ಜಾನಪದ ಕುರಿತ ಎರಡನೆಯ ನವೀನ ನಿರ್ವಚನ ಕೂಡ ಇತ್ತೀಚಿನದು. ಬರ್ಗನ್‌ನಲ್ಲಿರುವ Nordic Institute of Folklore ತನ್ನ ೧೯೮೬ರ ಸಮ್ಮೇಳನದ ಸಂದರ್ಭದಲ್ಲಿ ಪ್ರಸ್ತುತಗೊಳಿಸಿ ಪ್ರಕಟಿಸಿದ ನಿರ್ವಚನ ಇದು. ವಾಸ್ತವವಾಗಿ, ನಾರ್ಡಿಕ್‌ವಿಶ್ವವಿದ್ಯಾನಿಲಯದಲ್ಲಿ ಜಾನಪದ ಬೋಧನೆಗೈಯುತ್ತಿರುವ ಶಿಕ್ಷಕರ ಕೊಡುಗೆ ಇದು. ಈ ಶಿಕ್ಷಕರು Unesco ಶಿಫಾರಸುಗಳ ಕರಡನ್ನು ನೋಡಿದವರಲ್ಲ. ಅವರು ರೂಪಿಸಿದ ನಿರ್ವಚನ ಹೀಗಿದೆ:

‘ಜಾನಪದ ಸಾಮೂಹಿಕವಾದುದು; ಮಾನವನ ಕ್ರಿಯಾಶೀಲತೆ ಮತ್ತು ಫ್ಯಾಂಟಸಿಗಳಿಂದ ರೂಪುಗೊಂಡ ಪರಂಪರಾಗತ ಜ್ಞಾನ. ಈ ಜ್ಞಾನ ಕೆಲವು ಸನ್ನಿವೇಶಗಳಲ್ಲಿ ಅಭಿವ್ಯಕ್ತಾತ್ಮಕ ಸಾಂಸ್ಕೃತಿಕ ಪ್ರಕಾಗಳ ಮೂಲಕ ಮೈದಾಳುತ್ತದೆ ಮತ್ತು ಸಂವಹನಗೊಳ್ಳುತ್ತದೆ. ವ್ಯಕ್ತಿಗತ ಗುಣಸ್ವಭಾವಗಳಿಂದ ಪ್ರೇರಿತವಾದ ಅದು ಪ್ರದರ್ಶನ ಸನ್ನಿವೇಶಗಳ ಮೂಲಕ ನಿರಂತರವಾಗಿ ಬೇರೆ ಬೇರೆ ವಿಧವಾಗಿ ಸೃಷ್ಟಿಯಾಗುತ್ತಿರುತ್ತದೆ. ಮುಖ್ಯವಾಗಿ ಶಬ್ದ ಮತ್ತು ಕ್ರಿಯೆಗಳ ಮೂಲಕ ಸಂವಹನಗೊಳ್ಳುತ್ತದೆ. ರೂಪ ಮತ್ತು ವಸ್ತುಗಳಲ್ಲಿ ವ್ಯತ್ಯಯ ಅದರ ಲಕ್ಷಣ. ಪರಂಪರೆ ಮತ್ತು ಜಾನಪದ ಶಬ್ದಗಳು ಒಂದರೊಡನೊಂದು ಬೆರೆತಿರುತ್ತವೆ. ಪರಂಪರೆ ಶಬ್ದ ಜಾನಪದ ಶಬ್ದಕ್ಕಿಂತ ವಿಶಾಲ ಅರ್ಥಹಿನ್ನೆಲೆಯದು. ಆದರೆ ಪರಂಪರೆಯ ಭಾಗವಲ್ಲ ಎಂದು ಗುರುತಿಸುವ ಅಂಶಗಳನ್ನು ಜಾನಪದೀಯ ಪ್ರದರ್ಶನವೊಂದು ಹೊಂದಿರುವುದು ಸಾಧ್ಯ. ಅಷ್ಟೇ ಅಲ್ಲ; ಜಾನಪದವು ವಿವಿಧ ಜನಪದ ಸಮೂಹಗಳ ಲೋಕದೃಷ್ಟಿಯನ್ನು ಬಿಂಬಿಸುತ್ತದೆ ಮತ್ತು ಆ ಗುಂಪುಗಳ ಅನನ್ಯತೆಯನ್ನು ಬಲಪಡಿಸುತ್ತದೆ’(ಎನ್‌.ಐ.ಎಫ್‌: ೧೯೮೬: ೨೧).

ಈ ನಿರ್ವಚನದ ಪ್ರಕಾರ, ಜಾನಪದದ ಎದ್ದು ಕಾಣುವ ಗುರುತು ಎಂದರೆ ಭಿನ್ನರೂಪ. ಎಂದರೆ ಜಾನಪದೀಯ ಉತ್ಪನ್ನ ಒಂದೇ ಮೂಲಪ್ರತಿಯನ್ನು ಹೊಂದಿರಲು ಸಾಧ್ಯವಿಲ್ಲ. ಅಸಂಖ್ಯಾತ ಭಿನ್ನರೂಪಗಳಿದ್ದು ಅವು ಹಲವು ಪ್ರದರ್ಶನಕಾರರ ನಡುವಿನ ಪರಸ್ಪರ ಕ್ರಿಯೆಯ ಫಲಶ್ರುತಿಗಳಾಗಿರುತ್ತವೆ. ಸಾಂಸ್ಕೃತಿಕ ಮಾದರಿ, ಸಂದರ್ಭ ಹಾಗೂ ನಿರೂಪಕನ ಕೌಶಲ ಮತ್ತು ಮನೋಧರ್ಮಗಳಿಗನುಗುಣವಾಗಿ ಅವು ರೂಪು ತಳೆದಿರುತ್ತವೆ.

ಈ ಸಂಗತಿ ಸಂಶೋಧಕರಿಗೆ ಭಿನ್ನರೂಪದತ್ತ ಗಮನಹರಿಸಲು ಪ್ರೇರಣೆ ಒದಗಿಸುತ್ತದೆ. ಮೊದಲಿಗೆ ಪ್ರಚಲಿತವಾಗಿದ್ದ ತೌಲನಿಕ ವಿಧಾನದನ್ವಯ ಭಿನ್ನರೂಪಗಳ ವಿಷಯದಲ್ಲಿ ಗಂಭೀರ ಸಂವಾದ ನಡೆಸಲು ವಿದ್ವಾಂಸರು ವಿಫಲವಾದ ಕಾರಣ ಪ್ರಸಕ್ತ ಚಾರಿತ್ರಿಕ ಭೌಗೋಳಿಕ ಅಂಶಗಳ ಪುನರ್ರ‍ಚನೆ ಹಾಗೂ ಭಿನ್ನರೂಪಗಳ ಅಧ್ಯಯನದಿಂದ ಪ್ರಕಾರಾತ್ಮಕ ಮಾದರಿಗಳು ಮತ್ತು ಸಾಂದರ್ಭಿಕ ಮಾಹಿತಿಗಳನ್ನಾಧರಿಸಿದ ಭಿನ್ನರೂಪಗಳ ವಿಶ್ಲೇಷಣೆಯತ್ತ ಚಲಿಸುತ್ತಿದ್ದೇವೆ. ಈ ಭಿನ್ನರೂಪ ಅರ್ಥದ ನೆಲೆಯಿಂದ ಅಸ್ಪಷ್ಟವಾಗಿರುವುದಿಲ್ಲ ಎಂಬುದು ಮಹತ್ವದ ವಿಚಾರ.

ಜಾನಪದ ಒಳಗೊಳ್ಳುವ ಕೆಲವು ಸ್ಥಿರ ರೂಪಗಳು ಮತ್ತು ಮೂಲಾಂಶಗಳ ಪಟ್ಟಿಗೆ ಸೀಮಿತವಾಗಿರುವುದು ಈ ನಿರ್ವಚನದ ವಿಶೇಷ. ಯಾವುದನ್ನು ಪರಂಪರಾಗತ ಎಂದು ಗುರುತಿಸುತ್ತಾ ಬಂದಿದ್ದೇವೆಯೊ ಆ ಬಗೆಗಳಿಗೆ ಈಗ ನಾವು ‘ಜಾನಪದ’ಶಬ್ದವನ್ನು ಅನ್ವಯಿಸುತ್ತಿದ್ದೇವೆ. ಅಂಥದೇ ಬಗೆಗಳು ಅವಕ್ಕೆ ಸದೃಶವಾಗಿರಬಹುದು ಅಥವಾ ಅವುಗಳಂತೆ ನಡೆದುಕೊಳ್ಳಬಹುದು ಎಂಬ ವಿವರಣೆ-ಇಲ್ಲಿ ಜಾನಪದ ಮತ್ತು ಪರಂಪರೆಯ ನಡುವೆ ಗೆರೆ ಎಳೆಯುವಲ್ಲಿ ಎಡವಿರುವುದು ಕಂಡುಬರುತ್ತದೆ.

ಒಂದು ಸಜೀವ ಪರಂಪರೆ ಮತ್ತು ಅದರ ವರ್ತನೆಗಳನ್ನು ವಿಶ್ಲೇಷಿಸುವ ನಿಟ್ಟಿನಲ್ಲಿ, ನಾವು ಅರಿಯಬಯಸುವ ಸಂಗತಿ ವರ್ತನೆಯ ಇರೂವನ್ನು ಕುರಿತದ್ದಾದರೆ ಜಾನಪದವನ್ನು ಇತರ ಸಾಮಗ್ರಿಗಳಿಂದ ವಿಭಿನ್ನಗೊಳಿಸುವುದು ಸರಿಯಲ್ಲ ಎನ್ನುವುದು ಹಾಂಕೊ ಅಭಿಪ್ರಾಯ. ಕೆಲವು ಜಾನಪದ ರೂಪಗಳು ಏಕಪ್ರಕಾರದವು ಮತ್ತೆ ಕೆಲವು ಏಕಪ್ರಕಾರದವಲ್ಲ ಎಂಬುದು ಅದಕ್ಕೆ ಅವರು ಕೊಡುವ ಸಮರ್ಥನೆ. ‘ಪರಂಪರೆ’ಯ ಪರಂಪರಾಗತತೆ ಕುರಿತು ಕೂಡ ತಲೆಕೆಡಿಸಿಕೊಳ್ಳುವುದು ನಿರರ್ಥಕ ಎಂದು ಅವರ ವಾದ. ಸಜೀವ ಪರಂಪರೆಗೆ ಅಗತ್ಯವಾದುದನ್ನು ಜನರೇ ಆಯ್ದು ಅಳವಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪರಂಪರೆ ವ್ಯವಸ್ಥೆಯ ಸ್ವಭಾವವನ್ನು ಗಳಿಸಕೊಳ್ಳುತ್ತದೆ ಮತ್ತು ಕ್ರಿಯಾಸಂಸ್ಕೃತಿಯ ಭಾಗವಾಗುತ್ತದೆ. ಮತ್ತೊಂದೆಡೆ ಸಾಂಸ್ಕೃತಿಕ ಅಥವಾ ಸಾಮಾಜಿಕ ಅನನ್ಯತೆಯೊಡನೆ ಸ್ಪಷ್ಟ ಸಂಬಂಧ ಹೊಂದಿರುವು ಘಟಕಾಂಶಗಳು ಅನನ್ಯತಾ ಪರಂಪರೆಗೆ ಸಂಬಂಧಿಸುತ್ತವೆ.

ಒಟ್ಟಿನಲ್ಲಿ ಈ ಎರಡೂ ನಿರ್ವಚನಗಳು ಜಾನಪದ ಏನಾಗಿದೆಯೊ ಅದನ್ನು ಹೇಳುವುದರಲ್ಲಿ ಹೆಚ್ಚಿನ ಆಸಕ್ತಿ ತೋರಿವೆ. ಬರ್ಗನ್‌ನಿರ್ವಚನವು ಜಾನಪದ ಎಲ್ಲಿದೆ ಎಂದು ಹೇಳುವುದರಲ್ಲಿ ಕಾಲಹರಣ ಮಾಡಿದೆಯಾದರೂ ಭಿನ್ನರೂಪಗಳತ್ತ ನಮ್ಮ ಗಮನ ಸೆಳೆದಿದೆ. ಯುನೆಸ್ಕೊ ನಿರ್ವಚನವು ಜಾನಪದವು ಜಾನಪದ ಸಮುದಾಯದ ಲೋಕದೃಷ್ಟಿಯೊಡನೆ ಬಂಧಿತವಾಗಿರುವುದನ್ನು ಸ್ಪಷ್ಟಪಡಿಸುತ್ತದೆ.

ಮೇಲೆ ಪ್ರಸ್ತಾಪಿಸಿದ ವಿವರಗಳ ಹಿನ್ನೆಲೆಯಲ್ಲಿ ಪ್ರಸ್ತು ‘ಜಾನಪದ ಪ್ರಕ್ರಿಯೆ’ (Folklore Process) ಯ ಸ್ವರೂಪವನ್ನು ಗ್ರಹಿಸಲು ಯತ್ನಿಸಬಹುದು. ಮುಖ್ಯವಾಗಿ ಜಾನಪದ ಪ್ರಕ್ರಿಯೆ ಕುರಿತು ಹಾಂಕೊ ವಿಚಾರಗಳನ್ನು ತಿಳಿದುಕೊಳ್ಳಬಹುದು.

ವಾಸ್ತವವಾಗಿ Folklore Process ಎಂಬ ಶಬ್ದಗಳನ್ನು ಕೇಳಿದೊಡನೆ ಹತ್ತರಲ್ಲಿ ಒಂಬತ್ತು ಮಂದಿ ಜಾನಪದ ಅಧ್ಯಯನಕಾರರು ತಮ್ಮ ಪರಿಸರದ ಜಾನಪದ ಪ್ರಕಾರಗಳ ಬಾಳುವೆ ಕುರಿತು ಅಥವಾ ಅವು ಪುಟಿಸುವ ಸ್ಪಂದನಗಳನ್ನು ಕುರಿತು ಅಥವಾ ಸಾಮಾಜಿಕ, ಆರ್ಥಿಕ, ಧಾರ್ಮಿಕ ಪರಸ್ಪರಕ್ರಿಯೆಯ ಹಿನ್ನೆಲೆಯಲ್ಲಿ ಅವು ವಹಿಸುವ ಪಾತ್ರ ಕುರಿತು ಆಲೋಚಿಸತೊಡಗುತ್ತಾರೆ. ಆದರೆ ನಿಜವಾಗಿಯೂ, ಪರಂಪರೆಯೊಡನೆ ನಿರೂಪಕ ಮತ್ತು ಸಂಶೋಧಕ ಪರಸ್ಪರ ಹೊಂದಿರುವ ಸಂಬಂಧದಲ್ಲಿ, ಪರಂಪರಾಗತ  ಹಾಗೂ ವೈಜ್ಞಾನಿಕ ಸಮುದಾಯಗಳು ಜಾನಪದದ ಬಗೆಗೆ ತಳೆದಿರುವ ಅಭಿಪ್ರಾಯಗಳಲ್ಲಿ, ಜಾನಪದದ ಹಣೆಬರಹದಲ್ಲಿ, ಪರಂಪರೆಯ ಘಟಕಾಂಶಗಳು, ಅದರ ಬಳಕೆದಾರರ ಸಂರಕ್ಷಿಸುವ, ಅಭ್ಯಸಿಸುವ ಮತ್ತು ಅರಿಯುವ ಪ್ರಯತ್ನಗಳಲ್ಲಿ, ಅದನ್ನು ಇತರರಿಗೂ ತಿಳಿಯುವಂತೆ ಮಾಡುವ, ರಕ್ಷಿಸುವ, ಅದರಿಂದ ಪ್ರಯೋಜನ ಹೊಂದುವ, ಅದನ್ನು ಪುನಶ್ಚೇತನಗೊಳಿಸುವ ಹಾಗೂ ಅದರ ಅರ್ಥವನ್ನು ವಿವಿಧ ರೀತಿಯಲ್ಲಿ ಅರ್ಥೈಸುವ ಪ್ರಯತ್ನಗಳಲ್ಲಿ ನಾವು ಆಸಕ್ತಿ ತಳೆಯಬೇಕಾಗಿದೆ. ವಿಶ್ವಸಂಸ್ಕೃತಿಯಲ್ಲಿ ಅಸಂಖ್ಯಾತ ಬಾರಿ ಕಾಣಿಸಿಕೊಂಡ, ಜಾನಪದ ಬಳಕೆಯ ಅನ್ವೇಷಣೆ ಕುರಿತ ಯೋಜನೆ ಇದು. ಇಲ್ಲಿ ಪಟ್ಟಿಮಾಡಿದ ಹಲವಾರು ಅಂಶಗಳ ಬೆಳಕಿನಲ್ಲಿ ಹೇಳುವುದಾದರೆ, ಪರಂಪರಾಗತ ಹಾಗೂ ವೈಜ್ಞಾನಿಕ ಸಮುದಾಯಗಳ ಆಸಕ್ತಿ ಬೇರೆ ಬೇರೆಯೇ ಆಗುತ್ತದೆ. ಬೇರೆ ದೃಷ್ಟಿಕೋನಗಳನ್ನು ಅಳವಡಿಸಿಕೊಳ್ಳುವ ಅವಕಾಶವಿದ್ದರೂ ಸನ್ನಿವೇಶದ ಸ್ಪಷ್ಟ ಚಿತ್ರ ಹೊಂದಲಾಗಲಿ ಜಾನಪದ ಪ್ರಕ್ರಿಯೆಯಲ್ಲಿ ಸಂಶೋಧಕನ ಹೊಣೆಗಾರಿಕೆಯನ್ನು ತಿಳಿಯಲಾಗಲಿ ಅವು ಅಷ್ಟೇನೂ ಆಸಕ್ತಿ ತೋರುವುದಿಲ್ಲ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಾನಪದ ಪ್ರಕ್ರಿಯೆಯ ಸ್ಥಿತಿಗತಿಗಳನ್ನು ಮನಗಾಣಿಸಲು, ಹಾಂಕೊ ಅದನ್ನು ಇಪ್ಪತ್ತೆರಡು ಹಂತಗಳಲ್ಲಿ ವಿಂಗಡಿಸಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಅವುಗಳ ಪೈಕಿ ಮೊದಲ ಹನ್ನೆರಡು ಹಂತಗಳು ಜಾನಪದದ ಮೊದಲ ಬಾಳ್ವೆಗೆ ಸೇರಿದ್ದರೆ ಉಳಿದ ಹತ್ತು ಎರಡನೆಯ ಬಾಳ್ವೆಗೆ ಸಂಬಂಧಿಸಿವೆ.

ಸಂಕ್ಷೇಪವಾಗಿ ಹೇಳುವುದಾದರೆ, ಜಾನಪದ ಪ್ರಕ್ರಿಯೆಯು ಯಾವುದೇ ಒಂದು ಸಂಸ್ಕೃತಿಯ ಏಕಪ್ರಕಾರದ ಜಾನಪದ ಜೀವನ ಚರಿತ್ರೆಯೇ ಆಗಿದೆ (ಹಾಂಕೊ:೧೯೯೦:೯)[1] ಜಾನಪದದ ಪರಿಕಲ್ಪನೆ ಹುಟ್ಟುವುದಕ್ಕೂ ಮೊದಲೇ ಈ ಯುಗ ಆರಂಭಗೊಂಡು ಜಾನಪದದ ಅರ್ಥವನ್ನು ಅದರ ಸಂಸ್ಕೃತಿಯ ಒಳಗಿನಿಂದಲೇ ನಿರ್ಧರಿಸುವ ಈಗಿನ ಸ್ಥಿತಿಯೊಂದಿಗೆ ಮುಗಿಯುತ್ತದೆ. ಇದನ್ನು ಜಾನಪದ ವಿಜ್ಞಾನದ(Folkloristics) ನೀತಿಕತೆ ಎಂದೂ ಹೆಸರಿಸಬಹುದು; ಮಾನವಕುಲ ಶಾಸ್ತ್ರದ ಕೆಲಸ ಎಂದೂ ಗುರುತಿಸಬಹುದು. ಏಕೆಂದರೆ ಅದು ಸಂಶೋಧನಾ ಪ್ರಕ್ರಿಯೆಯಲ್ಲಿ ಅಂತರ್ಗತವಾಗಿರುವ ನೈತಿಕ ಸಮಸ್ಯೆಗಳನ್ನು ಎತ್ತುತ್ತಾ ಹೋಗುತ್ತದೆ ಮತ್ತು ವಿಜ್ಞಾನ ಪದ್ಧತಿಗನುಸಾರ ಪರಿಹಾರಗಳನ್ನು ಹುಡುಕುವ ಸವಾಲನ್ನು ಮುಂದಿಡುತ್ತದೆ.

ನಮ್ಮ ಕಲ್ಪನೆಯ ಜನಪದ ಸಂಸ್ಕೃತಿ ಏಕಪ್ರಕಾರಗಳನ್ನು ಆದರ್ಶೀಕರಿಸುವುದರ ಮೇಲೆ ರೂಪುಗೊಂಡಿರುವಂಥದು. ಸಾಮಾನ್ಯವಾಗಿ ನಾವು ರೈತಾಪಿ ಸಂಸ್ಕೃತಿಯನ್ನು ಸರ್ವ ಸ್ವತಂತ್ರವಾದುದು; ಸ್ವಾವಲಂಬಿಯಾದುದು; ಸಮರಸಭರಿತವಾದುದು ಎಂದೆಲ್ಲ ಬಣ್ಣಿಸಿ ಅದರ ಒಳಶ್ರೇಣೀಕರಣ ವ್ಯವಸ್ಥೆ, ಸಂಘರ್ಷ ಮತ್ತು ಪೈಪೋಟಿಯನ್ನು ವಿಶ್ಲೇಷಿಸಲು ಕ್ರಿಯಾತ್ಮಕ ಮಾದರಿಯನ್ನು ಅನುಸರಿಸುತ್ತೇವೆ. ಆದರೆ ಈ ಮಾದರಿ ಗ್ರಾಮಾಂತರ ಜೀವನಕ್ಕಷ್ಟೇ ಸೀಮಿತವಾಗಿರುತ್ತದೆ. ಭೂರಹಿತರು, ಕುಶಲಕರ್ಮಿಗಳನ್ನು ಲಕ್ಷಿಸದೆ ನಾವು ನಡೆಸುವ ಸಮಾಜ ಅಧ್ಯಯನ ರೈತಾಪಿ ಸಂಸ್ಕೃತಿ ಚಿತ್ರವನ್ನು ಛಿದ್ರಗೊಳಿಸುತ್ತದೆ. ಎಷ್ಟೋ ವೇಳೆ ಕಳೆದ ಶತಮಾನದ ಬೂರ್ಜ್ವಾ ವ್ಯವಸ್ಥೆಯಿಂದ ರೂಪುಗೊಂಡ ನಮ್ಮ ಏಕಪ್ರಕಾರಗಳ ಮೂಲವನ್ನು ನಾವು ಕೆದಕುವುದೇ ಇಲ್ಲ. ವಂಶಪಾರಂಪರ್ಯವಾಗಿ ಗಳಿಸಿಕೊಂಡ ಪ್ರತಿಷ್ಠೆ-ಪ್ರಭುತ್ವಕ್ಕೆ ಪ್ರತಿಯಾಗಿ, ಸ್ವಯಂ ಸಾಧನೆಯಿಂದಷ್ಟೇ ಸಾಮಾಜಿಕ ಪ್ರತಿಷ್ಠೆಯನ್ನು ಸಂಪಾದಿಸುವ ಹೊಸ ಪರಿಕ್ರಮ ಈಗ ಪ್ರಚುರಗೊಳ್ಳುತ್ತಿದೆ.

ವಾಸ್ತವವಾಗಿ, ಜಾನಪದವು, ಏಕರೂಪತೆಯನ್ನು ಮುರಿಯುವ ಸಾಮಾಜಿಕ ಗುಂಪುಗಳು ಮತ್ತು ಅವುಗಳ ಸಂಬಂಧಗಳನ್ನು ಸ್ಮರಣೆಗೆ ತಂದುಕೊಡಲು ಶ್ರಮಿಸುತ್ತಿದೆ. ಅದು ಸ್ವಚ್ಛಂದ ಬದುಕು ನಡೆಸುವ ಕೃಷಿಕನ ಮುಕ್ತ ಶೈಲಿಯ ಬದುಕಿಗೆ ಒಗ್ಗದ್ದನ್ನೂ ಹೇಳುತ್ತದೆ. ಯಜಮಾನ ಮತ್ತು ಸೇವಕನ ನಡುವಿನ ಸಂಬಂಧಗಳನ್ನು ವರ್ಣಿಸುವ, ಧರ್ಮಾಧಿಕಾರಿ ಮತ್ತು ಅವನ ಗೋಷ್ಠಿಗಳನ್ನು ಬಣ್ಣಿಸುವ ಪ್ರಾಸಂಗಿಕ ಕಥೆಗಳು ಸಾರ್ವಜನಿಕರ ವಿಮರ್ಶೆಯನ್ನು ಮೆಚ್ಚುವುದಿಲ್ಲ. ಆದರೂ ಅವು ಕೇವಲ ನೀರ್ಗಲ್ಲಗುಡ್ಡದ ತುದಿಗಳು ಅಷ್ಟೆ. ಈ ಮತ್ತು ಇಂಥ ಹಲವಾರು ಆಧಾರಗಳೊಡನೆ ಸಾಬೀತಾಗಿರುವ ಸಂಗತಿಯೆಂದರೆ ಜಾನಪದವು ಅಧಿಕಾರ ಇಲ್ಲದವರ ‘ಆಟ’ವಾಗಿದೆ; ವ್ಯವಸ್ಥಿತ ಸಮಾಜಗಳ ನೋವಿನ ಆಕ್ರಂದನವಾಗಿದೆ; ಕೆಲವೊಮ್ಮೆ ಘೋರವಾಗಿರುವಂಥದು. ಆದರೂ ತುಳಿತಕ್ಕೊಳಗಾದವರ ಧ್ವನಿಯಾಗಿದ್ದು ತನ್ನ ಕಸುವನ್ನು ಉಳಿಸಿಕೊಂಡಿದೆ. ಸಂದರ್ಭಾನುಸಾರ ಸಾಹಿತ್ಯದಲ್ಲಿ ಪ್ರಕಟಗೊಳ್ಳುವ ಹಾಸ್ಯವು ಸ್ವಾರಸ್ಯವನ್ನು ಕಳೆದುಕೊಂಡಿಲ್ಲ. ಈ ಸಾಹಿತ್ಯದ ವಾಹಕರ ಸೃಜನಶೀಲ ಪ್ರತಿಭೆ ಹಾಗೂ ಆತ್ಮಪ್ರತ್ಯಯ ಎಂಥದು ಎಂಬುದನ್ನು ಧ್ವನಿಸುವಂಥದು ಅದು.

ಆದರೆ, ನಿಜವಾದ ಸಾಮಾಜಿಕ ಪ್ರತಿಭಟನೆಯನ್ನು ಬಿಂಬಿಸುವ ಸಾಹಿತ್ಯ ಭಂಡಾರಸಾಮಗ್ರಿಯಲ್ಲಿ ಲಭ್ಯವಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ: ೧. ಸಾಂದರ್ಭಿಕ ಮಾಹಿತಿಯನ್ನು ಕಡೆಗಣಿಸುವ ಸಂಗ್ರಹ ವಿಧಾನ ೨. ಸಂಗ್ರಾಹಕನ ಸಂಕುಚಿತ ಕಲ್ಪನೆಯ ಸಮುದಾಯ ಅಧ್ಯಯನ. ೩. ಜಾನಪದದ ಸಾಮಾಜಿಕ ಸಂದೇಶವನ್ನು ಅರ್ಥೈಸುವ ಸಾಮರ್ಥ್ಯ ಇಲ್ಲದಿರುವುದು. ೪. ಜಾನಪದದ ಸಾಮಾಜಿಕ ಹಿನ್ನೆಲೆಯನ್ನೇ ನಾಶಗೊಳಿಸುವ, ಭಂಡಾರದಲ್ಲಿ ಸಾಮಗ್ರಿಯನ್ನು ಶೇಖರಿಸಿಡುವ ಕ್ರಮ ಹಾಗೂ ೫. ಕೆಲವು ಸಮುದಾಯಗಳ ವಿಷಯದಲ್ಲಿ ಅತ್ಯಲ್ಪ ಆಸಕ್ತಿ ವ್ಯಕ್ತವಾಗಿರುವುದು.

ಈ ಎಲ್ಲ ನಿದರ್ಶನಗಳಿಂದ ಅಧ್ಯಯನಕಾರನು ಕಲಿಯಬೇಕಾದ ಪಾಠವೆಂದರೆ ಪ್ರಚಲಿತದಲ್ಲಿರುವ ಜಾನಪದ ಅರ್ಥಗಳನ್ನು ಅದರ ವಾಸ್ತವ ನೆಲೆಯಲ್ಲಿ ಅರ್ಥೈಸುವುದನ್ನು ಮತ್ತು ಅಭ್ಯಸಿಸುವುದನ್ನು ರೂಢಿಸಬೇಕಾಗಿದೆ. ಇಲ್ಲವೆ ಜಾನಪದ ವಿಜ್ಞಾನ ರೂಪವಿಕಾರ ಹೊಂದುವುದನ್ನು ತಡೆದು ಸಾಮಾಜಿಕ ಪ್ರತಿಭಟನೆಯ ಅಧ್ಯಯನಕ್ಕೆ ಅದನ್ನು ಸಜ್ಜುಗೊಳಿಸಬೇಕಾಗಿದೆ. ಬಹುಮುಖ್ಯವಾದ ಸಂಗತಿಯೆಂದರೆ ಜಾನಪದ ಅಧ್ಯಯನಕಾರನ ಸಾಮಾಜಿಕ ಹಿನ್ನೆಲೆ ಮತ್ತು ಗುರಿಗಳು ಅಧ್ಯಯನದ ದಿಕ್ಕುದೆಸೆಗಳನ್ನು ನಿರ್ದೇಶಿಸುವುದು. ವೈಜ್ಞಾನಿಕ ಸಮುದಾಯ ತಾನು ಶೋಧಿಸಿದ ಆದರೆ ಇಷ್ಟಪಡದ ಏಕಪ್ರಕಾರಗಳನ್ನು ವಿವೇಚನಾ ರಹಿತವಾಗಿ ಪ್ರಚುರಗೊಳಿಸುವುದರಲ್ಲಿ ಆಸಕ್ತಿ ತಳೆಯಬಹುದು. ರೂಢಿಬದ್ಧ ಕ್ರಮದಲ್ಲೇ ಸಾಮಾಜಿಕ ಪ್ರತಿಭಟನೆಯ ಅಧ್ಯಯನ ನಡೆಸಿ ಸಮುದಾಯದ ಸಂಸ್ಕೃತಿಯ ವಾಸ್ತವ ಸ್ಥಿತಿಗೆ ಕನ್ನಡಿ ಹಿಡಿಯುವ ಬದಲಿಗೆ ಅಧ್ಯಯನಕಾರನು ತನ್ನ ದೃಷ್ಟಿಕೋನವನ್ನು ಬಿಂಬಿಸುವ ಫಲಶ್ರುತಿಗಳನ್ನು ಪ್ರಕಟಿಸಿಬಿಡಬಹುದು. ಒಟ್ಟಿನಲ್ಲಿ ಜಾನಪದ ಅಧ್ಯಯನಕಾರರು ಒಂದು ಸಾಚಾ ಜೀವಂತ ಪರಿಸರದಲ್ಲಿರುವ ಪರಂಪರೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಅವಕಾಶ ಹೊಂದಿರುತ್ತಾರೆ. ತಮಗೆ ಬೇಕೆನಿಸಿದುದನ್ನು ಅವರು ಜಾನಪದ ಭಂಡಾರಗಳಿಂದ ಒದಗಿಸಿಕೊಂಡಿರಬಹುದು ಅಥವಾ ಕ್ಷೇತ್ರಕಾರ್ಯದ ಮೂಲಕ ದೊರಕಿಸಿಕೊಂಡ ಸಾಮಗ್ರಿಯನ್ನಾಧರಿಸಿ ನಿರ್ಣಯಗಳನ್ನು ಕೈಗೊಂಡಿರಬಹುದು. ಆದರೆ ಅವರ ಪರಿಶೀಲನೆಗೊಳಪಡುವ ಸಾಮಗ್ರಿ ಕೇವಲ ಪಠ್ಯಸಾಮಗ್ರಿ ಆಗಿರುವುದಿಲ್ಲ. ಅಥವಾ ಅದರ ಕೆಲವು ಭಾಗವಷ್ಟೇ ಅಲ್ಲ. ಅಧ್ಯಯನಕ್ಕೆ ಎತ್ತಿಕೊಂಡ ಜಾನಪದದ ಕಾರ್ಯಗಳು ಮತ್ತು ಅದರ ಸಂದರ್ಭದ ಜಾಗೃತಿ ಕೂಡ ಆಗಿನ ಅಧ್ಯಯನಗಳಲ್ಲಿರುವುದನ್ನು ನೋಡುತ್ತೇವೆ. ಇದು ಅಧ್ಯಯನಕಾರನಾದವನು ನಿಜವಾಗಿಯೂ ಕಟ್ಟಿಕೊಡಬಯಸುವ ಚಿತ್ರ; ಜಾನಪದ ಪ್ರಕ್ರಿಯೆಯ ಆರಂಭಿಕ ಕ್ರಿಯೆ.

. ಜಾನಪದದ ಮೊದಲ ಬಾಳು

ಹಾಂಕೊ ಪ್ರಕಾರ, ಜಾನಪದ ಸಮುದಾಯದಲ್ಲಿ ಅತಿಸೂಕ್ಷ್ಮವಾಗಿ ಅಸ್ತಿತ್ವದಲ್ಲಿರುವ ಜಾನಪದದಿಂದ ಈ ಹಂತ ಲಕ್ಷನೀಕೃತವಾಗಿದೆ(೧೯೯೦:೧೧). ಅದು ಸಂಭವನೀಯ ಎನಿಸಿದ ಎಲ್ಲ ಘಟನೆಗಳ ಸಾವಯವ ಘಟಕವಾಗಿರುವುದರಿಂದ ಯಾರೂ ಅದನ್ನು ಗಮನಿಸಿಲ್ಲ. ಪರಿಗಣಿಸಿಲ್ಲ ಅಥವಾ ಒತ್ತಿ ಹೇಳಿಲ್ಲ. .ಅದಕ್ಕೆ ಒಂದು ಹೆಸರಾಗಲೀ ವರ್ಗವಾಗಲೀ ಇಲ್ಲ. ಜನಪದ ಸಂಸ್ಕೃತಿಯಂತೂ ಯಾವುದೇ ಪ್ರತಿಗಾಮಿ ಸಂಘರ್ಷ ಅಥವಾ ಬಾಹ್ಯ ಒತ್ತಡಗಳಿಲ್ಲದೆ ತನಗೇ ವಿಶಿಷ್ಟವಾದ ರೀತಿಯಲ್ಲಿ ಅನುಷ್ಠಾನ ಹೊಂದಲು ಮುಕ್ತವಾಗಿರುವಂಥದು. ಸಾಂಸ್ಕೃತಿಕ ವ್ಯವಸ್ಥೆಯೊಳಗೆ ಪರಂಪರಾಗತ ಅಂಶಗಳು ತಮ್ಮ ಕಾರ್ಯಗಳನ್ನು ಈಡೇರಿಸಿಕೊಳ್ಳಲು ಯಶಸ್ವೀ ಮಾರ್ಗವನ್ನು ಕಂಡುಕೊಳ್ಳುವುದು ಸ್ವಾಭಾವಿಕ.

ಇದು, ಒಂದು ವಿಧದಲ್ಲಿ, ಜಾನಪದದ ಅತ್ಯಂತ ಆದರ್ಶಯುತವಾದ, ಸುಕೋಮಲ ಕನ್ಯತ್ವ ಸ್ಥಿತಿಯ ಚಿತ್ರವನ್ನು ಕಟ್ಟಿಕೊಡುತ್ತದೆ. ಅದರ ಇನ್ನೊಂದು ಮುಖ-ಅದರ ಕ್ರಿಯಾತ್ಮಕ ವಿಶ್ಲೇಷಣೆ-ಕವಲುದಾರಿಗಳನ್ನು ತುಳಿದು ಅದನ್ನು ಮೌಲ್ಯನಿಷ್ಕರ್ಷೆಗೆ ಗುರಿಪಡಿಸಬೇಕಾಗಿದೆ. ಸ್ವಾಭಾವಿಕವೂ ನಿಃಸಂದಿಗ್ಧವೂ ಆದ ಅದರ ಅಸ್ತಿತ್ವದೆಡೆಗೆ ಅಧ್ಯಯನಕಾರರು ನೋಡಲಾರಂಭಿಸಿದ ಮೇಲೆ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿದವು. ಏನನ್ನೇ ಅಧ್ಯಯನಕ್ಕೆ ಎತ್ತಿಕೊಳ್ಳಲಿ ಈ ಸಂಗತಿಯನ್ನೇ ಮುಖ್ಯ ಅಂಶವಾಗಿ ಲಕ್ಷಿಸುವುದು ಸಾಮಾನ್ಯವಾಯಿತು. ಆದರ್ಶಮಾದರಿಗಳ ಬಳಕೆ ಎಷ್ಟೇ ಅವಶ್ಯಕವಾಗಿರಲಿ ಅಧ್ಯಯನಕಾರ ಏಕಪ್ರಕಾರಗಳ ಬಳಕೆಯ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾನೆ. ಅದೇನೇ ಇರಲಿ, ಜಾನಪದದ ಆರಂಭಿಕ ಹಾಗೂ ಸ್ವಾಭಾವಿಕ ಜೀವನ ಒಂದು ಸಂಶೋಧನಾ ಪರಿಕರಕ್ಕಿಂತ ಹೆಚ್ಚಿನದು. ಆದರೆ ಅದೇ ನಿಜವಾದ ಒಂದು ಸಾಂಸ್ಕೃತಿಕ ಸ್ಥಿತಿಯಲ್ಲ. ಉದಾಹರಣೆಗೆ ಉಗಮದ ಬಗೆಗೆ ನಡೆಸಿರುವ ಊಹೆಗಳು ಕೇವಲ ಕೆಲವು ಪ್ರಮೇಯಾತ್ಮಕ ಪ್ರಶ್ನೆಗಳಾಗಿದ್ದು ಅಧ್ಯಯನ ವಿಕಾಸದ ಆರಂಭ ಗತಿಯನ್ನಷ್ಟೇ ಹೇಳುತ್ತವೆ ಎನ್ನಬಹುದು. ಮೂಲದ್ದು ಎಂದು ಪರಿಗಣಿಸುವ ಸಂಗತಿಯು ಒಂದು ಪ್ರಕ್ರಿಯೆಯ ಆರಂಭಿಕ ಗತಿ ಆಗಿರುವುದಕ್ಕಿಂತ ಅಂತಿಮ ಫಲಶ್ರುತಿಯೂ ಆಗಿರಬಹುದು (ಹಾಂಕೊ:೧೯೯೦:೧೧)

. ಜಾನಪದಕ್ಕೆ ಒಳಗಿನಿಂದಲೇ ಪಾರ್ಶ್ವಿಕ ಮನ್ನಣೆ ನೀಡುವುದು

ಜಾನಪದ ಪ್ರಕ್ರಿಯೆಯ ಮುಂದಿನ ಹಂತವೇ ಪರಂಪರಾ ಜಾಗೃತಿಯ ಆವಿಷ್ಕಾರ. ಅದು ಪರಂಪರಾ ಸಮುದಾಯದೊಳಗೇ ಘಟಿಸಬಹುದು. ಪರಂಪರಾ ಜಾಗೃತಿ ಎಂದರೆ ಸಮುದಾಯದ ಕೆಲವು ಸದಸ್ಯರಾದರೂ ತಮ್ಮ ಜಾನಪದದ ಬಗೆಗಳನ್ನು ಗುರುತಿಸಲು, ಹೆಸರಿಸಲು ಆರಂಭಿಸುವುದು. ಆ ಹೆಸರುಗಳು ಕೆಲವು ಪ್ರಕಾರಗಳು, ಪ್ರದರ್ಶನ ಸಂದರ್ಭ, ಪ್ರಕಾರದ ವಸ್ತು ಅಥವಾ ಕಾರ್ಯಕ್ಕೆ ಸಂಬಂಧಿಸಬಹುದು.

ಜಾನಪದ ಜಾಗೃತಿಯ ಒಂದು ಆಕರವಂತೂ, ನಿಸ್ಸಂಶಯವಾಗಿಯೂ, ಆಶುಕವಿಗಳು, ಶ್ಯಾಮನ್ನರು, ಹೊಗಳಿಕೆಯವರು ಮುಂತಾದ ಪರಂಪರಾ ನಿಪುಣರನ್ನು ಒಳಗೊಳ್ಳುತ್ತದೆ.  ಈ ನಿಪುಣರು, ಕೆಲವೊಮ್ಮೆ, ಕೆಲವು ಮೂಲಾಂಶಗಳ ಮೇಲೆ ವಿಶೇಷ ಸ್ವಾಮ್ಯ ಹೊಂದಿರುತ್ತಾರೆ. ಇದು ಪರಂಪರಾ ಜಾಗೃತಿ ಬಗೆಗೆ ಅವರ ಕಾಳಜಿಯನ್ನು ಸೂಚಿಸುತ್ತದೆ. ಈ ನಿಪುಣರು ಮೊದಮೊದಲು ಕಡತಗಳು, ಲಿಖಿತ ಟಿಪ್ಪಣಿಗಳು, ವಸ್ತುಗಳು, ಸಂಜ್ಞೆಗಳು ಮುಂತಾದ ವಿವಿಧ ಜ್ಞಾಪಕ ಸೂತ್ರಗಳನ್ನು ಅವಲಂಬಿಸಿರುತ್ತಾರೆ. ಜಾನಪದದ ಸುಂದರ ಮುಖದ ಮೌಲ್ಯವಿವೇಚನೆ, ಜಾಗೃತ ಪರಂಪರೆಯ ವಿಕಸಿತ ಪ್ರಜ್ಞೆಯ ಸಂಕೇತವೆಂದೇ ಈಗ ಪರಿಗಣನೆಗೊಂಡಿದೆ. ವಾಸ್ತವವಾಗಿ, ಮೌಖಿಕ ಸಂಸ್ಕೃತಿಯಲ್ಲಿ ಪ್ರಚಲಿತವಿರುವ ಸಾಹಿತ್ಯದ ನಿಖರವಾದ ಮೀಮಾಂಸೆ ಸಾಧ್ಯ ಎಂಬ ಭಾವನೆಯೂ ಇದೆ.

ಪರಂಪರಾ ಜಾಗೃತಿಯ ಇತರ ಮಾನದಂಡಗಳು ಬೇರೆಬೇರೆ ವೃತ್ತಿಗಳು ಮತ್ತು ವಿಶಿಷ್ಟ ಆರಾಧನಾ ಗುಂಪುಗಳಾಗಬಹುದು. ಪರಂಪರೆಯ ಪ್ರಕಾರಕ್ಕೆ ಎಲ್ಲೆಲ್ಲಿ ಜನ ಲಕ್ಷ್ಯ ಕೊಡುತ್ತಾರೊ ಎಲ್ಲೆಲ್ಲಿ ಜಾನಪದ ಘಟಕಾಂಶಗಳು ರಹಸ್ಯವಾಗುಳಿಯುತ್ತವೆಯೊ ಅಂಥಲ್ಲೆಲ್ಲ ಪರಂಪರಾ ಜಾಗೃತಿ ಬೀಜಗಳು ಬಿತ್ತಲ್ಪಡುತ್ತವೆ. ಅದರ ಒಂದು ಕುರುಹು ಎಂದರೆ ಪರಂಪರಾ ಸಮುದಾಯದ ಒಳ:ಗಿನಿಂದಲೇ ಉದ್ಭವಿಸುವ ಜಾನಪದದಲ್ಲಿ ಅದು ಪೂರ್ಣ ಪ್ರಮಾಣದ್ದಾಗಿರದೆ ಇರುವುದು-ಸಾಮಾನ್ಯವಾಗಿ ಪರಂಪರೆಯ ಭಾಗಗಳಿಗೆ ಅಥವಾ ಉಪಕ್ಷೇತ್ರಗಳಿಗಷ್ಟೇ ಅನ್ವಯಿಸುವುದು. ಆದರೆ ಆ ಪ್ರಕಾರದಲ್ಲೇ ಅದು ವಿಶೇಷ ಮೌಲ್ಯವನ್ನು ಗಳಿಸಿಕೊಂಡಿರುತ್ತದೆ. ಸಮುದಾಯವು ಪ್ರಜ್ಞಾಪೂರ್ವಕವಾಗಿ ಸಾಧಿಸಬಯಸುವ ಕೇಂದ್ರ ಮಹತ್ವವಿರುವ ಕ್ಷೇತ್ರಗಳನ್ನು ಅದು ಸಂಕೇತಿಸುತ್ತದೆ. ಹೀಗೆ ಅಲ್ಲಿ ಸಂಸ್ಕೃತಿಯ ಕೇಂದ್ರ ಹಾಗೂ ಪರಂಪರಾ ಜಾಗೃತಿಗಳ ನಡುವೆ ಒಂದು ಸಂಬಂಧದ ಕೊಂಡಿ ಏರ್ಪಾಡುತ್ತದೆ.

. ಜಾನಪದದ ಬಾಹ್ಯ ಅನ್ವೇಷಕರು

ಜಾನಪದಕ್ಕೆ ಹೊರಗಿನಿಂದ ಮನ್ನಣೆ ನೀಡುವ ಹಂತ ಇದು. ಹೊರಗಿನಿಂದ ಪರಂಪರಾಗತ ಸಂಸ್ಕೃತಿಯನ್ನು ಪ್ರವೇಶಿಸಿ ಒಂದು ವಸ್ತುವನ್ನೊ ಹಾಡನ್ನೊ ಸಂಪ್ರದಾಯವನ್ನೊ-ಆ ಸಂಸ್ಕೃತಿಯ ಕೆಲವು ವಿಶೇಷಗಳನ್ನು ಬೊಟ್ಟು ಮಾಡಿ ತೋರಿಸಿ ಅವು ಮೌಲಿಕವಾದವು ಎಂದು ಹೇಳುವುದು. ಆಗ ಆ ಸಂಪ್ರದಾಯವನ್ನು ಆಚರಿಸುವವ, ವಸ್ತುವನ್ನು ಬಳಸುವವ ಅಥವಾ ಹಾಡನ್ನು ಹಾಡುವವ ಅದನ್ನು ಪರಂಪರೆಯ ಭಾಗವಾಗಿ ನೋಡಲಾರಂಭಿಸುವುದು ಸ್ವಾಭಾವಿಕ. ಆದರೆ ಆ ಪ್ರವೃತ್ತಿ ಕ್ರಮೇಣ ಇಡೀ ಸಮುದಾಯವನ್ನು ಆವರಿಸುತ್ತದೆ.

ಕೆಲವೊಮ್ಮೆ ಪರಂಪರೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಅದನ್ನು ಸಮುದಾಯದ ಹೊರಗೆ ಶೇಖರಿಸಿಡಬಹುದು. ಈ ವರ್ಗಾವಣೆ, ವರ್ಗಾವಣೆ ಹೊಂದುವ ಸಾಮಗ್ರಿಯನ್ನು ಅವಲಂಬಿಸಿರುತ್ತದೆ: ವಸ್ತುವೊಂದನ್ನು ಖರೀದಿಸಿ ವಸ್ತು ಸಂಗ್ರಹಾಲಯದಲ್ಲಿ ಇಡಬಹುದು; ಹಾಡನ್ನು ಭಂಡಾರದಲ್ಲಿ ಶೇಖರಿಸಿಡಬಹುದು; ಸಂಪ್ರದಾಯವನ್ನು ಶಬ್ದಗಳಲ್ಲಿ ನಿರೂಪಿಸಿಯೊ ಅದರ ಪ್ರಮುಖ ಎಳೆಗಳನ್ನು ಚಿತ್ರೀಕರಿಸಿಯೊ ಅಥವಾ ವೀಡಿಯೋಕರಣಗೊಳಿಸಿಯೊ ವರ್ಗಾವಣೆ ಮಾಡಲಾಗುತ್ತದೆ. ವಾಸ್ತವವಾಗಿ, ವಸ್ತು ಅಥವಾ ಹಾಡು ಅದು ಜೀವಂತವಾಗಿರುವ ಮೌಖಿಕ ಸಂವಹನ ಪ್ರಕ್ರಿಯೆಯ ಕೊಂಡಿಯಿಂದ ಕಳಚಿಕೊಂಡು ಬಿಡಬಹುದು ಇಲ್ಲವೆ ಬದಲಾಗಿ ಬಿಡಬಹುದು. ಈ ಅರ್ಥದಲ್ಲಿ ಅವು ಇದ್ದ ರೀತಗಿಯಲ್ಲೆ ಭಂಡಾರದಲ್ಲೇ ಸತ್ತು ಹೋಗುತ್ತವೆ; ಚಿರಸ್ಮಾರಕವಾಗಿ ಉಳಿದು ಬಿಡುತ್ತವೆ. ಹೊರಗಿನಿಂದ ಪ್ರೇರಿತವಾದ ಪರಂಪರಾ ಜಾಗೃತಿಗಳ ಇಂಥ ನಿದರ್ಶನಗಳು ಅಸಂಖ್ಯ ಇವೆ. ಅಂತೆಯೇ ಸ್ಥಳೀಯ ಸಮುದಾಯದ ಜಾನಪದವನ್ನು ಬಲವಾಗಿ ಸಮರ್ಥಿಸಿಕೊಳ್ಳುವವರೂ ಇದ್ದಾರೆ. ಆದರೆ ಅವರು ಸಮುದಾಯದ ಒಳಗಿನವರಾಗಿರುವುದಿಲ್ಲ. ಹೆಚ್ಚೆಂದರೆ ಅಲ್ಲಿ ಇತ್ತೀಚೆಗಷ್ಟೇ ನೆಲೆಸಲಾರಂಭಿಸಿದವರಾಗಿರುತ್ತಾರೆ.

. ಜಾನಪದ ನಿರ್ವಚನ

ಪರಂಪರಾ ಜಾಗೃತಿ ಬೆಳವಣಿಗೆ ಅತ್ಯುತ್ತಮ ಪರಂಪರೆಯನ್ನು ಒಳಗೊಳ್ಳುವ ನಿರ್ವಚನಗಳನ್ನು ರೂಪಿಸುವ ಅಗತ್ಯವನ್ನು ಹುಟ್ಟುಹಾಕಿತು. ಈ ನಿರ್ವಚನಗಳು ಸಮುದಾಯದ ಒಳಗೆ ಅಥವಾ ಹೊರಗೆ ರೂಪುಗೊಳ್ಳಬಹುದು. ಕೆಲವೊಮ್ಮೆ ಪರಂಪರಾಗತ ಮತ್ತು ವೈಜ್ಞಾನಿಕ ಸಮುದಾಯಗಳ ನಡುವಿನ ಪರಸ್ಪರ ಕ್ರಿಯೆಯಿಂದ ಉದ್ಭವಿಸಬಹುದು. ಪರಂಪರಾ ಜಾಗೃತಿ ಹೇಗೆ ಆಯದ್ದ ಬಗೆಯದೊ, ಪಾರ್ಶ್ವಿಕವಾದುದೊ ಹಾಗೆಯೇ ಜಾನಪದ ನಿರ್ವಚನ ಕೂಡ ಕೆಲವೇ ಆದ್ಯತೆಗಳೊಡನೆ ರೂಪು ತಾಳಿರುತ್ತದೆ. ಈ ಆದ್ಯತಾ ಕ್ಷೇತ್ರಗಳು ಸಾಮುದಾಯಿಕ ಅನನ್ಯತೆಗೆ ಮಹತ್ವದ ಕೊಂಡಿಗಳಾಗಿರಬಹುದು.

ಜಾನಪದದ ವೈಜ್ಞಾನಿಕ ನಿರ್ವಚನವನ್ನು ಆದ್ಯತಾ ಕ್ಷೇತ್ರಗಳಿಲ್ಲದೆ ನಿರ್ವಚಿಸಿಕೊಳ್ಳಬಹುದು ಎಂದು ತಿಳಿದರೆ ಅದು ತಪ್ಪಾಗುತ್ತದೆ. ಈಗ ಸನ್ನಿವೇಶ ಸಂಪೂರ್ಣ ಬದಲಾಗಿರುವುದರಿಂದ ಸಂಶೋಧನಾ ಪರಂಪರೆಗನುಗುಣವಾಗಿ ಆದ್ಯತಾ ಕ್ಷೇತ್ರಗಳನ್ನು ನಿಷ್ಕರ್ಷೆ ಮಾಡಿಕೊಳ್ಳಲಾಗಿದೆ. ಒಂದು ಶತಮಾನದ ಹಿಂದೆ ಫಿನ್ಲೆಂಡಿನ ಜಾನಪದ ಸಂಗ್ರಾಹಕರಿಗೆ ಕ್ಷೇತ್ರಕ್ಕೆ ಹೋಗಿ ಹಾಡು ಕಥೆ ಗಾದೆ ಒಗಟುಗಳು ಮತ್ತು ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಶೋಕಗೀತೆಗಳನ್ನು ಸಂಗ್ರಹಿಸಿಕೊಂಡು ಬರಲು ನಿಯೋಜಿಸಲಾಗುತ್ತಿತ್ತು. ಸಂಪ್ರದಾಯಾಚರಣೇಗಳು, ಬಲಿಸಮರ್ಪಣ ತಾಣಗಳು ಮತ್ತು ಐತಿಹ್ಯಗಳಿಗೆ ಸೋದಾಹರಣವಾದ ವಿವರಣೆ ಪ್ರವಾಸಿಗರ ವರದಿಗಳಲ್ಲಿ ಇವೆಯೇ ಹೊರತು ಆಯಾ ಜಾನಪದದ ನಿರ್ವಚನದ ವ್ಯಾಪ್ತಿಯಲ್ಲಿ ಬಂದಿಲ್ಲದಿರುವುದು ಗಮನಾರ್ಹ. ಫಿನ್ಲೆಂಡಿನ ಕಲೆವಾಲದ ಸುವರ್ಣ ವರ್ಷ(೧೯೩೫) ದ ವರೆಗೂ ಆ ಐತಿಹ್ಯಗಳು ಜಾನಪದ ಭಂಡಾರಗಳು ಹಾಗೂ ವಿದ್ವಜ್ಜನರ ಜಾಗೃತಿಯಲ್ಲಿ ಉಳಿದು ಬಂದಿರುವುದು ಸೋಜಿಗ. ಆ ತನಕ ಐತಿಹ್ಯಗಳನ್ನು ಜನಪದ ಕಥೆಗಳು ಎಂಬ ಹೊರಲೇಪದೊಡನೆ ಕಳ್ಳಸಾಗಣೆ ಮಾಡಲಾಗುತ್ತಿತ್ತು (ಹಾಂಕೊ:೧೯೯೦:೧೩). ಮುಂದೆ ಜಾನಪದ ಸಂಗ್ರಹಣೆಗೆ ವ್ಯಾಪಕ ಪ್ರಚಾರ ಲಭಿಸಿ ಜಾನಪದ ನಿರ್ವಚನದ ವ್ಯಾಪ್ತಿ ವಿಸ್ತಾರಗೊಳ್ಳುವುದು ಸಾಧ್ಯವಾಯಿತು. ಇದಕ್ಕೆ ಸದೃಶವಾದ ಪ್ರಕ್ರಿಯೆ ಇವತ್ತಿನ ಸಂಶೋಧನೆಯಲ್ಲಿ ಮತ್ತೆ ಗೋಚರಕ್ಕೆ ಬರುತ್ತಿದೆ. ವೈಯಕ್ತಿಕ ನಿರೂಪಣಾತ್ಮಕ ರಚನೆಗಳ ಪೈಕಿ ಒಬ್ಬಳೇ ನಿರೂಪಕಿ(ಉದಾ. ತಾಯಿ) ಮತ್ತು ಒಬ್ಬಳೇ ಶ್ರೋತೃ(ಅವಳ ಮಗಳು) ವಿರುವ ಕಥನ ಸಂಪ್ರದಾಯವೂ ಕಂಡುಬಂದಿದೆ. ಕಥನದ ಸ್ವರೂಪದಿಂದಲೇ ಅಲ್ಲಿ ಒಂದಕ್ಕಿಂತ ಹೆಚ್ಚು ಕಥನಗಳಿಲ್ಲ ಎಂಬುದು ಗೊತ್ತಾಗುತ್ತದೆ.

ಇದಕ್ಕೆ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ. ಮೊದಲೇ ಸ್ಪಷ್ಟಪಡಿಸಿರುವಂತೆ, ವೈಜ್ಞಾನಿಕ ಸಮುದಾಯದ ಜಾನಪದ ನಿರ್ವಚನವು ಆಯ್ಕೆಯ ಹಾಗೂ ಪಾರ್ಶ್ವಿಕ ಸ್ವರೂಪದ್ದು. ಜಾನಪದದ ಪರಿಧಿಯನ್ನು ನಿಯತವಾಗಿ ವಿಸ್ತರಿಸುತ್ತಲೇ ಇದೆ. ಹೀಗಾಗಿ ಅಂತಿಮ ಎನ್ನಬಹುದಾದ ನಿರ್ವಚನವೊಂದನ್ನು ಸದ್ಯದಲ್ಲಿ ಕಲ್ಪಿಸಿಕೊಳ್ಳುವುದು ಕಷ್ಟಸಾಧ್ಯ.

. ಒಳಗಿನಿಂದ ಸಂಸ್ಕೃತಿಯನ್ನು ವರ್ಣಿಸುವುದು ಮತ್ತು ಅದರ ಪ್ರಯೋಜನ

ಪರಂಪರಾ ಜಾಗೃತಿಯೊಡನೆ ಸಾಂಸ್ಕೃತಿಕ ಜಾಗೃತಿ ಕುರಿತು ಕೂಡ ನಾವು ವಿಚಾರ ಮಾಡಬಹುದು. ಒಂದೇ ಸಾಮಾಜಿಕ ಅಥವಾ ಭೌಗೋಳಿಕ ಗುಂಪಿನ ಹಿಂದೆ ಇರುವ ಪರಂಪರಾ ವ್ಯವಸ್ಥೆಯ ಒಟ್ಟು ಚಿತ್ರವನ್ನು ಕಟ್ಟಿಕೊಡುವ ಯತ್ನ ಮಾಡಬಹುದು. ಜನರು ವಿವಿಧ ಜೀವನ ಸನ್ನಿವೇಶಗಳಲ್ಲಿ ತಾವು ಏನಾಗಿದ್ದಾರೆ ಮತ್ತು ನಿಜವಾಗಿಯೂ ಏನನ್ನು ಪ್ರತಿನಿಧಿಸುತ್ತಿದ್ದಾರೆ ಎಂಬುದನ್ನು ತಿಳಿಸಿಕೊಡುವ ಯತ್ನ ಮಾಡಬಹುದು. ಸಮುದಾಯದ ಒಳಗಿನಿಂದಲೇ ಹುಟ್ಟಿಕೊಳ್ಳುವ ವಿವರಣೆಗೆ ಕುಮ್ಮಕ್ಕು ಒದಗಿಸುವ ಅಸ್ತ್ರ ಬಾಹ್ಯ ಪ್ರಚೋದನೆ ಅಥವಾ ಕುತೂಹಲ. ಉದಾಹರಣೆಗೆ ಸಂದರ್ಶಕನು ಸಮುದಾಯವೊಂದರ ಸಂಸ್ಕೃತಿ ಬಗೆಗೆ ಕುತೂಹಲ ತಳೆದು ಸಂದರ್ಶಿಸುತ್ತಾ ಹೋಗುತ್ತಾನೆ ಎಂದಿಟ್ಟುಕೊಳ್ಳೋಣ. ಬಂಜಾರ ಸಮುದಾಯದ ಒಬ್ಬ ನಿರೂಪಕ ತನ್ನ ಸಮುದಾಯದ ನೈರ್ಮಲ್ಯ ವ್ಯವಸ್ಥೆ, ತಂದೆತಾಯಿಗಳ ಅಧಿಕಾರ, ಸಮ್ಮಿಶ್ರ ಮದುವೆ ಕ್ರಮ, ಬಂಜಾರ ತೊಡುಗೆಗಳು ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನೀಡುವ ಉತ್ತರಗಳು ಅವನದೇ ಸಂಸ್ಕೃತಿಯ ಬಗೆಗೆ ಅವನು ನೀಡುವ ವಿವರಣೆಯಾಗಬಹುದು. ಅದು ಏಕಪ್ರಕಾರಗಳ ಮಾದರಿಯಲ್ಲಿ ಆ ಸಮುದಾಯದ ಪರಂಪರಾಗತ ಜೀವನದ ಕಟ್ಟುಕಟ್ಟಳೆಗಳನ್ನು ಪ್ರಸ್ತುತಪಡಿಸಬಹುದು. ಎಲ್ಲ ಬಂಜಾರರೂ ಆ ಕಟ್ಟಳೆಗಳಿಗೆ ಬದ್ಧವಾಗಿರಬೇಕಿಲ್ಲವಾದರೂ ವಿವರಗಳು ತಾಂಡಾದಿಂದ ತಾಂಡಕ್ಕೆ ಭಿನ್ನವಾಗಿರುತ್ತವೆ. ಸಂದರ್ಶನಕ್ಕೆ ಗುರಿಯಾಗಬೇಕಾದ ವ್ಯಕ್ತಿ ಬಹುದೂರದಲ್ಲಿ ನೆಲೆಸಿರಬಹುದು. ಅವನನ್ನು ಮುದ್ದಾಂ ಭೇಟಿಯಾಗಲು ಸಾಧ್ಯವಾಗದಿರಬಹುದು. ಪತ್ರ ವ್ಯವಹಾರದ ಮೂಲಕ ಮಾಹಿತಿ ದೊರಕಿಸಿಕೊಳ್ಳುವುದು ಅನಿವಾರ್ಯವಾಗಬಹುದು. ಎಷ್ಟೋವೇಳೇ, ವಾಸ್ತವ ಸಂಸ್ಕೃತಿಯೊಡನೆ ಮಾದರಿ ಸಂಸ್ಕೃತಿಯನ್ನು ಕಟ್ಟಿ ಹಾಕುವ ಕೆಲಸ ನೆಪಮಾತ್ರದ್ದಾಗಬಹುದು. ಬಂಜಾರ ಪರಂಪರೆಯ ಕಲ್ಪನೆಯನುಸಾರ, ಆ ಸಮುದಾಯದ ಮೌಲ್ಯಗಳ ಸ್ಪಷ್ಟ ಚಿತ್ರವನ್ನು ಪಡೆದರೆ, ಅದನ್ನು ಧಾರಾಳವಾಗಿ ಒಂದು ಮಾದರಿ ಸಂಸ್ಕೃತಿ ಎನ್ನಬಹುದು. ಮಾದರಿ ಸಂಸ್ಕೃತಿ ಹೊರಗಿನಿಂದಷ್ಟೇ ಪ್ರತಿನಿಧಿತವಾಗಬೇಕಾಗಿಲ್ಲ. ಅದು ಅದರ ಆಂತರಂಗಿಕ ಸಾಮಾಜಿಕ ನಿಯಂತ್ರಣ ಕಾಯಿದೆಗಳ ಸೆಲೆಯಾಗಿಯೂ ಕೆಲಸ ಮಾಡಬಹುದು. ಜಾನಪದ ಪ್ರಕ್ರಿಯೆಯ ಪರಿಶೀಲನೆಯಲ್ಲಿ ಈ ಮಾದರಿ ಸಂಸ್ಕೃತಿ ಗುಂಪು ಅನನ್ಯತೆಯನ್ನು ನಿರ್ವಚಿಸುವ ಒಂದು ಕ್ರಮ ಅಷ್ಟೆ.

ಇನ್ನು ಎರಡನೆಯದು, ಸಮುದಾಐದ ಒಳಗಿನ ವಿವರಣೆ ಸ್ಮೃತಿ ಸಂಸ್ಕೃತಿ(memory culture) ಎಂದು ಕರೆಸಿಕೊಳ್ಳಲು ಅರ್ಹವಾಗಿರುತ್ತದೆ. ಇದು ಮಾದರಿ ಸಂಸ್ಕೃತಿಯಾಗಿ ರೂಪುಗೊಳ್ಳುವುದಕ್ಕಿಂತ ವ್ಯಕ್ತಿಗತ ಸ್ವರೂಪದ್ದಾಗಿರುತ್ತದೆ. ಏಕೆಂದರೆ ಇದಕ್ಕೆ ಎಲ್ಲರನ್ನೂ ಅರಸಿಕೊಂಡು ಹೋಗುವ ಅಗತ್ಯ ಬೀಳುವುದಿಲ್ಲ. ಅಲ್ಲದೆ ಇದು ವ್ಯಕ್ತಿಗತ ಅನುಬವ ಮತ್ತು ವ್ಯಾಖ್ಯಾನಗಳಿಂದ ಸುತ್ತುವರಿದ ಜೀವನದ ಒಂದು ಪರಿಸ್ಥಿತಿಯಾಗಿದ್ದು ಖಾಯಂ ಸ್ವರೂಪದ ಗುಂಪೊಂದು ಅದೃಶ್ಯವಾದರೂ, ಅದರ ಸಾಮಾಜಿಕ ಚೌಕಟ್ಟು ಮತ್ತು ಮೊದಲಿನ ಜೀವನ ಸನ್ನಿವೇಶ ಮರೆಯಾದರೂ, ಜನರ ಸ್ಮೃತಿಯಲ್ಲಿ ನಿರಂತರವಾಗಿ ಉಳಿದು ಬರುವಂಥದು. ಸ್ಮೃತಿ ಸಂಸ್ಕೃತಿಯ ಘಟಕಾಂಶಗಳು ಆಯ್ಕೆ ಹೊಂದುವ ಕ್ರಮ ಕುರಿತು ಹೆಚ್ಚು ಅಧ್ಯಯನ ನಡೆದಿಲ್ಲ. ಆದರೆ ಸ್ಮೃತಿ ಸಂಸ್ಕೃತಿಯನ್ನು ಕ್ರಿಯಾಶೀಲಗೊಳಿಸುವ ಸಂಬಂಧದಲ್ಲಿ ಕೇವಲ ಕೆಲವು ಅವಲೋಕನಗಳಷ್ಟೇ ನಡೆದಿವೆ. ಸಂಗ್ರಹಣೆಯ ಸಂದರ್ಭದಲ್ಲಿ ಸಹಕಾರ ಭಾವವನ್ನೂ ಹುಟ್ಟುಹಾಕಿ ಗಾಯಕನ ಮೇಲೆ ಹೆಚ್ಚು ಒತ್ತಡ ಹೇರದೆ ಸಂಗ್ರಹಣಾ ಸನ್ನಿವೇಶವನ್ನು ಸಮ ರ್ಪಕವಾಗಿ ನಿರ್ವಹಿಸಿದರೆ, ಮರೆತಿರುವುದಾಗಿ ಹೇಳುವ ಗಾಯಕ ಕ್ರಮವಾಗಿ ಅನಂತರ ನಡೆಯುವ ಸಂದರ್ಶನಗಳಲ್ಲಿ ಸಾಕಷ್ಟು ಹಾಡುಗಳನ್ನು ಹಾಡಲು ಸ್ವಪ್ರೇರಣೆಯಿಂದ ಮುಂದಾಗಬಹುದು. ಸ್ಮೃತಿ ಸಂಸ್ಕೃತಿ ಸಾಮಾಜಿಕವಾಗಿಯೂ ಇರಬಹುದು. ಯುದ್ಧ ವೀರರ ಪ್ರಸ್ತಾಪ ಅದಕ್ಕೆ ಒಂದು ಉದಾಹರಣೆ. ಆದರೆ ಸಾಮಾನ್ಯವಾಗಿ ಈ ಸ್ಮೃತಿ ಸಂಸ್ಕೃತಿಯಲ್ಲಿ ವ್ಯಕ್ತಿಯ ಮಾನಸಿಕ ಅಗತ್ಯಗಳಿಗನುಗುಣವಾಗಿ ಒತ್ತು ಇರುತ್ತದೆ. ನೆರೆಹೊರೆಯವರ ಕಣ್ಣಿಗೆ ಒಂದು ಸಮುದಾಯ ಎನಿಸಿದ ಮನೆಮಾರುಗಳಿಲ್ಲದ ನಿರ್ವಸತಿಕರು, ಹೊಸಕೈಗಾರಿಕಾ ಕೇಂದ್ರದವರು, ಕೈಗಾರಿಕಾ ಸಮುದಾಯದ ಉದಯಕ್ಕೆ ಮೊದಲು ಹೊಸ ವಸತಿ ಕೇಂದ್ರಗಳಲ್ಲಿ ನೆಲೆಸಿರುವ ಜನ ಬಹಳ ಇದ್ದಾರೆ.

ಮೂರನೆಯದು, ನಮ್ಮದು ಎಂದು ಗುರುತಿಸಿಕೊಳ್ಳುವ ಆಶಯಿತ ಸಂಸ್ಕೃತಿ(aspired culture). ಸಾಮಾನ್ಯವಾಗಿ ವಲಸೆಗಾರರಿಗೆ ಸುತ್ತಲಿನ ಸಮಾಜ ಪರಿಸರಕ್ಕೆ ಹೊಂದಿಕೊಳ್ಳುವ ಅಗತ್ಯ ಬಹಳ ತೀವ್ರವಾಗಿರುತ್ತದೆ. ಸಂದರ್ಭ ಬಂದಾಗ ಎದುರಾಗುವ ಸಮಸ್ಯೆಗಳಿಗೆ ವ್ಯಕ್ತಿಗತವಾಗಿಯೊ ಸಾಮೂಹಿಕವಾಗಿಯೊ ತಲೆ ಕೊಡಲು ತಯ್ಯಾರಿರಬೇಕಾಗುತ್ತದೆ. ಹೀಗೆ ವ್ಯಾವಹಾರಿಕವಾಗಿ ನಿರ್ದಿಷ್ಟ ಸನ್ನಿವೇಶದಲ್ಲಿ ರೂಪುಗೊಳ್ಳುವ ಸಂಸ್ಕೃತಿ ಇದು. ಈ ಆಶಯಿತ ಸಂಸ್ಕೃತಿ, ಮಾದರಿ ಸಂಸ್ಕೃತಿಯಂತೆ ಹಳೆಯ ಮೌಲ್ಯಗಳನ್ನು ಪೋಷಿಸುವುದಿಲ್ಲ. ಆದರೆ ಸಂಘರ್ಷ ಮುಕ್ತ ಪರಸ್ಪರ ಅರಿವನ್ನು ಬಯಸುವ ಉಲ್ಲಾಸಸೀಲ ಗುಣದ್ದಾಗಿರುತ್ತದೆ. ಅದರ ಬಳಕೆದಾರರು ಸಾಮಾನ್ಯವಾಗಿ ವಲಸಿಗರಾಗಿರುತ್ತಾರೆ.

 

[1] The Folklore process is a stereotype life history of any culture’ – Lauri Honko in his paper The Folklore process F F S preprints, Folklore Fellows Summer School, December 1990, P.9