೧೯೮೦ರಿಂದೀಚೆಗೆ ಸಾಹಿತ್ಯವನ್ನು ನೋಡುವ ದೃಷ್ಟಿಕೋನಗಳು ಬದಲಾದವು. ಸಾಮಾಜಿಕ ಚಳುವಳಿಗಳು ಈ ಜಾಗೃತಿಯನ್ನುಂಟು ಮಾಡಿದವು. ದಲಿತ ಚಳುವಳಿ, ಬಂಡಾಯ ಚಳುವಳಿ, ರೈತ ಚಳುವಳಿ, ಸ್ತ್ರೀವಾದಿ ಚಳುವಳಿ ಕರ್ನಾಟಕಲ್ಲಿ ಬೆಳೆದಂತೆಲ್ಲ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದಂತೆ ಹೊಸ ರೀತಿಯ ಚರ್ಚೆಗಳು ಪ್ರಾರಂಭವಾದವು. ಇದರ ಪ್ರಭಾವ ಜಾನಪದ ಕ್ಷೇತ್ರದ ಮೇಲೂ ಉಂಟಾಯಿತು.

ಜನಪದ ಸಾಹಿತ್ಯದ ಸಂಗ್ರಹಕಾರರು – ಸಂಪಾದಕರೇ ಜಾನಪದ ಕ್ಷೇತ್ರದ ಕೇಂದ್ರವಾಗಿ ಬಿಟ್ಟಿದ್ದರು. ಜಾನಪದವನ್ನು ವೈಭವೀಕರಿಸುವುದೇ ಆ ವಿದ್ವಾಂಸರ ಉದ್ದೇಶವಾಗಿತ್ತು. ಜಾನಪದವೆಂದರೆ ಕೇವಲ ವಿದ್ವಾಂಸರು ಮಾತ್ರವಲ್ಲ. ಅಲ್ಲಿ ಬಹುಸಂಖ್ಯಾತ ಕಲಾವಿದರಿದ್ದಾರೆ. ಮಹಿಳೆಯರಿದ್ದಾರೆ. ಪರ್ಯಾಯ ಸಂಸ್ಕೃತಿಯನ್ನು ಕಟ್ಟಬಲ್ಲ ಶಕ್ತಿ ಸಾಧ್ಯತೆಗಳು ಅಲ್ಲಿವೆಯೆಂಬ ಹೊಸ ಚರ್ಚೆ ಆಧುನಿಕ ಸಂದರ್ಭದಲ್ಲಿ ಪ್ರಾರಂಭವಾಯಿತು. ಆಗ ಜನಪದದ ವಿವಿಧ ಕ್ಷೇತ್ರಗಳು ಅದರ ಒಳ ಹರವುಗಳು ಬಿಚ್ಚಿಕೊಂಡವು. ಜಾನಪದವನ್ನು ಮನಶಾಸ್ತ್ರ, ಸಮಾಜಶಾಸ್ತ್ರ, – ಇತಿಹಾಸ – ಪುರಾಣ – ಮಾನವಶಾಸ್ತ್ರ – ವೈದ್ಯ – ವಿಜ್ಞಾನಿ ಈ ಮುಂತಾದ ಶಿಸ್ತುಗಳೊಂದಿಗೆ ತೌಲನಿಕವಾಗಿ ಅಧ್ಯಯನ ಮಾಡುವ ಕಾರ್ಯ ಪ್ರಾರಂಭವಾಯಿತು. ಇದನ್ನೇ ಆಧುನಿಕ ಆನ್ವಯಿಕ ಜಾನಪದವೆಂದು ಕರೆಯಲಾಗಿದೆ.

ಸಾಂಪ್ರದಾಯಿಕ ಜಾನಪದವಿರುವಂತೆ – ಆಧುನಿಕ ಜಾನಪದವಿದೆ. ಗ್ರಾಮೀಣ ಜಾನಪದದಂತೆ – ನಗರ ಜಾನಪದವಿದೆ. ವಿಧೇಯತೆಯ ಜಾನಪದವಿರುವಂತೆ – ಬಂಡಾಯದ ಜಾನಪದವಿದೆ. ಆರ್ಥಿಕ ಹಿನ್ನೆಲೆಯಲ್ಲಿ, ಜಾಗತೀಕರಣ ನೆಲೆಯಲ್ಲಿ ಜಾನಪದವನ್ನು ವಿಶ್ಲೇಷಿಸುವ ಪ್ರಯತ್ನಗಳು ಇಂದು ನಡೆದಿವೆ. ಊಳಿಗಮಾನ್ಯ ಪದ್ಧತಿಯ ಜಾನಪದದಿಂದ – ಸಮಾಜವಾದಿ ಜಾನಪದದವರಗೆ ಇಲ್ಲಿ ಬೆಳವಣಿಗೆಯಿದೆ. ಅಂತರ್ ಶಿಸ್ತೀಯ ಅಧ್ಯಯನ, ತೌಲನಿಕ ಜಿಜ್ಞಾಸೆ ಇಲ್ಲಿಯಮೆಥಡಾಲಜಿಯಾಗಿದೆ.

ನಗರೀಕರಣ, ಕೈಗಾರೀಕರಣ, ಜಾಗತೀಕರಣದ ನೆಲೆಗಳಿಂದ ಜಾನಪದವನ್ನು ಅಧ್ಯಯನ ಮಾಡಿದಾಗ ಹೊಸ ಹೊಸ ಸಂಗತಿಗಳು ಗೋಚರಿಸುತ್ತವೆ. ತೌಲನಿಕ ಚರ್ಚೆಗಳು ಪ್ರಾರಂಭವಾದಾಗ ಹೊಸ ವಿಷಯಗಳು ಕಾಣಿಸಿಕೊಳ್ಳುತ್ತವೆ. ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ವಿಭಾಗಗಳಲ್ಲಿ ಜಾನಪದ ಸ್ನಾತಕೋತ್ತರ ಅಧ್ಯಯನ ಪ್ರಾರಂಭವಾದ ಮೇಲೆ ಅನೇಕ ಸಂಶೋಧಕರು ಬೆಲೆದು ನಿಂತಿದ್ದಾರೆ. ಜಾನಪದ ಅಕಾಡಮಿಯ ಮೂಲಕ, ಜಾನಪದ ಸಮ್ಮೇಳನಗಳ ಮೂಲಕ ಹೊಸ ವಿಷಯಗಳು ಚರ್ಚೆಯಾಗಿವೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನವನ್ನು ಪ್ರಾರಂಭಿಸಿ ಅನೇಕ ಜಾನಪದ ಕೃತಿಗಳನ್ನು ಪ್ರಕಟಿಸಿದೆ. ಕರ್ನಾಟಕ ವಿಶ್ವವಿದ್ಯಾಲಯವು ಪ್ರತಿ ವರುಷ ಜಾನಪದ ಸಮ್ಮೇಳನಗಳಲ್ಲಿ ಮಂಡಿಸಿದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ತರುವುದರ ಮೂಲಕ ಮಹತ್ವದ ಕಾರ್ಯವನ್ನು ಮಾಡಿದೆ. ಈ ಎಲ್ಲಾ ಸಂಸ್ಥೆಗಳ ಮೂಲಕ ಬೆಳೆದು ಬಂದ ಯುವ ಚಿಂತಕರು ಜಾನಪದವನ್ನು ಇಂದು ಹೊಸ ಆಯಾಮಗಳಲ್ಲಿ ಕಂಡಿರಿಸಿದ್ದಾರೆ. ಒಂದು ಕಾಲದಲ್ಲಿ ಜಾನಪದ ಇಂದು ವಿಜ್ಞಾನ ಜಾನಪದವಾಗಿದೆ. ತಂತ್ರಜ್ಞಾನದ ಜಾನಪದವಾಗಿದೆ.

ಮಾರ್ಕ್ಸ್‌ವಾದಿ ಚಿಂತಕರು, ಬಂಡಾಯ ದಲಿತ ಲೇಖಕರು, ಸ್ತ್ರೀವಾದಿ ಚಿಂತಕರು ಜಾನಪದವನ್ನು ಅಧ್ಯಯನ ಮಾಡತೊಡಗಿದಾಗ ಸಹಜವಾಗಿಯೇ ಜಾನಪದಕ್ಕೆ ಹೊಸ ಕಾಣ್ಕೆಗಳು ಲಭ್ಯವಾಗಿವೆ. ಜಾನಪದವನ್ನು ಬರೀ ಸಾಹಿತ್ಯವನ್ನಾಗಿ ಅಥವಾ ನಮ್ಮದೆಂಬ ಅಭಿಮಾನದಿಂದ ನೋಡುವುದು ಬೇರೆ. ಜಾಗತೀಕರಣದ ತುರ್ತಿನಲ್ಲಿ ಸಮಾಜವಾದಿ ಚಿಂತನೆಯಲ್ಲಿ ಜಾನಪದವನ್ನು ನೋಡುವುದು ಬೇರೆ. ಇಂದು ಎರಡೂ ರೀತಿಯ ಅಧ್ಯಯನಗಳು, ಚರ್ಚೆಗಳು ಸಾಗಿವೆ. ಭಾವಾವೇಶದಿಂದ, ಭಾವೋದ್ವೇಗದಿಂದ ಜಾನಪದವನ್ನು ನೋಡುವುದಕ್ಕೂ, ವೈಜ್ಞಾನಿಕವಾಗಿ, ವಸ್ತುನಿಷ್ಠವಾಗಿ ಜಾನಪದವನ್ನು ಓದುವುದಕ್ಕೂ ವ್ಯತ್ಯಾಸವಿದೆ.

ಡಾ. ಹಿ.ಶಿ. ರಾಮಚಂದ್ರೇಗೌಡರು ಜಾನಪದವನ್ನು ಸಮಾಜವಾದೀ ನೆಲೆಯಲ್ಲಿ ನೋಡುತ್ತಾರೆ. ಅವರು ತಮ್ಮ ಲೇಖನದಲ್ಲಿ ಹೀಗೆ ಹೇಳುತ್ತಾರೆ. “ನಮ್ಮ ಜಾನಪದ ಕಲ್ಪನೆಯ ಹುಟ್ಟಿನಲ್ಲಿ ಈ ವಿಶೇಷ ವಿಜ್ಞಾನದ ಹಿನ್ನೆಲೆಯಿದೆ. ೧೮ನೇ ಶತಮಾನದ ಕೈಗಾರೀಕರಣವೇ ಜಾನಪದವನ್ನು ಹುಟ್ಟುಹಾಕಿದ್ದು. ಅದುವರೆಗೆ ಎಲ್ಲರ ಸಾಮಾನ್ಯ ವಿಜ್ಞಾನವಾಗಿದ್ದ ಜಾನಪದ ಅಂದು ಸಾಮಾನ್ಯರೆನ್ನುವವರ ಉತ್ಪತ್ತಿಯಾಗಿ ಪರಿಣಮಿಸಿತು. ಇಡೀ ಶತಮಾನ ಉತ್ಪತ್ತಿ ಆಧಾರಿತ ಸಾಮಾಜಿಕ ಪರಿಸ್ಥಿತಿಯಾಗಿ, ಜಾನಪದವನ್ನು ಸಾಮಾನ್ಯರ ಉತ್ಪತ್ತಿ ಎಂತಲೂ, ಕೈಗಾರಿಕಾ ಸಂಶೋಧನೆಯನ್ನು ವಿಶೇಷ ಉತ್ಪತ್ತಿ ಎಂದೂ ಪರಿಗಣಿಸಿತು. ಮೂಲತಃ ಉತ್ಪತ್ತಿಯೇ ಅವರ ಎದುರಿನ ಉದ್ದೇಶವಾದ್ದರಿಂದ ಉತ್ಪತ್ತಿಯ ಮೂಲ, ಅವರ ನೈಪುಣ್ಯ ಮತ್ತು ಅದರ ಆರೋಗ್ಯಕರ ಸಂರಕ್ಷಣೆಯನ್ನು ಮರೆತು, ಕೇವಲ ಕಣ್ಣ ಮುಂದೆ ಲೆಕ್ಕದಲ್ಲಿ ಕಾಂಉವ ಉತ್ಪತ್ತಿಗೆ ಪ್ರಾಧಾನ್ಯತೆಯನ್ನು ನೀಡಿತು. ಕೈಗಾರೀಕರಣ ಪ್ರತಿಕ್ರಿಯೆಯಲ್ಲಿ ಕಾರ್ಮಿಕ ಮತ್ತು ಅವನ ದುಡಿಮೆ ಗೌಣವಾದಂತೆ Folkloreನಲ್ಲಿ Loreಗೆ ಪ್ರಾಧಾನ್ಯತೆ ಬಂದು Folk ಅವಗಣನೆಗೆ ಗುರಿಯಾಯಿತು. ಈ ಹಿನ್ನೆಲೆಯಲ್ಲಿ ಬದುಕಿದ್ದ ಮತ್ತು ಜಾನಪದವನ್ನು ಅರ್ಥಮಾಡಿಕೊಂಡ ಹಳೆಯ ತಲೆಮಾರಿನ ಜಾನಪದಜ್ಞರೆಲ್ಲ Folkloreನಲ್ಲಿ Loreಗೆ ಒತ್ತು ಕೊಡುವುದನ್ನು ನಾವಿಂದು ಅವರ ನಿರೂಪಣೆಗಳಿಂದ ಅರ್ಥಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.* ಡಾ. ರಾಮಚಂದ್ರೇ ಗೌಡರು ಜಾನಪದ ಅಕಾಡೆಮಿ ಅದ್ಯಕ್ಷರಾಗಿದ್ದಾಗ ಜಾನಪದದ ಹೊಸ ಬಾಗಿಲುಗಳನ್ನು ತೆರೆದರು.

ಜಾನಪದಕ್ಕೂ ಕೈಗಾರೀಕರಣಕ್ಕೂ ವಿರುದ್ಧವೆಂದು ತಿಳಿದ ಮನಸ್ಸುಗಳು. ಇಂತಹ ಹೊಸ ತಲೆಮಾರಿನ ಚಿಂತಕರಿಂದ ಹೊಸ ಚರ್ಚೆಯನ್ನು ಪ್ರಾರಂಭಿಸಿದವು. ಇದರ ಅವದಿಯಲ್ಲಿ ನಡೆದ ವಿಚಾರ ಸಂಕೀರ್ಣಗಳಲ್ಲಿ ದಲಿತ – ಬಂಡಾಯ ಲೇಖಕರು, ಮಾರ್ಕ್ಸ್‌ವಾದಿ ಸ್ತ್ರೀವಾದಿ ಲೇಖಕರು ಭಾಗವಹಿಸಿ ಜಾನಪದದ ಹೊಸ ಸಾಧ್ಯತೆಗಳ ಬಗೆಗೆ ಚರ್ಚಿಸಿದರು.

ಬೀಸುವುದು – ಕುಟ್ಟುವುದು ಕಡಿಮೆಯಾದ ಮೇಲೆ ಜಾನಪದ ಸತ್ತೇ ಹೋಯಿತೆಂದು ಬಡಬಡಾಯಿಸಿದವರೂ ಇದ್ದಾರೆ. ಆದರೆ ಜಾನಪದ ಎಂದಿಗೂ ಸಾಯುವುದಿಲ್ಲವೆಂದು ಹೊಸ ವಿಮರ್ಶೆ ಸ್ಪಷ್ಟಪಡಿಸಿತು. ಜಾನಪದ ಆಚರಣೆಗಳಿಗೂ ಜಾತಿಪದ್ಧತಿಗೂ ಸಂಬಂಧವಿದೆಯೆಂದು ವಾದಿಸಿದ ಹೊಸ ಚಿಂತಕರು ಜಾನಪದದ ಮೂಲಕವೇ ಜಾತಿ ವ್ಯವಸ್ಥೆಯನ್ನು ಹೊಡೆದೋಡಿಸುವ ಆಶಯಗಳನ್ನು ಮಂಡಿಸಿದರು. ಅದೇ ರೀತಿ ವರ್ಗ ಹೋರಾಟದ ನೆಲೆಗಳನ್ನು ಕಟ್ಟಿಕೊಟ್ಟ ಮಾರ್ಕ್ಸ್‌ವಾದಿ ಚಿಂತಕರು ಜಾನಪದವನ್ನು ಬೇರೆ ರೀತಿಯಾಗಿ ಅಥ್ಯೆಸಿದರು.

ಇಪ್ಪತ್ತನೇ ಶತಮಾನದಲ್ಲಿ ವಸಾಹತೀಕರಣ ಕೊನೆಗೊಂಡರೆ, ಇಪ್ಪತ್ತೋಂದನೇ ಶತಮಾನದಲ್ಲಿ ಜಾಗತೀಕರಣ ತೀವ್ರಗೊಂಡಿತು. ವಸಾಹತೀಕರಣಕ್ಕಿಂತ ಜಾಗತೀಕರಣ ಹೆಚ್ಚು ಅಪಾಯಕಾರಿ. ಆಗ ವೈರಿ ಎದಿರಿಗಿದ್ದ, ಈಗ ವ್ಯೆರಿ ಕಣ್ಣಿಗೆ ಕಾಣಿಸುತ್ತಿಲ್ಲ. ಆತ ನಮ್ಮೊಳಗಡೆಯೇ ನುಸುಳಿಬಿಟ್ಟಿದ್ದಾನೆ. ಆ ವೈರಿಯನ್ನು ಹೊರತೆಗೆದು ನಮ್ಮೊಳಗನ್ನು ಶುದ್ಧೀಕರಿಸಿಕೊಳ್ಳಬೇಕಾದರೆ ಜಾನಪದ ದೇಸಿ ಚಿಂತನೆ ಅನಿವಾರ್ಯವಾಗಿದೆ.

ಜಾನಪದವು ನೈಸರ್ಗಿಕ ಸಂಪತ್ತನ್ನು ಬಳಸಿಕೊಂಡು ಜನಸಮುದಾಯವನ್ನು ಬೆಳೆಸಿದರೆ, ಜಾಗತೀಕರಣವು ನಿಸರ್ಗಸಂಪತ್ತನ್ನು ಲೂಟಿ ಮಾಡಿ ಬಡವರನ್ನು ನಾಶಗೊಳಿಸುತ್ತದೆ. ಜನಪದರ ಉತ್ಪಾದನೆಗಳು ಪರಿಸರ ಸ್ನೇಹಿಯಾಗಿದ್ದರೆ, ಜಾಗತೀಕರಣದ ಉತ್ಪನ್ನಗಳು ಪರಿಸರ ಮಾರಕವಾಗಿವೆ. ಜಾನಪದ ಜೀವನ ಶೈಲಿ ಉಳಿಸಿ ಬೆಳೆಸಿದರೆ ಜಾಗತೀಕರಣದ ಜೀವನ ಶೈಲಿ ಬಳಸಿ, ಬಿಸಾಡುತ್ತದೆ. ಜನಪದರ ಆದರ್ಶ ಜೀವಸಂಕುಲವನ್ನು ಬೆಳೆಸಿದರೆ, ಜಾಗತೀಕರಣದ ಆದರ್ಶ ಶ್ರೀಮಂತ ಮನುಷ್ಯರನ್ನು ಬೆಳೆಸುವುದಾಗಿದೆ. ಜಾನಪದವು ಸ್ಥಳೀಯವಾದುದ್ದನ್ನು ಗೌರವಿಸಿದರೆ, ಜಾಗತೀಕರಣವು ಅದನ್ನು ತುಚ್ಛೀಕರಿಸುತ್ತದೆ. ಈ ರೀತಿಯ ತೌಲನಿಕ ಅಧ್ಯಯನಗಳು ಇತ್ತೀಚೆಗೆ ಪ್ರಾರಂಭವಾಗಿವೆ.


* ಸುವರ್ಣ ಜಾನಪದ-ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಂ. ಡಾ.ಹಿ.ಶಿ. ರಾಮಚಂದ್ರೇಗೌಡ, ಪುಟ ೫೪೧.