ಜಾತಿ – ಜನಾಂಗಿಕ ವರ್ಗೀಕರವು ಅಧ್ಯಯನದ ಅನುಕೂಲಕ್ಕಾಗಿದೆಯೇ ಹೊರತು ಒಡೆದಾಳುವುದಕ್ಕಲ್ಲ. ಆದರೆ ಆಳುವ ವ್ಯವಸ್ಥೆ ಚರಿತ್ರೆಯುದ್ದಕ್ಕೂ ಒಡೆದಾಳುವ ನೀತಿಯನ್ನೇ ಅವಲಂಬಿಸಿಕೊಂಡು ಬಂದಿದೆ. ಜನಪದ ವ್ಯವಸ್ಥೆ ಮಾತ್ರ ಈ ಜನಾಂಗಗಳನ್ನು ಕೂಡಿಸುತ್ತ ಬಂದಿದೆ. ಯಾವುದೇ ಜನಾಂಗ ತನ್ನಷ್ಟಕ್ಕೆ ತಾನು ಮೇಲೂ ಅಲ್ಲ – ಕೀಳೂ ಅಲ್ಲ. ಆದರೆ ಆಳುವ ವ್ಯೆವಸ್ಥೆ ತನ್ನ ಸ್ವಾರ್ಥಕ್ಕಾಗಿ ಜನಾಂಗ – ಜನಾಂಗಗಳಲ್ಲಿ ದ್ವೇಷವನ್ನು ಹುಟ್ಟು ಹಾಕುತ್ತದೆ. ಆಗ ಕೋಮು ಘರ್ಷಣೆಗಳು ಪ್ರಾರಂಭವಾಗುತ್ತವೆ. ಜನಾಂಗಕ ಅಧ್ಯಯನಗಳಿಂದ ಸಾಂಸ್ಕೃತಿಕ ಸಂಬಂಧಗಳು ಬೆಳೆದು ಜನಾಂಗ – ಜನಾಂಗಗಳಲ್ಲಿ ಸೌಹಾರ್ದತೆಯುಂಟಾಗುತ್ತದೆ. ನಮ್ಮ ಪುರಾತನವಾದ ಸಾಂಸ್ಕ್ರತಿಕ ನೆಲೆಗಳ ಹುಡುಕಾಟಕ್ಕಾಗಿ ಬುಡಕಟ್ಟು ಜಾನಪದವನ್ನೇ ಅವಲಂಬಿಸಬೇಕಾಗುತ್ತದೆ. ಬುಡಕಟ್ಟು ಸಮುದಾಯ – ದಲಿತ ಸಮುದಾಯ – ಶ್ರಮಿಕ ಸಮುದಾಯ ಈ ದೇಶದ ಮೂಲ ಜನಾಂಗವಾಗಿದ್ದು ತಳಸಂಸ್ಕೃತಿಯ ವಾರಸುದಾರರಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ಜನಾಂಗಗಳ ಅಧ್ಯಯನ ನಡೆಯಬೇಕಾಗುತ್ತದೆ. ಅದೇ ರೀತಿ ಪುರೋಹಿತಶಾಹಿ ವಂಚನೆಯಿಂದ ಶೋಷಣೆಗೊಳಗಾದ ಮಹಿಳೆಯರು ಹಾಗೂ ಮುಸ್ಮೀಮರನ್ನು ಕರಿತು ವಿಶೇಷ ಅಧ್ಯಯನಗಳು ನಡೆಯಬೇಕಾಗಿವೆ. ಈ ಎಲ್ಲ ತಳಸಂಸ್ಕೃತಿಗಳ ಅಧ್ಯಯನದ ಮೂಲಕ ಜಾಗತೀಕರಣದ ಸವಾಲುಗಳನ್ನೆದುರಿಸಲು ಸಾಧ್ಯವಿದೆ.

ಸಾವಿರಾರು ವರ್ಷಗಳಿಂದ ನಗರ ಸಂದ್ಕೃತಿಯ ಪ್ರಭಾವಕ್ಕೊಳಗಾದ ಬುಡಕಟ್ಟು ಸಮುದಾಯಗಳು ಗುಡ್ಡಗಾಡು, ಹಿಮಾಲಯ ತೊಪ್ಪಲು ಪ್ರದೇಶಗಳಲ್ಲಿ ನೆಲೆಸಿ ತಮ್ಮ ಉಪ ಭಾಷೆಗಳನ್ನುಳಿಸಿಕೊಂಡಿದ್ದಾರೆ. ಅವರ ಆಚರಣೆಗಳು ಗಮನ ಸೆಳೆಯುತ್ತವೆ ಬೇಟೆಯುಗದ ಅನೇಕ ಆಚರಣೆಗಳನ್ನು ಅಲ್ಲಿ ಕಾಣಬಹುದಾಗಿದೆ.

ಬುಡಕಟ್ಟು ಜನಾಂಗಗಳನ್ನು ಕೂಡಾ ಅವುಗಳ ವೃತ್ತಿಗಳನ್ನಾಧರಿಸಿ ವರ್ಗೀಕರಣ ಮಾಡಲಾಗಿದೆ. ಬೇಟೆ ಮಾಡಿ ಆಹಾರ ಸಂಗ್ರಹಿಸುವ ಬುಡಕಟ್ಟುಗಳು, ಪಶುಪಾಲಕ ಬುಡಕಟ್ಟುಗಳು, ಕೃಷಿಕ ಬುಡಕಟ್ಟುಗಳು, ಅಪರಾಧಿ ಅಲೆಮಾರಿ ಬುಡಕಟ್ಟುಗಳು ಹೀಗೆ ಈ ವರ್ಗೀಕಣ ಮುಂದುವರಿಯುತ್ತದೆ. ಹೈದ್ರಾಬಾದ ಕರ್ನಾಟಕಪ್ರದೇಶದ ಗಡಿಭಾಗದಲ್ಲಿ ಚೆಂಚರು, ಅಡವಿ ಚೆಂಚರು, ರಾಜಗೊಂಡ, ಹಕ್ಕಿಪಿಕ್ಕಿ ಬುಡಕಟ್ಟುಗಳು ಜೀವನೋಪಾಯಕ್ಕಾಗಿ ಅಲೆಮಾರಿ ಬುಡಕಟ್ಟುಗಳಾಗಿವೆ. ಕಾಡುಕುರುಬ, ಸೋಲಿಗ, ಅಡವಿ ಚಂಚರು, ಕುಮ್ರಿ, ಬೇಡ, ಹಿಕಿಪಿಕ್ಕಿ ಈ ಮೊದಲಾದ ಬುಡಕಟ್ಟುಗಳು ಇಂದಿಗೂ ಬೇಟೆಯನ್ನೇ ಅವಲಂಬಿಸಿವೆ. ಹಸಲ, ಇರುಳ, ಕೋಟ ಜೋಡ , ಯರವ ಈ ಮೊದಲಾದ ಬುಡಕಟ್ಟುಗಳು ಪಶುಪಾಲನೆ ವೃತ್ತಿಯಲ್ಲಿವೆ. ಹಾಲಕ್ಕಿ ಒಕ್ಕಲಿಗ, ಕೊರಗ, ಗೊಂಡ ಈ ಮೊದಲಾದ ಬುಡಕಟ್ಟುಗಳ ಬಗೆಗೆ ಅಧ್ಯಯನಗಳು ನಡೆದಿವೆ. ಕನ್ನಡ ವಿಶ್ವವಿದ್ಯಾಲಯದಿಂದ ಬುಡಕಟ್ಟು ಜನಾಂಗ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ಕೃತಿಗಳು ಪ್ರಕಟವಾಗಿವೆ.

ಕೇರಳ ರಾಜ್ಯದ ವೈನಾಡು ಜಿಲ್ಲೆಯ ಮುತಂಗಾ ಅರಣ್ಯ ಪ್ರದೇಶದಲ್ಲಿ ಕರ್ನಾಟಕದಿಂದ ವಲಸೆ ಹೋದ ಆದಿವಾಸಿಗಳಿದ್ದಾರೆ. ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ಹಾಗೂ ಬೇಗೂರು ಪ್ರದೇಶದಲ್ಲಿ ಕಾಡಕುರುಬ, ಜೇನಕುರುಬ ಜನಾಂಗಗಳಿವೆ. ಮುತಂಗಾ ಅರಣ್ಯ ಪ್ರದೇಶದಲ್ಲಿ ಕಟ್ಟು ನಾಯಕನ್, ಫಣಿಯನ್, ಅಡಿಯನ್, ಉರಲಿ ಕುರುಮನ್ (ಬೆಟ್ಟಕುರುಬ), ಕಾಡರ್, ಕೊರಗ, ಕುರಿಚೆಯನ್ ಈ ಮುಂತಾದ ಜನಾಂಗಗಳು ನೆಲೆಸಿವೆ. ಲಂಬಾಣಿ ಜನಾಂಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಧ್ಯಯನಗಳು ನಡೆದಿವೆ.

ದಲಿತರು ಸಾಹಿತ್ಯ ಸಂಸ್ಕೃತಿಯ ಮುಖ್ಯ ವಾಹಿನಿಯಲ್ಲಿ ಬಂದು ಸಾಧನೆ ಮಾಡಿದ್ದು ಹನ್ನೆರಡನೇ ಶತಮಾನದ ವಚನ ಚಳುವಳಿಯ ಸಂದರ್ಭದಲ್ಲಿ ಹಾಗೂ ಜನಪದ ಸಾಹಿತ್ಯ ಸಂದರ್ಭದಲ್ಲಿ, ಮಂಟೇಸ್ವಾಮಿ, ಮಾದೇಶ್ಚರ, ಎತ್ತಪ್ಪ, ಜುಂಜಪ್ಪ ಈ ಸಂಸ್ಕ್ರತಿಕ ನಾಯಕರು ಜಾನಪದವನ್ನು ಬೆಳೆಸಿದರು, ಸಮುದಾಯಗಳ ನಡುವೆ ಸಾಮರಸ್ಯ ತಂದರು. ಹನ್ನೇರಡನೇ ಶತಮಾನದ ವಚನ ಚಳುವಳಿಯ ಸಂದರ್ಭದಲ್ಲಿ ದೇವರೇ ದಲಿತರ ಭಕ್ತಿಗೆ ಮೆಚ್ಚಿ ಅವರ ಮನೆಗೆ ಬಂದರೆ, ಜನಪದದಲ್ಲಿ ಮಂಟೇಸ್ವಾಮಿ, ಮಲೆಮಾದೇಶ್ವರರಂತಹ ದಲಿತ ಸಾಧಕರು ಸ್ವತಹ ದೇವರೇ ಆಗಿಬಿಟ್ಟಿದ್ದಾರೆ. ಇಂದು ಈ ಎರಡೂ ದೈವಗಳಿಗೆ ಸಹಸ್ರಾರು ಭಕ್ತರು ನಡೆದುಕೊಳ್ಳುತ್ತಿದ್ದಾರೆ. ದಲಿತ ಜಾನಪದ ಇಂದು ಹೊಸ ಸಾದ್ಯತೆಗಳ ಹಿನ್ನೆಲೆಯಲ್ಲಿ ಬೆಳೆಯುತ್ತಲಿದೆ.

ಜಾನಪದಕ್ಕೆ ಮುಸ್ಲಿಂ ಜನ ಸಮುದಾಯ ನೀಡಿದ ಕೊಡುಗೆ ಗಮನಾರ್ಹವಾಗಿದೆ. ಇದನ್ನು ಮುಸ್ಲಿಂ ಜಾನಪದವೆಂದು ಕರೆಯುವುದು. ಸಂಕುಚಿತವೆನಿಸಿದಾದರೂ ಅಧ್ಯಯನದ ದೃಷ್ಟಿಯಿಂದ ಇಂತಹ ವರ್ಗೀಕರಣಗಳು ಅನಿವಾರ್ಯವಾಗುತ್ತವೆ. ಮೊಹರಂ ಹಬ್ಬದ ಆಚರಣೆಗಳು ಹಿಂದೂ – ಮುಸ್ಲಿಂ ಭಾವ್ಯೆಕ್ಯತೆಗೆ ಸಾಕ್ಷಿಯಾಗಿವೆ. ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಮುದಗನಲ್ಲಿನಲ್ಲಿ ಮೊಹರಂ ಹಬ್ಬಕ್ಕಾಗಿ ಲಕ್ಷಾಂತರ ಜನ ಸೇರುತ್ತಾರೆ. ಮೊಹರಂ ಹಾಡುಗಳು ಕೇಳುವ ಕಿವಿಗಳಲ್ಲಿ ಕರುಣೆಯನ್ನು ಬಿತ್ತುತ್ತವೆ. ಹಸನ್ – ಹುಸೇನ ಕುರಿತಾದ ನೂರಾರು ಪದಗಳನ್ನು ಕಲಾವಿದರು ರಾತ್ರಿಯಿಡೀ ಹಾಡುತ್ತಾರೆ. ಮುದಗಲ್ಲಿನಲ್ಲಿ ಮುಸಿಂ ಮನೆತನಗಳು ತುಂಬ ವಿರಳ. ಆದರೆ ಮಹರಂ ಹಬ್ಬ ಮಾತ್ರ ರಾಜ್ಯದಲ್ಲಿಯೇ ವಿಜೃಂಭಣೆಯಿಂದ ನಡೆಯುವುದು ಮುದಗಲ್ಲಿನಲ್ಲಿ ಎಂಬ ವಿಷಯ ತಿಳಿದಾಗ ನಮ್ಮ ಸಮುದಾಯಗಳಲ್ಲಿರುವ ಸೌಹಾರ್ದತೆ ಎಂತಹದೆಂಬುದು ಅಧ್ಯಯನ ಮಾಡಿದಾಗ ಅರಿವಿಗೆ ಬರುತ್ತದೆ.

ನಾನು ತತ್ವಪದಕಾರರ ಬಗೆಗೆ ಕ್ಷೇತ್ರಕಾರ್ಯ ಮಾಡುವಾಗ ಜನಸಮುದಾಯದ ಸೌಹಾರ್ದತೆಯನ್ನು ಕಂಡು ಬೆರಗಾಗಿದ್ದೇನೆ. ಶಿಶುನಾಳ ಶರೀಪ – ಗೋವಿಂದ ಭಟ್ಟರ ಶಿಷ್ಯ , ಅದೇ ರೀತಿ ಚೆನ್ನೂರು ಜಲಾಲಸಾಹೇಬ, ಕೂಡಲೂರ ಬಸವಲಿಂಗನ ಶಿಷ್ಯ, ಚಿತಾಪುರ ತಾಲೂಕಿನ ಅಣಕ ಸೂಗೂರು ಗ್ರಾಮದಲ್ಲಿ ಕ್ರಿ. ಶ. ೧೭೭೦ರಲ್ಲಿ ಜನಿಸಿದ ಜಲಾಲ ಸಾಹೇಬ ಕನ್ನಡದ ಮೊದಲ ಮುಸ್ಲಿಂ ತತ್ವಪದಕಾರ. ಅದೇ ರೀತಿ ಮೋಚನಳ್ಳಿ ಹಸನಸಾಹೇಬನ ಆರಾಧ್ಯದ್ಯೆವ ಇಟಗಾದ ವೀರಭದ್ರ, ಆ ವೀರಭದ್ರ ದೇವನೇ ಹಸನಸಾಹೇಬನ ತತ್ವಪದದಲ್ಲಿ ‘ಇಟಪುರೀಶ’ ಅಂಕಿತದಲ್ಲಿ ಪ್ರಕಟಗೊಂಡಿದ್ದಾನೆ.

ಸರಪುರ ತಾಲೂಕಿನ ಗೋನಾಳ ಗ್ರಾಮದಲ್ಲಿ ಜನಿಸಿದ ಮೌನೇಶ್ವರರು ಈ ಪ್ರದೇಶದ ಜನತೆಯಲ್ಲಿ ಖ್ವಾಜಾ ಅಮೀನದೀನರ ಅವತಾರವೆಂದೇ ಪ್ರಸಿದ್ಧರಾಗಿದ್ದಾರೆ. ಅದೇ ರೀತಿ ಕೊಡೇಕಲ್ಲ ಬಸವಣ್ಣನವರನ್ನೂ ಮಹಮ್ಮದ ಪೈಗಂಬರ ಅವರ ಅವತಾರವೆಂದು ಜನ ಪೂಜಿಸುತ್ತಾರೆ. ಕಲಬುರ್ಗಿ ಶರಣ ಬಸವೇಶ್ವರ ಹಾಗೂ ಖಾಜಾ ಬಂದೇ ನವಾಜ ಅವರ ಸಾಂಸ್ಕ್ರತಿಕ ಸಮನ್ವಯ ಇಂದಿಗೂ ಮಾದರಿಯಾಗಿದೆ. ಖಾಜಾ ಬಂದೇ ನವಾಜ ದರ್ಗಾದಿಂದ, ಪುರುಷ ಬಟ್ಟಲು ಬಂದ ನಂತರವೇ ಶರಣ ಬಸವೇಶ್ವರ ಜಾತ್ರೆ ಪ್ರಾರಂಭವಾಗುತ್ತದೆ. ಕೊಡೇಕಲ್ಲ ಬಸವಣ್ಣನ ಜಾತ್ರೆ ಹಿಂದೂ – ಮುಸ್ಲಿಂ ಭಾವ್ಯೆಕ್ಯತೆಗೆ ಹೆಸರಾಗಿದೆ. ಸುರಪುರ ತಾಲೂಕಿನ ಕೊದೇಕಲ್ಲ ಗ್ರಾಮದಲ್ಲಿರುವ ಈ ಗುಡಿ ಹೊರಗೆ ಮಸೀದಿಯಂತೆ ಕಾಣುತ್ತದೆ. ಒಳಗೆ ಗೋರಿಯ ಆಕಾರದಲ್ಲಿ ಗದ್ದುಗೆಯಿದೆ. ಇಲ್ಲಿಯ ಸ್ವಾಮಿಗಳಿಗೆ ಲಿಂಗವಿಲ್ಲ. ಹೀಗೆ ಹಿಂದೂ – ಮುಸ್ಲಿಂ ಜನಾಂಗಗಳ ಸಮನ್ವಯತೆಗೆ ಸಾಕ್ಷಿಯಾಗಿ ಕೊಡೇಕಲ್ಲ ಕಾಣಿಸಿಕೊಳ್ಳುತ್ತದೆ. ಶಿರಹಟ್ಟಿ ಫಕೀರೇಶ್ವರ ಪುರಾಣವನ್ನು ಬರೆದವರು ದ್ಯಾಂಪೂರ ಚೆನ್ನಕವಿಗಳು. ಅವರು ತಮ್ಮ ಪುರಾಣದಲ್ಲಿ ಖ್ವಾಜಾ ಅಮೀನ ದೀನರು ಶ್ರೀ ಫಕೀರೇಶ್ಚರರ ಗುರುಗಳಾಗಿದ್ದರೆಂದು ತಿಳಿಸುತ್ತಾರೆ. ಹೀಗೆ ಮುಸ್ಲಿಂ ಜಾನಪದದ ಅಧ್ಯಯನಕ್ಕೆ ತೊಡಗಿದರೆ, ಅದು ಸೌಹಾರ್ದ ಜಾನಪದವಾಗಿ ಕಾಣುತ್ತದೆ. ಮಹಿಳಾಜಾನಪದ ಕುರಿತಂತೆ ಇತ್ತೀಚೆಗೆ ಹೊಸ ಚರ್ಚೆಗಳು ಪ್ರಾರಂಭವಾಗಿವೆ. ಮಹಿಳಾ ಜಾನಪದದ ಸಾಧ್ಯತೆಗಳನ್ನು ಪ್ರಕಟಿಸಿದವರಲ್ಲಿ ಶಾಂತಿನಾಯಕ, ಗಾಯತ್ರೀ ನಾವಡ, ಸಂಧ್ಯಾರೆಡ್ಡಿ ಈ ಮುಂತಾದವರು ಪ್ರಮುಖರಾಗಿದ್ದಾರೆ.

ಉತ್ತರ ಕರ್ನಾಟಕದ ಜನಪದ ಸಾಹಿತ್ಯದಲ್ಲಿ ಚಿತ್ರಿತವಾಗಿರುವ ಮಹಿಳೆ ಸಹನಶೀಲಳೂ, ವಿಶಾಲ ಗುಣವುಳ್ಳವಳೂ, ವಿಧೇಯಳೂ ಆಗಿದ್ದರೆ, ಕರಾವಳಿ ಕರ್ನಾಟಕದ ಜನಪದ ಮಹಿಳೆ ದಿಟ್ಟ ಸ್ವಭಾವದವಳೂ, ಹೋರಾಟಗುಣದವಳಾಗಿ ಕಾಣಿಸುತ್ತಾಳೆ. ಸ್ತ್ರೀವಾದಿ ಅಧ್ಯಯನಗಳು ಪ್ರಾರಂಭವಾದಾಗಿನಿಂದ ಸಾಹಿತ್ಯದಲ್ಲಿ ಮಹಿಳೆಯನ್ನು ನೋಡುವ ದೃಷ್ಟಿಕೋನಗಳು ಬದಲಾಗಿವೆ.

ಪಿತೃಪ್ರಧಾನ ವ್ಯವಸ್ಥೆಯ ಉತ್ತರ ಕರ್ನಾಟಕ ಜಾನಪದಕ್ಕೂ, ಮಾತೃಪ್ರಧಾನ ವ್ಯವಸ್ಥೆಯ ಕರಾವಳಿ ಕರ್ನಾಟಕದ ಜಾನಪದಕ್ಕೂ ವ್ಯತ್ಯಾಸವಿದೆ. ಇಲ್ಲಿಯ ಮಹಿಳೆ ತಗ್ಗಿ – ಬಗ್ಗಿ ನಡೆದರೆ, ಅಲ್ಲಿಯ ಮಹಿಳೆ ಸಮಾನತೆ ಕೇಳುತ್ತಾಳೆ. ಗಂಡು ಸಂತಾನ ಕೊಡಿಯೆಂದು ಈ ಕಡೆಯ ಜನಪದ ಮಹಿಳೆ ಕೇಳಿಕೊಂಡರೆ, ಹೆಣ್ಣು ಸಂತಾನ ಕೊಡಿಯೆಂದು ಆ ಕಡೆ ಮಹಿಳೆ ವಿನಂತಿಸುತ್ತಾಳೆ. “ಅತ್ತೆ ಮಾವರಿಗಂಜಿ, ಮತ್ತೆ ಮೈದುನಗಂಜಿ” ಇಲ್ಲಿಯ ಜನಪದ ಗರತಿ ಬದುಕಿದರೆ, ಮಲೆಮಾದೇಶ್ವರ ಕಾವ್ಯದ ಸಂಕಮ್ಮ ಆತ್ಮ ಗೌರವದ ಸಂಕೇತವಾಗಿ ಬದುಕುತ್ತಾಳೆ. “ನೀನು ಕಟ್ಟಿದ ತೆರುವ ತಕ್ಕಯ್ಯ, ನನ್ನ ಹಟ್ಟಿಂದಾಚೆ ಕಳುವಯ್ಯ,” ಎಂದು ಪತಿಯನ್ನೇ ಪ್ರಶ್ನಿಸುವ ಸಂಕಮ್ಮ ತಾನು ಭಾಷೆ ಕೊಡುವುದಿಲ್ಲವೆಂದು ಹೇಳುತ್ತಾಳೆ.

ಶಿಷ್ಟ ರಾಮಾಯಣ – ಮಹಾಭಾರತ ಕಾವ್ಯಗಳಿಗಿರುವಂತೆ, ಜನಪದ ರಾಮಾಯಣ ಮಹಾಭಾರತ ಕಾವ್ಯಗಳೂ ಇವೆ. ಪಗಡೆಯಾಟದಲ್ಲಿ ಪಾಂಡವರು ಸೋತಾಗ, ದುರ್ಯೋಧನ ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ಮಾಡಿಸುತ್ತಾನೆ. ದುಶ್ಯಾಸನ ಆ ಅಪಹರಣ ಕಾರ್ಯ ಮಾಡುತ್ತಾನೆ. ಇದು ಶಿಷ್ಟ ಮಹಾಭಾರತದ ದ್ರೌಪದಿಯ ಚಿತ್ರಣ. ಬೀದರ ಜಿಲ್ಲೆಯ ಬುಲಾಯಿ ಹಾಡುಗಳಲ್ಲಿ ದ್ರೌಪದಿಯೇ ಕೌರವರನ್ನು ಪಗಡೆಯಾಟಕ್ಕೆ ಕರೆದು, ಪಗಡೆಯಾಟದಲ್ಲಿ ಸೋಲಿಸಿ ಮರಳಿ ರಾಜ್ಯವನ್ನು ಪಡೆದು ಪಾಂಡವರಿಗೊಪ್ಪಿಸುತ್ತಾಳೆ. ಇಂತಹ ಮಹಿಳಾ ಸಾಧ್ಯತೆಗಳನ್ನು ಮಹಿಳಾ ಜಾನಪದದಲ್ಲಿ ಕಾಣಬಹುದು.