ಜನಪದರು ದೈವಭಕ್ತರು, ಅವರು ಬಹು ದೇವೋಪಾಸಕರು. ಪ್ರಕೃತಿಯಲ್ಲಿರುವ ಒಳ್ಳೆಯದೆಲ್ಲವನ್ನು ಅವರು ದೇವರ ರೂಪದಲ್ಲಿ ಕಾಣುತ್ತಾರೆ. ಭಕ್ತಿ ಆಧ್ಯಾತ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅವರದೇ ಆದ ವಿಶಿಷ್ಟ ಆಶಯಗಳಿವೆ. ಹಬ್ಬ – ಜಾತ್ರೆಗಳಿಗೆ ಸಂಬಂಧಿಸಿದಂತೆ ವೈವಿಧ್ಯಮಯ ಆಚರಣೆಗಳಿವೆ. ದೆವ್ವವನ್ನೂ ದೈವರೂಪದಲ್ಲಿ ಕಾಣುವ ಜನಪದರು ಮಹತ್ವದ ಅನುಭಾವಿಗಳಾಗಿದ್ದಾರೆ. ದೈವ ಜಾನಪದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ವಿಷಯಗಳು ಚರ್ಚೆಯಾಗಿವೆ. ಡಾ. ಎಂ. ಚಿದಾನಂದ ಮೂರ್ತಿಯವರು ಗ್ರಾಮದೇವತೆ – ಗ್ರಾಮ್ಯದೇವತೆಗಳನ್ನು ಕುರಿತು ವರ್ಗೀಕರಣ ಮಾಡಿ ದೈವ ಜಾನಪದದ ಮೂಲ ಪರಿಕಲ್ಪನೆಯನ್ನು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ. ಅದೇ ರೀತಿ ಡಾ. ಸಿದ್ಧಲಿಂಗಯ್ಯ ಹಾಗೂ ಡಾ. ಚನ್ನಣ್ಣ ವಾಲೀಕಾರ ಇವರು ಗ್ರಾಮದೇವತೆಗಳನ್ನು ಕುರಿತು ಪಿಎಚ್. ಡಿ ಮಹಾಪ್ರಬಂಧ ಪ್ರಕಟಿಸಿದ್ದಾರೆ. “ಜನಪದ ದೇವತೆಗಳು ಶಿಷ್ಟದೇವತೆಗಳು” ಎಂಬ ನನ್ನ ಚಿಕ್ಕ ಕೃತಿಯನ್ನು ಗುಂಡಿ ಚಂದ್ರಶೇಖರ ಐತಾಳ ಸ್ಮಾರಕ ಸಮಿತಿ ಪ್ರಕಟಿಸಿದೆ. ಟಿ. ಲಿಂಗಯ್ಯನವರ “ಕರ್ನಾಟಕದ ಗ್ರಾಮದೇವತೆಗಳು” ಹಾಗೂ ಪ್ರೊ. ಹಿ. ಚಿ. ಬೋರಲಿಂಗಯ್ಯನವರ “ ಉಜ್ಜನಿ ಚೌಡಮ್ಮ” ಕೃತಿಗಳನ್ನು ಇಲ್ಲಿ ಗಮನಿಸಬಹುದಾಗಿದೆ. ಹೀಗೆ ದೈವ ಜಾನಪದವನ್ನು ಕುರಿತು ಅನೇಕ ಕೃತಿಗಳು ಪ್ರಕಟವಾಗಿವೆ.

ಯಾರು ಕೈಬಿಟ್ಟರೂ ದೈವ ತನ್ನ ಕೈ ಬಿಡಲಾರದೆಂಬ ನಂಬಿಕೆ ಜನಪದರದು. “ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ”ವೆಂಬ ಗಾದೆಮಾತು ಇದನ್ನೇ ಹೇಳುತ್ತದೆ. ಎದ್ದ ಕೂಡಲೇ ಭೂದೇವಿಯನ್ನು ನೆನೆಯುವ ಜನಪದರು ಕೃಷಿ ಕಾಯಕಗಳಲ್ಲಿಯೇ ದೇವರನ್ನು ಕಂಡಿದ್ದಾರೆ. ಒಳ್ಳೆಯ ವ್ಯಕ್ತಿಗಳ ಸಾಧನೆಯಲ್ಲಿಯೇ ದೈವಸ್ವರೂಪವನ್ನೂ ಕಂಡಿದ್ದಾರೆ. ಪ್ರಕೃತಿಯ ಪ್ರತಿಯೊಂದು ರೂಪವೂ ಅವರಿಗೆ ದೈವ ಸ್ವರೂಪವಾಗಿ ಕಂಡಿದೆ. ದೇವರ ಮೇಲಿನ ಅವರ ನಿಷ್ಟೆ ಅದ್ಭುತವಾದುದು. ಅನೇಕ ಸಲ ಹಿಂಸಾಭಕ್ತಿಗೂ ಅದು ಕಾರಣವಾಗಿದೆ. “ಕರುಣೆಬಂದರೆ ಕಾಯೊ, ಮರಣ ಬಂದರೆ ಒಯ್ಯೊ” ಎಂಬ ಅವರ ಈ ನುಡಿಯಲ್ಲಿ ಬದುಕಿನ ನಿಷ್ಠುರತೆಯನ್ನು ಕಾಣಬಹುದಾಗಿದೆ.

ಜನಪದರ ದೃಷ್ಟಿಯಲ್ಲಿ ಭಕ್ತಿಯೆಂದರೆ ಪ್ರೀತಿ. ಅವರು ಪ್ರಕೃತಿಯಲ್ಲಿರುವ ಗಿಡ ಮರ – ಬಳ್ಳಿ – ಫಲ – ಪುಷ್ಪಗಳನ್ನೆಲ್ಲ ದೈವ ರೂಪದಲ್ಲಿಯೇ ಕಾಣುತ್ತಾರೆ. ಪ್ರಾಣಿಗಳಿಗೂ ಒಳ್ಳೆಯ ಉಪಕಾರಿ ಮನುಷ್ಯರನ್ನೂ ಅವರು ದೇವರ ರೂಪದಲ್ಲಿ ಕಾಣುತ್ತಾರೆ. ಹೀಗಾಗಿ ಅವರ ದೈವದ ಪರಿಕಲ್ಪನೆ ತುಂಬ ವಿಸ್ತಾರವಾದುದಾಗಿದೆ.

ಜನಪದ ದೈವಗಳಲ್ಲಿ ಹೆಣ್ಣುದೈವಗಳೇ ಪ್ರಧಾನವಾಗಿವೆ. ಪುರಾಣಗಳಲ್ಲಿ ಬರುವ ಸಪ್ತಮಾತ್ರಿಕೆಗಳು, ಜನಪದರಲ್ಲಿ ಗ್ರಾಮದೇವತೆಗಳಾಗಿ ಬೆಳೆದು ನಿಂತಿವೆ. ಸವದತ್ತಿ ಎಲ್ಲಮ್ಮ, ಕೊಲ್ಲೂರು ಮೂಕಮ್ಮ, ಶಿರ್ಸಿಯ ಮಾರೆಮ್ಮ, ಮುನಿರಾಬಾದ ಹುಲಿಗೆಮ್ಮ, ಬಳ್ಳಾರಿ ದ್ಯಾವಮ್ಮ, ಬಾದಾಮಿಯ ಬನಶಂಕರಿ, ಮೈಸೂರಿನ ಚಾಮುಂಡಿ ಇವೆಲ್ಲ ಪ್ರಮುಖ ಗ್ರಾಮದೇವತೆಗಳಾಗಿವೆ. ಹನುಮಂತ – ಮೈಲಾರಲಿಂಗ, ಭರಮಪ್ಪ, ಜೋಕುಮಾರ, ಮುತ್ತಪ್ಪ ಈ ಮೊದಲಾದವುಗಳು ಜನಪದರ ಗಂಡುದೇವತೆಗಳಾಗಿವೆ.

ದ್ಯೆವ ಜಾನಪದದ ಒಂದು ವಿಶಿಷ್ಟ ಸಂಗತಿಯೆಂದರೆ ಇಲ್ಲಿ ಸಾಮಾನ್ಯವಾದದ್ದು ವಿಶೇಷವಾಗಿ ಕಾಣಿಸುತ್ತದೆ. ನರ – ಹರನಾಗುವ, ಜೀವ – ದೇವನಾಗುವ, ವ್ಯಕ್ತಿ – ಶಕ್ತಿಯಾಗುವ ಸಾಧ್ಯತೆಗಳು ಇಲ್ಲಿವೆ. ಸಾಮಾನ್ಯವಾದ ಮಣ್ಣು, ಜನಪದರಲ್ಲಿ ಮೂರ್ತ ಸ್ವರೂಪ ಪಡೆದು ದೇವತೆಯಾಗುತ್ತದೆ. ಸಾಧಾರಣವಾದ ಕಲ್ಲು ಶಿಲ್ಪಮೂರ್ತಿಯಾಗಿ, ಗ್ರಾಮದೇವತೆಯಾಗಿ ಪೂಜೆಗೊಳ್ಳುತ್ತದೆ. ಸಾಮಾನ್ಯವಾದ ಸ್ಥಳವೊಂದು ದೈವ ಪ್ರತಿಷ್ಠಪನೆಯಿಂದ, ಪವಿತ್ರ ಸ್ಥಳವಾಗಿ ಪರಿವರ್ತನೆಗೊಂಡು ಪುಣ್ಯಕ್ಷೇತ್ರವಾಗುತ್ತದೆ. ತಿರಸ್ಕೃತವಾದದ್ದು, ಜನಪದರಲ್ಲಿ ಪುರಸ್ಕೃತವಾಗುತ್ತದೆ. ಕುಂಟ – ಕುರುಡ – ಕಿವುಡ ಈ ಮೊದಲಾದ ಅಂಗವಿಕಲ ವ್ಯಕ್ತಿಗಳು ತಮ್ಮ ಸಾಧನೆಯಿಂದ ವ್ಯಕ್ತಿ ದೈವಗಳಾಗಿ ಜನಮನದಲ್ಲಿ ಮನ್ನಣೆ ಪಡೆದಿವೆ. ದುಡಿವ ಜನ – ಪ್ರಾಮಾಣಿಕಜನ – ನಿಷ್ಠಾವಂತ ಜನ ಸತ್ತ ಮೇಲೆ ಸಮಾಧಿಯ ಮೂಲಕ ಪೊಜೆಗೊಂಡು ಗ್ರಾಮದೈವಗಳಾಗಿವೆ. ಮಹಿಳೆಯರ ಸತ್ವ – ಸಾಧ್ಯತೆಗಳೆಂತಹವೆಂಬುದನ್ನು ಜನಪದ ಸ್ತ್ರೀ ದೇವತೆಗಳು ತೋರಿಸಿಕೊಟ್ಟಿವೆ. ಇದು ದೈವ ಜಾನಪದದ ಬಹುದೊಡ್ಡ ಕೊಡುಗೆಯಾಗಿದೆ.

ಜನಪದ ದೈವ ಕಲ್ಪನೆಯೇ ತುಂಬ ಜನಪರವಾದುದಾಗಿದೆ – ಜೀವಪರವಾದುದಾಗಿದೆ. ಶಿಷ್ಟ ಸಂಸ್ಕೃತಿಯಿಂದ ತಿರಸ್ಕರಿಸಲ್ಪಟ್ಟ ದಲಿತರು – ಮಹಿಳೆಯರು – ಅಂಗವಿಕಲರು – ಶೂದ್ರರು ಇಲ್ಲಿ ತಮ್ಮ ಸಾಧನೆಯಿಂದ – ಪ್ರಾಮಾಣಿಕತೆಯಿಂದ – ತ್ಯಾಗ ಸಂಯಮದಿಂದ ದ್ಯೆವರೂಪ ಪಡೆದು ಪೂಜೆಗೊಳ್ಳುತ್ತಾರೆ. ಇದು ನಿಜಕ್ಕೂ ಕ್ರಾಂತ್ರಿಕಾರ ವಿಚಾರವೇ ಆಗಿದೆ. ಶತಶತಮಾನಗಳಿಂದ ಮಹಿಳೆಯರನ್ನು ದೇವರು – ಧರ್ಮ – ಆಧ್ಯಾತ್ಮ ಕ್ಷೇತ್ರದಿಂದ ದೂರವಿಡಲಾಗಿತ್ತು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ, ಲಿಂಗ ರಾಜಕಾರಣವು ವ್ಯವಸ್ಥಿತವಾಗಿ ನಡೆದಿತ್ತು. ಇದನ್ನು ಮೊದಲ ಬಾರಿಗೆ ಮುರಿದು ಹಾಕಿದ ಜನಪದರು ಗ್ರಾಮದೇವತೆಯ ಪರಿಕಲ್ಪನೆಯ ಮೂಲಕ ಮಹಿಳಾ ಸಾಧ್ಯತೆಗಳನ್ನು ವಿಸ್ತರಿಸಿದರು. ದಿನನಿತ್ಯದ ಬದುಕಿನಲ್ಲಿ ಹಣ್ಣನ್ನು ಶೊಷಿಸುವ ವ್ಯವಸ್ಥೆಗೆ, ಹೆಣ್ಣೇ ನಿಜವಾದ ಶಕ್ತಿದೇವತೆಯೆಂದು ತೋರಿಸಿಕೊಟ್ಟರು.

ಜನಪದರು ದೆವ್ವಗಳಲ್ಲಿಯೂ ಕೂಡ ದ್ಯೆವಭಾವವನ್ನು ಕಂಡರು. ದೆವ್ವಗಳಲ್ಲಿ ಸಾತ್ವಿಕ ದೆವ್ವಗಳಿರುವಂತೆ ದುಷ್ಟ ದೆವ್ವಗಳೂ ಇವೆ. ಸಾತ್ವಿಕ ದೆವ್ವಗಳು ಸಮುದಾಯಕ್ಕೆ ಸಹಾಯ ಮಾಡುತ್ತವೆ. ಮಲೆನಾಡಿ ತೋಟಗಳಲ್ಲಿರುವ ದೆವ್ವಗಳು, ಚೌಡಿ – ಭೂತ ಹಾಗು ಕುಟುಂಬ ಸಂಬಂಧಿ ದೆವ್ವಗಳು ಹಳ್ಳಿಗರ ಪ್ರಾಣಿ – ಫಸಲುಗಳನ್ನು ರಕ್ಷಿಸುವ ದೈವಗಳಾಗಿವೆ. ಈ ದೆವ್ವಗಳು ಸ್ಥಾವರವಾಗಿರಲು ಒಪ್ಪುವುದಿಲ್ಲ. ಅವು ಯಾವಾಗಲೂ ಜಂಗಮವಾಗಿರುತ್ತವೆ. ಅವು ಖಾಯಂ ಪೀಠಗಳಾಗಿ ನೆಲೆನಿಲ್ಲದೆ, ಸಂಚಾರಿ ಪೀಠಗಳಂತೆ ಚಲನಶೀಲವಾಗಿರುತ್ತವೆ. ದೆವ್ವ ಇದ್ದಲ್ಲಿ ಮಾಟ – ಮಂತ್ರ ಇದ್ದೇ ಇರುತ್ತದೆ. ದುಷ್ಟ ದೆವ್ವಗಳನ್ನು ಸದೆ ಬಡಿಯಲು ಜನಪದರು ತಮ್ಮದೇ ಆದ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸಿರಿಪಾಡ್ದನಗಳಿರುವಂತೆ, ನಾಗಪೂಜೆಯ ಕಾಡ್ಯನಾಟಕಗಳೂ ಇವೆ. ಕರಾವಳಿಯಲ್ಲಿ ಮೇರ್ ಜನಾಂಗದವರು ಕಾಳಿಂಗನ ಪೂಜೆಯನ್ನು ಕಾಡ್ಯನಾಟಕವೆಂದು ಕರೆಯುತ್ತಾರೆ. ಕರಾವಳಿ ಪ್ರದೇಶದಲ್ಲಿ ವಿಶಿಷ್ಟ ದೈವಾರಾಧನೆಯಿದೆ. ಅದನ್ನು ಭೂತಾರಾಧನೆಯೆಂದು ಕರೆಯುತ್ತಾರೆ. ಭೂತ ಆಥವಾ ದೆವ್ವ – ದೈವವಾಗುವ ಪರಿಕಲ್ಪನೆಯೇ ಅದ್ಬುತವಾದುದು. ಅದು ನಮ್ಮ ಜನಪದರಿಂದ ಮಾತ್ರ ಸಾಧ್ಯವಾಗಿದೆ.

ಜನಪದರು ದೈವ ಕಲ್ಪನೆಯ ಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿ ಮೌಲ್ಯಾಧಾರಿತ ಜೀವನ ಕ್ರಮವನ್ನು ರೂಪಿಸುತ್ತಾರೆ. ಅವರ ದೈವದ ಪರಿಕಲ್ಪನೆ ತುಂಬ ಲೌಕಿಕವಾದುದಾಗಿದೆ. ಯಾವುದೋ ಪುರಾಣ ದೇವತೆಗಳಿಗಿಂತ, ವರ್ತಮಾನದ ಸಾಧಕರು ಅವರಿಗೆ ದೈವಸ್ವರೂಪವಾಗಿ ಕಾಣಿಸಿಕೊಳ್ಳುತ್ತಾರೆ. ಅವರಲ್ಲಿ ಭಕ್ತಿಯೆಂಬುದು ಚೋರುಂಬ ಲಾಭವಾಗಿರದೆ ಅಂತರಂಗದಿಂದ ಬಂದ ಅನನ್ಯ ಪ್ರೀತಿಯಾಗಿರುತ್ತಲಿದೆ. ಜೀವಸಂಕುಲದಲ್ಲಿ ಪಾಶ್ಚಾತ್ಯರು – ನಗರದವರು ಕೇವಲ ಮನುಷ್ಯನಿಗೆ ಮಾತ್ರ ಪ್ರಾಧಾನ್ಯತೆ ಕೊಡುತ್ತಾರೆ. ಇತರೆ ಜೀವಿಗಳಾಗಿರುವ ಪಶು – ಪಕ್ಷಿ – ಪ್ರಾಣಿ – ಸಸ್ಯಗಳನ್ನು ತಮ್ಮ ಸ್ವಾರ್ಥಕ್ಕಾಗಿ ನಾಶಪಡಿಸುತ್ತಾರೆ. ಇದು ಪಾಶ್ಚಾತ್ಯರ ಪ್ರಭಾವಕ್ಕೊಳಗಾದ ನವನಾಗರೀಕರ ಧೋರಣೆಯಾಗಿದೆ. ಜನಪದರು ಇಡೀ ಜೀವಸಂಕುಲವನ್ನೇ ದೈವದ ರೂಪದಲ್ಲಿ ಕಾಣುತ್ತಾರೆ. ವಿಶಾಲ ಮನಸ್ಸಿದ್ದವರಿಗೆ, ಅಂತಃಕರಣವುಳ್ಳರಿಗೆ, ತ್ಯಾಗಮನೋಭಾವದ ಮುಗ್ದರಿಗೆ ಮಾತ್ರ ಇದು ಸಾಧ್ಯವಾಗುತ್ತದೆ. ಆದುದರಿಂದ ಜನಪದರ ಭಕ್ತಿ ಕೇವಲ ಆಧ್ಯಾತ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಲೌಕಿಕಕ್ಕೂ ಸಂಬಂಧಿಸಿದೆ. ಅವರಿಗೆ ಮೋಕ್ಷ ಪಡೆಯುವುದಕ್ಕಿಂತ, ತಪಸ್ವಿಯಾಗುವುದಕ್ಕಿಂತ ಬದುಕನ್ನು ಜಯಿಸುವುದು ಮುಖ್ಯವಾಗುತ್ತದೆ. ಆದುದರಿಂದಲೇ ಅವರು ಇಹಕ್ಕೂ, ವರ್ತಮಾನಕ್ಕೂ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ.

ಜಾಗತೀಕರಣದ ಈ ಸಂದರ್ಭದಲ್ಲಿ ಆಧ್ಯಾತ್ಮ – ಅನುಭಾವ – ದೈವತ್ವದ ಪರಿಕಲ್ಪನೆಗಳು ಬೇರೆಯಾಗತೊಡಗಿವೆ. ಪರಸ್ಪರರಲ್ಲಿ ನಂಬಿಕೆ ದ್ರೋಹ ಹೆಚ್ಚಾಗಿದೆ. ಮುನುಷ್ಯ ಇಂದು ಕೇವಲ ಒಂದು ಸರಕಾಗಿದ್ದಾನೆ. ವಿದ್ಯಾವಂತರಲ್ಲಿ, ಅಧಿಕಾರಿಗಳಲ್ಲಿ ಉನ್ನತಸ್ಥಾನದಲ್ಲಿರುವವರಲ್ಲಿ ಅಹಂಭಾವ ಹೆಚ್ಚಾಗತೊಡಗಿದೆ. ನಾಗರೀಕತೆ ಬೆಳೆದಂತೆಲ್ಲಾ ವೃದ್ಧಾಶ್ರಮಗಳು ಹೆಚ್ಚಾಗುತ್ತಲಿವೆ. ಹಣದ ವ್ಯಾಮೊಹದಲ್ಲಿ ಮನುಷ್ಯ ತಂದೆ – ತಾಯಿಗಳನ್ನೇ ಮರೆತ್ತಿದ್ದಾನೆ. ಮನುಷ್ಯ ಸಂಬಂಧಿಗಳೆಲ್ಲ ವ್ಯವಹಾರಿಕವಾಗತೊಡಗಿವೆ. ಇಂತಹ ಸಂದರ್ಭದಲ್ಲಿ ದೈವ ಜಾನಪದವನ್ನು ಕುರಿತು, ಅದರ ಒಳತುಡಿತಗಳನ್ನು ಕುರಿತು ವಸ್ತುನಿಷ್ಠವಾಗಿ ಚರ್ಚಿಸುವುದು ತುಂಬ ಅಗತ್ಯವಾಗಿದೆ.