ದಾದಾ ಧರ್ಮಾಧಿಕಾರಿ ಎಂಬುವರು ಬಹು ದೊಡ್ಡ ವಿದ್ವಾಂಸರು. ಕಾಲೇಜಿನಲ್ಲಿ ಪ್ರೊಫೆಸರಾಗಿದ್ದವರು. ಗಾಂಧೀಜಿಯವರ ಚಿಂತನೆಯನ್ನು ಆಳವಾಗಿ ಅಭ್ಯಾಸ ಮಾಡಿದವರು. ದೇಶವೆಲ್ಲ ಅವರನ್ನು ಗೌರವಿಸುತ್ತದೆ. ೧೯೩೫ರಲ್ಲಿ ಅವರು ಬಜಾಜವಾಡಿಯಲ್ಲಿದ್ದರು. ಇವರ ಮಗಳು ಸಹ ಜೊತೆಗಿದ್ದಳು. ಈ ಮಗಳಿಗೆ ಒಬ್ಬಳು ಸ್ನೇಹಿತೆ. ಆಕೆ ಎಲ್ಲರಿಗೂ ಅಚ್ಚುಮೆಚ್ಚು. ಆಕೆಯ ಬಗ್ಗೆ ಮಾತು, ಮೆಚ್ಚುಗೆಯಿಲ್ಲದೆ ಒಂದು ದಿನವಾದರೂ ಕಳೆಯುತ್ತಿರಲಿಲ್ಲ.

ಬಜಾಜವಾಡಿಗೆ ಒಮ್ಮೆ ಧರ್ಮಾಧಿಕಾರಿಯವರ ನೆಂಟರು ಬಂದರು. ಮಾತುಕತೆ ಆಯಿತು. ಯಥಾಪ್ರಕಾರ ಮಗಳ ಗೆಳತಿಯ ವರ್ಣನೆ, ಮೆಚ್ಚುಗೆ ನಡೆಯಿತು. ಇಷ್ಟು ಹೊಗಳಿಕೆಗೆ ಅರ್ಹಳಾದವಳು ಹೇಗಿರುತ್ತಾಳೊ ಎಂದು ಅವರಿಗೆ ಕುತೂಹಲ. ಅವರ ಮನಸ್ಸಿನಲ್ಲಿ ಏನೇನೋ ಭಾವನೆಗಳು ಸುಳಿದವು.

ಅಷ್ಟು ಹೊತ್ತಿಗೆ ಆ ಹುಡುಗಿ ಬಂದಳು. ಆಕೆಯನ್ನು ನೋಡಿ ನೆಂಟರ ಉತ್ಸಾಹ ಮಂಜಿನ ಹನಿಯಂತೆ ಕರಗಿ ಹೋಯಿತು. ’ಸುಂದರ ರೂಪ ಎಂದುಕೊಂಡಿದ್ದೆವು. ಆದರೆ ಬಾಳಕದಲ್ಲಿನ ನೆಲ್ಲಿಕಾಯಿಯಂತೆ ಮುಖದ ತುಂಬ ಮಚ್ಚೆಗಳು’ ಎಂದರು. ಹುಡುಗಿ ತೆಗಳಿಕೆಯನ್ನು ಕೇಳಿ ಕೋಪ ಮಾಡಿಕೊಳ್ಳಲಿಲ್ಲ. ’ಇನ್ನೊಮ್ಮೆ ನೋಡಿ. ನನ್ನ ಮುಖ ಚಟ್ನಿ ಅರೆಯುವ ಕಲ್ಲಿನಂತೆ ಇದೆಯಲ್ಲವೆ? ಅದೂ ಒಂದು ರೀತಿ ಸುಂದರ ಅಲ್ಲವೆ? ಜೊತೆಗೆ ಬಣ್ಣ ಸಹ ಜೋರಾಗಿಯೇ ಇದೆಯಲ್ಲ! ಒಂದು ವಿಷಯ ತಿಳಿದುಕೊಳ್ಳಿ. ಬಾಳಕದ ನೆಲ್ಲಿಕಾಯಿನ ಒಳಗೆ ಸಹ  ಮಾಧುರ್ಯ ತುಂಬಿರುತ್ತದೆಯೇ ಹೊರತು ಕಹಿಯಾಗಿರುವುದಿಲ್ಲ’ ಎಂದಳು.

ಆ ನೆಂಟರ ಮನಸ್ಸಿನಲ್ಲಿದ್ದ ಭೂತವನ್ನು ಹೊಡೆದೋಡಿಸಿದ ಹುಡುಗಿಗೆ ಆಗ ನಲವತ್ತೆರಡು ವರ್ಷ. ಆಕೆಯೇ ಜಾನಕೀ ದೇವೀ ಬಜಾಜ್.

ಹುಟ್ಟಿದ್ದು ಹಣವಂತರ ಮನೆಯಲ್ಲಿ, ಸೇರಿದ್ದು ಹಣವಂತರ ಮನೆಯನ್ನು, ತಂದೆ ಬಹು ಶ್ರೀಮಂತ ವ್ಯಾಪಾರಿ ಮಾತ್ರವಲ್ಲ, ಅವನಿದ್ದ ರಾಜ್ಯದ ಮುಸ್ಲಿಂ ನವಾಬ ಕೂಡ ಅವನನ್ನು ಗೌರವಿಸುವಷ್ಟು ಪ್ರತಿಷ್ಠಿತ. ಗಂಡನ ಸಾಕು ತಂದೆ ಲಕ್ಷಾಧೀಶರು. ಗಂಡ ಎಷ್ಟು ಶ್ರೀಮಂತರು ಎಂದರೆ ಬದುಕಿದ್ದಾಗ ಲಕ್ಷಾಂತರ ರೂಪಾಯಿ ದಾನಧರ್ಮ ಮಾಡಿದಲ್ಲದೆ ಸಾಯುವಾಗ ಧರ್ಮ ಕೆಲಸಕ್ಕೆಂದೇ ಆರೂ ಕಾಲು ಲಕ್ಷ ರೂಪಾಯಿ ಇಟ್ಟಿದ್ದ. ಹೀಗೆ ಶ್ರೀಮಂತರ ಮಗಳು, ಶ್ರೀಮಂತರ ಸೊಸೆ, ಶ್ರೀಮಂತರ ಹೆಂಡತಿ ಆದ ಜಾನಕಿಗೆ ಕಷ್ಟ ಎಂದರೆ ಏನೆಂದು ತಿಳಿಯಬೇಕಾದ್ದಿರಲಿಲ್ಲ. ಆದರೆ ಇಂಥ ಹೆಂಗಸು ಒಳ್ಳೆಯ ಸಮಾಜ ಸೇವಕಿಯಾದಳು, ರಾಷ್ಟ್ರಕ್ಕಾಗಿ ದುಡಿದಳು. ದೇಶದ ಕೆಲಸಗಳನ್ನು ಮಾಡಿ ಕಾರಾಗೃಹಕ್ಕೆ ಹೋದಳು.

ಇಂಥ ಬದಲಾವಣೆ ಹೇಗೆ ಬಂತು? ಇದಕ್ಕೆ ಕಾರಣ ಆದರ್ಶ ಗಂಡನ ಸತ್ಸಂಗ, ಗಾಂಧೀಜಿಯಂಥ ಮಹಾತ್ಮರ ಪ್ರತ್ಯಕ್ಷ ಸಹವಾಸ ಮತ್ತು ವಿನೋಬರಂಥ ಸಂತರ ಒಡನಾಟ.

ಜಾನಕಿಯರು ಸುಸಂಸ್ಕೃತ ಜೀವ.ಯಾವ ಕೆಲಸವನ್ನಾದರೂ ಶ್ರದ್ಧೆಯಿಂದ ಮಾಡುವ ಜಾಯಮಾನ. ಒಣ ಉಪಚಾರಗಳಲ್ಲಿ ನಂಬಿಕೆಯಿರಲಿಲ್ಲ. ಮುಖಸ್ತುತಿ ಹಿಡಿಸುತ್ತಿರಲಿಲ್ಲ. ಈಕೆ ಒಳ್ಳೆಯ ಚಾರಿತ್ರ‍್ಯ, ಪ್ರಾಮಾಣಿಕತೆ ಮತ್ತು ತ್ಯಾಗಗಳ ತ್ರಿವೇಣಿ ಸಂಗಮ. ಮಕ್ಕಳ ಹಾಗೆ ನಿಷ್ಕಪಟ ಸ್ವಭಾವ.

ಜಾನಕಿ ಶಾಲೆಯ ಮೆಟ್ಟಿಲನ್ನೂ ತುಳಿದವಳಲ್ಲ. ಆದರೆ ಜೀವನ ಶಾಲೆಯಲ್ಲಿ ಈಕೆಯಷ್ಟು ಕಲಿತವರು ಕಡಿಮೆ ಜನ. ಅನುಭವದಿಂದ ಸರಳ ಜೀವನ ಮತ್ತು ಉಚ್ಛ ಚಿಂತನದ ಪಾಠವನ್ನು ಕಲಿತು ಜೀವನದಲ್ಲಿ ಅನುಷ್ಠಾನಕ್ಕೆ ತಂದ ಕರ್ಮಯೋಗಿನಿ ಈಕೆ.

ಮನೆತನ

ಸೇಠ್ ಗಿರಿಧಾರೀಲಾಲರದು ಮಧ್ಯಪ್ರದೇಶದ ಜಾವರಾದ ಒಂದು ಪ್ರತಿಷ್ಠಿತ ಮಾರವಾಡಿ ಕುಟುಂಬ. ಅವರು ತುಂಬ ದೈವಭಕ್ತರು. ಧರ್ಮನಿಷ್ಠೆ, ಸೇವೆ ಮತ್ತು ಸಹಾಯ ಮಾಡುವುದರಲ್ಲಿ ಎತ್ತಿದ ಕೈ. ಸೇಠರ ಹೆಂಡತಿ ಪತಿ ಪರಾಯಣೆ ಮತ್ತು ಸಾಧು ಸ್ವಭಾವದ ಹೆಂಗಸು. ಇನ್ನೊಬ್ಬರಿಗೆ ಕಷ್ಟ ಎಂದರೆ ಮನಸ್ಸು ಕರಗುತ್ತಿತ್ತು ಮತ್ತು ಸದಾ ಸಹಾಯ ಹಸ್ತ ಚಾಚಿರುತ್ತಿತ್ತು. ಈಕೆ ಊರಿನವರಿಗೆಲ್ಲ ಅಚ್ಚುಮೆಚ್ಚು.

ಈ ಸಜ್ಜನ ದಂಪತಿಗಳಿಗೆ ಮೂರು ಮಕ್ಕಳು. ಇಬ್ಬರು ಗಂಡು ಮಕ್ಕಳ ನಡುವೆ ಹುಟ್ಟಿದವಳು ಜಾನಕಿ. ೧೮೯೩ನೇ ಇಸವಿ ಜನವರಿ ೭ನೇ ತಾರೀಖು ಈಕೆ ಜನಿಸಿದಳು. ಒಮ್ಮೆ ಜಾನಕಿಗೆ ಕಾಯಿಲೆ ಬಂದು ಮುಖದ ತುಂಬ ಮಚ್ಚೆಗಳಾದವು. ಮುಖ ವಿಕಾರವಾಯಿತು. ಮೊದಲೇ ಕಪ್ಪುಬಣ್ಣ. ಕಾಯಿಲೆಯಿಂದಿನ್ನೂ ಕಪ್ಪಾಯಿತು. ನೊಂದ ಮಗಳನ್ನು ತಂದೆ ತಾಯಿ ಇನ್ನೂ ಹೆಚ್ಚು ಪ್ರೀತಿಸಲು ಪ್ರಾರಂಭಿಸಿದರು. ಜಾನಕಿಗೂ ತಂದೆ ತಾಯಿಗಳಲ್ಲಿ ಒಳ್ಳೆಯ ಭಾವನೆಯಿತ್ತು. ಅವರನ್ನು ದೇವರೆಂದು ತಿಳಿದಿದ್ದಳು.

ಅದೃಷ್ಟವಿದ್ದವರಿಗೆ ಅರಮನೆ ವಾಸ

ಕಾಯಿಲೆಯಿಂದೆದ್ದ ಜಾನಕಿ ಉಪಚಾರದಿಂದ ಸ್ವಲ್ಪ ಚೇತರಿಸಿಕೊಂಡಿದ್ದಳು. ಆದರೆ ಮುಖದ ಮಚ್ಚೆಗಳು ಹಾಗೇ ಇದ್ದವು. ಈ ಸಂದರ್ಭದಲ್ಲಿ ಒಂದು ದಿನ ವರ್ಧಾದಿಂದ ಮಾನೀರಾಮ ಎಂಬುವವರು ಗಿರಿಧಾರೀಲಾಲರ ಮನೆಗೆ ಬಂದರು. ಅವರನ್ನು ಸೇಠ್ ಬಚ್ಚಾ ರಾಜರು ಕಳುಹಿಸಿದ್ದರು. ಸಾಕು ಮೊಮ್ಮಗ ಜಮನಾಲಾಲನಿಗೆ ಹೆಣ್ಣು ಹುಡುಕುವುದು ಅವರ ಉದ್ದೇಶ. ಜಾನಕಿಯ ರೂಪ ಕಂಡು ಬಂದವರಿಗೆ ನಿರಾಶೆಯಾಗಿರಬೇಕು. ವಾಪಸ್ಸು ಹೋಗಿ ಬಚ್ಚಾರಾಜರಿಗೆ ಹಾಗೇ ಹೇಳಿದರು. ಬಚ್ಚಾರಾಜರ ಹೆಂಡತಿ ಸದ್ದೀಬಾಯಿ ಇದನ್ನು ಕೇಳಿಸಿಕೊಂಡಳು. ಆಕೆಯ ಯೋಚನೆಯೇ ಬೇರೆ.”ನಾವು ಬೆಳ್ಳಗೆ ಇದ್ದೇವೆ ಏನು ಉಪಯೋಗ? ವಂಶ ಬೆಳಗಿಸುವ ಒಂದು ಮಗುವೂ ಇಲ್ಲ, ಬರುವ ಹುಡುಗಿಗೆ ರೂಪವಿಲ್ಲದಿದ್ದರೆ ಪರವಾಗಿಲ್ಲ, ಒಳ್ಳೆಯ ಗುಣವಿದ್ದರೆ ಸಾಕು’ ಎಂದಳು.

ಜಮನಾಲಾಲರ ತಂದೆ ಕನೀರಾಂ. ಇವರ ಸಹ ಜಾನಕಿಯನ್ನು ನೋಡಿಕೊಂಡು ಹೋದರು. ಅತಿ ಸಾಮಾನ್ಯ ರೂಪಿನ ಹುಡುಗಿಯನ್ನು ಹೇಗೆ ಎಲ್ಲರೂ ಒಪ್ಪಿದರು ಎಂದು ಅವರಿಗೆ ಆಶ್ಚರ್ಯ.

ಜಾನಕಿ ಮದುವೆಯಾಗಿ ಅತ್ತೆ ಮನೆಗೆ ಹೋದಾಗ ಸೊಸೆ ಎಲ್ಲಿ  ಎಂದು ಕೇಳಿಕೊಂಡು ಅನೇಕರು ಬರುತ್ತಿದ್ದರು. ಜಮನಾಲಾಲರ ಕಾರ್ಯದರ್ಶಿ ಮಹಾದೇವಲಾಲರು, ’ಒಳಗೆ ಹೋಗಿ ಯಾವುದು ಅತ್ಯಂತ ಸುಂದರವೋ ಅದೇ ಸೊಸೆಯೆಂದು ತಿಳಿಯಿರಿ’ ಎಂದು ತಮಾಷೆಯಾಗಿ ಹೇಳುತ್ತಿದ್ದರು.

ಜಾನಕಿಗೆ ಅಪಾರ ದೈವಭಕ್ತಿ. ಆಕೆ ಹೇಳುತ್ತಿದ್ದರು, ’ಇದೂ ಒಂದು ರೀತಿಯ ಭಗವಂತನ ಕೃಪೆ. ಸಂಪನ್ನ ಕುಟುಂಬ. ಜಮನಾಲಾಲರಂಥ ಸುಂದರ ಪತಿ. ಎಲ್ಲ ಅನುಕೂಲಗಳು. ಜೊತೆಗೆ ಸುಂದರ ರೂಪವೂ ಇದ್ದಿದ್ದರೆ ಬಹುಶಃ ಅಹಂಕಾರದಲ್ಲಿ ಮುಳುಗಿರುತ್ತಿದ್ದೆ. ಅದಕ್ಕೆ ದೇವರು ಹೀಗೆ ಮಾಡಿರಬೇಕು’.

ಕಾಗದ ಮಾತನಾಡುತ್ತದೆಯೇ?

ಜಾನಕಿಗೆ ಆರೇಳು ವರ್ಷಗಳಾಗಿರಬಹುದು. ತಂದೆಯ ಮನೆಯಲ್ಲಿದ್ದಳು. ಆಗ ಕನೀರಾಂ ಅವರ ಕಾಗದ ಬಂತು. ತಾಯಿ ’ಕಾಗದ ಏನು ಹೇಳುತ್ತೆ? ಎಂದು ಕೇಳಿದರು ’ ತಂದೆ ಹೀಗೆ ಹಾಗೆ ಎಂದು ಏನೇನೋ ವಿಚಾರಗಳನ್ನು ಹೇಳಿದರು. ಜಾನಕಿಗೆ ಆಶ್ಚರ್ಯ. ಆ ಕಾಗದಕ್ಕೆ ಮುಖವಿಲ್ಲ. ಬಾಯಿ ಇಲ್ಲ ಇಷ್ಟನ್ನೆಲ್ಲ ಹೇಗೆ ಹೇಳುತ್ತದೆ? ಈ ಮಾಯಾವಿದ್ಯೆಯನ್ನು ತಾನೂ ಕಲಿಯಬೇಕು, ಕಾಗದಗಳಿಂದ ವಿಚಾರಗಳನ್ನು ಹೊರಡಿಸಬೇಕು ಎಂದು ಆಕೆಗೆ ಅನ್ನಿಸಿತು. ಉಪಾಧ್ಯಾಯರ ಬಳಿ ಹೋಗಿ, ’ಕಾಗದ ಹೇಗೆ ಹೇಳುತ್ತೆ?’ ಎಂದು ಕೇಳಿದಳು. ಅವರು ಇವಳ ಕಡೆ ನೋಡಿ ನಸು ನಕ್ಕು’ ಅಕ್ಷರಗಳನ್ನು ಬರೆದುಕೊಡುತ್ತೇನೆ. ತಿದ್ದು. ಅಕ್ಷರಗಳನ್ನು ಕಲಿತುಕೊ. ಆಮೇಲೆ ನೀನೂ ಕಾಗದ ಓದಬಹುದು’ ಎಂದರು. ಆದರೆ ಈ ಪುಟ್ಟ ಹುಡುಗಿಗೆ ಅಕ್ಷರ ಕಲಿತರೆ ಕಾಗದ ಹೇಗೆ ಹೇಳುತ್ತದೆ ಎಂದು ಗೊತ್ತಾಗಲಿಲ್ಲ. ದೇವರೇ ಹೇಳಬಹುದು ಎಂದು ಅವಳ ಬಾಲ ಬುದ್ಧಿಗೆ ತೋರಿತು.

ಮನೆಗೆ ಬಂದು ಹುಡುಗಿ ತಂದೆಗೆ ಎಲ್ಲ ವಿಚಾರಗಳನ್ನೂ ತಿಳಿಸಿದಳು. ಅವರು ಮಗಳಿಗೆ ಓದು ಬರಹ ಕಲಿಯಲು ಏರ್ಪಾಟು ಮಾಡಿದರು.

ತಾಯಿ ದೈವಭಕ್ತರು. ಪ್ರತಿದಿನ ದೇವಸಸ್ಥಾನಕ್ಕೆ ಹೋಗುತ್ತಿದ್ದರು. ಜಾನಕಿಯೂ ಜೊತೆಗೆ ಹೋಗುತ್ತಿದ್ದಳು. ಅಲ್ಲಿ ಪಂಡಿತರ ಹೇಳುತ್ತಿದ್ದ ವಿಷ್ಣು ಸಹಸ್ರನಾಮವನ್ನು ಶ್ರದ್ಧೆಯಿಂದ ಕೇಳುತ್ತಿದ್ದಳು. ಹೀಗೆ ಜಾನಕಿಗೆ ದೈವಭಕ್ತಿ ಮತ್ತು ಶ್ರದ್ದೆ ರಕ್ತಗತವಾಯಿತು.

ಜಾನಕಿಗೆ ಸ್ವಲ್ಪ ಓದು ಬರಹ ಬಂದ ತಕ್ಷಣ ಗುರುವಿನ ಪಟ್ಟವೂ ಸಿಕ್ಕಿತು. ಇವಳು ಓದು ಕಲಿಯುವುದನ್ನೂ ನೋಡಿ ಊರಿನ ಇತರ ಹುಡುಗಿಯರಿಗೂ ಓದು ಕಲಿಯುವ ಹಂಬಲವಾಯಿತು. ಓದನ್ನು ಕಲಿಸುವಂತೆ ಜಾನಕಿಗೆ ದುಂಬಾಲು ಬಿದ್ದರು. ಆಕೆ ತಾನು ಕಲಿತಿದನ್ನು ಅವರಿಗೂ ಕಲಿಸತೊಡಗಿದಳು.

ಜಾನಕಿಗೆ ಆಗ ಏಳೆಂಟು ವರ್ಷಗಳಾಗಿರಬಹುದು, ಆಗ ಅವಳ ಮದುವೆ ನಡೆದುಹೋಯಿತು.

ಅತ್ತೆ ಮನೆಗೆ ಬಂದ ಜಾನಕಿಗೆ ಎಲ್ಲವೂ ಹೊಸದು. ತವರುಮನೆಯ ಪದ್ಧತಿಗಳಿಗೂ ಇಲ್ಲಿನದಕ್ಕೂ ತುಂಬ ವ್ಯತ್ಯಾಸ. ತವರಿನಲ್ಲಿ ಮಡಿ ಮೈಲಿಗೆ ಆಚಾರ ಬಹಳ. ಅತ್ತೆ ಮನೆಯಲ್ಲಿ ಕಡಿಮೆ. ತಂದೆ ಮನೆಯಲ್ಲಿ ಸ್ವೇಚ್ಛೆಯಾಗಿ ನಿರ್ಭಯವಾಗಿ ಎಲ್ಲಂದರಲ್ಲಿ ತಿರುಗುತ್ತಿದ್ದಳು. ಇಲ್ಲಿ ಮುಖ ಪರದೆ ಹಾಕಿಕೊಂಡು ಮನೆಯಲ್ಲೇ ಕುಳಿತಿರಬೇಕು ಜಾನಕಿಗೆ ಕಾಲ ಕಳೆಯುವುದೇ ಕಷ್ಟವಾಯಿತು. ’ಏಕೆ ಮದುವೆ ಮಾಡಿಸಿದೆ ದೇವರೆ, ಇಲ್ಲಿಂದ ಹೊರಡುವಂತೆ ಮಾಡು’ ಎಂದು ಮನಸ್ಸಿನಲ್ಲೇ ಮೊರೆಯಿಟ್ಟಳು.

ಅತ್ತೆ ಮನೆಯಲ್ಲಿ ಕೆಲವು ದಿನಗಳನ್ನು ಕಳೆದ ಮೇಲೆ ಜಾನಕಿ ಮತ್ತೆ ತವರುಮನೆಗೆ ಬಂದಳು. ಮದುವೆಯಾದ ಹುಡುಗಿ ಎಂದು ಉಪಚಾರ ಹೆಚ್ಚಾಯಿತು. ಮನೆ ಗೆಲಸಗಳನ್ನು ಒಂದೊಂದಾಗಿ ಕಲಿಯತೊಡಗಿದಳು. ಎಷ್ಟಾದರೂ ತವರು ಮನೆಯಲ್ಲವೆ? ಪುಟ್ಟ ಹಕ್ಕಿಯನ್ನು ಪಂಜರದಿಂದ ಬಿಡುಗಡೆ ಮಾಡಿದಂತಾಗಿತ್ತು. ನಕ್ಕು ನಲಿದಳು. ಮತ್ತೆ ಅತ್ತೆ ಮನೆಗೆ ಹೋಗಬೇಕಲ್ಲ ಎಂಬುದೇ ಅವಳ ಹೆದರಿಕೆ.

ಪತಿಭಕ್ತಿ ಪರಾಯಣೆ

ಜಾನಕಿ ಗಂಡನ ಮನೆಗೆ ಹಿಂದಿರುಗಿದ ಮೇಲೆ ವರ್ಧಾದಲ್ಲಿ ಪ್ಲೇಗು ಹರಡಿತು. ಅತ್ತೆ ಸದ್ಧೀಬಾಯಿ ಸತ್ತಳು. ಹತ್ತು ವರ್ಷ ವಯಸ್ಸಿನ ಜಾನಕಿ ಒಬ್ಬಳೇ ಆದಳು. ಆಗ ಸುತ್ತಮುತ್ತಲಿನ ಹೆಂಗಸರು ಪ್ರತಿದಿನ ಬಂದು ಅತ್ತು ಶೋಕ ಪ್ರದರ್ಶನ ಮಾಡುತ್ತಿದ್ದರು. ಈ ದಾನ ಮಾಡು ಆ ದಾನ ಮಾಡು ಎಂದು ಪ್ರೇರೇಪಿಸುತ್ತಿದ್ದರು. ಇದು ಅತಿಯಾಯಿತು. ಬಚ್ಚಾರಾಜರು ಇದನ್ನು ಆಕ್ಷೇಪಿಸಿದರು. ಅಂದಿನಿಂದ ಜಾನಕಿ ಒಂಟಿಯಾದಳು. ದಿನವೆಲ್ಲ ಕಾಲ ಕಳೆಯುವುದು ಹೇಗೆ? ಆಗ ವಿಷ್ಣು ಸಹಸ್ರನಾಮ, ಪೂಜೆ ಪುನಸ್ಕಾರಗಳನ್ನು ಹೆಚ್ಚಿಸಿದಳು. ಮನೆಗೆಲಸಗಳ ಮೇಲೆ ಗಮನ ಹರಿಸಿದಳು.

ತವರು ಮನೆಯಲ್ಲಿ ಸ್ವಲ್ಪ ಮಟ್ಟಿಗೆ ಓದನ್ನು ಕಲಿತಿದ್ದಳಷ್ಟೆ? ಅದು ಇಲ್ಲಿ ಉಪಯೋಗಕ್ಕೆ ಬಂತು. ಜತೆಗೆ ಪ್ರತಿದಿನ ಪುರಾಣ, ಪುಣ್ಯಕತೆಗಳನ್ನು ಓದುತ್ತಿದ್ದಳು. ಯಾವ ಪುಸ್ತಕವನ್ನು ಓದಿದರೂ ಅದರಂತೆ ನಡೆಯುವ ಪ್ರಯತ್ನ ಜಾನಕಿಯದು. ಒಮ್ಮೆ ಯಾರೋ ಆಕೆಗೆ ಪತಿಭಕ್ತಿ ಪ್ರಕಾಶ ಎಂಬ ಪುಸ್ತಕ ಕೊಟ್ಟರು. ಅದರಲ್ಲಿ ಗಂಡನ ಊಟವಾದ ಮೇಲೆ ಹೆಂಡತಿ ಊಟ ಮಾಡಬೇಕು ಎಂದಿತ್ತು. ಜಾನಕಿ ಅದನ್ನು ಜಾರಿಗೆ ತಂದಳು. ಬೆಳಗಿನ ತಿಂಡಿಯನ್ನು ಪೂಜೆಯಾದ ಮೇಲೆ ತೆಗೆದುಕೊಳ್ಳುತ್ತಿದ್ದಳು.

ಜಾನಕಿ ಪುಸ್ತಕವನ್ನು ಓದಿ ಗಂಡನ ಎಂಜಲು ತಟ್ಟೆಯುಲ್ಲಿ ಊಟ ಮಾಡುವುದು, ಪತಿಯ ಪದೋದಕ ವನ್ನು ಕುಡಿಯುವುದು ಮುಂತಾದ ಪದ್ಧತಿಗಳನ್ನು ಆಚರಣೆಗೆ ತಂದಳು. ಇವು ಜಮನಾಲಾಲರಿಗೆ ಒಂದಿಷ್ಟೂ ಇಷ್ಟವಿರಲಿಲ್ಲ. ಜಾನಕಿ ಅವರ ಆಗ್ರಹಕ್ಕೆ ಮಣಿಯಲೇಬೇಕಾಯಿತು. ಇಂತಹ ಪದ್ದತಿಗಳನ್ನು ಬಿಡಬೇಕಾಯಿತು.

ಜಮನಾಲಾಲರು ಕಟ್ಟಾ ದೇಶಪ್ರೇಮಿ. ಅವರ ನೆರಳಿನಂತೆ ಇರಬಯಸುವ ಹೆಂಡತಿ ದೇಶಪ್ರೇಮಿಯಾಗದೆ ಇರುವುದು ಹೇಗೆ ಸಾಧ್ಯ? ಆದರೆ ಸುತ್ತಮುತ್ತಲೂ ಏನಾಗುತ್ತಿದೆ ಎಂಬುದು ಆಕೆಗೆ ತಿಳಿದಿರಲಿಲ್ಲ. ಜೊತೆಗೆ ಸಂಕೋಚ. ಜಮನಾಲಾಲರ ಮನೆಯಲ್ಲಿ ಯಾವಾಗಲೂ ದೇಶಭಕ್ತರ ಗುಂಪಿರುತ್ತಿತ್ತು. ಅವರ ಮಾತುಕತೆ ಕೇಳಿದಂತೆ ಇನ್ನೂ ಹೆಚ್ಚಿಗೆ ಓದಬೇಕಾಗಿತ್ತು ಎಂದು ಜಾನಕಿಗೆ ಅನ್ನಿಸತೊಡಗಿತು. ವರ್ಧಾದಲ್ಲಿ ಜನ ಸಾಮಾನ್ಯರ ಭಾಷೆ ಮರಾಠಿ. ಆದ್ದರಿಂದ ಮರಾಠಿ ಕಲಿಯಲು ಪ್ರಾರಂಭಿಸಿದಳು. ಇದೇ ರೀತಿ ಫಾರಸಿ ಭಾಷೆ ಕಲಿಯುವ ಪ್ರಯತ್ನವೂ ನಡೆಯಿತು. ಫಾರಸಿ ಕಲಿಸಲು ಬರುತ್ತಿದ್ದ ಹೆಂಗಸು ವರ್ತಮಾನ ಪತ್ರಿಕೆಗಳನ್ನು ಓದಿ ಹೊಸ ಹೊಸ ವಿಚಾರಗಳನ್ನು ತಿಳಿಸುತ್ತಿದ್ದಳು. ಇದರಿಂದ ಜಾನಕಿಗೆ ದೇಶದ ಸ್ಥಿತಿಗತಿಗಳ ಸ್ಪಷ್ಟ ಚಿತ್ರ ಮೂಡಿಬಂತು. ದೇಶಕ್ಕೆ ಸ್ವಾತಂತ್ರ‍್ಯವಿಲ್ಲ, ಬ್ರಿಟಿಷರು ಆಳುತ್ತಿದ್ದಾರೆ. ಭಾರತದ ಸ್ವಾತಂತ್ರ‍್ಯವನ್ನು ಗಳಿಸುವುದು ಭಾರತೀಯರ ಕೈಯಲ್ಲಿ ಇದೆ ಎಂದು ಅರ್ಥವಾಯಿತು. ಜ್ಞಾನಾರ್ಜನೆ ಹೆಚ್ಚಿದಂತೆ ಆಕೆಯ ಸಂಕೋಚವೂ ಕಡಿಮೆಯಾಯಿತು.

ಸಂಕೋಚ ಕಡಿಮೆಯಾದ ಮೇಲೆ ಜಾನಕಿಯೂ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಲು ಪ್ರಾರಂಭಿಸಿದಳು. ಇದರ ನಿಮಿತ್ತ ಅನೇಕ ಕಡೆ ಭಾಷಣಗಳನ್ನು ಮಾಡಬೇಕಾಗಿತ್ತು. ಈಕೆಯ ಭಾಷಣ ಪ್ರಭಾವಶಾಲಿಯಾಗಿರುತ್ತಿತ್ತು. ತಾನು ಗಂಡನ ನೆರಳು, ಅವರ ಮಾರ್ಗ ದರ್ಶನದಲ್ಲಿ ತನ್ನ ಬದುಕು ಎಂದು ಆಕೆಯ ನಂಬಿಕೆ.

ಬಂಗಾರದೊಡವೆಯೇಕೆ?

ಜಮನಾಲಾಲರ ಮೇಲೆ ಗಾಂಧೀಜಿಯವರ ಪ್ರಭಾವ ಹೆಚ್ಚು ಒಮ್ಮೆ ಅವರು, ’ಚಿನ್ನ ಕಲಿಯ ರೂಪ. ಅದು ಇನ್ನೊಬ್ಬರಲ್ಲಿ ದ್ವೇಷ ಹುಟ್ಟಿಸುತ್ತೆ. ಹೆಂಗಸರು ಚಿನ್ನ ಧರಿಸುವುದು ತರವಲ್ಲ’ ಎಂದು ಹೇಳಿದರು. ಜಮನಾಲಾಲರು ಇದನ್ನು ಹೆಂಡತಿಗೆ ತಿಳಿಸಿದರು. ಗಂಡನ ಮಾತು ಜಾನಕಿಗೆ ವೇದವಾಕ್ಯ, ಒಂದೊಂದಾಗಿ ಎಲ್ಲ ಒಡವೆಗಳನ್ನು ಕಳಚಿ ಹಾಕಿದಳು. ಕೊನೆಗೆ ಗೆಜ್ಜೆಯ ಸರದಿ ಬಂತು. ಮಾರವಾಡಿಗಳಲ್ಲಿ ಗೆಜ್ಜೆಗೆ ತುಂಬ ಮಹತ್ವ. ಕಡುಬಡವರೂ ಗೆಜ್ಜೆಹಾಕಿಕೊಳ್ಳುವುದು ರೂಢಿ. ಇದರ ಮೇಲೆ ಮಾತ್ರ ಮೋಹ ಏಕೆ ಎಂದು ಜಾನಕಿ ಅದನ್ನು ತೆಗೆದಳು. ಮಾರವಾಡಿ ಹೆಂಗಸರಿಗೆ ಇದು ತಿಳಿಯಿತು. ಅವರಿಗೆ ಆಶ್ಚರ್ಯವೋ ಆಶ್ಚರ್ಯ. ಗೆಜ್ಜೆ ತೆಗೆದ ಹೆಂಗಸು ಹೇಗಿರುತ್ತಾಳೆ ಎಂದು ಕುತೂಹಲ. ಇದನ್ನು ನೋಡಿ ಕೊಂಡು ಹೋಗಲು ಜಾನಕಿಯ ಬಳಿಗೆ ಅನೇಕ ಮಹಿಳೆಯರು ಬಂದರು.

ಮನೆಯ ಹೆಂಗಸರೇ ಒಡವೆ ತೆಗೆದ ಮೇಲೆ ದೇವರಿಗೇಕೆ ಚಿನ್ನದ ಆಭರಣ? ಆದರೆ ದೇವರ ಮೇಲಿನ ಒಡವೆ ತೆಗೆಯಲು ಯಾರೂ ಬೆಂಬಲಿಸಲಿಲ್ಲ. ಆಗ ಒಂದು ಘಟನೆ ನಡೆಯಿತು. ಒಬ್ಬ ತಾನು ದರ್ಜಿ ಎಂದು ಹೇಳಿಕೊಂಡು ಬಂದ. ’ಖಾದಿ ಮನೆಯಲ್ಲಿದೆ. ದೇವರಿಗೆ ಅದರಲ್ಲೆ ಬಟ್ಟೆಯಾಗಲಿ’ ಎಂದಳು ಜಾನಕಿ. ಬೆಳಿಗ್ಗೆ ಆಗುವ ವೇಳೆಗೆ ಒಂದು ಅನಾಹುತವಾಗಿತ್ತು. ದೇವರ ಆಭರಣಗಳ ಕಳುವಾಗಿತ್ತು. ಹಿಂದಿನ ದಿನ ಬಂದಿದ ದರ್ಜಿ ಮಾಯವಾಗಿದ್ದ. ’ಇದೂ ಒಂದು ರೀತಿ ಒಳ್ಳೆಯದೇ ಆಯಿತು’ ಎಂದುಕೊಳ್ಳಬೇಕಾಯಿತು.

ಜಾನಕಿ ಗೆಜ್ಜೆಯನ್ನು ತೆಗೆದಳು

ಪರದೆಯನ್ನು ಇಡಬೇಡಿ,

ಧರ್ಮವನ್ನು ಬಿಡಬೇಡಿ

ಒಮ್ಮೆ ವರ್ಧಾದಲ್ಲಿ ಒಂದು ಸಭೆ ನಡೆಯಿತು. ಅಲ್ಲಿ ಜಮನಾಲಾಲರು ಭಾಷಣ ಮಾಡಿದರು. ಮುಖ ಪರದೆ ಹಾಕುವುದು ತಪ್ಪು ಎಂದು ಹೇಳಿದರು. ಹೇಳುವುದನ್ನು ಮಾಡಿ ತೋರಿಸಬೇಕೆಂಬುದು ಅವರ ಮತ. ಹೀಗಾಗಿ ಜಮನಾಲಾಲರ ಮಾತಿನಂತೆ ನಡೆಯುವುದು ಮನೆಯ ಹೆಂಗಸರ ಪಾಲಿಗೆ ಬಂತು.

ಮುಖವನ್ನು ಪರದೆಯಿಂದ ಮುಚ್ಚಿಕೊಳ್ಳುವುದು ರಾಜಸ್ಥಾನದ ಒಂದು ಹಳೆಯ ಪದ್ಧತಿ. ಮರ್ಯಾದಸ್ಥ ಹೆಂಗಸರು ಅನುಸರಿಸಬೇಕಾದ ನಡೆ ಎಂದು ಎಲ್ಲರೂ ಒಪ್ಪಿಕೊಂಡಿದ್ದರು. ಇದನ್ನು ದಿಢೀರನೆ ಬಿಟ್ಟುಬಿಡುವುದು ಹೇಗೆ? ಆದರೆ ಜಮನಾಲಾಲರು ಹಿಡಿದ ಪಟ್ಟನ್ನು ಬಿಡುವವರಲ್ಲ. ಪರದೆ ತೆಗೆದು ತೀರ್ಥರೂಪು ಕನೀರಾಮರಿಗೆ ನಮಸ್ಕರಿಸುವಂತೆ ಹೆಂಡತಿಗೆ ಹೇಳಿದರು. ಪರದೆ ತೆಗೆದು ಮಾವನವರ ಬಳಿಗೆ ಹೋಗುವುದು ಹೇಗೆಂಬ ಅಳುಕು ಜಾನಕಿಗೆ. ಧೈರ್ಯ ತಂದುಕೊಂಡು ಪರದೆ ಇಲ್ಲದೆ ಮಾವನರಿಗೆ ನಮಸ್ಕಾರ ಮಾಡಿದಳು. ಹೀಗೆ ಹಿಂದಿನ ಒಂದು ಕೆಟ್ಟ ಪದ್ಧತಿಗೆ ಕೊನೆ ಹೇಳಿದಳು.

ಆನಂತರ ಈಕೆಯ ಪ್ರಭಾವದಿಂದ ಅನೇಕ ಮಹಿಳೆಯರು ಅನಾರೋಗ್ಯಕರ ಪರದೆ ಪದ್ಧತಿಯನ್ನು ಕೈ ಬಿಟ್ಟರು. ಈ ಬಗ್ಗೆ ಗಾಂಧೀಜಿ ಜಾನಕಿಗೆ ಒಂದು ಕಾಗದ ಬರೆದರು. ’ರಾಮನ ಜೊತೆ ಸೀತೆ ಕಾಡಿಗೆ ಹೋದಾಗ ಪರದೆ ಹಾಕಿಕೊಂಡಿದ್ದಳೆ? ಸೀತೆಗಿಂತ ಹೆಚ್ಚಿನ ಪತಿವ್ರತೆ ಯಾರಿದ್ದಾರೆ?’ ಎಂದು ಕೇಳಿದ್ದರು. ಜಾನಕಿಯ ಮೇಲೆ ಇದು ಪ್ರಭಾವ ಬೀರಿತು. ’ಪರದೆಯನ್ನು ಇಡಬೇಡಿ, ಧರ್ಮವನ್ನು ಬಿಡಬೇಡ” ಎಂಬ ಪ್ರಚಾರವನ್ನು ಆರಂಭಿಸಿದಳು. ಅರಿವು ಹೆಚ್ಚಾದಂತೆ ಆಕೆಗೆ ಮಹಿಳೆಯರ ಸ್ಥಿತಿಗತಿಗಳ ಪರಿಚಯವಾಗತೊಡಗಿತು. ಅವರ ಏಳಿಗೆಗಾಗಿ, ಅನೇಕ ಕೆಟ್ಟ ಪದ್ಧತಿಗಳ ನಿರ್ಮೂಲಕ್ಕಾಗಿ ಜಾನಕಿ ಪಣ ತೊಟ್ಟಳು.

ಮಕ್ಕಳು ಮನೆಗೆ ಅಂದ

ಬಚ್ಚಾರಾಜರ ಕುಟುಂಬದಲ್ಲಿ ಮಕ್ಕಳು ಕಡಿಮೆ. ಹೀಗಾಗಿ ಮಕ್ಕಳೆಂದರೆ ಆ ಕುಟುಂಬದವರಿಗೆಲ್ಲ ಪ್ರಾಣ. ಹೀಗಾಗಿ ಜೊದಲ ಮಗು ಕಮಲಾ ಹುಟ್ಟಿದಾಗ ಎಲ್ಲರಿಗೂ ಸಂತೋಷ. ಜಮನಾಲಾಲರು ನೌಕರರಿಗೆ ಬಹುಮಾನಗಳನ್ನು ಕೊಟ್ಟರು. ಆಗ ಬಾಲ್ಯವಿವಾಹ ಪ್ರಚಾರದಲ್ಲಿದ್ದ ಕಾಲ. ಕಮಲಾಗೆ ಹನ್ನೊಂದು ವರ್ಷ ತುಂಬಿತು. ಎಲ್ಲರೂ ಮದುವೆ ಯಾವಾಗ ಎಂದು ಕೇಳತೊಡಗಿದರು. ಜಮನಾಲಾಲರು ಬಾಲ್ಯವಿವಾಹಕ್ಕೆ ವಿರೋಧಿಗಳು. ಆದ್ದರಿಂದ ಕಮಲಳಿಗೆ ಹದಿನಾಲ್ಕು ವರ್ಷಗಳಾದ ಮೇಲೆ ಮದುವೆ ಗೊತ್ತಾಯಿತು. ವರ ರಾಮೇಶ್ವರ ಪ್ರಸಾದ್ ನೆವಾಟಿಯ.

ಈ ಮದುವೆ ಹಳೆಯ ಪದ್ಧತಿಯಲ್ಲಿ ನಡೆಯಬಾರದೆಂದು ಜಮನಾಲಾಲರ ಬಯಕೆ. ಅವರ ಇಷ್ಟದಂತೆ ಮದುವೆ ಗಾಂಧೀಜಿಯವರ ಸಬರಮತಿ ಆಶ್ರಮದಲ್ಲಿ ಸುಧಾರಿತ ರೀತಿಯಲ್ಲಿ ನಡೆಯಿತು. ಆಗಿನ ಪದ್ಧತಿಗೆ ವಿರೋಧವಾಗಿ ಮಹಿಳೆಯರು ಎಲ್ಲ ಸಮಾರಂಭಗಳಲ್ಲೂ ಭಾಗವಹಿಸಿದರು.

ಬಜಾಜ್ ವಂಶದ ಮೂರು ತಲೆಮಾರುಗಳಲ್ಲಿ ಹುಟ್ಟಿದ ಮೊದಲನೆಯ ಗಂಡು ಸಂತಾನ ಕಮಲನಯನ. ತಂದೆಯಂತೆಯೇ ಉಜ್ವಲ ರಾಷ್ಟ್ರಪ್ರೇಮಿಯಾಗಿ ಬೆಳೆದ. ತಂದೆ ಕಾಲವಾದ ಮೇಲೆ ಕುಟುಂಬದ ವ್ಯವಹಾರಗಳನ್ನು ದಕ್ಷ ರೀತಿಯಿಂದ  ನಿರ್ವಹಿಸಿದ್ದಿ. ಲಾಭ ಮುಖ್ಯವಲ್ಲ. ನೀತಿ ಮುಖ್ಯ ಎಂಬುದು ಈತನ ವ್ಯವಹಾರಗಳಿಗೆ ಆಧಾರ. ಈತನ ಹೆಂಡತಿ ಸಾವಿತ್ರೀದೇವಿ.

ಎರಡನೆಯ ಹುಡುಗಿ ಮದಾಲಸ. ಚಿಕ್ಕಂದಿನಿಂದಲೇ ಆರೋಗ್ಯ ಬಹಳ ಸೂಕ್ಷ್ಮ. ಚಿಕ್ಕಂದಿನಿಂದಲೇ ವಿನೋಬಾರ ಆಶ್ರಮದಲ್ಲಿ ಹೆಚ್ಚು ಕಾಲವನ್ನು ಕಳೆಯುತ್ತಿದ್ದಳು. ಹೀಗಾಗಿ ಮನೆಗೆಲಸಗಳು ಏನೂ ಬರುತ್ತಿರಲಿಲ್ಲ. ಮುಂದೆ ಈ ಹುಡುಗಿ ಶ್ರೀಮನ್ ನಾರಾಯಣ ಅಗರವಾಲರನ್ನು ಮದುವೆಯಾದಳು.

ಮೂರನೆಯವಳು ಉಮಾದೇವಿ. ಮುದ್ದಿಗೆ ಓರ್ಮ ಎಂದು ಕರೆಯುತ್ತಿದ್ದರು. ಪೂಜೆ ಪುನಸ್ಕಾರಗಳಿಗೆ ಅಡಚಣೆಯಾದರೂ ಮಗಳನ್ನು ಕರೆಯುವ ನಿಮಿತ್ತವಾದರೂ ಓಂಕಾರ ಜಪವಾಗಲಿ ಎಂದು ಜಾನಕಿಯ ಲೆಕ್ಕಾಚಾರ. ಒಂದು ವರ್ಷದ ತನಕ ಓಮ್ ಬಾಪೂಜಿಯ ಬಳಿಯೇ ಇದ್ದಳು. ಅವರು ಕುಳಿತಿರುವಾಗ ಮತ್ತು ಮಾತನಾಡುವಾಗ ಓಮ್ ಅವರ ಕಾಲುಗಳ ಬಳಿ ಬಂದು ಮಲಗಿಬಿಡುತ್ತಿದ್ದಳು. ಆದ್ದರಿಂದ ಬಾಪೂಜಿ ಅವಳನ್ನು ’ನಿದ್ರಿಸುವ ಸುಂದರ” ಎಂದು ಕರೆಯುತ್ತಿದ್ದರು. ಮುಂದೆ ಇವಳನ್ನು ರಾಜ ನಾರಾಯಣ ಅಗರವಾಲರಿಗೆ ಕೊಟ್ಟು ಮದುವೆಯಾಯಿತು.

ರಾಮಕೃಷ್ಣ ಕಿರಿಯ ಮಗ ಆರೋಗ್ಯವಂತ. ಶಾಂತ ಸ್ವಭಾವ. ಅಳು ಕಡಿಮೆ. ಒಮ್ಮೆ ಬೆರಳು ಬಾಗಿಲ ಸಂಧಿಯಲ್ಲಿ ಸಿಕ್ಕಿ ಹಾಕಿಕೊಂಡು ತುಂಡಾಯಿತು. ಅದನ್ನು ತೆಗೆದುಕೊಂಡು ’ದಾಧೀಜಿ ದಾದೀಜಿ ಬೆರಳು ತುಂಡಾಗಿದೆ’ ಎಂದು ಕೂಗುತ್ತಾ ಓಡಿ ಬಂದ. ದೊಡ್ಡವರೆಲ್ಲ ಅತ್ತರು. ಅವರನ್ನು ಕಂಡು ಹುಡುಗನಿಗೂ ಅಳು ಬಂತು.

ರಾಮಕೃಷ್ಣನಿಗೂ ದೊಡ್ಡವರೆಂದರೆ ಗೌರವ. ಜೊತೆಯವರೊಂದಿಗೆ ನಗುನಗುತ್ತಾ ಇರುವುದು ಅವರ ಸ್ವಭಾವ. ವಿಮಲಾದೇವಿ ಎಂಬ ಹುಡುಗಿಯೊಂದಿಗೆ ಮದುವೆಯಾಯಿತು.

ಗಂಡಾಗುವುದು ತಪ್ಪಿ ಹೆಣ್ಣಾದಳು

ನಾಗಪುರದ ಧ್ವಜ ಸತ್ಯಾಗ್ರಹ ಮುಗಿದಿತ್ತು. ಆಗ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕೆಂದು ಜಮನಾಲಾಲ ದಂಪತಿಗಳು ಯೋಚಿಸಿದರು. ಗಾಂಧೀಜಿಯವರ ಸಬರಮತಿ ಆಶ್ರಮದಲ್ಲಿ ವಾಸ ಮಾಡುವುದರಿಂದ ಇದು ಸಾಧ್ಯವಾಗುತ್ತದೆಂದು ನಿರ್ಧಾರವಾಯಿತು. ಆದರೆ ಇದರಿಂದ ಮುಖ್ಯವಾಗಿ ಜಾನಕಿಯವರಿಗೆ ತೊಂದರೆಯಾಗುತ್ತಿತ್ತು.

ಜಾನಕಿ ತವರು ಮನೆಯಲ್ಲಿದ್ದಾಗ ಚಿಕ್ಕವಳಾಗಿದ್ದಳು. ಕೆಲಸ ಮಾಡುತ್ತಿರಲಿಲ್ಲ. ಗಂಡನ ಮನೆಯಲ್ಲಿ ಕೆಲಸಗಾರರೆ ಎಲ್ಲವನ್ನು ನೋಡಿಕೊಂಡು ಹೋಗುತ್ತಿದ್ದರು. ಹೀಗಾಗಿ ಆಕೆ ಮನೆಗೆಲಸದಲ್ಲಿ ಅಷ್ಟಕಷ್ಟೆ.

ಆಶ್ರಮದಲ್ಲಿ ಅವರವರ ಕೆಲಸಗಳನ್ನು ಅವರವರೇ ಮಾಡಿಕೊಳ್ಳಬೇಕಾಗಿತ್ತು. ಇದು ಅಲ್ಲಿಯ ನಿಯಮ. ಇದರಿಂದ ಜಾನಕಿಯ ಮನಸ್ಸಿಗೆ ಭಯವಾಗಿತ್ತು. ಜಮನಾಲಾಲರಿಗೂ ಹೆಂಡತಿಯ ದೌರ್ಬಲ್ಯ ಗೊತ್ತು. ಗಾಂಧೀಜಿಯೊಡನೆ ಮಾತನಾಡಿದರು. ಗಾಂಧೀಜಿ ಸೂಕ್ತ ಸಲಹೆ ನೀಡಿದರು. ಇದರಂತೆ ಆಶ್ರಮದ ಬಳಿಯ ಮನೆಯಲ್ಲಿ ಜಾನಕಿ ವಾಸಿಸಬೇಕು. ಅಲ್ಲಿ ಆಶ್ರಮದ ಕಟ್ಟು ಪಾಡುಗಳಿಂದ ಪಾರಾಗಬಹುದು. ಆದರೆ ಆಶ್ರಮದ ನಿಕಟ ಸಂಪರ್ಕವಿರುತ್ತದೆ. ನಿಧಾನವಾಗಿ ಆಶ್ರಮದ ನಿಯಮಗಳನ್ನು ಪಾಲಿಸಲು ಬೇಕಾದ ಶಕ್ತಿಯನ್ನು ಗಳಿಸಿಕೊಳ್ಳಬಹುದು.

ಜಾನಕಿ ಮಾಡುವ ಕೆಲಸ

ಜಾನಕಿಗೆ ಜೀವನದಲ್ಲಿ ತುಂಬ ಉ‌ತ್ಸಾಹ. ಈಕೆ ಇಲ್ಲದ ಕಾರ್ಯಕ್ರಮಗಳೇ ಇರಲಿಲ್ಲ. ಓದುಬರಹದ ತರಗತಿಗಳು, ಗೀತಾ ಪಾರಾಯಣ, ಸಿತಾರ‍್ ಇತ್ಯಾದಿ ಎಲ್ಲದರಲ್ಲೂ ಜಾನಕಿ ಭಾಗವಹಿಸಿದಳು. ಈಜು ಕಲಿಯುವ ಬಳಗದಲ್ಲೂ ಇದ್ದಳು. ಒಟ್ಟಿನಲ್ಲಿ ಯಾವುದೇ ತರಗತಿ, ಯಾವುದೇ ಚಟುವಟಿಕೆಯಾಗಲಿ ಅಲ್ಲಿ ಜಾನಕಿ ಹಾಜರ‍್, ಈಕೆಯ ವೈಶಿಷ್ಟ್ಯವೆಂದರೆ ಹೊಸದನ್ನು ಕಲಿಯುತ್ತಿದ್ದಂತೆ ಹಳೆಯದನ್ನು ಮರೆಯುವುದು!

ಇಷ್ಟು ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರೂ ಆಕೆಗೆ ಕೆಲಸ ಸಾಲದು ಎನ್ನಿಸುತ್ತಿತ್ತು. ಗಾಂಧೀಜಿಯ ಬಳಿಗೆ ಹೋಗಿ, ’ಯಾವುದಾದರೂ ಕೆಲಸ ಕೊಡಿ’ ಎಂದು ಕೇಳಿದಳು. ’ಕೆಲಸಕ್ಕೇನು ಬೇಕಾದಷ್ಟಿದೆ. ಗೋಶಾಲೆಯನ್ನು ಚೊಕ್ಕಟವಾಗಿಡು’ ಎಂದರು. ಸರಿ ಎಂದು ಜಾನಕಿ ಆ ಕೆಲಸಕ್ಕೆ ಕೈ ಹಚ್ಚಿದಳು. ಎಲ್ಲ ಗುಡಿಸಿದ ಮೇಲೆ ನೋಡಿದರೆ ನೆಲ ಮುಂಚಿನಂತೆ ಗಲೀಜಾಗೇ ಇತ್ತು. ಇದನ್ನು ನೋಡಿ ಅಲ್ಲಿದ್ದ ಹುಡುಗಿಯರೆಲ್ಲ ನಗುತ್ತ ನಿಂತರು.

ಮಾರವಾಡಿ ಸಾಜದಲ್ಲಿ ಮುತ್ತೈದೆಯರು ಅರಗಿನ ಬಳೆಗಳನ್ನು ತೊಡುವುದು ಪದ್ಧತಿ. ಜಾನಕಿ ಗಂಡನ ಮಾತಿಗೆ ಮನ್ನಣೆಕೊಟ್ಟು ಆಭರಣಗಳನ್ನು ತ್ಯಾಗ ಮಾಡಿದಳಷ್ಟೆ? ಅರಗಿನ ಬಳೆಗಳಲ್ಲಿ ಚಿನ್ನದ ರೇಖುಗಳಿರುತ್ತವೆ. ಅದನ್ನು ತೊಡುವುದೇ ಬಿಡುವುದೇ ಎಂಬ ಸಂದಿಗ್ಧ ಬಂತು. ಕೊನೆಗೆ ಅರಗಿನ ಬಳೆಗಳನ್ನು ಬಿಟ್ಟು ಗಾಜಿನ ಬಳೆಗಳನ್ನು ತೊಡಲು ಪ್ರಾರಂಭಿಸಿದಳು. ಆದರೆ ಗಾಜಿನ ಬಳೆಗಳು ಆಗಾಗ್ಗೆ ಒಡೆಯುತ್ತಿದ್ದವು. ಅವನ್ನು ನಾಲ್ಕು ಮೈಲ ದೂರದ ಅಹಮದಾಬಾದಿನಿಂದ ತರಿಸಬೇಕಾಗಿತ್ತು. ಹೀಗೆ ಒಂದೊಂದೂ ಬಾರಿಯೂ ದೂರ ಹೋಗಿ ಬಳೆಗಳನ್ನು ತರುವ ಪೇಚಾಟವನ್ನು ಕಡಿಮೆ ಮಾಡಲು ಬಳೆಯ ಚಿಂತೆಯನ್ನೇ ಕಡಿಮೆ ಮಾಡಿದಳು. ಇದ್ದಾಗ ತೊಡುತ್ತಿದ್ದಳು, ಇಲ್ಲದಿದ್ದಾಗ ಹಾಗೇ ಇರುತ್ತಿದ್ದಳು.

ರೋಗಿಗೇ ಪ್ರೀತಿಯೇ ಮುಖ್ಯ ಮದ್ದು

ರೋಗ ಎಂದರೆ ಜಾನಕಿಗೆ ಬಹಳ ಭಯ. ರೋಗಿಯ ಬಳಿಗೆ ಹೋಗಲು ಸಹ ಹಿಂದೇಟು ಹಾಕುತ್ತಿದ್ದಳು. ಒಂದು ಬಾರಿ ಗಂಗಾಬಿಶನರೆಂಬುವವರು ಜಮನಾಲಾಲರ ಜೊತೆ ದೂರದ ಹಳ್ಳಿಗೆ ಹೋಗಬೇಕಾಯಿತು. ಅವರು ಹೆಂಡತಿಯನ್ನು ಜಾನಕಿಯ ಬಳಿ ಬಿಟ್ಟು ಹೋದರು. ಅವರು ಆ ಕಡೆ ಹೋಗುತ್ತಿದ್ದಂತೆ ಆಕೆಗೆ ವಾಂತಿಭೇದಿ ಪ್ರಾರಂಭವಾಯಿತು. ಜಾನಕಿಗೆ ಹೆದರಿಕೆಯಾಯಿತು. ಹತ್ತಿರ ಯಾರೂ ಇರಲಿಲ್ಲ. ಹತ್ತಿರ ಹೋಗಿ ಸೇವೆ ಮಾಡುವುದಕ್ಕೆ ಭಯ, ಆದರೆ ದೂರ ನಿಂತು ನೋಡುವುದಕ್ಕೆ ಸಂಕೋಚ. ಏನು ಮಾಡುವುದಕ್ಕೂ ತೋಚಲಿಲ್ಲ. ದೇವಸ್ಥಾನಕ್ಕೆ ಹೋಗಿ ದೇವರಿಗೆ ಅಡ್ಡಬಿದ್ದಳು.

ಜಮನಾಲಾಲರ ಸ್ವಭಾವ ಇದಕ್ಕೆ ತದ್ವಿರುದ್ಧ. ”ರೋಗ ಬಂದರೆ ಔಷಧಿ ಕೊಡಿಸಿ, ಸರಿ. ಆದರೆ ರೋಗಿಯ ಹಾಸಿಗೆಯ ಮೇಲೆ ಕುಳಿತುಕೊಳ್ಳುವುದು, ಕೈ ಹಿಡಿದು ಕೊಳ್ಳುವುದು ಎಲ್ಲ ಏಕೆ? ಎಂದು ಆಕೆ ಗಂಡನಿಗೆ ಹೇಳುತ್ತಿದ್ದಳು. ಆಗ ಜಮನಾಲಾಲರು’ ರೋಗಿಗೆ ಔಷಧಿಗಿಂತ ಪ್ರೀತಿಯ ಆರೈಕೆ ಮುಖ್ಯ. ರೋಗಿಯ ಮನಸ್ಸು ಉಲ್ಲಾಸವಾಗಿರುವಂತೆ ನೋಡಿಕೊಳ್ಳಬೇಕು. ನಿನಗೆ ಕಾಯಿಲೆ ಬಂದಾಗ ನಿನ್ನ ಬಳಿಗೆ ಯಾರೂ ಬಾರದಿದ್ದರೆ ಹೇಗಿರುತ್ತದೆ? ಎಂದು ಪ್ರಶ್ನಿಸುತ್ತಿದ್ದರು.

ಇನ್ನೊಂದು ಸಂದರ್ಭ. ಹಿರಿಯ ಮಗಳು ಕಮಲಾಗೆ ಐದಾರು ವರ್ಷವಿರಬಹುದು. ಅವಳಿಗೆ ಜ್ವರ ಬಂತು. ತೊಡೆಯಲ್ಲಿ ನೋವು ಕಾಣಿಸಿಕೊಂಡಿತು. ಪ್ಲೇಗಿರಬಹುದು ಎಂದು ಅನುಮಾನ ಬಂತು. ಜಾನಕಿ ಹೆದರಿಕೊಂಡು ಈಚೆ ಬಂದಳು. ಮನೆಗೆ ಬಂದಾಗ ಜಮನಾಲಾಲರಿಗೆ ವಿಷಯ ತಿಳಿಯಿತು. ’ಒಳಗೆ ಹೋಗಬೇಡಿ’ ಎಂದು ಜಾನಕಿ ಹೇಳಿದಳು. ಆದರೆ ಜಮನಾಲಾಲರು ಈ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಸೀದಾ ಒಳಗೆ ಹೋದರು. ಹಾಸಿಗೆಯ ಮೇಲೆ ಕುಳಿತು ಮಗಳ ಹಣೆಯ ಮೇಲೆ ಕೈಯಾಡಿಸತೊಡಗಿದರು. ಇದನ್ನು ನೋಡಿ ಜಾನಕಿಯ ಹೃದಯ ಹಿಂಡಿದಂತಾಯಿತು. ಆಗ ಆಕೆ ಒಳಗೆ ಹೋದಳು. ಮಗಳ ಶುಶ್ರೂಷೆ ಮಾಡಿದಳು. ರೋಗಿಯ ಬಳಿಗೆ ಹೋಗಲು ಇದ್ದ ಭಯ ಮಾಯವಾಯಿತು.

ಮಕ್ಕಳಿಗೆ ತಾಯಿಯ ಮೇಲ್ಪಂಕ್ತಿ

ಹೀಗೆ ಜಾನಕೀ ದೇವಿಯವರು ಬಹು ಹೆದರಿಕೆಯ ಸ್ವಭಾವ. ವರ್ಧಾದಲ್ಲಿ ನಾಯಿಗಳ ಕಾಟ ಹೆ‌ಚ್ಚು. ಮಕ್ಕಳು ಮಲಗಿದ್ದರೆ ಬಂದು ಪಕ್ಕದಲ್ಲಿ ಮಲಗಿಬಿಡುವುವು. ಹಣ್ಣನ್ನು ಇಟ್ಟಿದ್ದರೆ ಹೊತ್ತುಕೊಂಡು ಓಡಿ ಬಿಡುವುವು; ಚಪಾತಿ ಮಾಡಿಟ್ಟರೆ ಸ್ವಲ್ಪ ಅತ್ತಿತ್ತ ತಿರುಗಿದರೆ ಸಾಕು ಚಪಾತಿ ನಾಯಿಗಳ ಬಾಯಿಯಲ್ಲಿ. ಜಾನಕೀದೇವಿ ಬಹು ಹೆದರುತ್ತಿದ್ದರು. ಬೇರೆ ಯಾರಾದರೂ ಬಂದು ಕಲ್ಲು ಹೊಡೆದು ನಾಯಿಯನ್ನು ಓಡಿಸಬೇಕು.

ಇಷ್ಟು ಹೆದರಿಕೆಯ ಹೆಂಗಸು ಗಂಡನನ್ನೂ ಮಗನನ್ನೂ ನಗುನಗುತ್ತ ಸ್ವಾತಂತ್ರ‍್ಯದ ಹೋರಾಟಕ್ಕೆ ಕಳುಹಿಸಿದರು. ತಾವೂ ದೇಶದ ಸ್ವಾತಂತ್ರ‍್ಯ ಸಮರದಲ್ಲಿ ಸೇರಿದರು. ಪೋಲೀಸರ ಲಾಠಿಯನ್ನು ಎದುರಿಸಿದರು. ಸೆರೆಮನೆಗೆ ಹೋದರು.

ಸಬರಮತಿ ಆಶ್ರಮದಲ್ಲಿ ಜಾನಕಿ ಇದ್ದಾಗ ಉಪ್ಪಿನ ಸತ್ಯಾಗ್ರಹದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಜಾನಕಿಗೆ ಹಿರಿಯ ಮಗ ಕಮಲನಯನ ಇದರಲ್ಲಿ ಭಾಗವಹಿಸಲಿ ಎಂಬ ಆಸೆ. ಆದರೆ ಚಿಕ್ಕವರು ಬೇಡ ಎಂದರು ಗಾಂಧೀಜಿ. ಚಳವಳಿ ಎಂದರೆ ಸಾಮಾನ್ಯವಾಗಿ ತಾಯಂದಿರು ಯಾವುದಾದರೂ ನೆಪ ಹೂಡಿ ಮಕ್ಕಳನ್ನು ತಡೆಯುತ್ತಾರೆ. ಆದರೆ ಈ ರಾಷ್ಟ್ರಪ್ರೇಮಿ ತಾಯಿಗೆ ಮಗ ರಾಷ್ಟ್ರೀಯ ಚಳಿವಳಿಯಲ್ಲಿ ಭಾಗವಹಿಸಲಿ ಎಂಬ ಇಷ್ಟ. ಈಕೆಯೇ ಗಾಂಧೀಜಿಯನ್ನು ಒತ್ತಾಯಿಸಿದಳು. ಈ ಹಠಕ್ಕೆ ಗಾಂಧೀಜಿ ಮಣಿಯಬೇಕಾಯಿತು.

ಆದರೆ ಈ ಸಂದರ್ಭದಲ್ಲಿ ಕಮಲನಯನನ ಆರೋಗ್ಯ ಚೆನ್ನಾಗಿರಲಿಲ್ಲ. ಒಂದು ವರ್ಷದಿಂದ ಮಲೇರಿಯ ಕಾಡುತ್ತಿತ್ತು. ತುಂಬ ನಿಶ್ಯಕ್ತನಾಗಿದ್ದ. ಆದರೆ ಚಳವಳಿಯಲ್ಲಿ ಭಾಗವಹಿಸಲು ಉತ್ಸುಕನಾಗಿದ್ದ. ವಾಸಿಯಾದ ಮೇಲೆ ಸೇರಲಿ ಎಂದು ಗಾಂಧೀಜಿ ಸೂಚಿಸಿದರು.

ದಂಡೀಯಾತ್ರೆ ಹೊರಡುವ ದಿನ ಬಂತು. ಆಗಲೂ ಕಮಲನಯನ ಆರೋಗ್ಯ ಸರಿ ಹೋಗಿರಲಿಲ್ಲ. ಆದರೂ ಧೈರ್ಯಮಾಡಿ ಜಾನಕಿ ಅವನನ್ನು ಹೊರಡಿಸಿಬಿಟ್ಟಳು. ಆದರೆ ಜಾನಕಿಯ ಲೆಕ್ಕ ಏರುಪೇರಾಯಿತು. ಕಮಲ ನಯನನಿಗೆ ಕಾಯಿಲೆ ಜಾಸ್ತಿಯಾಯಿತು. ಅವನನ್ನು ಹಿಂದಕ್ಕೆ ಕಳುಹಿಸುವಂತೆ ವೈದ್ಯರು ಬಲವಂತ ಮಾಡಿದರು. ಆದರೆ ಸತ್ಯಾಗ್ರಹಕ್ಕೆ ಹೋದವರು ವಾಪಸ್ಸು ಬರಬಾರದು ಎಂಬುದು ಸಂಪ್ರದಾಯ. ಆದ್ದರಿಂದ ಹುಡುಗನನ್ನು ಗುಜರಾತ್ ವಿದ್ಯಾಪೀಠಕ್ಕೆ ಸೇರಿಸಿದರು.

ಜಾನಕಿ ಮಗನನ್ನು ಚಳವಳಿಗೆ ಕಳುಹಿಸಲು ಇಷ್ಟಪಟ್ಟುದರಲ್ಲಿ ಆಶ್ಚರ್ಯವಿಲ್ಲ. ಸ್ವತಃ ಆಕೆಯೇ ಒಬ್ಬ ಪ್ರಮುಖ ಕಾರ್ಯಕರ್ತೆ. ಪರದೆಯಿಂದ ಮುಖ ಮುಚ್ಚಿಕೊಂಡು ಈಚೆ ಬರುವುದಕ್ಕೂ ಸಂಕೋಚ ಪಡುತ್ತಿದ್ದ ಹೆಂಗಸು ಈಗ ಸಾರ್ವಜನಿಕ ಭಾಷಣಗಳನ್ನು ಮಾಡುತ್ತಿದ್ದಳು. ಪೊಲೀಸರನ್ನು ಎದುರಿಸುತ್ತಿದ್ದಳೆಂದರೆ ಆಕೆಯ ಜೀವನದಲ್ಲಿ ಎಂಥ ಪವಾಡ ಆಗಿರಬೇಕು!

ಆಗ ದೇಶದ ಸ್ವಾತಂತ್ರ‍್ಯಕ್ಕಾಗಿ ಎಲ್ಲೆಲ್ಲೂ ಹೋರಾಟ ನಡೆಯುತ್ತಿದ್ದ  ದಿನಗಳು. ಮೊದಮೊದಲು ಇದರಲ್ಲಿ ಕೇವಲ ಗಂಡಸರು ಭಾಗವಹಿಸು‌ತ್ತಿದ್ದರು. ಆನಂತರ ಹೆಂಗಸರೂ ಸೇರತೊಡಗಿದರು. ಬ್ರಿಟಿಷ್ ಸರ್ಕಾರ ದೇಶಭಕ್ತರನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿತ್ತು. ಪೊಲೀಸರು ಹೆಂಗಸರು ಮಕ್ಕಳು ಎನ್ನದೆ ಹೊಡೆಯುತ್ತಿದ್ದರು, ದಸ್ತಗಿರಿ ಮಾಡುತ್ತಿದ್ದರು.

ಹೊರಗಡೆ ಹೀಗೆ ಸರ್ಕಾರದ ದಬ್ಬಾಳಿಕೆ ನಡೆಯುತ್ತಿರುವಾಗ ಜಮನಲಾಲರು ಜೈಲಿನಲ್ಲಿದ್ದರು. ಹೊರಗಡೆ ಜನ ಕಷ್ಟಪಡುತ್ತಿರುವುದನ್ನು ಕೇಳಿ ಬೇಸರ ಪಟ್ಟುಕೊಂಡರು. ಜಾನಕೀದೇವಿ ಸಕ್ರಿಯವಾಗಿ ಆಂದೋಲನದಲ್ಲಿ ಭಾಗವಹಿಸುತ್ತಿರುವುದನ್ನು ಕೇಳಿ ಸಂತೋಷಗೊಂಡರು. ಆಗ ಜಾನಕಿಗೆ ಒಂದು ಕಾಗದ ಬರೆದು, ’ಇದುವರೆಗೆ ನಿನ್ನನ್ನು ಜಮನಾಲಾಲರ ಹೆಂಡತಿ ಎಂದು ಗುರುತಿಸುತ್ತಿದ್ದರು. ಈಗ ನನ್ನನ್ನು ಜಾನಕಿಯ ಗಂಡ ಎಂದು ಸಂಬೋಧಿಸುತ್ತಾರೆ’ ಎಂದು ತಿಳಿಸಿದರು. ಗಾಂಧೀಜಿ ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ಆಗ ೧೯೩೦ರ ಸಮಯ. ಗಾಂಧೀಜಿಯವರು ಯರವಾಡ ಜೈಲಿನಲ್ಲಿದ್ದರು. ಅಲ್ಲಿಂದಲೇ ಜಾನಕಿಗೆ ಕಾಗದ ಬರೆದು, ’ನಿನ್ನ ಹೆಸರನ್ನು ಪತ್ರಿಕೆಗಳಲ್ಲಿ ನೋಡುತ್ತಿದ್ದರೆ, ನಾನು ಮತ್ತು ಜಮನಾಲಾಲ ಇಬ್ಬರೂ ಜೈಲಿನಲ್ಲೇ ಇದ್ದು ಬಿಡೋಣ ಎನ್ನಿಸುತ್ತದೆ’ ಎಂದು ತಿಳಿಸಿದರು.

ಹಿತೈಷಿಗಳ ಸೂಚನೆಯಂತೆ ಜಾನಕೀದೇವಿ ಪರದೇಶದ ಬಟ್ಟೆಗಳ ಬಹಿಷ್ಕಾರದ ಕಾರ್ಯಕ್ರಮ ನಡೆಸಲು ಕಲ್ಕತ್ತೆಗೆ ಹೋದರು. ಜೊತೆಜೊತೆಗೇ ಪಾನನಿರೋಧವನ್ನು ಪ್ರಚಾರ ಮಾಡಿದರು. ಹೆಂಡರ ಅಂಗಡಿಗಳ ಮುಂದೆ ಪಿಕೆಟಿಂಗ್ ನಡೆಸಿದರು.  ನೇತಾಜಿ ಸುಭಾಷ್ ಚಂದ್ರ ಬೋಸರಂಥ ಹಿರಿಯ ನಾಯಕರು ಸಹ ಆಕೆಯ ಕೆಲಸವನ್ನು ಮೆಚ್ಚಿದರು.

ಆನಂತರ ಜಾನಕಿ ಬಿಹಾರಕ್ಕೆ ಹೋದಳು. ಅಲ್ಲಿ ಸಭೆ ಸೇರಿಸುವುದು ಮತ್ತು ಭಾಷಣ ಮಾಡುವುದು ಅಪರಾಧವಾಗಿತ್ತು. ಆದರೆ ಜಾನಕಿ ಸರ್ಕಾರದ ನಿಷೇಧಗಳಿಗೆ ಹೆದರುತ್ತಿರಲಿಲ್ಲ. ಜನ, ಸರ್ಕಾರಕ್ಕೆ ತುಂಬ ಹೆದರಿದ್ದರು. ಹಳ್ಳಿಗಳಿಗೆ ಹೋದರೆ ಇವರನ್ನು ಉಪಚರಿಸುವುದಕ್ಕೂ ಜನ ಭಯಪಡುತ್ತಿದ್ದರು.

ಜಾನಕೀ ದೇವಿಯವರ ಹಿತೈಷಿಗಳು ಯಾವುದಕ್ಕೆ ಹೆದರಿದ್ದರೋ ಅದೇ ಆಯಿತು. ಅವರ ಕೆಲಸಗಳು ಆಗಿನ ವಿದೇಶೀ ಸರ್ಕಾರವನ್ನು ಕೆರಳಿಸಿದವು. ವರ್ಧಾಗೆ ಬಂದಾಗ ಆಕೆಯ ದಸ್ತಗಿರಿ ಆಯಿತು. ಇದು ನಡೆದಿದ್ದು ೧೯೩೨ರ ಫೆಬ್ರವರಿಯಲ್ಲಿ. ವರ್ಧಾದಲ್ಲಿ ಇರುವ ತನಕ ಊಟದ ಡಬ್ಬಿ ಮನೆಯಿಂದ ಬರುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಆಕೆಯನ್ನು ನಾಗಪುರದ ಜೈಲಿಗೆ ವರ್ಗಾಯಿಸಿದರು.

ಈ ಸಂದರ್ಭದಲ್ಲಿ ಮಗಳು ಕಮಲಾ ತಾಯಿಯಾಗಿದ್ದಳು. ವರ್ಧಾದಲ್ಲಿದ್ದ ಹುಡುಗಿ ಹೇಗಿರುತ್ತಾಳೊ ಎಂದು ಜಾನಕೀ ದೇವಿಗೆ ಚಿಂತೆ.  ಜೊತೆಗೆ ಜೈಲಿನ ವಾತಾವರಣವೂ ಒಗ್ಗಲಿಲ್ಲ. ತಣ್ಣಿರು ಸ್ನಾನ, ಮಣ್ಣಿನ ಲೋಟ, ಒಣಗಿದ ರೊಟ್ಟಿ ಹಿಡಿಸಲಿಲ್ಲ. ಎಲ್ಲ ಸೇರಿಕೊಂಡು ಆರೋಗ್ಯ ಕೆಟ್ಟಿತು. ಆದರೆ ಔಷಧಿ ತೆಗೆದುಕೊಳ್ಳಲು ನಿರಾಕರಿಸಿದರು. ಏಳೇ ದಿನಗಳಲ್ಲಿ ಸುಮಾರು ಹತ್ತು ಕಿಲೋಗ್ರಾಂ ತೂಕ ಕಡಿಮೆಯಾಯಿತು. ರಕ್ತವೂ ವಾಂತಿಯಾಗತೊಡಗಿತು. ಜಾನಕೀ ದೇವಿ ಸತ್ತರು ಎಂಬ ಸುದ್ದಿಯೂ ಹರಡಿತು.

ಮಣ್ಣಿನಿಂದ ಆಗುವುದಕ್ಕೆ ಸಾಬೂನು ಏಕೆ?

ಯಾವುದನ್ನೂ ವ್ಯರ್ಥ ಮಾಡುವುದು ಜಾನಕಿಯ ಸ್ವಭಾವವಲ್ಲ.  ಮಣ್ಣಿನಿಂದ ಆಗುವುದಕ್ಕೆ ಸಾಬೂನು ಏಕೆ ಎಂದು ಆಕೆಯ ವಾದ. ದೊಡ್ಡ ದೊಡ್ಡ ವಸ್ತುಗಳನ್ನು ಜೋಪಾನ ಮಾಡುವುದು ಎಲ್ಲರಿಗೂ ಗೊತ್ತು. ಆದರೆ ಸಣ್ಣ ಸಣ್ಣ ವಸ್ತುಗಳನ್ನು ಎಲ್ಲರೂ ಕಡೆಗಣಿಸುತ್ತಾರೆ. ಅದು ಕೂಡದು ಎಂದು ಆಕೆಯ ಅಭಿಮತ. ಕೆಲವೊಮ್ಮೆ ಇದು ಸ್ವಲ್ಪ ಅತಿರೇಕಕ್ಕೆ ಹೋಗುತ್ತಿದ್ದುದರಿಂದ ಕೆಲವರು ಜಾನಕಿಯನ್ನು ಜಿಪುಣಿ ಎಂದು ತಪ್ಪಾಗಿ ತಿಳಿಯಲು ಅವಕಾಶವಾಯಿತು.

ಒಮ್ಮೆ ಜಾನಕಿ ಅಮರನಾಥಕ್ಕೆ ಹೋಗಿದ್ದಳು. ಈಕೆಯ ಪರಿವಾರ ವಿಶ್ರಾಂತಿ ಗೃಹದಲ್ಲಿ ತಂಗಿತ್ತು. ಒಬ್ಬರಿಗೆ ಸೀಸದಕಡ್ಡಿ ಬೇಕಾಗಿತ್ತು. ಜಾನಕಿಯ ಬಳಿ ಅದು ಇತ್ತು. ಅವರು ತೆಗೆದುಕೊಂಡರು. ಆಗ ಕಿರಿಯ ಮಗ ರಾಮಕೃಷ್ಣ ’ಅಮ್ಮನಿಗೆ ಸೀಸದ ಕಡ್ಡಿ ವಾಪಸ್ಸು ಬಾರದಿದ್ದರೆ  ಆ ಚಿಂತೆಯಲ್ಲೇ ಸೊರಗಿ ಹೋಗುತ್ತಾಳೆ’ ಎಂದು ಹಾಸ್ಯ ಚಟಾಕಿ ಹಾರಿಸಿದ.

ಇನ್ನೊಮ್ಮೆ ವಿನೋಭಾ ಭಾವೆಯವರ ಜೊತೆ ಪಾದಯಾತ್ರೆಯಲ್ಲಿದ್ದಳು. ಅಲ್ಲಿ ಒಬ್ಬರ ಕಾಲಿಗೆ ಮುಳ್ಳು ಚುಚ್ಚಿತು. ಜಾನಕಿ ತನ್ನ ಬಳಿಯಿದ್ದ ಸೂಜಿ ಕೊಟ್ಟಳು. ತೆಗೆದು ಕೊಂಡವರು ವಾಪಸ್ಸು ಕೊಡಬೇಡವೆ? ಜಾನಕಿ ಜ್ಞಾಪಿಸಿದಳು. ಅವರು, ’ಒಂದು ಸೂಜಿಗೋಸ್ಕರ ಏಕೆ ಒದ್ದಾಡುತ್ತೀರಿ?’ ಎಂದರು. ಕೆಲಸವಾದ ಮೇಲೆ ಅದಕ್ಕೆ ಬೆಲೆಯಿಲ್ಲ! ಸೂಜಿ ಬೇಕಾದಾಗ ನಮ್ಮ ಬಳಿ ಚಾಕು ಇದ್ದರೆ ಏನು ಉಪಯೋಗ ಎಂದಿತು ಜಾನಕಿಯ ಮನಸ್ಸು.

ಕೋಪವೆಂಬುದು ಅನರ್ಥ ಸಾಧನ

ಶಾಂತಿಯಿಲ್ಲದೆ ಸುಖವಿಲ್ಲ. ಜಾನಕಿಗೆ ಇದು ಅನುಭವದಿಂದ ತಿಳಿಯಿತು. ಮೊದಲು ಆಕೆಗೆ ಕೋಪ ಹೆಚ್ಚು. ನೌಕರರು, ಮಕ್ಕಳು ಎಂಬ ವ್ಯತ್ಯಾಸವಿರಲಿಲ್ಲ. ಮುಖ್ಯವಾಗಿ ಉಮ ಅಮ್ಮನ ಕೋಪಕ್ಕೆ ಸದಾ ತುತ್ತಾಗುತ್ತಿದ್ದಳು.

ಆಗ ಎಲ್ಲರೂ ಸಬರಮತಿ ಆಶ್ರಮದಲ್ಲಿದ್ದರು. ಒಂದು ದಿನ ಪುಟ್ಟ ಉಮಳ ಬಟ್ಟೆ ಹರಿದಿತ್ತು. ತಾಯಿ ಸ್ನಾನ ಮಾಡಿಸಿ ಹೊಸ ಬಟ್ಟೆ ಹಾಕಿದಳು. ಆದರೆ ಉಮ ಅಳು ನಿಲ್ಲಿಸಲಿಲ್ಲ. ಜಾನಕಿಗೆ ರೇಗಿತು. ನೀರು ಹೊಯ್ಯುವ ಚೊಂಬಿನಿಂದಲೇ ಹೊಡೆದಳು. ಮಗುವಿಗೆ ಗಾಯವಾಗಿ ರಕ್ತ ಹರಿಯಿತು.

ಜಮನಾಲಾಲರಿಗೆ ಇದು ತಿಳಿದು ಬೇಸರವಾಯಿತು. ಗಾಂಧೀಜಿಯ ಸಲಹೆ ಕೇಳಿದರು. ಗಾಂಧೀಜಿ ಉಪವಾಸ ಮಾಡಲು ಸೂಚಿಸಿದರು. ಜಮನಾಲಾಲರು ಹಾಗೆ ಮಾಡಿದರು. ಜಾನಕಿಯ ಮೇಲೆ ಇದು ಪ್ರಭಾವ ಬೀರಿತು. ಕೋಪ ಕೆಟ್ಟದ್ದು ಎಂದು ಅರ್ಥ ಮಾಡಿಕೊಂಡಳು.

ಸೂಜಿ ಬೇಕಾದಾಗ ಚಾಕು ಇದ್ದರೆ ಏನು ಪ್ರಯೋಜನ?

ಗೋಮಾತೆಯ ಸೇವೆ

ದೇಶಕ್ಕಾಗಿ ದುಡಿಯುತ್ತಿದ್ದ ಜಮನಾಲಾಲರನ್ನು ಬಂಧಿಸಿ ಕಾರಾಗೃಹದಲ್ಲಿಡಲಾಯಿತು. ಅಲ್ಲಿ ಅವರ ಆರೋಗ್ಯ ಕೆಟ್ಟಿತು.

ಬಂಧನದಿಂದ ಹೊರಕ್ಕೆ ಬಂದ ಮೇಲೆ ಜಮಾನಾಲಾಲರ ಮನಸ್ಸು ಆಧ್ಯಾತ್ಮದತ್ತೊಲಿಯಿತು. ಮೊದಲಿನಿಂದ ಅವರದು ಉದಾರ ಸ್ವಭಾವ. ತಮ್ಮ ವಿಷಯ ಯೋಚಿಸಿದ್ದು ಕಡಿಮೆ. ಇತರರಿಗೆ ನೆರವಾದದ್ದು ಹೆಚ್ಚು. ಅವರು ಹಲವು ಸಂಸ್ಥೆಗಳಿಗೆ ದಾನವಾಗಿ ಕೊಟ್ಟದ್ದೇ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಮೀರಿತ್ತು. ಈಗ ಅವರಿಗೆ ವ್ಯಾಪಾರದಲ್ಲಿ ಆಸಕ್ತಿ ಹೋಯಿತು. ದೇವರಲ್ಲಿ ಮನಸ್ಸು ನೆಲೆಸಿತು. ಒಳ್ಳೆಯ ಕೆಲಸದಲ್ಲಿ ಕಾಲ ಕಳೆಯಬೇಕು ಎನ್ನಿಸಿತು. ಗಾಂಧೀಜಿಗೆ ಇವರ ಮನಃಸ್ಥಿತಿ ಅರ್ಥವಾಯಿತು. ಗೋಸೇವೆ ಮಾಡುವಂತೆ ಸಲಹೆಯಿತ್ತರು. ಆಗ ಜಮನಾಲಾಲರು ತಮ್ಮ ಪೂರ್ತಿ ಮನಸ್ಸನ್ನು ಗೋಸೇವೆಗೆ ಮೀಸಲಾಗಿಟ್ಟರು. ಒಂದು ಕುಟೀರವನ್ನು ಕಟ್ಟಿ ಅಲ್ಲಿ ವಾಸ ಮಾಡಲು ಪ್ರಾರಂಭಿಸಿದರು.

ಗಂಡನ ಸಹವಾಸದಿಂದ ಜಾನಕಿಗೂ ಗೋಸೇವೆ ಮಾಡುವ ಮನಸ್ಸು ಮೂಡಿತು. ಗೋಸೇವೆ ಜಮನಾಲಾಲರ ಜೀವನದ ಚಟುವಟಿಕೆಯಾಗಿತ್ತು. ಅವರು ೧೯೪೨ರ ಫೆಬ್ರುವರಿಯಲ್ಲಿ ಈ ಲೋಕವನ್ನು ಬಿಟ್ಟರು. ಇದು ಜಾನಕೀ ದೇವಿಗೆ ಒಂದು ದೊಡ್ಡ ಆಘಾತ.  ಅಷ್ಟು ವರ್ಷ ಒಟ್ಟಿಗೆ ಸಂಸಾರ ಹೂಡಿದ ಪ್ರೀತಿಯ ಗಂಡನನ್ನು ಅಗಲುವುದು ಸುಲಭವಾಗಿರಲಿಲ್ಲ. ಸತೀ ಹೋಗಲು ನಿರ್ಧರಿಸಿದರು (ಸತ್ತ ಗಂಡನ ಚಿತೆಗೆ ಹಾರಿ ಪ್ರಾಣ ಬಿಡುವ ಒಂದು ಪದ್ಧತಿ) ಆದರೆ ಗಾಂಧೀಜಿ’ ಆತ್ಮಕ್ಕೆ ಸಾವಿಲ್ಲ. ನೀನು ಉಳಿದು ಗಂಡನಿಗೆ ಇನ್ನೂ ಹೆಚ್ಚಿನ ಕೀರ್ತಿ ತರಬೇಕು’ ಎಂದು ಬುದ್ಧಿವಾದ ಹೇಳಿದರು.

ಜಾನಕಿದೇವಿಗೆ ಬಾಪೂಜಿಯ ಮಾತಿನ ಸತ್ಯ ಅರ್ಥವಾಯಿತು. ಲಕ್ಷಾಂತರ ರೂಪಾಯಿಗಳನ್ನು ದಾನ ಮಾಡಿದರು. ಖಾದಿ ಕಾರ್ಯಕ್ರಮಗಳಿಗೆ ಹಣ ಖರ್ಚು ಮಾಡಿದರು. ವರ್ಧಾದಲ್ಲಿ ಪ್ರಸೂತಿ ಗೃಹ ನಿರ್ಮಿಸಲು, ಗೋವಿನ ಕೆಲಸಗಳನ್ನು ನೋಡಿಕೊಳ್ಳಲು ಹಣವನ್ನು ಮೀಸಲಾಗಿಟ್ಟರು. ಕುಟುಂಬದ ಆಸ್ತಿಯಲ್ಲಿ ಜಾನಕಿ ದೇವಿಯ ಅಷ್ಟನ್ನೂ ಭಾರತದ ಗೋವುಗಳ ಸಂರಕ್ಷಣೆಗೆ ಕೊಟ್ಟು ಬಿಟ್ಟರು. ಗೋ ಸೇವಾ  ಸಂಘದ ಅಧ್ಯಕ್ಷಿಣಿಯಾಗಿ ಕೆಲಸ ಮಾಡಿದರು. ತ್ಯಾಗದ ಪ್ರತಿಜ್ಞೆ ಕೈಗೊಂಡರು. ಸೇವೆಯ ದೀಕ್ಷೆಯಿಂದ ಎಲ್ಲರಿಗೂ ಪ್ರಿಯ ಮಾತಾಜಿ ಆದರು.

ಕೂಪದಾನ

ನಮ್ಮದು ಕೃಷಿ ಪ್ರಧಾನ ದೇಶ. ಆದರೆ ನೆಲದ ಒಡೆತನ ಕೆಲವರದು ಮಾತ್ರ. ಇದು ಅನ್ಯಾಯ. ಹಂಚಿಕೆ ಸಮನಾಗಿರಬೇಕು. ಇದ್ದವರು ಇಲ್ಲದವರಿಗೆ ಸ್ವ ಇಚ್ಛೆಯಿಂದ ಭೂಮಿ ಹಂಚುವುದು ಯೋಗ್ಯ ಮಾರ್ಗ. ಇದು ಭೂದಾನದ ತಿರುಳು. ಇದರ ಸೃಷ್ಟಿಕರ್ತರು ವಿನೋಭಾ ಭಾವೆ. ಜಾನಕೀ ದೇವಿಗೂ ಇದು ಇಷ್ಟವಾಯಿತು. ನೀರಿನ ಆಸರೆಯಿಲ್ಲದಿದ್ದರೆ ಭೂಮಿಯಿದ್ದೂ ವ್ಯರ್ಥ. ಇದರ ಬಗ್ಗೆ ಯೋಚಿಸಿದಾಗ ಜಾನಕಿಗೆ ಕೂಪ (ಬಾವಿ) ದಾನದ ಕಲ್ಪನೆ ಬಂತು. ದುಡ್ಡಿರುವವರು ನೀರಿಲ್ಲದ ಕಡೆಗಳಲ್ಲಿ ಬಾವಿಗಳನ್ನು ತೋಡಿಸಿದರೆ ಜನರಿಗೆ ಅನುಕೂಲ. ಆದ್ದರಿಂದ ಮಾತಾಜಿ ಕೂಪದಾನದ ಚಳವಳಿಯನ್ನು ಪ್ರಾರಂಭಿಸಿದರು. ಇದರ ನಿಮಿತ್ತ ಬಿಹಾರದ ಮನೆಮನೆಗೂ ಹೋದರು. ಮೊದಲಿಗೆ ನೂರೆಂಟು ಬಾವಿಗಳಾದರೂ ಆಗಲಿ ಎಂಬ ಮನಸ್ಸಿತ್ತು. ಆದರೆ ಚಂದಾ ವಸೂಲಿ ಮುಂದುವರೆದಂತೆ ಎಂಟು ಬಾವಿಗಳಾದರೆ ಪುಣ್ಯ ಎಂಬ ಸ್ಥಿತಿ ಬಂದು ಆದರೆ ಜಾನಕಿ ಧೃತಿಗೆಡಲಿಲ್ಲ.

ಸರಳತೆಯೇ ಮೈವೆತ್ತ ಮೂರ್ತಿ

೧೯೫೬ರಲ್ಲಿ ಜಾನಕೀ ದೇವಿಗೆ ಪದ್ಮವಿಭೂಷಣ ಪ್ರಶಸ್ತಿ ಬಂತು. ಅಸಂಖ್ಯಾತ ಜನ ಅಭಿನಂದಿಸಿ ಕಾಗದ ಬರೆದರು. ಆದರೆ ಆಕೆ ಒಂದಕ್ಕೂ ಉತ್ತರಿಸುವ ಗೋಜಿಗೇ ಹೋಗಲಿಲ್ಲ. ಏಕೆ ಹೀಗೆ ಎಂದರೆ, ’ನಾನು ಯಾವಾಗಲೂ ಅಲೆಯುತ್ತಿರುತ್ತೇನೆ. ಆಗ ಕಾಗದ ಬರೆದವರನ್ನೆಲ್ಲಾ ಭೇಟಿಯಾಗುತ್ತೇನೆ’ ಎಂದು ಹೇಳಿ ನಗುತ್ತಿದ್ದರು. ಆಕೆಯ ದೃಷ್ಟಿಯಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಯಾವ ವಿಶೇಷ ಮಹತ್ವವೂ ಇರಲಿಲ್ಲ.

ಜಾನಕಿ ದೇವಿ ಹಿಂದಿ ಪರೀಕ್ಷೆಗೆ ಕಟ್ಟಿದುದು ಸಹ ಸ್ವಾರಸ್ಯ ವಿಷಯ. ಜಮನಾಲಾಲರಿಗೆ ತಮ್ಮ ಮಕ್ಕಳು ಹಿಂದಿಯಲ್ಲಿ ಒಳ್ಳೆಯ ಜ್ಞಾನ ಸಂಪಾದಿಸಬೇಕೆಂದು ಇಷ್ಟ. ಅದಕ್ಕಾಗಿ ಹಿಂದಿಯಲ್ಲಿ ಪರೀಕ್ಷೆಗಳನ್ನು ಪಾಸು ಮಾಡಬೇಕೆಂಬ ಆಶಿಸಿದ್ದರು.

ಪತಿಯ ಆಸೆಯನ್ನು ಪೂರೈಸಲು ಮಾತಾಜಿ ಸಿದ್ಧರಾದರು. ಹಿಂದಿ ಪಾಠ ಹೇಳಲು ಅಧ್ಯಾಪಕರನ್ನು ನೇಮಿಸಿದರು. ತಾವೂ ಜೊತೆಯಲ್ಲೇ ಓದಿದರೆ ಮಕ್ಕಳು ಹೆಚ್ಚಿನ ಆಸಕ್ತಿ ತೋರಿಸಿಯಾರೂ ಎಂದು ಆಕೆಯ ಭಾವನೆ. ಹೀಗಾಗಿ ಮಾತಾಜಿಯೂ ಹಿಂದಿ ಪರೀಕ್ಷೆಗೆ ಕೂತರು.

ಆದರೆ ಅವರಿಗೆ ಮಕ್ಕಳಷ್ಟು ಓದುವುದು ಆಗಲಿಲ್ಲ. ಆಕೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ಇದು ಆಕೆಗೆ ಎದೆಗುಂದುವ ವಿಷಯವೇನೂ ಆಗಿರಲಿಲ್ಲ. ಉತ್ತೀರ್ಣಳಾದರೆ ಕೇವಲ ವಿಶಾರದ  ಎನ್ನಬೇಕು. ಆದರೆ ನಾನು ವಿಶಾರದ ಫೇಲ್. ಆದ್ದರಿಂದ ನನ್ನ ಪದವಿಯೇ ಹೆಚ್ಚಲ್ಲವೆ? ’ಎಂದು ತಮಾಷೆಯಾಗಿ ಹೇಳುತ್ತಿದ್ದರು.

ನನ್ನ ಜೀವನ ಯಾತ್ರೆ

ಸುಮಾರು ೧೯೫೩ರ ಮಾತು, ಮಾತಾಜಿ ಕೆಲವು ಪ್ರಮುಖರೊಡನೆ ತಮ್ಮ ಅನುಭವಗಳನ್ನು ವಿವರಿಸುತ್ತಿದ್ದರು. ಆಗ ಕೆಲವರು ’ಮಾತಾಜಿ ನಿಮ್ಮ ಅನುಭವಗಳು ಪುಸ್ತಕ ರೂಪದಲ್ಲಿ ಬಂದರೆ, ಓದುವ  ಕಿರಿಯರಿಗೆ ಸ್ಫೂರ್ತಿ ಬರುತ್ತದೆ. ನಿಮ್ಮ ಜೀವನ ಚರಿತ್ರೆಯನ್ನು ಬರೆಯಿರಿ’ ಎಂದರು. ಇದು ಒಳ್ಳೆಯ ಸೂಚನೆಯೆಂದೂ ಜಾನಕೀ ದೇವಿ ಈ ಕೆಲಸವನ್ನು ಮಾಡಬೇಕೆಂದೂ ಎಲ್ಲರೂ ಅಭಿಪ್ರಾಯಪಟ್ಟರು. ರಿಷಭದಾಸ್ ರಾಂಕಾರು ಮಾತಾಜಿಯೊಡನೆ ಮಾತನಾಡಬೇಕೆಂದೂ, ಜಮನಾಲಾಲ್ ಜೈನ್ ಬರೆಯಬೇಕೆಂದೂ ನಿರ್ಧಾರವಾಯಿತು.

ಜಾನಕಿ ದೇವಿ ತಮ್ಮ ಅನುಭವಗಳನ್ನು ಹೇಳುವುದು ಮತ್ತು ಜೈನರು ಬರೆಯುವುದು ನಡೆಯಿತು. ಕೊನೆಗೂ ಪುಸ್ತಕ ಮುಗಿದು ಮೇರೀ ಜೀವನ ಯಾತ್ರಾ ಎಂಬ ಹೆಸರಿನಿಂದ ಪ್ರಕಟವಾಯಿತು. ಇದರಲ್ಲಿ ಮಾತಾಜಿ ತಮ್ಮ ಮಾನಸಿಕ ಸಂಘರ್ಷ, ವಿಚಾರ, ಬೆಳೆದು ಬಂದ ರೀತಿ ಮುಂತಾದವುಗಳ ವಿಶ್ಲೇಷಣೆಯನ್ನು ನಡೆಸಿದ್ದಾರೆ.

ತಾಯಿ ದೇವರು; ದೇವರೇ ತಾಯಿ

ಗಂಡ ಸತ್ತ ಮೇಲೆ ಮಾತಾಜಿ ಒಂದು ಬಗೆಯ ನಿರ್ಲಿಪ್ತತೆಯನ್ನು ಬೆಳೆಸಿಕೊಂಡರು. ಅವರ ಪಾಲಿಗೆ ನೋವು ನಲಿವು ಎಲ್ಲ ಒಂದೇ. ಒಮ್ಮೆ ಬಿದ್ದು ಗಾಯವಾಗಿ ಆಪರೇಷನ್ ಆಯಿತು. ನೋವು ಎಂದು ಹೇಳಲಿಲ್ಲ. ಶಾಂತರಾಗಿದ್ದರು. ಆದರೆ ಇದೇ ಕಾರಣವಾಗಿ ದೇಹ ನಿಶ್ಯಕ್ತವಾಯಿತು. ೧೯೭೯ ಮೇ ೨೦ರ ರಾತ್ರಿ ಇಹ ಲೋಕವನ್ನು ಬಿಟ್ಟರು.

ಜಾನಕೀದೇವಿ ಧನ್ಯೆ ಗಂಡ ಸತ್ತಮೇಲೆ ಮೂರು ದಶಕಗಳಿಗೂ ಹೆಚ್ಚು ಕಾಲವನ್ನು ಗಂಡನಿಗೆ ಪ್ರಿಯವಾದ ಕೆಲಸಗಳಿಗೆ ಮುಡುಪಾಗಿಟ್ಟರು. ಒಳ್ಳೆಯ ಕೆಲಸದಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ದುಡಿದರು. ಜಾನಕಿ ದೇವಿಯ ಜೀವನ ದರ್ಶನ ಭಾರತದ ಸ್ತ್ರೀಯರಿಗೆ ಎಂದೆಂದಿಗೂ ಆದರ್ಶ ಪ್ರಾಯವಾಗಿರುತ್ತದೆ.