ಡಾ. ಗದ್ದಗಿಮಠ ಅವರು ಜಾನಪದ ಕಾವ್ಯಮಾಲೆಯ ಪ್ರಕಾಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅನೇಕ ವಿಧದ ಕಷ್ಟನಷ್ಟಗಳನ್ನು ಅನುಭವಿಸುತ್ತಿರುವುದನ್ನು ಗಮನಿಸಿದ ಹಲವಾರು ಗಣ್ಯರು ಅವರ ಪರಿಶ್ರಮ ಕಾರ್ಯಚಟುವಟಿಕೆಗಳನ್ನು ಮೆಚ್ಚಿಕೊಂಡು ಸ್ವಯಂಸ್ಪೂರ್ತಿಯಿಂದ ಗದ್ದಗಿಮಟ ಅವರಿಗೆ ನೆರವು ನೀಡಿದ್ದಾರೆ. ಕ್ರಿ.ಶ.೧೯೫೭ರಲ್ಲಿ ಜನೇವರಿ ತಿಂಗಳಿನಲ್ಲಿ ಬೈಲಹೊಂಗಲದಲ್ಲಿ ಗದ್ದಗಿಮಠರ ಉಪನ್ಯಾಸ ಕೇಳಿ ಪ್ರಭಾವಿತರಾದ ಮಾಜಿ ಸಚಿವ ಶ್ರೀ.ಎಚ್‌.ವಿ. ಕೌಜಲಗಿ ಅವರು ಆಗಿನ ಕಾಲದಲ್ಲಿ ೪೦೧ ರೂಪಾಯಿಗಳನ್ನು ಸಹಾಯಧನ ರೂಪದಲ್ಲಿ ಪ್ರೋತ್ಸಾಹ ಕೊಟ್ಟಿದ್ದಾರೆ. ಇವರ ಸಾಹಿತ್ಯ ಸಂಗ್ರಹ ಸಂಶೋಧನಾದಿಗಳನ್ನು ಕಂಡು ಮೆಚ್ಚಿದ ಅಂದಿನ ಕಂದಾಯ ಮಂತ್ರಿಗಳಾಗಿದ್ದ ಶ್ರೀಮಾನ್‌ಕಡಿದಾಳ್‌ಮಂಜಪ್ಪನವರು ಎರಡು ಸಾವಿರ ರೂಪಾಯಿಗಳನ್ನು ಸಹಾಯಧನವೆಂದು ಕೊಟ್ಟಿದ್ದಾರೆ. ಹಲವು ವಿಧದ ತೊಂದರೆಗಳ ಮಧ್ಯದಲ್ಲಿ ಜಾನಪದ ಕಾವ್ಯಮಾಲೆಯನ್ನು ತಮ್ಮ ಕೊನೆಯ ಉಸಿರು ಇರುವವರೆಗೂ ನಡೆಸಿಕೊಂಡು ಬಂದಿದ್ದಾರೆ.