ಜೈವಿಕ ಜಾನಪದವೆಂದರೆ ಜೀವಸಂಕುಲದ ಮೂಲಭೂತವಾದ ಜೈವಿಕ ಅಂಶಗಳನ್ನು ಕಂಡುಕೊಳ್ಳುವುದಾಗಿದೆ. ಹಸಿವು, ತೃಷೆ, ಕಾಮ ನಿದ್ದೆ ಇವೆಲ್ಲ ಜೈವಿಕ ಸಂಗತಿಗಳಾಗುತ್ತವೆ. ಈ ಎಲ್ಲ ಸಂಗತಿಗಳಿಗೆ ಶರೀರ ಅಥವಾ ದೇಹ ಕಾರಣವಾಗಿರುತ್ತದೆ. ಶರೀರಕ್ಕೆ ಸಂಬಂಧಿಸಿದ ವಿಷಯಗಳು, ಶರೀರಕ್ಕಂಟಿದ ರೋಗಗಳನ್ನು ಗುಣಪಡಿಸುವ ವೈದ್ಯಕೀಯ ಸಂಗತಿಗಳು. ಅಡುಗೆ – ವಸತಿ ಇತ್ಯಾದಿ ವಿಷಯಗಳೆಲ್ಲ ಜೈವಿಕ ಜಾನಪದದಲ್ಲಿ ಕೂಡಿಕೊಂಡಿರುತ್ತವೆ.

ಜನಪದರ ನಂಬಿಕೆಯಂತೆ ಈ ಶರೀರ ನಶ್ವರ, ಆತ್ಮ ಅನಂತವಾದುದಾಗಿದೆ. ಹೀಗಾಗಿ ಅವರು ಶರೀರಕ್ಕಿಂತ ಆತ್ಮಕ್ಕೆ, ಅನುಭವಕ್ಕಿಂತ ಅನುಭಾವಕ್ಕೆ ಮಹತ್ವ ಕೊಡುತ್ತಾರೆ. ಮನುಷ್ಯನ ಶರೀರದ ರಚನೆಗೆ ಸಂಬಂಧಿಸಿದಂತೆ ಜಗತ್ತಿನೆಲ್ಲೆಡೆ ಒಂದೇ ರೀತಿಯ ತಿಳುವಳಿಕೆಗಳಿವೆ. ಇದನ್ನೇ ನಾವು ಇಂಗ್ಲೀಷಿನಲ್ಲಿ Anatomy ಎಂದು ಕರೆಯುತ್ತೇವೆ. ಅನಾಟೊಮಿ ಬಗೆಗೆ ಇಂಗ್ಲೀಷ್ ವೈದ್ಯರು (ಎಂಬಿಬಿಎಸ್ – ಎಂ.ಡಿ.ಎಂ.ಎಸ್ ಪದವೀಧರರು) ವಿಶ್ಲೇಷಿಸುವ ಬಗೆಗೂ, ಆಯುರ್ವೇದ ವೈದ್ಯರು (ಬಿ.ಎ.ಎಂ.ಎಸ್ ಬಿ.ಎನ್.ಎಂ.ಎಸ್ ಪದವೀಧರರು) ವಿವರಿಸುವ ಬಗೆಗೂ ವ್ಯತ್ಯಾಸವಿದೆ. ಈ ಎರಡು ಪರಂಪರೆಗೆ ಸೇರಿದ ವೈದ್ಯರು ಕೊಡುವ ಚಿಕಿತ್ಸಾ ಪದ್ಧತಿಗಳೂ ಕೂಡ ಬೇರೆ ಬೇರೆಯಾಗಿವೆ. ಈ ಎರಡೂ ವೈದ್ಯ ಪರಂಪರೆಗಳಿಗಿಂತ ಪ್ರಾಚೀನವಾದ ವೈದ್ಯವೆಂದರೆ ನಾಟೀವೈದ್ಯ ಅಥವಾ ಜನಪದ ವೈದ್ಯ. ಅದರಿಂದ ನಾಟೀವೈದ್ಯ ಕಣ್ಮರೆಯಾಗತೊಡಗಿದೆ. ಇದಕ್ಕೆ ಅನೇಕ ಕಾರಣಗಳಿವೆ.

ವ್ಯಕ್ತಿಯ ಜನನದಿಂದ ಹಿಡಿದು ಮರಣದವರೆಗೆ ಶರೀರಕ್ಕೆ ಸಂಬಂಧಿಸಿದ ಅನೇಕ ಆಚರಣೆಗಳು, ಕ್ರಿಯಾವಿಧಾನಗಳು ಜಾನಪದದಲ್ಲಿವೆ. ಇದನ್ನೇ ಶರೀರ ಜಾನಪದವೆಂದು ಕರೆಯಲಾಗುತ್ತದೆ. ಮಗು ಹುಟ್ಟಿದಾಗ ಕಿವಿ ಚುಚ್ಚುವುದರಿಂದ ಹಿಡಿದು, ಮನುಷ್ಯ ಸತ್ತಾಗ ಮೃತದೇಹಕ್ಕೆ ಮಾಡುವ ಆಚರಣೆಗಳೆಲ್ಲ ಈ ಶರೀರ ಜಾನಪದದಲ್ಲಿ ಸೇರಿಕೊಳ್ಳುತ್ತವೆ. ಈ ಶರೀರಕ್ಕೆ ಸಂಬಂಧಿಸಿದಂತೆ ಜನಪದರಲ್ಲಿ ಅನೇಕ ನಂಬಿಕೆಗಳು, ಮೂಢನಂಬಿಕೆಗಳು, ಗಾದೆಗಳು – ಒಗಟುಗಳು – ಗೀತೆಗಳು – ನುಡಿಗಟ್ಟುಗಳು ಇವೆ.

ಅಂಕುಡೊಂಕಾದ ಬಾವಿ
ಶಂಕು ಚಕ್ರದ ಬಾವಿ
ನೀರಿಲ್ಲದ ಬಾವಿ

ಈ ಒಗಟು ಶರೀರಕ್ಕೆ ಸಂಬಂಧಿಸಿದ ಒಂದು ಅಂಗವನ್ನು ಕುರಿತು ಹೇಳುತ್ತದೆ. ಇಲ್ಲಿ ಜನಪದರು ಬಳಸಿರುವ ಸಾದೃಶ್ಯ ಗಮನಿಸುವಂತಿದೆ. ಈ ಒಗಟುನ್ನು ಬಿಡಿಸಲೆತ್ನಿಸಿದಾಗ ಯಾವುದೋ ಬಾವಿಯ ಚಿತ್ರ ಹಿಂದೆ ಸರಿಯುತ್ತದೆ. ಈ ಒಗಟಿನ ಉತ್ತರವೆಂದರೆ “ಕಿವಿ” ಕಿವಿ ಬಾವಿಯ ಹಾಗೆ ಕಾಣಿಸುತ್ತದೆ. ಆದರೆ ಅಂಕುಡೊಂಕಾಗಿದೆ, ಶಂಕ ಚಕ್ರದ ಹಾಗಿದೆ ಎನ್ನುವ ಜನಪದರ ಈ ಕಲ್ಪನೆ ಅದ್ಭುತವಾದುದಾಗಿದೆ. ಶರೀರ ಸಂಬಂಧಿ ಅಂಗಾಂಗಳಿಗೆ ಸಂಬಂಧಿಸಿದಂತೆ ಅವರು ಅನೇಕ ಒಗಟುಗಳನ್ನು ಕಟ್ಟಿಕೊಟ್ಟಿದ್ದಾರೆ. ಇನ್ನು ಶರೀರದ ಅಂಗಾಂಗಗಳ ಮೂಲಕ ವ್ಯಂಗ್ಯಾರ್ಥಗಳನ್ನು ಹುಟ್ಟುಹಾಕಿದ್ದಾರೆ. “ನಲಿಗೆ ಶುದ್ಧವಿಲ್ಲ”ವೆಂದರೆಕೆಟ್ಟ ಮಾತನಾಡುವವರು ಎಂದರ್ಥವಾಗುತ್ತದೆ. “ಬೆನ್ನಿಗೆ ಚೂರಿಹಾಕು” ಎಂದರೆ ವಂಚಿಸು ಎಂದರ್ಥವಾಗುತ್ತದೆ. ಹೀಗೆ ಶರಿರಕ್ಕೆ ಸಂಬಂದಿಸಿದ ಅಂಗಾಂಗಗಳನ್ನು ಉಲ್ಲೇಖಿಸಿ ಬೇರೆ ಅರ್ಥ ಹೊರಡಿಸುವ ನುಡಿಗಟ್ಟುಗಳು ಜನಪದ ಸಾಹಿತ್ಯದಲ್ಲಿ ಇವೆ.

ಜನಪದ ವೈದ್ಯಕ್ಕೆ ಸಂಬಂಧಿಸಿದಂತೆ ಇಂದು ಹೊಸರೀತಿಯ ಚರ್ಚೆ ಪ್ರಾರಂಭವಾಗಬೇಕಾಗಿದೆ. ನಾಟಿವೈದ್ಯ ಅಥವಾ ಜನಪದ ವೈದ್ಯವು ಗಿಡಮೂಲಿಕೆಗಳ ಮೇಲೆ ನಿಂತಿದೆ. ಇಂದು ಕಾಡನ್ನು – ಪರಿಸರವನ್ನು ನಾಶಗೊಳಿಸುತ್ತಿರುವ ಚಿತ್ರಣಗಳು ಕಣ್ಮುಂದಿವೆ. ಇಂತಹ ಸಂದರ್ಭದಲ್ಲಿ ಗಿಡಮೂಲಿಕೆಗಳು ನಾಶವಾಗತೊಡಗಿವೆ. ಅದಕ್ಕೆ ಬೇರೆ ವ್ಯವಸ್ಥೆಯನ್ನೂ ಸರಕಾರ, ಸಂಘ – ಸಂಸ್ಥೆಗಳು ಮಾಡುತ್ತಿಲ್ಲ. ಗಿಡಮೂಲಿಕೆಗಳು ದೊರೆಯದೆ ನಾಟಿವ್ಯೆದ್ಯ ಪದ್ಧತಿ ನಶಿಸುವ ಅಂಚಿನಲ್ಲಿದೆ. ನಾಟಿವ್ಯೆದ್ಯಕ್ಕೆ ಸಮೀಪವಾಗಿರುವ ಆಯುರ್ವೇದ ವೈದ್ಯ ಪದ್ಧತಿಯೂ ಮರೆಯಗುವ ಸ್ಥಿತಿಯಲ್ಲಿದೆ. ಔಷಧಿಯುಕ್ತ ಸಸ್ಯಗಳು ಸಿಗದೇ ಇರುವುದರಿಂದ, ಕೆಲವು ಸಸ್ಯಗಳು ವಿರಳವಾಗಿರುವುದರಿಂದ ಆಯುರ್ವೇದ ಔಷಧಿಗಳ ಬೆಲೆ ಹೆಚ್ಚಾಗತೊಡಗಿದೆ.

ಜನಪದ ವೈದ್ಯದಲ್ಲಿ ನೈಸರ್ಗಿಕ ಜನಪದ ವೈದ್ಯ ಹಾಗೂ ಮಾಂತ್ರಿಕ ಜನಪದ ವೈದ್ಯವೆಂದು ವರ್ಗೀಕರಣ ಮಾಡಲಾಗುತ್ತದೆ. ಸಸ್ಯ – ಪ್ರಾಣಿ – ಪಕ್ಷಿ – ಖನಿಜ ಈ ಮೊದಲದವುಗಳ ಮೂಲಕ ದೊರೆಯುವ ಔಷಧಗಳನ್ನು ಬಳಸವುದು ನೈಸರ್ಗಿಕ ಜನಪದ ವೈದ್ಯವಾದರೆ, ಮಾಟ – ಮಂತ್ರ – ಮೋಡಿಗಳ ಮೂಲಕ ರೋಗ ಗುಣಪಡಿಸುತ್ತೇವೆಂದು ಹೇಳುವುದು ಮಾಂತ್ರಿಕ ವೈದ್ಯವಾಗುತ್ತದೆ. ಆದರೆ ಮಾಂತ್ರಿಕ ವೈದ್ಯಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ಆಧಾರಗಳು ದೊರೆಯುವುದರಿಂದ ಇದು ಕೇವಲ ಮೂಢನಂಬಿಕೆಯ ವೈದ್ಯಪದ್ಧತಿಯಗಿದೆ.

ಜನಪದ ವೈದ್ಯದಲ್ಲಿಯೇ ಮಾನವ ವೈದ್ಯ, ಪಶುವೈದ್ಯ, ಸಸ್ಯ ವೈದ್ಯ ಎಂದು ವಿಂಗಡಿಸಬಹುದಾಗಿದೆ. ಮನುಷ್ಯರಲ್ಲಿಯೇ ಸ್ತ್ರೀವೈದ್ಯ, ಮಕ್ಕಳವೈದ್ಯವೆಂದು ವರ್ಗೀಕರಿಸಬಹುದಾಗಿದೆ. ರೋಗಗಳಿಗೆ ಸಂಬಂಧಿಸಿದಂತೆ, ಅಂಗಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ಹೆಸರಿನಲ್ಲಿ ಕರೆಯುವ ವೈದ್ಯ ಪದ್ಧತಿಗಳಿವೆ. ಇಂಗ್ಲೀಷ್ ವೈದ್ಯಕೀಯ ಪದ್ಧತಿ (ಆಲೋಪತಿ), ಆಯುರ್ವೇದ ವೈದ್ಯಕೀಯ ಪದ್ದತಿ ಜನಪದ ವೈದ್ಯಪದ್ಧತಿ, ಯುನಾನಿ ವೈದ್ಯ ಪದ್ದತಿಗಳಿಗೆ ಸಂಬಂಧಿಸಿದಂತೆ ಇಂದು ತೌಲನಿಕ ಸಂಶೋಧನೆ – ಚರ್ಚೆ ನಡೆಯಬೇಕಾಗಿದೆ. ಆಮೂಲಕ ಅನ್ವಯಿಕ ವೈದ್ಯಕೀಯ ಪದ್ಧತಿಯನ್ನು ಜಾರಿಗೆ ತರುವ ಅಥವಾ ಅದನ್ನು ಹೊಸ ರೀತಿಯಲ್ಲಿ ಬೆಳೆಸುವ ಪ್ರಯತ್ನಗಳಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜನಪದ ವೈದ್ಯವನ್ನು ಅಧ್ಯಯನ ಮಾಡುವುದು ತುಂಬ ಅಗತ್ಯವಿದೆ.

ಮಾತು ಬಲ್ಲವನಿಗೆ ಜಗಳವಿಲ್ಲ
ಊಟ ಬಲ್ಲವನಿಗೆ ರೋಗವಿಲ್ಲ

ಎಂಬ ಜನಪದರ ಗಾದೆ ಮಾತಿನಲ್ಲಿ ಮಹತ್ವದ ಸಂಗತಿಗಳಿವೆ. ರೋಗ ಬಂದಾಗ ವೈದ್ಯ ಬೇಕಾಗುತ್ತಾನೆ. ರೋಗವೇ ಬಾರದಿದ್ದರೆ ವೈದ್ಯರ ಅಗತ್ಯವಿರುವುದಿಲ್ಲ. ಕ್ರಮವರಿತು, ಸಮಯಕ್ಕೆ ಸರಿಯಾಗಿ ಸಮತೋಲನದ ಊಟ ಮಾಡುವುದರಿಂದ ರೋಗ ಬರುವುದಿಲ್ಲ . ಅಡುಗೆ ಜಾನಪದದಲ್ಲಿ ಇದಕ್ಕೆ ಸಂಬಂಧಿಸಿದ ಅನೇಕ ವಿವರಗಳಿವೆ. ಅಡುಗೆ ಜಾನಪದ ಇಂದು ವೈವಿಧ್ಯಮಯವದ ರೀತಿಯಲ್ಲಿ ಬೆಳೆದು ನಿಂತಿದೆ.

ಅಡುಗೆ ಪದ್ಧತಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ಅಡುಗೆಗಳೂ ಕೂಡ ಬೇರೆ ಬೇರೆಯಾಗಿವೆ. ಆಯಾ ಪ್ರದೇಶಗಳಲ್ಲಿ ಬೆಳೆಯುವ ಬೆಳೆಗಳನ್ನವಲಂಭಿಸಿ ಅಡುಗೆ ಇರುತ್ತದೆ. ಮಲೆನಾಡಿನ ಅಡುಗೆಗೂ, ಬಯಲುನಾಡಿನ ಅಡುಗೆಗೂ ತುಂಬಾ ವ್ಯತ್ಯಾಸವಿದೆ. ಕಲಬುರ್ಗಿ ತೊಗರಿಯ ಕಣಜವೆಂದೆನಿಸಿಕೊಂಡಿದೆ. ಹೀಗಾಗಿ ಇಲ್ಲಿ ಬೇಳೆ – ಜೋಳದ ರೊಟ್ಟಿ ಮುಖ್ಯ ಆಹಾರವಾಗಿದೆ. ಮಂಡ್ಯ – ಮೈಸೂರು ಕಡೆ ರಾಗಿ ಬೆಳೆಯುವುದರಿಂದ ಅಲ್ಲಿ ರಾಗಿಮುದ್ದೆ ಮುಖ್ಯ ಆಹಾರವಾಗಿದೆ. ಅದೇ ರೀತಿ ಕರಾವಳಿ ಮೀನು ಪ್ರಾಧಾನ್ಯ ಅಡುಗೆಯಾಗಿದೆ. ಭತ್ತ ಬೆಳೆಯುವ ಪ್ರದೇಶಗಳಲ್ಲಿ ಅನ್ನವೇ ಪ್ರಧಾನ ಅಡುಗೆಯಾಗಿದೆ. ಪ್ರಾದೇಶಿಕ ಅಡುಗೆ, ಪೌಷ್ಠಿಕ ಅಡುಗೆ, ಪಥ್ಯದ ಅಡುಗೆ, ಸಸ್ಯಾಹರ, ಮಾಂಸಾಹಾರದ ಅಡುಗೆ ಹೀಗೆ ಅಡುಗೆ ಪ್ರಕಾರಗಳು ಬೆಳೆಯುತ್ತ ಹೋಗುತ್ತವೆ. ಜನಸಮುದಾಯದ ರುಚಿ ಅಭಿರುಚಿಗಳನ್ನವಲಂಬಿಸಿ ಅಡುಗೆ ಪದ್ಧತಿಯ ವಿವರಗಳು ಕಾಣಿಸಿಕೊಳ್ಳುತ್ತವೆ.

ಮನುಷ್ಯ ಒಂದು ಕಡೆ ನೆಲೆನಿಂತು ರಕ್ಷಣೆ ಪಡೆಯಲು ವಸತಿ ಮಹತ್ವದ ಪಾತ್ರವಹಿಸುತ್ತದೆ. ವಸತಿ ಜಾನಪದದಲ್ಲಿ ಈ ಬಗೆಗೆ ವಿವರಗಳಿವೆ. ವಸತಿ ವ್ಯವಸ್ಥೆ ವರ್ಗ ವ್ಯವಸ್ಥೆಯನ್ನು, ಜಾತಿವ್ಯವಸ್ಥೆಯನ್ನೂ ಅವಲಂಬಿಸಿದೆ. ಈ ದೇಶದಲ್ಲಿ ಭವ್ಯ ಬಂಗಲೆಗಳಿರುವಂತೆ ಕೊಳಕು ಸ್ಲಮ್ ಗಳೂ ಇವೆ. ಅಲ್ಲಿಯೂ ಜನ ವಾಸಿಸುತ್ತಾರೆ. ಇಲ್ಲಿಯೂ ಜನವಾಸಿಸುತ್ತಾರೆ. ಹಳ್ಳಿಗಳಲ್ಲಿ ಊರೊಳಗಿರುವ ಮನೆಗಳ ಹಾಗೆ ಊರ ಹೊರಗಿನ ಕೇರಿಗಳೂ ಇವೆ. ಊರೊಳಗೆ ಮತ್ತು ಊರ ಹೊರಗೆ ವಾಸಿಸುವರೆಲ್ಲ ಮನುಷ್ಯರೇ ಆಗಿದ್ದರೂ ಅವರ ಜಾತಿಗಳು ಬೇರೆ ಬೇರೆಯಾಗಿವೆ. ಹೀಗೆ ವಸತಿ ಜಾನಪದದ ಮೂಲಕವೇ ಈ ದೇಶದ ವರ್ಗವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಬಹುದು. ಜನಪದರಲ್ಲಿ ಈ ಬಗೆಗೆ ಹೋರಾಟಗಳು ಕಾಣಿಸುವುದಿಲ್ಲ. ಹೊಂದಾಣಿಕೆಗಳು ಮುಖ್ಯವಾಗುತ್ತವೆ. ಕ್ರಿಮಿ – ಕೀಟ – ಜಲಚರ – ಪಕ್ಷಿ – ಪ್ರಾಣಿ – ಮನುಷ್ಯ – ದೈವ – ದೆವ್ವ ಈ ಎಲ್ಲಾ ಜೀವಿಗಳ ವಸತಿಯ ಬಗೆಗೆ ಜನಪದದಲ್ಲಿ ವಿವರಿಸಲಾಗಿದೆ. ಆದರೆ ಆ ವಿವರವನ್ನೊಂದು ಹೊಸ ದೃಷ್ಟಿಕೋನದಿಂದ ಅಧ್ಯಯನಕ್ಕೊಳಪಡಿಸಬೇಕಾಗುತ್ತದೆ.