ದ್ಯವದತ್ತವಾಗಿದ್ದ ಪರಿಸರ ಇಂದು ವಿಜ್ಞಾನವಾಗಿ ಬೆಳೆಯತೊಡಗಿದೆ. ಪರಿಸರಕ್ಕೆ ಸಂಬಂಧಿಸಿದಂತೆ ವಿಜ್ಞಾನದಲ್ಲಿ ಅನೇಕ ಸಂಶೋಧನೆಗಳು ನೆಡೆದಿವೆ. ವಿಜ್ಞಾನ – ತಂತ್ರಜ್ಞಾನವನ್ನು ಸ್ವಾರ್ಥಕ್ಕೆ ಬಳಸಿಕೊಂಡ ಕೆಲವು ಹಿತಾಶಕ್ತಿಗಳು ಪರಿಸರವನ್ನು ಮಲೀನಗೊಳಿಸಿದ್ದಾರೆ.

ಜೀವಸಂಕುಲ ಪರಿಸರವನ್ನೇ ಅವಲಂಬಿಸಿದೆ. ಈ ಜೀವಸಂಕುಲದಲ್ಲಿ ಮೊದಲು ಜನಿಸಿದ್ದು ಸಸ್ಯ. ಸಸ್ಯ – ಪಕ್ಷಿ – ಪ್ರಾಣಿ – ಮನುಷ್ಯ ಈ ಎಲ್ಲರಿಗೂ ಜೀವವಿದೆ. ಜೀವವಿರುವ ಎಲ್ಲವನ್ನೂ ಜನಪದರು ಜೀವಸಂಕುಲವೆಂದು ಕರೆದರು. ಈ ಜೀವಸಂಕುಲದಲ್ಲಿ ಅವರು ತಾರತಮ್ಯ ಮಾಡಲಿಲ್ಲ. ನಾಗರೀಕತೆ ಹೆಚ್ಚಿದಂತೆ, ಪಾಶ್ಚಾತ್ಯ ಸಂಸ್ಕ್ರತಿಯ ಪ್ರಭಾವಕ್ಕೊಳಗಾದ ಯುವಜನಾಂಗ ಮನುಷ್ಯನನ್ನು ಮಾತ್ರ ಮುಖ್ಯವೆಂದು ಭಾವಿಸಿತು. ಆಗ ಜೀವಕೇಂದ್ರಿತ ಸಂಸ್ಕ್ರತಿಯ ಬದಲು ಮನುಷ್ಯಕೇಂದ್ರಿತ ಸಂಸ್ಕ್ರತಿ ಪ್ರಾರಂಭವಾಯಿತು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಸಸ್ಯಸಂಕುಲವಿರುವ ಕಾಡನ್ನು ನಾಶಮಾಡತೊಡಗಿದ. ಪಕ್ಷಿ – ಪ್ರಾಣಿಗಳನ್ನು ಹಿಂಸಿಸಿ ಆಹಾರವನ್ನಾಗಿ ಮಾಡಿಕೊಂಡ. ಜೀವಸಂಕುಲನದ ಮೇಲೆ ಸ್ವಾರ್ಥ ಮನುಷ್ಯರ ದಬ್ಬಾಳಿಕೆ ಹೆಚ್ಚಾದಂತೆಲ್ಲ ಪರಿಸರದಲ್ಲಿ ಅಸಮತೋಲನ ಪ್ರಾರಂಭವಾಯಿತು. ಹಸಿರು ಕಾಡನ್ನು ನಾಶಮಾಡಿ ಕಾಂಕ್ರೀಟ್ ಕಾಡು ಕಟ್ಟಿದ್ದಕ್ಕಾಗಿ ಮಳೆ ಕಡಿಮೆಯಾಯಿತು. ಮಳೆಯಿಲ್ಲದಾಗ ಬೆಳೆ ಕಡಿಮೆಯಾಯಿತು. ತಂದ ಸಾಲ ತೀರಿಸದೆ ರೈತರು ಆತ್ಮಹತ್ಯೆಗೆ ಶರಣಾದರು. “ಎಳ್ಳು – ಜೀರಿಗೆ ಬೆಳೆಯೋಳ ಭೂತಾಯಿ, ಎದ್ದೊಂದು ಗಳಿಗೆ ನೆನೆದೇನ” ಎಂದು ಜನಪದರು ಎದ್ದ ಕೊಡಲೇ ಭೂದೇವಿಯನ್ನು ನೆನೆಯುವುದು ಸಾಮಾನ್ಯ. ಭೂಮಿಪೂಜೆ ಮಾಡುವುದು ಭೂಮಿಯಮೇಲೆ ಅವರಿಗಿರುವ ಗೌರವದ ಸಂಕೇತ. ವರವಾಗಿದ್ದ ಅದೇ ಭೂಮಿ ರೈತರ ಪಾಲಿಗಿಂದು ಶಾಪವಾಗಿದೆ.

ಎಳ್ಳು – ಜೀರಿಗೆ ಬೆಳೆಯುತ್ತಿದ್ದ ಫಲವತ್ತಾದ ಭೂಮಿ ಇಂದು ಭೂಗಳ್ಳರ ವಶವಾಗಿದೆ. ಗಣಿಗಳ್ಳರ ನಿಯಂತ್ರಣದಲ್ಲಿದೆ. ಭೂಮಾಫಿಯಾ ಹಾಗೂ ಗಣಿ ಮಾಫಿಯಾಗಳಿಂದ ಪರಿಸರ ತತ್ತರಿಸಿ ಹೋಗಿದೆ. ರೈತ ಕಂಗಾಲಾಗಿದ್ದಾನೆ.

ಜನಪದರು ಭೂಮಿಯನ್ನು, ಭೂತಾಯಿಯೆಂದು, ಭೂದೇವಿಯೆಂದು ಕರೆದ್ದಿದ್ದಾರೆ. ಆಕಾಶವನ್ನು ತಂದೆಯ ಸ್ಥಾನದಲ್ಲಿಟ್ಟು, ಭೂಮಿಯನ್ನು ತಾಯಿಯ ಸ್ಥಾನದಲ್ಲಿಟ್ಟು ನೋಡಿದ್ದಾರೆ. ಸಕಲ ಪ್ರಾಣಿ – ಗಿಡ – ಮರ – ಜಲನಿಧಿಗಳ ತಾಣ ಭೂಮಿಯಾಗಿದೆ. ಭೂಮಿಗೆ ಸಂಬಂಧಿಸಿದ ಅನೇಕ ನಂಬಿಕೆಗಳಿವೆ. ಜನಪದ ಕಥೆಗಳಿವೆ. ಭೂಮಿ ಜಾನಪದ ಇದೆಲ್ಲವನ್ನು ವಿವರಿಸುತ್ತದೆ.

ಚಂದ್ರ ಒಂದು ಆಕರ್ಷಕವಾದ ಗ್ರಹ. ಆದರೆ ಜಾನಪದದಲ್ಲಿ ಚಂದ್ರ; ಚಂದಪ್ಪನಾಗಿದ್ದಾನೆ, ಚುಂಗುಬಿಟ್ಟುಕೊಂಡು ಬರುವ ಚಲುವನಾಗಿದ್ದಾನೆ. ಚಂದ್ರ – ಸೂರ್ಯ – ನಕ್ಷತ್ರಗಳನ್ನು ಕುರಿತಂತೆ ಜನಪದರಲ್ಲಿ ವಿಚಿತ್ರವಾದ ನಂಬಿಕೆಗಳಿವೆ. ಜನಪದರಲ್ಲಿ ಚಂದ್ರ ಗರ್ಭರಕ್ಷಕ ದೇವತೆಯಾಗಿ ಕಂಡರೆ, ಸೂರ್ಯ ಬೆಳಕಿನ ಸಂಕೇತವಾಗಿ ಕಂಡಿದ್ದಾನೆ. ನಕ್ಷತ್ರಗಳು ಹೊಳೆಯುವ ದೀಪಗಳಾಗಿ ಕಂಡಿವೆ. ಆಕಾಶ ಜಾನಪದದಲ್ಲಿ ಅನೇಕ ಕುತೂಹಲಕಾರಿ ವಿಷಯಗಳು ಗಮನ ಸೆಳೆಯುತ್ತವೆ. ಜನಪದರಲ್ಲಿ ಗ್ರಹಣಕ್ಕೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳಿವೆ. ಒಂದೇ ಮಾಸದಲ್ಲಿ ಸೂರ್ಯ – ಚಂದ್ರ ಗ್ರಹಗಳು ನಡೆದಾಗ ಬರಗಾಲ ಬರುತ್ತದೆಂಬ ನಂಬಿಕೆ ಅವರಲ್ಲಿ ಬಲವಾಗಿದೆ. ಈ ಎಲ್ಲಾ ಗ್ರಹಗಳ ಮೇಲೆಯೇ ಜ್ಯೋತಿಷ್ಯಶಾಸ್ತ್ರ ನಿಂತುಕೊಂಡಿದೆ. ಆದರೆ ಇಂದು ವಿಜ್ಞಾನ – ತಂತ್ರಜ್ಞಾನ ಬೆಳೆಯುತ್ತಲ್ಲಿದೆ. ಚಂದ್ರಗ್ರಹದಲ್ಲಿ ವಾಸಿಸಲು ಪ್ರಯತ್ನಗಳು ನಡೆಯುತ್ತಿವೆ. ಅಂತರಿಕ್ಷ ತಂತ್ರಜ್ಞಾನ (Space Technology) ಬೆಳೆದು ನಿಂತಿದೆ. ಜನಪದರ ಮುಗ್ದತೆ ಹಾಗೂ ವೈಜ್ಞಾನಿಕ ಬೆಳೆವಣಿಗೆ ಮುಖಾಮುಖಿಯಾಗಿವೆ. ಹೀಗಾಗಿ ಆಕಾಶ ಜಾನಪದದ ಪರಿಕಲ್ಪನೆಗಳು ಇಂದು ಸಂಕ್ರಮಣಾವಸ್ಥೆಯಲ್ಲಿವೆ. ಜಾನಪದವನ್ನು ತಂತ್ರಜ್ಞಾನಕ್ಕೆ ಮುಖಾಮುಖಿಯಾಗಿಸಿ ತೌಲನಿಕ ಅಧ್ಯಯನ ಮಾಡುವುದರಿಂದ ಅನೇಕ ಸಮಸ್ಯೆಗಳಿಗೆ, ಸವಾಲುಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಿದೆ. ಈ ಕಾರಣದಿಂದ ಅನ್ಯಶಿಸ್ತೀಯ ಅಧ್ಯಯನಗಳಿಗೆ, ಅನ್ವಯಿಕ ಅಧ್ಯಯನಗಳಿಗೆ ಇಂದು ಪ್ರಾಮುಖ್ಯತೆಯಿದೆ. ಸಾಹಿತ್ಯದ ಜತೆಗೆ ಸಾಹಿತ್ಯೇತರ ಅಧ್ಯಯನಗಳು ತೀವ್ರಗೊಂಡಾಗ ಜಾನಪದವನ್ನು ಹೊಸ ರೀತಿಯಿಂದ ಕಸಿಮಾಡಲು ಸಾಧ್ಯವಾಗುತ್ತದೆ.

ಜಲ ಬದುಕಿಗೆ ಜೀವದಷ್ಟೇ ಮುಖ್ಯವಾಗಿದೆ. ಹೀಗಾಗಿ ಜನಪದರು ಜಲವನ್ನು ಜೀವಜಲವೆಂದು ಕರೆದಿದ್ದಾರೆ. ಪಂಚಭೂತಗಳಲ್ಲಿ ಜಲಕ್ಕೆ ಮಹತ್ವದ ಸ್ಥಾನವಿದೆ. ಜಲದಲ್ಲಿ ಎಲ್ಲಾ ದೇವತೆಗಳು ನೆಲೆಸಿವೆಯೆಂಬುದು ಜನಪದರ ನಂಬಿಕೆಯಾಗಿದೆ. ವ್ಯಕ್ತಿ ಹುಟ್ಟಿನಿಂದ ಸಾಯುವವರೆಗೂ ಪಡೆಯುವ ಸಂಸ್ಕಾರಗಳಲ್ಲಿ, ಆಚರಣೆಗಳಲ್ಲಿ ಜಲವೇ ಪ್ರಧಾನವಾಗಿದೆ. ಸಿದ್ಧಾರ್ಥ ರಾಜ್ಯವನ್ನು ತೊರೆದು ಕಾಡಿಗೆ ತಪಸ್ಸು ಮಾಡಲುಹೋದ. ಈತ ಕಾಡುಗೆ ಹೋಗಲು ಕಾರಣಗಳನ್ನು ಹೀಗೆ ಹೇಳುತ್ತಾರೆ. ಭಿಕ್ಷುಕನನ್ನು ಹೆಣವನ್ನು ಕಂಡ ಆ ಯುವಕ ಮನಸ್ಸು ಜಿಗುಪ್ಸೆಗೊಂಡಿತು. ಅದಕ್ಕಾಗಿ ಆತ ಕಾಡಿಗೆ ಹೋದನೆಂದು ಹೇಳುತ್ತಾರೆ. ಆದರೆ ಸಿದ್ಧಾರ್ಥ ಕಾಡಿಗೆ ಹೋದದ್ದು ಈ ಜಲದ ಜಗಳಕ್ಕಾಗಿ. ಇದನ್ನು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸ್ಪಷ್ಟವಾಗಿ ಹೇಳುತ್ತಾರೆ. ಈ ಕಾರಣವನ್ನಿಟ್ಟುಕೊಂಡೇ ಮನಜ ಅವರ “ಜಲ” ನಾಟಕ ಸೃಷ್ಟಿಯಾಗಿದೆ. ಇಂದಿಗೂ ಕೂಡ ಕಾವೇರಿ ದಕ್ಷಿಣದ ರಾಜ್ಯಗಳಿಗೆ ಹೋರಾಟದ ವಸ್ತುವಾಗಿದೆ. ಹೀಗೆ ಜೀವವನ್ನುಳಿಸುವ ಜಲವೇ ಜೀವನಾಶಕ್ಕಿಂದು ಕಾರಣವಾಗಿದೆ. ಕಲಕ್ಕೆ ಸಂಬಂಧಿಸಿದ ಜನಪದರ ಮಾತುಗಳನ್ನು ಕೇಳಿದ್ದರೆ ಜಲ ಸಂಘರ್ಷಗಳು ನಡೆಯುತ್ತಿರಲ್ಲಿಲ್ಲ. ಈ ದೇಶದ ನದಿಗಳೆಲ್ಲ ಜೀವನದಿಗಳು. ಆದರೆ ಅವೆಲ್ಲಾ ಇಂದು ಮಲಿನವಾಗಿಬಿಟ್ಟಿವೆ. ಇಂಡಸ್ಟ್ರಿ ಮಾಲಿಕರ ನಿಷ್ಕಾಳಜಿಯಿಂದ, ಮೂಡ ಭಕ್ತರ ಅಂಧಾಚರಣೆಗಳಿಂದ ನದಿಗಳು ಇಂದು ವಿಷವನ್ನು ಪಸರಿಸುವ ನೆಲೆಗಳಾಗಿವೆ. ಕುಂಭಮೇಳಗಳು ಸಾರುವ ಕೇಂದ್ರಗಳಾಗಿಬಿಟ್ಟಿವೆ.

ಆದರೆ ಜನಪದರ ಆಚರಣೆಗಳಲ್ಲಿ ನೀರು ಮಹತ್ವಸ್ಥಾನ ಪಡೆದಿದೆ. ಮನುಷ್ಯನ ಜನನದಿಂದ ಹಿಡಿದು ಮರಣದವರೆಗೂ ನೀರು ಮುಖ್ಯ ಪಾತ್ರ ವಹಿಸಿದೆ. ವಿವಾಹದ ಸಂದರ್ಭಗಳಲ್ಲಿ ನೀರು ಧಾರೆಯ ಆಚರಣೆಯಿದೆ. ಮದುವೆಯಾದ ನಂತರ ಐನೀರು ಮಾಡುವ ಸಂಪ್ರದಾಯವಿದೆ. ಜನಪದರಲ್ಲಿ ನೀರು ಸ್ತ್ರೀತನದ ಸಂಕೇತವಾಗಿ ಪವಿತ್ರತೆಗೆ ಕಾರಣವಾಗಿದೆ. ಎಲ್ಲಾ ಗ್ರಾಮದೇವತೆಗಳ ಅಧಿದೇವತೆ ಗಂಗೆಯೇ ಆಗಿದ್ದಾಳೆ. ಹೆಚ್ಚು ನದಿಗಳು ಸ್ತ್ರೀ ಹೆಸರಿನಿಂದಲೇ ಕರೆಯಲ್ಪಟ್ಟಿವೆ. ನದಿಯ ನೀರೇ ಪವಿತ್ರವೆಂದು, ನದಿಯ ತಾಣಗಳೇ ಪುಣ್ಯಕ್ಷೇತ್ರಳೆಂದು ನಂಬಿರುವ ಜನಪದರ ಮೂಲಕ ನೀರಿನ ಬಗೆಗೆ ತಿಳಿದುಕೊಳ್ಳುವುದು ಸಾಕಷ್ಟಿದೆ. ಇದನ್ನು ಜಲ ಜಾನಪದದಲ್ಲಿ ಕಾಣಬಹುದು.

ಪೃಥ್ವಿ, ಅಪ್, ತೇಜು, ವಾಯು, ಆಕಾಶ ಈ ಪಂಚಭೂತ ಪರಿಕಲ್ಪನೆಗಳು ಜನಪದರಲ್ಲಿ ಜೀವಸಂಬಂಧಿ ಆಯಾಮಗಳಾಗಿಬೆಳೆದು ನಿಂತಿವೆ. ಅವರಿಗೆ ಭೂಮಿಯು, ನೆಲದೇವತೆಯಾದಂತೆ, ನೀರು ಜಲದೇವತೆಯಾಗಿದೆ. ಅದೇ ರೀತಿ ಆಕಾಶ – ಅಗ್ನಿ – ಗಾಳಿ ಇವು ಕೂಡಾ ದೇವತೆಗಳ ರೂಪದಲ್ಲಿಯೇ ಕಾಣಿಸಿಕೊಂಡಿವೆ. ಅಗ್ನಿ ಮೇಲ್‌ಮೈ ಚಲನೆಯನ್ನೊಳಗೊಂಡಿದ್ದರೆ, ಜಲ ಕೆಳಮೈ ಚಲನೆಯನ್ನು ಹೊಂದಿದೆ. ಪುರೋಹಿತರು ಅಗ್ನಿ ಸಂಸ್ಕೃತಿಗೆ ಮಹತ್ವ ನೀಡಿದರೆ, ಜನಪದರು ಜಲ ಸಂಸ್ಕೃತಿಗೆ ಪ್ರಾಮುಖ್ಯತೆ ಕೊಡುತ್ತಾರೆ. ತಳಸಂಸ್ಕೃತಿಯ ಜನಸಮುದಾಯಕ್ಕೆ ನೀರು ದೈವವಾದರೆ, ವೈದಿಕ ಸಂಸ್ಕೃತಿಗೆ ಅಗ್ನಿ ದೈವವಾಗಿದೆ. ಸಂಸ್ಕೃತಿಯಿಂದ ಸಂಸ್ಕೃತಿಗೆ, ಜನಾಂಗದಿಂದ ಜನಾಂಗಕ್ಕೆ ಪಂಚಭೂತ ಪರಿಕಲ್ಪನೆಗಳ ಅರ್ಥವ್ಯಾಪ್ತಿ ಬದಲಾಗುತ್ತಾ ಹೋಗುತ್ತದೆ. ನವವಸಾಹತುಶಾಹಿಯ ಅಕ್ರಮಣದ ಈ ದಿನಗಳಲ್ಲಿ ಪಂಚಭೂತಗಳು ವ್ಯಾಪಾರ ಕೇಂದ್ರಗಳಾಗಿವೆ. ಜನಪದರಲ್ಲಿ ದೈವಗಳಾಗಿ ಪೂಜೆಗೊಳ್ಳುತ್ತಿದ್ದ ಇವು ಇಂದು ಮಾರಾಟದ ಸರಕಾಗಿ ಬಿಟ್ಟಿವೆ. ದೈವ ಸಂಸ್ಕೃತಿಯ ಸ್ಥಾನದಲ್ಲಿ ಸರಕು ಸಂಸ್ಕೃತಿ ಕಾಲಿಟ್ಟಿದೆ. ಪಂಚಭೂತಗಳ ಜತೆಗೆ ಇಂದು ಮನುಷ್ಯನೂ ಒಂದು ಸರಕಾಗಿ ಬಿಟ್ಟಿದ್ದಾನೆ. ಭೂಮಿ ಗಣಿಗಳ್ಳರ ಪಾಲಾದರೆ ಆಕಾಶ ಅಂತರಿಕ್ಷ ವ್ಯಾಪಾರಿಗಳ ಪಾಲಾಗಿದೆ. ಜಲ ಬಿಸಿಲೆರಿ ಬಾಟಲಿಗಳನ್ನು ಮಾರುವ ಉದ್ಯಮಿಗಳ ಕೈವಶವಾದರೆ, ಗಾಳಿ ಇಲ್ಲಿಯ ಇಂಡಸ್ಟ್ರಿಗಳಿಂದ ಕಲುಷಿತವಾಗಿದೆ. ಕಟ್ಟಿಗೆಯ ಮೂಲಕ ಕೆಂಡವಾಗಿ ಕಾಣಿಸಿಕೊಳ್ಳುತ್ತಿದ್ದ ಅಗ್ನಿ, ಇಂದು ಗ್ಯಾಸ್ ಮೂಲಕ ದ್ರವರೂಪ ತಾಳಿ ವ್ಯಾಪಾರದ ಪೈಪೋಟಿಯನ್ನುಂಟು ಮಾಡಿದೆ. ಸ್ವಾರ್ಥಿಗಳಿಂದ, ಕೊಳ್ಳೆಹೊಡೆಯಯವವರಿಂದ, ವ್ಯಾಪಾರ ದಾಹದಿಂದ ಪಂಚಭೂತಗಳೆಲ್ಲ ಇಂದು ಶಾಪವಾಗಿ ಪರಿಣಮಿಸಿವೆ. ಜಗಳಕ್ಕೆ ನೆಲ ಕಾರಣವಾದರೆ, ಮಲಿನತೆಗೆ ನೀರು ಕಾರಣವಾಗಿದೆ. ರೋಗ ಹರಡುವಿಕೆಗೆ ವಾಯು ಕಾರಣವಾದರೆ, ಸಮುದಾಯದ ಬದುಕೇ ಅಗ್ನಿಕುಂಡವಾಗಿದೆ. ಇಂದು ನೇತ್ಯಾತ್ಮಕವಾಗಿರುವ ಪಂಚಭೂತಗಳನ್ನು ಇತ್ಯಾತ್ಮಕವಾಗಿಸಬೇಕಾರೆ ಜಾನಪದದಿಂದ ಮಾತ್ರ ಸಾಧ್ಯವಿದೆ.

ಜಲಜಾನಪದ – ಸಸ್ಯಜಾನಪದ – ಪ್ರಾಣಿ ಜಾನಪದಗಳಿಗೆ ಅವಿನಾಭಾವ ಸಂಬಂಧವಿದೆ. ಸಸ್ಯ ಮತ್ತು ಮಾನವನ ಸಂಬಂಧ ತುಂಬ ಪುರಾತನವಾದುದು. ಅದೇ ರೀತಿ ಪ್ರಾಣಿ – ಪಕ್ಷಿಗಳೂ ಮನುಷ್ಯನ ನಿಕಟವರ್ತಿಗಳಾಗಿವೆ. ಜನಪದರಲ್ಲಿ ಸಸ್ಯವು ಔಷದಿಯಾಗಿರುವುದರ ಜತೆಗೆ ಆರಾಧನೆಯ ವಸ್ತುವೂ ಆಗಿದೆ. ಆಲದ ಮರ – ಅರಳಿ ಮರ – ಬಸರಿ ಮರ ಈ ಮೂರು ಮರಗಳು ಒಂದೇ ಸಸ್ಯವರ್ಗಕ್ಕೆ ಸೇರಿವೆ. ಜನಪದರು ಈ ಮರಗಳನ್ನು ಭಕ್ತಿಯಿಂದ ಪೂಜಿಸುತ್ತಾರೆ. ಬಿಲ್ವ – ತುಳಸಿ ಪವಿತ್ರ ಸಸ್ಯಗಳಾಗಿವೆ. ಬೇವು – ಎಕ್ಕೆಯ ಗಿಡಗಳೂ ಆರಾಧನೆಯ ವಸ್ತುಗಳಾಗಿವೆ. ಸಸ್ಯವಿವಾಹಗಳ ಆಚರಣೆಯನ್ನು ಜನಪದರಲ್ಲಿ ಕಾಣಬಹುದಾಗಿದೆ. ಅಶ್ವತ್ಥ ಮರವನ್ನು ಗಂಡಸನ್ನಾಗಿ ಬೇವಿನ ಮರವನ್ನು ಹೆಂಗಸನ್ನಾಗಿ ಕಂಡು ಎರಡೂ ಮರಗಳಿಗೆ ಮದುವೆ ಮಾಡುತ್ತಾರೆ. ವಿಷ್ಣುವೇ ಅಶ್ವತ್ಥ ಮರವಾಗಿ ರೂಪುಗೊಂಡನೆಂಬ ಪೌರಣಿಕ ನಂಬಿಕೆಯಿದೆ. ಸಸ್ಯಗಳಿಗೆ ಸಂಬಂದಿಸಿದಂತೆ ಜನಪದರಲ್ಲಿ ಅನೇಕ ನಂಬಿಕೆಗಳಿವೆ. ಬನ್ನಿ, ಆಲ, ಅರಳಿ, ಅಶ್ವತ್ಥ ಮರಗಳಿಗೆ ಪ್ರದಕ್ಷಿಣೆ ಮಾಡಿದರೆ ಮಹಿಳೆಯರಿಗೆ ಮಕ್ಕಳಾಗುತ್ತವೆ ಎಂಬ ನಂಬಿಕೆಯಿದೆ.

ಜನಪದ ವೈದ್ಯಕ್ಕೆ ಸಸ್ಯರಾಶಿಯೇ ಪ್ರಧಾನ ಕಾರಣವಾಗಿದೆ. ನೆಗಡಿಗೆ – ಹಾಲಿಯಕುಡಿ, ಮೈಕೈ ನೋವಿಗೆ – ಗವಲೆ ಹುಲ್ಲಿನರಸ, ಕೆಮ್ಮಿಗೆ – ಬೆಳ್ಳುಳ್ಳಿ, ಪಿತ್ತಕ್ಕೆ – ಅಜಿವಾನ, ಗಂಟಲು ಕೆರತಕ್ಕೆ – ತುಳಸಿ, ಮೂತ್ರದುರಿಗೆ – ನೆಗಿನ ತಪ್ಪಲದಿಂದ ಕುದಿಸಿದ ನೀರು, ಕಾಮಣೆಗೆ – ಔಡಲ, ಕಣ್ಣುಬೇನೆಗೆ – ಬಿಳಿಕಣೆಗಿಲರಸ, ಸಕ್ಕರೆ ರೋಗಕ್ಕೆ – ಹಾಗಲಕಾಯಿ ರಸ , ಗಾಯಕ್ಕೆ – ಗೆಜ್ಜೆಟಿಕ್ಕಿ ತೊಪ್ಪಲ, ಉಗುರುಸುತ್ತಿಗೆ – ಬಿಳಿಗಣಜೊಲ ತೊಪ್ಪಲ, ಕುರುವಾದರೆ – ಸುಟ್ಟ ಉಳ್ಳಾಗಡ್ಡೆ, ಕೊಳೆತ ಹಲ್ಲು ಕಿತ್ತಲು – ಎಕ್ಕೆಯ ಹಾಲು, ಹುಣ್ಣಿಗೆ – ಹೊಸಲಕ್ಕೆ ತಪ್ಪಲು ರಸ, ಹೊಟ್ಟೆ ಕಡಿದರೆ – ಅಜಿವಾನದೆಲೆ, ಇರುಳಗಣ್ಣಿಗೆ – ಚವಳಿ ತಪ್ಪಲು, ಸರ್ವರೋಗ ಪರಿಹಾರಕ್ಕೆ – ನುಗ್ಗಿ ಗಿಡ ಹೀಗೆ ಅನೇಕ ಸಸ್ಯಗಳು ಜನಪದರಿಗೆ ಔಷಧಿ ರೂಪಗಳಲ್ಲಿ ಕಾಣಿಸಿಕೊಂಡಿವೆ. ಸಸ್ಯ ಜಾನಪದದಲ್ಲಿ ಈ ಎಲ್ಲ ವಿವರಗಳನ್ನು ಕಾಣಬಹುದಾಗಿದೆ.

ಸಸ್ಯದಂತೆ ಪ್ರಾಣಿಯೂ ಜನಪದರ ಜೀವನದ ಸಂಗಾತಿಯಾಗಿದೆ. ನಂಬಿಕೆಗೆ ಹೆಸರಾದ ನಾಯಿ, ಸಹನಾಶೀಲ ಗುಣದ ಕತ್ತೆ, ದಿನವೆಲ್ಲ ದುಡಿಯುವ ಎತ್ತು, ಹಾಲುಕೊಡುವ ಎಮ್ಮೆ – ಆಕಳು ಜನಪದರ ಜೀವ ಸಂಗಾತಿಗಳಾಗಿವೆ. ಅನೇಕ ಪ್ರಾಣಿಗಳು ಇಲ್ಲಿ ದೇವತೆಗಳ ರೂಪ ಪಡೆದುಕೊಂಡಿವೆ. ಎತ್ತು – ನಂದಿ ಅವತಾರದಲ್ಲಿ ಕಾಣಿಸಿದರೆ, ನಾಯಿ – ಬೀರಲಿಂಗನ ಅವತಾರದಲ್ಲಿದೆ. ಹಂದಿ – ವರಾಹವತಾರದಲ್ಲಿ ಕಾಣಿಸಿದರೆ, ಹಾವು – ನಾಗದೇವತೆಯಾಗಿದೆ. ಕುದುರೆ ಶಕ್ತಿ ಸಂಕೇತವಾದರೆ, ಗೋವು ಪ್ರಾಮಾಣಿಕತೆಯ ಪ್ರತೀಕವಾಗಿದೆ. ಜನಪದರ ಮೂಲಕ ಬೆಳೆದು ನಿಂತ ಪುಣ್ಯಕೋಟಿಯ ಪ್ರಸಂಗ ಮಹತ್ವದ ಕಥಾನಕವಗಿದೆ. ಹಿಂಸೆಯ ರೂಪವಾಗಿದ್ದ ಹುಲಿ, ಅಹಿಂಸೆಯ ರೂಪವಾಗಿದ್ದ ಪುಣ್ಯಕೋಟಿಯ ಅಂತಃಕರಣದೆದುರು ಸೋತು ಬಿಡುತ್ತದೆ. ಹುಲಿಯನ್ನು – ಆಕಳನ್ನಾಗಿಸುವ, ಹಿಂಸೆಯನ್ನು – ಅಹಿಂಸೆಯಾಗಿಸುವ, ಕ್ರೌರ್ಯವನ್ನು ಮಾನವೀಯಗೊಳಿಸುವ ಉದಾತ್ತ ಸಂದೇಶ ಪುಣ್ಯಕೋಟಿ ಸಂಕಥನದಲ್ಲಿದೆ. ಪವಿತ್ರ ಪ್ರಾಣಿಯೆನಿಸಿದ ಕೋತಿ ಅಂಜನೇಯನ ಪ್ರತಿಕವಾಗೆ ಜನಪದರಲ್ಲಿ ಪೂಜೆಗೊಳ್ಳುತ್ತದೆ. “ಆನೆ ಬದುಕಿದ್ದರೂ ಬೆಲೆ ಸತ್ತರೂ ಬೆಲೆ” ಎಂಬ ಗಾದೆಮಾತಿದೆ. ಸಣ್ಣದಾದ ಅಳಿಲು, ಸಮುದ್ರಕ್ಕೆ ಸೇತುವೆ ಕಟ್ಟುವಾಗ ರಾಮನಿಗೆ ಸಹಯ ಮಾಡಿತೆಂಬ ಪ್ರತೀತಿಯಿದೆ. ವಿಷ್ಣು ಮತ್ಸ್ಯ, ಕೂರ್ಮ, ವರಾಹ ಅವತಾರಗಳನ್ನೆತ್ತಿದನೆಂಬ ಕಥನಗಳಿವೆ. ಐತಿಹ್ಯಗಳಲ್ಲಿ ಪ್ರಾಣಿ, ಸಂಕುಲಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳಿವೆ.

ಜನಪದ ವೈದ್ಯದಲ್ಲಿ ಸಸ್ಯ ಔಷಧಿಗಳಿರುವಂತೆ, ಪ್ರಾಣಿ ಔಷಧಿಗಳು ಇವೆ. ನವಿಲುಗರಿ – ಕೆಮ್ಮಿಗೆ ಔಷಧಿಯಾದರೆ, ಉಡದ ತುಪ್ಪ – ಸೊಂಟದ ನೋವು ನಿವಾರಣೆಗೆ ಔಷಧಿಯಾಗಿದೆ. ಪಾರಿವಾಳದ ಮಾಂಸ – ಪಾರ್ಶ್ವವಾಯುಗೆ ಮದ್ದಾದರೆ, ಕೋಗಿಲೆ ಮಾಂಸ – ಕ್ಷಯರೋಗಿಗಳ ಔಷಧಿಯಾಗಿದೆ. ಮಕ್ಕಳ ಮಂದಬುದ್ಧಿ ನಿವಾರಣೆಗೆ ಮೀನಿನೆಣ್ಣೆ ಮುಖ್ಯ ಪಾತ್ರವಹಿಸಿದೆ. ಗೋವಿನ ಹಾಲು ಗೋಮೂತ್ರ ಸರ್ವರೋಗಗಳ ನಿವಾರಣೆಗೆ ಸಿದ್ದೌಷಧವಾಗಿವೆ. ಪ್ರಾಣಿ ಜಾನಪದದಲ್ಲಿ ಅನೇಕ ಕುತೂಹಲಕಾರಿ ಸಂಗತಿಗಳಿವೆ.

ಪರಿಸರ ಸಂಬಂಧಿ ಜಾನಪದದಲ್ಲಿ ಖನಿಜ ಕೂಡ ಮಹತ್ವದ ಪಾತ್ರವಹಿಸಿದೆ. ಬೆಳ್ಳಿ – ಬಂಗಾರ – ತಾಮ್ರ – ಹಿತ್ತಾಳೆ – ಕಂಚು – ಕಬ್ಬಿಣ – ಸೀಸ – ಸತು – ಮ್ಯಾಂಗನೀಸ್ ಮುಂತಾದವುಗಳನ್ನು ಲೋಹ ಖನಿಜಗಳೆಂದು ಕರೆಯುತ್ತಾರೆ. ಸುಣ್ಣದ ಕಲ್ಲು, ರಂಗೋಲಿಕಲ್ಲು, ಬಳಪದಕಲ್ಲು, ಜೇಡಿಮಣ್ಣು ಮುಂತಾದವುಗಳನ್ನು ಅಲೋಹ ಖನಿಜಗಳೆಂದು ಕರೆಯುತ್ತಾರೆ

ಖನಿಜಕ್ಕೆ ಸಂಬಂಧಿಸಿದಂತೆ ಜನಪದರಲ್ಲಿ ಅನೇಕ ನಂಬಿಕೆಗಳಿರುವಂತೆ, ಮೂಢನಂಬಿಕೆಗಳೂ ಇವೆ. ಹಾವು ಕಡಿದರೆ ಪಂಚಲೋಹದ ತಗಡಿನಲ್ಲಿ ಯಂತ್ರ ಬರೆಸಿ ಕಟ್ಟುತ್ತಾರೆ. ತಾಮ್ರದ ಕೊಡದಲ್ಲಿ ನಿರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೆಂದು ಭಾವಿಸುತ್ತಾರೆ. ಲೋಹಗಳಿಂದ ಮಾಡಿದ ಉಂಗುರಗಳೆಲ್ಲ ದೃಷ್ಟಿ ಪರಿಹಾರಕ್ಕೆ, ಶನಿಕಾಟದ ವಿಮುಕ್ತಿಗೆ ಕಾರಣವಾಗಿವೆ. ಮುರುವನ್ನು ಹಾಕುವುದರಿಂದ ಕೂಸಿಗೆ ಮುಟ್ಟುದೋಷವಾಗುವುದಿಲ್ಲವೆಂಬ ನಂಬಿಕೆಯಿದೆ. ವಜ್ರದುಂಗುರ ಧರಿಸಿದರೆ, ವಿಪತ್ತು ಬರುವುದಿಲ್ಲವೆಂಬ ನಂಬಿಕೆ ಗಾಢವಾಗಿದೆ. ಬೆಣಚುಕಲ್ಲುಗಳಿಗೆ ನಪುಂಸಕತ್ವವನ್ನು ಹೋಗಲಾಡಿಸವ ಶಕ್ತಿಯಿದೆಯೆಂದು ಕನಪದರು ನಂಬಿದ್ದಾರೆ. ಜನಪದರ ನಿತ್ಯ ಜೀವನದಲ್ಲಿ ಕಬ್ಬಿಣ ಹೆಚ್ಚು ಬಳಕೆಯಾಗುತ್ತದೆ. ಆದರೆ ಧಾರ್ಮಿಕಾಚರಣೆಗಳಲ್ಲಿ ಈ ಲೋಹ ನಿಷಿದ್ಧವಾಗಿದೆ. ಚಿನ್ನವನ್ನು ಲಕ್ಷ್ಮೀಯೆಂದು ಭಾವಿಸಲಾಗಿದೆ. ಬೆಳ್ಳಿ ಶುದ್ಧತೆಯ ಸಂಕೇತವಾಗಿದೆ.

ಖನಿಜ ಜಾನಪದದಲ್ಲಿ ಇದಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಪ್ರಸ್ತಾಪವಾಗಿವೆ. ಭೂಮಿಯ ನಿಕ್ಷೇಪಗಳು ಆಯಾದೇಶಗಳ ಮೂಲ ಸಂಪತ್ತಾಗಿವೆ. ಭೂಮಿಯಲ್ಲಿ ದೊರೆಯುವ ಖನಿಜ ಕೂಡಾ ಸಂಪತ್ತು. ಚಿನ್ನ, ಕಲ್ಲಿದ್ದಲು ಗಣಿಗಳಿಗಿಂತ ಗ್ರಾನೈಟ್ ಗಣಿ, ಮ್ಯಾಂಗನೀಸ್ ಗಣಿಧಣಿಗಳು ಇಂದು ಸರಕಾರವನ್ಮು ನಿಯಂತ್ರಿಸುತ್ತಲಿದ್ದಾರೆ. ಸಮುದಾಯದ ಸಂಪತ್ತಾಗಿದ್ದ ಖನಿಜ , ಇಂದು ಕೆಲವು ಸ್ವಾರ್ಥಿಗಳಿಂದ ಲೂಟಿಯಾಗತೊಡಗಿದೆ. ಈ ಸಂದರ್ಭದಲ್ಲಿ ಖನಿಜ ಜಾನಪದದ ಪರಿಕಲ್ಪನೆಗಳು ತುಂಬ ಪ್ರಸ್ತುತವೆನಿಸುತ್ತವೆ.