ಕರ್ನಾಟಕದಲ್ಲಿ ಹಿಂದೂಸ್ಥಾನಿ ಹಾಡುಗಾರಿಕೆಯ ಜೊತೆಗೆ ಠುಮ್ರಿ ಗಾಯನವನ್ನು ಜನಪ್ರಿಯಗೊಳಿಸಿದ ಕಲಾವಿದೆಯರಲ್ಲಿ ಬೆಳಗಾವಿಯ ಶ್ರೀಮತಿ ಜಾನಕಿ ಅಯ್ಯರ್ ಅಗ್ರಗಣ್ಯರು. ೧೯೩೨ರಲ್ಲಿ ಜನಿಸಿದ ಶ್ರೀಮತಿ ಜಾನಕಿ ಅಯ್ಯರ್ ದೈವದತ್ತವಾಗಿ ಬಂದ ತಮ್ಮ ಸುಮಧುರ ಧ್ವನಿಯಿಂದ ಕ್ಷೇತ್ರದಲ್ಲಿ ಹೆಸರು ಮಾಡಿದವರು.

ಶ್ರೀಮತಿ ಜಾನಕಿ ಅಯ್ಯರ್ ಅವರು ಶ್ರೀಮತಿ ಹೀರಾಬಾಯಿ ಬಡೋಡೆಕರ್ ಮತ್ತು ಶ್ರೀ ಪ್ರಭುದೇವ ಸರ್ದಾರ್ ಅವರಲ್ಲಿ ಹಿಂದೂಸ್ಥಾನಿ ಸಂಗೀತ ಶಿಕ್ಷಣ ಪಡೆದರು. ಠುಮ್ರಿ ಗಾಯನದಲ್ಲಿ ವಿಶೇಷ ಪ್ರತಿಭೆಯನ್ನು ಪಡೆದಿರುವ ಜಾನಕಿ ಅವರು ಖ್ಯಾಲ್‌, ಗಝಲ್‌, ಲಘು ಸಂಗೀತ ಗಾಯನದಲ್ಲೂ ಸಿದ್ಧಹಸ್ತರು.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ಅಧ್ಯಯನ ಪೀಠದಲ್ಲಿ ಹದಿನೆಂಟು ವರ್ಷಗಳ ಕಾಲ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿರುವ ಶ್ರೀಮತಿಯವರು ಅಖಿಲ ಭಾರತೀಯ ಗಂಧರ್ವ ಮಹಾ ಮಂಡಲದಲ್ಲಿ ಸಂಗೀತ ವಿಶಾರದ ಪದವಿ ಪಡೆದಿದ್ದಾರೆ. ಆಕಾಶವಾಣಿಯ ‘ಎ’ ಶ್ರೇಣಿ ಕಲಾವಿದರಾಗಿ ಮುಂಬೈ, ಪುಣೆ, ಡೆಲ್ಲಿ, ನಾಗಪುರ, ಚೆನ್ನೈ, ಹೈದರಾಬಾದ್‌, ವಾರಂಗಲ್‌, ಬೆಂಗಳೂರು ಮುಂತಾದ ಪ್ರತಿಷ್ಠಿತ ನಗರಗಳಲ್ಲಿ ಅನೇಕ ಕಛೇರಿಗಳನ್ನು ಶ್ರೀಮತಿಯವರು ನಡೆಸಿಕೊಟ್ಟಿದ್ದಾರೆ. ಅಲ್ಲದೇ ಮುಂಬೈ ದೂರದರ್ಶನದಲ್ಲೂ ಜಾನಕಿ ಅವರ ಸಂಗೀತ ಕಛೇರಿ ಪ್ರಸಾರವಾಗಿದೆ.

ಶ್ರೀಮತಿ ಜಾನಕಿ ಅಯ್ಯರ್ ಅವರ ಸಂಗೀತ ಸೇವೆಯನ್ನು ಗುರುತಿಸಿ ಮುಂಬೈನ ಸುರಸಿಂಗಾರ್ ಸಂಸದ್‌ ೧೯೭೩ರಲ್ಲಿ ‘ಸುರಮಣಿ’ ಪ್ರಶಸ್ತಿಯೊಂದಿಗೆ ಈ ಕಲಾವಿದೆಯನ್ನು ಸನ್ಮಾನಿಸಿದೆ.

ಅಭಿಜಾತ ಕಲಾವಿದೆ ಶ್ರೀಮತಿ ಜಾನಕಿ ಅಯ್ಯರ್ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೯-೨೦೦೦ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.