. ಹೊರಗಿನಿಂದ ಸಂಸ್ಕೃತಿಯನ್ನು ವಿವರಿಸುವುದು ಮತ್ತು ಅದರ ಉಪಯೋಗ

ಬಹಳ ಸಂದರ್ಭಗಳಲ್ಲಿ ಸಂಸ್ಕೃತಿಯನ್ನು ವಿವರಿಸುವ ಜನ ಹೊರಗಿನವರೇ ಆಗಿರುತ್ತಾರೆ. ಉದ್ದೇಶಿತ ಸಂಸ್ಕೃತಿ ಹಾಗೂ ಅದರ ಅಧ್ಯಯನದ ಸಂದರ್ಭದಲ್ಲಿ ಯಾವ ತೊಡಕನ್ನೂ ಉಂಟು ಮಾಡಿಕೊಳ್ಳದೇ ತಮ್ಮ ಸ್ವಂತ ಅಕೆಡೆಮಿಕ್‌ಆಸಕ್ತಿಯನ್ನು ಕಾಯ್ದುಕೊಳ್ಳುವವರು ಅವರು. ಸಂಸ್ಕೃತಿಯ ವಿವರಣೆಗೆ ತನ್ನದೇ ಮಾದರಿ ಹಾಗೂ ಸಿದ್ಧಾಂತಗಳನ್ನು ಹೊಂದಿರುವ ಹಾಗೂ ಆ ವಿವರಣೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟ ಅರಿವಿರುವ ವೈಜ್ಞಾನಿಕ ಸಂಶೋಧನೆ ಅದಕ್ಕೆ ಉದಾಹರಣೆ.. ಪರಂಪರಾಗತ ಮತ್ತು ವೈಜ್ಞಾನಿಕ ಸಮುದಾಯಗಳ ನಡುವಿನ ಸಂಪರ್ಕದ ಕೊರತೆಯಿಂದ ಒಂದರ ಕೆಲಸವನ್ನು ಮತ್ತೊಂದು ತನಗೆ ಅನುಕೂಲಕರವಾಗಿಲ್ಲ ಎಂಬ ಕಾರಣಕ್ಕಾಗಿ ಒಂದು ಮತ್ತೊಂದನ್ನು ಕಡೆಗಣಿಸುತ್ತದೆಂದು ಎಣಿಸಬೇಕಾಗಿಲ್ಲ. ಆದರೆ ಈ ಎರಡೂ ಸಮುದಾಯಗಳ ನಡುವೆ ಒಂದು ಅಸಮಮಿತಿ ಗೋಚರವಾಗುವುದು ಮಾತ್ರ ನಿಶ್ಚಿತ.

ಹೊರಗಿನ ವಿವರಣಕಾರರ ಪೈಕಿ ಧಾರ್ಮಿಕ, ಆರ್ಥಿಕ ಅಥವಾ ಸ್ಥಳೀಯ ಪರಂಪರೆಯ ಆದರ್ಶಗಳಿಂದ ಪ್ರೇರಿತರಾದ ಬೇರೆ ಸಂಯೋಜಕರು ಮತ್ತು ಬಳಕೆದಾರರೆಂದರೆ ಬೌದ್ಧಿಕ ವಲಯದ ವ್ಯವಹಾರಸ್ಥರು ಹಾಗೂ ಮನೋರಂಜಕರು. ಕೇಂದ್ರೀಯವಾಗಿ ನಿರ್ದೇಶಿತವಾದ ಜಾನಪದ ನೀತಿನಿರೂಪಣೆ, ಯಾರು ಸ್ವಂತ ವಿವೇಚನೆಯಿಂದ ತೃಪ್ತಿಕರ ಅಭಿಪ್ರಾಯಗಳಿಗೆ ಬರಲು ಶಕ್ತರಿರುವುದಿಲ್ಲವೊ ಅಂಥವರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಪರಂಪರಾಗತ ಸಂಸ್ಕೃತಿಯ ಸ್ಥಳೀಯ ಸಮರ್ಥಕ ಕೆಲವೊಮ್ಮೆ ಅಲ್ಲಿ ನೆಲೆಸಿರದ, ಇತ್ತೀಚೆಗಷ್ಟೇ ಅಲ್ಲಿಗೆ ವಲಸೆ ಬಂದ ಅಥವಾ ಒಟ್ಟಾರೆ ಅಪರಿಚಿತನೆನಿಸಿದವನಾಗಿರಬಹುದು. ಈ ಹೊರಗಿನ ಹಾಗೂ ಅಬ್ಬರ-ಆರ್ಭಟದ ಅತಿ ಉತ್ಸಾಹಿಗಳನ್ನು ಜಾನಪದದ ಬಾಹ್ಯ ಅನ್ವೇಷಕರೊಡನೆ ಹೋಲಿಸಿ ನೋಡಬಹುದು. ಈ ಉತ್ಸಾಹಿಗಳು ಸ್ವೋಪಜ್ಞವಾದ ಸ್ಪಷ್ಟ ಅಭಿಪ್ರಾಯಗಳನ್ನು ಹೊಂದಿರಬಹುದು. ಆದರೆ ಅವರು ತಾವು ನಿರ್ವಹಿಸುತ್ತಿರುವ ಕೆಲಸಕ್ಕೆ ಪ್ರತಿಷ್ಠಿತ ಬೆಂಬಲ ದೊರಕಿಸಿಕೊಳ್ಳಲು ಪ್ರಭಾವೀ ಸ್ಥಳೀಯರನ್ನು ಅನುಕರಿಸಬಹುದು.

ಪರಂಪರಾ ಸಮುದಾಯದ ಹೊರಗಿನ ವಿವರಣೆಯನ್ನು ಸಾಂಸ್ಕೃತಿಕ ಸ್ತಂಭನ(cultural seizure) ಎಂದೂ ಹೆಸರಿಸಬಹುದು(ಹಾಂಕೊ:೧೯೯೦:೧೫). ಜಾನಪದದ ಪ್ರಾಥಮಿಕ ಬಾಳಿನ ಸನ್ನಿವೇಶಗಳಿಗೆ ಹೋಲಿಕೆಯಾಗುವ ಸನ್ನಿವೇಶಗಳಲ್ಲಿ ಪರಂಪರಾ ಸಮುದಾಯದ ಸಾಮರ್ಥ್ಯ ಯಾವತ್ತೂ ದುರ್ಬಲವಾಗಿರುವುದು ಅದಕ್ಕೆ ಸಮರ್ಥನೆ. ಇದರ ಫಲವೇ ಅಸಮಮಿತಿ. ವಾಸ್ತವವಾಗಿ ಇದರಲ್ಲಿ ನಷ್ಟ ಅನುಭವಿಸುವ ಗುಂಪು ಜಾನಪದ ಸಮುದಾಯವೇ. ಈ ಕಾರಣಕ್ಕಾಗಿ ಹೊರಗಿನ ಅನ್ವೇಷಕರ ಜವಾಬ್ದಾರಿ ಮಹತ್ವದ್ದು. ಅಸಮಮಿತಿಯ ಸ್ಪಷ್ಟ ಅರಿವು ಅವರಿಗಿರಬೇಕು ಹಾಗೂ ಅದರ ಅಂತರವನ್ನು ಕಡಿಮೆಗೊಳಿಸಲು ಅವರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಈ ಸಂಗತಿ ವೈಜ್ಞಾನಿಕ ಸಂಶೋಧನೆಯ ನೈತಿಕ ಸಮಸ್ಯೆಗಳ ಚರ್ಚೆಗೆ ಇಂಬು ಕೊಡುತ್ತದೆ.

. ಜಾನಪದ ಕೆಲಸದಿಂದ ಮಾನವ ಸಂಬಂಧಗಳ ಉದಯ

ಜಾನಪದ ಪ್ರಕ್ರಿಯೆಯ ಅಧ್ಯಯನ, ಮೂಲಭೂತವಾಗಿ, ಪರಂಪರಾ ಸಮುದಾಯದ ಒಳಗಡೆಯೇ ಅಥವಾ ಪರಂಪರಾ ಸಮುದಾಯ ಮತ್ತು ವೈಜ್ಞಾನಿಕ ಸಮುದಾಯದ ನಡುವೆ ಪರಂಪರಾ ಜಾಗೃತಿ ಮತ್ತು ಜಾನಪದ ಕೆಲಸವನ್ನು ಹುಟ್ಟುಹಾಕುವ ಹಾಗೂ ನಿಯಂತ್ರಿಸುವ ಪಾತ್ರಗಳ ಸಂಬಂಧವನ್ನು ಅಭ್ಯಸಿಸುವುದೇ ಆಗಿದೆ. ಮೇಲೆ ಪ್ರಸ್ತಾಪಿಸಿದ ಅಸಮಮಿ ಇಲ್ಲಿಯ ಸಮಸ್ಯೆ. ಸಹಾಯಕ ಅಥವಾ ಮಧ್ಯವರ್ತಿಯ ಪಾತ್ರವನ್ನು ಮನಗಂಡು, ಕೊನೆಗೂ ಅವನನ್ನು ಸಹಕಾರ್ಯಕರ್ತನನ್ನಾಗಿ ನೇಮಿಸಿಕೊಂಡು, ಪರಂಪರಾ ಸಮುದಾಯವು ತನ್ನದೆ ಆದ ಅಭಿಪ್ರಾಯವನ್ನು ರೂಪಿಸಿಕೊಳ್ಳಲು ಒತ್ತಾಸೆ ನೀಡುವುದರ ಮೂಲಕ ಸಂಶೋಧ ಅಸಮಮಿತಿಯ ಸಮಸ್ಯೆಯನ್ನು ಬುಡಸಮೇತ ಕಿತ್ತು ಹಾಕಲು ಯತ್ನಿಸಬಹುದು. ಇದನ್ನು ಸಂಶೋಧನೆಯ ನೈತಿಕ ಸಮಸ್ಯೆಗಳನ್ನು ಕುರಿತ ಚರ್ಚೆಯಲ್ಲಿ ಕಂಡುಕೊಳ್ಳಬಹುದು ಮತ್ತು ಸಾಂಸ್ಕೃತಿಕ ವ್ಯವಸ್ಥೆಯನ್ನು ವಿಶ್ಲೇಷಣೆಗೈಯಲು ಕಂಡುಕೊಂಡ ವಿಧಾನದ ಮೂಲಕ ಪರಿಹರಿಸಿಕೊಳ್ಳಬಹುದು. ಇದನ್ನು ಪುಷ್ಟೀಕರಿಸುವ ಸಂಗತಿಗಳಲ್ಲಿ ಬಹು ಮುಖ್ಯವಾದುದು-ಸಂಶೋಧಕ ಮತ್ತು ನಿರೂಪಕನ ನಡುವಿನ ಸಾಂಸ್ಕೃತಿಕ ಕಂದರಕ್ಕೆ ಸೇತುವೆ ನಿರ್ಮಿಸುವುದು. ನಿರೂಪಕ ಕೂಡ ಈ ವೇಳೆತಗೆ ಸಂಶೋಧಕನಷ್ಟೇ ಸಲೀಸಾಗಿ ‘ಪರಂಪರೆ’ ‘ಸಂಸ್ಕೃತಿ’ ಮತ್ತು ‘ಅನನ್ಯತೆ’ ಪರಿಕಲ್ಪನೆಗಳನ್ನು ನಿರ್ವಹಿಸುವ ಸಾಮರ್ಥ್ಯ ಸಂಪಾದಿಸುತ್ತಾನೆ. ಕಥೋಪಕಥಾನಕ ಮಾನವಶಾಸ್ತ್ರ ವಿಧಾನ ಬೆಳೆದದ್ದೇ ಹೀಗೆ. ಅದರಲ್ಲಿ ಸಂಶೋಧಕನು ನಿರೂಪಕ ಪ್ರತಿನಿಧಿಸುವ ಸಂಸ್ಕೃತಿಯನ್ನು ವಿವರಿಸುವ ಒಂದು ಸಾಧನವಾಗಿ ಕಂಗೊಳಿಸುತ್ತಾನೆ. ಅಲ್ಲದೆ ಇಲ್ಲಿ ಸಂಶೋಧಕನು ನಿರೂಪಕನ ಅಭಿಪ್ರಾಯಗಳನ್ನು ತಪ್ಪೆಂದು ಹೇಳುವುದಾಗಲಿ ಅಥವಾ ನಿರೂಪಕನ ಅಸ್ತಿತ್ವದ ಮೂಲಭೂತ ಅಂಶಗಳನ್ನು ಮುಚ್ಚಿಡುವುದಾಗಲಿ ಮಾಡುವುದಿಲ್ಲ. ಇಬ್ಬರೂ ತಂತಮ್ಮ ಅನ್ನಿಸಿಕೆಗಳನ್ನು ಹೊಂದಿರಲು ಅವಕಾಶವಿದ್ದರೂ ಅಂತಿಮ ಫಲಶ್ರುತಿಗಳನ್ನು ಇಬ್ಬರೂ ಪರಿಶೀಲಿಸುತ್ತಾರೆ. ಸಂಶೋಧಕನು ತನ್ನ ಆಸಕ್ತಿಯು ತಾನು ಪ್ರತಿನಿಧಿಸುವ ಸಂಶೋಧನಾ ಪರಂಪರೆಯಲ್ಲಿರದೆ ಪರಂಪರಾ ವ್ಯವಸ್ಥೆಯ ಮೂಲಕ ತಾನು ವಿವರಿಸುವ ನಿರೂಪಕನ ಅಸ್ತಿತ್ವದಲ್ಲಿದೆ ಎಂಬುದನ್ನು ಮರೆಯದೆ ಯುಕ್ತಾಯುಕ್ತ ವಿವೇಚನೆ ಮಾಡಿ ತನ್ನ ಹಕ್ಕನ್ನು ಚಲಾಯಿಸಬೇಕಾಗುತ್ತದೆ. ಈ ಬಗೆಯ ಇಂಥ ಸನ್ನಿವೇಶದಲ್ಲಿ ಮುಖ್ಯ ನಿರೂಪಕನನ್ನು ಸಹಸಂಶೋಧಕ(co-researcher) ನನ್ನಾಗಿ ಮಾರ್ಪಡಿಸಿ ಪ್ರಕಟಣೆಯಲ್ಲಿ ಸಂಶೋಧಕ ಮತ್ತು ನಿರೂಪಕ-ಇಬ್ಬರ ಹೆಸರುಗಳೂ ಬರುವಂತೆ ಮಾಡಬೇಕು.

ಅದಕ್ಕೆ ಮೊದಲು ಸಂಗ್ರಾಹಕ ಮತ್ತು ಸಂಶೋಧಕನ ಪಾತ್ರಗಳನ್ನು ಪರಿಶೀಲಿಸುವುದು ಅಗತ್ಯ. ಸಂಶೋಧಕನ ಪಾತ್ರವನ್ನು ಮೂರು ಮಜಲುಗಳಲ್ಲಿ ಪರೀಕ್ಷಿಸಬಹುದು. ಮೊದಲನೆಯ ವೈಯಕ್ತಿಕ ಮಜಲಿನಲ್ಲಿ ಸಂಶೋಧಕನು ತಾನು ಅಭ್ಯಸಿಸಬಯಸುವ ಸಂಸ್ಕೃತಿಯ ಸದಸ್ಯರೊಡನೆ ಅನುನಯ ಮಾನವೀಯ ಸಂಬಂಧಗಳನ್ನು ಸ್ಥಾಪಿಸಲು ತವಕಪಡುತ್ತಾನೆ. ಅದು ಸ್ಥಾಪನೆಗೊಂಡ ನಂತರವೇ ಸಂಶೋಧಕನನ್ನು ಮಾನಸಿಕವಾಗಿ ಒಪ್ಪಿಕೊಳ್ಳಲಾಗುತ್ತದೆ; ಕಡೇಪಕ್ಷ, ಆ ಸಂಸ್ಕೃತಿಯಲ್ಲಿ ಬಾಳುವೆ ನಡೆಸಲು ಅವಕಾಶ ಪಡೆಯುತ್ತಾನೆ ಇಲ್ಲವೆ ಸಂಸ್ಕೃತಿಯ ಒಳಗಿನ ಪ್ರತಿಷ್ಠೆಯನ್ನು ಗಳಿಸಿಕೊಳ್ಳುತ್ತಾನೆ. ಅನೇಕ ಸಂಗ್ರಾಹಕರು ತಮ್ಮ ಸಂಬಂಧಗಳು ಒಬ್ಬನೊಡನೆ ಬೆಚ್ಚನೆಯದಾದರೆ ಮತ್ತೊಬ್ಬನೊಡನೆ ತಣ್ಣನೆಯದು ಎಂದು ಬಣ್ಣಿಸಿಕೊಳ್ಳುತ್ತಾರೆ; ಮಗುದೊಬ್ಬ ತಮ್ಮನ್ನು ಸಂಪೂರ್ಣ ಆವರಿಸಿರುವಂತೆ ಕಲ್ಪಿಸಿಕೊಳ್ಳುತ್ತಾರೆ. ಈ ಸಂಬಂಧಗಳು ಪಾರಸ್ಪರಿಕವಾದವು; ಮಾನಸಿಕ ಅಂಶಗಳಿಂದ ನಿಯಂತ್ರಿತವಾದವು. ಎರಡನೆಯದು ಪರಿಕರಗಳ ಮಜಲು. ಈ ಮಟ್ಟದಲ್ಲಿ ಸಂಶೋಧಕ ಜ್ಞಾನವನ್ನು ದೊರಕಿಸಿಕೊಳ್ಳಲು ಬೇಕಾದ ಒಂದು ಸಾಧನವಾಗಿರುತ್ತಾನೆ. ಎರಡು ಸಂಸ್ಕೃತಿಗಳ ನಡುವಿನ ಕಂದರದಲ್ಲಿ ನಿಂತು ತನ್ನ ಕಾರ್ಯನಿರ್ವಹಿಸುತ್ತಾನೆ. ಅಲ್ಲದೆ ತನ್ನ ಜೊತೆಗೂಡುವಂತೆ ನಿರೂಪಕನಿಗೆ ಆಹ್ವಾನ ನೀಡುತ್ತಾನೆ. ಸಂಸ್ಕೃತಿಗಳ ಕಾರ್ಯನಿರ್ವಹಣೆಗೆ ಅಗತ್ಯವಾದ ವಿಧಿವಿಧಾನಗಳನ್ನು ಕಂಡುಕೊಳ್ಳುತ್ತಾನೆ. ಮೂರನೆಯದು ಅವಶ್ಯಕರ್ತವ್ಯಗಳ ಮಜಲು. ಸಂಶೋಧಕ ಇಲ್ಲಿ ತನಗೆ ಹಣಕಾಸು ನೆರವು ನೀಡಿದವರಿಗೆ ಸಂಶೋಧನಾ ಪ್ರಗತಿಯ ವರದಿ ಸಲ್ಲಿಸುವ ಒತ್ತಡಕ್ಕೆ ಸಿಲುಕಿಕೊಳ್ಳುತ್ತಾನೆ. ಈ ಮಜಲು ಮತ್ತೆ ಅವನ ವರ್ತನೆಯನ್ನು ನಿರ್ಬಂಧಿಸುತ್ತದೆ. ಈ ಕಾರಣಕ್ಕಾಗಿ, ಸಂಶೋಧಕನ ನಡವಳಿಕೆ ಅತ್ಯಂತ ಶಿಸ್ತುಬದ್ಧವಾದುದಾಗಿರುತ್ತದೆ. ಆದರೂ ನಿರೂಪಕನ ವಾಕ್‌ಸ್ವಾತಂತ್ರ್ಯವನ್ನು ಹರಣ ಮಾಡಿದರೆ ಮಾತ್ರ ಸಂಶೋಧಕನು, ವ್ಯಕ್ತಿಗತ ಮಟ್ಟದಲ್ಲಿ ತನ್ನ ಸ್ವಂತ ಅಭಿಪ್ರಾಯಗಳನ್ನು ಮುಂದಿಡುವುದು ಸಾಧ್ಯ.

ಹೀಗೆ ಎರಡೂ ಕಡೆಗಳಿಂದ ಅಸಮಮಿತಿ ಜೀವ ತಾಳುತ್ತದೆ. ಇಲ್ಲಿ ಸಂಶೋಧಕ, ತತ್ವಶ: ಏನೂ ಅರಿಯದ ಒಬ್ಬ ಅನನುಭವಿ ಹಾಗೂ ತಾನು ತಿಳಿದಿದ್ದನ್ನು ಏಕಾಏಕಿ ಹೊರ ಗೆಡವಲಾರ. ನಿರೂಪಕನಾದರೊ ಎಲ್ಲ ವಿಷಯಗಳಲ್ಲೂ ಪರಿಜ್ಞಾನವುಳ್ಳವನಾಗಿದ್ದು ನೆಲದ ಸಂಸ್ಕೃತಿಯ ವಿಷಯದಲ್ಲಿ ಹೆಚ್ಚು ಪರಿಣತಿ ಹೊಂದಿರುತ್ತಾನೆ. ಕೆಲವೊಮ್ಮೆ ಕಾರಣಾಂತರದಿಂದ ಸ್ಥಳೀಯ ಮತ್ತು ಹೊರಗಿನವರ ನಡುವಿನ ಸಂಬಂಧ ಹಳಸಿ ಅಸಹಕಾರ ಧೋರಣೆಗೆ ಎಡೆಮಾಡಿಕೊಡಬಹುದು. ನಿರೂಪಕ ಇಲ್ಲವೆ ಅವನ ಸಮುದಾಯ ಕ್ರಮೇಣ ಆ ತೊಡಕುಗಳನ್ನು ಮುಕ್ತಮನಸ್ಸಿನಿಂದ ನಿವಾರಿಸಬಹುದು. ಸರ್ವ ರೀತಿಯಲ್ಲೂ ಸಜ್ಜಾಗತಿದ್ದ ಸಂಶೋಧಕ ತನ್ನ ಹಾಗೂ ನೆಲದ ಸಂಸ್ಕೃತಿಯ ವಿನೀತ ಪ್ರತಿನಿಧಿಯೊಡನೆ ಏರ್ಪಟ್ಟ ವರ್ಗಭೇಧವನ್ನು ಕಳೆದುಕೊಳ್ಳಲು ಯತ್ನಿಸಬಹುದು. ಹೀಗೆ ಸಂಶೋಧಕ ಹಾಗೂ ನಿರೂಪಕರ ನಡುವೆ ಗಾಢ ಮಾನವ ಸಂಬಂಧ ಉದಯಿಸುತ್ತದೆ.

. ಜಾನಪದ ಸಂಗ್ರಹಣೆ ಮತ್ತು ದಾಖಲೀಕರಣ

ಜೀವಂತ ಜನಪದ ಜೀವನ ಪದ್ಧತಿ, ಅದರ ಬಗೆಗಳು ಮತ್ತು ಅದರೊಳಗಿನ ಮೂಲಾಂಶಗಳನ್ನು ಪ್ರತಿಪಾದಿಸುವ, ಚಲಿಸಲಾಗುವ ದಾಖಲೆಗಳನ್ನು ಸೃಷ್ಟಿಸುವುದು ಜಾನಪದ ಸಂಗ್ರಹಣೆಯ ಹವ್ಯಾಸವಾಗಬೇಕು. ಸಂಗ್ರಹಣೆ, ಇಲ್ಲಿ ಜಾನಪದ ಶೇಖರಣೆ ಮತ್ತು ಸಂರಕ್ಷಣೇಯ ಒಂದು ವಿನ್ಯಾಸ ಕೂಡ.

ಸಂಗ್ರಹಣೆಯ ಗುರಿ ಮತ್ತು ತಂತ್ರಗಳನ್ನು ಕುರಿತು ಜಾಗತಿಕ ನೆಲೆಯಲ್ಲಿ ಸಾಕಷ್ಟು ಜಿಜ್ಞಾಸೆ ನಡೆದಿರುವುದರಿಂದ ಅದರ ವಿಸ್ತಾರ ಚರ್ಚೆ ಇಲ್ಲಿ ಅಪ್ರಸ್ತುತ. ಜಾನಪದ ಪ್ರಕ್ರಿಯೆ ಕುರಿತು ಆಲೋಚಿಸುತ್ತಿರುವ ಈ ಸಂದರ್ಭದಲ್ಲಿ ನಾನು ಏನನ್ನು ಸಂಗ್ರಹಿಸಲಿ? ಯಾವಾಗ ಸಂಗ್ರಹಿಸಲಿ? ಎಷ್ಟನ್ನು ಸಂಗ್ರಹಿಸಲಿ? ಮತ್ತು ಯಾರಿಗಾಗಿ ಸಂಗ್ರಹಿಸಲಿ? ಎಂಬ ಸರಳ ಪ್ರಶ್ನೆಗಳನ್ನು ಹಾಕಿಕೊಂಡರೆ ಸಂಗ್ರಹಣೆಯ ವಿಧಾನ ಮತ್ತು ಅದರ ನೈತಿಕತೆಯನ್ನು ತೊಡಕುಗೊಳಿಸಿಕೊಳ್ಳುವುದು ಸಾಧ್ಯ. ವಿಚಾರಾರ್ಹವಾದ ಸಂಗತಿಯೆಂದರೆ ಸಂಶೋಧಕನು ಜಾನಪದ ಪಠ್ಯಗಳನ್ನಷ್ಟೇ ಗೋರಿ ಗುಡ್ಡೆ ಹಾಕಿಕೊಳ್ಳಬಯಸುವನೊ? ಅಥವಾ ಸದ್ಯ ಲಭ್ಯವಿರುವ ಪಠ್ಯಗಳ ಅರ್ಥಪರಂಪರೆಯನ್ನು ವಿವರಿಸಲು ಅಗತ್ಯವಾದ ಸಾಮಗ್ರಿ ಶೋಧದಲ್ಲಿ ತೊಡಗುವನೊ? ಎಂಬುದು. ಪರಂಪರೆಯ ಅರಿವುಳ್ಳವನಿಗೆ ತನ್ನ ಅಭಿಪ್ರಾಯ ಮತ್ತು ಅನುಭವವನ್ನು ಜಾನಪದದ ಮೂಲಕ ಅಭಿವ್ಯಕ್ತಿಸಲು ಪ್ರೋತ್ಸಾಹಿಸುವುದಾದರೆ ಅದು ಸಾಧ್ಯ.

. ಜಾನಪದ ಭಂಡಾರ ಹಾಗೂ ಸಂರಕ್ಷಣೆ

ಜಾನಪದ ಸಂಗ್ರಹಣೆಯಿಂದ ಕಲೆಹಾಕಲಾದ ದಾಖಲೆಗಳನ್ನು ಶೇಖರಿಸಿ, ಸಂರಕ್ಷಿಸಿಡುವುದು ಭಂಡಾರದ ಜವಾಬ್ದಾರಿ. ಒಂದೆಡೆ, ಸಂಸ್ಕೃತಿಯೊಡನೆ ನೇರ ಸಂಪರ್ಕವಿರದ ಜನರಿಗೆ ಸಾಮಗ್ರಿ ಲಭ್ಯವಿರುವಂತಾಗಬೇಕು. ಇನ್ನೊಂದೆಡೆ ಅದನ್ನು ಭೌತಿಕವಾಗಿ ಕುಲಗೆಡದಂತೆ ಹಾಗೂ ವಿನಾಶಗೊಳ್ಳದಂತೆ ತಡೆಯಬೇಕು. ಸಾಮಾನ್ಯವಾಗಿ, ಅನಂತರದ ಬಳಕೆದಾರರು ಹೊರಗಿನವರಾಗಿರುತ್ತಾರೆ ಅಥವಾ ಸಮುದಾಯದ ಮುಂದಿನ ಪೀಳಿಗೆಯವರಾಗಿರುತ್ತಾರೆ. ಅದನ್ನು ಯಾರೇ ಬಳಸಲಿ, ಬಳಸುವವರು ಅದನ್ನು ಮಾರ್ಪಡಿಸಬಾರದು ಹಾಗೂ ಕಳೆಯಬಾರದು ಎಂಬುದು ಮೂಲ ಮಂತ್ರವಾಗಬೇಕು. ಸಾಮಗ್ರಿ ಬಳಕೆಯ ವಿಷಯದಲ್ಲಿ ಜಾನಪದ ಭಂಡಾರವೇ ಅಂತಿಮವಾಗಿ ಹೊಣೆ ಹೊರಬೇಕು.

ಜಾನಪದ ಪ್ರಕ್ರಿಯೆಯಲ್ಲಿ ಈ ಹಂತವನ್ನು ಕೂಡ ತೇಲಿಸಬಹುದು. ಸಾಮಗ್ರಿಯನ್ನು ಎಲ್ಲಿ ಭಂಡಾರೀಕರಣಗೊಳಿಸುವುದು? ಯಾರಿಗಾಗಿ ಅದನ್ನು ಭಂಡಾರೀಕರಣಗೊಳಿಸಬೇಕು? ಯಾರು ಅದರ ಧಾತರು? ಎಂಬ ಪ್ರಶ್ನೆಗಳನ್ನು ಕೇಳಿಕೊಂಡರೆ ಸಂದಿಗ್ಧಕ್ಕೆ ಗುರಿಯಾಗುವುದು ನಿಶ್ಚಿತ. ಇವತ್ತು, ವಾಸ್ತವವಾಗಿ, ಜಾನಪದ ಭಂಡಾರಗಳೇ ಪರಂಪರೆಯ ಶ್ರೇಷ್ಠ ರಕ್ಷಕರು (ಹಾಂಕೊ:೧೯೯೦:೧೭). ಯುನೆಸ್ಕೊ ಶಿಫಾರಸುಗಳಲ್ಲಿ ಸೂಚಿತವಾಗಿರುವಂತೆ, ಅದು ತನ್ನದೆಂದು ಗುರುತಿಸಿಕೊಳ್ಳುವ ಸ್ಥಳಗಳಲ್ಲಿ ದೊರಕಿಸಿಕೊಂಡ ಜಾನಪದ ಎಂದು ಹಕ್ಕುಸ್ಥಾಪಿಸುವ ಪರಂಪರಾ ಸಮುದಾಯವು ಸಾಮಗ್ರಿಯನ್ನು ಶೇಖರಿಸಿಡುವ ಸ್ಥಳ, ಪ್ರತಿಗಳ ನಿರ್ಮಾಣ, ಆ ಜಾನಪದ ಬಳಕೆಯ ನಿಯಂತ್ರಣದ ಆಯ್ಕೆಗೆ ಅವಕಾಶವಿರಬೇಕೆಂದು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತದೆ.

ಈ ಹಕ್ಕುಗಳನ್ನು ಹೊಂದಲು ಜಾನಪದ ಸಮುದಾಯಕ್ಕೆ ಮಾತ್ರ ಅವಕಾಶ ನೀಡುವುದಲ್ಲ; ಅದರ ಸಂಗ್ರಾಹಕ/ಸಂಶೋಧಕ ಮತ್ತು ವ್ಯಕ್ತಿಗತ ನಿರೂಪಕನಿಗೂ ಆ ಸೌಲಭ್ಯವಿರಬೇಕು.. ಸಂಗ್ರಾಹಕನು ತನಗೆ ಬೇಕೆನಿಸದಾಗ ಸಾಮಗ್ರಿಯನ್ನು ಜಾನಪದ ಭಂಡಾರದಿಂದ ದೊರಕಿಸಿಕೊಳ್ಳಲು, ಭೌತಿಕವಾಗಿ ಆ ಸಾಮಗ್ರಿ ಕೆಡದಂಥೆ ಎಚ್ಚರಿಕೆ ವಹಿಸಲು, ಬಳಸಿಕೊಂಡ ಆ ಸಾಮಗ್ರಿಯ ಆಕರವನ್ನು ಯೋಗ್ಯರೀತಿಯಲ್ಲಿ ದಾಖಲಿಸುವ ಹಕ್ಕನ್ನು ಹೊಂದಿರಬೇಕು. ಸಾಮಗ್ರಿಯನ್ನು ಪರಿಶೀಲಿಸಲಷ್ಟೇ ಅಲ್ಲ;; ಅದನ್ನು ಆದ್ಯತೆಯ ಮೇರೆಗೆ ಬಳಸಲು ಸಂಶೋಧಕನಿಗೂ ಗ್ಯಾರಂಟಿ ಸಿಗಬೇಕು. ಕೆಲವೊಮ್ಮೆ ಸಂಶೋಧಕನು ಖಾಸಗಿ ಎಂದು ಪರಿಗಣಿಸಲಾದ ಸಾಮಗ್ರಿಯನ್ನು ಬಳಸಿಕೊಳ್ಳಲು ನಿರೂಪಕನ ಅನುಮತಿ ಕೋರುವಂತಿರಬೇಕು. ನಾನಾ ರೀತಿಯ ರಕ್ಷಣೆ ಹಾಗೂ ಅಗತ್ಯ ಸುಧಾರಣೆ ತರಲು ಜಾನಪದ ಭಂಡಾರ ನಿಯಂತ್ರಣ ಹೊಂದಿರಬೇಕು.

೧೦. ವೈಜ್ಞಾನಿಕ ಸಮುದಾಯದಿಂದ ಜಾನಪದ ಸಮುದಾಯಕ್ಕೆ ಅನುಕ್ರಿಯೆ

ಸಂಶೋಧಕರು ಮತ್ತು ಅದನ್ನು ಶೋಧಿಸುತ್ತಿರುವ ಸಂಸ್ಥೆಯಿಂದ ಜಾನಪದ ಸಮುದಾಯ ಪಡೆದುಕೊಳ್ಳುತ್ತಿರುವ ಅನುಕ್ರಿಯೆ(feedback)ಗೆ ಈಗೀಗ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಶಿಕ್ಷಣಧ ಮಟ್ಟ ಏರಿದಂತೆ ನಿರೂಪಕರು ಕೂಡ ಪ್ರಾಂತೀಯ ಭಾವನೆಯನ್ನು ಪೋಷಿಸಲಾರಂಭಿಸಿದ್ದಾರೆ. ಸ್ಥ ಳೀಯ ಪ್ರಾಧಿಕಾರದವರು ಆಗಾಗ ಜಾನಪದ ಕೆಲಸಕ್ಕೆ ಬೆಂಬಲ ನೀಡಲು ಸಿದ್ಧರಿದ್ದರೂ ಪ್ರತಿಯಾಗಿ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ. ವ್ಯಕ್ತಿಗತ ನಿರೂಪಕರು ಮೊದಲಿಗಿಂತ ಈಗ ಸಂಶೋಧನೆಯ ಮೇಲೆ ಒಂದು ವಿಶೇಷ ಕಣ್ಣಿಟ್ಟಿದ್ದಾರೆ. ವೈಜ್ಞಾನಿಕ ಸಮುದಾಯದಿಂದ ಜಾನಪದ ಸಮುದಾಯಕ್ಕೆ ಅನುಕ್ರಿಯೆ ನಾನಾ ರೀತಿಯಲ್ಲಿ ನಡೆಯುತ್ತಿದೆ:

ಅತ್ಯಂತ ಸರಳವಾದ ಅನುಕ್ರಿಯೆ ಎಂದರೆ ಸಂಗ್ರಹಣೆಯ ವೇಳೆಯಲ್ಲಿ ತೆಗೆದುಕೊಂಡಿದ್ದ ನಿರೂಪಕನ ಫೋಟೋವನ್ನು ಅವನಿಗೆ ಕಳುಹಿಸಿಕೊಡುವುದು. ಸಂಶೋಧಕನ ಕೆಲಸವನ್ನು ಮುಂದುವರಿಸಬಯಸುವವರು ಅಷ್ಟಾದರೂ ವೆಚ್ಚವನ್ನು ಭರಿಸುವುದು ಅಗತ್ಯ. ಅರ್ಥಗರ್ಭಿತ ಫೋಟೋ ನಿಶ್ಚಿತವಾಗಿಯೂ ಉತ್ತಮ ಸಾಂಸ್ಕೃತಿಕ ಮೌಲ್ಯ ಉಳ್ಳದ್ದಾಗಿರುತ್ತದೆ.

ಅನುಕ್ರಿಯೆಯ ಎರಡನೆಯ ಕ್ರಮವೆಂದರೆ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಲು ಯೋಗ್ಯವೆನಿಸಿದ, ಕ್ಷೇತ್ರಪ್ರವಾಸ ಕುರಿತ ಲೇಖನಗಳನ್ನು ಬರೆಯುವುದು. ವಿಷಯ ಸಂಗ್ರಹಣೆ ನಡೆಸಿದ ಸ್ಥಳದಲ್ಲಿ ಶೇಖರಣೆಗೆ ಉಚಿತ ಸೌಲಭ್ಯಗಳಿದ್ದರೆ ಸಾಮಗ್ರಿಯ ಪ್ರತಿಯನ್ನು ಕೂಡ ಕಳುಹಿಸಿಕೊಡುವ ದಾಕ್ಷಿಣ್ಯಕ್ಕೆ ಕಟ್ಟು ಬೀಳಬೇಕಾಗುತ್ತದೆ. ಸಂಶೋಧಕನ ವರದಿಯ ಅಂತಿಮ ಕರಡನ್ನು ಗ್ರಂಥಾಲಯ, ಶಿಕ್ಷಣ ಸಂಸ್ಥೆಗಳು ಮುಂತಾದೆಡೆ ದಾಖಲಿಸಿಡುವುದು ಯುಕ್ತ. ಆಧುನಿಕ ತಂತ್ರಜ್ಞಾನಗಳಂತೂ ಅನುಕ್ರಿಯೆಯಾಗಿ ವೀಡಿಯೊ ಚಿತ್ರಗಳ ಮೌಲ್ಯವನ್ನು ಹೆಚ್ಚಿಸುತ್ತಿವೆ.

ಯಶಸ್ವೀ ಅನುಕ್ರಿಯೆಯು ಸಂಗ್ರಹಣೆ ಕ್ರಮಬದ್ಧವಾಗಿರುವುದರ ಸಂಕೇತ ಕೂಡ. ಪರಂಪರಾಗತ ಮತ್ತು ವೈಜ್ಞಾನಿಕ ಸಮುದಾಐಗಳ ನಡುವಿನ ಸಂಬಂಧ ಮಧುರವಾಗಿದ್ದಾಗ ಪರಂಪರಾಗತ ಸಮುದಾಯವು ತಾನು ಸಂಶೋಧನೆ ಮತ್ತು ಅದರ ವಿಧಿ ವಿಧಾನಗಳನ್ನು ಪ್ರಭಾವಿಸಲು ನೆರವಾದಂತೆ ಭಾವಿಸಬಹುದು. ಸ್ಥಳೀಯ ಸಮುದಾಯದ ಒಪ್ಪಿಗೆ ಮತ್ತು ಬೆಂಬಲದೊಡನೆ ಕೆಲಸಮಾಡಿದ ವೈಜ್ಞಾನಿಕ ಸಮುದಾಯವು ಹಾಗೆ ಭಾವಿಸುವುದು ಸ್ವಾಭಾವಿಕ. ಒಂದು ವೇಳೆ ಸಂಬಂಧಗಳು ಹದಗೆಟ್ಟಿದ್ದರೆ, ಪರಂಪರಾಗತ ಸಮುದಾಯವು ತನ್ನ ಹಿತಾಸಕ್ತಿಯ ಮೇಲೆ ದುಷ್ಪರಿಣಾಮವಾಗುವ ಭಯದಿಂದ ಸಂಶೋಧನಾ ಅನುಮತಿಯನ್ನು ನಿರಾಕರಿಸುವ ನಿರ್ಣಯಕ್ಕೆ ಬರಬಹುದು. ಇಂಥ ಸನ್ನಿವೇಶದಲ್ಲಿ ಸಂಶೋಧಕನರು ಸಮುದಾಯದ ನಿರ್ಣಯಕ್ಕೆ ತಲೆಬಾಗಬೇಕಾಗುತ್ತದೆ.

೧೧. ಪರಂಪರಾ ಸಮುದಾಯ ಹಾಗೂ ವೈಜ್ಞಾನಿಕ ಸಮುದಾಯಗಳಿಂದ ಕಾರ್ಯಶೀಲ ಯೋಜನೆಯ ಸ್ಥಾಪನೆ

ಮೇಲೆ ಪ್ರಸ್ತಾಪಿಸಿದ ಅನುಕ್ರಿಯೆ ಪ್ರಕ್ರಿಯೆಯನ್ನು ವೈಜ್ಞಾನಿಕ ಸಮುದಾಯದ ಪರಿಭಾಷೆಗಳಲ್ಲಿ ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು. ದ್ವಿಪಕ್ಷೀಯ ಸಂಬಂಧ ಇರುವವರೆಗೆ ಅದರ ಮುಂದುವರಿಕೆಯ ಬಗೆಗೆ ಯೋಚಿಸಬಹುದು. ಜಾನಪದ ಸಮುದಾಯ ಮಂದಗತಿಯದಾಗಬಹುದು ಹಾಗೂ ಅದರ ವಸ್ತುಗಳಷ್ಟೇ ಅಧ್ಯಯನಕ್ಕೆ ಗುರಿಯಾಗಬಹುದು.

ಪರಂಪರಾ ಸಮುದಾಯವು ಅಸ್ತಿತ್ವದಲ್ಲಿದ್ದು, ಪ್ರತಿನಿಧಿಗಳು ಮತ್ತು ಸಂಸ್ಥೆಗಳನ್ನು ಹೊಂದಿದ್ದರೆ ಅದು ಸಾಂಸ್ಕೃತಿಕ ಗುರಿ ಮತ್ತು ನೀತಿ ನಿಯಮಗಳನ್ನು ಹೊಂದಿರುತ್ತದೆ. ಅವು ಸ್ವಪ್ರೇರಣೆಯಿಂದ ಸಮುದಾಯದ ಒಳಗಿನಿಂದಲೇ ಹುಟ್ಟಿಕೊಂಡವೊ ಅಥವಾ ಕೇಂದ್ರೀಯ ನಿರ್ದೇಶಿತ ಉದಾಹರಣೆಗೆ ರಾಷ್ಟ್ರೀಯ ಅಥವಾ ಪ್ರಾಂತೀಯ ಸಾಂಸ್ಕೃತಿಕ ನೀತಿ ಇತ್ಯಾದಿಗಳ ಮೂಲಕ ಕೂಡಿಕೊಂಡು ಬಂದಿರುವವೊ ಆಗಿರುತ್ತವೆ. ಇಂಥ ಯೋಜನೆಗಳು, ಕೆಲವೊಮ್ಮೆ ವೈಜ್ಞಾನಿಕ ಚಟುವಟಿಕೆಗಳೊಡನೆ ಬಂಧಿತವಾಗಿರಬಹುದು. ವೈಜ್ಞಾನಿಕ ಸಂಶೋಧನೆ ಕೆಲವೊಮ್ಮೆ ಭಂಡಾರ, ವಸ್ತುಸಂಗ್ರಹಾಲಯ, ಸಂಗ್ರಹಣೆ ಮತ್ತು ಪ್ರಕಟಣೆಗೆ ಒತ್ತಾಸೆ ನೀಡಬಹುದು. ಸಂಶೋಧಕನು ಜನಪದ ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಯೋಜನೆಗಳ ಬಗೆಗೆ ಅರಿವುಳ್ಳವನಾಗಿರಬೇಕು. ಅಲ್ಲದೆ ಪರಂಪರಾ ಸಮುದಾಯದ ಒಳಗೇ ಆಸಕ್ತಿ ಹೊಂದಿದ್ದು ತನ್ನ ಸಂಶೋಧನೆಯನ್ನು ಅದರಲ್ಲಿ ಬಂಧಿಸಿಡಬೇಕು. ಯಾವುದೇ ವಿಷಮ ಸನ್ನಿವೇಶಗಳು ಉದ್ಭವವಾಗದಂತೆ ಎಚ್ಚರಿಕೆ ವಹಿಸಬೇಕು. ಜಾನಪದ ಕೆಲಸ ನಿರ್ವಹಿಸುವ ವಿಷಯದಲ್ಲಿ ಸಮುದಾಯವನ್ನು ಇನ್ನೂ ಹೆಚ್ಚು ಕ್ರಿಯಾಶೀಲಗೊಳಿಸಲು ಅವಕಾಶವಿರುವುದನ್ನು ಕಂಡುಕೊಳ್ಳಬೇಕು. ಇದು ಸಂಶೋಧನೆಯ ಕಸುವನ್ನು ಸುಧಾರಿಸುವ ದೃಷ್ಟಿಯಿಂದ ಉಪಯುಕ್ತ ಕ್ರಮ.

ಸಂಶೋಧನ ಲಾಭದ ಪ್ರಶ್ನೆಯೂ ಇಲ್ಲುಂಟು. ಅದನ್ನು ನಿರ್ಧರಿಸುವ ವಿಷಯದಲ್ಲಿ ವೈಜ್ಞಾನಿಕ ಹಾಗೂ ಜಾನಪದ ಸಮುದಾಯ-ಎರಡೂ ಸಮುದಾಯಗಳ ಆಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದು ಸಮುದಾಯದ ಸಾಂಸ್ಕೃತಿಕ ಅಸ್ತಿತ್ವದ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲುತ್ತದೆ. ಅಲ್ಲದೆ ಸಂಶೋಧಕನನ್ನು ಸರಿಯಾದ ಹಳಿಗಳ ಮೇಲೆ ನಿಲ್ಲಿಸುತ್ತದೆ.

೧೨. ಜಾನಪದ ವೈಜ್ಞಾನಿಕ ವಿಶ್ಲೇಷಣೆ

ಇದು ಜಾನಪದ ಅಧ್ಯಯನಕಾರನ ಸಾಮರ್ಥ್ಯ ಮತ್ತು ಜಾನಪದ ಪ್ರಕ್ರಿಯೆಗೆ ಅವನು ಕೊಡಬಹುದಾದ ಮುಖ್ಯ ಕೊಡುಗೆಯ ಬಹು ಮುಖ್ಯ ಕ್ಷೇತ್ರ. ಪರಂಪರೆಯ ಸಾಮಗ್ರಿಯಿಂದ ಅವನು ಹೊಸ ಜ್ಞಾನವನ್ನು ಹುಟ್ಟುಹಾಕಲು ಶಕ್ತನಾಗುತ್ತಾನೆ. ಅಲ್ಲದೆ ಜಾನಪದ ಸಾಮಗ್ರಿಯಲ್ಲಿ ಆಸಕ್ತಿಯಿದ್ದು ಜಾನಪದ ಕೆಲಸವನ್ನು ನಿರ್ವಹಿಸುತ್ತಿರುವ ಅನ್ಯ ಶಿಸ್ತುಗಳ ತಜ್ಞರಿಂದ ರೂಪಿಸಲು ಆಗದ ಜ್ಞಾನವನ್ನು ಅವನು ಸೃಷ್ಟಿಮಾಡಬಲ್ಲ. ಜಾನಪದದ ಈ ಗುಣವೇ ಅದರ ಅಸ್ತಿತ್ವವನ್ನು ಎತ್ತಿ ಹಿಡಿಯುತ್ತದೆ.

ಸೈದ್ಧಾಂತಿಕ ಸ್ವರೂಪದ ಕೆಲಸದಲ್ಲಿ ಸಂಶೋಧನ ಕ್ಷೇತ್ರ ಮತ್ತು ಪರಂಪರಾಗತ ಸಮುದಾಯಗಳು ಬೇರೆ ಬೇರೆ ರೀತಿಯಲ್ಲಿ ಗೋಚರಕ್ಕೆ ಬರುತ್ತವೆ. ಕ್ಷೇತ್ರದಲ್ಲಿ ಸಂಶೋಧಕ ಗಳಿಸಿಕೊಳ್ಳುವ ತಿಳಿವಳಿಕೆ ಮತ್ತು ಅನುಭವಗಳಲ್ಲಿ ಅವುಗಳ ಪ್ರಭಾವ ಉದ್ದಕ್ಕೂ ಅರಿವಿಗೆ ಬರುತ್ತದೆ. ಈ ಪ್ರಭಾವ ಸುಪ್ತವಾಗಿದ್ದರೂ ಸಂಶೋಧಕನ ವ್ಯಕ್ತಿಗತ ನಿಲುವು ಅದರಿಂದ ರೂಪುಗೊಂಡಿರುತ್ತದೆ. ಪರಂಪರಾ ಸಮುದಾಯದೊಡನೆ ಅವನು ವೈಯಕ್ತಿಕ ನೆಲೆಯಲ್ಲಿ ಸಂಬಂಧಗಳನ್ನು ಸ್ಥಾಪಿಸಿಕೊಂಡಿದ್ದರೆ, ತನ್ನ ಸೈದ್ಧಾಂತಿಕ ಸ್ವರೂಪದ ಕೆಲಸದ ಮೇಲೆ ಕೂಡ ಆ ಪ್ರಭಾವವನ್ನು ಹೊಂದುವುದು ಸಾಧ್ಯ.

೧೩. ಜಾನಪದದ ಎರಡನೆಯ ಬಾಳು

ಜಾನಪದದ ಎರಡನೆಯ ಬಾಳು ಭಂಡಾರದ ಆಳದಿಂದ ಹೊರತೆಗೆದ ಅದರ ಪುನರುಜ್ಜೀವನವನ್ನು ಹೇಳುತ್ತದೆ. ಇಲ್ಲಿ, ಜಾಣಪದ ಪ್ರಕ್ರಿಯೆಯಿಂದ ಕಡಿದು ತುಂಡಾಗಿ ಹೋದ ಹಾಗೂ ಮೂಲೆಗುಂಪಾದ ಸಾಮಗ್ರಿ ಮತ್ತೆ ಪ್ರಭಾವಶಾಲಿಯಾಗುತ್ತದೆ. ವಾಸ್ತವವಾಗಿ, ಜಾನಪದವು ಮೂಲತಃ ಯಾವ ಸಮುದಾಐಗಳಲ್ಲಿ ಹುಟ್ಟಿ ಬಂದಿತ್ತೊ ಆ ಬೇರುಗಳಿಗೇ ಹಿಂತಿರುಗಿ ಹೋಗುವ ಸಂಭವ ಕಡಿಮೆ. ಒಂದು ವೇಳೆ ಹಾಗಾಗಿದ್ದ ಪಕ್ಷದಲ್ಲಿ ಅದು ಮೌಖಿಕ ಪರಂಪರೆಗಿಂತ ಭಿನ್ನವಾದ, ಮೌಖಿಕ ಸಂವಹನ ಪ್ರಕ್ರಿಯೆಗೆ ಹೊರಗಿನದು ಎನಿಸುವ ಒಂದು ಕೃತಿ, ಧ್ವನಿ ಮುದ್ರಣ, ಚಲಚ್ಚಿತ್ರ ರೂಪದಲ್ಲಿ ಕಾಣಿಸಿಕೊಳ್ಳಬಹುದು.

ಜಾನಪದದ ಎರಡನೆಯ ಬಾಳು ಮೂಲ ಸಂಸ್ಕೃತಿ ಸಂದರ್ಭದಿಂದ ಬೇರೆ ಎನಿಸಿದ ಒಂದು ಪರಿಸರದ ಸಾಮಗ್ರಿಯ ಪುನರಾವೃತ್ತಿಗೆ ಸಂಬಂಧಿಸುತ್ತದೆ. ಈ ಪುನರಾವೃತ್ತಿ ತಂತ್ರ ಮೂಲ ಸಂಸ್ಕೃತಿಯ ಕೌಶಲದಿಂದ ಬೇರೆಯೇ. ಆದುದರಿಂದ ಈ ಬಗೆಯ ಜಾನಪದ ಪ್ರಕ್ರಿಯೆಯ ಮುಂದುವರಿಕೆ ಬಗೆಗೆ ಚರ್ಚೆಯನ್ನು ಬೆಳೆಸುವುದು ಕಷ್ಟ. ಒಂದಲ್ಲ ಒಂದು ಬಗೆಯಲ್ಲಿ ಈ ಪುನರಾವೃತ್ತಿ ಮುಂದುವರಿದಿದ್ದರೂ ಮೂಲ ಜಾನಪದ ಪ್ರಕ್ರಿಯೆಯೊಳಗೆ ಸಮಗ್ರ ಸಾಮಗ್ರಿಯನ್ನು ಅಡಕಗೊಳಿಸಲು ಆಗುವುದಿಲ್ಲ. ಬದಲಿಗೆ ಅದು ಪ್ರಶ್ನಾರ್ಹವೆನಿಸಿದ, ಪ್ರಭಾವದ ಹೊಸ ಕ್ಷೇತ್ರಗಳ ಆವಿಷ್ಕಾರವನ್ನು ಒಳಗೊಳ್ಳುತ್ತದೆ. ವಸ್ತು ಸಂಗ್ರಹಾಲಯ ಪ್ರದರ್ಶನ, ವೀಡಿಯೊ ಚಿತ್ರ, ಅದರ ಅಧಿಕೃತತೆಯನ್ನು ಸಾಬೀತು ಮಾಡಲು ಪ್ರದರ್ಶನಗಳನ್ನು ವ್ಯವಸ್ಥೆಗೊಳಿಸುವುದು, ಕಥನ, ನೃತ್ಯ, ಸಂಗೀತ ಇತ್ಯಾದಿ ರೂಪದಲ್ಲಿ ವೈಜ್ಞಾನಿಕ ಸಂಶೋಧನೆ ನಡೆದರೆ ಮೂಲ ಸಂಸ್ಕೃತಿಗೆ ನಿಕಟವಾಗುವ ಸಾಧ್ಯತೆಗಳಿರುತ್ತವೆ. ಆದರೆ ಯಾಂತ್ರಿಕ ಕೌಶಲ, ಪ್ರದರ್ಶನ, ರಂಗಸಜ್ಜಿಕೆ, ಶ್ರೋತೃ ಮತ್ತು ಗುರಿಗಳು ಭಿನ್ನವಾಗಿರುತ್ತವೆ. ಪ್ರದರ್ಶನ ಕೂಡ, ಅದೇ ಸಂದರ್ಭದಲ್ಲಿ ಪ್ರಸ್ತುತಗೊಳಿಸಿದ ಒಂದು ಸಾಚಾ ಪ್ರದರ್ಶನದಿಂದಲೂ ಆಗದಷ್ಟು, ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಜನರಿಗೆ ನೆರವಾಗುವ ರೀತಿಯಲ್ಲಿ ಅತ್ಯುತ್ತಮವಾಗಿಯೇ ಇರಬಹುದು.

ಜಾನಪದದ ಪುನರಾವೃತ್ತಿಯಲ್ಲಿ ಗುರಿ ಸೇರುವ ಕಡೆಗೆ ಅಧ್ಯಯನಕಾರರು ಸಾಕಷ್ಟು ಗಮನ ಹರಿಸಿದಂತೆ ಕಾಣುವುದಿಲ್ಲ. ಜನರಂತೂ ಜಾನಪದದ ಎರಡನೆಯ ಬಾಳಿನ ವಿಷಯದಲ್ಲಿ ಒಂದು ಬಗೆಯ ಅಸಮ್ಮತಿಸೂಚಕ ಹಾಗೂ ಅತಿವಿಮರ್ಶಾತ್ಮಕ ಧೋರಣೆ ತಳೆದಿರುವುದು ಕಂಡುಬರುತ್ತದೆ. ನಿಖರವಾದ ಪುನರ್ ಸೃಷ್ಟಿಗಳಲ್ಲೂ ಬದಲಾವಣೆಯ ಅಂಶವಿರುತ್ತದೆ, ಅದು ಕೇವಲ ಮುಕ್ತ ರಚನೆಗಳಲ್ಲಿ ಮಾತ್ರವಲ್ಲ ಎಂಬ ಸತ್ಯವನ್ನು ಮನಗಾಣದಿರುವುದೇ ಅದಕ್ಕೆ ಕಾರಣ. ಪ್ರದರ್ಶನವೊಂದರ ಸಂದೇಶ ಈ ಎರಡನೆಯ ಬಾಳಿನಲ್ಲಿ ಶ್ರೋತೃವಿಗೆ ಸಮರ್ಪಕವಾಗಿ ತಲಪದೆ ಇರುವ ಸಾಧ್ಯತೆಯನ್ನು ಮನಗಾಣದೆ ಹೋದದ್ದು ಇನ್ನೊಂದು ಕಾರಣ. ಎಲ್ಲಕ್ಕಿಂತ ಹೆಚ್ಚಾಗಿ, ಜಾನಪದದ ಎರಡನೆಯ ಬಾಳಿನ ಪ್ರಕ್ರಿಯೆಗೆ ಸಂಶೋಧನಾ ಸಂಗತಿಯಾಗಿ ಅದಕ್ಕೆ ನೀಡಬೇಕಾದ ಮೌಲ್ಯವನ್ನು ನೀಡಿಲ್ಲದಿರುವುದು ಸೋಜಿಗದ ಅಂಶವಾಗಿದೆ.

‘ಜಾನಪದೀಯತೆ’(Folklorism) ಕುರಿತು ನಡೆಯುತ್ತಿರುವ ಸಂವಾದ ಹೇಗೆ ಮೂಲಶಬ್ದವೊಂದು ಕೆಟ್ಟ ಧ್ವನಿಗಳಿಸಿ ಪಾರ್ಶ್ವರೋಗ ಪೀಡಿತ ಸಂಶೋಧನೆಗೆ ಕಾರಣವಾಯಿತು ಎಂಬುದು ಒಂದು ನಿದರ್ಶನವಾಗಿ ಈಗ ನಮ್ಮ ಮುಂದಿದೆ. ಹಾನ್ಸ್‌ಮೋಸರ್ ಅವರು ನೀಡಿರುವ ಒಂದು ನರ್ವಿಚನದ ಪ್ರಕಾರ, ಮೂಲರೂಪದಲ್ಲಿರದ ಪ್ರಕಾರವೊಂದು ತನ್ನ ಪ್ರದರ್ಶನವನ್ನು ‘ಜಾಣಪದೀಯತೆ’ಯ ಪಂಗಡದಲ್ಲಿ ಗುರುತಿಸುವುದನ್ನು ಕೆಳಮಟ್ಟ ಎಂದೆಣಿಸುವುದಿಲ್ಲ(ರೆಜಿನಾ ಬೆಂಡಿಕ್ಸ್‌:೧೯೮೮:೬).ಒಂದು ಸಂದರ್ಶನದ ಸಂದರ್ಭದಲ್ಲಿ ಅಥವಾ ರಂಗದ ಮೇಲೆ ಪ್ರಸ್ತುತಪಡಿಸಿದ ಶೋಕಗೀತೆ, ಅದನ್ನು ಪ್ರಸ್ತುತಪಡಿಸಿದಾಕೆ ತನ್ನ ಹೃನ್ಮನಗಳನ್ನು ಅದಕ್ಕೆ ಅರ್ಪಿಸಿಕೊಂಡಿದ್ದರೂ, ‘ಜಾನಪದೀಯತೆ’ ಎನಿಸಿಕೊಳ್ಳುತ್ತದೆ. ಅದೇ ಗಾಯಕರ ಜೊತೆಗೆ ನಾಲ್ಕು ಗೋಡೆಗಳ ಮಧ್ಯೆ ನಡೆಸುವ ಮಾತುಕತೆ ಸಾಚಾ ಜಾನಪದವಾಗುತ್ತದೆ. ಇಂಥ ಭಿನ್ನತೆಗಳಿಗೆ ಅರ್ಥವೇ ಇಲ್ಲ (ಹಾಂಕೊ:೧೯೯೦:೨೦). ಆದುದರಿಂದ ‘ಜಾನಪದೀಯತೆ’ ಎಂಬ ಪರಿಭಾಷೆಯನ್ನೇ ಮರೆಯುವುದು ಒಳಿತು. ಹಾಗೆ ಮಾಡುವುದರ ಮೂಲಕ ವಿವಾದಾತೀತ ಸಾಂಸ್ಕೃತಿಕ ಮೌಲ್ಯ ಹೊಂದಿರುವ ಜಾನಪದದ ಎರಡನೆಯ ಬಾಳಿನ ಘಟನೆಗಳ ಸಂಶೋಧನಾ ಮೌಲ್ಯವನ್ನು ಉಳಿಸಿಕೊಳ್ಳಲು ಯತ್ನಿಸಬಹುದು.

೧೪. ಜಾನಪದ ಸಮುದಾಯದ ಬಂದಮುಕ್ತಿ

ಜಾನಪದ ಸಮುದಾಯವು ಜಾನಪದ ಕೆಲಸವನ್ನು ತನ್ನ ಕೈಗೆ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆಯೆ ಇಲ್ಲವೆ ಎಂಬುದು ಜಾನಪದ ಪ್ರಕ್ರಿಯೆ ಮುಂದುವರಿಕೆಯ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದಿದೆ. ಅದು ತನ್ನದೇ ಆದ ಯೋಜನೆಗಳನ್ನು ಹಮ್ಮಿಕೊಳ್ಳಲು ಮತ್ತು ಸಂಶೋಧನಾ ಕೇಂದ್ರಗಳು ಹಾಗೂ ಇತರ ಆಸಕ್ತ ಗುಂಪುಗಳೊಡನೆ ಸಂಬಂಧ ಸಾಧಿಸಲು ಸಾಕಷ್ಟು ಪ್ರತಿನಿಧಿಗಳು, ನ್ಯಾಯವಾದಿಗಳು, ಚಳವಳಿಕಾರರು ಮತ್ತು ಕೆಲಸದ ಘಟಕಗಳನ್ನು ಹೊಂದಿದೆಯೆ? ಎಂಬುದು ಪ್ರಶ್ನೆ. ಬಂದಮುಕ್ತಿ ಜಾನಪದದ ಎರಡೂ ಬಾಳುಗಳಿಗೆ ಮಹತ್ವದ್ದು. ಮೊದಲ ಬಾಳಿನಲ್ಲಿ ಸಮುದಾಯವು ತಾನು ಮಹತ್ವದ್ದು ಎಂದು ಪರಿಗಣಿಸುವ ಜ್ಞಾನದ ನಿರ್ವಹಣೆಗಾಗಿ ಜಾನಪದ ದಾಖಲೀಕರಣ ಮತ್ತು ಸಂರಕ್ಷಣ ಕಾರ್ಯದಲ್ಲಿ ಆಸಕ್ತಿ ತಳೆಯಬಹುದು. ಎರಡನೆಯ ಬಾಳಿನಲ್ಲಿ ಹೆಚ್ಚು ವ್ಯಾಪಕ ಪರಿಕಲ್ಪನೆಯಲ್ಲಿ ಜಾನಪದ ಕೆಲಸ ಕೈಗೊಳ್ಳಲು ಹಾಗೂ ಹಲವಾರು ಜಾನಪದ ಕಾರ್ಯಶೀಲ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಮುದಾಯವು ತನ್ನ ಪ್ರಭಾವವಲಯವನ್ನು ವಿಸ್ತರಿಸಿಕೊಳ್ಳಬಹುದು.

ಈ ಬಂದಮುಕ್ತಿಯ ಬಲು ಮಹತ್ವದ ಪರಿಣಾಮವೆಂದರೆ ಜಾನಪದ ಸಮುದಾಯದ ವಿರುದ್ಧ ವೈಜ್ಞಾನಿಕ ಹಾಗೂ ಅನ್ಯ ಬಾಹ್ಯ ಸಮುದಾಯಗಳ ನಡುವಿನ ಅಸಮಮಿತಿಯ ಅಂತರವನ್ನು ಕುಗ್ಗಿಸುವುದು! ಇಲ್ಲಿ ಸಮುದಾಯವು ಹೊಸ ಸನ್ನಿವೇಶದಿಂದ ಲಾಭ ಪಡೆಯುತ್ತದೆ. ಇದರರ್ಥ ಅಲ್ಲಿ ಸಮಸ್ಯೆಗಳೇ ಇಲ್ಲವೆಂದಲ್ಲ. ನಿಜವಾಗಿಯೂ ಸಮುದಾಯವನ್ನು ಪ್ರತಿನಿಧಿಸುವವರು ಯಾರು? ಎನ್ನುವುದು ಒಂದು ವಿಲಕ್ಷಣ ಪ್ರಶ್ನೆ. ಸಮುದಾಯದ ಬಂದಮುಕ್ತಿ ಕೆಲವೊಮ್ಮೆ ಕಿರಿದಾದ ಕಾಲುದಾರಿಯಲ್ಲಿ ಕ್ರಮಿಸಬಹುದು. ಉದಾಹರಣೆಗೆ ಜನಪದ ಕುಣಿತದಲ್ಲಿ ಆಸಕ್ತಿ ತೋರುವಂತೆ. ಕೆಲವೊಮ್ಮೆ ಅದು ಸಮುದಾಯವು ತೋರುವಂತೆ, ಜಾನಪದ ಕೆಲಸಕ್ಕೆ, ಎಲ್ಲ ಬಗೆಯ ಆಸಕ್ತಿಯನ್ನೂ ತೋರಿಬಿಡಬಹುದು.

ಅಸಮಮಿತಿಯ ಅಂತರ ಕುಗ್ಗಲು ಇನ್ನೊಂದು ಕಾರಣವೆಂದರೆ ಬಂದಮುಕ್ತಿಯ ಸಂದರ್ಭದಲ್ಲಿ ಪರಂಪರಾ ಸಮುದಾಯವು ಪ್ರಬಲ ಸಂಸ್ಕೃತಿಯ ಪಾತ್ರವನ್ನು ನಿರ್ವಹಿಸುವುದು ಇಲ್ಲವೆ ಅದರ ಮಾದರಿಗಳನ್ನು ಅನುಕರಿಸುವುದು.