ಸಾಹಿತ್ಯ – ಕಲೆ – ಸಂಗೀತ – ನಾಟಕ – ನೃತ್ಯ ಈ ಮುಂತಾದ ಕ್ಷೇತ್ರಗಳ ಸಂಗಮವೇ ಸಂಸ್ಕೃತಿ. ಜನಪದ ಸಂಸ್ಕೃತಿಗೆ ಸಂಬಂಧಿಸಿದಂತೆ, ಅದರ ಸಾಂಸ್ಕೃತಿಕ ಆಯಾಮಗಳಿಗೆ ಸಂಬಂಧಿಸಿದಂತೆ ಈಗಾಗಲೇ ಬಹುವಿಧದ ಅಧ್ಯಯನಗಳು ನಡೆದಿವೆ. ಜನಪದರ ಕಲಾ ಪರಿಕಲ್ಪನೆ ದೈವರೂಪಿಯಾದುದು. ಸಮುದಾಯದ ಹಿತವನ್ನು ಬಯಸುವಂತಹದು. ಆದರೆ ನವವಸಾಹತುಸಾಹಿ ಆಕ್ರಮಣದ ಈ ದಿನಗಳಲ್ಲಿ ಕಲೆ ವ್ಯಾಪಾರೀಕರಣಗೊಂಡಿದೆ. ಜನಪದರ ಸಂಸ್ಕೃತಿ ಪರಿಕಲ್ಪನೆ ಮನರಂಜನೆಯ ಜತೆಗೆ ಮೌಲ್ಯಾಧಾರಿತ ಜೀವನ ವಿಧಾನವನ್ನು ಹೇಳಿದರೆ, ಇಂದಿನ ಸಾಂಸ್ಕೃತಿಕ ಕ್ಷೇತ್ರ ವ್ಯಾಪಾರೀಕರಣಗೊಂಡಿದೆ. ಚಲನಚಿತ್ರ – ಧಾರವಾಹಿಗಳು ಇಂದು ಉದ್ದಿಮೆಗಳಾಗಿವೆ. ಜಾಹಿರಾತು ಸಂಸ್ಕೃತಿಯೇ ಎಲ್ಲಾ ಕಡೆ ಕಾಣಿಸುತ್ತದೆ. ಕಲೆಗಳು ಮಾರಾಟದ ವಸ್ತುವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಸಾಂಸ್ಕ್ರತಿಕ ಜಾನಪದದ ಅಧ್ಯಯನ ಅತ್ಯಂತ ಅಗತ್ಯವೆನಿಸುತ್ತದೆ. ಜನಪದ ಕಲಾವಿದರುತುಂಬಾ ಪ್ರತಿಭಾವಂತರು. ಜನಸಮಾನ್ಯರ ಕಲೆಯೇ ಜನಪದ ಕಲೆಯಾಗಿದೆ. ಅವರು ಚಿತ್ರಕಲೆ, ಶಿಲ್ಪಕಲೆ ಹಾಗೂ ರಂಗಕಲೆಗಳಿಗೆ ನೀಡಿದ ಕೊಡುಗೆ ಗಮನಿಸುವಂತಿದೆ. ಗೋಡೆಗಳ ಮೇಲೆ ಮಹಿಳೆಯರು ಇಳಿಸಿರುವ ನವಿಲಿನ ಚಿತ್ತಾರಗಳು ಗಮನಿಸುವಂತಿರುತ್ತವೆ. ಅವರು ದಿನನಿತ್ಯ ಹಾಕುವ ರಂಗವಲ್ಲಿ ಆಕರ್ಷವಾಗಿರುತ್ತದೆ. ಮಡಿಕೆ, ಕುಡಿಕೆ ಹಾಗೂ ಇತರ ಸಲಕರಣೆಗಳ ಮೇಲೆ ಬಿಡಿಸಿದ ಚಿತ್ರಗಳು ಅವರ ಪ್ರತಿಭೆಗೆ ಜೀವಂತಸಾಕ್ಷಿಯಾಗಿವೆ. ಬಟ್ಟೆ – ಗಾಜು – ಕಾಗದ ಮುಂತಾದುವುಗಳ ಮೇಲೆ ಬಿಡಿಸಿದ ಚಿತ್ರಗಳು ಗ್ರಾಮೀಣ ಪ್ರತಿಭೆಗೆ ಸಾಕ್ಷಿಯಂತಿವೆ. ಅವರ ಶಿಲ್ಪಕಲೆಯ ಸಾಧ್ಯತೆಗಳನ್ನು ನೋಡಲು ಅವರ ಮನೆಯನ್ನು, ಅವರ ಊರನ್ನು ನೋಡಿದರೆ ಸಾಕು. ಅಲ್ಲೆಲ್ಲ ಶಿಲ್ಪಕಲೆ ಅರಳಿನಿಂತಿರುವುದನ್ನು ಕಾಣಬಹುದಾಗಿದೆ. ಹಚ್ಚ ಕಲೆಯಂತೂ ಕನಪದರ ಜನಪ್ರಿಯ ಕಲೆಯಾಗಿದೆ. ಮುಖವಾಡಗಳ ಮೇಲೆ ಬಿಡಿಸಿದ ಚಿತ್ರಗಳು, ತೊಗಲಿನ ಮೇಲೆ ಬಿಡಿಸಿದ ತೊಗಲು ಗೋಂಬೆಯ ಚಿತ್ರಗಳು ನವೀನತೆಯಿಂದ ಕೂಡಿವೆ.

ಕಲೆಗಳ ವರ್ಗೀಕರಣದ ವಿಷಯವೂ ಜಟಿಲವಾಗಿದೆ. ಧಾರ್ಮಿಕ – ಅರೆಧಾರ್ಮಿಕ – ಲೌಕಿಕ – ಅರೆಲೌಕಿಕ ಕಲೆಗಳಿರುವಂತೆ ವೃತ್ತಿ ಕಲೆಗಳು, ಮನರಂಜನಾ ಕಲೆಗಳೂ ಇವೆ. ರಂಗ ಜಾನಪದದಲ್ಲಿ ದೊಡ್ಡಾಟ – ಸಣ್ಣಾಟ  – ಯಕ್ಷಗಾನ ಕಲೆಗಳು ಮುಖ್ಯವಾಗಿವೆ. ಸಂಗೀತ ಜಾನಪದದಲ್ಲಿ ಸಮುದಾಯ ಸಂಗೀತದ ವ್ಯೆವಿದ್ಯತೆಗಳನ್ನು ಕಾಣಬಹುದಾಗಿದೆ. ಶಾಸ್ತ್ರೀಯ ಸಂಗೀತ – ಸುಗಮ ಸಂಗೀತಕ್ಕಿಂತ ಭಿನ್ನವಾಗಿರುವ ಜನಪದದ ಸಂಗೀತ ಹೆಚ್ಚು ಗೇಯತೆಯಿಂದ ಕೂಡಿದೆ. ಜನಪದ ಕಲಾವಿದರು ಕಲೆಯನ್ನು ಅಧ್ಯಯನ ಮಾಡಲು ಕಾಲೇಜು – ವಿಶ್ವವಿದ್ಯಾಲಯಕ್ಕೆ ಹೋದವರಲ್ಲ. ವಿಶ್ವವಿದ್ಯಾಲಯದಿಂದ ಪದವಿ ಪಡೆದವರಲ್ಲ. ಸಹಜವಾಗಿ ತಮ್ಮ ಸುತ್ತಲಿನ ಪರಿಸರದಿಂದಲೇ ಕಲಿತು, ತಮ್ಮ ಸಾಧನೆಯಿಂದಲೇ ದೊಡ್ಡ ಕಲಾವಿದರಾಗಿ ಬೆಳೆದು ನಿಂತವರು. ಇದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ.

ಜನಪದ ಸಾಹಿತ್ಯ ಹಾಗೂ ಅದರ ಭಾಷೆಗೆ ಸಂಬಂಧಿಸಿದಂತೆ, ಜನಪದ ಸಾಹಿತ್ಯದ ವಿವಿಧ ರೂಪಗಳಿಗೆ ಸಂಬಂಧಿಸಿದಂತೆ, ಈಗಾಗಲೇ ವ್ಯಾಪಕವಾಗಿ ಅಧ್ಯಯನಗಳು ನಡೆದಿವೆ. ಉಸಿರಿನಷ್ಟೇ ಸಹಜವಾದ ಮಾತುಗಳಲ್ಲಿ ಕಾವ್ಯ ಶಕ್ತಿಯನ್ನು ತುಂಬುವ ಜನಪದರು ಸಾಹಿತ್ಯ ಕ್ಷೇತ್ರದಲ್ಲಿಯೂ ಕೂಡ ಗಮನಾರ್ಹವಾದ ಕೊಡಿಗೆ ಕೊಟ್ಟಿದ್ದಾರೆ. ಜನಪದ ಭಾಷೆ ಅದು ಒಬ್ಬ ವ್ಯಕ್ತಿಯ ಭಾಷೆ ಮಾತ್ರವಾಗಿರದೆ ಇಡೀ ಜನಸಮುದಾಯದ ಭಾಷೆಯಾಗಿರುತ್ತದೆ. ಅಲ್ಲಿ ಬರುವ ಗಾದೆಮಾತು – ಪಡೆನುಡಿಗಳು ಅತ್ಯಂತ ಧ್ವನಿಪೂರ್ಣವಾಗಿರುತ್ತವೆ. ಗಾಢವಾದ ಪರಿಣಾಮವನ್ನುಂಟು ಮಾಡುತ್ತವೆ.

ಸಾಂಸ್ಕೃತಿಕ ಜಾನಪದ ತುಂಬ ಸಮೃದ್ಧವಾಗಿ ಬೆಳೆದಿದೆ. ಇಂದಿನ ಕಿರುತೆರೆ – ಚಲನಚಿತ್ರ – ನಾಟಕಗಳಿಗೆ ಜನಪದ ಕಲೆಗಳನ್ನು ಹೋಲಿಸಿ ನೋಡಿದಾಗ, ಜನಪದದ ಸತ್ವ – ಸಾಧ್ಯತೆಗಳು ಆಧುನಿಕ ಕಲೆಗಳಲ್ಲಿ ಕಾಣಿಸುವುದು ಅಪರೂಪ. ಸಮುದಾಯವನ್ನು ರಂಜಿಸಲು, ಜನಸಮೂಹವನ್ನು ಬೆಳೆಸಲು ಹುಟ್ಟಿಕೊಂಡ ಜನಪದ ಕಲೆಗಳು ಉದಾತ್ತ ಚಿಂತನೆಗಳನ್ನೊಳಗೊಂಡಿವೆ. ಈ ಸಂದಂರ್ಭದಲ್ಲಂತೂ ಅವುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೆಚ್ಚಾಗಿದೆ.

ಸಾಂಸ್ಕೃತಿಕ ಜಾನಪದದಲ್ಲಿ ಶಿಕ್ಷಣಕ್ಕೂ ಮಹತ್ವದ ಸ್ಥಾನವನ್ನು ನೀಡಲಾಗಿದೆ. ನಾನು ಬರೆದಿರುವ ಶೈಕ್ಷಣಿಕ ಜಾನಪದದಲ್ಲಿ ಇದರ ವಿವರಗಳನ್ನು ಕಾಣಬಹುದಾಗಿದೆ. ಜಾನಪದ ನೀಡುವ ಶಿಕ್ಷಣ ಪಾರಂಪರಿಕವಾದುದಾಗಿದೆ. ಜನಪದ ಸಾಹಿತ್ಯದಂತೆ ಜನಪದ ಶಿಕ್ಷಣವೂ ಕೂಡ ಮೌಖಿಕ ಪರಂಪರೆಯ ಮೂಲಕವೇ ಬೆಳೆದುಕೊಂಡು ಬಂದಿದೆ. ಭಾರತೀಯ ಪರಂಪರೆಯಲ್ಲಿ ‘ಜಾನಪದವು’ ಎರಡು ರೀತಿಯ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಒಂದು ವೃತ್ತಿಪರ ಶಿಕ್ಷಣವಾದರೆ, ಮತ್ತೊಂದು ನ್ಯೆತಿಕ ಶಿಕ್ಷಣ. ಜಾನಪದದ ವೃತ್ತಿ ಶಿಕ್ಷಣಗಳು ಮಾದರಿಗಳು ಕುತೂಹಲಕಾರಿಯಾಗಿವೆ. ಇಲ್ಲಿಯ ಶಿಕ್ಷಣದ ಮೆಥಡಾಲಜಿ “ನೋಡಿ ತಿಳಿ ಮಾಡಿ ಕಲಿ” ವಿಚಾರಕ್ಕೆ ಸಂಬಂಧಿಸಿದುದಾಗಿದೆ. ಒಕ್ಕಲುತನ, ಹೈನುಗಾರಿಕೆ, ಗುಡಿಕೈಗಾರಿಕೆ ಬಡಿಗತನ, ಕಂಬಾರಿಕೆ, ಕುಂಬಾರಿಕೆ ಈ ಮೊದಲಾದ ವೃತ್ತಿಗಳು ಮುಂದುವರೆಯಲು ಜಾನಪದ ಶಿಕ್ಷಣವೇ ಪ್ರಮುಖ ಕಾರಣವಾಗಿದೆ. ಒಕ್ಕಲಿಗನ ಮಗ, ಕಂಬಾರನ ಮಗ ಇವರಿಗೆಲ್ಲ ತಮ್ಮ ತಮ್ಮ ಮನೆಗಳೇ ಶಾಲೆ – ಕಾಲೇಜುಗಳಾಗಿರುತ್ತವೆ. ಇವರೆಲ್ಲ ತಮ್ಮ ತಂದೆ – ತಾಯಿ, ಅಣ್ಣ – ಅಕ್ಕಂದಿರಿಂದಲೇ ವೃತ್ತಿಶಿಕ್ಷಣ ಕಲಿಯುತ್ತಾರೆ.

ಜನಪದ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ದೊಡ್ಡ ಪರಂಪರೆಯಿದೆ. ಪಾಶ್ಚಾತ್ಯರ ಪ್ರಭಾವದಿಂದ ಇಂದು ನಾವು ಕೃತಕ ಆಹಾರ, ಕೃತಕ ಬದುಕುಗಳತ್ತ ಗಮನ ಹರಿಸಿದ್ದೇವೆ. ಕೊನೆಗೆ ಸಾವು ಕೂಡ ಇಲ್ಲಿ ಕೃತಕವಾಗತೊಡಗಿದೆ. ಜನಪದ ನ್ಯಾಯಪದ್ಧತಿ, ಪಂಚಾಯಿತಿ ವ್ಯವಸ್ಥೆಯಂತಹ ಸಾಮುದಾಯಿಕ ಸಂಸ್ಥೆಗಳು ಇಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತ ಬಂದಿವೆ. ಕೇವಲ ಅಕ್ಷರಗಳ ಮೂಲಕ ಕಲಿಯುವ ಯಾಂತ್ರಿಕ ಶಿಕ್ಷಣ ಪದ್ಧತಿಗಿಂತ ಶ್ರದ್ಧೆಯಿಂದ ತಿಳಿಸುತ್ತಿದ್ದ ಅಂದಿನ ಮೌಖಿಕ ಪರಂಪರೆಯ ಶಿಕ್ಷಣ ಜನಸಮುದಾಯದಲ್ಲಿ ಉನ್ನತ ಮೌಲ್ಯಗಳನ್ನು ಬೆಳೆಸಿದೆ. ಈ ಶಿಕ್ಷಣ ಕೇವಲ ಬೌದ್ದಿಕ ಕಸರತ್ತಾಗದೆ ಹೃದಯ ವೈಶಾಲ್ಯತೆಯನ್ನು, ಅಂತಃಕರಣವನ್ನು ತುಂಬಿಕೊಂಡಿವೆ. ಮಾನವಶಾಸ್ತ್ರ, ಇತಿಹಾಸ ಪರಿಸರ ವಿಜ್ಞಾನ, ಮನಶಾಸ್ತ್ರ, ಪುರಾಣ ಅರ್ಥಶಾಸ್ತ್ರ ಈ ಮೊದಲದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಜನಪದರು ನೀಡುತ್ತಿದ್ದ ಶಿಕ್ಷಣದ ಬಗೆಗೆ ವಿಶೇಷ ಅಧ್ಯಯನಗಳು, ಸಂಶೋಧನೆಗಳು ನಡೆಯಬೇಕಾಗಿದೆ. ಜನಪದ ಶಿಕ್ಷಣವು ಸೃಜನಶೀಲತೆಯನ್ನು ಹುಟ್ಟಿಸಿ ಸ್ವಾಭಿಮಾನವನ್ನು ಬೆಳೆಸಿದರೆ, ಪಾಶ್ಚಾತ್ಯ ಶಿಕ್ಷಣವು ಗುಲಾಮಗಿರಿಯನ್ನು ಕಲಿಸುತ್ತ ಗುಮಾಸ್ತರನ್ನು ಸಿದ್ಧಪಡಿಸುವ ಶಿಕ್ಷಣವಾಗಿದೆ. ಇಂದು ಇವೆರೆಡೂ ಶೈಕ್ಷಣಿಕ ಮಾದರಿಗಳನ್ನು ಮುಂದಿಟ್ಟುಕೊಂಡು ಜನಪರ ಶಿಕ್ಷಣದ ಮಾದರಿಗಳನ್ನು ಕಂಡುಕೊಳ್ಳಬೇಕಾಗಿದೆ.

ಸಾಂಸ್ಕೃತಿಕ ಜಾನಪದದಲ್ಲಿ ಕ್ರೀಡೆಗೆ ಮಹತ್ವದ ಸ್ಥಾನವಿದೆ. ಶಾರೀರಕ ಹಾಗೂ ಮಾನಸಿಕ ಬೆಳವಣಿಗೆಗೆ ಜನಪದ ಕ್ರೀಡೆಗಳು ಮಹತ್ವದ ಪಾತ್ರವಹಿಸಿತ್ತವೆ. ಜನಪದ ಕ್ರೀಡೆಗಳನ್ನು ಪ್ರಾದೇಶಿಕವಾಗಿ ವಿಂಗಡಿಸಿ ಅಧ್ಯಯನ ಮಾಡುವುದು ಅಗತ್ಯವಾಗಿದೆ. ಇಂದು ಜನಪದ ಕ್ರೀಡೆಗಳು ಕಡಿಮೆಯಾಗಿ ಪಾಶ್ಚಾತ್ಯರ ಕ್ರಿಕೆಟ್ ಆಟವೇ ಎಲ್ಲ ಕಡೆ ವ್ಯಾಪಿಸಿದೆ. ಪಾಶ್ಚಾತ್ಯರ ಸಂಸ್ಕೃತಿ ಪ್ರಭಾವ ಬೀರಿದಂತೆ ಅವರ ಆಟಗಳೂ ನಮ್ಮನ್ನು ಬಿಟ್ಟಿಲ್ಲ. ಬಹುವಿಧದ ವೈವಿಧ್ಯಮಯ ಕ್ರೀಡೆಗಳನ್ನು ಮರೆತು, ಕೆಲವೇ ಕ್ರೀಡೆಗಳತ್ತ ನಮ್ಮ ಯುವಜನಾಂಗ ಆಕರ್ಷಿತವಾಗಿದೆ.

ಜನಪದ ಕ್ರೀಡೆಗಳಲ್ಲಿ ಗಜಗದಾಟ, ಆಣೆಕಲ್ಲಾಟ, ಬಗರಿಯಾಟ, ಕಪ್ಪಿ ಆಟ, ಗಚ್ಚಿನಾಟ, ಈಟಿ ಆಟ, ಗೆಜ್ಜೆಯಾಟ, ಕಳ್ಳರಾಟ, ಗೊಂಬಿಮದ್ವಿಯಾಟ, ಚಿಣೆಪಿಣೆ ಆಟ, ಉತ್ತತ್ತಿಯಾಟ ಈ ಮೊದಲಾದ ಜನಪದ ಕ್ರೀಡೆಗಳು ನಿತ್ಯದ ಬದುಕಿನಲ್ಲಿ ಸಹಜವಾಗಿದ್ದವು. ಇವುಗಳ ಜತೆಗೆ ಕುಸ್ತಿ, ಕಬಡ್ಡಿ, ಲಗೋರಿಯಂತಹ ಕ್ರೀಡೆಗಳು ಜನಪ್ರಿಯವಾಗಿದ್ದವು. ಜಲಕ್ರೀಡೆ, ಕೆಸರುಕ್ರೀಡೆ, ಬಯಲು ಕ್ರೀಡೆಗಳು ಜತೆಗಿದ್ದವು. ಆದರೆ ಇಂದೇನಾಗಿದೆ ? ಈ ಕ್ರೀಡೆಗಳನ್ನಾಡುವುದಿರಲಿ, ಅವುಗಳ ಹೆಸರುಗಳೇ ನಮಗೆ ಮರೆತು ಹೋಗಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಆಡುತ್ತಿದ್ದ ಆಟಗಳೂ ಇಂದು ಕಾಣಿಸುತ್ತಿಲ್ಲ. ಅವುಗಳಲ್ಲಿ ಹೊಯಗೆ ಆಟ, ಕಣ್‌ಕಣ್ಣಾಟ, ಗೊರಟಾಟ, ಹಾಣೆಗೆಂಡೆ, ಚಿಕ್ಕನಾಟ, ಗುಡುಗುಡಿ ಹಳ್ಳಾರಾಟ, ಗುಡ್ನಾಟ, ಚೆನ್ನೆಮಣೆ, ಪಗಡೆ, ಚದುರಂಗ ಈ ಮೊದಲಾದ ಆಟಗಳನ್ನು ಹೆಸರಿಸಬಹುದಾಗಿದೆ. ಉಪ್ಪುಪ್ಪಕಡ್ಡಿ, ಕುಂಟೆಬಿಲ್ಲೆ, ಕಂಬದಾಟ, ಹಗ್ಗದಾಟ, ಗಿರಿಗಿಟ್ಟೆ, ಕುಕ್ಕೂರು ಬಸವಿ, ಆಣೆಕಲ್ಲು, ಘಟ್ಟಾಬಾರ್ದಂತಹ ಆಟಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಡುತ್ತಿದ್ದರು. ಕಟ್ಟೆಮಣೆ, ಬಳೆಪಿಂಗದಆಟ, ವಡೆಪಾಯ್ಸಆಟ, ಉದ್ದಿನ ಮೂಟೆ ಆಟ, ಹುಣಸೆಬೀಜದ ಆಟ, ಕಣ್ಣಾಮುಚ್ಚಾಲೆ, ಕೊಕ್ಕೋ ಆಟ, ಗೋಲಿಯಾಟ, ಬುಗುರಿಯಾಟ , ಚಿನ್ನಿದಾಂಡು, ಈ ಮೊದಲಾದ ಆಟಗಳು ಮೈಸೂರು ಪ್ರದೇಶದ ಕಡೆ ಜನಪ್ರಿಯವಾಗಿದ್ದವು. ಆದರೆ ಇಂದಿನ ಕ್ರೀಡೆಗಳು ವ್ಯಾಪಾರೀಕರಣಗೊಂಡಿವೆ. ಕ್ರಿಕೆಟ್ ಫಿಕ್ಸಿಂಗ್ ದಂತಹ ಪ್ರಸಂಗಗಳು ಕ್ರೀಡಾಕ್ಷೀತ್ರದಲ್ಲಿ ಅಪಾಯಕಾರಿಯಾದ ಬೆಳವಣಿಗೆ ಗಳಾಗಿವೆ. ಜನಪದ ಕ್ರೀಡೆಗಳತ್ತ ನಮ್ಮ ಯುವಕರನ್ನು ಕಣ್ಣುಹಾಯಿಸಬೇಕಾಗಿದೆ.