ಮಾರಿ, ಮಸಣಿ, ಭೂತ, ಬೆಂತರ, ಚೋಮ.
ಹಲಗೆ ಹೊಡಿ, ಉರುಮೆ ಉಜ್ಜು, ಡೊಳ್ಳು ಬಾರಿಸು.
ತೃಪ್ತಿಯಾಗಲಿ ಸಮಸ್ತ ಭೂತ ಭೇತಾಳಕ್ಕೆ.
ಬೇವುಟ್ಟು, ಬಂಡಾರ ಬಳಿದು, ಚಾಟಿಯನೆತ್ತಿ
ಬಿಗಿಯೋ ಮೈಗೆ, ಸಂತೋಷವಾಗಲಿ ಎಲ್ಲ ಪರಿವಾರಕೆ.

ಎಳೆದು ತಾ ಕುರಿ ಕೋಳಿ ಕೋಣಗಳನ್ನು-
ಕಡಿ; ಬೋಗುಣಿಯಲ್ಲಿ ನೆತ್ತರ ಹಿಡಿದು ಊರ ಗಡಿ-
ಯಂಚಿನಲ್ಲಿ ಸುತ್ತಲೂ ಚೆಲ್ಲು. ಊರಿಗೆ ಒಳಿತು.
ತೇರನೆಳೆ. ಮೈದುಂಬಿ ಕುಣಿಯುತಿದ್ದಾವೆ
ನೂರಾರು ಬಾಯಿ ಬೀಗದ ಹರಕೆ. ಬರೀ ಬೆತ್ತಲೆ
ಹೊರಳಾಡುತಿವೆ ತೇರಿನ ಸುತ್ತ ಬೋಳುಮಂಡೆಯ
ದಿಂಡು; ಇವು ಈ ದೇವತೆಗಳಿಗೆ ತಕ್ಕ ದಂಡು!

ಈ ಎಲ್ಲದಕ್ಕೂ ಹಿನ್ನೆಲೆಯಾದ ಏ ಪೂಜಾರಿ, ಶತಮಾನದಿಂದಲೂ
ನಡೆಯುತಿದೆಯಯ್ಯ ನಿನ್ನ ಈ ಚಾತುರ್ಯ.
ನಿನಗೋ ಮಡಿ; ಪುರಾತನ ಮಂತ್ರತಂತ್ರದ ಗರುಡಿ-
ಯಲ್ಲಿ ನುರಿತವ ನೀನು. ನಿನಗೆ ಬೇಕಾದದ್ದು
ಬರೀ ದಕ್ಷಿಣೆ. ಗೊತ್ತು, ನೀನೇ ರಚಿಸಿದ್ದು ಈ
ನಂಬಿಕೆಯ ವ್ಯೂಹ, ನಿನಗೊ ತೀರದ ದಾಹ.