೆ. ಇದೇ ರೀತಿಯಲ್ಲಿ ಸಿನಿಮ ನೋಡುವಾಗ ಪ್ರೇಕ್ಷದರಾದಾಗ, ಪ್ರಯಾಣ ಮಾಡುವಾಗ ಪ್ರಯಾಣಿಕರಾದಾಗ, ಹೋಟೆಲ್‍ಗಳಲ್ಲಿ ಗ್ರಾಹಕರಾದಾಗ ಬೇರೆ ಬೇರೆ ಜಾತಿ ಎಂಬುದು ಮುಖ್ಯವಾಗುವುದಿಲ್ಲ. ಆದರೆ ಅದು ಮುಗಿದು ಮನೆಗಳಿಗೆ ಹಿಂತಿರುಗಿದಾಗ ಅಲ್ಲಿ ಉದ್ಯೋಗಿ, ನೌಕರ, ವಿದ್ಯಾರ್ಥಿ, ಪ್ರೇಕ್ಷಕ, ಪ್ರಯಾಣಿಕ ಮತ್ತು ಗ್ರಾಹಕ ಈ ಪಾತ್ರಗಳು ಸಂಪೂರ್ಣ ಅಳಿಸಿ ಹೋಗುತ್ತವೆ. ಈ ಪಾತ್ರಗಳೆಲ್ಲ ಸಾಮಾಜಿಕವಾಗಿ ಕೇವಲ ತೋರಿಕೆಯ ಪಾತ್ರಗಳು. ಅವು ಅಳಿಸಿ ಹೋಗಿ ಸಮುದಾಯ, ಜಾತಿ, ಕೋಮು, ಕುಟುಂಬ, ಊರು, ಕೇರಿ, ಓಣಿ ಮುಂತಾದ ನಿಜ ವ್ಯಕ್ತಿಗಳು ಪ್ರತ್ಯಕ್ಷರಾಗುತ್ತಾರೆ. ಅಷ್ಟು ಮಾತ್ರವಲ್ಲ; ಮದುವೆಯ ವಿಷಯ ಪ್ರಸ್ತಾಪಕ್ಕೆ ಬಂದಾಗ, ಒಳಜಾತಿ, ಒಳಪಂಗಡ, ಕುಲ, ಬಳಿ, ಬೆಡಗು ಮುಂತಾದ ನಿಜ ವ್ಯಕ್ತಿಗಳು ಪ್ರತ್ಯಕ್ಷರಾಗುತ್ತಾರೆ. ಇಲ್ಲಿ ಬಹಳ ದೊಡ್ಡ ಸಮಸ್ಯೆ ಇರುವುದು ಸಾಮಾಜಿಕವಾಗಿ ದುಡಿಮೆಯ ಕಾರಣಕ್ಕೆ ತೋರುವ ಪಾತ್ರಗಳನ್ನೆ ಆಧರಿಸಿ ಜಾತಿ ಸಮಸ್ಯೆ ಸಡಿಲವಾಗಿದೆ ಎಂದು ನಂಬಲಾಗಿದೆ. ಆದರೆ ಮದುವೆ ಮತ್ತು ಊಟದ ವಿಷಯ ಬಂದಾಗ ಈ ತೋರಿಕೆಯ ಅಂಶಗಳು ಹಿಂದಕ್ಕೆ ಸರಿಯುತ್ತವೆ. ಬೇರೆ ಅಂಶಗಳು ಮುಂದಕ್ಕೆ ಬರುತ್ತವೆ. ಹಾಗಾಗಿ ಜಾತಿ ಸಮಸ್ಯೆಗೆ ಪರಿಹಾರ ಯಾವುದು ಎಂಬುದಕ್ಕಿಂತಲೂ ಜಾತಿ ಸಮಸ್ಯೆಯ ಸ್ವರೂಪವನ್ನು ಇನ್ನೂ ಸೂಕ್ಷ್ಮವಾಗಿ ಮತ್ತು ಗಂಭೀರವಾಗಿ ಅವಲೋಕನ ಮಾಡಬೇಕಾಗಿದೆ. ಜಾತಿ ಸಮಸ್ಯೆಯ ಸ್ವರೂಪವು ಜಡವಾಗಿ ಉಳಿದಿಲ್ಲ. ಅದು ನಿರಂತರವಾಗಿ ಬದಲಾಗುತ್ತಲೆ ಸಾಗಿದೆ. ಸಾಮಾಜಿಕವಾದ ಯಾವ ಅಂಶಗಳು ಈ ಬದಲಾವಣೆಗಳನ್ನು ಉಂಟುಮಾಡುತ್ತಿವೆ ಎಂಬುದನ್ನೂ ವಿಶ್ಲೇಷಣೆ ಮಾಡಬೇಕಾಗಿದೆ. ಜಾತಿ ಸಮಸ್ಯೆಯ ಸ್ವರೂಪ ಬದಲಾಗುತ್ತಾ ಸಾಗುತ್ತಿರುವ ಪ್ರಕ್ರಿಯೆಯನ್ನು ಅರಿಯುವ ಮೂಲಕವೇ ಅದರ ಪರಿಹಾರದ ಸಾಧ್ಯತೆಗಳನ್ನು ಕುರಿತು ಆಲೋಚಿಸಬೇಕಿದೆ. ಅವುಗಳಲ್ಲಿ ಪ್ರಧಾನವಾದ ಅಂಶಗಳೆಂದರೆ ಆಸ್ತಿ, ಸಂಪತ್ತು ಮತ್ತು ಅಧಿಕಾರಗಳ ಅಸಮಾನ ಹಂಚಿಕೆ ಹಾಗೂ ಅವುಗಳ ಕೇಂದ್ರೀಕರಣ ಆಗಿರುವುದು. ಪ್ರಸ್ತುತ ಜಾಗತೀಕರಣದ ರಾಜಕೀಯ ವಸ್ತುಸ್ಥಿತಿಯ ನಿಜ ವಾಸ್ತವ ಅದೇ ಆಗಿದೆ. ಅದು ಜಾಗತಿಕ ಮಟ್ಟದಲ್ಲಿ ಆಸ್ತಿ, ಸಂಪತ್ತು ಮತ್ತು ಅಧಿಕಾರಗಳ ಕೇಂದ್ರೀಕರಣವನ್ನು ಸಾಧಿಸಲು ಸತತವಾಗಿ ಶ್ರಮಿಸುತ್ತಿದೆ. ಅದೇ ಕಾಲಕ್ಕೆ ಭಾರತದ ಹಳ್ಳಿಗಳಲ್ಲಿ ಭೂಮಾಲಿಕ ವರ್ಗಗಳಿಂದ ಇದೇ ರೀತಿಯ ಆಸ್ತಿ, ಸಂಪತ್ತು ಮತ್ತು ಅಧಿಕಾರಗಳ ಕೇಂದ್ರೀಕರಣ ಹೊಸ ಬಗೆಯಲ್ಲಿ ಮುಂದುವರಿದಿದೆ. ಜೊತೆಗೆ ಕೆಳಜಾತಿ ಮತ್ತು ‘ಅಸ್ಪೃಶ್ಯ ಸಮುದಾಯಗಳಿಗೆ ಸರಕಾರಗಳು ವಿಶೇಷವಾದ ಸವಲತ್ತುಗಳನ್ನು ಓಟ್ ಬ್ಯಾಂಕ್ ಕಾರಣಕ್ಕೆ ಕೊಡುತ್ತಿವೆ. ಆದರಿಂದ ಪ್ರತಿಭಾವಂತರಿಗೆ ವಂಚನೆಯಾಗುತ್ತಿದೆ’ ಎಂಬ ಸಾಮಾಜಿಕ ಅಭಿಪ್ರಾಯವನ್ನು ಸ್ಥಳೀಯ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗೆ ವ್ಯಾಪಕವಾಗಿ ಹರಡಲಾಗಿದೆ. ಇದು ಗಟ್ಟಿಯಾದ ಸಾಮಾಜಿಕ ಹಾಗೂ ರಾಜಕೀಯ ಧೋರಣೆಯಾಗಿದೆ ಜೊತೆಗೆ ಅದು ಸಾಮಾಜಿಕ ಮನೋಭಾವವಾಗಿದೆ. ಅದು ಕೆಲವರಲ್ಲಿ ಅಪ್ರಜ್ಞಾಪೂರ್ವಕ ನಂಬಿಕೆಯಾಗಿದೆ. ಈ ಎಲ್ಲವೂ ಇಡೀ ಪರಿಸ್ಥಿತಿಯು ಸಂಕೀರ್ಣವಾಗಿರುವುದನ್ನೆ ತೋರಿಸುತ್ತಿವೆ. ಹಾಗಾಗಿ ಯಾವುದೊ ಒಂದು ಅಂಶದಲ್ಲಿ ಜಾತಿ ಸಮಸ್ಯೆಗೆ ಸರಳ ಪರಿಹಾರ ಹೇಳುವ ಪರಿಸ್ಥಿತಿ ಈಗ ಇಲ್ಲ.