೧೫. ಸಾಂಸ್ಕೃತಿಕ ನೀತಿ ನಿರೂಪಣೆಯಲ್ಲಿ ಜಾನಪದ ಬಳಕೆ

ಇದು ಬಹುಮಟ್ಟಿಗೆ ಪರಂಪರಾ ಸಮುದಾಯ ಮತ್ತು ಅದರ ಹಿರಿಯಣ್ಣ-ಪ್ರಬಲ ಬಹುಸಂಖ್ಯಾತ ಗುಂಪು-ಮೇಲುಸ್ತುವಾರಿ ನಡೆಸುವ ಧಾರ್ಮಿಕ ಗುಂಪು ಅಥವಾ ರಾಜಕೀಯ ಚಳವಳಿಗಳ ನಡುವಿನ ಸಂಬಂಧಗಳನ್ನು ಸುತ್ತಿಕೊಳ್ಳುತ್ತದೆ. ಹಲವಾರು ಸೀಮಿತ ಆಸಕ್ತಿಗಳು ಮತ್ತು ಮೆಚ್ಚಿಕೊಳ್ಳುವ ಧೋರಣೆಗಳು ಸನ್ನಿವೇಶವನ್ನು ಅಸಮಮಿತಗೆ ನೂಕಿಬಿಡಬಹುದು. ಸಮುದಾಯವು, ಕೆಲವೊಮ್ಮೆ-ಸಾಂಸ್ಕೃತಿಕ,, ರಾಜಕೀಯ, ಬೌದ್ಧಿಕ ಮತ್ತು ಕ್ರಿಯಾತ್ಮಕ ಗುರಿಗಳಿಗೆ ಹಿನ್ನೆಗೆಯಬಹುದು. ಮತ್ತೊಂದೆಡೆ ಸಾರ್ವಜನಿಕರ ಗಮನಸೆಳೆಯುವ ಅವಕಾಶ ಕೆಲವು ಸನ್ನಿವೇಶಗಳಲ್ಲಿ ಎಷ್ಟು ಪ್ರಲೋಭನಕಾರಿಯಾಗಿರುತ್ತದೆ ಎಂದರೆ ಅದಕ್ಕೆ ಹೊಂದಿಕೊಳ್ಳಲಾಗದಿದ್ದರೂ ಯೋಜನೆಯೊಂದರೊಡನೆ ಸಾಗಬೇಕಾಗುತ್ತದೆ. ಆ ಯೋಜನೆಯಿಂದ ಪಡೆಯುವ ಯಾವುದೇ ಆರ್ಥಿಕ ಪ್ರಯೋಜನ ಅದೇ ಪರಿಣಾಮವನ್ನು ಉಂಟುಮಾಡಬಹುದು. ಸಾಮಾನ್ಯವಾಗಿಯು ಪರಂಪರಾ ಸಂಸ್ಕೃತಿ, ಕಲೆ ಮತ್ತು ಉನ್ನತ ಸಂಸ್ಕೃತಿಗೆ ವಿರುದ್ಧವಾದುದು ಎಂಬ ಗ್ರಹಿಕೆಯುಂಟು. ಸಮುದಾಯದ ಶ್ರೇಷ್ಠತೆ ನಿರ್ಧಾರವಾಗುವುದು ಉನ್ನತ ಸಂಸ್ಕೃತಿ ಮತ್ತು ಸ್ವತಂತ್ರ ಸ್ಥಳೀಯ ಪರಂಪರಾಗತ ಸಂಸ್ಕೃತಿಯಿಂದ ಆಮದು ಮಾಡಿಕೊಂಡ ಬೆಂಬಲಿತ ಕ್ರಮಗಳು ಹಾಗೂ ಯೋಜನೆಗಳಿಂದ. ಅದೇ ಅದರ ಅನನ್ಯತೆಯ ಬಲದ ಸಂಕೇತ.

ಈ ಬಗೆಯ ಇಂಥದೇ ಸಂದರ್ಭಗಳಲ್ಲಿ ಸಮುದಾಐದ ಅನನ್ಯತೆಯನ್ನು ವಿವಾದಕ್ಕೆ ಗುರಿಪಡಿಸಬಹುದು ಹಾಗೂ ವ್ಯಾಪಾರೀಕರಣಗೊಳಿಸಬಹುದು. ಯಾವುದೇ ಸಂಘರ್ಷಗಳು ಹೊರಗಿನ ಆಮಿಷ ಒತ್ತಡಗಳಿಂದಷ್ಟೇ ಉದ್ಭವಿಸುವುದಿಲ್ಲ. ಸಮುದಾಯದ ಒಳಗೇ ಸಮರ ಸಂಭವಿಸಬಹುದು; ವ್ಯಕ್ತಿಗತ ಪ್ರಭಾವಗಳು ಗಣನೀಯ ಪ್ರಮಾಣದಲ್ಲಿ ಪರಿಣಾಮ ಬೀರಬಹುದು.

೧೬. ಜಾನಪದದ ವ್ಯಾಪಾರೀಕರಣ

ಜಾನಪದದ ಮಾರುಕಟ್ಟೆ ಮೌಲ್ಯದ ಪ್ರಶ್ನೆ ಆಯಾ ಸಾಮಗ್ರಿಗನುಗುಣವಾಗಿ ಎಲ್ಲ ರೀತಿಯ ಉತ್ತರಗಳನ್ನೂ ಹೊರ ಹೊಮ್ಮಿಸಬಹುದು. ಅನೇಕ ಜಾನಪದೀಯ ಘಟನೆಗಳು ಪೂರ್ಣವಾಗಿ ಅಥವಾ ಪಾರ್ಶ್ವಿಕವಾಗಿ ವ್ಯಾಪಾರ ಈ ಆಸಕ್ತಿಗಳಿಂದ ತುಂಬಿಕೊಂಡಿವೆ (ಹಾಂಕೊ:೧೯೯೦೯:೨೧). ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಅಗಾಧವಾಗಿರುವ ಜಾನಪದದ ಕೆಲಸ ಆದರ್ಶದ ನೆಲೆಯಲ್ಲಿ ಸಮಾಜ ಮತ್ತು ಪ್ರಾಯೋಜಿತರ ಆರ್ಥಿಕ ನೆರವಿನಿಂದ ನಡೆಯುತ್ತಿದೆ. ಇಂಥ ಕೆಲಸದ ಫಲಿತಗಳನ್ನು ವ್ಯಾಪಾರೀಕರಣಗೊಳಿಸುವುದು ಒಂದು ಸಮಸ್ಯೆಯೇ ಹಾಗೂ ಸದ್ಯ ಚಾಲ್ತಿಯಲ್ಲಿರುವ ಜಾನಪದ ಬಳಕೆ ಕ್ರಮಗಳು ಅಷ್ಟಾಗಿ ಸ್ಪಷ್ಟವಾಗಿಲ್ಲ. ಮತ್ತೊಂದಡೆ, ಜಾನಪದ ಪುನರಾವೃತ್ತಿಗೆ ಹಣ ಚೆಲ್ಲಬೇಕಾಗಿದೆ. ಸಮಾಜದ ಕಡೆಯಿಂದ ಬೆಂಬಲ ಸಿಗದಿದ್ದಾಗ ಸ್ವಯಂ ಆರ್ಥಿಕ ಬೆಂಬಲದಿಂದ ಪ್ರದರ್ಶನಗಳನ್ನು ನೀಡಲು ಮುಂದಾಗಬೇಕಾಗುತ್ತದೆ.

ಜಾನಪದಕ್ಕೆ ಸಂಬಂಧಿಸಿದಂತೆ ಹಕ್ಕುಸ್ವಾಮ್ಯದ ಪ್ರಶ್ನೆ ಕುರಿತು WIPO(The World Intellectual Property Organisation) ಒಳಗೇ ವ್ಯಾಪಕ ರೀತಿಯ ಚರ್ಚೆ ನಡೆದಿದೆ. ಸಾರ್ವಜನಿಕ ವಲಯದಲ್ಲಿರುವ ಕೆಲವು ಅಂಶಗಳಿಗೆ ಹಕ್ಕುಸ್ವಾಮ್ಯ ಕಾಯಿದೆ ಕೆಲವು ಮಟ್ಟದ ರಕ್ಷಣೆಯನ್ನು ಒದಗಿಸುವ ಒಂದು ಕಲಂ ಇದೆ. ವಿಶೇಷ ಕಾಯಿದೆಗೆ ಕೆಲವು ಸೂಚನೆಗಳೂ ಇವೆ. ಆದರೆ ಉಳಿಸಿಕೊಳ್ಳಬೇಕಾಗಿರುವ ‘ಕೆಲಸ’ ಮತ್ತು ಅದರ ಒಡೆತನ ಹೊಂದಿರುವವರು ಅದನ್ನು ಬಳಸುವ ಹಕ್ಕನ್ನು ಹೊಂದುವ ವಿಷಯದಲ್ಲಿ ತೊಡಕುಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರವೆಂದರೆ ಕ್ಯಾಸೆಟ್ಟುಗಳ ಮೇಲೆ ವಿಧಿಸುವ ತೆರಿಗೆಯನ್ನು ಜಾನಪದ ಕೆಲಸಕ್ಕೆ ವಿನಿಯೋಗಿಸಲು ವಿತರಿಸುವುದು.  ಇದರರ್ಥ ಖಾಲಿ ಕ್ಯಾಸೆಟ್ಟು ಖರೀದಿಸುವವನು, ಒಂದು ವಿಧದಲ್ಲಿ, ಜಾನಕಪದ ಬಳಸುವ ಹಕ್ಕನ್ನು ಖರೀದಿಸಿದಂತೆ. ಹೀಗೆ ಪರೋಕ್ಷವಾಗಿ, ಪರಂಪರಾ ಸಮುದಾಯಗಳು ಪರಿಹಾರ ಹೊಂದಲು ಅವಕಾಶವಾಗುತ್ತದೆ. ವಾಸ್ತವವಾಗಿ, ಜಾನಪದದ ವ್ಯಾಪಾರ ವಹಿವಾಟಿನಿಂದ ಹಕ್ಕುಸ್ವಾಮ್ಯ ಕಾಯಿದೆ ಅಡಿಯಲ್ಲಿ ರಕ್ಷಣೆ ಪಡೆದಿರುವ ಸಂಘಸಂಸ್ಥೆಗಳು, ಧ್ವನಿ ಮುದ್ರಣ ಕಂಪನಿಗಳು, ಪ್ರದರ್ಶನಕಾರರು ಹಾಗೂ ಮುದ್ರಕರು ಲಾಭ ಗಳಿಸುತ್ತಾರೆ.

ಇಂದು, ಜಾನಪದದ ಮುಖ್ಯಗ್ರಾಹಕ-ಪ್ರವಾಸೋದ್ಯಮ. ಜಾನಪದದ ಪುನರಾವೃತ್ತಿಗೆ ಬಹುವಾಗಿ ಶ್ರಮಿಸುತ್ತಿರುವ ಸಂಸ್ಥೆ ಅದು. ಪ್ರವಾಸೋದ್ಯಮವನ್ನು ಚಲನೆಯಲ್ಲಿಡುವ ಪ್ರಕ್ರಿಯೆ ಕುರಿತು ಹೆಚ್ಚಿನ ಅಧ್ಯಯನ ನಡೆದಿಲ್ಲ. ಜಾನಪದದೊಡನೆ ಅದರ ನಂಟನ್ನು ಲಕ್ಷಿಸಿ ಅದು ಖೋಟಾ ಜಾನಪದ(Fakelore)[1]ವನ್ನು ಹುಟ್ಟುಹಾಕುತ್ತದೆ ಎಂದು ಹೀಗಳೆಯುವುದು ಸುಲಭ. ಇತ್ತೀಚೆಗಂತೂ ಅನೇಕ ಕುತೂಹಲಕರ ಹಾಗೂ ರಂಜನೀಯ ಸಮುದಾಯಗಳು ಜಾನಪದ ಗ್ರಾಹಕರಾಗಿ ತುಸು ಆಶ್ಚರ್ಯಕರ ರೀತಿಯಲ್ಲಿ ಬೆಳಕಿಗೆ ಬರುತ್ತಿವೆ. ಅಂತೆಯೇ ಜಾನಪದೀಯ ಕೈಗಾರಿಕೋತ್ಪನ್ನ ಕ್ಷೇತ್ರದಲ್ಲಿ ಸಮಸ್ಯೆಗಳನ್ನೂ ಎದುರಿಸುತ್ತಿವೆ.

ಈ ಸಂದರ್ಭದಲ್ಲಿ ನಾವು, ಯಾವ ಬಗೆಯ ಜಾನಪದ ತನ್ನ ಪ್ರದರ್ಶನ ಮತ್ತು ವ್ಯಾಪಾರದಿಂದ ನಲುಗಿದೆ? ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ. ಮತ್ತು ಯಾವುದು ಬಹು ಸುಲಭವಾಗಿ ವಿಕಟ ವಿಹಾರವಾಗಿ ಮಾರ್ಪಟ್ಟಿದೆ? ಎಂಬುದನ್ನು ಕೂಡ ಪರೀಕ್ಷಿಸಬೇಕಾಗಿದೆ. ಈ ಸಂಬಂಧದ ಚರ್ಚೆ ಮತ್ತು ಸಂಶೋಧನೆಗೆ ವಿಫುಲ ಅವಕಾಶಗಳಿವೆ.

೧೭. ಪರಂಪರಾಗತ ಸಂಸ್ಕೃತಿ ಮತ್ತು ಜಾನಪದ ರಕ್ಷಣೆ

ಪರಂಪರಾಗತ ಸಂಸ್ಕೃತಿ ಮತ್ತು ಜಾನಪದ ರಕ್ಷಣೆ ವಿಷಯವಾಗಿ ಯುನೆಸ್ಕೋದಿಂದ ಸದಸ್ಯರಾಷ್ಟ್ರಗಳಿಗೆ ಕಳುಹಿಸಲ್ಪಟ್ಟ ಈಚಿನ ಅಂತಾರಾಷ್ಟ್ರೀಯ ಶಿಫಾರಸು ಹಕ್ಕುಸ್ವಾಮ್ಯದ ವಿಲಕ್ಷಣ ಪ್ರಶ್ನೆಯನ್ನು ಕೈಬಿಟ್ಟಿದೆ. ಶಿಫಾರಸಿನಲ್ಲಿ ಜಾನಪದದ ರಕ್ಷಣೆ, ದಾಖಲೀಕರಣ ಮತ್ತು ಸಂರಕ್ಷಣೆಗೆ ಹೆಚ್ಚು ಒತ್ತು ನೀಡಲಾಗಿತ್ತು. ಪರಂಪರೆಯ ಪುನಶ್ಚೇತನಕ್ಕೆ ಹಾಗೂ ಪುನರಾವೃತ್ತಿಗೆ ಕೂಡ ಗಮನ ಕೊಡಲಾಗಿತ್ತು. ಜಾನಪದದ ಸಾಂಸ್ಕೃತಿಕ ಮೌಲ್ಯಗಳಿಗಾಗಿ ಅದಕ್ಕೆ ಮನ್ನಣೆ ಗಳಿಸಿಕೊಡುವ ಸದುದ್ದೇಶ ಅದರಲ್ಲಿತ್ತು. ಅಲ್ಲದೆ ಎಲ್ಲೆಲ್ಲಿ ಜಾನಪದ ಅಸ್ತಿತ್ವದಲ್ಲಿಲ್ಲವೊ ಅಲ್ಲೆಲ್ಲ ಜಾನಪದ ಕೆಲಸಕ್ಕಾಗಿ ಮೂಲಭೂತ ಸೌಕರ್ಯ ಕಲ್ಪಿಸಲು ಮತ್ತು ಅದನ್ನು ಬಲಪಡಿಸಲು ಯೋಜಿಸಿತ್ತು. ಈ ಶಿಫಾರಸುಗಳು ಸರ್ಕಾರಗಳನ್ನು ಉದ್ದೇಶಿಸಿದ್ದರೂ ಪರಂಪರಾಗತ ಸಂಸ್ಕೃತಿಯ ರಕ್ಷಣೆ, ಕೇಂದ್ರೀಯ ಆಸಕ್ತಿಗಳ ಪೋಷಣೆಯನ್ನು ಎತ್ತಿಹಿಡಿಯದಿರುವುದು ಗಮನಾರ್ಹ. ಅದಕ್ಕೆ ಪ್ರತಿಯಾಗಿ, ಶಿಫಾರಸು ಯಾವುದೇ ಸಾಮಾಜಿಕ ಮತ್ತು ಜನಾಂಗೀಯ ಗುಂಪಿನ ಹಕ್ಕುಗಳನ್ನು ಒತ್ತಿ ಹೇಳಿದೆ. ಅದರಲ್ಲೂ ಸಾಂಸ್ಕೃತಿಕ ಅಲ್ಪಸಂಖ್ಯಾತರಿಗೆ, ವಿಶೇಷವಾಗಿ ಅನ್ವಯಿಸಿ ಹೇಳಿದೆ.

ಜಾನಪದ ರಕ್ಷಣೆಯ ಗುರಿಗಳು ಮತ್ತು ಅದರ ಅಂತಃಸತ್ವ ಕುರಿತ ಜಿಜ್ಞಾಸೆ ಇನ್ನೂ ಕೆಲವು ಕಾಲ ಮುಂದುವರಿಯುವ ಸೂಚನೆಗಳಿವೆ. ಇದನ್ನು ಸಾಂಸ್ಕೃತಿಕ ಅನನ್ಯತೆಗಳ ವಿಷಯದಲ್ಲಿ ತೆಗೆದುಕೊಂಡ ಒಂದು ರಕ್ಷಣಾತ್ಮಕ ಕ್ರಮ ಎಂದು ತಿಳಿಯಬಹುದು. ಸಾಮ್ರಾಜ್ಯವಾದಿ ಮತ್ತು ವಸಾಹತುಶಾಹಿ ಹಿನ್ನೆಲೆ ಇರುವ ದೇಶಗಳಿಗಿಂತ ಮುಂದುವರಿದ ದೇಶಗಳು, ಯುರೋಪಿನ ಚಿಕ್ಕ ಚಿಕ್ಕ ರಾಷ್ಟ್ರಗಳು ಇದರಲ್ಲಿ ಹೆಚ್ಚು ಆಸಕ್ತಿ ತಳೆದಿರುವುದು ಕಂಡುಬರುತ್ತದೆ.

೧೮. ಶಾಲಾ ಕಾಲೇಜುಗಳಲ್ಲಿ ಪರಂಪರಾಗತ ಸಂಸ್ಕೃತಿ ಮತ್ತು ಸಂಶೋಧನಾ ತರಬೇತಿ

ಈಚಿನ ವರ್ಷಗಳಲ್ಲಿ ಶಾಲಾ ವ್ಯಾಸಂಗ ಕ್ರಮದಲ್ಲಿ ಜಾನಪದ ಮತ್ತು ಪರಂಪರಾಗತ ಸಂಸ್ಕೃತಿ ಕೆಲಮಟ್ಟಿಗೆ ಕಾಣಿಸಿಕೊಳ್ಳುತ್ತಾ ಬಂದಿವೆ. ಇದರರ್ಥ ಜಾನಪದವು ಯುಕ್ತ ರೀತಿಯಲ್ಲಿ ಕಲಿಕೆ ಪ್ರಕ್ರಿಯೆಯ ಭಾಗವಾಗಿದೆ ಎಂದಲ್ಲ; ಯಾರು ಒಂದು ಜೀವಂತ ಪರಿಸರದಲ್ಲಿ ತಮ್ಮ ಗುಂಪಿನ ಪರಂಪರೆಯನ್ನು ಕ್ರಿಯಾಶೀಲವಾಗಿ ಪಾಲ್ಗೊಳ್ಳುವುದರ ಮೂಲಕ ಕಲಿಯುತ್ತಾರೊ ಅದು ಕಲಿಕೆ ಎನಿಸಿಕೊಳ್ಳುತ್ತದೆ. ಅದನ್ನು ಉಪಯೋಗಿಸುವಂತೆ ಅದರ ಕಲಿಕೆ ಕೂಡ. ಶಾಲಾ ಕಾಲೇಜುಗಳು, ಕಲಿಸುವ ಸಂಸ್ಕೃತಿ ಸ್ಥಳೀಯ ಸಮುದಾಯದಲ್ಲದಿದ್ದಾಗ ಅಥವಾ ಸಮುದಾಯದ ಸ್ವಂತ ಸಾಂಸ್ಕೃತಿಕ ರಿಕ್ಥತೆಯ ಚಾರಿತ್ರಿಕ ಭಾಗವಾಗಿದ್ದರೆ ಪರಂಪರಾಗತ ಸಂಸ್ಕೃತಿಯನ್ನು ಅರಿಯಲು ದಾರಿ ಮಾಡಿಕೊಡುತ್ತವೆ. ವಾಸ್ತವವಾಗಿ, ಜಾನಪದದ ವೈವಿಧ್ಯಪೂರ್ಣ, ತೌಲನಿಕ ನೋಟ ಅಪೇಕ್ಷಣೀಯವಾದರೂ ಪ್ರಚಾರೋದ್ದೇಶದಿಂದ ಕೂಡಿದ ಅನುಭವವಾದರೆ ಅದು ದುರ್ಬಲ ಎನಿಸುತ್ತದೆ. ಈಗೀಗ ಜಾನಪದ ಬೋಧನೆಯಲ್ಲಿ ಸಾಂಸ್ಕೃತಿಕ ತಲೆಮಾರುಗಳ ಅಂತರವನ್ನು ವಿಶದೀಕರಿಸಲಾಗುತ್ತಿದೆ. ಪ್ರತಿಯೊಂದು ತಲೆಮಾರು, ಆ ಕಾರಣಕ್ಕಾಗಿ, ಪರಂಪರಾಗತ ಸಂಸ್ಕೃತಿಯನ್ನು, ಮೊದಲು ಇದ್ದಂತೆ, ತನ್ನದೇ ಆದ ಆಸಕ್ತಿಗಳ ಮೂಲಕ ಹೊಸ ಹೊಸದಾಗಿ ಕಂಡುಕೊಳ್ಳಬೇಕಾಗುತ್ತದೆ. ವಿವಿಧ ಸಂಸ್ಕೃತಿಗಳನ್ನು ಅರಿಯುವ ನಿಟ್ಟಿನಲ್ಲಿ, ಮೂಲಭೂತವಾಗಿ ಇದು ಒಂದು ಸಾಂಸ್ಕೃತಿಕೊ-ಮಾನವಶಾಸ್ತ್ರೀಯ ಪ್ರಶ್ನೆಯಾಗಿದೆ.

ಶಿಕ್ಷಣದ ಮತ್ತೊಂದು ಮಹತ್ವದ ಸ್ತರವೆಂದರೆ ಅಂತಾರಾಷ್ಟ್ರೀಯ ಸ್ವರೂಪದ ಸಂಶೋಧನಾ ತರಬೇತಿ. ಇದು ತರುಣ ಸಂಶೋಧಕರು ಸೀಮಿತ ವ್ಯಾಪ್ತಿಯ ಕ್ಷೇತ್ರದಲ್ಲಿ ಮುಳುಗಿ ಹೋಗುವುದನ್ನು ತಡೆಗಟ್ಟುತ್ತದೆ. ಅಂತಾರಾಷ್ಟ್ರೀಯ ಸಂಶೋಧನ ಸಹಕಾರ ಸಂಶೋಧನಾ ತರಬೇತಿ ಉತ್ತಮ ಭವಿಷ್ಯವನ್ನು ಹೊಂದಲು ಆಹ್ವಾನ ನೀಡುತ್ತದೆ. ಸಂಪೂರ್ಣ ವಿಭಿನ್ನ ಸಾಂಸ್ಕೃತಿಕ ನೆಲೆಯಿಂದ ಬಂದ ತರುಣರು ಸಂಸ್ಕೃತಿಯನ್ನು ಅರಿಯುವ ಬಲವಾದ ಪ್ರೇರಣೆಯಿಂದ ಉತ್ತಮ ಶಿಕ್ಷಕರಾಗುವುದು ಸಾಧ್ಯ.

೧೯. ಜಾನಪದ ಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಪರಂಪರಾ ಸಮುದಾಯಗಳ ಅಗತ್ಯಗಳನ್ನು ಪೂರೈಸುವುದು

ನಿಷ್ಕಾರಣವಾಗಿ ಹೆಚ್ಚಿನ ವಿದ್ವಾಂಸರು ಇದನ್ನು ಒಂದು ಸಮಸ್ಯೆಯಾಗಿ ಪರಿಗಣಿಸಿದ್ದರೂ ಇದು ವಿವಿಧ ಸ್ತರಗಳಲ್ಲಿ ಜಾನಪದ ಪ್ರಕ್ರಿಯೆಯ ಬಹು ಮಹತ್ವದ ಭಾಗ. ಸಮುದಾಯದ ಒಳಗಿನಿಂದಲೇ ಆಲೋಚನೆಗಳು ಹೊರ ಹೊಮ್ಮಿದಾಗ ಅದು ಹವ್ಯಾಸವಾಗಿ ತೋರಬಹುದು. ಆದರೆ ಶಾಲಾ ಮಾಸ್ತರಿಂದಾಚೆ ಇದು ಸ್ವಾಗತಾರ್ಹವಲ್ಲ(ಹಾಂಕೊ:೧೯೯೦:೨೩). ಇಷ್ಟಾದರೂ, ಸಂಶೋಧನೆಯಲ್ಲಿ ಇದು ಒಂದು ಕುತೂಹಲಕರ ಕ್ಷೇತ್ರ. ಕೆಲವು ಯಶಸ್ವೀ ಸಂದರ್ಭಗಳಲ್ಲಿ ವೈಜ್ಞಾನಿಕ ಮತ್ತು ಜಾನಪದ ಸಮುದಾಯಗಳ ಆಸಕ್ತಿ ಒಂದನ್ನೊಂದು ಸರಿಗಟ್ಟಬಹುದು.

ಜಾನಪದವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಹಬ್ಬ ಜಾತ್ರೆಗಳನ್ನು ಅವುಗಳ ರಂಗುರಂಗಾದ ಬಣ್ಣಗಳೊಡನೆ ಪುನರ್ ಸೃಷ್ಟಿಸಲು, ದೊಡ್ಡ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಳ್ಳಲು, ಉತ್ಸಾಹಿಗಳನ್ನು ಹುರಿದುಂಬಿಸಲು ವೈಜ್ಞಾನಿಕ ಸಮುದಾಯದಲ್ಲಿ ಶೇಖರಗೊಂಡಿರುವ ಅನುಭವವನ್ನು ಬಳಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ವಿಜ್ಞಾನದ ಪಾತ್ರವನ್ನು ಮಂದಗತಿಯದು ಎಂದು ಬಣ್ಣಿಸಲಾಗದು. ಉದಾಹರಣೆಗೆ ಪರಂಪರಾ ಸಮುದಾಯವು ಪ್ರದೇಶ ಜಾನಪದ ಕೃತಿಯೊಂದರ ಸಂಪಾದಕನಿಗೆ ಪೂರ್ಣಸ್ವಾತಂತ್ರ್ಯ ನೀಡಬಹುದು. ಅದೇ ವೇಳೆಯಲ್ಲಿ ಮಾನಸಿಕ ಹಾಗೂ ಆರ್ಥಿಕ ನೆರವನ್ನೂ ಒದಗಿಸಬಹುದು.

೨೦. ಜಾನಪದ ಪ್ರದರ್ಶಕರಿಗೆ ಉತ್ತೇಜನ

ಇದು ಆಧುನಿಕ ಜಾನಪದ ಕೆಲಸದ ಒಂದು ಭಾಗ. ಎಲ್ಲಿಯವರೆಗೆ ಜಾನಪದವನ್ನು ಪ್ರದರ್ಶಿಸುವ ಅಪೇಕ್ಷೆ ಇರುವುದಿಲ್ಲವೊ ಅಲ್ಲಿಯತನಕ ಅದರ ಪುನರಾವೃತ್ತಿ ಶುಷ್ಕವೂ ಪುಸ್ತಕದ ಬದನೆಕಾಯಿಯೂ ಆಗುತ್ತದೆ. ಪ್ರದರ್ಶನ, ಪರಿಣತರ ದೃಷ್ಟಿಯಿಂದ ಬೇರೆಯಾದರೂ, ಪ್ರತಿಯೊಬ್ಬರಲ್ಲೂ ಅಂತಸ್ಥವಾಗಿರುವ ಕ್ರಿಯಾಶೀಲ ಮೂಲಾಂಶ; ಜಾನಪದದ ಎರಡೂ ಬಾಳ್ವೆಗೆ ಬೇಕಾದುದು. ಜಾನಪದದ ಎರಡನೆಯ ಬಾಳ್ವೆಯಲ್ಲಿ ಅನ್ವಯಿಕತೆಯಿಂದ ದೊರಕಿಸಿಕೊಳ್ಳುವ ಜ್ಞಾನ ಯಾವುದೇ ಕಾರಣಕ್ಕೂ ಮೊದಲಿನ ಬಾಳ್ವೆಯ ಪ್ರದರ್ಶನಗಳನ್ನು ಬೆಲೆಕಟ್ಟುವುದಕ್ಕಿಂತ ಕಡಿಮೆಯದಲ್ಲ.

ಈ ಕಾರಣಕ್ಕಾಗಿ ಪ್ರದರ್ಶನಕಾರನ ಹಕ್ಕನ್ನು ರಕ್ಷಿಸುವುದು ಕೂಡ ಸಮರ್ಥನೀಯ. ಪರಂಪರಾ ಸಮುದಾಯದಲ್ಲಿ ಪ್ರಚಲಿತವಿರುವ ಹಾಡು, ಕತೆಗಳು ಹಾಗೂ ಕೆಲವೇ ಕೆಲವರಿಗೆ ಸೀಮಿತವಾಗಿರುವ ಗುಣಕಾರಿ ವಿಧಿಗಳನ್ನು ಒಪ್ಪಿಕೊಳ್ಳುವಂತೆ ಅವರನ್ನೂ ಗಮನಕ್ಕೆ ತಂದುಕೊಳ್ಳಬೇಕು.

೨೧. ಜಾನಪದ ಕೆಲಸದಲ್ಲಿ ಅಂತಾರಾಷ್ಟ್ರೀಯ ವಿನಿಮಯ

ಜಾನಪದ ಪ್ರಕ್ರಿಯೆಯ ಅಂತಾರಾಷ್ಟ್ರೀಯ ಮುಖವು ಆಧುನಿಕ ಸಂಪರ್ಕಗಳ ಹಿನ್ನೆಲೆಯಲ್ಲಿ ಮುಖ್ಯವಾಗುತ್ತದೆ. ಆರಾಮ ಕುರ್ಚಿಗಳಲ್ಲೇ ಕುಳಿತು ಅನೌಪಚಾರಿಕ ಮಾರ್ಗದರ್ಶಕರ ಸಹಯೋಗದೊಡನೆ ಭೂಮಿಯ ಮೇಲೆ ಮೂಲೆಗೂ ಸಂಚರಿಸುವುದು ಈಗ ಸಾಧ್ಯ. ನಮ್ಮ ಪರಂಪರೆಯ ಬಗೆಗೆ ನಮ್ಮ ಜನರಿಗೆ ವಿವರಿಸುತ್ತಾ ಹೋಗುವುದು ಸಾಧ್ಯ. ಆದರೆ ಪ್ರವಾಸಿಗಳಂತೆ ಮೋಜಿಗಾಗಿ ಪ್ರಯಾಣ ಮಾಡುವುದಲ್ಲ; ಸಾಂಸ್ಕೃತಿಕ ಪರದೆಯ ಹಿಂದೆ ಇರುವುದನ್ನು ನಿಕಟವಾಗಿ ನೋಡುವ ಪ್ರಯತ್ನ ಮಾಡಬೇಕಾಗುತ್ತದೆ.

ಜಾನಪದ ವಸ್ತುಗಳು, ಪ್ರದರ್ಶನಗಳು ಹಾಗೂ ಪ್ರಕಟಣೆಗಳ ಪ್ರದರ್ಶನ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಡಿಯಲ್ಲಿ ಆಸಕ್ತರನ್ನು ಸೆಳೆದುಕೊಳ್ಳುತ್ತಿವೆ. ಜಾನಪದೀಯ ದೃಷ್ಟಿಯಲ್ಲಿ ಅತ್ಯಂತ ತೀವ್ರವಾದ ಆಸಕ್ತಿಯನ್ನು ಬೆಳೆಸಿಕೊಂಡಿರುವ ದೇಶಗಳೊಡನೆ ಫಿನ್ಲೆಂಡ್‌, ಇಂಗ್ಲೆಂಡ್‌, ಅಮೆರಿಕ, ಫ್ರಾನ್ಸ್‌, ಜರ್ಮನಿ, ರಷ್ಯ ಮುಂತಾದ ರಾಷ್ಟ್ರಗಳು ದ್ವಿಪಕ್ಷೀಯ ವಿನಿಮಯ ಒಪ್ಪಂದಗಳಿಗೆ ಬಂದಿವೆ. ಈ ಮತ್ತು ಇತರ ಅಂತಾರಾಷ್ಟ್ರೀಯ ಸಂಪರ್ಕಗಳು ಅಂತಾರಾಷ್ಟ್ರೀಯ ಸಂಬಂಧಗಳನ್ನು ಮತ್ತಷ್ಟು ಮಧುರಗೊಳಿಸಿಕೊಳ್ಳುವ ಮಾರ್ಗಗಳಾಗಿ ಪರಿಣಮಿಸಿವೆ. ತಾಂತ್ರಿಕ ನೆರವಿನ ಜೊತೆಗೆ ಜಾನಪದ ಕೆಲಸ ನಿರ್ವಹಣೆಗೆ ಅಗತ್ಯವಾ ದ ತರಬೇತಿಯೂ ದೊರಕಬೇಕಾಗಿದೆ. ಅಂತಾರಾಷ್ಟ್ರೀಯ ವಿನಿಮಯ ಯೋಜನೆಯಿಂದ ಅದು ಸುಲಭವಾಗಿ ಲಭ್ಯವಾಗುತ್ತದೆ.

೨೨. ಆಧುನಿಕ ಪ್ರಪಂಚದಲ್ಲಿ ಜಾನಪದದ ಪ್ರತಿಷ್ಠೆ

ಜಾನಪದ ಪ್ರಕ್ರಿಯೆಯ ಫಲ ಇದು. ಆಧುನಿಕ ಜಾನಪದ ಅಧ್ಯಯನ ಕಳೆದ ಐದು ದಶಕಗಳಿಂದ ಬಿತ್ತಿದ್ದನ್ನೇ ಬೆಳೆದುಕೊಳ್ಳುತ್ತಿದೆ. ಸದ್ಯದ ಸಂಶೋಧನೆ-ರಾಷ್ಟ್ರೀಯ, ಜನಾಂಗೀಯ ಸಾಮಾಜಿಕ, ಪ್ರಾದೇಶಿಕ ಅಥವಾ ಸ್ಥಳೀಯ-ಹೀಗೆ ಅನೇಕ ಸಾಂಸ್ಕೃತಿಕ ಅನನ್ಯತಗಳೊಡನೆ ಬಂಧಿತವಾಗಿದೆ. ೨೦೦೦ದ ವರೆಗಿನ ಜಾನಪದ ಕೆಲಸದ ಸಿಂಹಾವ ಲೋಕನದಿಂದ ದೃಢವಾಗುವ ಒಂದು ಶುಭಸೂಚನೆ ಎಂದರೆ ಹೆಚ್ಚು ನಿಕಟ ಸಹಕಾರ ಕಂಡು ಬಂದಿರುವುದು. ಅದರಲ್ಲೂ ಜಾನಪದದ ಎರಡನೆಯ ಬಾಳ್ವೆಯಲ್ಲಿ ಹೆಚ್ಚು ಪ್ರಜ್ಞಾಪೂರ್ವಕ ಹಾಗೂ ನಿಯಂತ್ರಿತ ರೀತಿಯಲ್ಲಿ ಸಮಕಾಲೀನ ಸಂಸ್ಕೃತಿಗಳ ನಡುವೆ ಸಂವಾದಕ್ಕೆ ಕವಕಾಶ ಕಲ್ಪಿಸಿಕೊಳ್ಳಲಾಗಿದೆ. ‘ಜಾನಪದೀಯತೆ’ ಕುರಿತ ವಿಮರ್ಶೆ ಇನ್ನೂ ಹೆಚ್ಚಿನ ಪರಿಶೋಧನಾತ್ಮಕ ಧೋರಣೆಗೆ ಎಡೆ ಮಾಡಿಕೊಟ್ಟಿದೆ. ತಮ್ಮ ವಿಭಿನ್ನತೆಗಳ ಅರಿವಿರುವ ಸಂಸ್ಕೃತಿಗಳ ಸಾಮಾನ್ಯ ಭಾಷೆಯಾಗಿ ಜಾನಪದ ಇವತ್ತು ತನ್ನ ಬಲವನ್ನು ವೃದ್ಧಿಸಿಕೊಳ್ಳುತ್ತಿದೆ. ವೊಜಾರ್ಟ್‌ಗಿಂತ ಹೆಚ್ಚು ವಿಸ್ತಾರವಾಗಿ, ಸಾಂಸ್ಕೃತಿಕ ನೆರೆಹೊರೆಗಳು ಮತ್ತು ಮಾದರಿಗಳು ಇಂದು ಎಲ್ಲೆಡೆ ಕಂಡು ಬರುತ್ತಿವೆ(ಹಾಂಕೊ:೧೯೯೦:೨೪). ಅಲ್ಪಸಂಖ್ಯಾತರು ಮತ್ತು ಚಿಕ್ಕ ಚಿಕ್ಕ ಸಮುದಾಯಗಳು ಸಂಸ್ಕೃತಿಯ ಕೈಗಾರಿಕಾ ಪ್ರಕಾರಗಳ ಪ್ರಾಬಲ್ಯವನ್ನು ಕುಗ್ಗಿಸುವ ಅಸ್ತ್ರಗಳಾಗಿ ಪರಿಣಮಿಸಿವೆ. ಇದು ಒಂದು ಆಶಾದಾಯಕ ಸಂಗತಿಯಾಗಿದೆ. ಜಾನಪದವು ಅಂತರಾಷ್ಟ್ರೀಯ ಉನ್ನತ ಸಂಸ್ಕೃತಿಯ ಸ್ಥಾನವನ್ನು ಕುಗ್ಗಿಸಲು ಸಾಧ್ಯವಿಲ್ಲ. ಬದಲಿಗೆ ಅದರ ಮಹತ್ವವನ್ನು ಮನಗಂಡು ಅದರ ಪಾಡಿಗೆ ಅದನ್ನು ಬಿಟ್ಟುಬಿಡಬೇಕು. ಸಂಪೂರ್ಣ ಅತ್ಯುತ್ತಮೀಕರಣಗೊಳಿಸುವಿಕೆ ಅಥವಾ ಪರಂಪರೆಗಳು ಸಾವನ್ನಪ್ಪುತ್ತವೆ ಎಂಬ ವದಂತಿಗಳು ಹುರುಳಿಲ್ಲದವು.

ಇದು ಹಾಂಕೊ ದೃಷ್ಟಿ. ಈ ದೃಷ್ಟಿಯನ್ನು ಅಳವಡಿಸಿಕೊಂಡರೆ ಜಾನಪದ ಕೆಲಸ, ನೆಲ ಸಂಸ್ಕೃತಿ ಕೆಲಸ, ಜಾನಪದ ಭಂಡಾರ ನಿರ್ಮಾಣ, ವಸ್ತು ಸಂಗ್ರಹಾಲಯ ಹಾಗೂ ಪರಂಪರಾಗತ ಸಂಸ್ಕೃತಿ ಕುರಿತ ವೈಜ್ಞಾನಿಕ ಸಂಶೋಧನೆಗೆ ಉತ್ತಮ ತಳಪಾಯ ಹಾಕುವುದು ಸಾಧ್ಯವಾಗುತ್ತದೆ; ಸಂಶೋಧನೆಯ ಪ್ರಕಾರಗಳನ್ನು ಅರಿತುಕೊಳ್ಳುವುದು ಸುಲಭವಾಗುತ್ತದೆ. ಅಷ್ಟೇ ಅಲ್ಲ; ಅಧ್ಯಯನಕಾರರಾಗಿ ನಾವು ನಮ್ಮ ಸ್ಥಾನವನ್ನು ತಿಳಿದುಕೊಳ್ಳಲು ಕೂಡ ಸಾಧ್ಯವಾಗುತ್ತದೆ. ಒಮ್ಮೆ ನಾವು ನಮ್ಮ ಸ್ಥಾನವನ್ನು ತಿಳಿದುಕೊಳ್ಳಲು ಕೂಡ ಸಾಧ್ಯವಾಗುತ್ತದೆ. ಒಮ್ಮೆ ನಾವು ನಮ್ಮ ಸ್ಥಾನವನ್ನು ಅರಿತುಕೊಂಡರೆ ಇನ್ನೂ ಹೆಚ್ಚು ವಿಶಾಲ ಅಸ್ತಿತ್ವದ ವಿಷಯಗಳ ಮೇಲೆ ಹಿಡಿತ ಸಾಧಿಸುವುದು ಸಾಧ್ಯವಾಗಬಹುದು; ಜೀವನದ ಸಂದರ್ಭದಲ್ಲಿ ಎದುರಾಗುವ ಸನ್ನಿವೇಶಗಳಿಗೆ ಪ್ರಬುದ್ಧ ಹಾಗೂ ನೈತಿಕವಾಗಿ ಯೋಗ್ಯ ಎನಿಸಿದ ಪರಿಹಾರಗಳನ್ನು ಕಂಡುಕೊಳ್ಳುವುದು ಸಾಧ್ಯವಾಗುತ್ತದೆ. ಪ್ರತಿಯೊಂದನ್ನೂ ಅದರದರ ಬೆಳಕಿನಲ್ಲಿ ವಿವೇಚಿಸುವಾಗ ನಮ್ಮ ಪಾತ್ರದ ಮಹತ್ವವನ್ನು ಉತ್ಪ್ರೇಕ್ಷಿಸುವುದು ಸಲ್ಲದು ಎಂಬ ಅರಿವಿದ್ದರೆ ಸಾಕು. ವಾಸ್ತವವಾಗಿ, ಪರಂಪರಾಗತ ಸಂಸ್ಕೃತಿಯ ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಕೆಲಸವಿರುತ್ತದೆ; ಆನಂದವೂ ಇರುತ್ತದೆ. ಆದರೆ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಕೆಲಸ ಮಾಡುವ ಜಾನಪದ ಅಧ್ಯಯನಕಾರರಿಗೆ ಆಸಕ್ತಿಗಳ ಕ್ಷೇತ್ರ ಬಹಳಷ್ಟು ಸೀಮಿತವಾಗಿರುತ್ತದೆ(ಹಾಂಕೊ: ೧೯೯೦:೨೪). ಅದು ನಿಜವಾಗಿಯೂ, ಜಾನಪದ ಪ್ರಕ್ರಿಯೆಯ ೧ ರಿಂದ ೧೨ರ ವರೆಗಿನ ಹಂತಗಳನ್ನಷ್ಟೇ ಒಳಗೊಳ್ಳುತ್ತದೆ. ಇಷ್ಟಾದರೂ, ನಾವು ಹೊಸ ಆಯಾಮಗಳನ್ನು ಅನಾವರಣಗೊಳಿಸುವ ದಿಕ್ಕಿನತ್ತ ಚಲಿಸುತ್ತಿದ್ದೇವೆ ಎಂಬುದು ಸಮಾಧಾನದ ಸಂಗತಿಯಾಗಿದೆ.

 

[1] ಜಾನಪದೀಯತೆ’ (Folklorism) ವಿಷಯದಲ್ಲಿತೆಗೆದುಕೊಂಡನಿರ್ಧಾರದಂತೆ`ಖೋಟಾಜಾನಪದ’(Fakelore) ಪರಿಭಾಷೆಯವಿಷಯದಲ್ಲೂಎಚ್ಚರಿಕೆವಹಿಸುವುದುಅಗತ್ಯ.