ಒಂದು ಕಾಲದಲ್ಲಿ “ಗೊರವರ ದುಂಡುಚಿ ಬೀದಿವರೆವ ಬೀರನ ಕತೆ” ಎಂದು ಮೂಗು ಮುರಿಸಿಕೊಂಡ ಜಾನಪದ, ಜಾಗತೀಕರಣದ ಈ ಸಂದರ್ಭದಲ್ಲಿ ವಿಶ್ವದ ಗಮನ ಸೆಳೆದಿದೆ. ಜಾಗತೀಕರಣವನ್ನು ಅರಗಿಸಿಕೊಳ್ಳಲು ಜಾನಪದದಿಂದ ಮಾತ್ರ ಸಾಧ್ಯವೆಂಬಂತಹ ನಿಲುವನ್ನು ವಿದ್ವಾಂಸರು ವ್ಯಕ್ತಪಡಿಸಿದ್ದಾರೆ. ಭಾರತೀಯ ಜಾನಪದಕ್ಕೆ ಕನ್ನಡ ಜಾನಪದದ ಕೊಡುಗೆ ಅಪಾರವಾದುದಾಗಿದೆ.

ಜಾನಪದವೆಂಬುದು ಒಂದು ಪ್ರದೇಶದ ಸಂಸ್ಕ್ರತಿ. ಅದು ಆ ನೆಲದ ಜೀವನ ವಿಧಾನ. ಹೀಗಾಗಿ folk ಮತ್ತು folkloreಗಳಿಗೆ ಸಂಬಂಧಿಸಿದಂತೆ ಈಗಾಗಲೇ ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ. ಜೀವನ ವಿಧಾನದ ಎಲ್ಲ ಆಯಾಮಗಳನ್ನು ಒಳಗೊಂಡಿರುವುದು ‘ಜಾನಪದ’. ಜಾನಪದದ ಒಂದೊಂದು ವಿಷಯದ ಬಗೆಗೆ ಹೇಳುವುದು ‘ಜನಪದ’ ಎಂಬಂತಹ ನಿಲುವುಗಳು ಈಗಾಗಲೇ ಸ್ಪಷ್ಟವಾಗಿವೆ. ಜನಪದ ಸಾಹಿತ್ಯ – ಜನಪದಕಲೆ – ಜನಪದ ಸಂಗೀತ ಹೀಗೆ ಹತ್ತಾರು ವಿಷಯಗಳನ್ನು ಜಾನಪದದ ಗರ್ಭದಲ್ಲಿ ಕಾಣಬಹುದು. ಏಳನೇ ಶತಮಾನದಲ್ಲಿ ದೊರೆತ ಬಾದಾಮಿ ಶಾಸನದಲ್ಲಿಯೇ ಜನಪದ ಸಾಹಿತ್ಯದ ತಾಯಿ ಬೇರೆನಿಸಿದ ತ್ರಿಪದಿ ಪ್ರಕಟವಾಗಿದೆ. ಕನ್ನಡದ ಮೊದಲ ಕೃತಿ ಕವಿರಾಜಮಾರ್ಗದಲ್ಲಿ “ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತರಾದ” ಜನಪದರ ಹಿರಿಮೆಯೆಂತಹದೆಂಬುದನ್ನು ಹೇಳಲಾಗಿದೆ.

ಕಳೆದ ಶತಮಾನದಲ್ಲಿ ಪಿನ್‌ಲ್ಯಾಂಡ್, ಅಮೇರಿಕ, ಫ್ರಾನ್ಸ, ಇಂಗ್ಲೆಂಡ್, ಜರ್ಮನಿ ಮೊದಲಾದ ದೇಶಗಳಲ್ಲಿ ಜಾನಪದ ಅಧ್ಯಯನಕ್ಕೆ ಪ್ರಾಶಸ್ತ್ಯ ದೊರೆಕಿರುವದನ್ನು ಕಾಣಬಹುದಾಗಿದೆ. ಕನ್ನಡ ಜನಪದ ಸಂಗ್ರಹಕ್ಕೆ ಸಂಬಂಧಿಸಿದಂತೆ ಪಾಶ್ಚಾತ್ಯ ವಿದ್ವಾಂಸರ ಶ್ರಮವನ್ನು ಸ್ಮರಿಸಬೇಕಾಗುತ್ತದೆ. ಪ್ರಾರಂಭದಲ್ಲಿ ಬಂದ ಪ್ಲೀಟ್‌ರ್ರವರು ಸಂಗ್ರಹಿಸಿದ ಲಾವಣಿಗಳು ಗಮನಾರ್ಹ ಸಂಗ್ರಹವಾಗಿದೆ. ಜನಪದ ಸಾಹಿತ್ಯ ಸಂಗ್ರಹಣದ ವಿಷಯವೇ ಒಂದು ದೊಡ್ಡ ಪುಸ್ತಕವಾಗುವಷ್ಟು ಬೆಳೆದು ನಿಂತಿದೆ. ಬಹುಮಖಿ ನೆಲೆಗಳಿಂದ ಬಂದ “ಜಾನಪದ” ಇಂದು ಬಹು ಅಧ್ಯಯನಗಳ ಸಂಶೋಧನೆಗೆ ತಾಯಿ ಬೇರಾಗಿದೆ.

ಕನ್ನಡ ಜನಪದ ಸಾಹಿತ್ಯ ಸಂಗ್ರಹ ಇಪ್ಪತ್ತನೇ ಶತಮಾನದಲ್ಲಿ ತೃಪ್ತಿಕರವಾಗಿದೆ. ಇಪ್ಪತ್ತೋಂದನೇ ಶತಮಾನದಲ್ಲಿ ಹೊಸ ಸಂಗ್ರಹ ಕಾರ್ಯಕ್ಕೆ ಪಾಶ್ಚಾತ್ಯ ವಿದ್ವಾಂಸರು ಪ್ರೇರಣೆ ನೀಡಿದರು. ಇಪ್ಪನೇ ಶತಮಾನದ ಮಧ್ಯಭಾಗದಿಂದ ಜನಪದ ಸಾಹಿತ್ಯ ಸಂಗ್ರಹದ ಕಾರ್ಯ ಚುರುಕಾಯಿತು. ಹಲಸಂಗಿ ಗೆಳೆಯರ “ಗರತಿಯ ಹಾಡು”, “ಮಲ್ಲಿದಂಡ”, “ಜೀವನ ಸಂಗೀತ” ದಂತಹ ಸಂಗ್ರಹಗಳು ಚಾರಿತ್ರಿಕವಾಗಿ ತುಂಬ ಮುಖ್ಯವಾದ ಕೃತಿಗಳಾಗಿವೆ. ನಂತರದಲ್ಲಿ ಸಿಂಪಿ ಲಿಂಗಣ್ಣ, ಅರ್ಚಕ ರಂಗಸ್ವಾಮಿ, ಗೊರೂರು ರಂಗಸ್ವಾಮಿ ಅಯ್ಯಂಗಾರ, ಆನಂದಕಂದ, ಮತಿಘಟ್ಟ ಕೃಷ್ಣಮೂರ್ತಿ, ಡಾ. ಎಂ. ಎಸ್. ಸುಂಕಾಪುರ, ಗೊ. ರು. ಚ. , ಎಸ್. ಕೆ. ಕರೀಂಖಾನ್, ಡಾ. ಜಿ. ಶಂ. ಪ. ಮೊದಲಾದವರು ಜನಪದ ಸಾಹಿತ್ಯಕ್ಕೆ ಸಂಬಂಧಿಸಿದ ಮಹತ್ವದ ಸಂಕಲನಗಳನ್ನು ಹೊರತಂದಿದ್ದಾರೆ.

೧೯೨೪ರಲ್ಲಿ ಪ್ರಕಟವಾದ ಕೊಡಗಿನ ನಡಿಕೇರಿಯಂಡ ಚಿಣ್ಣಪ್ಪ ಅವರ “ಪಟ್ಟೋಲೆಪಳಮೆ” ಕೊಡವ ಜಾನಪದವನ್ನು ಪರಿಚಯಿಸುವ ಕೃತಿಯಾಗಿದೆ. ೧೯೨೧ರಲ್ಲಿ ಮಾಸ್ತಿಯವರು ಸಂಗ್ರಹಿಸಿದ “ಕನ್ನಡ ಲಾವಣಿ ಸಾಂಗತ್ಯ” ಗಮನ ಸೆಳೆಯುತ್ತದೆ. ೧೯೨೮ರಲ್ಲಿ ಪ್ರಹ್ಲಾದ ನರೇಗಲ್ಲ ಅವರು “ತ್ರಿಪದಿ” ಬರಹವನ್ನು ಮೊಟ್ಟಮೊದಲ ಬಾರಿಗೆ ಜಯಕರ್ನಾಟಕದಲ್ಲಿ ಪ್ರಕಟಿಸಿದರು. (ಆನಂದಕಂದ) ಬೆಟಗೇರಿ ಕೃಷ್ಣಶರ್ಮರು ೧೯೩೦ರಲ್ಲಿ “ಹಳ್ಳಿಯ ಹಾಡುಗಳು” ಕೃತಿ ಹೊರತಂದರು. ೧೯೩೧ರಲ್ಲಿ “ಗರತಿಯ ಹಾಡು” ಪ್ರಕಟವಾಯಿತು. ೧೯೬೨ರಲ್ಲಿ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದ ಮೊಟ್ಟಮೊದಲ ಪಿಎಚ್. ಡಿ ಗ್ರಂಥವನ್ನು ಡಾ. ಬಿ. ಎಸ್. ಗದ್ದಗೀಮಠ ಅವರು “ಕನ್ನಡ ಜಾನಪದ ಗೀತೆಗಳು “ ಹೆಸರಿನಲ್ಲಿ ಪ್ರಕಟಿಸಿದರು. ಮ್ಯೆಸೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ಚವಿದ್ಯಾಲಯ ಹಾಗು ಗುಲಬರ್ಗಾ ವಿಶ್ವವಿದ್ಯಾಲಯಗಳಲ್ಲಿ ಜಾನಪದ ಸ್ನಾತಕೋತ್ತರ ತರಗತಿಗಳು ಪ್ರಾರಂಭವಾದವು. ಜನಪದ – ಯಕ್ಷಗಾನ ಅಕಾಡೆಮಿ, ಜಾನಪದ ಪರಿಷತ್ತು, ಹಂಪಿ ಕನ್ನಡ ವಿಶ್ವವಿದ್ಯಾಲಯ, ಜಾನಪದ ಸಾಹಿತ್ಯ – ಸಂಸ್ಕ್ರತಿಗೆ ಸಂಬಂಧಿಸಿದಂತೆ ಅನೇಕ ಮಹತ್ವದ ಕೃತಿಗಳನ್ನು ಪ್ರಕಟಿಸಿದವು.

ಹೀಗೆ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅನೇಕ ಕೃತಿಗಳು ಪ್ರಕಟವಾಗಿವೆ. ಅನೇಕ ಪಿಎಚ್. ಡಿ ಮಹಾಪ್ರಬಂಧಗಳು ಪ್ರಕಟವಾಗಿವೆ. ಇಂದು ನೂರಾರು ಜನಪದ ವಿದ್ವಾಂಸರು, ಸಾವಿರಾರು ಜನಪದ ಕಲಾವಿದರು ಬೆಳೆದು ನಿಂತಿದ್ದಾರೆ. ಜನಪದ ಸಾಹಿತ್ಯದ ರೂಪಗಳಾದ, ತ್ರಿಪದಿ – ಲಾವಣಿ – ಗೀತೆ – ಕಥೆ – ಒಗಟು – ಒಡಪು – ದೊಡ್ಡಾಟ – ಸಣ್ಣಾಟ – ಯಕ್ಷಗಾನ ಹೀಗೆ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ಪಿಎಚ್. ಡಿ ಮಹಾಪ್ರಬಂಧಗಳು ಪ್ರಕಟವಾಗಿವೆ. ಬುಡಕಟ್ಟು ಸಂಸ್ಕೃತಿ – ಸಾಹಿತ್ಯ ಕುರಿತು, ಜನಪದ ಮಹಾಕಾವ್ಯಗಳನ್ನು ಕುರಿತು ಕನ್ನಡ ವಿಶ್ವವಿದ್ಯಾಲಯ ಮಹತ್ವದ ಪ್ರಕಟನೆಗಳನ್ನು ಹೊರತಂದಿದೆ.

ಸಾಹಿತ್ಯೇತರ ಜಾನಪದಕ್ಕೆ ಸಂಬಂಧಿಸಿದ ಶಿಸ್ತುಗಳನ್ನು ಕುರಿತು ಅಧ್ಯಯನ ನಡೆದಿದೆ. ಈ ಲೇಖನ ಅಂತಹ ಅನ್ಯಶಿಸ್ತುಗಳ ಬೆಳವಣಿಗೆಗೆ ಸಂಬಂಧಿಸಿದ ಒಳನೋಟಗಳನ್ನು ಕಟ್ಟಿಕೊಡುವದಾಗಿದೆ. ಜನಪದ ಸಾಹಿತ್ಯ ಹಾಗು ಸಾಹಿತ್ಯ ರೂಪಗಳನ್ನು ಹೊರತುಪಡಿಸಿ, ಜಾನಪದಕ್ಕೆ ಸಂಬಂಧಿಸಿದ ಅನೇಕ ಅಧ್ಯಯನಗಳು ನಡೆದಿವೆ. ಅವುಗಳನ್ನು ಕುರಿತು ಚರ್ಚಿಸುವುದು ಇಲ್ಲಿಯ ಮುಖ್ಯ ಉದ್ದೇಶವಾಗಿದೆ. ಅಂತಹ ಅಧ್ಯಯನಗಳನ್ನು ಏಖು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಅವುಗಳಲ್ಲಿ ಪರಿಸರ ಸಂಬಂಧಿ ಜಾನಪದ, ದೈವ ಸಂಬಂಧಿ ಜಾನಪದ, ಸಾಂಸ್ಕೃತಿಕ ಜಾನಪದ, ಜೈವಿಕ ಜಾನಪದ, ಕೃಷಿ ಜಾನಪದ, ಜನಾಂಗಿಕ ಜಾನಪದ, ಅನ್ವಯಿಕ ಜಾನಪದ ಹೀಗೆ ಇಂತಹ ವಿಭಾಗಗಳನ್ನು ವಿಸ್ತರಿಸುತ್ತ ಹೋಗಬಹುದಾಗಿದೆ. ಸಾಹಿತ್ಯೇತರ ಜಾನಪದ ಅಧ್ಯಯನಗಳಿಂದ ಅನೇಕ ಪ್ರಯೋಜನಗಳಿವೆ. ಜಾನಪದದ ಸತ್ವ – ಸಾಧ್ಯತೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ಗುರುತಿಸುವುದು ಇದರಿಂದ ಸಾಧ್ಯವಾಗುತ್ತದೆ. ವಿಜ್ಞಾನ – ತಂತ್ರಜ್ಞಾನದ ಈ ಯುಗದಲ್ಲಿ ಜಾನಪದದ ಬಹುಮುಖಿ ನೆಲೆಗಳನ್ನು ವರ್ತಮಾನದ ತುರ್ತಿನಲ್ಲಿಟ್ಟು ನೋಡಲು ಇದರಿಂದ ಸಹಾಯವಾಗುತ್ತದೆ.