ಜನಪದ ಸಾಹಿತ್ಯದ ಸೃಜನಶೀಲ ಪ್ರಕಾರಗಳ ಅಧ್ಯಯನ ಈಗಾಗಲೇ ನಡೆದಿದೆ. ಆದರೆ ಜನಪದ ಸೃಜನೇತರ ಸಾಹಿತ್ಯ ಕುರಿತ ಚಂತನೆ, ವೈಚಾರಿಕ ಜಾನಪದದ ಹುಡುಕಾಟ ಇನ್ನೂ ನಡೆಯಬೇಕಾಗಿದೆ. ಜನಪದರು ಕೇವಲ ಕವಿಗಳು ಮಾತ್ರವಾಗಿರದೆ, ಅವರು ಕುಶಲಕರ್ಮಿಗಳಾಗಿದ್ದರು, ಕೃಷಿಕರಾಗಿದ್ದರು, ವಿಚಾರವಾದಿಗಳಾಗಿದ್ದರು, ಸಂಸ್ಕೃತಿ ಚಿಂತಕರಾಗಿದ್ದರು, ಪರಿಸರ ಪ್ರೇಮಿಗಳಾಗಿದ್ದರು. ತಮ್ಮದೇ ಆದ ತಂತ್ರಜ್ಞಾನವನ್ನು ಕಂಡುಕೊಂಡವರಾಗಿದ್ದರು. ಇಂತಹ ಜಾನಪದ ಆಯಾಮಗಳನ್ನು ಕುರಿತು ಇಂದು ಹೆಚ್ಚಿನ ಅಧ್ಯಯನವಾಗಬೇಕಾಗಿದೆ.

ಜನಪದ ಕಾವ್ಯ, ಕತೆ, ಸಣ್ಣಾಟ, ದೊಡ್ಡಾಟಗಳಲ್ಲಿ ದಟ್ಟವಾದ ಜೀವನಾನುಭವ ಹಾಗೂ ಮಧುರ ಭಾವನೆಗಳಿದ್ದರೆ, ಸೃಜನೇತರ ಹಾನಪದದಲ್ಲಿ ಬಹುಮುಖ್ಯವಾದ ಚಿಂತನೆಗಳಿವೆ. ಇಂದಿನ ಜಾಗತೀಕರಣಕ್ಕೆ ಪರ್ಯಾಯವಾಗಿ ನಿಲ್ಲಬಲ್ಲ ಶಕ್ತಿ ಜಾನಪದ ಆಯಾಮಗಳಿಗಿದೆ. ಈ ಹಿನ್ನೆಲೆಯಲ್ಲಿ ವೈಚಾರಿಕ ಜಾನಪದವನ್ನು ಬೆಳೆಸಬೇಕಾಗಿದೆ; ಬಂಡಾಯ ಜಾನಪದವನ್ನು ಕಂಡುಕೊಳ್ಳಬೇಕಾಗಿದೆ. ಸ್ತ್ರೀವಾದಿ ಜಾನಪದವನ್ನು ಕಟ್ಟಿಕೊಳ್ಳಬೇಕಾಗಿದೆ.

ನಗರ – ಹಳ್ಳಿ , ಶಿಷ್ಟ – ಜಾನಪದ, ಶಿಕ್ಷಿತ – ಅಶಿಕ್ಷಿತ ಈ ಪದಗಳನ್ನು ಇದುವರೆಗೆ ವಿರುದ್ಧಾರ್ಥದ ಪದಗಳೆಂದು ಬಳಸಲಾಗಿದೆ. ಆದರೆ ಇವು ವಿರುದ್ಧಾರ್ಥದ ಪದಗಳಾಗಿರದೆ, ಪೂರಕ ಪದಗಳಾಗಿವೆ; ಪರ್ಯಾಯ ಹುಡುಕಾಟಗಳಾಗಿವೆ. ನಗರಗಳಲ್ಲಿಯೇ ಸ್ಲಮ್‌ಗಳಿವೆ; ಹಳ್ಳಿಗಳಲ್ಲಿ ನಗರದ ಫ್ಯಾಷನ್ ಬಂದಿದೆ. ಶಿಷ್ಟ, ಜಾನಪದದತ್ತ ಆಕರ್ಷಿತವಾಗಿರದೆ; ಜಾನಪದ ಶಿಷ್ಟವಾಗಿ ಬೆಳೆಯತೊಡಗಿದೆ. ಅನೇಕ ಶಿಕ್ಷಿತರಲ್ಲಿ, ಅಶಿಕ್ಷಿತರಲ್ಲಿರುವ ಜಾಣ್ಮೆ – ಪ್ರತಿಭೆ ಕಾಣಿಸುತ್ತಿಲ್ಲ. ಹೀಗಾಗಿ ಈ ವರ್ಗೀಕರಣವನ್ನು ವಿರುದ್ಧ ದಿಕ್ಕಿನಲ್ಲಿ ನೋಡದೆ, ಪರ್ಯಾಯ ಮಾರ್ಗವಾಗಿ ಗಮನಿಸಬೇಕಾಗಿದೆ.

ಹೀಗಾಗಿ ಶಿಷ್ಟ ಜಾನಪದವೆಂಬುವುಗಳು ಒಂದಕ್ಕೊಂದು ಪೂರಕವಾಗಿ, ಕೆಲವೊಮ್ಮೆ ಪರ್ಯಾಯವಾಗಿ ಬೆಳೆದುಕೊಂಡು ಬಂದ ಸಾಂಸ್ಕೃತಿಕ ಬೆಳವಣಿಗೆಗಳಾಗಿವೆ. ಪ್ರಾಚೀನ ಕಾಲದಲ್ಲಿ ಇವು ದೇಶಿ – ಮಾರ್ಗದ ಹೆಸರಿನಲ್ಲಿ ಗುರುತಿಸಲ್ಪಟ್ಟಿವೆ. ಸಮಾಜ ವಿಜ್ಞಾನಿಗಳು “ದೇಶಿ” ಯನ್ನು “Little Tradition” ಎಂದೂ “ ಮಾರ್ಗ” ವನ್ನು “Great Tradition “ ಎಂದು ಕರೆದಿದ್ದಾರೆ. ಆದರೆ ಇದು ಸಮರ್ಪಕವಲ್ಲ. ಇಲ್ಲಿ ಯಾವುದೂ ಒಂದಕ್ಕೊಂದು ಸಣ್ಣದೂ ಅಲ್ಲ, ದೊಡ್ಡದೂ ಅಲ್ಲ, ಒಂದಕ್ಕಿಂತ ಇನ್ನೊಂದು ಕನಿಷ್ಟವೂ ಅಲ್ಲ, ಶ್ರೇಷ್ಠವೂ ಅಲ್ಲ. ಬದುಕೆಂಬುದು ಬಹುಶಿಸ್ತುಗಳ ಅಧ್ಯಯನವಾದುದರಿಂದ ಇವೆಲ್ಲವುಗಳನ್ನು ಬದುಕಿನ ಬಹುಮುಖಿ ನೆಲೆಗಳೆಂದು ತುರುತಿಸುವುದು ಹೆಚ್ಚು ಸೂಕ್ತವಾಗಿದೆ. ಜನಪದರ ಅನೇಕ ಗಾದೆಮಾತುಗಳು, ಪಡೆನುಡಿಗಳು, ಶಿಷ್ಟರ ಕಾವ್ಯದಲ್ಲಿ ಬೇರೆ ರೂಪದಲ್ಲಿ ಬಳಕೆಯಾಗಿರುವುದನ್ನು ಕಾಣಬಹುದಾಗಿದೆ.

“ದಂಡು ನೋಡಾಕ – ಬಂದ್ರ ದಂಡಿ ಹೊರಸಿದರು” ಎಂಬ ಜನಪದರ ಗಾದೆ ಪಂಪನ ಕಾವ್ಯದಲ್ಲಿ ಹೀಗೆ ಬಳಕೆಯಾಗಿದೆ. “ಪಡೆನೋಡಲ್ ಬಂದವರಂ ಗುಡಿವೊರಿಸಿದ ವೊಲಾಯ್ತು”. ಇಂತಹ ಅನೇಕ ಉದಾಹರಣೆಗಳನ್ನು ಶಿಷ್ಟ ಜಾನಪದಗಳ ಕೊಡುಕೊಳ್ಳುವಿಕೆಯ ವಿಷಯದಲ್ಲಿ ಉದಾಹರಿಸಬಹುದಾಗಿದೆ.

ಜೀವನ ಮೌಲ್ಯಗಳನ್ನು ನಿರೂಪಿಸುವಲ್ಲಿ ಜಾನಪದದ ಕೊಡುಗೆ ಅಪಾರವಾದುದಾಗಿದೆ. ಪ್ರೀತಿ, ಅಂತಃಕರಣ , ತಾಳ್ಮೆ, ತ್ಯಾಗ, ಸ್ನೇಹದಂತಹ ಮೌಲ್ಯಗಳು ಇಲ್ಲಿ ಎಲ್ಲ ಕಾಲಕ್ಕೂ ಮನ್ನಣೆ ಪಡೆಯುತ್ತಲೇ ಬಂದಿವೆ. ವೈದಿಕೇತರ ಸಂಸ್ಕೃತಿಯನ್ನು ಪಡೆಯುತ್ತಲೇ ಬಂದಿವೆ. ವೈದಿಕೇತರ ಸಂಸ್ಕೃತಿಯನ್ನು ಕಟ್ಟಿ ನಿಲ್ಲಿಸುವಲ್ಲಿ ಜಾನಪದ ಬಹುದೊಡ್ಡ ಪಾತ್ರ ವಹಿಸಿದೆ. ಕೃಷಿಕರು, ದುಡಿಯುವವರು, ದಲಿತರು, ಮಹಿಳೆಯರು ಇಲ್ಲಿಯ ಮುಖ್ಯ ಕೇಂದ್ರವಾಗಿದ್ದಾರೆ. ಜಾಗತೀಕರಣಕ್ಕೆ ಪರ್ಯಾಯವಾಗಿ ಬೆಳೆಯಬಲ್ಲ ಶಕ್ತಿ ಇವರಲ್ಲಿದೆ. ಈ ಕಾರಣದಿಂದ ಜಾನಪದ ಆಯಾಮಗಳ ಮರುಚಿಂತನೆ ನಡೆಯಬೇಕಾಗಿದೆ.