ಕೃಷಿ ಜಾನಪದ ತುಂಬಾ ವಿಸ್ತಾರವಾಗಿರುವ ಕ್ಷೇತ್ರವಾಗಿದೆ. ಭಾರತದಂತಹ ದೇಶದಲ್ಲಿ ಕೃಷಿಯೇ ಪಧಾನ ಉದ್ಯೋಗವಾಗಿದೆ. ಜನಪದ ಸಾಹಿತ್ಯ, ಸಂಸ್ಕ್ರತಿಕ ಕೃಷಿಕರಿಂದಲೇ ಬೆಳೆದು ನಿಂತಿದೆ. ಕೃಷಿಯನ್ನು ಕುರಿತು ರೈತನನ್ನು ಕುರಿತು ಈಗಾಗಲೇ ಅನೇಕ ಕೃತಿಗಳು ಪ್ರಕಟವಾಗಿವೆ. ಕುವೆಂಪು ಅವರ “ನೇಗಿಲಯೋಗಿ” ಕವಿತೆ ಇಂದು ನಾಡಗೀತೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಆದರೆ ಜಾಗತೀಕರಣದ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಏರು ಪೇರು ನಡೆದಿದೆ. ಸಾಲದ ಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಮೇಲೆ ಪೋಲಿಸರ ಲಾಠಿ ಪ್ರಹಾರ ನಡೆಯುತ್ತಲೇ ಇದೆ.

ವ್ಯವಸಾಯ ಇಂದು ಕೃಷಿ ವಿಜ್ಞಾನವಾಗಿ ಬೆಳೆದಿದೆ. ಆದರೆ ಹೊರದೇಶಗಳಿಂದ ಬರುವ ಬಿತ್ತನೆ ಬೀಜಗಳು, ರಾಸಾಯನಿಕ ಗೊಬ್ಬರಗಳಿಂದ ಫಲವತ್ತಾದ ಭೂಮಿ ಬಂಜರಾಗತೊಡಗಿದೆ. ರೈತರು ರಾಸಾಯನಿಕ ಗೊಬ್ಬರಕ್ಕಾಗಿ ಹೋರಾಡುವುದನ್ನು ಬಿಟ್ಟು ಸಾವಯುವ ಗೊಬ್ಬರವನ್ನು ಸಿದ್ಧಪಡಿಸಿಕೊಳ್ಳಬೇಕಾಗಿದೆ. ಬೆಲೆಯ ಇಳುವರಿಯ ಆಸೆಗಾಗಿ ರೈತರು ಕೃತಕ ಬೀಜಗಳನ್ನು ಬಿತ್ತಿ ಮೋಸಹೋಗಿದ್ದಾರೆ.

ಸರಕಾರ ರೈತರಿಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಅದರಲ್ಲಿ ಸಾಲಮನ್ನಾ ಯೋಜನೆಯೂ ಒಂದು. ಸಾಲಮನ್ನಾ ಯೋಜನೆಯ ಆಸೆ ತೋರಿಸುವುದಕ್ಕಿಂತ ರೈತರ ಉತ್ಪನ್ನ ಹೆಚ್ಚುಸುವಲ್ಲಿ ಯೋಜನೆಗಳನ್ನು ರೂಪಿಸುವುದು ಹೆಚ್ಚು ಸೂಕ್ತವೆನಿಸುತ್ತದೆ. ಅದಕ್ಕಾಗಿ ಕೃಷಿ ಪ್ರಾಧಿಕಾರ ರಚಿಸಿ, ಸರಿಯಾದ ಕೃಷಿತಜ್ಞರ ಮೂಲಕ ಆಯಾ ಪ್ರದೇಶದಲ್ಲಿ ರೈತ ಪ್ರತಿನಿಧಿಗಳ ಕಾರ್ಯಾಗಾರ ಮಾಡಿ, ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಬೀಜ ಹಾಗೂ ಗೊಬ್ಬರಗಳಿಗೆ ಸಂಬಂಧಿಸಿದಂತೆ ರಚನಾತ್ಮಕ ಚರ್ಚೆ ನಡೆಸಿ ಮಾರ್ಗದರ್ಶನ ಮಾಡುವುದು, ಸರಕಾರದಿಂದ ಸಹಾಯಧನ ನೀಡುವುದು ಇನ್ನು ಮುಂತಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿದೆ.

ಬರಗಾಲ ಯಾವಾಗಲೂ ರೈತನನ್ನು ಕಾಡುತ್ತಲೇ ಬಂದಿದೆ. ಬಯಲುನಾಡಿನ ರೈತರಂತೂ ಸದಾ ಮುಗಿಲಕಡೆಗೇ ನೋಡುತ್ತಿರುತ್ತಾರೆ. ಮಳೆ ಬಂದರೆ ಬಳೆ, ಬೆಳೆಬಂದರೆ ಸುಗ್ಗಿ, ಮಳೆ ಬಾರದೆ ಬರಗಾಲ ಬಿದ್ದಾಗ ರೈತ ಎದೆ ಒಡೆದುಕೊಳ್ಳುತ್ತಾನೆ. ಬಿತ್ತಿದ ಬೀಜಗಳು ಭೂಮಿಯಲ್ಲಿ ಬತ್ತಿ ಹೋದಾಗ ಕಣ್ಣೀರು ಸುರಿಸುತ್ತಾನೆ. ಬರಗಾಲದ ತೀವ್ರತೆಯೆಂತಹ ದೆಂಬುದನ್ನು ಕೃಷಿ ಜಾನಪದದಲ್ಲಿ ಮನಕರಗುವಂತೆ ಚಿತ್ರಿಸಲಾಗಿದೆ.

ಒಕ್ಕಲಗೇರ್ಯಾಗ ಮಳಿರಾಜಾ ಅವರು
ಮಕ್ಕಳು ಮಾರ್ಯಾರ ಮಳಿರಾಯ
ಮಕ್ಕಳ ಮಾರೀ ರೊಕ್ಕಾ ಹಿಡಿಕೊಂಡು
ಭತ್ತಂಗ ತಿರಗ್ಯಾರಮಳಿರಾಜಾ

ಮಳೆಬಾರದೆ ಬರಬಿದ್ದ ಸಂದರ್ಭದಲ್ಲಿ ರೈತರು ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನೇ ಮಾರುವ ದೃಶ್ಯ ಹೃದಯವಿದ್ರಾವಕವಾಗಿದೆ. ಬರಗಾಲದ ಸಂದರ್ಭದಲ್ಲಿ ಶ್ರೀಮಂತರು ದವಸ – ಧಾನ್ಯಗಳನ್ನು ಕೂಡಿಹಾಕಿ ಹೆಚ್ಚು ಹಣಕ್ಕೆ ಮಾರಾಟ ಮಾಡುವುದು, ಬಡ್ಡಿಯ ಹೆಸರಿನಲ್ಲಿ ಬಡವರನ್ನು ಸುಲಿದು ತಿನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಹ್ಯೆದರಾಬಾದ ಕರ್ನಾಟಕ ಪ್ರದೇಶದ ರೈತರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಇಲ್ಲಿ ಮಳೆಗಾಲ ಸುಗ್ಗಿಕಾಲಕ್ಕಿಂತ ಬರಗಾಲವೇ ಹೆಚ್ಚು. ಡೋಗಬರ – ಡಕ್ಕಿಬರದಂತಿರುವ ಬರಗಾಲಗಳು ಇಲ್ಲಿ ಸಹಜವಾಗಿ ಬಿಟ್ಟಿವೆ. ನೀರಾವರಿ ಕಡಿಮೆ ಇರುವ ಈ ಪ್ರದೇಶದಲ್ಲಿ ರೈತ ಮಳೆಯನ್ನೇ ಅವಲಂಬಿಸಿದ್ದಾನೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜಕಾರಣಿಗಳು ರೈತನ್ನು ಮರೆತುಬಿಡುತ್ತಾರೆ. ಹೀಗಾಗಿ ರೈತನ ಪಾಡು ಬಯಲುನಾಡಿನ ಪ್ರದೇಶಗಳಲ್ಲಿ ಚಿಂತಾಜನಕವಾಗಿದೆ.

ಮಳೆ ಬಂದರೆ ಮಾತ್ರ ಇಲ್ಲಿ ಬಡವರ ಮುಖದಲ್ಲಿ ಮಂದಹಾಸ ಕಾಣಿಸುತ್ತದೆ. ಮಳೆ ಬಂದು, ಬೆಳೆ ಬೆಳೆದು ಸುಗ್ಗಿ ಹತ್ತಿರವಾದಾಗ ರೈತರಲ್ಲಿ ಸಂಭ್ರಮ ಮೂಡುತ್ತದೆ. ಸುಗ್ಗಿ ಹಾಡುಗಳು ರೈತ ಜಾನಪದದಲ್ಲಿ ಪ್ರಮುಖ ಪಾತ್ರವಹಿಸಿವೆ.

ಜಾನಪದದ ಮೂಲ ನೆಲೆಯೇ ಕೃಷಿ. ಒಕ್ಕಲುತನಕ್ಕೆ ಸಂಬಂಧಿಸಿದ ಸಾಹಿತ್ಯವೇ ಅಲ್ಲಿ ಪ್ರಧಾನವಾಗಿದೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯಿತ ಒಕ್ಕಲಿಗರು, ದಕ್ಷಿಣ ಕರ್ನಾಟಕದಲ್ಲಿ ಗೌಡ ಒಕ್ಕಲಿಗರು ಹಾಗೂ ಕರಾವಳಿ ಹಾಲಕ್ಕಿ ಒಕ್ಕಲಿಗರು ಸೃಷ್ಟಿಸಿದ ಜನಪದ ಸಾಹಿತ್ಯವೇ ಎದ್ದು ಕಾಣುತ್ತದೆ. ಕೃಷಿ ಜಾನಪದ ಇತ್ತೀಚೆಗೆ ಕ್ಷೀಣಿಸತೊಡಗಿದೆ. ಲಕ್ಷಗಟ್ಟಲೆ ಎಕರೆ ಹೊಲವನ್ನು ಎಸ್.ಇ.ಝಡ್ ಹೆಸರಿನಲ್ಲಿ ಖಾಸಗಿ ಕಂಪನಿಗಳು ವಶಪಡಿಸಿಕೊಳ್ಳುತ್ತಲಿವೆ. ಉದ್ಯೋಗೀಕರಣದ ಹೆಸರಿನಲ್ಲಿ ಖಾಸಗಿ ಕಂಪನಿಗಳು ವಶಪಡಿಸಿಕೊಂಡ ರೈತರ ಭೂಮಿ, ರಿಯಲ್ ಎಸ್ಟೇಟ್ ದಂಧೆಯಾಗಿ ಪರಿವರ್ತನಗೊಂಡಿದೆ. ಮುದೊಂದು ದಿನ ಕೃಷಿ ಸಲಕರಣೆಗಳನ್ನು ವಸ್ತು ಸಂಗ್ರಹಾಲಯದಲ್ಲಿ ನೋಡುವ ಸಮಯ ಬಂದೀತೇನೊ ಎಂಬ ಭಯವಾಗತೊಡಗಿದೆ.

ಕೃಷಿಕರ ಅನುಭವ ಅತ್ಯಮೂಲ್ಯವಾದುದು. ಅದನ್ನು ವೈಜ್ಞಾನಿಕ ನೆಲೆಯಲ್ಲಿ ವಿಶ್ಲೇಷಿಸುವ ಪ್ರಯತ್ನಗಳು ನಡೆದಿಲ್ಲ. ನಗರದಲ್ಲಿ ಬಳೆದವರಿಗೆ ಕೃಷಿಕರ ಅನುಭವ ಅರ್ಥವಾಗುವುದೇ ಇಲ್ಲ. ಜಲಜಾನಪದಕ್ಕೆ ಸಂಬಂಧಿಸಿದಂತೆ ಅವರಲ್ಲಿ ವೈವಿಧ್ಯಮಯವಾದ ಅನುಭವಗಳಿವೆ. ಭರಣಿ, ರೋಣಿ, ಆರಿದ್ರ, ಅಶ್ವಿನಿ, ಮೃಗಶಿರ, ಉತ್ತರಿ, ಸ್ವಾತಿ, ಚಿತ್ತಿ, ವಿಶಾಖ ಮಳೆಗಳಿಗೆ ಸಂಬಂಧಿಸಿದಂತೆ ಕೃಷಿಕರಲ್ಲಿರುವ ನಂಬಿಕೆಗಳು ಅಧ್ಯಯನ ಯೋಗ್ಯವಾಗಿವೆ. ಒಕ್ಕಲಿಲ್ಲದ ಊರು, ಮಕ್ಕಳಿಲ್ಲದ ಮನೆ ವ್ಯರ್ಥವೆಂದು ಹೇಳಲಾಗಿದೆ. ಹಸಿಯಾದಾಗ ಬಿತ್ತಿ, ಹಸಿವಾದಾಗ ಉಂಡು, ಗಾಳಿ ಬಿಟ್ಟಾಗ ತೂರು ಎಂಬುದು ಅವರ ಅನುಭವದ ಮಾತು.

ರೈತ ಮಳೆಯನ್ನೇ ನೆಚ್ಚಿದ್ದಾನೆ. ಬಯಲುಸೀಮೆಯ ರೈತರಂತೂ ಯಾವಾಗಲೂ ಮುಗಿಲಕಡೆಗೇ ನೋಡುತ್ತಿರುತ್ತಾರೆ. ಹೀಗಾಗಿ ಜಲ ಜಾನಪದಕ್ಕೆ ಸಂಬಂಧಿಸಿದಂತೆ ಅವರಲ್ಲಿ ವಿಶಿಷ್ಟವಾದ ಅನುಭವಗಳಿವೆ.

“ಮಳೆ ಬಂದರೆ ಕೇಡಲ್ಲ, ಮಗ ಉಂಡರೆ ಕೇಡಲ್ಲ” ಎಂಬ ಗಾದೆ ಮಾತಂತೂ ಜನಪ್ರಿಯವಾಗಿದೆ. ಮುಂಜಾನೆ ಬರುವ ಮಳೆಗಿಂತ ರಾತ್ರಿ ಬರುವ ಮಳೆಯೇ ರೈತರಿಗೆ ಅನುಕೂಲ. ಆದುದರಿಂದ ಅವರು “ಮುಂಜಾನೆ ಬಂದ ಮಳಿಯಲ್ಲ, ಮಧ್ಯಾಹ್ನ ಬಂದ ಅಳಿಯನಲ್ಲ” ಎಂಬ ಗಾದೆ ಮಾತನ್ನು ಕಟ್ಟಿಕೊಂಡಿದ್ದಾರೆ. “ರೋಣಿ ಮಳಿ ಹೊಡದರ ಓಣಿ ತುಂಬಾ ಜ್ವಾಳ” ಎಂಬ ಗಾದೆ ಮಾತು ಎಲ್ಲ ಕಾಲಕ್ಕೂ ದಿಟವಾಗಿದೆ. ಈ ಮಾತಿನ ಹಿಂದಿರುವ ವೈಜ್ಞಾನಿಕ ಸತ್ಯವೇನೆಂಬುದನ್ನು ಇಂದು ಖಗೋಲಶಾಸ್ತ್ರದ ಮೂಲಕ ಕಂಡುಕೊಳ್ಳಬೇಕಾಗಿದೆ. “ಮೃಗ ಮಿಂಚಬಾರದು, ಆರಿದ್ರ ಗದ್ದರಿಸಬಾರದು” ಎಂಬಂತಹ ನುಡಿಯಲ್ಲಿರುವ ಕಾರಣಗಳನ್ನು ತಿಳಿದುಕೊಳ್ಳಬೇಕಾಗಿದೆ. ಆರಿದ್ರ ಮಳಿ ಗದ್ದರಿಸಿದರೆ ಮಂದೆ ಆರುಮಳಿ ಬರುವುದಿಲ್ಲವೆಂಬ ನಂಬಿಕೆಗಿರುವ ವೈಜ್ಞಾನಿಕ ಕಾರಣಗಳನ್ನು ಕೊಂಡುಕೊಳ್ಳಬೇಕಾಗಿದೆ.

೧. ಬರಣಿ ಮಳಿಗೆ ಬತ್ತ ಬಿತ್ತಿ, ಆರಿದ್ರ ಮಳಿಗೆ ಹರಗಿ ಹೊಡೆದರ ಹೇಳಿದಷ್ಟು ಕಾಳು.

೨. ಅಶ್ವಿನಿ ಮಳಿಯಾದರ ಅಶನಕ್ಕೂ ನೆಲೆಯಿಲ್ಲ

೩. ಆರದ್ರ ಮಳಿಗೆ ಗಿಡ ಹಚ್ಚಿದರ ಆರುಕಾಯಿ ಹೆಚ್ಚು

೪. ಆಶ್ಲೇಷ ಮಳಿ ಬಂದರ ಆಸರಾಗತದ

೫. ಉತ್ತಿಗಿ ಬಿತ್ತರಿ, ಸಿವರಾತ್ರಿಗಿ ಕಿತ್ತರಿ

೬. ಆದರ ಮಗಿ ಆಗದಿದ್ದರ ಹೊಗಿ

೭. ವಿಶಾಖ ಮಳಿ ಬಂದರ ವಿಷಾ ತೊಳಿತಾದ

೮. ಸ್ವಾತಿ ಮಳಿಯಾದ ಮ್ಯಾಲ ಯಾತರ ಮಳಿ

ಹೀಗೆ ಮಳೆಗೆ ಸಂಬಂಧಿಸಿದಂತೆ ಕೃಷಿಕರಲ್ಲಿರುವ ಅನುಭವಗಳನ್ನು ಇಂದಿನ ಕೃಷಿವಿಜ್ಞಾನ ಗಮನಿಸಬೇಕಾಗಿದೆ. ಇದರ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ಹುಡುಕ ಬೇಕಾಗಿದೆ.

“ಹೊನ್ನ ಬಿತ್ತೇವ ಹೊಲಕೆಲ್ಲ” ಎಂಬ ರೈತರ ನುಡಿಯಲ್ಲಿ ಮಹತ್ವದ ಧ್ವನಿಯಿದೆ. “ಹರಗುವವನ ಹಲ್ಲು ಚೆಂದ, ಕೂರಿಗೆ ಹೊಡೆಯೋನ ದಟ್ಟಿಸುತ್ತಿದ್ದ ನಡು ಚೆಂದ” ಎಂಬಂತಹ ನುಡಿಗಳು ಬಿತ್ತುವಾಗಿನ ಸಂಭ್ರಮವನ್ನು ವಿವರಿಸುತ್ತವೆ. ಹಂತಿಯ ಹಾಡುಗಳಲ್ಲಿ ಸುಗ್ಗಿ ಸಂಭ್ರಮವನ್ನು ಕಾಣಬಹುದಾಗಿದೆ. ಮಳೆ ಭೂಮಿ – ಕೃಷಿ ಸಲಕರಣೆಗಳು ಆಯಗಾರರು ಇವೆಲ್ಲ ರೈತ ಜಾನಪದದಲ್ಲಿ ಬರುತ್ತವೆ. ರೈತನ ವೃತ್ತಿ ಸಲಕರಣೆಗಳಲ್ಲಿ ಆಧುನಿಕತೆ ಬೆಳೆದಂತೆಲ್ಲ ಬದಲಾವಣೆಯಾಗಿರುವುದನ್ನು ಕಾಣಬಹುದಾಗಿದೆ. ಎತ್ತು ಮತ್ತು ನೇಗಿಲು ಸ್ಥಾನದಲ್ಲೀಗ ಟ್ರ್ಯಾಕ್ಟರ್ ಬಂದಿದೆ. ಸೆಗಣೆಗೊಬ್ಬರದ ಸ್ಥಾನದಲ್ಲಿ ರಾಸಾಯನಿಕ ಗೊಬ್ಬರ ಬಂದಿದೆ. ದೇಸಿ ತಳಿಗಳಿಗೆ ಬದಲಾಗಿ ಹೈಬ್ರಿಡ್ ತಳಿಗಳು ಬಂದಿವೆ. ರೈತ ತನ್ನ ಅಸ್ತಿತ್ವಕ್ಕಾಗಿ, ಹೆಚ್ಚುವರಿ ಫಸಲು ಪಡೆಯುವುದಕ್ಕಾಗಿ ಅಧುನಿಕತೆಯ ಬೆನ್ನುಹತ್ತಿ ಅನೇಕ ಸಲ ಮೋಸ ಹೋಗಿದ್ದಾನೆ. ಅಧುನಿಕ ಉತ್ಪನ್ನಗಳು ರೈತನಿಗಿರಬಾರದೆಂದಲ್ಲ, ಆದರೆ ಅವು ರೈತರ ಬದುಕಿಗೆ ಪೂರಕವಾಗಿರಬೇಕು. ಹೊಸ ಹೊಸ ತಂತ್ರಜ್ಞಾನದ ಆವಿಷ್ಕಾರಗಳು ರೈತರಿಗೆ ಯೋಗ್ಯ ಬೆಲೆಯಲ್ಲಿ ದೊರೆಯುವಂತಾಗಬೇಕು ಆಗ ಮಾತ್ರ ರೈತರಿಗೆ ಆಧುನಿಕತೆಯಲ್ಲಿ ಭರವಸೆ ಮೂಡುತ್ತದೆ.

ಕೃಷಿ ಜಾನಪದದಲ್ಲಿ, ರೈತ ಜನಪದದ ಜತೆಗೆ ಇನ್ನೂ ಅನೇಕ ಉಪ ವಿಭಾಗಗಳಿವೆ. ರೇಷ್ಮೆ ಕೃಷಿ, ಪಶು ಸಾಕಾಣಿಕೆ, ಮೀನು ಕೃಷಿ ಕುರಿ ಸಾಕಾಣಿಕೆ, ಹೈನುಗಾರಿಕೆ ಇವೆಲ್ಲ ಕೃಷಿ ಜಾನಪದದ ಭಾಗಗಳಾಗಿವೆ. ಜಾಗತೀಕರಣದ ನೇರ ಪರಿಣಾಮ ಇಂದು ಕೃಷಿ ಜಾನಪದದ ಮೇಲಾಗಿದೆ. ಅಮೇರಿಕನ್ ಭಾಷೆ ಮತ್ತು ಜೀವನಶ್ಯೆಲಿಯನ್ನು ಜಾಗತೀಕರಣಗೊಳಿಸುತ್ತ ಸ್ಥಳೀಯವಾದುದನ್ನು ತುಚ್ಛೀಕರಿಸುವ ಜಾಗತೀಕರಣವು, ಜಾನಪದಕ್ಕೆ ಕೊಡಲಿಪೆಟ್ಟು ಕೊಟ್ಟಿದೆ. ಇತ್ತೀಚಿನ ದಶಕಗಳಲ್ಲಿ ರೈತರು ಕಂಗಾಲಾಗುತ್ತಿರಲು, ಗುಳೆ ಹೊಗುತ್ತಿರಲು ಜಾಗತೀಕರಣದ ಬೆಳೆವಣಿಗೆಯೇ ಪ್ರಮುಖ ಕಾರಣವಾಗಿದೆ. ರೈತರಿಗೆ ಕೃಷಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿದೆ.